Categories
ಚಿಕ್ಕಮಗಳೂರು

ಕಿರಿಕ್ ಡಾಕ್ಟರ್ ಜೈಲುಪಾಲು!

ಕಿರಿಕ್ ಡಾಕ್ಟರ್ ಜೈಲುಪಾಲು!
– ಎನ್.ಆರ್.ಪುರ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಎಲ್ಲೋಸ್ ಲೈಂಗಿಕ ಕಿರುಕುಳ ಹಿನ್ನಲೆ
– ಷರತ್ತು ಬದ್ಧ ಜಾಮೀನು ರದ್ದು ಹಿನ್ನಲೆ ಜೈಲು ಪಾಲು

NAMMUR EXPRESS NEWS
ಎನ್.ಆರ್ ಪುರ: ಬಾಳೆಹೊನ್ನೂರಿನ ವೈದ್ಯರ ವಸತಿ ಗೃಹದಲ್ಲಿ ಡಿ’ದರ್ಜೆ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿ, ಲೈಂಗಿಕ ಆರೋಪ ಎದುರಿಸುತ್ತಿರುವ ಡಾ.ಎಲ್ಲೋಸ್’ಗೆ ನರಸಿಂಹರಾಜ ಪುರ ಜೆ.ಎಂ.ಎಫ್.ಸಿ ನ್ಯಾಯಾಲಯ ಆ.7ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಡಾ.ಎಲ್ಲೋಸ್ ವಿರುದ್ಧ ದೂರು ದಾಖಲಾಗಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆದೇ ದಿನ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಸೆ.25ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದ ಎಲ್ಲೋಸ್’ಗೆ ಕೋರ್ಟ್ ಪೊಲೀಸ್ ಕಸ್ಟಡಿ ಒಪ್ಪಿಸಿದೆ.ವಿಚಾರಣೆ ನಡೆಸಿದ ನ್ಯಾಯಾಧೀಶರು ವೈದ್ಯನಿಗೆ ನೀಡಿದ ಷರತ್ತು ಬದ್ಧ ಜಾಮೀನನ್ನ ರದ್ದುಗೊಳಿಸಿದ್ದಾರೆ. ನ್ಯಾಯಾಧೀಶರಾದ ದಾಸರಿಕ್ರಾಂತಿ ಕಿರಣ್ ಅವರಿಂದ ಆದೇಶವಾಗಿದೆ. ಸಂತ್ರಸ್ತ ಪರ ಸರ್ಕಾರಿ ಸಹಾಯಕ ಅಭಿಯೋಜಕಿ ಕು.ಶಾಂಭವಿ ವಾದ ಮಂಡಿಸಿದ್ದರು.

Categories
ತೀರ್ಥಹಳ್ಳಿ

ಕಿತ್ತನಗದ್ದೆ ಬಾಲಕೃಷ್ಣ ಹಾಗೂ ರಾಧೆಯರ ಸಂಗಮ

ಕಿತ್ತನಗದ್ದೆ ಬಾಲಕೃಷ್ಣ ಹಾಗೂ ರಾಧೆಯರ ಸಂಗಮ
– ಪ್ರಜ್ಞಾ ಭಾರತಿಯ ಬಾಲಗೋಕುಲದಲ್ಲಿ ಯಶಸ್ವಿಯಾದ ಸಂಭ್ರಮದ ಸಂಜೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಚಿಟ್ಟೆಬೈಲು ಪ್ರಜ್ಞ ಭಾರತಿ ಪ್ರೌಢಶಾಲೆ ಮತ್ತು ಕಿತ್ತನಗದ್ದೆ ಶ್ರೀ ಸಾಂಬ ಸದಾಶಿವ ಹಾಗೂ ಮಹಿಷಿ ಮರ್ದಿನಿ ದೇವಸ್ಥಾನ ಸಹಬಾಗಿತ್ವದಲ್ಲಿ ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ಕಿತ್ತನಗದ್ದೆ ಬಾಲಕೃಷ್ಣ ಹಾಗೂ ರಾಧೆಯರ ಸಂಗಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಕಿತ್ತನಗದ್ದೆ ಹಾಗು ಚಿಟ್ಟೆಬೈಲ್ ಎಲ್ಲಾ ಮಕ್ಕಳನ್ನು ಒಟ್ಟು ಗುಡಿಸಿ ಅವರನ್ನು ಮುದ್ದು ರಾಧಾ ಕೃಷ್ಣ ರನ್ನಾಗಿ ನೋಡುವ ಆಸೆಯಿಂದ ಈ ಊರಿನ ಎಲ್ಲಾ ಮಕ್ಕಳು ರಾಧ ಕೃಷ್ಣರಾಗಿ ಭಾನುವಾರ ಶ್ರೀ ಸಾನಿಧ್ಯದಲ್ಲಿ ಜ್ಯೋತಿ ಬೆಳಗಿಸಿ ಶೋಭಾಯಾತ್ರೆಯೊಂದಿಗೆ ಪ್ರಜ್ಞಾ ಭಾರತಿಯ ಬಾಲ ಗೋಕುಲದಲ್ಲಿ ಸಂಭ್ರಮದ ಸಂಜೆ ಆಚರಿಸಿದರು.

ಈ ಸುಂದರ ಕಾರ್ಯಕ್ರಮದ ಆಯೋಜನೆಯನ್ನು ಶ್ರೀಮತಿ ವಾಣಿ ನಿರಂಜನ್ ಭಟ್ ಇವರು ಎಲ್ಲಾ ಸ್ನೇಹಿತರ ಬಳಗವನ್ನು ಒಗ್ಗೂಡಿಸಿ ಕೊಂಡು ಬಾಲ ಗೋಕುಲದಲ್ಲಿ ಹಮ್ಮಿಕೊಂಡು ಯಶಸ್ವಿಯಾಗಿ ಸಂಪನ್ನಗೊಳಿಸಿದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಹೆಮ್ಮೆಯ ಕ್ರೀಡಾಪಟುಗಳಿಗೆ ಗೌರವ!

