Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?

– ಯಾವ ರಾಶಿಯವರಿಗೆ ಶುಭ? ಯಾವ ರಾಶಿಯವರಿಗೆ ಅಶುಭ?

NAMMUR EXPRESS NEWS
2024 ಜೂನ್ 29ರ ಶನಿವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.?

** ಮೇಷ ರಾಶಿ :
ವಿದ್ಯಾವಂತರ ಬಗ್ಗೆ ವಿಶೇಷ ಗೌರವವಿರುತ್ತದೆ. ಗುರು ಹಿರಿಯರಿಗೆ ಅಗತ್ಯವಾದಂತಹ ಸೌಲಭ್ಯವನ್ನು ಕಲ್ಪಿಸುವಿರಿ. ನಿಮ್ಮಲ್ಲಿ ಎಷ್ಟೇ ಬುದ್ಧಿವಂತಿಕೆ ಇದ್ದರೂ ಬೇಕಾದ ಸಮಯಕ್ಕೆ ಅದರ ಬಳಕೆ ಸಾಧ್ಯವಾಗುವುದಿಲ್ಲ. ಬಹು ಮುಖ್ಯವಾದ ಕೆಲಸವನ್ನು ಮಾಡಲು ಮರೆಯುವಿರಿ. ಅನಾರೋಗ್ಯದ ಕಾರಣ ವಿಶ್ರಾಂತಿಯನ್ನು ಬಯಸುವಿರಿ. ಸುಲಭವಾಗಿ ಯಾರ ಮೇಲೂ ನಂಬಿಕೆ ಉಂಟಾಗುವುದಿಲ್ಲ.

** ವೃಷಭ ರಾಶಿ :
ನಿಮ್ಮ ಮನದಲ್ಲಿ ಸಕಾರಾತ್ಮಕ ಭಾವನೆಗಳು ಉಂಟಾಗುತ್ತವೆ. ಮಹಿಳೆಯರು ಕಷ್ಟದಲ್ಲಿರುವ ಹೆಣ್ಣು ಮಕ್ಕಳಿಗೆ ಸಹಾಯ ಮಾಡುತ್ತಾರೆ. ಯಾರ ಮನಸ್ಸನ್ನೂ ನೋಯಿಸದೆ ಎಲ್ಲರೊಂದಿಗೆ ಸ್ನೇಹ ಪ್ರೀತಿಯಿಂದ ವರ್ತಿಸುವಿರಿ. ನಿಮ್ಮ ಹುಟ್ಟೂರಿನಲ್ಲಿರುವ ಶಿಥಿಲಗೊಂಡ ದೇವಾಲಯವನ್ನು ಪುನರುಜ್ಜೀವನಗೊಳಿಸುವಿರಿ. ಈ ದಿನ ಬಹುತೇಕ ಒಳ್ಳೆಯ ಫಲಗಳನ್ನು ಪಡೆಯುವಿರಿ.

** ಮಿಥುನ ರಾಶಿ :
ಅರಸಿ ಬಂದ ಜನಕ್ಕೆ ನಿಮ್ಮ ಕೈಲಾದ ಸಹಾಯವನ್ನು ಮಾಡುವಿರಿ. ಕೇವಲ ನಿಮ್ಮ ಮನೆ ಮಾತ್ರವಲ್ಲದೆ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿ ಇಟ್ಟುಕೊಳ್ಳುವಿರಿ. ರೋಷ ದ್ವೇಷಕ್ಕೆ ಮಣಿಯದೆ ಪ್ರೀತಿ ವಿಶ್ವಾಸಕ್ಕೆ ತಲೆಬಾಗುವಿರಿ. ಧಾರ್ಮಿಕ ಕಾರ್ಯವೊಂದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಕುಟುಂಬದ ಹಿರಿಯರ ಬೆಂಬಲ ನಿಮಗೆ ದೊರೆಯುತ್ತದೆ. ಅನಿರೀಕ್ಷಿತವಾಗಿ ವಿಶೇಷವಾದ ಅನುಕೂಲತೆಗಳು ದೊರೆಯುತ್ತವೆ.

** ಕಟಕ ರಾಶಿ :
ರಾಜಕೀಯಕ್ಕೆ ಪ್ರವೇಶಿಸಲು ಉತ್ತಮ ಅವಕಾಶ ದೊರೆಯುತ್ತದೆ. ಯಾವುದೇ ಸನ್ನಿವೇಶವನ್ನು ಬುದ್ದಿವಂತಿಕೆಯಿಂದ ನಿಮ್ಮ ನಿಯಂತ್ರಣಕ್ಕೆ ತಂದು ಕೊಳ್ಳುವಿರಿ. ಪ್ರತಿಯೊಂದು ವಿಚಾರದಲ್ಲಿಯೂ ಹೆಚ್ಚಿನ ಆಸಕ್ತಿ ತೋರುವುದರಿಂದ ಯಾವುದೇ ತೊಂದರೆ ಬಾರದು. ಸ್ವಾರ್ಥದ ಬುದ್ಧಿ ಇರುವುದಿಲ್ಲ. ಗುರು ಹಿರಿಯರನ್ನು ಗೌರವದಿಂದ ಕಾಣುವಿರಿ. ನೇರವಾದ ನಡೆ ನುಡಿ ಇರುವ ಕಾರಣ ಸ್ನೇಹಿತರು ಕಡಿಮೆ. ಆದರೆ ನೀವು ಯಾರನ್ನು ದ್ವೇಷಿಸುವುದಿಲ್ಲ.

** ಸಿಂಹ ರಾಶಿ :
ನೀವು ನಿಮ್ಮ ಜೀವನದಲ್ಲಿ ಮಹತ್ತರ ಕ್ಷಣ ಎಂದು ಭಾವಿಸುವ ಸನ್ನಿವೇಶದಲ್ಲಿ ನೀವು ಇದ್ದರೆ ಅದಕ್ಕೆ ಆಶ್ಚರ್ಯಪಡಬೇಡಿ. ಅದು ವೈಯಕ್ತಿಕ ವಿಷಯವಾಗಲಿ, ಅಥವಾ ಕೆಲಸಕ್ಕೆ ಸಂಬಂಧಿಸಿದಾಗಲಿ, ನೀವು ಕಂಡುಕೊಳ್ಳಲು ಕಾಯಬೇಕು, ಸುಸೂತ್ರವಾಗಿ ಮುನ್ನಡೆಯಲು ದೃಢತೆ ಮತ್ತು ರಾಜತಂತ್ರ ಬೇಕು. ಸಮತೋಲನದಲ್ಲಿರಿ! ನಿಮ್ಮ ಸಾಮಾಜಿಕ ಪ್ರತಿಷ್ಠೆ ಅಪಾರ ಹೆಚ್ಚಳ ಕಾಣುತ್ತದೆ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ.

** ಕನ್ಯಾ ರಾಶಿ :
ಇಂದು ನಿಮ್ಮಲ್ಲಿರುವ ಸೃಜನಶೀಲ ವ್ಯಕ್ತಿ ವೇದಿಕೆಯಲ್ಲಿ ವಿಜೃಂಭಿಸುತ್ತಾನೆ. ನಿಮಗೆ ಮನರಂಜಕ ಮತ್ತು ಕಾಮಿಡಿಯನ್ ಆಗಿ ಮಹತ್ತರ ಸಾಮರ್ಥ್ಯಗಳಿವೆ ಮತ್ತು ಜನರು ಸಂಜೆಯಲ್ಲಿ ನಿಮ್ಮ ಜೋಕ್ ಸಂಪತ್ತಿಗೆ ಖುಷಿಯಾಗುತ್ತಾರೆ. ಆದರೆ ನೀವು ಇತರೆ ಸಮಸ್ಯೆಗಳು ಮತ್ತು ಕರ್ತವ್ಯಗಳಿಗೂ ಕೊಂಚ ಶಕ್ತಿ ಉಳಿಸಿಕೊಳ್ಳಿ.ಆತ್ಮೀಯರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಹೊಸ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತದೆ.

