Categories
ಕರಾವಳಿ

17 ವರ್ಷದ ಅಪ್ರಾಪ್ತ ವಯಸ್ಕ ಬಾಲಕಿ ವಿವಾಹಕ್ಕೆ ಪ್ಲಾನ್!

17 ವರ್ಷದ ಅಪ್ರಾಪ್ತ ವಯಸ್ಕ ಬಾಲಕಿ ವಿವಾಹಕ್ಕೆ ಪ್ಲಾನ್!
– ಮದುವೆಗೆ ಬ್ರೇಕ್ ಹಾಕಿ,ಎಚ್ಚರಿಕೆ ನೀಡಿದ ಅಧಿಕಾರಿಗಳು
– ಮಂಗಳೂರಿನ ಬಂಟ್ವಾಳದಲ್ಲಿ ನಡೆದ ಘಟನೆ

NAMMUR EXPRESS NEWS
ಬಂಟ್ವಾಳ: ಅಪ್ರಾಪ್ತ ವಯಸ್ಕ ಬಾಲಕಿಗೆ ಬಾಲ್ಯ ವಿವಾಹ ಮಾಡಲು ತಯಾರಿಯಲ್ಲಿದ್ದ ಮನೆಗೆ ಸರಿಯಾದ ಸಮಯದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಮುಚ್ಚಳಿಕೆ ಬರೆಸಿಕೊಂಡು ಮದುವೆ ನಿಲ್ಲಿಸಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇರಾ ಎಂಬಲ್ಲಿ ಘಟನೆ ನಡೆದಿದೆ. ವಿಟ್ಲ ಸಿಡಿಪಿಓ ಇಲಾಖೆ ವ್ಯಾಪ್ತಿಗೊಳಪಟ್ಟ ಇರಾ ನಿವಾಸಿ 17 ವರ್ಷದ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮದ ಯುವಕನೊಬ್ಬನಿಗೆ ಮದುವೆ ನಡೆಸುವ ಉದ್ದೇಶ ದಿಂದ ನಿಶ್ಚಿತಾರ್ಥ ನಡೆದು ಮದುವೆಗಾಗಿ ಹಾಲ್ ಬುಕ್ ಆಗಿತ್ತು. ಬಾಲಕಿಯ ಮನೆಯಲ್ಲಿ ಶನಿವಾರದಂದು ಮದರಂಗಿ ಕಾರ್ಯಗಳು ನಡೆಯುತ್ತಿದ್ದ ವೇಳೆ ಇಲಾಖೆಗೆ ಮಾಹಿತಿ ಬಂದಿದ್ದು, ಕೂಡಲೇ ಸಿಡಿಪಿಒ ಇಲಾಖೆಯ ಹಿರಿಯ ಮೇಲ್ವಿಚಾರಕ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಅಧಿಕಾರಿಗಳು, ಕಂದಾಯ ನಿರೀಕ್ಷಕ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಬಂಟ್ವಾಳ ಗ್ರಾಮಾಂತರ ಪೊಲೀಸರು ಮನೆಗೆ ದಾಳಿ ನಡೆಸಿದ್ದಾರೆ.

ಅಪ್ರಾಪ್ತ ವಯಸ್ಕ ಬಾಲಕಿ ಎಂಬುದರ ಸಂಪೂರ್ಣ ದಾಖಲೆಗಳ ಮೂಲಕ ಮನೆಗೆ ಹೋಗಿರುವ ಅಧಿಕಾರಿಗಳು ಮನೆಯವರಿಗೆ ಕಾನೂನಾತ್ಮಕ ವಿಚಾರಗಳನ್ನು ತಿಳಿಸಿದ್ದಾರೆ. ಬಳಿಕ ಮದುವೆ ನಿಲ್ಲಿಸಲು ನಿರ್ಧರಿಸಿದ ಮನೆಯವರಿಂದ ಮುಚ್ಚಳಿಕೆ ಬರೆಸಿಕೊಂಡರು. ಆ ಬಳಿಕ ಮದುವೆ ನಿಘಂಟು ಮಾಡಿದ್ದ ವರನ ಕಡೆಯವರಿಗೆ ಮತ್ತು ಮದುವೆ ಹಾಲ್ ಮಾಲೀಕರಿಗೆ ಸರಿಯಾದ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕಿಗೆ 18 ವರ್ಷ ತುಂಬದ ಕಾರಣ ಇದು ಬಾಲ್ಯವಿವಾಹವಾಗುತ್ತದೆ. ಹಾಗಾಗಿ ಕಾನೂನಿನಡಿಯಲ್ಲಿ ಬರುವ ವಿಚಾರಗಳನ್ನು ತಿಳಿಸಿ ಮದುವೆ ನಿಲ್ಲಿಸಲು ತಿಳಿಸಿದ್ದಾರೆ.

Categories
ಕರಾವಳಿ ಮಂಗಳೂರು

ಕರಾವಳಿಯಲ್ಲಿ ಸೈಬರ್ ಕಳ್ಳರ ಗ್ಯಾಂಗ್.. ಎಚ್ಚರ!

ಕರಾವಳಿಯಲ್ಲಿ ಸೈಬರ್ ಕಳ್ಳರ ಗ್ಯಾಂಗ್.. ಎಚ್ಚರ!
– ಪ್ರತಿ ದಿನ ಒಂದು ಕಡೆ ವಂಚನೆ: ಪೊಲೀಸರ ಮೌನ
– ಮಂಗಳೂರು ನಗರ ನೋಂದಣಿ ಕಚೇರಿಯಲ್ಲಿ ಸೈಬರ್ ವಂಚನೆ
-ಬಯೋಮೆಟ್ರಿಕ್‌ ನೀಡಿದ 100 ಕ್ಕೂ ಅಧಿಕ ಮಂದಿಯ ಬ್ಯಾಂಕ್‌ ಖಾತೆಗೆ ಕನ್ನ!

NAMMUR EXPRESS NEWS
ಮಂಗಳೂರು: ಕರಾವಳಿಯಲ್ಲಿ ಸೈಬರ್ ಕಳ್ಳರ ಗ್ಯಾಂಗ್ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಮಂಗಳೂರು, ಉಡುಪಿ ಜಿಲ್ಲೆಯಲ್ಲಿ ದಿನಕ್ಕೊಂದು ಪ್ರಕರಣ ವರದಿ ಆಗುತ್ತಿದೆ. ಎಲ್ಲೋ ಹೊರ ಊರಲ್ಲಿ ಕುಳಿತು ಇಲ್ಲಿನ ಜನರಿಗೆ ವಂಚನೆ ಮಾಡಲಾಗುತ್ತಿದೆ. ಪ್ರತಿ ದಿನ ಒಂದು ಕಡೆ ವಂಚನೆ ನಡೆದರೂ ಪೊಲೀಸರ ಮೌನ ಇದೀಗ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಮದುವೆ, ಉದ್ಯಮ, ಓಟಿಪಿ, ಹೂಡಿಕೆ, ಚೈನ್ ಬ್ಯುಸಿನೆಸ್, ಜಾಬ್ ಹೀಗೆ ವಂಚಕರು ನೂರಾರು ಮಾರ್ಗ ಹಿಡಿದಿದ್ದಾರೆ. ಈ ನಡುವೆ ಮತ್ತೊಂದು ಬೃಹತ್ ವಂಚನೆ ಬಯಲಿಗೆ ಬಂದಿದೆ.

