Categories
ರಾಜ್ಯ ರಾಷ್ಟ್ರೀಯ ವಾರ್ತೆ

ಜನಸಾಮಾನ್ಯರಿಗೆ ಬಿಗ್ ಶಾಕ್..!

ಜನಸಾಮಾನ್ಯರಿಗೆ ಬಿಗ್ ಶಾಕ್..!
– ಇಂದಿನಿಂದ ಔಷಧಿಗಳ ಬೆಲೆಯಲ್ಲಿ ಏರಿಕೆ
– 800 ಅಗತ್ಯ ಔಷಧಿಗಳ ಬೆಲೆಯಲ್ಲಿ ಭಾರಿ ಏರಿಕೆ

NAMMUR EXPRESS NEWS
ನವದೆಹಲಿ : ಏಪ್ರಿಲ್ 1 ರ ಇಂದಿನಿಂದ 800 ಔಷಧಿಗಳ ಬೆಲೆ ಹೆಚ್ಚಾಗಲಿದೆ. ಈ ಔಷಧಿಗಳ ಪಟ್ಟಿಯಲ್ಲಿ ನೋವು ನಿವಾರಕಗಳು, ಪ್ರತಿಜೀವಕಗಳು ಮತ್ತು ಸೋಂಕಿನ ವಿರೋಧಿ ಔಷಧಿಗಳು ಸೇರಿವೆ. ವರದಿಯ ಪ್ರಕಾರ, ಸರ್ಕಾರವು ಸಗಟು ಬೆಲೆ ಸೂಚ್ಯಂಕದಲ್ಲಿ (ಡಬ್ಲ್ಯುಪಿಐ) ಹಲವಾರು ಬದಲಾವಣೆಗಳನ್ನು ಮಾಡಿದೆ. ಮತ್ತು ಸರ್ಕಾರವು ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿಯನ್ನು (ಎನ್‌ಎಲ್‌ಇಎಂ) ಶೇಕಡಾ 0.0055 ರಷ್ಟು ಹೆಚ್ಚಿಸಿದೆ. ಕೆಲವೇ ದಿನಗಳಲ್ಲಿ ಬೆಲೆ ಏರಿಕೆಯಾಗಿದೆ.

ಔಷಧಿಗಳ ಬೆಲೆಗಳು ವರ್ಷಕ್ಕೆ ಒಮ್ಮೆ ಮಾತ್ರ ಹೆಚ್ಚಾಗಬಹುದು!

2022 ರಲ್ಲಿ ಔಷಧಿಗಳ ಬೆಲೆಯನ್ನು ಶೇಕಡಾ 12 ಮತ್ತು 10 ರಷ್ಟು ಹೆಚ್ಚಿಸಲಾಗಿತ್ತು. ವರದಿಯ ಪ್ರಕಾರ, ಔಷಧಿಗಳ ಬೆಲೆ ಹೆಚ್ಚಳಕ್ಕೆ ಅನುಮೋದನೆ ವರ್ಷಕ್ಕೆ ಒಮ್ಮೆ ಮಾತ್ರ ಮಾಡಬಹುದು. ಕಳೆದ ಕೆಲವು ವರ್ಷಗಳಲ್ಲಿ, ಔಷಧಿಯಲ್ಲಿ ಬಳಸುವ ವಸ್ತುಗಳ ಬೆಲೆಯೂ ಹೆಚ್ಚಾಗಿದೆ. ಇದು 15 ರಿಂದ 130 ಪ್ರತಿಶತದಷ್ಟು ಹೆಚ್ಚಾಗಿದೆ. ಪ್ಯಾರಸಿಟಮಾಲ್ ಬೆಲೆ ಶೇ.130ರಷ್ಟು ಏರಿಕೆಯಾಗಿದ್ದರೆ, ಎಕ್ಸಿಪಿಯೆಂಟ್ ಗಳ ಬೆಲೆ ಶೇ.18-262ರಷ್ಟು ಏರಿಕೆಯಾಗಿದೆ. ಇದಲ್ಲದೆ, ಅನೇಕ ಔಷಧಿಗಳ ಬೆಲೆ ಹೆಚ್ಚಾಗಿದೆ.

ಬೆಲೆ ಅನುಮತಿ ಕೋರಲಾಗಿದೆ.!

ಔಷಧ ತಯಾರಿಕೆಯ ವೆಚ್ಚವು ತುಂಬಾ ಹೆಚ್ಚಾಗಿದೆ ಎಂದು ಔಷಧೀಯ ಉದ್ಯಮದ ಗುಂಪುಗಳು ಹೇಳುತ್ತವೆ. ಆದ್ದರಿಂದ, ಅದರ ಬೆಲೆಯೂ ಹೆಚ್ಚಾಗುತ್ತದೆ. ಎರಡಂಕಿಗಳು ಹೆಚ್ಚುತ್ತಿವೆ. ಈಗ ಬೆಲೆ ಏರಿಕೆಯಿಂದ ಸ್ವಲ್ಪ ಪರಿಹಾರ ಸಿಕ್ಕಿದೆ. ಔಷಧಿಗಳು ಹೆಚ್ಚಿನ ಜನರಿಗೆ ಕೆಲಸ ಮಾಡುವ ವಿಷಯವಾಗಿದೆ. ಪ್ಯಾರಸಿಟಮಾಲ್, ಅಜಿಪ್ರೊಮೈಸಿನ್ ಮತ್ತು ಜೀವಸತ್ವಗಳು ಮತ್ತು ಖನಿಜಗಳು ಇತ್ಯಾದಿಗಳನ್ನು ಒಳಗೊಂಡಿದೆ. ಔಷಧಿಗಳ ಪಟ್ಟಿಯಲ್ಲಿ ಪ್ಯಾರಸಿಟಮಾಲ್, ಅಜಿಪ್ರೊಮೈಸಿನ್ ನಂತಹ ಪ್ರತಿಜೀವಕಗಳು, ರಕ್ತಹೀನತೆ ವಿರೋಧಿ, ಜೀವಸತ್ವಗಳು ಮತ್ತು ಕಬ್ಬಿಣ ಸೇರಿವೆ.

ಪ್ಯಾರಸಿಟಮಾಲ್ ಬೆಲೆ ಶೇ.130ರಷ್ಟು ಹಾಗೂ ಎಕ್ಸಿಪೆಂಟ್ಸ್ ಶೇ. 18-262ರಷ್ಟು ಏರಿಕೆಯಾಗಿದೆ. ಗ್ಲಿಸರಿನ್ ಮತ್ತು ಪ್ರೊಪಿಲೀನ್‌ ಕಾಲ್, ಸಿರಪ್ ಸೇರಿದಂತೆ ದ್ರಾವಕಗಳು ಕ್ರಮವಾಗಿ ಶೇಕಡಾ 263 ಮತ್ತು ಶೇಕಡಾ 83 ರಷ್ಟು ದುಬಾರಿಯಾಗಿವೆ. ಮಧ್ಯಂತರ ಬೆಲೆಗಳು ಶೇಕಡಾ 11 ರಿಂದ 175 ರಷ್ಟು ಹೆಚ್ಚಾಗಿದೆ. ಪೆನ್ಸಿಲಿನ್ ಜಿ ಶೇಕಡಾ 175 ರಷ್ಟು ದುಬಾರಿಯಾಗಿದೆ.

Categories
ಬೆಂಗಳೂರು ರಾಜ್ಯ ಸಿನಿಮಾ

ನಟ ಶಿವರಾಜ್ ಕುಮಾ‌ರ್ ಆರೋಗ್ಯದಲ್ಲಿ ಏರುಪೇರು..!

ನಟ ಶಿವರಾಜ್ ಕುಮಾ‌ರ್ ಆರೋಗ್ಯದಲ್ಲಿ ಏರುಪೇರು..!
– ಆಸ್ಪತ್ರೆಗೆ ದಾಖಲು..!

NAMMUR EXPRESS NEWS
ಬೆಂಗಳೂರು : ನಟ ಶಿವರಾಜ್ ಕುಮಾ‌ರ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಲೋಕಸಭೆ ಚುನಾವಣೆಯಲ್ಲಿ ಸತತವಾಗಿ ಪ್ರಚಾರ ಕೈಗೊಂಡ ಹಿನ್ನೆಲೆ ಅವರು ಅನಾರೋಗ್ಯಕ್ಕೆ ಒಳಗಾಗಿದ್ದು, ಬೆಂಗಳೂರಿನ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸಂಜೆ ವೇಳೆಗೆ ಅವರು ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ನಾಳೆ ಕಿಮ್ಮನೆ ಪ್ರತಿಭಟನೆ..!

ತೀರ್ಥಹಳ್ಳಿಯಲ್ಲಿ ನಾಳೆ ಕಿಮ್ಮನೆ ಪ್ರತಿಭಟನೆ..!
– ಸರ್ವಾಧಿಕಾರಿ ವ್ಯವಸ್ಥೆ ನಿರ್ಮಾಣಕ್ಕೆ ಮುಂದಾದ ಬಿಜೆಪಿ ವಿರುದ್ಧ ಉಪವಾಸ ಸತ್ಯಾಗ್ರಹ: ಕಿಮ್ಮನೆ
– ಏನಿದು ಸತ್ಯಾಗ್ರಹ… ಏಕೆ ಹೋರಾಟ..?

