Categories
ಜಾತಕ

ನಿಮ್ಮ ರಾಶಿ ಫಲ ಏನೇನಿದೆ?

ನಿಮ್ಮ ರಾಶಿ ಫಲ ಏನೇನಿದೆ?
– ಯಾವ ರಾಶಿಯವರಿಗೆ ಶುಭ? ಯಾವ ರಾಶಿಯವರಿಗೆ ಅಶುಭ?

NAMMUR EXPRESS NEWS
2024 ಎಪ್ರಿಲ್ 04ರ ಗುರುವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಅಶುಭ .?

* ಮೇಷ ರಾಶಿ :
ಮನೆಯ ಹೊರಗೆ ಅನುಕೂಲಕರ ವಾತಾವರಣವಿರುತ್ತದೆ. ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುತ್ತದೆ. ಪ್ರಮುಖ ವಿಷಯಗಳಲ್ಲಿ ಪ್ರಗತಿ ಸಾಧಿಸಲಾಗುತ್ತದೆ. ಸಮಾಜದ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಪರಿಚಯಗಳು ಉಂಟಾಗುತ್ತವೆ. ವೃತ್ತಿ ಮತ್ತು ವ್ಯಾಪಾರದಲ್ಲಿ ಉತ್ಸಾಹದಾಯಕ ವಾತಾವರಣ ಇರುತ್ತದೆ. ನಿರುದ್ಯೋಗಿಗಳಿಗೆ ಒಂದು ಸುದ್ದಿ ಸಂತೋಷವನ್ನು ನೀಡುತ್ತದೆ.

* ವೃಷಭ ರಾಶಿ :
ಹಣಕಾಸಿನ ಪರಿಸ್ಥಿತಿಯಲ್ಲಿ ಹಠಾತ್ ಬದಲಾವಣೆಗಳಾಗುತ್ತವೆ. ಸಾಲದ ಪ್ರಯತ್ನಗಳು ನಿರಾಶಾದಾಯಕವಾಗಿರುತ್ತವೆ. ಕೈಗೊಂಡ ಕೆಲಸಗಳು ಮುಂದೂಡಲ್ಪಡುತ್ತವೆ. ವಿದ್ಯಾರ್ಥಿಗಳಿಗೆ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ವ್ಯಾಪಾರ ಮತ್ತು ವೃತ್ತಿಪರ ಉದ್ಯೋಗಗಳಲ್ಲಿ ಆಲೋಚನೆಗಳು ಕೂಡಿ ಬರುವುದಿಲ್ಲ. ವೆಚ್ಚವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಉತ್ತಮ.

* ಮಿಥುನ ರಾಶಿ :
ಸಾಲ ತೀರಿಸುವ ಪ್ರಯತ್ನಗಳು ಒಂದು ಹಂತಕ್ಕೆ ಬರುತ್ತವೆ. ದೀರ್ಘಕಾಲದಿಂದ ಕಾಡುತ್ತಿದ್ದ ಸಾಲದ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತವೆ. ಕೈಗೆತ್ತಿಕೊಂಡ ಕೆಲಸಗಳು ಅಡೆತಡೆಗಳ ನಡುವೆಯೂ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ವ್ಯಾಪಾರ ಉದ್ಯೋಗಗಳಲ್ಲಿ ನೀವು ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಮಾನಸಿಕ ಪ್ರಶಾಂತತೆ ದೊರೆಯುತ್ತದೆ.

* ಕಟಕ ರಾಶಿ :
ಆತ್ಮಸ್ಥೈರ್ಯದಿಂದ ದೃಢ ನಿರ್ಧಾರಗಳನ್ನು ತೆಗೆದುಕೊಂಡು ಕೈಗೊಂಡ ಕಾರ್ಯಗಳಲ್ಲಿ ಯಶಸ್ವಿಯಾಗುತ್ತೀರಿ. ಇತರರೊಂದಿಗೆ ವಿವಾದಗಳಿಂದ ಹೊರಬರುತ್ತೀರಿ. ಉದ್ಯೋಗಗಳಲ್ಲಿ ಅಧಿಕಾರಿಗಳ ಬೆಂಬಲವನ್ನು ಪಡೆಯುತ್ತೀರಿ. ನಿರುದ್ಯೋಗಿಗಳು ಅವಕಾಶವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ಸಮಾಜದಲ್ಲಿ ಗೌರವಕ್ಕೆ ಕೊರತೆ ಇರುವುದಿಲ್ಲ.

* ಸಿಂಹ ರಾಶಿ :
ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ ಮತ್ತು ದೈವಿಕ ಕಾರ್ಯಕ್ರಮಗಳನ್ನು ನೆರವೇರುಸುತ್ತೀರಿ. ವೃತ್ತಿಪರ ವ್ಯವಹಾರಗಳಲ್ಲಿ ಭವಿಷ್ಯದ ಯೋಜನೆಗಳನ್ನು ಮಾಡಲಾಗುತ್ತದೆ. ಸಮಾಜದಲ್ಲಿ ಕೀರ್ತಿ ಹೆಚ್ಚಾಗುತ್ತದೆ. ಕುಟುಂಬದ ಮುಖ್ಯಸ್ಥರ ನೆರವಿನಿಂದ ಯೋಜಿತ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಉತ್ತಮ ಆರ್ಥಿಕ ಲಾಭದ ಫಲಿತಾಂಶಗಳಿವೆ. ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ.

* ಕನ್ಯಾ ರಾಶಿ :
ಮಾನಸಿಕ ಅನಾರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ನಿಗದಿತ ಸಮಯಕ್ಕೆ ಕೆಲಸಗಳು ಪೂರ್ಣಗೊಳ್ಳದೆ ನಿರಾಸೆ ಉಂಟಾಗುತ್ತದೆ. ಇತರರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಬದಲಾಯಿಸುವುದು ಒಳ್ಳೆಯದು. ವಾಹನದಲ್ಲಿ ಪ್ರಯಾಣಿಸುವಾಗ ಜಾಗರೂಕರಾಗಿರಿ. ಉದ್ಯೋಗಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾತುಗಳನ್ನು ಕೆಳಬೇಕಾಗುತ್ತದೆ. ವ್ಯಾಪಾರ-ವ್ಯವಹಾರಗಳು ಸುಗಮವಾಗಿ ಸಾಗುತ್ತವೆ.

* ತುಲಾ ರಾಶಿ :
ಸಂಗಾತಿಯಿಂದ ಅನಿರೀಕ್ಷಿತ ಸಹಾಯ ದೊರೆಯುತ್ತದೆ. ಕೈಗೆತ್ತಿಕೊಂಡ ಕೆಲಸದಲ್ಲಿ ಕಾರ್ಯ ಸಿದ್ದತೆ ಉಂಟಾಗುತ್ತದೆ. ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ಬಂಧುಮಿತ್ರರ ಭೇಟಿ ಸಂತಸ ತರುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಇತರರೊಂದಿಗೆ ಉತ್ತಮ ಸಂಬಂಧಗಳು ರೂಪುಗೊಳ್ಳುತ್ತವೆ. ವಸ್ತು ವಾಹನ ಸೌಕರ್ಯ ಉಂಟಾಗುತ್ತದೆ.

* ವೃಶ್ಚಿಕ ರಾಶಿ :
ಧನ ಆದಾಯ ಹೆಚ್ಚಾಗುತ್ತದೆ. ನೀವು ಕೈಗೊಂಡ ಕೆಲಸದಲ್ಲಿ ಹಠಾತ್ ಯಶಸ್ಸನ್ನು ಪಡೆಯುತ್ತೀರಿ. ಹಣಕಾಸಿನ ವಿವಾದಗಳಿಂದ ದೂರವಿರಿ. ಬಂಧು ಮಿತ್ರರಿಂದ ಶುಭ ಸುದ್ದಿ ದೊರೆಯುತ್ತದೆ. ಹೊಸ ವಾಹನ ಖರೀದಿಸಲಾಗುತ್ತದೆ. ವೃತ್ತಿ ಮತ್ತು ವ್ಯಾಪಾರ ತೃಪ್ತಿಕರವಾಗಿ ಸಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಹೆಚ್ಚಾಗುತ್ತದೆ.

