Categories
ರಾಜ್ಯ

ರಾಜ್ಯದಲ್ಲಿ ಪಟಾಕಿ ಸಿಡಿತಕ್ಕೆ ಮೊದಲ ಬಲಿ

ರಾಜ್ಯದಲ್ಲಿ ಪಟಾಕಿ ಸಿಡಿತಕ್ಕೆ ಮೊದಲ ಬಲಿ
– ಬೆಂಗಳೂರಲ್ಲಿ ಯುವಕ ಸಾವು, 6 ಜನರ ಬಂಧನ!-
– ಮತ್ತೆ ವಾಯುಭಾರ ಕುಸಿತ
– ಕರ್ನಾಟಕದ ಮುಂದಿನ 4 ದಿನದ ಹವಾಮಾನ ಮುನ್ಸೂಚನೆ
– ಹಾಸನಾಂಬೆ ದೇವಾಲಯ ಹುಂಡಿ ಎಣಿಕೆ

NAMMUR EXPRESS NEWS
ಬೆಂಗಳೂರು : ಬೆಂಗಳೂರಿನಲ್ಲಿ ದೀಪಾವಳಿಯ ದಿನ ಪಟಾಕಿ ಸಿಡಿದು ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೋಣನಕುಂಟೆ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ದೀಪಾವಳಿ ಹಬ್ಬದಂದು ಪಟಾಕಿ ಸಿಡಿದು ಯುವಕ ಗಂಭೀರವಾಗಿ ಗಾಯಗೊಂಡಿದ್ದ, ಬಳಿಕ ಆಸ್ಪತ್ರೆಗೆ ದಾಖಲಾದಗ ನವೆಂಬರ್ 2 ರಂದು ಯುವಕ ಸಾವನ್ನಪ್ಪಿದ್ದಾನೆ. ದೀಪಾವಳಿ ಹಬ್ಬದಂದು ರಾತ್ರಿ ವೇಳೆ ಪಟಾಕಿ ಹೊಡೆದಿದ್ದ ಶಬರೀಶ್ ಹಾಗೂ ಸ್ನೇಹಿತರು. ಡಬ್ಬಿಗೆ ಪಟಾಕಿ ಅಂಟಿಸಿ ಅದರ ಮೇಲೆ ಕೂರಲು ಚಾಲೆಂಜ್ ಮಾಡಿದ್ದರು. ಕುಡಿದ ಮತ್ತಿನಲ್ಲಿ ಶಬರೀಶ್ ಪಟಾಕಿಯ ಡಬ್ಬ ಇಟ್ಟು ಕುಳಿತಿದ್ದ. ಪಟಾಕಿ ಸಿಡಿದ ರಭಸಕ್ಕೆ ಶಬರೀಶ್ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ನವೆಂಬರ್ 2ರಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಶಬರೀಶ್ ಸಾವನ್ನಪ್ಪಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ 6 ಜನರನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

ಮತ್ತೆ ವಾಯುಭಾರ ಕುಸಿತ
– ಕರ್ನಾಟಕದ ಮುಂದಿನ 4 ದಿನದ ಹವಾಮಾನ ಮುನ್ಸೂಚನೆ

ಬೆಂಗಳೂರು : ದೇಶದಲ್ಲಿ ಕೆಲವು ದಿನಗಳ ಹಿಂದಷ್ಟೇ ‘ಡಾನಾ’ ಚಂಡಮಾರುತ ಅಬ್ಬರಿಸಿ ಕೊನೆಗೊಂಡಿದೆ. ಇದರ ಬೆನ್ನಲ್ಲೆ ಇದೀಗ ಮತ್ತೊಂದು ಚಂಡಮಾರುತ ಪರಿಚಲನೆ ಸಮುದ್ರ ಮಟ್ಟದಲ್ಲಿ ಸೃಷ್ಟಿಯಾಗಿದೆ. ಇದು ಏನೇನು ಅವಾಂತರ ಸೃಷ್ಟಿ ಮಾಡಲಿದೆಯೋ ಎಂದು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಒಡಿಶಾ ರಾಜ್ಯದ ಜನರಲ್ಲಿ ಆತಂಕ ಶುರುವಾಗಿದೆ. ಹವಾಮಾನ ಇಲಾಖೆ ಕರ್ನಾಟಕಕ್ಕೆ ಮುಂದಿನ ನಾಲ್ಕು ದಿನ ಯಾವ ಮುನ್ಸೂಚನೆ ಕೊಟ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಹವಾಮಾನ ಇಲಾಖೆ ಪ್ರಕಾರ, ದಕ್ಷಿಣ ತಮಿಳುನಾಡು ಕರಾವಳಿ ಮತ್ತು ಪಕ್ಕದ ಶ್ರೀಲಂಕಾದ ಮೇಲೆ ಚಂಡಮಾರುತದ ಪರಿಚಲನೆಯು ಈಗ ದಕ್ಷಿಣ ಕೇರಳ ಕರಾವಳಿಯ ಆಗ್ನೇಯ ಅರೇಬಿಯನ್ ಸಮುದ್ರದ ಮೇಲೆ ಇದೆ. ಈ ಪರಿಚಲನೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿಮೀ ವರೆಗೆ ವಿಸ್ತರಣೆಗೊಂಡಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ಮುಖ್ಯಸ್ತರು ಮತ್ತು ವಿಜ್ಞಾನಿ ಡಾ.ಎನ್.ಪುವಿಯರಸನ್ ಅವರು ತಿಳಿಸಿದ್ದಾರೆ. ದಕ್ಷಿಣ ತಮಿಳುನಾಡು ಕರಾವಳಿಯಲ್ಲಿ ಮೇಲಿನ ಚಂಡಮಾರುತದ ಪರಿಚಲನೆಯಿಂದ ಟ್ರಫ್ ಮತ್ತು ಪಕ್ಕದ ಶ್ರೀಲಂಕಾದಿಂದ ಕರಾವಳಿ ಕರ್ನಾಟಕಕ್ಕೆ 0.9 ಕಿಮೀ ಎತ್ತರದಲ್ಲಿ ಸಮುದ್ರ ಮಟ್ಟದಿಂದ ಕಡಿಮೆ ಇದೆ. ಇದರಿಂದ ಕೆಲವೆಡೆ ಸಾಧಾರದಿಂದ ಭಾರೀ ಮಳೆ ಬರಬಹುದು. ಕೆಲವೆಡೆ ಶುಷ್ಕವಾತಾವರಣ ಮುಂದುವರಿಯಬಹದು ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಗಾಗ ಮಬ್ಬು ವಾತಾವರಣ ಕಂಡು ಬಂದರೂ ಸಹಿತ ದಿನವಿಡೀ ಬಿಸಿಲಿನ ವಾತಾವರಣ ಕಂಡು ಬರಲಿದೆ. ಒಂದರಡು ಕಡೆಗಳಲ್ಲಿ ತುಂತುರು ಮಳೆ ಆಗಬಹುದು ಎನ್ನಲಾಗಿದೆ. ರಾಜ್ಯದಲ್ಲಿ ಮುಂದಿನ ನವೆಂಬರ್ 7ರವರೆಗೆ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಮತ್ತು ದಕ್ಷಿಣ ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇದರ ಹೊರತು ಎಲ್ಲಿಯೂ ಗಂಭೀರ ಸ್ವರೂಪದ ಲಕ್ಷಣಗಳು ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಎರಡು ಮೂರು ದಿನಗಳ ಹಿಂದಷ್ಟೇ ತಡರಾತ್ರಿ ಭರ್ಜರಿ ಮಳೆ ಸುರಿದಿದೆ. ಮೆಕ್ಕೆಜೋಳ ಸೇರಿದಂತೆ ಕೊಯ್ಲಿಗೆ ಬಂದ ಮುಂಗಾರು ಬೆಳೆ ಕಟಾವಿಗೆ ಮಳೆ ತೊಂದರೆ ನೀಡುತ್ತಿದೆ. ಹೊಲದಲ್ಲಿ ಕಾಲಿಡದಂತೆ ಸ್ಥಿತಿ ಇದೆ. ಇದೀಗ ಮುಂದಿನ ನವೆಂಬರ್ 7ರವರೆಗೆ ಯಾವುದೇ ಮಳೆ ಅಬ್ಬರ, ಆರ್ಭಟ ಕಂಡು ಬರುವುದಿಲ್ಲ.

– ಹಾಸನಾಂಬೆ ದೇವಾಲಯ ಹುಂಡಿ ಎಣಿಕೆ

ನಿನ್ನೆಯಷ್ಟೇ ಹಾಸನಾಂಬೆ ದೇವಸ್ಥಾನದ ಗರ್ಭ ಗುಡಿಯ ಬಾಗಿಲನ್ನು ಶಾಸ್ತೋಕ್ತವಾಗಿ ಮುಚ್ಚಲಾಗಿದ್ದು, ಇಂದು ದೇವಾಲಯದ ಹುಂಡಿ ಎಣಿಕೆ ಕಾರ್ಯ ಆರಂಭವಾಗಿದೆ. ಹಾಸನಾಂಬೆ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಸಮ್ಮುಖದಲ್ಲಿ 500 ಕ್ಕೂ ಹೆಚ್ಚು ಸಿಬ್ಬಂದಿಗಳಿಂದ ಹುಂಡಿ ಎಣಿಕೆ ಕಾರ್ಯ ನಡೆಸುತ್ತಿದ್ದಾರೆ. ಇನ್ನು ಸಿಬ್ಬಂದಿ ಜೊತೆಗೆ ಹುಂಡಿ ಎಣಿಕೆ ಕಾರ್ಯದಲ್ಲಿ ಬ್ಯಾಂಕ್‌ನ ಸಿಬ್ಬಂದಿ ಕೂಡ ಭಾಗಿಯಾಗಿದ್ದಾರೆ. ಈ ವರ್ಷ ಅಕ್ಟೋಬರ್ 24 ರಿಂದ ನವೆಂಬರ್ 3 ರವರೆಗೆ ನಡೆದಿದ್ದ ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ ವಿಶೇಷ ದರ್ಶನದ ಟಿಕೆಟ್ ಹಾಗೂ ಲಾಡು ಮಾರಾಟದಿಂದ ಕೋಟಿ ಕೋಟಿ ಆದಾಯ ಬಂದಿದೆ. ಹಾಸನಾಂಬೆ ದೇವಾಲಯದಲ್ಲಿ ವಿಶೇಷ ದರ್ಶನದ ಟಿಕೆಟ್ ಹಾಗೂ ಲಾಡು ಮಾರಾಟದಿಂದ 9 ಕೋಟಿ 67 ಲಕ್ಷದ 27 ಸಾವಿರದ 180 ರೂಪಾಯಿ ದಾಖಲೆಯ ಆದಾಯ ಸಂಗ್ರಹವಾಗಿದೆ. ಸದ್ಯ ಇದೀಗ ನಡೆಯುತ್ತಿರುವ ಹುಂಡಿ ಎಣಿಕೆ ಕಾರ್ಯ ಹಾಸನಾಂಬೆಯ ಇತಿಹಾಸದಲ್ಲಿಯೇ ದಾಖಲೆ ಹಣ ಸಂಗ್ರಹವಾಗುವ ಸಾಧ್ಯತೆಗಳಿವೆ.

