Categories
ಕರಾವಳಿ

ಕರಾವಳಿ ನ್ಯೂಸ್

ಕರಾವಳಿ ನ್ಯೂಸ್

– ಉಡುಪಿ: ಭಯದ ವಾತಾವರಣ ಸೃಷ್ಟಿಸಿದ ಯುವಕನ ಸೆರೆ
– ಬಂಟ್ವಾಳ: ದೇವಸ್ಥಾನಕ್ಕೆ ನುಗ್ಗಿದ ಕಳ್ಳರು – 2.3ಲಕ್ಷ ಮೌಲ್ಯದ ಚಿನ್ನಾಭರಣ ಕಳವು!
– ಉಡುಪಿ: ಸಿಲಿಂಡರ್ ಸ್ಫೋಟ; ಅಪಾರ್ಟ್ ಮೆಂಟ್ ನ ಗೋಡೆಗಳು ಛಿದ್ರ!

NAMMUR EXPRESS NEWS
ಉಡುಪಿ: ಸಾರ್ವಜನಿಕ ಸ್ಥಳಗಳಲ್ಲಿ ಭೀತಿ‌ಯ‌ ವಾತಾವರಣ ಸೃಷ್ಟಿಸಿದ ಯುವಕನೋರ್ವನನ್ನು ಸೆರೆ ಹಿಡಿದ ಘಟನೆ ಉಡುಪಿಯ ಅಜ್ಜರಕಾಡು ಬಳಿ ನಡೆದಿದೆ. ಸಮಾಜಸೇವಕ ನಿತ್ಯಾನಂದ‌ ಒಳಕಾಡು ಸಹಾಯವಾಣಿ‌ ಪೋಲಿಸರ‌ ಸಹಕಾರದಿಂದ‌ ಯುವಕನನ್ನು ವಶಕ್ಕೆ ಪಡೆದು ದೊಡ್ಡಣಗುಡ್ಡೆಯ ಡಾ ಎ ವಿ ಬಾಳಿಗ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೆಲವು ದಿನಗಳಿಂದ ಯುವಕ ಉಡುಪಿ ನಗರದಲ್ಲಿ ರಂಪಾಟ ನಡೆಸಿದ್ದನು. ರಕ್ಷಿಸಲ್ಪಟ್ಟ ಯುವಕ ಬೇಲೂರು ತಾಲೂಕಿನ ಚನ್ನಕೇಶವ ನಗರದ ಹೇಮಂತ್ ಎಂದು ತಿಳಿದುಬಂದಿದೆ. ವಾರಸುದಾರರು ಸಮಾಜಸೇವಕ ನಿತ್ಯಾನಂದ‌ ಒಳಕಾಡು ಅವರನ್ನು‌ ಸಂಪರ್ಕಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 91649 01111 ಅನ್ನು ಸಂಪರ್ಕಿಸಬಹುದಾಗಿದೆ.

* ಬಂಟ್ವಾಳ: ದೇವಸ್ಥಾನಕ್ಕೆ ನುಗ್ಗಿದ ಕಳ್ಳರು – 2.3ಲಕ್ಷ ಮೌಲ್ಯದ ಚಿನ್ನಾಭರಣ ಕಳವು!

ಬಂಟ್ವಾಳ: ಫರಂಗಿಪೇಟೆ ಸಮೀಪದ ಸಜೀರು ಶ್ರೀ ದೇವಕಿಕೃಷ್ಣ ರವಳನಾಥ ದೇವಸ್ಥಾನಕ್ಕೆ ನ. 4ರಂದು ಮುಂಜಾನೆ ಕಳ್ಳರ ತಂಡವೊಂದು ನುಗ್ಗಿ 2.3 ಲಕ್ಷ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದೆ.
ಮುಂಜಾನೆ 3 ಗಂಟೆ ಸುಮಾರಿಗೆ ಕಳ್ಳರು ಹಿಂಬಾಗಿಲು ಮುರಿದು ಗರ್ಭಗುಡಿ ಪ್ರವೇಶಿಸಿದಾಗ ಈ ಘಟನೆ ನಡೆದಿದೆ. 1.5 ಕೆ.ಜಿ ತೂಕದ ಬೆಳ್ಳಿಯ ಪೀಠ, ಚಿನ್ನದ ಮೂಗುತಿ, ವಿಧಿವತ್ತಾದ ಛತ್ರಿ ಸೇರಿದಂತೆ ವಿವಿಧ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಒಟ್ಟಾರೆಯಾಗಿ ಅಂದಾಜು 2 ಕೆಜಿ ಬೆಳ್ಳಿ ಹಾಗೂ ಮೂರು ಸಾರ್ವಭೌಮ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳರು ಬರಿಗಾಲಿನಲ್ಲಿದ್ದರು ಮತ್ತು ತಮ್ಮ ಗುರುತುಗಳನ್ನು ಮರೆಮಾಚಲು ಮುಖವಾಡಗಳನ್ನು ಧರಿಸಿದ್ದರು. ಕಳ್ಳತನದ ನಂತರ ತಂಡವು ಸಾಗಿದ ಮಾರ್ಗವನ್ನು ಪೊಲೀಸರು ತನಿಖೆ ನಡೆಸುತ್ತಿದ್ದು, ನಿರ್ಗಮನ ಮಾರ್ಗದಲ್ಲಿ ಇರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಬಳಸಿಕೊಂಡು ಆರೋಪಿಗಳನ್ನು ಹಿಡಿಯಲಾಗುವುದು ಎಂದು ಭರವಸೆ ನೀಡಿದ್ದಾರೆ.

* ಉಡುಪಿ: ಸಿಲಿಂಡರ್ ಸ್ಫೋಟ; ಅಪಾರ್ಟ್ ಮೆಂಟ್ ನ ಗೋಡೆಗಳು ಛಿದ್ರ!

ಉಡುಪಿ: ಪಾರ್ಟಿ ಮಾಡುತ್ತಿದ್ದ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಅಪಾರ ಪ್ರಮಾಣದ ಹಾನಿ ಉಂಟಾದ ಘಟನೆ ಉಡುಪಿ ಕಲ್ಸಂಕ ಸಮೀಪದ ಬಡಗುಪೇಟೆ ರಸ್ತೆಯ ಅಪಾರ್ಟ್ ಮೆಂಟ್ ವೊಂದರಲ್ಲಿ ನ. 4ರಂದು ರಾತ್ರಿ ಸಂಭವಿಸಿದೆ.
ಗ್ಯಾಸ್ ಸಿಲಿಂಡರ್ ಲೀಕ್ ಆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮೂರು ಅಂತಸ್ತಿನ ಅಪಾರ್ಟ್ ಮೆಂಟ್ ನ ಮೂರನೇ ಮಹಡಿಯಲ್ಲಿ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು ಪಾರ್ಟಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಲೀಕ್ ಆಗಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕೊಠಡಿಯಲ್ಲಿ ಪಾರ್ಟಿ ಮಾಡುತ್ತಿದ್ದವರು ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಬಳಿಕ ಅಗ್ನಿ ಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸಂಭವನೀಯ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮನೆಯಲ್ಲಿದ್ದ ಸೊತ್ತುಗಳು ಸುಟ್ಟು ಕರಕಲಾಗಿದ್ದು, ಅಪಾರ ಪ್ರಮಾಣದ ಹಾನಿಯುಂಟಾಗಿದೆ ಎಂದು ತಿಳಿದುಬಂದಿದೆ.

Categories
ರಾಜ್ಯ

ಅಯ್ಯೋ ದೇವ್ರೇ ಈ ಮಳೆ ಬಿಡಲ್ಲ!

ಅಯ್ಯೋ ದೇವ್ರೇ ಈ ಮಳೆ ಬಿಡಲ್ಲ!
– ನವೆಂಬರ್ 9 ರಿಂದ ಮತ್ತೆ ಹಲವೆಡೆ ಮಳೆ ಅಬ್ಬರ!
– ಅಡಿಕೆ, ಕಾಫಿ, ಬೆಳೆ ಕಥೆ ಗೋವಿಂದಾ…?!

NAMMUR EXPRESS NEWS
ಬೆಂಗಳೂರು: ನವೆಂಬರ್ 9ರಿಂದ ರಾಜ್ಯದಲ್ಲಿ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಆರು ಜಿಲ್ಲೆಗಳಲ್ಲಿ ಬೀಳಲಿರುವ ಮಳೆಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಮೈಸೂರು, ಕೋಲಾರ, ಕೊಡಗು, ಚಿಕ್ಕಮಗಳೂರು, ಚಾಮರಾಜನಗರಕ್ಕೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಇದಷ್ಟೇ ಅಲ್ಲದೆ ಧರ್ಮಸ್ಥಳ, ಮಾಣಿ, ಉಪ್ಪಿನಂಗಡಿ, ಪುತ್ತೂರು, ಬೆಳ್ತಂಗಡಿ, ಭಾಗಮಂಡಲ, ಹೆಸರಘಟ್ಟ, ಕೊಲ್ಲೂರು, ಚನ್ನರಾಯಪಟ್ಟಣ, ಮೂಡಿಗೆರೆ, ಸೋಮವಾರಪೇಟೆ, ಕೊಟ್ಟಿಗೆಹಾರ, ಚಿಂತಾಮಣಿ, ಬೇಲೂರು, ದೊಡ್ಡಬಳ್ಳಾಪುರ, ಎಂಎಂ ಹಿಲ್ಸ್​ನಲ್ಲಿ ಈಗಾಗಲೇ ಸಣ್ಣ ಮಳೆಯಾಗಿದೆ. ಇನ್ನು ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಶೀತದ ವಾತಾವರಣ ಶುರುವಾಗಿದೆ. ಬಂಗಾಳ ಕೊಲ್ಲಿ ಭಾಗದಲ್ಲಿ ಚಂಡಮಾರುತದ ಪರಿಣಾಮ ಉಂಟಾದ ಹವಾಮಾನ ಏರುಪೇರು ಈಗ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇನ್ನೂ ಮಳೆ ಮುಂದುವರೆದಿದೆ ಎನ್ನಲಾಗಿದೆ.