ತೀರ್ಥಹಳ್ಳಿಯ ಹೆಮ್ಮೆಯ ಕ್ರೀಡಾಪಟುಗಳಿಗೆ ಗೌರವ!
– ಆರ್ಯನ್, ಸಂಮಿತ್ ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
– ತೀರ್ಥಹಳ್ಳಿ ಪಟ್ಟಣದಲ್ಲಿ ಭವ್ಯ ಮೆರವಣಿಗೆ

NAMMUR EXPRESS NEWS
ತೀರ್ಥಹಳ್ಳಿ: ವಾಲಿಬಾಲ್ ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ತೀರ್ಥಹಳ್ಳಿಯ ಹೆಮ್ಮೆಯ ಕ್ರೀಡಾಪಟುಗಳಾದ ಕುರುವಳ್ಳಿಯ ಆರ್ಯನ್ ಗೌಡ ಮತ್ತು ಸಂಮಿತ್ ಅವರಿಗೆ ತೀರ್ಥಹಳ್ಳಿ ಮತ್ತು ಕುರುವಳ್ಳಿ ಜನತೆ ಸಂಭ್ರಮದಿಂದ ಗೌರವ ನೀಡಿದ್ದಾರೆ. ತೀರ್ಥಹಳ್ಳಿಯ ಕುಶಾವತಿಯಿಂದ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಕುರುವಳ್ಳಿಯವರೆಗೆ ಮೆರವಣಿಗೆ ಮೂಲಕ ಕರೆತಂದು ಗೌರವ ನೀಡಲಾಯಿತು. ಈ ಮೂಲಕ ಆರ್ಯನ್ ಗೌಡ ( Aryan Gowda ) ಮತ್ತು ಸಂಮಿತ್ ( Samith ) ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಆಗುಂಬೆಯ ಅನ್ನಪೂರ್ಣ ವಿದ್ಯಾ ಮಂದಿರದ ವಿದ್ಯಾರ್ಥಿಗಳಾದ ಆರ್ಯನ್, ಸಂಮಿತ್ ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ ಬಳಿಕ ಇದೀಗ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.

ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ತೀರ್ಥಹಳ್ಳಿಯ ಹೆಮ್ಮೆಯ ಕ್ರೀಡಾಪಟುಗಳಾದ ಆರ್ಯನ್ ಮತ್ತು ಸಂಮಿತ್ ಈ ಇಬ್ಬರು ವಿದ್ಯಾರ್ಥಿಗಳು ಈ ದಿನ ತೀರ್ಥಹಳ್ಳಿಗೆ ಆಗಮಿಸಿದ್ದಾರೆ. ಈ ಇಬ್ಬರು ಕ್ರೀಡಾಪಟುಗಳನ್ನು ತೀರ್ಥಹಳ್ಳಿಯ ಕುಶಾವತಿ ಆವರಣದಲ್ಲಿ ಭವ್ಯವಾಗಿ ಸ್ವಾಗತಿಸಿ ಅಲ್ಲಿಂದ ಮೆರವಣಿಗೆಯಲ್ಲಿ ಕರೆತರಲಾಯಿತು. ಕೊಪ್ಪ ಸರ್ಕಲ್ ನ ಕುವೆಂಪು ಪುತ್ತಳಿಗೆ ಕ್ರೀಡಾಪಟುಗಳಿಂದ ಮಾಲಾರ್ಪಣೆ ಮಾಡಲಾಯಿತು. ಮೆರವಣಿಗೆಯಲ್ಲಿ ಕ್ರೀಡಾಪಟುಗಳಿಗೆ ಸಾರ್ವಜನಿಕರಿಂದ ಹಾಗೂ ಗಣ್ಯರಿಂದ ಮಾಲಾರ್ಪಣೆ ಮಾಡಿ ಗೌರವಿಸಿದರು ಈ ಮೆರವಣಿಗೆಯಲ್ಲಿ ಪ್ರಮುಖರಾದ ಚಂದವಳ್ಳಿ ಸೋಮಶೇಖರ್, ಕುರುವಳ್ಳಿ ಪಂಚಾಯತಿ ಮಾಜಿ ಅಧ್ಯಕ್ಷ ಅನಿಲ್, ಮೇಗರವಳ್ಳಿ ರಕ್ಷಿತ್, ಪ್ರಮೋದ್ ಪೂಜಾರಿ, ಪೂರ್ಣೇಶ್ ಪೂಜಾರಿ , ಕುಕ್ಕೆ ಪ್ರಶಾಂತ, ನವೀನ್ ಬೆಟ್ಮಕ್ಕಿ, ನಾಗೇಂದ್ರ ಕುರುವಳ್ಳಿ, ಕುರುವಳ್ಳಿ ನಾಗರಾಜ್, ಬಳಗಟ್ಟೆ ಗಿರೀಶ್, ವಿನುತ್ ಗೌಡ, ಹಾಗೂ ಪ್ರಮುಖರು ಪಾಲ್ಗೊಂಡಿದ್ದರು.

ತೀರ್ಥಹಳ್ಳಿಯ ಕ್ರೀಡಾ ರತ್ನಗಳು!

ಕುರುವಳ್ಳಿ ಅನಿಲ್ ಗೌಡ ಮತ್ತು ರಮ್ಯಾ ದಂಪತಿ ಪುತ್ರ ಆರ್ಯನ್ ಮತ್ತು ಮೇಲಿನ ಕುರುವಳ್ಳಿ ಮಂಜು ಟೈಲ್ಸ್ ಮಾಲೀಕ ಮಂಜು ಅವರ ಪುತ್ರ ಸಂಮಿತ್ ತೀರ್ಥಹಳ್ಳಿಯ ಹಿರಿಮೆಯನ್ನು ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿಸಿದ್ದಾರೆ.

Categories
ತೀರ್ಥಹಳ್ಳಿ

ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸೂಪರ್!

ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸೂಪರ್!
– ನಿವೃತ್ತ ಶಿಕ್ಷಕರಿಗೆ ಸನ್ಮಾನ, ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರು, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
– ಆರಗ ಸೇರಿ ಅನೇಕ ಗಣ್ಯರಿಗೆ ಸನ್ಮಾನ

NAMMUR EXPRESS NEWS
ತೀರ್ಥಹಳ್ಳಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸಂಘದ 9ನೇ ವರ್ಷದ ಮಹಾ ಸಭೆ ಸಮಾರಂಭ ಅನೇಕ ಸಾಮಾಜಿಕ ಹಾಗೂ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ನಿವೃತ್ತ ಶಿಕ್ಷಕರಿಗೆ ಸನ್ಮಾನ, ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ತೀರ್ಥಹಳ್ಳಿಯ ಟಿಎಪಿಸಿಎಂಎಸ್ ಸಹಕಾರ ಭವನದಲ್ಲಿ ಸೊಸೈಟಿ ಅಧ್ಯಕ್ಷರಾದ ಮಹಾಬಲೇಶ್ವರ ಹೆಗಡೆ ಉಪಸ್ಥಿತಿಯಲ್ಲಿ ಉದ್ಘಾಟಕರಾಗಿ ಸಹಕಾರಿ ನಾಯಕ ಡಾ.ಆರ್.ಎಂ.ಮಂಜುನಾಥ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಶಾಸಕರಾದ ಆರಗ ಜ್ಞಾನೇಂದ್ರ, ಸಂಘದ ಉಪಾಧ್ಯಕ್ಷರಾದ ತಿಮ್ಮಪ್ಪ ಎಂ ಎಸ್, ಬಿ ಇ ಓ ಆದ ಗಣೇಶ್ ವೈ, ಹೊಸನಗರ ಬಿ ಇ ಓ ಆದ ಕೃಷ್ಣಮೂರ್ತಿ ಹೆಚ್ ಆರ್ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಗೀತಾ ರಮೇಶ್, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ ಹಾಗೂ ಸಂಘದ ಜಿಲ್ಲಾಧ್ಯಕ್ಷರುಗಳು ಮತ್ತು ಸಂಘದ ತಾಲೂಕಿನ ಅಧ್ಯಕ್ಷರುಗಳು ಹಾಗೂ ನಿರ್ದೇಶಕರು, ಷೇರುದಾರರು, ಪ್ರಮುಖರು ಇದ್ದರು. ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು.
ಸಹಕಾರಿ ಅಧ್ಯಕ್ಷರಾದ ಮಹಾಬಲೇಶ್ವರ್ ಅವರು ಎಲ್ಲಾ ಸದಸ್ಯರಿಗೂ ಧನ್ಯವಾದ ಅರ್ಪಿಸಿದರು.