** ತುಲಾ ರಾಶಿ :
ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುತ್ತೀರಿ. ನೀವು ಸಣ್ಣ ವಿಷಯಗಳು ಮತ್ತು ಸಮಸ್ಯೆಗಳ ಕುರಿತು ಕೊಂಚ ಒತ್ತಡ ಅನುಭವಿಸುತ್ತೀರಿ. ಇಂದು ನೀವು ವಿವಿಧ ಮೂಲಗಳಿಂದ ಗಳಿಸಲು ಶಕ್ತರಾಗಿದ್ದೀರಿ. ನಿಮ್ಮ ಮನಸ್ಸನ್ನು ಸಮತೋಲನದಲ್ಲಿ ಇರಿಸಿದರೆ ನಿಮ್ಮ ಕೆಲಸದಲ್ಲಿ ಅದ್ಭುತ ಫಲಿತಾಂಶಗಳನ್ನು ಪಡೆಯುತ್ತೀರಿ. ಕುಟುಂಬ ಸದಸ್ಯರೊಂದಿಗೆ ದೂರ ಪ್ರಯಾಣಗಳನ್ನು ಮಾಡುತ್ತೀರಿ. ಸಾಲಗಾರರ ಒತ್ತಡದಿಂದ ಹೊರಬರಲು ಹೊಸ ಸಾಲಗಳನ್ನು ಮಾಡಲಾಗುತ್ತದೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ಸ್ವಲ್ಪ ಅಡೆತಡೆಗಲಿರುತ್ತವೆ.

** ವೃಶ್ಚಿಕ ರಾಶಿ :
ನೀವು ವಿವಿಧ ಅಭಿರುಚಿ ಮತ್ತು ಮನೋಧರ್ಮದ ಜನರನ್ನು ಎದುರಿಸಬಹುದು. ಕೆಲವರು ನಿಮಗೆ ಆಶ್ಚರ್ಯಪಡಿಸುತ್ತಾರೆ, ಕೆಲವರು ನಿಮಗೆ ಶಾಕ್ ನೀಡುತ್ತಾರೆ. ಕೆಲವೊಮ್ಮೆ, ಜನರು ನಿಮ್ಮ ಯಶಸ್ಸಿಗೆ ಒಂದೇ ರೀತಿ ಪ್ರತಿಕ್ರಿಯಿಸಿದ್ದಾರಾ ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟ. ಅದನ್ನು ಜಾಣ್ಮೆ ಮತ್ತು ರಾಜತಂತ್ರೀಯವಾಗಿ ಎದುರಿಸಿ. ವ್ಯಾಪಾರಗಳು ನಿಧಾನವಾಗಿ ಸಾಗುತ್ತವೆ, ನಿರುದ್ಯೋಗ ಪ್ರಯತ್ನಗಳು ನಿರುತ್ಸಾಹಗೊಳ್ಳುತ್ತವೆ. ಕುಟುಂಬ ಸದಸ್ಯರಿಂದ ಒತ್ತಡ ಹೆಚ್ಚಾಗುತ್ತದೆ.

** ಧನುಸ್ಸು ರಾಶಿ :
ಇಂದು ನಿಮ್ಮ ನಡತೆಯು ಸಾಮಾನ್ಯರಂತೆ ಕಂಡರೂ ಪ್ರಭಾವವು ಅಧಿಕವಾಗಿರುತ್ತದೆ‌. ಸಾಮಾಜಿಕವಾಗಿ ನಿಮ್ಮ ಕಾರ್ಯವನ್ನು ಗುರುತಿಸಿ ಸಮ್ಮಾನಿಸಬಹುದು. ಹೂಡಿಕೆಯನ್ನು ಮಾಡಿ ಹಣವನ್ನು ಉಳಿಸಿಕೊಳ್ಳುವುದು ಉತ್ತಮ. ಇಂದಿನ ಒತ್ತಡವನ್ನು ಚೆನ್ನಾಗಿ ನಿಭಾಯಿಸಬಲ್ಲಿರಿ. ಉದ್ಯೋಗವನ್ನು ಬಿಡುವ ಮನಸ್ಸಾಗಬಹುದು. ರಮಣೀಯವಾದ ಪ್ರದೇಶಕ್ಕೆ ಹೋಗಬೇಕೆನ್ನುವ ಆಸೆ ಬರಬಹುದು. ಚಂಚಲವಾದ ಮನಸ್ಸಿಗೆ ಧ್ಯಾನ ಪರಿಹಾರವಾಗಲಿದೆ. ನಿಮ್ಮ ಕಷ್ಟಕ್ಕೆ ಬಂದವರು ಆಪ್ತರಾಗಬಹುದು. ಮನೆಯ ಕೆಲಸವು ನಿಧಾನವಾಗಿ ಸಾಗಬಹುದು.

** ಮಕರ ರಾಶಿ :
ನಿಮ್ಮ ಕಾರ್ಯದ ದಕ್ಷತೆಯಿಂದ ಉನ್ನತ ಸ್ಥಾನವು ಸಿಗುವುದು. ಕೆಲವರಿಗೆ ವೃತ್ತಿಯನ್ನು ಬದಲಿಸಬೇಕಾಗಿ ಬರಬಹುದು. ಮನೆಯಲ್ಲಿ ಮಕ್ಕಳ ಜೊತೆ ಸುಂದರ ವಾತಾವರಣವಿರುತ್ತದೆ. ಸಂಗಾತಿಯಿಂದ ದೂರ ಉಳಿಯಬೇಕಾದ ಸ್ಥಿತಿ ಬರಬಹುದು. ಕುಟುಂಬದಲ್ಲಿ ನಿಮ್ಮ ಬಗ್ಗೆ ಆಡಿಕೊಂಡಾರು. ಸಹೋದ್ಯೋಗಿಗಳು ನಿಮ್ಮ ಮೇಲೆ ಕೆಲಸದ ಭಾರವನ್ನು ಹೊರಿಸಬಹುದು. ನಿಮ್ಮ ನೋವನ್ನು ಸಂಗಾತಿಯ ಜೊತೆ ಹಂಚಿಕೊಳ್ಳಿ. ಮನೆಗೆ ಬಂದ ಅತಿಥಿಗಳ ಜೊತೆ ಸಮಯವನ್ನು ಕಳೆಯುವಿರಿ.

** ಕುಂಭ ರಾಶಿ :
ಇಂದು ನಿಮ್ಮವರ ಅವಶ್ಯಕತೆ ತಿಳಿಯುವುದು. ಮನೆಯವರ ನೆನಪು ನಿಮ್ಮನ್ನು ಬಹಳ ಕಾಡಬಹುದು. ಸಹೋದರರ ಜೊತೆ ಕಲಹವಾಗಿ ಕೆಲವು ಕಾಲ ಮೌನವಹಿಸುವಿರಿ. ಕೆಟ್ಟವರ ಸಹವಾಸದಿಂದ ಕೆಟ್ಟ ಹೆಸರೇ ಬರಲಿದೆ.‌ ಮನೆಯ ಕಾರ್ಯದಲ್ಲಿ ನೀವು ಭಾಗಿಯಾಗುವಿರಿ. ನಿಗದಿತ ಸಮಯಕ್ಕೆ ನಿಮ್ಮ ಕೆಲಸಗಳು ಮುಗಿಯದು. ಮುಂದೆ ಮಾಡಿದರಾಯಿತು ಎಂಬ ಮಾನಸಿಕ ಸ್ಥಿತಿಯನ್ನು ಬಿಡುವುದು ಒಳ್ಳೆಯದು. ತಂದೆಯಿಂದ ಹಿತವಚನವು ಸಿಗಬಹುದು. ಹಳೆಯ ಸ್ನೇತರು ದೂರವಾಣಿಯ ಮೂಲಕ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಾರು.‌

** ಮೀನ ರಾಶಿ :
ಇಂದು ನೀವು ಭೂಮಿಯ ವಿಚಾರವಾಗಿ ಕಲಹವನ್ನು ಮಾಡಬೇಕಾಗಿಬರಬಹುದು. ನೀವು ಪ್ರಯತ್ನಿಸಿದ ಕಾರ್ಯಗಳು ಫಲಿಸುವುದು ಎಂಬ ನಂಬಿಕೆ ಇರುವುದು. ವಾಹನವನ್ನು ಓಡಿಸುವ ಎಚ್ಚರಿಕೆಯಿಂದ ಇರಿ. ನೀವು ಮಾಡಲು ಹೊರಟ ಕೆಲಸದ ಮೇಲೇ ಹೆಚ್ಚು ಗಮನವಿರಲಿ. ಅನ್ಯ ವಿಚಾರದಲ್ಲಿ ನೀವು ತಲೆ ಹಾಕಿ ಮುಖ್ಯ ಕೆಲಸವನ್ನು ಮರೆಯಬಹುದು. ತಪ್ಪು ನಡೆಯದೇ ಇದ್ದಾಗ ಅದಕ್ಕೆ ಹೆದರಬೇಕಾದ ಅವಶ್ಯಕತೆ ಇಲ್ಲ. ನಿಮ್ಮ ಕೆಲಸವನ್ನು ಸುಲಭಗೊಳಿಸುವ ವಿಧಾನವನ್ನು ಕಂಡುಕೊಳ್ಳಿ.

Categories
ಆರೋಗ್ಯ ರಾಜ್ಯ

ಡೆಂಗ್ಯೂ ಜ್ವರ ಎಚ್ಚರ.. ಜ್ವರ ತಡೆಯಲು ಇಲ್ಲಿದೆ ಟಿಪ್ಸ್!

