Categories
ಮೈಸೂರು ರಾಜಕೀಯ ರಾಜ್ಯ

ರಾಜಕೀಯ ನಿವೃತ್ತಿ ಘೋಷಿಸಿದ ಸಿಎಂ ಸಿದ್ದರಾಮಯ್ಯ.!

ರಾಜಕೀಯ ನಿವೃತ್ತಿ ಘೋಷಿಸಿದ ಸಿಎಂ ಸಿದ್ದರಾಮಯ್ಯ.!
– ಚುನಾವಣಾ ರಾಜಕಾರಣ ಸಾಕು ಎಂದಿದ್ದೆಕೆ ಸಿಎಂ?

NAMMUR EXPRESS NEWS
ಮೈಸೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮುಂದಿನ ನಾಲ್ಕು ವರ್ಷಕ್ಕೆ ನನಗೆ 83 ವರ್ಷ ಆಗಿರುತ್ತದೆ. ಆಗ ಇಷ್ಟೊಂದು ಉತ್ಸಾಹದಲ್ಲಿ ಕೆಲಸ ಮಾಡು ಆಗುವುದಿಲ್ಲ ಎಂದು ಗೊತ್ತಿದೆ. ನನ್ನ ದೇಹದ ಸ್ಥಿತಿ ನನಗೆ ಮಾತ್ರ ಗೊತ್ತಿರುತ್ತದೆ. ಹೀಗಾಗಿ ಚುನಾವಣಾ ರಾಜಕಾರಣ ಸಾಕು ಎಂದುಕೊಂಡಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ. ಜನ ಪ್ರೀತಿಯಿಂದ ಮತ್ತೆ ಸ್ಪರ್ಧೆ ಮಾಡಿ ಎಂದು ಹೇಳುತ್ತಿದ್ದಾರೆ. ಆದರೆ ನಾನು ನಿವೃತ್ತಿಗೆ ತೀರ್ಮಾನಿಸಿದ್ದೇನೆ ಎಂದು ತಿಳಿಸಿದ್ದಾರೆ.

Categories
ಚಿಕ್ಕಮಗಳೂರು ಮಲ್ನಾಡ್ ಶಿವಮೊಗ್ಗ

ರಣ ಬಿಸಿಲಿಗೆ ಬೆಂದ ಕಾಫಿಗಿಡಗಳು, ಅಡಿಕೆ ಗಿಡಗಳು

– ರಣ ಬಿಸಿಲಿಗೆ ಬೆಂದ ಕಾಫಿಗಿಡಗಳು, ಅಡಿಕೆ ಗಿಡಗಳು
– ಮಳೆಗಾಗಿ ದೇವರ ಮೊರೆ ಹೋದ ಜನ
– ಬೆಳೆ ಕಳೆದುಕೊಳ್ಳುವ ಆತಂಕದಲ್ಲಿ ಮಲೆನಾಡಿಗರು

NAMMUR EXPRESS NEWS
ಚಿಕ್ಕಮಗಳೂರು/ ಶಿವಮೊಗ್ಗ: ಮಳೆಯಿಲ್ಲದೆ ರಾಜ್ಯದಲ್ಲಿನ ಅನ್ನದಾತ, ಜನರು ಕಂಗಾಲಾಗಿದ್ದಾರೆ. ಇನ್ನು 2024ರ ಏಪ್ರಿಲ್ ಕಳೆದರೂ ಯಾವುದೇ ಮಳೆಯ ಮುನ್ಸೂಚನೆ ಇಲ್ಲದೆ, ಬಿಸಿಲಿನ ವಾತಾವರಣ ಮುಂದುವರೆದಿದೆ. ಇದರಿಂದ ರಾಜ್ಯದ ಜನರು ಕಂಗೆಟ್ಟು ಹೋಗಿದ್ದಾರೆ. ಈ ನಡುವೆ ಮಲೆನಾಡಲ್ಲಿ ಅಡಿಕೆ, ಕಾಫಿ ತೋಟಗಳು ನೀರಿಲ್ಲದೆ ಒಣಗಿ ನಿಂತಿವೆ. ಇದ್ದ ಬೋರ್‌ವೆಲ್‌ಗಳು ಕೂಡ ನಿಂತುಹೋಗುವ ಹಂತವನ್ನು ತಲುಪಿದ್ದು, ಹಲವೆಡೆ ಜನರು ಮಳೆಗಾಗಿ ದೇವರವ ಮೊರೆ ಹೋಗುತ್ತಿರುವ ಘಟನೆಗಳನ್ನು ನಡೆಯುತ್ತಿದೆ.

ಹಿಂದೆಲ್ಲ ಮಲೆನಾಡು ಮಳೆನಾಡು ಆಗಿರುತ್ತಿತ್ತು. ಆದರೆ ಇದೀಗ ಬಿಸಿಲಿನ ನಾಡಾಗಿದ್ದು, ಕಾಫಿನಾಡಿನ ಜನರು ಬೆಳೆ ಕಳೆದುಕೊಳ್ಳುವ ಆತಂಕಲಿದ್ದಾರೆ. ಜನರು ಮಳೆಗಾಗಿ ವಿಶೇಷ ಪ್ರಾರ್ಥನೆ ಮಾಡಿದ್ದಾರೆ. ಮಲೆನಾಡು ಜಿಲ್ಲೆಯ ಬಹುತೇಕ ಭಾಗಗಲ್ಲಿ ಮಳೆ ಇಲ್ಲದೆ ನದಿ, ತೊರೆಗಳು ಬತ್ತಿ ಹೋಗುವ ಹಂತವನ್ನು ತಲುಪಿವೆ. ಮತ್ತೊಂದೆಡೆ ಕಾಫಿ ತೋಟಗಳು ಕೂಡ ಸೂರ್ಯನ ಶಾಖಕ್ಕೆ ಒಣಗುತ್ತಿದ್ದು, ಇದರಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ಕಳೆದ 15 ವರ್ಷಗಳ ಬಳಿಕ ತೀವ್ರ ಮಳೆಯ ಕೊರತೆ ಎದುರಾಗಿದೆ.

ಸಾವಿರ ಅಡಿ ಕೊರೆದರೂ ನೀರು ಬಾರದ ಬೋರ್!

ಮಲೆನಾಡಲ್ಲಿ ಜಲ ಮೂಲ ಚೆನ್ನಾಗಿತ್ತು. ಆದರೆ ಅತಿಯಾದ ಅರಣ್ಯ ನಾಶ, ಪರಿಸರ ಹಾನಿ ಇದೀಗ ನೀರು ಬತ್ತುವಂತೆ ಮಾಡಿದೆ. ಈಗ ಸಾವಿರಾರು ಅಡಿ ಕೊರೆದರೂ ನೀರು ಬರುತ್ತಿಲ್ಲ.

Categories
ಅಂತಾರಾಷ್ಟ್ರೀಯ ಸುದ್ದಿ ಕೃಷಿ ರಾಜ್ಯ ರಾಷ್ಟ್ರೀಯ ವಾರ್ತೆ

ಭಾರತದ ಹಸು ವಿಶ್ವದಲ್ಲೇ ದುಬಾರಿ!

ಭಾರತದ ಹಸು ವಿಶ್ವದಲ್ಲೇ ದುಬಾರಿ!
– ನೆಲ್ಲೂರು ತಳಿಯ ಈ ಹಸು ಬೆಲೆ 40 ಕೋಟಿ ರೂ.
– ಮೂಲತಃ ಆಂಧ್ರ ಪ್ರದೇಶದ ತಳಿ
– ರೋಗ ಬರುವುದಿಲ್ಲ ಸಾಂಕ್ರಾಮಿಕ ರೋಗ ಹಬ್ಬಿದರೂ ಇದಕ್ಕೆ ತಾಕುವುದಿಲ್ಲ

NAMMUR EXPRESS :
ಅರಾಂಡು(ಬ್ರೆಜಿಲ್): ಭಾರತದ ಮೂಲದ ಹಸು ವಿಶ್ವದಲ್ಲೇ ದುಬಾರಿ ಹಸುವಾಗಿದೆ. ನೆಲ್ಲೂರು ತಳಿಯ ಈ ಹಸು ಬೆಲೆ 40 ಕೋಟಿ ರೂ. ಮೂಲತಃ ಆಂಧ್ರ ಪ್ರದೇಶದ ತಳಿ ಇದಾಗಿದೆ. ಇದಕ್ಕೆ ರೋಗ ರೋಗ ಬರುವುದಿಲ್ಲ ಸಾಂಕ್ರಾಮಿಕ ರೋಗ ಹಬ್ಬಿದರೂ ಇದಕ್ಕೆ ತಾಕುವುದಿಲ್ಲ ಬ್ರೆಜಿಲ್ ದೇಶದ ಅರಾಂಡು ಎಂಬ ಪ್ರದೇಶದಲ್ಲಿ ನಡೆದ ಹರಾಜಿನಲ್ಲಿ ಕುಬೇರ ರೈತರೊಬ್ಬರು ಭಾರಿ ಮೊತ್ತವನ್ನು ಕೊಟ್ಟು ‘ವಿಯಾಟಿನ್-19 ಎಫ್‌ಐವಿ ಮಾರಾ ಇಮೊವಿಸ್’ ಎಂದು ಹೆಸರಿಸಲಾಗಿದ್ದ ಹಸು ಈಗ ಭಾರೀ ಸುದ್ದಿಯಲ್ಲಿದೆ. ಇದು ಮೂಲತಃ ಆಂಧ್ರ ಪ್ರದೇಶದ ನೆಲ್ಲೂರಿನ ತಳಿ. ಕಡು ಕಠಿಣ ಹವಾಮಾನಕ್ಕೂ ಕೊಂಚ ಕೂಡ ಅಂಜುವುದಿಲ್ಲ; ಅಳುಕುವುದಿಲ್ಲ. ರೋಗ ಬರುವುದಿಲ್ಲ. ಸಾಂಕ್ರಾಮಿಕ ರೋಗ ಹಬ್ಬಿದರೂ ಇದಕ್ಕೆ ತಾಕುವುದಿಲ್ಲ.