ಬಯೋಮೆಟ್ರಿಕ್‌ ನೀಡಿದ 100ಕ್ಕೂ ಅಧಿಕ ಮಂದಿಯ ಬ್ಯಾಂಕ್‌ ಖಾತೆಗೆ ಕನ್ನ!

ಜಾಗ, ಫ್ಲ್ಯಾಟ್‌ ನೋಂದಣಿಗಾಗಿ ಮಂಗಳೂರು ಮಿನಿ ವಿಧಾನಸೌಧದ ಉಪ ನೋಂದಣಿ ಕಚೇರಿಗೆ ಹೋಗಿ ಬಯೋಮೆಟ್ರಿಕ್‌ ನೀಡಿದ 100 ಕ್ಕೂ ಅಧಿಕ ಮಂದಿಯ ಬ್ಯಾಂಕ್‌ ಖಾತೆಗೆ ಕನ್ನ ಹಾಕಿದ ಸೈಬರ್‌ ವಂಚಕರು ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ. ಇದರಿಂದ ಉದ್ಯಮಿಗಳು, ನಾಗರಿಕರು ಕಂಗಾಲಾಗಿ ಪೊಲೀಸ್‌ ಠಾಣೆ ಸುತ್ತುತ್ತಿದ್ದಾರೆ. ಒಂದು ತಿಂಗಳಿನಿಂದೀಚೆಗೆ ನೂರಾರು ಮಂದಿ ಜಾಗ ಮಾರಾಟ ಮತ್ತು ಖರೀದಿ ಮಾಡಿದ್ದು, ಇವರು ಬಯೋಮೆಟ್ರಿಕ್‌ ನೀಡಿದ 24 ಗಂಟೆಯೊಳಗೆ ಅವರ ಖಾತೆಯಿಂದ 10 ಸಾವಿರ ರೂ. ಡ್ರಾ ಮಾಡಲಾಗಿದೆ. ಸೈಬರ್‌ ವಂಚಕರು ತಮ್ಮ ವಂಚನಾ ಜಾಲಕ್ಕೆ ಹೊಸ ಹೊಸ ತಂತ್ರಗಾರಿಕೆ ಬಳಸುತ್ತಿದ್ದು, ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾವಣೆ ಮಾಡದೆ ನೇರ ಮೈಕ್ರೋ ಕ್ಯಾಶ್‌ ಮೂಲಕ ಪಡೆಯುತ್ತಿದ್ದಾರೆ. ಇದರಿಂದ ಈ ಪ್ರಕರಣವನ್ನು ಭೇದಿಸುವುದು ಪೊಲೀಸರಿಗೆ ಸವಾಲಾಗಿದೆ.

ಒಟಿಪಿ, ಸಿವಿವಿ ಬೇಕಿಲ್ಲ!

ಬ್ಯಾಂಕ್‌ ಖಾತೆಯಿಂದ ಹಣ ಡ್ರಾ ಮಾಡಲು ಒಟಿಪಿ, ಸಿವಿವಿ, ಬ್ಯಾಂಕ್‌ ವಿವರ ಬೇಕಾಗಿಲ್ಲ. ಖಾತೆದಾರರು ಕೇವಲ ಆಧಾರ್‌ ಬಯೋಮೆಟ್ರಿಕ್‌ ಬಳಸಿದರೆ ವಂಚಕರು ಬ್ಯಾಂಕ್‌ ಖಾತೆಯಿಂದ ಮೈಕ್ರೋ ಎಟಿಎಂ ಮೂಲಕ ಹಣ ಡ್ರಾ ಮಾಡಿಕೊಂಡು ವಂಚನೆ ಎಸಗುತ್ತಿರುವುದು ಬಯಲಾಗಿದೆ. ನೋಂದಣಿ ಕಚೇರಿಗೆ ಒಂದು ಬಾರಿ ಬಯೋಮೆಟ್ರಿಕ್‌ ಕೊಟ್ಟರೆ ಅದನ್ನೇ ಸೈಬರ್‌ ವಂಚಕರು ಮೈಕ್ರೋ ಎಟಿಎಂ ಮಾಲೀಕರಿಗೆ ನೀಡಿ ಹಣ ವರ್ಗಾಯಿಸಿಕೊಳ್ಳುತ್ತಿದ್ದಾರೆ. ಮೈಕ್ರೋ ಎಟಿಎಂ ಮಾಲೀಕನಿಂದ ಸೈಬರ್‌ ವಂಚಕರು ಕ್ಯಾಶ್‌ ಮೂಲಕ ಹಣ ಪಡೆಯುತ್ತಿದ್ದಾರೆ. ಇಂತಹ ವಂಚನೆಗಳು ದೇಶಾದ್ಯಂತ ನಡೆಯುತ್ತಿದೆ.

ತನಿಖೆಗೆ ಪೊಲೀಸರ ನಿರ್ಲಕ್ಷ್ಯ!?

ಸೆ.16ರಂದು ಸೈಬರ್‌ ವಂಚನಾ ಪ್ರಕರಣ ಬಯಲಾಗುತ್ತಿದ್ದಂತೆ ಸೆನ್‌ ಠಾಣಾ ಪೊಲೀಸರು ರಿಜಿಸ್ಪ್ರೇಶನ್‌ ಕಚೇರಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆದರೆ ಆ ಬಳಿಕ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲಎನ್ನುತ್ತಾರೆ ಹಣ ವಂಚನೆಗೊಳಗಾದ ಸಂತ್ರಸ್ತರು.ನಗರದ ನೋಂದಣಿ ಕಚೇರಿಯಲ್ಲಿ ಬಯೋಮೆಟ್ರಿಕ್‌ ನೀಡಿದ ಹಲವರ ಖಾತೆಯಿಂದ ಹಣ ಡ್ರಾ ಮಾಡಿ ವಂಚಿಸಿದ ಬಗ್ಗೆ ಮಾಹಿತಿ ಲಭಿಸಿದ್ದು, ಈ ಹಣವನ್ನು ವಂಚಕರು ಮೈಕ್ರೋ ಎಟಿಎಂ ಬಳಸಿ ಡ್ರಾ ಮಾಡಿರುವ ಸಾಧ್ಯತೆ ಇದೆ. ಪೊಲೀಸ್ ಇಲಾಖೆ ಈ ಬಗ್ಗೆ ವಿಶೇಷ ಗಮನ ಹರಿಸಬೇಕಿದೆ.

