Categories
ವೈರಲ್ ವೀಡಿಯೊಗಳು

ಈತನ ತಲೆ ಮೇಲೆ ಬೆಳೆಯುತ್ತಿದೆ ಕೊಂಬು.!

ಈತನ ತಲೆ ಮೇಲೆ ಬೆಳೆಯುತ್ತಿದೆ ಕೊಂಬು.!
– ಪ್ರಾಣಿಗಳ ಕೊಂಬಿನಂತೆ ಕಾಣುವ ಚರ್ಮದ ಬೆಳವಣಿಗೆ
– ಮರದ ಕೊಂಬು ಮನುಷ್ಯನ. ಮೇಲೆ ಬೆಳೆಯುತ್ತೆ!

NAMMUR EXPRESS NEWS
ಇಲ್ಲೊಬ್ಬ ಮನುಷ್ಯನ ತಲೆ ಮೇಲೆ ಪ್ರಾಣಿಗಳ ಕೊಂಬು ಬೆಳೆಯುತ್ತಿದ್ದು, ಅಚ್ಚರಿಗೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ವೈರಲ್ ಆಗಿದ್ದು, ನೆಟ್ಟಿಗರನ್ನು ಆಶ್ಚರ್ಯ ಮತ್ತು ಆಘಾತಕ್ಕೀಡು ಮಾಡಿದೆ. ವೈರಲ್ ಆಗಿರುವ ಚಿತ್ರಗಳಲ್ಲಿ 60 ರಿಂದ 70 ವರ್ಷ ವಯಸ್ಸಿನ ವ್ಯಕ್ತಿಯ ತಲೆಯ ಮೇಲೆ ಪ್ರಾಣಿಯಂತಹ ಕೊಂಬು ಬೆಳೆಯುತ್ತಿದೆ. ಇದು ಮನುಷ್ಯ ಲೋಕಕ್ಕೂ ಅಚ್ಚರಿ ಆಗಿದೆ.

ಯಾರೀತ..? ಕೊಂಬು ಬೆಳೆದಿದ್ದು ಹೇಗೆ?

ವೃದ್ಧನನ್ನು ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ರಾಹ್ಲಿ ಗ್ರಾಮದ ನಿವಾಸಿ ಶ್ಯಾಮ್ ಲಾಲ್ ಯಾದವ್‌ ಎಂದು ಗುರುತಿಸಲಾಗಿದೆ. 2004 ರಲ್ಲಿ ತಲೆಗೆ ಗಾಯವಾದ ನಂತರ ಅವರ ತಲೆಯ ಮೇಲೆ ವಿಚಿತ್ರವಾದ ಏನೋ ಬೆಳೆಯುತ್ತಿರುವುದನ್ನು ಅವರು ಗಮನಿಸಿದರು. ಅದು ಸಣ್ಣ ಕೊಂಬಿನಂತೆ ಕಾಣುತ್ತಿತ್ತು ಮತ್ತು ಅವರು ಅದನ್ನು ವರ್ಷಗಳಿಂದ ಕತ್ತರಿಸುತ್ತಿದ್ದನು. ಆದರೆ ಅದು ವೇಗವಾಗಿ ಬೆಳೆಯಲು ಪ್ರಾರಂಭಿಸಿದಾಗ, ಅವರು ವೈದ್ಯರನ್ನು ಸಂಪರ್ಕಿಸಲು ನಿರ್ಧರಿಸಿದರು ಎಂದು ತಿಳಿದು ಬಂದಿದೆ.

ವೈದ್ಯರು ಇದನ್ನು “ಕಟಾನಿಯಸ್ ಕೊಂಬು” ” ಅಥವಾ “ಪ್ರಾಣಿಗಳ ಕೊಂಬು” ಎಂದು ಕರೆಯುತ್ತಾರೆ ಇದು ಪ್ರಾಣಿಗಳ ಕೊಂಬಿನಂತೆ ಕಾಣುವ ಅಪರೂಪದ ರೀತಿಯ ಚರ್ಮದ ಬೆಳವಣಿಗೆಯಾಗಿದೆ. ಕೆಲವೊಮ್ಮೆ, ಇದು ಚರ್ಮದ ಸಮಸ್ಯೆಯ ಸಂಕೇತವಾಗಿರಬಹುದು, ಅದು ಕ್ಯಾನ್ಸರ್ ಆಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಕೊಂಬುಗಳು ವಯಸ್ಸಾದವರಲ್ಲಿ ಹೆಚ್ಚು ಸಾಮಾನ್ಯವಾಗಿದೆ, 60 ರಿಂದ 70 ವರ್ಷ ವಯಸ್ಸಿನವರಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬರುತ್ತವೆ. ಇದು ಚರ್ಮದಿಂದ ಅಂಟಿಕೊಂಡಿರುವ ಗಟ್ಟಿಯಾದ, ಹಳದಿ-ಕಂದು ಬಣ್ಣದ ವಸ್ತುವಿನಂತೆ ಕಾಣುತ್ತದೆ. ಇದು ಪುರುಷರು ಮತ್ತು ಮಹಿಳೆಯರು ಇಬ್ಬರ ಮೇಲೂ ಸಮಾನವಾಗಿ ಪರಿಣಾಮ ಬೀರುತ್ತದೆ, ಆದಾಗ್ಯೂ ಪುರುಷರಲ್ಲಿ ಬೆಳವಣಿಗೆಯು ಕ್ಯಾನ್ಸರ್ ಆಗುವ ಸ್ವಲ್ಪ ಹೆಚ್ಚಿನ ಅವಕಾಶವಿದೆ ಎಂದು ಹೇಳಿದ್ದಾರೆ.

Categories
ರಾಜಕೀಯ ರಾಜ್ಯ

ಲೋಕಸಭಾ ಚುನಾವಣೆ: ನಾಮಪತ್ರ ಭರಾಟೆ ಜೋರು..!

ಲೋಕಸಭಾ ಚುನಾವಣೆ: ನಾಮಪತ್ರ ಭರಾಟೆ ಜೋರು..!
– ಒಂದೇ ದಿನ 49 ಅಭ್ಯರ್ಥಿಗಳಿಂದ 55 ನಾಮಪತ್ರ
– ಏ.3,4 ಕ್ಕೆ ಅತೀ ಹೆಚ್ಚು ನಾಮಪತ್ರ ಸಲ್ಲಿಕೆ