ಬಿಳಿ ಮೈ ಬಣ್ಣ, ಉಣ್ಣೆಯಂತಹ ಚರ್ಮ, ಎತ್ತರದ ಭುಜುಕ್ಕೆ ಹೆಸರುವಾಸಿಯಾಗಿದೆ. ನೆಲ್ಲೂರಿನಿಂದ ಬ್ರೆಜಿಲ್‌ಗೆ ಬಂದು ಇಲ್ಲಿ ನೆಲೆಯೂರಿ ಪ್ರವರ್ಧಮಾನಕ್ಕೆ ಬಂದಿದೆ. ನೆಲ್ಲೂರು ತಳಿಗೆ ದೊಡ್ಡ ಗತ ಇತಿಹಾಸವಿದೆ. ಅನುವಂಶಿಕ ಉತ್ಕೃಷ್ಟತೆಗೆ ಅನನ್ಯವಾದ ಹೆಸರು ಸಂಪಾದಿಸಿದೆ. ಇದರ ವಂಶವಾಹಿ ಗುಣಗಳು, ಭ್ರೂಣದಿಂದ ಹುಟ್ಟುವ ಸಂತತಿ ಕೂಡ ಅಸಾಧಾರಣ ಗುಣಲಕ್ಷಣಗಳನ್ನು ಹೊಂದಿರುತ್ತದೆ ಎಂದು ಪಾಲ್ಗೊಂಡಿದ್ದ ಬಿಡ್‌ದಾರರು ಹೊಗಳಿದ್ದಾರೆ.

Categories
ರಾಜಕೀಯ ರಾಜ್ಯ ಶಿವಮೊಗ್ಗ

ಈಶ್ವರಪ್ಪ ವಿರುದ್ಧ ರಾಘವೇಂದ್ರ ಗುಟುರು!

ಈಶ್ವರಪ್ಪ ವಿರುದ್ಧ ರಾಘವೇಂದ್ರ ಗುಟುರು!
– ಪೊಳ್ಳು ಹಿಂದುತ್ವ ವಾದಿಗಳಿಂದ ನಮಗೆ ಪಾಠ ಬೇಕಾಗಿಲ್ಲ
– ಎರಡೇ ವಾರದಲ್ಲಿ ಈಶ್ವರಪ್ಪನವರಲ್ಲಿ ಈ ಬದಲಾವಣೆ ಏಕಾಯಿತು?: ಬಿ.ವೈ. ರಾಘವೇಂದ್ರ ಟೀಕೆ

NAMMUR EXPRESS NEWS
ಬೈಂದೂರು: ಪ್ರಚಾರಕ್ಕಾಗಿ ಹಿಂದುತ್ವ ಪ್ರದರ್ಶಿಸುವವರು ನಾವಲ್ಲ, ಹಿಂದುತ್ವವಾದ ವಿಚಾರದಲ್ಲಿ ನಮ್ಮ ಮೈಯಲ್ಲಿ ಹರಿಯುತ್ತಿರುವ ಒಂದೊಂದು ಹನಿ ರಕ್ತವೂ ಕೂಡ ಹಿಂದುವೇ ಆಗಿದೆ. ಪೊಳ್ಳು ಹಿಂದುತ್ವವಾದಿಗಳಿಂದ ನಮಗೆ ಪಾಠ ಬೇಕಾಗಿಲ್ಲ, ಆದರೆ ಕೇವಲ ಎರಡೇ ವಾರದಲ್ಲಿ ಈಶ್ವರಪ್ಪನವರಲ್ಲಿ ಈ ಬದಲಾವಣೆ ಏಕಾಯಿತು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಟೀಕಿಸಿದ್ದಾರೆ. ಶಿವಮೊಗ್ಗ ಲೋಕ ಸಭಾ ಕ್ಷೇತ್ರದ ಬೈಂದೂರು ತಾಲೂಕು ನಾಗೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಿ. ವೈ.ರಾಘವೇಂದ್ರ ಎಂಬುದನ್ನು ಪಕ್ಷವೇ ಅಧಿಕೃತವಾಗಿ ಘೋಷಣೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ, ಅವರ ಪಕ್ಕದಲ್ಲೇ ನನ್ನನ್ನು ನಿಲ್ಲಿಸಿಕೊಂಡು ಪ್ರಚಾರವನ್ನು ಮಾಡಿ, ರಾಘವೇಂದ್ರ ಅವರಿಗೆ ಹಾರೈಸಿ, ಆಶೀರ್ವಾದ ಮಾಡಿದ್ದಾರೆ.‌ ಇಡೀ ಬಿಜೆಪಿ, ಪರಿವಾರ ನಮ್ಮ ಜತೆಗೆ ಇದೆ” ಎಂದರು.

ಯಡಿಯೂರಪ್ಪನವರ ಕುಟುಂಬ ಎಲ್ಲ ಸಮಾಜವನ್ನು ಸಮಾನವಾಗಿ ಕಂಡಿದೆ ಮತ್ತು ಕಾಣುತ್ತಿದೆ ಎಂದು ಕಳೆದ ಎರಡು ವಾರದ ಕೆಳಗೆ ಈಶ್ವರಪ್ಪನವರು ಶಿಕಾರಿಪುರಕ್ಕೆ ಬಂದಿದ್ದಾಗ ಹೇಳಿದ್ದರು. ಐದು ಲಕ್ಷಕ್ಕೂ ಆಧಿಕ ಅಂತರದಲ್ಲಿ ರಾಘವೇಂದ್ರ ಅವರನ್ನು ಗೆಲ್ಲಿಸಬೇಕು ಎಂದು ಅವರೇ ಹೇಳಿದ್ದರು. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ ಎಂದು ಅವರೇ ಹಾರೈಸಿದ್ದರು. ಕೇವರ ಎರಡೇ ವಾರದಲ್ಲಿ ಈಶ್ವರಪ್ಪನವರಲ್ಲಿ ಈ ಬದಲಾವಣೆ ಏಕಾಯಿತು? ಇದನ್ನೆಲ್ಲವನ್ನು ಮತದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಶಿವಮೊಗ್ಗದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ಈಶ್ವರಪ್ಪ ವಿರುದ್ದ ಹರಿಹಾಯ್ದರು.

Categories
ಬೆಂಗಳೂರು ರಾಜ್ಯ ಶಿಕ್ಷಣ

ಏಪ್ರಿಲ್ 10ರಿಂದ 15ರೊಳಗೆ ದ್ವಿತೀಯ ಪಿಯು ಫಲಿತಾಂಶ?

ಏಪ್ರಿಲ್ 10ರಿಂದ 15ರೊಳಗೆ ದ್ವಿತೀಯ ಪಿಯು ಫಲಿತಾಂಶ?
– 5, 8ಮತ್ತು 9ನೇ ತರಗತಿಗಳ ಫಲಿತಾಂಶ ಏ.10ಕ್ಕೆ ಸಾಧ್ಯತೆ
– ವಿದ್ಯಾರ್ಥಿಗಳಿಗೆ, ಪೋಷಕರಿಗೆ ಕುತೂಹಲ

NAMMUR EXPRESS NEWS
ಬೆಂಗಳೂರು: ದ್ವಿತೀಯ ಪಿಯು ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯುತ್ತಿದ್ದು, ಏಪ್ರಿಲ್ 10ರಿಂದ 15ರೊಳಗೆ ಫಲಿತಾಂಶ ಪ್ರಕಟಿಸುವ ನಿರೀಕ್ಷೆ ಇದೆ. ಮಾ.25ರಿಂದ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಕಳೆದ ಮಾ.1ರಿಂದ 22ರವರೆಗೆ ನಡೆದಿತ್ತು. ಮೌಲ್ಯಮಾಪನ ಕಾರ್ಯ ಪ್ರಗತಿಯಲ್ಲಿದೆ. ಏಪ್ರಿಲ್ 15ರೊಳಗೆ ಫಲಿತಾಂಶ ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಾಂಕನ ಮಂಡಳಿ ಕಾರ್ಯೋನ್ಮುಖವಾಗಿದೆ. ಇದರ ಜತೆಗೆ 5, 8ಮತ್ತು 9ನೇ ತರಗತಿಗಳ ಮೌಲ್ಯಾಂಕನ ಪರೀಕ್ಷೆಯ ಮೌಲ್ಯಮಾಪನ ಸಹ ತಾಲೂಕು ಹಂತದಲ್ಲಿ ನಡೆಯುತ್ತಿದೆ. ಇದರ ಫಲಿತಾಂಶ ಸಹ ಏ.10ಕ್ಕೆ ಪ್ರಕಟವಾಗುವ ಸಾಧ್ಯತೆಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಾಂಕನ ಮಂಡಳಿ ವ್ಯಕ್ತಪಡಿಸಿದೆ.