* ಧನುಸ್ಸು ರಾಶಿ :
ಮಕ್ಕಳ ಆರೋಗ್ಯ ಸಮಸ್ಯೆಗಳು ಭಾವನಾತ್ಮಕವಾಗಿ ನೋವುಂಟುಮಾಡುತ್ತವೆ. ವೃತ್ತಿಪರ ವ್ಯವಹಾರದಲ್ಲಿ ಅಸ್ಥಿರ ಆಲೋಚನೆಗಳಿಂದ ನಷ್ಟಗಳು ಉಂಟಾಗುತ್ತವೆ. ಅನಿವಾರ್ಯವಾಗಿ ಇತರರೊಂದಿಗೆ ವಿವಾದಗಳು ಉಂಟಾಗುತ್ತವೆ. ಉದ್ಯೋಗದಲ್ಲಿ ಅಮೂಲ್ಯವಾದ ದಾಖಲೆಗಳೊಂದಿಗೆ ಜಾಗರೂಕರಾಗಿರಿ. ವೆಚ್ಚವನ್ನು ನಿಯಂತ್ರಿಸಲು ಕಷ್ಟವಾಗಬಹುದು.

* ಮಕರ ರಾಶಿ :
ಧೈರ್ಯ ಸಾಹಸದಿಂದ ಉದ್ಯಮಗಳಲ್ಲಿ ಮುನ್ನಡೆಯುತ್ತೀರಿ. ವೃತ್ತಿಪರ ವ್ಯವಹಾರಗಳಲ್ಲಿ ಆತ್ಮವಿಶ್ವಾಸದ ನಿರ್ಧಾರಗಳನ್ನು ತೆಗೆದುಕೊಂಡು ಲಾಭವನ್ನು ಪಡೆಯುತ್ತೀರಿ. ಎಲ್ಲಾ ಕಡೆಯಿಂದ ಒಳ್ಳೆಯದೇ ಆಗುತ್ತದೆ. ಆದಾಯದ ಮಾರ್ಗಗಳು ಹೆಚ್ಚಾಗುತ್ತವೆ. ಹೊಸ ವಸ್ತ್ರ, ಆಭರಣ ಖರೀದಿಸಲಾಗುತ್ತದೆ. ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಬೆಂಬಲ ದೊರೆಯುತ್ತದೆ.

* ಕುಂಭ ರಾಶಿ :
ವೃತ್ತಿಪರ ಉದ್ಯೋಗಗಳಲ್ಲಿನ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲಾಗುತ್ತದೆ. ಆರ್ಥಿಕ ತೊಂದರೆಗಳು ದೂರವಾಗುತ್ತವೆ. ಸ್ನೇಹಿತರೊಂದಿಗಿನ ವಿವಾದಗಳು ಬಗೆಹರಿಯುತ್ತವೆ. ಕೌಟುಂಬಿಕ ವಾತಾವರಣ ಸಂತಸದಿಂದ ಕೂಡಿರುತ್ತದೆ. ಹಠಾತ್ ಧನ ಲಾಭ ಉಂಟಾಗುತ್ತದೆ. ಸಾಲದ ಸಮಸ್ಯೆಗಳಿಂದ ಹೊರಬರುತ್ತೀರಿ. ನಿರುದ್ಯೋಗಿಗಳಿಗೆ ಉದ್ಯೋಗ ಯೋಗವಿದೆ.

* ಮೀನ ರಾಶಿ :
ಮನೆಯ ಹೊರಗೆ ಒತ್ತಡಗಳು ಹೆಚ್ಚಾಗುತ್ತವೆ. ದೈವಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ದೂರ ಪ್ರಯಾಣದಿಂದ ಆಯಾಸ ಉಂಟಾಗುತ್ತದೆ. ಉದರ ಸಂಬಂಧಿತ ಅನಾರೋಗ್ಯ ಸೂಚನೆಗಳಿವೆ . ಕುಟುಂಬ ಸದಸ್ಯರೊಂದಿಗೆ ಸ್ವಲ್ಪ ಭಿನ್ನಾಭಿಪ್ರಾಯಗಳಿರುತ್ತವೆ. ವೃತ್ತಿ ಮತ್ತು ವ್ಯಾಪಾರ ನಿಧಾನವಾಗಿ ಸಾಗುತ್ತದೆ. ಖರ್ಚು ವೆಚ್ಚಗಳು ಹೆಚ್ಚಾಗುತ್ತವೆ.

Categories
ರಾಜ್ಯ

ಇಂದಿನಿಂದ ಮಳೆ!

ಇಂದಿನಿಂದ ಮಳೆ!
– ಮುಂದಿನ 5 ದಿನಗಳ ಕಾಲ ತಂಪೆರೆಯುವ ವರುಣ
– ಹವಾಮಾನ ಇಲಾಖೆ ಮಾಹಿತಿ: ಎಲ್ಲೆಲ್ಲಿ ಮಳೆ?

NAMMUR EXPRESS NEWS
ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದ ನಾನಾ ಕಡೆ ಬಿಸಿಲಿಗೆ ಜನ ತತ್ತರಿಸಿ ಹೋಗಿದ್ದಾರೆ. ಕೊಂಚ ಮಳೆ ಬಂದಿದ್ದರೆ ಸಾಕು ಎಂದು ಜನ ಕಾಯುತ್ತಿದ್ದಾರೆ. ಹೀಗಿರುವಾಗಲೇ ಇಂದಿನಿಂದ ರಾಜ್ಯಕ್ಕೆ ತಂಪೆರಲು ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಗುಡ್ ನ್ಯೂಸ್ ನೀಡಿದೆ.

ಐದು ದಿನಗಳ ಕಾಲ ಮಳೆಯ ಆಗಮನ.!

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಮಳೆ ಆಗಲಿದೆ ಎಂದು ಹಾವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಎರಡು ದಿನಗಳ ಹಿಂದೆ ವಿಜಯಪುರ ಸುತ್ತಮುತ್ತ ಉತ್ತಮ ಮಳೆಯಾಗಿತ್ತು. ಇದೀಗ ಮತ್ತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ. ಇಂದು ರಾತ್ರಿ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ಮಳೆ!

ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಧಾರವಾಡ, ಉಡುಪಿ, ಹಾವೇರಿ, ಬೆಳಗಾವಿ, ಚಿತ್ರದುರ್ಗ, ಚಾಮರಾಜನಗರ, ತುಮಕೂರುಗಳಲ್ಲಿ ಮಳೆಯಾಗಲಿದೆ ಎಂದು ತಿಳಿದುಬಂದಿದೆ.

ಬಿಸಿಗ ಧಗೆಗೆ ತತ್ತರಿಸಿರುವ ಜನರು.!

ಇನ್ನು ಬೆಂಗಳೂರು ಸೇರಿದಂತೆ ರಾಜ್ಯದ ಜನ ಬಿಸಿಲ ಧಗೆಗೆ ತತ್ತರಿಸಿದ್ದಾರೆ. ಬೆಂಗಳೂರಿನಲ್ಲಿ ತಾಪಮಾನ 35 ಡಿಗ್ರಿ ಮೀರಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಅದು 40 ಡಿಗ್ರಿವರೆಗೂ ಮುಟ್ಟಿದೆ. ಈ ಹಿನ್ನೆಲೆಯಲ್ಲಿ ಈಗ ಮಳೆ ಬಂದರೆ ಜನರಿಗೆ ಕೊಂಚ ನೆಮ್ಮದಿ ಸಿಗಲಿದೆ. ಇನ್ನು ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿದೆ. ಹೀಗಾಗಿ ಕೊಂಚ ಮಳೆ ಸುರಿದರೆ ಇರಿಂದ ನೀರಿನ ಸಮಸ್ಯೆಯೂ ಕೊಂಚ ನೀಗಲಿದೆ.

Categories
ತೀರ್ಥಹಳ್ಳಿ ಮಲ್ನಾಡ್

ಹಣಗೆರೆ ಕಟ್ಟೆ ಲಾಡ್ಜ್ ಅಲ್ಲಿ ಕೊಲೆ..?!

ಹಣಗೆರೆ ಕಟ್ಟೆ ಲಾಡ್ಜ್ ಅಲ್ಲಿ ಕೊಲೆ..?!
– ಯುವತಿ ಸಾವು: ಕೊಲೆಯೋ ಆತ್ಮಹತ್ಯೆಯೋ?
– ಪುರುಷನ ಜತೆ ಬಂದ ಮಹಿಳೆಗೆ ಆಗಿದ್ದೇನು..?