Categories
ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ

ಟಾಪ್ ನ್ಯೂಸ್ ಕರ್ನಾಟಕ

ಮೈಸೂರು: ಯುವತಿಮೇಲೆ ಸ್ನೇಹಿತರಿಂದಲೇ ಗ್ಯಾಂಗ್ ರೇಪ್..!
– ತುಮಕೂರು: ವಸತಿ ಶಾಲೆಯಲ್ಲಿ ವಿದ್ಯಾರ್ಥಿ ನಿಗೂಢ ಸಾವು

NAMMUR EXPRESS NEWS
ಮೈಸೂರು: ಕಳೆದ ಮೂರು ವರ್ಷಗಳ ಹಿಂದೆ ಮೈಸೂರಿನ ಹೊರವಲಯದಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಇಡೀ ದೇಶವೇ ಬೆಚ್ಚಿ ಬೀಳಿಸಿತ್ತು. ಇದೀಗ ಮೈಸೂರಿನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಯುವತಿಯ ಮೇಲೆ ಆಕೆ ಸ್ನೇಹಿತರಿಂದಲೇ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಮೈಸೂರಿನಲ್ಲಿ ಇದೀಗ ಮತ್ತೊಂದು ಗ್ಯಾಂಗ್ ರೇಪ್ ನಡೆದಿದ್ದು, ಯುವತಿಯ ಮೇಲೆ ಆಕೆ ಸ್ನೇಹಿತರೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಮಡಿಕೇರಿ ಮೂಲದ ಯುವತಿಯಿಂದ ಇದೀಗ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ. ಮೈಸೂರಿನ ವಿಜಯನಗರ ಠಾಣೆಯಲ್ಲಿ ಯುವತಿ ಖುದ್ದು ಹಾಜರಾಗಿ ದೂರು ದಾಖಲಿಸಿದ್ದಾಳೆ. ಮಡಿಕೇರಿಯಿಂದ ಬಂದ ಯುವತಿ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದಳು. ಈ ವೇಳೆ ಜೊತೆಗೆ ಇದ್ದಂತಹ ಸ್ನೇಹಿತರೆ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಯುವತಿ ವಿಜಯನಗರ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

– ತುಮಕೂರು: ವಸತಿ ಶಾಲೆಯಲ್ಲಿ ವಿದ್ಯಾರ್ಥಿ ನಿಗೂಢ ಸಾವು, ಪೋಷಕರ ಆಕ್ರಂದನ.

ತುಮಕೂರು : ವಸತಿ ಶಾಲೆಯಲ್ಲಿ ವಿದ್ಯಾರ್ಥಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬಜನಹಳ್ಳಿ ಬಳಿಯ ಏಕಲವ್ಯ ವಸತಿ ಶಾಲೆಯಲ್ಲಿ ಘಟನೆ ನಡೆದಿದ್ದು ಮೃತ ಪಟ್ಟ ವಿದ್ಯಾರ್ಥಿಯನ್ನು ಕೊರಟಗೆರೆ ತಾಲ್ಲೂಕು ಶಕುನಿ ತಿಮ್ಮನಹಳ್ಳಿಯ ಅಭಿಲಾಷ್ (13) ಎಂದು ಗುರುತಿಸಲಾಗಿದೆ. ದೀಪಾವಳಿ ಹಬ್ಬದ ಆಚರಣೆಗೆ ರಜೆ ಇದ್ದ ಕಾರಣ ವಿದ್ಯಾರ್ಥಿ ಮನೆಗೆ ತೆರಳಿ ಹಬ್ಬ ಮುಗಿಸಿ ಸೋಮವಾರ ಬೆಳಗ್ಗೆ ವಸತಿ ಶಾಲೆಗೆ ವಾಪಸಾಗಿದ್ದ ವಿದ್ಯಾರ್ಥಿ ಸಂಜೆ ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಘಟನೆ ನಡೆದ ಬೆನ್ನಲ್ಲೇ ವಿದ್ಯಾರ್ಥಿ ಶವ ತುಮಕೂರಿಗೆ ರವಾನಿಸಲಾಗಿದೆ. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಹ ವಸತಿ ಶಾಲೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ವಿದ್ಯಾರ್ಥಿ ಸಾವಿಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Categories
ಮಲ್ನಾಡ್

ಟಾಪ್ 3 ನ್ಯೂಸ್ ಮಲ್ನಾಡ್

ಟಾಪ್ 3 ನ್ಯೂಸ್ ಮಲ್ನಾಡ್

ತೀರ್ಥಹಳ್ಳಿ ಮೂಲದ ನಟೋರಿಯಸ್ ಮನೆಗಳ್ಳನ ಬಂಧನ
– ಬೆಂಜ್ ಕಾರು, ಪಿಸ್ತೂಲು ಸಹಿತ ಕೋಟ್ಯಾಂತರ ಮೌಲ್ಯದ ವಸ್ತು, ನಗದು ವಶಕ್ಕೆ ..!!
– ಮೂಡಿಗೆರೆ: ಚಾರ್ಮಾಡಿ ಘಾಟ್ ನಲ್ಲಿ ಬಂಡೆಗಲ್ಲಿಗೆ ಡಿಕ್ಕಿ ಹೊಡೆದ ಕಾರು
– ಚಿರತೆ ಉಗುರು ಮತ್ತು ಹಲ್ಲುಗಳ ಅಕ್ರಮ ಸಾಗಣೆ
– ತರೀಕೆರೆ: ಜಲಪಾತದಲ್ಲಿ ಈಜಲು ಹೋಗಿ ಪ್ರವಾಸಿಗ ನೀರುಪಾಲು !

NAMMUR EXPRESS NEWS
ಮಲೆನಾಡಿನ ಕುಖ್ಯಾತ ಕಳ್ಳರಿಬ್ಬರನ್ನು ಬೆಂಗಳೂರು ಪೋಲಿಸರು ಬಂಧಿಸಿ ಬೆಂಜ್ ,ಸ್ಕೋಡಾ ಕಾರು ಸಮೇತ ಕೋಟ್ಯಾಂತರ ರೂ ನಗದು ಹಾಗೂ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಇತ್ತೀಚೆಗೆ ತೀರ್ಥಹಳ್ಳಿಯಲ್ಲಿ ಮನೆಯ ಹಿಂಭಾಗದಲ್ಲಿ ಮುಚ್ಚ್ಚಿಟ್ಟಿದ್ದ ಚಿನ್ನಾಭರಣವನ್ನು ವಶಪಡಿಸಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ತೀರ್ಥಹಳ್ಳಿ ಮೂಲದ ಆರೋಪಿ ಹಾಗೂ ಚಿಕ್ಕಮಗಳೂರಿನ ಆರೋಪಿಯೊಬ್ಬನನ್ನು ಬಂಧಿಸಿ ಐಶರಾಮಿ ಕಾರುಗಳು ಹಾಗೂ 3 ಕೋಟಿ 60 ಲಕ್ಷ ರೂ. ಮೌಲ್ಯದ ಚಿನ್ನ ಜಪ್ತಿ ಮಾಡಿಕೊಂಡಿದ್ದಾರೆ.
ತೀರ್ಥಹಳ್ಳಿ ಮೂಲದ ಹಮ್ಜಾ ಅಲಿಯಾಸ್ ಅಮೀರ್(39)‌ ಚಿಕ್ಕಮಗಳೂರಿನ ಕಡೂರು ಸಾಧಿಕ್ (40) ಬಂಧಿತರು. ಆರೋಪಿಗಳು ನಕಲಿ ಪಾಸ್​​ಪೋರ್ಟ್ ಬಳಸಿ ಬಹ್ರೇನ್​ಗೆ ಪರಾರಿಯಾಗಲು ಯತ್ನಿಸುತ್ತಿದ್ದ ಮಾಹಿತಿ ಅರಿತ ಮಾಗಡಿ ಪೊಲೀಸರು ಮುಂಬೈ ಏರ್​ಪೋರ್ಟ್ ಬಳಿ ನಟೋರಿಯಸ್ ಕಳ್ಳರನ್ನು ಬಂಧಿಸಿದ್ದಾರೆ. ನಾಲ್ವರು ಇನ್ಸ್​ಪೆಕ್ಟರ್​ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಹಿಡಿಯಲಾಗಿದೆ. ಸದ್ಯ ಮಾಗಡಿ ಪೊಲೀಸರ ಕಾರ್ಯಾಚರಣೆಗೆ ಮುಂಬೈ ಪೊಲೀಸರು ಶಾಕ್ ಆಗಿದ್ದಾರೆ.