Categories
ಬೆಂಗಳೂರು ರಾಜ್ಯ

ಸಾರ್ವಜನಿಕ ಆಸ್ತಿ ರಕ್ಷಣೆ ಸರ್ಕಾರದ ಹೊಣೆ

ಸಾರ್ವಜನಿಕ ಆಸ್ತಿ ರಕ್ಷಣೆ ಸರ್ಕಾರದ ಹೊಣೆ
– ಹೈಕೋರ್ಟ್ ಮಹತ್ವದ ತೀರ್ಪು: ಏನಿದು ತೀರ್ಪು?
– ಇನ್ಮುಂದೆ ಪ್ರತಿಭಟನೆ ವೇಳೆ ಸಾರ್ವಜನಿಕ ಅಸ್ತಿ ಹಾಳು ಮಾಡಿದ್ರೆ ಕಾನೂನು ಕ್ರಮ?

NAMMUR EXPRESS NEWS
ಬೆಂಗಳೂರು: ಬೆಂಗಳೂರು ನಗರ ಬಂದ್ ವೇಳೆ ಅಗತ್ಯ ಸುರಕ್ಷತಾ ಕ್ರಮ ಸರ್ಕಾರದ ಕರ್ತವ್ಯ ಎಂದು ಹೈಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ. ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಕಂಚನಹಳ್ಳಿ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನರೇಂದರ್ ಮತ್ತು ವಿಜಯ್ ಕುಮಾರ್ ಎ ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡ ಮತ್ತು ರೈತರ ಪರ ಸಂಘಟನೆಗಳು ಹಮ್ಮಿಕೊಂಡಿರುವ ಬೆಂಗಳೂರು ಬಂದ್‌ನಿಂದಾಗಿ ಸಾರ್ವಜನಿಕರ ಜೀವನ ಅಸ್ತವ್ಯಸ್ತವಾಗದಂತೆ, ಸರ್ಕಾರಿ ಹಾಗೂ ಖಾಸಗಿ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳುವುದು ಸರ್ಕಾರದ ಕರ್ತವ್ಯ ಎಂದು ಹೈಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ. ವಿ

ಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಅಡ್ವಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಹಾಜರಾಗಿ, ನಗರದಲ್ಲಿ ಪ್ರತಿಭಟನಾ ಮೆರವಣಿಗೆ, ರ್‍ಯಾಲಿ ನಡೆಸಲು ಅನುಮತಿ ನೀಡಿಲ್ಲ. ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಶಾಂತಿಯುತ ಪ್ರತಿಭಟನೆಗೆ ಅವಕಾಶವಿದೆ. ಸಾರ್ವಜನಿಕ ಸಂಚಾರಕ್ಕೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು. ಅರ್ಜಿದಾರರ ಪರ ವಕೀಲ ಜಿ ಆರ್ ಮೋಹನ್, ಬಂದ್‌ಗೆ ಕರೆ ನೀಡಿರುವ ಸಂಘಟನೆಗಳು ರಸ್ತೆ ಮೂಲಕ ಮೆರವಣಿಗೆ ನಡೆಸಲಿವೆ. ಇದರಿಂದ ಜನಸಾಮಾನ್ಯರ ಪ್ರಯಾಣಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ. ಈ ಹಿಂದೆ ಬಂದ್ ನಡೆದಾಗ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಜನರ ಜೀವನ ಅಸ್ತವ್ಯಸ್ಥವಾಗಿತ್ತು. ಅಹಿತಕರ ಘಟನೆಗಳು ನಡೆದು ಸರ್ಕಾರಿ ಮತ್ತು ಖಾಸಗಿ ಆಸ್ತಿಪಾಸ್ತಿಗೆ ಹಾನಿಯಾಗಿತ್ತು.

ಬಂದ್ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ 2020ರ ಫೆ.20ರಂದು ಆದೇಶಿಸಿತ್ತು. ಸರ್ಕಾರಿ-ಖಾಸಗಿ ಆಸ್ತಿಗೆ ಉಂಟಾದ ನಷ್ಟ ಅಂದಾಜಿಸಿ, ವಸೂಲಿ ಮಾಡಲು ಕೇಮು ಕಮೀಷನರ್ ನೇಮಕಕ್ಕೂ ಆದೇಶಿಸಿತ್ತು ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಬಂದ್ ಸಂದರ್ಭದಲ್ಲಿ ಸಾರ್ವಜನಿಕರ ಜೀವನ ಅಸ್ತವ್ಯಸ್ತವಾಗದಂತೆ, ಸರ್ಕಾರಿ ಹಾಗೂ ಖಾಸಗಿ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಅದ್ದೂರಿ ದಸರಾಗೆ ನಿರ್ಧಾರ

ತೀರ್ಥಹಳ್ಳಿ ಅದ್ದೂರಿ ದಸರಾಗೆ ನಿರ್ಧಾರ
– ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಎರಡನೇ ಸಭೆ
– ತೀರ್ಥಹಳ್ಳಿಯ ಎಲ್ಲಾ ಕ್ಷೇತ್ರದ ಪ್ರಮುಖರು ಹಾಜರ್
– ರಾಮೇಶ್ವರನ ಕಾರ್ಯದಲ್ಲಿ ರಾಜಕೀಯ ಮಾಡಲ್ಲ..!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ದಸರಾ ಆಚರಣೆಯನ್ನು ಅದ್ದೂರಿಯಾಗಿ ಮಾಡಲು ಎರಡನೇ ಸಭೆಯಲ್ಲಿ ಒಮ್ಮತದ ತೀರ್ಮಾನ ಮಾಡಲಾಯಿತು. ದಸರಾ ಪೂರ್ವಭಾವಿ ಸಭೆಯಲ್ಲಿ ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ದಸರಾ ವಿಚಾರದಲ್ಲಿ ನಾನು ರಾಜಕೀಯ ಮಾಡಲ್ಲ. ಎಲ್ಲರೂ ಒಟ್ಟಾಗಿ ಸೇರಿ ಸರ್ವ ಪಕ್ಷಗಳು ಸಾರ್ವಜನಿಕರು ಈ ಬಾರಿ ದಸರಾ ಉತ್ಸವವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಾಡೋಣ ಎಂದರು. ಹಿಂದಿನ ಸಮಿತಿ ಸಂಚಾಲಕರಾಗಿ ಸಂದೇಶ್ ಜವಳಿಯನ್ನೇ ಸಂಚಾಲಕರಾಗಿ ಮುಂದುವರಿಸಿಕೊಂಡು ಹೋಗಲಿದ್ದಾರೆ. ಈ ಬಾರಿಯಲ್ಲಿ ಆಸಕ್ತಿಯುಳ್ಳ ಹೊಸದಾಗಿ ಸೇರಿಕೊಳ್ಳುವ ಯುವಕರಿಗೆ ಯಾವ ಯಾವ ವಿಭಾಗದಲ್ಲಿ ಕೆಲಸ ಮಾಡಲು ಇಚ್ಚಿಸುತ್ತೀರೋ ಸಮಿತಿಯು ತಮಗೆ ಮುಕ್ತವಾದ ಅವಕಾಶವಿರುತ್ತದೆ.

