Categories
ತೀರ್ಥಹಳ್ಳಿ

ಕಡಿದಾಳ್ ಪ್ರಕಾಶ್ ಅವರಿಗೆ ಸಂಸ್ಕೃತಿ ಸಿರಿ ಪ್ರಶಸ್ತಿ

ಕಡಿದಾಳ್ ಪ್ರಕಾಶ್ ಅವರಿಗೆ ಸಂಸ್ಕೃತಿ ಸಿರಿ ಪ್ರಶಸ್ತಿ

  • ನಾಗೇಶ್ ಹೆಗ್ಡೆ, ಸುಧಾ ಬರಗೂರು ಸೇರಿ 8 ಮಂದಿಗೆ ಪ್ರಶಸ್ತಿ
  • ಪ್ರಕಾಶ್ ಅವರಿಗೆ ಕುಪ್ಪಳಿ ಆಡಳಿತ ಮಂಡಳಿ, ಸಿಬ್ಬಂದಿ ಶುಭಾಷಯ

NAMMUR EXPRESS NEWS
ಬೆಂಗಳೂರು: ಡಾ.ವೇಮಗಲ್ ನಾರಾಯಣಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನ ಕೊಡ ಮಾಡುವ ರಾಜ್ಯಮಟ್ಟದ ಸಂಸ್ಕೃತಿ ಸಿರಿ ಪ್ರಶಸ್ತಿಗೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಸೇರಿ 8 ಮಂದಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
ನ.20 ರಂದು ಬೆಳಗ್ಗೆ 11ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಪುರಸ್ಕಾರ ಕಾರ್ಯಕ್ರಮ ನಡೆದಿದ್ದು ಪರಿಸರ ತಜ್ಞ, ಲೇಖಕ ನಾಗೇಶ್ ಹೆಗಡೆ, ಗಾಯಕಿ ಕಸ್ತೂರಿ ಶಂಕರ್ ಕನ್ನಡಪರ ಹೋರಾಟಗಾರ ರಾಮಣ್ಣ ಕೂಡಿಹೊಸಳ್ಳಿ, ಸಾಹಿತಿ ಕೋಟಗಾನಹಳ್ಳಿ ರಾಮಯ್ಯ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಬಿ ಕೆ ಶಿವರಾಮ್, ವಾಗ್ಮಿ ಸುಧಾ ಬರಗೂರು, ನೃತ್ಯ ಗುರು ಡಾ. ಸುಪರ್ಣ ವೆಂಕಟೇಶ್ ಪ್ರಶಸ್ತಿ ಸ್ವೀಕರಿಸಿದರು. ಪುರಸ್ಕಾರ 25000 ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ರಾಜ್ಯದಲ್ಲಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
ಕುಪ್ಪಳಿ ಆಡಳಿತ ಮಂಡಳಿ, ಸಿಬ್ಬಂದಿ ಶುಭಾಷಯ: ಕಡಿದಾಳ್ ಪ್ರಕಾಶ್ ಅವರಿಗೆ ಪ್ರತಿಷ್ಠಾನದ ಅಧ್ಯಕ್ಷ ಡಾ. ಬಿ. ಎಲ್. ಶಂಕರ್, ಪ್ರಮುಖರಾದ ಮನುದೇವ್, ನಾರಾಯಣಮೂರ್ತಿ, ಸಿಬ್ಬಂದಿಗಳಾದ ಸುಧಾಕರ್ ಕುಪ್ಪಳಿ, ವಿಶ್ವನಾಥ್ ಹಾರೋಗೊಳಿಗೆ, ಮಂಜುನಾಥ್ ಸೇರಿ ಎಲ್ಲಾ ಸಿಬ್ಬಂದಿ, ಸಾಹಿತ್ಯ ಪ್ರಿಯರು ಶುಭಾಷಯ ಸಲ್ಲಿಸಿದ್ದಾರೆ.

Categories
ಬೆಂಗಳೂರು

ಬೆಂಗಳೂರು, ಕರಾವಳಿ ಸೇರಿ ಹಲವೆಡೆ ಮಳೆ?

  • ಎಲ್ಲೆಲ್ಲಿ ಮಳೆ ಸಾಧ್ಯತೆ… ಇಲ್ಲಿದೆ ಡೀಟೇಲ್ಸ್

NAMMUR EXPRESS NEWS
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸುಮಾರು 10 ದಿನಗಳಿಂದ ಚಳಿ ಹೆಚ್ಚಳವಾಗಿತ್ತು. ಚಳಿಯ ನಡುವೆಯೇ ಬೆಂಗಳೂರಿನಲ್ಲಿ ನವೆಂಬರ್ 22ರ ಮಂಗಳವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಮಂಗಳವಾರದಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆಯಿದೆ.
ಕರ್ನಾಟಕದ ಕರಾವಳಿಯ ಬಹುತೇಕ ಕಡೆ, ದಕ್ಷಿಣ ಒಳನಾಡಿನ ಅನೇಕ ಕಡೆ, ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಮಂಗಳವಾರದಿಂದ ಮಳೆ ಸುರಿಯುವ ಸಾಧ್ಯತೆಯಿದೆ. ಹೀಗಾಗಿ, ಚಳಿ ಕೊಂಚ ಕಡಿಮೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ, ಮೈಸೂರು, ತುಮಕೂರು, ವಿಜಯಪುರ ಹಾಗೂ ಹಾವೇರಿ ಸೇರಿ ಇತರ ಜಿಲ್ಲೆಗಳಲ್ಲಿ ಮಂಗಳವಾರ ಮಳೆಯ ಮುನ್ಸೂಚನೆಯಿದೆ.
ಈಗಾಗಲೇ ರಾಜ್ಯದಲ್ಲಿ ಚಳಿ ಕೂಡ ಏರಿಕೆಯಾಗಿದ್ದು, ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆಯಾಗುವ ಬಗ್ಗೆಯೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇದರ ಮಧ್ಯೆ ಈಗ ಮತ್ತೆ ಮಳೆಯ ಅಲರ್ಟ್ ನೀಡಲಾಗಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಂಜು ಕೂಡ ಸುರಿಯುತ್ತಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಷಿಯಸ್, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಷಿಯಸ್ ಇರಲಿದೆ.