– 3 ಕೋಟಿ 60 ಲಕ್ಷ ರೂ. ಮೌಲ್ಯದ ಚಿನ್ನ ಜಪ್ತಿ

ಬಂಧಿತರಿಬ್ಬರು ಸುಮಾರು 10 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ನಕಲಿ ಪಾಸ್​​ಪೋರ್ಟ್ ಬಳಸಿ ಏರ್​ಪೋರ್ಟ್​ ಪೊಲೀಸರನ್ನೇ ಯಾಮಾರಿಸಿದ್ದರು. ಇಬ್ಬರು ಆರೋಪಿಗಳ ಬಳಿ 1 ಗನ್ ಹಾಗೂ 5 ಜೀವಂತ ಗುಂಡು, 3 ಕೋಟಿ 60 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ 11,49,000 ನಗದು ಜಪ್ತಿ ಮಾಡಲಾಗಿದೆ. ಮಾಗಡಿ ಪಟ್ಟಣದ ದೇವಸ್ಥಾನವೊಂದರಲ್ಲಿ ಕಳ್ಳತನ ನಡೆದಿತ್ತು. ದೇವಸ್ಥಾನದಲ್ಲಿದ್ದ 5 ಕೆಜಿ ಬಂಗಾರ ದೋಚಿಕೊಂಡು ಪರಾರಿಯಾಗಿದ್ದರು. ಬ್ಯಾಡಗಿ ಶಾಸಕರ ನಿವಾಸದಲ್ಲೂ ಬಂಧಿತ ಆರೋಪಿಗಳು ಕನ್ನ ಹಾಕಿದ್ದರು.
ಆರೋಪಿಗಳ ಸೆರೆಗೆ ಎಸ್​​ಪಿ ಕಾರ್ತಿಕ್ ರೆಡ್ಡಿ 4 ತಂಡಗಳನ್ನು ರಚಿಸಿದ್ದರು. ಜಿಲ್ಲೆಯ ಮಾಗಡಿ ಠಾಣೆಯ ಇನ್ಸ್​ಪೆಕ್ಟರ್​ ಜಿ.ವೈ.ಗಿರಿರಾಜ್​, ಕುಂಬಳಗೋಡು ಇನ್ಸ್​ಪೆಕ್ಟರ್ ಮಂಜುನಾಥ್, ತಾವರಗೆರೆ ಪಿಐ​ ಮೋಹನ್, ಕುದೂರು ಠಾಣೆಯ ಇನ್ಸ್​ಪೆಕ್ಟರ್ ನವೀನ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಒಟ್ಟು 25 ಪೊಲೀಸ್​ ಸಿಬ್ಬಂದಿ ಭಾಗಿಯಾಗಿದ್ದರು. ಕಳೆದ 1 ತಿಂಗಳಿಂದ ಇಬ್ಬರು ಕಳ್ಳರನ್ನು ಪೊಲೀಸರು ಚೇಸ್​ ಮಾಡಿದ್ದಾರೆ. ಬಿಎಂಡಬ್ಲ್ಯು, ಸ್ಕೋಡಾ, ಎಸ್​​ಯುವಿ ಕಾರು ಖರೀದಿಸಿದ್ದರು. ಕಾರುಗಳ ನಂಬರ್ ಪ್ಲೇಟ್ ಬದಲಾಯಿಸಿ ತಲೆಮರೆಸಿಕೊಂಡಿದ್ದರು. ಮುಂಬೈ, ಗೋವಾ, ರಾಜಸ್ಥಾನ, ಮಹಾರಾಷ್ಟ್ರ ಸೇರಿ ಅನೇಕ ಕಡೆ ಸುತ್ತಾಟ ನಡೆಸಿದ್ದರು. ಬಳಿಕ ಬಹ್ರೇನ್​ ದೇಶಕ್ಕೆ ತೆರಳಲು ಮುಂದಾಗಿದ್ದಾರೆ.
ರಾಮನಗರ ಎಸ್​ಪಿ ಕಾರ್ತಿಕ್ ರೆಡ್ಡಿ 20 ಸಾವಿರ ಬಹುಮಾನ ಘೋಷಣೆ, ಪೊಲೀಸರನ್ನು ಕಂಡು ಗನ್​ ತೆಗೆಯಲು ಯತ್ನಿಸಿದ್ದ ವೇಳೆ ಇಬ್ಬರ ಬಂಧನ ಮಾಡಲಾಗಿದೆ. ಕಳ್ಳರ ಹಿಸ್ಟರಿ ನೋಡಿ ಮುಂಬೈ ಪೊಲೀಸರಿಂದ ಏರ್​ಪೋರ್ಟ್​ನಲ್ಲಿ ತಪಾಸಣೆ ಮಾಡಲಾಗಿದ್ದು, ಈ ಹಿಂದೆ ಹಲವು ಬಾರಿ ಬೇರೆ ಬೇರೆ ದೇಶಗಳಿಗೆ ತೆರಳಿದ್ದು ಗೊತ್ತಾಗಿದೆ. ಸದ್ಯ ಕಳ್ಳರನ್ನು ಸೆರೆಹಿಡಿದ ಪೊಲೀಸರಿಗೆ ರಾಮನಗರ ಎಸ್​ಪಿ ಕಾರ್ತಿಕ್ ರೆಡ್ಡಿ 20 ಸಾವಿರ ಬಹುಮಾನ ಘೋಷಣೆ ಮಾಡಿದ್ದಾರೆ. ವಿಶೇಷ ಪ್ರಕರಣ ಎಂದು ಪರಿಗಣಿಸಿ ಸನ್ಮಾನ ಮಾಡುವಂತೆ ಎಸ್​ಪಿಯಿಂದ ಪತ್ರ ಬರೆಯಲಾಗಿದೆ.

– ಮೂಡಿಗೆರೆ: ಚಾರ್ಮಾಡಿ ಘಾಟ್ ನಲ್ಲಿ ಬಂಡೆಗಲ್ಲಿಗೆ ಡಿಕ್ಕಿ ಹೊಡೆದ ಕಾರು.

ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಬಂಡೆಕಲ್ಲಿಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಮೂವರು ಸಣ್ಣಪುಟ್ಟ ಗಾಯಗೊಂಡಿರುವ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ. ಕಾರು ಉಜಿರೆಯಿಂದ ಮೂಡಿಗೆರೆ ಮಾರ್ಗವಾಗಿ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಚಾರ್ಮಾಡಿ ಘಾಟಿಯ ರಸ್ತೆ ಬದಿಯ ಬಂಡೆಕಲ್ಲಿಗೆ ಡಿಕ್ಕಿ ಹೊಡೆದಿದೆ ಪರಿಣಾಮ ಕಾರಿನಲ್ಲಿ ಎಡಬದಿಯಲ್ಲಿ ಕುಳಿತ್ತಿದ್ದ ಮಹಿಳೆಗೆ ತಲೆ ಭಾಗಕ್ಕೆ ಗಂಭೀರ ಏಟಾಗಿದ್ದು ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಾರಿನಲ್ಲಿದ್ದ ಇತರ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

– ಸಾಗರ: ಚಿರತೆ ಉಗುರು ಮತ್ತು ಹಲ್ಲುಗಳ ಅಕ್ರಮ ಸಾಗಣೆ

ಸಾಗರ : ಕಾನೂನು ಬಾಹಿರವಾಗಿ ಚಿರತೆ ಉಗುರು ಮತ್ತು ಹಲ್ಲುಗಳ ಸಾಗಾಟದಲ್ಲಿ ತೊಡಗಿದ ಆರೋಪಿಯನ್ನು ಮಾಲು ಸಮೇತ ದಾಸಕೊಪ್ಪ ಸರ್ಕಲ್ ಪೆಟ್ರೋಲ್ ಬಂಕ್ ಹತ್ತಿರ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಶಿಕಾರಿಪುರ ತಾಲೂಕಿನ ಹಾರೊಗೊಪ್ಪ ಗ್ರಾಮದ ಲೋಕೇಶ್ ಬಿನ್ ಭಾಗ್ಯಣ್ಣ ಬಂಧಿತ ಆರೋಪಿ. ಈತನಿಂದ 16 ಚಿರತೆ ಉಗುರು ಮತ್ತು 3 ಹಲ್ಲುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಸಾಗರ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಸಬ್ಇನ್ಸ್‌ಪೆಕ್ಟರ್ ವಿನಾಯಕ ಕೆ ಮತ್ತು ಸಿಬ್ಬಂದಿಗಳಾದ ಗಣೇಶ್, ವಿಶ್ವನಾಥ ಆಂಜನೇಯ ಮತ್ತು ದಿನೇಶ, ಪ್ರಮೋದಕುಮಾರಿ ರವರು ಎಸ್ ಎಸ್ ಕಾಶಿ ಎಸ್ಪಿ ಸಿಐಡಿ ಅರಣ್ಯ ಘಟಕ ಮಡಿಕೇರಿ ಇವರ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ.

– ತರೀಕೆರೆ: ಜಲಪಾತದಲ್ಲಿ ಈಜಲು ಹೋಗಿ ಪ್ರವಾಸಿಗ ನೀರುಪಾಲು !