ಇಲ್ಲಿ ಯಾರಿಗೂ ರಾಜಕೀಯ ಮಾಡುವ ಅವಕಾಶ ಇಲ್ಲ ದ್ವೇಷವು ಇಲ್ಲ. ನಾವೆಲ್ಲ ರಾಮೇಶ್ವರನ ಮಕ್ಕಳು, ಎಲ್ಲರೂ ಒಂದಾಗಿ ಈ ಬಾರಿಯೂ ಅತ್ಯಂತ ಯಶಸ್ವಿಯಾಗಿ ಗೊಳಿಸೋಣ ಎಂದು ಶಾಸಕ ಅರಗ ಜ್ಞಾನೇಂದ್ರ ಹೇಳಿದರು. ಸಭೆಯಲ್ಲಿ ಬಂದವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಗೀತಾ ರಮೇಶ್, ತಾಲೂಕು ದಂಡಾಧಿಕಾರಿ ಲಿಂಗರಾಜು, ಸಿರಿಬೈಲ್ ಧರ್ಮೇಶ್, ಬಾಳೆಹಳ್ಳಿ ಪ್ರಭಾಕರ್, ಸೊಪ್ಪುಗುಡ್ಡೆ ರಾಘವೇಂದ್ರ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಕುರಿಯಾಕೋಸ್ ಸೇರಿದಂತೆ ಸಭೆಯಲ್ಲಿ ಇದ್ದರು. ತೀರ್ಥಹಳ್ಳಿಯ ಸಂಘಟನೆಗಳ ಪ್ರಮುಖರು, ರಾಜಕೀಯ, ಸಾಮಾಜಿಕ ಕ್ಷೇತ್ರದ ಪ್ರಮುಖರು ಇದ್ದರು.

Categories
ಶಿವಮೊಗ್ಗ

ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಜ್ಜು!

ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಜ್ಜು!
– ಭದ್ರಾವತಿಯಲ್ಲಿ ಭಾರೀ ಸಿದ್ಧತೆ: ಪೊಲೀಸ್ ಬಂದೋಬಸ್ತ್
– ಮಧು ಬಂಗಾರಪ್ಪ, ಮಂಜುನಾಥ ಗೌಡ ಪೂಜೆ

NAMMUR EXPRESS NEWS
ಭದ್ರಾವತಿ : ಪ್ರತಿಷ್ಠಿತ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ವಿಸರ್ಜನಾ ಪೂರ್ವ ಮೆರವಣಿಗೆ ಹಿನ್ನೆಲೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಭದ್ರಾವತಿಯ ಹೊಸಮನೆ ಬಡಾವಣೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಗಣಪತಿ ಮೆರೆವಣಿಗೆ ಸಾಗುವ ಹಾದಿ ಉದ್ದಕ್ಕು ಕೇಸರಿಮಯವಾಗಿದೆ. ಕೇಸರಿ ಬಂಟಿಂಗ್ಸ್‌ ಕಟ್ಟಿ ಹಿಂದು ಸಂಘಟನೆಗಳ ಕಾರ್ಯಕರ್ತರು ಅಲಂಕಾರ ಮಾಡಿದ್ದಾರೆ. ಪ್ರಮುಖ ಸರ್ಕಲ್‌ಗಳಲ್ಲಿಯು ಕೇಸರಿ ಬಂಟಿಂಗ್ಸ್‌ ರಾರಾಜಿಸುತ್ತಿವೆ. ಇನ್ನು, ಪ್ರತಿ ವರ್ಷದಂತೆ ಈ ಬಾರಿಯು ಅನ್ನಸಂತರ್ಪಣೆ, ಮೆರವಣಿಗೆಯಲ್ಲಿ ಸಾಗುವವರಿಗೆ ತಂಪು ಪಾನೀಯ, ಸಿಹಿ ತಿಂಡಿ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಹಿಂದೂ ಮಹಾಸಭ ಗಣಪತಿ ಮೆರವಣಿಗೆ ಹಿನ್ನೆಲೆ ಪೊಲೀಸ್‌ ಇಲಾಖೆ ವತಿಯಿಂದ ಸೋಮವಾರ ಪಥ ಸಂಚಲನ ನಡೆಸಲಾಯಿತು. ಕನಕ ಮಂಟಪದಿಂದ, ಕಂಚಿ ಬಾಗಿಲು ಮುಖಾಂತರ, ಎನ್.ಎಸ್.ಟಿ ರಸ್ತೆ, ಜಾಮಿಯಾ ಮಸೀದಿ, ಖಾಜಿ ಮೊಹಲ್ಲಾ, ಓಟಿ ರಸ್ತೆ, ಮಾಧವಾಚಾರ್ ವೃತ್ತ, ಚೌಕ್ ಮಸೀದಿ, ಗಾಂಧಿ ವೃತ್ತ, ಒಎಸ್ಎಂ ರಸ್ತೆ, ಹೊಸಮನೆ ಸಂತೆ ಮೈದಾನ, ಹೊಳೆಹೊನ್ನೂರು ವೃತ್ತ, ಅನ್ವರ್ ಕಾಲೋನಿ, ಲಕ್ಷ್ಮಿ ಸಾಮಿಲ್, ಜಟ್ ಪಟ್ ನಗರ, ಕಂಚಿ ಬಾಗಿಲು, ಪುನಾಃ ಕನಕ ಮಂಟಪದವರೆಗೆ ಮೆರವಣಿಗೆ ಸಾಗಿತು.

ಪೊಲೀಸ್‌ ಬಿಗಿ ಬಂದೋಬಸ್ತ್‌

ಮೆರವಣಿಗೆ ಸುಗಮವಾಗಿ ಸಾಗಲು ಭದ್ರಾವತಿಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಬಂದೋಬಸ್ತ್ ಕರ್ತವ್ಯಕ್ಕೆ 10 ಡಿವೈಎಸ್‌ಪಿಗಳು, 20 ಇನ್ಸ್‌ಪೆಕ್ಟರ್‌ಗಳು, 60 ಸಬ್‌ ಇನ್ಸ್‌ಪೆಕ್ಟರ್‌ಗಳು, 100 ಸಹಾಯಕ ಪೊಲೀಸ್ ಉಪನಿರೀಕ್ಷಕರು, 600 ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಮತ್ತು ಪೊಲೀಸ್ ಕಾನ್ಸ್ ಟೆಬಲ್‌ಗಳು, 500 ಗೃಹರಕ್ಷಕ ದಳ ಸಿಬ್ಬಂದಿ, 6 ಡಿಎಆರ್ ತುಕಡಿ, 8 ಕೆಎಸ್ಆರ್.ಪಿ ತುಕಡಿ, 1 ಕ್ಯೂಆರ್.ಟಿ ತುಕಡಿ ಮತ್ತು 1 ಆರ್.ಎ.ಎಫ್ ಕಂಪನಿಯನ್ನು ನಿಯೋಜಿಸಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ಬಂದೋಬಸ್ತ್‌ಗೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಬ್ರೀಫಿಂಗ್‌ ಮಾಡಿದ್ದಾರೆ.

