Categories
Uncategorized ಮಲ್ನಾಡ್

ಮಲೆನಾಡಲ್ಲಿ ನಾಗರ ಪಂಚಮಿ ಸಂಭ್ರಮ!

  • ಮನೆ ಮನೆಯಲ್ಲೂ ಆಚರಣೆ: ದೇಗುಲಗಳಲ್ಲಿ ವಿಶೇಷ ಪೂಜೆ
  • ನಾಗರಹಳ್ಳಿಯಲ್ಲಿ ಜಾತ್ರಾ ಸಡಗರ

NAMMUR EXPRESS NEWS
ಮಲೆನಾಡು: ವರ್ಷದ ಮೊದಲ ಹಬ್ಬ ಹಿಂದೂಗಳ ಪವಿತ್ರ ಹಬ್ಬ ನಾಗರ ಪಂಚಮಿ ಹಬ್ಬವನ್ನು ಮನೆ ಮನೆಯಲ್ಲಿ ಸಂಭ್ರಮದಿಂದ ಆಚರಿಸಿದರು.
ತೀರ್ಥಹಳ್ಳಿ, ಶೃಂಗೇರಿ, ಹೊಸನಗರ ಸೇರಿ ಮಲೆನಾಡಿನ ಬಹುತೇಕ ದೇಗುಲದಲ್ಲಿ ಭಕ್ತರು ಹೆಚ್ಚಾಗಿದ್ದರು. ತೀರ್ಥಹಳ್ಳಿಯ ರಾಮೇಶ್ವರ, ನಾಗರ ಕಟ್ಟೆ, ಆರಗ, ನಂಟೂರು, ಹಡ್ಸೆ ಸೇರಿ ಬಹುತೇಕ ಕಡೆ ಪೂಜೆ ನಡೆಯಿತು.
ತೀರ್ಥಹಳ್ಳಿ ತಾಲೂಕು ಕೌದಳ್ಳಿ ಕ್ಷೇತ್ರದಲ್ಲಿ ನಾಗ ದೇವರಿಗೆ ಪಂಚಾಮೃತ ಅಭಿಷೇಕ ಕ್ಷೀರ ಅಭಿಷೇಕ ಹಾಗೂ ವಿಶೇಷ ಪೂಜೆ ಹಾಗೂ ನಾಗರಕ್ತೇಶ್ವರಿ ಅಮ್ಮನವರಿಗೆ ಅಭಿಷೇಕ ಪೂಜೆ ಹಾಗೂ ವಿಶೇಷ ಅಲಂಕಾರ ಪೂಜೆ ವಿಜೃಂಭಣೆಯಿಂದ ನೆರೆವೇರಿತು.
ಹೊಸನಗರ ತಾಲೂಕಿನ ಹುಂಚಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಹಳ್ಳಿ ಇತಿಹಾಸ ಪ್ರಸಿದ್ಧ ಶ್ರೀ ನಾಗೇಂದ್ರಸ್ವಾಮಿಯ ಮಳೆಗಾಲದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಈ ಜಾತ್ರಾ ಮಹೋತ್ಸವವು ವರ್ಷದಲ್ಲಿ ಎರಡು ಬಾರಿ ಆಚರಿಸಲಾಗುತ್ತದೆ. ಮಳೆಗಾಲದಲ್ಲಿ ಶ್ರಾವಣ ಮಾಸದಲ್ಲಿ, ಬೇಸಿಗೆ ಕೂಳೆ ಪಂಚಮಿಯಲ್ಲಿ ವಿಶೇಷವಾಗಿ ಮಹೋತ್ಸವವು ನಡೆಯಲಿದೆ.
ಮದುವೆಗಾಗಿ, ಮಕ್ಕಳ ಫಲಕ್ಕೆ ಇಲ್ಲಿಗೆ ಆಗಮಿಸುವುದುಂಟು. ಮಂಗಳವಾರ ಮುಂಜಾನೆ ಪ್ರಧಾನ ಅರ್ಚಕ ಲಕ್ಷ್ಮಿನಾರಾಯಣಭಟ್‌ ನೇತೃತ್ವದಲ್ಲಿ ನಾಗೇಂದ್ರ ಸ್ವಾಮಿಗೆ ಪೂಜೆ ಮಾಡಲಾಯಿತು.
ಕಳೆದೆರಡು ವರ್ಷಗಳಿಂದ ಕೊರೊನಾ ಹಿನ್ನಲೆಯಲ್ಲಿ ಜಾತ್ರಾ ಮಹೋತ್ಸವ ಸರಳವಾಗಿ ಆಚರಿಸಲಾಗಿತ್ತು.ಆದರೆ ಈ ಬಾರಿ ಯಾವುದೇ ನಿರ್ಬಂಧಗಳಿಲ್ಲದೇ ಇದ್ದ ಕಾರಣ ಭಕ್ತಾಧಿಗಳು ಸಹಸ್ರಾರು ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.
ದೇಗುಲ ಧರ್ಮದರ್ಶಿ ಸಮಿತಿ ಅಧ್ಯಕ್ಷ ಸತೀಶ್‌ ಗೇರುಗಲ್ಲು, ಎಚ್‌.ಎಂ.ವರ್ತೇಶ್‌ಗೌಡರು, ಶಿವರಾಜ್‌, ಗಿರಿಯಪ್ಪಗೌಡ, ಕೇಶವಮೂರ್ತಿ, ಸುಬ್ರಹ್ಮಣ್ಯ ಆಚಾರ್, ರಾಘವೇಂದ್ರ, ಲಲಿತಮ್ಮ,ಸುರೇಶ್ ಗುಡ್ಡೆಕೊಪ್ಪ,ಲೋಕೇಶ್ ಶ್ರೀನಿವಾಸ್ ಗೌಡ,ಶಿವರಾಜ್ ಹಾಗೂ ಇನ್ನಿತರರಿದ್ದರು.

Categories
Uncategorized ವ್ಯವಹಾರ

ಶುರುವಾಯ್ತು ಟಿ.ಎಸ್.ಟಿ ಹೈಪರ್ ಮಾರ್ಟ್!