Categories
ರಾಜ್ಯ

ಅಂಗನವಾಡಿ ಕಾರ್ಯಕರ್ತೆಯರ ಪರದಾಟ!

  • ಸಚಿವರ ಸ್ವಕ್ಷೇತ್ರದಲ್ಲಿಯೇ ಗೌರವ ಧನ ಇಲ್ಲ
  • 3 ತಿಂಗಳಿಂದ ಕೆಲವು ಕಡೆ ಸಂಬಳ ಆಗಿಲ್ಲ

NAMMUR EXPRESS NEWS
ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಬರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಗೌರವಧನ ಮಂಜೂರಾಗಿಲ್ಲ.
3 ತಿಂಗಳಿಂದ ಕೆಲವು ಕಡೆ ಸಂಬಳ ಆಗಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.
ಸಂಬಳ ಸಿಗದೆ ಜೀವನ ಸಾಗಿಸಲು ಅಂಗನವಾಡಿ ಕೇಂದ್ರಗಳ ಸಿಬ್ಬಂದಿ ಪರದಾಡುತ್ತಿದ್ದಾರೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸೇರಿ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತೆಯರಿಗೆ 10 ಸಾವಿರ ರೂಪಾಯಿ ಮತ್ತು ಮಿನಿ ಅಂಗನವಾಡಿ ಕೇಂದ್ರ ಕಾರ್ಯಕರ್ತೆಯರಿಗೆ 6,250 ರೂ ಹಾಗೂ ಸಹಾಯಕಿಯರಿಗೆ 5,250 ರೂಪಾಯಿ ಗೌರವಧನ ನೀಡಲಾಗುತ್ತದೆ. ಇಷ್ಟು ದಿನಗಳ ಕಾಲ ಸರಿಯಾಗಿ ಪ್ರತಿ ತಿಂಗಳು ಗೌರವಧನ ಪಾವತಿಯಾಗುತ್ತಿತ್ತು. ಆದರೆ ಕಳೆದ 2-3 ತಿಂಗಳಿನಿಂದ ತಾಂತ್ರಿಕ ಸಮಸ್ಯೆಯಿಂದ ಗೌರವಧನ ಪಾವತಿ ಆಗಿಲ್ಲ. ಹೀಗಾಗಿ ದೈನಂದಿನ ಜೀವನ ನಡೆಸಲು ಅಂಗನವಾಡಿ ಸಿಬಂದಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಹಲವು ಜಿಲ್ಲೆಗಳ ತಾಲೂಕುಗಳಲ್ಲಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ಈ ಮೂರು ತಿಂಗಳಿನಿಂದಲೂ ಗೌರವಧನ ಪಾವತಿಯಾಗಿಲ್ಲ.
ಸೇವಾ ಭತ್ಯೆಯೇ ಬಳಕೆ ಕಳೆದ ತಿಂಗಳಿನಿಂದಲೂ ಮೂರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗೌರವಧನಕ್ಕೆ ಅನುದಾನ ಮಂಜೂರಾಗದ ಕಾರಣಕ್ಕೆ ಸೇವಾ ಭತ್ಯೆಯನ್ನೇ ಬಳಕೆ ಮಾಡಲಾಗಿದೆ.
10 ವರ್ಷಗಳ ಒಳಗೆ ಸೇವೆ ಸಲ್ಲಿಸಿದವರಿಗೆ 10 ಸಾವಿರ ರೂ. ಸೇವಾ ಭತ್ಯೆ, 10 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ 1,250 ರೂ. ಹಾಗೂ 20 ವರ್ಷಗಳಿಗಿಂತಲೂ ಮೇಲ್ಪಟ್ಟು ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ 1,500 ರೂ. ಸೇವಾ ಭತ್ಯೆ ನೀಡಲಾಗುತ್ತದೆ. ಡಿಸೆಂಬರ್‌ವರೆಗಿನ ಸೇವಾ ಭತ್ಯೆಗೆ ಈಗಾಗಲೇ ಅನುದಾನ ಮಂಜೂರಾಗಿದೆ. ಈ ಸೇವಾ ಭತ್ಯೆಯನ್ನೇ ಗೌರವಧನಕ್ಕೆ ಬಳಕೆ ಮಾಡಲಾಗಿದೆ. ಈ ಮೂರು ತಿಂಗಳ ಗೌರವಧನದ ಅನುದಾನವನ್ನು ಮುಂದಿನ ಸೇವಾ ಭತ್ಯೆಗೆ ಪಾವತಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ. ಈ ಮೂಲಕ ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದಾರೆ.

ಸಾಫ್ಟ್‌ವೇರ್ ಸಮಸ್ಯೆ ಕಾರಣ..?!

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಪಾವತಿಸುತ್ತಿವೆ. ರಾಜ್ಯ ಅನುದಾನ ಮತ್ತು ಕೇಂದ್ರದ ಅನುದಾನ ಬೇರೆ ಬೇರೆ ಸಮಯದಲ್ಲಿ ಬರುತ್ತಿತ್ತು. ಇದರಿಂದ ಅಂಗನವಾಡಿ ಸಿಬ್ಬಂದಿಗೆ ಗೌರವಧನ ಪಾವತಿಸಲು ತೊಂದರೆ ಆಗುತ್ತಿತ್ತು. ಆದರೆ ಈಗ ಪಬ್ಲಿಕ್ ಪೈನಾನ್ಸ್ ಮ್ಯಾನೇಜಮೆಂಟ್ ಸರ್ವಿಸ್ ಹೊಸ ಸಾಫ್ಟ್ ವೇರ್ ಅನುಷ್ಠಾನಗೊಳಿಸಿದೆ. ಇದರಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನವನ್ನು ಒಂದೇ ಬಾರಿಗೆ ಅಂಗನವಾಡಿ ಸಿಬ್ಬಂದಿಗೆ ಪಾವತಿಸಲಾಗುತ್ತದೆ. ಹೀಗಾಗಿ ಅಂಗನವಾಡಿ ಸಿಬ್ಬಂದಿಗೆ ಅನುಕೂಲ ಆಗಲಿದೆ. ಸಾಫ್ಟ್‌ವೇರ್ ಹೊಂದಾಣಿಕೆ ಆಗುವವರೆಗೆ ಮಾತ್ರ ಸಮಸ್ಯೆ ಇರಲಿದ್ದು, ಮುಂದೆ ಹೆಚ್ಚು ಅನುಕೂಲ ಆಗಲಿದೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು.