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಣಗೆರೆ ಕಟ್ಟೆಯ ವಸತಿ ಗೃಹ ಒಂದರಲ್ಲಿ ಮಹಿಳೆಯೊಬ್ಬಳು ಸಾವು ಕಂಡಿರುವ ಘಟನೆ ಬೆಳಕಿಗೆ ಬಂದಿದೆ. ಸೋಮವಾರ ಘಟನೆ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ. ಮಾಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪುರುಷನ ಜತೆ ಲಾಡ್ಜ್ ನಲ್ಲಿ ರೂಮ್ ಪಡೆದಿದ್ದ ಮಹಿಳೆಯೊಬ್ಬಳ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ರಕ್ತದ ಕಲೆ ಕಂಡು ಬಂದಿದ್ದು, ಇದೀಗ ಮಾಳೂರು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಲಾಡ್ಜ್ ನಲ್ಲಿ ರೂಮ್ ಪಡೆದಿದ್ದ ಮಹಿಳೆಯನ್ನು ಕೊಲೆ ಮಾಡಲಾಗಿದೆಯಾ ಎಂಬ ಅನುಮಾನ ಮೂಡಿದೆ.

ಹಣಗೆರೆ ಕಟ್ಟೆಯಲ್ಲಿ ಅನೈತಿಕ ಚಟುವಟಿಕೆ

ರಾಜ್ಯದ ಪ್ರಸಿದ್ಧ ಸರ್ವ ಧರ್ಮ ತಾಣದಲ್ಲಿ ಇತ್ತೀಚಿಗೆ ಲಾಡ್ಜ್ ಗಳಲ್ಲಿ ಇತ್ತೀಚಿಗೆ ನಿಯಮ ಬಾಹಿರವಾಗಿ ರೂಮು ಕೊಡಲಾಗುತ್ತಿತ್ತು ಎಂಬ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಇದೀಗ ಈ ಘಟನೆ ಇಡಿ ತಾಲೂಕಿನಾದ್ಯಂತ ಸಂಚಲನ ಮೂಡಿಸಿದೆ. ಮಾಳೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಇನ್ನಷ್ಟು ತನಿಖೆಯಿಂದ ಹೊರ ಬರಬೇಕಾಗಿದೆ.

ಪದೇ ಪದೇ ದುರಂತ: ಕೇಳೋರಿಲ್ಲ!

ಪದೇ ಪದೇ ಪ್ರತಿಭಟನೆ ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹಣಗೆರೆ ಕಟ್ಟೆಯಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದು ಸ್ಥಳೀಯರು ಈ ಬಗ್ಗೆ ಪ್ರತಿಭಟನೆ ಮಾಡಿದ್ದರು. ಪೋಲಿಸ್ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಕೊಟ್ಟಿದ್ದಾರೆ ಆದರೆ ಈ ಬಗ್ಗೆ ಇದುವರೆಗೆ ಆಡಳಿತ ಕ್ರಮ ಕೈಗೊಂಡಿರಲಿಲ್ಲ. ಇದೀಗ ಈ ಘಟನೆ ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದ್ದು ಸ್ಥಳೀಯರಿಗೆ ಭಯವನ್ನು ಹುಟ್ಟಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Categories
ಕರಾವಳಿ ರಾಜಕೀಯ

ಬಿಜೆಪಿಯಿಂದ ಕೋಟಾ , ಕಾಂಗ್ರೆಸ್‌ನಿಂದ ಹೆಗ್ಡೆ, ಪದ್ಮರಾಜ್‌ ನಾಮಪತ್ರ

ಬಿಜೆಪಿಯಿಂದ ಕೋಟಾ , ಕಾಂಗ್ರೆಸ್‌ನಿಂದ ಹೆಗ್ಡೆ, ಪದ್ಮರಾಜ್‌ ನಾಮಪತ್ರ
– ಚುರುಕು ಪಡೆದ ಕರಾವಳಿ ಲೋಕ ಸಭಾ ಚುನಾವಣೆ
– ಉಡುಪಿಯಿಂದ ಜಯಪ್ರಕಾಶ್ ಹೆಗ್ಡೆ, ದಕ್ಷಿಣ ಕನ್ನಡದಿಂದ ಪದ್ಮರಾಜ್ ನಾಮಪತ್ರ

ಲೋಕಸಭೆ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸುವುದಕ್ಕೆ ಗುರುವಾರ ಕೊನೆಯ ದಿನವಾಗಿರುವ ಹಿನ್ನಲೆಯಲ್ಲಿ ಇಂದು ರಾಜ್ಯದ ಬಹಳಷ್ಟು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಕೆ ಮಾಡಿದ್ದಾರೆ. ಅದರಂತೆ ಕರಾವಳಿ ಭಾಗದ ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿಯೂ ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳು ಬುಧವಾರ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ.

ಪದ್ಮರಾಜ್ ನಾಮಪತ್ರ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಆರ್‌. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮುಖ್ಯ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್‌ ಅವರಿಗೆ ತಮ್ಮ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ಇದಕ್ಕೂ ಮೊದಲು ಶ್ರೀ ಶರವು ದೇವಸ್ಥಾನ ಹಾಗೂ ಕುದ್ರೋಳಿ ದೇವಸ್ಥಾನದಲ್ಲಿವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಮಂಗಳೂರಿನ ಎಬಿ ಶೆಟ್ಟಿ ಸರ್ಕಲ್‌ನವರೆಗೆ ಮೆರವಣಿಗೆ ಆಯೋಜಿಸಲಾಗಿದ್ದು ತೆರೆದ ವಾಹನದಲ್ಲಿ ಅಭ್ಯರ್ಥಿ ಜತೆಗೆ ಮಾಜಿ ಸಚಿವ ರಮಾನಾಥ ರೈ, ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಮುಂತಾದವರು ಇದ್ದರು. ಬಿಲ್ಲವ ಸಮುದಾಯದ ನಾಯಕರು, ಕಾಂಗ್ರೆಸ್‌ ಪಕ್ಷದ ಮುಖಂಡರು ಹಾಗೂ ಅವರ ಅಭಿಮಾನಿಗಳು ಈ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರವನ್ನು ಸಲ್ಲಿಸಲಾಯಿತು. ಈ ವೇಳೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌, ವಿಧಾನ ಪರಿಷತ್‌ ಸದಸ್ಯ ಬಿಕೆ ಹರಿಪ್ರಸಾದ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್‌ ಭಂಡಾರಿ, ಮಾಜಿ ಶಾಸಕ ಜೆಆರ್‌ ಲೋಬೋ ಮುಂತಾದವರು ಇದ್ದರು.
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಪದ್ಮರಾಜ್‌ , ಕಳೆದ 33 ವರ್ಷಗಳಿಂದ ಈ ಜಿಲ್ಲೆಯ ಮೇಲೆ ಕೋಮು ಸೂಕ್ಷ್ಮಿ ಪ್ರದೇಶ ಎಂಬ ಕಪ್ಪು ಚುಕ್ಕೆ ಬಿದ್ದಿದೆ. ವಿಶಿಷ್ಟ ಸಂಸ್ಕೃತಿ ಜಿಲ್ಲೆಯಲ್ಲಿ ಬಿಜೆಪಿ ಆಡಳಿತದಲ್ಲಿ ಕೋಮು ಸಾಮರಸ್ಯ ಕದಡಿದ್ದು ದೊಡ್ಡ ಹಿನ್ನಡೆಯಾಗಿದೆ. ಅದನ್ನು ನಿವಾರಿಸುವುದೇ ನಮ್ಮ ಉದ್ದೇಶ ಎಂದರು.

ಕೋಟ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಕೆ

ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಪಕ್ಷದ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ಸಮಾವೇಶ ನಡೆಸಲಾಯಿತು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾ ಮುಖ್ಯ ಚುನಾವಣಾಧಿಕಾರಿ ವಿದ್ಯಾಕುಮಾರ್‌ ಅವರಿಗೆ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಬಿಜೆಪಿ ನಾಯಕರಾದ ಸಿಟಿ ರವಿ, ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಯಶಪಾಲ್‌ ಸುವರ್ಣ, ಜೆಡಿಎಸ್‌ ನಾಯಕ ಹಾಗೂ ಎಂಎಲ್‌ಸಿ ಭೋಜೇಗೌಡರು ನಾಮಪತ್ರ ಸಲ್ಲಿಸುವ ವೇಳೆ ಕೋಟ ಶ್ರೀನಿವಾಸ ಪೂಜಾರಿ ಜತೆಗೆ ಹಾಜರಿದ್ದರು.