NAMMUR EXPRESS NEWS
ತೀರ್ಥಹಳ್ಳಿ : ಏಪ್ರಿಲ್ ಎರಡರಂದು ತೀರ್ಥಹಳ್ಳಿ ತಾಲೂಕು ಕಚೇರಿ ಮುಂಭಾಗ ಬೆಳಿಗ್ಗೆ 10.30 ರಿಂದ ಸಂಜೆ 5 ವರೆಗೆ ಮಾಜಿ ಸಚಿವರು, ಕೆಪಿಸಿಸಿ ವಕ್ತಾರರು ಆದ ಕಿಮ್ಮನೆ ರತ್ನಾಕರ್ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿ, ಆರ್ಥಿಕ ದಿಗ್ವಂದನ ಹೇರಿ ಸರ್ವಾಧಿಕಾರಿ ವ್ಯವಸ್ಥೆ ನಿರ್ಮಾಣಕ್ಕೆ ಮುಂದಾದ ಬಿಜೆಪಿ ಹಾಗೂ ಮೋದಿ ಸರ್ಕಾರದ ವಿರುದ್ಧ ಪ್ರತಿಭಟಿಸಲು ಕಿಮ್ಮನೆ ರತ್ನಾಕರ್ ಮುಂದಾಗಿದ್ದು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಸಮಾನ ಮನಸ್ಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವವನ್ನು ಬೆಂಬಲಿಸುವಂತೆ ಕೋರಲಾಗಿದೆ.

ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ‘ಕೈ’ ಕಟ್ಟುವ ಷಡ್ಯಂತ್ರ!

ದೇಶ ಸರ್ವಾಧಿಕಾರಿ ವ್ಯವಸ್ಥೆಯತ್ತ ಸರಿಯ ಲಾರಂಭಿಸಿದೆ. ವಿರೋಧ ಪಕ್ಷಗಳನ್ನು ಸರ್ವನಾಶ ಮಾಡಿ ಹಿಟ್ಲರ್-ಮುಸೋಲಿನಿ ಮಾದರಿಯಲ್ಲಿ ಮೋದಿ-ಅಮಿತ್ ಷಾ ಸರ್ವಾಧಿಕಾರಿ ವ್ಯವಸ್ಥೆ ಸೃಷ್ಟಿಸಲು ಮುಂದಾಗಿದ್ದಾರೆ ಎಂದು ಕಿಮ್ಮನೆ ಆರೋಪಿಸಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ‘ಚುನಾವಣೆ’ ಅತೀ ಮುಖ್ಯ ಅಂಶ. ಅದಕ್ಕೆಂದೇ ನಿಷ್ಪಕ್ಷಪಾತ ರೀತಿಯಲ್ಲಿ ಚುನಾವಣೆ ನಡೆಯ ಬೇಕೆಂಬ ಉದ್ದೇಶದಿಂದ ಚುನಾವಣಾ ಆಯೋಗಕ್ಕೆ’ ಸ್ವಾಯತ್ತ ಸ್ವತಂತ್ರ ಅಧಿಕಾರ ನೀಡಲಾಗಿದೆ. ಆದರೆ ಮೋದಿ ಸರ್ಕಾರ ಚುನಾ ವಣಾ ಆಯೋಗವನ್ನೂ ದುರ್ಬಳಕೆ ಮಾಡುತ್ತಿದೆ.

ಚುನಾವಣೆ ಘೋಷಣೆಯಾದ ನಂತರ ಪ್ರಬಲ ವಿರೋಧ ಪಕ್ಷಗಳ ನಾಯಕರನ್ನು ಸುಳ್ಳು ಆರೋಪಗಳಡಿ ಬಂಧಿಸಿ ಜೈಲಿಗೆ ಅಟ್ಟಲಾಗುತ್ತಿದೆ. ಜಾರಿ ನಿರ್ದೇಶನಾಲಯ, ಸಿಬಿಐ, ಆದಾಯ ತೆರಿಗೆ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡು ವಿಪಕ್ಷ ನಾಯಕರನ್ನು ಮುಗಿಸಿ ಹಾಕಲಾಗುತ್ತಿದೆ. ‘ಒಂದೋ ಬಿಜೆಪಿ ಸೇರಿ ಇಲ್ಲ ಜೈಲಿಗೆನಡೆಯಿರಿ ಎಂಬ ತಂತ್ರ ಅನುಸರಿಸಲಾಗುತ್ತಿದೆ ನಮ್ಮ ಕಾಂಗ್ರೆಸ್ ಪಕ್ಷ ಹಾಗೂ ಪಕ್ಷದ ವರಿಷ್ಟ ನಾಯಕರ ವಿರುದ್ಧ ಯಾವುದೇ ಆರೋಪ ಮಾಡಲು ನಮ್ಮ ನಾಯಕರನ್ನು ಕಾನೂನಿನ ಅಡಕತ್ತರಿಗೆ ಸಿಲುಕಿಸಲು ಸಾಧ್ಯವಾಗದೇ ಹೋದಾಗ, ಮೋದಿ ಸರ್ಕಾರ ಪಕ್ಷದ ಮೇಲೆ ಆರ್ಥಿಕ ದಿಗ್ಧಂಧನ’ ಹೇರಿ ಚುನಾವಣೆ ಖರ್ಚಿಗೆ ಹಣವೇ ಸಿಗದಂತೆ ಮಾಡಲು ಮುಂದಾಗಿದೆ ಇದು ಪ್ರಜಾಪ್ರಭುತ್ವವ್ಯವಸ್ಥೆಗೇ ನಾಚಿಕೆಗೇಡಿನ ಸಂಗತಿ.

ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆ ಗಳನ್ನು ಸ್ಥಗಿತಗೊಳಿಸುವ ಮೋದಿ ಸರ್ಕಾರ ಹಿಟ್ಲರ್ ಸರ್ಕಾರ ಕ್ಕಿಂತಾ ನೀಚ ಮಟ್ಟ ತಲುಪಿದೆ. ಆದಾಯ ತೆರಿಗೆ ವಿಚಾರದಲ್ಲಿ ಏನೇ ವ್ಯತ್ಯಾಸಗಳಿದ್ದರೂ ಚುನಾವಣೆಗೆ 6 ತಿಂಗಳು ಮೊದಲೇ ಕ್ರಮ ಜರುಗಿಸ ಬಹುದಿತ್ತು ಅಥವಾ ಚುನಾ ವಣಾ ಪ್ರಕ್ರಿಯೆ ನಂತರ ಕ್ರಮ ಕೈಗೊಳ್ಳಬಹುದಾಗಿತ್ತು. ಆದರೆ ಮೋದಿ ಸರ್ಕಾರ ದುರುದ್ದೇಶದಿಂದ ಚುನಾವಣೆ ಘೋಷಣೆಯಾದ ನಂತರ ಏಕಾಏಕಿ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ. ಪಕ್ಷದ ಪ್ರಚಾರ, ನಾಯಕರ ಪ್ರವಾಸಕ್ಕೂ ಹಣ ಸಿಗದಂತೆ ಮಾಡಲಾಗಿದೆ. ಇದು ಅತ್ಯಂತ ಹೇಯ.

ಪ್ರಜಾಪ್ರಭುತ್ವವನ್ನು, ನ್ಯಾಯ ಸಮ್ಮತ ಚುನಾವಣೆಯನ್ನು ಅಪೇಕ್ಷಿಸುವ ಪ್ರತಿಯೊಬ್ಬರೂ ಈ ಸರ್ವಾಧಿಕಾರಿ ಮನಸ್ಥಿತಿಯನ್ನು ವಿರೋಧಿ ಸಬೇಕು ಎಂದಿರುವ ಮಾಜಿ ಸಚಿವ, ರಾಜ್ಯ ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್ ತಾವು ಮೋದಿ ಸರ್ಕಾ ರದ ಈ ದುಷ್ಟ ಷಡ್ಯಂತ್ರದ ವಿರುದ್ಧ, ಸರ್ವಾಧಿಕಾರಿ ನಿಲುವಿನ ವಿರುದ್ದ ಏಪ್ರಿಲ್ 2 ರ ಮಂಗಳವಾರ ಬೆಳಿಗ್ಗೆ 10-30ರಿಂದ ಸಂಜೆ 5 ಗಂಟೆಯವರೆಗೆ ತೀರ್ಥಹಳ್ಳಿ ತಾಲ್ಲೂಕು ಕಛೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದ್ದಾರೆ. ಸಮಾನ ಮನಸ್ಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದ್ದಾರೆ.