ಸಂಘದ ವಹಿವಾಟು 800 ಕೋಟಿ!

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸಂಘವು ಸುಮಾರು 800 ಕೋಟಿ ವಹಿವಾಟು ನಡೆಸಿದೆ. ಷೇರುದಾರರು 5110 ಮಂದಿ ಇದ್ದು ಡಿಪಾಸಿಟ್ ಹಣದ ಮೊತ್ತ 95 ಕೋಟಿ 12 ಲಕ್ಷ ರೂಪಾಯಿ. ಸಂಘವು ತೀರ್ಥಹಳ್ಳಿ ತಾಲೂಕಿಗೆ ಸೀಮಿತವಾಗದೆ ಎಂಟು ಜಿಲ್ಲೆಗಳಲ್ಲಿ ಹಾಗೂ 8 ಶಾಖೆಯನ್ನು ಹೊಂದಿದೆ. ಷೇರುದಾರ ಶಿಕ್ಷಕರಿಗೆ ಸಾಲ ಸೌಲಭ್ಯ ದೊರಕುತ್ತದೆ ಎಂದು ಅಧ್ಯಕ್ಷರಾದ ಮಹಾಬಲೇಶ್ವರ ಹೆಗಡೆ ಹೇಳಿದರು.

ಮಹಾಬಲೇಶ್ವರ್ ಹೆಗಡೆ ಸಾಧನೆ ಬಣ್ಣಿಸಿದ ಗಣ್ಯರು!

ತೀರ್ಥಹಳ್ಳಿಯಿಂದ ಹುಟ್ಟಿದ ಸಂಸ್ಥೆ ಇದೊಂದು ಅದ್ಭುತವಾದ ಪ್ರಾಥಮಿಕ ಶಿಕ್ಷಕರ ಸಂಘ. ಈ ಸಂಘ ಸಮಾಜಕ್ಕೆ ಕೊಡುಗೆಯಾಗಿ ಬೆಳೆಯಬೇಕು. ಮತ್ತೆ ಈ ಸಂಘದ ಅಧ್ಯಕ್ಷರಾದ ಮಹಾಬಲೇಶ್ ಹೆಗಡೆಯವರು ಅತ್ಯಂತ ಕ್ರಿಯಾಶೀಲ ವ್ಯಕ್ತಿ. ಯಾವುದೇ ಒಂದು ಕೆಲಸಕ್ಕೆ ಕೈ ಹಾಕಿದರೆ ಮಧ್ಯದಲ್ಲಿ ಕೈ ಬಿಡುವ ಜಾಯಮಾನ ಅವರದಲ್ಲ. ಸಾವಿರಾರು ಮಂದಿಗೆ ಸಹಾಯವಾಗುವ ಸಂಘವನ್ನು ಹುಟ್ಟು ಹಾಕಿ ಅತ್ಯಂತ ಅವಿಸ್ಮರಣೀಯ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಆರಗ ಜ್ಞಾನೇಂದ್ರ ಮಹಾಬಲೇಶ್ವರ ಹೆಗಡೆ ಸಾಧನೆ ಬಣ್ಣಿಸಿದರು.
ನನಗೆ ಪ್ರಾರ್ಥಮಿಕ ಶಿಕ್ಷಕರ ಬಗ್ಗೆ ಅಪಾರವಾದ ಕಾಳಜಿ ಗೌರವ ಯಾಕಂದ್ರೆ ಮಕ್ಕಳ ಬೆಳೆಯುವುದು, ಉಳಿಯುವುದು ಕೊನೆತನಕ ಪ್ರಾಥಮಿಕ ಶಿಕ್ಷಕರ ನೆನಪು. ಅದನ್ನು ನಾನು ಸಹ ಅನುಭವಿಸಿದ್ದೇನೆ. ಪ್ರಾಥಮಿಕ ಶಿಕ್ಷಕರು ಈ ಸಮಾಜಕ್ಕೆ ಈ ದೇಶಕ್ಕೆ ಉತ್ತಮವಾದ ಪ್ರಜೆಗಳನ್ನು ಕೊಡುವುದರಲ್ಲಿ ಅವರೇ ಮೊದಲಿಗರು. ಅವರಿಗೆ ಧನ್ಯವಾದ ಎಂದರು.

Categories
ಚಿಕ್ಕಮಗಳೂರು

ಮೊದಲ ಬಾರಿಗೆ ಕಾಫಿ ನಾಡಿಗೆ ಆಗಮಿಸಿದ ಸಚಿವ ಖಂಡ್ರೆ!

ಮೊದಲ ಬಾರಿಗೆ ಕಾಫಿ ನಾಡಿಗೆ ಆಗಮಿಸಿದ ಸಚಿವ ಖಂಡ್ರೆ!
– ರಾಜೇಗೌಡ ಸೇರಿ ಶಾಸಕರಿಂದ ಸ್ವಾಗತ
– ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆ ಅಭಿವೃದ್ಧಿ ಚರ್ಚೆ

NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಗೆ ಪ್ರಥಮ ಬಾರಿಗೆ ಆಗಮಿಸಿದ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರನ್ನು ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಜಿಲ್ಲೆಯ ಶಾಸಕರುಗಳು ಮತ್ತು ಮುಖಂಡರುಗಳು ಉಪಸ್ಥಿತರಿದ್ದರು. ಇನ್ನು ಚಿಕ್ಕಮಗಳೂರು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸನ್ಮಾನ್ಯ ಅರಣ್ಯ ಸಚಿವರಾದ ಶಈಶ್ವರ್ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ನಡೆ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲೆಯ ಪ್ರಗತಿಯ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲೂ ಕಾವೇರಿ ಹೋರಾಟ ಜೋರು

ತೀರ್ಥಹಳ್ಳಿಯಲ್ಲೂ ಕಾವೇರಿ ಹೋರಾಟ ಜೋರು
– ಯಡೂರು ಸುರೇಂದ್ರ ಗೌಡ ನೇತೃತ್ವದಲ್ಲಿ ಕಾವೇರಿ ತೀರ್ಪಿಗೆ ವಿರೋಧ
– ತೀರ್ಥಹಳ್ಳಿ ತಾಲೂಕು ಕಚೇರಿ ಮುತ್ತಿಗೆ ಯಶಸ್ವಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲೂ ಕಾವೇರಿ ಹೋರಾಟ ಜೋರಾಗಿದೆ. ತೀರ್ಥಹಳ್ಳಿ ಕರವೇ ಅಧ್ಯಕ್ಷ ಯಡೂರು ಸುರೇಂದ್ರ ಗೌಡ ನೇತೃತ್ವದಲ್ಲಿ ಕಾವೇರಿ ತೀರ್ಪಿಗೆ ವಿರೋಧ ವ್ಯಕ್ತಪಡಿಸಿ ನೂರಾರು ಕರವೇ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಹಾಜರಿದ್ದರು.