ಮಧು ಬಂಗಾರಪ್ಪ, ಮಂಜುನಾಥ ಗೌಡ ಪೂಜೆ

ಭದ್ರಾವತಿ ಹಿಂದು ಮಹಾ ಸಭಾ ವತಿಯಿಂದ ಪ್ರತಿಷ್ಟಾಪನೆ ಮಾಡಿರುವ ಗಣೇಶ ಮೂರ್ತಿಗೆ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಹಾಗೂ ಶಿವಮೊಗ್ಗ ಕ್ಷೇತ್ರದ ಶಾಸಕ ಚನ್ನಬಸಪ್ಪ, ಸಹಕಾರಿ ನಾಯಕರಾದ ಡಾ.ಆರ್.ಎಂ.ಮಂಜುನಾಥ ಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಇತರರು ಪೂಜೆ ಸಲ್ಲಿಸಿದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಹೆದ್ದಾರಿಯಲ್ಲಿ ಹೊತ್ತಿ ಉರಿಯಿತು ಕಾರು!

ತೀರ್ಥಹಳ್ಳಿ ಹೆದ್ದಾರಿಯಲ್ಲಿ ಹೊತ್ತಿ ಉರಿಯಿತು ಕಾರು!
– ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯ ಮಂಡಗದ್ದೆ ಬಳಿ ಘಟನೆ
– ಬೇರೆ ವಾಹನದಲ್ಲಿ ಹೋಗುತ್ತಿದ್ದವರಿಂದ ರಕ್ಷಣೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕಾರೊಂದು ನಡು ರಸ್ತೆಯಲ್ಲಿ ಹೊತ್ತಿ ಉರಿದ ಘಟನೆ ಸೋಮವಾರ ರಾತ್ರಿ ನಡೆದಿದ್ದು ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರಾಗಿದ್ದಾರೆ. ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆಯ 15 ನೇ ಮೈಲಿಕಲ್ಲಿನ ಸಮೀಪ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಕಾರು ಸಂಪೂರ್ಣ ಸುಟ್ಟುಹೋಗಿದೆ.
ರಾತ್ರಿ 11.30 ರ ಸುಮಾರಿಗೆ ಘಟನೆ ನಡೆದಿದ್ದು, ಸ್ಥಳೀಯರು ಹಾಗೂ ಅದೇ ಮಾರ್ಗವಾಗಿ ಹೋಗುತ್ತಿದ್ದ ವಾಹನ ಸವಾರು ಕಾರಿಗೆ ಬೆಂಕಿ ಬಿದ್ದು ಉರಿಯುತ್ತಿರುವುದನ್ನ ಗಮನಿಸಿದ್ದಾರೆ.

ಇನ್ನೂ ವಿಷಯ ಗೊತ್ತಾಗುತ್ತಲೇ ಅಗ್ನಿಶಾಮಕ ಸಿಬ್ಬಂದಿ ಶಿವಮೊಗ್ಗದಿಂದ ಸ್ಥಳಕ್ಕೆ ತೆರಳಿದ್ದು ಬೆಂಕಿ ನಂದಿಸಿದ್ದಾರೆ. ಆದರೆ ಕಾರು ಯಾರದ್ದು, ಅದರಲ್ಲಿ ಯಾರಿದ್ದರು ಎಂಬಿತ್ಯಾದಿ ಮಾಹಿತಿ ಇನ್ನೂ ಕೂಡ ಸ್ಪಷ್ಟವಾಗಿಲ್ಲ. ಕಾರಿನ ನೋಂದಣಿ ಸಂಖ್ಯೆ ಕೂಡ ಕಾಣದಿರುವಷ್ಟರ ಮಟ್ಟಿಗೆ ಕಾರು ಸುಟ್ಟು ಹೋಗಿದೆ.

Categories
ತೀರ್ಥಹಳ್ಳಿ

ಕಾಡಿನಲ್ಲಿ ಕದ್ದು ಕುಳಿತ ಕಳ್ಳ..!?

ಕಾಡಿನಲ್ಲಿ ಕದ್ದು ಕುಳಿತ ಕಳ್ಳ..!?
– ಮಲೆನಾಡಿಗೆ ಬಂದ ಕಳ್ಳ ಹುಷಾರು ಹುಷಾರು
– ಒಂಟಿ ಮನೆಯೇ ಈ ಕಳ್ಳನ ಟಾರ್ಗೆಟ್
– ತೀರ್ಥಹಳ್ಳಿಯ ಹಿಲಿಕೆರೆ ಬಳಿ ರಾತ್ರಿ ಕಳ್ಳ ನಾಪತ್ತೆ!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಸಮೀಪದ ಹಿಲಿಕೆರೆ ಬಳಿ ಕಳ್ಳ ಸಂಚಾರ ಮಾಡುತ್ತಿರುವ ಸುಳಿವು ಕಂಡು ಬಂದಿದೆ .
ಶನಿವಾರ ರಾತ್ರಿ ಗಣಪತಿ ಹಬ್ಬದ ಗಡಿಬಿಡಿಯಲಿಂದ ವೇಳೆ ಮನೆ ಬೀಗ ಹಾಕಿ ಗಣಪತಿ ಹಬ್ಬದ ಸಂಭ್ರಮದಲ್ಲಿದ್ದರು. ಇದನ್ನೇ ಹೊಂಚು ಹಾಕಿದ ಕಳ್ಳ ಈಶ್ವರ್ ಹಿಲಿಕೆರೆ ಎಂಬವರ ಮನೆಗೆ ನುಗ್ಗಿ ಕಳ್ಳತನ ಮಾಡಲು ಯತ್ನಿಸಿದ್ದಾನೆ. ಆ ವೇಳೆ ಈಶ್ವರ್ ಕಳ್ಳನನ್ನ ತಡೆಯಲು ಯತ್ನಿಸಿದ್ದಾರೆ. ಈಶ್ವರ್ ಅವರಿಗೆ ಹೊಡೆದು ಕಳ್ಳ ಓಡಿ ಹೋಗಿದ್ದಾನೆ. ನಂತರ ಸೋಮವಾರ ಸಂಜೆಯ ಸಮಯದಲ್ಲಿ ಕಳ್ಳನನ್ನ ಜನ ನೋಡಿ ವಿಚಾರಿಸುವ ವೇಳೆ ಕಳ್ಳ ಓಡಿ ಹೋಗಿದ್ದಾನೆ.

ಊರವರೆಲ್ಲ ಒಂದಾಗಿ ಕಳ್ಳನನ್ನು ಹುಡುಕುವ ಯತ್ನ ಮಾಡಿದ್ದಾರೆ. ಕಳ್ಳನ ಸುಳಿವು ಇನ್ನು ಕಂಡುಬಂದಿಲ್ಲ. ಆತ ಕಾಡಿನಲ್ಲಿ ಕದ್ದು ಕುಳಿತಿದ್ದಾನೆ ಎನ್ನಲಾಗಿದೆ. ಇತ್ತೀಚೆಗಷ್ಟೇ ತಳುವೆಯಲ್ಲಿ ಕಳ್ಳತನ ಮಾಡಿದ ಪ್ರಕರಣ ಕಂಡು ಬಂದಿದೆ. ದಿನೇ ದಿನೇ ಮಲೆನಾಡಿನಲ್ಲಿ ಕಳ್ಳರ ಕಾಟ ಹೆಚ್ಚಾಗುತ್ತಿದೆ.