ಜಯಪ್ರಕಾಶ್‌ ಹೆಗ್ಡೆ ನಾಮಪತ್ರ ಸಲ್ಲಿಕೆ

ಇನ್ನೊಂದೆಡೆ, ಕಾಂಗ್ರೆಸ್‌ನಿಂದ ಜಯಪ್ರಕಾಶ್‌ ಹೆಗ್ಡೆ ಅವರು ಕೂಡ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ, ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್‌ ಕುಮಾರ್‌ ಸೊರಕೆ, ಸಚಿವ ಕೆಜೆ ಜಾರ್ಜ್‌ ಹಾಗೂ ಇತರೆ ನಾಯಕರು ಹಾಜರಿದ್ದರು.
ಈ ವೇಳೆ ಮಾತನಾಡಿದ ಜಯಪ್ರಕಾಶ್‌ ಹೆಗ್ಡೆ ಅವರು, ಕಳೆದ 20 ತಿಂಗಳಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ನನ್ನ ಹಿಂದಿನ ಅಧಿಕಾರಾವಧಿಯಲ್ಲಿ ನೀಡಿದ ಆದೇಶ ಹಾಗೂ ಈಡೇರದ ಕೆಲಸಗಳನ್ನು ಪೂರ್ಣಗೊಳಿಸಲು ನನಗೆ ಈ ಅವಕಾಶ ಬೇಕಾಗಿದೆ. ಎರಡೂ ಜಿಲ್ಲೆಗಳು ವಿಭಿನ್ನ ಸಮಸ್ಯೆಗಳನ್ನು ಹೊಂದಿವೆ. ಚಿಕ್ಕಮಗಳೂರಿನಲ್ಲಿ ಕಾಫಿ, ಅಡಿಕೆ ಮತ್ತಿತರ ಸಮಸ್ಯೆಗಳು ಎದುರಾಗುತ್ತಿವೆ. ಕರಾವಳಿಯಲ್ಲಿ ಪ್ರವಾಸೋದ್ಯಮ, ಮೀನುಗಾರರ ಸಮಸ್ಯೆ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದರು.

Categories
ತೀರ್ಥಹಳ್ಳಿ ಮಲ್ನಾಡ್ ಸಿನಿಮಾ

ತೀರ್ಥಹಳ್ಳಿ ಹುಡುಗಿ ಈಗ ಮಹಾ ನಟಿಯಾಗಿ ಫೇಮಸ್!

ತೀರ್ಥಹಳ್ಳಿ ಹುಡುಗಿ ಈಗ ಮಹಾ ನಟಿಯಾಗಿ ಫೇಮಸ್!
– ಝೀ ಕನ್ನಡ ಮಹಾನಟಿ ರಿಯಾಲಿಟಿ ಶೋನಲ್ಲಿ ತೀರ್ಥಹಳ್ಳಿಯ ಆಶಿಕಾ ಸೋಮಶೇಖರ್
– ಸಮರ್ಥ ಅಭಿನಯಕ್ಕೆ ಜಡ್ಜಸ್ ಮೆಚ್ಚುಗೆ ಜೊತೆಗೆ ಗೋಲ್ಡನ್ ಟಿಕೆಟ್
– ಸಿನಿಮಾ ರಂಗದಲ್ಲೂ ಮಿಂಚಿದ ಕಲಾವಿದೆ

NAMMUR EXPRESS NEWS
ತೀರ್ಥಹಳ್ಳಿ: ಝೀ ಕನ್ನಡ ಚಾನೆಲ್ ಮಹಾನಟಿ ರಿಯಾಲಿಟಿ ಶೋ ಮೂಲಕ ಕರ್ನಾಟಕದ ಹೊಸ ನಟಿಯರ ಪ್ರತಿಭೆಯನ್ನು ಬೆಳಕಿಗೆ ತರುತ್ತಿದೆ. ಜೀ ಕನ್ನಡ ವಾಹಿನಿಯ ಈ ರಿಯಾಲಿಟಿ ಶೋ ಗೆ ತೀರ್ಥಹಳ್ಳಿಯ ಆಶಿಕಾ ಸೋಮಶೇಖರ್ ಭಾಗವಹಿಸಿದ್ದು ಸಮರ್ಥ ಅಭಿನಯ ಮಾಡಿ ಜಡ್ಜಸ್ ಮೆಚ್ಚುಗೆಯಿಂದ ಗೋಲ್ಡನ್ ಟಿಕೆಟ್ ಅನ್ನು ಆಶಿಕಾ ಸೋಮಶೇಖರ್ ಪಡೆದಿದ್ದಾರೆ.
ದೌರ್ಜನ್ಯ ಕೊಳಗದ ಹೆಣ್ಣಿನ ಅಂತರಂಗಕ್ಕೆ ಅಭಿಯಾನದ ರೂಪ ಕೊಟ್ಟು ಇದೀಗ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 7:30 ರಿಂದ ಪ್ರಸಾರವಾಗುವ ಮಹಾನಟಿ ಎಂಬ ರಿಯಾಲಿಟಿ ಶೋನಲ್ಲಿ ಇವರು ಭಾಗವಹಿಸುತ್ತಿದ್ದು ಪ್ರೇಕ್ಷಕರು ವೀಕ್ಷಿಸಿ ಮತ್ತು ಬೆಂಬಲಿಸುವಂತೆ ಕೋರಿದ್ದಾರೆ. ತಮ್ಮ ಅಭಿನಯದ ಮೂಲಕ ಗೋಲ್ಡನ್ ಟಿಕೆಟ್ ಪಡೆದ ತೀರ್ಥಹಳ್ಳಿಯ ಆಶಿಕಾ ಸೋಮಶೇಖರ್ ಅವರಿಗೆ ಅಭಿನಂದನೆಗಳು.

ಅನೇಕ ಭಾಷೆ ಮಾತನಾಡುವ ಕಲಾವಿದೆ

ಆಶಿಕಾ ಭರತನಾಟ್ಯ ನೃತ್ಯದಲ್ಲಿ ತರಬೇತಿ ಪಡೆದಿದ್ದಾರೆ ಮತ್ತು ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ಸೋಮಶೇಖರ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ ಸ್ನಾತಕೋತ್ತರ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ ಮತ್ತು ಪುಟ್ಟ ಮೀನಿನ ಹೆಜ್ಜೆಗಳು ಎಂಬ ಈ ಬುಕ್ ಅನ್ನು ಸಹ ಬಿಡುಗಡೆ ಮಾಡಿದ್ದಾರೆ. ಕನ್ನಡ ರಂಗಭೂಮಿಯಲ್ಲಿ ಕೆಲಸ ಮಾಡಿದ ನಂತರ, ಅವರು ಇಂಗ್ಲಿಷ್ ಚಲನಚಿತ್ರ ಎ ಡೇಟ್ (2020) ನಲ್ಲಿ ನಟಿಸಿದರು. 2021 ರಲ್ಲಿ ಅವರು ಕನ್ನಡ ಚಲನಚಿತ್ರ ಮುಂದುವರೆದ ಅಧ್ಯಾಯದಲ್ಲಿ ಪಾದಾರ್ಪಣೆ ಮಾಡಿ ಹೊಸ ಭರವಸೆ ಮೂಡಿಸಿದ್ದಾರೆ. ಈಗ ಅನೇಕ ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ.

Categories
ಅಡಿಕೆ-ದರ ಶಿವಮೊಗ್ಗ

ಅಡಿಕೆ ದರ 03-04-2024

ಅಡಿಕೆ ದರ
03-04-2024
ಸರಕು 77569 83396
ಬೆಟ್ಟೆ 54572 54572
ರಾಶಿ 47319 47319
ಗೊರಬಲು 23000 29700
Nammur Express
Categories
ತೀರ್ಥಹಳ್ಳಿ ಮಲ್ನಾಡ್