Categories
ತೀರ್ಥಹಳ್ಳಿ

ತುಂಗಾ ನದಿ ಈಜು ಪ್ರಾಣಕ್ಕೆ ಕುತ್ತು ಹುಷಾರ್..!

ತುಂಗಾ ನದಿ ಈಜು ಪ್ರಾಣಕ್ಕೆ ಕುತ್ತು ಹುಷಾರ್..!
– ಜೀವ ಹೋಗುತ್ತೆ ಅಂತ ಗೊತ್ತಿದ್ರೂ ಈಜುವ ಹುಚ್ಚಾಟ
– ಯುವ ಜನತೆಯ ಅತಿರೇಕದ ವರ್ತನೆಗೆ ಪೋಷಕರು ಹೈರಾಣ
– ತೀರ್ಥಹಳ್ಳಿ: ಮೂವರ ಅಂತ್ಯಕ್ರಿಯೆ, ಕುಟುಂಬದ ಕಣ್ಣೀರು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತುಂಗಾ ನದಿಯಲ್ಲಿ ಸೋಮವಾರ ನಡೆದ ಘಟನೆ ಇಡೀ ತೀರ್ಥಹಳ್ಳಿಗೆ ಎಚ್ಚರಿಕೆ ಕರೆಗಂಟೆಯಾಗಿದೆ. ತುಂಗಾ ನದಿ ಅಪಾಯ ಎಂದು ಗೊತ್ತಿದ್ದರೂ ಸಹ ಮಕ್ಕಳು, ಯುವ ಜನತೆ ಇಲ್ಲಿ ಇಳಿಯುವ ಹುಚ್ಚಾಟ ಮಾಡುತ್ತಾರೆ. ಇದೀಗ 17 ವರ್ಷ ಸಾಕಿ ಸಲುಹಿದ ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯಬೇಕಿದೆ.

ಮಾತು ಕೇಳದ ಯುವ ಜನತೆ!

ಇತ್ತೀಚೆಗೆ ಯುವಜನತೆಯ ಹುಚ್ಚಾಟವು ಹೆಚ್ಚಾಗುತ್ತಿದ್ದು, ಪೋಷಕರ ಮಾತು ಕೇಳುತ್ತಿಲ್ಲ. ತಮ್ಮ ಅತಿರೇಕದ ವರ್ತನೆಯಿಂದ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಪ್ರಾಣಕ್ಕೆ ಅಪಾಯವಿದೆ ಅಂತ ಗೊತ್ತಿದ್ರೂ ಕೂಡ ಯುವಜನತೆ ಹುಚ್ಚಾಟ ಬಿಡುತ್ತಿಲ್ಲ. ಅವರದ್ದೇ ನಡೆಯಬೇಕು ಎನ್ನುವ ಹಟ, ಇದು ನಿಜಕ್ಕೂ ಪೋಷಕರಿಗೆ ಬೇಸರ ತರಿಸುತ್ತಿದೆ ಇದು ಇಂದಿನ ಬಹುತೇಕ ಪೋಷಕರ ಅಳಲು ಕೂಡ ಹೌದು.

ಸೋಮವಾರ ಸಂಜೆ ರಂಜಾನ್ ಉಪವಾಸ ಮುಗಿಸಿ ಈಜಲು ತೆರಳಿದ್ದ ಮೂವರು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ತೀರ್ಥಹಳ್ಳಿ ತುಂಗಾ ನದಿಯಲ್ಲಿ ನಡೆದಿದೆ. ಈ ಹಿಂದೆ ಕೂಡ ಸೆಲ್ಫಿ ತೆಗೆಯಲು ಹೋಗಿ ನೀರಿನಲ್ಲಿ ಬಿದ್ದು ಮೃತಪಟ್ಟ ಘಟನೆ ಇತ್ತೀಚೆಗಷ್ಟೇ ನಡೆದಿತ್ತು, ಯುವಜನತೆಯ ಗೊತ್ತಿದ್ದು ಗೊತ್ತಿದ್ದು ಕೂಡ ಅಜಾಗರೂಕತನದಿಂದ ಸಾವನ್ನಪ್ಪುವ ಘಟನೆಗಳು ವರದಿಯಾಗುತ್ತಲೇ ಇದೆ. ಈ ಬಗ್ಗೆ ಯುವ ಜನತೆಯಲ್ಲಿ ಎಷ್ಟೇ ಎಚ್ಚರ ಮೂಡಿಸಿದರೂ ಕೂಡ ಹುಚ್ಚಾಟ ಬಿಡುತ್ತಿಲ್ಲ. ಪೋಷಕರ ಮಾತನ್ನು ನಿರ್ಲಕ್ಷಿಸಿ ಅಜಾಗರೋಕರಾಗಿ ವರ್ತಿಸುತ್ತಿರುವುದು ಇದಕ್ಕೆಲ್ಲ ಕಾರಣವಾಗಿದೆ. ಜತೆಗೆ ಮೊಬೈಲ್ ಗೀಳು ಯುವ ಜನರ ಬದುಕು ಬಲಿ ಪಡೆಯುತ್ತಿದೆ.

ಮೂವರ ಅಂತ್ಯಕ್ರಿಯೆ: ಕುಟುಂಬದ ಕಣ್ಣೀರು

ರಂಜಾನ್ ಉಪವಾಸ ಮುಗಿಸಿ ಈಜಲು ಹೋಗಿದ್ದ ಮೂವರು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ತುಂಗಾ ನದಿಯಲ್ಲಿ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿತ್ತು. ರಫಾನ್ (17) ಮಹಮ್ಮದ್ ರಫಿ ಪುತ್ರ, ಅಯಾನ್ (17) ಅವರ ಶಹಬಾದ್ ಪುತ್ರ, ಸಮರ್ (17) ಹಸನ್ ಅಬೂಬಕ್ಕರ್ ಅವರ ಪುತ್ರರು. ಉಪವಾಸ ಮುಗಿಸಿ ಈಜಲು ಹೋದಾಗ ಓರ್ವ ಮೊದಲು ಮುಳುಗಿದ್ದಾನೆ. ಆತನನ್ನು ರಕ್ಷಿಸಲು ಹೋದ ಮೂವರು ಕೂಡ ಮೃತಪಟ್ಟಿದ್ದಾರೆ. ಮಂಗಳವಾರ ಅಂತ್ಯಕ್ರಿಯೆ ನಡೆದಿದೆ. ಇಡೀ ಕುಟುಂಬಗಳು ಕಣ್ಣೀರಲ್ಲಿ ಮುಳುಗಿವೆ.

ಕುಟುಂಬಕ್ಕೆ ಸಾಂತ್ವನ ಹೇಳಿದ ಆರಗ ಜ್ಞಾನೇಂದ್ರ

ತೀರ್ಥಹಳ್ಳಿ ತುಂಗಾ ನದಿಯಲ್ಲಿ ಸ್ನಾನ ಮಾಡುವಾಗ ಆಕಸ್ಮಿಕವಾಗಿ ಮುಳುಗಿ ಮರಣ ಹೊಂದಿದ 3 ಜನ ಯುವಕರ ಶವ ಜೆಸಿ ಆಸ್ಪತ್ರೆ ಶವಾಗಾರದಲ್ಲಿದ್ದ ವೇಳೆ ಶಾಸಕರಾದ ಆರಗ ಜ್ಞಾನೇಂದ್ರ ಭೇಟಿ ನೀಡಿ ಯುವಕರ ಅಂತಿಮ ದರ್ಶನ ಪಡೆಯಲಾಯಿತು. ನಂತರ ಯುವಕರ ಮನೆಗಳಿಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಲಾಯಿತು

Categories
ರಾಜ್ಯ

ಟಾಪ್ 7 ನ್ಯೂಸ್ ಕರ್ನಾಟಕ

ಬೆಂಗಳೂರು : ಬಾರ್‌ನಲ್ಲಿ ಕುಡುಕರ ಗಲಾಟೆ ಓರ್ವನಿಗೆ ಚಾಕು ಇರಿತ
– ಬಾಗಲಕೋಟೆ : ಗಲಾಟೆ ಬಿಡಿಸಲು ಹೋದ ಮಹಿಳೆಯ ಎದೆಗೆ ಗುದ್ದಿ ಕೊಂದರು
– ಬಾಗಲಕೋಟೆ: ಆಸ್ತಿ ವಿಚಾರಕ್ಕೆ ಕೊಡಲಿಯಿಂದ ಕೊಚ್ಚಿ ಅಣ್ಣನನ್ನೇ ಕೊಲೆಗೈದ ತಮ್ಮ!
– ತುಮಕೂರು : ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ!
– ಹಾಸನ : ಪೊದೆಯಲ್ಲಿತ್ತು ನಿವೃತ್ತ ಬ್ಯಾಂಕ್ ನೌಕರನ ಕೊಳೆತ ಶವ
– ದೇವನಹಳ್ಳಿ: ರೈಲ್ವೆ ನಿಲ್ದಾಣದಲ್ಲಿ ನೇತಾಡುತ್ತಿತ್ತು ಅಪರಿಚಿತನ ಶವ
– ತುಮಕೂರು : ಕಂಟೇನರ್‌ ವಾಹನದಲ್ಲಿ ಅಕ್ರಮ ಗೋ ಸಾಗಣೆ

NAMMUR EXPRESS NEWS
ಬೆಂಗಳೂರು: ಕುಡಿದ ಅಮಲಿನಲ್ಲಿ ಯುವಕರು ಗಲಾಟೆ ಮಾಡಿಕೊಂಡಿದ್ದು, ಘಟನೆಯಲ್ಲಿ ಓರ್ವ ಚಾಕು ಇರಿತಕ್ಕೆ ಒಳಗಾಗಿದ್ದಾನೆ. ಬೆಂಗಳೂರಿನ ಬಾಣಸವಾಡಿಯ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಘಟನೆ ನಡೆದಿದೆ. ಇಮ್ರಾನ್ ಎಂಬಾತ ಚಾಕು ಇರಿತಕ್ಕೊಳಗಾದವನು. ಪ್ರಶಾಂತ್ ಮತ್ತು ವಿಜೀರ್ ಎಂಬುವರಿಂದ ಕೃತ್ಯ ನಡೆದಿದೆ. ಸೋಮವಾರ ರಾತ್ರಿ ಬಾರ್‌ಗೆ ಬಂದಿದ್ದ ಈ ಮೂವರು ಅಕ್ಕಪಕ್ಕದ ಟೇಬಲ್‌ನಲ್ಲಿ ಕುಳಿತು ಕುಡಿಯುತ್ತಿದ್ದರು. ಅಮಲು ಏರುತ್ತಿದ್ದಂತೆ ಕ್ಷುಲ್ಲಕ ವಿಚಾರಕ್ಕೆ ಇಮ್ರಾನ್ ಹಾಗೂ ಪ್ರಶಾಂತ್ ನಡುವೆ ಗಲಾಟೆ ನಡೆದಿದೆ. ಈ ವೇಳೆ ಇಮ್ರಾನ್‌ಗೆ ಚಾಕುವಿನಿಂದ ಇರಿದು ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಇಮ್ರಾನ್‌ನನ್ನು ಬಾರ್‌ನಲ್ಲಿದ್ದವರು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳವು ಸಾವಿನಲ್ಲಿ ಅಂತ್ಯವಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಿಂಗಪೂರದಲ್ಲಿ ಘಟನೆ ನಡೆದಿದೆ. ತಾಯವ್ವ ಸಾಲಮಂಟಪಿ (60) ಮೃತ ದುರ್ದೈವಿ. ಸಾರಾಯಿ ಮಾರಾಟ ಮಾಡುತ್ತಾರೆ ಎಂಬ ವಿಚಾರವನ್ನು ಕೇಳಲು ತಾಯವ್ವ ಸಹೋದರ ವಿಠ್ಠಲ ಸಾಲಮಂಟಪಿ ಹೋಗಿದ್ದರು. ಸೋಮವಾರ ರಾತ್ರಿ1 ಗಂಟೆಗೆ ಆರೋಪಿಗಳ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ವಿಠ್ಠಲ ಹಾಗೂ ಮಾದರ ಕುಟುಂಬಸ್ಥರ ನಡುವೆ ಮಾರಾಮಾರಿ ನಡೆದಿದೆ. ವಿಠ್ಠಲ ಸಹೋದರಿ ತಾಯವ್ವ ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ್ದಾರೆ. ಈ ವೇಳೆ ತಾಯವ್ವಳಿಗೆ ಅವಾಚ್ಯ ಶಬ್ಧದಿಂದ ನಿಂದಿಸಿ, ಆಕೆಯ ಎದೆ ಭಾಗಕ್ಕೆ ಜೋರಾಗಿ ಗುದ್ದಿ ತಳ್ಳಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ತಾಯವ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಹಿಂದೆಯೂ ಸಾರಾಯಿ ಮಾರಾಟ ಮಾಡುವ ವಿಚಾರಕ್ಕೆ ವಿಠ್ಠಲ ಸಾಲಮಂಟಪಿ ಹಾಗೂ ಮಾದರ ಕುಟುಂಬಸ್ಥರ ನಡುವೆ ಜಗಳ ಆಗಿತ್ತು. ನಿನ್ನೆಯೂ ಇದೇ ವಿಚಾರವನ್ನು ಕೇಳಲು ಹೋದಾಗ ಗಲಾಟೆ ಶುರುವಾಗಿ, ವೃದ್ಧೆಯ ಸಾವಿನಲ್ಲಿ ಅಂತ್ಯವಾಗಿದೆ.

ಬಾಗಲಕೋಟೆ: ತೋಟಕ್ಕೆ ಮೇವು ತರಲು ಹೊಗಿದ್ದ ವೇಳೆ ಕೊಡಲಿಯಿಂದ ಕೊಚ್ಚಿ ಅಣ್ಣನನ್ನೇ ತಮ್ಮ ಕೊಲೆಗೈದಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಜಾಲಿಬೇರ ಗ್ರಾಮದಲ್ಲಿ ನಡೆದಿದೆ. ಬೈಕ್‌ನಲ್ಲಿ ಹೊಗುತ್ತಿದ್ದಾಗ ಕುತ್ತಿಗೆಗೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಉತ್ತಮ ಯಾದವ್ (55) ಕೊಲೆಯಾದ ವ್ಯಕ್ತಿ. ಆನಂದ ಯಾದವ್ ಕೊಲೆ ಆರೋಪಿ. ಜಮೀನು ವಿಚಾರಕ್ಕೆ ಸಹೋದರನನ್ನೇ ವ್ಯಕ್ತಿ ಮಾಡಿದ್ದಾನೆ. ತೋಟದಲ್ಲಿ ಮೇವು ತರಲು ಹೋಗಿದ್ದಾಗ ಅಣ್ಣನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿ ತಮ್ಮ ಕೊಂದಿದ್ದಾನೆ. ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರು: ಸುಟ್ಟ ಸ್ಥಿತಿಯಲ್ಲಿ ಯುವತಿಯೊಬ್ಬಳ ಮೃತದೇಹವು ಪತ್ತೆಯಾಗಿದೆ. ತುಮಕೂರಿನ ಗುಬ್ಬಿ ತಾಲೂಕಿನ ದೊಡ್ಡಗುಣಿ ಬಳಿಯ ಶಿವಮೊಗ್ಗ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206ರ ಪಕ್ಕದಲ್ಲಿ ಘಟನೆ ನಡೆದಿದೆ. ಸುಮಾರು 25 ವರ್ಷದ ಯುವತಿಯನ್ನು ಕೊಲೆ ಮಾಡಿ ಬಳಿಕ ಗುರುತು ಸಿಗಬಾರೆಂದು ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿದೆ. ಅರ್ಧಂಬರ್ಧ‌ ಸುಟ್ಟಿರುವ ಯುವತಿ ಶವ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಯುವತಿ ಮುಖವು ಸಂಪೂರ್ಣ ಸುಟ್ಟು ಹೋಗಿದ್ದು, ಗುರುತು ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಸದ್ಯ ಚೇಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಹಾಸನ: ನಾಪತ್ತೆಯಾಗಿದ್ದ ನಿವೃತ್ತ ಬ್ಯಾಂಕ್ ನೌಕರ ಶವವಾಗಿ ಪತ್ತೆಯಾಗಿದ್ದಾರೆ. ಮಂಜುನಾಥ್ (70) ಅನುಮಾನಾಸ್ಪದವಾಗಿ ಮೃತಪಟ್ಟವರು. ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದಲ್ಲಿ ಘಟನೆ ನಡೆದಿದೆ. ಅರಸೀಕೆರೆ ನಗರದ ಲಕ್ಷ್ಮಿಪುರ ಬಡಾವಣೆಯ ನಿವಾಸಿಯಾದ ಮಂಜುನಾಥ್, ಕಳೆದ ಮಾ.27 ರಂದು ಸಂಜೆ ಸಮಯ ವಾಕಿಂಗ್‌ಗೆ ಎಂದು ಮನೆಯಿಂದ ತೆರಳಿದ್ದರು. ರಾತ್ರಿ ಕಳೆದರು ಮಂಜುನಾಥ್‌ ಮನೆಗೆ ವಾಪಸ್ ಬಾರದೇ ಇದ್ದಾಗ, ಮನೆ ಮಂದಿ ಎಲ್ಲ ಕಡೆ ಹುಡುಕಾಡಿದ್ದಾರೆ. ನಂತರ ಯಾವುದೇ ಸುಳಿವು ಸಿಗದೇ ಇದ್ದಾಗ ಮಂಜುನಾಥ್‌ ಪತ್ನಿ ಸರೋಜಾ ನಿಂಬಣ್ಣನವರ್‌ ಮರುದಿನ ಮಾ.28 ರಂದು ಅರಸೀಕೆರೆ ನಗರ ಪೊಲೀಸ್ ಠಾಣೆಗೆ ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದರು.
ಇದೀಗ ಏ.2ರಂದು ಕಂತೇನಹಳ್ಳಿ ಕೆರೆ ಪಕ್ಕದ ಪಾರ್ಕ್‌ನಲ್ಲಿ ಗಬ್ಬು ನಾರುವ ವಾಸನೆ ಬರುತ್ತಿತ್ತು. ಈ ವೇಳೆ ಪರಿಶೀಲನೆ ನಡೆಸಿದಾಗ ಪೊದೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಜುನಾಥ್ ಅವರ ಮೃತದೇಹ ಪತ್ತೆಯಾಗಿದೆ. ಕೂಡಲೇ ವಾಯು ವಿಹಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಜುನಾಥ್ ಅವರ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ದೇವನಹಳ್ಳಿ: ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ರೈಲ್ವೆ ನಿಲ್ದಾಣದ ಬಿಡ್ಜ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ನೇತಾಡುತ್ತಿತ್ತು. ದೇವನಹಳ್ಳಿ ಹೊರ ವಲಯದ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ. ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಸುಮಾರು 30 ವರ್ಷದ ವ್ಯಕ್ತಿ ಶವ ಪತ್ತೆಯಾಗಿದ್ದು, ಕೊಲೆಯೋ, ಆತ್ಮಹತ್ಯೆಯೋ ಎಂಬ ಅನುಮಾನ ಮೂಡಿದೆ. ಸ್ಥಳಕ್ಕೆ ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಮೃತನ ಗುರುತು ಪತ್ತೆಗೆ ಮುಂದಾಗಿದ್ದಾರೆ.

