Categories
ರಾಜ್ಯ

ಕೋಳಿ ಸಾಕಾಣಿಕೆ ವಾಣಿಜ್ಯ ಚಟುವಟಿಕೆ ಅಲ್ಲ

ಕೋಳಿ ಸಾಕಾಣಿಕೆ ವಾಣಿಜ್ಯ ಚಟುವಟಿಕೆ ಅಲ್ಲ
– ತೆರಿಗೆ ವಿಧಿಸುವ ಅಧಿಕಾರ ಗ್ರಾಪಂಗೆ ಇಲ್ಲ
– ಹೈಕೋರ್ಟ್ ಮಹತ್ವದ ಆದೇಶ

NAMMUR EXPRESS NEWS
ಬೆಂಗಳೂರು: ಕೃಷಿ ಭೂಮಿಯಲ್ಲಿ ಕೋಳಿ ಸಾಕಾಣಿಕೆ ಮಾಡುವುದು ವಾಣಿಜ್ಯ ಚಟುವಟಿಕೆ ಅಲ್ಲ. ಅದು ಕೃಷಿ ಚಟುವಟಿಕೆಯಾಗಿದ್ದು, ಹೀಗಾಗಿ ಗ್ರಾಮ ಪಂಚಾಯತ್ ವಾಣಿಜ್ಯ ಕಟ್ಟಡವೆಂದು ತೆರಿಗೆ ವಿಧಿಸುವಂತಿಲ್ಲ ಕೋಳಿ ಸಾಕಾಣಿಕೆಗಾಗಿ ಕೃಷಿ ಭೂಮಿ ಪರಿವರ್ತನೆ ಅಗತ್ಯವಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ತನ್ನ ಕೋಳಿ ಸಾಕಾಣಿಕೆ ಕೇಂದ್ರಕ್ಕೆ ತೆರಿಗೆ ವಿಧಿಸಿದ್ದ ಗ್ರಾಮ ಪಂಚಾಯತ್ ಕ್ರಮ ಪ್ರಶ್ನಿಸಿ ಬೆಂಗಳೂರು ಉತ್ತರ ತಾಲೂಕಿನ ಸೊಂಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿ ಕೆ.ನರಸಿಂಹಮೂರ್ತಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠವು ಈ ಆದೇಶ ನೀಡಿದೆ. ಕೋಳಿ ಸಾಕಾಣಿಕೆ ಕೇಂದ್ರಕ್ಕಾಗಿ ನಿರ್ಮಾಣ ಮಾಡುವ ಕಟ್ಟಡವನ್ನು ಕರ್ನಾಟಕ ಗ್ರಾಮ ಸ್ವರಾಜ್ ಕಾಯ್ದೆ-4ರ(ಎ)(2) ಅಡಿಯಲ್ಲಿ ವಾಣಿಜ್ಯ ಕಟ್ಟಡವನ್ನಾಗಿ ಪರಿಗಣಿಸಿ ತೆರಿಗೆ ವಿಧಿಸಲು ಅವಕಾಶವಿಲ್ಲ. ಕೋಳಿ ಸಾಕಾಣಿಕೆ ಕೇಂದ್ರವಿರುವ ಭೂಮಿ ಕೃಷಿ ಭೂಮಿಯಾಗಿಯೇ ಮುಂದುವರೆಯಲಿದ್ದು ಅದನ್ನು ವಾಣಿಜ್ಯ ಭೂಮಿಯನ್ನಾಗಿ ಪರಿಗಣಿಸಿ ತೆರಿಗೆ ವಿಧಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

ಅರ್ಜಿದಾರರಿಂದ ತೆರಿಗೆ ರೂಪದಲ್ಲಿ ಈಗಾಗಲೇ ಸಂಗ್ರಹಿಸಿರುವ 59,551 ರೂ.ಗಳನ್ನು ಹಿಂದಿರುಗಿಸಬೇಕು ಎಂದೂ ನಿರ್ದೇಶನ ನೀಡಿದೆ. ಇಷ್ಟೇ ಅಲ್ಲ, ಗ್ರಾಮ ಪಂಚಾಯತ್ ಜಾರಿ ಮಾಡಿದ್ದ ನೊಟೀಸ್‌ನ್ನು ರದ್ದುಪಡಿಸಿ ಆದೇಶಿಸಿದೆ. ಸೊಂಡೆಕೊಪ್ಪ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಕೋಳಿ ಸಾಕಾಣಿಕೆ ಕೇಂದ್ರವು ಕೈಗಾರಿಕೆಗಳ ಅಡಿಯಲ್ಲಿ ಬರಲಿದ್ದು, ಅದನ್ನ ನಿರಾಕ್ಷೇಪಣಾ ಪತ್ರ ವಿತರಣೆ ಮಾಡುವುದಕ್ಕಾಗಿ 1.3 ಲಕ್ಷ ರೂ.ಗಳನ್ನು ಪಾವತಿ ಮಾಡಲೇಬೇಕು ಎಂದು ಸೂಚನೆ ನೀಡಿ ನೊಟೀಸ್ ನೀಡಿದ್ದರು. ಇದರಿಂದ ಅರ್ಜಿದಾರ 59,551 ಪಾವತಿ ಮಾಡಿದ್ದರು. ನಂತರ ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆಗೆ ಕೃಷಿ ಚಟುವಟಿಕೆಗಳಾಗಿದ್ದು, ಇದಕ್ಕಾಗಿ ನಿರಾಕ್ಷೇಪಣಾ ಪತ್ರ ಪಡೆಯುವುದು ಹಾಗೂ ತೆರಿಗೆ ಪಾವತಿ ಮಾಡುವ ಅಗತ್ಯವಿಲ್ಲ. ಈ ರೀತಿ ತೆರಿಗೆ ವಿಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಅಂಶ ಮನಗಂಡು ಹೈಕೋಟ್‌ರ್ಗೆ ಅರ್ಜಿ ಸಲ್ಲಿಸಿದ್ದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಪಟ್ಟಣದಲ್ಲಿ 30 ಮೀಟರ್ ರಸ್ತೆ!