Categories
ತೀರ್ಥಹಳ್ಳಿ

ತುಂಗಾ ಕಾಲೇಜು ಹಿರಿಯ ವಿದ್ಯಾರ್ಥಿ ಸಂಘಕ್ಕೆ ಶ್ರೀನಂದಾ ದಬ್ಬಣಗದ್ದೆ ಅಧ್ಯಕ್ಷ

ತುಂಗಾ ಕಾಲೇಜು ಹಿರಿಯ ವಿದ್ಯಾರ್ಥಿ ಸಂಘಕ್ಕೆ ಶ್ರೀನಂದಾ ದಬ್ಬಣಗದ್ದೆ ಅಧ್ಯಕ್ಷ
– 3 ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ
– ಕಾರ್ಯದರ್ಶಿಯಾಗಿ ಯುವರಾಜ್, ಖಜಾಂಚಿಯಾಗಿ ಭರತ್ ಕೋಡ್ಲು, ಉಪಾಧ್ಯಕ್ಷರಾಗಿ ಲೀಲಾವತಿ ಜಯಶೀಲಾ, ಅಕ್ಷತಾ ಅಂಧಗೇರಿ, ಸಹ ಕಾರ್ಯದರ್ಶಿಯಾಗಿ ಚೇತನ್ ಆಯ್ಕೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರತಿಷ್ಠಿತ ತುಂಗಾ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದ ನೂತನ ಅಧ್ಯಕ್ಷರಾಗಿ ಯುವ ಸಂಘಟಕ, ಗುತ್ತಿಗೆದಾರ ಶ್ರೀನಂದಾ ದಬ್ಬಣಗದ್ದೆ ಆಯ್ಕೆಯಾಗಿದ್ದಾರೆ. ತುಂಗಾ ಕಾಲೇಜಿನ ಸೆಮಿನಾರ್ ಹಾಲಿನಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಈ ಹಿಂದೆ ನೆಂಪೆ ದೇವರಾಜ್ ಅವರು ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಕಾರ್ಯದರ್ಶಿಯಾಗಿ ರಕ್ಷಿತ್ ಸ್ಟುಡಿಯೋ ಯುವರಾಜ್, ಖಜಾಂಚಿಯಾಗಿ ಭರತ್ ಕೋಡ್ಲು, ಉಪಾಧ್ಯಕ್ಷರಾಗಿ ಲೀಲಾವತಿ ಜಯಶೀಲಾ ಮತ್ತು ಅಕ್ಷತಾ ಅಂಧಗೇರಿ ಸಹ ಕಾರ್ಯದರ್ಶಿಯಾಗಿ ಚೇತನ್ ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳಾಗಿ ನೆಂಪೆ ದೇವರಾಜ್, ಕೆಟಿ ರಮೇಶ್, ಪೂರ್ಣೇಶ್ ಕೆಳಕೆರೆ, ಪ್ರವೀಣ್ ಸರಳ, ಹಕೀಮ್, ಗೌತಮ್ ಬಾಣಂಕಿ, ಮ್ಯಾಥಿವ್ ಸುರಾನಿ, ಗೋಪಾಲಕೃಷ್ಣ, ರಜನಿ ಜೋಗಿ ಆಯ್ಕೆಯಾಗಿದ್ದಾರೆ. ಕಾನೂನು ಸಲಹೆಗಾರರಾಗಿ ಆದರ್ಶ್ ಮುತ್ತುಗುಂಡಿ ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ತುಂಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಪಟ್ಟಮಕ್ಕಿ ಮಹಾಬಲೇಶ್, ಪ್ರಿನ್ಸಿಪಾಲರಾದ ಕುಮಾರಸ್ವಾಮಿ ಸೇರಿದಂತೆ ಹಲವರು ಇದ್ದರು.

Categories
ರಾಜಕೀಯ ಶಿವಮೊಗ್ಗ

ಶಿವಮೊಗ್ಗ ಕ್ಷೇತ್ರಕ್ಕೆ ಪ್ರಜಾಕೀಯ ಪಕ್ಷದಿಂದ ಅರುಣ್ ಕಾನಳ್ಳಿ ಕಣಕ್ಕೆ.!

ಶಿವಮೊಗ್ಗ ಕ್ಷೇತ್ರಕ್ಕೆ ಪ್ರಜಾಕೀಯ ಪಕ್ಷದಿಂದ ಅರುಣ್ ಕಾನಳ್ಳಿ ಕಣಕ್ಕೆ.!
– ಉಪೇಂದ್ರ ನೇತೃತ್ವದ ಪಕ್ಷದಿಂದ ಬಿ ಫಾರ್ಮ್ ಪಡೆದ ಅಭ್ಯರ್ಥಿ
– ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧೆ: ಸಾಮಾಜಿಕ ಹೋರಾಟದಲ್ಲೂ ಮುಂಚೂಣಿ

NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಲೋಕಸಭಾ ಚುನಾವಣೆ ರಂಗೇರುತ್ತಿದೆ. ಈಗಾಗಲೇ ಬಿಜೆಪಿಯಿಂದ ಹಾಲಿ ಸಂಸದ ಬಿ ವೈ ರಾಘವೇಂದ್ರ, ಕಾಂಗ್ರೆಸ್ ನಿಂದ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ ಮಾಡಿದ್ದಾರೆ. ಈ ನಡುವೆ ಬಿಜೆಪಿ ಬಂಡಾಯವಾಗಿ ಈಶ್ವರಪ್ಪ ಸ್ಪರ್ಧೆ ಕೂಡ ಕುತೂಹಲ ಮೂಡಿಸಿರುವ ನಡುವೆ, ಈಗ ಮತ್ತಷ್ಟು ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಈ ಸಾಲಿನಲ್ಲಿ ಶಿವಮೊಗ್ಗ ಲೋಕಸಭಾ ಚುನಾವಣೆಗೆ ಉಪೇಂದ್ರ ನೇತೃತ್ವದ ಪ್ರಜಾಕೀಯ ಪಕ್ಷದಿಂದ ತೀರ್ಥಹಳ್ಳಿ ಭಾಗದ ಯುವ ಮುಖಂಡ ಅರುಣ್ ಕಾನಳ್ಳಿ ಸ್ಪರ್ಧೆ ಮಾಡಿದ್ದಾರೆ.

ಉಪೇಂದ್ರ ಅವರಿಂದ ಟಿಕೆಟ್ ಪಡೆದ ಯುವ ಹೋರಾಟಗಾರ!

ಬೆಂಗಳೂರಿನಲ್ಲಿ ಉಪೇಂದ್ರ ಅವರಿಂದ ಬಿ ಫಾರ್ಮ್ ಪಡೆದ ಅರುಣ್ ಕಾನಳ್ಳಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ಶುರು ಮಾಡಿದ್ದಾರೆ. ತಮ್ಮ ವಿಭಿನ್ನ ಪ್ರಚಾರದಲ್ಲೇ ಗಮನ ಸೆಳೆದಿರುವ ಅರುಣ್ ಕಾನಳ್ಳಿ ಹಳ್ಳಿ-ಹಳ್ಳಿಗಳಲ್ಲೂ ತಮ್ಮ ಪಕ್ಷದ ಹಾಗೂ ಸೇವೆಯ ಬಗ್ಗೆ ಪೋಸ್ಟರ್ ಗಳನ್ನು ಅಂಟಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಜನಪರವಾದಂತ ಕೆಲಸವನ್ನು ಮಾಡುವ ಭರವಸೆಯೊಂದಿಗೆ ಜನರ ಮುಂದೆ ಹೋಗಿದ್ದಾರೆ. ಅರುಣ್ ಕಾನಳ್ಳಿ ಕಳೆದ ಒಂದು ದಶಕದಿಂದ ತೀರ್ಥಹಳ್ಳಿ ಸೇರಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ತಮ್ಮದೇ ಸೇವೆ ಸಲ್ಲಿಸುತ್ತಿದ್ದಾರೆ.

Categories
ಉಡುಪಿ ಕರಾವಳಿ ಮಂಗಳೂರು

ಅಯ್ಯೋ ಸೆಕೆ ತಡೆಯೋಕಾಗಲ್ಲ!

ಅಯ್ಯೋ ಸೆಕೆ ತಡೆಯೋಕಾಗಲ್ಲ!
– ಕರಾವಳಿ ಭಾಗದಲ್ಲಿ ಗರಿಷ್ಠ ತಾಪಮಾನ ದಾಖಲು
– ಏರಿಕೆ ಕಾಣುತ್ತಿರುವ ಬಿಸಿಲು: 36 ಡಿ.ಸೆ.ನತ್ತ ಗರಿಷ್ಠ ತಾಪಮಾನ
– ಉಷ್ಣ ಗಾಳಿ ಬೀಸುವ ಸೂಚನೆ

NAMMUR EXPRESS NEWS
ಉಡುಪಿ/ಮಂಗಳೂರು: ಬಿಸಿಲಿನ ತೀವ್ರತೆ ಜೋರಾಗುತ್ತಿದ್ದಂತೆ ರಾಜ್ಯದೆಲ್ಲೆಡೆ ಗರಿಷ್ಠ ಉಷ್ಣಾಂಶದಲ್ಲಿ ಭಾರೀ ಏರಿಕೆಯಾಗುವ ಆತಂಕ ಎದುರಾಗಿದೆ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಕರಾವಳಿ ಭಾಗದಲ್ಲಿಯೂ ಬಿಸಿಲಿನ ಝಳಕ್‌ ಜೋರಾಗಿರುತ್ತದೆ. ಅದೇರೀತಿ ಇದೀಗ ದಕ್ಷಿಣ ಕನ್ನಡ ಹಾಗೂ ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಒಂದೆರಡು ಡಿಗ್ರಿ ಸೆಲ್ಶಿಯಸ್‌ನಷ್ಟು ಏರಿಕೆಯಾಗಿದ್ದು, ಅದು ಮುಂದಿನ ದಿನಗಳಲ್ಲಿ ಮತ್ತಷ್ಟು ಜಾಸ್ತಿಯಾಗುವ ಮುನ್ಸೂಚನೆ ಇರುವುದಾಗಿ ಹವಾಮಾನ ಇಲಾಖೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಹವಾಮಾನ ಇಲಾಖೆ ದಾಖಲೆಗಳ ಪ್ರಕಾರ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶವು 34.5 ಡಿಗ್ರಿ ಸೆಲ್ಶಿಯಸ್‌ನಷ್ಟು ದಾಖಲಾಗಿದೆ. ಅದೇರೀತಿ ಉಡುಪಿ ಜಿಲ್ಲೆಯಲ್ಲಿ 35.5 ಡಿಗ್ರಿ ಸೆಲ್ಶಿಯಸ್‌ನಷ್ಟು ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಮುನ್ಸೂಚನೆಗಳ ಪ್ರಕಾರ, ಈ ಸಲ ಕಡು ಬೇಸಿಗೆಯಲ್ಲಿ ಕರಾವಳಿ ಭಾಗದಲ್ಲಿ ತಾಪಮಾನವು 36 ಡಿಗ್ರಿ ಸೆಲ್ಶಿಯಸ್‌ನ್ನು ದಾಟುವ ಸಾಧ್ಯತೆಯಿದೆ. ಇನ್ನು ರಾಜ್ಯದಲ್ಲಿಯೇ ಅತಿಹೆಚ್ಚಿನ ಉಷ್ಣಾಂಶವು 41.8 ಡಿಗ್ರಿ ಸೆಲ್ಶಿಯಸ್‌ ಕಲಬುರಗಿಯಲ್ಲಿ ಶನಿವಾರ ದಾಖಲಾಗಿದೆ. ಆ ಮೂಲಕ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶವು 40 ಡಿಗ್ರಿ ಸೆಲ್ಶಿಯಸ್‌ ಗಡಿ ದಾಟಿರುವುದು ಗಮನಾರ್ಹ.