ತುಮಕೂರು: ಪೊಲೀಸರು ಎಷ್ಟೇ ಹದ್ದಿನ ಕಣ್ಣಿಟ್ಟರು ಅಕ್ರಮ ಗೋವು ಸಾಗಾಣೆ ನಡೆಯುತ್ತಲೆ ಇದೆ. ಸದ್ಯ ಅಕ್ರಮ ಗೋವು ಸಾಗಾಟ ಮಾಡುತ್ತಿದ್ದವರನ್ನು ಬಜರಂಗದಳ ಕಾರ್ಯಕರ್ತರು ಪತ್ತೆ ಮಾಡಿದ್ದಾರೆ. ಕಂಟೇನರ್‌ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ಬಜರಂಗದಳ ಕಾರ್ಯಕರ್ತರು ರಕ್ಷಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ತುಮಕೂರಿನ ಕ್ಯಾತ್ಸಂದ್ರ ಬಳಿಯಿರುವ ಟೋಲ್‌ ಬಳಿ ದಾಳಿ ಮಾಡಿದಾಗ ವಾಹನದಲ್ಲಿ 20 ಗೋವುಗಳು ಇರುವುದು ಪತ್ತೆಯಾಗಿದೆ. ಚಿತ್ರದುರ್ಗದಿಂದ ತುಮಕೂರು ಮಾರ್ಗವಾಗಿ ಬೆಂಗಳೂರು ಕಡೆಗೆ ಅಕ್ರಮವಾಗಿ ಗೋವುಗಳನ್ನು ಸಾಗಾಣೆ ಮಾಡಲಾಗುತ್ತಿತ್ತು. ಕಂಟೇನರ್ ವಾಹನದಲ್ಲಿದ್ದ 20 ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಸಾಯಿ ಖಾನೆಗೆ ಸಾಗಿಸಲಾಗುತ್ತಿತ್ತು. ಸದ್ಯ ಗೋ ಹತ್ಯೆ ನಿಷೇಧ ಕಾನೂನು ಕಾಯ್ದೆ 2020ರ ಅನ್ವಯ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Categories
ಬೆಂಗಳೂರು ರಾಜ್ಯ

ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಪ್ಲಾನರ್ ಸ್ಟೋರಿ!

ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಪ್ಲಾನರ್ ಸ್ಟೋರಿ!
– ಹೆಗಡೆನಗರದಲ್ಲಿ ವಾಸ, ಜಕ್ಕೂರಿನಲ್ಲಿ ಕೆಲಸ
– ಔಷಧಿ ಮಳಿಗೆಯೊಂದರಲ್ಲಿ ಕೆಲಸಕ್ಕೆ ಸೇರಿ ಬಳಿಕ ಉಗ್ರ ಚಟುವಟಿಕೆ

NAMMUR EXPRESS NEWS
ಬೆಂಗಳೂರು: ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿಸಲಾಗಿರುವ ಮುಜಮೀಲ್ ಶರೀಫ್ (31), ಬೆಂಗಳೂರಿನಲ್ಲಿ ಐದು ವರ್ಷಗಳಿಂದ ವಾಸವಿದ್ದನೆಂಬ ಸಂಗತಿ ಎನ್‌ಐಎ ಅಧಿಕಾರಿಗಳ ತನಿಖೆಯಿಂದ ಗೊತ್ತಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸದ ಮುಜಮೀಲ್‌, 2019ರಲ್ಲಿ ಬೆಂಗಳೂರಿಗೆ ಬಂದಿದ್ದ. ಸ್ನೇಹಿತರ ಸಹಾಯದಿಂದ ಹೆಗಡೆನಗರದ ಕೊಠಡಿಯೊಂದರಲ್ಲಿ ಉಳಿದುಕೊಂಡಿದ್ದ. ಜಕ್ಕೂರು ಲೇಔಟ್‌ನಲ್ಲಿರುವ ಔಷಧಿ ಮಳಿಗೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ’ ಎಂದು ತನಿಖಾ ಸಂಸ್ಥೆ ಮೂಲಗಳು ಹೇಳಿವೆ. ಮುಜಮೀಲ್‌ ಅವರ ಕುಟುಂಬದವರು ಸಹ ಕಳಸದಿಂದ ಚಿಕ್ಕಮಗಳೂರಿಗೆ ಸ್ಥಳಾಂತರಗೊಂಡಿದ್ದರು. ಬೆಂಗಳೂರಿನಲ್ಲಿದ್ದ ಮುಜಮೀಲ್, ಆಗಾಗ ಚಿಕ್ಕಮಗಳೂರಿಗೆ ಹೋಗಿ ಬರುತ್ತಿದ್ದ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಮನೆಯಲ್ಲಿ ಹೇಳಿದ್ದ. ಬೆಂಗಳೂರಿನ ಬಹುತೇಕ ಪ್ರದೇಶಗಳ ಪರಿಚಯ ಈತನಿಗಿತ್ತು ಎಂದು ಮೂಲಗಳು ತಿಳಿಸಿವೆ.

ಕೆಲಸ ಬಿಡಿಸಿದ್ದ ಮಾಲೀಕ.!

ಜಕ್ಕೂರು ಲೇಔಟ್‌ನಲ್ಲಿರುವ ಪ್ರತಿಷ್ಠಿತ ಕ್ಲಿನಿಕ್ ಪಕ್ಕವೇ ಔಷಧಿ ಮಳಿಗೆ ಇದೆ. ಈ ಮಳಿಗೆಯಲ್ಲಿ ಸಹಾಯಕನಾಗಿ ಮುಜಮೀಲ್‌ ಕೆಲಸಕ್ಕೆ ಸೇರಿದ್ದ. ಈತನಿಗೆ ಪ್ರತಿ ತಿಂಗಳು ₹ 8,000 ಸಂಬಳ ನೀಡಲಾಗುತ್ತಿತ್ತು ಎಂದು ಮೂಲಗಳು ಹೇಳಿವೆ. ಹೆಗಡೆನಗರದಿಂದಲೇ ನಿತ್ಯವೂ ಕೆಲಸಕ್ಕೆ ಹೋಗಿ ಬರುತ್ತಿದ್ದ ಮುಜಮೀಲ್, ಹೆಚ್ಚಾಗಿ ಬಸ್‌ಗಳಲ್ಲಿ ಸಂಚರಿಸುತ್ತಿದ್ದ. ಈತ, ಆರಂಭದಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿದ್ದ. ನಂತರ, ಕೆಲಸಕ್ಕೆ ತಡವಾಗಿ ಬರಲಾರಂಭಿಸಿದ್ದ. ಏಕಾಏಕಿ ರಜೆ ಪಡೆದು, ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗುತ್ತಿದ್ದ. ಕೆಲಸದಲ್ಲೂ ನಿರಾಸಕ್ತಿ ತೋರುತ್ತಿದ್ದ. ಮಾಲೀಕರು ಎಷ್ಟೇ ಎಚ್ಚರಿಕೆ ನೀಡಿದರೂ ಸುಧಾರಿಸಿರಲಿಲ್ಲ. ಇದೇ ಕಾರಣಕ್ಕೆ ಮುಜಮೀಲ್‌ನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಹೋಟೆಲ್‌ನಲ್ಲಿ ಕೆಲಸ!