ತೀರ್ಥಹಳ್ಳಿ ಅಗ್ನಿ ಶಾಮಕ ದಳದ ವಿರುದ್ಧ ಆಕ್ರೋಶ

ತೀರ್ಥಹಳ್ಳಿ ಅಗ್ನಿ ಶಾಮಕ ದಳದ ವಿರುದ್ಧ ಆಕ್ರೋಶ
– ಸರ್ಕಾರಿ ಕಚೇರಿಗಳು ಇರೋದು ಜನರಿಗೋಸ್ಕರ ಅಲ್ವಾ?
– ಮೂರು ಬಾಲಕರು ಹೊಳೆಗೆ ಬಿದ್ದಾಗ ಸಿಬ್ಬಂದಿ ದುರ್ವರ್ತನೆ
– ಆಸ್ಪತ್ರೆಯಲ್ಲೂ ಅವ್ಯವಸ್ಥೆ: ಹೇಳೋರು ಯಾರು ಕೇಳೋರು ಯಾರು?
– ಮೂರು ಶವ ತೆಗೆದ ಸ್ಥಳೀಯ ಯುವಕರು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ರಂಜಾನ್ ಉಪವಾಸ ಮುಗಿಸಿ ತುಂಗಾ ನದಿಗೆ ಈಜಲು ತೆರಳಿದ್ದ ಮೂವರು ಮಕ್ಕಳು ನೀರುಪಾಲಾದ ಘಟನೆ ಸೋಮವಾರ ನಡೆದಿದೆ. ಮೂವರು ಮಕ್ಕಳು ಹೊಳೆಗೆ ಬಿದ್ದಾಗ ಸ್ಥಳೀಯರು ಗಾಬರಿಯಿಂದ ತೀರ್ಥಹಳ್ಳಿಯ ಅಗ್ನಿಶಾಮಕ ಬೆಳಗ್ಗೆ ಕರೆ ಮಾಡಿದ್ದು, ಸಿಬ್ಬಂದಿ ನಾಳೆ ಬೆಳಗ್ಗೆ ನೋಡೋಣ ಎಂದು ಅಲ್ಲಿಯ ಕೆಲವು ಸಿಬ್ಬಂದಿಗಳು ದುರ್ವರ್ತನೆ ತೋರಿದ್ದಾರೆ. ಆಗ್ನಿಶಾಮಕ ದಳಕ್ಕೆ ಕರೆ ಮಾಡಿದರೂ ಸ್ಪಂದಿಸದ ಸಿಬ್ಬಂದಿ ವಿರುದ್ದ ಇದೀಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆ ಎಚ್ಚರಿಕೆ.!

ಈಗಾಗಲೇ ಕೋಟಿ ವೆಚ್ಚದಲ್ಲಿ ತೀರ್ಥಹಳ್ಳಿಯಲ್ಲಿ ಗೃಹರಕ್ಷಕ ನೂತನ ಕಚೇರಿ ಮಾಡಲಾಗಿದ್ದು ಸಿಬ್ಬಂದಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಕೂಡ ನೀಡಲಾಗಿದೆ, ಆದರೂ ಕೂಡ ಸಿಬ್ಬಂದಿಗಳು ತಿಂಗಳಲ್ಲಿ ಒಂದು ಅಥವಾ ಎರಡು ಘಟನೆಗಳನ್ನು ಹ್ಯಾಂಡಲ್ ಮಾಡುತ್ತಿದ್ದಾರೆ. ಇದರ ಜೊತೆಗೆ ಅಲ್ಲಿ ಮುಳುಗು ತಜ್ಞರು ಇಲ್ಲದೆ ಜನರಿಗೆ ಯಾವುದೇ ಸೌಲಭ್ಯವನ್ನು ಕೂಡ ಜನರಿಗೆ ಕೊಡುತ್ತಿಲ್ಲ. ಈ ಬಗ್ಗೆ ಸ್ಥಳೀಯವಾಗಿ ತುಂಬಾ ಆಕ್ರೋಶ ವ್ಯಕ್ತವಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳ ಈ ರೀತಿ ದುರ್ವರ್ತನೆ ಸಾರ್ವಜನಿಕ ಟೀಕೆಗೆ ಕಾರಣವಾಗಿದೆ. ಅಗ್ನಿಶಾಮಕ ದಳದ ಕಚೇರಿಯ ಮುಂದೆ ಸ್ಥಳೀಯರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. ತಾಲೂಕಿನಲ್ಲಿ ಅಗ್ನಿ, ನೀರು ದುರಂತ ನಡೆದರೆ ಅದನ್ನು ನಿರ್ವಹಿಸಬೇಕಾದ ಅಗ್ನಿ ಶಾಮಕ ದಳ ಮತ್ತು ಸಿಬ್ಬಂದಿ ವರ್ತನೆ ಈಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಆಸ್ಪತ್ರೆಯಲ್ಲೂ ಅವ್ಯವಸ್ಥೆ: ಹೇಳೋರು ಯಾರು ಕೇಳೋರು ಯಾರು?

ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೂಡ ಫ್ರೀಸರ್ ಇಲ್ಲದೆ ಇರುವುದು ದುರಂತದ ಸಂಗತಿಯಾಗಿದೆ. ಶವಗಳನ್ನು ಇಡಲು ಪ್ರೀಸರ್ ಇಲ್ಲ ಇದರಿಂದ ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಫ್ರೀಜರ್ ಇದ್ದರೂ ಅದನ್ನು ಆನ್ ಮಾಡಲ್ಲ. ಇದರ ಬಗ್ಗೆ ಅಧಿಕಾರಿಗಳು ಹಾಗೂ ಶಾಸಕರು ಗಮನವಹಿಸದೇ ಇರುವುದು ಕೂಡ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ನದಿಗೆ ಬಿದ್ದ ಮಕ್ಕಳನ್ನು ಸ್ಥಳೀಯ ಮುಳುಗು ತಜ್ಞರು ಪರಿಶೀಲನೆ ಮಾಡಿ ತೆಗೆದಿರುವುದು ಎಲ್ಲೆಡೆ ಮೆಚ್ಚುಗೆ ಕಾರಣವಾಗಿದೆ.

ಮೂರು ಶವ ಮೇಲೆತ್ತಿದ ಸ್ಥಳೀಯ ಯುವಕರು!

ಅಗ್ನಿ ಶಾಮಕ ದಳದ ಸಿಬ್ಬಂದಿ ಬಾರದ ಕಾರಣ ಸ್ಥಳೀಯ ಯುವಕರಾದ ಶರೀಫ್, ರಂಜಿತ್ ಕುಮಾರ್, ಪವನ್, ಧನು ಕುರುವಳ್ಳಿ ಸೇರಿ ಅನೇಕ ಸ್ನೇಹಿತರು ರಾತ್ರಿ ಜೀವದ ಹಂಗು ತೊರೆದು ನದಿಗಿಳಿದು ಮೂರು ಶವ ಎತ್ತಿದ್ದಾರೆ. ಜತೆಗೆ ಕುಟುಂಬಗಳ ಜತೆಗೆ ನಿಂತಿದ್ದಾರೆ. ಬೆಟ್ಟಮಕ್ಕಿ ಪೂರ್ಣೇಶ್ ಪೂಜಾರಿ ಮತ್ತು ರಾಘವೇಂದ್ರ ಶೆಟ್ಟಿ ಬೆಟ್ಟಮಕ್ಕಿ ಸೇರಿ ನೂರಾರು ಮಂದಿ ಸ್ನೇಹಿತರು ಈ ಯುವಕರ ಸಾಧನೆಗೆ ಧನ್ಯವಾದ ಅರ್ಪಿಸಿದ್ದಾರೆ.

Categories
ಸಿನಿಮಾ

ಕನ್ನಡದಲ್ಲಿ ಯುವ ಸಿನಿಮಾ ಹವಾ!

ಕನ್ನಡದಲ್ಲಿ ಯುವ ಸಿನಿಮಾ ಹವಾ!
– ಹೊಡೆದಾಟದಲ್ಲೇ ಕಥೆಯ ಹುಡುಕಾಟ
– ನಟ ಯುವರಾಜ ಕುಮಾ‌ರ್ ಡೈಲಾಗ್ ಅಬ್ಬರ

NAMMUR EXPRESS NEWS
ಯುವ ಹೆಸರಿಗೆ ತಕ್ಕಂತೆ ಯೂತ್‌ಫುಲ್ ಸಿನಿಮಾ. ಕಾಲೇಜು ಕ್ಯಾಂಪಸ್‌ನಿಂದ ಆರಂಭವಾಗುವ ಕಥೆ ಮುಂದೆ ಜೀವನದ ಪಾಠ ಹೇಳುವಲ್ಲಿಗೆ ಬಂದು ನಿಲ್ಲುತ್ತದೆ. ನಿರ್ದೇಶಕ ಸಂತೋಷ್‌ ಆನಂದರಾಮ್ ಸಿನಿಮಾ ಎಂದರೆ ಅಲ್ಲೊಂದಿಷ್ಟು ಸೆಂಟಿಮೆಂಟ್‌ಗೆ ಅವಕಾಶವಿರುತ್ತದೆ, ಜೊತೆಗೆ ಒಂದಷ್ಟು ಮಾಸ್ ಡೈಲಾಗ್‌ಗಳಿಗೆ ಕೊರತೆ ಇರುವುದಿಲ್ಲ. ಅದರಲ್ಲೂ ತಂದೆ-ಮಗ ಸೆಂಟಿಮೆಂಟ್ ಎಂದರೆ ಅವರಿಗೆ ಅಚ್ಚುಮೆಚ್ಚು. ಅದನ್ನು ಈ ಸಿನಿಮಾದಲ್ಲೂ ಬಳಸಿಕೊಂಡಿದ್ದಾರೆ. ಮಾಸ್ ನಿಂದ ಆರಂಭವಾಗಿ ಕ್ಲಾಸ್ ಆಗಿ ಕೊನೆಗೊಳ್ಳುವ ಒಂದು ಸರಳ ಕಥೆಯನ್ನು ಹೇಳಿದ್ದಾರೆ. ಇಲ್ಲಿ ಯುವ ಜನರ ಕನಸು, ಪ್ರೀತಿ, ಕಿಚ್ಚು, ತಂದೆ-ಮಗ ಬಾಂಧವ್ಯ ಎಲ್ಲವೂ ಇದೆ.