NAMMUR EXPRESS NEWS
ಬೆಂಗಳೂರು: ಲೋಕಸಭಾ ಚುನಾವಣಾ ಕಣ ರಂಗೇರುತ್ತಿದ್ದು, ಸೋಮವಾರ ಘಟಾನುಘಟಿಗಳೂ ಮಾಜಿ ಸಚಿವರೂ ಆದ ವಿ.ಸೋಮಣ್ಣ, ಗೋವಿಂದ ಕಾರಜೋಳ, ಡಾ.ಕೆ.ಸುಧಾಕರ್, ಹಾಲಿ ಸಂಸದ ಪಿ.ಸಿ.ಮೋಹನ್ ಸೇರಿದಂತೆ 49 ಅಭ್ಯರ್ಥಿಗಳಿಂದ 55 ನಾಮಪತ್ರಗಳು ಸೋಮವಾರ ಸಲ್ಲಿಕೆಯಾಗಿವೆ. ಅಧಿಸೂಚನೆ ಪ್ರಕಟಗೊಂಡ ಬಳಿಕ ಈವರೆಗೆ ಒಟ್ಟು 96 ಅಭ್ಯರ್ಥಿಗಳಿಂದ 114 ಉಮೇದುವಾರಿಕೆ ಸಲ್ಲಿಕೆಯಾಗಿವೆ. ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಬಿಜೆಪಿಯಿಂದ ಪಿ.ಸಿ.ಮೋಹನ್, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸೌಮ್ಯಾರೆಡ್ಡಿ, ತುಮಕೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ವಿ.ಸೋಮಣ್ಣ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಡಾ.ಕೆ.ಸುಧಾಕರ್, ಚಿತ್ರದುರ್ಗ ಕ್ಷೇತ್ರದಲ್ಲಿ ಬಿಜೆಪಿಯಿಂದ ಗೋವಿಂದ ಕಾರಜೋಳ, ಮೈಸೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಯದುವೀ‌ರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಟಾ‌ರ್ ಚಂದ್ರು ಸೇರಿದಂತೆ ಇತರರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಚುನಾವಣಾ ಅಖಾಡಕ್ಕಿಳಿಯುತ್ತಿರುವ ಅಭ್ಯರ್ಥಿಗಳು ತಮ್ಮ ಶಕ್ತಿ ಪ್ರದರ್ಶನದೊಂದಿಗ ನಾಮಪತ್ರ ಸಲ್ಲಿಕೆ ಮಾಡುವಲ್ಲಿ ನಿರತರಾಗಿದ್ದಾರೆ. 46 ಪುರುಷರು, ಮೂವರು ಮಹಿಳೆಯರು ಸೇರಿ 49 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಸಲ್ಲಿಕೆಯಾದ 55 ನಾಮಪತ್ರಗಳ ಪೈಕಿ 51 ಪುರುಷರ ಮತ್ತು 4 ಮಹಿಳೆಯರ ನಾಮಪತ್ರಗಳಾಗಿವೆ. ಕಾಂಗ್ರೆಸ್ 6, ಪ್ರತಿಪಕ್ಷ ಬಿಜೆಪಿ 8, ಜೆಡಿಎಸ್ 1, ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷಗಳು 20, ಪಕ್ಷೇತರು 20 ನಾಮಪತ್ರಗಳು ಸಲ್ಲಿಕೆಯಾಗಿವೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದಿಂದ ಎರಡು ನಾಮಪತ್ರಗಳು, ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಒಂದು ನಾಮಪತ್ರ, ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದಿಂದ ಎರಡು ನಾಮಪತ್ರಗಳು, ಚಿತ್ರದುರ್ಗ ಕ್ಷೇತ್ರದಿಂದ ಮೂವರು ಅಭ್ಯರ್ಥಿಗಳಿಂದ ಐದು ನಾಮಪತ್ರಗಳು ಸಲ್ಲಿಕೆಯಾಗಿದ್ದು, ಬಿಜೆಪಿಯಿಂದ ಎರಡು, ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದಿಂದ ಮೂರು ನಾಮಪತ್ರಗಳು ಸಲ್ಲಿಕೆಯಾಗಿವೆ. ತುಮಕೂರು ಕ್ಷೇತ್ರದಲ್ಲಿ ಇಬ್ಬರು ನಾಮಪತ್ರ ಸಲ್ಲಿಕೆ ಮಾಡಿದ್ದು, ಒಂದು ಬಿಜೆಪಿ, ಒಂದು ಪಕ್ಷೇತರರಿಂದ ಸಲ್ಲಿಕೆಯಾಗಿದೆ.

ಮಂಡ್ಯ ಕ್ಷೇತ್ರದಲ್ಲಿ ಏಳು ಅಭ್ಯರ್ಥಿಗಳಿಂದ ಒಂಭತ್ತು ನಾಮಪತ್ರಗಳು ಸಲ್ಲಿಕೆಯಾಗಿವೆ. ಈ ಪೈಕಿ ಮೂರು ಕಾಂಗ್ರೆಸ್, ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದಿಂದ ಎರಡು, ಪಕ್ಷೇತರರ ನಾಲ್ಕು ನಾಮಪತ್ರಗಳಾಗಿವೆ. ಮೈಸೂರು ಕ್ಷೇತ್ರದಲ್ಲಿ ನಾಲ್ಕು ಅಭ್ಯರ್ಥಿಗಳಿಂದ ನಾಲ್ಕು ಉಮೇದುವಾರಿಕೆಯಾಗಿವೆ. ಬಿಜೆಪಿ 2, ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದಿಂದ 1, ಪಕ್ಷೇತರರು 1, ಚಾಮರಾಜನಗರ ಕ್ಷೇತ್ರದಲ್ಲಿ ನಾಲ್ಕು ಪಕ್ಷೇತರರಿಂದ ನಾಲ್ಕು ನಾಮಪತ್ರಗಳು ಸಲ್ಲಿಕೆಯಾಗಿವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದಿಂದ 4, ಪಕ್ಷೇತರರಿಂದ 1 ನಾಮಪತ್ರಗಳು, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದಿಂದ 1 ನಾಮಪತ್ರಗಳು, ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ನಾಲ್ವರಿಂದ ಐದು ನಾಮಪತ್ರಗಳು ಸಲ್ಲಿಕೆಯಾಗಿವೆ.

ಬಿಜೆಪಿ 2, ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದಿಂದ 2, ಪಕ್ಷೇತರರು 1, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಐವರು ಅಭ್ಯರ್ಥಿಗಳಿಂದ ಐದು ನಾಮಪತ್ರ ಸಲ್ಲಿಕೆಯಾಗಿವೆ. ಕಾಂಗ್ರೆಸ್ 1, ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದಿಂದ 2, ಪಕ್ಷೇತರರು 2 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 7 ಅಭ್ಯರ್ಥಿಗಳಿಂದ 7 ನಾಮಪತ್ರ ಸಲ್ಲಿಕೆಯಾಗಿವೆ. ಬಿಜೆಪಿ, ಕಾಂಗ್ರೆಸ್‌ನಿಂದ ತಲಾ 1, ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದಿಂದ 1, ಪಕ್ಷೇತರರಿಂದ 4 ನಾಮಪತ್ರಗಳು, ಕೋಲಾರ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳಿಂದ 2 ನಾಮಪತ್ರಗಳು ಸಲ್ಲಿಕೆಯಾಗಿವೆ. ಜೆಡಿಎಸ್ 1, ಪಕ್ಷೇತರರು 1 ಉಮೇದುವಾರಿಕೆ ಸಲ್ಲಿಕೆಯಾಗಿದೆ.

Categories
ಮಲ್ನಾಡ್

ಬೆಂದ ಕಾವಲಿಯಂತಾದ ಮಲೆನಾಡು!

ಬೆಂದ ಕಾವಲಿಯಂತಾದ ಮಲೆನಾಡು!
– ಸದಾ ತಂಪಾದ ಮಲೆನಾಡು ಈಗ ಸೇಫ್ ಅಲ್ಲ
– ಮಲೆನಾಡಿನ ಭಾಗದಲ್ಲಿ ಮಿತಿ ಮೀರಿದ ಬಿಸಿಲು

NAMMUR EXPRESS NEWS
ಮಲೆನಾಡು: ಸದಾ ತಂಪೆರೆಯೋ ಗಾಳಿ, ಹಚ್ಚ-ಹಸಿರಿನಿಂದ ಕಂಗೊಳಿಸೋ ಹಸಿರ ತವರು. ಮಲೆನಾಡಿನಲ್ಲಿ ಮನೆಮಾಡಬೇಕೆಂದು ಅದೆಷ್ಟೋ ಮಂದಿ ಬಯಕೆ. ಆದ್ರೆ, ಮಲೆನಾಡಿನ ಸದ್ಯದ ಹವಾಮಾನ ಕೇಳಿದ್ರೆ, ಮನೆ ಮಾಡೋದಿರ್ಲಿ, ಇತ್ತ ತಲೆ ಹಾಕಿಯೂ ಮಲಗೊಲ್ಲ. ಯಾಕಂದ್ರೆ, ಮಲೆನಾಡು ವರ್ಷ ಕಳೆದಂತೆ ಕಾದ ಕಾವಲಿಯಂತಾಗಿದೆ. ಬಿಸಿಲಿಗೆ ಜನ ಹೈರಾಣಾಗಿದ್ದಾರೆ. ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ನದಿಗಳು ಬತ್ತಿವೆ. ಬೋರ್ ವೆಲ್ ಸಾವಿರಾರು ಅಡಿ ಕೊರೆದರೂ ನೀರು ಬರುತ್ತಿಲ್ಲ. ನೂರಾರು ವರ್ಷಗಳಿಂದ ತಣ್ಣನೆಯ ಗಾಳಿಯಲ್ಲಿ ನಾವ್ ಸೇಫ್ ಅಂತಿದ್ದ ಮಲೆನಾಡಿಗರಲ್ಲೂ ಬೆವರು ಹರಿಯುತ್ತಿದೆ. ಈ ಬಾರಿಯ ಮಿತಿ-ಮೀರಿದ ಬಿಸಿಲಿನ ಝಳಕ್ಕೆ ಮಲೆನಾಡಿಗರು, ಸುಸ್ತೋ-ಸುಸ್ತು ಎನ್ನುವ ಪರಿಸ್ಥಿತಿ ಉದ್ಭವವಾಗಿದೆ.