ಡೆಂಗ್ಯೂ ಜ್ವರ ಎಚ್ಚರ.. ಜ್ವರ ತಡೆಯಲು ಇಲ್ಲಿದೆ ಟಿಪ್ಸ್!

– ದೇಹದ ಶಕ್ತಿಗೆ ಮನೆಯಲ್ಲೇ ಮಾಡುವ ಪಾನೀಯಗಳು ಯಾವುದು?
– ಯಾವ ಜ್ಯುಸ್ ಕುಡಿದರೆ ಒಳ್ಳೆಯದು..? ಇಲ್ಲಿದೆ ಡೀಟೇಲ್ಸ್

NAMMUR EXPRESS NEWS- ಹೆಲ್ತ್
ರಾಜ್ಯದಲ್ಲಿ ಡೆಂಗ್ಯೂ ಜ್ವರ ಜನರನ್ನು ಕಾಡುತ್ತಿದೆ. ಮಳೆಗಾಲಕ್ಕೂ ಮುನ್ನ ಪ್ರತಿ ವರ್ಷ ಈ ರೋಗ ಮಾಮೂಲಿ. ಆದರೆ ನಿಮ್ಮ ಮನೆ ಸುತ್ತಮುತ್ತ ಸ್ವಚ್ಛತೆ, ಸೊಳ್ಳೆ ನೋಡಿಕೊಳ್ಳಬೇಕು. ಜತೆಗೆ ಜ್ವರದ ಬಗ್ಗೆ ಜಾಗ್ರತೆ ವಹಿಸಬೇಕು.
ಹಾಗಿದ್ರೆ ಡೆಂಗ್ಯೂ ಲಕ್ಷಣಗಳಿದ್ರೆ ಏನೇನು ಸೇವಿಸಬೇಕು.. ದೇಹವನ್ನು ಶಕ್ತಿಯುತವಾಗಿ ಮಾಡೋದು ಹೇಗೆ.. ವೈದ್ಯರು ಹೇಳೋದು ಏನು? ಇಲ್ಲಿದೆ ಕೆಲವೊಂದು ಮಾಹಿತಿ.

ಡೆಂಗ್ಯೂ ಜ್ವರದಿಂದಾಗಿ ದೇಹ ಸುಸ್ತಾಗಿರುತ್ತದೆ, ಮೈ ಕೈ ನೋವಿನಿಂದ ಕೂಡಿರುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹಕ್ಕೆ ಉಲ್ಲಾಸವನ್ನು ವೈದ್ಯರು ಸೂಚಿಸಿದ ಪಾನೀಯಗಳನ್ನು ಸೇವಿಸಬೇಕು.
ಡೆಂಗ್ಯೂ ವೈರಸ್ ಸೋಂಕಿತ ಈಡಿಸ್ ಈಜಿಪ್ಟೈ ಸೊಳ್ಳೆ ಕಚ್ಚುವ ಮೂಲಕ ಮನುಷ್ಯರಿಗೆ ಹರಡುತ್ತದೆ. ಮಳೆಗಾಲದಲ್ಲಿ ಈ ಭಯ ಹೆಚ್ಚಾಗುತ್ತಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ವೈದ್ಯರು ಸೂಚಿಸಿದ್ದಾರೆ. ನಿರ್ದಿಷ್ಟವಾಗಿ, ದ್ರವಗಳ ಸೇವನೆಯು ಡೆಂಗ್ಯೂ ರೋಗಿಗಳ ಚೇತರಿಕೆಯ ಹೆಚ್ಚಿಸುತ್ತದೆ.

ಮೆಂತ್ಯ ಬೀಜದ ನೀರು

ಡೆಂಗ್ಯೂ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಮೆಂತ್ಯ ಬೀಜದ ನೀರು ತುಂಬಾ ಪ್ರಯೋಜನಕಾರಿಯಾಗಿದೆ. ಜ್ವರವನ್ನು ಕಡಿಮೆ ಮಾಡುವುದರ ಜೊತೆಗೆ, ರೋಗಿಯ ರೋಗನಿರೋಧಕ ಶಕ್ತಿಯನ್ನು ಸುಧಾರಿಸುವ ಸಾಮರ್ಥ್ಯವನ್ನು ಮೆಂತ್ಯ ಹೊಂದಿದೆ. ಒಂದು ಚಮಚ ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ.

​ದಾಳಿಂಬೆ ರಸ​

ದಾಳಿಂಬೆ ಹಣ್ಣು ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯವನ್ನೂ ಸುಧಾರಿಸುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳು ಡೆಂಗ್ಯೂ ಜ್ವರದ ಲಕ್ಷಣಗಳಿಂದ ಪರಿಹಾರವನ್ನು ನೀಡುತ್ತದೆ. ಇವು ರಕ್ತವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ದಾಳಿಂಬೆ ಜ್ಯೂಸ್ ಮಾಡಲು ದಾಳಿಂಬೆಯ ಸಿಪ್ಪೆ ತೆಗೆದು ಅದರ ಕಾಳುಗಳನ್ನು ಜ್ಯೂಸ್ ಮಾಡಿ. ಇದಕ್ಕೆ ಸ್ವಲ್ಪ ನಿಂಬೆರಸ ಬೆರೆಸಿ ಕುಡಿದರೆ ಪರಿಹಾರ ಸಿಗುತ್ತದೆ.​

ಅಲೋವೆರಾ ರಸ​

ಅಲೋವೆರಾವು ಉರಿಯೂತದ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದನ್ನು ಕುಡಿದ ನಂತರ ಜೀರ್ಣಕ್ರಿಯೆಯ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ತಜ್ಞರ ಪ್ರಕಾರ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿಯುವುದು ದೇಹದಲ್ಲಿನ ಊತವನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿಯಾಗಿದೆ.
ಅಲೋವೆರಾವನ್ನು ತೊಳೆದು ಅದರ ರಸವನ್ನು ಒಂದು ಬಟ್ಟಲಿನಲ್ಲಿ ಹೊರತೆಗೆಯಿರಿ. ಇದಕ್ಕೆ ಒಂದು ಲೋಟ ನೀರು ಸೇರಿಸಿ ಮಿಶ್ರಣ ಮಾಡಿ ಕುಡಿಯಿರಿ. ಇದು ಕಹಿಯೆನಿಸಿದರೆ, ನೀವು ನಿಂಬೆ ರಸವನ್ನು ಸೇರಿಸಬಹುದು.

ಶುಂಠಿ, ತುಳಸಿ ಮತ್ತು ಅರಿಶಿನ ಪಾನೀಯ

​ಶುಂಠಿ, ಅರಿಶಿನ, ತುಳಸಿ ಮತ್ತು ಜೇನುತುಪ್ಪವನ್ನು ಬೆರೆಸಿ ನೀವು ಆರೋಗ್ಯಕರ ಪಾನೀಯವನ್ನು ಮನೆಯಲ್ಲಿಯೇ ತಯಾರಿಸಬಹುದು. ಅರಿಶಿನ ಮತ್ತು ಶುಂಠಿಯು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದ್ದು ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಗಂಭೀರ ರೋಗಲಕ್ಷಣಗಳನ್ನು ತಡೆಯುತ್ತದೆ.

ತುಳಸಿಯು ಅದರ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಂದಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಒಂದು ಸಣ್ಣ ತುಂಡು ಶುಂಠಿ, ಕಾಲು ಚಮಚ ಅರಿಶಿನ, ಒಂದು ಚಿಟಿಕೆ ಕರಿಮೆಣಸು ಮತ್ತು ಕೆಲವು ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ. ಈಗ ಈ ಪಾನೀಯವನ್ನು ಫಿಲ್ಟರ್ ಮಾಡಿ ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯಿರಿ.

Categories
ಮಂಡ್ಯ

ಮಂಡ್ಯದಲ್ಲಿ ಬಿಜೆಪಿ ಹೋರಾಟ!

ಮಂಡ್ಯದಲ್ಲಿ ಬಿಜೆಪಿ ಹೋರಾಟ!

– ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿರುದ್ದ ಆಕ್ರೋಶ
– ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಎನ್ ಎಸ್ ಇಂದ್ರೇಶ್ ನೇತೃತ್ವದಲ್ಲಿ ಪ್ರತಿಭಟನೆ

NAMMUR EXPRESS NEWS
ಮಂಡ್ಯ: ವಾಲ್ಮೀಕಿ ಅಭಿವೃದ್ಧಿ (ಎಸ್ ಟಿ) ನಿಗಮದ 187 ಕೋಟಿ ರೂ ಗಳನ್ನು ದುರ್ಬಳಕೆ ಮಾಡಿದ ರಾಜ್ಯ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ಭ್ರಷ್ಟಾಚಾರದ ವಿರುದ್ಧ ಭಾರತೀಯ ಜನತಾ ಪಾರ್ಟಿ ಮಂಡ್ಯ ಜಿಲ್ಲೆಯ ವತಿಯಿಂದ ಸಂಜಯ್ ಸರ್ಕಲ್ ನಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಯಿತು.

ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಡಾ.ಎನ್ ಎಸ್ ಇಂದ್ರೇಶ್ ರವರ ನೇತೃತ್ವದಲ್ಲಿ ಹಾಗೂ ನಿಕಟಪೂರ್ವ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರಾದ ನಂಜುಂಡೇಗೌಡ ಹಾಗೂ ರಾಜ್ಯ ವಿಶೇಷ ಆಹ್ವಾನಿತ ಪ್ರತಿನಿಧಿ ಡಾ. ಸಿದ್ದರಾಮಯ್ಯ ಜಿ ಹಾಗೂ ಜಿಲ್ಲೆ ರೈತ ಮೋರ್ಚಾ ಅಧ್ಯಕ್ಷರಾದ ಅಶೋಕ್ ಜಯರಾಮ್, ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳಾದ ಆನಂದ್ ಹಾಗೂ ವಿವೇಕ್ ಜಿಲ್ಲಾ ಕಾರ್ಯದರ್ಶಿಯಾದ ರಾಶಿ ಸಿದ್ದರಾಜುಗೌಡ ಸೇರಿ ಎಲ್ಲಾ ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

Categories
ರಾಜಕೀಯ

ಡಿಕೆಶಿ ಮಗಳು ಐಶ್ವರ್ಯನಾ..? ಯೋಗೇಶ್ವರ್ ಮಗಳು ನಿಶಾನಾ?

ಡಿಕೆಶಿ ಮಗಳು ಐಶ್ವರ್ಯನಾ..? ಯೋಗೇಶ್ವರ್ ಮಗಳು ನಿಶಾನಾ?

– ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮಗಳ ಸ್ಪರ್ಧೆ?
– ಪ್ರತಿಷ್ಠೆಯ ಕಣವಾದ ಚನ್ನಪಟ್ಟಣ: ಡಿಕೆಶಿ ಹೇಳಿದ್ದೇನು?

NAMMUR EXPRESS NEWS
ಚನ್ನಪಟ್ಟಣ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸದ್ಯ ಕರ್ನಾಟಕ ರಾಜಕೀಯ ವಲಯದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬಿಜೆಪಿ ಮೈತ್ರಿಗೆ ಇದು ಪ್ರತಿಷ್ಠೆಯ ಕಣವಾಗಿದೆ. ಹಲವು ಅಚ್ಚರಿಯ ಹೆಸರುಗಳು ಕೂಡ ಚನ್ನಪಟ್ಟಣ ಕ್ಷೇತ್ರದಲ್ಲಿ ಕೇಳಿಬರುತ್ತಿವೆ. ಮೊದಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ವಿರುದ್ಧ ಸೋತ ಡಿ.ಕೆ. ಸುರೇಶ್ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಈ ಸುದ್ದಿಗಳನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಳ್ಳಿಹಾಕಿದ್ದರು. ನನ್ನ ತಮ್ಮ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ, ಜನ ಅವರಿಗೆ ವಿಶ್ರಾಂತಿ ನೀಡಿದ್ದಾರೆ ಎಂದು ಹೇಳಿದ್ದರು.
ಡಿಕೆ ಸುರೇಶ್ ಅವರ ಸ್ಪರ್ಧೆಯನ್ನು ತಳ್ಳಿ ಹಾಕಿದ ನಂತರ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಅವರು ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಚನ್ನಪಟ್ಟಣವನ್ನು ಪಡೆಯಲು ಡಿ.ಕೆ. ಶಿವಕುಮಾರ್ ತಮ್ಮ ಕುಟುಂಬದವರನ್ನೇ ಕಣಕ್ಕಿಳಿಸುತ್ತಾರೆ ಎನ್ನಲಾಗಿತ್ತು. ಈಗ ಸ್ವತಃ ಡಿಕೆ ಶಿವಕುಮಾರ್ ಅವರು ಎಲ್ಲಾ ಊಹಾಪೋಹಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನಮ್ಮ ಕುಟುಂಬದಿಂದ ಇನ್ಯಾರಿಗೂ ಚುನಾವಣಾ ರಾಜಕೀಯಕ್ಕೆ ಬರಲು ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ನಮ್ಮ ಕುಟುಂಬದ ಯಾವುದೇ ಸದಸ್ಯರು ಚುನಾವಣಾ ರಾಜಕೀಯಕ್ಕೆ ಬರುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ನಾನು ಬಹಳ ಹಿಂದೆಯೇ ಸ್ಪಷ್ಟಪಡಿಸಿದ್ದೇನೆ. ಆದರೂ ಈ ಬಗ್ಗೆ ಆಗಾಗ ಸೃಷ್ಟಿಯಾಗುವ ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದು ವಿನಂತಿಸುತ್ತಿದ್ದೇನೆ ಎನ್ನುವ ಮೂಲಕ ಎಲ್ಲದಕ್ಕೂ ತೆರೆ ಎಳೆದಿದ್ದಾರೆ.

ಪ್ರತಿಷ್ಠೆಯ ಕಣವಾದ ಚನ್ನಪಟ್ಟಣ!

ಚನ್ನಪಟ್ಟಣ ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಪ್ರತಿಷ್ಠೆಯ ಕಣವಾಗಿದೆ. ಎಚ್‌ಡಿ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಲ್ಲಿ ನಿಂತು ಸಂಸದರಾದ ಬಳಿಕ, ಚನ್ನಪಟ್ಟಣದಲ್ಲಿ ವಿಧಾನಸಭಾ ಉಪಚುನಾವಣೆ ನಡೆಯಲಿದೆ. ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ಹೆಸರು ಕೇಳಿಬರುತ್ತಿದೆ. ತಪ್ಪಿದಲ್ಲಿ ಎಚ್‌ಡಿ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ಕೂಡ ಚನ್ನಪಟ್ಟಣದಿಂದ ಸ್ಪರ್ಧೆ ಮಾಡುವ ಅವಕಾಶ ಇದೆ. ಯೋಗೇಶ್ವರ್ ಮಗಳು ನಿಶಾ ಯೋಗೇಶ್ವರ್ ಕಾಂಗ್ರೆಸ್‌ನಲ್ಲಿದ್ದು, ಯೋಗೇಶ್ವರ್ ಎದುರಾಳಿಯಾಗಿ ಕಾಂಗ್ರೆಸ್ ನಿಶಾರನ್ನು ಕಣಕ್ಕಿಳಿಸುವ ಸಾಧ್ಯತೆ ಬಗ್ಗೆ ಕೂಡ ಚಿಂತಿಸಿದೆ.

Categories
ಕಾರ್ಕಳ

ಕ್ರಿಯೇಟಿವ್ ಪುಸ್ತಕ ಮನೆಯಿಂದ 15 ಲೇಖಕರ ಪುಸ್ತಕ ಲೋಕಾರ್ಪಣೆ

ಕ್ರಿಯೇಟಿವ್ ಪುಸ್ತಕ ಮನೆಯಿಂದ 15 ಲೇಖಕರ ಪುಸ್ತಕ ಲೋಕಾರ್ಪಣೆ

– ಜು.1ಕ್ಕೆ ಬಿಡುಗಡೆ: ಸಾಹಿತ್ಯ ಕ್ಷೇತ್ರದಲ್ಲಿ ಮತ್ತೊಂದು ಹೊಸಹೆಜ್ಜೆ
– ಖ್ಯಾತ ಬರಹಗಾರ ಜೋಗಿ ಸೇರಿ ಅನೇಕ ಗಣ್ಯರ ಹಾಜರ್
– ರಾಜ್ಯದ ಅತೀ ವೇಗವಾಗಿ ಬೆಳೆಯುತ್ತಿರುವ ಪ್ರಕಾಶನ ಸಂಸ್ಥೆ