Categories
ಅಂತಾರಾಷ್ಟ್ರೀಯ ಸುದ್ದಿ

ಜಗತ್ತಿನ ಜನಸಂಖ್ಯೆ 800 ಕೋಟಿ!

  • ಮೊದಲ ಸ್ಥಾನದಲ್ಲಿ ಚೀನಾ, ಇನ್ನೊಂದು ವರ್ಷದಲ್ಲಿ ಭಾರತ ಮುಂದೆ
  • ಆಗಲಿದೆ ಭಾರೀ ಅಸಮತೋಲನ: ಮುಂದೆ ಕಷ್ಟ ಕಷ್ಟ

NAMMUR EXPRESS NEWS
ನವ ದೆಹಲಿ: ಜಗತ್ತಿನ ಜನಸಂಖ್ಯೆ ಮಂಗಳವಾರ (ನ.15) ಕ್ಕೆ 800 ಕೋಟಿ ಗಡಿ ದಾಟಿದೆ.
ಅಚ್ಚರಿ ಎಂದರೆ ಮುಂದಿನ ಒಂದು ವರ್ಷದಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿ, ವಿಶ್ವದ ಅತಿ ಹೆಚ್ಚು ಜನರಿರುವ ದೇಶವಾಗಲಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಭಾರತದ ಜನಸಂಖ್ಯೆ 141 ಕೋಟಿ ಇದ್ದು, ಚೀನಾದಲ್ಲಿ 145 ಕೋಟಿಯಷ್ಟಿದೆ. 2050ರ ವೇಳೆಗೆ ಭಾರತ, ಚೀನಾ, ಪಾಕಿಸ್ತಾನ, ಈಜಿಪ್ಟ್, ಇಥಿಯೋಪಿಯಾ, ನೈಜೀರಿಯಾ ಹಾಗೂ ತಾಂಜೇನಿಯಾದಲ್ಲಿ ವಿಶ್ವದ ಶೇ.50ರಷ್ಟು ಜನಸಂಖ್ಯೆ ಇರಲಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.
1950ರ ಬಳಿಕ ವಿಶ್ವದ
ಜನಸಂಖ್ಯೆ ಬೆಳವಣಿಗೆ ವೇಗ ತಗ್ಗಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ ಎಂದು ವರದಿ ಹೇಳಿದೆ. ಈ 2020ರ ನಂತರ ಜನಸಂಖ್ಯಾ ಏರಿಕೆ ಪ್ರಮಾಣ ಶೇ.1ಕ್ಕೆ ಇಳಿದಿದೆ. 2010ರಲ್ಲಿ 700 ಕೋಟಿಯಿದ್ದ ಜನಸಂಖ್ಯೆ 800 ಕೋಟಿ ಗಡಿ ತಲುಪಲು 12 ವರ್ಷ ತೆಗೆದುಕೊಂಡಿದೆ. 2037ರ ವೇಳೆಗೆ 900 ಕೋಟಿ ದಾಟಬಹುದು. 2050ಕ್ಕೆ 3 ವಿಶ್ವದ ಜನಸಂಖ್ಯೆ 970 ಕೋಟಿಗೆ, 2100ರ ಹೊತ್ತಿಗೆ ಒಂದು ಸಾವಿರ ಕೋಟಿ (1040 ಕೋಟಿ) ಗಡಿ ದಾಟಲಿದೆ ಎಂದು ಅಂದಾಜು ಮಾಡಲಾಗಿದೆ.
ಜಾಗತಿಕ ಅಸಮಾನತೆ: ಜನಸಂಖ್ಯೆ ಜತೆಗೆ ಅಸಮಾನತೆಯೂ ಬೆಳೆದಿದೆ. ಅರ್ಧದಷ್ಟು ಜನ ಬಡತನ ರೇಖೆಗಿಂತ ಕೆಳಗೆ ಇದ್ದಾರೆ. ತಲಾ ಆದಾಯ ಕೇವಲ 2,900 (ಕೊಳ್ಳುವ ಸಾಮರ್ಥ್ಯ ಆಧರಿಸಿ) ರೂ.ಗಳಾಗಿದೆ. ಶೇ.10ರಷ್ಟು ಮಂದಿ ವಿಶ್ವ ಆದಾಯದ ಶೇ.76ರಷ್ಟು ಸಂಪತ್ತು ಹೊಂದಿದ್ದು, ಶೇ.56ರಷ್ಟು ಆದಾಯ 10ರಷ್ಟು ಜನರ ಬಳಿ ಇದೆ. ಬಡವರ ಆದಾಯ ಕೇವಲ ಶೇ.8.5ರಷ್ಟಿದೆ. ಶೇ.48ರಷ್ಟು ಪರಿಸರ ಮಾಲಿನ್ಯಕ್ಕೆ ಶ್ರೀಮಂತ ವ್ಯಕ್ತಿಗಳೇ ಕಾರಣ ಎಂದು ಉಲ್ಲೇಖ ಮಾಡಲಾಗಿದೆ.
ವಿಶ್ವಸಂಸ್ಥೆ ಅಂದಾಜಿನ ಪ್ರಕಾರ ಜಾಗತಿಕವಾಗಿ ವಾರ್ಷಿಕ ಶೇ.31ರಷ್ಟು ಆಹಾರ ವ್ಯರ್ಥವಾಗುತ್ತಿದೆ. ಶೇ.14ರಷ್ಟು ಆಹಾರ ಕೊಯ್ಲ ಮಾಡುವಾಗ ಹಾಗೂ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಾಗ ವ್ಯರ್ಥವಾಗುತ್ತಿದೆ. ಶೇ.17ರಷ್ಟು ಆಹಾರ ಮನೆ, ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ವ್ಯರ್ಥವಾಗುತ್ತಿದೆ.