ಬಿಸಿಲು ಝಳಕ್ಕೆ ಜನರು ತತ್ತರ!

ದಿನದಿಂದ ದಿನಕ್ಕೆ ಬಿಸಿಲು ಝಳ ಹೆಚ್ಚಳವಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಮಲೆನಾಡು ಕಾದ ಕವಾಲಿಯಂತಾಗಿದೆ. ಈ ಬಾರಿ ಹಿಂದೆಂದೂ ಕಾಣದಂತ ಬಿಸಿಲಿನ ತಾಪ ಹೆಚ್ಚಾಗಿದೆ. ಕನಿಷ್ಠ 22ರಿಂದ ಗರಿಷ್ಠ 26, 28, 32ವರೆಗಿದ್ದ ಬಿಸಿಲಿನ ತಾಪ ಈ ಬಾರಿ 34, 36ರ ಗಡಿ ಮುಟ್ಟಿದೆ.

ಬಿಸಿಲಲ್ಲಿ ಚುನಾವಣೆ ಪ್ರಚಾರ ಕಷ್ಟ ಕಷ್ಟ!

ಒಂದೆಡೆ ಚುನಾವಣೆಯ ಬಿಸಿಲಿನಿಂದ ಸಭೆ, ಸಮಾರಂಭಗಳಲ್ಲಿ, ಪ್ರಚಾರಕ್ಕೆ ಹೋಗುವ ಜನರು ಸಾಕಪ್ಪ ಸಾಕು ಎನ್ನುವ ಸ್ಥಿತಿ ಇದೆ. ಒಂದೆಡೆ ಚುನಾವಣೆಯ ಕಾವು ಆದ್ರೆ ಮತ್ತೊಂದಡೆ ಬಿಸಿಲಿನ ಝಳ ರಾಜಕಾರಣಿಗಳಿಗೆ ಸಾಕಪ್ಪ ಸಾಕು ಎನ್ನುವಷ್ಟರ ಮಟ್ಟಿಗೆ ಆಗಿದೆ. ಚುನಾವಣೆ ಪ್ರಚಾರ ಈಗ ರಾಜಕಾರಣಿಗಳಿಗೆ ತಲೆ ನೋವಾಗಿದೆ.

ಮಲೆನಾಡಿನ ಭಾಗದಲ್ಲೂ ಮಿತಿ ಮೀರಿದ ಕಾವು!

ಮಲೆನಾಡಿನಲ್ಲಿಯೇ ಈ ರೀತಿ ತಾಪಮಾನ ಏರಿಕೆಯಾಗಿದೆ, ಇನ್ನು ಜಿಲ್ಲೆಯ ಬಯಲುಸೀಮೆ ಪ್ರದೇಶಗಳಾಗಿರೋ ಕಡೂರು, ತರೀಕೆರೆಯ ಪರಿಸ್ಥಿತಿಯಂತು ಮತ್ತಷ್ಟು ಶೋಚನಿಯ. ನಾಳೆ ಮಳೆ ಬರ್ಬೋದು ಅಂತ ಜನ ಆಕಾಶ ನೋಡ್ತಿದ್ರೆ ಮರುದಿನ ಮತ್ತದೇ ರಣಬಿಸಲು. ಮಿತಿ-ಮೀರಿದ ಬಿಸಿಲಿನ ಝಳಕ್ಕೆ ಮಲೆನಾಡಿಗರು, ರಾಜಕಾರಣಿಗಳು ಸುಸ್ತೋ-ಸುಸ್ತು ಆಗಿದ್ದಾರೆ.

Categories
ಉಡುಪಿ ಕರಾವಳಿ ಮಂಗಳೂರು

ರಂಗೇರಿದ ಕರಾವಳಿ ಚುನಾವಣಾ ಕಣ!

ರಂಗೇರಿದ ಕರಾವಳಿ ಚುನಾವಣಾ ಕಣ!
– ಏ.3, 4ರಂದು ಪ್ರಮುಖ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ
– ಏ.3ಕ್ಕೆ ಕೋಟಾ, ಜಯಪ್ರಕಾಶ್ ಹೆಗ್ಡೆ, ಪದ್ಮರಾಜ್ ನಾಮಪತ್ರ, 4ಕ್ಕೆ ಚೌಟ ನಾಮಪತ್ರ
– ದಕ್ಷಿಣ ಕನ್ನಡ, ಉಡುಪಿಯಲ್ಲಿ ಬಿಲ್ಲವ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಸತ್ಯಜಿತ್‌ ಸುರತ್ಕಲ್‌

NAMMUR EXPRESS NEWS
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಚುನಾವಣೆ ಕಾವು ಜೋರಾಗುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಹಣಾಹಣಿಗೆ ಕಣ ಸಿದ್ಧವಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್‌ ಚೌಟ ಈಗಾಗಲೇ ಅಧಿಕೃತವಾಗಿ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದು, ಪ್ರಚಾರ ಕಾರ್ಯವನ್ನು ಕೂಡ ಚುರುಗೊಳಿಸಿದ್ದಾರೆ. ಆದರೆ, ಚೌಟ ಅವರು ಬೃಹತ್‌ ಮೆರವಣಿಗೆಯೊಂದಿಗೆ ತೆರಳಿ ಏ.4ರಂದು ನಾಮಪತ್ರವನ್ನು ಸಲ್ಲಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ನಾಮಪತ್ರವನ್ನು ಸಲ್ಲಿಸುವ ದಿನದಂದು ಸುಮಾರು 25 ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ಆ ಮೂಲಕ ಚುನಾವಣಾ ಕಣದಲ್ಲಿಯೂ ಬಿಜೆಪಿ ತನ್ನ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ನಡೆಸುತ್ತಿದೆ.

ಏ.3ಕ್ಕೆ ಪದ್ಮರಾಜ್ ನಾಮಪತ್ರ:

ಕಾಂಗ್ರೆಸ್‌ ಕೂಡ ಕ್ಷೇತ್ರದ ಹಲವೆಡೆ ತಮ್ಮ ಪ್ರಚಾರವನ್ನು ಬಿರುಸುಗೊಳಿಸಿದ್ದು, ಹೊಸಮುಖವಾಗಿ ಪದ್ಮರಾಜ್‌ ಅವರು ಕಣದಲ್ಲಿದ್ದಾರೆ. ಇನ್ನು ಪದ್ಮರಾಜ್‌ ಅವರು ಏ.3ರಂದು ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಮಿತಿ ಉಸ್ತುವಾರಿ ಬಿ. ರಮಾನಾಥ ರೈ ತಿಳಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಮಪತ್ರ ಸಲ್ಲಿಕೆಗೂ ಮೊದಲು ಚರ್ಚ್‌, ಮಸೀದಿ, ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಆ ದಿನ ಬೆಳಗ್ಗೆ 9.30ಕ್ಕೆ ಕುದ್ರೋಳಿ ದೇವಸ್ಥಾನದಿಂದ ಹೊರಡುವ ಮೆರವಣಿಗೆ ಅಳಕೆ, ನ್ಯೂಚಿತ್ರ ಟಾಕೀಸ್‌, ಉಷಾ ಕಿರಣ್‌ ಹೋಟೆಲ್‌, ಜಿಎಚ್‌ಎಸ್‌ ರಸ್ತೆ, ಟೌನ್‌ಹಾಲ್‌ ಮೂಲಕ ಆಗಮಿಸಿ ಎಬಿ ಶೆಟ್ಟಿ ಸರ್ಕಲ್‌ ಬಳಿ ಸಮಾವೇಶಗೊಳ್ಳಲಿದೆ ಎಂದು ಹೇಳಿದ್ದಾರೆ.

ಬಿಲ್ಲವ ಸಮುದಾಯದ ಅಭ್ಯರ್ಥಿಗೆ ಬೆಂಬಲ ಎಂದ ಸತ್ಯಜಿತ್‌ ಸುರತ್ಕಲ್‌

ಲೋಕ ಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಪಡೆಯುವುದಕ್ಕೆ ಬಿಲ್ಲವ ಸಮುದಾಯದ ನಾಯಕ ಹಾಗೂ ಬಿಜೆಪಿ ಮುಖಂಡ ಸತ್ಯಜಿತ್‌ ಪ್ರಬಲ ಆಕಾಂಕ್ಷಿಯಾಗಿದ್ದರು. ಟಿಕೆಟ್‌ ಗಿಟ್ಟಿಸುವುದಕ್ಕೆ ಎಲ್ಲ ರೀತಿಯ ಪ್ರಯತ್ನ ಕೂಡ ನಡೆಸಿದ್ದರು. ಆದರೆ ಕಟ್ಟಾ ಬಿಜೆಪಿಯಾಗಿ ಹಿಂದುತ್ವ ಬ್ರಾಂಡ್‌ನಲ್ಲಿ ಗುರುತಿಸಿಕೊಂಡಿರುವ ಸತ್ಯಜಿತ್‌ ಸುರತ್ಕಲ್‌ ಅವರು ಅಧಿಕೃತ ಹೇಳಿಕೆ ನೀಡಿದ್ದು, ಕರಾವಳಿ ಭಾಗದಲ್ಲಿ ನಾರಾಯಣ ಗುರು ವಿಚಾರವನ್ನು ಪ್ರತಿಪಾದಿಸುವ ಸಮುದಾಯದ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಆ ಮೂಲಕ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಅವರಿಗೆ ತಮ್ಮ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ನಾರಾಯಣ ವಿಚಾರ ವೇದಿಕೆ ರಾಜ್ಯಾಧ್ಯಕ್ಷರೂ ಆಗಿರುವ ಅವರು, ನಮ್ಮ ವೇದಿಕೆಯು ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ. ಸಮುದಾಯವು ಪಕ್ಷದ ಬದಲು ಸಮುದಾಯದ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಗತಿಗೆ ಶ್ರಮಿಸುವವರನ್ನು ಗೆಲ್ಲಿಸಬೇಕೆಂದು ಸೋಮವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಹೈ ಸ್ಪೀಡ್!

ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್‌ನ ಜಯಪ್ರಕಾಶ್‌ ಹೆಗ್ಡೆ ನಡುವೆ ಬಿಗ್‌ ಫೈಟ್‌ ನಡೆಯುತ್ತಿದೆ. ಇಲ್ಲಿಯೂ ಬಿಲ್ಲವ ವರ್ಸಸ್‌ ಬಂಟ ಸಮುದಾಯದ ನಡುವೆ ಮತ ವಿಭಜನೆಯಾಗುವ ಎಲ್ಲ ಸಾಧ್ಯತೆ ಕಾಣಿಸುತ್ತಿದೆ. ಅತ್ತ ಸತ್ಯಜಿತ್‌ ಸುರತ್ಕಲ್‌ ಅವರು ಕೂಡ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಏ.3ಕ್ಕೆ ಕೋಟಾ ನಾಮಪತ್ರ

ಕೋಟ ಶ್ರೀನಿವಾಸ ಪೂಜಾರಿ ಅವರು ಏ.3ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆ ದಿನ ಉಡುಪಿ ಜಿಲ್ಲಾ ಕಚೇರಿ ಬಳಿ ಸಮಾವೇಶ ನಡೆಯಲಿದ್ದು, ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ಮತದಾರರು ಭಾಗವಹಿಸಲಿದ್ದಾರೆ. ಆ ಬಳಿಕ ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

ಏ.3ಕ್ಕೆ ಜಯಪ್ರಕಾಶ್‌ ಹೆಗ್ಡೆ ನಾಮಪತ್ರ

ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಅವರು ಕೂಡ ತಮ್ಮ ಪ್ರಚಾರವನ್ನು ಚುರುಕುಗೊಳಿಸಿದ್ದು, ಏ.3ರಂದು ಬೆಳಗ್ಗೆ 10ರಿಂದ 12 ಗಂಟೆ ಮಧ್ಯೆ ನಾಮಪತ್ರವನ್ನು ಸಲ್ಲಿಸಲಿದ್ದಾರೆ. ಬೆಳಗ್ಗೆ 10ಕ್ಕೆ ಉಡುಪಿಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲೆಯ ಪ್ರಮುಖ ಕಾರ್ಯಕರ್ತರ ಹಾಗೂ ಪ್ರಮುಖರ ಸಭೆ ನಡೆಯಲಿದೆ. ಬಳಿಕ ಪಕ್ಷದ ಪ್ರಮುಖರೊಂದಿಗೆ ಚುನಾವಣಾಧಿಕಾರಿಗಳ ಕಚೇರಿಗೆ ತೆರಳುವ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಜೆ.ಪಿ. ಹೆಗ್ಡೆಯವರ ಕಚೇರಿ ಪ್ರಕಟಣೆ ತಿಳಿಸಿದೆ.

Categories
ಮಾಹಿತಿ ರಾಜ್ಯ

ಬ್ಯಾಂಕ್ ಅಕೌಂಟ್ ಹೊಸ ನಿಯಮ

ಬ್ಯಾಂಕ್ ಅಕೌಂಟ್ ಹೊಸ ನಿಯಮ
– ಮಿನಿಮಂ ಬ್ಯಾಲೆನ್ಸ್ ಇಲ್ದಿದ್ರೂ ಶುಲ್ಕ ವಿಧಿಸುವಂತಿಲ್ಲ
– ಗ್ರಾಹಕರಿಗೆ ತೊಂದರೆ ಆಗ್ಬಾರ್ದು ಎಂದ ಆರ್.ಬಿಐ

NAMMUR EXPRESS NEWS
ಇಂದು ಪ್ರತಿಯೊಬ್ಬರೂ ಬ್ಯಾಂಕಲ್ಲಿ ಒಂದು ಖಾತೆಯನ್ನು ಪ್ಹೊಂದಿರುತ್ತೀರಿ. ಹೊಸದಾಗಿ ಖಾತೆ ತೆರೆದಾಗ ಬ್ಯಾಂಕ್ ಸಿಬ್ಬಂದಿ ಮಿನಿಮಮ್ ಬ್ಯಾಲೆನ್ಸ್ ಇಷ್ಟಿರಬೇಕು ಎನ್ನುವ ಮಾಹಿತಿಯನ್ನು ಕೊಟ್ಟಿರುತ್ತಾರೆ. ನೀವು ಅದರ ಪ್ರಕಾರ ನಿಮ್ಮ ಖಾತೆಯಲ್ಲಿ ಅಷ್ಟು ಹಣ ಇರುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಮಿನಿಮಮ್ ಬ್ಯಾಲೆನ್ಸ್ ಇಲ್ಲದೆ ಇದ್ರೆ ಬ್ಯಾಂಕ್ ಶುಲ್ಕ ವಿಧಿಸುತ್ತದೆ. ಆದರೆ ಇನ್ನು ಮುಂದೆ ಶುಲ್ಕ ವಿಧಿಸಲು ಆರ್. ಬಿ. ಐ ಹೊಸ ನಿಯಮ ತಂದಿದೆ.

ಬ್ಯಾಂಕ್ ಮೂಲಕ ಹಣಕಾಸಿನ ವ್ಯವಹಾರ ಮಾಡುವಾಗ ಎಷ್ಟೋ ಬಾರಿ ನಮಗೆ ವಾರ್ಷಿಕ ಶುಲ್ಕ ಅಥವಾ ಮಾಸಿಕ ಶುಲ್ಕ ಕಡಿತಗೊಂಡಾಗ ಯಾಕೆ ಹಣ ಕಡಿತಗೊಳಿಸಲಾಗಿದೆ ಎನ್ನುವುದರ ಬಗ್ಗೆ ಮಾಹಿತಿ ಇರುವುದಿಲ್ಲ. ಆದ್ದರಿಂದ ಈ ಕೆಲವು ಪ್ರಮುಖ ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರತಿಯೊಂದು ಉಳಿತಾಯ ಖಾತೆಯಲ್ಲಿ ಎಷ್ಟು ಮಿನಿಮಮ್ ಬ್ಯಾಲೆನ್ಸ್ ಇರಬೇಕು ಎಂಬುದನ್ನು ತಿಳಿಸುತ್ತದೆ. ಆದರೆ ಇದು ಬ್ಯಾಂಕ್ನಿಂದ ಬ್ಯಾಂಕ್ಗೆ ವ್ಯತ್ಯಾಸವಾಗಿರುತ್ತದೆ. ಒಂದೊಂದು ಬ್ಯಾಂಕ್ ನಲ್ಲಿ 500 ರೂಪಾಯಿಗಳ ಮಿನಿಮಂ ಬ್ಯಾಲೆನ್ಸ್ ಆಗಿದ್ರೆ ಇನ್ನೂ ಕೆಲವು ಬ್ಯಾಂಕ್ಗಳಲ್ಲಿ ಹತ್ತು ಸಾವಿರ ರೂಪಾಯಿಗಳವರೆಗೂ ಇರಬಹುದು. ಆದ್ರೆ ಕೆಲವು ಖಾತೆಗಳಿಗೆ ಇನ್ಮುಂದೆ ಈ ನಿಯಮ ಅನ್ವಯ ಆಗಲ್ಲ.

– ಈ ಖಾತೆಗಳಲ್ಲಿ ಮಿನಿಮಂ ಬ್ಯಾಲೆನ್ಸ್ ಇಲ್ಲದೆ ಇದ್ರೆ ಶುಲ್ಕ ವಿಧಿಸುವಂತಿಲ್ಲ!

ಬ್ಯಾಂಕ್ನ ನಿಯಮದ ಅನುಸಾರ ನೀವು ವರ್ಷದಲ್ಲಿ ಮಿನಿಮಮ್ ಬ್ಯಾಲೆನ್ಸ್ ಅಥವಾ ಕನಿಷ್ಠ ಮೊತ್ತ ಉಳಿಸಿಕೊಳ್ಳದೆ ಇದ್ರೆ ಅದಕ್ಕೆ ಬ್ಯಾಂಕ್ ಶುಲ್ಕವನ್ನು ವಿಧಿಸುತ್ತದೆ. ಆದರೆ ಈಗ ಆರ್ ಬಿ ಐ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದ್ದು, ಈ ಎರಡು ರೀತಿಯ ಬ್ಯಾಂಕ್ ಅಕೌಂಟ್ ನಲ್ಲಿ ಮಿನಿಮಂ ಬ್ಯಾಲೆನ್ಸ್ ಇಲ್ಲದೆ ಇದ್ರೆ ಬ್ಯಾಂಕುಗಳು ಶುಲ್ಕ ವಿಧಿಸುವಂತಿಲ್ಲ.

1. ನಿಷ್ಕ್ರಿಯ ಗೊಂಡಿರುವ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದೆ ಇದ್ರೆ ಶುಲ್ಕ ವಿಧಿಸುವಂತಿಲ್ಲ. ಅಂದರೆ ನೀವು ಯಾವುದಾದರೂ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿದ್ದು ಒಂದು ವರ್ಷದವರೆಗೂ ಅದರಲ್ಲಿ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ಮಾಡದೆ ಇದ್ದಾಗ ಆ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಆದರೆ ಇಂತಹ ನಿಷ್ಕ್ರಿಯಗೊಂಡಿರುವ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲವಾದರೆ ಬ್ಯಾಂಕ್ ದೊಡ್ಡ ಅಥವಾ ಶುಲ್ಕ ವಿಧಿಸುವಂತಿಲ್ಲ.

2.ಸ್ಕಾಲರ್ಷಿಪ್ ಅಥವಾ ಸರ್ಕಾರದ ಸೌಲಭ್ಯ ವರ್ಗಾವಣೆಗಾಗೀ ಮಾತ್ರ ಬಳಸಲ್ಪಡುವ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದೆ ಇದ್ದಾಗಲೂ ಶುಲ್ಕ ವಿಧಿಸುವಂತಿಲ್ಲ. ಎಷ್ಟು ಬಾರಿ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಹಣ ಖಾತೆಗೆ ಬರುವುದಕ್ಕಾಗಿ ಉಳಿತಾಯ ಖಾತೆಯನ್ನು ತೆರೆದಿರಬಹುದು.

ಹಣವನ್ನು ಪಡೆದು ಮತ್ತು ಬ್ಯಾಂಕ್ ವ್ಯವಹಾರವನ್ನು ಮಾಡದೆ ಇರಬಹುದು. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ತೆರೆದಿರುವ ಖಾತೆಗೆ ಕನಿಷ್ಠ ಮೊತ್ತ ನಿರ್ವಹಿಸಲು ಸಾಧ್ಯವಾಗದೇ ಇದ್ರೆ ಬ್ಯಾಂಕ್, ಶುಲ್ಕ ವಿಧಿಸುವಂತಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಒಟ್ಟಿನಲ್ಲಿ ಒಂದು ಅಥವಾ ಎರಡು ವರ್ಷಗಳ ಕಾಲ ನೀವು ಉಳಿತಾಯ ಖಾತೆಯನ್ನು ಹೊಂದಿದ್ದು ಅದರ ನಿರ್ವಹಣೆ ಮಾಡದೇ ಇದ್ದಲ್ಲಿ ಅಥವಾ ಬ್ಯಾಂಕ್ ವ್ಯವಹಾರ ಮಾಡದೆ ಇದ್ದಲ್ಲಿ ಖಾತೆ ನಿಷ್ಕ್ರಿಯಗೊಳ್ಳುತ್ತದೆ. ಆದರೆ ನೀವು ಮಿನಿಮಮ್ ಬ್ಯಾಲೆನ್ಸ್ ಇಲ್ಲ ಎನ್ನುವ ಕಾರಣಕ್ಕೆ ಶುಲ್ಕ ಪಾವತಿಸಬೇಕಾಗಿಲ್ಲ. ಹಾಗೂ ಯಾವಾಗ ಬೇಕಿದ್ದರೂ ನಿಮ್ಮ ಬ್ಯಾಂಕ್ ಖಾತೆಯನ್ನು ನೀವು ಮುಚ್ಚಬಹುದು. ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಇದ್ದು ನೀವು ಖಾತೆಯ ಬಳಕೆ ಮಾಡದೆ ಇದ್ದಾಗ. ಆ ಖಾತೆಯಿಂದ ಶುಲ್ಕವನ್ನು ಕಡಿತಗೊಳಿಸಬಹುದು. ಒಟ್ಟಿನಲ್ಲಿ ಗ್ರಾಹಕರಿಗೆ ಶುಲ್ಕದ ಹೊರೆ ಅಧಿಕವಾಗಬಾರದು ಎನ್ನುವ ಕಾರಣಕ್ಕೆ ಆರ್ ಬಿ ಐ ಈ ಹೊಸ ನಿಯಮವನ್ನು ಜಾರಿಗೆ ತಂದಿದೆ ಇದು ಏಪ್ರಿಲ್ 1, 2024 ರಿಂದ ಎಲ್ಲಾ ಬ್ಯಾಂಕುಗಳಲ್ಲಿಯೂ ಅನ್ವಯವಾಗಲಿದೆ.

Categories
ಉಡುಪಿ ರಾಜಕೀಯ ಶಿವಮೊಗ್ಗ

ಸಿಂಪಲ್ ರಾಜಕಾರಣಿ ಪ್ರಸನ್ನಕುಮಾರ್ ಕಾಂಗ್ರೆಸ್ ಅಧ್ಯಕ್ಷ!