Categories
ತೀರ್ಥಹಳ್ಳಿ

ವಕ್ಫ್ ಕಾಯ್ದೆ ವಿರುದ್ಧ ತೀರ್ಥಹಳ್ಳಿಯಲ್ಲಿ ಬಿಜೆಪಿ ಬೃಹತ್ ಹೋರಾಟ

ವಕ್ಫ್ ಕಾಯ್ದೆ ವಿರುದ್ಧ ತೀರ್ಥಹಳ್ಳಿಯಲ್ಲಿ ಬಿಜೆಪಿ ಬೃಹತ್ ಹೋರಾಟ
– ಶಾಸಕ ಆರಗ ಜ್ಞಾನೇಂದ್ರ ಸೇರಿ ಪ್ರಮುಖರು ಹಾಜರ್
– ರಾಜ್ಯ ಸರ್ಕಾರದ ವಿರುದ್ಧ ಆರಗ ಕೆಂಡಾಮಂಡಲ

NAMMUR EXPRESS NEWS
ತೀರ್ಥಹಳ್ಳಿ: ವಕ್ಫ್ ಕಾಯ್ದೆ ರದ್ದತಿಗೆ ಆಗ್ರಹಿಸಿ ಅ. 4ರಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪ ಸರ್ಕಲ್ ಬಿಜೆಪಿ ಕಚೇರಿಯಿಂದ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಬೆಳ್ಳಿಗೆ 11-30 ತಾಲ್ಲೂಕು ಕಚೇರಿಯ ಎದುರು ಪ್ರತಿಭಟನೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಗೃಹ ಸಚಿವರು, ಶಾಸಕರು ಆದ ಆರಗ ಜ್ಞಾನೇಂದ್ರ ಇವರು ಎಲ್ಲರೂ ವಿಶೇಷವಾದ ದೀಪಾವಳಿ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ತೀರ್ಥಹಳ್ಳಿ ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಿರುವುದು ವಿಪರ್ಯಾಸವೇ ಸರಿ. ವಕ್ಫ್ ಕಾಯ್ದೆ ವಿರುದ್ಧ ಬಹಳಷ್ಟು ಚರ್ಚೆ ನಡೆಯುತ್ತಿದ್ದು, ಇದು ಸಂವಿಧಾನವನ್ನು ಮೀರುವ ಅಧಿಕಾರವನ್ನು ಪಡೆಯುತ್ತಿದೆ. ಕಾಂಗ್ರೆಸ್ ಅಧಿಕಾರದಿಂದ ಈ ದೇಶ ಬಹಳ ದೊಡ್ಡ ಮಟ್ಟದಲ್ಲಿ ದಂಡ ಕಟ್ಟಬೇಕಾದ ಪರಿಸ್ಥಿತಿ ಒದಗಿ ಬಂದಿದೆ. ಬಿಜಾಪುರ ಜಿಲ್ಲೆ ಮಾತ್ರವಲ್ಲದೆ ಮುಕ್ಕಾಲು ಭಾಗ ಜಿಲ್ಲೆಗಳು ವಕ್ಫ್ ಕಾಯ್ದೆ ಸೇರ್ಪಡೆಯಾಗಿದೆ. ಇದರೊಂದಿಗೆ ಶಿವಮೊಗ್ಗ ಜಿಲ್ಲೆಯೂ ಸೇರಿದೆ..
ನಾಚಿಕೆ ಇಲ್ಲದ ಕರ್ನಾಟಕ ಸರಕಾರ ಈ ಬಗ್ಗೆ ಯಾವುದೇ ಪ್ರಶ್ನೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ಸರಕಾರಿ ಶಾಲೆ ಆಸ್ಪತ್ರೆ ಎಲ್ಲವೂ ಬೀದಿಗೆ ಬಂದಿದ್ದರೂ ಪ್ರಶ್ನಿಸುವವರಿಲ್ಲ , ಸಂವಿಧಾನಕ್ಕೆ ಅವಮಾನವಾಗುತ್ತಿದೆ ಎಂದು ಬೊಬ್ಬೆ ಹಾಕುವ ಜನ ಪ್ರತಿಯೊಂದನ್ನು ಪ್ರಶ್ನಿಸುವ ಸರ್ಕಾರ ಸಂವಿಧಾನದ ವಿರುದ್ಧ ಇರುವ ಕಾಯಿದೆ ಖಂಡಿಸಲು ಮೂಕರಾಗಿದ್ದಾರೆಯೇ? ಎಂದು ಪ್ರಶ್ನಿಸಿದರು. ಬಿಜೆಪಿ ಮಂಡಲದ ಅಧ್ಯಕ್ಷ ನವೀನ್ ಹೆದ್ದೂರ್, ಹಿರಿಯ ನಾಯಕ ನಾಗರಾಜ್ ಶೆಟ್ಟಿ, ಕುಕ್ಕೆ ಪ್ರಶಾಂತ್, ರಕ್ಷಿತ್ ಮೇಗರವಳ್ಳಿ, ಸೊಪ್ಪುಗುಡ್ಡೆ ರಾಘವೇಂದ್ರ, ಸಂತೋಷ್ ದೇವಾಡಿಗ, ಬೇಗುವಳ್ಳಿ ಕವಿರಾಜ್, ಸಂದೇಶ್ ಜವಳಿ, ಕಾಸರವಳ್ಳಿ ಶ್ರೀನಿವಾಸ್, ವಿಧಾತ ಅನಿಲ, ಭಾರತಿ ಸುರೇಶ್, ಬೆಂಗಳೂರು ಶಕ್ತಿಕೇಂದ್ರದ ಅಧ್ಯಕ್ಷ ಅರುಣ್ ಶೆಟ್ಟಿ, ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Categories
ಉಡುಪಿ

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ
– ನ.5 ಬೆಳಿಗ್ಗೆ 10:00ಕ್ಕೆ ಬಂಡಿಮಠ ಬಸ್ ನಿಲ್ದಾಣದಲ್ಲಿ ಹೋರಾಟ
– ಜನ ವಿರೋಧಿ ನೀತಿಗಳನ್ನು ಖಂಡಿಸುವ ಸಲುವಾಗಿ ಪ್ರತಿಭಟನೆ

NAMMUR EXPRESS NEWS
ಕಾರ್ಕಳ: ಬಿಜೆಪಿ ಕಾರ್ಕಳ ಮಂಡಲ ವತಿಯಿಂದ ರೈತರ, ದಲಿತರ, ಮಠ ದೇವಸ್ಥಾನಗಳ ಆಸ್ತಿ ಕಬಳಿಕೆ ಮಾಡುತ್ತಿರುವ ವಕ್ಸ್‌ಬೋರ್ಡ್‌ನ ಲ್ಯಾಂಡ್ ಜಿಹಾದ್ ಖಂಡಿಸಿ ಸಿದ್ದರಾಮಯ್ಯ ನೇತೃತ್ವದ ರೈತ ವಿರೋಧಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ 05 ನವೆಂಬರ್ 2024, ಮಂಗಳವಾರ ಬೆಳಿಗ್ಗೆ 10:00ಕ್ಕೆ ಬಂಡಿಮಠ ಬಸ್ ನಿಲ್ದಾಣ, ಕಾರ್ಕಳದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರದ ಮತೀಯ ಓಲೈಕೆ, ಜನ ವಿರೋಧಿ ನೀತಿಗಳನ್ನು ಖಂಡಿಸುವ ಸಲುವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಲಾಗಿದೆ. ಕ್ಷೇತ್ರದ ಶಾಸಕರು ಸೇರಿದಂತೆ ಮುಖಂಡರು, ಪ್ರಮುಖರು, ಕಾರ್ಯಕರ್ತರು ಭಾಗಿಯಾಗಲಿದ್ದಾರೆ.