ಕಾವೇರಿ ಬಿಡಬಾರದು…!

ಕಾವೇರಿ ನೀರಿನ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಾಜಕೀಯ ಒತ್ತಡದ ಕಾರಣ ರೈತರು ಜನಸಾಮಾನ್ಯರು ತೊಂದರೆಗೆ ಸಿಲುಕುತ್ತಿದ್ದಾರೆ. ಹಾಗಾಗಿ ಅವೈಜ್ಞಾನಿಕ ಆದೇಶ ನೀಡಿರುವ ಕಾವೇರಿ ನೀರು ಪ್ರಾಧಿಕಾರ ಹಾಗೂ ನೀರು ನಿರ್ವಹಣಾ ಪ್ರಾಧಿಕಾರ ರದ್ದುಗೊಳಿಸಿ’ ವಿಶೇಷ ಅಧಿಕಾರವುಳ್ಳ ಸ್ವಾತಂತ್ರ ಸಮಿತಿ ರಚನೆಗೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿಗೆ ಒತ್ತಾಯಿಸುವುದು ಮತ್ತು ತಮಿಳುನಾಡಿಗೆ ನೀರು ಹರಿಸುವ ಪ್ರಾಧಿಕಾರದ ಆದೇಶವನ್ನು ಪಾಲಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಪ್ರಸ್ತುತ ರಾಜ್ಯದ ಮುಕ್ಕಾಲು ಭಾಗ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ ಎಂದು ಕರವೇ ಅಧ್ಯಕ್ಷ ನೇತೃತ್ವದಲ್ಲಿ ಯಡೂರು ಸುರೇಂದ್ರ ತಾಲ್ಲೂಕು ಕಛೇರಿ ಮುತ್ತಿಗೆಯ ಸಂದರ್ಭದಲ್ಲಿ ಮಾತನಾಡಿದರು.

ಬಂಗಾರಪ್ಪ ನೆನಪು ಮಾಡಿಕೊಂಡ ಹೋರಾಟಗಾರರು!

ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಆರ್. ವೆಂಕಟೇಶ್ ಹೆಗ್ಡೆ ಮಾತನಾಡಿ, ಕಾವೇರಿಯಲ್ಲಿ ನಮಗೆ ಸಾಕಾಗುವಷ್ಟು ನಮ್ಮ ಬೆಳೆಗೆ ಸಾಕಾಗುವಷ್ಟು ನೀರು ಇಲ್ಲದೆ ಇರುವುದರಿಂದ ಇದು ಅವೈಜ್ಞಾನಿಕವಾಗಿ ಯಾವ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪನವರು ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸಿದ್ದರು. ತಾಲ್ಲೂಕು ಕರವೇ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ದಿಲೀಪ್‌ ಮಾತನಾಡಿ, ಕೂಡಲೇ ಕಾವೇರಿ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರ ಕೂಡಲೇ ನೀರುಬಿಡುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕರವೇ ಸಂಚಾಲಕ ಪಡುವಳ್ಳಿ ಹರ್ಷೇಂದ್ರಕುಮಾರ್, ಕರವೇ ಗೌರವಾಧ್ಯಕ್ಷ ಮಲ್ಲಕ್ಕಿ ರಾಘವೇಂದ್ರ, ಕರವೇ ಯುವ ಘಟಕದ ಅಧ್ಯಕ್ಷ ಶ್ರೀಕಾಂತ್‌, ಉಪಾಧ್ಯಕ್ಷ ಸುರೇಶ್‌, ಜೀವನ್, ಪ್ರತಿಮ, ಕಡೂರು ಮಹಮ್ಮದ್, ಅರ್ಜುನ್, ನೂತನ್, ಪ್ಲವರ್ ಚಂದ್ರಶೇಖರ್, ಆದರ್ಶ ಮುತ್ತುಗುಂಡಿ, ಹಳ ಮ ಗಣೇಶ, ಲಕ್ಷ್ಮೀದೇವಿ, ನಾಗವೇಣಿ, ರೇಖಾ, ಶಕುಂತಳ ಮುಂತಾದವರಿದ್ದರು.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಬೆಳ್ತಂಗಡಿಯಲ್ಲಿ ನರ್ಸರಿಗೆ ನುಗ್ಗಿದ ಕಾಡಾನೆಗಳು..!
– 3,200ಕ್ಕಿಂತ ಅಧಿಕ ಗಿಡ ಆನೆಗಳು ತುಳಿದು ಹಾನಿ
ಪಡುಬಿದ್ರಿ: 3 ಲಕ್ಷ ಖಾತೆಯಿಂದ ಡ್ರಾ ಮಾಡಿ ವಂಚನೆ
– ಉಳ್ಳಾಲ : ಟಯ‌ರ್ ಸಿಡಿದ ಕಾರಣ ಮೀನು ಸಾಗಾಟದ ವಾಹನ ಪಲ್ಟಿ
– ಬಂಟ್ವಾಳ: ಲಾರಿಗೆ ಹಿಂಬದಿಯಿಂದ ಬೈಕ್‌ ಢಿಕ್ಕಿ: ಸವಾರ ಸಾವು
– ಪುತ್ತೂರು : ಕಾಲೇಜು ವಿದ್ಯಾರ್ಥಿನಿ ನೇಣುಬಿಗಿದು ಆತ್ಮ ಹತ್ಯೆ

