Categories
ಕೊಪ್ಪ

ಹರಿಹರಪುರದಲ್ಲಿ ಭಾಗವತರ ಸಂಸ್ಮರಣೆ ಕಾರ್ಯಕ್ರಮ ಯಶಸ್ವಿ

ಹರಿಹರಪುರದಲ್ಲಿ ಭಾಗವತರ ಸಂಸ್ಮರಣೆ ಕಾರ್ಯಕ್ರಮ ಯಶಸ್ವಿ
– ಕಂಚಿನ ಕಂಠದ ಗಾನ ಸಿರಿ ಕಾವ್ಯಶ್ರೀ ಅಜೇರುರವರ ಅಮೋಘ ಭಾಗವತಿಕೆ ಗಾಯನ
– ರೋಟರಿ ಸಮುದಾಯದ ಯಕ್ಷ ವೇದಿಕೆ ಹಾಗೂ ಕಲಾಭಿಮಾನಿ ಬಳಗ ಹರಿಹರಪುರದಲ್ಲಿ ಮೇ 25 ರಂದು ಗಾನಾರಾಧನೆ ಕಾರ್ಯಕ್ರಮ ಯಶಸ್ವಿ

NAMMUR EXPRESS NEWS
ಹರಿಹರಪುರ : ಯಕ್ಷಗಾನದ ಹೆಸರಾಂತ ಭಾಗವತರಾದ ಕಾಳಿಂಗ ನಾವಡ ಹಾಗೂ ಸುಬ್ರಹ್ಮಣ್ಯ ಧಾರೇಶ್ವರ ಇವರ ಸಂಸ್ಮರಣೆ ಹಾಗೂ ಗಾನಾರಾಧನೆ ಕಾರ್ಯಕ್ರಮ ಹರಿಹರಪುರದಲ್ಲಿನ ಶ್ರೀ ಮಲ್ಲೇಶಯ್ಯನವರ ಛತ್ರದಲ್ಲಿ ಮೇ 25 ರಂದು ನಡೆಯಿತು. ರೋಟರಿ ಸಮುದಾಯದ ಯಕ್ಷ ವೇದಿಕೆ ಹಾಗೂ ಕಲಾಭಿಮಾನಿ ಬಳಗ ಹರಿಹರಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಕೊಪ್ಪ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಹರ್ಷ ಹರಿಹರಪುರ, ಆರ್ ಸಿ ಸಿ ಅಧ್ಯಕ್ಷ ಶ್ರೀನಿವಾಸ ಮೂರ್ತಿ, ಯಕ್ಷ ವೇದಿಕೆಯ ಮಂಜುನಾಥ ಸೇರೀಗಾರ್ ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಹರಿಹರಪುರದ ಶ್ರೀ ಟಿ. ಕೆ ಮಂಜುನಾಥ್ ಭಾಗವತದ್ವಯರ ಕುರಿತು ಸಂಸ್ಮರಣಾ ನುಡಿಗಳ ನ್ನಾಡಿದರೆ , ಯಕ್ಷಗಾನದ ಪ್ರಸಿದ್ಧ ಭಾಗವತರಾದ ಶ್ರೀಮತಿ ಕಾವ್ಯಶ್ರೀಯವರು ಯಕ್ಷಗಾನದ ಬೇರೆ ಬೇರೆ ಪ್ರಸಂಗಗಳಿಂದ ಆಯ್ದ ಪದ್ಯಗಳೊಂದಿಗೆ ಗಾನಾರಾಧನೆ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಕಲಾವಿದರ ರಕ್ಷಣಾ ವೇದಿಕೆ ಬೆಂಗಳೂರು ಹಾಗೂ ಕಲಾವಿದರ ಬೆಳಕು ಕುಂದಾಪುರ ಈ ಸಂಸ್ಥೆಯವರು ನೀಡುವ ಕರುನಾಡ ಗಾನಗಂಧರ್ವ ಪ್ರಶಸ್ತಿಗೆ ಭಾಜನರಾದ ಹರಿಹರಪುರದ ಶಿವಶಂಕರ ಭಾಗವತರನ್ನು ಅಭಿನಂದಿಸಿ ಗೌರವಿಸಲಾಯಿತು. ಶಿವಶಂಕರ್ ಪ್ರಾರ್ಥಿಸಿ, ಯಕ್ಷಗಾನ ಮದ್ದಳೆಯ ಕಲಾವಿದರು ಆದ ಹುಲುಗಾರು ಗಣೇಶ ಮೂರ್ತಿ ಸ್ವಾಗತಿಸಿದರು. ಕಾವ್ಯಶ್ರೀ ಇವರ ಸುಮಧುರ ಕಂಠದಲ್ಲಿ ಮೂಡಿಬಂದ ಗಾಯನ ಸೇರಿದ್ದ ಪ್ರೇಕ್ಷಕರ ಮನರಂಜಿಸುವುದರೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಜೊತೆಯಲ್ಲಿ ಕಾವ್ಯಶ್ರೀ ಅಜೇರು ರವರ ತಂದೆ ಶ್ರೀಪತಿ ಆಚಾರ್ಯ ಅಜೇರು, ಮೃದಂಗದಲ್ಲಿ ಚಂದ್ರಶೇಖರ್ ಆಚಾರ್ಯ, ಗುರುವಾಯನಕೆರೆ ಉತ್ತಮ ಸಾಥ್ ನೀಡಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ಈ ಕಾರ್ಯಕ್ರಮಕ್ಕೆ ಬಹು ದೂರದಿಂದ ಆಗಮಿಸಿದ, ಶರಾವತಿಯ ಮೂಲ ಅಂಬು ತೀರ್ಥ ತೀರ್ಥಹಳ್ಳಿಯ ಜೇಸಿಯ ಮಾಜಿ ಅಧ್ಯಕ್ಷರು, ಸಾಂಸ್ಕೃತಿಕ ಸಂಘಟಕರಾದ ಅಂಬುತೀರ್ಥ ರಾಘವೇಂದ್ರ, ಯಕ್ಷಗಾನದ ಕಥಾನಕ ಕರ್ತೃ, ಸೋಶಿಯಲ್ ಮೀಡಿಯಾ ಬರಹಗಾರರು ಹಾಗು ಮೃಗವಧೆಯ ಮಲಹಾನಿಕರೇಶ್ವರ ಸ್ವಾಮಿಯ ಪ್ರಧಾನ ಅರ್ಚಕರು, ಕಲಾವಿದರು ಆದ ಮೃಗವಧೆ ಶಿವಪ್ರಸಾದ್ ಹಾಗೂ ಕುವೆಂಪು ಜನಿಸಿದ ಸ್ಥಳ ಹಿರೇಕೊಡಿಗೆಯ ಯಕ್ಷಗಾನ ಕಲಾಪ್ರೇಮಿ ಮತ್ತು ಪ್ರಗತಿಪರ ಕೃಷಿಕರಾದ ಸುಬ್ರಮಣ್ಯ ಹೊಳ್ಳರವರು ದೂರದಿಂದ ಆಗಮಿಸಿದ್ದಾರೆ ಎಂದು ಸಂಘಟಕರು ಗುರುತಿಸಿದ್ದು ವಿಶೇಷ.

ಒಟ್ಟಾರೆಯಾಗಿ ವರುಣನ ಆರ್ಭಟದ ನಡುವೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನ ಗೊಂಡಿದ್ದು, ಸಂಘಟಕರಿಗೆ ಹುಮ್ಮಸ್ಸು ನೀಡಿತು. ಸಂಘಟಕರು, ಆಯೋಜಕರು, ಪ್ರಾಯೋಜಕರು ಮತ್ತು ಪ್ರೇಕ್ಷಕರ ಸಹಕಾರದಿಂದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಸುಸಂಪನ್ನಗೊಂಡಿತು ಎಂದರೆ ಅತಿಶಯೋಕ್ತಿಯಾಗಲಾರದು.