Categories
ತೀರ್ಥಹಳ್ಳಿ

ಹಿಲಿಕೆರೆ ಶಾಲೆಯಲ್ಲಿ ಪ್ರತಿಭಾ ಕಾರಂಜಿ, ಕನ್ನಡ ನುಡಿ ಜಾತ್ರೆ

ಹಿಲಿಕೆರೆ ಶಾಲೆಯಲ್ಲಿ ಪ್ರತಿಭಾ ಕಾರಂಜಿ, ಕನ್ನಡ ನುಡಿ ಜಾತ್ರೆ
– ಸರ್ಕಾರಿ ಶಾಲೆಯ ವಾಟಗಾರು ಬಣ್ಣಗಳಿಂದ ಸಿಂಗಾರ
– ನ.6 ವಿಶೇಷ ಕಾರ್ಯಕ್ರಮ: ಸರ್ವರಿಗೂ ಸ್ವಾಗತ

NAMMUR EXPRESS NEWS
ತೀರ್ಥಹಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾಟಗಾರು, ತೀರ್ಥಹಳ್ಳಿ ಈ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಮತ್ತು ಕನ್ನಡ ನುಡಿ ಜಾತ್ರೆ ಕಾರ್ಯಕ್ರಮಕ್ಕೆ ಸಜ್ಜುಗೊಂಡಿದೆ. ಕಾರ್ಯಕ್ರಮದಲ್ಲಿ ಸ್ಥಳೀಯ ದಾನಿಗಳು ಹಿರಿಯ ವಿದ್ಯಾರ್ಥಿ ಮಿತ್ರರ ಕೊಡುಗೆಗಳ ಅನಾವರಣ ಕೂಡ ನೆರವೇರುತ್ತದೆ. ಈಗಾಗಲೇ ಶಾಲೆಯನ್ನು ಅತ್ಯಂತ ಸುಂದರವಾಗಿ ಬಣ್ಣ ಹಾಗೂ ಸಿಂಗಾರ ಮಾಡಲಾಗಿದೆ. ಚಿನ್ನರ ಕಲರವ, ಕನ್ನಡದ ತೇರು, ಕನ್ನಡ ನುಡಿ ಜಾತ್ರೆ, ಮಹಾದ್ವಾರಗಳು,ಪ್ರದರ್ಶಿನಿ, ಸ್ತಬ್ಧ ಚಿತ್ರಗಳು, ಕಾಮಗಾರಿಗಳ ಲೋಕಾರ್ಪಣೆ, ಕಲಾಮೇಳಗಳು, ಮಕ್ಕಳ ವೇಷಭೂಷಣ, ದಾನಿಗಳಿಗೆ ಸನ್ಮಾನ, ಸಾಂಸ್ಕೃತಿಕ ರಸ ಸಂಜೆ, ವೈವಿಧ್ಯಮಯ ಕೊಡುಗೆ, ನೆನಪಿನ ಕಾಣಿಕೆಗಳು ನೀಡಿಕೆ ಕಾರ್ಯಕ್ರಮ ನೆರವೇರಲಿದೆ.

ದಿನವಿಡೀ ಕಾರ್ಯಕ್ರಮಕ್ಕೆ ಸಿದ್ಧತೆ

ಬೆಳಗ್ಗೆ 9ಕ್ಕೆ ಜಾನಪದ ಮೇಳ ದೇವಂಗಿ ಮಾನಪ್ಪ ವೃತ್ತದಿಂದ ರಾಷ್ಟ್ರಕವಿ ಕುವೆಂಪು ಮಹಾದ್ವಾರದ ಮೂಲಕ ಸಾಗಿ ಹಿಲಿಕೆರೆ ಅಂಟಿಗೆ ಪಂಟಿಗೆ ಸಭಾಭವನದವರೆಗೆ. ಬೆಳಗ್ಗೆ 11ಕ್ಕೆ ಅಭಿನಂದನಾ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಸನ್ಮಾನ ಕಾರ್ಯಕ್ರಮ
ಮಧ್ಯಾಹ್ನ 12.30 ಕಲರವ ಹಿರಿಯ(೫-೭) ವಿಭಾಗದ ಮಕ್ಕಳ ಪ್ರತಿಭಾಕಾರಂಜಿ
ಮಧ್ಯಾಹ್ನ 02.30 ಚಿಲಿಪಿಲಿ ಕಿರಿಯ(೧-೪) ವಿಭಾಗದ ಮಕ್ಕಳ ಪ್ರತಿಭಾಕಾರಂಜಿ
ಮಧ್ಯಾಹ್ನ 4.00 ವಂದನಾ ಪ್ರತಿಭಾ ಪುರಸ್ಕಾರ ಮತ್ತು ವಂದನಾರ್ಪಣೆ
ಸಂಜೆ 06.00 ರಸಮಂಜರಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಸಂಜೆ

Categories
ಕರಾವಳಿ

ದಕ್ಷಿಣ ಕನ್ನಡದಲ್ಲೊಂದು ಶಾಕಿಂಗ್ ಘಟನೆ!!

ದಕ್ಷಿಣ ಕನ್ನಡದಲ್ಲೊಂದು ಶಾಕಿಂಗ್ ಘಟನೆ!!
- ಮರದಲ್ಲಿ ಮಹಿಳೆಯ ತಲೆ ಬುರುಡೆ, ಎಲುಬು ಪತ್ತೆ
- ಮನೆಯ ಎದುರಿನ ಗುಡ್ಡದ ತುದಿಯ ಮರವೊಂದಕ್ಕೆ ನೇಣು ಹಾಕಿದ ಸ್ಥಿತಿ

NAMMUR EXPRESS NEWS
ಮಂಗಳೂರು: ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯೊಬ್ಬರ ತಲೆ ಬುರುಡೆ ಹಾಗೂ ಎಲುಬುಗಳು ಪುತ್ತೂರಿನ ಒಳಮೊಗ್ರು ಗ್ರಾಮದ ಉರ್ವದಲ್ಲಿ ಪತ್ತೆಯಾಗಿದೆ. ಮೃತರನ್ನು ಉರ್ವ ನಿವಾಸಿ ಸಂಜೀವ ಎಂಬವರ ಪತ್ನಿ ನಳಿನಿ ಎಂದು ಗುರುತಿಸಲಾಗಿದೆ. ಇವರು ತಮ್ಮ ಮನೆಯ ಎದುರಿನ ಕಾಡೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಇದು ಮನೆಯವರಿಗೆ ಒಂದು ತಿಂಗಳ ಬಳಿಕ ಗೊತ್ತಾಗಿದೆ.

ಉರ್ವ ನಿವಾಸಿ ಸಂಜೀವ ಎಂಬವರು ಕನ್ಯಾನದಿಂದ ನಳಿನಿ ಎಂಬವರನ್ನು ಒಂದೂವರೆ ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಂಡಿದ್ದರು. ನಳಿನಿಯವರು ಆಗಾಗ ತನ್ನ ತಾಯಿ ಮನೆಗೆ ಹೋಗುತ್ತಿದ್ದರು ಎಂದು ಹೇಳಲಾಗಿದ್ದು, ಕಳೆದ ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಸಂಜೀವರವರು ಅಕ್ಟೋಬ‌ರ್ 8ರಂದು ಸಂಪ್ಯ ಪೊಲೀಸ್ ಠಾಣೆಗೆ ತೆರಳಿ ತನ್ನ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ತಿಳಿಸಿದ್ದರು. ಪತ್ನಿಯ ಫೋಟೋ ತರುವಂತೆ ಠಾಣೆಯಲ್ಲಿ ತಿಳಿಸಿದ್ದರು. ಆದರೆ ಆ ಬಳಿಕ ಸಂಜೀವರವರು ಠಾಣೆಗೆ ತೆರಳಿ ದೂರು ನೀಡಿರಲಿಲ್ಲ ಎಂದು ಹೇಳಲಾಗಿದೆ.

ನಳಿನಿಯವರು ತನ್ನ ತವರು ಮನೆಗೂ ಹೋಗದೇ ನಾಪತ್ತೆಯಾಗಿರುವ ತಿಳಿದು ತವರು ವಿಷಯ ಮನೆಯವರು ಉರ್ವದ ಸಂಜೀವರವರ ಮನೆಯ ಸುತ್ತಮುತ್ತ ನವೆಂಬರ್ 2ರಂದು ಸಂಜೆ ಬಂದು ಹುಡುಕಾಡಿದ್ದಾರೆ. ಈ ವೇಳೆ ಮನೆಯ ಎದುರಿನ ಗುಡ್ಡದ ತುದಿಯಲ್ಲಿ ಮರವೊಂದಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಹಗ್ಗ ಇದ್ದು ಹಗ್ಗದಲ್ಲಿ ತಲೆ ಕೂದಲು ಪತ್ತೆಯಾಗಿದೆ. ಹಗ್ಗದ ಕೆಳಗೆ ತಲೆ ಬುರುಡೆ ಹಾಗೂ ಕೈ ಮತ್ತು ಕಾಲಿನ ಎಲುಬುಗಳು ಪತ್ತೆಯಾಗಿದೆ. ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Categories
ಕರಾವಳಿ

ಕರಾವಳಿ ಕ್ರೈಂ ನ್ಯೂಸ್

ಕರಾವಳಿ ಕ್ರೈಂ ನ್ಯೂಸ್

* ಮಂಗಳೂರು: ಕೃಷಿಕನ ಮೇಲೆ ಚಿರತೆ ದಾಳಿ, ಜೀವ ಉಳಿಸಿಕೊಂಡ!
* ಉಡುಪಿ: ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳ ಸೆರೆ
* ಕಾಪು: ಟ್ಯಾಂಕರ್-ಬೈಕ್‌ ನಡುವೆ ಭೀಕರ ಅಪಘಾತ: ಸವಾರ ಮೃತ್ಯು
* ಉಡುಪಿ: ನಿಂತಿದ್ದ ಲಾರಿಗೆ ಟೂರಿಸ್ಟ್ ವಾಹನ ಡಿಕ್ಕಿ
* ಬಂಟ್ವಾಳ: ಬಸ್ ಬೈಕ್‌ಗೆ ಡಿಕ್ಕಿ: ಸ್ಥಳದಲ್ಲಿಯೇ ಓರ್ವ ಸಾವು!
* ಮಂಗಳೂರು: ಅಮೆಜಾನ್ ಕಂಪನಿಗೆ 30 ಕೋಟಿ ರೂ. ವಂಚನೆ

NAMMUR EXPRESS NEWS
ಮಂಗಳೂರು: ಮಂಗಳೂರು ಹೊರವಲಯದ ಕಿನ್ನಿಗೋಳಿ ಸಮೀಪದ ಎಲತ್ತೂರಿನಲ್ಲಿ ಕೃಷಿಕನೋರ್ವನ ಮೇಲೆ ಚಿರತೆ ದಾಳಿ ನಡೆಸಿದೆ. ನ.3 ಬೆಳಗ್ಗೆ ಈ ಘಟನೆ ನಡೆದಿದ್ದು ದನಗಳಿಗೆ ಹುಲ್ಲು ತರಲು ತೆರಳಿದ್ದ ಕೃಷಿಕನ ಮೇಲೆ ಚಿರತೆ ದಾಳಿ ಮಾಡಿದೆ.ಕಲ್ಕರೆ ನಿವಾಸಿ ಲಿಗೋರಿ ಪಿರೇರಾ (65) ಚಿರತೆ ದಾಳಿಗೆ ಒಳಗಾದ ವ್ಯಕ್ತಿಯಾಗಿದ್ದಾರೆ.
ಎಳತ್ತೂರು ದೇವಸ್ಥಾನದ ಬಳಿ ಈ ಘಟನೆ ನಡೆದಿದ್ದು ಚಿರತೆ ದಾಳಿಗೆ ಹೆದರದೆ ಲಿಗೋರಿ ಅವರು ಕೈಯಲ್ಲಿದ್ದ ಕೋಲನ್ನು ಚಿರತೆ ಮೇಲೆ ಬೀಸಿದ್ದಾರೆ. ಇದರಿಂದ ಗಾಬರಿಗೊಂಡ ಚಿರತೆ ಕಾಡಂಚಿಗೆ ಪರಾರಿಯಾಗಿದೆ. ಚಿರತೆ ದಾಳಿಯಿಂದ ಲಿಗೋರಿ ಅವರ ಮುಖಕ್ಕೆ ಮತ್ತು ಬೆನ್ನಿಗೆ ಗಾಯಗಳಾಗಿದ್ದು ಕಟೀಲು ದುರ್ಗಾ ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಗಾಯಗಳಿಗೆ ಹೊಲಿಗೆ ಹಾಕಲಾಗಿದೆ. ಕಳೆದೊಂದು ವಾರದಿಂದ ಚಿರತೆ ಪ್ರತ್ಯಕ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದು, ಅನೇಕ ಮನೆಗಳ ನಾಯಿ, ಸಣ್ಣ ಜಾನುವಾರುಗಳು ಚಿರತೆಗೆ ಆಹಾರವಾಗಿದೆ.

* ಬಂಟ್ವಾಳ: ಬಸ್ ಬೈಕ್‌ಗೆ ಡಿಕ್ಕಿ ಸ್ಥಳದಲ್ಲಿಯೇ ಓರ್ವ ಸಾವು!

ಬಂಟ್ವಾಳ: ಸೆಲಿನಾ ಬಸ್ ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಓರ್ವ ಸಾವನ್ನಪ್ಪಿದ್ದು ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬಂಟ್ವಾಳದ ಕಡೆಗೋಳಿ ಎಂಬಲ್ಲಿ ಭಾನುವಾರ ಸಂಭವಿಸಿದೆ. ಕಡೆಗೋಳಿ ನಿವಾಸಿ ಪ್ರವೀಣ (30) ಮೃತ ದುರ್ದೈವಿ. ಸಂದೀಪ ಗಂಭೀರವಾಗಿ ಗಾಯಗೊಂಡ ವ್ಯಕ್ತಿ. ಇಬ್ಬರು ಸೇಲ್ಸ್ ಮ್ಯಾನ್ ಕೆಲಸಗಾರರಾಗಿದ್ದು, ತನ್ನ ಖಾಸಗಿ ಕೆಲಸವನ್ನು ಮುಗಿಸಿ ಮನೆಗೆ ಜೊತೆಯಾಗಿ ಪ್ರಯಾಣಿಸುತ್ತಿದ್ದ ವೇಳೆ ಬಸ್ ಡಿಕ್ಕಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆಯ ತುಂಬೆ ಸಮೀಪದ ಕಡೆಗೋಳಿ ಎಂಬಲ್ಲಿ ಮಂಗಳೂರಿನಿಂದ ಬಿಸಿರೋಡಿನ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಬೈಕ್ ಸವಾರರಿಬ್ಬರಿಗೆ ಡಿಕ್ಕಿಯಾಗಿದೆ. ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ, ಗಂಭೀರವಾಗಿ ಗಾಯಗೊಂಡ ಇನ್ನೋರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

* ಮಂಗಳೂರು: ಅಮೆಜಾನ್ ಕಂಪನಿಗೆ 30 ಕೋಟಿ ರೂ. ವಂಚನೆ

ಮಂಗಳೂರು: ಅಮೆಜಾನ್‌ ಕಂಪನಿಗೆ ಬರೋಬ್ಬರಿ 30 ಕೋಟಿ ರೂ. ವಂಚಿಸಿದ್ದ ಆರೋಪಿಗಳನ್ನು ಮಂಗಳೂರಿನ ಉರ್ವಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ರಾಜ್ಯದ ಧೋಪುರ್ ಜಿಲ್ಲೆಯ ನಿವಾಸಿ ರಾಜಕುಮಾರ್ ಮೀನಾ (23), ಕರೌಲಿ ಜಿಲ್ಲೆಯ ಸುಭಾಸ್ ಗುರ್ಜರ್ (27) ಬಂಧಿತರು. ಆರೋಪಿಗಳು ಅಮೆಜಾನ್ನಲ್ಲಿ ವಿವಿಧ ರೀತಿಯ ಬೆಲೆಬಾಳುವ ಸಾಮಗ್ರಿಗಳನ್ನು ಆರ್ಡರ್ ಮಾಡುತ್ತಿದ್ದರು. ವಸ್ತುಗಳ ಡಿಲೇವರಿ ಪಡೆಯಲು ಟೈಯರ್ ಟು ಸಿಟಿ ಲೋಕೆಷನ್ ಆಯ್ಕೆ ಮಾಡುತ್ತಿದ್ದರು. ಬುಕ್ ಮಾಡಿದ ವಸ್ತುಗಳನ್ನು ಡೆಲಿವರಿ ಪಡೆಯಲು ಆರೋಪಿಗಳು ವಿಮಾನದಲ್ಲಿ ಹೋಗುತ್ತಿದ್ದರು. ವಸ್ತುವಿನ ಬಾಕ್ಸ್ ಮೇಲಿನ ಟ್ರ್ಯಾಕಿಂಗ್ ಐಡಿಯನ್ನು ಅದಲು ಬದಲು ಮಾಡಿ ಅಮೆಜಾನ್ ಸಂಸ್ಥೆಗೆ ವಂಚಿಸುತಿದ್ದರು. ವಸ್ತು ಅಮೇಜಾನ್ ಗೋಡಾನ್ ತಲುಪಿದ ಬಳಿಕ ವಂಚನೆ ಬೆಳಕಿಗೆ ಬರುತ್ತಿತ್ತು.ಆರೋಪಿಗಳು ಕಳೆದ‌ ಐದು ವರ್ಷಗಳಿಂದಲೂ ಈ ರೀತಿ ವಂಚನೆ ಮಾಡುತ್ತಿದ್ದಾರೆ. ತಮಿಳುನಾಡು, ಕೇರಳ, ಅಸ್ಸಾಂ, ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ನೆಲೆಸಿ ವಂಚನೆ ಮಾಡಿದ್ದಾರೆ.ತನಿಖೆ ನಡೆಸಿ ಖದೀಮರ ಮೋಸದ ಜಾಲ ಭೇದಿಸಿದ ಮಂಗಳೂರಿನ‌ ಉರ್ವ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

ಉಡುಪಿ: ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳ ಸೆರೆ

ಉಡುಪಿ: ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ನಾರಾಯಣ ನಗರ ರಸ್ತೆಯ ಬಳಿ ನಡೆದಿದೆ. ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕಿನ ನರಿಂಗಾಣ ಗ್ರಾಮದ ಮಹಮ್ಮದ್‌ ಸಪಾಝ್‌ (29)ಹಾಗೂ ಪುತ್ತೂರು ಗ್ರಾಮದ ಸಂತೆಕಟ್ಟೆಯ ಚರಣ್‌ ಯು ಭಂಡಾರಿ (19) ಎಂದು ಗುರುತಿಸಲಾಗಿದೆ. ಬಂಧಿತರಿಂದ 53,300 ಸಾವಿರ ಮೌಲ್ಯದ 740 ಗ್ರಾಂ ತೂಕ ಗಾಂಜಾ, ಸ್ಕೂಟರ್ ಅಂದಾಜು ಮೌಲ್ಯ ರೂ, 25,000, ನಗದು ರೂ, 2170 ಹಾಗೂ ಎರಡು ಮೊಬೈಲ್ ಪೋನ್ ಸಹಿತ ಒಟ್ಟು 98,770 ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

* ಕಾಪು: ಟ್ಯಾಂಕರ್-ಬೈಕ್‌ ನಡುವೆ ಭೀಕರ ಅಪಘಾತ: ಸವಾರ ಮೃತ್ಯು

ಉಡುಪಿ: ಟ್ಯಾಂಕರ್ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತ ಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಕೊಪ್ಪಲಂಗಡಿ ಬಳಿ ನಡೆದಿದೆ. ಮಂಗಳೂರುನಿಂದ ಉಡುಪಿ ಕಡೆ ಹೋಗುತ್ತಿದ್ದ ಟ್ಯಾಂಕರ್ ಅದೇ ದಿಕ್ಕಿನಲ್ಲಿ ಹೋಗುತ್ತಿದ್ದ ಬೈಕ್ ನ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಗಂಭೀರ ಗಾಯಗೊಂಡು ಮೃತ ಪಟ್ಟಿದ್ದು ಹರೀಶ್ ಕುಮಾರ್(45) ಮೃತ ದುರ್ದೈವಿ. ಟ್ಯಾಂಕರ್ ಚಾಲಕನ ನಿರ್ಲಕ್ಷದ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಉಡುಪಿ: ನಿಂತಿದ್ದ ಲಾರಿಗೆ ಟೂರಿಸ್ಟ್ ವಾಹನ ಡಿಕ್ಕಿ

ಉಡುಪಿ: ನಿಂತಿದ್ದ ಲಾರಿಗೆ ಟೂರಿಸ್ಟ್ ವಾಹನ ಡಿಕ್ಕಿ ಹೊಡೆದು ಪುಣ್ಯಕ್ಷೇತ್ರ ದರ್ಶನಕ್ಕೆ ಹೊರಟಿದ್ದ ಪ್ರವಾಸಿಗರು ಗಾಯಗೊಂಡ ದುರ್ಘಟನೆ ಮುಂಜಾನೆ ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಪೆಟ್ರೋಲ್ ಬಂಕ್‌ ಬಳಿ ಸಂಭವಿಸಿದೆ.ಕೊಲ್ಲೂರಿನತ್ತ ತೆರಳುತ್ತಿದ್ದ ಹೊರ ರಾಜ್ಯದ ಟೂರಿಸ್ಟ್ ವಾಹನವು ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದ್ದು, ಮಹಿಳೆಯರೂ ಸೇರಿದಂತೆ ಪ್ರವಾಸಿಗರು ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಟೂರಿಸ್ಟ್ ವಾಹನ ಜಖಂ ಗೊಂಡಿದೆ. ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.