NAMMUR EXPRESS NEWS
ಬೆಳ್ತಂಗಡಿ: ಮುಂಡಾಜೆಯ ಕಾಪುವಿನಲ್ಲಿರುವ ಅರಣ್ಯ ಇಲಾಖೆಯ ನರ್ಸರಿಗೆ ಕಾಡಾನೆಗಳು ನುಗ್ಗಿ ನರ್ಸರಿ ಗಿಡಗಳಿಗೆ ಅಪಾರ ಪ್ರಮಾಣದ ಹಾನಿ ಉಂಟು ಮಾಡಿರುವ ಘಟನೆ ನಡೆದಿದೆ. ಅರಣ್ಯ ಪ್ರದೇಶದಲ್ಲಿ ನಾಟಿ ಮಾಡಲು ಬೆಳೆಸಲಾಗಿದ್ದ ಹಲಸು, ಬಿದಿರು, ಗಾಳಿ ಹೆಬ್ಬಲಸು, ಬಲಿಂದ್ರ, ಪಾಲೆ ಜಾತಿಯ ಸುಮಾರು 3,200ಕ್ಕಿಂತ ಅಧಿಕ ಗಿಡಗಳನ್ನು ಆನೆಗಳು ತುಳಿದು ಸಂಪೂರ್ಣ ಧ್ವಂಸಗೊಳಿಸಿವೆ. ಇನ್ನು ಒಂದು ಮರಿಯಾನೆ ಸಹಿತ ಎರಡು ಆನೆಗಳು ದಾಳಿ ಇಟ್ಟಿರಬಹುದೆಂದು ಶಂಕಿಸಲಾಗಿದ್ದು, ಕೆಲವು ದಿನಗಳ ಹಿಂದೆ ಧರ್ಮಸ್ಥಳದ ನೇರ್ತನೆಯಲ್ಲಿ ಕಂಡುಬಂದಿದ್ದ ಕಾಡಾನೆಗಳು ಇಲ್ಲಿಯೂ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅರಣ್ಯ ಇಲಾಖೆಯ ಈ ನರ್ಸರಿ ರಾಷ್ಟ್ರೀಯ ಹೆದ್ದಾರಿಯಿಂದ 20 ಮೀ. ಅಂತರದಲ್ಲಿದ್ದು, ಆನೆಗಳು ಹೆದ್ದಾರಿ ಬದಿಯು ಸುಳಿದಾಡಿರುವ ಹೆಜ್ಜೆ ಗುರುತುಗಳು ಕಂಡುಬಂದಿವೆ. ಸ್ಥಳಕ್ಕೆ ಉಪವಲಯ ಅರಣ್ಯ ಅಧಿಕಾರಿಗಳು ಭೇಟಿ ನೋಡಿ, ಪರಿಶೀಲನೆ ನಡೆಸಿದ್ದಾರೆ

ಪಡುಬಿದ್ರಿ: 3 ಲಕ್ಷ ಖಾತೆಯಿಂದ ಡ್ರಾ ಮಾಡಿ ವಂಚನೆ

ಪಡುಬಿದ್ರಿ: ಶಂಕರಪುರದ ಕೆವೈಸಿ ಅಪ್ಲೇಟ್ ಮಾಡುವ ನೆಪದಲ್ಲಿ ವಲೆರಿಯನ್ ಎಂಬುವರ ಖಾತೆಯಿಂದ ಹಣ ಡ್ರಾ ಮಾಡಿ ವಂಚಿಸಿರುವ ಪ್ರಕರಣ ಶನಿವಾರ ನಡೆದಿದೆ. ವಲೆರಿಯನ್ ಕೆನರಾ ಬ್ಯಾಂಕ್‌ನಲ್ಲಿ ಅಕೌಂಟ್ ಹೊಂದಿದ್ದಾರೆ. ಅವರು ಶನಿವಾರ ಮನೆಯಲ್ಲಿರುವ ವೇಳೆ ಅಪರಿಚಿತನೋರ್ವ ಮೊಬೈಲ್ ಸಂಖ್ಯೆ 9387666481ರಿಂದ ವಲೇರಿಯನ್ ಪತ್ನಿ ಮೊಬೈಲಿಗೆ ಮೆಸೇಜ್ ಮಾಡಿ ತಾನು ಬ್ಯಾಂಕ್ ಉದ್ಯೋಗಿಯಾಗಿದ್ದು, ಖಾತೆಯ ಕೆವೈಸಿ ಅಪ್ಲೇಟ್ ಮಾಡಿಕೊಳ್ಳುವಂತೆ ತಿಳಿಸಿದ್ದ. ಅದರಂತೆ ಖಾತೆ ಪಾಸ್ ಬುಕ್ ವಿವರ ನೀಡಿದ್ದರು. ಅಪ್ಲೇಟ್ ಮಾಡುವ ಕಾರಣ ನಾಮಿನಿಯೂ ಆಗಿರುವ ಅವರಲ್ಲಿ ಖಾತೆದಾರರ ವಿವರ ಸಹಿತ ಎಟಿಎಂ ಕಾರ್ಡ್ ಮಾಹಿತಿ ಪಡೆದುಕೊಂಡಿದ್ದಾನೆ. ನಂತರ ಮೊಬೈಲ್‌ಗೆ ಒಟಿಪಿ ಬಂದಿದ್ದು, ಅದರ ವಿವರವನ್ನು ಪಡೆದುಕೊಂಡಿದ್ದ. ಬಳಿಕ ಅಕೌಂಟ್‌ನಿಂದ 1,99,999, 50,000, 80,000, 8200, ಸಹಿತ 3,38,199 ಮೊತ್ತವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಯ‌ರ್ ಸಿದು ಮೀನು ಸಾಗಾಟದ ವಾಹನ ಪಲ್ಟಿ

ಉಳ್ಳಾಲ: ಟಯರ್ ಸಿಡಿದು ಮೀನು ಸಾಗಾಟದ ಪಿಕಪ್ ವಾಹನ ಪಲ್ಟಿಯಾದ ಘಟನೆ ನೇತ್ರಾವತಿ ಸೇತುವೆಯಲ್ಲಿ ಭಾನುವಾರ ವೇಳೆ ನಡೆದಿದೆ. ಸಂಜೆ ಘಟನೆಯಿಂದ ರಸ್ತೆ ಸಂಚಾರದಲ್ಲಿ ವ್ಯತ್ಯಾಸ ಉಂಟಾಯಿತು. ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಸಂಚಾರದಲ್ಲಿ ವ್ಯತ್ಯಾಸ ಉಂಟಾದ ವಾಹನಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆಯಲ್ಲಿ ಪಿಕಪ್ ವಾಹನ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ವಾಹನದಲ್ಲಿದ್ದ ಮೀನು ರಸ್ತೆ ಪೂರ್ತಿ ಚೆಲ್ಲಿಹೋಗಿದೆ.