ತರೀಕೆರೆ : ಸ್ನೇಹಿತರ ಜೊತೆ ಹೆಬ್ಬೆ ಜಲಪಾತಕ್ಕೆ ಬಂದಿದ್ದ ಪ್ರವಾಸಿಗನೋರ್ವ ಜಲಪಾತದಲ್ಲಿ ಈಜಲು ಹೋಗಿ ಜೀವ ಕಳೆದುಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹೆಬ್ಬೆ ಜಲಪಾತದಲ್ಲಿ ಸಂಭವಿಸಿದೆ. ಛತ್ತಿಸಘಡದ ಮೂಲದ ಪ್ರವಾಸಿಗ ಅಮೀತ್ ಕುಮಾರ್ (30) ಮೃತ ದುರ್ದೈವಿ. ಈತ ಮೂಲತಃ ಛತ್ತಿಸ್ ಘಡದವನಾಗಿದ್ದು ಬೆಂಗಳೂರಿನಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಅದರಂತೆ ಸ್ನೇಹಿತರ ಜತೆ ಕೆಮ್ಮಣ್ಣುಗುಂಡಿ ಸಮೀಪದ ಹೆಬ್ಬೆ ಜಲಪಾತಕ್ಕೆ ತೆರಳಿದ ವೇಳೆ ಈಜಲು ಹೋಗಿ ನೀರುಪಾಲಾಗಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Categories
ರಾಜ್ಯ

ದಾಖಲೆ ಬರೆದ ಹಾಸನಾಂಬೆ!

ದಾಖಲೆ ಬರೆದ ಹಾಸನಾಂಬೆ!
– ಪ್ರಸಾದ, ಕಾಣಿಕೆ ಸೇರಿ ಒಟ್ಟು 12 ಕೋಟಿ 63 ಲಕ್ಷ ಆದಾಯ
– 20.40 ಲಕ್ಷ ಭಕ್ತರಿಂದ ದೇವಿ ದರ್ಶನ

NAMMUR EXPRESS NEWS
ಹಾಸನ : ಪ್ರತಿವರ್ಷದಂತೆ ಈ ವರ್ಷವೂ ಕೂಡ ಅದಿದೇವತೆ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ತೆಗೆದು ದರ್ಶನದ ಭಾಗ್ಯ ನೀಡಿ ಈಗಾಗಲೇ ಈಗಾಗಲೇ ೨೦೨೪ರ ದರ್ಶನೋತ್ಸವಕ್ಕೆ ತೆರೆ ಎಳೆದಿದ್ದು, ಬಂದ ಭಕ್ತರಿಂದ ಟಿಕೆಟ್, ಲಾಡು ಮಾರಾಟ, ಸ್ಕ್ಯಾನ್ ಮೂಲಕ ಹಣ ಹಾಕಿರುವುದು, ಕಾಣಿಕೆ ಹುಂಡಿಯಿಂದ ಎಲ್ಲಾ ಸೇರಿ ಬರೋಬ್ಬರಿ 12,63,83,808 ರೂಗಳು ಸಂಗ್ರಹವಾಗುವ ಮೂಲಕ ಹಾಸನಾಂಬೆ ಮತ್ತು ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಇತಿಹಾಸದಲ್ಲೆ ಈ ವರ್ಷ ಮತ್ತೊಂದು ಹೊಸ ದಾಖಲೆ ನಿರ್ಮಿಸಿದೆ.

ಹಾಸನಾಂಬೆ ದೇವಿಯ ಬಾಗಿಲು ಅಕ್ಟೋಬರ್ 24ಕ್ಕೆ ತೆಗೆದು ನವೆಂಬ‌ರ್ ೩ಕ್ಕೆ ಮದ್ಯಾಹ್ನ ಬಾಗಿಲು ಮುಚ್ಚಲಾಗಿದೆ. ಜಿಲ್ಲಾಡಳಿತ ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡುವ ಮೂಲಕ ಅದ್ಭುತವಾಗಿ ಜಾತ್ರಾ ಮಹೋತ್ಸವ ನಡೆಸಿದೆ. ಈ ಬಾರಿ 20.40 ಲಕ್ಷ ಭಕ್ತರು ದೇವಿ ದರ್ಶನ ಪಡೆದಿದ್ದಾರೆ. 1000, 300 ರ ಟಿಕೆಟ್, ಆಸ್ಟೈನ್ ಹಾಗೂ ಲಾಡು ಪ್ರಸಾದದ ಮೂಲಕ ಸೇರಿ 9.63 ಕೋಟಿ ರೂಪಾಯಿ ಆದಾಯ ಬಂದಿದೆ. ಭಕ್ತರು ಹಾಕಿದ 21 ವಿವಿಧ ಕಾಣಿಕೆ ಹುಂಡಿಯ ಲೆಕ್ಕಚಾರ ಕಾರ್ಯವನ್ನು ಸಿಸಿ ಕ್ಯಾಮೆರಾದ ಕಣ್ಣಾವಲಿನಲ್ಲಿ ನಡೆಸಲಾಯಿತು. ಇದರಲ್ಲಿ 2,55,97,567 ರೂಗಳ ಸಂಗ್ರಹ ಎಲ್ಲಾ ಸೇರಿ ಒಟ್ಟು ೧೨ ಕೋಟಿ ೬೩ ಲಕ್ಷ ೮೩ ಸಾವಿರದ ೮೦೮ ರೂಗಳ ಸಂಗ್ರಹವಾಗುವ ಮೂಲಕ ಮತ್ತೆ ಹೊಸ ದಾಖಲೆ ಸೃಷ್ಟಿ ಮಾಡಿದೆ. ೫೧ ಗ್ರಾಂ ಚಿನ್ನ, ೯೧೩ ಗ್ರಾಂ ಬೆಳ್ಳಿಯನ್ನು ಕಾಣಿಕೆ ಹುಂಡಿಗೆ ಹಾಕಿದ್ದಾರೆ. ಸೋಮವಾರದಂದು ಬೆಳಿಗ್ಗೆ ೭ ಗಂಟೆಗೆ ಶುರುವಾದ ಹುಂಡಿಯ ಏಣಿಕೆ ಸಂಜೆ ಸುಮಾರು ೪ ಗಂಟೆಗೆ ಪೂರ್ಣಗೊಂಡಿತು. ಏಣಿಕೆ ಮಾಡುವಾಗ ಹುಂಡಿಯಲ್ಲಿ ವಿದೇಶದ ನೋಟುಗಳು, ಹಳೆಯ ೫೦೦ ಮುಖ ಬೆಲೆಯ ನೋಟುಗಳು, ಹರಕೆ ರೂಪದಲ್ಲಿ ಕಾಣಿಕೆ ಹುಂಡಿಯಲ್ಲಿ ಕರಿಮಣಿ ಸರ, ತ್ರಿಶುಲ, ಬೆಳ್ಳಿಯ ತೊಟ್ಟಿಲು, ಚಿನ್ನದ ತಾಳಿ, ದೀಪಾ, ದೇವಿಯ ಹಸ್ತ, ಬೆಳ್ಳಿಯ ಕಣ್ಣುಗಳು, ಜ್ಯೂವೆಲರಿ ಶಾಪ್‌ನ ನಾಣ್ಯಗಳು, ದೇವಾಲಯಕ್ಕೆ ಹೋಗುವ ಪಾಸುಗಳು ಸೇರಿದಂತೆ ಹಲವಾರು ತರದ ವಸ್ತುಗಳನ್ನು ಹಾಕಲಾಗಿತ್ತು. ಇನ್ನು ಭಕ್ತರು ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸಮ್ಮ ಎಂದು ಕೋರಿ ಈ ವರ್ಷವೂ ಕೂಡ ವಿವಿಧ ಪತ್ರಗಳು ಕಾಣಿಕೆ ಡಬ್ಬಿಯಲ್ಲಿ ಹಾಕಿರುವುದು ಕಂಡು ಬಂದಿತು. ದೇವಿಗೆ ಮನವಿ ಸ್ಥಲಿಸಿರುವುದನ್ನು ಬಹಿರಂಗ ಪಡೆಸದಂತೆ ಅಧಿಕಾರಿಗಳು ಮನವಿ ಮಾಡಿದ್ದರು.

ಭಕ್ತರು ನೀಡಿದ ಕಾಣಿಕೆ ಹುಂಡಿ ಲೆಕ್ಕಚಾರ ಮಾಡಲು ಮೊದಲು ಶ್ರೀ ಸಿದ್ದೇಶ್ವರ ದೇವಾಲಯದ ಆವರಣ ನಿಗಧಿ ಮಾಡಲಾಗಿತ್ತು. ಆದರೆ ಮಳೆ ಬರುತ್ತಿದ್ದರಿಂದ ಶ್ರೀ ಚನ್ನಕೇಶವ ದೇವಸ್ಥಾನಕ್ಕೆ ಸ್ಥಳಾಂತರಿಸಲಾಯಿತು. ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಉಪವಿಭಾಗಧಿಕಾರಿ ಮಾರುತಿ ಎಣಿಕೆ ಕಾರ್ಯದಲ್ಲಿ ನೇತೃತ್ವವಹಿಸಿದ್ದರು. ಬ್ಯಾಂಕ್ ಸಿಬ್ಬಂದಿಗಳು, ಸೈಟ್ ಅಂಡ್ ಗೈಡ್ಸ್, ಕಂದಾಯ ಇಲಾಖೆ ಸಿಬ್ಬಂದಿಗಳು ಸೇರಿ ಒಟ್ಟು ೫೦೦ ಜನರನ್ನು ಏಣಿಕೆ ಕಾರ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಮುಂದಿನ ವರ್ಷ ೨೦೨೫ರ ಅಕ್ಟೋಬರ್ ೯ ರಂದು ಹಾಸನಾಂಬ ದೇವಾಲಯದ ಬಾಗಿಲು ತೆರೆದು ಅಕ್ಟೋಬರ್ ೨೩ ರಂದು ಬಾಗಿಲು ಮುಚ್ಚಲಾಗುತ್ತದೆ ಎಂದು ಉಪವಿಭಾಗಧಿಕಾರಿ ಮಾರುತಿ ಮಾಹಿತಿ ನೀಡಿದರು.