Categories
ಸಿನಿಮಾ

ಇತಿಹಾಸ ಸೃಷ್ಟಿಯತ್ತ ಕಾಂತಾರ-2!

ಇತಿಹಾಸ ಸೃಷ್ಟಿಯತ್ತ ಕಾಂತಾರ-2!
– 125 ಕೋಟಿ ವೆಚ್ಚದಲ್ಲಿ ಸಿನಿಮಾ: 2025ಕ್ಕೆ ತೆರೆಗೆ
– ಬಲ್ಗೇರಿಯಾದಿಂದ ಕುಂದಾಪುರಕ್ಕೆ ಬಂದ ಹಾಲಿವುಡ್ ಸಾಹಸ ನಿರ್ದೇಶಕ
– ಕಾಂತಾರ ದಾಖಲೆ ಮುರಿಯುತ್ತಾ ಈ ಸಿನಿಮಾ..?

NAMMUR EXPRESS NEWS
ಕನ್ನಡ ಸಿನಿಮಾ ಜಗತ್ತನ್ನು ರಾಷ್ಟ್ರ ಮಟ್ಟದಲ್ಲಿ ಮಿನುಗಿಸಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಈಗಾಗಲೇ ಕನ್ನಡ ಸಿನಿಮಾ ಕೂಡ ಭಾರತ ಸಿನಿಮಾ ಜಗತ್ತಲ್ಲಿ ಹೊಸತನ್ನು ಮಾಡಬಲ್ಲದು ಎಂಬುದನ್ನು ತೋರಿಸಿದ್ದಾರೆ. 175 ಕೋಟಿ ಹಣ ಗಳಿಕೆ ಮೂಲಕ ಅತೀ ಹೆಚ್ಚು ಗಳಿಕೆ ಮಾಡಿದ ಕನ್ನಡದ ಸಿನಿಮಾ ಎಂಬ ಖ್ಯಾತಿ ಗಳಿಸಿದ್ದ ಕಾಂತಾರ 2 ಮತ್ತೊಂದು ಮೋಡಿ ಮಾಡಲು ಸಜ್ಜಾಗಿದೆ. ಭಾರತದ ಎಲ್ಲಾ ಭಾಷೆ ಸಿನಿಮಾ ಪ್ರಿಯರು ಕನ್ನಡದತ್ತ ನೋಡುವತ್ತ ಕಾಂತಾರ ಸಿನಿಮಾ ಮಾಡಿದೆ. ಇದೀಗ ಮತ್ತೊಂದು ಇತಿಹಾಸ ಸೃಷ್ಟಿಸುವತ್ತ ತಂಡ ಕೆಲಸ ಮಾಡುತ್ತಿದೆ. ಸುಮಾರು 125 ಕೋಟಿ ವೆಚ್ಚದಲ್ಲಿ ಹೊಂಬಾಳೆ ಫಿಲ್ಮ್ಸ್ ಕಾಂತಾರ 2 ಸಿನಿಮಾ ನಿರ್ಮಾಣ ಮಾಡುತ್ತಿದೆ. ಬಹುತೇಕ ಕಾಂತಾರ ತಂಡವೇ ಇದ್ದರೂ ಅನೇಕ ಬಹು ಭಾಷಾ ನಟ ನಟಿಯರು, ತಂತ್ರಜ್ಞರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ ಪ್ರಿಕ್ವೆಲ್ ಚಿತ್ರಕ್ಕೆ ಒಬ್ಬೊಬ್ಬರೆ ಜೊತೆಯಾಗುತ್ತಿದ್ದಾರೆ. ಅದರಲ್ಲೂ ಹಾಲಿವುಡ್ ಖ್ಯಾತ ಸ್ಟಂಟ್ ಮಾಸ್ಟರ್ ಕಾಂತಾರಗಾಗಿ ಕೆಲಸ ಮಾಡಲಿದ್ದಾರೆ. ಭಾರತದ ಖ್ಯಾತ ಸಿನಿಮಾ ಆರ್.ಆರ್.ಆರ್ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದ ಆಕ್ಷನ್ ಡೈರೆಕ್ಟರ್ ಟೊಡರ್ ಲ್ಯಾಜರೋವ್ ಇದೀಗ ಕಾಂತಾರ ಚಿತ್ರಕ್ಕೂ ಸಾಹಸ ನಿರ್ದೇಶನ ಮಾಡಲಿದ್ದಾರೆ. ಆ ನಿಮಿತ್ತ ಬಲ್ಗೇರಿಯಾದಿಂದ ಕುಂದಾಪುರಕ್ಕೆ ಆಗಮಿಸಿದ್ದಾರೆ. ರಿಷಬ್ ಶೆಟ್ಟಿಯನ್ನೂ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಈ ಹಿಂದೆ ‘ಕಾಂತಾರ’ ಪ್ರೀಕ್ವೆಲ್ ಟೀಮ್‍ ನಿಂದ ಮತ್ತೊಂದು ಹೊಸ ಸುದ್ದಿ ಬಂದಿತ್ತು. ಸದ್ದಿಲ್ಲದೇ ರಿಷಬ್ ಆಯಾ ಹಂತದ ಚಿತ್ರೀಕರಣದಲ್ಲಿ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಈ ಸಿನಿಮಾದ ಮಹತ್ವದ ಪಾತ್ರವೊಂದನ್ನು ಮಾಲಿವುಡ್ ನಟ ಜಯರಾಮ್ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಇವರು ಶಿವರಾಜ್ ಕುಮಾರ್ ನಟನೆಯ ಘೋಸ್ಟ್ ಸಿನಿಮಾದಲ್ಲೂ ನಟಿಸಿದ್ದರು.

ರಿಷಬ್ ಹೇಳೋದೇನು?

ಕಾಂತಾರ ಗೆಲುವಿನ ನಂತರ ಮೊದಲಿಗಿಂತ ಜವಾಬ್ದಾರಿ ಹೆಚ್ಚಾಗಿದೆ. ನಮ್ಮ ಸಿನಿಮಾಗಾಗಿ ದೊಡ್ಡ ತಂಡ ಕೆಲಸ ಮಾಡುತ್ತಿದೆ. ಹೊಂಬಾಳೆ ಸಂಸ್ಥೆ ಸಿಕ್ಕಿರುವುದು ಫಿಲ್ಮ್ ಮೇಕರ್‌ಗೆ ಒಂದು ಪುಣ್ಯ. ಕಾಂತಾರಗಾಗಿ ಅದ್ಭುತವಾದ ಟೆಕ್ನಿಷಿಯನ್ಸ್‌ಗಳು ಕೆಲಸ ಮಾಡುತ್ತಿದ್ದಾರೆ. ನಿರಂತರವಾಗಿ ಪಾರ್ಟ್ ಬೈ ಪಾರ್ಟ್ ಚಿತ್ರೀಕರಣ ನಡೆಯುತ್ತದೆ. ಜನ ‘ಕಾಂತಾರ’ ಚಿತ್ರವನ್ನು ಗೆಲ್ಲಿಸಿದ್ದಾರೆ, ಬಾಯಲ್ಲಿ ಏನು ಹೇಳಲ್ಲ. ಕೆಲಸದ ಮೂಲಕ ಮಾಡಿ ತೋರಿಸಬೇಕು ಎಂದು ಅಂದುಕೊಂಡಿದ್ದೇನೆ. ನನಗೆ ಯಾವ ಒತ್ತಡವು ಇಲ್ಲ. ಆಗ ನನಗೆ ಬಹಳ ದೊಡ್ಡ ಚಿತ್ರವಾಗಿತ್ತು. ಸಿನಿಮಾ ಯಾವಾಗಲೂ ಕಲಿಯುವ ಪ್ರೊಸೆಸ್ ಅದನ್ನು ಮಾಡುತ್ತಿದ್ದೇನೆ ಎಂದಿದ್ದಾರೆ ರಿಷಬ್.‌

Categories
ರಾಜ್ಯ

ಹಾಸನಾಂಬೆ ದರ್ಶನೋತ್ಸವಕ್ಕೆ ಅದ್ದೂರಿ ತೆರೆ!

ಹಾಸನಾಂಬೆ ದರ್ಶನೋತ್ಸವಕ್ಕೆ ಅದ್ದೂರಿ ತೆರೆ!
– 20 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿ ದರ್ಶನ
– 9. 69 ಕೋಟಿ ಆದಾಯ: ಎಲ್ಲರಿಗೂ ಧನ್ಯವಾದ ಹೇಳಿದ ಜಿಲ್ಲಾಡಳಿತ

NAMMUR EXPRESS NEWS
ಹಾಸನ: ಹಾಸನಾಂಬೆ ದೇವಿ ದರ್ಶನವು ಅಕ್ಟೋಬರ್ 24ಕ್ಕೆ ಬಾಗಿಲು ತೆಗೆದು ನವೆಂಬರ್ 3ರ ಭಾನುವಾರದಂದು ಶಾಸ್ತ್ರೋತ್ತವಾಗಿ ಪೂಜೆ ಸಲ್ಲಿಸಿ ಗಣ್ಯರ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಮದ್ಯಾಹ್ನ 12:34ಕ್ಕೆ ಬಾಗಿಲು ಮುಚ್ಚುವ ಮೂಲಕ 2024ರ ದರ್ಶನೋತ್ಸವಕ್ಕೆ ತೆರೆ ಎಳೆಯಲಾಯಿತು. ಸುಮಾರು 20 ಲಕ್ಷಕ್ಕೂ ಹೆಚ್ಚು ಭಕ್ತರು ಈ ವರ್ಷ ದೇವಿ ದರ್ಶನ ಪಡೆದಿದ್ದಾರೆ. 9. 69 ಕೋಟಿ ಆದಾಯ ಹಾಸನಾಂಬೆ ದೇವಾಲಯದ ಬಾಗಿಲು ಹಾಕುವ ವೇಳೆ ಕೆಲ ಸಮಯದಲ್ಲಿ ನೆರೆದಿರುವ ಭಕ್ತರಿಗೆ ದೇವಿ ದರ್ಶನವನ್ನು ಕಲ್ಪಿಸಿದರು. ಬೆಳಗ್ಗೆ ಪೂಜೆ, ನೈವೇದ್ಯಕ್ಕಾಗಿ ಸಾರ್ವಜನಿಕ ದರ್ಶನ ಬಂದ್ ಆಗಿದ್ದರಿಂದ ಸಾವಿರಾರು ಭಕ್ತರು ದರ್ಶನ ಸಾಧ್ಯವಾಗದೇ ನಿರಾಸೆಗೊಂಡರು ಆದರೂ ಭಕ್ತರು ದರ್ಶನಕ್ಕಾಗಿ ಕಾದು ಕುಳಿತು ಅವಕಾಶ ಕೇಳಿದ ಭಕ್ತರ ಕೋರಿಕೆಗೆ ಸ್ಪಂದಿಸಿದ ಜಿಲ್ಲಾಡಳಿತ ಸಾಲಿನಲ್ಲಿ ನಿಂತವರಿಗೆ ದೇವಿ ವಿಶ್ವರೂಪ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿತು. ಸಂಪ್ರದಾಯದಂತೆ ಪೂಜೆ, ನೈವೇದ್ಯ ನೆರವೇರಿಸಿ ನಂದಾದೀಪ ಹಚ್ಚಿಟ್ಟ ಅರ್ಚಕರು ಕರ್ನಾಟಕ ರಾಜ್ಯ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಎಂ.ಶಿವಲಿಂಗೇ ಗೌಡ,ಲೋಕಸಭಾ ಸದಸ್ಯರಾದ ಶ್ರೇಯಸ್ ಪಟೇಲ್, ಶಾಸಕರಾದ ಸ್ವರೂಪ್ ಪ್ರಕಾಶ್ , ಮಂಜುನಾಥ್ (ಸಿಮೆಂಟ್ ಮಂಜು)ದಕ್ಷಿಣ ವಲಯದ ಐಜಿ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಸತ್ಯಭಾಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಮಾರುತಿ, ಸಕಲೇಶಪುರ ಉಪ ವಿಭಾಗಾಧಿಕಾರಿ ಶೃತಿ ಮತ್ತಿತರರ ಸಮ್ಮುಖದಲ್ಲಿ ದೇವಾಲಯದ ಬಾಗಿಲು ಮುಚ್ಚಿ ಮುದ್ರೆ ಹಾಕಿ ಸೀಲ್ ಮಾಡಲಾಯಿತು. ಕೀಲಿ ಕೈ ಅನ್ನು ದೇವಾಲಯದ ಆಡಳಿತಾಧಿಕಾರಿಗೆ ಹಸ್ತಾಂತರಿಸಿದರು.

ಈ ವರ್ಷ ಭಕ್ತರ ದಾಖಲೆ

ಇನ್ನು ಕಳೆದ ವರ್ಷ 14 ಲಕ್ಷ ಭಕ್ತರು ದರ್ಶನಕ್ಕೆ ಆಗಮಿಸಿದ್ದರು. ಈ ವರ್ಷ 20 ಲಕ್ಷಕ್ಕೂ ಹೆಚ್ಚು ಜನ ಭಕ್ತರು ಆಗಮಿಸಿ ದೇವಿ ದರ್ಶನ ಪಡೆಯುವ ಮೂಲಕ ಇತಿಹಾಸ ದಾಖಲೆ ಬರೆದಿದೆ. ಎಲ್ಲಾ ಅದಿಕಾರಿಗಳ ಪರಿಶ್ರಮದಿಂದ ಹಾಸನಾಂಬೆ ಉತ್ಸವ ಯಶಸ್ವಿ ಆಗಿದೆ. 20 ಲಕ್ಷದ 40 ಸಾವಿರ ಭಕ್ತರು ಈ ವರ್ಷ ದರ್ಶನ ಮಾಡಿದ್ದಾರೆ. 9. 69 ಕೋಟಿ ಆದಾಯ ಈಗಾಗಲೆ ಬಂದಿದೆ. ಟಿಕೇಟ್ ಮಾರಾಟ ಹಾಗು ಲಡ್ಡು ಮಾರಾಟದಿಂದ ಸಾಕಷ್ಟು ಆದಾಯ ಹರಿದು ಬಂದಿದ್ದು, ಡಿಸಿ, ಎಸ್ಪಿ, ಎಸಿ ಹಾಗು ಅವರ ಅದಿಕಾರಿ ಸಿಬ್ಬಂದಿ ವರ್ಗ ಪರಿಶ್ರಮದಿಂದ ಈ ಉತ್ಸವ ಯಶಸ್ವಿ ಆಗಿದೆ. ಮುಂದಿನ ಬಾರಿ ಇನ್ನಷ್ಟು ಸೂಕ್ತ ಸೌಲಭ್ಯ ಒದಗಿಸಿ ದರ್ಶನಾವಾಕಾಶ ಮಾಡಲಾಗುವುದು. ಸ್ವಲ್ಪ ಅಡಚಣೆಗಳನ್ನು ಮುಂದಿನ ವರ್ಷ ಸರಿಪಡಿಸಿಕೊಂಡು ಅನುಕೂಲ ಮಾಡುತ್ತೇವೆ ಎಂದು ಹೇಳಿದರು.

ಹಗಲಿರುಳು ಕೆಲಸ ಮಾಡಿದ ಜಿಲ್ಲಾಡಳಿತ

ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಇಷ್ಟೊಂದು ಜನರು ಬರುತ್ತಾರೆ ಎಂದರೇ ಸಾಮಾನ್ಯವಾದುದಲ್ಲ. ದೇವರ ಮೇಲೆ ಇರುವ ಪೂಜ್ಯ ಭಾವನೆ ಹೇಳಿ ಕೇಳಿ ಬರುವುದಲ್ಲ. ಇದು ಮನುಕುಲದ ಸನಾತನ ಧರ್ಮದ ಇತಿಹಾಸದ ಪರಂಪರೆ ಹೊಂದಿರುವುದು. ಹಾಸನಾಂಬೆ ದರ್ಶನದ ವೇಳೆ ಸಲ್ಪ ಅಡಚಣೆಯಾಗಿದೆ. ನಾವು ಜಿಲ್ಲಾಡಳಿತ ಹಗಲು ಇರುಳು ಕೆಲಸ ಮಾಡಲಾಗಿದ್ದು, ಕೆಲ ಭಿನ್ನಾಭಿಪ್ರಾಯಗಳಿಂದ ಆಗಿದೆ. ಭೇದ ಭಾವ ಮಾಡಿದವರಿಗೆ ತಾಯಿ ಹಾಸನಾಂಬೆ ನೋಡಿಕೊಳ್ಳುತ್ತಾಳೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಉಪವಿಭಾಗಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಿದ್ದಾರೆ. ನಡೆದಿರುವ ಘಟನೆ ಕ್ಷುಲಕ ಎಂದು ಭಾವಿಸಿ. ಅತಿರಥ ಮಹ ರಾಜಕಾರಣಿಗಳು ಬಂದು ದೇವಿ ದರ್ಶನ ಮಾಡಿದ್ದಾರೆ ಎಂದು ಮೆಚ್ಚಿಗೆವ್ಯಕ್ತಪಡಿಸಿದರು. ಸಣ್ಣಪುಟ್ಟ ತಪ್ಪು ಆಗಿರುವುದಕ್ಕೆ ವಿಷಾಧವ್ಯಕ್ತಪಡಿಸಿದರು. ಈ ತಪ್ಪುಗಳನ್ನು ಇನ್ನಷ್ಟು ತಿದ್ದುಕೊಂಡು ಮುಂದಿನ ವರ್ಷ ಉತ್ತಮಪಡಿಸಲಾಗುವುದು. ಹಾಸನಾಂಬೆ ಇತಿಹಾಸವನ್ನು ಭರತ ಖಂಡದಲ್ಲಿ ತಾಯಿ ಶಕ್ತಿ ಬಗ್ಗೆ ತೋರಿಸಲಾಗುವುದು. ಪಕ್ಷ ಬೇದ ಮರೆತು ಹಾಸನ ಜಿಲ್ಲೆಯ ಜನತೆ ಮಾಡಿ ತೋರಿಸಲಾಗುವುದು ಎಂದರು.