ಸಿಂಪಲ್ ರಾಜಕಾರಣಿ ಪ್ರಸನ್ನಕುಮಾರ್ ಕಾಂಗ್ರೆಸ್ ಅಧ್ಯಕ್ಷ!
– ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲಿ ಮೇಜರ್‌ ಸರ್ಜರಿ
– 7 ಜಿಲ್ಲೆಗಳ ಕಾಂಗ್ರೆಸ್ ಅಧ್ಯಕ್ಷರು ಬದಲು ಮಾಡಿದ ಕಾಂಗ್ರೆಸ್

NAMMUR EXPRESS NEWS
ಶಿವಮೊಗ್ಗ/ಉಡುಪಿ: ಶಿವಮೊಗ್ಗ, ಉಡುಪಿ ಸೇರಿದಂತೆ 7 ಜಿಲ್ಲೆಗಳ ಕಾಂಗ್ರೆಸ್ ಅಧ್ಯಕ್ಷರನ್ನು ಪಕ್ಷ ಬದಲು ಮಾಡಿದೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ ನಲ್ಲಿ ಲೋಕಸಭಾ ಚುನಾವಣೆ 2024 ರ ಎಲೆಕ್ಷನ್‌ ಸಂದರ್ಭದಲ್ಲಿಯೇ ಮತ್ತೊಂದು ದೊಡ್ಡ ಬದಲಾವಣೆ ಮಾಡಲಾಗಿದೆ. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೂತನವಾಗಿ ಅಧ್ಯಕ್ಷರನ್ನಾಗಿ ಆರ್‌ ಪ್ರಸನ್ನ ಕುಮಾರ್‌ರವರನ್ನ ತರಲಾಗಿದೆ. ಈ ಸಂಬಂಧ ಕೆಪಿಸಿಸಿ ಸೋಮವಾರ ಆದೇಶವನ್ನು ಹೊರಡಿಸಿದೆ. ಈ ಸಂಬಂಧ ಎಐಸಿಸಿಯಿಂದ ಪ್ರಕಟಣೆಯನ್ನ ನೀಡಲಾಗಿದ್ದು ಕೆಸಿ ವೇಣುಗೋಪಾಲ್‌ ರವರ ಲೆಟರ್‌ ಹೆಡ್‌ ಮೂಲಕ ಪ್ರಕಟಣೆಯನ್ನು ನೀಡಲಾಗಿದೆ. ಅದರಲ್ಲಿರುವ ಮಾಹಿತಿ ಪ್ರಕಾರ, ರಾಜ್ಯದ 7 ಜಿಲ್ಲೆಗಳ ಅಧ್ಯಕ್ಷರನ್ನು ಬದಲು ಮಾಡಲಾಗಿದೆ.

7 ಜಿಲ್ಲೆಗಳಿಗೆ ಹೊಸ ಸಾರಥಿಗಳು!

ಬಳ್ಳಾರಿ ನಗರ – ಪ್ರಶಾಂತ್ ಅಲ್ಲಂ ವೀರಭದ್ರಪ್ಪ
ಬೆಂಗಳೂರು ಪೂರ್ವ -ಕೆ.ನಂದಕುಮಾರ್
ಹಾವೇರಿ – ಸಂಜೀವಕುಮಾರ ನೇರಲಂಗಿ
ಕೊಪ್ಪಳ- ಅಮರೇಗೌಡ ಬಯ್ಯಾಪುರ
ಉಡುಪಿ- ಕಿಶನ್ ಹೆಗ್ಡೆ
ರಾಯಚೂರು- ಬಸವರಾಜ ಇಟಗಿ
ಶಿವಮೊಗ್ಗ- ಆರ್ ಪ್ರಸನ್ನ ಕುಮಾರ್

ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಸುಂದರೇಶ್

ಶಿವಮೊಗ್ಗ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ಪಕ್ಷ ಸಂಘಟಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದಲ್ಲಿನ ಆಂತರಿಕ ಕಲಹಗಳನ್ನು ತಣ್ಣಗಾಗಿಸಿ ಗುಂಪುಗಾರಿಕೆಯನ್ನು ತಡೆಗಟ್ಟಿ ತನ್ನದೇ ಆದ ವಾಕ್ ಚಾತುರ್ಯದಿಂದ ಚತುರತೆಯಿಂದ ಅಧಿಕಾರ ಇಲ್ಲದಿದ್ದ ಸಮಯದಲ್ಲೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡವರು ಸುಂದರೇಶ್ ಕಾಂಗ್ರೆಸ್ ಅಚ್ಚುಮೆಚ್ಚಿನ ಅಧ್ಯಕ್ಷರಾಗಿದ್ದ ಹೆಚ್ ಎಸ್ ಸುಂದರೇಶ್ ಸೂಡ ಅಧ್ಯಕ್ಷರಾಗಿ ನೇಮಕವಾದ ಬೆನ್ನಲ್ಲೆ ಆ ಸ್ಥಾನಕ್ಕೆ ಒಬ್ಬ ಜಿಲ್ಲಾಧ್ಯಕ್ಷರ ನೇಮಕವಾಗಬೇಕಿತ್ತು ಈಗ ಆ ಸ್ಥಾನಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ಆರ್ ಪ್ರಸನ್ನ ಕುಮಾರ್ ಅವರ ನೇಮಕವಾಗಿದೆ.

ದೊಡ್ಡ ಜವಾಬ್ದಾರಿ ಪ್ರಸನ್ನ ಕುಮಾರ್ ಹೆಗಲಿಗೆ!

ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಬಹುದೊಡ್ಡ ರಾಷ್ಟ್ರೀಯ ಪಕ್ಷವಾದರೂ ಕೂಡ ಮೂಲ ಕಾಂಗ್ರೆಸ್ಸಿಗರು ಹಾಗೂ ಇತ್ತೀಚಿಗೆ ಬಂದ ಕಾಂಗ್ರೆಸ್ಸಿಗರು ಎಂಬ ಬಣಗಳಿವೆ. ಈ ಬಣಗಳನ್ನು ನಿಭಾಯಿಸಿಕೊಂಡು ಹೋಗುವುದು ಅಷ್ಟು ಸುಲಭದ ಕೆಲಸವಲ್ಲ ಅದನ್ನು ಸುಂದರೇಶ್ ಯಶಸ್ವಿಯಾಗಿ ಮಾಡಿದ್ದರು. ಸಹಕಾರಿ ನಾಯಕ ಡಾ.ಆರ್ ಎಂ ಮಂಜುನಾಥ್ ಗೌಡರು, ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ನಂತರ ಈಗ ಕಾಂಗ್ರೆಸ್ಗೆ ಬಂದಿರುವ ಎಂ ಶ್ರೀಕಾಂತ್, ಕಲಗೋಡು ರತ್ನಾಕರ್ ಜಿಲ್ಲಾಧ್ಯಕ್ಷ ಸ್ಥಾನ ನಿರಾಕರಿಸಿದ್ದರು. ಇದೀಗ ಎಲ್ಲಾ ಜವಾಬ್ದಾರಿ ಪ್ರಸನ್ನ ಕುಮಾರ್ ಹೆಗಲಿಗೆ ಬಿದ್ದಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ನದಿಯಲ್ಲಿ ಮುಳುಗಿ ಮೂವರು ಸಾವು!