  • ವಿನಯ್ ಗುರೂಜಿ, ಆರಗ, ಕಿಮ್ಮನೆ, ಆರ್.ಎಂ ಉದ್ಘಾಟನೆ
  • ಮೊದಲ ದಿನದಿಂದ ಗ್ರಾಹಕರ ಕುತೂಹಲ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣದಲ್ಲಿರುವ ಟಿ.ಎಸ್.ಟಿ ದಿನಸಿ ಉತ್ಪನ್ನಗಳ ಬೃಹತ್ ಮಳಿಗೆಯನ್ನು ಅವಧೂತ ವಿನಯ್ ಗುರೂಜಿ ದಿವ್ಯ ಸಾನಿಧ್ಯದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟನೆಯನ್ನು ಮಾಡಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಡಾ.ಆರ್.ಎಂ.ಮಂಜುನಾಥಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಎಂಜಿ ಚನ್ನವೀರಪ್ಪ, ಪ ಪಂ ಅಧ್ಯಕ್ಷರಾದ ಶಬನಂ, ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾದ ಶ್ರೀ ಎಚ್.ಎನ್ ವಿಜಯದೇವ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಹಾಬಲೇಶ್ ಹೆಗ್ಡೆ ಸೇರಿ ಹಲವರು ಭಾಗಿಯಾಗಿದ್ದರು.
ವಿನಯ್ ಗುರೂಜಿ ಮಾತನಾಡಿ, ತೀರ್ಥಹಳ್ಳಿಯಂತಹ ಸಣ್ಣ ಊರಲ್ಲಿ ಇಂತಹ ಮಾಲ್ ಮಾಡಿರುವುದು ಸಾಧನೆ. ವಿವಿಧ ಕ್ಷೇತ್ರದಲ್ಲಿ ಸಾಧನೆಯ ಗುರಿ ಮುಟ್ಟಲು ತಮ್ಮ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.
ಗೃಹ ಮಂತ್ರಿ ಆರಗ ಜ್ಞಾನೇಂದ್ರ ಮಾತನಾಡಿ, ತೀರ್ಥಹಳ್ಳಿ ಅಭಿವೃದ್ಧಿಗೆ ತಮ್ಮ ಸಂಸ್ಥೆ ಸಹಕಾರ ಮಾಡಲಿದೆ ಎಂದರು.

ಟಿಎಸ್‌ ಟಿ ಹೈಪರ್ ಮಾರ್ಟ್‌, ಆಗುಂಬೆ ಬಸ್ ನಿಲ್ದಾಣದ ಹತ್ತಿರ, ತೀರ್ಥಹಳ್ಳಿ

Categories
ರಾಜಕೀಯ

ಆಗಸ್ಟ್ 3ರ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಸಜ್ಜು

  • 7,000 ಬಸ್ ಗಳು ಬುಕ್, ಬಿಗಿ ಬಂದೋಬಸ್ತ್

NAMMUR EXPRESS NEWS
ದಾವಣಗೆರೆ: ಆಗಸ್ಟ್ 3ರಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಕಾರ್ಯಕ್ರಮ ಸಿದ್ಧರಾಮೋತ್ಸವಕ್ಕಾಗಿ ದಾವಣಗೆರೆಯಲ್ಲಿ ಸಕಲ ಸಿದ್ಧತೆ ನಡೆಸಲಾಗಿದ್ದು ಕಾರ್ಯಕ್ರಮಕ್ಕೆ ಕಾರ್ಯಕರ್ತರನ್ನ ಕರೆತರಲು 7,000 ಬಸ್ ಗಳು ಬುಕ್ ಆಗಿವೆ.
ಆಗಸ್ಟ್ 3ರಂದು ದಾವಣಗೆರೆ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ನಡೆಯಲಿರುವ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಕಳೆದ ಎರಡು ವಾರಗಳಿಂದ ರಾತ್ರಿ ಹಗಲು ನಡೆಯುತ್ತಿರುವ ವೇದಿಕೆ, ಕಾರ್ಯಕರ್ತರಿಗೆ ಪೆಂಡಾಲ್, ಆಸನ, ಊಟದ ಸಿದ್ಧತೆ ಕೆಲಸಗಳು ಭರ್ಜರಿ ಸಾಗಿದೆ. ಈ ಕಾರ್ಯಕ್ರದಮ ಮುಖ್ಯ ವೇದಿಕೆಯಲ್ಲಿ ಆಗಸ್ಟ್ 3ರಂದು 2 ಗಂಟೆಗಳ ಕಾರ್ಯಕ್ರಮವಿರುತ್ತದೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ, ಬಿಕೆ ಹರಿಪ್ರಸಾದ್ ಸೇರಿದಂತೆ ಎಲ್ಲಾ ಕಾಂಗ್ರೆಸ್ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 5 ಲಕ್ಷ ಕಾರ್ಯಕರ್ತರು ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆ ಮಾಡಲಾಗಿದ್ದು ಎಲ್ಲಾ ಉಪವೇದಿಕೆಗಳಲ್ಲೂ ಕಾರ್ಯಕ್ರಮ ವೀಕ್ಷಿಸಲು ಬೃಹತ್ ಎಲ್ ಇ ಡಿ ಪರದೆ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮಕ್ಕಾಗಿ ಭಾನುವಾರದವರೆಗೆ 325ಕ್ಕೂ ಹೆಚ್ಚು ವಾಯುವ್ಯ ರಸ್ತೆ ಸಾರಿಗೆ ಬಸ್ ಗಳು ಸೇರಿದಂತೆ ಒಟ್ಟು 7,000 ಬಸ್ ಗಳು ಬುಕ್ ಆಗಿವೆ. ದಾವಣಗೆರೆ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಿಂದ 6 ಸಾವಿರ ಕಾರ್ಯಕರ್ತರನ್ನು ಆಹ್ವಾನಿಸಿ ಕರೆದೊಯ್ಯಲು ಸಿದ್ಧತೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ 50, ಹಾವೇರಿಯಲ್ಲಿ 90, ಗದಗದಲ್ಲಿ 85 ಮತ್ತು ಧಾರವಾಡ ಜಿಲ್ಲೆಯಲ್ಲಿ 90 ಬಸ್ ಗಳು ಬುಕ್ ಆಗಿವೆ. ಇದರಿಂದ ಸಾರಿಗೆ ಸಂಸ್ಥೆಗೆ ಅಂದಾಜು 39 ಲಕ್ಷ ರೂ.ಗಳ ಆದಾಯ ಬರುವ ನಿರೀಕ್ಷೆ ಇದೆ. ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 7,000 ಬಸ್ ವ್ಯವಸ್ಥೆ ಮಾಡಲಾಗಿದೆ. ಸಿದ್ದರಾಮೋತ್ಸವಕ್ಕೆ ಆಗಮಿಸುವವರಿಗೆ ಭೋಜನ, ವಸತಿ ವ್ಯವಸ್ಥೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗವಹಿಸುವುದು ಖಚಿತವಾದ ಹಿನ್ನೆಲೆಯಲ್ಲಿ ವೇದಿಕೆ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಸಮಿತಿ ಚರ್ಚೆ ನಡೆಸಲಿದೆ.
ಸಿದ್ದರಾಮಯ್ಯ ಅವರ ಕ್ಷೇತ್ರವಾಗಿರುವ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಈ ಕಾರ್ಯಕ್ರಮಕ್ಕೆ ಸೇರುವ ನಿರೀಕ್ಷೆ ಇದೆ. ಆದರೆ, ಬಸ್ ಗಳ ಅಲಭ್ಯತೆಯಿಂದಾಗಿ ಕ್ರಷರ್, ಟೆಂಪೋದಂತಹ ವಾಹನಗಳಲ್ಲಿಯೂ ಹಳ್ಳಿಗಳ ಜನರು ಆಗಮಿಸುವ ನಿರೀಕ್ಷೆಯಿದೆ. ಕಾಂಗ್ರೆಸ್ ನ ಕೆಲವು ನಾಯಕರು ತಮ್ಮ ಆಪ್ತರೊಂದಿಗೆ ತಮ್ಮದೇ ಸ್ವಂತ ವಾಹನದಲ್ಲಿ ತೆರಳಲು ಸಿದ್ಧರಾಗಿದ್ದಾರೆ.
‘ಕಾರ್ಯಕ್ರಮಕ್ಕೆ ಇನ್ನೂ ಮೂರು ದಿನ ಬಾಕಿ ಇದ್ದು ಈಗಾಗಲೇ ಹಲವು ಮಂದಿ ಬಸ್ ಬುಕ್ಕಿಂಗ್ ಬಗ್ಗೆ ವಿಚಾರಿಸಿದ್ದಾರೆ. ಇನ್ನಷ್ಟು ಬಸ್ ಗಳು ಬುಕ್ ಆಗುವ ಸಾಧ್ಯತೆ ಇದೆ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಆಗಮಿಸುವುದರಿಂದ ದಾವಣಗೆರೆ ನಗರದ ಎಲ್ಲಾ ಲಾಡ್ಜ್, ಹೋಟೆಲ್ ಬುಕ್ ಆಗಿವೆ. ರಾಜ್ಯದ ಮೂಲೆ ಮೂಲೆಯಿಂದ ಬರುವ ನಾಯಕರು, ಭದ್ರತಾ ಕಾರ್ಯಕ್ಕೆ ಬರುವ ರಕ್ಷಣಾ ಸಿಬ್ಬಂದಿ, ಮಾಧ್ಯಮ ಸಿಬ್ಬಂದಿ ಉಳಿದುಕೊಳ್ಳಲು ಕಾಂಗ್ರೆಸ್‌ ಮುಖಂಡರೇ ಎಲ್ಲಾ ಹೋಟೆಲ್ ಲಾಡ್ಜ್ ಳನ್ನು ಬುಕ್ ಮಾಡಿದ್ದಾರೆ. ಲಕ್ಷಾಂತರ ಜನರು ಸೇರುವ ಹಿನ್ನೆಲೆಯಲ್ಲಿ ಈಗಾಗಲೇ ದಾವಣಗೆರೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