Categories
ಬೆಂಗಳೂರು

ನಾಳೆ ಬೆಂಗಳೂರು ಬಂದ್

ನಾಳೆ ಬೆಂಗಳೂರು ಬಂದ್
– ಏನಿರುತ್ತೆ ?…-ಏನಿರಲ್ಲ ?
ಬಂದ್ ಗೆ ಯಾರ್ ಯಾರ್ ಬೆಂಬಲವಿದೆ?

NAMMUR EXPRESS NEWS
ಬೆಂಗಳೂರು: ಕಾವೇರಿ ವಿಚಾರದಲ್ಲಿ ನಡೆಯುತ್ತಿರುವ ಹೋರಾಟ ಗೊಂದಲದಿಂದ ಕೂಡಿದೆ. ಹೋರಾಟಗಾರರ ಪ್ರತಿಷ್ಠೆಯ ಮೇಲಾಟದಲ್ಲಿ ಕಾವೇರಿ ನಲುಗಿದ್ದಾಳೆ. ಹಲವು ಗೊಂದಲಗಳ ನಡುವೆಯೂ ನಾಳೆ (ಮಂಗಳವಾರ) ಬೆಂಗಳೂರು ಬಂದ್‍ಗೆ ಜಲಸಂರಕ್ಷಣಾ ಸಮಿತಿ ಕರೆ ನೀಡಿದೆ. ಸಾಕಷ್ಟು ಒತ್ತಡಗಳು ಎದುರಾದ್ರೂ, ಹತ್ತು ಹಲವು ಸಂಘಟನೆಗಳು ಬೆಂಬಲ ನೀಡಲ್ಲ ಅಂದ್ರೂ ಕೂಡ ನಾಳೆಯ ಬಂದ್‍ನಿಂದ ಹಿಂದೆ ಸರಿಯಲು ಒಪ್ಪಿಲ್ಲ. ಹೀಗಾಗಿ ನಾಳೆ ಬೆಂಗಳೂರು ಬಂದ್ ನಡೆಯೋದು ಖಚಿತವಾಗಿದೆ. ಈ ಮಧ್ಯೆ ಸೆಪ್ಟೆಂಬರ್ 29ಕ್ಕೆ ಕರ್ನಾಟಕ ಬಂದ್‍ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ನಾಳೆಯ ಬಂದ್ ಹಿಂಪಡೆಯದ ಸಂಘಟನೆಗಳ ವಿರುದ್ಧ ಕನ್ನಡ ಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ.

ನಾಳೆಯ ಬಂದ್‍ಗೆ ಬೆಂಬಲ ನೀಡಲ್ಲ ಎಂದು ಪ್ರಕಟಿಸಿವೆ. ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮಧ್ಯರಾತ್ರಿ 12 ಗಂಟೆಯಿಂದ ನಾಳೆ ರಾತ್ರಿಯವರೆಗೂ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ. ಅಂದ ಹಾಗೇ, ನಾಳೆಯೇ ಕೆಆರ್ ಪೇಟೆ, ಮಳವಳ್ಳಿ, ಟೀ.ನರಸೀಪುರ ಬಂದ್‍ಗೂ ಕರೆ ನೀಡಲಾಗಿದೆ.
ನಾಳೆಯ ಬೆಂಗಳೂರು ಬಂದ್ ರಾಜಕೀಯ ಸ್ವರೂಪ ಪಡೆದಿದೆ. ಕಾರಣ ಜಲ ಸಂರಕ್ಷಣಾ ಸಮಿತಿ ಕರೆ ನೀಡಿರುವ ಬಂದ್‍ಗೆ ರಾಜ್ಯ ರಾಜಕೀಯದ ಹೊಸ ದೋಸ್ತಿಗಳು ಬೆಂಬಲ ಘೋಷಿಸಿವೆ. ಕಾವೇರಿ ಹೋರಾಟದ ಕಣಕ್ಕೆ ಬಿಜೆಪಿ, ಜೆಡಿಎಸ್ ಧುಮುಕಿದ್ದು, ಬೆಂಗಳೂರು ಬಂದ್‍ಗೆ ಬೆಂಬಲ ಘೋಷಿಸಿದೆ. ಬಿಜೆಪಿಯಂತೂ ನಾಳೆಯ ಬಂದ್ ಅನ್ನು ಗಂಭೀರವಾಗಿ ಪರಿಗಣಿಸಿದೆ. ವಿಧಾನಸೌಧದ ಗಾಂಧಿಪ್ರತಿಮೆ ಬಳಿ ಬಿಜೆಪಿಗರು ಧರಣಿ ನಡೆಸಲಿದ್ದಾರೆ. ಬಿಎಸ್‍ವೈ ಜೊತೆ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಬೀದಿಗೆ ಇಳಿಯಲಿದ್ದಾರೆ. ಹೀಗಾಗಿಯೇ ನಾಳೆಯ ಬಂದ್ ರಾಜಕೀಯಪ್ರೇರಿತ ಎಂದು ಕನ್ನಡ ಪರ ಸಂಘಟನೆಗಳು ವ್ಯಾಖ್ಯಾನಿಸಿವೆ. ಈಗ ಬಂದ್ ಬೆಂಬಲಿಸ್ತಿರುವ ವಿಪಕ್ಷಗಳು ಹಿಂದೆ ಅಧಿಕಾರದಲ್ಲಿದ್ದಾಗ ಏನು ಮಾಡಿದ್ವು ಎಂದು ಪ್ರಶ್ನಿಸಿವೆ. ಈ ಮಧ್ಯೆ, ಆಡಳಿತ ಪಕ್ಷ ಕಾಂಗ್ರೆಸ್ ಕೂಡ, ಬಂದ್‍ಗೆ ನಮ್ಮ ವಿರೋಧವಿಲ್ಲ. ಆದರೆ ಬಂದ್ ಶಾಂತಿಯುತವಾಗಿರಲಿ ಎಂದು ಕೋರಿದೆ.

ನಾಳೆ ಏನಿರತ್ತೆ..?:

ಹೋಟೆಲ್, ಮದ್ಯದಂಗಡಿ, ಓಲಾ, ಊಬರ್, ಆಟೋ – 50-50, ನಮ್ಮ ಮೆಟ್ರೋ, ರೈಲು, ಸರ್ಕಾರಿ ಕಚೇರಿಗಳು, ಬ್ಯಾಂಕ್, ಪೋಸ್ಟ್ ಆಫೀಸ್, ಆಸ್ಪತ್ರೆ, ಮೆಡಿಕಲ್ ಸ್ಟೋರ್, ದಿನಸಿ, ಹಾಲು, ಹಣ್ಣು, ತರಕಾರಿ ಅಂಗಡಿ.