ಶಂಕಿತ ಮುಜಮೀಲ್, ಜಕ್ಕೂರು ಲೇಔಟ್ ವಿಳಾಸ ಬಳಸಿ ಗುರುತಿನ ಚೀಟಿಗಳನ್ನು ಪಡೆದುಕೊಂಡಿದ್ದ. ಔಷಧಿ ಮಳಿಗೆ ಕೆಲಸ ಹೋದ ನಂತರ ಹೋಟೆಲ್‌ವೊಂದಕ್ಕೆ ಸೇರಿದ್ದ. ಅಲ್ಲಿಯೂ ಜಕ್ಕೂರು ಲೇಔಟ್ ವಿಳಾಸದ ದಾಖಲೆಗಳನ್ನು ನೀಡಿದ್ದ. ತಾನು ಜಕ್ಕೂರು ಲೇಔಟ್ ನಿವಾಸಿಯೆಂದು ಹೇಳಿಕೊಂಡಿದ್ದ’ಎಂದು ಮೂಲಗಳು ವಿವರಿಸಿವೆ. ಕೆಲಸ ಜೊತೆಗೇ ಮುಜಮೀಲ್, ಶಂಕಿತ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಜೊತೆ ಸಂಪರ್ಕದಲ್ಲಿದ್ದ. ತಾಹಾ ಮೂಲಕ ಮುಜಮೀಲ್‌ಗೆ ಶಂಕಿತ ಮುಸಾವೀರ್ ಹುಸೇನ್ ಶಾಜೀಬ್‌ ಪರಿಚಯವಾಗಿತ್ತು. ಬಳಿಕ, ಮೂವರು ಬಾಂಬ್ ಸ್ಫೋಟ ಹಾಗೂ ಭಯೋತ್ಪಾದನಾ ಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದರು. ಇದಕ್ಕೆ ಹಲವರ ಸಹಕಾರವಿತ್ತು. ಜೊತೆಗೆ, ಎಲ್ಲರೂ ಆಗಾಗ ಭೇಟಿ ಸಹ ಆಗುತ್ತಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಹಲವು ಪುರಾವೆಗಳು ಲಭ್ಯವಾಗಿವೆ’ ಎಂದು ತಿಳಿಸಿವೆ.

ಐಎಸ್ (ಇಸ್ಲಾಮಿಕ್ ಸ್ಟೇಟ್) ಉಗ್ರರ ಜೊತೆ ಒಡನಾಟ ಇಟ್ಟುಕೊಂಡಿದ್ದ ವ್ಯಕ್ತಿಗಳ ಜೊತೆಗೂ ಮುಜಮೀಲ್‌ ಸಂಪರ್ಕದಲ್ಲಿದ್ದ ಮಾಹಿತಿ ಲಭ್ಯವಾಗಿದೆ. ಆದರೆ, ಈ ಬಗ್ಗೆ ಮುಜಮೀಲ್ ಯಾವ ವಿಷಯವನ್ನೂ ಬಾಯ್ದಿಡುತ್ತಿಲ್ಲ ಎಂದು ತಿಳಿಸಿವೆ. ಕಚ್ಚಾ ಬಾಂಬ್ (ಐಇಡಿ) ತಯಾರಿಕೆಯಲ್ಲಿ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಹಾಗೂ ಮುಸಾವೀರ್‌, ಪರಿಣಿತರು. ಇವರಿಬ್ಬರು ತಯಾರಿಸಿದ್ದ ಬಾಂಬ್‌ಗಳನ್ನು ಶಿವಮೊಗ್ಗದಲ್ಲಿ ಪರೀಕ್ಷಾರ್ಥವಾಗಿ ಸ್ಫೋಟಿಸಲಾಗಿತ್ತು. ಈ ಸಂಗತಿ ಮುಜಮೀಲ್‌ಗೂ ಗೊತ್ತಿತ್ತು. ಶಿವಮೊಗ್ಗದಲ್ಲಿ ಸಿಕ್ಕ ಬಾಂಬ್ ಅವಶೇಷಗಳು ಹಾಗೂ ರಾಮೇಶ್ವರಂ ಕೆಫೆಯಲ್ಲಿ ಸಿಕ್ಕ ಅವಶೇಷಗಳು ಬಹುತೇಕ ಸಾಮ್ಯತೆ ಹೊಂದಿವೆ ಎಂದು ಮೂಲಗಳು ಹೇಳಿವೆ.

ಕಸ್ಟಡಿ ಅಂತ್ಯ!

ಬಂಧಿತ ಮುಜಮೀಲ್‌ನನ್ನು ಮಾರ್ಚ್ 28ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಎನ್‌ಐಎ ಅಧಿಕಾರಿಗಳು, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದರು. ಕಸ್ಟಡಿ ಅವಧಿ ಏಪ್ರಿಲ್ 3ರಂದು ಅಂತ್ಯವಾಗಲಿದ್ದು, ಅಧಿಕಾರಿಗಳು ಶಂಕಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಮುಜಮೀಲ್‌ ಓಡಾಡಿದ್ದ ಸ್ಥಳ, ಇತರೆ ಶಂಕಿತನನ್ನು ಭೇಟಿಯಾಗಿದ್ದ ಪ್ರದೇಶ, ಮನೆ ಹಾಗೂ ಮಳಿಗೆಗಳಿಗೆ ಕರೆದೊಯ್ದು ಮಹಜರು ಪ್ರಕ್ರಿಯೆ ನಡೆಸಲಾಗುತ್ತಿದೆ. ಜೊತೆಗೆ, ಇತರೆ ಆರೋಪಿಗಳ ಪತ್ತೆಗಾಗಿಯೂ ಈತನಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

Categories
ಕರಾವಳಿ ಮಂಗಳೂರು

ಕರಾವಳಿ ಬ್ರೇಕಿಂಗ್ ನ್ಯೂಸ್

ಕರಾವಳಿ ಬ್ರೇಕಿಂಗ್ ನ್ಯೂಸ್
– ಮಂಗಳೂರಿನಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿ ಡಿಸಿ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನ!
– ಗಂಭೀರ ಸ್ಥಿತಿಯಲ್ಲಿರುವ ಅಧಿಕಾರಿಗೆ ವೆನ್‌ಲಾಕ್‌ನಲ್ಲಿ ಚಿಕಿತ್ಸೆ
– ಬೆಳ್ತಂಗಡಿಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಪಿಡಿಒ ಆತ್ಮಹತ್ಯೆ ಬೆನ್ನಲ್ಲೇ ದ.ಕ.ದಲ್ಲಿ ಮತ್ತೊಂದು ಪ್ರಕರಣ

