ತೀರ್ಥಹಳ್ಳಿಯಲ್ಲಿ ಅದ್ಧೂರಿ ವಿಶ್ವಮಾನವ ದಿನಾಚರಣೆ
– ಹಾಸ್ಯ ಕಲಾವಿದ ನರಸಿಂಹ ಜೋಶಿ ನಗೆಹಬ್ಬಕ್ಕೆ ಜನ ಫಿದಾ
– ಪಟ್ಟಣ ಪಂಚಾಯತ್ ವತಿಯಿಂದ ಅಚ್ಚುಕಟ್ಟಾದ ಕಾರ್ಯಕ್ರಮ ಆಯೋಜನೆ
– ಶೇ.100 ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ, ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ, ಯುವ ಮಿತ್ರರು ತೀರ್ಥಹಳ್ಳಿ ಇವರ ಸಹಕಾರದೊಂದಿಗೆ ಶುಕ್ರವಾರ ಡಿ.29ರಂದು ತೀರ್ಥಹಳ್ಳಿ ಪಟ್ಟಣ ಪಂಚಾಯತ್ ವತಿಯಿಂದ ಸಂಭ್ರಮದಿಂದ ನಡೆಯಿತು. ಕುಶಾವತಿ ಪಾರ್ಕಿನಿಂದ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಡೊಳ್ಳು ಭಾರಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಡೊಳ್ಳು ಕುಣಿತ ಮತ್ತು ವೇಷ ಭೂಷಣದೊಂದಿಗೆ, ಗಣ್ಯರು ಸಾಹಿತ್ಯ ಮೆರವಣಿಗೆಯಲ್ಲಿ ಭಾಗವಹಿಸಿ, ಮೆರವಣಿಗೆ ಕೊಪ್ಪ ಸರ್ಕಲ್ ತಲುಪಿದ ನಂತರ ಕುವೆಂಪು ಪುತ್ತಳಿಗೆ ಪಟ್ಟಣ ಪಂಚಾಯತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿಯ ಅಧ್ಯಕ್ಷರು ಮಾಲಾರ್ಪಣೆ ಮಾಡಿದರು. ಮತ್ತೆ ಮೆರವಣಿಗೆಯು ಗೋಪಾಲಗೌಡ ರಂಗಮಂದಿರ ತಲುಪಿತು.
ತೀರ್ಥಹಳ್ಳಿ ಹಿರಿಮೆ ಬಣ್ಣನೆ ಮಾಡಿದ ಜ್ಞಾನೇಂದ್ರ
ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಕರ್ನಾಟಕ ಸಂಭ್ರಮ -50 ಮತ್ತು ವಿಶ್ವಮಾನವ ದಿನಾಚರಣೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಶಾಸಕ ಆರಗ ಜ್ಞಾನೇಂದ್ರರವರು ನೆರವೇರಿಸಿದರು.
ಪ. ಪಂ ಅಧ್ಯಕ್ಷರಾದ ಗೀತಾ ರಮೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಅರಗ ಜ್ಞಾನೇಂದ್ರ, ಇವತ್ತು ವಿಶ್ವಮಾನವ ಸಂಭ್ರಮಾಚರಣೆಯ ದಿನ ನಮ್ಮ ತಾಲೂಕು ನಮ್ಮ ನಾಡಿನ ಸಾಹಿತ್ಯ ಪ್ರಪಂಚಕ್ಕೆ ಅತ್ಯಂತ ಕೊಡುಗೆ ಕೊಟ್ಟ ತಾಲೂಕು, ಎರಡು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿರುವಂತಹ ಈ ಪುಣ್ಯ ಭೂಮಿ. ಈ ನಾಡಿಗೆ ನುಡಿಗೆ ರಾಜಕಾರಣಕ್ಕೆ ಸಾಹಿತ್ಯಕ್ಕೆ ಎಲ್ಲ ರೀತಿಯಿಂದ ಕೊಡುಗೆ ಕೊಟ್ಟವರು ತೀರ್ಥಳ್ಳಿಯವರು ಮತ್ತು ತೀರ್ಥಳ್ಳಿಯಲ್ಲಿ ಹುಟ್ಟಿದ್ದಾರೆ ಎನ್ನುವುದಕ್ಕೆ ನಮಗೆಲ್ಲ ಹೆಮ್ಮೆಎಂದರು.