ತೀರ್ಥಹಳ್ಳಿ ನದಿಯಲ್ಲಿ ಮುಳುಗಿ ಮೂವರು ಸಾವು!
– ತೀರ್ಥಹಳ್ಳಿ ತುಂಗಾ ನದಿಯಲ್ಲಿ ನಡೆದ ಘಟನೆ
– ಮಕ್ಕಳ ಈಜಿನ ಹುಚ್ಚಿಗೆ ಮೂವರ ಬದುಕು ಬಲಿ

NAMMUR EXPRESS NEWS
ತೀರ್ಥಹಳ್ಳಿ: ರಂಜಾನ್ ಉಪವಾಸ ಮುಗಿಸಿ ಈಜಲು ಹೋಗಿದ್ದ ಮೂವರು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ತುಂಗಾ ನದಿಯಲ್ಲಿ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ. ಮೂವರ ಶವ ಪತ್ತೆಯಾಗಿದೆ. ರಫಾನ್ (17) ಮಹಮ್ಮದ್ ರಫಿ ಪುತ್ರ, ಅಯಾನ್ (17) ಅವರ ಶಹಬಾದ್ ಪುತ್ರ, ಸಮರ್ (17) ಹಸನ್ ಅಬೂಬಕ್ಕರ್ ಅವರ ಪುತ್ರರು. ಉಪವಾಸ ಮುಗಿಸಿ ಈಜಲು ಹೋದಾಗ ಓರ್ವ ಮೊದಲು ಮುಳುಗಿದ್ದಾನೆ. ಆತನನ್ನು ರಕ್ಷಿಸಲು ಹೋದ ಮೂವರು ಕೂಡ ಮೃತಪಟ್ಟಿದ್ದಾರೆ. ಮೆಕಾನಿಕ್ ರಫಿ ಮಗ, ಫ್ರೂಟ್ ಭಾಷಾ ಅವರ ಮೊಮ್ಮಗ, ಇಸಾಕ್ ಸಾಹೇಬ್ರ ಮಗಳು ಖತಿಜಾ ಅವರ ಮಗ.
ತೀರ್ಥಹಳ್ಳಿ ರಾಮ ಮಂಟಪದ ಪಕ್ಕ ಈ ಘಟನೆ ನಡೆದಿದೆ. ಈಗಾಗಲೇ ಜನ ತುಂಗಾ ತೀರದಲ್ಲಿ ಜಮಾವಣೆಗೊಂಡಿದ್ದರು, ಅಗ್ನಿ ಶಾಮಕ ದಳ ಮತ್ತು ಪೊಲೀಸರು ಸ್ಥಳದಲ್ಲಿ ಇದ್ದರು..ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳೀಯ ಈಜುಗಾರರು ಮೃತ ದೇಹ ಹೊರ ತೆಗೆದರು. ಜೆಸಿ ಆಸ್ಪತ್ರೆಯಲ್ಲಿ ಮರಣ ಪರೀಕ್ಷೆ ನಡೆಯಲಿದೆ.

ನೆಟ್ವರ್ಕ್ ಟ್ರೇಸ್ ಮಾಡಿ ಪತ್ತೆ!

ಹುಡುಗರು ರಂಜಾನ್ ಉಪವಾಸ ಮುಗಿಸಿ ಸ್ನಾನಕ್ಕೆ ಈಜಲು ಹೋಗಿ ನಾಪತ್ತೆಯಾಗಿದ್ದರು. ಬಳಿಕ ಮನೆಯವರು ಹುಡುಕಿದರೂ ಸಿಕ್ಕಿರಲಿಲ್ಲ. ಇದೀಗ ತಡ ರಾತ್ರಿ ಎಲ್ಲರ ಶವ ಸಿಕ್ಕಿದೆ. ಮಂಗಳವಾರ ಪರೀಕ್ಷೆ ಇತ್ತು. ಆದರೂ ಈಜಲು ಹೋಗಿದ್ದರು.

ಇತ್ತೀಚಿಗೆ ಇಬ್ಬರು ಸಾವು

ಎಳ್ಳಮಾವಾಸ್ಯೆ ಜಾತ್ರೆ ವೇಳೆ ಒಬ್ಬ ಬಾಲಕ ಮತ್ತು ಇತ್ತೀಚಿಗೆ ಬಾಳೆಬೈಲು ಕಾಲೇಜು ಹಿಂಭಾಗ ಓರ್ವ ಸೆಲ್ಫಿ ತೆಗೆಯಲು ಹೋಗಿ ಮೃತಪಟ್ಟಿದ್ದರು.

Categories
ಉಡುಪಿ ಕರಾವಳಿ

ಕಾಪು ಮಹಿಳಾ ಸಿಬ್ಬಂದಿ ಆತ್ಮಹತ್ಯೆ: ಪತಿ ಅರೆಸ್ಟ್!

ಕಾಪು ಮಹಿಳಾ ಸಿಬ್ಬಂದಿ ಆತ್ಮಹತ್ಯೆ: ಪತಿ ಅರೆಸ್ಟ್!
– ಸಾವಿಗೆ ಪತಿಯ ಅನುಮಾನವೇ ಕಾರಣ ಎಂದು ಡೆತ್ ನೋಟ್ : ಏನಿದು ಘಟನೆ?

NAMMUR EXPRESS NEWS
ಕಾಪು: ಕಾಪು ಪೊಲೀಸ್‌ ಠಾಣೆಯ ಮಹಿಳಾ ಸಿಬ್ಬಂದಿ ಜ್ಯೋತಿ(32) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಇಳಕಲ್‌ ತಾಲೂಕಿನ ರವಿಕುಮಾರ್‌(35) ಬಂಧಿತ ಆರೋಪಿ. ರವಿಕುಮಾರ್‌ ಕೆಎಸ್‌ಆರ್‌ಟಿಸಿ ಸಂಸ್ಥೆಯಲ್ಲಿ ಮೆಕ್ಯಾನಿಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2017ರಲ್ಲಿ ತಮ್ಮದೇ ಊರಿನ ಜ್ಯೋತಿ ಜತೆಗೆ ಮದುವೆಯಾಗಿತ್ತು. ಜ್ಯೋತಿ ಕಾಪು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರಣ ಇಬ್ಬರು ಕೂಡ ಸಮೀಪದಲ್ಲೇ ಇದಗದ ಪೊಲೀಸ್‌ ವಸತಿ ಗೃಹದಲ್ಲಿ ವಾಸವಾಗಿದ್ದರು. ಮಾ.29ರಂದು ರಾತ್ರಿ ರವಿಕುಮಾರ್‌ ಹಾಗೂ ಜ್ಯೋತಿ ನಡುವೆ ಗಲಾಟೆ ನಡೆದಿದ್ದು, ಮರು ದಿನ ಬೆಳಗ್ಗೆ ಪತಿ ಕಚೇರಿಗೆ ಹೋದ ಬಳಿಕ ಜ್ಯೋತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಜ್ಯೋತಿ ರೂಮ್‌ನಲ್ಲಿ ಡೈರಿಯೊಂದು ಪತ್ತೆಯಾಗಿದೆ. ಅದರಲ್ಲಿ ತನ್ನ ಸಾವಿಗೆ ಪತಿಯ ಅನುಮಾನವೇ ಕಾರಣ ಎಂದು ಬರೆಯಲಾಗಿದೆ. ತಮ್ಮಿಬ್ಬರ ಸಂಸಾರಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಡೈರಿಯಲ್ಲಿ ಉಲ್ಲೇಖವಾಗಿದ್ದು, ಆ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಇದೀಗ, ಜ್ಯೋತಿ ತಾಯೊ ದೇವಮ್ಮ ವಿಟ್ಲಾಪುರ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಈ ಪ್ರಕರಣದ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

Categories
ರಾಜ್ಯ

ಕರ್ನಾಟಕದಲ್ಲಿ ಮಳೆ ಅಬ್ಬರ ಶುರು..!