ಸಿನಿಮಾದ ಆರಂಭ ಮಂಗಳೂರಿನ ಕಾಲೇಜಿನಿಂದ ಆಗುತ್ತದೆ. ಇಲ್ಲಿ ಹೊಡೆದಾಟ, ಬಡಿದಾಟಗಳದ್ದೇ ಕಾರುಬಾರು. ಸಣ್ಣಸಣ್ಣ ವಿಷಯಗಳಿಗೂ ನಾಯಕ ಎದುರಾಳಿಗಳ ರಕ್ತಚಿಮ್ಮುವಂತೆ ಹೊಡೆಯುತ್ತಾನೆ. ಕಾಲೇಜು ಕಿರಿಕ್‌ಗಳು ಇಷ್ಟೊಂದು ರಕ್ತಪಾತಕ್ಕೆ ಕಾರಣವಾಗುತ್ತಾ ಎಂಬ ಪ್ರಶ್ನೆ ಬಂದರೂ ಬರಬಹುದು. ಆದರೆ, ಇದು ಕಮರ್ಷಿಯಲ್ ಸಿನಿಮಾ, ನೋ ಲಾಜಿಕ್, ಓನ್ಸಿ ಮ್ಯಾಜಿಕ್.

ಇನ್ನು, ಸಿನಿಮಾದ ಮೂಲಕಥೆ ತೆರೆದುಕೊಳ್ಳುವುದು ದ್ವಿತೀಯಾರ್ಧದಲ್ಲಿ. ಇಲ್ಲಿ ನಾಯಕನಲ್ಲದ ಬದಲಾವಣೆ, ಆತ ಎದುರಿಸುವ ಸಂದಿಗ್ಧತೆ, ಆತನ ಕನಸು, ಕುಸ್ತಿ ಎಲ್ಲವೂ ಬಂದು ಹೋಗುತ್ತದೆ. ಈ ಅವಧಿಯಲ್ಲಿ ನಿರ್ದೇಶಕರು ಒಂದಷ್ಟು ದೃಶ್ಯಗಳನ್ನು ಪಾಸಿಂಗ್ ಶಾಟ್ ನಲ್ಲೇ ಮುಗಿಸಿದ್ದಾರೆ. ಆದರೆ, ಇಲ್ಲೂ ಸೆಂಟಿಮೆಂಟ್ ದೃಶ್ಯಗಳಿಗೆ ಕೊಡಬೇಕಾದ ಮಹತ್ವ ಕೊಟ್ಟಿದ್ದಾರೆ. ಜೊತೆಗೆ ಕ್ಲಾಸ್ ಆಡಿಯನ್ಸ್‌ಗೆ ಇಷ್ಟವಾಗುವ ಹಲವು ದೃಶ್ಯಗಳು ಇಲ್ಲಿವೆ. ಮಾಸ್-ಕ್ಲಾಸ್ ಪ್ಯಾಕೇಜ್ ಸಿನಿಮಾವಾಗಿ ಯುವ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ.

ಮೊದಲ ಚಿತ್ರದಲ್ಲಿ ಮಾಸ್ ಎಂಟ್ರಿ!

ನಾಯಕ ನಟ ಯುವ ಮೊದಲ ಚಿತ್ರದಲ್ಲೇ ಮಾಸ್ ಆಗಿ ಎಂಟ್ರಿಕೊಟ್ಟಿದ್ದಾರೆ. ಚಿತ್ರದಲ್ಲಿ ಬರುವ ಮಾಸ್, ಫೈಟ್ ದೃಶ್ಯಗಳಲ್ಲಿ ಹಾಗೂ ಡ್ಯಾನ್ಸ್‌ನಲ್ಲಿ ಹೆಚ್ಚು ಗಮನ ಸೆಳೆಯುವ ಯುವ, ಸೆಂಟಿಮೆಂಟ್ ದೃಶ್ಯಗಳಲ್ಲಿ ಇನ್ನೊಂದಿಷ್ಟು ಪಳಗಬೇಕು. ಉಳಿದಂತೆ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ನಾಯಕಿ ಸಪ್ತಮಿ ಗೌಡಗೆ ಇಲ್ಲಿ ತುಂಬಾ ಗಮನ ಸೆಳೆಯುವ ಪಾತ್ರವೇನು ಇಲ್ಲ. ತಂದೆಯಾಗಿ ನಟಿಸಿರುವ ಅಚ್ಯುತ್ ಕುಮಾರ್ ಪಾತ್ರದಲ್ಲೊಂದು ಫೀಲ್ ಇದೆ. ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಣವ್ ಕ್ಷೀರಸಾಗರ್ ಗಮನ ಸೆಳೆಯುತ್ತಾರೆ. ಉಳಿದಂತೆ ಗೋಪಾಲಕೃಷ್ಣ ದೇಶಪಾಂಡೆ, ಸುಧಾರಾಣಿ, ಹಿತ ನಟಿಸಿದ್ದಾರೆ.

Categories
ರಾಜ್ಯ

ಟಾಪ್ 8 ನ್ಯೂಸ್ ಕರ್ನಾಟಕ

ಟಾಪ್ 8 ನ್ಯೂಸ್ ಕರ್ನಾಟಕ
ಕೊಪ್ಪಳ : ಬಿಸಿಯೂಟ ಸೇವಿಸಿದ ಮರುಕ್ಷಣವೇ ವಾಂತಿ, ತಲೆನೋವು
– ಆನೇಕಲ್ : ಕೆಲಸ ಮುಗಿಸಿ ವಾಪಸ್ ಆಗುತ್ತಿದ್ದವನ ಕೊಚ್ಚಿ ಕೊಲೆ
– ಯಾದಗಿರಿ : ನಡುರಸ್ತೆಯಲ್ಲಿ ಅಕ್ಕನನ್ನು ಅಟ್ಟಾಡಿಸಿ ಸುತ್ತಿಗೆಯಿಂದ ಹೊಡೆದು ಕೊಂದ
– ಗದಗ : ಜಮೀನು ಕೆಲಸ ಮಾಡುತ್ತಿದ್ದ ನರೇಗಾ ಕಾರ್ಮಿಕ ಹೃದಯಾಘಾತದಿಂದ ಸಾವು
– ಕಲಬುರಗಿ: ಕಾರ್ಮಿಕನ ಬಲಿ ಪಡಿಯಿತಾ ರಣ ಬಿಸಿಲು!
– ರಾಯಚೂರು : ಪಾದಯಾತ್ರೆ ವೇಳೆ ನಿಂತು ಹೋಯ್ತು ಯುವಕನ ಹೃದಯದ ಬಡಿತ
– ತುಮಕೂರು : ಬಸ್‌ಗಳ ಮುಖಾಮುಖಿ ಡಿಕ್ಕಿ, ಗೂಡ್ಸ್‌ ಲಾರಿ ನಜ್ಜುಗುಜ್ಜು
– ಬಾಗಲಕೋಟೆ :ಹೆದ್ದಾರಿ ದಾಟುತ್ತಿದ್ದಾಗ ಕ್ಯಾಂಟರ್ ಡಿಕ್ಕಿಯಾಗಿ ವೃದ್ಧೆ ಸಾವು

NAMMUR EXPRESS NEWS
ಗಂಗಾವತಿ: ಬಿಸಿಯೂಟ ಸೇವಿಸಿದ ಬಳಿಕ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಅಸ್ವಸ್ಥಗೊಂಡಿದ್ದ ಮಕ್ಕಳನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಾಹ್ನದ ಬಿಸಿಯೂಟ ಸೇವಿಸಿದ 1 ರಿಂದ 5 ತರಗತಿಯ 32 ಮಕ್ಕಳಲ್ಲಿ ವಾಂತಿ, ತಲೆನೋವು ಕಾಣಿಸಿಕೊಂಡಿದೆ. ಒಬ್ಬರ ನಂತರ ಒಬ್ಬರು ಅಸ್ವಸ್ಥಗೊಂಡಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆಸ್ಪತ್ರೆಗೆ ಡಿಎಚ್ಓ ಡಾ. ಲಿಂಗರಾಜ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಸೀಲ್ದಾರ ನಾಗರಾಜ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ಕುರಿತು ಶಾಲೆಯ ಶಿಕ್ಷಕರಿಂದ ಮಾಹಿತಿಯನ್ನು ಪಡೆಯುತ್ತಿದ್ದಾರೆ.