ಲಾರಿಗೆ ಹಿಂಬದಿಯಿಂದ ಬೈಕ್‌ ಡಿಕ್ಕಿ: ಸವಾರ ಸಾವು

ಬಂಟ್ವಾಳ : ಪಾಣೆಮಂಗಳೂರು ನೇತ್ರಾವತಿ ಸೇತುವೆಯ ಮೇಲೆ ಲಾರಿಯೊಂದು ಅಪಾಯಕಾರಿ ರೀತಿಯಲ್ಲಿ ಏಕಾಏಕಿ ಬ್ರೇಕ್‌ ಹಾಕಿದ ಪರಿಣಾಮ ಹಿಂಬದಿಯಿಂದ ಬೈಕ್‌ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಬೈಕ್‌ ಸವಾರ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಮೂಲತಃ ಸಜೀಪಮೂಡ ಬೇಂಕ್ಯ ನಿವಾಸಿ, ಪ್ರಸ್ತುತ ವಾಮದಪದವಿನಲ್ಲಿ ನೆಲೆಸಿರುವ ರಾಜುಕುಮಾರ್ ಮಯ್ಯ (42) ಮೃತರು. ಅವರು ವಾಮದಪದವಿನಿಂದ ಬೇಂಕ್ಯಕ್ಕೆ ತೆರಳುವ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ರಾಜುಕುಮಾರ್ ಅವರನ್ನು ತತ್‌ಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಕಾಲೇಜು ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ

ಪುತ್ತೂರು: ಬನ್ನೂರು ಕರ್ಮಲ ಸನ್ನಿಧಿ ಲೇ ಔಟ್‌ ನಿವಾಸಿ ಕಿಶೋರ್‌ ಅವರ ಪುತ್ರಿ ಖಾಸಗಿ ಕಾಲೇಜಿನಲ್ಲಿ ಅಂತಿಮ ಬಿ.ಸಿ.ಎ. ವಿದ್ಯಾರ್ಥಿನಿ ಕೀರ್ತಿಕಾ (19) ಸೆ. 24ರಂದು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅವರು ಸೀಲಿಂಗ್‌ ಫ್ಯಾನ್‌ಗೆ ಬೆಡ್‌ಶೀಟ್ ಸುತ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Categories
ತೀರ್ಥಹಳ್ಳಿ

ಆಗುಂಬೆ ಸುತ್ತಮುತ್ತ ಮತ್ತೆರಡು ಆನೆ ಪ್ರತ್ಯಕ್ಷ!

ಆಗುಂಬೆ ಸುತ್ತಮುತ್ತ ಮತ್ತೆರಡು ಆನೆ ಪ್ರತ್ಯಕ್ಷ!
– ಹೆಬ್ರಿ ಭಾಗದ ಕಾಡಲ್ಲಿ ಆನೆ ಪತ್ತೆ: ಸ್ಥಳೀಯರ ಮಾಹಿತಿ
– ಎನ್.ಆರ್. ಪುರ ಕಡೆಯಿಂದ ಬಂದಿದ್ದವಾ ಆನೆಗಳು?

NAMMUR EXPRESS NEWS
ತೀರ್ಥಹಳ್ಳಿ: ಕರಾವಳಿ ಮತ್ತು ಮಲೆನಾಡು ಸಂಪರ್ಕ ಬೆಸೆವ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಸುತ್ತಮುತ್ತ ಆನೆಗಳು ಪ್ರತ್ಯಕ್ಷವಾಗಿವೆ ಎನ್ನಲಾಗಿದೆ. ಕಳೆದ ಎರಡು ದಶಕಗಳಿಂದ ಸಲಗವೊಂದು ಓಡಾಡುತ್ತಿದೆ. ಆದ್ರೆ ಆ ಆನೆಯ ಜೊತೆ ಇನ್ನೆರೆಡು ಆನೆಗಳು ಈ ಭಾಗದಲ್ಲಿ ಸಂಚರಿಸುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳೀಯ ವರದಿಯ ಪ್ರಕಾರ, ಸೋಮೇಶ್ವರ ವನ್ಯಜೀವಿ ವಿಭಾಗದಲ್ಲಿ ಎರಡು ಕಾಡಾನೆಗಳು ಕಾಣಿಸಿಕೊಂಡಿವೆ. ಹೆಬ್ರಿ ಭಾಗದ ಕೋಡ್ಲು ತೀರ್ಥ ಆಸುಪಾಸಿನಲ್ಲಿ ಆನೆ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.

ಈ ಆನೆಗಳು ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರದ ಕಡೆಯಿಂದ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಆಗುಂಬೆ ಭಾಗದಲ್ಲಿರುವ ಕಾಡಾನೆಯು ಇಲ್ಲಿಯೆ ಮಲ್ಲಂದೂರು ಭಾಗದಲ್ಲಿ ಸುತ್ತಾಡುತ್ತಿದೆ. ಅದರ ಬೆನ್ನಲ್ಲೆ ಇನ್ನೆರಡು ಕಾಡಾನೆಗಳು ಕಾಣಿಸಿಕೊಂಡಿರುವುದು ಕುತೂಹಲ ಹಾಗೂ ಆತಂಕ ಎರಡನ್ನು ಸಹ ಮೂಡಿಸಿದೆ.

Categories
ತೀರ್ಥಹಳ್ಳಿ

ಪ್ರತಿಭಾ ಕಾರಂಜಿ, ಕ್ರೀಡಾಕೂಟ: ಗುಡ್ಡೆಕೇರಿ ಸರ್ಕಾರಿ ಶಾಲೆ ಚಾಂಪಿಯನ್!

ಪ್ರತಿಭಾ ಕಾರಂಜಿ, ಕ್ರೀಡಾಕೂಟ: ಗುಡ್ಡೆಕೇರಿ ಸರ್ಕಾರಿ ಶಾಲೆ ಚಾಂಪಿಯನ್!
– ಆಗುಂಬೆ ಹೋಬಳಿ ಮಟ್ಟದ ಸಮಗ್ರ ಪ್ರಶಸ್ತಿ
– ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡ್ಡೇಕೇರಿ ಸಾಧನೆ
– ಕ್ರೀಡಾಕೂಟದಲ್ಲಿ ಸತತ 15 ವರ್ಷದಿಂದ ಚಾಂಪಿಯನ್

NAMMUR EXPRESS NEWS
ತೀರ್ಥಹಳ್ಳಿ: ಬಿದರಗೋಡಿನಲ್ಲಿ ನಡೆದ ಆಗುಂಬೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ 19 ಬಹುಮಾನ ಪಡೆದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡ್ಡೇಕೇರಿ ಸರ್ಕಾರಿ ಪ್ರಾಥಮಿಕ ಶಾಲೆ ಗುಡ್ಡೇಕೇರಿ ಸಮಗ್ರ ಪ್ರಶಸ್ತಿ ಪಡೆಯುವ ಮೂಲಕ ಸಾಧನೆ ಮಾಡಿದೆ. ಇನ್ನೊಂದೆಡೆ ಮೇಗರವಳ್ಳಿಯಲ್ಲಿ ನಡೆದ 14 ವರ್ಷ ವಯೋಮಿತಿ ಒಳಗಿನ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆಯನ್ನು ಸಾಧಿಸಿದ್ದಾರೆ. ಈ ವರ್ಷವೂ ಸೇರಿದಂತೆ ಸತತ 15 ವರ್ಷಗಳಿಂದ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಜೊತೆಗೆ ತಾಲೂಕು ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.