ತೀರ್ಥಹಳ್ಳಿ ಪಟ್ಟಣದಲ್ಲಿ 30 ಮೀಟರ್ ರಸ್ತೆ!
– ತೀರ್ಥಹಳ್ಳಿ ಕೊಪ್ಪ ಸರ್ಕಲ್‌ನಿಂದ ಕುಶಾವತಿವರೆಗೆ 30 ಮೀಟರ್ ಅಗಲದ ರಸ್ತೆ
– ನಿರ್ಮಾಣಕ್ಕೆ ಸರ್ವೆ ಮುಕ್ತಾಯ: ಕಾಮಗಾರಿ ಶೀಘ್ರ ಶುರು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಕೊಪ್ಪ ಸರ್ಕಲ್‌ನಿಂದ ಮಂಡಗದ್ದೆ ನೆಲ್ಲಸರ 36 ಕ್ಯಾಂಪ್‌ವರೆಗೆ ಚತುಷ್ಪಥ ನಿರ್ಮಾಣ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳುತ್ತಿದೆ. ಈ ಮೂಲಕ ತೀರ್ಥಹಳ್ಳಿಗೆ ಮತ್ತೊಂದು ದೊಡ್ಡ ಯೋಜನೆ ಶುರುವಾಗಲಿದೆ. ತೀರ್ಥಹಳ್ಳಿಯಿಂದ ಶಿವಮೊಗ್ಗ ಮಾರ್ಗ ಸಂಪೂರ್ಣ ಚತುಷ್ಪತವಾಗಲಿದೆ. ರಸ್ತೆಯ ಸರ್ವೆ ಮುಗಿದಿದ್ದು ಕಳೆದ 2 ದಿನಗಳಿಂದ ತೀರ್ಥಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿ ಕೊಪ್ಪ ಸರ್ಕಲ್‌ನಿಂದ ಕುಶಾವತಿವರೆಗೆ ಸರ್ವೆ ನಡೆಸಲಾಗುತ್ತಿದ್ದು ಹಾಲಿ ಇರುವ 12 ಮೀಟರ್ ಅಗಲದ ರಸ್ತೆ ಮೀಟರ್ ನಷ್ಟು ಅಗಲಗೊಳ್ಳಲಿದೆ. ಈಗಾಗಲೇ ಮಾರ್ಕಿಂಗ್ ಪ್ರಕ್ರಿಯೆ ನಡೆದಿದ್ದು ಹಾಲಿ ರಸ್ತೆಯ ಎರಡೂ ಕಡೆ ಅಂದಾಜು 5ರಿಂದ 15 ಮೀಟರ್‌ನಷ್ಟು ಜಾಗವನ್ನು ಖುಲ್ಲಾ ಪಡಿಸಲಾಗುತ್ತದೆ. ಕುವೆಂಪು ಶಾಲೆ ಮುಂಭಾಗದ ಪ.ಪಂ.ನ ನೆಲಬಾಡಿಗೆ ಜಾಗ ಸಂಪೂರ್ಣ ಖುಲ್ಲಾ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

Categories
ಬೆಂಗಳೂರು ರಾಜ್ಯ

ಅಕ್ರಮವಾಗಿ ಅಳವಡಿಸಿದ ಪಂಪ್ಸೆಟ್ ಸಕ್ರಮಕ್ಕೆ ಅಸ್ತು!

ಅಕ್ರಮವಾಗಿ ಅಳವಡಿಸಿದ ಪಂಪ್ಸೆಟ್ ಸಕ್ರಮಕ್ಕೆ ಅಸ್ತು!
– 2015ರಿಂದ ಈಚೆಗೆ ಅಕ್ರಮವಾಗಿ ಅಳವಡಿಕೆ
-6,099 ಕೋಟಿ ಅನುದಾನ ನೀಡಿದ ಸಚಿವ ಸಂಪುಟ

NAMMUR EXPRESS NEWS
ಬೆಂಗಳೂರು: ರಾಜ್ಯದ ವಿವಿಧ ಎಸ್ಕಾಂಗಳ ವ್ಯಾಪ್ತಿಯಲ್ಲಿ 2015 ರಿಂದ ಈಚೆಗೆ ರೈತರು ಅಕ್ರಮವಾಗಿ ಅಳವಡಿಸಿದ್ದಂತ ಕೃಷಿ ಪಂಪ್ ಸೆಟ್ ವಿದ್ಯುತ್ ಸಂಪರ್ಕಗಳನ್ನು ಸಕ್ರಮಗೊಳಿಸಲು ಶುಕ್ರವಾರದಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ 2015ರಿಂದ ಈಚೆಗೆ ಅಕ್ರಮವಾಗಿ ಅಳವಡಿಕೆ ಮಾಡಿರುವ ಸುಮಾರು 2 ಲಕ್ಷ ಕೃಷಿ ಪಂಪ್ ಸೆಟ್ ಗಳ ಸಂಪರ್ಕವನ್ನು ಸಕ್ರಮಗೊಳಿಸೋದಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ರಾಜ್ಯ ಸರ್ಕಾರದಿಂದ ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸೋದಕ್ಕೆ ತಗಲುವ 6,099 ಕೋಟಿ ವೆಚ್ಚಕ್ಕೆ ಘಟನೋತ್ತರ ಅನುದಾನ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಸೋಲಾರ್ ಪಂಪ್ ಸೆಟ್ ಹಾಕಿದ್ರೆ ಸಹಾಯ ಧನ

ವಿದ್ಯುತ್ ಮಾರ್ಗದಿಂದ 500 ಮೀಟರ್ ದೂರದಲ್ಲಿರುವ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ನೀಡುವ ಬದಲು ಸ್ಟ್ಯಾಂಡ್ ಅಲೋನ್ ಸೋಲಾರ್ ಘಟಕ ಅಳವಡಿಸುವ ಕುಸುಮ್ -ಬಿ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದ್ದು, ಘಟಕ ವೆಚ್ಚದ ಶೇಕಡ 50ರಷ್ಟು ರಾಜ್ಯ ಸರ್ಕಾರ, ಶೇಕಡ 20ರಷ್ಟು ಫಲಾನುಭವಿ, ಶೇಕಡ 30ರಷ್ಟು ಕೇಂದ್ರ ಸರ್ಕಾರದಿಂದ ಭರಿಸಲಾಗುವುದು. ಸೋಲಾರ್ ನಿಂದ ವಿದ್ಯುತ್ ಪಡೆದು ಕೃಷಿ ಪಂಪ್ಪೆಟ್ ನಡೆಸಬಹುದಾಗಿದೆ ಎಂದು ಹೇಳಲಾಗಿದೆ.

Categories
ತೀರ್ಥಹಳ್ಳಿ

ಸರ್ವಿಸ್ ಸೆಂಟರ್ ಒಳಗೆ ಬಂದ ನಾಗರಹಾವು!

ಸರ್ವಿಸ್ ಸೆಂಟರ್ ಒಳಗೆ ಬಂದ ನಾಗರಹಾವು!
– ತೀರ್ಥಹಳ್ಳಿ ಶೃತಿ ಮೋಟರ್ಸ್ ಸರ್ವಿಸ್ ಸೆಂಟರ್
– 3 ಅಡಿ ಉದ್ದದ ನಾಗರಹಾವು ಹಿಡಿದ ಶೌರ್ಯ ತಂಡ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಬಾಳೆಬೈಲಿನಲ್ಲಿರುವ ಶೃತಿ ಮೋಟರ್ಸ್ ಸರ್ವಿಸ್ ಸೆಂಟರ್ ಒಳಗೆ ನಾಗರ ಹಾವೊಂದು ಬಂದಿದ್ದ ಘಟನೆ ಶನಿವಾರ ನಡೆದಿದೆ. ಹಾವು ಕಂಡ ಸಿಬ್ಬಂದಿ ತಕ್ಷಣ ಕೈಮರ ಚಂದ್ರು ಮತ್ತು ಶೌರ್ಯ ತಂಡಕ್ಕೆ ಮಾಹಿತಿ ನೀಡಿದ್ದು ಅವರು ಆಗಮಿಸಿ 3 ಅಡಿ ಉದ್ದದ ನಾಗರ ಹಾವು ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ಶೋ ರೂಂ ಅಲ್ಲಿ ಬಂದ ಹಾವು ಕೆಲ ಕಾಲ ಆತಂಕ ಸೃಷ್ಟಿ ಮಾಡಿತ್ತು. ಸ್ಥಳೀಯರು ಅಚ್ಚರಿಯಿಂದ ಹಾವು ಹಿಡಿಯೋದನ್ನು ವೀಕ್ಷಿಸಿದರು.

Categories
ತೀರ್ಥಹಳ್ಳಿ

ಜಲ ಜೀವನ್ ಮಿಷನ್ ಯೋಜನೆಯಿಂದ ತೊಂದರೆ ಇಲ್ಲ

– ಜಲ ಜೀವನ್ ಮಿಷನ್ ಯೋಜನೆಯಿಂದ ತೊಂದರೆ ಇಲ್ಲ
– ಜನಸಾಮಾನ್ಯರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಯೋಜನೆ: ಆರಗ ಜ್ಞಾನೇಂದ್ರ
– 36 ಗ್ರಾಮ ಪಂಚಾಯತ್ ಜನರಿಗೆ ಅನುಕೂಲ, ಯಾವುದೇ ರೈತರಿಗೆ ತೊಂದರೆ ಆಗಲು ಬಿಡುವುದಿಲ್ಲ

NAMMUR EXPRESS NEWS
ತೀರ್ಥಹಳ್ಳಿ: ಜನರನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆಗಳಲ್ಲಿ ಒಂದು ನೀರಿನ ಸಮಸ್ಯೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹಲವು ಕಡೆಗಳಲ್ಲಿ ಶುದ್ಧವಾದ ಕುಡಿಯುವ ನೀರನ್ನು ಪಡೆಯುವುದಕ್ಕೆ ಪರದಾಡುವಂತಹ ಪರಿಸ್ಥಿತಿ ಇದೆ. ಇಂತಹ ಸಮಸ್ಯೆಯಿಂದ ಜನರನ್ನು ಹೊರ ತರುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದ ಮಹತ್ವಾಕಾಂಕ್ಷೆಯ ಯೋಜನೆಯೇ ಜಲ ಜೀವನ್ ಮಿಷನ್ ಯೋಜನೆ ಜಾರಿಗೆ ತಂದಿದೆ. ತೀರ್ಥಹಳ್ಳಿ ತಾಲೂಕಲ್ಲಿ ಈ ಯೋಜನೆ ಜಾರಿಗೆ ಈಗಾಗಲೇ ಯೋಜನೆ ಮಾಡಲಾಗಿದೆ. ಈ ಯೋಜನೆಯಿಂದ ಯಾರಿಗೂ ತೊಂದರೆ ಆಗುವುದಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೆ ಶುದ್ಧ, ಸುರಕ್ಷಿತ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಜಾರಿಗೆ ತಂದ ಈ ಯೋಜನೆ ಕರ್ನಾಟಕದಲ್ಲೂ ಸಾಕಷ್ಟು ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಬವಣೆ ನೀಗಿಸಿದೆ.

ಜಲಜೀವನ್ ಮಿಷನ್ ಅನ್ನು 344 ಕೋಟಿ ವೆಚ್ಚದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗಿದೆ. ಕುಡಿಯುವ ನೀರಿನ ಯೋಜನೆ ಈ ತಾಲೂಕಿನ ಬಡವರು, ದಲಿತರು ಹಾಗೂ ಜನಸಾಮಾನ್ಯರಿಗೆ ಒಂದು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಯೋಜನೆಯಾಗಿದೆ. ಪ್ರತಿಯೊಬ್ಬರಿಗೂ 55 ಲೀ ಪ್ರಕಾರ ಒಂದು ಲಕ್ಷದ ಮೂವತ್ತು ಸಾವಿರ ಜನರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ದೊರೆಯುತ್ತದೆ. ಈ ಯೋಜನೆಯಿಂದ ಯಾರಿಗೂ ತೊಂದರೆ ಆಗಬಾರದು. ತೊಂದರೆ ಆಗಲು ಬಿಡುವುದಿಲ್ಲ ಎಂದರು.

286 ಟ್ಯಾಂಕ್ ಗಳಿದ್ದು, 36 ಗ್ರಾಮ ಪಂಚಾಯಿತಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಯೋಜನೆಯಾಗಿದೆ. ಈಗ ನೀರು ಎತ್ತುವ ಸ್ಥಳದಲ್ಲಿ 150ಹೆಚ್ ಪಿ ಮೋಟರನ್ನು ಹಾಕುತ್ತಿದ್ದೇವೆ ಎಂದು ಹೇಳಿದರು.75 ಎಚ್ ಪಿ ಮೂರು ಮೋಟರ್ ಗಳು ಇದ್ದು ಎರಡು ಮಾತ್ರ ವರ್ಕ್ ಆಗುತ್ತದೆ. ಅಲ್ಲಿಂದ ಎತ್ತಿ ನೀರು ಅತ್ಯಂತ ಶುದ್ಧವಾಗಿರಬೇಕು ಎಂದು ಶುದ್ದಿಕರಣ ಘಟಕದಿಂದ ಶುದ್ಧೀಕರಣಗೊಳ್ಳುತ್ತದೆ. ಎಲ್ಲೂ ಕೂಡ ಮ್ಯಾನ್ ಪವರ್ ನಿಂದ ವಾಲ್ ಅನ್ನು ಆಪರೇಟ್ ಮಾಡುವುದಿಲ್ಲ ಎಲ್ಲದಕ್ಕೂ ಸೆನ್ಸರ್ ಪೈಪನ್ನು ಅಳವಡಿಸಲಾಗಿರುತ್ತದೆ. ಇದರಿಂದ ಯಾರಿಗೂ ಆತಂಕ ಬೇಡ ಎಂದು ಮಾಹಿತಿ ನೀಡಿದರು.

ಕಾರ್ಯಪಾಲಕ ಇಂಜಿನಿಯರ್ ರಾಮ ಸುಂದರ್, ಬಾಳೆಬೈಲು ರಾಘವೇಂದ್ರ, ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಸಾಲೆಕೊಪ್ಪ ರಾಮಚಂದ್ರ, ತಾಲೂಕು ಪ್ರದಾನ ಕಾರ್ಯದರ್ಶಿ ಬೇಗೂವಳ್ಳಿ ಕವಿರಾಜ್, ಬಿಜೆಪಿ ಮೋರ್ಚಾದ ಅಧ್ಯಕ್ಷರಾದ ಮಂಜುನಾಥ್, ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟದ ಅಧ್ಯಕ್ಷರಾದ ಅನಿಲ್, ಪಂಚಾಯಿತಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಡ್ಯಾಮ್ ಕಟ್ಟಲ್ಲ… ರೈತರ ಮೋಟಾರ್ ಎತ್ತಿಸಲ್ಲ…!

ಕುಡಿಯುವ ನೀರಿನ ಯೋಜನೆಗಾಗಿ ಯಾವುದೇ ಡ್ಯಾಮ್ ಕಟ್ಟಲ್ಲ. ಈ ಬಗ್ಗೆ ಸುಳ್ಳು ಮಾಹಿತಿ ಹಬ್ಬಿಸಲಾಗುತ್ತಿದೆ. ಈ ಯೋಜನೆ ವಿರುದ್ಧ ಹೋರಾಟ ಮಾಡುವವರಿಗೂ ನಾವು ಮಾಹಿತಿ ನೀಡಿದ್ದೇವೆ. ಒಂದು ವೇಳೆ ತಾಲೂಕಿನ 36 ಗ್ರಾಮ ಪಂಚಾಯತ್ ಜನರು ನಮಗೆ ಕುಡಿಯುವ ನೀರು ಬೇಡ ಎಂದರೆ ನಾನು ಈ ಯೋಜನೆ ಮುಂದುವರಿಸುವುದಿಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಇಂದು ಮೂರು ಮುತ್ತು ತಂಡದ ನಾಟಕ!

ತೀರ್ಥಹಳ್ಳಿಯಲ್ಲಿ ಇಂದು ಮೂರು ಮುತ್ತು ತಂಡದ ನಾಟಕ!
– ತೀರ್ಥಹಳ್ಳಿ ಬಸ್ ಸ್ಟಾಂಡ್ ಗಣಪತಿಯ ವಿಭಿನ್ನ ಕಾರ್ಯಕ್ರಮ: 20 ನೇ ವರ್ಷದ ಗಣೇಶೋತ್ಸವ
– ಸಂಜೆ 7ಕ್ಕೆ ಕಾರ್ಯಕ್ರಮ: ಸರ್ವರಿಗೂ ಸ್ವಾಗತ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಸೆ.23ರಂದು ಸಂಜೆ ಮೂರು ಮುತ್ತು ತಂಡದ ನಾಟಕ ಪ್ರದರ್ಶನಗೊಳ್ಳಲಿದೆ.
ತೀರ್ಥಹಳ್ಳಿ ಬಸ್ ಸ್ಟಾಂಡ್ ಗಣಪತಿಯ ವಿಭಿನ್ನ ಕಾರ್ಯಕ್ರಮ ಸಂಜೆ 7ಕ್ಕೆ ಶುರುವಾಗಳಿದೆ. ಸಂಜೆ 7-00 ಗಂಟೆಗೆ ರೂಪಕಲಾ (ಕುಳ್ಳಪ್ಪು), ಕುಂದಾಪುರ, ಮೂರುಮುತ್ತುಗಳು ಕಲಾವಿದರಿಂದ ”ಮಂಜ ಪಾಸ್ ಆದ್ಯಾ ??!” ಹಾಸ್ಯ ನಗೆ ನಾಟಕ ಗಮನ ಸೆಳೆಯಲಿದೆ. ಕರ್ನಾಟಕದ ಖ್ಯಾತ ತಂಡದ ಈ ನಾಟಕ ಜನರನ್ನು ನಗೆ ಕಡಲಲ್ಲಿ ಮುಳುಗಿಸಲಿದೆ.

20 ನೇ ವರ್ಷದ ಗಣೇಶೋತ್ಸವ ಆಚರಣೆ

ತೀರ್ಥಹಳ್ಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ,ಬಸ್‌ಸ್ಟ್ಯಾಂಡ್ ಬಳಗ ತೀರ್ಥಹಳ್ಳಿ ಇದರ 20ನೇ ವರ್ಷದ ಅದ್ದೂರಿ ಗಣೇಶೋತ್ಸವ ನಡೆಯುತ್ತಿದೆ. ಅಧ್ಯಕ್ಷರಾಗಿ ಜ್ಞಾನೇಂದ್ರ ಸರಳ ಹಾಗೂ ಕಾರ್ಯದರ್ಶಿಯಾಗಿ ಹರೀಶ್‌ ಹೊನ್ನಾಸ್‌ ಗದ್ದೆ ಈ ಭಾರೀ ಭರ್ಜರಿ ಕಾರ್ಯಕ್ರಮ ಮಾಡಿದ್ದಾರೆ. ಅಚ್ಚುಕಟ್ಟಾಗಿ ವಿದ್ಯುತ್ ಅಲಂಕಾರ, ಕಾರ್ಯಕ್ರಮ ಗಮನ ಸೆಳೆದಿವೆ

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಕರವೇಯಿಂದಲೂ ಕಾವೇರಿ ಹೋರಾಟ

ತೀರ್ಥಹಳ್ಳಿ ಕರವೇಯಿಂದಲೂ ಕಾವೇರಿ ಹೋರಾಟ
– ಸೆ.25ಕ್ಕೆ ತೀರ್ಥಹಳ್ಳಿ ತಾಲೂಕು ಕಚೇರಿ ಮುತ್ತಿಗೆ
– ಸರ್ವರನ್ನು ಹೋರಾಟಕ್ಕೆ ಸ್ವಾಗತಿಸಿದ ತೀರ್ಥಹಳ್ಳಿ ಕರವೇ ಅಧ್ಯಕ್ಷ ಸುರೇಂದ್ರ ಯಡೂರು

NAMMUR EXPRESS NEWS
ತೀರ್ಥಹಳ್ಳಿ: ಕಾವೇರಿ ನೀರು ತಮಿಳುನಾಡಿಗೆ ಬಿಡುವ ತೀರ್ಮಾನ ಖಂಡಿಸಿ ಸೆ.25ನೇ ತಾರೀಕು ಸೋಮವಾರ ಬೆಳಿಗ್ಗೆ 10 ಗಂಟೆಗೆ ತೀರ್ಥಹಳ್ಳಿ ಕರವೇ ವತಿಯಿಂದ ತೀರ್ಥಹಳ್ಳಿ ತಾಲೂಕು ಕಚೇರಿ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾವೇರಿ ನೀರಿನ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಾಜಕೀಯ ಒತ್ತಡದ ಕಾರಣ ರೈತರು ಜನಸಾಮಾನ್ಯರು ತೊಂದರೆಗೆ ಸಿಲುಕುತ್ತಿದ್ದಾರೆ. ಹಾಗಾಗಿ ಅವೈಜ್ಞಾನಿಕ ಆದೇಶ ನೀಡಿರುವ ಕಾವೇರಿ ನೀರು ಪ್ರಾಧಿಕಾರ ಹಾಗೂ ನೀರು ನಿರ್ವಹಣಾ ಪ್ರಾಧಿಕಾರ ರದ್ದುಗೊಳಿಸಿ ವಿಶೇಷ ಅಧಿಕಾರವುಳ್ಳ ಸ್ವತಂತ್ರ ಸಮಿತಿ ರಚನೆಗೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿಗೆ ಒತ್ತಾಯಿಸುವುದು ಮತ್ತು ತಮಿಳುನಾಡಿಗೆ ನೀರು ಹರಿಸುವ ಪ್ರಾಧಿಕಾರದ ಆದೇಶವನ್ನು ಪಾಲಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು.

ಪ್ರಸ್ತುತ ರಾಜ್ಯದ ಮುಕ್ಕಾಲು ಭಾಗ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ ಕಾವೇರಿಯಲ್ಲಿ ನಮಗೆ ಸಾಕಾಗುವಷ್ಟು ನಮ್ಮ ಬೆಳೆಗೆ ಸಾಕಾಗುವಷ್ಟು ನೀರು ಇಲ್ಲದೆ ಇರುವುದರಿಂದ ಇದು ಅವೈಜ್ಞಾನಿಕ. ಯಾವ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಈ ಎಲ್ಲ ವಿಚಾರಗಳನ್ನು ಇಟ್ಟುಕೊಂಡು ಕರವೇ ತೀರ್ಥಹಳ್ಳಿ ತಾಲೂಕು ಅಧ್ಯಕ್ಷ ಸುರೇಂದ್ರ ಅವರ ನೇತೃತ್ವದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ವೆಂಕಟೇಶ ಹೆಗಡೆ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ. ಈ ಪ್ರತಿಭಟನಿಗೆ ಎಲ್ಲಾ ಕರವೇ ಕಾರ್ಯಕರ್ತರು ಮತ್ತು ಮುಖಂಡರುಗಳು ರೈತ ಬಾಂಧವರು ಭಾಗವಹಿಸಬೇಕಾಗಿ ಕರವೇ ತೀರ್ಥಹಳ್ಳಿ ತಾಲೂಕು ಘಟಕದ ಪ್ರಕಟಣೆಯಲ್ಲಿ ತಿಳಿಸಲಾಗಿದೆ

Categories
ಚಿಕ್ಕಮಗಳೂರು

ಕಾಪಿ ನಾಡಲ್ಲಿ ಆನೆ ಹಾವಳಿ ತಡೆಗೆ ಬೇಕು ಆನೆ ಸರ್ವೇ!

ಕಾಪಿ ನಾಡಲ್ಲಿ ಆನೆ ಹಾವಳಿ ತಡೆಗೆ ಬೇಕು ಆನೆ ಸರ್ವೇ!
– ಭದ್ರಾ ಎಕೊ ಕನ್ಸರ್ವೇಷನ್ ಫೌಂಡೇಷನ್ ಅಗ್ರಹ
– ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆ ಉಪಟಳ ಹೆಚ್ಚಳ

NAMMUR EXPRESS NEWS
ಚಿಕ್ಕಮಗಳೂರು: ಆನೆ-ಮಾನವ ಸಂಘರ್ಷ ತಡೆಗಟ್ಟಲು ವೈಜ್ಞಾನಿಕವಾಗಿ ಅನೆಗಳ ಗಣತಿ ಕಾರ್ಯ ಅಗತ್ಯವಿದೆ ಎಂದು ಭದ್ರಾ ಎಕೊ ಕನ್ಸರ್ವೇಷನ್ ಫೌಂಡೇಷನ್ ಮುಖ್ಯಸ್ಥ ಎಸ್.ಆರ್.ಶಿವಪ್ರಸಾದ್‌ ಹೇದ್ದಾರೆ. ದೇಶದಲ್ಲಿ ಅನೆಗಳ ಸಂತತಿ ಹೆಚ್ಚುತ್ತಿದೆ. ಪಶ್ಚಿಮ ಘಟ್ಟಗಳ ಸಾಲಿನ ಜಿಲ್ಲೆಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದ್ದು, ಜನ ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸರ್ಕಾರ ಕೃತಕ ಬುದ್ಧಿಮತೆ ಆಧಾರಿತ ಅನೆಗಳ ಗಣತಿ ಕಾರ್ಯ ಕೈಗೊಳ್ಳಬೇಕು. ಈ ಮೂಲಕ ಅವುಗಳ ದೇಹ ಚರ್ಯೆ, ಸೊಂಡಿಲು, ದೇಹದ ಸುಕ್ಕು ಮೊದಲಾದ ದತ್ತಾಂಶಗಳನ್ನು ಸಂಗ್ರಹಿಸಿ, ಉಪಟಳ ನೀಡುವ ಕಾಡಾನೆಗಳ ಸ್ಥಳಾಂತರಕ್ಕೆ ಸರ್ಕಾರ ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಕಾಡಂಚಿನ ಭಾಗದಲ್ಲಿ ಕಾಡಾನೆಗಳ ನಿಯಂತ್ರಣಕ್ಕೆ ಸರ್ಕಾರ ಅಗತ್ಯ ಕ್ರಮ ವಹಿಸಬೇಕು. ಅರಣ್ಯ ಇಲಾಖೆ ಪ್ರತ್ಯೇಕ ಆನೆ ಪಥಗಳನ್ನು ನಿರ್ಮಿಸಿ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಆನೆಗಳ ಗಣತಿಯಿಂದಾಗಿ ಸಮಗ್ರ ಮಾಹಿತಿ ದೊರೆಯುವುದರ ಜತೆಗೆ ಸಂಶೋಧನೆಗೂ ಸಹಕಾರಿಯಾಗಲಿದೆ ಎಂದರು. ಗೋಷ್ಠಿಯಲ್ಲಿ ಸಿ.ಇ.ರಂಗನಾಥ್ ಇದ್ದರು.

Categories
ಕರಾವಳಿ ರಾಜ್ಯ

ಕರಾವಳಿ ಕಂಬಳ ಸಂಭ್ರಮ!

ಕರಾವಳಿ ಕಂಬಳ ಸಂಭ್ರಮ!
– ಉಡುಪಿ, ದಕ್ಷಿಣ ಕನ್ನಡ ಕಾಸರಗೋಡು ಜಿಲ್ಲೆಯ ದಿನಾಂಕ ಪ್ರಕಟ
– ರಾಜಧಾನಿಯಲ್ಲೂ ಈ ಬಾರಿ ಕಂಬಳ ಸಡಗರ!

NAMMUR EXPRESS NEWS
ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ನಡೆಯಲಿರುವ ದೇವಿಪ್ರಸಾದ್ ಶೆಟ್ಟಿ ಬೆಳಪು ಕಂಬಳಗಳ ದಿನಾಂಕವನ್ನು ಜಕಂಬಳ ಸಮಿತಿಯ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಅವರು ಬಿಡುಗಡೆ ಮಾಡಿದ್ದು, ಯಾವತ್ತು ಎಲ್ಲೆಲ್ಲಿ ಕಂಬಳ ಇದೆ. ಇಲ್ಲಿದೆ ವಿವರ.

ದಿನಾಂಕ ಸ್ಥಳ
ನ. 11 – ಸುರತ್ಕಲ್.
ನ. 18 – ಕಕ್ಕೆಪದವು.
ನ. 25 – ಬೆಂಗಳೂರು ಕಂಬಳ
ಡಿ.2 – ಮೂಡುಬಿದಿರೆ
ಡಿ. 17 – ನರಿಂಗಾನ
ಡಿ. 24 – ಮೂಲ್ಕಿ
ಡಿ. 30 – ಮಂಗಳೂರು
ಜ. 6 – ಮೀಯಾರು
ಜ. 7 – ಬಳ್ಳಮಂಜ
ಜ. 13 – ಹೊಕ್ಕಾಡಿಗೋಳಿ
ಜ. 20 – ಅಡ್ವ
ಜ. 27 – ಪುತ್ತೂರು
ಫೆ. 3 – ಐಕಳ
ಫೆ. 17 – ವಾಮಂಜೂರು
ಫೆ. 24 – ಕಟಪಾಡಿ
ಮಾ. 2 – ಬಂಟ್ವಾಳ
ಮಾ. 9 – ಬಂಗಾಡಿ
ಮಾ. 23 – ಉಪ್ಪಿನಂಗಡಿ
ಮಾ. 30 – ಪಣಪಿಲ
ಎ. 6 – ಬಳ್ಳುಂಜೆ
ಎ. 13 – ಗುರುಪುರ

ರಾಜಧಾನಿಯಲ್ಲಿ ಮೊದಲ ಬಾರಿಗೆ ಕಂಬಳಕ್ಕೆ ಸಜ್ಜು

ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಈಗಾಗಲೇ ಸಿದ್ದತೆಗಳು ಆರಂಭವಾಗಿದ್ದು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದ ನಿಯೋಗ ಅರಮನೆ ಮೈದಾನದಲ್ಲಿ ಕರೆ ನಿರ್ಮಾಣ ಮಾಡಬೇಕಾದ ಸ್ಥಳವನ್ನು ವೀಕ್ಷಣೆ ಮಾಡಿದರು. ತುಳುನಾಡಿನ ಜನಪದ ಕಲೆಯಾದ ಕಂಬಳವು ಈ ಬಾರಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಆಯೋಜನೆ ಮಾಡಲಾಗುತ್ತಿದೆ. ಬೆಂಗಳೂರು ಜನತೆ ಸೇರಿದಂತೆ ಹಲವು ಕಡೆಗಳಿಂದ ಜನತೆ ಆಗಮಿಸಲಿದ್ದಾರೆ . ಕಂಬಳವನ್ನು ಆಯೋಜನೆ ಮಾಡುವ ಮೂಲಕ ಅಶೋಕ್ ಕುಮಾರ್ ರೈಯವರು ಈ ಬಾರಿ ರಾಜ್ಯದ ರಾಜಧಾನಿಯಲ್ಲೇ ತುಳುನಾಡಿನ ಜನಪದ ಕಲೆಯನ್ನು ಜಗತ್ತಿಗೆ ಪರಿಚಯಿಸಲು ಮುಂದಾಗಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕರಾದ ಗುರುಕಿರಣ್, ಬೆಂಗಳೂರು ತುಳು ಒಕ್ಕೂಟದ ಅಧ್ಯಕ್ಷರಾದ ಸುಂದರ್‌ರಾಜ್ ರೈ, ಉದ್ಯಮಿಗಳಾದ ಗುಣರಂಜನ್ ಶೆಟ್ಟಿ, ಬೆಂಗಳೂರು ಲಿಕ್ಕರ್ ಅಸೋಶಿಯೇಶನ್ ಉಪಾಧ್ಯಕ್ಷರಾದ ಕರುಣಾಕರ್ ಹೆಗ್ಡೆ, ಅಕ್ಷಯರೈ ದಂಬೆಕಾನ, ಉಮಾನಾಥ ಶೆಟ್ಟಿ ಪೆರ್ನೆ, ಮುರಳೀಧರ್ ರೈ ಮಠಂತಬೆಟ್ಟು, ರಾಜ್‌ಕುಮಾರ್ ರೈ, ರಾಕೇಶ್ ರೈ, ಪ್ರಶಾಂತ್ ರೈ ಕೈಕಾರ, ಮಂಜುನಾಥ ಕನ್ಯಾಡಿ, ಕರುಣಾಕರ ಸಾಮಾನಿ, ಶರತ್ , ರಾಜೇಶ್ ಶೆಟ್ಟಿ ಕೋಡಿಂಬಾಡಿ, ಯತೀಶ್ ಕನಕಪುರ, ಆದರ್ಶ ಶೆಟ್ಟಿ, ಅಶ್ವಿನ್ ಪೂಜಾರಿ , ದೀಕ್ಷಿತ್ ರ ಮೊದಲಾದವರು ಉಪಸ್ಥಿತರಿದ್ದರು.

Categories
ಉದ್ಯೋಗ ಸುದ್ದಿ

ಇಸಿಐಎಲ್‌ನಲ್ಲಿ ಐಟಿಐ ಅಭ್ಯರ್ಥಿಗಳಿಗೆ ಉದ್ಯೋಗ

ಇಸಿಐಎಲ್‌ನಲ್ಲಿ ಐಟಿಐ ಅಭ್ಯರ್ಥಿಗಳಿಗೆ ಉದ್ಯೋಗ
– ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ
– ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 10.10.2023

NAMMUR EXPRESS NEWS
ಬೆಂಗಳೂರು: ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಇಸಿಐಎಲ್) ಸಂಸ್ಥೆಯು ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಅಭ್ಯರ್ಥಿಗಳು ಇಲ್ಲಿ ನೀಡಲಾದ ಮಾಹಿತಿಗಳ ಅನ್ವಯ ಅರ್ಜಿ ಸಲ್ಲಿಸಬಹುದು.

ವಿಭಾಗವಾರು ಹುದ್ದೆಗಳು:
ಇಎಂ 190, ಎಲೆಕ್ಟ್ರಿಷಿಯನ್ 80, ಫಿಟ್ಟರ್ 80, ಟರ್ನರ್ 20
ಮೆಕ್ಯಾನಿಸ್ಟ್ 15, ಮೆಕ್ಯಾನಿಸ್ಟ್ (ಜಿ) 10, ಕೋಪಾ 40, ವೆಲ್ಡರ್ 25
ಪೈಂಟರ್ 4, ಇತರೆ 20
ಅರ್ಜಿ ಸಲ್ಲಿಕೆ ವಿಧಾನ: ಇಸಿಐಎಲ್‌ನ ವೆಬ್‌ಸೈಟ್‌ಗೆ ಲಾಗಿನ್ ಮಾಡಿಕೊಂಡು ಅರ್ಜಿ ವಿಭಾಗದಲ್ಲಿ ಕ್ಲಿಕ್ಕಿಸಬೇಕು
ಆನ್‌ಲೈನ್ ನಮೂನೆಯ ಅರ್ಜಿ ದೊರೆಯಲಿದ್ದು, ಭರ್ತಿ ಮಾಡಿ ಅದೇ ವೆಬ್‌ಸೈಟ್‌ನಲ್ಲಿ ಕಳುಹಿಸಬೇಕು
ಅರ್ಹತೆಗಳೇನೇನು?:
ವಿದ್ಯಾರ್ಹತೆ: ಅಭ್ಯರ್ಥಿ ಐಟಿಐ ತೇರ್ಗಡೆಯಾಗಿರಬೇಕು. ಜತೆಗೆ ಎನ್‌ಸಿವಿಟಿ ಪ್ರಮಾಣ ಪತ್ರ ಇರಬೇಕಿದ್ದು, ಅರ್ಜಿ ಸಲ್ಲಿಕೆ ವೇಳೆ ದಾಖಲೆಗಳ ಜತೆಗೆ ಸಲ್ಲಿಸಬೇಕು.
ವಯೋಮಿತಿ: 18 ವರ್ಷ ಪೂರೈಸಿದ ಎಲ್ಲ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಾಮಾನ್ಯ ವರ್ಗದ ಅಭ್ಯರ್ಥಿಗೆ ಗರಿಷ್ಠ 25 ವರ್ಷ, ಒಬಿಸಿಗಳಿಗೆ 28 ವರ್ಷ, ಎಸ್ಸಿ/ ಎಸ್ಟಿಗಳಿಗೆ 30 ವರ್ಷ ಗರಿಷ್ಠ ವಯೋಮಿತಿಯಾಗಿದೆ.

ಆಯ್ಕೆ ಹೇಗೆ?:
– ಅಭ್ಯರ್ಥಿಗಳ ಆಯ್ಕೆಯು ಪ್ರಮುಖವಾಗಿ ಐಟಿಐ ಅಂಕಗಳ ಆಧಾರದಲ್ಲಿ ನಡೆಯಲಿದೆ
– ಶೇ.70 ಹುದ್ದೆಗಳನ್ನು ಸರ್ಕಾರಿ ಐಟಿಐ ಕಾಲೇಜು ಅಭ್ಯರ್ಥಿಗಳಿಗೆ ಹಾಗೂ ಶೇ.30 ಹುದ್ದೆಗಳನ್ನು ಖಾಸಗಿ ಐಟಿಐ ಕಾಲೇಜುಗಳ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.
– ಅ.16ರಿಂದ ಅ.21ವರೆಗೆ ದಾಖಲೆಗಳ ಪರಿಶೀಲನೆ ನಡೆಯಲಿದೆ. ಈ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಇಎಂ ಹುದ್ದೆಗಳಿಂದ ಕೋಪಾ ಹುದ್ದೆಗಳ ತನಕ 8,050 ರೂ., ಉಳಿದ ಎಲ್ಲ ವಿಭಾಗಗಳ ಹುದ್ದೆಗೆ ಮಾಸಿಕವಾಗಿ 7,700 ಸ್ಟೈಪೆಂಡ್ ನೀಡಲಾಗುತ್ತದೆ. ಅಪ್ರೆಂಟಿಶಿಪ್ ಅವಧಿ ಆಯ್ಕೆಯಾದ ಅಭ್ಯರ್ಥಿಗೆ ಒಂದು ವರ್ಷದ ಅವಧಿಗೆ ಅಪ್ರೆಂಟಿಶಿಪ್ ಅವಧಿ ಇರಲಿದ್ದು, ಈ ವರ್ಷದ ನವೆಂಬರ್‌ನಿಂದ ತರಬೇತಿ ಪ್ರಾರಂಭವಾಗಲಿದೆ. ಅಪ್ರೆಂಟಿಸ್‌ನ ಕಾರ್ಯಗಳು ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಾ ಕರ್ತವ್ಯಗಳನ್ನು ನಿರ್ವಹಿಸಬೇಕು. ಜತೆಗೆ ಸಂಸ್ಥೆಯ ರಕ್ಷಣಾ ಕಾರ್ಯವಿಧಾನಗಳ ಜವಾಬ್ದಾರಿಯೂ ಇವರದ್ದಾಗಿದ್ದು, ವಿವಿಧ ಅಸೈನ್‌ಮೆಂಟ್‌ಗಳಿಗಾಗಿ ಸೈಟ್‌ಗಳಿಗೆ ಭೇಟಿ ನೀಡುವುದು ಅಪ್ರೆಂಟಿಸ್‌ಗಳ ಕಾರ್ಯವಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 10.10.2023