ಉಷ್ಣ ಗಾಳಿ ಬೀಸುವ ಮುನ್ಸೂಚನೆ

ಇನ್ನೊಂದೆಡೆ ಉಷ್ಣ ಗಾಳಿ ಬೀಸುವ ಮುನ್ಸೂಚನೆ ಇರುವ ಕಾರಣ ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆಯೂ ಹವಾಮಾನ ಇಲಾಖೆ ಸೂಚನೆ ನೀಡಿದೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಸೂರ್ಯನಿಗೆ ಮೈಯೊಡ್ಡುವುದನ್ನು ತಪ್ಪಿಸಬೇಕು. ಜತೆಗೆ ತಿಳಿ ಬಣ್ಣದ ಹತ್ತಿ ಉಡುಪುಗಳನ್ನೇ ಹೆಚ್ಚಾಗಿ ಧರಿಸಬೇಕು ಹಾಗೂ ಹೊರಗಡೆ ಓಡಾಡುವಾಗ ತಪ್ಪದೆ ಕಪ್ಪು ಛತ್ರಿ, ಬಿಸಿ ಟೋಪಿ ಬಳಸುವ ಮೂಲಕ ಬಿಸಿಲಿನ ತೀವ್ರತೆಯಿಂದ ರಕ್ಷಣೆ ಪಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.

Categories
ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್
ವಿದ್ಯುತ್‌ ಸರಿಪಡಿಸಲು ಹೋಗಿ ಕಂಬದಲ್ಲೇ ಸುಟ್ಟು ಕರಕಲಾದ ರೈತ !
– ನೆಹರು ರೋಡ್​ನಲ್ಲಿ ಸಿಟಿ ಬಸ್ ಟಯರ್ ಸ್ಫೋಟ!
– ಮಂಡ್ಯ ಮೂಲದ ವೈದ್ಯಕೀಯ ವಿದ್ಯಾರ್ಥಿ ಶಿವಮೊಗ್ಗದಲ್ಲಿ ಆತ್ಮಹತ್ಯೆ!
– ನೀರು ತುಂಬಿದ್ದ ಬಕೆಟ್‌ ಗೆ ಆಕಸ್ಮಿಕವಾಗಿ ಮಗು ಬಿದ್ದು ಸಾವು.!
– ಸಾಲ ತೀರಿಸಲಾಗದೆ ರೈತ ಆತ್ಮಹತ್ಯೆ
– ಮತಾಂತರಕ್ಕೆ ಯತ್ನ: ಕ್ರೈಸ್ತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲು

NAMMUR EXPRESS NEWS
ತರೀಕೆರೆ : ವಿದ್ಯುತ್ ದುರಸ್ತಿಗೆ ಮುಂದಾದ ವೇಳೆ ಕರೆಂಟ್‌ ಶಾಕ್‌ ಹೊಡೆದು ರೈತನೋರ್ವ ಸಾವನ್ನಪ್ಪಿರುವ ಘಟನೆ ತರೀಕೆರೆ ತಾಲೂಕಿನ ಮಲ್ಲಿಗೆನಹಳ್ಳಿ ಸಂಭವಿಸಿದೆ. ಮಲ್ಲಿಗೆನಹಳ್ಳಿ ರೈತ ಮಂಜುನಾಥ್ (35) ಮೃತ ದುರ್ದೈವಿ. ಮೆಸ್ಕಾಂ ಸಿಬ್ಬಂದಿಗೆ ಮಾಹಿತಿ ನೀಡದೆ ರೈತ ಮಂಜುನಾಥ್ ವಿದ್ಯುತ್‌ ಸಮಸ್ಯೆ ಸರಿಪಡಿಸಲು ಹೋದಾಗ ಕ್ಷಣಾರ್ಧದಲ್ಲೇ ಕರೆಂಟ್ ಪ್ರವಹಿಸಿದೆ, ಈ ವೇಳೆ ಮಂಜುನಾಥ್ ದೇಹ ಸುಟ್ಟು ಕರಕಲಾಗಿದೆ. ವಿದ್ಯುತ್ ಕಂಬದಲ್ಲೇ ಮೃತದೇಹವು ಸಿಲುಕಿದ್ದು, ಮೃತನ ಕುಟುಂಬಸ್ಥರು ಹಾಗೂ ಸ್ಥಳೀಯರ ರೋಧನೆ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

– ನೆಹರು ರೋಡ್​ನಲ್ಲಿ ಸಿಟಿ ಬಸ್ ಟಯರ್ ಸ್ಫೋಟ!

ಶಿವಮೊಗ್ಗ : ಶಿವಮೊಗ್ಗದ ನಗರದ ನೆಹರು ರೋಡ್‌ನಲ್ಲಿ ಸಿಟಿ ಬಸ್‌ನ ಟೈರ್‌ ಬ್ಲಾಸ್ಟ್‌ ಆಗಿ ಅಪಘಾತಕ್ಕೀಡಾದ ಘಟನೆ ಸಂಭವಿಸಿದೆ. ನೆಹರು ರಸ್ತೆಯಲ್ಲಿ ನಡೆದ ಘಟನೆಯಲ್ಲಿ ಬಾಲಕಿಯೊಬ್ಬಳಿಗೆ ಗಾಯವಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವೀರಭದ್ರ ಸಿಟಿ ಬಸ್‌ ಬೊಮ್ಮನಕಟ್ಟೆಯಿಂದ ಗೋಪಾಳದ ಕಡೆಗೆ ತೆರಳುತ್ತಿತ್ತು. ನೆಹರು ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಚಾಲಕನ ಭಾಗದಲ್ಲಿರುವ ಟೈರ್‌ ಸ್ಫೋಟಗೊಂಡಿದೆ. ಇದರಿಂದ ಚಾಲಕನ ಹಿಂಭಾಗದಲ್ಲಿ ರಂದ್ರವಾಗಿದ್ದು ಅಲ್ಲಿಯೇ ಇದ್ದ ಬಾಲಕಿ ರಂದ್ರದಿಂದ ಕೆಳಕ್ಕೆ ಬಿದ್ದಿದ್ದಾರೆ. ಇದೇ ವೇಳೆ ಬಸ್‌ ಅಪ್‌ಸೆಟ್‌ ಆಗಿ ಡಿವೈಡರ್‌ಗೆ ಡಿಕ್ಕಿಯಾಗಿದೆ. ಅದೃಷ್ಟಕ್ಕೆ ಯಾವುದೇ ಜೀವ ಹಾನಿ ಉಂಟಾಗಿಲ್ಲ. ಇನ್ನೂ ತಕ್ಷಣವೇ ಸ್ಥಳೀಯರು ಗಾಯಗೊಂಡ ಬಾಲಕಿಯನ್ನು ಅಲ್ಲಿಯೇ ಆಟೋವೊಂದರಲ್ಲಿ ಕೂರಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲದೆ ವಿಚಾರ ತಿಳಿದು ಸ್ಥಳಕ್ಕೆ ಪಶ್ಚಿಮ ಸಂಚಾರ ಠಾಣೆ ಪೊಲೀಸರು ಆಗಮಿಸಿದ್ದಾರೆ. ಇನ್ನೂ ಘಟನೆಯಿಂದಾಗಿ ಸ್ಥಳದಲ್ಲಿ ಕೆಲಹೊತ್ತು ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

– ಮಂಡ್ಯ ಮೂಲದ ವೈದ್ಯಕೀಯ ವಿದ್ಯಾರ್ಥಿ ಶಿವಮೊಗ್ಗದಲ್ಲಿ ಆತ್ಮಹತ್ಯೆ!