ಕರ್ನಾಟಕದಲ್ಲಿ ಮಳೆ ಅಬ್ಬರ ಶುರು..!
– ಬೇಸಿಗೆಯಲ್ಲೂ ಭಾರಿ ಮಳೆಯ ಸುಳಿವು
– ಏಪ್ರಿಲ್ ಮೊದಲ ವಾರದಿಂದಲೆ ಮಳೆ

NAMMUR EXPRESS NEWS
ಮಳೆಗಾಗಿ ಜನರು ಕಾದು ಕೂತಿದ್ದಾರೆ, ಆದಷ್ಟು ಬೇಗ ಮಳೆ ಬರಲಿ ದೇವರೆ ಅಂತಾ ಪ್ರಾರ್ಥನೆ ಮಾಡುತ್ತಿದ್ದಾರೆ. ಆದರೂ ಮಳೆಯ ಸುಳಿವೆ ಇಲ್ಲ, ಮಳೆ ಬರಬೇಕಾದ ಸಮಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿ ಮಳೆಯ ಮೋಡಗಳು ಮರೆಯಾಗಿ ಹೋಗುತ್ತಿವೆ. ಹೀಗಿದ್ದಾಗಲೇ ಮಳೆಯ ವಿಚಾರವಾಗಿ ಭರ್ಜರಿ ಸುದ್ದಿಯೊಂದು ಸಿಕ್ಕಿದೆ. ಕರ್ನಾಟಕದ ಬಹುತೇಕ ಕಡೆ ಇದೀಗ ನೆತ್ತಿ ಸುಡವ ಬಿಸಿಲು ಆವರಿಸಿದ್ದು, ಜನರು ಕುಡಿಯುವ ನೀರಿಗಾಗಿ ಟ್ಯಾಂಕ‌ರ್ ನೀರನ್ನೇ ಆಶ್ರಯಿಸಿದ್ದಾರೆ. 3000 ದಿಂದ 4000 ರೂಪಾಯಿ ಖರ್ಚು ಮಾಡಿ ಜನ ತೋಟ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಬೆಳೆಗೆ ಬಿಡಿ ಕುಡಿಯುವ ನೀರು ಕೂಡ ಸಿಗದ ಪರಿಸ್ಥಿತಿ ಎದುರಾಗಿದೆ. ಹೀಗಿದ್ದಾಗಲೇ ಮಳೆ ಬರಲಿ ಅಂತಾ ಹಲವು ಪ್ರದೇಶದಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಭರ್ಜರಿ ಸುದ್ದಿಯೊಂದು ಹೊರಬಿದ್ದಿದ್ದು, ಈ ಸಂಕಷ್ಟದ ನಡುವೆ ಇದೀಗ ಭಾರಿ ಮಳೆ ಸುರಿಯಲು ಆರಂಭವಿಸಿದೆ.

ಮಳೆ ಬಂತು ಮಳೆ.. ಮಳೆ ಬಂತು ಮಳೆ..!

ಮಳೆಗಾಗಿ ಭೂಮಿ ತಾಯಿ ಕಾದು ಕೂತಿದ್ದಾಳೆ ಮಳೆ ಬೀಳದೆ ಇದ್ದರೆ ಪರಿಸ್ಥಿತಿ ಕೈಮೀರಿ ಹೋಗಲಿದೆ. ಪರಿಸ್ಥಿತಿ ಹೀಗೆ ಹದ್ದು ಮೀರಿ ಹೋಗಿರುವ ಸಮಯದಲ್ಲೇ, ಭರ್ಜರಿ ಸುದ್ದಿಯೊಂದು ಸಿಕ್ಕಿದೆ. ಅದು ಏನೆಂದರೆ ಕರ್ನಾಟಕದ ಕೆಲವು ಪ್ರದೇಶದಲ್ಲಿ ಭರ್ಜರಿ ಮಳೆ ಬೀಳುವ ಎಲ್ಲಾ ಮುನ್ಸೂಚನೆ ಇದೀಗ ಸಿಕ್ಕಿದೆ. ಹವಾಮಾನ ತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಶಿವಮೊಗ್ಗ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ ಮೊದಲ ವಾರದಿಂದ ಮಳೆಯಾಗಲಿದೆ ಅಂತಾ ಇದೀಗ ಹವಾಮಾನ ತಜ್ಞರಿಂದ ಮುನ್ಸೂಚನೆ ಸಿಕ್ಕಿದೆ. ಪೂರಕವಾಗಿ ಈಗಾಗಲೇ, ಕಾವೇರಿ ನದಿಯ ತವರು ಜಿಲ್ಲೆ ಕೊಡಗು ಸೇರಿದಂತೆ ಚಿಕ್ಕಮಗಳೂರು, ಹುಬ್ಬಳ್ಳಿ & ಧಾರವಾಡ ಸೇರಿ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲೂ ಮಳೆ ಬಿದ್ದಿದೆ. ಹಾಗೇ ವಿಜಯಪುರ ಜಿಲ್ಲೆಯಲ್ಲಿ ಭಾರಿ ಮಳೆ & ಗಾಳಿ ಬಂದು ಸಂತಸ ತಂದಿದೆ. ಈ ನಡುವೆ ದೇಶದ ಇನ್ನೂ ಹಲವು ಕಡೆ ಭಾರಿ ಮಳೆ ಶುರುವಾಗಿದೆ.

ಸರ್ಕಾರಕ್ಕೂ ರಿಲೀಫ್‌ ಸಿಗಲಿದೆ!

ಒಟ್ಟಿನಲ್ಲಿ ಮಳೆ ಬರದೇ ಇದ್ದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗಲಿದೆ, ಹಾಗೇ ಚುನಾವಣೆಯ ವೇಳೆ ಇದು ಸರ್ಕಾರಗಳಿಗೂ ಸಮಸ್ಯೆ ತಂದೊಡ್ಡಿದೆ. ಹೀಗಾಗಿ ನೀರಿನ ಕೊರತೆ ನೀಗಿಸಲು ಸರ್ಕಾರದ ಕಡೆಯಿಂದ ಕೂಡ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಮತ್ತೊಂದು ಕಡೆ ಪ್ರಕೃತಿಯ ಕಡೆಯಿಂದ ಕೂಡ ಅನುಮತಿ ಸಿಗಬೇಕಿದ್ದು, ಈ ಮೂಲಕ ಭರ್ಜರಿ ಮಳೆಯಾದರೆ ನೀರಿನ ಬಗ್ಗೆ ಎದ್ದಿರುವ ಸಮಸ್ಯೆ ಸುಖಾಂತ್ಯ ಕಾಣಲಿದೆ.

Categories
ಉಡುಪಿ ರಾಜ್ಯ

ಕೆಂಡದಂತಾದ ಕರ್ನಾಟಕ ತಾಪಮಾನ..!

ಕೆಂಡದಂತಾದ ಕರ್ನಾಟಕ ತಾಪಮಾನ..!
– ಬಿಸಿಲಿನಲ್ಲಿ ಸ್ಕೂಟ‌ರ್ ನಿಲ್ಲಿಸುವವರು ಎಚ್ಚರ!
– ಉಡುಪಿಯಲ್ಲಿ ಸ್ಕೂಟರ್ ಬ್ಯಾಟರಿಯಲ್ಲಿ ಬೆಂಕಿ

NAMMUR EXPRESS NEWS
ಉಡುಪಿ: ಉಡುಪಿಯ ಅಕಾಶವಾಣಿ ಸರ್ಕಲ್ ಬಳಿ ಸೋಮವಾರ ಬೆಳಿಗ್ಗೆ ಎಲೆಕ್ಟ್ರಿಕ್ ಸ್ಕೂಟರ್ ನ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡು, ಹೊತ್ತಿ ಉರಿದಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಬಿಸಿಲಿನ ಬೇಗೆಯಿಂದ ಈ ಅವಘಡ ನಡೆದಿದೆ ಎನ್ನಲಾಗಿದ್ದು, ಅದೃಷ್ಟವಶಾತ್ ಬೆಂಕಿ ವ್ಯಾಪಿಸದಿರುವುದರಿಂದ ಹಾನಿ ಸಂಭವಿಸಿಲ್ಲ. ಸ್ಥಳೀಯ ಯುವಕರು ಸ್ಕೂಟರ್ ಗೆ ನೀರು ಎರಚಿ ಬೆಂಕಿ ನಂದಿಸಿದರು. ಘಟನೆ ಬಗ್ಗೆ ತನಿಖೆಯಿಂದ ಮಾತ್ರ ಹೆಚ್ಚಿನ ಮಾಹಿತಿ ಹೊರ ಬರಬೇಕಾಗಿದೆ. ಈ ನಡುವೆ ಹಲವಾರು ಬೆಂಕಿ ಘಟನೆಗಳು ಎಲೆಕ್ಟ್ರಿಕ್ ವಾಹನಗಳೊಂದಿಗೆ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕ್ರಮಕ್ಕೆ ಮುಂದಾಗಿದೆ ಕೂಡ.