ಬಾಲಕರ ವಿಭಾಗ

ವಾಲಿಬಾಲ್- ಪ್ರಥಮ
ಖೋ ಖೋ – ಪ್ರಥಮ
ಥ್ರೋಬಾಲ್ -ಪ್ರಥಮ ಸ್ಥಾನ

ಬಾಲಕಿಯರ ವಿಭಾಗ

ವಾಲಿಬಾಲ್ – ಪ್ರಥಮ
ಥ್ರೋಬಾಲ್ – ಪ್ರಥಮ
ರಿಲೇ- ಪ್ರಥಮ ಸ್ಥಾನ

ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳ ಪಟ್ಟಿ

ಕಿರಿಯ ವಿಭಾಗ

1.ಭಕ್ತಿ ಗೀತೆ – ಪ್ರೀತಂ – ಪ್ರಥಮ
2.ಲಘು ಸಂಗೀತ -ಪ್ರೀತಂ – ದ್ವಿತೀಯ
3.ಚಿತ್ರ ಕಲೆ- ಹಮೀಮಾ – ಪ್ರಥಮ
4.ಕನ್ನಡ ಕಂಠಪಾಠ – ಚಾರಿತ್ರ್ಯ – ದ್ವಿತೀಯ
5.ಅರೇಬಿಕ್ ಪಠಣ – ಆಜ್ಮೀನಾ – ತೃತೀಯ
6.ಆಶುಭಾಷಣ – ತರುಣ್ ಕುಮಾರ್ – ದ್ವಿತೀಯ
7.ಮಣ್ಣಿನ ಮಾದರಿ – ಭರತ್ – ತೃತೀಯ

ಹಿರಿಯ ವಿಭಾಗ

1. ಕನ್ನಡ ಕಂಠಪಾಠ – ವಿನೀಶ್ – ತೃತೀಯ
2. ಇಂಗ್ಲಿಷ್ ಕಂಠಪಾಠ – ಸ್ಫೂರ್ತಿ – ದ್ವಿತೀಯ
3.ಸಂಸ್ಕೃತ ಪಠಣ – ಹಿಮಾಂಶು -ಪ್ರಥಮ
4. ಅರೇಬಿಕ್ ಪಠಣ – ಝಿಯಾದ್ – ಪ್ರಥಮ
5. ಮಣ್ಣಿನ ಮಾದರಿ – ಪ್ರತಾಪ್ – ಪ್ರಥಮ
6. ಲಘು ಸಂಗೀತ – ವಿನೀಶ್ -ಪ್ರಥಮ
7. ಭಕ್ತಿ ಗೀತೆ – ವೇದಶ್ರೀ – ದ್ವಿತೀಯ
8. ಅಭಿನಯ ಗೀತೆ – ಮನೋಜ್ಞ – ತೃತೀಯ
9. ಛದ್ಮವೇಷ – ಶಕ್ತಿಪ್ರಿಯಾ – ತೃತೀಯ
10. ಮಿಮಿಕ್ರಿ – ಪೂರ್ಣೇಶ – ತೃತೀಯ
11. ಕವನ ವಾಚನ – ಕಾವ್ಯ – ಪ್ರಥಮ
12. ಚಿತ್ರ ಕಲೆ – ಮುರ್ಷೀದ್ – ದ್ವಿತೀಯ

ಒಟ್ಟು 7 ಪ್ರಥಮ, ಒಟ್ಟು 6 ದ್ವಿತೀಯ,ಒಟ್ಟು 6 ತೃತೀಯ.

ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆಗಳು

ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೂ ಮತ್ತು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಶಾಲಾ ಪರವಾಗಿ ಅಭಿನಂದನೆಗಳು. ಹೋಬಳಿ ಕ್ರೀಡಾಕೂಟದಲ್ಲಿ ಸತತ 15 ವರ್ಷಗಳಿಂದ ಶಾಲಾ ಚಾಂಪಿಯನ್ ಮಕ್ಕಳ ಸಾಧನೆಗೆ ಮತ್ತು ಮಕ್ಕಳನ್ನ ತರಬೇತಿ ಗೊಳಿಸಿದ ಶಿಕ್ಷಕರಿಗೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತವಾರಿ ಸಮಿತಿ ಪೋಷಕರು ಹಳೆಯ ವಿದ್ಯಾರ್ಥಿಗಳು ಊರಿನ ಸಮಸ್ತ ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ

Categories
ತೀರ್ಥಹಳ್ಳಿ ಬೆಂಗಳೂರು

ತೀರ್ಥಹಳ್ಳಿಯ ಸಹಕಾರಿ ನಕ್ಷತ್ರ ನೆನಪು ಮಾತ್ರ!

ತೀರ್ಥಹಳ್ಳಿಯ ಸಹಕಾರಿ ನಕ್ಷತ್ರ ನೆನಪು ಮಾತ್ರ!
– ಬಿ. ಎಸ್. ವಿಶ್ವನಾಥ್ ನಿಧನ: ಬೆಂಗಳೂರಲ್ಲಿ ಇಂದು ಅಂತ್ಯಕ್ರಿಯೆ
– ತೀರ್ಥಹಳ್ಳಿ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಮಿನುಗಿಸಿದ್ದ ನಾಯಕ
– ಕಣ್ಣು ದಾನ: ಸಾವಲ್ಲೂ ಸಾರ್ಥಕತೆ ತಂದ ಕುಟುಂಬ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಹಿರಿಮೆಯನ್ನು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಸಾರಿದ್ದ ಹಿರಿಯ ಸಹಕಾರಿ
ಬಿ.ಎಸ್ ವಿಶ್ವನಾಥನ್ (89) ಭಾನುವಾರ ಬೆಳಿಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದು ಸೋಮವಾರ ಬೆಂಗಳೂರಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮಾಜಿ ವಿಧಾನ ಪರಿಷತ್ ಸದಸ್ಯ, ರಾಜ್ಯ ಭೂ ಬ್ಯಾಂಕ್ ಮಾಜಿ ಅಧ್ಯಕ್ಷ, ರಾಷ್ಟ್ರೀಯ ಸಹಕಾರಿ ತರಬೇತಿ ಕೇಂದ್ರದ ಅಧ್ಯಕ್ಷ, ತೀರ್ಥಹಳ್ಳಿ ಪುರಂದರ ವೇದಿಕೆ ಸ್ಥಾಪಕ, ಇಸ್ರೋ ಸಂಸ್ಥೆಯ ನಿರ್ದೇಶಕ, ಕೆನರಾ ಬ್ಯಾಂಕಿನ ಮಾಜಿ ನಿರ್ದೇಶಕ ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೇಹಕ್ಕಲು ಸಮೀಪದ ಬಸರವಳ್ಳಿಯ ವಿಶ್ವನಾಥನ್ ಅವರು ಪತ್ನಿ ಶಾರದಾ, ಪುತ್ರ ಅವಿನಾಶ್ ಹಾಗೂ ಪುತ್ರಿ ಅರ್ಚನಾ ಅವರನ್ನು ಅಗಲಿದ್ದಾರೆ. ವಿಶ್ವನಾಥ್ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಅನಾರೋಗ್ಯಪೀಡಿತರಾಗಿದ್ದರು. ರಾಜ್ಯದ ಪ್ರಮುಖ ಸಹಕಾರಿ ನಾಯಕರು, ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ತೀರ್ಥಹಳ್ಳಿ ಜತೆ ಸದಾ ಸಂಬಂಧ ಹೊಂದಿದ್ದರು

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಎಸ್.ವಿಶ್ವನಾಥನ್ ಅವರು ಸಮಾಜವಾದಿ ದುರೀಣ ಶಾಂತವೇರಿ ಗೋಪಾಲಗೌಡರ ವಿರುದ್ಧ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಪರಾಜಿತರಾಗಿದ್ದರು. ಅದರೆ ಬಳಿಕ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ತೀರ್ಥಹಳ್ಳಿಯ ಪುರಂದರ ವೇದಿಕೆ ಸ್ಥಾಪಿಸಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದರು. ಅಲ್ಲದೆ ತೀರ್ಥಹಳ್ಳಿಯ ಅನೇಕ ಅಭಿವೃದ್ಧಿ ಕೆಲಸಗಳಿಗೆ ಮಾರ್ಗದರ್ಶಕರಾಗಿದ್ದರು.