ಶಿವಮೊಗ್ಗ :ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದ ವೈದ್ಯಕೀಯ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿ ಪ್ರಜ್ವಲ್ ಎಂಬುವರು ಚಿಕಿತ್ಸೆ ಫಲಕಾರಿಯಾಗದೇ ಕಳೆದ ಶುಕ್ರವಾರದ ರಾತ್ರಿ ಮೃತಪಟ್ಟಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ಯವರಾದ ಪ್ರಜ್ವಲ್ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ನಲ್ಲೇ ಇದ್ದರು. ವಿದ್ಯಾರ್ಥಿ ಆತ್ಮಹತ್ಯೆ ಕಾರಣ ಸ್ಪಷ್ಟವಾಗಿಲ್ಲವಾದರೂ ಪ್ರಕರಣ ಚರ್ಚೆಗೆ ಗ್ರಾಸವಾಗಿದೆ.

– ನೀರು ತುಂಬಿದ್ದ ಬಕೆಟ್‌ ಗೆ ಆಕಸ್ಮಿಕವಾಗಿ ಮಗು ಬಿದ್ದು ಸಾವು.!

ಸಾಗರ : ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಒಂದು ವರ್ಷ ಎರಡು ತಿಂಗಳ ಮಗು ಸಾವನ್ನಪ್ಪಿರುವ ಮನಕಲಕುವ ಘಟನೆ ಸಾಗರದಲ್ಲಿ ಭಾನುವಾರ ಸಂಜೆ ನಡೆದಿದೆ. ಜೋಸೆಫ್‌ ನಗರದಲ್ಲಿ ಮನೆಯಲ್ಲಿ ವಾಸವಿದ್ದ ಆಸಿಫ್ ಎಂಬುವವರ ಪುತ್ರಿ ಆನಂ ಫಾತಿಮಾ ಮೃತ ಮಗು ಎಂದು ತಿಳಿದು ಬಂದಿದೆ. ಭಾನುವಾರ ಸಂಜೆ ಮಗು ಆನಂ ಮನೆಯಲ್ಲಿನ ಶೌಚಾಲಯದಲ್ಲಿದ್ದ ನೀರು ತುಂಬಿದ್ದ ಬಕೆಟ್‌ ಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದೆ ಎಂದು ಹೇಳಲಾಗಿದೆ.

– ಸಾಲ ತೀರಿಸಲಾಗದೆ ರೈತ ಆತ್ಮಹತ್ಯೆ

ನರಸಿಂಹರಾಜಪುರ: ಸಾಲ ಭಾದೆಯಿಂದ ಮನನೊಂದು ತಾಲೂಕಿನ ಕೊನೋಡಿ ಗ್ರಾಮದ ಹಳ್ಳಿಬೈಲಿನ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಎಚ್‌.ಎಸ್.ವಿಜಯ ( 64) ಅವರು ಜಮೀನು ಅಭಿವೃದ್ದಿಗಾಗಿ ಬ್ಯಾಂಕ್, ಸೊಸೈಟಿ ಹಾಗೂ ಇತರ ಕಡೆಗಳಲ್ಲಿ ಲಕ್ಷಾಂತರ ರುಪಾಯಿ ಸಾಲ ಮಾಡಿದ್ದು, ತೀರಿಸಲಾಗದೆ ನೊಂದಿದ್ದರು ಎನ್ನಲಾಗುತ್ತಿದೆ. ಶುಕ್ರವಾರ ಮಧ್ಯಾಹ್ನ 3.30ರ ಸುಮಾರಿಗೆ ಮನೆಬಿಟ್ಟ ವಿಜಯ ವ್ಯಾಪಾಸಾಗಿರಲಿಲ್ಲ. ಭಾನುವಾರ ಬೆಳಿಗ್ಗೆ ಅವರ ತೋಟದ ಪಕ್ಕದಲ್ಲಿ ಹರಿಯುವ ಹಳ್ಳದ ಸಮೀಪಕ್ಕೆ ಪಂಪ್‌ ಸೆಟ್ ಆನ್ ಮೊಡಲು ಹೋಗಿದ್ದ ಗ್ರಾಮಸ್ಥರೊಬ್ಬರಿಗೆ ಇವರು ಮರವೊಂದಕ್ಕೆ ನೇಣುಬಿಗಿಕೊಂಡಿರುವ ಸ್ಥಿತಿಯಲ್ಲಿ ಕಂಡಿದ್ದಾರೆ. ಬಳಿಕ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಮೃತ ರೈತ ಎಚ್.ಎಸ್.ವಿಜಯ ಅವರ ಪುತ್ರ ಮಿಥುನ್ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ರೈತ ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದಾರೆ.

– ಮತಾಂತರಕ್ಕೆ ಯತ್ನ: ಕ್ರೈಸ್ತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲು

ಚಿಕ್ಕಮಗಳೂರು: ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಬಂದವರ ವಿರುದ್ದ ಹಿಂದೂ ವ್ಯಕ್ತಿ ಪೊಲೀಸರಿಗೆ ದೂರು ನೀಡಿರುವ ಘಟನೆ ಬೆಳಕಿಗೆ ಬಂದಿದೆ. ರಾಜನ್ ಎಂಬಾತ ಇನ್ನಿಬ್ಬರೊಂದಿಗೆ ಇಂದಾವರ ಎರೆಹಳ್ಳಿಯ ನಿವಾಸಿ ಪ್ರಸನ್ನ ಕುಮಾರ ಎಂಬುವವರ ಮನೆಗೆ ಬಂದಿದ್ದಾರೆ. ನಿಮ್ಮ ದೇವರು ನಿಮ್ಮ ಕಷ್ಟಕ್ಕೆ ಸಹಾಯ ಮಾಡುತ್ತಿಲ್ಲ, ಮಳೆ ಬರಿಸುತ್ತಿಲ್ಲ. ನಿಮ್ಮ ಮನೆಗೆ ಏಸು ಬರುತ್ತಾನೆ ಎಂದಿದ್ದಾರೆ. ಬಳಿಕ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಕೋಪಗೊಂಡು ಪ್ರಸನ್ನ ಕುಮಾ‌ರ್ ವಿರೋಧಿಸಿದ್ದಾರೆ. ಕೆಲ ಗ್ರಾಮಸ್ಥರು ಒಟ್ಟಾಗಿ ಈ ಯತ್ನವನ್ನು ವಿರೋಧಿಸಿದ್ದಾರೆ. ಬಳಿಕ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Categories
ಕರಾವಳಿ ಮಂಗಳೂರು

ಟಾಪ್ ನ್ಯೂಸ್ ಕರಾವಳಿ

ಟಾಪ್ ನ್ಯೂಸ್ ಕರಾವಳಿ
ಮಂಗಳೂರು: 15.5 ಕೆಜಿ ಡ್ರಗ್ಸ್, 12,843 ಲೀಟರ್ ಮದ್ಯ ವಶಕ್ಕೆ,!
– ಹೆಬ್ರಿ : ಅಣ್ಣ ತಮ್ಮನ ಜಗಳ ಕೊಲೆಯಲ್ಲಿ ಅಂತ್ಯ
-ಕಾಪು : ಮಹಿಳಾ ಕಾನ್ಸ್‍ಟೇಬಲ್ ಆತ್ಮಹತ್ಯೆ
– ಬಂಟ್ವಾಳ: 6 ದಿನಗಳ ಹಿಂದೆ ಕಾಣೆಯಾಗಿದ್ದ ಸರಕಾರಿ ಅಧಿಕಾರಿ ಶವವಾಗಿ ಪತ್ತೆ!
– ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು
– ಕಡಬ : ಜಾನುವಾರು ಸಾಗಾಟದ ಕಾರು ಡಿಕ್ಕಿ ಹೊಡೆದು ಪಾದಚಾರಿ ವ್ಯಕ್ತಿ ದಾರುಣ ಸಾವು

NAMMUR EXPRESS NEWS
ಮಂಗಳೂರು : 2024ರ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಮಾರ್ಚ್ 31 ರವರೆಗೆ ಜಿಲ್ಲೆಯಲ್ಲಿ 41,90,025 ರೂ. ಮೌಲ್ಯದ 12,843 ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ ಹಾಗೂ 8,69,950 ರೂ. ಮೌಲ್ಯದ 15.5 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ನಿಯಮ ಉಲ್ಲಂಘನೆ ಹಾಗೂ ಇತರೆ ಸೇರಿದಂತೆ ಒಟ್ಟು 239 ಎಫ್ ಐ ಆರ್ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

– ಹೆಬ್ರಿ : ಅಣ್ಣ ತಮ್ಮನ ಜಗಳ ಕೊಲೆಯಲ್ಲಿ ಅಂತ್ಯ

ಹೆಬ್ರಿ: ಅಣ್ಣ ತಮ್ಮ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಕೊಲೆಯಲ್ಲಿ ಅಂತ್ಯವಾದ ಘಟನೆ ಹೆಬ್ರಿ ತಾಲೂಕು ನಾಲ್ಕೂರು ಗ್ರಾಮದ ಅರಮನೆಜಡ್ಡು ಎಂಬಲ್ಲಿ ರಾತ್ರಿ ನಡೆದಿದೆ. ಮೃತರನ್ನು ಮಂಜುನಾಥ್ (35) ಎಂದು ಗುರುತಿಸಲಾಗಿದೆ. ಮಂಜುನಾಥ ಮತ್ತು ವಿಶ್ವನಾಥ ರವರು ಆಗಾಗ ಗಲಾಟೆ ಮಾಡುತ್ತಿದ್ದರು. ಮಂಜುನಾಥನು, ವಿಶ್ವನಾಥನ ಬಳಿ ನನ್ನ ಹೆಂಡತಿ ಮನೆ ಬಿಟ್ಟು ಹೋಗಲು ನೀನೇ ಕಾರಣವೆಂದು ಹೇಳಿದಾಗ, ವಿಶ್ವನಾಥ ಕೋಪಗೊಂಡು ದೊಣ್ಣೆಯಿಂದ ಹೊಡೆದಾಗ ಮಂಜುನಾಥ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಮಹಿಳಾ ಕಾನ್ಸ್‍ಟೇಬಲ್ ಆತ್ಮಹತ್ಯೆ