Categories
ದಾವಣಗೆರೆ ರಾಜಕೀಯ

ಲೋಕಸಭೆಯಲ್ಲಿ ಬೆಲೆಏರಿಕೆಯನ್ನು ಸಮರ್ಥಿಸಿಕೊಂಡ ನಿರ್ಮಲಾ ಸೀತಾರಾಮನ್

  • ಕಾಂಗ್ರೆಸ್‌ನಿಂದ ಸಭಾತ್ಯಾಗ

NAMMUR EXPRESS NEWS
ಹೊಸದಿಲ್ಲಿ: ಲೋಕಸಭೆಯಲ್ಲಿ ಸೋಮವಾರ ಬೆಲೆಏರಿಕೆ ಕುರಿತು ಚರ್ಚೆಗೆ ಉತ್ತರಿಸಿದ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕತೆಯ ವೌಲ್ಯಮಾಪನಕ್ಕಾಗಿ ಎಲ್ಲ ಮಾನದಂಡಗಳ ವಿವರಗಳನ್ನು ನೀಡಿ, ದೇಶವು ಆರ್ಥಿಕ ಹಿಂಜರಿತ ಅಥವಾ ಸ್ಥಗಿತತೆಯತ್ತ ಸಾಗುವ ಸಾಧ್ಯತೆಯಿಲ್ಲ ಎಂದು ಹೇಳಿದರು. ವಿತ್ತಸಚಿವೆಯ ಉತ್ತರವು ತಮಗೆ ತೃಪ್ತಿ ನೀಡಿಲ್ಲ ಎಂದು ಹೇಳಿದ ಕಾಂಗ್ರೆಸ್ ಸದಸ್ಯರು ಉತ್ತರದ ನಡುವೆಯೇ ಸಭಾತ್ಯಾಗ ನಡೆಸಿದರು.
‘ಸಾಂಕ್ರಾಮಿಕ,ಕೋವಿಡ್ ಎರಡನೇ ಅಲೆ,ಒಮೈಕ್ರಾನ್ ಮತ್ತು ರಶ್ಯಾ ಉಕ್ರೇನ್ ಬಿಕ್ಕಟ್ಟುಗಳ ಹೊರತಾಗಿಯೂ ನಾವು ಹಣದುಬ್ಬರವನ್ನು ಶೇ.7ಕ್ಕಿಂತ ಕಡಿಮೆ ಮಟ್ಟದಲ್ಲಿ ಕಾಯ್ದುಕೊಂಡಿದ್ದೇವೆ. ಇದನ್ನು ಗುರುತಿಸಬೇಕು’ ಎಂದು ಹೇಳಿದ ಸೀತಾರಾಮನ್,ಪ್ರಸ್ತುತ ಚಿಲ್ಲರೆ ಹಣದುಬ್ಬರವು ಶೇ.7ರಷ್ಟಿದೆ. 2004ರಿಂದ 2014ರವರೆಗಿನ ಯುಪಿಎ ಆಡಳಿತದಲ್ಲಿ ಹಣದುಬ್ಬರವು ಎರಡಂಕಿಗಳಿಗೆ ತಲುಪಿತ್ತು. ಆ ಅವಧಿಯಲ್ಲಿ ಸತತ 22 ತಿಂಗಳುಗಳ ಕಾಲ ಹಣದುಬ್ಬರವು ಶೇ.9ಕ್ಕಿಂತ ಮೇಲೆಯೇ ಇತ್ತು ಎಂದರು.
ಹೆಚ್ಚಿನ ಹಣದುಬ್ಬರವು ಆಹಾರ ಮತ್ತು ಇಂಧನಗಳಲ್ಲಿ ಉಂಟಾಗಿದೆ. ವಿಶ್ವದಲ್ಲಿ ಆಹಾರ ಹಣದುಬ್ಬರವು ಇಳಿಯುತ್ತಿದೆ ಮತ್ತು ಅದು ಭಾರತದಲ್ಲಿಯೂ ಇಳಿಯಲಿದೆ ಎಂದು ಅವರು ಹೇಳಿದರು.
ಈಗಲೂ ಭಾರತವು ಇತರ ದೇಶಗಳಿಗಿಂತ ಉತ್ತಮ ಸ್ಥಿತಿಯಲ್ಲಿದೆ ಎಂದು ಘೋಷಿಸಿದ ಸೀತಾರಾಮನ್,ಮೊದಲ ತ್ರೈಮಾಸಿಕದಲ್ಲಿ ಶೇ.1.9ಕ್ಕೆ ತಲುಪಿದ್ದ ಅಮೆರಿಕದ ಜಿಡಿಪಿ ದ್ವಿತೀಯ ತ್ರೈಮಾಸಿಕದಲ್ಲಿ ಶೇ.0.7ರಷ್ಟು ಕುಸಿದಿದೆ. ಅವರು ಅದನ್ನು ಅನಧಿಕೃತ ಆರ್ಥಿಕ ಹಿಂಜರಿತ ಎಂದು ಬಣ್ಣಿಸಿದ್ದಾರೆ. ಭಾರತವು ಆರ್ಥಿಕ ಹಿಂಜರಿತಕ್ಕೆ ತುತ್ತಾಗುವ ಪ್ರಶ್ನೆಯೇ ಇಲ್ಲ. ಭಾರತವು ಹಿಂಜರಿತಕ್ಕೆ ಜಾರುವ ಸಾಧ್ಯತೆಯು ಶೇ.ಶೂನ್ಯದಷ್ಟಿದೆ ಎಂದು ಬ್ಲೂಮ್ಬರ್ಗ್ ಸಮೀಕ್ಷೆಯು ಹೇಳಿದೆ ಎಂದು ತಿಳಿಸಿದರು.
ಆರ್ಥಿಕತೆಯ ಇತರ ಮಾನದಂಡಗಳನ್ನು ಉಲ್ಲೇಖಿಸಿದ ಅವರು, ವಾಣಿಜ್ಯ ಬ್ಯಾಂಕುಗಳ ಅನುತ್ಪಾದಕ ಆಸ್ತಿ (ಎನ್ಸಿಎ) ಆರು ವರ್ಷಗಳ ಕನಿಷ್ಠ ಮಟ್ಟದಲ್ಲಿದೆ. ಸತತ ಐದು ತಿಂಗಳುಗಳಿಂದ ಜಿಎಸ್ಟಿ ಸಂಗ್ರಹ 1.4 ಲ.ಕೋ.ರೂ.ಗಿಂತ ಮೇಲೆಯೇ ಇದೆ ಎಂದರು.
ಬೆಲೆಏರಿಕೆ ಕುರಿತು ಚರ್ಚೆಯಾಗಬೇಕು ಎಂಬ ಪ್ರತಿಪಕ್ಷಗಳ ಬೇಡಿಕೆಯಿಂದಾಗಿ ಸಂಸತ್ತಿನಲ್ಲಿ 10 ದಿನಗಳ ಗದ್ದಲ,ಕೋಲಾಹಲಗಳ ಬಳಿಕ ವಿತ್ತಸಚಿವೆಯ ಉತ್ತರವು ಹೊರಬಿದ್ದಿದೆ. ಸೋಮವಾರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿಯವರು ನಾಲ್ವರು ಕಾಂಗ್ರೆಸ್ ಸಂಸದರ ಅಮಾನತನ್ನು ಹಿಂದೆಗೆದುಕೊಳ್ಳುವ ನಿರ್ಣಯವನ್ನು ಮಂಡಿಸಿದ ಬಳಿಕ ಲೋಕಸಭೆಯಲ್ಲಿ ಬೆಲೆಏರಿಕೆ ಕುರಿತು ಚರ್ಚಿಸಲು ಆಡಳಿತ ಮತ್ತು ಪ್ರತಿಪಕ್ಷ ಸಂಸದರು ಒಪ್ಪಿಕೊಂಡರು.
ವಿವಿಧ ಪಕ್ಷಗಳಿಗೆ ಸೇರಿದ ಸುಮಾರು 20 ಸಂಸದರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಬಿಜೆಡಿ ಮತ್ತು ವೈಎಸ್ಆರ್ ಕಾಂಗ್ರೆಸ್ನಂತಹ ಸಮಾನ ಮನಸ್ಕ ಪಕ್ಷಗಳು ಸಹ ಹಣದುಬ್ಬರವನ್ನು ತಡೆಯಲು ಮಧ್ಯಪ್ರವೇಶಿಸುವಂತೆ ಸರಕಾರವನ್ನು ಆಗ್ರಹಿಸಿದವು. ಚರ್ಚೆಯನ್ನು ಆರಂಭಿಸಿದ ಕಾಂಗ್ರೆಸ್ ಸಂಸದ ಮನೀಷ ತಿವಾರಿಯವರು,ಬಿಜೆಪಿ ನೇತೃತ್ವದ ಸರಕಾರವು ನೋಟು ನಿಷೇಧ ಮತ್ತು ಕೆಟ್ಟ ಪರಿಕಲ್ಪನೆಯ ಜಿಎಸ್ಟಿ ಮೂಲಕ ಆರ್ಥಿಕತೆಯನ್ನು ತಪ್ಪಾಗಿ ನಿರ್ವಹಿಸುತ್ತಿದೆ. ಇತ್ತೀಚಿನ ಜಿಎಸ್ಟಿ ಏರಿಕೆಯೊಂದಿಗೆ ಸರಕಾರವು ತನ್ನ ಬಜೆಟ್ ಅನ್ನು ಬಲಪಡಿಸಿಕೊಂಡಿದೆ, ಆದರೆ 25 ಕೋಟಿ ಭಾರತೀಯರ ಬಜೆಟ್ ಅನ್ನು ಹಾಳು ಮಾಡಿದೆ ಎಂದು ಆರೋಪಿಸಿದರು.
ತಿವಾರಿಯವರಿಗೆ ತಿರುಗೇಟು ನೀಡಲು ಮುಂದಾದ ಜಾರ್ಖಂಡ್ನ ಬಿಜೆಪಿ ಸಂಸದ ನಿಶಿಕಾಂತ ದುಬೆಯವರು ಎಲ್ಪಿಜಿ ಬೆಲೆಗಳ ಕುರಿತು ಆಲ್ಡ್ ನ್ಯೂಸ್ ನ ಮುಹಮ್ಮದ್ ಝುಬೈರ್ ಅವರ ಟ್ವಿಟ್ ಅನ್ನು ಉಲ್ಲೇಖಿಸಿ, 2013ರಲ್ಲಿ ಎಲ್ಪಿಜಿ ಬೆಲೆ 1,000 ರೂ.ಗಿಂತ ಅಧಿಕವಿತ್ತು, ಅದು ಈಗ ಕಡಿಮೆಯಿದೆ ಎಂದು ಹೇಳಿದರು.
ನೋಟು ನಿಷೇಧಕ್ಕಿಂತ ಮೊದಲಿನ ಅವಧಿಗೆ ಹೋಲಿಸಿದರೆ ಚಲಾವಣೆಯಲ್ಲಿರುವ ನಗದು ಹಣದ ಪ್ರಮಾಣ ಈಗ ದುಪ್ಪಟ್ಟಾಗಿದೆ ಎಂದು ಹೇಳಿದ ಬಿಜೆಡಿಯ ಪಿನಾಕಿ ಮಿಶ್ರಾ,ತನ್ನ ನೀತಿಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವಂತೆ ಸರಕಾರಕ್ಕೆ ಸೂಚಿಸಿದರು. ಕಾಂಗ್ರೆಸ್ ಸರಕಾರವು ಖರೀದಿಸಿದ್ದ ಇಂಧನ ಬಾಂಡ್ಗಳಿಂದಾಗಿ ಇಂಧನಗಳ ಬೆಲೆಗಳು ಹೆಚ್ಚುತ್ತಿವೆ ಎಂಬ ಕೇಂದ್ರದ ಸಮರ್ಥನೆಯನ್ನು ತಳ್ಳಿಹಾಕಿದ ಮಿಶ್ರಾ,ಕೇಂದ್ರವು ಇಂಧನ ತೆರಿಗೆಗಳ ಮೂಲಕ 27.27 ಲ.ಕೋ.ರೂ.ಗಳನ್ನು ಸಂಗ್ರಹಿಸಿದೆ. ಯುಪಿಎ ಸರಕಾರ ಖರೀದಿಸಿದ್ದ ಇಂಧನ ಬಾಂಡ್ಗಳಿಗೆ ತಾವು ಹಣ ಪಾವತಿಸುತ್ತಿದ್ದೇವೆ ಎಂದು ಪ್ರತಿಸಲವೂ ಅವರು ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಅವರು ಕೇವಲ 93,600 ಕೋ.ರೂ.ಗಳನ್ನು ಅಂದರೆ ಕೇವಲ ಶೇ.3.4ರಷ್ಟನ್ನು ಪಾವತಿಸಿದ್ದಾರೆ ಎಂದು ಬೆಟ್ಟು ಮಾಡಿದರು.
ಟಿಎಂಸಿಯ ಕಾಕೋಲಿ ಘೋಷ ದಸ್ತಿದಾರ್ ಅವರು,’ಕಳೆದ ಕೆಲವು ತಿಂಗಳುಗಳಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆಗಳನ್ನು ನಾಲ್ಕು ಬಾರಿ ಹೆಚ್ಚಿಸಲಾಗಿದೆ. 600 ರೂ.ಇದ್ದುದು ಈಗ 1,100 ರೂ.ಆಗಿದೆ. ನಾವು ಹಸಿ ತರಕಾರಿಗಳನ್ನು ತಿನ್ನಬೇಕು ಎಂದು ಸರಕಾರವು ಬಯಸಿದೆಯೇ’ ಎಂದು ಹಸಿ ಬದನೆಯನ್ನು ತಿನ್ನುತ್ತಲೇ ಪ್ರಶ್ನಿಸಿದರು.