2000 ಸಿಬ್ಬಂದಿಗಳು ಕರ್ತವ್ಯ

ಹಾಸನ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ಮಾತನಾಡಿ, ಹಾಸನಾಂಬೆ ಜಾತ್ರೆಯ ಯಶಸ್ವಿಗೆ ದುಡಿದ ಎಲ್ಲಾರಿಗೂ ಅಭಿನಂದನೆ ತಿಳಿಸುತ್ತೇನೆ. ಈ ಬಾರಿಯಲ್ಲಿ ಹೆಚ್ಚು ಭಕ್ತರು ಆಗಮಿಸಿದ್ದು, ಎಲ್ಲಾರ ಬದುಕನ್ನು ಸಂತೃಪ್ತಿ, ಕೀರ್ತಿ, ನೆಮ್ಮದಿಯನ್ನು ಕೊಡಲಿ ಎಂದು ತಾಯಿಯನ್ನು ಕೋರುತ್ತೇನೆ ಎಂದು ತಿಳಿಸಿದರು. ದಕ್ಷಿಣ ವಲಯದ ಐಜಿ ಬೋರಲಿಂಗಯ್ಯ ಅವರು ಮಾತನಾಡಿ ಹಾಸನಾಂಬ ಜಾತ್ರಾ ಮಹೋತ್ಸವ ಹಾಸನದ ದಸರಾ ಇದ್ದಂತೆ, 2022 ರವರಿಗೆ ಸ್ಥಳೀಯ ಅಧಿಕಾರಿಗಳು ಮಾತ್ರ ಬಂದು ಬಸ್ತು ನೋಡಿಕೊಳ್ಳುತ್ತಿದ್ದರು. 2023 ರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಿ ದರ್ಶನಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಈ ಬಾರಿ ಮೈಸೂರು, ಮಂಡ್ಯ, ಕೊಡಗು, ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಮತ್ತಿತರ ಅಧಿಕಾರಿಗಳು ಸೇರಿದಂತೆ ಒಟ್ಟು 2000 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುವ ಮೂಲಕ ದೇವಿಯ ಸೇವೆ ಮಾಡುವ ಅವಕಾಶ ದೊರೆತಿದೆ ಎಂದು ತಿಳಿಸಿದರು. ಜನದಟ್ಟಣೆ ನಿಭಾಯಿಸುವ ಸಂದರ್ಭದಲ್ಲಿ ಸಹಜವಾಗಿ ಸಣ್ಣಪುಟ್ಟ ತಳ್ಳಾಟಗಳು ನಡೆಯುತ್ತಿವೆ. ಇದನ್ನು ಯಾರು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರಲ್ಲದೆ, ರಾಜ್ಯದ ಜನತೆಗೆ ಹಾಸನಾಂಬ ಒಳ್ಳೆಯದು ಮಾಡಲಿ ಎಂದರು. ಉಪವಿಭಾಗಧಿಕಾರಿ ಮಾರುತಿ ಮಾತನಾಡಿ, 2024 ರ ಹಾಸನಾಂಬೆ ದೇವಿ ದರ್ಶನ ಭಾನುವಾರ ವಿದ್ಯುಕ್ತವಾಗಿ ತೆರೆ ಕಂಡಿದೆ. ಕಾರ್ಯಕ್ರಮಕ್ಕೆ ಸಹಕರಿಸಿದ ಜನಪ್ರತಿನಿಧಿಗಳು, ಎಲ್ಲಾ ಅಧಿಕಾರಿಗಳು, ಎಲ್ಲಾ ಮಾಧ್ಯಮದವರು ಹಾಗೂ ಸಂಘ ಸಂಸ್ಥೆಗಳಿಗೂ ಧನ್ಯವಾದಗಲ ತಿಳಿಸುತ್ತೇನೆ. ಹಾಸನಾಂಬೆ ದರ್ಶನದ ಎರಡು ವರ್ಷದ ಅನುಭವ ನನಗೆ ಆಗಿದೆ. ಯಾವುದು ಬೇಕು ಬೇಡ ಎನ್ನುವ ಅನುಭವ ಬಂದಿದೆ ಎಂದರು. ಹಿಂದಿಗಿಂದಲೂ ಹಾಸನಾಂಬೆ ದರ್ಶನ ಸುಧಾರಿಸಿದೆ. ಜವಾಬ್ಧಾರಿಯಿಂದ ಇನ್ನಷ್ಟು ಮಾಡಲು ಮುಂದಾಗಲಾಗುವುದು. ಮುಂದಿನ ವರ್ಷ ಅಕ್ಟೋಬರ್ 9ರಿಂದ ಅಕ್ಟೋಬರ್ 23ರವರೆಗೂ ಇರುತ್ತದೆ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಸಕಲೇಶಪುರ ಉಪ ವಿಭಾಗಾಧಿಕಾರಿ ಶೃತಿ ತಹಸೀಲ್ದಾರ್ ಗಳಾದ ಶ್ವೇತಾ, ಮಮತ, ಮೇಘನಾ ಇತರರು ಉಪಸ್ಥಿತರಿದ್ದರು.

Categories
ಚಿಕ್ಕಮಗಳೂರು

ಬಾಬಾ ಬುಡನ್ ಗಿರಿ ದತ್ತಮಾಲಾ ಅಭಿಯಾನ ಶುರು!

ಬಾಬಾ ಬುಡನ್ ಗಿರಿ ದತ್ತಮಾಲಾ ಅಭಿಯಾನ ಶುರು!
– ಇಂದಿನಿಂದ ನ.10ರವರೆಗೆ ದತ್ತಮಾಲೆ
– ಶ್ರೀರಾಮಸೇನೆಯಿಂದ 21ನೇ ವರ್ಷದ ದತ್ತಮಾಲೆ
– ನ.10 ಕ್ಕೆ ಧರ್ಮ ಸಭೆ,ಶೋಭಾಯಾತ್ರೆ,ಧಾರ್ಮಿಕ ಕಾರ್ಯಕ್ರಮ

NAMMUR EXPRESS NEWS
ಚಿಕ್ಕಮಗಳೂರು: ಶ್ರೀರಾಮಸೇನೆಯಿಂದ 21ನೇ ವರ್ಷದ ದತ್ತಮಾಲಾ ಅಭಿಯಾನ ಶುರುವಾಗಿದೆ. ಸಾವಿರಾರು ಭಕ್ತರು ದತ್ತ ಪೀಠಕ್ಕೆ ಆಗಮಿಸುತ್ತಿದ್ದಾರೆ. ನ.4ರಿಂದ 10ರವರೆಗೆ ದತ್ತಮಾಲೆ ಅಭಿಯಾನ ಶುರುವಾಗಲಿದೆ ಎಂದು ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ತಿಳಿಸಿದ್ದಾರೆ.

ನ.4ರಂದು ನಗರದ ಶಂಕರ ಮಠದಲ್ಲಿ ದತ್ತಮಾಲೆ ಧಾರಣೆ ನಡೆಯಲಿದ್ದು, ನ.7ರಂದು ಶಂಕರ ಮಠದಲ್ಲಿ ಸಂಜೆ 7 ಗಂಟೆಗೆ ದತ್ತ ದೀಪೋತ್ಸವ ನಡೆಯಲಿದ್ದು ಜೊತೆಗೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ದೀಪೋತ್ಸವ ನಡೆಯಲಿದೆ. ನ.9ರಂದು ನಗರದಲ್ಲಿ ಪಡಿ ಸಂಗ್ರಹ ಹಾಗೂ 10ರಂದು ಶಂಕರ ಮಠದ ಮುಂಭಾಗದಲ್ಲಿ ಧರ್ಮಸಭೆ ನಡೆಯಲಿದ್ದು ನಂತರ ಆಜಾದ್ ಪಾರ್ಕ್ ವೃತ್ತದವರೆಗೆ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯಲ್ಲಿ ಸಾವಿರಾರು ದತ್ತಭಕ್ತರು ಪಾಲ್ಗೊಳ್ಳಲಿದ್ದಾರೆ. ಬಳಿಕ ಶ್ರೀರಾಮಸೇನೆ ಕಾರ್ಯಕರ್ತರು ಸೇರಿದಂತೆ ದತ್ತ ಭಕ್ತರು ದತ್ತಪೀಠಕ್ಕೆ ತೆರಳಿ ಪಾದುಕೆ ದರ್ಶನ ಮಾಡುವರು. ಹೋಮ ಹವನಗಳು ಜರುಗಲಿವೆ.

Categories
ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್

ಹಬ್ಬದ ವೇಳೆ ಏನೇನ್ ಆಯ್ತು!

– ಸೊರಬ: ಬೈಕ್‌ ಮತ್ತು ಕಾರಿನ ಡಿಕ್ಕಿ: ಓರ್ವ ಸಾವು
– ಹೊಸನಗರ : ಕಾಡು ಹಂದಿ ಬೇಟೆಗಾರರ ಬಂಧನ
– ಹುಂಚ : ಕಲ್ಲು ಕ್ವಾರೆಯಲ್ಲಿ ನಿಗೂಢ ಸಾವು
– ಶಿವಮೊಗ್ಗ: ಮುಂದುವರೆದ ಕಾಡಾನೆಗಳ ಹಾವಳಿ

NAMMUR EXPRESS NEWS
ಸೊರಬ: ಬೈಕ್ ಮತ್ತು ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್‌ ಸವಾರ ಕೋಡೂರು ಮೂಲದ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ ಸಮೀಪದ ಜೋಳದಗುಡ್ಡೆಯ ವರದಾನದಿ ಸೇತುವೆ ಬಳಿ ನಡೆದಿದೆ. ಈ ಅಪಘಾತದಲ್ಲಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸನಗರ ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯ ಬುಲ್ಲೋಜರ್ ಗುಡ್ಡ ಗ್ರಾಮದ ನಿವಾಸಿ ಸುದರ್ಶನ ಬಂದಿಗೇ‌ರ್ (22) ಮೃತಪಟ್ಟ ಯುವಕನಾಗಿದ್ದಾನೆ. ಸುದರ್ಶನ ತನ್ನ ಅತ್ತೆ ಬೆಳ್ಳಮ್ಮ ಪುಟ್ಟಪ್ಪ (65) ಜೊತೆಯಲ್ಲಿ ಬೈಕ್ ನಲ್ಲಿ ಹೊಸನಗರದಿಂದ ಚಂದ್ರಗುತ್ತಿ ಸಮೀಪದ ಭದ್ರಾಪುರ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಮಾರುತಿ 800 ಕಾರು ಡಿಕ್ಕಿಯಾಗಿ ಬೈಕ್ ಸವಾರ ಸುದರ್ಶನ್ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ,ಅಪಘಾತದಲ್ಲಿ ತೀವ್ರ ಗಾಯಗೊಂಡ ಬೆಳ್ಳಮ್ಮ ಪುಟ್ಟಪ್ಪ ರವರಿಗೆ ಸೊರಬದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