ಕಾಪು : ಮಹಿಳಾ ಕಾನ್ಸ್‍ಟೇಬಲ್ ಒಬ್ಬರು ಪೊಲೀಸ್ ಕ್ವಾಟ್ರಸ್‍ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಾಪುವಿನಲ್ಲಿ ನಡೆದಿದೆ. ಬಾಗಲಕೋಟೆ ಮೂಲದ ಜ್ಯೋತಿ (29) ಆತ್ಮಹತ್ಯೆಗೆ ಶರಣಾದ ಕಾನ್ಸ್‌ಟೇಬಲ್ ಎಂದು ತಿಳಿದುಬಂದಿದೆ. ಅವರು ಕಾಪು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಸ್‍ಪಿ ಡಾ.ಅರುಣ್ ಅವರು ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.‌ ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.‌

– 6 ದಿನಗಳ ಹಿಂದೆ ಕಾಣೆಯಾಗಿದ್ದ ಸರಕಾರಿ ಅಧಿಕಾರಿ ಶವವಾಗಿ ಪತ್ತೆ!

ಬಂಟ್ವಾಳ: ಕಳೆದ ಆರು ದಿನಗಳ ಹಿಂದೆ ಕಾಣೆಯಾಗಿದ್ದ ಸರಕಾರಿ ಆದಿಕಾರಿಯೋರ್ವನ ಮೃತದೇಹ ಸಂಜೆ ಧರ್ಮಸ್ಥಳ ಪೋಲೀಸ್ ಠಾಣಾ ವ್ಯಾಪ್ತಿಯ ಪಟ್ರಮೆ ಎಂಬಲ್ಲಿ ನದಿಯಲ್ಲಿ ಪತ್ತೆಯಾಗಿದೆ. ಚುನಾವಣಾ ಕರ್ತವ್ಯದಲ್ಲಿರುವ ಸರಕಾರಿ ಅಧಿಕಾರಿ ಲಕ್ಮೀನಾರಾಯಣ ಅವರು ಕರ್ತವ್ಯಕ್ಕೆ ಹಾಜರಾಗದೆ ಮನೆಗೂ ತೆರಳದೆ ಕಾಣೆಯಾಗಿರುವ ಬಗ್ಗೆ ಮಾ.27. ರಂದು ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಮ್ಟಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿದ್ದ ಇವರು ಮಾ.27 ರಂದು ಮಧ್ಯಾಹ್ನದ ಬಳಿಕ ಕಚೇರಿಯಿಂದ ತೆರಳಿದವರು ಪೋನ್ ಸ್ವಿಚ್ ಆಪ್ ಆಗಿತ್ತು. ಮನೆಗೂ ಹೋಗದೆ ಮನೆಯವರ ಸಂಪರ್ಕಕ್ಕೂ ಸಿಗದೆ ಕಾಣೆಯಾಗಿದ್ದಾರೆ ಎಂದು ಈತನ ತಮ್ಮ ಪುಂಜಾಲಕಟ್ಟೆ ಪೋಲೀಸ್ ಠಾಣೆಗೆ ದೂರು ನೀಡಿದ್ದರು.

ಚುನಾವಣೆಗೆ ಸಂಬಂಧಿಸಿದ ಎಸ್.ಎಸ್.ಟಿ.ತಂಡದಲ್ಲಿ ಇವರು ಕರ್ತವ್ಯ ನಿರ್ವಹಿಸಿತ್ತಿದ್ದು, ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ತಂಡದವರು ಬಂಟ್ವಾಳ ಸಹಾಯಕ ಚುನಾವಣಾಧಿಕಾರಿಗೆ ದೂರು ನೀಡಿದ್ದರು. ಕಳೆದ ಕೆಲ ಸಮಯಗಳ ಹಿಂದೆ ಕೂಡ ಇದೇ ರೀತಿ ಕಾಣೆಯಾಗಿದ್ದ ಲಕ್ಮೀನಾರಾಯಣ ಅವರನ್ನು ಪೋಲೀಸರು ಪತ್ತೆ ಹಚ್ಚಿದ್ದರು. ಇವರ ಬೈಕ್ ಬೆಳ್ತಂಗಡಿಯಲ್ಲಿ ಪತ್ತೆಯಾಗಿದ್ಣು, ಲಕ್ಮೀನಾರಾಯಣ ಅವರಿಗಾಗಿ ಪೋಲೀಸರು ಹುಡುಕಾಟ ನಡೆಸುತ್ತಿದ್ದರು. ನಿನ್ನೆ ಪೋಲೀಸರಿಗೆ ಪಟ್ರಮೆ ಸಮೀಪ ಮೊಬೈಲ್ ಲೋಕೇಸನ್ ಕಂಡು ಬಂದಿದ್ದು ಪೋಲೀಸರು ಹುಡುಕಾಡಿದ್ದರು. ಆದರೆ ಇಂದು ಈತನ ಮೃತದೇಹವನ್ನು ಸ್ಥಳೀಯ ಶೌರ್ಯ ತಂಡದವರು ನದಿಯಿಂದ ಮೇಲಕ್ಕೆತ್ತಿದ್ದಾರೆ.

– ನೇತ್ರಾವತಿ ನದಿಯಲ್ಲಿ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಈಜಲು ಹೋದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನರಿಕೊಂಬು ಗ್ರಾಮದ ಪೊಯಿತಾಜೆ ಎಂಬಲ್ಲಿ ನಡೆದಿದೆ. ನರಿಕೊಂಬು ಗ್ರಾಮದ ಬೀರಕೋಡಿ ನಿವಾಸಿ ಯೋಗೀಶ್ ಪೂಜಾರಿ ಅವರ ಪುತ್ರ ಆನುಶ್ (20) ಮೃತಪಟ್ಟ ಯುವಕ. ಆದಿತ್ಯವಾರ ರಜಾದಿನವಾದ ಕಾರಣ ಅನುಶ್ ಸೇರಿ ಒಟ್ಟು 4 ಮಂದಿ ತಮ್ಮ ಮತ್ತು ಸ್ನೇಹಿತರ ಜೊತೆಯಲ್ಲಿ ನದಿಗೆ ಈಜಲು ತೆರಳಿದ್ದರು. ತಮ್ಮ ರೂಪೇಶ್ ಸ್ನೇಹಿತರಾದ ಕಿಸಾನ್ , ಅನೀಶ್ ಜೊತೆಯಲ್ಲಿ ತೆರಳಿದ್ದ. ಅನುಶ್ ಅಳ್ವಾಸ್ ಕಾಲೇಜಿನಲ್ಲಿ ಉದ್ಯೋಗದಲ್ಲಿದ್ದ. ಘಟನೆ ನಡೆದ ಕೂಡಲೇ ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಬಂದು ಮೃತದೇಹವನ್ನು ನದಿಯಿಂದ ಮೇಲಕ್ಕೆತ್ತಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

– ಜಾನುವಾರು ಸಾಗಾಟದ ಕಾರು ಡಿಕ್ಕಿ ಹೊಡೆದು ಪಾದಚಾರಿ ವ್ಯಕ್ತಿ ದಾರುಣ ಸಾವು

ಕಡಬ : ಕಾರು ಡಿಕ್ಕಿಯಾಗಿ ರಸ್ತೆ ಬದಿ ನಿಂತಿದ್ದ ಪಾದಚಾರಿ ವ್ಯಕ್ತಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ ಕಡಬ ತಾಲೂಕಿನ ಮರ್ಧಾಳ ಪೇಟೆಯಲ್ಲಿ ರಾತ್ರಿ ನಡೆದಿದೆ. ಮೃತ ವ್ಯಕ್ತಿಯನ್ನು ಇಲ್ಲಿನ ನಿವಾಸಿ ವಿಠಲ ರೈ (75) ಎಂದು ಹೆಸರಿಸಲಾಗಿದೆ. ಇವರು ಮರ್ಧಾಳ ಪೇಟೆಯಲ್ಲಿ ಮಾರ್ಗದ ಬದಿ ನಿಂತಿದ್ದ ವೇಳೆ ಏಕಾಏಕಿ ಧಾವಿಸಿ ಬಂದ ಮಾರುತಿ 800 ಕಾರನ್ನು ಅದರ ಚಾಲಕ ಡಿಕ್ಕಿ ಹೊಡೆಸಿದ್ದಾನೆ ಎನ್ನಲಾಗಿದೆ. ಅಪಘಾತದಿಂದ ಗಂಭೀರ ಗಾಯಗೊಂಡ ವಿಠಲ ರೈ ಅವರನ್ನು ತಕ್ಷಣ ಸ್ಥಳೀಯರು ಕಡಬ ಸರಕಾರಿ ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ.

ಕಾರಿನಲ್ಲಿದ್ದ ಆರೋಪಿಗಳು ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದು, ಉದ್ದೇಶಪೂರ್ವಕವಾಗಿ ವಿಠಲ ರೈ ಅವರಿಗೆ ಡಿಕ್ಕಿ ಹೊಡೆಸಿ ಅಪಘಾತ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮೃತರ ಸಂಬಂಧಿ ಸುಳ್ಯ-ಉಬರಡ್ಕ ನಿವಾಸಿ ಸುಧಾಕರ ರೈ ಎಸ್ ಅವರು ನೀಡಿದ ದೂರಿನಂತೆ ಕಡಬ ಪೆÇಲೀಸು ಠಾಣೆಯಲ್ಲಿ ಅಪರಾಧ ಕ್ರಮಾಂಕ 45/2024 ಕಲಂ 302 ಜೊತೆಗೆ 34 ಐಪಿಸಿ ಮತ್ತು ಕಲಂ 4, 5, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Categories
ಕರಾವಳಿ ಮಂಗಳೂರು

ಬಾವಿಗೆ ಬಿದ್ದ ಅಪರೂಪದ ಕರಿ ಚಿರತೆ!

ಬಾವಿಗೆ ಬಿದ್ದ ಅಪರೂಪದ ಕರಿ ಚಿರತೆ!
– ಮಂಗಳೂರು ಹೊರ ವಲಯದಲ್ಲಿ ಘಟನೆ
– ಮೂರು ತಾಸು ಕಾರ್ಯಾಚರಣೆ ಬಳಿಕ ರಕ್ಷಣೆ
– ನೋಡಲು ಜಮಾಯಿಸಿದ ಜನಸ್ತೋಮ

NAMMUR EXPRESS NEWS
ಮಂಗಳೂರು: ಬಹಳ ಅಪರೂಪವಾಗಿ ಕಾಣಸಿಗುವ ಕಪ್ಪು ಬಣ್ಣದ ಚಿರತೆಯೊಂದು ಇದೀಗ ಕರಾವಳಿ ಭಾಗದಲ್ಲಿ ಕಾಣಿಸಿದೆ.
ಮಂಗಳೂರಿನ ಎಡಪದವು ಸಮೀಪದ ಗೊಸ್ಪಾಲ್‌ ಸನಿಲದಲ್ಲಿ ಈ ಕರಿ ಚಿರತೆಯು ಬಾವಿಗೆ ಬಿದ್ದಿತ್ತು. ಕೂಡಲೇ ಅರಣ್ಯ ಇಲಾಖೆಯವರು ಸ್ಥಳೀಯರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಈ ಚಿರತೆಯನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ.
ಮಂಗಳೂರು ಹೊರ ವಲಯದಲ್ಲಿ ಅದರಲ್ಲಿಯೂ ಮೂಡಬಿದಿರೆ ಭಾಗದಲ್ಲಿ ಈ ರೀತಿ ಚಿರತೆಗಳು ಕಂಡುಬರುತ್ತವೆ. ಆದರೆ, ಕಪ್ಪು ಬಣ್ಣದ ಚಿರತೆಯನ್ನು ನೋಡಿದವರಿಲ್ಲ. ಆದರೆ ಸನಿಲ ನಿವಾಸಿ ಶಕುಂತಲಾ ಆಚಾರ್ಯ ಅವರ ಮನೆಯಂಗಳದ ಬಾವಿಯಲ್ಲಿ ಭಾನುವಾರ ಬೆಳಗ್ಗೆ ಕಪ್ಪು ಚಿರತೆ ಪತ್ತೆಯಾಗಿತ್ತು. ಬೆಳಗ್ಗೆ ಎಂದಿನಂತೆ ಎರಡು ಕೊಡ ನೀರನ್ನು ಮೇಲೆತ್ತಿದ್ದರು. ಮೂರನೇ ಬಾರಿಗೆ ನೀರು ಸೇದಲು ಹೋದಾಗ ಚಿರತೆ ಬಿದ್ದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ. ಕೂಡಲೇ ವಲಯ ಅರಣ್ಯ ಅಧಿಕಾರಿ ರಾಜೇಶ್‌ ಬಳೆಗಾರ್‌ ನೇತೃತ್ವದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ಮಾಡಲಾಗಿತ್ತು.

ಚಿರತೆ ನೋಡಲು ಜನವೋ ಜನ!

ಬಾವಿಯು ತಗ್ಗು ಪ್ರದೇಶದಲ್ಲಿ ಇದ್ದ ಕಾರಣ ಚಿರತೆಯನ್ನು ಮೇಲಕ್ಕೆ ಎತ್ತುವುದು ಕೂಡ ಸವಾಲಾಗಿತ್ತು. ಇದನ್ನು ನೋಡುವುದಕ್ಕೆ ಸುಮಾರು ಒಂದು ಸಾವಿರ ಸ್ಥಳೀಯರು ಅಲ್ಲಿ ಜಮಾಯಿಸಿದ್ದು, ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಬೇಕಾಯಿತು. ಬೆಳಗ್ಗೆ 9 ಗಂಟೆಯಿಂದ ಕಾರ್ಯಾಚರಣೆ ನಡೆದಿದ್ದು, ಸುಮಾರು 11.30ರ ಹೊತ್ತಿಗೆ ಕರಿ ಚಿರತೆಯನ್ನು ಮೇಲತ್ತೆ ಎತ್ತಲಾಯಿತು. ಇನ್ನು ಅದೇ ಪರಿಸರದಲ್ಲಿ ನಿವಾಸಿಯೊಬ್ಬರ ಮನೆಯ ಕರುವನ್ನು ಕೊಟ್ಟಿಗೆಯಿಂದ ಎಳೆದೊಯ್ದು ಚಿರತೆಯೊಂದು ತಿಂದು ಹಾಕಿದೆ. ಆದರೆ, ಇದೇ ಕರಿ ಚಿರತೆಯೇ ದನದ ಕರುವನ್ನು ತಿಂದಿರಬಹುದು ಅಥವಾ ಬೇರೆ ಚಿರತೆ ಬಂದು ದಾಳಿ ಮಾಡಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಸೆರೆಯಾಗಿರುವ ಈ ಚಿರತೆಯು ಸುಮಾರು ಐದು ವರ್ಷ ವಯಸ್ಸು ಇರಬಹುದೆಂದು ಅರಣ್ಯ ಇಲಾಖೆಯವರು ಅಂದಾಜಿಸಿದ್ದಾರೆ. ಸದ್ಯ ಅದನ್ನು ಪಶುವೈದ್ಯರು ಪರಿಶೀಲನೆ ನಡೆಸಿದ್ದು, ಸೂಕ್ತ ಚಿಕಿತ್ಸೆ ನೀಡಿದ ಬಳಕ ವಾಪಾಸ್‌ ಕಾಡಿಗೆ ಬಿಡುವ ಬಗ್ಗೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಆದರೆ, ಪಿಲಿಕುಳ ನಿಸರ್ಗಧಾಮದಲ್ಲಿ ಕಪ್ಪು ಚಿರತೆ ಸಂತತಿ ಇಲ್ಲ. ಹೀಗಾಗಿ, ಸೆರೆಯಾಗಿರುವ ಈ ಚಿರತೆಯನ್ನು ಪಿಲಿಕುಳಕ್ಕೆ ಬಿಡುವಂತೆ ಅನೇಕರು ಸಲಹೆ ಮಾಡಿದ್ದಾರೆ. ಆದರೆ ಅರಣ್ಯ ಇಲಾಖೆಯವರು ಇನ್ನು ಕೂಡ ಆ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದು ವರದಿಯಾಗಿದೆ.

Categories
ಜಾತಕ

ಏಪ್ರಿಲ್ ತಿಂಗಳ ಮೊದಲ ದಿನದ ರಾಶಿ ಭವಿಷ್ಯ ಹೇಗಿದೆ?

ಏಪ್ರಿಲ್ ತಿಂಗಳ ಮೊದಲ ದಿನದ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಗೆ ಲಾಭ? ಯಾರಿಗೆ ನಷ್ಟ?

NAMMUR EXPRESS NEWS
2024 ಎಪ್ರಿಲ್ 01ರ ಸೋಮವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

* ಮೇಷ ರಾಶಿ :
ಹಳೆ ಸಾಲ ವಸೂಲಿಯಾಗುತ್ತದೆ. ಸ್ನೇಹಿತರ ಸಹಾಯ ದೊರೆಯುತ್ತದೆ. ನೀವು ಕೈಗೊಳ್ಳುವ ವ್ಯವಹಾರಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ ಮತ್ತು ಶುಭ ಕಾರ್ಯಕ್ಕೆ ಆಹ್ವಾನವನ್ನು ಪಡೆಯುತ್ತೀರಿ. ಮಕ್ಕಳು ಶಿಕ್ಷಣದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ವೃತ್ತಿಪರ ಉದ್ಯೋಗಗಳು ಉತ್ಸಾಹದಾಯಕವಾಗಿ ಸಾಗುತ್ತವೆ.

* ವೃಷಭ ರಾಶಿ :
ಮನೆಯಲ್ಲಿ ಕೆಲವು ಘಟನೆಗಳು ಅಚ್ಚರಿ ಮೂಡಿಸುತ್ತವೆ. ಆರ್ಥಿಕವಾಗಿ ಹೆಚ್ಚು ಉತ್ಸಾಹದಾಯಕವಾಗಿ ಸಾಗುತ್ತವೆ. ಸಮಾಜದಲ್ಲಿ ಪರಿಚಯಗಳು ವಿಸ್ತಾರವಾಗುತ್ತವೆ. ವ್ಯಾಪಾರ ಉದ್ಯೋಗಗಳಲ್ಲಿ ಅಪ್ರಯತ್ನವಾಗಿ ಅವಕಾಶಗಳನ್ನು ಪಡೆಯುತ್ತೀರಿ. ಹೊಸ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತದೆ.