Categories
Uncategorized

ಆ.8ರಂದು ಮೇಗರವಳ್ಳಿಯಿಂದ ತೀರ್ಥಹಳ್ಳಿಗೆ ಕಿಮ್ಮನೆ ಪಾದಯಾತ್ರೆ

  • ಮಂಜುನಾಥ ಗೌಡರದ್ದು ವಯುಕ್ತಿಕ ಪಾದಯಾತ್ರೆ
  • ಆರಗ ಹೆದರುಪುಕುಲ : ಕಿಮ್ಮನೆ ಲೇವಡಿ

NAMMUR EXPRESS NEWS
ತೀರ್ಥಹಳ್ಳಿ: ಆಗುಂಬೆ ಭಾಗದ ಜ್ವಲಂತ ಸಮಸ್ಯೆಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಇದೀಗ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ.
ಸೋಮವಾರ ಕಾಂಗ್ರೆಸ್ ಕಚೇರಿಯಲ್ಲಿ ಕಿಮ್ಮನೆ ರತ್ನಾಕರ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ರಾಜ್ಯ ಕೆಪಿಸಿಸಿ ಆದೇಶದಂತೆ ಆ.1ರಿಂದ 10ರವರೆಗೆ ಎಲ್ಲಾ ಕಡೆ ಪಾದಯಾತ್ರೆ ನಡೆಸಬೇಕು. ಹೀಗಾಗಿ ಆಗಸ್ಟ್ 8ರಂದು ಮೇಗರವಳ್ಳಿಯಿಂದ ತೀರ್ಥಹಳ್ಳಿಯವರೆಗೆ ಬೃಹತ್ ಪಾದಯಾತ್ರೆ ಮತ್ತು ಪ್ರತಿಭಟನ ಸಭೆ ನಡೆಸುವುದಾಗಿ ಹೇಳಿದರು.
ಕೆಪಿಸಿಸಿ ರಾಜ್ಯಾಧ್ಯಕ್ಷರ ಮೇರೆಗೆ ಈ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ರೈತರಿಗೆ ಕಾಡು ಪ್ರಾಣಿಗಳಿಂದ ಹಾನಿ ಉಂಟಾಗಿದೆ. ಕಾಡಾನೆಗಳ ಹಾವಳಿಯಿಂದ ರೈತರ ಬದುಕು ಮೂರಾಬಟ್ಟೆಯಾಗಿದೆ, ರೈತರಿಗೆ ಈ ವರ್ಷದಲ್ಲಿ ಅತಿವೃಷ್ಟಿ ಅನಾವೃಷ್ಟಿಯಿಂದ ತುಂಬಾ ಹಾನಿ ಉಂಟಾಗಿದೆ, ಹಾಗೂ ಕಸ್ತೂರಿ ರಂಗನ್ ವರದಿ, ರೈತ ವಿರೋಧಿ ನಿಯಮ, ರಸ ಗೊಬ್ಬರ ಬೆಲೆ ಏರಿಕೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ನೇರ ಹಣ ಬಿಡುಗಡೆ ಮಾಡದೆ ಗ್ರಾಮ ಪಂಚಾಯತ್ ಅಧ್ಯಕ್ಷರ ಉಪಾಧ್ಯಕ್ಷರ ಹಾಗೂ ಸದಸ್ಯರ ಹಕ್ಕನ್ನು ಮೊಟಕುಗೊಳಿಸುವುದನ್ನು ಖಂಡಿಸಿ ಈ ಪಾದಯಾತ್ರೆ ನಡೆಯಲಿದೆ ಎಂದು ಕಿಮ್ಮನೆ ರತ್ನಾಕರ್ ತಿಳಿಸಿದರು.
ವಿಶ್ವನಾಥ ಶೆಟ್ಟಿ, ಕೆಸ್ತೂರು ಮಂಜುನಾಥ್., ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶಬನಮ್, ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಜಯಪ್ರಕಾಶ್ ಶೆಟ್ಟಿ, ಹಾಗೂ ಬಾಳೆಹಳ್ಳಿ ಪ್ರಭಾಕರ್. ಅಮರ್ ನಾಥ್ ಶೆಟ್ಟಿ. ಜೈಕರ್ ಶೆಟ್ಟಿ ಹಾಗೂ ಇನ್ನಿತರರು ಇದ್ದರು.