ಏನಿರಲ್ಲ?:

ಬಿಎಂಟಿಸಿ, ಕೆಎಸ್‍ಆರ್ ಟಿಸಿ, ಖಾಸಗಿ ಬಸ್, ಆಟೋ – 50-50 , ಗೂಡ್ಸ್ ವಾಹನ, ಶಾಲೆ-ಕಾಲೇಜು, ಕಾರ್ಖಾನೆಗಳು, ಗಾರ್ಮೆಂಟ್ಸ್, ಬಿಬಿಎಂಪಿ, ಬಿಡಿಎ ಕಚೇರಿ, ಎಪಿಎಂಸಿ ಮಾರ್ಕೆಟ್, ಕೆಆರ್ ಮಾರ್ಕೆಟ್, ಜ್ಯುವೆಲ್ಲರಿ ಶಾಪ್, ಚಿಕ್ಕಪೇಟೆ ಅಂಗಡಿಗಳು, ಥೇಟರ್, ಚಿತ್ರರಂಗದ ಚಟುವಟಿಕೆ, ಕಿರುತೆರೆ ಶೂಟಿಂಗ್, ಬೆಂಗಳೂರು ವಿವಿಗೆ ರಜೆ, ಪರೀಕ್ಷೆ ಮುಂದೂಡಿಕೆ.

Categories
ತೀರ್ಥಹಳ್ಳಿ

ಆವಿಷ್ಕಾರ್ ಸೊಸೈಟಿಯ ಸ್ವ ಉದ್ಯೋಗದ ಆವಿಷ್ಕಾರ!

ಆವಿಷ್ಕಾರ್ ಸೊಸೈಟಿಯ ಸ್ವ ಉದ್ಯೋಗದ ಆವಿಷ್ಕಾರ!
– ಆವಿಷ್ಕಾರ ಮಲ್ಟಿಪರ್ಪಸ್ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಸಭೆ
– ಸೊಸೈಟಿಯ ಅಭಿವೃದ್ಧಿಗೆ ಸೇವೆ ಸಲ್ಲಿಸಿದವರಿಗೆ ಸನ್ಮಾನ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಆವಿಷ್ಕಾರ ಮಲ್ಟಿಪರ್ಪಸ್ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಸಭೆ ಇತ್ತೀಚೆಗೆ ನಡೆಯಿತು. ತೀರ್ಥಹಳ್ಳಿಯ ಗೋಪಾಲಗೌಡ ರಂಗ ಮಂದಿರದಲ್ಲಿ ಸಹಕಾರಿ ಅಧ್ಯಕ್ಷರಾದ ಅನಿಲ್ ಕುಮಾರ್ ಇವರ ನೇತೃತ್ವ ದಲ್ಲಿ ಯಶಸ್ವಿಯಾಗಿ ನಡೆದಿದ್ದು ಸಭೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಜೊತೆಗೆ ಸಂಸ್ಥೆಗೆ ಕೊಡುಗೆ ನೀಡಿದವರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ಸಿರಿ ಮಿಲ್ಲೆಟ್ಸ್ ನ ಘಟಕವನ್ನು ಶುರು ಮಾಡುವ ಮೂಲಕ ಗಮನ ಸೆಳೆದಿರುವ ಆವಿಷ್ಕಾರ ಮಲ್ಟಿ ಪರ್ಪಸ್ ಕೋ ಆಪರೇಟಿವ್ ಸೊಸೈಟಿ ತೀರ್ಥಹಳ್ಳಿಯ ಸಹಕಾರಿ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟಿದೆ. ಅತ್ಯುತ್ತಮವಾದ ಸೇವೆ ಜೊತೆಗೆ ಸಾಮಾಜಿಕ ಕಳಕಳಿ ಜೊತೆಗೆ ಸ್ವ ಉದ್ಯೋಗಕ್ಕೆ ಪ್ರೇರಣೆ ನೀಡುವ ಅನೇಕ ಯೋಜನೆಗಳನ್ನು ಆವಿಷ್ಕಾರ ಮಲ್ಟಿ ಪರ್ಪಸ್ ಕೋ ಆಪರೇಟಿವ್ ಸೊಸೈಟಿ ಹಮ್ಮಿಕೊಂಡಿದೆ. ಈ ಮೂಲಕ ಸಹಕಾರಿ ಕ್ಷೇತ್ರದಲ್ಲೆ ತಮ್ಮದೇ ಆದಂತಹ ಹೊಸ ಮೈಲಿಗಲ್ಲನ್ನು ನೀಡುತ್ತಿದೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವಂತಹ ಆವಿಷ್ಕಾ ಸೊಸೈಟಿಯ ಸಾಮಾನ್ಯ ಸಭೆ ಇತ್ತೀಚೆಗೆ ನಡೆದಿದ್ದು ಸರ್ವರಿಗೂ ಸೊಸೈಟಿಯ ಪ್ರಮುಖರು ಧನ್ಯವಾದ ಅರ್ಪಿಸಿದ್ದಾರೆ.

ಕಾರ್ಯಕ್ರಮದ ನಿರೂಪಣೆಯನ್ನು ಸಹಕಾರಿ ನಿರ್ದೇಶಕರಾದ ನಯನ ಜಯಪ್ರಕಾಶ್ ಶೆಟ್ಟಿರವರು ನೆರವೇರಿಸಿಕೊಟ್ಟರು . ವೇದಿಕೆಯಲ್ಲಿ ಉಪಾಧ್ಯಕ್ಷರಾದ ಎಸ್.ಆರ್.ವೆಂಕಟೇಶ್,ಮುಖ್ಯಕಾರ್ಯನಿರ್ವಾಹಕರಾದ ಕುಮಾರ್ ,ನಿರ್ದೇಶಕರುಗಳಾದ ಜ್ಯೋತಿ ದಿಲೀಫ್ , ರವಿ ,ಬಸವರಾಜ್ , ಸೋಮಶೇಖರ್ ,ಶ್ರೀನಿವಾಸ್ ಕೆ. ಟಿ , ನರಸಿಂಹ ಮೂರ್ತಿ , ಮಂಜುನಾಥ್ ಗುಪ್ತ ,ವೀರಭದ್ರಪ್ಪ ,ಲಿಂಗರಾಜ್ , ವೃತ್ತಿ ಪರ ನಿರ್ದೇಶಕರಾದ ವಿಠಲ್ ಕೆ. ಜಿ ರವರು ಉಪಸ್ಥಿತರಿದ್ದರು .
ಕಾರ್ಯಕ್ರಮದಲ್ಲಿ ಸಹಕಾರಿಯ ವೃತ್ತಿಪರ ನಿರ್ದೇಶಕರಾದ ವಿಠಲ್ ಕೆ. ಜಿ ರವರನ್ನು ಸನ್ಮಾನಿಸಲಾಯಿತು . ವೃತ್ತಿಯಲ್ಲಿ ವಕೀಲರಾದ ಇವರು ಈ ಹಿಂದೆ ಸಹಕಾರಿಯನ್ನು ಮರುಸ್ಥಾಪನೆ ಮಾಡಲು ಸಂಪೂರ್ಣ ಸಹಕಾರವನ್ನು ನೀಡಿದ್ದರು .
ಕಾರ್ಯಕ್ರಮದಲ್ಲಿ ಪಿಗ್ಮಿ ಸಂಗ್ರಾಹಕರಾದ ಜೋಹರ್ ಪಾಷಾ ರವರನ್ನು ಸನ್ಮಾನಿಸಲಾಯಿತು .ಇವರು ಚಿಕ್ಕಮಗಳೂರು ಶಾಖೆಯಲ್ಲಿ ಅತಿ ಹೆಚ್ಚು ಪಿಗ್ಮಿ ಸಂಗ್ರಹಣೆ ಮಾಡಿ ಸಹಕಾರಿಯ ಬೆಳವಣಿಗೆಗೆ ಕೈ ಜೋಡಿಸಿದ್ದರು.
ಕಾರ್ಯಕ್ರಮದಲ್ಲಿ ಸಹಕಾರಿಯ ಯೋಜನೆಯಲ್ಲಿ ಒಂದಾದ ಸಿರಿ ದಾನ್ಯ ಉತ್ಪನ್ನಗಳ ಸ್ಟಾಲ್ ಅನ್ನು ಹಾಕಲಾಗಿತ್ತು .ಆವಿಷ್ಕಾರ್ ಅಗರಬತ್ತಿ ಮತ್ತು ವಾಟರ್ ಫಿಲ್ಟರ್ ಸ್ಟಾಲ್ ನ್ನು ಹಾಕಲಾಗಿತ್ತು.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