Categories
ಕರಾವಳಿ

ಕರಾವಳಿ ನ್ಯೂಸ್

ಕರಾವಳಿ ನ್ಯೂಸ್

ಸುಬ್ರಹ್ಮಣ್ಯ: ಮರ ಬಿದ್ದು, ಭಾರೀ ಅನಾಹುತ: ತಪ್ಪಿದ ಘಟನೆ
– ಬೆಳ್ತಂಗಡಿ:ವಿದ್ಯಾರ್ಥಿಯ ಹನಿಟ್ರ್ಯಾಪ್ ಯತ್ನಿಸಿದ ಮಹಿಳೆ
– ಪುತ್ತೂರು: ಮಾದಕ ವಸ್ತು ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು

ಸುಬ್ರಹ್ಮಣ್ಯ/ಸುಳ್ಯ : ಸುಳ್ಯ ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ನ. 4 ರಂದು ಅಪರಾಹ್ನ ಉತ್ತಮ ಮಳೆಯಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ಪರಿಸರದ ಕುಮಾರಪರ್ವತ ತಪ್ಪಲು ಹಾಗೂ ಕುಕ್ಕೆ ಸುಬ್ರಹ್ಮಣ್ಯ ಪರಿಸದಲ್ಲಿ ಸಂಜೆ ಒಂದೂವರೆ ತಾಸು ಮಳೆಯಾಗಿದ್ದು, ದರ್ಪಣ ತೀರ್ಥ ನದಿಯಲ್ಲಿ ಭಾರೀ ನೀರು ಹರಿದು ಬಂತು. ಸುಬ್ರಹ್ಮಣ್ಯ, ಕೊಲ್ಲಮೊಗ್ರು, ಬಿಳಿನೆಲೆ, ಹರಿಹರ ಪಲ್ಲತ್ತಡ್ಕ, ಬಳ್ಪ, ಎಡಮಂಗಲ, ಸುಳ್ಯದಲ್ಲೂ ಸಂಜೆ ಮಳೆಯಾಗಿದೆ.
ಸುಳ್ಯ ತಾಲೂಕಿನ ಮರ್ಕಂಜದ ಕೊರ್ಟಡ್ಕದಲ್ಲಿ ರಸ್ತೆಗೆ ಮರ ಬಿದ್ದು ಭಾರೀ ಅನಾಹುತ ತಪ್ಪಿದ ಘಟನೆ ಸಂಭವಿಸಿದೆ. ಕೆಲವು ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ.

ಬೆಳ್ತಂಗಡಿ: ಹದಿ ಹರೆಯದ ವಿದ್ಯಾರ್ಥಿಯ ಹನಿಟ್ರ್ಯಾಪ್’ಗೆ ಯತ್ನಿಸಿದ ಮಹಿಳೆ.!!

ಬೆಳ್ತಂಗಡಿ : ಫೇಸ್‌ಬುಕ್ ಫ್ರೆಂಡ್ಸ್ ಬಳಗದಲ್ಲಿದ್ದ ಮಹಿಳೆಯೋರ್ವಳು ಹದಿ ಹರೆಯದ ವಿದ್ಯಾರ್ಥಿಯೋರ್ವನನ್ನು ಹನಿಟ್ರ್ಯಾಪ್ ಮಾಡಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಲೆತ್ನಿಸಿದ ಪ್ರಕರಣ ವರದಿಯಾಗಿದ್ದು, ಕಂಗೆಟ್ಟ ವಿದ್ಯಾರ್ಥಿಯನ್ನು ಪೊಲೀಸ್ ಇಲಾಖೆ ಸಕಾಲಿಕ ಕ್ರಮದಿಂದ ರಕ್ಷಿಸಿದ ಘಟನೆ ವರದಿಯಾಗಿದೆ.
ಈ ವಿದ್ಯಮಾನದಿಂದ ಆತಂಕಕ್ಕೊಳಗಾದ ವಿದ್ಯಾರ್ಥಿಯು ಈ ವಿಚಾರವನ್ನು ಮಾಧ್ಯಮ ಪ್ರತಿನಿಧಿಯೋರ್ವರ ಗಮನಕ್ಕೆ ತಂದಿದ್ದು, ಅವರು ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆಯ ಹಾಗೂ ಸೈಬರ್ ಕ್ರೈಮ್ ವಿಭಾಗಕ್ಕೆ ಮಾಹಿತಿಯನ್ನು ತಕ್ಷಣವೇ ರವಾನಿಸಲು ಸಲಹೆ ನೀಡಿದರು. ಈ ಮಧ್ಯೆ ಸಂಬಂಧಪಟ್ಟ ಖಾತೆಗಳನ್ನು ಬ್ಲಾಕ್ ಮಾಡುವ ಸಲಹೆಗಳನ್ನು ವಿದ್ಯಾರ್ಥಿಗೆ ಪೊಲೀಸ್ ಅಧಿಕಾರಿಗಳು ನೀಡಿದರು. ಪೊಲೀಸ್ ಇಲಾಖೆಯ ಗಮನಕ್ಕೆ ತಮ್ಮ ಕೃತ್ಯದ ಬಗ್ಗೆ ಮಾಹಿತಿ ಲಭಿಸಿದೆ ಎಂಬ ಸುಳಿವು ಸಿಕ್ಕಾಕ್ಷಣ ವಿದ್ಯಾರ್ಥಿಯನ್ನು ಬೆದರಿಸುವ ಕಾರ್ಯದಿಂದ ವಿಮುಖವಾದ ತಂಡ ಬಳಸಿದ ಮೂರು ಸಂಖ್ಯೆಯನ್ನು ನಿಷ್ಕ್ರಿಯಗೊಳಿಸಿದೆ. ಅಲ್ಲದೆ ಬೆದರಿಕೆಗೆ ತುತ್ತಾದ ವಿದ್ಯಾರ್ಥಿಯನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬ್ಲಾಕ್ ಮಾಡಿದೆ. ತಮಗೆ ತಿಳಿಯದಂತೆ ವೀಡಿಯೊ ಕರೆ ಸ್ವೀಕರಿಸಿದ ಮಾತ್ರಕ್ಕೆ ತಮ್ಮ ಅಶ್ಲೀಲ ವೀಡಿಯೊವೊಂದು ಸಿದ್ಧವಾಗಿ ಅದನ್ನು ತಮ್ಮ ಮಾನಹಾನಿಗೆ ಬಳಸುವ ಬೆದರಿಕೆಯೊಡ್ಡುವ, ಆ ಮೂಲಕ ಹಣಕ್ಕಾಗಿ ಪೀಡಿಸುವ ಜಾಲಗಳು ಸಕ್ರೀಯವಾಗಿದ್ದು, ಈ ಜಾಲಕ್ಕೆ ಸಿಲುಕಿದರೂ ಭಯಪಡದೆ ಪೊಲೀಸ್ ಇಲಾಖೆಯ ಸೈಬರ್ ಕ್ರೈಂ ಸಹಾಯ ಸಂಖ್ಯೆ 1930ಕ್ಕೆ ಸಂಪರ್ಕಿಸಿ ಸಹಾಯ ಯಾಚಿಸಬಹುದೆಂದು ಪೊಲೀಸರು ತಿಳಿಸಿದ್ದಾರೆ.