ಆರಗ ಎಲ್ಲಿಗೆ ಗೃಹ ಮಂತ್ರಿ?!
ರಾಜ್ಯದಲ್ಲಿ ಕೊಲೆ, ಗಲಭೆ ಹೆಚ್ಚಾಗಿದೆ. ಆದರೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿ ಕ್ಷೇತ್ರಕ್ಕೆ ಮಾತ್ರ ಗೃಹ ಮಂತ್ರಿಯಾಗಿದ್ದಾರೆ ಎಂದು ಕಿಮ್ಮನೆ ಕುಟುಕಿದ್ದಾರೆ.
ಆರಗ ಅವರಿಗೆ ಹೆದರಿಕೆ. ಮೊನ್ನೆ ಮಂಗಳೂರಿಗೆ ಸಿಎಂ ಬಂದಾಗ ಅವರ ಜತೆ ಕಾಣಿಸಿಕೊಂಡು ಮತ್ತೆ ಸೀದಾ ತೀರ್ಥಹಳ್ಳಿಗೆ ಬಂದಿದ್ದಾರೆ. ಪಟಾಕಿ ಹೊಡೆದಾಗ ಮಕ್ಕಳು ತಾಯಿ ಸೆರಗು ಹಿಡಿಯುವಂತೆ ಆರಗ ಸಿಎಂ ಹಿಂದೆ ಕದ್ದು ಕೂರುತ್ತಾರೆ ಎಂದು ಕಿಮ್ಮನೆ ಲೇವಡಿ ಮಾಡಿದರು.

ಮಂಜುನಾಥ ಗೌಡ ವಯುಕ್ತಿಕ ಪಾದಯಾತ್ರೆ!

ಮಂಜುನಾಥ ಗೌಡ ನಡೆಸಿದ್ದು ವಯುಕ್ತಿಕ ಪಾದಯಾತ್ರೆ. ಅದು ಪಕ್ಷದ ಪಾದಯಾತ್ರೆಯಲ್ಲ. ಮಂಜುನಾಥ ಗೌಡ ನನಗೆ ಆಹ್ವಾನ ನೀಡಿಲ್ಲ.

Categories
ಬೆಂಗಳೂರು

ನೂರು ಕೋಟಿ ಕ್ಲಬ್ ಸೇರಿದ ವಿಕ್ರಾಂತ್ ರೋಣ!

  • ಕಿಚ್ಚನ ಕಥೆಗೆ ಮನಸೋತ ಪ್ರೇಕ್ಷಕರು
  • ಹೊಸ ದಾಖಲೆಯತ್ತ ಕನ್ನಡ ಸಿನಿಮಾ

NAMMUR EXPRESS NEWS
ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ವಿಕ್ರಾಂತ್ ರೋಣ ಬಾಕ್ಸ್ ಆಫೀಸ್ ನಲ್ಲಿ ಮೋಡಿ ಮಾಡುತ್ತಿದೆ. ಕಿಚ್ಚನ ಅಭಿನಯ ಹಾಗೂ ಕಥೆಗೆ ಜನ ಮನಸೋತಿದ್ದಾರೆ. ವಿಶ್ವದಾದ್ಯಂತ ಬಿಡುಗಡೆಯಾಗಿರುವ ಈ ಸಿನಿಮಾ ಸ್ಯಾಂಡಲ್‌ವುಡ್‌ಗೆ ಮತ್ತೊಂದು ಗರಿ ಎನ್ನಬಹುದು. ಬಿಡುಗಡೆಯಾಗಿ ನಾಲ್ಕು ದಿನವಾಗಿದ್ದು, ಸಿನಿಮಾದ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಲೆಕ್ಷನ್ ವಿಚಾರಕ್ಕೆ ಬಂದರೆ ಸಹ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.
ಸದ್ಯ ಸಿನಿಮಾ 100 ಕೋಟಿ ರೂ ಕಲೆಕ್ಷನ್ ಮಾಡುವಂತ ಸಾಗುತ್ತಿದೆ ಎನ್ನಲಾಗುತ್ತಿದೆ. ಮಾಹಿತಿ ಪ್ರಕಾರ ನಾಲ್ಕನೇ ದಿನದಂದು ಚಿತ್ರ 15 ಕೋಟಿಗೂ ಅಧಿಕ ಗಳಿಕೆ ಮಾಡಿದ್ದು, ಚಿತ್ರಮಂದಿರಗಳಲ್ಲಿ ಇನ್ನೂ ಸದ್ದು ಮಾಡುತ್ತಿದೆ. ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ವರದಿಗಳ ಪ್ರಕಾರ, ದಕ್ಷಿಣ ಸಿನಿಮಾ ರಂಗದ ಮುಂದಿನ ದೊಡ್ಡ ಚಿತ್ರ ವಿಕ್ರಾಂತ್ ರೋಣ ಎನ್ನಬಹುದು.
ಕಿಚ್ಚ ಸುದೀಪ್ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಈ ಸಿನಿಮಾ ಮೊದಲ ದಿನವೇ 33-35 ಕೋಟಿ ರೂಪಾಯಿಗಳನ್ನು ಗಳಿಸಿದೆ. ನಂತರ ಮೂರು ದಿನಗಳಲ್ಲಿ ಸುಮಾರು 80 ಕೋಟಿ ರೂಪಾಯಿಗಳ ಕಲೆಕ್ಷನ್ ಮಾಡಿದ್ದು, ನಾಲ್ಕನೇ ಅಂದರೆ ಭಾನುವಾರ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಿದೆ. ಸದ್ಯದ ಮಾಹಿತಿ ಪ್ರಕಾರ ವಿಶ್ವಾದ್ಯಂತ 100 ಕೋಟಿ ರೂ.ಗಳನ್ನು ದಾಟಿದೆ.
ಅಧಿಕೃತ ಬಾಕ್ಸ್ ಆಫೀಸ್ ವರದಿ ಇನ್ನೂ ಬಂದಿಲ್ಲವಾದರೂ, ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ವಿಕ್ರಾಂತ್ ರೋಣಾ ಭರ್ಜರಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಈ ವರ್ಷ ಕನ್ನಡದ ಹಲವಾರು ಸಿನಿಮಾಗಳು ಬಾಕ್ಸ್ ಆಫೀಸ್ ಧೂಳಿಪಟ ಮಾಡಿದೆ. ಈ ವರ್ಷದ ಆರಂಭದಲ್ಲಿ, ಕೆಜಿಎಫ್ 2 ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಮುರಿದಿತ್ತು, ಅಲ್ಲದೇ, ಬಾಕ್ಸ್ ಆಫೀಸ್‌ನಲ್ಲಿ ಈ ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಒಂದಾಗಿದೆ.
ವಿಕ್ರಾಂತ್ ರೋಣ ಸಿನಿಮಾ ಕರ್ನಾಟಕದಲ್ಲಿ ಸುಮಾರು 325 ಸಿಂಗಲ್ ಸ್ಕ್ರೀನ್ ನಲ್ಲಿ ಬಿಡುಗಡೆ ಆಗಿದೆ. ಉಳಿದಂತೆ 325 ಥಿಯೇಟರ್, 65 ಮಲ್ಟಿಪ್ಲೆಕ್ಸ್ ಸ್ಕ್ರೀನ್ ಗಳಲ್ಲಿ 2500ಕ್ಕೂ ಹೆಚ್ಚು ಶೋ ಪ್ರದರ್ಶನ ಕಂಡಿದೆ. ಅದರಲ್ಲಿಯೂ ಬೆಂಗಳೂರಿನಲ್ಲೆ 1200 ಶೋ ನೀಡಲಾಗಿದೆ.
ಕಿಚ್ಚನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ:
ಸ್ಯಾಂಡಲ್‌ವುಡ್‌ನ ಪ್ಯಾನ್ ಇಂಡಿಯಾ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಹಾಗೂ ಕೆಜಿಎಫ್ 2 ಹಲವಾರು ದಾಖಲೆಗಳನ್ನು ಧೂಳಿಪಟ ಮಾಡಿದ್ದವು. ಸಾವಿರ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ದಾಖಲೆ ಬರೆದಿತ್ತು ಕೆಜಿಎಫ್ ಚಾಪ್ಟರ್ 2 ಸಿನಿಮಾ. ಅಲ್ಲದೇ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಸಹ 150 ಕೋಟಿ ಕಲೆಕ್ಷನ್ ಮಾಡಿತ್ತು.
ಕಿಚ್ಚನ ಸಿನಿಮಾ ಇದೇ ಮೊದಲ ಬಾರಿಗೆ ಇಡೀ ವಿಶ್ವದಾದ್ಯಂತ ಗ್ರಾಂಡ್ ಆಗಿ ರಿಲೀಸ್ ಆಗಿದೆ. ಅಲ್ಲದೆ, 3ಡಿಯಲ್ಲಿ ಸಿನಿಮಾ ರಿಲೀಸ್ ಆಗಿರುವುದರಿಂದ ಜನರ ನಿರೀಕ್ಷೆ ಹೆಚ್ಚಿತ್ತು. ಈಗಾಗಲೇ ಓವರ್‌ಸೀನ್ ಸಿನಿಮಾ ರೈಟ್ಸ್ ಅನ್ನು ‘ಒನ್ ಟ್ವೆಂಟಿ 8 ಮೀಡಿಯಾ’ ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ. ಒನ್ ಟ್ವೆಂಟಿ 8 ಮೀಡಿಯಾ’ ಸುಮಾರು 1.3 ಮಿಲಿಯನ್‌ಗೆ ಓವರ್‌ಸ್ ಹಕ್ಕುಗಳನ್ನು ಪಡೆದುಕೊಂಡಿದೆ. ಅಂದರೆ, ಭಾರತದ 10 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎನ್ನಲಾಗಿತ್ತು.

Categories
ಜಿಲ್ಲಾ ವಾರ್ತೆ

ಮುಂದುವರಿದ ಭಾರಿ ಮಳೆ

  • ಗುಡ್ಡಕುಸಿತಕ್ಕೆ ಇಬ್ಬರು ಮಕ್ಕಳ ಬಲಿ
  • ಹಲವೆಡೆ ನೆರೆ ಭೀತಿ, ತಗ್ಗು ಪ್ರದೇಶಗಳಿಗೆ ಆತಂಕ

NAMMUR EXPRESS NEWS
ಬೆಂಗಳೂರು: ರಾಜದಾನಿಯೂ ಸೇರಿದಂತೆ ರಾಜ್ಯಾದ್ಯಂತ ಸೋಮವಾರ ರಾತ್ರಿ ಭಾರಿ ಮಳೆಯಾಗಿದೆ. ಕೊಡಗು, ಶಿವಮೊಗ್ಗ ಸೇರಿದಂತೆ ಮಲೆನಾಡಿನ ಹಲವು ಜಿಲ್ಲೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮನೆ ಹಿಂದಿನ ಗುಡ್ಡ ಜರಿದು ಮನೆಯೊಳಗಿದ್ದ ಇಬ್ಬರು ಮಕ್ಕಳು ಭೂಸಮಾಧಿಯಾಗಿದ್ದಾರೆ.
ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಕುಮಾರಧಾರೆಗೆ ಸಮೀಪದ ಗುಡ್ಡ ಕುಸಿದುದರಿಂದ ಮನೆಯೊಳಗಿದ್ದ ಇಬ್ಬರು ಮಕ್ಕಳು ಭೂಸಮಾಧಿಯಾಗಿದ್ದು, ತಡರಾತ್ರಿ ಕಾರ್ಯಾಚರಣೆಯ ಬಳಿಕ ಮಕ್ಕಳ ಶವಗಳನ್ನು ಹೊರತೆಗೆಯಲಾಯಿತು.
ತಗ್ಗು ಪ್ರದೇಶಗಳಿಗೆ ಆತಂಕ:
ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಗಂಟೆಗಳ ಕಾಲ ಸುರಿದ ಭಾರಿ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಉಂಟಾಯಿತು. ನೆರೆ ನೀರು ನುಗ್ಗುವ ಭೀತಿಯಲ್ಲಿರುವ ತಗ್ಗು ಪ್ರದೇಶದ ಜನತೆ ಆತಂಕಪಟ್ಟರು. ರಾತ್ರಿ ಹತ್ತು ಗಂಟೆಯ ಬಳಿಕ ಮಳೆ ಶುರುವಾದುದರಿಂದ ಟ್ರಾಫಿಕ ಸಮಸ್ಯೆ ಉಂಟಾಗಲಿಲ್ಲ.
ಕೊಡಗಿನಲ್ಲಿ ನೆರೆ ಭೀತಿ:
ಕೊಡಗಿನ ಹಲವೆಡೆ ಭಾರಿ ಮಳೆಯಾಗಿದೆ. ಕೊಯನಾಡಿನ ಕೊಯನಾಡು ಕಿಂಡಿ ಅಣಿಕಟ್ಟು ಬಳಿ ಹಲವು ಮನೆಗಳು ಜಲಾವೃತವಾಗಿವೆ. ಭಾರೀ ಮಳೆಯಿಂದ ಏಕಾಏಕಿ ನದಿ ನೀರು ಉಕ್ಕಿ ಬಂದಿದೆ. 20 ದಿನಗಳ ಹಿಂದೆ ಕೂಡ ಕಿಂಡಿ ಅಣಿಕಟ್ಟೆಯಿಂದ ನೀರು ನುಗ್ಗಿ ಅವಾಂತರ ಆಗಿತ್ತು. ಸುತ್ತಮುತ್ತಲಿನ ಮನೆಗಳವರು ಎತ್ತರದ ಸುರಕ್ಷಿತ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದಾರೆ. ಸಂತ್ರಸ್ತರನ್ನು ಕಾಳಜಿ ಕೇಂದ್ರಕ್ಕೆ ವರ್ಗಾಯಿಸಲು ಸಿದ್ಧತೆ ನಡೆದಿದೆ.
ಶಿವಮೊಗ್ಗದಲ್ಲಿ ಆ.2ರಿಂದ 4ರವರೆಗೆ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಾತ್ರಿ ಹೊತ್ತು ಮಳೆ ಸುರಿಯುತ್ತಿದ್ದು, ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆ ಸಾಧ್ಯತೆಯಿದೆ.
ಕುರುಬರಜೆಡ್ಡಿನಲ್ಲಿ ಗದ್ದೆಗಳಿಗೆ ಹಾನಿ:
ಸೋಮವಾರ ಸುರಿದ ಭಾರಿ ಮಳೆಗೆ ಸಾಗರ ತಾಲ್ಲೂಕಿನ ಭತ್ತದ ಗದ್ದೆ, ಶುಂಠಿ ಗದ್ದೆ ತೋಟಗಳಿಗೆ ನೀರು ನುಗ್ಗಿ ಭತ್ತದ ನಾಟಿ.ಹಾಗೂ ಶುಂಠಿ ಸಸಿಗಳು ಸಂಪೂರ್ಣವಾಗಿ ಹಾಳಾಗಿವೆ. ಆಚಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಲಕ್ಕವಳ್ಳಿ ಗ್ರಾಮದ ಕುರುಬರಜೆಡ್ಡು ಎಂಬಲ್ಲಿ ಕೆರೆಕೋಡಿ ಹರಿದು ಸುಮಾರು 15 ಎಕರೆ ನಾಟಿ ಮಾಡಿದ ಗದ್ದೆ ಹಾಗೂ ಶುಂಠಿಯ ಬೆಳೆ ಸಂಪೂರ್ಣ ನಾಶವಾಗಿದೆ.
ಮಂಡ್ಯ ನಗರ, ಜಿಲ್ಲೆಯ ವಿವಿಧೆಡೆ ಸೋಮವಾರ ಧಾರಾಕಾರ ಮಳೆಯಾಗಿದ್ದು, ಮಂಡ್ಯದ ಹೃದಯ ಭಾಗದಲ್ಲಿರುವ ಮಹಾವೀರ ವೃತ್ತ ಜಲಾವೃತವಾಗಿದೆ. ವಾಹನ ಸವಾರರು ಪರದಾಡಿದ್ದಾರೆ.

Categories
ಜಿಲ್ಲಾ ವಾರ್ತೆ

ಮಧು ಬಂಗಾರಪ್ಪಗೆ ಮಹತ್ವದ ಹುದ್ದೆ

  • ಪ್ರಣಾಳಿಕೆ, ನೀತಿ, ವಿಷನ್ 2023 ಸಮಿತಿಗೆ ನೇಮಕ

NAMMUR EXPRESS NEWS
ಶಿವಮೊಗ್ಗ : ರಾಜ್ಯ ಕಾಂಗ್ರೆಸ್’ನ ಪ್ರಣಾಳಿಕೆ, ನೀತಿ ಮತ್ತು ವಿಷನ್ 2023 ಸಮಿತಿಗೆ ಸೊರಬ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ ಅವರನ್ನು ನೇಮಕ ಮಾಡಲಾಗಿದೆ. ಈ ಸಂಬಂಧ ಅಖಿಲ ಭಾರತೀಯ ಕಾಂಗ್ರೆಸ್‌ ಕಮಿಟಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಿತಿಗೆ ಡಾ. ಜಿ.ಪರಮೇಶ್ವರ್ ಅವರನ್ನು ಅಧ್ಯಕ್ಷರಾಗಿ ನೇಮಿಸಲಾಗಿದೆ. ಮಾಜಿ ಶಾಸಕ ಮಧು ಬಂಗಾರಪ್ಪ, ಪ್ರೊ. ರಾಧಾಕೃಷ್ಣ ಅವರನ್ನು ಉಪಾಧ್ಯಕ್ಷರಾಗಿ ನೇಮಿಸಲಾಗಿದೆ.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಈ ಪಟ್ಟಿಗೆ ಅಂಕಿತ ಹಾಕಿದ್ದಾರೆ ಎಂದು ಕೆ.ಸಿ.ವೇಣುಗೋಪಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories
Uncategorized

ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ದರ 36 ರೂ. ಇಳಿಕೆ

ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ದರ 36 ರೂ. ಇಳಿಕೆ

NAMMUR EXPRESS NEWS
ಹೊಸದಿಲ್ಲಿ: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ದರವನ್ನು ಸೋಮವಾರ 36 ರೂ.ಗೆ ಇಳಿಕೆ ಮಾಡಲಾಗಿದೆ ಎಂದು ವರದಿಯಾಗಿದೆ.
ಇದರೊಂದಿಗೆ ವಾಣಿಜ್ಯ ಬಳಕೆಯ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 2,012.50 ರೂ.ನಿಂದ 1,976ಕ್ಕೆ ಇಳಿದಿದೆ. ಸ್ಥಳೀಯ ಮಾರಾಟ ತೆರಿಗೆಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ಬೆಲೆಯಲ್ಲಿ ವ್ಯತ್ಯಾಸ ಆಗಲಿದೆ.
ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು ಜುಲೈ 6ರಂದು 50 ರೂ.ಗೆ ಹೆಚ್ಚಿಸಲಾಗಿತ್ತು.

Categories
Uncategorized

ವಾಹನ ಮುಟ್ಟುಗೋಲು ಅಪರಾಧವಲ್ಲ

  • ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು

NAMMUR EXPRESS NEWS
ನವದೆಹಲಿ: ಸಾಲ ಮಾಡಿ ವಾಹನ ಕೊಳ್ಳುವವರಿಗೆ ಇಲ್ಲೊಂದು ಎಚ್ಚರಿಕೆ. ಸಾಲ ಮರುಪಾವತಿಸದಿದ್ದರೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಯಾವುದೇ ಸಮಯದಲ್ಲಿ ಬಂದು ನಿಮ್ಮ ವಾಹನವನ್ನು ಮುಟ್ಟುಗೋಲು ಹಾಕಬಹುದು. ಅದು ಅಪರಾಧವಾಗುವುದಿಲ್ಲ. ಹೀಗಂತ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸಾಲ ಮಾಡಿ ವಾಹನ ಕೊಳ್ಳುವಾಗ ಆ ವಾಹನ ಬ್ಯಾಂಕ್‌ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಯ ಹೆಸರಿನಲ್ಲಿಯೇ ಇರುತ್ತದೆ. ಪೂರ್ತಿಯಾಗಿ ಸಾಲ ಪಾವತಿಸಿದ ನಂತರ
ದಾಖಲೆಯಲ್ಲಿ ಹೆಸರು ಬದಲಾಗುವವರೆಗೆ ಸಂಸ್ಥೆಗೆ ವಾಹನದ ಮೇಲೆ ಅಧಿಕಾರವಿರುತ್ತದೆ. ಹಾಗಾಗಿ ಮುಟ್ಟುಗೋಲು ಹಾಕಿಕೊಂಡರೂ ಅದು ಕ್ರಿಮಿನಲ್ ಅಪರಾಧವಾಗುವುದಿಲ್ಲ ಎಂದು ಜಸ್ಟಿಸ್ ಚೌಹಾಣ್‌ರ ಏಕಸದಸ್ಯ ಪೀಠ ತೀರ್ಪಿನಲ್ಲಿ ಹೇಳಿದೆ.
ವಾಹನ ಮುಟ್ಟುಗೋಲು ಹಾಕಿದ ಕುರಿತು 2009ರಲ್ಲಿ ವ್ಯಕ್ತಿಯೋರ್ವರು ಗುವಾಹಟಿ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು. ವಾಹನವನ್ನು ಅವರಿಗೆ ಹಿಂದಿರುಗಿಸಬೇಕೆಂದು ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ ಹಣಕಾಸು ಸಂಸ್ಥೆ ಈ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.