NAMMUR EXPRESS NEWS
ಮಂಗಳೂರು: ಕಳೆದ ವಾರ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಬಂಟ್ವಾಳದ ಅಮ್ಟಾಡಿ ಗ್ರಾಮ ಪಂಚಾಯತ್‌ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಅವರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದ ಬೆನ್ನಲ್ಲೇ ಇದೀಗ ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಡಿರು ಉದ್ಯವಾರ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಈ ಹಿಂದೆ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಧರ್‌ ಹೆಗಡೆ ಆತ್ಮಹತ್ಯೆಗೆ ಯತ್ನಿಸಿರುವ ಅಧಿಕಾರಿಯಾಗಿದ್ದಾರೆ. ಶ್ರೀಧರ್‌ ಅವರನ್ನು ನಗರದ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿರುವ ಏಕಗವಾಕ್ಷಿ ಪದ್ದತಿ ತಂಡದ ಸದಸ್ಯರನ್ನಾಗಿ ಶ್ರೀಧರ್‌ ಅವರನ್ನು ನಿಯೋಜಿಸಲಾಗಿತ್ತು. ಇಂದು ಬೆಳಗ್ಗೆ ಶ್ರೀಧರ್‌ ಅವರು ಕರ್ತವ್ಯದಲ್ಲಿ ಇರುವಾಗಲೇ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ವೈಯಕ್ತಿಕ ಕಾರಣಗಳಿಗೆ ಶ್ರೀಧರ್‌ ಆತ್ಮಹತ್ಯೆ ಯತ್ನ ಮಾಡಿರುವುದಾಗಿ ಪ್ರಾಥಮಿಕ ವರದಿಗಳು ತಿಳಿಸಿವೆ. 2019ರಿಂದ ಶ್ರೀಧರ್‌ ಅವರು ಕಡಿರು ಉದ್ಯಾವರ ಪಂಚಾಯತ್‌ ವ್ಯಾಪ್ತಿಯಲ್ಲಿ ಪಿಡಿಓ ಆಗಿ ಸೇವೆ ಸಲ್ಲಿಸಿ, ಕಳೆದ ಪೆಬ್ರವರಿ ತಿಂಗಳಲ್ಲಿ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ, ಬೇರೆ ಕಡೆ ಕತರ್ತವ್ಯಕ್ಕೆ ಜಾಗ ತೋರಿಸದಿದ್ದ ಕಾರಣ ಸ್ಥಳ ನಿಯೋಜನೆಯ ನಿರೀಕ್ಷೆಯಲ್ಲಿದ್ದರು. ಶ್ರೀಧರ್‌ ಅವರ ಪತ್ನಿಯು ಬೆಳ್ತಂಗಡಿಯಲ್ಲಿ ಸ್ಟಾಫ್‌ ನರ್ಸ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇನ್ನು ಶ್ರೀಧರ್‌ ಆತ್ಮಹತ್ಯೆಗೆ ಯತ್ನಿಸಿರುವುದು ಗೊತ್ತಾದ ಕೂಡಲೇ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಸಿಇಒ ಡಾ. ಸಂತೋಷ್‌ ಕುಮಾರ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ, ಜಿಲ್ಲಾ ಪಂಚಾಯತ್‌ನ ಲೆಕ್ಕಾಧೀಕ್ಷ ಬಾಲು ಡಿಎಂ ಸೇರಿದಂತೆ ಸಂಬಂಧಪಟ್ಟ ಎಲ್ಲ ಇಲಾಖಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಜತೆಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಕೊಲ್ಪೆದಬೈಲು ನಿವಾಸಿಯಾಗಿರುವ ಲಕ್ಷ್ಮೀ ನಾರಾಯಣ ಸುಮಾರು 6 ವರ್ಷಗಳಿಂದ ಬಂಟ್ವಾಳ ತಾಲೂಕು ಅಮ್ಟಾಡಿ ಗ್ರಾಮ ಪಂಚಾಯತ್‌ನಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿಕೊಂಡಿದ್ದರು. ಮಾ. 27 ರಂದು ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಹೋಗಿ ಬರುವುದಾಗಿ ತನ್ನ ಪತ್ನಿಗೆ ತಿಳಿಸಿ ಹೋದವರು ಬಳಿಕ ನಾಪತ್ತೆಯಾಗಿದ್ದರು. ಮೂರು ದಿನದ ಬಳಿಕ ಧರ್ಮಸ್ಥಳ ಸಮೀಪದ ಪಟ್ರಮೆ ನದಿಯಲ್ಲಿ ಲಕ್ಷ್ಮಿನಾರಾಯಣ ಅವರ ಮೃತದೇಹ ಪತ್ತೆಯಾಗಿತ್ತು. ಅವರು ಕೂಡ ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತಗೊಂಡಿತ್ತು. ಲಕ್ಷ್ಮಿನಾರಾಯಣ ಅವರು ಕೂಡ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡು ಬಳಿಕ ನಾಪತ್ತೆಯಾಗಿದ್ದರು.

Categories
ಕರಾವಳಿ

ಟಾಪ್ ನ್ಯೂಸ್ ಕರಾವಳಿ

ಟಾಪ್ ನ್ಯೂಸ್ ಕರಾವಳಿ
ಸುಳ್ಯ: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ
– ಬಂಟ್ವಾಳ: ಮೊಬೈಲ್‌ ಗೀಳಿಗೆ ಬಲಿಯಾದ ಬಾಲಕ
– ಕಡಬ : ಅಕ್ರಮ ಸ್ಫೋಟಕ ಬಳಸಿ ಕಲ್ಲು ಸ್ಫೋಟದಿಂದ ಮನೆಗೆ ಹಾನಿ
– ಬಂಟ್ವಾಳ : ಬೆಂಕಿ ಅವಘಡಕ್ಕೆ ಬಡ ಮಹಿಳೆಯ ಮನೆ ಸುಟ್ಟು ಭಸ್ಮ
– ಪುತ್ತೂರು: ಶೋರೂಂ ಗೋಡೌನ್ ನಲ್ಲಿ ಬೆಂಕಿ ಅವಘಡ
– ಬಂಟ್ವಾಳ: ಅಮ್ಮಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಅವರ ಮೃತದೇಹ ಪತ್ತೆ

NAMMUR EXPRESS NEWS
ಸುಳ್ಯ: ಯುವಕನೋರ್ವ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ನಾಪತ್ತೆಯಾದ ಘಟನೆ ಸುಳ್ಯದ ಗಾಂಧಿನಗರ ಎಂಬಲ್ಲಿ ನಡೆದಿದೆ. ಈ ಪ್ರದೇಶದ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದ ಉತ್ತರ ಕರ್ನಾಟಕ ಮೂಲದ ಕಾರ್ಮಿಕ ಕುಟುಂಬದ ಬಾಲಕಿಗೆ ಅದೇ ಭಾಗದ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ. ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದ ವೇಳೆ ಆಕೆಯ ಮನೆಗೆ ತೆರಳಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಬಳಿಕ ಈ ವಿ‍ಷಯ ಮನೆಯವರಿಗೆ ತಿಳಿಯುತ್ತಿದ್ದಂತೆ ಯುವಕ ನಾಪತ್ತೆಯಾಗಿದ್ದಾನೆ. ಇನ್ನು ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

– ಬಂಟ್ವಾಳ: ಮೊಬೈಲ್‌ ಗೀಳಿಗೆ ಬಲಿಯಾದ ಬಾಲಕ

ಬಂಟ್ವಾಳ: ಬಂಟ್ವಾಳ ಕಸ್ಟಾ ಗ್ರಾಮದ ಜಕ್ರಿಬೆಟ್ಟುನಲ್ಲಿ ಮನೆಯ ಮಹಡಿಯಿಂದ ಬಾಲಕ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಜಕ್ರಿಬೆಟ್ಟು ನಿವಾಸಿ ದಿನೇಶ್‌ ಪೂಜಾರಿ ಪುತ್ರ ಆದಿಶ್(15) ಮೃತ. ಈತ ಮನೆಮಂದಿಯ ಕಣ್ಡಪ್ಪಿಸಿ ಮೊಬೈಲ್ ತೆಗೆದುಕೊಂಡು ಮನೆಯಿಂದ ಹೊರಗೆ ಬಂದಿದ್ದು, ಈ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ತಲೆಗೆ ಗಂಭೀರ ಗಾಯವಾಗಿ, ವಿಪರೀತ ರಕ್ತಸ್ರಾವವಾಗಿತ್ತು. ಬಾಲಕನ ತಂದೆ ಮನೆಯಿಂದ ಹೊರಗೆ ಬಂದಾಗ ಮಗ ಮೃತಪಟ್ಟಿರುವುದು ಗೊತ್ತಾಗಿದೆ. ಬಾಲಕನಿಗೆ ರಾತ್ರಿ ವೇಳೆ ಮೊಬೈಲ್ ಹಾಗೂ ಟಿವಿ ನೋಡುವ ಅಭ್ಯಾಸವಿತ್ತು. ಮೊಬೈಲ್ ಗೀಳಿನಿಂದ ಇಂತಹ ದುರ್ಘಟನೆ ನಡೆದಿದೆ.

– ಕಡಬ : ಅಕ್ರಮ ಸ್ಫೋಟಕ ಬಳಸಿ ಕಲ್ಲು ಸ್ಫೋಟದಿಂದ ಮನೆಗೆ ಹಾನಿ

ಕಡಬ : ಅಕ್ರಮ ಸ್ಫೋಟಕ ಬಳಸಿ ಕಲ್ಲು ಒಡೆಯುತ್ತಿರುವ ಪರಿಣಾಮ ಮನೆಯ ಶೀಟುಗಳಿಗೆ ಹಾನಿಯಾಗುತ್ತಿರುವ ಹಾಗೂ ಪರಿಸರ ಮಾಲಿನ್ಯ ಉಂಟಾಗುತ್ತಿರುವ ಬಗ್ಗೆ ಮನೆ ಮಾಲಿಕ ಸ್ಫೋಟ ನಡೆಸುವ ಜಮೀನು ಮಾಲೀಕನ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ನಡೆದಿದೆ. ಕಡಬ ತಾಲೂಕು ಯೇನೆಕಲ್ಲು ಗ್ರಾಮದ ಕುಕ್ಕಿಪ್ಪನ ಮನೆ ಎಂಬಲ್ಲಿನ ನಿವಾಸಿ ಆನಂದ ಗೌಡ ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಇವರ ಮನೆ ಸಮೀಪದ ನಿವಾಸಿ ದಯಾನಂದ ಎಂಬವರು ಏನೇಕಲ್ಲು ಗ್ರಾಮದ ಅಜಿರುಪೂಲಿ ಎಂಬಲ್ಲಿ ಅವರ ಜಮೀನಿನಲ್ಲಿ ಕಳೆದ ಎರಡು ತಿಂಗಳಿನಿಂದ ಅಕ್ರಮವಾಗಿ ಸ್ಫೋಟಕಗಳನ್ನು ಬಳಸಿ ಕಲ್ಲುಗಳನ್ನು ಒಡೆಡು ಸೈಜು ಕಲ್ಲಗಳನ್ನಾಗಿ ತಯಾರಿಸುತ್ತಿರುವುದಾಗಿದೆ.

ಇದರಿಂದ ಸ್ಫೋಟಗೊಂಡ ಕಲ್ಲುಗಳು ಆನಂದ ಗೌಡ ಅವರ ಮನೆಯ ಶೀಟುಗಳ ಮೇಲೆ ಸಿಡಿದು ಮನೆ ಶೀಟುಗಳು ಹಾನಿಗೊಂಡಿದೆ ಹಾಗೂ ಕಲ್ಲು ಹುಡಿಯಿಂದಾಗಿ ಪರಿಸರ ಮಾಲಿನ್ಯವೂ ಉಂಟಾಗುತ್ತಿದೆ ಎಂದು ನೀಡಿದ ದೂರಿನಂತೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಂಕ 23/2024, 0 427 ಹಾಗೂ ಕಲಂ 5, 9ಬಿ(1)(ಬಿ) ಸ್ಪೋಟಕ ಕಾಯ್ದೆ ಅಧಿನಿಯಮ 1884 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

– ಬಂಟ್ವಾಳ : ಬೆಂಕಿ ಅವಘಡಕ್ಕೆ ಬಡ ಮಹಿಳೆಯ ಮನೆ ಸುಟ್ಟು ಭಸ್ಮ

ಬಂಟ್ವಾಳ : ಬಡ ಕುಟುಂಬದ ಮಹಿಳೆಯೋರ್ವರ ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಉಂಟಾಗಿ ಮನೆಯ ಸಾಮಾಗ್ರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಎಲಿಯನಡುಗೋಡು ಗ್ರಾಮದ ಉಪ್ಪಿರ ಎಂಬಲ್ಲಿ ಸಂಭವಿಸಿದೆ. ಇಲ್ಲಿನ ನಿವಾಸಿ ಮೋನಮ್ಮ ಅವರ ಮನೆಯಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಇವರು ತನ್ನ ಇಬ್ಬರು ಮಕ್ಕಳೊಂದಿಗೆ ಸ್ಥಳೀಯ ಕ್ಷೇತ್ರದಲ್ಲಿ ನಡೆಯುತ್ತಿದ್ದ ಜಾತ್ರೆಗೆ ತೆರಳಿದ್ದ ವೇಳೆ ಈ ಬೆಂಕಿ ಅವಘಡ ಸಂಭವಿಸಿದೆ. ಮನೆಯಲ್ಲಿ ಉಂಟಾದ ಬೆಂಕಿಯಿಂದ ಭಾರೀ ಹೊಗೆ ಸ್ಥಳೀಯರು ಗಮನಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ.

ಆದರೆ ಅಷ್ಟರಲ್ಲಾಗಲೇ ತಗಡು ಶೀಟಿನ ಮನೆ ಸಂಪೂರ್ಣ ಸುಟ್ಟು ಹೋಗಿದೆ ಎನ್ನಲಾಗಿದೆ. ಅವಘಡದಿಂದ ಮೋನಮ್ಮ ಅವರ ಪದವಿ ವ್ಯಾಸಂಗ ಮಾಡುತ್ತಿರುವ ಪುತ್ರಿಯ ವಾರ್ಷಿಕ ಪರೀಕ್ಷೆಯ ಹಾಲ್‌ ಟಿಕೆಟ್ ಕೂಡಾ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ, ಕುಕ್ಕಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖ‌ರ್ ಶೆಟ್ಟಿ ಬದ್ಯಾರು, ಉಪಾಧ್ಯಕ್ಷ ಯೋಗೀಶ್ ಆಚಾರ್ಯ, ಸದಸ್ಯೆ ಶೋಭಾ, ಪಿಡಿಒ ಪದ್ಮನಾಭ ನಾಯ್ಕ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

– ಪುತ್ತೂರು: ಬೆಳ್ಳಂ ಬೆಳಿಗ್ಗೆ ಶೋರೂಂ ಗೋಡೌನ್ ನಲ್ಲಿ ಬೆಂಕಿ ಅವಘಡ:

ಪುತ್ತೂರು: ನಗರದ ದರ್ಬೆಯಲ್ಲಿರುವ ಪ್ರತಿಷ್ಠಿತ ಶೋರೂಂನ ಗೋಡೌನ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.

– ಬಂಟ್ವಾಳ: ಅಮ್ಮಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಅವರ ಮೃತದೇಹ ಪತ್ತೆ

ಬಂಟ್ವಾಳ : ಕಳೆದ ಬುಧವಾರ ಕೆಲಸ ಮಾಡುತ್ತಿದ್ದ ಕಚೇರಿಯಿಂದಲೇ ನಾಪತ್ತೆಯಾಗಿದ್ದ ಅಮ್ಮಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ, ಪೂಂಜಾಲಕಟ್ಟೆ ಸಮೀಪದ ಕೊಲ್ಪದಬೈಲು ನಿವಾಸಿ ಲಕ್ಷ್ಮಿನಾರಾಯಣ ಕೆ (52) ಅವರ ಮೃತದೇಹ ಸಂಜೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ರಮೆ ಎಂಬಲ್ಲಿನ ನದಿಯಲ್ಲಿ ಪತ್ತೆಯಾಗಿದೆ. ನಾಪತ್ತೆಯಾಗಿದ್ದ ಇವರ ಬೈಕ್‌ ಬೆಳ್ತಂಗಡಿಯಲ್ಲಿ ಪತ್ತೆಯಾಗಿತ್ತು. ಬಳಿಕ ಇಲಾಖಾಧಿಕಾರಿಗಳು ಹಾಗೂ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಮಾರ್ಚ್ 30 ರಂದು ಪೊಲೀಸರು ಪಟ್ರಮೆ ಆಸುಪಾಸಿನಲ್ಲಿ ಅವರ ಮೊಬೈಲ್‌ ಸಿಗ್ನಲ್ ಪತ್ತೆಹಚ್ಚಿದರು. ಇದರಿಂದ ಅನುಮಾನಗೊಂಡು ಅದೇ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾರೆ. ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದ್ದು, ಮೇಲಕ್ಕೆತ್ತಲಾಗಿದೆ. ಬುಧವಾರ ಬೆಳಿಗ್ಗೆ ಮನೆಯಿಂದ ಕಚೇರಿಗೆಂದು ಪತ್ನಿ ಬಳಿ ಹೇಳಿ ತೆರಳಿದ್ದ ಇವರು ಸಂಜೆಯಾದರೂ ಮನೆಗೆ ವಾಪಾಸು ಬಂದಿಲ್ಲ.

ಈ ಬಗ್ಗೆ ಮನೆ ಮಂದಿ ಕಚೇರಿಯಲ್ಲಿ ವಿಚಾರಿಸಿದಾಗ ಮಧ್ಯಾಹ್ನದವರೆಗೆ ಕರ್ತವ್ಯ ನಿರ್ವಹಿಸಿ ಮನೆಗೆ ಹೋಗುತ್ತೇನೆಂದು ತೆರಳಿದ್ದಾರೆ ಎಂದು ಹೇಳಿದ್ದರು. ಆದರೆ ಲಕ್ಷ್ಮೀನಾರಾಯಣ ಅವರು ಮನೆಗೆ ಬಾರದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಸಹೋದರ ಮಡಂತ್ಯಾರು ಸಮೀಪದ ಮಾಲಾಡಿ- ವಿದ್ಯಾನಗರ ನಿವಾಸಿ ಕೆ ರಮೇಶ್ ಅವರು ಪೂಂಜಾಲಕಟ್ಟೆ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು . ಲಕ್ಷ್ಮಿನಾರಾಯಣ ಅವರು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಕರ್ತವ್ಯದ ತಂಡದಲ್ಲೂ ಕಾರ್ಯನಿರ್ವಹಿಸುತ್ತಿದ್ದರು. ಇವರ ನಾಪತ್ತೆ ಬಗ್ಗೆ ತಾಲೂಕು ತಹಶೀಲ್ದಾ‌ರ್ ಅವರ ನೇತೃತ್ವದ ನೌಕರರು ಬಂಟ್ವಾಳ ಸಹಾಯಕ ಚುನಾವಣಾಧಿಕಾರಿಗೂ ದೂರು ನೀಡಿದ್ದರು. ಈ ಹಿಂದೆಯೂ ಇವರು ಇದೇ ರೀತಿ ನಾಪತ್ತೆಯಾಗಿದ್ದರು ಬಳಿಕ ಪತ್ತೆಯಾಗಿದ್ದರು ಎನ್ನಲಾಗಿತ್ತು.