– ಹೊಸನಗರ : 40 ಕೆಜಿ ಮಾಂಸ ಸಮೇತ ಕಾಡು ಹಂದಿ ಬೇಟೆಗಾರರ ಬಂಧನ

ಹೊಸನಗರ : ತಾಲೂಕಿನ ಹರತಾಳು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹುಣಸವಳ್ಳಿ ಗ್ರಾಮದಲ್ಲಿ ನಡೆದಿದೆ. ಕಾಡುಹಂದಿಯನ್ನು ಬೇಟೆಯಾಡಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಮೂವರ ವಿರುದ್ಧ ಪ್ರಕರಣ ದಾಖಲಿಸಿ ಓರ್ವನನ್ನು ಬಂಧಿಸಿದ್ದಾರೆ. ಕೆ ಹುಣಸವಳ್ಳಿ ಗ್ರಾಮದ ಡಾಕಪ್ಪ ಬಿನ್ ಮಂಜಪ್ಪ, ಕಾರ್ತಿಕ್ ಬಿನ್ ಡಾಕಪ್ಪ ಹಾಗೂ ಗಣೇಶ ಬಿನ್ ಈಶ್ವರನಾಯ್ಕ ಎಂಬುವವರು ಕಾಡು ಹಂದಿಯನ್ನು ಬೇಟೆಯಾಡಿ ಮಾಂಸ ತಯಾರಿಸುತ್ತಿದ್ದಾರೆಂದು ಖಚಿತ ಮಾಹಿತಿ ಮೇರೆಗೆ ಎಸಿಎಫ್ ಮೋಹನ್ ಕುಮಾ‌ರ್ ನೇತೃತ್ವದ ಅಲಗೇರಿಮಂಡ್ರಿ ವ್ಯಾಪ್ತಿಯ ಡಿ.ಆ‌ರ್.ಎಫ್.ಓ ನವೀನ್ ಕುಮಾರ್ ತಂಡ ಅಂದಾಜು 40 ಕೆ.ಜಿ ಮಾಂಸ ಸಮೇತ ಆರೋಪಿ ಗಣೇಶ್ ಬಿನ್ ಈಶ್ವರ್ ನಾಯ್ಕ ನ್ನು ಬಂಧಿಸಿದ್ದು ಇನ್ನಿಬ್ಬರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಎಸಿಎಫ್ ಮೋಹನ್ ಕುಮಾ‌ರ್, ಆರ್‌ಎಫ್‌ಒ ಅನಿಲ್ ಕುಮಾ‌ರ್, ಡಿ.ಆ‌ರ್.ಎಫ್.ಓ ನವೀನ್ ಕುಮಾ‌ರ್, ಅರಣ್ಯ ರಕ್ಷಕರಾದ ರಾಜು ಎನ್, ಪುಟ್ಟಸ್ವಾಮಿ, ಭರತ್ ಹಾಗೂ ಇನ್ನಿತರ ಸಿಬ್ಬಂದಿಗಳಿದ್ದರು.

– ಹುಂಚ : ಕಲ್ಲು ಕ್ವಾರೆಯಲ್ಲಿ ಜಾರ್ಖಂಡ್ ಮೂಲದ ವ್ಯಕ್ತಿಯ ನಿಗೂಢ ಸಾವು

ಹುಂಚ : ಜಾರ್ಖಂಡ್ ಮೂಲದ ಕಾರ್ಮಿಕನೊಬ್ಬ ನಿಗೂಡವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಪಂ ವ್ಯಾಪ್ತಿಯ ಹೊಂಡಲಗದ್ದೆ ಗ್ರಾಮದಲ್ಲಿ ನಡೆದಿದೆ. ಜಾರ್ಖಂಡ್ ಮೂಲದ ಉದಯ್ (26) ಎಂಬ ಕಾರ್ಮಿಕ ಹೊಂಡಲಗದ್ದೆಯ ಕ್ಯಾರೆಯೊಂದರಲ್ಲಿ ಕೆಲಸ ಮಾಡುತಿದ್ದು ನಿಗೂಡವಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ. ಉತ್ತರ ಭಾರತದ ಹಲವು ಕಾರ್ಮಿಕರು ಈ ಕಲ್ಲು ಕ್ವಾರೆಯಲ್ಲಿ ಕೆಲಸ ನಿರ್ವಹಿಸುತಿದ್ದು ಜಾರ್ಖಂಡ್ ಮೂಲದ ಉದಯ್ ನಿಗೂಡವಾಗಿ ಸಾವನ್ನಪ್ಪಿದ್ದಾನೆ. ವಿಪರೀತ ಸಿಡಿಲು ಸಹಿತ ಮಳೆಯಾಗಿದ್ದು ಉದಯ್ ಸಿಡಿಲು ಬಡಿದು ಸಾವನ್ನಪ್ಪಿರಬಹುದು ಅಥವಾ ಗಣಿ ಬ್ಲಾಸ್ಟ್ ನಿಂದ ಸತ್ತಿರಬಹುದು ಎಂಬ ಊಹಾಪೋಹಗಳು ಸ್ಥಳೀಯರಲ್ಲಿ ಹುಟ್ಟಿಕೊಂಡಿತ್ತು. ಈ ಉಹಾಪೋಹಗಳಿಗೆ ಪೂರಕವೆಂಬಂತೆ ಕಲ್ಲು ಕ್ವಾರೆಯ ಮಾಲೀಕರು ಹಾಗೂ ಸಂಬಂಧಿಸಿದವರು ಘಟನೆಯ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಮುಟ್ಟಿಸದೇ ಆತುರ ಆತುರದಲ್ಲಿ ಕೋಣಂದೂರು ಆಸ್ಪತ್ರೆಗೆ ಮೃತದೇಹವನ್ನು ಕರೆದೊಯ್ದು ಸ್ವಾಭಾವಿಕ ಸಾವು ಎಂಬ ರಿಪೋರ್ಟ್ ರೆಡಿ ಮಾಡಿಸಿ ರಾತ್ರೋರಾತ್ರಿ ಮೃತದೇಹವನ್ನು ಜಾರ್ಖಂಡ್ ಗೆ ಕಳುಹಿಸಿಕೊಟ್ಟಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಈ ಘಟನೆಯ ಬಗ್ಗೆ ಮಾಹಿತಿ ತಿಳಿದ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ಸಂಬಂಧಿಸಿದವನ್ನು ವಿಚಾರಣೆಗೆ ಒಳಪಡಿಸಿ ಘಟನೆಯ ಸತ್ಯಾಸತ್ಯತೆ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದಾರೆ. ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ಜಾರ್ಖಂಡ್ ಗೆ ಕರೆದೊಯ್ದಿದ್ದ ಉದಯ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಾಪಾಸ್ಸು ಕರೆತರಲಾಗುತ್ತಿದೆ ಎನ್ನಲಾಗುತ್ತಿದೆ.

– ಶಿವಮೊಗ್ಗ : ಕಾಡಾನೆಗಳ ಹಾವಳಿ, ಸಾವಿರಾರು ಅಡಿಕೆ ಮರ ನಷ್ಟ

ಶಿವಮೊಗ್ಗ: ಆಯನೂರು ಹೋಬಳಿಗಳಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದೆ. ಡಿಎಫ್ ಒ ಕಚೇರಿ ಎದುರು ಪುರುದಾಳಿನ ರೈತರು ಮೂರು ದಿನಗಳ ಹಿಂದೆ ಡಿಎಫ್ ಒ ಕಚೇರಿ ಎದುರು ಪ್ರತಿಭಟಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದರು. ಈಗ ಗುಡ್ಡದ ಅರಕೆರೆ ರೈತರು ಪ್ರತಿಭಟನೆಯ ಎಚ್ಚರಿಕೆ ನೀಡಿದರೆ ಸಿರಿಗೆರೆ ರೈತರು ಆತ್ಮಹತ್ಯೆಯ ದಾರಿ ಹಿಡಿಯುವುದಾಗಿ ಎಚ್ಚರಿಸಿದ್ದಾರೆ. ಕಾಡಾನೆಗಳ ಹಾವಳಿಯಿಂದ ಆಯನೂರು ಹೋಬಳಿ‌ ಸಿರಿಗೆರೆ, ಪುರುದಾಳು, ಆಲದೇವರ ಹೊಸೂರು ಸರ್ವೆ ನಂಬರ್ 27/117, ಗುಡ್ಡದ ಅರಕೆರೆಯ ಅಡಿಕೆ ಮತ್ತು ಬಾಖೆಗಿಡಗಳನ್ನ ಹಾಳು ಮಾಡಿದ್ದು, ರೈತರು ಗೋಳಾಡುವಂತೆ ಮಾಡಿದೆ. ಗುಡ್ಡದ ಅರಕೆರೆಯಲ್ಲಿ 1200 ಬಾಳೆಗಿಡ, 200 ಅಡಿಕೆ ಗಿಡಗಳನ್ನ ಹಾಳು ಮಾಡಿರುವುದಾಗಿ ರೈತರು ಆರೋಪಿಸಿದ್ದಾರೆ. ಈಗ ಮೂರು ನಾಕು ದಿನಗಳ ಹಿಂದಷ್ಟೇ ನಾಲ್ಕೈದು ಆನೆಗಳು ಸಿರಿಗೆರೆಯಲ್ಲಿ ಮುಸುಕಿನ ಜೋಳ, ಭತ್ತದ ಗದ್ದೆಗಳಿಗೆ ನುಗ್ಗಿ ಫಸಲು ತುಳಿದು ತಿಂದು ಅಪಾರ ನಷ್ವವನ್ನುಂಟು ಮಾಡಿತ್ತು. ರೈತರು ಜೀವ ಬಿಗಿಹಿಡಿದು ಕೊಂಡು ನಡುರಾತ್ರಿಯಲ್ಲಿ ತಮ್ಮ ಹೊಲಗಳಲ್ಲಿ ಕಾವಲು‌ ಕಾಯುವಂತಾಗಿದೆ. ಈ ಆನೆಗಳು ರಾತ್ರಿ ವೇಳೆ ದಾಳಿ ನಡೆಸುತ್ತಿವೆ. ಗುಡ್ಡದ ಹರಕೆರೆಯಲ್ಲಿ ಮೊನ್ನೆ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯ ವರೆಗೆ 6 ಆನೆಗಳು ರೈತರ ತೋಟಗಳಿಗೆ ದಾಳಿ ನಡೆಸಿ ಬೆಳೆ ಹಾನಿ ಉಂಟು ಮಾಡಿದರೆ ಆಲದಹೊಸೂರಿನಲ್ಲಿ ಬೆಳಗಿನ ಜಾವ ದಾಳಿ ಇಟ್ಟು ಬೆಳೆ ಹಾನಿಪಡಿಸಿದೆ ಎಂದು ರೈತರು ದೂರಿದ್ದಾರೆ. ಆನೆಗಳು ರೈತರ ಜೀವಕ್ಕೆ ಹಾನಿ ಮಾಡಿದರೆ ಯಾರು ಗತಿ?ಅವರ ಸಂಕಷ್ಟವನ್ನ. ಅರಣ್ಯ ಇಲಾಖೆ ತುರ್ತಾಗಿ ಪರಿಹರಿಸಬೇಕು. ಇಲ್ಲದಿದ್ದರೆ ಆತ್ಮಹತ್ಯೆ ದಾರಿ ನೋಡಿಕೊಳ್ಳಬೇಕಾಗುತ್ತದೆ ಎಂದು ರೈತರು ಮೊರೆಯಿಟ್ಟಿದ್ದಾರೆ.