ಆನೇಕಲ್: ಖಾಕಿ ಪಡೆ ಚುನಾವಣಾ ಕೆಲಸದಲ್ಲಿ ಬ್ಯುಸಿಯಾಗುತ್ತಿದ್ದಂತೆ, ಇತ್ತ ಕ್ರೈಂ ರೇಟು ಹೆಚ್ಚಾಗುತ್ತಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ಮುತ್ಯಾಲಮ್ಮ ದೇವಾಲಯದ ಬಳಿ ತಡರಾತ್ರಿ ವ್ಯಕ್ತಿಯೊಬ್ಬನ ಬರ್ಬರ ಕೊಲೆಯಾಗಿದೆ. ಒರಿಸ್ಸಾ ಮೂಲದ ದೀಪ್ತಿ ರಂಜನ್ (30) ಹತ್ಯೆಯಾದವನು. ಮಂಗಳವಾರ ರಾತ್ರಿ 1 ಗಂಟೆ ಸುಮಾರಿಗೆ ಕೆಲಸ ಮುಗಿಸಿ ದೀಪ್ತಿ ರಂಜನ್‌ ವಾಪಸ್ ಆಗುತ್ತಿದ್ದ. ಈ ವೇಳೆ ಎದುರಾದ ಕಿಡಿಗೇಡಿಗಳು ಏಕಾಏಕಿ ದಾಳಿ ಮಾಡಿದ್ದಾರೆ. ಮಾರಕಾಸ್ತ್ರಗಳಿಂದ ಹಲ್ಲೆಗೈದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕೃತ್ಯವೆಸಗಿ ಆರೋಪಿಗಳು ಪರಾರಿ ಆಗಿದ್ದಾರೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಆಕ್ಸ್‌ಫರ್ಡ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಯುವಕನ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಿಗಾಗಿ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.

ಯಾದಗಿರಿ: ತಮ್ಮನಿಂದಲೇ ಅಕ್ಕನ ಬರ್ಬರ ಕೊಲೆಯಾಗಿದೆ. ಯಾದಗಿರಿ ತಾಲೂಕಿನ ಬೊಮ್ಮರಾಲದೊಡ್ಡಿಯಲ್ಲಿ ಘಟನೆ ನಡೆದಿದೆ. ನರಸಮ್ಮ(65) ಕೊಲೆಯಾದ ಸಹೋದರಿ. ನರಸಮ್ಮಳ ಸಹೋದರ ಸೂಗುರಪ್ಪ ಕೊಲೆ ಆರೋಪಿ ಆಗಿದ್ದಾನೆ. ಮಾನಸಿಕ ಅಸ್ವಸ್ಥನಾಗಿದ್ದ ಸೂಗುರಪ್ಪನನ್ನು ನಸರಮ್ಮಳೇ ನೋಡಿಕೊಳ್ಳುತ್ತಿದ್ದರು. ಇನ್ನೂ ಮನೆಯಲ್ಲಿ ಕೈ-ಕಾಲು ಕಟ್ಟಿ ಕೂರಿಸುತ್ತಿದ್ದರು. ಕೋಪದಲ್ಲಿ ಸರಪಳಿ ಬಿಚ್ಚಿಕೊಂಡು ಕಬ್ಬಿಣ್ಣದ ಸುತ್ತಿಗೆಯಿಂದ ಹೆಂಡತಿಗೆ ಹಾಗೂ ಸಹೋದರಿಗೆ ನರಸಮ್ಮನಿಗೆ ಹೊಡೆದಿದ್ದಾನೆ. ನರಸಮ್ಮ ಈತನಿಂದ ತಪ್ಪಿಸಿಕೊಂಡು ಹೊರಗೆ ಓಡಿ ಬಂದಿದ್ದಾರೆ. ಆದರೂ ಬಿಡದ ಸೂಗುರಪ್ಪ ನಡು ರಸ್ತೆಯಲ್ಲಿ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸೈದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿದ್ದು, ಸೈದಾಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿದೆ. ಇನ್ನೂ ರಸ್ತೆಯಲ್ಲಿ ಬಿದ್ದಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಗದಗ: ನರೇಗಾ ಯೋಜನ ಕಾಮಗಾರಿಗೆ ತೆರಳಿದ್ದ ಕೂಲಿ ಕಾರ್ಮಿಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ. ಬಸಪ್ಪ ಯಲ್ಲಪ್ಪ ಕುರಹಟ್ಟಿ (55) ಮೃತ ದುರ್ದೈವಿ. ಗ್ರಾಮ ಪಂಚಾಯತ್‌ನಿಂದ ನೀಡಿದ ನರೇಗಾ ಯೋಜನೆ ಕಾಮಗಾರಿ ಅಡಿ ರೈತರ ಜಮೀನಲ್ಲಿ ಬದು ನಿರ್ಮಾಣದ ವೇಳೆ ಎದೆನೋವು ಕಾಣಿಸಿಕೊಂಡಿದೆ. ಎದೆ ಹಿಡಿದುಕೊಂಡು ಬಸಪ್ಪ ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ಬಸಪ್ಪನ ಹೃದಯದ ಬಡಿತ ನಿಂತು ಹೋಗಿತ್ತು. ವೈದ್ಯರು ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ಘೋಷಿಸಿದ್ದಾರೆ. ಗದಗದ ಬೆಟಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿ: ನರೇಗಾ ಕೂಲಿ ಕೆಲಸ ಮಾಡುವಾಗ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ದಣ್ಣೂರ ಗ್ರಾಮದಲ್ಲಿ ನಡೆದಿದೆ. ಶರಣಪ್ಪ ಸಮಗಾರ (42) ನರೇಗಾ ಕೆಲಸ ಮಾಡುವಾಗ ಕುಸಿದು ಬಿದ್ದು ಮೃತಪಟ್ಟವರು.
ಮೇಲ್ನೋಟಕ್ಕೆ ರಣ ಬಿಸಿಲಿಗೆ ಶರಣಪ್ಪ ಸಮಗಾರ ಬಲಿಯಾದರಾ ಎಂಬ ಅನುಮಾನವಿದೆ. ಬಿಸಿಲಿನ ತಾಪದಿಂದ ಅಥವಾ ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಶರಣಪ್ಪರ ಪತ್ನಿ ಶಂಕಿಸಿದ್ದಾರೆ. ಸದ್ಯ ಶರಣಪ್ಪ ಸಮಗಾರ ಮರಣೋತ್ತರ ಪರೀಕ್ಷೆಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ. ಬಿಸಿಲಿನ ಹೊಡೆತಕ್ಕೆ ಶರಣಪ್ಪನ ಸಾವನ್ನಪ್ಪಿರಬಹುದು ಶಂಕಿಸಲಾಗಿದೆ. ಸದ್ಯ ನರೋಣಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ರಾಯಚೂರು: ಶ್ರೀಶೈಲ ಪಾದಯಾತ್ರೆ ಹೊರಟ್ಟಿದ್ದ ಯುವಕನೊರ್ವ ದಾರಿ ಮಧ್ಯೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರಾಯಚೂರಿನ ಮಾನ್ವಿ ತಾಲೂಕಿನ ಚಿಕ್ಕ ಕೊಟ್ನೆಕಲ್ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಬಾಗಲಕೋಟೆ ಮೂಲದ 22 ವರ್ಷದ ಪಾದಯಾತ್ರಾರ್ಥಿ ವಿಶ್ರಾಂತಿಗಾಗಿ ತಂಗಿದ್ದಾಗ ಹೃದಯಾಘಾತವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಮ್ಮಡ ಗ್ರಾಮದ ಶ್ರೀಶೈಲ ದಡೂತಿ ಮೃತ ದುರ್ದೈವಿ. ಶ್ರೀಶೈಲ ದಡೂತಿ ಪ್ರತಿ ವರ್ಷದಂತೆ ಗ್ರಾಮಸ್ಥರ ಜತೆಗೂಡಿ ಶ್ರೀಶೈಲಕ್ಕೆ ಪಾದಯಾತ್ರೆಯನ್ನು ಕೈಗೊಳ್ಳುತ್ತಿದ್ದರು. ಕಳೆದ ಸೋಮವಾರದಂದು ಮನೆಯಿಂದ ಪಾದಯಾತ್ರೆ ಹೊರಟ ಶ್ರೀಶೈಲ ದಡೂತಿ ಭಾನುವಾರ ಮಾನ್ವಿ ತಾಲೂಕಿನ ಚಿಕ್ಕಕೊಟ್ನೆಕಲ್ ಗ್ರಾಮಕ್ಕೆ ತಲುಪಿದ್ದರು. ಬಿಸಿಲಿನ ತಾಪಕ್ಕೆ ಸುಸ್ತಾದ ಕಾರಣಕ್ಕೆ ದಾರಿ ಮಧ್ಯೆ ವಿಶ್ರಾಂತಿಗಾಗಿ ಕುಳಿತ್ತಿದ್ದರು. ಈ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಉಳಿದ ಪಾದಯಾತ್ರಾರ್ಥಿಗಳಿಂದ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಾನ್ವಿ ತಾಲೂಕು ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತುಮಕೂರು: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಸ್ಥಿತಿ ಗಂಭೀರವಾಗಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೋಟಗುಡ್ಡ ಗ್ರಾಮದಲ್ಲಿ ಅಪಘಾತ ನಡೆದಿದೆ. ಖಾಸಗಿ ಬಸ್‌ ಪಾವಗಡದಿಂದ ಚಿತ್ರದುರ್ಗದ ಕಡೆ ಹೋಗುತ್ತಿತ್ತು. ಕೆಎಸ್‌ಆರ್‌ಟಿಸಿ ಬಸ್‌ ಚಳ್ಳಕೆರೆಯಿಂದ ಪಾವಗಡ ಕಡೆ ಬರುತ್ತಿತ್ತು. ಕೋಟಗುಡ್ಡ ಗ್ರಾಮದಲ್ಲಿ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿಯಾಗಿದೆ. ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್‌ನಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಸ್ಥಳೀಯರು ರಕ್ಷಿಸಿ, ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಾಗಲಕೋಟೆ: ರಾಷ್ಟ್ರೀಯ ಹೆದ್ದಾರಿ-50ರಲ್ಲಿ ರಸ್ತೆ ದಾಟುತ್ತಿದ್ದಾಗ ಕ್ಯಾಂಟರ್ ಡಿಕ್ಕಿಯಾಗಿ ವೃದ್ಧೆ ಸ್ಥಳದಲ್ಲಿಯೇ ಮೃತಪಟ್ಟಿರುವುದು ಇಳಕಲ್‌ ಬಳಿ ನಡೆದಿದೆ. ಇಳಕಲ್ ನಿವಾಸಿ ದುರ್ಗಮ್ಮ ಬಾರಿಗಿಡದ (80) ಮೃತರು. ಇತ್ತೀಚೆಗೆ ಇದೇ ಸ್ಥಳದಲ್ಲೇ ಗರ್ಭಿಣಿ ಮೃತಪಟ್ಟಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Categories
ಮಂಡ್ಯ ರಾಜಕೀಯ ರಾಜ್ಯ