NAMMUR EXPRESS NEWS
ಕಾರ್ಕಳ: ಕ್ರಿಯೇಟಿವ್ ಪುಸ್ತಕ ಮನೆ ಕಾರ್ಕಳದ ಸಾಹಿತ್ಯಾಸಕ್ತರಿಗೆ, ಸಾಹಿತ್ಯದ ಅಭಿರುಚಿಯುಳ್ಳವರಿಗೆ ಉತ್ತಮ ಸೇವೆಯನ್ನು ಒದಗಿಸುತ್ತ ಬರುತ್ತಿದೆ. ಇದೀಗ ಸಾಹಿತ್ಯ ಕ್ಷೇತ್ರದಲ್ಲಿ ಮತ್ತೊಂದು ಹೊಸಹೆಜ್ಜೆ ಎಂಬಂತೆ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ ವತಿಯಿಂದ ನಾಡಿನ ಪ್ರಖ್ಯಾತ ಬರಹಗಾರರ 15 ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಕಾಲೇಜಿನ ಸಪ್ತಗಿರಿ ಕ್ಯಾಂಪಸ್‌ನಲ್ಲಿ ಜುಲೈ 1ರ ಸೋಮವಾರ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಖ್ಯಾತ ಬರಹಗಾರ ಗಿರೀಶ್ ರಾವ್ ಹತ್ವಾರ್ (ಜೋಗಿ) ಭಾಗಿಯಾಗಲಿದ್ದಾರೆ. ಗೌರವ ಉಪಸ್ಥಿತಿಯಲ್ಲಿ ಶಾಸಕ ಸುನಿಲ್ ಕುಮಾರ್, ಕ.ಸಾ.ಪ. ಕಾರ್ಕಳ ತಾಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಹಾಗೂ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸರ್ವರನ್ನು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ವತಿಯಿಂದ ಆತ್ಮೀಯವಾಗಿ ಆಹ್ವಾನಿಸಲಾಗಿದೆ.

ರಾಜ್ಯದ ಅತೀ ವೇಗವಾಗಿ ಬೆಳೆಯುತ್ತಿರುವ ಪ್ರಕಾಶನ ಸಂಸ್ಥೆ

ಕ್ರಿಯೇಟಿವ್ ಪುಸ್ತಕಮನೆ ರಾಜ್ಯದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಪುಸ್ತಕ ಮಾರಾಟ ಮತ್ತು ಪ್ರಕಾಶನ ಸಂಸ್ಥೆಯಾಗಿದೆ. ಈಗಾಗಲೇ ಉಡುಪಿ ಜಿಲ್ಲೆಯ ಕಾರ್ಕಳದಿಂದ ಶುರುವಾದ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಮೂಡುಬಿದಿರೆಯಲ್ಲಿ ಎರಡನೇ ಮಳಿಗೆಯನ್ನು ಪುಸ್ತಕಮನೆ ಸಂಸ್ಥೆ ಶುರು ಮಾಡಿದೆ. ಈಗಾಗಲೇ ಸಾವಿರಾರು ಪುಸ್ತಕಗಳು ಮಾರಾಟವಾಗುತ್ತಿವೆ. Pustkamane.com ಆನ್ಲೈನ್ ಮೂಲಕವೂ ಮಾರಾಟವಾಗುತ್ತಿದೆ. ಈಗಾಗಲೇ ಹಲವು ಲೇಖಕರು, ಬರಹಗಾರರ ಪುಸ್ತಕ ಪ್ರಕಟ ಮತ್ತು ಮಾರಾಟ ಮಾಡಿರುವ ಸಂಸ್ಥೆ ಇದೀಗ ರಾಜ್ಯ ಮಟ್ಟದ ಖ್ಯಾತ ಹಾಗೂ ಹೊಸ ತಲೆಮಾರಿನ 15 ಬರಹಗಾರರ ಪುಸ್ತಕ ಪ್ರಕಟ ಮಾಡಿ ಬಿಡುಗಡೆ ಮಾಡುತ್ತಿದೆ.

ಮೊಬೈಲ್ ಬಿಡಿ ಪುಸ್ತಕ ಹಿಡಿ ಯೋಜನೆ ಯಶಸ್ವಿ: ಸರ್ವರಿಗೂ ಧನ್ಯವಾದ

ಕ್ರಿಯೇಟಿವ್ ಪುಸ್ತಕ ಮನೆಯ ಕಾರ್ಕಳದ ಎಲ್ಲಾ ಸಾಹಿತ್ಯ ಆಸಕ್ತಿದಾರರಿಗೆ ಅನುಕೂಲವಾಗುವಂತೆ ಸಾಹಿತ್ಯ ಅಭಿರುಚಿ ಉಳ್ಳವರಿಗೆ ಎಲ್ಲಾ ರೀತಿಯ ಪುಸ್ತಕಗಳನ್ನ ತಲುಪಿಸುವಂತಹ ಕೆಲಸದಲ್ಲಿ ಒಳ್ಳೆಯ ಸಾಮಾಜಿಕವಾದಂತಹ ಕೆಲಸದಲ್ಲಿ ತೊಡಗಿದೆ. ವಿಶೇಷವಾಗಿ ಪುಸ್ತಕ ಪೋಷಕ ಯೋಜನೆಗಳ ಮುಖಾಂತರ ಮೊಬೈಲ್ ಬಿಡಿ ಪುಸ್ತಕ ಹಿಡಿ ಎನ್ನುವ ಯೋಜನೆಯ ಮೂಲಕ ಹಳ್ಳಿ ಭಾಗದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹಲವಾರು ಸಾಹಿತ್ಯ ಪುಸ್ತಕ ಕಲ್ಪಿಸುವಂತಹ ವ್ಯವಸ್ಥೆ ಕೂಡ ಆಗುತ್ತಿದೆ. ಅದರಂತೆ ಹೊಸ ಸಾಹಿತ್ಯ ಉದಯೋನ್ಮುಖ ಬರಹಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಿಯೇಟಿವ್ ಪುಸ್ತಕ ಮನೆ ಹಲವಾರು ಪುಸ್ತಕಗಳನ್ನ ಪ್ರಕಟ ಮಾಡಲು ಹೊಸ ಹೆಜ್ಜೆಯನ್ನು ಇಡುತ್ತಿದೆ. 15 ಪುಸ್ತಕಗಳನ್ನ ನಾಡಿನ ಪ್ರಸಿದ್ಧ ಬರಹಗಾರರಿಂದ ಹೊಸ ಬರಹಗಾರಗಳಿಂದ ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡಿಕೊಂಡು ಪ್ರಕಟಣೆ ಮಾಡುತ್ತಿದ್ದೇವೆ.

ಜುಲೈ 1ರಂದು ಕಾರ್ಕಳದ ಕ್ರಿಯೇಟಿವ್ ಕಾಲೇಜು ಕ್ಯಾಂಪಸ್ ನಲ್ಲಿ ನಾಡಿನ ಪ್ರಖ್ಯಾತ ಬರಗಾರರು ಹಾಗೂ ಪತ್ರಕರ್ತರಾಗಿರುವಂತಹ ಗಿರೀಶ್ ರಾವ್ ಹತ್ವಾರ್ ಜೋಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಕ್ಷೇತ್ರದ ಶಾಸಕರಾಗಿರುವಂತಹ ಸುನಿಲ್ ಕುಮಾರ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಹಲವಾರು ಪ್ರಸಿದ್ಧ ಬರಹಗಾರರು ಸಾಹಿತ್ಯಸಕ್ತಿಯುಳ್ಳವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ತಾವುಗಳು ಕೂಡ ಈ ಕಾರ್ಯಕ್ರಮಕ್ಕೆ ಬಂದು ಸಾಹಿತ್ಯದ ಈ ಹೊಸ ಹೆಜ್ಜೆಯನ್ನ ಸಂಭ್ರಮಿಸಬೇಕು ಹಾಗೂ ಪುರಸ್ಕರಿಸಬೇಕು. ಮುಂದಿನ ಹಂತದಲ್ಲಿ ಕೂಡ ಒಳ್ಳೆಯ ಬರಹಗಾರರಿಗೂ ವೇದಿಕೆ ಸಿದ್ಧವಾಗುತ್ತಿದೆ. ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಕ್ರಿಯೇಟಿವ್ ಸಂಸ್ಥೆ ಹಾಗೂ ಪುಸ್ತಕ ಮನೆ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್, ಗಣಪತಿ ಕೆ.ಎಸ್, ಡಾ.ಗಣನಾಥ ಶೆಟ್ಟಿ, ಗಣಪತಿ ಭಟ್, ಅಮೃತ್ ರೈ, ಆದರ್ಶ ಎಂ.ಕೆ, ವಿಮಲ್ ರಾಜ್ ಜಿ ಸೇರಿದಂತೆ ಆಡಳಿತ ಮಂಡಳಿ ಈ ಮೂಲಕ ಸ್ವಾಗತಿಸಿದೆ.

Categories
ಬೆಂಗಳೂರು

ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!

ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!

– ಪ್ರಜ್ವಲ್ ಬಳಿ ಇದ್ದ ಸಿಮ್ ಕಾರ್ಡ್ ಒಂದಲ್ಲ ಎರಡಲ್ಲ ಬರೋಬ್ಬರಿ 15!