Categories
ಅಂತಾರಾಷ್ಟ್ರೀಯ ಸುದ್ದಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಲಕ್ಷದೀಪೋತ್ಸವ ಸಂಭ್ರಮ!

  • ನ.20ರಂದು ದೇವರ ದರ್ಶನ ಮಧ್ಯಾಹ್ನದಿಂದ ಇರಲ್ಲ
  • ನ. 23ರಂದು ಲಕ್ಷದೀಪೋತ್ಸವ ಸಂಭ್ರಮ
  • ಕುಕ್ಕೆ ಭಜನೋತ್ಸವದಲ್ಲಿ ಭಾಗವಹಿಸಲು ಅವಕಾಶ

NAMMUR EXPRESS NEWS
ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವೆಂಬರ್ 20 ರಂದು ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ದರ್ಶನವನ್ನು ನಿರ್ಬಂಧಿಸಲಾಗಿದೆ. ನವೆಂಬರ್ 20ರಂದು ಚಂಪಾಷಷ್ಠಿ ವಾರ್ಷಿಕ ಮೂಲಮೃತ್ತಿಕೆಯ ಪ್ರಸಾದ ತೆಗೆಯುವ ಆಚರಣೆ ನಡೆಸಲಾಗುತ್ತದೆ. ಈ ಕಾರಣಕ್ಕೆ ನವೆಂಬರ್ 20ರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ದರ್ಶನ ಇರುವುದಿಲ್ಲ. ಮಧ್ಯಾಹ್ನ 2 ಗಂಟೆಯ ನಂತರವಷ್ಟೇ ದೇವರ ದರ್ಶನ ಲಭ್ಯವಾಗಲಿದೆ.
ಚಂಪಾಷಷ್ಠಿ ಕೊರೋನ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ನಿರ್ಬಂಧಿಸಲಾಗಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿನ ಚಂಪಾ ಷಷ್ಠಿಯ ಎಡೆಸ್ನಾನ ಸೇವೆಗೆ ಈ ಬಾರಿ ಅವಕಾಶ ನೀಡಲಾಗಿದೆ.
ಬೀದಿ ಉರುಳು ಸೇವೆ ಮಾಡುವವರಿಗೆ ಅವಕಾಶ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ನವೆಂಬರ್ 21ರಿಂದ ನಡೆಯಲಿರುವ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಬೀದಿ ಉರುಳು ಸೇವೆ ಮಾಡುವವರಿಗೆ ಲಕ್ಷ ದೀಪೋತ್ಸವ ದಿನದಂದು ರಾತ್ರಿ ರಥೋತ್ಸವದ ಬಳಿಕ ಸಂಜೆ 5ರಿಂದ ಬೆಳಗ್ಗೆ 6 ಗಂಟೆವರೆಗೆ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆದಿದೆ.
ನವೆಂಬರ್ 23ರಂದು ನಡೆಯಲಿರುವ ಲಕ್ಷದೀಪೋತ್ಸವ ಸಮಯದಲ್ಲಿ ಕುಣಿತಾ ಭಜನೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಸುಮಾರು ಒಂದು ಸಾವಿರ ತಂಡಗಳು ಕುಣಿಯುತ್ತಾ ನಡೆಸುವ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಅದಕ್ಕಾಗಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಆಸಕ್ತ ತಂಡಗಳು ಭಜನಾ ಕುಣಿತದಲ್ಲಿ ಭಾಗವಹಿಸಲು ಹೆಸರನ್ನು ನೋಂದಾಯಿಸಿ ಕೊಳ್ಳಬಹುದಾಗಿದೆ.
ಕುಣಿತಾ ಭಜನೋತ್ಸವದಲ್ಲಿ ಸುಮಾರು 1,000 ತಂಡಗಳು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ರಾಜ್ಯಾದ್ಯಂತ ಭಕ್ತರು ಸೇವೆ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಪ್ರತಿಯೊಂದು ತಂಡದಲ್ಲಿ ಗರಿಷ್ಟ 10 ಮಂದಿಗಷ್ಟೇ ಅವಕಾಶವಿರಲಿದೆ. ಕುಣಿತಾ ಭಜನೋತ್ಸವದಲ್ಲಿ ಪಾಲ್ಗೊಳ್ಳುವ ಆಸಕ್ತರಿರುವ ತಂಡಗಳು ನವೆಂಬರ್ 20ರ ಒಳಗಾಗಿ ಕುಕ್ಕೆ ದೇಗುಲದ ಕಚೇರಿಯಲ್ಲಿ ಹೆಸರು ನೋಂದಾಯಿಸಬೇಕಾಗುತ್ತದೆ.

Categories
ಸಿನಿಮಾ

ಅರ್ಧ ಶತಕ ಬಾರಿಸಿದ ಕಾಂತಾರ!

  • 370 ಕೋಟಿಗೂ ಹೆಚ್ಚು ಹಣ: 1ಕೋಟಿ ಟಿಕೆಟ್ ಮಾರಾಟ
  • ಒಬ್ಬರೇ 2-5 ಬಾರಿ ನೋಡಿದ ಮೊದಲ ಸಿನಿಮಾ..!
  • ಪಂಜುರ್ಲಿ, ಗುಳಿಗ ದೈವದ ಆಶೀರ್ವಾದ: ರಿಷಬ್ ಶೆಟ್ಟಿ
  • ಎಲ್ಲೆಡೆ ಸಂಭ್ರಮ: ಕನ್ನಡದ ಹೆಮ್ಮೆಯ ಚಿತ್ರಕ್ಕೆ ಶುಭಾಷಯ

