ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
ಐಪಿಎಲ್ -2025
* ಗುಜರಾತ್‌ಗೆ ಗುದ್ದಿದ ಮುಂಬೈ ಕ್ವಾಲಿಫೈಯರ್‌ಗೆ ಎಂಟ್ರಿ
* ಮುಂಬೈಗೆ 20 ರನ್ ಜಯ,ರೋಹಿತ್ 81
NAMMMUR EXPRESS SPORTS NEWS
ಮುಲ್ಲಾನ್‌ಪುರ:ಐಪಿಎಲ್ 2025 ರ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 20 ರನ್‌ಗಳ ರೋಚಕ ಜಯ ಸಾಧಿಸಿದೆ. ಚಂಡೀಗಡದಲ್ಲಿರುವ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 228 ರನ್ ಗಳಿಸಿತು. ಇನ್ನೊಂದೆಡೆಗೆ ಗುಜರಾತ್ ಟೈಟಾನ್ಸ್, 229 ರನ್‌ಗಳ ಗುರಿಯನ್ನು ಬೆನ್ನಟ್ಟಿ, 20 ಓವರ್‌ಗಳಲ್ಲಿ 6 ವಿಕೆಟ್‌ಗೆ 208 ರನ್ ಗಳಿಸಲಷ್ಟೇ ಶಕ್ತವಾಯಿತು.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ತಂಡದ ಪರವಾಗಿ ಆರಂಭಿಕ ಆಟಗಾರರಾಗಿ ರೋಹಿತ್ ಶರ್ಮಾ (81 ರನ್, 50 ಎಸೆತ, 9 ಬೌಂಡರಿ, 4 ಸಿಕ್ಸರ್) ಮತ್ತು ಜಾನಿ ಬೇರ್‌ಸ್ಟೋ (47 ರನ್, 22 ಎಸೆತ, 4 ಬೌಂಡರಿ, 3 ಸಿಕ್ಸರ್) ತಂಡಕ್ಕೆ ಭರ್ಜರಿ ಆರಂಭ ನೀಡಿದರು. 7.2 ಓವರ್‌ನಲ್ಲಿ 84 ರನ್‌ಗಳಿಗೆ ಬೇರ್‌ಸ್ಟೋ ವಿಕೆಟ್ ಉರುಳಿದರೂ , ಸೂರ್ಯಕುಮಾರ್ ಯಾದವ್ (33 ರನ್, 20 ಎಸೆತ) ಮತ್ತು ತಿಲಕ್ ವರ್ಮಾ (25 ರನ್, 11 ಎಸೆತ) ರನ್ ಗತಿಯನ್ನು ಕಾಯ್ದುಕೊಂಡರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ (22 ರನ್, 9 ಎಸೆತ, 2 ಬೌಂಡರಿ, 2 ಸಿಕ್ಸರ್) ಅಜೇಯರಾಗಿ ತಂಡದ ಮೊತ್ತ 228 ಗಳಿಸುವಲ್ಲಿ ನೆರವಾದರು.
ಗುಜರಾತ್ ತಂಡದ ಪರವಾಗಿ ಬೌಲಿಂಗ್‌ನಲ್ಲಿ ಪ್ರಸಿದ್ಧ್ ಕೃಷ್ಣ (2/53) ಮತ್ತು ಸಾಯಿ ಕಿಶೋರ್ (2/42) ತಲಾ ಎರಡು ವಿಕೆಟ್ ಕಿತ್ತರು. ಆದರೆ, ಮೊಹಮ್ಮದ್ ಸಿರಾಜ್ (1/37) ಮತ್ತು ಜೆರಾಲ್ಡ್ ಕೊಯೆಟ್ಜೀ (0/51) ರನ್ ಬಿಟ್ಟುಕೊಟ್ಟು ದುಬಾರಿಯಾದರು.
229 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ಆರಂಭದಲ್ಲೇ ಶಾಕ್ ಕಾದಿತ್ತು, ನಾಯಕ ಶುಭ್‌ಮನ್ ಗಿಲ್ (1 ರನ್) ಮೊದಲ ಓವರ್‌ನಲ್ಲೇ ಔಟಾದರು. ಆದರೆ, ಸಾಯಿ ಸುದರ್ಶನ್ (80 ರನ್, 49 ಎಸೆತ, 10 ಬೌಂಡರಿ, 1 ಸಿಕ್ಸರ್) ಮತ್ತು ಕುಸಾಲ್ ಮೆಂಡಿಸ್ (20 ರನ್, 10 ಎಸೆತ) ಎರಡನೇ ವಿಕೆಟ್‌ಗೆ 64 ರನ್ ಜೊತೆಯಾಟ ನೀಡಿದರು. ವಾಷಿಂಗ್ಟನ್ ಸುಂದರ್ (48 ರನ್, 24 ಎಸೆತ, 4 ಬೌಂಡರಿ, 3 ಸಿಕ್ಸರ್) ಮತ್ತು ಶೆರ್ಫೇನ್ ರುದರ್‌ಫೋರ್ಡ್ (24 ರನ್, 15 ಎಸೆತ) ಉತ್ತಮ ಕಾಣಿಕೆ ನೀಡಿದರೂ, ವಿಕೆಟ್‌ಗಳು ಉರುಳಿದ್ದು ತಂಡಕ್ಕೆ ಆಘಾತ ನೀಡಿತು. ಕೊನೆಯ ಓವರ್‌ನಲ್ಲಿ ಶಾರುಖ್ ಖಾನ್ (13 ರನ್) ಔಟಾದಾಗ ಗುಜರಾತ್‌ನ ಆಸೆಗಳು ಕಮರಿದವು. ರಾಹುಲ್ ತೆವಾಟಿಯಾ (16 ರನ್, 11 ಎಸೆತ) ಅಜೇಯರಾಗಿ ಉಳಿದರೂ, ತಂಡ 208/6 ರನ್‌ಗೆ ಸೀಮಿತವಾಯಿತು.
ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಟ್ರೆಂಟ್ ಬೌಲ್ಟ್ (2/56) ಮತ್ತು ಜಸ್‌ಪ್ರೀತ್ ಬುಮ್ರಾ (1/27) ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿದರು. ರಿಚರ್ಡ್ ಗ್ಲೀಸನ್ (1/39) ಮತ್ತು ಅಶ್ವನಿ ಕುಮಾರ್ (1/28) ಕೂಡ ತಲಾ ಒಂದು ವಿಕೆಟ್ ಪಡೆದರು.ಈ ಜಯದೊಂದಿಗೆ ಮುಂಬೈ ಇಂಡಿಯನ್ಸ್ ಐಪಿಎಲ್ 2025 ರ ಕ್ವಾಲಿಫೈಯರ್‌ಗೆ ಎಂಟ್ರಿ ಕೊಟ್ಟಿದೆ, ಆದರೆ ಗುಜರಾತ್ ಟೈಟಾನ್ಸ್‌ಗೆ ತನ್ನ ಈ ಆವೃತ್ತಿಯ ಐಪಿಎಲ್ ಪಯಣ ಮುಕ್ತಾಯವಾಗಿದೆ.
ಜೂನ್ 1 ಭಾನುವಾರದಂದು ಅಹಮದಾಬಾದ್‌ನಲ್ಲಿ ನಡೆಯುವ ಕ್ವಾಲಿಫೈಯರ್ 2ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಜೂನ್ 3ರಂದು ಅದೇ ಮೈದಾನದಲ್ಲಿ ನಡೆಯುವ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಟ್ರೋಫಿಗಾಗಿ ಸೆಣೆಸಬೇಕಿದೆ.