NAMMUR EXPRESS NEWS
ಬೆಂಗಳೂರು : ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಇದೀಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮಹಿಳೆಯರಿಗೆ ಕರೆ ಮಾಡಲು ಪ್ರಜ್ವಲ್ ರೇವಣ್ಣ ಬಳಿ ಇದ್ದ ಸಿಮ್ ಕಾರ್ಡ್ ಗಳು ಬರೋಬ್ಬರಿ 15 ಎಂದು ಇದೀಗ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಹೌದು ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆತನ ಬಳಿ ಒಂದಲ್ಲ, ಎರಡಲ್ಲ 15 ಸಿಮ್‌ಗಳಿದ್ದವು ಎಂದು ತಿಳಿದುಬಂದಿದೆ.

ಬರೋಬ್ಬರಿ 15 ಸಿಮ್ ಕಾರ್ಡ್ ಹೊಂದಿದ್ದು, ಇವುಗಳ ಮೂಲಕ ಮಹಿಳೆಯರಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಮಹಿಳೆಯರು ಬ್ಲಾಕ್ ಮಾಡಿದ್ರೆ ಮತ್ತೊಂದು ನಂಬರ್‌ನಿಂದ ಕಾಲ್ ಮಾಡಿ, ನಗ್ನ, ಅರೆನಗ್ನ ಸ್ಕ್ರೀನ್ ಶಾಟ್ ಕಳಿಸಿ ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದನಂತೆ. ಸಹಕರಿಸದಿದ್ದರೆ ಫೋಟೋ, ವಿಡಿಯೋ ವೈರಲ್ ಮಾಡೋ ಬೆದರಿಕೆ ಹಾಕುತ್ತಿದ್ದನಂತೆ. ಪ್ರಜ್ವಲ್‌ಗೆ ಬೆದರಿ ಸಂತ್ರಸ್ತೆಯರು ಬೆತ್ತಲಾಗಿದ್ದರಂತೆ. ಕೆಲಸ ಕೇಳಿಕೊಂಡು ಬಂದವರು, ಮಕ್ಕಳಿಗೆ ಸೀಟ್‌ಗಾಗಿ ಬಂದವರು, ಕೆಲ ಪರಿಚಿತರ ಪತ್ನಿಯರೇ ಪ್ರಜ್ವಲ್ ರೇವಣ್ಣ ಟಾರ್ಗೆಟ್ ಆಗಿದ್ದರಂತೆ.

Categories
ಅಪಘಾತ

ಗೂಗಲ್ ಮ್ಯಾಪ್ ನದಿಗೆ ಇಳಿಸಿತು!

ಗೂಗಲ್ ಮ್ಯಾಪ್ ನದಿಗೆ ಇಳಿಸಿತು!

– ನೀರಿನಲ್ಲಿ ಕೊಚ್ಚಿ ಹೋದ ಕಾರು, ಇಬ್ಬರ ರಕ್ಷಣೆ
– ರಸ್ತೆ ಮಧ್ಯೆ ಲಾಕ್ ಆದ ಟ್ಯಾಂಕರ್

NAMMUR EXPRESS NEWS
ಕಾಸರಗೋಡು: ಗೂಗಲ್ ಮ್ಯಾಪ್ ಹಾಕಿ ಪ್ರಾಯಾಣಿಸುತ್ತಿದ್ದಾಗ ಕಾರು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಕುತ್ತಿಕೋಲ್ ಸಮೀಪ ನಡೆದಿದ್ದು, ಕಾರಿನಲ್ಲಿದ್ದ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.

ಕಾರಿನಲ್ಲಿದ್ದ ಅಂಬಲತ್ತರದ ತಸ್ರಿಫ್ ( ೩೬)ಅಬ್ದುಲ್ ರಶೀದ್ ( ೩೮) ರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಕುತ್ತಿಕೋಲ್ ಪಳ್ಳಂಜಿಯಲ್ಲಿ ಹೊಳೆಯ ಸೇತುವೆ ಮೂಲಕ ತೆರಳುತ್ತಿದ್ದಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಗುರುವಾರ ಬೆಳಿಗ್ಗೆ ಅರಣ್ಯ ಪ್ರದೇಶದ ಪಳ್ಳಂಜಿ- ಪಾಂಡಿ ರಸ್ತೆಯ ತಡೆಗೋಡೆ ಇಲ್ಲದ ಸೇತುವೆ ಮೂಲಕ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ತಸ್ರಿಫ್ ಮತ್ತು ರಶೀದ್ ಉಪ್ಪಿನಂಗಡಿಗೆ ಹೋಗಬೇಗಿದ್ದು, ಇದಕ್ಕಾಗಿ ಗೂಗಲ್ ಮ್ಯಾಪ್ ಹಾಕಿ ಕಾರನಲ್ಲಿ ಪ್ರಯಾಣಿಸುತ್ತಿದ್ದರು. ಹೊಳೆಯಲ್ಲಿ ಸೇತುವೆ ಮೇಲಿಂದ ನೀರು ಹರಿದು ಹೋಗುತ್ತಿತ್ತು. ಸೇತುವೆಗೆ ಇಕ್ಕೆಲಗಳಲ್ಲಿ ತಡೆಗೋಡೆ ಇಲ್ಲದಿರುವುದನ್ನು ಅರಿಯದೆ ಇವರು ಮುಂದಕ್ಕೆ ಸಾಗುತ್ತಿದ್ದಾಗ ಸೇತುವೆಯ ಬದಿಗೆ ಬಂದು ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಕಾರು ಕೊಚ್ಚಿಕೊಂಡು ಹೋಗಿದ್ದು , ಅಲ್ಪ ದೂರಕ್ಕೆ ಸಾಗಿ ಬದಿಯ ಮರಕ್ಕೆ ಬಡಿದು ನಿಂತಿದೆ. ಇಬ್ಬರೂ ಕಾರಿನಿಂದ ಹೊರಬಂದು ಮರಕ್ಕೆ ಹಿಡಿದು ನಿಂತಿದ್ದರು. ಸ್ಥಳೀಯರು ಗಮನಿಸಿ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ,ಬಳಿಕ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿಗಳು ಹಾಗೂ ಸ್ಥಳೀಯರು ಇಬ್ಬರನ್ನು ರಕ್ಷಿಸಿದರು.

ಕಂಟೈನರ್‌ ರಸ್ತೆ ಮಧ್ಯೆ ಸಿಲುಕಿ ಪರದಾಟ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅನಾಹುತ ಜೋರಾಗುತ್ತಿದ್ದು, ಅಲ್ಲಲ್ಲಿ ದುರ್ಘಟನೆಗಳು ಸಂಭವಿಸುತ್ತಿರುವ ಬಗ್ಗೆ ವರದಿಯಾಗುತ್ತಿವೆ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಮಳೆಯಿಂದಾಗಿ ಆರು ಮಂದಿ ಜೀವ ಕಳೆದುಕೊಂಡಿದ್ದಾರೆ.
ಈ ನಡುವೆ ಬೆಂಗಳೂರು ಕಡೆಯಿಂದ ಆಗಮಿಸಿದ ಕಂಟೈನರ್ ಲಾರಿಯೊಂದು, ಉಪ್ಪಿನಂಗಡಿಯಿಂದ ಸರಪಾಡಿ ಮಣಿಹಳ್ಳ ರಸ್ತೆಯಲ್ಲಿ ಅಲ್ಲಿಪಾದೆ ಸಮೀಪದ ಅಣೇಜ ತಿರುವಿನಲ್ಲಿ ಸಿಲುಕಿ ಹಾಕಿಕೊಂಡು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡಿತ್ತು.

ಬಿಜಾಪುರ ಕಡೆಯ ಈ ಲಾರಿಯು ಬೆಂಗಳೂರು ಮಂಗಳೂರು ಹೆದ್ದಾರಿಯಲ್ಲಿ ಆಗಮಿಸಿ, ಉಪ್ಪಿನಂಗಡಿಯಿಂದ ಮಂಗಳೂರು ಕಡೆ ತೆರಳಲು ಚಾಲಕ ಗೂಗಲ್ ಮ್ಯಾಪ್‌ ಹಾಕಿದ ಸಂದರ್ಭ ಆತನಿಗೆ ಉಪ್ಪಿನಂಗಡಿ ಅಜಿಲಮೊಗರು ಮಣಿಹಳ್ಳ ರಸ್ತೆಯ ಮೂಲಕ ಸಾಗಿ, ಮಂಗಳೂರಿಗೆ ತೆರಳುವುದಕ್ಕೆ ಸೂಕ್ತ ರೂಟ್‌ ಎಂಬುದಾಗಿ ಸೂಚಿಸಿದೆ.