NAMMUR EXPRESS NEWS
ಕನ್ನಡದ ಸಿನಿಮಾವೊಂದು ಸದ್ದಿಲ್ಲದೇ ಬಂದು ಇಡೀ ಭಾರತ ಚಿತ್ರರಂಗವನ್ನು ಕೇವಲ 25 ದಿನದಲ್ಲೇ ಅಲ್ಲೋಲ ಕಲ್ಲೋಲ ಮಾಡಿದ್ದು ಇದುವರೆಗೆ ಖಂಡಿತ ಸಿನಿಮಾ ರಂಗ ಕಂಡಿರಲಿಲ್ಲ.
ಕರ್ನಾಟಕದ ಕರಾವಳಿಯ ಮೂಲೆಯೊಂದರ ಸಣ್ಣ ಕಥೆ ಮತ್ತು ದೈವ ಪವಾಡದ ಕಥೆ ಇಡೀ ಸಿನಿಮಾ ಜಗತ್ತನ್ನು ಬೆಚ್ಚಿ ಬೀಳಿಸಿದೆ.
ಹೌದು. ನಮ್ಮ ಕನ್ನಡದ ಹೆಮ್ಮೆ ಕಾಂತಾರ ಸಿನಿಮಾ 50 ದಿನ ಪೂರೈಸಿದೆ. ಜಗತ್ತಿನಾದ್ಯಂತ ಹಿರಿ-ಕಿರಿ ಎಂಬ ಬೇಧವಿಲ್ಲದೆ ಎಲ್ಲರ ಹೃದಯಗಳನ್ನು ಗೆದ್ದ ಕಾಂತಾರ ಚಿತ್ರವು ಯಶಸ್ವಿ 50 ದಿನಗಳನ್ನು ಪೂರೈಸಿದೆ.
ಟ್ವಿಟ್ ಮಾಡಿ ಸಂತೋಷವನ್ನು ಹಂಚಿಕೊಂಡಿರುವ ನಟ ನಿರ್ದೇಶಕ ರಿಷಬ್ ಶೆಟ್ಟಿ,” ನಮಗೆ ದಿವ್ಯ ಸಂಭ್ರಮದ ಕ್ಷಣ. ಜಗತ್ತಿನಾದ್ಯಂತ ಎಲ್ಲರಿಗೂ ಧನ್ಯವಾದಗಳು. ಪಂಜುರ್ಲಿ ಮತ್ತು ಗುಳಿಗ ದೈವದಿಂದ ನಾವು ನಿಜವಾಗಿಯೂ ಆಶೀರ್ವದಿಸಲ್ಪಟ್ಟಿದ್ದೇವೆ. ಆವೇಶವು ಅಜೇಯವಾಗಿ ಉಳಿದಿದೆ” ಎಂದಿದ್ದಾರೆ.
ಕಾಂತಾರ ತನ್ನ ಮೊದಲ 49 ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ ಮತ್ತು ಭಾರತದಲ್ಲಿ ಸರಿಸುಮಾರು 294.89 ಕೋಟಿ ರೂ ನಿವ್ವಳ ಲಾಭ ಗಳಿಸಿದೆ. ಎಲ್ಲಾ ಭಾಷೆ ಸೇರಿ ತನ್ನ ಐವತ್ತನೇ ದಿನದಂದು ಕಾಂತಾರ 0.85 ಕೋಟಿ ರೂ ನಿವ್ವಳ ಲಾಭ ಗಳಿಸಬಹುದು.
ವಿಶ್ವದಾದ್ಯಂತ ಈ ಚಿತ್ರವು 370 ಕೋಟಿ ಗೂ ಅಧಿಕ ಗಳಿಕೆ ಮಾಡಿದೆ ಎಂದು ವರದಿಗಳು ಹೇಳಿವೆ. ಇನ್ನೊಂದು ಸಂತಸದ ಸುದ್ದಿ ಪ್ರಸಿದ್ಧ ಅಂತಾರಾಷ್ಟ್ರೀಯ ಇಂಗ್ಲಿಷ್ ಮಾಧ್ಯಮ ಫ್ರಂಟ್ ಲೈನ್ ಪತ್ರಿಕೆಯು ಕಾಂತಾರ ಚಿತ್ರವನ್ನು ತನ್ನ ಕವರ್ ಸ್ಟೋರಿ ಮಾಡಿದೆ.
ಚಿತ್ರವು ನ.24 ರಂದು ಪ್ರೈಮ್ ಒಟಿಟಿಯಲ್ಲಿ ತೆರೆಕಾಣಲಿದೆ.

300 ಚಿತ್ರ ಮಂದಿರಗಳಲ್ಲಿ 50 ದಿನ!

ಸೆ.30ರಂದು ಕನ್ನಡದಲ್ಲಿ ಬಿಡುಗಡೆಯಾದ ‘ಕಾಂತಾರ’ ಚಿತ್ರವು ರಾಜ್ಯದ 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಹಾಗೂ ವಿದೇಶದ ಹಲವು ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರೈಸಿ 100ನೇ ದಿನದತ್ತ ದಾಪುಗಾಲಿಟ್ಟಿದೆ. ಬರೀ ಕನ್ನಡವಷ್ಟೇ ಅಲ್ಲದೇ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್ ಆಗಿರುವ ಈ ಚಿತ್ರ ಅಲ್ಲಿಯೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು ಸದ್ಯದಲ್ಲೇ ಪರಭಾಷೆಯಲ್ಲೂ 50 ದಿನಗಳನ್ನು ಪೂರ್ಣಗೊಳಿಸಲಿದೆ. ಐದು ಪ್ರಮುಖ ಭಾಷೆಗಳ ಸಿನಿಮಾಗಳನ್ನು ‘ಹೊಂಬಾಳೆ ಫಿಲ್ಮ್ ‘ ಸಂಸ್ಥೆ ನಿರ್ಮಿಸಿದೆ.

ಎಲ್ಲಾ ವಯಸ್ಸು, ಭಾಷೆ ಮೀರಿ ಗೆಲುವು
ಕಾಂತಾರ ಹಳ್ಳಿಯಿಂದ ಹಿಡಿದು ದಿಲ್ಲಿವರೆಗೆ ಪ್ರೇಕ್ಷಕನನ್ನು ವಯಸ್ಸು, ಭಾಷೆ, ಪ್ರದೇಶದ ಹಂಗು ತೊರೆದು ಸಿನಿಮಾ ನೋಡಿಸಿದೆ. ಇಲ್ಲಿ ಗೆದ್ದಿದ್ದು ಕಥೆ ಹಾಗೂ ರಿಷಬ್ ಅಭಿನಯ.

Categories
ಕೃಷಿ

ಎಲೆ ಚುಕ್ಕಿ ರೋಗ ಮತ್ತು ಅಡಿಕೆ ಬೆಳೆಗೆ ಸಂಬಂಧಿಸಿದಂತೆ ಚರ್ಚೆ, ಸಂವಾದ

  • ತೀರ್ಥಹಳ್ಳಿಯ ಮಲ್ನಾಡ್ ಕ್ಲಬ್ ಅಲ್ಲಿ ನ.19ಕ್ಕೆ ಆಯೋಜನೆ
  • ಮಲ್ನಾಡ್ ಕ್ಲಬ್ ಸದಸ್ಯರು, ಆಸಕ್ತ ರೈತರು ಪಾಲ್ಗೊಳ್ಳಲು ಮನವಿ

NAMMUR EXPRESS NEWS
ನ.19ನೇ ಶನಿವಾರದಂದು ಕೃಷಿ ತಜ್ಞರು, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಇವರೊಂದಿಗೆ ಮಲ್ನಾಡ್ ಕ್ಲಬ್ (ರಿ) ತೀರ್ಥಹಳ್ಳಿಯ ಸಿಲ್ವರ್ ಜುಬಿಲಿ ಹಾಲ್ ನಲ್ಲಿ ಸಂಜೆ 6:30ಕ್ಕೆ ಎಲೆ ಚುಕ್ಕಿ ರೋಗ ಮತ್ತು ಅಡಿಕೆ ಬೆಳೆಗೆ ಸಂಬಂಧಿಸಿದಂತೆ ಚರ್ಚೆ ಮತ್ತು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಮಾನ್ಯ ಸದಸ್ಯರುಗಳು ಹಾಗೂ ತಾಲೂಕಿನ ಆಸಕ್ತ ಕೃಷಿಕರು ಈ‌ ಕಾರ್ಯಕ್ರಮದಲ್ಲಿ‌ ಭಾಗವಹಿಸಲು ಈ ಮೂಲಕ‌ ಕೋರಿದೆ.

ಆಡಳಿತ ಮಂಡಳಿಯ ಪರವಾಗಿ

ಎಸ್. ರಾಘವೇಂದ್ರ.
ಕಾರ್ಯದರ್ಶಿ. ಮಲ್ನಾಡ್ ಕ್ಲಬ್ (ರಿ)
ತೀರ್ಥಹಳ್ಳಿ.

ದಿನಾಂಕ: ನ. 19
ಸ್ಥಳ : ಮಲ್ನಾಡ್ ಕ್ಲಬ್ ಸಭಾಂಗಣ
ಸಮಯ: ಸಂಜೆ 6:30ಕ್ಕೆ

Categories
ತೀರ್ಥಹಳ್ಳಿ

ಖ್ಯಾತ ಗಾಯಕಿ ವರ್ಷಿಣಿ ಭಟ್ ಜಿಲ್ಲಾ ಮಟ್ಟಕ್ಕೆ!

  • ತೀರ್ಥಹಳ್ಳಿಯ ವಾಗ್ದೇವಿ ಶಾಲೆಯ ವಿದ್ಯಾರ್ಥಿನಿ
  • ಹಲವು ಗಾಯನ, ರಿಯಾಲಿಟಿ ಶೋಗಳಲ್ಲಿ ಸ್ಪರ್ಧೆ
  • ಶ್ರೀ ರಾಜರಾಜೇಶ್ವರಿ ನೃತ್ಯ ಕಲಾ ಶಾಲೆಯ ವಿದ್ಯಾರ್ಥಿಗಳ ಸಾಧನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ವಾಗ್ದೇವಿ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ವರ್ಷಿಣಿ ಪಿ ಭಟ್ ಸೋಮವಾರ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಭಾವಗೀತೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವರ್ಷಿಣಿ ಕಟ್ಟೆಹಕ್ಕಲು ಸಮೀಪದ ಪಟ್ಲಮನೆಯ ಪ್ರಕಾಶ್ ಭಟ್ ಮತ್ತು ಲಲಿತಾ ಇವರ ಪುತ್ರಿಯಾಗಿದ್ದು, ಇವರಿಗೆ ಶಾಲೆಯ ಶಿಕ್ಷಕರು ಹಾಗೂ ಪೋಷಕರು ಶುಭಕೋರಿದ್ದಾರೆ.
ಮಲೆನಾಡಿನ ಖ್ಯಾತ ಗಾಯಕಿಯಾಗುವ ಎಲ್ಲಾ ಅರ್ಹತೆ ಹೊಂದಿರುವ ವರ್ಷಿಣಿ ಭಟ್ ಅವರು ಈಗಾಗಲೇ ಹಲವು ಸ್ಪರ್ಧೆ, ಗಾಯನ, ರಿಯಾಲಿಟಿ ಶೋಗಳಲ್ಲಿ ಗೆಲುವು ಸಾಧಿಸಿದ್ದಾರೆ.
ವರ್ಷಿಣಿ ಭಟ್ ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ. ಇನ್ನೂ ಅನೇಕ ಪ್ರಶಸ್ತಿಗಳು ದೊರೆಯಲಿ ಎಂದು ನಮ್ಮೂರ ಎಕ್ಸ್ಪ್ರೆಸ್ ಮಾಧ್ಯಮ ಆಶಿಸುತ್ತದೆ.
ಮನಸ್ವಿ ಭಟ್ ಪ್ರಥಮ ಸ್ಥಾನ, ಅಪೇಕ್ಷ ತೃತೀಯ ಸ್ಥಾನ: ತೀರ್ಥಹಳ್ಳಿ ತಾಲೂಕು ಮಟ್ಟದ ಹೈಸ್ಕೂಲ್ ವಿಭಾಗದ ಪ್ರತಿಭಾ ಕಾರಂಜಿ ಭರತನಾಟ್ಯ ಸ್ಪರ್ಧೆಯಲ್ಲಿ ತೀರ್ಥಹಳ್ಳಿ ಶ್ರೀ ರಾಜರಾಜೇಶ್ವರಿ ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿನಿಯರಾದ ಮನಸ್ವಿ ಭಟ್ ಪ್ರಥಮ ಸ್ಥಾನವನ್ನು ಮತ್ತು ಅಪೇಕ್ಷ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ವಿಧುಷಿ ಅರುಂಧತಿ ಭಟ್ ಅಭಿನಂದನೆ ಸಲ್ಲಿಸಿದ್ದಾರೆ