* ಮಿಥುನ ರಾಶಿ :
ದೂರ ಪ್ರಯಾಣದ ಸೂಚನೆಗಳಿವೆ. ಉದ್ಯೋಗಗಳಲ್ಲಿ ವಿವಾದಗಳು ಉದ್ಭವಿಸುತ್ತವೆ. ಹಣಕಾಸಿನ ವ್ಯವಹಾರಗಳು ಅಸ್ಥಿರವಾಗಿರುತ್ತವೆ. ಕುಟುಂಬ ಸದಸ್ಯರ ನಡುವಿನ ಮಾತುಗಳು ವಿವಾದಾಸ್ಪದವಾಗುತ್ತವೆ. ಸಣ್ಣ ವಿಷಯಗಳು ಮನಸ್ಸಿಗೆ ನೋವುಂಟು ಮಾಡುತ್ತವೆ. ದೈವಿಕ ಚಿಂತನೆ ಹೆಚ್ಚಾಗುತ್ತವೆ.

* ಕಟಕ ರಾಶಿ :
ಹಠಾತ್ ಪ್ರಯಾಣದ ಸೂಚನೆಗಳಿವೆ. ವ್ಯಾಪಾರ ಉದ್ಯೋಗಗಳಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ಕೈಗೆತ್ತಿಕೊಂಡ ಕೆಲಸದಲ್ಲಿ ಶ್ರಮಕ್ಕೆ ತಕ್ಕ ಫಲ ದೊರೆಯುತ್ತವೆ. ಹೊಸ ಜವಾಬ್ದಾರಿಗಳು ಹುಟ್ಟಿಕೊಳ್ಳುತ್ತವೆ. ಆರ್ಥಿಕವಾಗಿ ಪರಿಸ್ಥಿತಿ ಹೆಚ್ಚು ನಿರಾಶಾದಾಯಕವಾಗಿರುತ್ತದೆ. ಸಹೋದರರೊಂದಿಗೆ ಸಾಮರಸ್ಯದ ಕೊರತೆ ಉಂಟಾಗುತ್ತದೆ.

* ಸಿಂಹ ರಾಶಿ :
ಬರಬೇಕಾದ ಹಣ ಸಕಾಲಕ್ಕೆ ಸಿಗುತ್ತದೆ. ಕೈಗೊಂಡ ವ್ಯವಹಾರಗಳಲ್ಲಿ ಅನುಕೂಲತೆ ಹೆಚ್ಚಾಗುತ್ತದೆ. ಪ್ರಯಾಣದ ಸಮಯದಲ್ಲಿ ಹೊಸ ವ್ಯಕ್ತಿಗಳ ಪರಿಚಯಗಳು ಲಾಭದಾಯಕವಾಗಿರುತ್ತದೆ. ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ನಿರುದ್ಯೋಗಿಗಳಿಗೆ ಶುಭ ಸುದ್ದಿ ದೊರೆಯುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ.

* ಕನ್ಯಾ ರಾಶಿ :
ಆಧ್ಯಾತ್ಮಿಕ ವಿಷಯಗಳತ್ತ ಗಮನ ಹರಿಸುತ್ತೀರಿ. ಬಾಲ್ಯದ ಗೆಳೆಯರೊಂದಿಗೆ ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ. ವೃತ್ತಿಪರ ಉದ್ಯೋಗಗಳಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ದೊರೆಯುತ್ತದೆ. ಕೆಲವು ವ್ಯವಹಾರಗಳನ್ನು ಯೋಜಿಸಿದಂತೆ ಪೂರ್ಣಗೊಳಿಸಲಾಗುತ್ತದೆ. ವ್ಯಾಪಾರ ವ್ಯವಹಾರಗಳು ಸುಗಮವಾಗಿ ಸಾಗುತ್ತವೆ.

* ತುಲಾ ರಾಶಿ :
ಕೈಗೆತ್ತಿಕೊಂಡ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ಆರ್ಥಿಕ ,ಆರೋಗ್ಯ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು. ಸಾಲದ ಪ್ರಯತ್ನಗಳು ಕೂಡಿ ಬರುವುದಿಲ್ಲ. ಮನೆಯ ಹೊರಗೆ ಋಣಾತ್ಮಕ ವಾತಾವರಣವಿರುತ್ತದೆ. ವೃತ್ತಿಪರ ಉದ್ಯೋಗಗಳು ನಿಧಾನವಾಗಿ ಸಾಗುತ್ತವೆ. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ. ಹೊಸ ವ್ಯವಹಾರಗಳಲ್ಲಿ ಅಲ್ಪ ಲಾಭವನ್ನು ಪಡೆಯುತ್ತೀರಿ.

* ವೃಶ್ಚಿಕ ರಾಶಿ :
ಸ್ಥಿರಾಸ್ತಿ ವಿವಾದಗಳಲ್ಲಿ ರಾಜಿ ಪ್ರಯತ್ನ ವಿಫಲವಾಗುತ್ತದೆ. ಪ್ರಮುಖ ಕಾರ್ಯಗಳು ಖರ್ಚು, ಪ್ರಯತ್ನಗಳಿಂದ ಪೂರ್ಣಗೊಳ್ಳುವುದಿಲ್ಲ. ಕೌಟುಂಬಿಕ ವಾತಾವರಣ ಅಸ್ತವ್ಯಸ್ತವಾಗಿರುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಂದ ಒತ್ತಡ ಹೆಚ್ಚಾಗುತ್ತದೆ. ಧನ ವ್ಯಯ ಸೂಚನೆಗಳಿವೆ.

*ಧನುಸ್ಸು ರಾಶಿ :
ಮಕ್ಕಳಿಗೆ ಶೈಕ್ಷಣಿಕ ವಿಷಯಗಳಲ್ಲಿ ಶುಭ ಸುದ್ದಿ ದೊರೆಯುತ್ತದೆ. ಹಣಕಾಸಿನ ವ್ಯವಹಾರಗಳು ತೃಪ್ತಿಕರವಾಗಿರುತ್ತವೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ದೊರೆಯುತ್ತವೆ. ವಾಹನ ಖರೀದಿಗೆ ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ವ್ಯಾಪಾರದಲ್ಲಿ ಪ್ರಗತಿ ಉಂಟಾಗುದೆ. ದೀರ್ಘಾವಧಿ ಸಾಲಗಳು ತೀರುತ್ತವೆ.

* ಮಕರ ರಾಶಿ :
ದೂರ ಪ್ರಯಾಣದಲ್ಲಿ ವಾಹನ ತೊಂದರೆಗಳು ಉಂಟಾಗುತ್ತವೆ. ಆರೋಗ್ಯದ ವಿಷಯದಲ್ಲಿ ವೈದ್ಯಕೀಯ ಸಮಾಲೋಚನೆ ಅಗತ್ಯ. ಹಳೆಯ ಸಾಲಗಳನ್ನು ತೀರಿಸಲು ಹೊಸ ಸಾಲಗಳನ್ನು ಮಾಡಲಾಗುತ್ತದೆ. ಪವಿತ್ರ ಸ್ಥಳಗಳಿಗೆ ಭೇಟಿ ನೀಡುತ್ತೀರಿ. ವ್ಯಾಪಾರ ಉದ್ಯೋಗಗಳಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ.

*ಕುಂಭ ರಾಶಿ :
ಸಮಾಜದಲ್ಲಿ ನಿಮ್ಮ ಮಾತಿಗೆ ಬೆಲೆ ಹೆಚ್ಚಾಗುತ್ತದೆ. ವ್ಯಾಪಾರದ ವಿಚಾರದಲ್ಲಿ ಹೊಸ ಯೋಜನೆಗಳು ಕಾರ್ಯರೂಪಕ್ಕೆ ಬಂದು ಯಶಸ್ವಿಯಾಗುತ್ತೀರಿ. ಬಂಧುಮಿತ್ರರ ಸಹಕಾರದಿಂದ ಕೆಲಸಗಳು ಸುಗಮವಾಗಿ ಪೂರ್ಣಗೊಳ್ಳುತ್ತವೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಯತ್ನಗಳು ಕೂಡಿ ಬರುತ್ತವೆ.

*ಮೀನ ರಾಶಿ :
ಸಮಾಜದಲ್ಲಿ ಕೆಲವರ ನಡವಳಿಕೆ ಕಿರಿಕಿರಿ ಉಂಟು ಮಾಡುತ್ತದೆ. ವೃತ್ತಿಪರ ವ್ಯವಹಾರಗಳು ನಿಧಾನವಾಗಿರುತ್ತವೆ. ಉದ್ಯೋಗ ವಿಚಾರದಲ್ಲಿ ಹಿರಿಯರ ಸಲಹೆ ಪಡೆದು ಮುನ್ನಡೆಯುವುದು ಉತ್ತಮ. ಆಕಸ್ಮಿಕ ಪ್ರಯಾಣದ ಸೂಚನೆಗಳಿವೆ. ಕೆಲವು ಹಣಕಾಸಿನ ತೊಂದರೆಗಳು ಉಂಟಾಗುತ್ತವೆ.