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸಂತಾಪ

ಸಹಕಾರಿ ಕ್ಷೇತ್ರದ ಬೀಷ್ಮ, ತೀರ್ಥಹಳ್ಳಿಯ ಹೆಮ್ಮೆ ವಿಶ್ವ ಸಹಕಾರಿ ಬಿ ಎಸ್ ವಿಶ್ವನಾಥನ್ ನಿಧನಕ್ಕ ಶಾಸಕ ಆರಗ ಜ್ಞಾನೇಂದ್ರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ವಿಶ್ವನಾಥನ್ ರವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದರು. ಭಾನುವಾರ ಸಂಜೆ 5 ರ ನಂತರ ತೀರ್ಮಾನಿಸಿ ರಾತ್ರಿ 11 ಕ್ಕೆ ಅರಸಾಳು ರೈಲಿನ ಮೂಲಕ ಬೆಂಗಳೂರು ಹೊರಟು ಬೆಳಿಗ್ಗೆ 5 ಕ್ಕೆ ಬೆಂಗಳೂರು ತಲುಪಿ ವಿಶ್ವನಾಥನ್ ರವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಇದೀಗ ಶಿವಮೊಗ್ಗಕ್ಕೆ ವಿಮಾನದ ಮೂಲಕ ಆಗಮಿಸಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ನಿಗದಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ತೀರ್ಥಹಳ್ಳಿಯ ನೆಲದಲ್ಲಿ ಸಾಮಾಜಿಕ ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಸಾಧಕರು ಜಪಿಸಿದ್ದಾರೆ ,ಸಾಹಿತ್ಯ ಲೋಕದ ಮೇರು ಪರ್ವತ ಕುವೆಂಪು, ರಾಜಕೀಯ ಕ್ಷೇತ್ರದ ಆದರ್ಶ ವ್ಯಕ್ತಿತ್ವ ಗೋಪಾಲ ಗೌಡರು ಹೀಗೆ ಬೇರೆ ಬೇರೆ ಕ್ಷೇತ್ರದ ಹಲವು ಜನ ಸಾದಕರಿಗೆ ಜನ್ಮ ಕೊಟ್ಟ ತೀರ್ಥಹಳ್ಳಿ, ಸಹಕಾರಿ ಕ್ಷೇತ್ರದಲ್ಲಿ ಬಿ ಎಸ್ ವಿಶ್ವನಾಥನ್ ಗೆ ಜನ್ಮ ಕೊಟ್ಟು ತೀರ್ಥಹಳ್ಳಿ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕಂಗೊಳಿಸುವಂತೆ ಮಾಡಿದ ಹಿರಿಮೆ ತೀರ್ಥಹಳ್ಳಿ ಮಣ್ಣಿನದ್ದಾಗಿದೆ, ತೀರ್ಥಹಳ್ಳಿ ಹೆಸರು ವಿಶ್ವ ಬ್ಯಾಂಕಿನವರೆಗೆ ತೆಗೆದುಕೊಂಡು ಹೋದ ಕೀರ್ತಿಯೂ ಕೂಡ ವಿಶ್ವನಾಥನ್ ಅವರಿಗೆ ಸಲ್ಲುತ್ತದೆ ಎಂದಿರುವ ಶಾಸಕರು ಶ್ರೇಷ್ಠ ಸಹಕಾರಿ ಬಿ ಎಸ್ ವಿ ನಿಧನ ಈಡೀ ಸಹಕಾರಿ ರಂಗಕ್ಕೆ ಮತ್ತು ತೀರ್ಥಹಳ್ಳಿ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಮ್ಮ ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸೋಮವಾರ ಮಧ್ಯಾಹ್ನ ಅಂತ್ಯಕ್ರಿಯೆ

24.09.2023ರಂದು ಬೆಳಗ್ಗೆ 10.50ಕ್ಕೆ ನಿಧನರಾದ ವಿಶ್ವನಾಥ್ ಅವರ ಅಂತ್ಯ ಕ್ರಿಯೆಯು 25.09.2023ರಂದು ಮಧ್ಯಾಹ್ನ 2.00 ಗಂಟೆಗೆ ಬನಶಂಕರಿ 2ನೇ ಹಂತದ ಚಿತಾಗಾರದಲ್ಲಿ ನಡೆಯಲಿದೆ.

ಕಣ್ಣು ದಾನ: ಸಾವಲ್ಲೂ ಸಾರ್ಥಕತೆ ತಂದ ಕುಟುಂಬ

ಸಹಕಾರಿ ನಾಯಕರಾಗಿ ಹಲವರಿಗೆ ಬದುಕು ನೀಡಿ ತಮ್ಮದೇ ಆದ ಕೊಡುಗೆ ನೀಡಿದ್ದ ವಿಶ್ವನಾಥ್ ಅವರ ಕಣ್ಣನ್ನು ದಾನ ಮಾಡುವ ಮೂಲಕ ಕುಟುಂಬ ಸಾವಲ್ಲೂ ಸಾರ್ಥಕತೆ ಮೆರೆದಿದೆ.

ಗಣ್ಯರ ಸಂತಾಪ: ಸೇವೆಯ ನೆನಪು

ಸಹಕಾರಿ ನಾಯಕ ಡಾ. ಆರ್. ಎಂ. ಮಂಜುನಾಥ ಗೌಡ, ಕಿಮ್ಮನೆ ರತ್ನಾಕರ್, ಬಸವಾನಿ ವಿಜಯದೇವ್, ನಾಗರಾಜ್ ಶೆಟ್ಟಿ ಸೇರಿದಂತೆ ಬಹುತೇಕ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಮಲೆನಾಡ ಸಂಘಟನೆ ಸಹ್ಯಾದ್ರಿ ಸಂಘ ಇತ್ತೀಚಿಗೆ ಅವರ ಮನೆಗೆ ತೆರಳಿ ಅವರನ್ನು ಗೌರವಿಸಿತ್ತು.