ಪುತ್ತೂರು: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು

ಪುತ್ತೂರು: ರಿಕ್ಷಾವೊಂದರಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ಸಿನಾನ್‌ಗೆ ಪುತ್ತೂರಿನ ಐದನೇ ಹೆಚ್ಚುವರಿ ಸತ್ರ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ನೆಕ್ಕಿಲಾಡಿ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬಂಟ್ವಾಳ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ರಿಕ್ಷಾದಲ್ಲಿ 18 ಸಾವಿರ ರೂ. ಮೌಲ್ಯದ ನಿಷೇಧಿತ ಎಂಡಿ ಎಂಎಯ ಮಾದಕ ವಸ್ತು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ರಿಕ್ಷಾದಲ್ಲಿದ್ದ ಇಬ್ಬರು ಆರೋಪಿಗಳು ಮಾದಕ ಪದಾರ್ಥವನ್ನು ಸಿನಾನ್‌ ಎಂಬಾಂತ ನೀಡಿರುವುದಾಗಿ ಹೇಳಿಕೆ ನೀಡಿದ್ದರು. ತಲೆಮರೆಸಿಕೊಂಡಿದ್ದ ಆರೋಪಿ ಸಿನಾನ್‌ ನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿನಾನ್‌ಗೆ ಪುತ್ತೂರು ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಚಂದ್ರನ ಸ್ಥಾನ ಬದಲಾವಣೆಯಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ನಿಮಗೆ ಉತ್ತಮ ದಿನವಾಗಿದೆ. ಇಂದು ನೀವು ಹಣದ ವಿಷಯದಲ್ಲಿ ಸಮೃದ್ಧರಾಗಿದ್ದೀರಿ. ನಿಮ್ಮ ಸಾಮರ್ಥ್ಯಗಳನ್ನು ಅರ್ಥಮಾಡಿಕೊಳ್ಳಿ. ಕೆಲಸದ ಹೆಚ್ಚಳದಿಂದ ನಿಮ್ಮ ದಿನವು ಬಿಡುವಿಲ್ಲದಂತಾಗಿಸಬಹುದು. ನಿಮ್ಮ ವೃತ್ತಿಪರ ಜೀವನದಲ್ಲಿ ನಿಮ್ಮ ಭಾವನೆಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ. ಅವಮಾನವಾಗುವ ಭಯವಿರುತ್ತದೆ. ಪ್ರಯಾಣದಲ್ಲಿ ತೊಂದರೆ ಸಾಧ್ಯತೆ.

** ವೃಷಭ ರಾಶಿ :
ಇಂದು ವೃಷಭ ರಾಶಿಯವರಿಗೆ ಸಾಮಾನ್ಯ ದಿನವಾಗಿರುತ್ತದೆ. ನಿಮ್ಮ ಉತ್ಸಾಹವನ್ನು ಮುಂದುವರಿಸಲು ಮತ್ತು ನಿಮ್ಮ ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತನ್ನಿ. ನಿಮ್ಮ ವೃತ್ತಿಪರ ಕೆಲಸವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ. ಆವ್ಯಾಪಾರವು ಮಧ್ಯಮ ವೇಗದಲ್ಲಿ ಪ್ರಗತಿ ಹೊಂದುತ್ತದೆ. ಅರ್ಥಿಕವಾಗಿ, ಇಂದು ಉತ್ತಮ ಅವಕಾಶ ಬಾಗಿಲು ತಟ್ಟಬಹುದು. ಆರೋಗ್ಯದ ಕಡೆ ಗಮನ ಕೊಡಿ. ಆರೋಗ್ಯಕ್ಕೆ ಸಂಬಂಧಿಸಿದ ಸಣ್ಣಪುಟ್ಟ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

** ಮಿಥುನ ರಾಶಿ :
ಇಂದು ಮಿಥುನ ರಾಶಿಯ ಜನರಿಗೆ ರೋಲರ್ ಕೋಸ್ಟರ್ ರೈಡ್ ಎಂದು ಸಾಬೀತುಪಡಿಸಬಹುದು. ಆರ್ಥಿಕ ಪರಿಸ್ಥಿತಿ ಇಂದು ಧನಾತ್ಮಕವಾಗಿರಲಿದೆ. ಆದರೆ ಹಣದ ಬಗ್ಗೆ ಸ್ಮಾರ್ಟ್ ಆಗಿರುವುದು ಇಂದು ಬಹಳ ಮುಖ್ಯ. ಇಂದು, ವಾದಗಳಿಂದ ದೂರವಿರಿ ಮತ್ತು ನಿಮ್ಮ ಸಂಗಾತಿಗೆ ವೈಯಕ್ತಿಕ ಜಾಗವನ್ನು ನೀಡಿ. ನಿಮ್ಮ ದೇಹ ಮತ್ತು ಮನಸ್ಸು ಎರಡೂ ಸಾಮರಸ್ಯದಿಂದ ಇರುತ್ತವೆ.

** ಕರ್ಕಾಟಕ ರಾಶಿ :
ಇಂದು ಕರ್ಕ ರಾಶಿಯವರಿಗೆ ಧನಾತ್ಮಕವಾಗಿರಬಹುದು. ಹೂಡಿಕೆಯ ವಿಷಯಕ್ಕೆ ಬಂದರೆ, ಲೆಕ್ಕ ಹಾಕಿ ಅಪಾಯಗಳನ್ನು ತೆಗೆದುಕೊಳ್ಳಿ. ಇದು ನಿಮ್ಮನ್ನು ಸ್ವಲ್ಪ ಉದ್ವಿಗ್ನಗೊಳಿಸಬಹುದು. ನೆನಪಿಡಿ, ಕೆಲವೊಮ್ಮೆ ಅಪಾಯಗಳನ್ನು ತೆಗೆದುಕೊಳ್ಳುವುದು ಅವಶ್ಯಕ. ಇಂದು ಜಗತ್ತಿಗೆ ನಿಮ್ಮ ಸೃಜನಶೀಲ ಕಲ್ಪನೆಗಳು ಬೇಕಾಗುತ್ತವೆ. ಯಶಸ್ಸಿಗೆ ಹೊಸ ಮಾರ್ಗಗಳನ್ನು ಕಂಡುಕೊಳ್ಳುವುದು ಮುಖ್ಯ.

** ಸಿಂಹ ರಾಶಿ :
ಇಂದು ಸಿಂಹ ರಾಶಿಯ ಜನರಿಗೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇಂದು ನಿಮ್ಮ ಶ್ರಮವು ಫಲ ನೀಡುತ್ತದೆ ಮತ್ತು ನೀವು ಸಮೃದ್ಧಿಯನ್ನು ನೋಡುತ್ತೀರಿ. ನಿಮ್ಮ ವೃತ್ತಿಜೀವನಕ್ಕೆ ಬಂದಾಗ ನೀವು ಶಕ್ತಿ ಮತ್ತು ಸೃಜನಶೀಲತೆಯಿಂದ ತುಂಬಿರುತ್ತೀರಿ. ಸಂಬಂಧದಲ್ಲಿ ಮತ್ತೆ ಸ್ಪಾರ್ಕ್ ತರಲು, ಒಬ್ಬರಿಗೊಬ್ಬರು ಹತ್ತಿರ ಬರಲು ಪ್ರಯತ್ನಿಸಬೇಕು. ಆರೋಗ್ಯದಲ್ಲಿ ಏರುಪೇರು ಉಂಟಾಗುವುದು.

** ಕನ್ಯಾ ರಾಶಿ :
ಈ ದಿನ ಕನ್ಯಾ ರಾಶಿಯವರಿಗೆ ಅದೃಷ್ಟ ಒಲಿದು ಬರುತ್ತದೆ. ಇಂದು ಅಪಾಯಗಳನ್ನು ತೆಗೆದುಕೊಳ್ಳಲು ಹಿಂಜರಿಯದಿರಿ ಏಕೆಂದರೆ ಇದು ದೀರ್ಘಾವಧಿಯಲ್ಲಿ ಪ್ರಯೋಜನಕಾರಿಯಾಗಿದೆ. ನೀವು ಪ್ರೀತಿಸುವ ವ್ಯಕ್ತಿಯೊಂದಿಗೆ ಆಳವಾಗಿ ಸಂಪರ್ಕಿಸಲು ಇದು ಅದ್ಭುತ ದಿನವಾಗಿದೆ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಶಾಂತಿ ಮತ್ತು ವಿಶ್ರಾಂತಿ ಪಡೆಯಲು ಧ್ಯಾನ ಮಾಡಿ.

** ತುಲಾ ರಾಶಿ :
ಇಂದು ತುಲಾ ರಾಶಿಯವರು ಸ್ವಯಂ-ಪ್ರೀತಿಯತ್ತ ಗಮನ ಹರಿಸಬೇಕು. ನೀವು ಮದುವೆಯಾಗಿ ಬಹಳ ದಿನಗಳಾಗಿದ್ದರೂ, ಒಟ್ಟಿಗೆ ಸಮಯ ಕಳೆಯುವುದು ಮುಖ್ಯ. ನೀವು ದೊಡ್ಡ ಪ್ರಭಾವವನ್ನು ಮಾಡಲು ಮತ್ತು ಪ್ರಪಂಚದ ಮೇಲೆ ನಿಮ್ಮ ಗುರುತು ಬಿಡಲು ಬಯಸುತ್ತೀರಿ. ಇಂದು ಆರೋಗ್ಯದ ಕಡೆ ಗಮನ ಹರಿಸುವುದು ಅಗತ್ಯ.

** ವೃಶ್ಚಿಕ ರಾಶಿ :
ಈ ದಿನವು ನಿಮಗೆ ಅದ್ಭುತ ದಿನವಾಗಿದೆ. ಇಂದು ಹೊಸ ಮಾರ್ಗಗಳನ್ನು ಅನ್ವೇಷಿಸಲು ಸಿದ್ಧವಾಗಿರಿ. ನೀವು ಬದ್ಧತೆಯ ಸಂಬಂಧದಲ್ಲಿದ್ದರೆ ಅಥವಾ ಇನ್ನೂ ವಿಶೇಷ ವ್ಯಕ್ತಿಯನ್ನು ಹುಡುಕುತ್ತಿದ್ದರೆ, ಇಂದು ನಿರ್ಧಾರ ತೆಗೆದುಕೊಳ್ಳಲು ಸರಿಯಾದ ದಿನವಾಗಿದೆ. ಇಂದು ಮುಂದೆ ಸಾಗಲು ಮತ್ತು ನಿಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಲು ಹಿಂಜರಿಯದಿರಿ. ದಿನವು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ.

** ಧನಸ್ಸು ರಾಶಿ :
ಇಂದು ನಿಮ್ಮ ವರ್ಚಸ್ಸು ಮತ್ತು ಮೋಡಿ ಬೇರೆ ಮಟ್ಟದಲ್ಲಿರಲಿದೆ. ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಪಡೆಯಲು ನಿಮ್ಮ ಸಂಗಾತಿಯ ಸಹಾಯ ಪಡೆಯಿರಿ. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ದೊಡ್ಡ ರೀತಿಯಲ್ಲಿ ಪ್ರತಿಫಲ ನೀಡುತ್ತದೆ. ಜನಸಂದಣಿಯಿಂದ ಹೊರಗುಳಿಯಲು ಹಿಂಜರಿಯದಿರಿ. ಇಂದು ಅದೃಷ್ಟ ಹೆಚ್ಚಾಗಲಿದೆ. ಆರೋಗ್ಯ ಮೊದಲಿಗಿಂತ ಉತ್ತಮವಾಗಿರುತ್ತದೆ.

** ಮಕರ ರಾಶಿ :
ಇಂದು ನೀವು ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಇಂದು ಚಿಂತನಶೀಲವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ. ಸ್ವಲ್ಪ ಉದ್ವಿಗ್ನ ಪರಿಸ್ಥಿತಿ ಇರುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಿದಾಗ, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ನಿಮ್ಮ ಪ್ರಣಯ ಕನಸುಗಳನ್ನು ನೀವು ಸುಂದರವಾದ ವಾಸ್ತವಕ್ಕೆ ತಿರುಗಿಸಬಹುದು.

** ಕುಂಭ ರಾಶಿ :
ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವ ದಿನ. ಇಂದು ನಿಮ್ಮ ಕನಸುಗಳನ್ನು ನೇರವೇರಿಸಿಕೊಳ್ಳಲು ಉತ್ಸಾಹವನ್ನು ಮುಂದುವರಿಸುವ ದಿನವಾಗಿದೆ. ನಿಮ್ಮ ಅಂತಃಪ್ರಜ್ಞೆಯನ್ನು ನಂಬಿರಿ ಮತ್ತು ಸವಾಲುಗಳಿಗೆ ಹೆದರಬೇಡಿ. ಆರೋಗ್ಯವಾಗಿರಲು, ಜಂಕ್ ಫುಡ್ ನಿಂದ ದೂರವಿರಿ. ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲು ನೀವು ಆರ್ಥಿಕ ಸಲಹೆಗಾರರ ​​ಸಹಾಯವನ್ನು ತೆಗೆದುಕೊಳ್ಳಬೇಕಾಗಬಹುದು.

** ಮೀನ ರಾಶಿ :
ಮೀನ ರಾಶಿಯ ಜನರು ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬಹುದು. ಇಂದು ನೀವು ಸಕಾರಾತ್ಮಕ ಭಾವನೆಗಳಿಂದ ತುಂಬಿರುತ್ತೀರಿ. ಇಂದು ನಿಮ್ಮ ಪ್ರೀತಿಯ ಜೀವನದಲ್ಲಿ ಉತ್ಸಾಹದ ದಿನವಾಗಿದೆ. ಹೊಸ ಸವಾಲುಗಳನ್ನು ಎದುರಿಸಲು ಹಿಂಜರಿಯದಿರಿ. ನಿಮ್ಮ ಉತ್ಸಾಹದಲ್ಲಿ ನಿಮ್ಮ ಖರ್ಚು ನಿಯಂತ್ರಣಕ್ಕೆ ಬರದಂತೆ ಎಚ್ಚರಿಕೆ ವಹಿಸಿ. ನಿಮ್ಮ ನೈಸರ್ಗಿಕ ಮೋಡಿ ಮತ್ತು ಸಂವಹನ ಕೌಶಲ್ಯಗಳು ಇಂದು ಸೂಕ್ತವಾಗಿ ಬರುತ್ತವೆ.

Categories
ಚಿಕ್ಕಮಗಳೂರು

ಕಾಫಿ ನಾಡಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ

ಕಾಫಿ ನಾಡಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ
– ವಕ್ಫ್ ಕಾಯ್ದೆ ನಿಯಮಗಳನ್ನು ಬದಲಾವಣೆಗೆ ಪಟ್ಟು
– ಚಿಕ್ಕಮಗಳೂರು, ಶೃಂಗೇರಿ, ಎನ್.ಆರ್ ಪುರದಲ್ಲಿ ಪ್ರತಿಭಟನೆ

NAMMUR EXPRESS NEWS
ಶೃಂಗೇರಿ: ವಕ್ಫ್ ಕಾಯ್ದೆ ನಿಯಮಗಳನ್ನು ಬದಲಾವಣೆ ಮಾಡಬೇಕು ಎಂದು ಅಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲಾ ತಾಲೂಕಲ್ಲಿ ಬಿಜೆಪಿ ಪ್ರತಿಭಟನೆ ಮಾಡಿತು. ಉತಾರೆಗಳಲ್ಲಿ ವಕ್ಫ್ ಹೆಸರನ್ನು ತೆಗೆದು ರೈತರ ಹೆಸರನ್ನು ಹಾಕಬೇಕು, ಉತಾರೆಯ ಯಾವುದೇ ಕಾಲಂ ನಲ್ಲಿ ವಕ್ಫ್ ಹೆಸರು ಇರಬಾರದು, ಆಸ್ತಿಗಳಿಗೆ ಸಂಬಂಧಿಸಿದ ವ್ಯಾಜ್ಯಗಳು ನ್ಯಾಯಾಲಯದಲ್ಲಿ ಮಾತ್ರ ವಿಚಾರಣೆಯಾಗಬೇಕು.1974 ರ ವಕ್ಫ್ ಗೆಜೆಟ್ ನೋಟಿಫಿಕೇಶನ್ ಅನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ರದ್ದುಗೊಳಿಸಬೇಕು.ಕೇಂದ್ರ ಸಂಸ್ಕೃತಿ ಇಲಾಖೆ ಹಾಗೂ ಪುರಾತತ್ವ ಇಲಾಖೆಯ ಒಡೆತನ/ನಿರ್ವಹಣೆಯಲ್ಲಿರುವ ಸ್ಮಾರಕಗಳ ದಾಖಲಾತಿ/ಪಹಣಿಯಲ್ಲಿ ವಕ್ಫ್ ಹೆಸರು ಇರಬಾರದು. ಮಠಗಳಿಗೆ, ದೇವಸ್ಥಾನಗಳಿಗೆ, ಶಾಲಾ ಕಾಲೇಜುಗಳಿಗೆ, ಸರ್ಕಾರಿ ಕಚೇರಿಗಳಿಗೆ ನೀಡಿರುವ ನೋಟೀಸನ್ನು ಸಹ ವಾಪಾಸ್ ಪಡೆಯಬೇಕು ಎಂದು ಅಗ್ರಹಿಸಲಾಯಿತು.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ರಾಮೇಶ್ವರ ದೇಗುಲದಲ್ಲಿ ದೀಪೋತ್ಸವ

ತೀರ್ಥಹಳ್ಳಿ ರಾಮೇಶ್ವರ ದೇಗುಲದಲ್ಲಿ ದೀಪೋತ್ಸವ
– ತೀರ್ಥಹಳ್ಳಿ ಪಟ್ಟಣ, ತಾಲೂಕಿನಲ್ಲಿ ದೀಪೋತ್ಸವ ಸಂಭ್ರಮ
– ಕಾರ್ತಿಕ ಮಾಸದ ದೀಪೋತ್ಸವಕ್ಕೆ ಎಲ್ಲೆಡೆ ಸಜ್ಜು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ನ.4ರಂದು ಕಾರ್ತೀಕ ಮಾಸ ಆರಂಭವಾಗಿದ್ದು, ಪ್ರತಿ ದಿನ ಸಂಜೆ ದೀಪೋತ್ಸವ ನೆರವೇರಲಿದೆ.
ಶ್ರೀರಾಮೇಶ್ವರ ದೇವರಿಗೆ ಮಹಾಮಂಗಳಾರತಿ ಮತ್ತು ವಿವಿಧ ಪೂಜಾ ವಿಧಿವಿಧಾನಗಳು ನೆರವೇರಲಿದ್ದು ಹಾಗೂ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ನಡೆಯಲಿದೆ.ಪಟ್ಟಣದ ಮಾರಿಕಾಂಬಾ ದೇವಸ್ಥಾನ, ಕಲ್ಲಾರೆ ವಿನಾಯಕ ದೇವಸ್ಥಾನ, ಜಿ.ಎಸ್.ಬಿ ತಿರುಮಲ ವೆಂಕಟರಮಣ ದೇವಸ್ಥಾನ, ಆಂಜನೇಯ ದೇವಸ್ಥಾನ ಎಲ್ಲೆಡೆ ವಿಶೇಷ ಪೂಜೆ, ದೀಪೋತ್ಸವ ಶುರುವಾಗಿದೆ.
ತೀರ್ಥಹಳ್ಳಿ ತಾಲೂಕಿನಲ್ಲಿ ಪ್ರಮುಖ ದೇವಾಲಯಗಳಲ್ಲಿ ಕಾರ್ತೀಕ ದೀಪೋತ್ಸವ ನಡೆಯಲಿದೆ.

Categories
ರಾಜ್ಯ

ಕಾರ್ತಿಕ ಮಾಸ ಶುರು: ದೇವಸ್ಥಾನಗಳಲ್ಲಿ ದೀಪೋತ್ಸವ

ಕಾರ್ತಿಕ ಮಾಸ ಶುರು: ದೇವಸ್ಥಾನಗಳಲ್ಲಿ ದೀಪೋತ್ಸವ
– ಕಾರ್ತಿಕ ಮಾಸದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಆಚರಣೆ ಹೇಗೆ?
– ದೀಪೋತ್ಸವದ ವಿಶೇಷತೆ ಏನು?

NAMMUR EXPRESS NEWS
ಕಾರ್ತಿಕ ಮಾಸದ ಪ್ರಯುಕ್ತ ದೇವಸ್ಥಾನಗಳಲ್ಲಿ ನ.4ರಂದು ಕಾರ್ತೀಕ ಮಾಸ ಆರಂಭವಾಗಿದ್ದು, ಪ್ರತಿ ದಿನ ಸಂಜೆ ದೀಪೋತ್ಸವ ನೆರವೇರಲಿದೆ. ದೇವರಿಗೆ ಮಹಾಮಂಗಳಾರತಿ ಮತ್ತು ವಿವಿಧ ಪೂಜಾ ವಿಧಿವಿಧಾನಗಳು ನೆರವೇರಲಿದ್ದು ಹಾಗೂ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ನಡೆಯಲಿದೆ. ದೀಪಾವಳಿಯ ನಂತರ ಕಾರ್ತಿಕ ಮಾಸ, ಸೂರ್ಯನು ದ್ವಾದಶ ರಾಶಿಗಳಲ್ಲಿ ಸಂಚರಿಸುತ್ತಾನೆ. ಪ್ರತಿಯೊಂದು ರಾಶಿಯಲ್ಲಿ ಸಂಚರಿಸುವಾಗ ತನ್ನದೇ ಆದ ಪ್ರಭಾವವನ್ನು ಪ್ರತ್ಯೇಕವಾಗಿ ಬೀರುತ್ತಾನೆ.
ಕಾರ್ತಿಕ ಪೌರ್ಣಮಿಯಂದು ಚಂದ್ರನ ಬೆಳಕು ಎಂದಿಗಿಂತಲೂ ಪ್ರಕಾಶಮಾನವಾಗಿರುತ್ತದೆ. ಚಂದ್ರನು ಭೂಮಿಯ ಸಮೀಪದಲ್ಲಿರುತ್ತಾನೆ. ಹಾಗಾಗಿ ಎಂದಿಗಿಂತಲೂ ಶೇ. 7ರಷ್ಟು ಹೆಚ್ಚು ಸೂರ್ಯನ ಬೆಳಕನ್ನು ಚಂದ್ರನು ಪ್ರತಿಫಲಿಸುತ್ತಾನೆ.

ಕಾರ್ತಿಕ ಮಾಸದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಆಚರಣೆ ಹೇಗೆ?

ಕಾರ್ತಿಕ ಮಾಸದಲ್ಲಿ ಸಾಧನೆಯ ಮಾರ್ಗದತ್ತ ಸಾಗಲು ನಮ್ಮ ಋಷಿ ಮುನಿಗಳು ಕೆಲವೊಂದು ಧಾರ್ಮಿಕ ವಿಧಿ ವಿಧಾನಗಳನ್ನು ಉಲ್ಲೇಖಿಸಿದ್ದಾರೆ. ಈ ಬಗ್ಗೆ ವಸಿಷ್ಠ ಋಷಿಗಳು ಕೆಲವೊಂದು ವಿಧಾನಗಳನ್ನು ಸೂಚಿಸಿದ್ದಾರೆ. ಕಾರ್ತಿಕ ಮಾಸದಲ್ಲಿ ಶಿವನನ್ನು ಆರಾಧಿಸುವುದರಿಂದ ಹೆಚ್ಚು ಫಲಪ್ರದವಾಗುತ್ತದೆ. ಕಾರ್ತಿಕ ಮಾಸದಲ್ಲಿ ಪವಿತ್ರ ಸ್ನಾನ, ಪ್ರತಿನಿತ್ಯ ಮೂರು ಬಾರಿ ಸ್ನಾನ ಮಾಡುವ ಸಂಪ್ರದಾಯ ಕೆಲವರಲ್ಲಿದೆ. ಸ್ನಾನ ಮಾಡುವುದರಿಂದ, ಭೌತಿಕವಾಗಿ ದೇಹದ ಕಲ್ಮಷಗಳನ್ನು ತೊಳೆದುಕೊಳ್ಳಬಹುದು. ಅದರೊಂದಿಗೆ ಮನಸ್ಸಿನ ಕಲ್ಮಷಗಳನ್ನು ಕಳೆದುಕೊಳ್ಳುವುದರೊಂದಿಗೆ, ನಮ್ಮ ಭಾವನೆಗಳನ್ನು, ಮನಸ್ಸಿನ ಕೋಪ, ತಾಪವನ್ನು ನಿಯಂತ್ರಿಸಿಕೊಳ್ಳಬಹುದು ಎಂಬ ನಂಬಿಕೆಯಿದೆ. ನದಿ ತೀರಗಳಲ್ಲಿ ಮಾಡುವ ಜಲ ಸ್ನಾನವು ಜಲ ಚಿಕಿತ್ಸೆಗೆ ಪೂರಕವಾಗಿದೆ. ಪವಿತ್ರ ಸ್ನಾನ ಮಾಡುವುದರಿಂದ ದೇಹ ಹಾಗೂ ಮನಸು ಎರಡು ಶುದ್ಧವಾಗುತ್ತದೆ.
ದೀಪಗಳನ್ನು ಮನೆಯ ಅಂಗಳದಲ್ಲಿ ಮತ್ತು ಮನೆಯ ಸುತ್ತಮುತ್ತ ಬೆಳಗಬೇಕೆಂಬ ನಿಯಮವಿದೆ. ಶಿವ ಮತ್ತು ವಿಷ್ಣು ಮಂದಿರಗಳಲ್ಲಿ ಸೂರ್ಯೋದಯಕ್ಕೆ ಮುನ್ನ ಮತ್ತು ಸೂರ್ಯೋದಯಕ್ಕೆ ನಂತರ ಭಗವಂತನ ಪ್ರೀತ್ಯರ್ಥವಾಗಿ ಜ್ಯೋತಿಯನ್ನು ಬೆಳಗುತ್ತಾರೆ.

ತುಪ್ಪದ ದೀಪವನ್ನು ಬೆಳಗುವುದರಿಂದ ಅಸುರೀ ಶಕ್ತಿಗಳು ನಾಶವಾಗುತ್ತವೆ. ಕ್ರಿಮಿ, ಕೀಟಗಳಿಂದ ಪರಿಸರ ಶುದ್ಧವಾಗುತ್ತದೆ. ಅದರೊಂದಿಗೆ ಮನಸ್ಸಿನ ಅಜ್ಞಾನವು ಕಳೆಯುತ್ತದೆ. ಹೀಗೆ ಮನೆಯಲ್ಲಿ ದೀಪ ಬೆಳಗುವುದರಿಂದ. ಐಶ್ವರ್ಯ, ಸಂಪತ್ತು, ಆರೋಗ್ಯ ಸ್ಥಿರವಾಗುತ್ತದೆ ಎಂಬ ನಂಬಿಕೆಯಿದೆ.

ಸೋಮವಾರ ಶಿವನಿಗೆ ಪ್ರಿಯವಾದ ವಾರ. ಸೋಮವಾರದ ಅಧಿಪತಿ ಚಂದ್ರ. ಚಂದ್ರ ಮನೋಕಾರರ ಅಂದರೆ ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸುವವ. ಯಾರು ತಮ್ಮ ಮನಸ್ಸನನ್ನು ನಿಗ್ರಹದಲ್ಲಿ ಇಟ್ಟುಕೊಳ್ಳುತ್ತಾರೋ ಅಂತಹ ವ್ಯಕ್ತಿಗಳು ಉನ್ನತ ಸ್ಥಾನಕ್ಕೆ ಏರುತ್ತಾರೆ. ಅದರೊಂದಿಗೆ ತಮ್ಮ ವ್ಯಕ್ತಿತ್ವ ಬೆಳವಣಿಗೆಗೂ ಪೂರಕವಾಗುತ್ತಾರೆ.
ಸೋಮವಾರದಂದು ಪ್ರದೋಷ ವ್ರತವನ್ನು ಆಚರಿಸುತ್ತಾರೋ, ಮನೋಕಾರಕ ಚಂದ್ರನನ್ನೇ ತನ್ನ ಶಿರದಲ್ಲಿ ಧಾರಣೆ ಮಾಡಿಕೊಂಡಿರುವ ಶಿವನನ್ನು ಕುರಿತು ಧ್ಯಾನ ಮಾಡುತ್ತಾರೋ, ಅವರು ಅತ್ಯುತ್ತಮ ಜ್ಞಾನವಂತರಾಗುತ್ತಾರೆ.