ಪಟ್ಟಣ ಪಂಚಾಯ್ತಿಯ ಅಧ್ಯಕ್ಷರು ಸದಸ್ಯರು ಮತ್ತು ಅಧಿಕಾರಿಗಳ ಕಾರ್ಯಕ್ರಮದ ಆಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಚಲನಚಿತ್ರ ಸಾಹಿತಿಗಳಾದ ಕವಿರಾಜ್ ಮಾತನಾಡುತ್ತಾ, ಕುವೆಂಪು ಅವರ ಆದರ್ಶವನ್ನು ಎಲ್ಲರೂ ಪಾಲನೆ ಮಾಡುವ ಮುಖೇನ ಕುವೆಂಪು ಅವರಿಗೆ ಗೌರವ ಸೂಚಿಸಿದಂತಾಗುತ್ತದೆ. ಹಾಗೆಯೇ ಅವರು ಹಾಕಿಕೊಟ್ಟಂತ ಮಂತ್ರ ಮಾಂಗಲ್ಯದಂತಹ ಮದುವೆಗಳನ್ನು ಈ ತಾಲೂಕಿನ ಜನ ಅಳವಡಿಸಿಕೊಳ್ಳಬೇಕಾಗುತ್ತದೆ ಎಂದರು. ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಮಾತನಾಡುತ್ತಾ ಮಕ್ಕಳು ಈಗಾಗಲೇ ಒಳ್ಳೆ ಒಳ್ಳೆಯ ಕನ್ನಡ ಹಾಡಿದ್ದೀರಿ, ಆದರೆ ಕನ್ನಡಕ್ಕೆ ಸಂಕಷ್ಟ ಬಂದಿದೆ. ಮುಂದೆ ಕೆಲವರ್ಷಗಳ ನಂತರ ಕನ್ನಡ ಉಳಿಯುವ ಬಗ್ಗೆ ಅನುಮಾನ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮದ ಝಲಕ್…..!
ದೂರದರ್ಶನದ ಪ್ರಖ್ಯಾತ ಹಾಸ್ಯ ಕಲಾವಿದ ನರಸಿಂಹ ಜೋಶಿಯವರ ಹಾಸ್ಯ ರಸ ಸಂಜೆ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ನಂತರ ಆಯೋಜಕರಿಂದ ಜೋಶಿ ಅವರಿಗೆ ಸನ್ಮಾನ ಮಾಡಲಾಯಿತು. ಮತ್ತೋರ್ವ ಕಲಾವಿದ ದೂರದ ಬಾದಾಮಿ ಊರಿನಿಂದ ಬಂದ ಜೂನಿಯರ್ ರವಿಚಂದ್ರನ್, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅನುಕರಣೆ ಮಾಡಿ ಕಲಾಭಿಮಾನಿಗಳನ್ನು ರಂಜಿಸಿದರು. ಯಕ್ಷಗಾನ, ನೃತ್ಯ ಮತ್ತು ಕರುನಾಡ ನೃತ್ಯಗಳು ಹಾಗೂ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆಯಲ್ಲಿ ಜರಗಿತು.

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ಮಾಡಲಾಯಿತು. ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಗೀತಾ ರಮೇಶ್, ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷರಾದ ರೆಹಮತ್ತುಲ್ಲಾ ಅಸಾದಿ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಬಿ ಗಣಪತಿ, ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ಕುರಿಯ ಕೋಸ್ ಮತ್ತು ದತ್ತಣ್ಣ, ಸೊಪ್ಪುಗುಡ್ಡೆ ರಾಘವೇಂದ್ರ ಹಾಗೂ ಪಟ್ಟಣ ಪಂಚಾಯಿತಿಯ ಎಲ್ಲಾ ಸದಸ್ಯರು ಮತ್ತು ಪ್ರಮುಖರು ಭಾಗಿಯಾಗಿದ್ದರು.