ಸುಮಲತಾ ಅಂಬರೀಷ್ ಬಿಜೆಪಿಗೆ ಸೇರ್ಪಡೆ

ಸುಮಲತಾ ಅಂಬರೀಷ್ ಬಿಜೆಪಿಗೆ ಸೇರ್ಪಡೆ
– ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ

NAMMUR EXPRESS NEWS
ಮಂಡ್ಯ : ನಾನು ಈ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಮತ್ತು ನಾನು ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್​ ತನಗೆ ಸಿಗುತ್ತದೆ ಎಂದು ಹಾಲಿ ಸಂಸದೆ ಸುಮಲತಾ ಅಂಬರೀಶ್​ ನಿರೀಕ್ಷೆಯಲ್ಲಿದ್ದರು. ಆದರೆ ಕೊನೆ ಹಂತದಲ್ಲಿ ಸುಮಲತಾ ಅಂಬರೀಶ್​ ಅವರಿಗೆ ಟಿಕೆಟ್​ ತಪ್ಪಿದೆ. ಹೀಗಾಗಿ ಸುಮಲತಾ ಅಂಬರೀಶ್​ ಅವರ ಮುಂದಿನ ನಡೆ ಏನು ಎಂಬುವುದು ಯಕ್ಷ ಪ್ರಶ್ನೆಯಾಗಿತ್ತು. ಈ ಪ್ರಶ್ನೆಗೆ ಮಂಡ್ಯದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು, ನಾನು ಕಾಂಗ್ರೆಸ್​ ಪಕ್ಷಕ್ಕೆ ಹೋಗುವುದಿಲ್ಲ. ನೀವು ಬೇರೆ ಯಾವುದೆ ನಿರ್ಧಾರ ತೆಗೆದುಕೊಳ್ಳಬೇಡಿ ಅಂತ ಸ್ವತಃ ಪ್ರಧಾನಿ ಮೋದಿಯವರು ನನಗೆ ಹೇಳಿದ್ದಾರೆ ಎಂದು ತಿಳಿಸಿದರು.

ನಾನು ಆಕಸ್ಮಿಕವಾಗಿ ರಾಜಕೀಯ ಪ್ರವೇಶ ಮಾಡಿದೆ. ಐದು ವರ್ಷಗಳ ಹಿಂದೆ ನನಗೆ ಐತಿಹಾಸಿಕ ಗೆಲುವು ನೀಡಿದ್ರಿ. ನನಗೆ ಐತಿಹಾಸಿಕ ಗೆಲುವು ಕೊಡುಗೆಯಾಗಿ ಕೊಟ್ಟಿದ್ದೀರಿ. ಐದು ವರ್ಷಗಳಲ್ಲಿ ನನ್ನ ಜೊತೆಗಿದ್ದ ಎಲ್ಲರಿಗೂ ವಂದನೆಗಳು. ಜನಸಾಮಾನ್ಯರ ಸಮಸ್ಯೆಗಳ ಪರ ನಾನು ನಿಂತಿದ್ದೇನೆ. ಜಿಲ್ಲೆ ಅಭಿವೃದ್ಧಿ ಮಾಡುವುದಷ್ಟೇ ನನ್ನ ಮನಸ್ಸಿನಲ್ಲಿದ್ದಿದ್ದು. ಕೆಆರ್​ಎಸ್​ ಡ್ಯಾಂ ಸಂರಕ್ಷಣೆ, ಅಕ್ರಮ ಗಣಿಗಾರಿಕೆ ವಿರುದ್ಧ ಯುದ್ಧವನ್ನೇ ಮಾಡಿದ್ದೇನೆ. ಮೈಷುಗರ್​ ಕಾರ್ಖಾನೆಗಾಗಿ ಎರಡು ವರ್ಷ ಹೋರಾಡಿದ್ದೇನೆ ಎಂದು ತಿಳಿಸಿದರು. 2019ರಲ್ಲಿ ಅದೊಂದು ಬೇರೆ ತರಹದ ಸವಾಲಾಗಿತ್ತು. ಈಗ ಬದಲಾದ ಪರಿಸ್ಥಿತಿಯಲ್ಲಿ ಮತ್ತೊಂದು ಸವಾಲು ಎದುರಿಸುತ್ತಿದ್ದೇನೆ. ಕೊನೆಗಳಿಗೆವರೆಗೂ ಬಿಜೆಪಿ ಟಿಕೆಟ್ ಉಳಿಸಿಕೊಳ್ಳಲು ಹೋರಾಟ ಮಾಡಿದೆ. ಬೆಂಗಳೂರು ಉತ್ತರ, ಮೈಸೂರು, ಚಿಕ್ಕಬಳ್ಳಾಪುರ ನಿಂತುಕೊಳ್ಳೊಲು ಹೇಳಿದರು. ನನಗೆ ಬೇರೆ ಬೇರೆ ಕ್ಷೇತ್ರದ ಆಫರ್​ ನೀಡಿದರು. ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗುವುದಿಲ್ಲ. ಗೆದ್ದರು, ಸೋತರು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ ಎಂದರು.