Categories
ಚಿಕ್ಕಮಗಳೂರು

ಮಳೆಗಾಲದ ತುರ್ತು ಸಂದರ್ಭದಲ್ಲಿ ಜನರ ನೆರವಿಗೆ 112 ಸರ್ವ ಸನ್ನದ್ದ

ಮಳೆಗಾಲದ ತುರ್ತು ಸಂದರ್ಭದಲ್ಲಿ ಜನರ ನೆರವಿಗೆ 112 ಸರ್ವ ಸನ್ನದ್ದ

* ಸಾರ್ವಜನಿಕರು,ಪ್ರವಾಸಿಗರು ನೆರವಿಗೆ 112 ಸಹಾಯವಾಣಿ ಬಳಸಿ
* ಮಳೆಗಾಲದ ತುರ್ತು ಸಂದರ್ಭದಲ್ಲಿ ನೆರವಿಗೆ 112 ಬಳಸಿ – ಎಸ್‌ಪಿ ವಿಕ್ರಂ ಆಮಟೆ

NAMMMUR EXPRESS NEWS
ಚಿಕ್ಕಮಗಳೂರು: ಧಾರಕಾರ ಮಳೆಯಿಂದಾಗಿ ಜಿಲ್ಲೆಯ ಜನ ಅಕ್ಷರಶಹಃ ನಲುಗಿದ್ದು,ಜಿಲ್ಲೆಯಾದ್ಯಂತ ಮಳೆಗೆ ಸಾಲು ಸಾಲು ತೊಂದರೆಗಳು ಉಂಟಾಗಿದ್ದು ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಜಿಲ್ಲಾ ಪೊಲೀಸ್ ಅಲರ್ಟ್ ಆಗಿದ್ದು,ಮಳೆಗಾಲದ ತುರ್ತು ಸಂದರ್ಭಗಳಲ್ಲಿ 112 ಸಹಾಯವಾಣಿಯನ್ನು ಬಳಸಿಕೊಳ್ಳುವಂತೆ ಎಸ್‌ಪಿ ವಿಕ್ರಂ ಆಮಟೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 23 112 ವಾಹನಗಳಿದ್ದು,ತುರ್ತು ಸಂದರ್ಭದಲ್ಲಿ ಕರೆ ಮಾಡಿದರೆ ಕೇವಲ 15 ನಿಮಿಷಗಳಲ್ಲಿ ಘಟನಾ ಸ್ಥಳಕ್ಕೆ ಬಂದು ಸಮಸ್ಯೆಯಲ್ಲಿರುವವರಿಗೆ ನೆರವಾಗಲಾಗುವುದು, ಸಮಸ್ಯೆ ಅಥವಾ ಅವಘಡ ಸಂಭವಿಸಿದರೆ ಎಲ್ಲರಿಗೂ ಪೊಲೀಸ್ ಠಾಣೆಗೆ ಹೋಗುಲು ಆಗಲ್ಲ ಹಾಗಾಗಿ ದಿನದ 24 ಗಂಟೆಯೂ ಕೂಡ 112 ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ. ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಯಾವುದೇ ತೊಂದರೆ ಸಂಭವಿಸಿದರೆ ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.
ಮಳೆಯ ಸಂಬಂಧ ಈಗಾಗಲೇ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು,ಸರ್ವಸನ್ನದ್ಧವಾಗಿದೆ.ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಇಲಾಖೆ ವತಿಯಿಂದ ಸೂಚಿಸಲಾಗಿದೆ ಎಂದು ತಿಳಿಸಿದರು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಚಾಲೆಂಜಿಂಗ್ ಗುರಿಯನ್ನು ಬೆನ್ನಟ್ಟಿ ರಾಯಲ್ ಗೆಲವು ಸಾಧಿಸಿದ ಆರ್‌ಸಿಬಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್ 

ಐಪಿಎಲ್ -2025
* ಚಾಲೆಂಜಿಂಗ್ ಗುರಿಯನ್ನು ಬೆನ್ನಟ್ಟಿ ರಾಯಲ್ ಗೆಲವು ಸಾಧಿಸಿದ ಆರ್‌ಸಿಬಿ
* ಜಿತೇಶ್ – ಮಯಾಂಕ್ ಸಾಹಸಕ್ಕೆ ಬೆಚ್ಚಿದ ಲಖನೌ

NAMMMUR EXPRESS SPORTS NEWS
ಲಖನೌ: ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇತಿಹಾಸ ನಿರ್ಮಿಸಿತು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 228 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಅದ್ಭುತ ಗೆಲುವು ಸಾಧಿಸಿದ್ದಲ್ಲದೆ, ಲೀಗ್ ಹಂತವನ್ನು ಅಗ್ರ-2 ರಲ್ಲಿ ಮುಗಿಸುವ ಮೂಲಕ ತಮ್ಮ ಪ್ಲೇಆಫ್ ಸ್ಥಾನವನ್ನು ಬಲಪಡಿಸಿಕೊಂಡಿದೆ. ಆರ್‌ಸಿಬಿ ತನ್ನ ಐಪಿಎಲ್ ಇತಿಹಾಸದಲ್ಲಿ ಅತಿ ದೊಡ್ಡ ರನ್ ಚೇಸ್ ಮಾಡಿದ ದಾಖಲೆಯನ್ನು ಬರೆಯಿತು. ಈ ಗೆಲುವಿನಿಂದ ಆರ್‌ಸಿಬಿ ತಂಡವು ಕ್ವಾಲಿಫೈಯರ್-1 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲು ಅರ್ಹತೆ ಪಡೆದುಕೊಂಡಿದೆ.
ವಿರಾಟ್‌ ಕೊಹ್ಲಿ(54) ಅರ್ಧ ಶತಕದ ಜತೆ ಜಿತೇಶ್‌ ಶರ್ಮ(85*) ಮತ್ತು ಮಯಾಂಕ್‌ ಅಗರ್ವಾಲ್‌ (41) ಅವರ 107 ರನ್‌ಗಳ ಸಮಯೋಚಿತ ಜತೆಯಾಟದ ಬಲದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಲಖನೌ ಸೂಪರ್‌ಜೈಂಟ್ಸ್‌ ತಂಡವನ್ನು ಮಣಿಸಿ, ಒಟ್ಟು 19 ಅಂಕಗಳನ್ನು ಕಲೆಹಾಕಿದ ಆರ್‌ಸಿಬಿ, ಅಂಕಪಟ್ಟಿಯಲ್ಲಿ 2ನೇ ತಂಡವಾಗಿ ಲೀಗ್‌ ಹಂತವನ್ನು ಪೂರ್ಣಗೊಳಿಸಿತು.2016ರ ನಂತರ ಮೊದಲ ಸಲ ಅಗ್ರ ಎರಡರಲ್ಲಿ ಸ್ಥಾನ ಪಡೆದ ಆರ್‌ಸಿಬಿ ಮೇ 29ರಂದು ಮುಲ್ಲನ್‌ಪುರದಲ್ಲಿ ನಡೆಯಲಿರುವ ಕ್ವಾಲಿಫೈಯರ್ಸ್‌ 1ರಲ್ಲಿ ಫೈನಲ್‌ ಪ್ರವೇಶಕ್ಕಾಗಿ ಪಂಜಾಬ್‌ ಕಿಂಗ್ಸ್‌ ತಂಡದ ಸವಾಲು ಎದುರಿಸಲಿದೆ. ಸೋತ ತಂಡ ಕ್ವಾಲಿಫೈಯರ್ಸ್‌ 2ರಲ್ಲಿ ಗೆದ್ದು ಫೈನಲ್‌ ಪ್ರವೇಶಿಸುವ ಅವಕಾಶವನ್ನು ಹೊಂದಿದೆ.
ಆರ್‌ಸಿಬಿ 228 ರನ್‌ಗಳ ಗುರಿಯನ್ನು 8 ಎಸೆತಗಳು ಬಾಕಿ ಇರುವಂತೆಯೇ ತಲುಪಿತು.
ಆರಂಭಿಕರಾದ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಪ್ರಥಮ ಎಸೆತದಿಂದಲೇ ವೇಗದ ಆಟಕ್ಕೆ ಒತ್ತು ನೀಡಿ ಪವರ್ ಪ್ಲೇ ನ ಮೊದಲ ನಾಲ್ಕು ಓವರ್ ಗಳಲ್ಲೇ ತಂಡದ ಮೊತ್ತವನ್ನು 50ರ ಗಡಿ ದಾಟಿಸುತ್ತಾರೆ. 6ನೇ ಓವರ್ ನ 4ನೇ ಎಸೆತದಲ್ಲಿ ಫಿಲ್ ಸಾಲ್ಟ್ ಅವರ ವಿಕೆಟ್ ಪಡೆಯುವಲ್ಲಿ ಲೋಕಲ್ ಬಾಯ್ ಆಕಾಶ್ ಸಿಂಗ್ ಯಶಸ್ವಿಯಾಗುತ್ತಾರೆ. ತಂಡದ ಮೊತ್ತ 61 ಆದ ಸಂದರ್ಭದಲ್ಲಿ 30 ರನ್ ಗಳಿಸಿದ್ದ ಅವರು ವಿಘ್ನೇಶ್ ರಾಠಿ ಅವರಿಗೆ ಕ್ಯಾಚಿತ್ತರು.
ಬಳಿಕ ಕ್ರೀಸಿಗೆ ಬಂದ ಇಂಪ್ಯಾಕ್ಟ ಪ್ಲೇಯರ್ ರಜತ್ ಪಾಟೀದಾರ್ ಬಂದೊಡನೆ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ ವಿರಾಟ್ ಕೊಹ್ಲಿಗೆ ಸಾಥ್ ನೀಡುವ ಸೂಚನೆ ನೀಡಿದ್ದರು. ಆದರೆ 8ನೇ ಓವರ್ ನಲ್ಲಿ 7 ಎಸೆತಗಳಿಂದ 14 ರನ್ ಗಳಿಸಿದ್ದ ಅವರನ್ನು ಓರೂರ್ಕ್ ಅವರು ಅಬ್ದುಲ್ ಸಮದ್‌ಗೆ ಕ್ಯಾಚ್ ಕೊಡಿಸುವಲ್ಲಿ ಯಶಸ್ವಿಯಾದರು. ಇದರ ಮುಂದಿನ ಎಸೆತದಲ್ಲೇ ಲಿವಿಂಗ್ ಸ್ಟೋನ್ ವಿಕೆಟ್ ಸಹ ಪತನಗೊಂಡಿತು. ಮತ್ತೊಂದೆಡೆ ತುದಿಯಲ್ಲಿ ವಿರಾಟ್ ಕೊಹ್ಲಿ ಅವರು ತಮ್ಮ ಜವಾಬ್ದಾರಿಯುತ ಆಟವಾಡಿದರು. 27 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದ ಅವರು ತಂಡವನ್ನು ದಡಸೇರಿಸುವ ಉತ್ಸಾಹದಲ್ಲಿದ್ದರು. ಆದರೆ 12 ನೇ ಓವರ್‌ನಲ್ಲಿ ತಂಡದ ಮೊತ್ತ 123 ರನ್ ಆಗಿದ್ದಾಗ 30 ಎಸೆತಗಳಲ್ಲಿ 54 ರನ್ ಗಳಿಸಿದ್ದ ಅವರು ಆವೇಶ್ ಖಾನ್ ಬೌಲಿಂಗ್ ನಲ್ಲಿ ಆಯುಷ್ ಬದೋನಿಗೆ ಕ್ಯಾಚ್ ನೀಡಿದರು. ಅವರ ಬ್ಯಾಟಿನಿಂದ 10 ಬೌಂಡರಿಗಳು ಹರಿದು ಬಂದವು.