Categories
ಮಲ್ನಾಡ್

ವಿನಯ್ ಗುರೂಜಿ ಬಗ್ಗೆ ಅಪಪ್ರಚಾರ: ಕೊಪ್ಪದಲ್ಲಿ ಮೌನ ಪ್ರತಿಭಟನೆ

  • ವಿನಯ್ ಗುರೂಜಿ ಭಕ್ತವೃಂದದಿಂದ ಆಯೋಜನೆ
  • ತಪ್ಪಿತಸ್ಥರ ವಿರುದ್ಧ ತನಿಖೆಗೆ ಪಟ್ಟು

NAMMUR EXPRESS NEWS
ಕೊಪ್ಪ: ಅವಧೂತ ವಿನಯ್ ಗುರೂಜಿ ಅವರ ಬಗ್ಗೆ ಕೆಲವು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವುದು ಮತ್ತು ಮಠದ, ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿರುವುದರಿಂದ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೊಪ್ಪ ಪಟ್ಟಣದಲ್ಲಿ ಶ್ರೀ ವಿನಯ್ ಗುರೂಜಿ ಭಕ್ತವೃಂದ ಬೃಹತ್ ಪ್ರತಿಭಟನೆ ನಡೆಸಿತು.
ಕೊಪ್ಪ ಪಟ್ಟಣದಲ್ಲಿ ಮೌನ ಪ್ರತಿಭಟನೆ ನಡೆಸಿರುವ ವಿನಯ್ ಗುರೂಜಿ ಭಕ್ತವೃಂದದವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಾಗೂ ಸುದ್ದಿ ಪ್ರಕಟ ಮಾಡಲಾಗುತ್ತಿದೆ. ಇದರಿಂದಾಗಿ ವಿನಯ್ ಗುರೂಜಿ ಅವರ ಲಕ್ಷಾಂತರ ಭಕ್ತರ ಮನಸಿಗೆ ನೋವು ಉಂಟು ಮಾಡಿದೆ. ಅಲ್ಲದೆ ಹಿಂದೂ ಧರ್ಮದ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ಹೀಗಾಗಿ ಸಾಮಾಜಿಕ ಮಾಧ್ಯಮಗಳು, ಯೂಟ್ಯೂಬ್ ಚಾನೆಲ್ ವಿರುದ್ಧ ತಕ್ಷಣ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೊಪ್ಪ ತಹಶೀಲ್ದಾರ್ ಅವರಿಗೆ ಮನವಿ ನೀಡಲಾಯಿತು. ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಕೊಪ್ಪ ಠಾಣೆ ಪೊಲೀಸರು ಮಾಡಿದ್ದರು.
ಕೊಪ್ಪ ಮುಖ್ಯ ಬಸ್ ನಿಲ್ದಾಣದಲ್ಲಿ ನಡೆದ ಸಭೆಯಲ್ಲಿ ಯುವ ಮುಖಂಡ ಪುಣ್ಯಪಾಲ್ ಅವರು ಮನವಿಯನ್ನು ಓದಿ ತಹಶೀಲ್ದಾರ್ ಅವರಿಗೆ ಹಸ್ತಾಂತರಿಸಿದರು.
ಇದೀಗ ಮಲೆನಾಡು ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ವಿನಯ್ ಗುರೂಜಿ ಪರ ಪ್ರತಿಭಟನೆ ನಡೆಯುತ್ತಿದೆ. ವಿನಯ್ ಗುರೂಜಿ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಹಾಗೂ ಕಾಣದ ಕೈಗಳ ಕೈವಾಡಗಳನ್ನು ತನಿಖೆ ಮಾಡಬೇಕೆಂದು ವಿನಯ್ ಗುರೂಜಿ ಭಕ್ತವೃಂದ ಸರ್ಕಾರಕ್ಕೆ ಆಗ್ರಹಿಸಿದೆ.

ನೂರಾರು ಮಹಿಳೆಯರು ಹಾಜರ್

ಬಿರು ಬಿಸಿಲಿನಲ್ಲೂ ಕೂಡ ನೂರಾರು ಮಹಿಳೆಯರು, ಕೂಲಿ ಕಾರ್ಮಿಕರು, ಧರ್ಮದ ಗುರುಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಮೌನ ಪ್ರತಿಭಟನೆಯಲ್ಲಿ ಭಾಗಿಯಾದರು. ಕೊಪ್ಪದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಗುರೂಜಿ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಹಾಗೂ ಕಾಣದ ಕೈಗಳು ಗುರೂಜಿಯವರ ಹೆಸರಿಗೆ ಅವಮಾನ ಮಾಡಲು ಪಿತ್ತೂರಿ ಮಾಡುತ್ತಿರುವುದರ ಬಗ್ಗೆ ತನಿಖೆ ನಡೆಸಿ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.

Categories
ಬೆಂಗಳೂರು

ಕಿರಾತಕರ ಲೋಕ: ಪ್ರೇಯಸಿಯನ್ನೇ 35 ಪೀಸ್ ಮಾಡಿದ!

  • ಹೆಣ ಇಟ್ಕೊಂಡು ಬೇರೆ ಹುಡ್ಗೀರ್ ರಾಸಲೀಲೆ
  • ಯುವತಿಯ ಕುತ್ತಿಗೆ ಸೀಳಿ ಕೊಂದು ಮೃತದೇಹದ ಜೊತೆಗೆ ವಿಡಿಯೋ!
  • ದೇಶದಲ್ಲಿ ಹೆಚ್ಚಾಯ್ತು ಕ್ರೂರ ಅಪರಾಧ

NAMMUR EXPRESS NEWS
ನವ ದೆಹಲಿ: ಮದುವೆಯಾಗಲು ಒತ್ತಾಯಿಸಿದಳು ಎನ್ನುವ ಕಾರಣಕ್ಕೆ ತನ್ನ ಪ್ರೇಯಸಿ ಶ್ರದ್ಧಾಳನ್ನು ಹತ್ಯೆಗೈದು 35 ತುಂಡು ಮಾಡಿದ್ದ ದೆಹಲಿಯ ಅಫ್ತಾಬ್ ಪೊನಾವಾಲನ ವಿರುದ್ಧ ದೇಶದಲ್ಲಿ ಕಿಚ್ಚು ಎದ್ದಿದೆ.
ಈ ನಡುವೆ ಆತನ ಮತ್ತಷ್ಟು ಲೈಂಗಿಕ ಹಪಾಹಪಿ, ದುಷ್ಕೃತ್ಯಗಳು ಬೆಳಕಿಗೆ ಬಂದಿವೆ. ಪ್ರೇಯಸಿ ದೇಹವನ್ನು ಕತ್ತರಿಸಿ ಫ್ರಿಡ್ಜ್ ನಲ್ಲಿ ಇಟ್ಟಿದ್ದ ಸಮಯದಲ್ಲೂ ಅಫ್ತಾಬ್ ಮತ್ತಷ್ಟು ಯುವತಿಯರ ಜೊತೆ ಡೇಟಿಂಗ್ ನಡೆಸಿ, ಅವರನ್ನು ಮನೆಗೆ ಕರೆತಂದು ಲೈಂಗಿಕ ಚಟುವಟಿಕೆ ನಡೆಸಿದ್ದ ಎಂಬ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಶ್ರದ್ಧಾ ಹತ್ಯೆಯಾದ 15 – 20 ದಿನಗಳಲ್ಲಿ ಅಫ್ತಾಬ್ ಬಂಬಲ್ ಡೇಟಿಂಗ್ ಆಪ್ ನಲ್ಲಿ ಮತ್ತಷ್ಟು ಯುವತಿಯರ ಸ್ನೇಹ ಬೆಳೆಸಿದ್ದು ಪತ್ತೆಯಾಗಿದೆ.

ಯುವತಿಯ ಕತ್ತು ಸೀಳಿ ಶವದೊಂದಿಗೆ ವಿಡಿಯೋ

  • ಪ್ರಿಯತಮನೇ ಕೊಲೆಗಾರನಾದ:

ಮಧ್ಯಪ್ರದೇಶದಲ್ಲಿ ವ್ಯಕ್ತಿಯೊಬ್ಬ ಯುವತಿಯ ಕುತ್ತಿಗೆ ಸೀಳಿ ಕೊಂದು, ಆಕೆಯ ಮೃತದೇಹದ ಜೊತೆಗೆ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾನೆ. ಆ ವಿಡಿಯೋವನ್ನು ತಾನೇ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾನೆ.
ಈ ಘಟನೆ ನಡೆದು 1 ವಾರ ಕಳೆದಿದ್ದರೂ ಶಿಲ್ಪಾ ಝರಿಯಾ ಎಂಬ 25 ವರ್ಷದ ಯುವತಿಯನ್ನು ಕತ್ತು ಸೀಳಿ ಕೊಲೆ ಮಾಡಿರುವುದಾಗಿ ವಿಡಿಯೋ ಅಪ್‌ಲೋಡ್ ಮಾಡಿರುವ ಅಭಿಜಿತ್ ಪಾಟಿದಾರ್‌ಗಾಗಿ ಪೊಲೀಸರು ಇನ್ನೂ ಹುಡುಕಾಟ ನಡೆಸುತ್ತಲೇ ಇದ್ದಾರೆ. ಜಬಲ್‌ಪುರದ ಮೇಖಾ ರೆಸಾರ್ಟ್‌ನಲ್ಲಿರುವ ಕೊಠಡಿಯಿಂದ ಆ ಯುವತಿಯ ಶವವನ್ನು ವಶಪಡಿಸಿಕೊಳ್ಳಲಾಗಿದೆ.
ಯಾರೂ ನಂಬಿಕೆಗೆ ದ್ರೋಹ ಮಾಡಬೇಡಿ ಎಂದು ಆ ವ್ಯಕ್ತಿ ಆಕ್ರೋಶದಿಂದ ಆ ಹೆಣದೊಂದಿಗೆ ವಿಡಿಯೋ ಶೂಟ್ ಮಾಡಿದ್ದಾನೆ. ನಿಮ್ಮ ಮೇಲಿಟ್ಟ ನಂಬಿಕೆಗೆ ಮೋಸ ಮಾಡಬೇಡಿ ಎಂದು ಹೇಳುವ ಆ ಯುವಕ ಹಾಸಿಗೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯ ಶವವನ್ನು ತೋರಿಸುತ್ತಾನೆ. ಆಕೆಯ ಕುತ್ತಿಗೆ ಸೀಳಿ ಕೊಂದಿರುವುದು ಆ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.
ಮೂಲಗಳ ಪ್ರಕಾರ, ಪಾಟ್ನಾದ ವ್ಯಾಪಾರಿಯಾಗಿರುವ ಅಭಿಜಿತ್ ಗೆಳೆಯ ಜಿತೇಂದ್ರ ಆ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಆಕೆ ಜಿತೇಂದ್ರ ಅವರಿಂದ ಸುಮಾರು 12 ಲಕ್ಷ ರೂ. ಸಾಲ ಪಡೆದು ಜಬಲ್‌ಪುರಕ್ಕೆ ಪರಾರಿಯಾಗಿದ್ದಳು. ಹೀಗಾಗಿ, ಜಿತೇಂದ್ರನ ಸೂಚನೆ ಮೇರೆಗೆ ಆ ಯುವತಿಯನ್ನು ಅಭಿಜಿತ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪೊಲೀಸ್ ಸೈಬರ್ ಸೆಲ್ ಜೊತೆಗೆ 4 ವಿಶೇಷ ತಂಡಗಳು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.