– ಬಂಟ್ವಾಳ: ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್!
– ಕಾರ್ಕಳ : ಕಾರ್ಕಳದಲ್ಲಿ ಬ್ಯಾನರ್ ವಾ‌ರ್
– ಮಂಗಳೂರು : ಲಾರಿ-ಕಾರು-ಬೈಕ್ ನಡುವೆ ಸರಣಿ ಅಪಘಾತ; ಇಬ್ಬರಿಗೆ ಗಾಯ
– ಮಸೀದಿಯ ಕಾಂಪೌಂಡ್ ಒಳಗೆ ನುಗ್ಗಿ ಜೈಶ್ರೀರಾಮ್ ಘೋಷಣೆ ಕೂಗಿದರು: ದೂರು ದಾಖಲು

NAMMUR EXPRESS NEWS
ಬಂಟ್ವಾಳ: ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ಒಂಬತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಕೋರ್ಟ್ ಈತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಮಂಗಳೂರು ತಾಲೂಕಿನ ಸುರತ್ಕಲ್ ಕೃಷ್ಣಾಪುರ ಚೋಕ್ಯಬೆಟ್ಟು ನಿವಾಸಿ ಮಹಮ್ಮದ್ ಶಾಫಿ ಬಂಧಿತ ಆರೋಪಿ. ಈಗ 2017 ರಲ್ಲಿ ಬಂಟ್ವಾಳ ಗ್ರಾಮಾಂತರ ವ್ಯಾಪ್ತಿಯ ಕಳ್ಳತನ ಪ್ರಕರಣವೊಂದರ ಆರೋಪಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ಮಸೀದಿಯ ಕಾಂಪೌಂಡ್ ಒಳಗೆ ನುಗ್ಗಿ ಜೈಶ್ರೀರಾಮ್ ಘೋಷಣೆ ಕೂಗಿದರು: ದೂರು ದಾಖಲು

ಕಡಬ: ರಾತ್ರಿ ವೇಳೆ ಬೈಕ್ ನಲ್ಲಿ ಆಗಮಿಸಿದ ಇಬ್ಬರು ಮಸೀದಿಯ ಕಾಂಪೌಂಡ್ ಒಳಗೆ ನುಗ್ಗಿ ಜೈಶ್ರೀರಾಂ ಘೋಷಣೆ ಕೂಗಿರುವ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾನುವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಕಡಬ ಠಾಣಾ ವ್ಯಾಪ್ತಿಯ ಮರ್ಧಾಳ ಬದ್ರಿಯಾ ಜುಮಾ ಮಸೀದಿಯ ಕಾಂಪೌಂಡ್ ಒಳಗೆಬೈಕಿನಲ್ಲಿ ಬಂದ ಇಬ್ಬರು ಮಸೀದಿಯ ವರಾಂಡದಲ್ಲಿ ಬೈಕನ್ನು ಹಿಂತಿರುಗಿಸಿ ತೆರಳಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿವಿಧ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದು, ಎರಡು ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಕಾರ್ಕಳದಲ್ಲಿ ಬ್ಯಾನರ್ ಸಂಘರ್ಷ!

ಕಾರ್ಕಳ : ಕುಕ್ಕುಂದೂರು ಪಂಚಾಯತ್ ಮೈದಾನದಲ್ಲಿ ನಡೆದ ಕು. ಸೌಜನ್ಯ ಪರ ಪ್ರತಿಭಟನೆ ಕಾರ್ಯಕ್ರಮಕ್ಕೆ ವಿರುದ್ಧವಾಗಿ ಪುರಸಭಾ ವ್ಯಾಪ್ತಿಯಲ್ಲಿ ಅನುಮತಿ ರಹಿತ ಬ್ಯಾನರ್ ಅಳವಡಿಕೆ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ಆನೆಕೆರೆ ಉದ್ಯಾನವನ ಬದಿ, ದಾನಶಾಲೆ, ಆನೆಕೆರೆ ಶ್ರೀ ಕೃಷ್ಣ ಕ್ಷೇತ್ರದ ಬಳಿ ಪುರಸಭೆಯಿಂದ ಅನುಮತಿ ಪಡೆಯದೇ ಸೆ. 23ರ ರಾತ್ರಿ ಪ್ಲೆಕ್ಸ್‌ಗಳನ್ನು ಅಳವಡಿಸಿ ಸಾರ್ವಜನಿಕ ಸ್ಥಳ ವಿರೂಪಗೊಳಿಸಲಾಗಿದೆ ಎಂದು ಪುರಸಭಾ ಹಿರಿಯ ಆರೋಗ್ಯ ನಿರೀಕ್ಷಕಿ ಅವರು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಲಾರಿ-ಕಾರು-ಬೈಕ್ ನಡುವೆ ಸರಣಿ ಅಪಘಾತ!

ಮಂಗಳೂರು ನಗರದ ಬಿಕರ್ಣಕಟ್ಟೆಯಲ್ಲಿ ಸೋಮವಾರ ಬೆಳಗ್ಗೆ ಸರಣಿ ಅಪಘಾತ ಸಂಭವಿಸಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಲಾರಿ, ಎರಡು ಕಾರು, ಎರಡು ದ್ವಿಚಕ್ರ ವಾಹನಗಳು ಜಖಂಗೊಂಡಿವೆ.
ಲಾರಿ ನಿಯಂತ್ರಣ ಕಳೆದುಕೊಂಡು ಕಾರುಗಳಿಗೆ ಢಿಕ್ಕಿ ಹೊಡೆದಿದೆ. ಅದರ ನಡುವೆ ಬೈಕ್ ಗಳು ಸಿಲುಕಿ ಕೊಂಡಿದೆ ಎಂದು ವರದಿಯಾಗಿದೆ.