* ಮಾಯಾಂಕ್ – ಜಿತೇಶ್ ಶತಕದ ಜೊತೆಯಾಟ
ಕನ್ನಡಿಗ ಮಾಯಾಂಕ್ ಅಗರ್ವಾಲ್ ಅವರನ್ನು ಸೇರಿಕೊಂಡ ನಾಯಕ ಜಿತೇಶ್ ಶರ್ಮಾ ಕೇವಲ 21 ಎಸೆತಗಳಲ್ಲಿ 50 ರನ್ ಚಚ್ಚಿ ಆರ್‌ಸಿಬಿ ಪಾಳಯದಲ್ಲಿ ಮತ್ತೆ ಜೀವ ತುಂಬಿದರು. ಈ ಹಂತದಲ್ಲಿ ಪಂದ್ಯ ಸಂಪೂರ್ಣವಾಗಿ ಆರ್‌ಸಿಬಿ ಕಡೆಗೆ ವಾಲಿತು. ಆದರೆ ಜಿತೇಶ್ ಶರ್ಮಾ ಅವರು 49 ರನ್ ಗಳಿಸಿದ್ದಾಗ ವಿಫ್ನೇಶ್ ರಾಠಿ ಅವರು ಆಯುಷ್ ಬದೋನಿಗೆ ಕ್ಯಾಚ್ ಕೊಡಿಸುವಲ್ಲಿ ಯಶಸ್ವಿಯಾದರು. ಆದರೆ ಅದು ನೋಬಾಲ್ ಆಗಿದ್ದರಿಂದ ಜಿತೇಶ್ ಶರ್ಮಾ ಅವರಿಗೆ ಅದೃಷ್ಟ ಖುಲಾಯಿಸಿತು. ಮುಂದಿನ ಎಸೆತದಲ್ಲೇ ಅವರು ಸಿಕ್ಸರ್ ಬಾರಿಸಿ ಅರ್ಧಶತಕವನ್ನೂ ಪೂರೈಸಿಕೊಂಡರು.ಅಲ್ಲಿಂದ ಹಿಂತಿರುಗಿ ನೋಡದ ಜಿತೇಶ್ ಶರ್ಮಾ ಅವರು ಮಾಯಾಂಕ್ ಅವರೊಂದಿಗೆ ತಂಡವನ್ನು ಜಯದ ದಡ ತಲುಪಿಸಿದರು. ಇವರಿಬ್ಬರು ಮುರಿಯದ 5ನೇ ವಿಕೆಟ್ ಗೆ 107 ರನ್ ಗಳ ಜೊತೆಯಾಟವಾಡಿದರು. ಇದರಲ್ಲಿ ಜಿತೇಶ್ ಶರ್ಮಾ ಅವರು ಕೇವಲ 33 ಎಸೆತಗಳಲ್ಲಿ 85 ರನ್ ಗಳಿಸಿದರು. ಅದರಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್ ಗಳಿದ್ದವು. ಇನ್ನು ಮಾಯಾಂಕ್ ಅಗರ್ವಾಲ್ ಅವರು 23 ಎಸೆತಗಳಲ್ಲಿ 41 ರನ್ ಬಾರಿಸಿದರು,ಇದರಲ್ಲಿ 5 ಬೌಂಡರಿಗಳಿದ್ದವು.
ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಲಖನೌ ತಂಡ ಬೆಂಗಳೂರು ತಂಡದಲ್ಲಿ ಪ್ರಮುಖ ಬೌಲರ್‌ಗಳಿಲ್ಲದ ಅವಕಾಶವನ್ನು ಉಪಯೋಗ ಮಾಡಿಕೊಂಡಿತು. ನಾಯಕ ರಿಷಭ್‌ ಪಂತ್‌ ಅವರ ಜತೆಗೆ ಮಿಚೆಲ್‌ ಮಾರ್ಷ್ ಅವರ ಅರ್ಧ ಶತಕದ ಬಲದಿಂದ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 227 ರನ್‌ ಪೇರಿಸಿತು. ಮಾರ್ಷ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಬ್ರಿಟ್ಝ್ ಆರಂಭದಿಂದಲೇ ಅಬ್ಬರಿದರು. ಆದರೆ ಕೇವಲ 14 ರನ್‌ಗಳಿಗೆ ಸೀಮಿತರಾದರು. ಆದರೆ ಬಳಿಕ ಮಾರ್ಷ್ ಮತ್ತು ನಾಯಕ ರಿಷಭ್‌ ಪಂತ್‌ ಗೆಲುವಿನೊಂದಿಗೆ ಅಭಿಯಾನ ಮುಗಿಸುವ ಗುರಿ ಹೊಂದಿದ್ದ ಲಖನೌ ತಂಡದ ಕಾರ್ಯತಂತ್ರಕ್ಕೆ ಅನುಗುಣವಾಗಿ ಬ್ಯಾಟಿಂಗ್‌ ಪ್ರದರ್ಶಿಸಿದರು. ಇವರಿಬ್ಬರ ಆರ್ಭಟಕ್ಕೆ ಆರ್‌ಸಿಬಿ ಬೌಲರ್‌ಗಳು ಕಂಗಾಲಾಗಿದ್ದರು.

* ಹೊಸ ದಾಖಲೆ ಬರೆದ ಆರ್‌ಸಿಬಿ
ಆರ್‌ಸಿಬಿ ತಂಡವು ಈ ಬಾರಿ ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದಿದೆ. ತವರಿನಿಂದ ಹೊರಗೆ ಆಡಿದ ಎಲ್ಲಾ ಏಳು ಪಂದ್ಯಗಳನ್ನು ಗೆದ್ದಿದೆ. ತವರು ಮತ್ತು ಹೊರಗಿನ ಮೈದಾನಗಳಲ್ಲಿ ಆಡಿದಾಗ, ಯಾವುದೇ ತಂಡವು ಈ ಹಿಂದೆ ಎಲ್ಲಾ ಪಂದ್ಯಗಳನ್ನು ಗೆದ್ದಿರಲಿಲ್ಲ. ಆದರೆ 2025ರ ಐಪಿಎಲ್‌ನಲ್ಲಿ ಆರ್‌ಸಿಬಿ ಈ ಸಾಧನೆ ಮಾಡಿದೆ. 2012ರಲ್ಲಿ ಕೆಕೆಆರ್‌ ಮತ್ತು ಮುಂಬಯಿ ಇಂಡಿಯನ್ಸ್ ತಂಡಗಳು ಸಹ ಲೀಗ್ ಹಂತದಲ್ಲಿ ಏಳು ಪಂದ್ಯಗಳನ್ನು ಗೆದ್ದಿದ್ದವು. ಆದರೆ, ಅದು 16 ಪಂದ್ಯಗಳ ಸೀಸನ್ ಆಗಿತ್ತು. ಆಗ ಎಂಟು ಪಂದ್ಯಗಳು ನಡೆದಿದ್ದವು. ಮುಂಬಯಿ ಮತ್ತು ಕೆಕೆಆರ್‌ ತಂಡಗಳು ಒಂದೊಂದು ಪಂದ್ಯವನ್ನು ಸೋತಿದ್ದವು.

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ವಿನಾಯಕ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ನಿಮಗೆ ಶುಭ ದಿನವಾಗಿರುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಆದರೆ ಅನಗತ್ಯ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಿ ಮತ್ತು ನಿಮ್ಮ ಖರ್ಚುಗಳನ್ನು ನಿಯಂತ್ರಿಸಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಹಲವು ಅವಕಾಶಗಳು ದೊರೆಯಲಿವೆ. ಇಂದು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ.

** ವೃಷಭ ರಾಶಿ :
ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಹಲವು ಅವಕಾಶಗಳು ದೊರೆಯಲಿವೆ. ಇಂದು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ. ವೈರಲ್ ಜ್ವರ, ಶೀತ ಅಥವಾ ನೋಯುತ್ತಿರುವ ಗಂಟಲುಗಳಿಂದ ಬಳಲಬಹುದು. ನಿಮ್ಮ ಚಿಂತೆಗಳನ್ನು ನಿಮ್ಮ ಸಂಗಾತಿ ಅಥವಾ ಆಪ್ತರೊಂದಿಗೆ ಹಂಚಿಕೊಳ್ಳಿ. ಇದು ಸಮಸ್ಯೆಯನ್ನು ಪರಿಹರಿಸಲು ಸುಲಭವಾಗುತ್ತದೆ.

** ಮಿಥುನ ರಾಶಿ :
ಮಿಥುನ ರಾಶಿಯ ಜನರು ಇಂದು ಕಚೇರಿಯಲ್ಲಿ ಮೇಲಾಧಿಕಾರಿಗಳ ಸೂಚನೆಗಳಿಗೆ ವಿಶೇಷ ಗಮನ ನೀಡಬೇಕು, ಇಲ್ಲದಿದ್ದರೆ ಸಮಸ್ಯೆಗಳು ಹೆಚ್ಚಾಗಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಉದ್ಯಮಿ ಯಾರನ್ನೂ ಕುರುಡಾಗಿ ನಂಬಬಾರದು. ಇದರಿಂದ ಆರ್ಥಿಕ ನಷ್ಟ ಉಂಟಾಗಬಹುದು. ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ನಿಮ್ಮ ಚಿಂತೆಗಳನ್ನು ನಿಮ್ಮ ಸಂಗಾತಿ ಅಥವಾ ಆಪ್ತರೊಂದಿಗೆ ಹಂಚಿಕೊಳ್ಳಿ.

** ಕರ್ಕಾಟಕ ರಾಶಿ :
ಇಂದು ಕೆಲವು ಅಪರಿಚಿತ ಭಯದಿಂದ ಮನಸ್ಸು ತೊಂದರೆಗೊಳಗಾಗುತ್ತದೆ. ಕೆಲಸದ ನಿಮಿತ್ತ ಪ್ರಯಾಣ ಮಾಡುವ ಅವಕಾಶವಿರುತ್ತದೆ. ಕಚೇರಿಯಲ್ಲಿ ಕೆಲಸಕ್ಕಾಗಿ ನೀವು ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಯಾವುದೇ ಅಡೆತಡೆಯಿಲ್ಲದೆ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ಕಚೇರಿ ರಾಜಕೀಯದಿಂದ ದೂರವಿರಿ. ಸಹೋದ್ಯೋಗಿಗಳೊಂದಿಗೆ ಅನಗತ್ಯ ವಾದ ವಿವಾದ ಬೇಡ. ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ಆರೋಗ್ಯ ಸಮಸ್ಯೆಗಳು ಉಲ್ಬಣಗೊಳ್ಳಲು ಬಿಡಬೇಡಿ.

** ಸಿಂಹ ರಾಶಿ :
ಇಂದು ಸಿಂಹ ರಾಶಿಯ ಜನರಿಗೆ ಕೆಲಸದ ಒತ್ತಡ ಹೆಚ್ಚಾಗಲಿದೆ. ನಿಮ್ಮ ಗುರಿಗಳನ್ನು ಸಾಧಿಸಲು ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಹಣಕಾಸಿನ ವಿಷಯಗಳಲ್ಲಿ ಅದೃಷ್ಟವಂತರಾಗಿರುತ್ತೀರಿ. ನೀವು ಕುಟುಂಬದೊಂದಿಗೆ ಕೆಲವು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ಚರ್ಚೆಯಿಂದ ಅಂತರ ಕಾಯ್ದುಕೊಳ್ಳಿ. ಕೋಪವನ್ನು ತಪ್ಪಿಸಿ ಮತ್ತು ಶಾಂತ ಮನಸ್ಸಿನಿಂದ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿ.

** ಕನ್ಯಾ ರಾಶಿ :
ಕೋರ್ಟ್ ವಿಚಾರಗಳಿಂದ ದೂರವಿರಿ. ಶತ್ರುಗಳು ಇಂದು ಸಕ್ರಿಯರಾಗಿರುತ್ತಾರೆ. ಇದರಿಂದಾಗಿ ಅಡಚಣೆ ಸ್ವಲ್ಪ ಹೆಚ್ಚಾಗಬಹುದು. ನಿಮ್ಮ ಕೋಪವನ್ನು ನಿಯಂತ್ರಿಸಿ. ಯಾರಿಂದಲೂ ದಾರಿ ತಪ್ಪಬೇಡಿ. ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಕೆಲವು ಜನರು ಇಂದು ಮನೆ ರಿಪೇರಿಗಾಗಿ ಹಣವನ್ನು ಖರ್ಚು ಮಾಡಬಹುದು ಅಥವಾ ಅಗತ್ಯ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಬಹುದು.

** ತುಲಾ ರಾಶಿ :
ಇಂದು ನಿಮ್ಮ ಜೀವನದಲ್ಲಿ ಅನೇಕ ಏರಿಳಿತಗಳು ಕಂಡುಬರುತ್ತವೆ. ಸವಾಲುಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ. ಇದರಿಂದಾಗಿ ವೃತ್ತಿ ಜೀವನದಲ್ಲಿ ಕೆಲವು ತೊಂದರೆಗಳು ಎದುರಾಗುತ್ತವೆ. ತಾಳ್ಮೆಯನ್ನು ಕಾಪಾಡಿಕೊಳ್ಳಿ. ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ಪರಿಹರಿಸಿ. ತಂದೆಯ ಆರೋಗ್ಯದ ಕಡೆ ಗಮನ ಕೊಡಿ. ಅಗತ್ಯವಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.

** ವೃಶ್ಚಿಕ ರಾಶಿ :
ಇಂದು ನಿಮಗೆ ತುಂಬಾ ಶುಭ ದಿನವಾಗಲಿದೆ. ನಿಮ್ಮ ಕೆಲಸವು ಉತ್ತಮ ಫಲಿತಾಂಶವನ್ನು ನೀಡುತ್ತದೆ. ವೃತ್ತಿ ಜೀವನದಲ್ಲಿ ಪ್ರಗತಿಗೆ ಹಲವು ಸುವರ್ಣಾವಕಾಶಗಳು ದೊರೆಯಲಿವೆ. ಉದ್ಯೋಗದ ನಿರೀಕ್ಷೆಯಲ್ಲಿರುವ ಜನರು ಇಂದು ಒಳ್ಳೆಯ ಸುದ್ದಿಯನ್ನು ಸ್ವೀಕರಿಸುತ್ತಾರೆ. ಸರ್ಕಾರಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ನಂತರವೇ ಯಶಸ್ಸು ಪಡೆಯುತ್ತಾರೆ.

** ಧನಸ್ಸು ರಾಶಿ :
ಇಂದು ನಿಮ್ಮ ಭಾವನೆಗಳಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಅಜ್ಞಾತ ಭಯದಿಂದ ಮನಸ್ಸು ತೊಂದರೆಗೊಳಗಾಗುತ್ತದೆ. ಹಣಕಾಸಿನ ವಿಷಯಗಳಲ್ಲಿ ನೀವು ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು, ಆದರೆ ಸಂಪತ್ತನ್ನು ಹೆಚ್ಚಿಸಲು ಮಾಡಿದ ಪ್ರಯತ್ನಗಳು ಫಲಪ್ರದವಾಗುತ್ತವೆ. ಅನೇಕ ಆದಾಯದ ಮೂಲಗಳಿಂದ ಹಣ ಬರುತ್ತದೆ. ಚಾಲನೆ ಮಾಡುವಾಗ ಜಾಗರೂಕರಾಗಿರಿ. ಸಂಚಾರ ನಿಯಮಗಳನ್ನು ಪಾಲಿಸಿ.

** ಮಕರ ರಾಶಿ :
ಇಂದು ನಿಮ್ಮ ಈ ದಿನವು ಸಾಮಾನ್ಯವಾಗಿರುತ್ತದೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ಕೆಲಸದಿಂದ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ. ಮಕರ ರಾಶಿಯವರ ವೃತ್ತಿಪರ ಜೀವನದಲ್ಲಿ ವಿರೋಧಿಗಳು ಸಕ್ರಿಯರಾಗಿರುತ್ತಾರೆ. ಇದರಿಂದಾಗಿ ತೊಂದರೆಗಳು ಸ್ವಲ್ಪ ಹೆಚ್ಚಾಗಬಹುದು. ಹಣಕಾಸಿನ ವಿಷಯಗಳಲ್ಲಿ ಅದೃಷ್ಟವಿರುತ್ತದೆ. ಆದಾಯ ಹೆಚ್ಚಲಿದೆ.

** ಕುಂಭ ರಾಶಿ :
ಇಂದು ಕುಂಭ ರಾಶಿಯ ಜನರಿಗೆ ತಮ್ಮ ಗುರಿಗಳನ್ನು ಸಾಧಿಸಲು ಪ್ರೇರಣೆ ಸಿಗುತ್ತದೆ. ಕುಟುಂಬ ಮತ್ತು ಸ್ನೇಹಿತರ ಬೆಂಬಲದೊಂದಿಗೆ, ಆದಾಯವನ್ನು ಹೆಚ್ಚಿಸಲು ಹೊಸ ಅವಕಾಶಗಳಿವೆ. ಪೂರ್ವಿಕರ ಆಸ್ತಿ ಸಿಗಲಿದೆ. ಹಣಕ್ಕೆ ಸಂಬಂಧಿಸಿದ ವಿವಾದಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ತಂದೆಯಿಂದ ಬೆಂಬಲ ಸಿಗಲಿದೆ. ಸಂಪತ್ತು ಮತ್ತು ಆಸ್ತಿಯಲ್ಲಿ ಹೆಚ್ಚಳದ ಸಾಧ್ಯತೆಗಳಿವೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.

** ಮೀನ ರಾಶಿ :
ಇಂದು ನಿಮಗೆ ಜೀವನದಲ್ಲಿ ಅನೇಕ ಧನಾತ್ಮಕ ಬದಲಾವಣೆಗಳನ್ನು ತರಲಿದೆ. ನೀವು ಕಚೇರಿಯಲ್ಲಿ ಉನ್ನತ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಕೆಲಸ ಕಾರ್ಯಗಳಿಗೆ ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಹೊಸ ಹೂಡಿಕೆ ಅವಕಾಶಗಳು ದೊರೆಯಲಿವೆ. ಆದಾಗ್ಯೂ, ಕಚೇರಿಯಲ್ಲಿ ಪ್ರಮುಖ ಕಾರ್ಯಗಳನ್ನು ನಿರ್ಲಕ್ಷಿಸಬೇಡಿ. ವೃತ್ತಿ ಸಂಬಂಧಿತ ನಿರ್ಧಾರಗಳನ್ನು ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳಿ. ವೆಚ್ಚಗಳನ್ನು ನಿಯಂತ್ರಿಸಿ.

Categories
ಮಂಗಳೂರು

ಮಂಗಳೂರು: ಕರಾವಳಿಯಲ್ಲಿ ಮತ್ತೆ ತಲುವಾರು ದಾಳಿ!

ಮಂಗಳೂರು: ಕರಾವಳಿಯಲ್ಲಿ ಮತ್ತೆ ತಲುವಾರು ದಾಳಿ!

– ಒರ್ವನ ಸ್ಥಿತಿ ಚಿಂತಾಜನಕ, ಮತ್ತೋರ್ವ ಗಂಭೀರ!
– ಹಿಗ್ಗಾಮುಗ್ಗಾ ತಲವಾರಿನಲ್ಲಿ ಕಡಿದ ದುಷ್ಕರ್ಮಿಗಳು

NAMMUR EXPRESS NEWS
ಬಂಟ್ವಾಳ: ಕರಾವಳಿಯಲ್ಲಿ ಮತ್ತೆ ತಲವಾರು ಸದ್ದು ಮಾಡಿದ್ದು ಇಬ್ಬರು ಮುಸ್ಲಿಂ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಬಗ್ಗೆ ಇದೀಗ ವರದಿಯಾಗಿದೆ.
ಕೊಳ್ತಮಜಲು ನಿವಾಸಿ ಪಿಕಪ್ ಮಾಲಿಕ ರಹೀಂ ಮತ್ತು ಆತನ ಸಹಾಯಕ ಶಾಫಿ ಎಂಬ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು ಹಲ್ಲೆ ನಡೆಸಿದ ದುಷ್ಕರ್ಮಿಗಳು ಪರಾರಿಯಾದ ಘಟನೆ ನಡೆದಿದೆ.
ಗಾಯಗೊಂಡ ರಹೀಂ ಸ್ಥಿತಿ ಚಿಂತಾಜನಕವಾಗಿದ್ದು ಶಾಫಿ ಅವರಿಗೂ ಗಂಭೀರ ಗಾಯಗೊಂಡ ಬಗ್ಗೆ ವರದಿಯಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Categories
ದೈವಿಕ ಮಾಹಿತಿ ಸುದ್ದಿ

ಕರ್ನಾಟಕದ ಪ್ರಮುಖ ದೇವಾಲಯದಲ್ಲಿ ಒಂದು ಕುಕ್ಕೆ ಸುಬ್ರಹ್ಮಣ್ಯ!

ಕರ್ನಾಟಕದ ಪ್ರಮುಖ ದೇವಾಲಯದಲ್ಲಿ ಒಂದು ಕುಕ್ಕೆ ಸುಬ್ರಹ್ಮಣ್ಯ!

– 5,000 ವರ್ಷಕ್ಕೂ ಅಧಿಕ ಹಿನ್ನೆಲೆ ಹೊಂದಿರುವ ವಿಶೇಷ ದೇವಸ್ಥಾನ
– ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಕ್ಷೇತ್ರ

NAMMUR EXPRESS NEWS
ಕರ್ನಾಟಕದ ಪ್ರಮುಖ ಮತ್ತು ಭೇಟಿ ನೀಡಲೇಬೇಕಾದ ದೇವಾಲಯಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ತನ್ನ ಆಧ್ಯಾತ್ಮಿಕ ಪ್ರಾಮುಖ್ಯತೆಯಿಂದಾಗಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಕುಕ್ಕೆ ಸುಬ್ರಹ್ಮಣ್ಯವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಗ್ರಾಮದಲ್ಲಿರುವ ಹಿಂದೂ ದೇವಾಲಯವಾಗಿದೆ.
ಈ ದೇವಾಲಯವು ನಾಗದೋಷಕ್ಕೆ ಸಂಬಂಧಿಸಿದ ಆಚರಣೆಗಳಿಗೆ ಹೆಸರುವಾಸಿಯಾಗಿದೆ ಮತ್ತು ಈ ದೇವಾಲಯಕ್ಕೆ ಸಂಬಂಧಿಸಿದ ಪುರಾಣಗಳು ತರ್ಕವನ್ನೇ ಮೀರಿಸುವಂತಹುದ್ದಾಗಿದೆ. ಬನ್ನಿ, ಇಂದಿನ ಓದಿನಲ್ಲಿ 5,000 ವರ್ಷಕ್ಕೂ ಅಧಿಕ ಹಿನ್ನೆಲೆಯನ್ನು ಹೊಂದಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ..

– ಕಾರ್ತಿಕೇಯನಿಗೆ ಅರ್ಪಿತವಾದ ದೇವಾಲಯ

ಈ ದೇವಾಲಯವು ಶಿವ ಪಾರ್ವತಿಯ ಪುತ್ರ ಕಾರ್ತಿಕೇಯನಿಗೆ ಸಮರ್ಪಿತವಾಗಿದ್ದು ಇಲ್ಲಿ ಕಾರ್ತಿಕೇಯನನ್ನು ಸುಬ್ರಹ್ಮಣ್ಯ ಎಂದು ಪೂಜಿಸಲಾಗುತ್ತದೆ. ದೈವಿಕ ಸರ್ಪ ವಾಸುಕಿ ಮತ್ತು ಇತರೆ ಸರ್ಪಗಳು ಗರುಡನಿಂದ ಬೆದರಿಕೆಗೆ ಒಳಗಾದಾಗ ಸುಬ್ರಹ್ಮಣ್ಯನ ಆಶೀರ್ವಾದದೊಂದಿಗೆ ಆಶ್ರಯ ಪಡೆದಿರುವ ಕಥೆಯನ್ನು ಇದು ಹೇಳುತ್ತದೆ.

– ಕುಮಾರ ಪರ್ವ!

ಈ ದೇವಾಲಯವು ಸುಂದರವಾದ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿದೆ. ದೇವಾಲಯದ ಮೇಲಿರುವ ಕುಮಾರ ಪರ್ವತವು ದಕ್ಷಿಣ ಭಾರತದಾದ್ಯಂತ ಇರುವ ಚಾರಣಿಗರಿಗೆ ಜನಪ್ರಿಯ ಪಾದಯಾತ್ರೆಯ ತಾಣವಾಗಿದೆ.
ಕುಮಾರ ಪರ್ವತವಿರುವ ಹಿನ್ನೆಲೆಯಲ್ಲಿ ದೇವಾಲಯದ ಪ್ರವೇಶವು ಬಹುಕಾಂತೀಯವಾಗಿ ಕಾಣುತ್ತದೆ ಮತ್ತು ಶೇಷ ಪರ್ವತವು ಸುಬ್ರಹ್ಮಣ್ಯ ದೇವಾಲಯವನ್ನು ರಕ್ಷಿಸುವ ನಾಗರಹಾವಿನಂತೆ ಕಾಣುತ್ತದೆ. ಶೇಷ ಪರ್ವತ ಎಂದರೆ ಆರು ತಲೆಯ ಹಾವಿನ ಆಕಾರದಲ್ಲಿರುವ ಪರ್ವತವಾಗಿದೆ.

– ಶಂಕರಾಚಾರ್ಯರು ನೆಲೆಸಿದ್ದ ಪವಿತ್ರ ಸ್ಥಳ

ಸುಬ್ರಹ್ಮಣ್ಯವು ದಕ್ಷಿಣ ಕನ್ನಡದ ಸುಳ್ಯ ತಾಲ್ಲೂಕಿನಲ್ಲಿದ್ದು, ಸುತ್ತಲೂ ಹಚ್ಚಹಸಿರು, ಕಾಡುಗಳು ಮತ್ತು ಪರ್ವತಗಳಿಂದ ಆವೃತವಾಗಿದೆ. ಹಿಂದೆ ಸುಬ್ರಹ್ಮಣ್ಯವನ್ನು ಕುಕ್ಕೆ ಪಟ್ಟಣ ಎಂದು ಕರೆಯಲಾಗುತ್ತಿತ್ತು. ಆದಿ ಗುರು ಶ್ರೀ ಶಂಕರಾಚಾರ್ಯರು ತಮ್ಮ ದಂಡಯಾತ್ರೆಯಲ್ಲಿ ಈ ಸ್ಥಳದಲ್ಲಿ ಬೀಡು ಬಿಟ್ಟಿದ್ದರು ಎಂದೂ ಹೇಳಲಾಗುತ್ತದೆ.

– ಧಾರಾ ನದಿಯ ದಡದಲ್ಲಿ ಸುಬ್ರಹ್ಮಣ್ಯ

ದಿವ್ಯ ಹಾಗೂ ಪವಿತ್ರ ಕ್ಷೇತ್ರವಾದ ಸುಬ್ರಹ್ಮಣವು ‘ಧಾರಾ’ ನದಿಯ ದಡದಲ್ಲಿದೆ, ಇದರ ಮೂಲವು ಕುಮಾರ ಪರ್ವತದಲ್ಲಿದೆ. ಇಲ್ಲಿಂದ ನದಿಯು ಪಶ್ಚಿಮ ಸಮುದ್ರಕ್ಕೆ ಹೋಗುತ್ತದೆ.

ಗರುಡ ಸ್ತಂಭದ ವಿಶೇಷತೆ

ದೇವಸ್ಥಾನವನ್ನು ಪ್ರವೇಶಿಸುತ್ತಿದ್ದಂತೆ, ಗರ್ಭಗುಡಿ ಮತ್ತು ಪ್ರವೇಶದ್ವಾರದ ನಡುವೆ, ಬೆಳ್ಳಿಯಿಂದ ಆವೃತವಾದ ಗರುಡ ಸ್ತಂಭವಿದೆ. ಒಳಗೆ ನೆಲೆಸಿರುವ ವಾಸುಕಿಯ ಉಸಿರಾಟದಿಂದ ಉಂಟಾಗುವ ವಿಷಕಾರಿ ಜ್ವಾಲೆಯಿಂದ ಭಕ್ತರನ್ನು ರಕ್ಷಿಸಲು ಸ್ತಂಭವನ್ನು ಇಲ್ಲಿ ಇರಿಸಲಾಗಿದೆ ಎಂದು ನಂಬಲಾಗಿದೆ.

ಹೀಗೆ ಇಷ್ಟೆಲ್ಲಾ ಇತಿಹಾಸ ಪ್ರಸಿದ್ಧವಾಗಿರುವ ದೇವಸ್ಥಾನ ಸುಬ್ರಹ್ಮಣ್ಯಕ್ಕೆ ಅನೇಕ ಜನರು ಭಕ್ತಿಯಿಂದ ದರ್ಶನ ಪಡೆಯುತ್ತಾರೆ. ಲಕ್ಷಾಂತರ ಜನ ಹರಕೆ ಕಟ್ಟಿ ಬರುವುದೂ ಇದೆ. ಸಾರ್ವಜನಿಕ ಅನ್ನಸಂತರ್ಪಣೆ ದಿನನಿತ್ಯ ನಡೆಯುತ್ತಿರುತ್ತದೆ ಇಲ್ಲಿನ ಜಾತ್ರೆ, ಪೂಜೆಯನ್ನು ನೋಡಲು ಭಕ್ತರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.

Categories
ಬೆಂಗಳೂರು

ಬಿಜೆಪಿಯ ಇಬ್ಬರು ಶಾಸಕರು ಪಕ್ಷದಿಂದ ಉಚ್ಚಾಟನೆ!

ಬಿಜೆಪಿಯ ಇಬ್ಬರು ಶಾಸಕರು ಪಕ್ಷದಿಂದ ಉಚ್ಚಾಟನೆ!
– 6 ವರ್ಷಗಳ ಕಾಲ ಬಿಜೆಪಿ ಪಾರ್ಟಿಯಿಂದ ಉಚ್ಚಾಟನೆ ಜಾರಿ
– ಪಾರ್ಟಿಯಿಂದ ಉಚ್ಚಾಟಿಸುವಂತೆ ಕೇಂದ್ರ ಸಮಿತಿಗೆ ಬಿಜೆಪಿ ಶಿಸ್ತು ಸಮಿತಿ ವರದಿ ನೀಡಿತು

NAMMUR EXPRESS NEWS
ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಪಕ್ಷವಿರೋಧಿ ಚಟುವಟಿಕೆ ಆರೋಪದ ಮೇರೆಗೆ ಭಾರತೀಯ ಜನತಾ ಪಾರ್ಟಿ(BJP)ಯಲ್ಲಿ ಮತ್ತೆರಡು ತಲೆದಂಡವಾಗಿದ್ದು, ಶಾಸಕ ST ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ರನ್ನು ಪಾರ್ಟಿಯಿಂದ ಉಚ್ಛಾಟನೆ ಮಾಡಲಾಗಿದೆ.
ಈ ಹಿಂದೆ ಬಿಜೆಪಿ ಪಕ್ಷದ ವಿರುದ್ಧವೇ ಬಹಿರಂಗವಾಗಿ ಮಾತನಾಡುತ್ತಿದ್ದ ಮತ್ತು ಕಾಂಗ್ರೆಸ್ ಪಾಳಯದಲ್ಲಿ ಪದೇ ಪದೇ ಗುರುತಿಸಿಕೊಳ್ಳುತ್ತಿದ್ದ ರೆಬೆಲ್ ಶಾಸಕರಾದ ST ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರನ್ನು ನಿರೀಕ್ಷೆಯಂತೆಯೇ ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಮುಂದಿನ 6 ವರ್ಷಗಳ ಕಾಲ ಇಬ್ಬರೂ ಶಾಸಕರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ತಿಳಿದುಬಂದಿದೆ.

– ಶಿಸ್ತು ಸಮಿತಿ ವರದಿ ಬೆನ್ನಲ್ಲೇ ಕಠಿಣ ಕ್ರಮ

ಈ ಹಿಂದೆ ಪಕ್ಷ ವಿರೋದಿ ಚಟುವಟಿಕೆ ಹಿನ್ನಲೆಯಲ್ಲಿ ಶಾಸಕರಾದ ಎಸ್‌.ಟಿ. ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಕೇಂದ್ರ ಸಮಿತಿಗೆ ಬಿಜೆಪಿ ಶಿಸ್ತು ಸಮಿತಿ ವರದಿ ನೀಡಿತ್ತು. ಈ ಕುರಿತು ಮಾತನಾಡಿದ್ದ ಬಿಜೆಪಿ ರಾಜ್ಯ ಘಟಕದ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಅವರು, ‘ಶಾಸಕರಾದ ಎಸ್‌.ಟಿ. ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಕೇಂದ್ರ ಸಮಿತಿಗೆ ವರದಿ ನೀಡಿದ್ದೇನೆ. ರಾಷ್ಟ್ರ ಮತ್ತು ರಾಜ್ಯ ನಾಯಕರು ಈ ತಿಂಗಳ ಅಂತ್ಯದೊಳಗೆ ಎಲ್ಲ ಗೊಂದಲಕ್ಕೂ ಅಂತ್ಯ ಹಾಡಲಿದ್ದಾರೆ ಎಂದು ಹೇಳಿದ್ದರು.

Categories
ಮಂಗಳೂರು

ಬಜ್ಪೆ ಚಲೋ ವಿರುದ್ಧ ಎಫ್‌ಐಆರ್!!

ಬಜ್ಪೆ ಚಲೋ ವಿರುದ್ಧ ಎಫ್‌ಐಆರ್!!

– ಪೊಲೀಸ್‌ ಅನುಮತಿ ಇಲ್ಲದೆ ಬಜ್ಪೆ ಚಲೋ
– ಆಯೋಜಕರು, ಭಾಷಣಕಾರನ ವಿರುದ್ಧ ಬಜ್ಪೆ ಠಾಣೆಯಲ್ಲಿ ಎಫ್‌ಐಆರ್!

NAMMUR EXPRESS NEWS
ಮಂಗಳೂರು: ಸುಹಾಸ್ ‌ಶೆಟ್ಟಿ ಕೊಲೆ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಬಜ್ಪೆ ಪೇಟೆಯಲ್ಲಿ ವಿಶ್ವ ಹಿಂದೂ ಪರಿಷತ್‌ ವತಿಯಿಂದ ಆಯೋಜಿಸಿದ್ದ ಜನಾಗ್ರಹ ಸಭೆಗೆ ಪೊಲೀಸ್‌ ಅನುಮತಿ ಪಡೆದಿರಲಿಲ್ಲವೆಂದು ಬಜ್ಪೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ.
ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ವತಿಯಿಂದ ಬಜ್ಪೆಯ ಶಾರದಾ ಮಂಟಪದ ಬಳಿ ಬಜ್ಪೆ ಚಲೋ ಎನ್ನುವ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಪೊಲೀಸರ ಅನುಮತಿ ಪಡೆದಿರಲಿಲ್ಲ. ಪೊಲೀಸ್ ಅನುಮತಿ ಪಡೆಯದೆ ನಡೆಸಿದ ಕಾರ್ಯಕ್ರಮದಲ್ಲಿ ಮೂರು ಸಾವಿರದಷ್ಟು ಜನರು ಪಾಲ್ಗೊಂಡಿದ್ದರು. ಕಾನೂನು ವಿರುದ್ಧವಾಗಿ ಬಜ್ಪೆ ಪೇಟೆಯಲ್ಲಿ ಜನರು ಸೇರಿದ್ದು, ಆಮೂಲಕ ಬಜ್ಪೆಗೆ ಹೋಗುವ ಮತ್ತು ಹಿಂತಿರುಗುವ ದಾರಿಗಳನ್ನು ಮುಚ್ಚಲಾಗಿತ್ತು. ಇದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಪ್ರಯಾಣಿಕರಿಗೆ ಅಡಚಣೆಯಾಗಿತ್ತು.
ಇದಲ್ಲದೆ, ಪ್ರತಿಭಟನೆ ಸಂದರ್ಭದಲ್ಲಿ ಭಾಷಣಕಾರ ಶ್ರೀಕಾಂತ್‌ ಶೆಟ್ಟಿ ಪ್ರಚೋದನಕಾರಿ ಭಾಷಣ ಮಾಡಿದ್ದು, ಸುಹಾಸ್‌ ಶೆಟ್ಟಿ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳುವಂತೆ ಹೇಳಿ ಜನರನ್ನು ಪ್ರಚೋದಿಸಿದ್ದು, ಇದರಿಂದ ಕೋಮು ಸೌಹಾರ್ದ ಕದಡುವ ಯತ್ನ ಮಾಡಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಬಜ್ಪೆ ಠಾಣೆಯಲ್ಲಿ ಪೊಲೀಸರು ಆಯೋಜಕರು ಮತ್ತು ಭಾಷಣಕಾರನ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಿದ್ದಾರೆ. ಬಿಎನ್‌ಎಸ್ ಸೆಕ್ಷನ್ 189(2), 191(2), 285, 192, 351(2), 351(3), 190 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 107 ಮತ್ತು 109 ಪ್ರಕಾರ ಪ್ರಕರಣ ದಾಖಲಾಗಿದೆ.

Categories
ತೀರ್ಥಹಳ್ಳಿ

ಹಲವು ವರ್ಷಗಳ ಕನಸು ಸಾಕಾರಕ್ಕೆ ಕ್ಷಣಗಣನೆ

ಹಲವು ವರ್ಷಗಳ ಕನಸು ಸಾಕಾರಕ್ಕೆ ಕ್ಷಣಗಣನೆ
– ಕೋಣಂದೂರು ಸಮುದಾಯ ಆರೋಗ್ಯ ಕೇಂದ್ರ ಲೋಕಾರ್ಪಣೆಗೆ ಸಜ್ಜು
– ಮೇ 28ರ ಮಧ್ಯಾಹ್ನ 12ಕ್ಕೆ ಆರೋಗ್ಯ ಕೇಂದ್ರ ಉದ್ಘಾಟನೆ

NAMMUR EXPRESS NEWS
ಕೋಣಂದೂರು: ಈ ಭಾಗದ ಬಹುದಿನಗಳ ನಿರೀಕ್ಷೆಯಾಗಿದ್ದ ನೂತನ ಸಮುದಾಯ ಆರೋಗ್ಯ ಕೇಂದ್ರ -ಲೋಕಾರ್ಪಣೆ ಕನಸು ಈಡೇರುತ್ತಿದೆ.
ತೀರ್ಥಹಳ್ಳಿಯನ್ನು ಹೊರತುಪಡಿಸಿದರೆ ಹೆಚ್ಚು ಜನಸಾಂದ್ರತೆ ಹೊಂದಿರುವ ಗ್ರಾಮ ಇದಾಗಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಹೋಬಳಿ ಕೇಂದ್ರ ಕೋಣಂದೂರಿಗೆ ಸಮುದಾಯ ಆರೋಗ್ಯ ಕೇಂದ್ರದ ಅಗತ್ಯವಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರದ ಜಾಗದಲ್ಲಿ ₹9.8 ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣಗೊಂಡು ಲೋಕಾರ್ಪಣೆಗೆ ಸಿದ್ಧವಾಗಿದೆ.

ಸೌಲಭ್ಯಗಳು: ನೂತನ ಸಮುದಾಯ ಆರೋಗ್ಯ ಕೇಂದ್ರದಲ್ಲಿ 30 ಹಾಸಿಗೆಗಳ ವ್ಯವಸ್ಥೆ ಇದೆ. 6 ವೈದ್ಯರು ಸೇರಿದಂತೆ 33 ಆರೋಗ್ಯ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ವೈದ್ಯರು, ನರ್ಸ್‌ಗಳು, ಲ್ಯಾಬ್ ಟೆಕ್ನಿಷಿಯನ್ ಕರ್ತವ್ಯ ನಿರ್ವಹಿಸಲಿದ್ದಾರೆ. ಒ.ಟಿ.ವ್ಯವಸ್ಥೆ ಇರಲಿದೆ. ಬಿ.ಪಿ., ಮಧುಮೇಹ ಪರೀಕ್ಷೆಗೆ ಪ್ರತ್ಯೇಕ ವ್ಯವಸ್ಥೆ ಸಹ ಇರಲಿದೆ.

ಹೆಚ್ಚು ಕೂಲಿ ಕಾರ್ಮಿಕರು, ಬಡವರು ವಾಸವಿರುವ ಸುತ್ತ ಮುತ್ತಲಿನ ಗ್ರಾಮಗಳಿಂದ ದೂರದ ತೀರ್ಥಹಳ್ಳಿಗೆ ಹೋಗುವುದು ಕಷ್ಟ. ಆದ್ದರಿಂದ ನೂತನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ಸಿಬ್ಬಂದಿಯನ್ನು ತಕ್ಷಣವೇ ನಿಯೋಜನೆ ಮಾಡಿ, ತಕ್ಷಣದಿಂದಲೇ ಕಾರ್ಯಾರಂಭ ಮಾಡಬೇಕು. ಈ ಬಗ್ಗೆ ಜನಪ್ರತಿನಿಧಿಗಳು. ಅಧಿಕಾರಿಗಳು ಗಮನ ಹರಿಸಬೇಕು. ಅಗತ್ಯ ಇರುವ ಪೀಠೋಪಕರಣ, ಸಲಕರಣೆಗಳನ್ನು ಶೀರ್ಘವಾಗಿ ಒದಗಿಸಬೇಕು. ಮುಂಗಾರು ಪ್ರಾರಂಭವಾಗುತ್ತಿದ್ದು, ಆರೋಗ್ಯ ಸೇವೆ ಮೊದಲ ಆದ್ಯತೆಯಾಗಬೇಕು’ ಎಂಬುದು ಈ ಭಾಗದ ಗ್ರಾಮಸ್ಥರ ಆಶಯವಾಗಿದೆ.

ಉದ್ಘಾಟನೆ ಮೇ 28 ಕ್ಕೆ:- 
ಮೇ 28ರ ಮಧ್ಯಾಹ್ನ 12ಕ್ಕೆ ಸಮುದಾಯ ಆರೋಗ್ಯ ಕೇಂದ್ರ ಲೋಕಾ ರ್ಪಣೆಗೊಳ್ಳಲಿದೆ. ಶಾಸಕ ಆರಗ ಜ್ಞಾನೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಡಿ.ಎಚ್.ಒ. ನಟರಾಜ್, ಟಿ.ಎಚ್.ಒ. ಅನಿಕೇತ್, ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣ ವಾಸುದೇವ, ಉಪಾಧ್ಯಕ್ಷೆ ಸುಜಾತ ಚೂಡಾಮಣಿ, ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿರುವರು.

Categories
ಮಾಹಿತಿ ಸುದ್ದಿ

ಮನೆಯಲ್ಲಿ ಈ ದಿಕ್ಕಿನಲ್ಲಿ ಕನ್ನಡಿ ಇದ್ದರೆ, ಅದೃಷ್ಟ ಖಂಡಿತ!

ಮನೆಯಲ್ಲಿ ಈ ದಿಕ್ಕಿನಲ್ಲಿ ಕನ್ನಡಿ ಇದ್ದರೆ, ಅದೃಷ್ಟ ಖಂಡಿತ!

NAMMUR EXPRESD NEWS
ವಾಸ್ತು ಪ್ರಕಾರ, ನಮ್ಮ ಮನೆಗಳಲ್ಲಿರುವ ಕೆಲವು ರೀತಿಯ ವಸ್ತುಗಳು ನಾವು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ನಮ್ಮ ಮನೆಯಲ್ಲಿರುವ ವಸ್ತುಗಳು ಸರಿಯಾದ ದಿಕ್ಕಿನಲ್ಲಿದ್ದರೆ, ಅದೃಷ್ಟವು ನಮ್ಮನ್ನು ಅರಸಿ ಬರುತ್ತದೆ ಎಂದು ಹೇಳಲಾಗುತ್ತದೆ.
ಮನೆಯಲ್ಲಿರುವ ಕನ್ನಡಿ ಸರಿಯಾದ ದಿಕ್ಕಿನಲ್ಲಿದ್ದರೆ, ಖಂಡಿತವಾಗಿಯೂ ಶ್ರೀಮಂತರಾಗುತ್ತೇವೆ ಮತ್ತು ಅದೃಷ್ಟವೂ ಅದರೊಂದಿಗೆ ಬರುತ್ತದೆ. ವಾಸ್ತು ಪ್ರಕಾರ, ಮನೆ ಯಾವ ದಿಕ್ಕಿನಲ್ಲಿರಬೇಕು ಮತ್ತು ಅದು ಯಾವ ಫಲಿತಾಂಶಗಳನ್ನು ತರುತ್ತದೆ ಎಂಬುದನ್ನು ಈಗ ಕಂಡುಹಿಡಿಯೋಣ.
ನಮ್ಮ ಮನೆಯಲ್ಲಿ ಕನ್ನಡಿಯನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ. ಮನೆಯಲ್ಲಿ ಕನ್ನಡಿ ಸರಿಯಾದ ದಿಕ್ಕಿನಲ್ಲಿರುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಸೃಷ್ಟಿಯಾಗುತ್ತದೆ ಎಂದು ಹೇಳಲಾಗುತ್ತದೆ.
ನಮ್ಮ ಮನೆಗಳಲ್ಲಿ ಕನ್ನಡಿಗಳನ್ನು ಯಾವಾಗಲೂ ಹೊರಗಿನಿಂದ ಬೆಳಕು ಮನೆಯೊಳಗೆ ಹರಡುವ ರೀತಿಯಲ್ಲಿ ಇಡಬೇಕು ಎಂದು ಹೇಳಲಾಗುತ್ತದೆ. ಇದರರ್ಥ ನೀವು ಮನೆಯೊಳಗೆ ಪ್ರವೇಶಿಸುವಾಗ ಕನ್ನಡಿಯನ್ನು ನೋಡುವಂತೆ ಎಂದಿಗೂ ಇಡಬಾರದು. ಈ ರೀತಿ ಇಡುವುದರಿಂದ ನಮ್ಮ ಮನೆಗೆ ಪ್ರವೇಶಿಸುವ ಸಕಾರಾತ್ಮಕ ಶಕ್ತಿಯು ನಮಗೆ ಮರಳುತ್ತದೆ ಎಂದು ಹೇಳಲಾಗುತ್ತದೆ .
ಮನೆಯ ಹಾಲ್‌ನಲ್ಲಿ ಕನ್ನಡಿಯನ್ನು ಇಡುವುದರಿಂದ, ಒಳಗೆ ಬರುವವರ ನೋಟವು ನಮ್ಮ ಮನೆಯ ಮೇಲೆ ಬೀಳುವ ಬದಲು ಕನ್ನಡಿಯ ಮೇಲೆ ಬೀಳುತ್ತದೆ, ಹೀಗಾಗಿ ಮನೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಇಲ್ಲದೆ ಸಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ.
ವಾಸ್ತು ಪ್ರಕಾರ, ಊಟದ ಮೇಜಿನ ಎದುರು ಕನ್ನಡಿ ಇರುವುದು ಸಹ ಒಳ್ಳೆಯದು. ನಮ್ಮ ಹಾಸಿಗೆ ಕಾಣುವಂತೆ ಇನ್ನು ಮುಂದೆ ಮಲಗುವ ಕೋಣೆಯಲ್ಲಿ ಕನ್ನಡಿಯನ್ನು ಇಡಬಾರದು. ಕನ್ನಡಿ ಇಲ್ಲದೆ ಅಂತಹ ಸ್ಥಳಗಳನ್ನು ನೋಡಿದಾಗ, ನಾವು ಆರ್ಥಿಕ ಸಮಸ್ಯೆಗಳಿಂದ ಮುಕ್ತರಾಗಬಹುದು ಎಂದು ಹೇಳಲಾಗುತ್ತದೆ. ಹಾಗಾಗಿ, ಮನೆಯಲ್ಲಿರುವ ಕನ್ನಡಿ ಸರಿಯಾದ ದಿಕ್ಕಿಗೆ ಮುಖ ಮಾಡದಿದ್ದರೆ, ಕನ್ನಡಿಯನ್ನು ಸರಿಯಾದ ದಿಕ್ಕಿಗೆ ಮುಖ ಮಾಡಿ ಇಡಬೇಕು, ಇಲ್ಲದಿದ್ದರೆ ನೀವು ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ.
ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶಿಸುವುದರಿಂದ ಆರ್ಥಿಕ ಮತ್ತು ಮಾನಸಿಕ ತೊಂದರೆಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564