ಪ್ರಸ್ತುತ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಗೂಗಲ್ ಮ್ಯಾಪ್‌ ಈ ರಸ್ತೆಯನ್ನು ಸೂಚಿಸುತ್ತಿದೆ. ಆದರೆ ಈ ರಸ್ತೆಯು ಘನ ವಾಹನ ಸಾಗಾಟಕ್ಕೆ ಸೂಕ್ತವಾಗಿಲ್ಲ. ಅಣೇಜದಲ್ಲಿ ಅಪಾಯಕಾರಿ ತಿರುವು ಇರುವುದರಿಂದ ಒಂದೇ ಬಾರಿಗೆ ವಾಹನ ತಿರುವು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಪ್ರಸ್ತುತ ಈ ಲಾರಿಯು ಮುಂದಕ್ಕೂ ಚಲಿಸುವುದಕ್ಕೆ ಸಾಧ್ಯವಾಗದೆ ಹಿಂದಕ್ಕೂ ಬರಲಾಗದೆ ದಾರಿ ಮಧ್ಯೆ ಸಿಲುಕಿಕೊಂಡಿತ್ತು.

Categories
ಚಿತ್ರದುರ್ಗ

ಸಿದ್ದರಾಮಯ್ಯ ರಾಜೀನಾಮೆಗೆ ವಿಜಯೇಂದ್ರ ಪಟ್ಟು!

ಸಿದ್ದರಾಮಯ್ಯ ರಾಜೀನಾಮೆಗೆ ವಿಜಯೇಂದ್ರ ಪಟ್ಟು!

– ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ದುರ್ಬಳಕೆ ವಿರುದ್ಧ ಪ್ರತಿಭಟನೆ
– ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಬಿಜೆಪಿ ಹೋರಾಟ

NAMMUR EXPRESS NEWS
ಚಿತ್ರದುರ್ಗ: ಕರ್ನಾಟಕ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಎಂದೆಂದೂ ಕಾಣದಂತಹ ಬ್ರಹ್ಮಾಂಡ ಭ್ರಷ್ಠಾಚಾರದಲ್ಲಿ ಮುಳುಗಿದ್ದು ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜಿನಾಮೆ ಕೊಡಬೇಕು. ಚಿತ್ರದುರ್ಗದಿಂದ ನಮ್ಮ ಹೋರಾಟ ಪ್ರಾರಂಭವಾಗಿದ್ದು ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಬಿಜೆಪಿ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಿಡಿ ಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ಭ್ರಷ್ಟಾಚಾರ ಹಗರಣದ ವಿರುದ್ಧ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಮಾಡಿ ನಂತರ ಬಂಧನಕ್ಕೆ ಒಳಗಾಗಿ ಮಾತನಾಡಿದ ಬಿ.ವೈ.ವಿಜಯೇಂದ್ರ ಮಾತನಾಡಿ ಕಾಂಗ್ರೆಸ್ ನ ಐದು ಉಚಿತ ಗ್ಯಾರೆಂಟಿಗಳಿಗೆ ಹಣ ಸಾಕಾಗದ ಕಾರಣ ಕರ್ನಾಟಕ ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ಬಳಸಿಕೊಂಡಿದೆ. ಬೇನಾಮಿ ಖಾತೆಗಳನ್ನು ತೆರೆದು 187 ಕೋಟಿ ರೂ.ಗಳನ್ನು ವರ್ಗಾಯಿಸಿ ಅಲ್ಲಿಂದ ರಾಜ್ಯ ಸರ್ಕಾರ ಬೇರೆ ಬೇರೆ ಉದ್ದೇಶಗಳಿಗೆ ಖರ್ಚು ಮಾಡಿ ನೆರೆಯ ಆಂಧ್ರಕ್ಕೆ ಹಣ ಸಾಗಾಟ ಮಾಡಿದ್ದಾರೆ.
ವಾಲ್ಮೀಕಿ ಹೆಸರಿನಲ್ಲಿ ಸ್ಥಾಪಿತವಾದ ಪರಿಶಿಷ್ಟ ಪಂಗಡ ನಿಗಮದ ಈ ಹಣ ಬಾರ್ ಗಳಲ್ಲಿ ಕುಳಿತು ಕುಡಿಯುವವರಿಗೂ ತಲುಪಿದೆ. ಇಂತಹ ಕಡು ಭ್ರಷ್ಟ ಸರ್ಕಾರಕ್ಕೆ ಕಿವಿ ಹಿಂಡಬೇಕಿದೆ ಎಂದರು.

ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ವಾಲ್ಮೀಕಿ ಅಭಿವೃದ್ದಿ ನಿಗಮಕ್ಕೆ ನೂರಾರು ಕೋಟಿ ರೂ.ಗಳನ್ನು ನೀಡಿ ವಾಲ್ಮೀಕಿ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಹಾಸ್ಟೆಲ್ ಹಾಗೂ ವಿದ್ಯಾರ್ಥಿ ವೇತನಕ್ಕೆ ಕೊಡಬೇಕಾಗಿದ್ದ ಹಣ, ವಾಲ್ಮೀಕಿ ಸಮುದಾಯದ ರೈತರ ಗಂಗಾ ಕಲ್ಯಾಣ ಬೋರ್ವೆಲ್ ಕೊರೆಯಲು ಬಳಸಬೇಕಿದ್ದ ಹಣವನ್ನೆಲ್ಲಾ ಈಗಿನ ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ. ಎಸ್.ಐ.ಟಿ. ತನಿಖೆ ನಡೆಸುತ್ತಿದೆಯೇ ವಿನಃ ಸಚಿವ ನಾಗೇಂದ್ರಗೆ ಇದುವರೆವಿಗೂ ಒಂದು ನೋಟಿಸ್ ಕೊಟ್ಟಿಲ್ಲ. ಬೇರೆ ಬೇರೆ ರಾಜ್ಯಗಳಿಗೆ, ರಾಹುಲ್‍ಗಾಂಧಿಗೆ ಹಣ ಹೋಗಿದೆ. ಕರ್ನಾಟಕವನ್ನು ಎಟಿಎಂ. ಮಾಡಿಕೊಂಡಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಬರೆದಿರುವ ಜಾತಿ ಮತ್ತು ಪಂಗಡದ ಹಣವನ್ನು ಉಚಿತ ಗ್ಯಾರೆಂಟಿಗಳಿಗೆ ಹಣ ಒದಗಿಸಲಾಗುತ್ತಿದೆ ಎಂದು ಆರೋಪಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಹೆಸರು ಕೂಡ ಹಗರಣದಲ್ಲಿ ಕೇಳಿ ಬಂದಿದ್ದು. ರಾಜ್ಯದಲ್ಲಿ ಬರಗಾಲವಿದೆ. ರೈತರು ಕಂಗಾಲಾಗಿದ್ದಾರೆ. ಅನ್ನದಾತ ಸಂಕಷ್ಟಕ್ಕೀಡಾಗಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿರುವ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧಿಕಾರಿ ಚಂದ್ರಶೇಖರನ್ ಡೆತ್‍ನೋಟ್‍ನಲ್ಲಿ ಸಚಿವರ ಹೆಸರು ಬರೆದಿದ್ದಾರೆ. ಎಸ್ಸಿ.ಪಿ. ಟಿಎಸ್ಸ್‍ಪಿ. ಹಣ ದುರುಪಯೋಗವಾಗಿದೆ. ಈ ನಿಟ್ಟಿನಲ್ಲಿ ವಾಲ್ಮೀಕಿ ಸಮುದಾಯಕ್ಕೆ ನ್ಯಾಯ ಕೊಡಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಮೊಳಕಾಲ್ಮೂರು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ನೇರ್ಲಗುಂಟೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಾಲ್ಮೀಕಿ ಜನಾಂಗದ ಹಣವೇ ಬೇಕಿತ್ತ. 187 ಕೋಟಿ ರೂ.ಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡು ಕಾಂಗ್ರೆಸ್ ಸರ್ಕಾರ ಭ್ರಷ್ಠಾಚಾರದಲ್ಲಿ ತೊಡಗಿದೆ. ಮುಖ್ಯಮಂತ್ರಿ ರಾಜಿನಾಮೆ ಕೊಡಬೇಕು ಅಲ್ಲಿಯವರೆಗೂ ನಮ್ಮ ಹೋರಾಟ ಇದ್ದೇ ಇರುತ್ತದೆ ಎಂದರು.

ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಸ್.ವಿ.ರಾಮಚಂದ್ರಪ್ಪ, ಬಿಜೆಪಿ. ಎಸ್ಟಿ. ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ರಾಜ್ಯ ಕಾರ್ಯದರ್ಶಿ ಶರಣ್‍ ತಾಳಿಕೆರೆ, ಎಸ್.ಲಿಂಗಮೂರ್ತಿ, ಉಮೇಶ್‍ ಕಾರಜೋಳ, ಬಿಜೆಪಿ. ಜಿಲ್ಲಾಧ್ಯಕ್ಷ ಎ.ಮುರಳಿ, ಹನುಮಂತೆಗೌಡ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್‍ಯಾದವ್, ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್, ಯುವ ಮುಖಂಡರುಗಳಾದ ಎಂ.ಸಿ.ರಘುಚಂದನ್, ಕುಮಾರಸ್ವಾಮಿ, ಜಿ.ಎಸ್.ಅನಿತ್‍ಕುಮಾರ್, ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ಡಾ.ಸಿದ್ದಾರ್ಥ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಮಾಧುರಿ ಗಿರೀಶ್, ಜಿ.ಟಿ.ಸುರೇಸ್‍ಸಿದ್ದಾಪರ, ಪಿ.ಸಂಪತ್‍ಕುಮಾರ್, ಬಾಳೆಕಾಯಿ ರಾಂದಾಸ್, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಚಿತ್ರದುರ್ಗ ಜಿಲ್ಲೆಯಾದ್ಯಂತ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Categories
ತೀರ್ಥಹಳ್ಳಿ

ಮುಡುಬದಲ್ಲಿ ಚೌಡೇಶ್ವರಿ ಎಂಟರ್ಪ್ರೈಸಸ್ ಅಂಗಡಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್.!

ಮುಡುಬದಲ್ಲಿ ಚೌಡೇಶ್ವರಿ ಎಂಟರ್ಪ್ರೈಸಸ್ ಅಂಗಡಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್.!

– ಅಂಗಡಿ ಒಳಗೆ ಇದ್ದ ವಸ್ತುಗಳು ಸುಟ್ಟು ಕರಕಲು
– ಅಪಾರ ಪ್ರಮಾಣದ ನಷ್ಟ

NAMMUR EXPRESS NEWS
ತೀರ್ಥಹಳ್ಳಿ : ಮುಡುಬದಲ್ಲಿ ಶ್ರೀ ಚೌಡೇಶ್ವರಿ ಎಂಟರ್ಪ್ರೈಸಸ್ ಹಾರ್ಡ್ವೇರ್ ಅಂಡ್ ಗ್ಲಾಸ್, ಪ್ಲೈವುಡ್ ಅಂಡ್ ಪೇಯಿಂಗ್ ಅಂಡ್ ಎಲೆಕ್ಟ್ರಿಕ್ ಅಂಗಡಿ ಆಕಸ್ಮಿಕವಾಗಿ ಶುಕ್ರವಾರ ಬೆಳಗ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಅವಘಡ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿ ಒಳಗೆ ಇದ್ದ ವಸ್ತುಗಳು ಸುಟ್ಟು ಹೋಗಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

ದಿನಾಂಕ : 27-06-2024 ರ ಗುರುವಾರದಂದು ಎಂದಿನಂತೆ ಅಂಗಡಿ ಕೆಲಸ ಮುಗಿಸಿ ಸಂಜೆ 7:30ರ ಹೊತ್ತಿಗೆ ಅಂಗಡಿ ಬಾಗಿಲನ್ನು ಮುಚ್ಚಿ ಮನೆಗೆ ಹೋಗಿದ್ದು, ನಂತರ ಶುಕ್ರವಾರ ಬೆಳಗ್ಗೆ ಅಂಗಡಿ ಬಾಗಿಲು ತೆರೆದಾಗ ಅನಾಹುತ ಸಂಭವಿಸಿದ್ದು ಕಂಡುಬಂದಿದೆ.

Categories
ಉಡುಪಿ

ಬೈಂದೂರು: ಶೆಫ್‌ಟಾಕ್ ನ್ಯೂಟಿಫುಡ್ಸ್ ನೂತನ ಉದ್ಯಮ ಶುರು

ಬೈಂದೂರು: ಶೆಫ್‌ಟಾಕ್ ನ್ಯೂಟ್ರಿ ಫುಡ್ಸ್ ನೂತನ ಉದ್ಯಮ ಶುರು

– ಜೂ.29ಕ್ಕೆ ಚಿಕ್ಕಿ, ಚಕ್ಕುಲಿ ಖಾದ್ಯಗಳ ಉತ್ಪಾದನಾ ಘಟಕದ ಉದ್ಘಾಟನಾ ಸಮಾರಂಭ
– ಯುವ ಉದ್ಯಮಿ, ಸಮಾಜ ಸೇವಕ ಗೋವಿಂದ ಬಾಬು ಪೂಜಾರಿ ಸಾರಥ್ಯದಲ್ಲಿ ಉದ್ಯಮ

NAMMUR EXPRESS NEWS
ಬೈಂದೂರು: ಖ್ಯಾತ ಉದ್ಯಮಿ, ಸಮಾಜ ಸೇವಕ ಗೋವಿಂದ ಬಾಬು ಪೂಜಾರಿ ಅವರ ಮಾಲೀಕತ್ವದ ಶೆಫ್‌ಟಾಕ್ ನ್ಯೂಟ್ರಿ ಫುಡ್ಸ್ ನೂತನ ಉದ್ಯಮ ಜೂ.29ಕ್ಕೆ ಉದ್ಘಾಟನೆಗೊಳ್ಳಲಿದೆ.
ಚಿಕ್ಕಿ, ಚಕ್ಕುಲಿ ಖಾದ್ಯಗಳ ಉತ್ಪಾದನಾ ಘಟಕದ ಉದ್ಘಾಟನಾ ಸಮಾರಂಭ 29-06-2024 ಶನಿವಾರ, ಬೆಳಿಗ್ಗೆ 11:00 ಗಂಟೆಗೆ ಸ್ಥಳ : ಹೆರಂಜಾಲು ರೋಡ್ ಬೈಂದೂರು ತಾಲೂಕಲ್ಲಿ ನಡೆಯಲಿದೆ. ಚಿಕ್ಕಿ, ಚಕ್ಕುಲಿ ಮತ್ತು ಇತರ ಖಾದ್ಯಗಳ ಉತ್ಪಾದನಾ ಘಟಕದ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಶ್ರೀ ಅವಧೂತ ವಿನಯ್ ಗುರೂಜಿ ಗೌರಿಗದ್ದೆ ಆಶ್ರಮ ಈ ಕಾರ್ಯಕ್ರಮದಲ್ಲಿ ಉಪಸ್ಥಿತಿಯಲ್ಲಿರುತ್ತಾರೆ.

ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರುರಾಜ ಗಂಟಿಹೊಳೆ, ಕುಂದಾಪುರ ಶಾಸಕ ಕಿರಣ್ ಕೊಡ್ಲಿ ಉಡುಪಿ ಶಾಸಕ ಯಶಪಾಲ್ ಎ ಸುವರ್ಣ, ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ನಾಗಮ್ಮ ದೇವಾಡಿಗ ಅಧ್ಯಕ್ಷರು ಗ್ರಾಮ ಪಂಚಾಯತ್ ಖಂಬದಕೋಣೆ, ಶ್ರೀ ಕೆ ಗೋಪಾಲ ಪೂಜಾರಿ ಮಾಜಿ ಶಾಸಕರು ಬೈಂದೂರು ವಿಧಾನಸಭಾ ಕ್ಷೇತ್ರ, ಶ್ರೀ ಸುಕುಮಾರ ಶೆಟ್ಟಿ ಮಾಜಿ ಶಾಸಕರು ಬೈಂದೂರು ವಿಧಾನಸಭಾ ಕ್ಷೇತ್ರ, ಶ್ರೀ ರಾಜು ಪೂಜಾರಿ ಅಧ್ಯಕ್ಷರು ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ, ಶ್ರೀ ಎಚ್. ವಿಜಯ ಶೆಟ್ಟಿ ಮಾಜಿ ತಾಲೂಕು ಪಂಚಾಯತ್ ಸದಸ್ಯರು ಹಾಗೂ ಖಜಾಂಚಿ ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನ ಹೆರಂಜಾಲು ಈ ಕಾರ್ಯಕ್ರಮದಲ್ಲಿ ಉಪಸ್ಥಿತಿಯಲ್ಲಿರುತ್ತಾರೆ. ಶ್ರೀ ಗೋವಿಂದ ಬಾಬು ಪೂಜಾರಿ ಮ್ಯಾನೇಜಿಂಗ್ ಡೈರೆಕ್ಟರ್ ಶೆಫ್‌ ಟಾಕ್ ನ್ಯೂಟ್ರಿಫುಡ್ಸ್ ಪ್ರೈವೇಟ್ ಲಿಮಿಟೆಡ್ ಇವರು ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ.