Categories
ತೀರ್ಥಹಳ್ಳಿ

ಸೀಬಿನಕೆರೆ ಶಾಲೆಯ ದಾಖಲಾತಿ ಪ್ರಾರಂಭ

ಸೀಬಿನಕೆರೆ ಶಾಲೆಯ ದಾಖಲಾತಿ ಪ್ರಾರಂಭ
– ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಸ್ಟ್ ಸ್ಕೂಲ್ ಅವಾರ್ಡ್ ಪಡೆದ ಶಾಲೆ
– ತಾಲೂಕಿಗೆ ಮಾದರಿ ಆದ ಶಾಲೆಯಲ್ಲಿ ಎಲ್ಲಾ ಸೌಲಭ್ಯಗಳು ಲಭ್ಯ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಮಟ್ಟದಲ್ಲಿ ಬೆಸ್ಟ್ ಸ್ಕೂಲ್ ಅವಾರ್ಡ್ ಪಡೆದ ಅತ್ಯುತ್ತಮ ಶಿಕ್ಷಣದ ವ್ಯವಸ್ಥೆ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೀಬಿನಕೆರೆ ಆಂಗ್ಲ ಮತ್ತು ಕನ್ನಡ ಮಾಧ್ಯಮ ದಾಖಲಾತಿ ಪ್ರಾರಂಭವಾಗಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಆಡಳಿತ ಮಂಡಳಿ ಮನವಿ ಮಾಡಿದೆ.

ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಲಭ್ಯ

ಅಂಗನವಾಡಿ, ಎಲ್ ಕೆ ಜಿ, ಯುಕೆಜಿ, ಒಂದನೇ ತರಗತಿಯಿಂದ 7ನೇ ತರಗತಿಯವರೆಗೆ ಈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಇರಲಿದ್ದು, ಇಲ್ಲಿ ನುರಿತ ಶಿಕ್ಷಕ ವರ್ಗದವರಿಂದ ಬೋಧನೆ, ಸುಸಜ್ಜಿತ ಗ್ರಂಥಾಲಯ ಸೌಲಭ್ಯ, ಉತ್ತಮ ಕಂಪ್ಯೂಟರ್ ಶಿಕ್ಷಣ, ಉಚಿತ ವೈದ್ಯಕೀಯ ತಪಾಸಣೆ, ವಿದ್ಯಾರ್ಥಿವೇತನ, ಸ್ಮಾರ್ಟ್ ಕ್ಲಾಸ್, ಚೆಸ್ ಕ್ಲಾಸ್, ಅಬಾಕಸ್ ಕ್ಲಾಸ್, ಸಿಸಿಟಿವಿ ಕಣ್ಗಾವಲು ವ್ಯವಸ್ಥೆ, ಉಚಿತ ಶೂ ಮತ್ತು ಸಾಕ್ಸ್ ಸೌಲಭ್ಯ ಒಂದರಿಂದ ಏಳನೇ ತರಗತಿವರೆಗೆ, ಸಮೃದ್ಧವಾದ ಕ್ಷೀರ ಭಾಗ್ಯ ಯೋಜನೆ, ಮಧ್ಯಾಹ್ನದ ಬಿಸಿಯೂಟ ಯೋಜನೆ, ಸ್ಪೋಕನ್ ಇಂಗ್ಲೀಷ್ ಕ್ಲಾಸ್, ಶಾಲಾ ಮೈದಾನದಲ್ಲಿ ಆಟದ ಸಾಮಗ್ರಿಗಳು, ಶಿಶುಸ್ನೇಹಿ ವಾತಾವರಣ, ಕಲೆ ಮತ್ತು ಸಾಂಸ್ಕೃತಿಕ ಎಲ್ಲದಕ್ಕೂ ಕೂಡ ಹೆಚ್ಚಿನ ಪ್ರೋತ್ಸಾಹವನ್ನು ನೀಡಲಾಗುತ್ತದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನ ಸೇರಿಸಿ ಅವರ ವಿದ್ಯಾಭ್ಯಾಸವನ್ನು ಮುಂದುವರಿಸುವುದು ಪೋಷಕರ ಜವಾಬ್ದಾರಿಯಾಗಿದೆ. ಈ ಶಾಲೆಯಲ್ಲಿ ಅನೇಕ ರೀತಿಯ ಸೌಲಭ್ಯಗಳು ಕೂಡ ಲಭ್ಯವಾಗಿದ್ದು ತಾಲೂಕು ಮಟ್ಟದಲ್ಲಿ ಬೆಸ್ಟ್ ಸ್ಕೂಲ್ ಅವಾರ್ಡ್ ಕೂಡ ಪಡೆದುಕೊಂಡಿದೆ. ಶಾಸಕ ಆರಗ ಜ್ಞಾನೇಂದ್ರ ಅವರು ದತ್ತು ಕೂಡ ಪಡೆದುಕೊಂಡಿದ್ದಾರೆ. ಅಲ್ಲದೆ ಪಟ್ಟಣ ಮಾತ್ರವಲ್ಲದೆ ಸುತ್ತಮುತ್ತಲಿನ ಮಕ್ಕಳು ಕೂಡ ಇಲ್ಲಿಗೆ ಆಗಮಿಸುತ್ತಿದ್ದಾರೆ.
ಮಕ್ಕಳನ್ನು ವಿಮಾನದಲ್ಲಿ ಹೈದ್ರಾಬಾದ್ ಪ್ರವಾಸ ಮಾಡಿಸುವ ಯೋಜನೆಯನ್ನು ಕೂಡ ಹಾಕಿಕೊಳ್ಳಲಾಗಿದೆ.

ಶಾಲೆಗೆ ಭೇಟಿ ನೀಡಿ ದಾಖಲಾತಿ ಮಾಡಿಕೊಳ್ಳಬಹುದು

ಸಂಪರ್ಕಿಸಿ : 9448154318

Categories
ಕರಾವಳಿ

ಹಿರಿಯಡ್ಕ: ಪಾದಚಾರಿಯೊಬ್ಬರಿಗೆ ಬೈಕ್ ಢಿಕ್ಕಿ ಹೊಡೆದು ಸಾವು!

ಕರಾವಳಿ ಟಾಪ್ ನ್ಯೂಸ್!

ಹಿರಿಯಡ್ಕ: ಪಾದಚಾರಿಯೊಬ್ಬರಿಗೆ ಬೈಕ್ ಢಿಕ್ಕಿ ಹೊಡೆದು ಸಾವು!

– ಬೈಂದೂರು: ಅಕ್ರಮವಾಗಿ ಅನ್ನ ಭಾಗ್ಯ ಅಕ್ಕಿ ದಾಸ್ತಾನು: ಅಕ್ಕಿ ವಶಕ್ಕೆ
– ಉಡುಪಿ: ವ್ಯಕ್ತಿಯೊಬ್ಬರು ನಾಪತ್ತೆ!

NAMMUR EXPRESS NEWS
ಹಿರಿಯಡ್ಕ: ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪ ಪಾದಚಾರಿಯೊಬ್ಬರಿಗೆ ಬೈಕ್ ಢಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ನಡೆದಿದೆ. ಮೃತಪಟ್ಟವರು ರವಿ ಎಂದು ತಿಳಿದು ಬಂದಿದೆ. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಘವೇಂದ್ರ (53), ಅಂಜಾರು ಗ್ರಾಮ ಉಡುಪಿ ಇವರು ಕೋಟ್ನಕಟ್ಟೆ ಪೆಟ್ರೋಲ್‌ ಪಂಪ್‌ನಲ್ಲಿ ತನ್ನ ವಾಹನಕ್ಕೆ ಪೆಟ್ರೋಲ್‌ ತುಂಬಿಸಿ ಮನೆಗೆ ಹೊರಟು ಮಹಾಲಸ ಫ್ಯಾಕ್ಟರಿ ಬಳಿ ಬರುತ್ತಿರುವಾಗ ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಒರ್ವ ಮೋಟಾರು ಸೈಕಲ್‌ ಸವಾರ ತನ್ನ ಬೈಕನ್ನು ರಸ್ತೆಯ ತೀರಾ ಎಡಭಾಗಕ್ಕೆ ಚಲಾಯಿಸಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಪದಾಚಾರಿ ಡಾಮಾರು ರಸ್ತೆಗೆ ಬಿದ್ದಿದ್ದು ತಕ್ಷಣ ಬಿದ್ದವರನ್ನು ಎಬ್ಬಿಸಿ ಉಪಚರಿಸಿ ನೋಡಲಾಗಿ ಪರಿಚಯದ ರವಿ ಆಗಿರುತ್ತಾರೆ. ಅವರಿಗೆ ತಲೆಯ ಹಿಂಭಾಗಕ್ಕೆ , ಕೈಕಾಲಿಗೆ , ದೇಹಕ್ಕೆ ರಕ್ತ ಗಾಯವಾಗಿರುತ್ತದೆ. ನಂತರ ಅವರನ್ನು ಅಂಬ್ಯುಲೆನ್ಸ್‌ನಲ್ಲಿ ಉಡುಪಿ ಸರಕಾರಿ ಅಸ್ಪತ್ರೆಗೆ ದಾಖಲಿಸಿದ್ದು ರವಿರವರು ದಾರಿ ಮಧ್ಯದಲ್ಲಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

– ಬೈಂದೂರು: ಅಕ್ರಮವಾಗಿ ಅನ್ನ ಭಾಗ್ಯ ಅಕ್ಕಿ ದಾಸ್ತಾನು: ಅಕ್ಕಿ ವಶಕ್ಕೆ

ಬೈಂದೂರು: ನಗರದ ಸಮೀಪ ಅಕ್ರಮವಾಗಿ ಉಚಿತ ಅನ್ನ ಭಾಗ್ಯ ಯೋಜನಗೆ ಸಂಬಂಧಿಸಿದ ಅಕ್ಕಿಯನ್ನು ದಾಸ್ತಾನು ಇರಿಸಿರುವ ಬಗ್ಗೆ ಆಹಾರ ಇಲಾಖೆಯ ಅಧಿಕಾರಿಗಳು ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.
ಮಜೀದ್ ಎಂಬಾತ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಎಂದು ತಿಳಿದು ಬಂದಿದೆ. ಆಹಾರ ಇಲಾಖೆಯ ಅಧಿಕಾರಿಗಳು 22 ಚೀಲ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ವಿನಯಕುಮಾರ್‌ ಅಹಾರ ನಿರೀಕ್ಷಕರು ಬೈಂದೂರು ತಾಲೂಕುರವರಿಗೆ ಬಿಜೂರು ಗ್ರಾಮದ ಮುರ್ಗೋಳಹಕ್ಲು ಎಂಬಲ್ಲಿ ನಾಗರಾಜರವರಿಗೆ ಸಂಬಂಧಿಸಿದ ಕಟ್ಟಡದಲ್ಲಿ ಮಜೀದ್‌ ಎಂಬಾತನು ಅಕ್ರಮವಾಗಿ ಉಚಿತ ಅನ್ನ ಭಾಗ್ಯ ಯೋಜನಗೆ ಸಂಬಂಧಿಸಿದ ಅಕ್ಕಿಯನ್ನು ದಾಸ್ತಾನು ಇರಿಸಿರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ ಗ್ರಾಮ ಅಡಳಿತ ಅಧಿಕಾರಿ ದಾಳಿ ನಡೆಸಿ ಆರೋಪಿಯು ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಯಾರಿಂದಲೋ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ನಾಗರಾಜರವರ ಕಟ್ಟಡದಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ ಒಟ್ಟು 11 ಕ್ವಿಂಟಾಲ್‌ ತೂಕದ ರೂಪಾಯಿ 37.400/- ಮೌಲ್ಯದ 22 ಅಕ್ಕಿ ತುಂಬಿರುವ ಚೀಲಗಳನ್ನು ಸ್ವಾದೀನಪಡಿಸಿಕೊಂಡಿರುವುದಾಗಿದೆ, ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

– ಉಡುಪಿ: ವ್ಯಕ್ತಿಯೊಬ್ಬರು ನಾಪತ್ತೆ!

ಉಡುಪಿ: ನಗರದ ಸಮೀಪ ವ್ಯಕ್ತಿಯೊಬ್ಬರು ಕೆಲಸಕ್ಕೆ ಹೋದವರು ನಾಪತ್ತೆಯಾದ ಘಟನೆ ನಡೆದಿದೆ. ನಾಪತ್ತೆಯಾದವರು ಹರೀಂದ್ರ ಯು ಆರ್ ಎಂದು ತಿಳಿಯಲಾಗಿದೆ.
ಸುರೇಂದ್ರ (45) ಗುಂಡಿಬೈಲು, ಶಿವಳ್ಳಿ ಇವರ ಅಣ್ಣ ಹರೀಂದ್ರ ಯು ಆರ್‌ (48) ರವರು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು, ಕೆಲಸ ಮುಗಿದ ನಂತರ ಕೃಷ್ಣಮಠಕ್ಕೆ ಸಂಬಂಧಪಟ್ಟ ಬಡಗುಮಾಳಿಗೆಯ ಸಿಬ್ಬಂದಿಯವರ ವಸತಿ ಗೃಹದಲ್ಲಿ ಉಳಿದುಕೊಳ್ಳುತ್ತಿದ್ದು, ದಿನಾಂಕ 07/05/2025ರಂದು ಕರೆ ಮಾಡಿ ಹಣದ ಅವಶ್ಯಕತೆ ಇದೆ ಎಂದು ಹೇಳಿದ್ದು ಅದಕ್ಕೆ ಅಣ್ಣನಿಗೆ ಕರೆ ಮಾಡಿದಾಗ ದೂರವಾಣಿ ಸಂಖ್ಯೆ ಸ್ವಿಚ್‌ ಆಫ್‌ ಬರುತ್ತಿದ್ದು ಅವರ ಅಣ್ಣ ಉಳಿದುಕೊಳ್ಳುತ್ತಿದ್ದ ವಸತಿ ಗೃಹದಲ್ಲಿ ಹೋಗಿ ನೋಡಿದಾಗ ಹರೀಂದ್ರರವರು ಅಲ್ಲಿ ಇಲ್ಲದೇ ಇದ್ದು, ಕೃಷ್ಣ ಮಠಕ್ಕೆ ಕೆಲಸಕ್ಕೂ ಹೋಗದೇ , ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Categories
ಶಿವಮೊಗ್ಗ

ಶಿವಮೊಗ್ಗದಲ್ಲಿ ಈ ವರ್ಷದ ಮೊದಲ ಕರೋನಾ ಕೇಸ್

ಶಿವಮೊಗ್ಗದಲ್ಲಿ ಈ ವರ್ಷದ ಮೊದಲ ಕರೋನಾ ಕೇಸ್

* ಹಾವೇರಿ ಜಿಲ್ಲೆಯ 75 ವರ್ಷದ ವೃದ್ಧನಿಗೆ ಕೊರೋನಾ ಪಾಸಿಟಿವ್
* ಹೃದಯ ಸಂಬಂಧಿ ಕಾಯಿಲೆಯಿಂದ ಚಿಕಿತ್ಸೆ ಪಡೆದು ಹೋಗಿದ್ದ ವೃದ್ಧ

NAMMMUR EXPRESS NEWS
ಶಿವಮೊಗ್ಗ: ಹಾವೇರಿ ಜಿಲ್ಲೆಯ 75 ವರ್ಷದ ವೃದ್ಧನಿಗೆ ಕರೋನಾ ಪಾಸಿಟಿವ್ ಬಂದಿದ್ದು, ಈ ವರ್ಷದ ಜಿಲ್ಲೆಯ ಮೊದಲ ಕೇಸ್ ಇದಾಗಿದೆ. ಮೇ. 19 ರಂದು ಹೃದಯ ಸಂಬಂಧಿ ಕಾಯಿಲೆಯಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ಕಳೆದ ಏಳು ದಿನ ಚಿಕಿತ್ಸೆ ಪಡೆದಿದ್ದ, ಕಫ ಇದ್ದ ಕಾರಣ ವೃದ್ಧನನ್ನು ಕೊರೊನಾ ಟೆಸ್ಟ್ ಒಳಪಡಿಸಲಾಗಿತ್ತು. ಸೋಮವಾರ ವರದಿ ಬಂದಿದ್ದು, ವೃದ್ಧನಿಗೆ ಕೊರೊನಾ ಪಾಸಿಟಿವ್ ತಗುಲಿರುವುದು ದೃಢಪಟ್ಟಿದೆ.
ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆದಿದ್ದ ವೃದ್ಧ ಗುಣಮುಖನಾಗಿ ಆಸ್ಪತ್ರೆಯಿಂದ ಸೋಮವಾರ ಬಿಡುಗಡೆಗೊಂಡು ಮನೆಗೆ ಹೋಗಿದ್ದರು. ಆದರೆ ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆ ಸೇರಿದ ಬಳಿಕ ಕೊರೊನಾ ದೃಢಪಟ್ಟಿರುವುದು ಈಗ ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ಸ್ಪಷ್ಟಪಡಿಸಿರುವ ಡಾ. ನಾಗರಾಜ ನಾಯ್ಕ, ವೃದ್ಧನಿಗೆ ಕೊರೊನಾ ತಗುಲಿರುವುದು ನಿಜ, ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆದು ಮನೆಗೆ ಮರಳಿದ ಬಳಿಕ ಸೋಂಕು ದೃಢಪಟ್ಟಿದ್ದು, ಹಾವೇರಿ ಜಿಲ್ಲೆಯ ಡಿಎಚ್‌ ಒ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Categories
ಚಿಕ್ಕಮಗಳೂರು

ಕಾಫಿನಾಡಿನಲ್ಲಿ ಮುಂದುವರಿದ ಮಳೆಯ ಅಬ್ಬರ, 5 ತಾಲೂಕಿನ ಅಂಗನಾವಡಿಗೆ ರಜೆ

ಚಿಕ್ಕಮಗಳೂರು ಟಾಪ್ ನ್ಯೂಸ್

* ಕಾಫಿನಾಡಿನಲ್ಲಿ ಮುಂದುವರಿದ ಮಳೆಯ ಅಬ್ಬರ, 5 ತಾಲೂಕಿನ ಅಂಗನಾವಡಿಗೆ ರಜೆ
* ಗಾಳಿಯ ರಭಸಕ್ಕೆ ಮೂಡಿಗೆರೆಯಲ್ಲಿ ಸಾಲು ಸಾಲು ಅನಾಹುತ
* ಬೈಕ್‌ ಸವಾರನ ಮೇಲೆ ಕಾಡಾನೆ ದಾಳಿ

NAMMMUR EXPRESS NEWS
* ಕಾಫಿನಾಡಿನಲ್ಲಿ ಮುಂದುವರಿದ ಮಳೆಯ ಅಬ್ಬರ, 5 ತಾಲೂಕಿನ ಅಂಗನಾವಡಿಗೆ ರಜೆ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ, ಗಾಳಿಯ ಅಬ್ಬರ ಮುಂದುವರೆದಿದ್ದು, ಭಾರೀ ಮಳೆ ಹಿನ್ನೆಲೆ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ನರಸಿಂಹ ರಾಜಪುರ ತಾಲೂಕು ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಮೇ.26 ರಿಂದ ಮೇ.28ರ ವರೆಗೆ ರಜೆ ಘೋಷಣೆ ಮಾಡಲಾಗಿದೆ.

* ಗಾಳಿಯ ರಭಸಕ್ಕೆ ಮೂಡಿಗೆರೆಯಲ್ಲಿ ಸಾಲು ಸಾಲು ಅನಾಹುತ
ಮೂಡಿಗೆರೆ: ಅಬ್ಬರದ ಗಾಳಿ ಮಳೆಗೆ ತಾಲೂಕಿನ ಬಾಳೂರು ಕಾಫಿ ಎಸ್ಟೇಟ್ ನಲ್ಲಿ ಕಾರ್ಮಿಕರ ಮನೆ ಮೇಲೆ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದ ಸುನಂದ ಅವರಿಗೆ ಗಂಭೀರ ಗಾಯವಾಗಿದೆ. ತಕ್ಷಣ ಗಾಯಾಳು ಸುನಂದ ಅವರನ್ನು ಬಣಕಲ್‌ ಆಸ್ಪತ್ರೆ ಗೆ ದಾಖಲಿಸಲಾಗಿದೆ.
ಮರಬಿದ್ದು ಮನೆಯ ಮೇಲ್ಟಾವಣಿಗೆ ಸಂಪೂರ್ಣ ಹಾನಿಯಾಗಿದೆ. ಮನೆಯಲ್ಲಿದ್ದ ವಸ್ತುಗಳಿಗೂ ಹಾನಿಯಾಗಿದ್ದು ತೋಟದ ಮಾಲೀಕ ಹಾಗೂ ವ್ಯವಸ್ಥಾಪಕ ಗಾಯಗೊಂಡ ಸುನಂದ ಅವರನ್ನು ಆಸ್ಪತ್ರೆ ದಾಖಲಿಸುವ ಸೌಜನ್ಯವನ್ನು ತೋರಿಲ್ಲವೆಂದು ಕುಟುಂಬದವರು ಬೇಸರ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಬಾಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಳೆ, ಗಾಳಿ ಅಬ್ಬರಕ್ಕೆ ಮಲೆನಾಡು ಭಾಗದಲ್ಲಿ ಸಾಲು ಸಾಲು ಅನಾಹುತಗಳು ಸಂಭವಿಸುತ್ತಿದ್ದು, ವಿದ್ಯುತ್ ಟ್ರಾನ್ಸ್ ಫಾರ್ಮರ್ ಸ್ಪೋಟಗೊಂಡಿದೆ. ಟ್ರಾನ್ಸ್ ಫಾರ್ಮರ್ ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸಲ್ಲಿ ಸುತ್ತಮುತ್ತ ಮನೆಗಳಲ್ಲಿ ಅವಘಡ ಸಂಭವಿಸಿದೆ.
ಜಿಲ್ಲಾದ್ಯಂತ ಎಡಬಿಡದೆ ನಿರಂತರ ಮಳೆಗೆ ಮಲೆನಾಡು ಭಾಗದಲ್ಲಿ ಹರಿಯುವ ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಹಳ್ಳಕೊಳ್ಳ ಕೆರೆಕಟ್ಟೆಗಳು ತುಂಬಿವೆ. ಜಲಪಾತಗಳು ಸೃಷ್ಟಿಯಾಗಿವೆ. ಜಿಲ್ಲಾಡಳಿತದಿಂದ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪ್ರವಾಸಿಗರು ಮತ್ತು ಜನರು ಅಪಾಯಕಾರಿ ಸ್ಥಳಗಳಿಗೆ ತೆರಳದಂತೆ ಮುನ್ಸೂಚನೆ ನೀಡಲಾಗಿದೆ. ಗುಡ್ಡ ಕುಸಿತ ಸಂಭವಿತ ಪ್ರದೇಶಗಳ ಮೇಲೆ ನಿಗಾ ವಹಿಸಲಾಗಿದೆ.

* ಬೈಕ್‌ ಸವಾರನ ಮೇಲೆ ಕಾಡಾನೆ ದಾಳಿ
ಚಿಕ್ಕಮಗಳೂರು: ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಕೊಳಗಾಮೆ ಗ್ರಾಮದಲ್ಲಿ ನಡೆದಿದೆ.
ಎಸ್ಟೇಟ್‌ನಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದ ಸುಬ್ರಹ್ಮಣ್ಯ ಕಾಡಾನೆ ದಾಳಿಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುಬ್ರಹ್ಮಣ್ಯ ಕಾಫಿ ಎಸ್ಟೇಟ್‌ಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ಬೈಕ್‌ಗೆ ಗುದ್ದಿ ಕೆಳಗೆ ಬಿದ್ದ ಅವರ ಮೇಲೆ ದಾಳಿ ನಡೆಸಿದೆ. ಸುಬ್ರಹ್ಮಣ್ಯ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Categories
ಕಾರ್ಕಳ

ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಭಾ ಪೆರ್ವಾಜೆ ಕಾರ್ಕಳ ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಭಾ ಪೆರ್ವಾಜೆ ಕಾರ್ಕಳ ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

– ಶೇ. 60%ಕ್ಕಿಂತ ಮೇಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅವಕಾಶ
– ಜೂ.8ರೊಳಗೆ ಅರ್ಜಿ ಸಲ್ಲಿಸುವಂತೆ ಸೂಚನೆ
– ಅರ್ಜಿ ಸಲ್ಲಿಸೋದು ಹೀಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

NAMMUR EXPRESS NEWS
ಕಾರ್ಕಳ: ಕಾರ್ಕಳ ತಾಲೂಕಿನಲ್ಲಿದ್ದು ಪ.ಪೂ. ತರಗತಿಗಳಲ್ಲಿ ಕಲಿಯುತ್ತಿರುವ ವಿಶ್ವಕರ್ಮ ಸಮಾಜದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರಥಮ, ದ್ವಿತೀಯ, ಪಿಯು ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಕಲಿಯುತಿದ್ದು ಶೇ. 60%ಕ್ಕಿಂತ ಮೇಲ್ಪಟ್ಟು ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.
ವಿಬಿಎಸ್ ಸಭಾದಿಂದ ನೀಡುವ ದತ್ತಿನಿಧಿಗೆ 2025ನೇ ಸಾಲಿನಲ್ಲಿ SSLC ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 90% ಮೇಲ್ಪಟ್ಟು ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ನಗದು ಪುರಸ್ಕಾರ ಹಾಗೂ ಪ್ರತಿಭಾ ಪುರಸ್ಕಾರಕ್ಕೆ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಂದ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಅರ್ಜಿಯು ಹಸ್ತಾಕ್ಷರದಲ್ಲಿದ್ದು ವಿದ್ಯಾರ್ಥಿ ಓದುತ್ತಿರುವ ಕಾಲೇಜು, ತರಗತಿ ಮನೆಯ ವಿಳಾಸ, ಕೂಡುವಳಿಕೆಯ ಮೊತ್ತೇಸರ ಅಥವಾ ಸಮಾಜ ಸಂಘ ಸಂಸ್ಥೆಗಳ ಅಧ್ಯಕ್ಷರ ದೃಢೀಕರಣದೊಂದಿಗೆ ಅಂಕಪಟ್ಟಿ
ದೃಢೀಕೃತ ಸಂಪೂರ್ಣ ವಿವರಗಳೊಂದಿಗೆ ಕಾಲೇಜಿನ ಪ್ರಾಂಶುಪಾಲರ ದೃಢೀಕರಣವನ್ನು ಹೊಂದಿರಬೇಕು.
ವಿದ್ಯಾರ್ಥಿವೇತನಕ್ಕೆ ಅರ್ಜಿಗಳನ್ನು ಪದ್ಮನಾಭ ಆಚಾರ್ಯ ವಿಬಿಎಸ್ ಸಭಾ ಪೆರ್ವಾಜೆ ರಸ್ತೆ ಕಾರ್ಕಳ ಅಥವಾ ರಮೇಶ್ ಆಚಾರ್ಯ ಮನು ಜ್ಯುವೆಲರ್ಸ್ ಸಪ್ತಗಿರಿ ಸಂಕೀರ್ಣ ಮಾರ್ಕೆಟ್ ರೋಡ್ ಇಲ್ಲಿಂದ ಪಡೆದುಕೊಳ್ಳಬಹುದು. ಅರ್ಜಿ ಫಾರಂಗಳನ್ನು ಪಡೆದು ಭರ್ತಿ ಮಾಡಿ ಜೂ.8ರೊಳಗೆ ತಲುಪುವಂತೆ ಅಧ್ಯಕ್ಷರು ವಿ.ಬಿ.ಎಸ್. ಸಭಾ ಪರ್ವಾಜೆ ರಸ್ತೆ ಕಾರ್ಕಳ ಇಲ್ಲಿಗೆ ಕಳುಹಿಸುವಂತೆ ಸಭಾದ ಪ್ರಕಟನೆ ಈ ಮೂಲಕ ತಿಳಿಸಿದ್ದಾರೆ.

Categories
ಹೆಲ್ತ್ ಎಕ್ಸ್ಪ್ರೆಸ್

ಆರೋಗ್ಯ ಎಕ್ಸ್ ಪ್ರೆಸ್! | ಮಳೆಗಾಲದಲ್ಲಿ ಕಾಡುವ ಕಣ್ಣು ನೋವು ನಿವಾರಿಸಲು ಇಲ್ಲಿದೆ ಸಿಂಪಲ್ ಮನೆಮದ್ದು!

ಆರೋಗ್ಯ ಎಕ್ಸ್ ಪ್ರೆಸ್!

ಮಳೆಗಾಲದಲ್ಲಿ ಕಾಡುವ ಕಣ್ಣು ನೋವು ನಿವಾರಿಸಲು ಇಲ್ಲಿದೆ ಸಿಂಪಲ್ ಮನೆಮದ್ದು!

NAMMUR EXPRESS NEWS
ಕಣ್ಣು ನೋವು ಒಬ್ಬರಿಂದ ಒಬ್ಬರಿಗೆ ಹರಡುವ ಸೋಂಕಾಗಿದೆ. ಇದಕ್ಕೆ ಔಷಧಿಯ ಜೊತೆಗೆ ಸರಿಯಾದ ಆರೈಕೆ ಮುಖ್ಯ. ಮನೆಯಲ್ಲೇ ಕಣ್ಣಿನ ಆರೈಕೆ ಹೇಗೆ ಮಾಡಬಹುದು ಎನ್ನುವುದನ್ನು ತಿಳಿಯೋಣ.
ಇತ್ತೀಚೆಗೆ ಹಲವು ರಾಜ್ಯಗಳಲ್ಲಿ ವಿಪರೀತ ಮಳೆಯಾಗುತ್ತಿದೆ. ಮಳೆಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಕಣ್ಣಿನ ಸಮಸ್ಯೆ ಕೂಡಾ ಒಂದು. ಐ ಫ್ಲೂ ಹೆಚ್ಚಿನ ಜನರನ್ನು ಕಾಡಲಾರಂಭಿಸಿದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಗುಲಾಬಿ ಕಣ್ಣಿನ ಸೋಂಕು ಅಥವಾ ಕಾಂಜಂಕ್ಟಿವಿಟಿಸ್ ಎಂದೂ ಕರೆಯುತ್ತಾರೆ.

– ಕಣ್ಣಿನ ಫ್ಲೂ ನ ಲಕ್ಷಣಗಳು ಯಾವುವು?​

ಕಣ್ಣಿನ ಫ್ಲೂ ಲಕ್ಷಣಗಳ ಕುರಿತು ಹೇಳುವುದಾದರೆ, ಈ ಸೋಂಕಿನಲ್ಲಿ, ರೋಗಿಯ ಕಣ್ಣುಗಳು ಕೆಂಪಾಗುತ್ತವೆ, ಕಣ್ಣುಗಳು ಊದಿಕೊಳ್ಳುತ್ತವೆ, ಕಣ್ಣುಗಳಿಂದ ನೀರು ಮತ್ತು ಕೊಳಕು ನಿರಂತರವಾಗಿ ಹೊರಸೂಸುತ್ತದೆ, ಜೊತೆಗೆ ಕಣ್ಣುಗಳಲ್ಲಿ ಉರಿ, ಸೂಜಿಯಲ್ಲಿ ಚುಚ್ಚಿದಂತಾಗುವುದು ಮತ್ತು ನೋವು ಇರುತ್ತದೆ. ಈ ಸೋಂಕು ಕನಿಷ್ಠ ಒಂದು ವಾರದವರೆಗೆ ಇರುತ್ತದೆ.

– ಕಣ್ಣಿನ ಫ್ಲೂಗೆ ಮನೆಮದ್ದುಗಳು ಯಾವುವು?

ಕಣ್ಣು ನೋವು ಒಬ್ಬರಿಂದೊಬ್ಬರಿಗೆ ವೇಗವಾಗಿ ಹರಡುತ್ತದೆ. ಇದಲ್ಲದೆ, ರೋಗಿಯು ಯಾರೊಂದಿಗಾದರೂ ಸಂಪರ್ಕಕ್ಕೆ ಬಂದರೂ ಹರಡಬಹುದು. ಇದಕ್ಕಾಗಿ ಹಲವಾರು ಕಣ್ಣಿನ ಡ್ರಾಪ್ಸ್‌ ಮತ್ತು ಔಷಧಿಗಳಿವೆ. ಕೆಲವು ಮನೆಮದ್ದುಗಳ ಮೂಲಕವೂ ನೀವು ಕಣ್ಣಿನ ಫ್ಲೂ ಅನ್ನು ನಿವಾರಿಸಬಹುದು.

– ಗ್ರೀನ್‌ ಟೀ ಬ್ಯಾಗ್

ಕಣ್ಣಿನ ಫ್ಲೂ ತೀವ್ರವಾದ ನೋವು, ಊತ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕಣ್ಣುಗಳಿಗೆ ತಂಪು ನೀಡುವುದು ನಿಮಗೆ ಪರಿಹಾರವನ್ನು ನೀಡುತ್ತದೆ ಮತ್ತು ಟೀ ಬ್ಯಾಗ್‌ಗಿಂತ ಉತ್ತಮವಾದುದು ಇನ್ನೊಂದಿಲ್ಲ. ಕೆಲವು ವಿಧದ ಚಹಾವು ಉರಿಯೂತದ ಮತ್ತು ಹಿತವಾದ ಗುಣಗಳನ್ನು ಹೊಂದಿದೆ.
ಗ್ರೀನ್‌ ಟೀ, ಕ್ಯಾಮೊಮೈಲ್, ರೂಯಿಬೋಸ್ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಕಣ್ಣುಗಳ ಮೇಲೆ ಗ್ರೀನ್ ಟೀ ಬಳಸುವುದು ಕಣ್ಣುಗಳ ಊತವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಬಿಸಿನೀರಿನ ಸ್ಥಾನ

ನಿಮ್ಮ ಕಣ್ಣುಗಳು ನೋಯುತ್ತಿದ್ದರೆ, ಸೋಂಕಿಗೆ ಒಳಗಾಗಿದ್ದರೆ ಅಥವಾ ಉರಿಯುತ್ತಿದ್ದರೆ, ಬೆಚ್ಚಗಿನ ಸಂಕುಚಿತಗೊಳಿಸುವಿಕೆಯು ಪರಿಹಾರವನ್ನು ನೀಡುತ್ತದೆ. ಬಿಸಿ ಸಂಕುಚಿತಗೊಳಿಸುವಿಕೆಯು ಕಣ್ಣಿನ ಫ್ಲೂ ನಿಂದ ಪರಿಹಾರವನ್ನು ನೀಡುತ್ತದೆ.
ಇದು ಕಣ್ಣಿನ ಸುತ್ತಲಿನ ಊತವನ್ನು ಸಹ ಕಡಿಮೆ ಮಾಡುತ್ತದೆ. ಇದಕ್ಕಾಗಿ, ಬೆಚ್ಚಗಿನ ನೀರಿನಲ್ಲಿ ಬಟ್ಟೆಯನ್ನು ನೆನೆಸಿ ಮತ್ತು ಅದನ್ನು ನಿಮ್ಮ ಕಣ್ಣಿನ ಮೇಲೆ ನಿಧಾನವಾಗಿ ಒತ್ತಿ. ನೀರು ತುಂಬಾ ಬಿಸಿಯಾಗಿರಬಾರದು ಮತ್ತು ಬಳಸುವ ಬಟ್ಟೆ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ.

ಲವಣಯುಕ್ತ ನೀರು

ಕಣ್ಣಿನ ಸೋಂಕಿಗೆ ಇದು ಅತ್ಯಂತ ಪರಿಣಾಮಕಾರಿ ಮನೆಮದ್ದುಗಳಲ್ಲಿ ಒಂದಾಗಿದೆ. ಲವಣಯುಕ್ತ ನೀರು ಕಣ್ಣಿನ ಡ್ರಾಪ್ಸ್‌ಗಳಂತೆ ಕೆಲಸ ಮಾಡುತ್ತದೆ. ಇದು ನೈಸರ್ಗಿಕವಾಗಿ ಕಣ್ಣುಗಳನ್ನು ಸ್ವಚ್ಛಗೊಳಿಸುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ಇದು ಕಣ್ಣಿನ ಫ್ಲೂ ನಂತಹ ಕಣ್ಣಿನ ಸೋಂಕುಗಳಿಗೆ ಉತ್ತಮ ಪರಿಹಾರವಾಗಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಮುಂಬೈ ಮಣಿಸಿ ಅಗ್ರಸ್ಥಾನಕ್ಕೇರಿದ ಪಂಜಾಬ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಮುಂಬೈ ಮಣಿಸಿ ಅಗ್ರಸ್ಥಾನಕ್ಕೇರಿದ ಪಂಜಾಬ್
* ಆರ್‌ಸಿಬಿ ಹಾದಿ ಸುಲಭ, ಟಾಪ್ 2 ಗೆ ಇಂದು ಕ್ಲೆಮಾಕ್ಸ್ ಫೈಟ್

NAMMMUR EXPRESS SPORTS NEWS
ಜೈಪುರ:ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಮಣಿಸುವ ಮೂಲಕ ಪಂಜಾಬ್‌ ಕಿಂಗ್ಸ್‌ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದರಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಹಾದಿ ಮತ್ತಷ್ಟು ಸುಲಭವಾದಂತಾಗಿದೆ. ಏಕೆಂದರೆ ಇಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್‌ಸಿಬಿ ಗೆಲುವು ಸಾಧಿಸಿದರೆ ಅಂಕಪಟ್ಟಿಯಲ್ಲಿ ಟಾಪ್‌ 2ನಲ್ಲಿ ಸ್ಥಾನ ಪಡೆಯಲಿದೆ. ಈ ಮೂಲಕ ಟ್ರೋಫಿ ಗೆಲ್ಲುವ ಹಾದಿಯನ್ನ ಮತ್ತಷ್ಟು ಸುಲಭಗೊಳಿಸಲಿದೆ ಎಂಬುದು ಕ್ರಿಕೆಟ್ ತಜ್ಞರ ಲೆಕ್ಕಾಚಾರ.
ಟಾಸ್‌ ಗೆದ್ದ ಪಂಜಾಬ್‌ ನಾಯಕ ಶ್ರೇಯಸ್‌ ಅಯ್ಯರ್‌ ಫೀಲ್ಡಿಂಗ್‌ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನ ಕಳೆದುಕೊಂಡು 184 ರನ್‌ ಗಳಿಸಿತು. ಈ ಗುರಿಯನ್ನ ಬೆನ್ನತ್ತಿದ ಪಂಜಾಬ್‌ ಪ್ರಿಯಾಂಶ್ ಆರ್ಯ ಮತ್ತು ಜೋಶ್ ಇಂಗ್ಲಿಸ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಸುಲಭವಾಗಿ ಗುರಿ ಮುಟ್ಟು ಮೂಲಕ ಗೆಲುವು ಸಾಧಿಸಿತು.
ಮುಂಬೈ ಪರ ಸೂರ್ಯಕುಮಾರ್‌ ಯಾದವ್‌ 39 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ ಇದ್ದ 57 ರನ್‌ ಗಳಿಸಿದರು. ಇನ್ನುಳಿದಂತೆ ರಯಾನ್ ರಿಕೆಲ್ಟನ್ (27), ಹಾರ್ದಿಕ್‌ ಪಾಂಡ್ಯ (26), ರೋಹಿತ್‌ ಶರ್ಮಾ (26), ನಮನ್ ಧೀರ್ (20) ಮತ್ತು ವಿಲ್‌ ಜ್ಯಾಕ್ಸ್‌ (17) ರನ್‌ ಗಳಿಸಿದರು. ಪಂಜಾಬ್‌ ಪರ ಬೌಲಿಂಗ್‌ನಲ್ಲಿ ಅರ್ಷದೀಪ್‌ ಸಿಂಗ್‌, ಮಾರ್ಕೊ ಜಾನ್ಸೆನ್ ಮತ್ತು ವಿಜಯಕುಮಾರ್ ವೈಶಾಕ್ ತಲಾ ಎರಡು ವಿಕೆಟ್‌ ಪಡೆದರೆ, ಹರ್‌ಪ್ರೀತ್ ಬ್ರಾರ್ ಒಂದು ವಿಕೆಟ್‌ ಕಬಳಿಸಿದರು.
ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ನಿಟ್ಟಿನಲ್ಲಿ ನಡೆದ ಸೆಣಸಾಟದಲ್ಲಿ ಪಂಜಾಬ್‌ ತಂಡವು ಮುಂಬೈ ವಿರುದ್ಧ ಸುಲಭ ಗೆಲುವು ಸಾಧಿಸಿದೆ. ಪಂಜಾಬ್‌ ಪರ ಪ್ರಿಯಾಂಶ್ ಆರ್ಯ 35 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ ಇದ್ದ 62 ರನ್‌ ಬಾರಿಸಿ ಮಿಂಚಿದರು. ಅದೇ ರೀತಿ ಜೋಶ್ ಇಂಗ್ಲಿಸ್ 42 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ ಇದ್ದ 73 ರನ್‌ ಗಳಿಸಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.

* ಆರ್‌ಸಿಬಿ ಹಾದಿ ಸುಲಭ, ಟಾಪ್ 2 ಗೆ ಇಂದು ಕ್ಲೆಮಾಕ್ಸ್ ಫೈಟ್
ಲಖನೌ: ಅಗ್ರ ಎರಡು ಸ್ಥಾನಗಳ ಮೇಲೆ ಕಣ್ಣಿರಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಇಂದು ತನ್ನ ಹಾಗೂ ಐಪಿಎಲ್‌ನ ಕಡೆಯ ಲೀಗ್‌ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ತಂಡವನ್ನು ಎದುರಿಸುತ್ತಿದೆ. ಅತ್ತ ಪ್ಲೇಆಫ್‌ ಸ್ಪರ್ಧೆಯಿಂದ ಹೊರಬಿದ್ದಿರುವ ಲಖನೌ ಗೆಲುವಿನೊಂದಿಗೆ ಪ್ರಸಕ್ತ ಐಪಿಎಲ್‌ ಅಭಿಯಾನ ಕೊನೆಗೊಳಿಸುವ ಇರಾದೆಯಲ್ಲಿದೆ.
ಪ್ರಸಕ್ತ ಐಪಿಎಲ್‌ನಲ್ಲಿ ಯಶಸ್ವಿ ತಂಡ ಎನಿಸಿಕೊಂಡ ಗುಜರಾತ್‌ ಟೈಟನ್ಸ್‌ ಸತತ 2 ಪಂದ್ಯಗಳಲ್ಲಿ ಸೋಲು ಕಂಡ ಹಿನ್ನೆಲೆಯಲ್ಲಿ ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆರ್‌ಸಿಬಿಗೆ ಅಗ್ರ ಎರಡರಲ್ಲಿ ಸ್ಥಾನ ಪಡೆಯುವ ದಾರಿ ಸುಗಮವಾಗಿದೆ. ಹಾಗೊಂದು ವೇಳೆ ಅಗ್ರ 2ರಲ್ಲಿ ಸ್ಥಾನ ಪಡೆದಿದ್ದೇ ಆದಲ್ಲಿ 2016ರ ಬಳಿಕ ಆರ್‌ಸಿಬಿ ಮೊದಲ ಬಾರಿ ಈ ಸಾಧನೆಗೆ ಪಾತ್ರವಾಗಲಿದೆ. ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್‌ ಪ್ರವೇಶಿಸಲಿದೆ. ಸೋತ ತಂಡ 2ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಎಲಿಮಿನೇಟರ್‌ ಪಂದ್ಯದ ವಿಜೇತ ತಂಡವನ್ನು ಎದುರಿಸಬೇಕಾಗುತ್ತದೆ. ಇಲ್ಲಿಗೆದ್ದ ತಂಡ ಫೈನಲ್‌ ಪ್ರವೇಶಿಸಲಿದೆ. ಹೀಗಾಗಿ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಕಾಣಿಸಿಕೊಳ್ಳುವ ತಂಡಗಳಿಗೆ ಫೈನಲ್‌ ಪ್ರವೇಶಿಸಲು 2 ಅವಕಾಶ ಲಭಿಸಲಿದೆ.

* ಲಖನೌ ವಿರುದ್ಧ ಸೋತರೆ ಎಲಿಮಿನೇಟರ್

ಸೋಮವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ 19 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ. 18 ಅಂಕ ಹೊಂದಿರುವ ಗುಜರಾತ್ ಟೈಟಾನ್ಸ್ 2ನೇ ಸ್ಥಾನಕ್ಕಿಳಿದಿದೆ.
ಒಂದು ವೇಳೆ ಲಖನೌ ತಂಡದ ವಿರುದ್ಧ ಆರ್ ಸಿಬಿ ಗೆದ್ದಲ್ಲಿ ಅಂಕಪಟ್ಟಿಯಲ್ಲಿ 2ನೇ ಸ್ಥಾನವಂತೂ ಖಚಿತ. ಪಂಜಾಬ್ ಮತ್ತು ಬೆಂಗಳೂರು ಎರಡೂ ತಂಡಗಳು 19 ಅಂಕ ಗಳಿಸುವ ಕಾರಣ ಆಗ ಮೊದಲೆರಡು ಸ್ಥಾನಗಳು ರನ್ ರೇಟ್ ಆಧಾರದಲ್ಲಿ ನಿರ್ಧಾರವಾಗಲಿದೆ. ಸದ್ಯ ಪಂಜಾಬ್ ಕಿಂಗ್ಸ್ ರನ್ ರೇಟ್ ಉತ್ತಮವಾಗಿದೆ. ಒಂದು ವೇಳೆ ಪಂದ್ಯ ಸೋತಲ್ಲಿ ಆಗ 3ನೇ ಸ್ಥಾನಿದಲ್ಲಿಯೇ ಇರಲಿದೆ. ಆಗ ಎಲಿಮಿನೇಟರ್ ನಲ್ಲಿ ಆಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆಗ ಆರ್‌ಸಿಬಿ ನಾಲ್ಕನೇ ಸ್ಥಾನಿ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಬೇಕಾಗುತ್ತದೆ. ಅದು ಮಾಡು ಇಲ್ಲವೇ ಮಡಿ ಪಂದ್ಯವಾಗಲಿದೆ.
ಭಾರತ- ಪಾಕಿಸ್ತಾನ ಸೇನಾ ಸಂಘರ್ಷದಿಂದಾಗಿ ಐಪಿಎಲ್‌ ಸ್ಥಗಿತಗೊಳ್ಳುವುದಕ್ಕೂ ಮುನ್ನ ರಜತ್‌ ಪಾಟೀದಾರ್‌ ಪಡೆ ಅತ್ಯುತ್ತಮ ಫಾರ್ಮ್‌ನಲ್ಲಿತ್ತು. ಒಂದು ವಾರದ ಬಳಿಕ ಐಪಿಎಲ್‌ ಪುನಾರಂಭಗೊಂಡಾಗ ಆರ್‌ಸಿಬಿ ತನ್ನ ಫಾರ್ಮ್ ಕಾಪಾಡಿಕೊಂಡಿದೆಯೇ ಇಲ್ಲವೇ ಎಂಬುದರ ಬಗ್ಗೆ ಕುತೂಹಲ ಮೂಡಿತ್ತು. ಅದಕ್ಕೆ ಉತ್ತರ ನೀಡಲಿದ್ದ ಆರ್‌ಸಿಬಿ- ಕೆಕೆಆರ್‌ ಪಂದ್ಯ ಮಳೆಯಿಂದ ರದ್ದುಗೊಂಡು ಅಂಕ ಹಂಚಿಕೊಂಡಿವೆ. ಬಳಿಕ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಹಿಂದಿನ ಪಂದ್ಯದಲ್ಲಿಆರ್‌ಸಿಬಿ 42 ರನ್‌ಗಳ ಸೋಲು ಕಂಡಿದೆ. ಇದು ತಂಡದ ಆತ್ಮವಿಶ್ವಾಸಕ್ಕೆ ಘಾಸಿ ಮಾಡಿರುವುದಂತೂ ನಿಜ. ಅದರ ಮಧ್ಯೆ ಆರ್‌ಸಿಬಿ ತನ್ನ ಆರಂಭಿಕ ಫಾರ್ಮನ್ನು ಕಾಪಾಡಿಕೊಂಡಿರುವ ಬಗ್ಗೆ ಗೊಂದಲಗಳು ಮುಂದುವರಿದಿರುವ ಬೆನ್ನಲ್ಲೇ ಇಂದಿನ ಪಂದ್ಯ ಕುತೂಹಲ ಮೂಡಿಸಿದೆ.

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಹನುಮಾನ್ ಕೃಪೆಯಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ವೈಯಕ್ತಿಕ ಸಂಬಂಧಗಳಿಂದ ನಿಮಗೆ ಲಾಭವಾಗುತ್ತದೆ. ಆದಾಯ ಮತ್ತು ಸಂಪತ್ತು ಹೆಚ್ಚಾಗುತ್ತದೆ. ಹೊಸ ವಿಚಾರಗಳಿಂದ ನೀವು ಪ್ರಭಾವಿತರಾಗುತ್ತೀರಿ. ಬಾಕಿ ಇರುವ ಕೆಲಸಗಳು ಫಲಿತಾಂಶಗಳನ್ನು ನೀಡುತ್ತವೆ. ಹಣಕಾಸಿನ ಅಂಶಗಳು ಸುಧಾರಿಸುತ್ತವೆ. ನೀವು ಸಂಘಟನೆ ಮತ್ತು ನಿರ್ವಹಣೆಯತ್ತ ಗಮನ ಹರಿಸುತ್ತೀರಿ. ಅನುಕೂಲಕರ ಪರಿಸರದ ಲಾಭವನ್ನು ನೀವು ಪಡೆಯುತ್ತೀರಿ. ವೃತ್ತಿ ಮತ್ತು ವ್ಯವಹಾರವು ತ್ವರಿತ ಬೆಳವಣಿಗೆಯನ್ನು ತೋರಿಸುತ್ತದೆ.

** ವೃಷಭ ರಾಶಿ :
ನಿಮ್ಮ ಬಜೆಟ್ ಮೇಲೆ ಗಮನಹರಿಸಿ. ವೆಚ್ಚಗಳು ಹೆಚ್ಚಿರುತ್ತವೆ. ನೀವು ದೊಡ್ಡ ಗುರಿಗಳನ್ನು ಸಾಧಿಸುವಿರಿ. ವ್ಯವಹಾರಗಳಲ್ಲಿ ಸ್ಪಷ್ಟರಾಗಿರಿ. ಕಾನೂನು ವಿಷಯಗಳಲ್ಲಿ ಜಾಗರೂಕರಾಗಿರಿ. ತಾಳ್ಮೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಿ. ಪ್ರಮುಖ ಯೋಜನೆಗಳಿಗೆ ಬೆಂಬಲ ಸಿಗುತ್ತದೆ. ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸಿ. ಪ್ರಮುಖ ವಿಷಯಗಳನ್ನು ವೇಗಗೊಳಿಸಿ. ನಿಮ್ಮ ಪ್ರೀತಿಪಾತ್ರರಿಗಾಗಿ ನೀವು ತ್ಯಾಗ ಮನೋಭಾವವನ್ನು ಹೊಂದಿರುತ್ತೀರಿ. ಇಂದು ನಿಮ್ಮ ಪ್ರೀತಿಪಾತ್ರರನ್ನು ನೀವು ಭೇಟಿಯಾಗುತ್ತೀರಿ.

** ಮಿಥುನ ರಾಶಿ :
ಆದಾಯದ ವಿವಿಧ ಮೂಲಗಳು ಅಭಿವೃದ್ಧಿ ಹೊಂದುತ್ತವೆ. ನಿಮ್ಮ ವೇಗವನ್ನು ಹೆಚ್ಚಿಸುವತ್ತ ನೀವು ಗಮನಹರಿಸುತ್ತೀರಿ. ನಿಮ್ಮ ಗುರಿಗಳ ಮೇಲೆ ಗಮನ ಹರಿಸುವುದು ತೀವ್ರಗೊಳ್ಳುತ್ತದೆ. ಸ್ಥಗಿತಗೊಂಡ ವಿಷಯಗಳನ್ನು ನೀವು ವೇಗಗೊಳಿಸುತ್ತೀರಿ. ಕೆಲಸಗಳು ಸರಾಗವಾಗಿ ಪೂರ್ಣಗೊಳ್ಳುತ್ತವೆ. ನೀವು ನಿಮ್ಮ ಅಪೇಕ್ಷಿತ ಗುರಿಗಳನ್ನು ಸಾಧಿಸುವಿರಿ. ನಿಮ್ಮ ಪ್ರತಿಭೆ ಹೊಳೆಯುತ್ತದೆ. ನಿಮ್ಮ ಕಾರ್ಯಕ್ಷಮತೆಯ ಮೂಲಕ ನೀವು ಒಂದು ಸ್ಥಾನವನ್ನು ಸ್ಥಾಪಿಸುವಿರಿ. ನಿಮ್ಮ ವೃತ್ತಿಜೀವನದಲ್ಲಿ ಅನುಕೂಲಕರ ಫಲಿತಾಂಶಗಳು ಬರುತ್ತವೆ

** ಕರ್ಕಾಟಕ ರಾಶಿ :
ಜಂಟಿ ಉದ್ಯಮಗಳಲ್ಲಿ ಸುಧಾರಣೆಗಳು ಕಂಡುಬರುತ್ತವೆ. ನೀವು ನಿರ್ವಹಣಾ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ಪೂರೈಸುವಿರಿ. ನಿಮ್ಮ ಖ್ಯಾತಿ ಸುಧಾರಿಸುತ್ತದೆ. ದೀರ್ಘಾವಧಿಯ ಯೋಜನೆಗಳು ಫಲ ನೀಡುತ್ತವೆ ಮತ್ತು ಆಡಳಿತಾತ್ಮಕ ಬೆಂಬಲ ಲಭ್ಯವಿರುತ್ತದೆ. ಲಾಭಾಂಶವು ಹೆಚ್ಚಾಗಿರುತ್ತದೆ ಮತ್ತು ನೀವು ಚಿಂತೆಗಳಿಂದ ಮುಕ್ತರಾಗುತ್ತೀರಿ. ನಿಮ್ಮ ಗುರಿಗಳ ಮೇಲೆ ಗಮನ ಹರಿಸುತ್ತೀರಿ. ನಿಮ್ಮ ಕಾರ್ಯಕ್ಷಮತೆ ನಿರೀಕ್ಷೆಗಳನ್ನು ಪೂರೈಸುತ್ತದೆ.

** ಸಿಂಹ ರಾಶಿ :
ಇಂದು, ನಿಮಗೆ ಲಕ್ಷ್ಮಿಯ ಕೃಪೆಯಿಂದಾಗಿ ಅದೃಷ್ಟದ ಬಾಗಿಲು ತೆರೆಯುತ್ತದೆ. ನೀವು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಿರಿ ಮತ್ತು ನಿಮ್ಮ ಸಂವಹನವನ್ನು ಸುಧಾರಿಸಿಕೊಳ್ಳುವಿರಿ. ನೀವು ಹಣಕಾಸಿನ ವಿಷಯಗಳಲ್ಲಿ ಹೆಚ್ಚು ಸಕ್ರಿಯರಾಗಿರುತ್ತೀರಿ ಮತ್ತು ಗುರಿಗಳನ್ನು ತ್ವರಿತವಾಗಿ ಸಾಧಿಸುವಿರಿ. ನೀವು ನಿಮ್ಮ ಘನತೆಯನ್ನು ಕಾಪಾಡಿಕೊಳ್ಳುತ್ತೀರಿ ಮತ್ತು ಕೆಲಸಗಳನ್ನು ಬುದ್ಧಿವಂತಿಕೆಯಿಂದ ಸಮೀಪಿಸುತ್ತೀರಿ. ವೃತ್ತಿಪರ ಕೆಲಸವು ಲಾಭ ಮತ್ತು ವಿಸ್ತರಣೆಯತ್ತ ಸಾಗುತ್ತದೆ. ನಿಮ್ಮ ಪ್ರೀತಿಪಾತ್ರರ ಸಂತೋಷವನ್ನು ನೀವು ಕಾಪಾಡಿಕೊಳ್ಳುತ್ತೀರಿ

** ಕನ್ಯಾ ರಾಶಿ :
ನಾಯಕತ್ವಕ್ಕೆ ಒತ್ತು ನೀಡಿ. ಆರ್ಥಿಕ ಪ್ರಗತಿಗೆ ಅವಕಾಶಗಳನ್ನು ಬಳಸಿಕೊಳ್ಳಿ. ಲಾಭಗಳು ಮಧ್ಯಮವಾಗಿರುತ್ತವೆ. ವಿವಿಧ ವಿಷಯಗಳ ಮೇಲೆ ಗಮನ ಹೆಚ್ಚಿಸಿ. ವೃತ್ತಿಪರ ನಿರೀಕ್ಷೆಗಳನ್ನು ಪೂರೈಸಲು ಒತ್ತಡವಿರುತ್ತದೆ. ಪ್ರೀತಿಪಾತ್ರರ ಬೆಂಬಲದೊಂದಿಗೆ ನಿಮ್ಮ ವ್ಯವಹಾರವನ್ನು ನೀವು ಮುನ್ನಡೆಸುತ್ತೀರಿ. ವಿವಿಧ ಕಾರ್ಯಗಳಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಿ. ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ನೀವು ಹಿಂಜರಿಯುತ್ತೀರಿ. ಸರಿಯಾದ ಅವಕಾಶಕ್ಕಾಗಿ ಕಾಯುತ್ತೀರಿ. ಆತುರಪಡುವುದನ್ನು ತಪ್ಪಿಸಿ.ನೀವು ನಿಮ್ಮ ಸಂಗಾತಿಯನ್ನು ಭೇಟಿಯಾಗುತ್ತೀರಿ.

** ತುಲಾ ರಾಶಿ :
ಸಮಯಕ್ಕೆ ಸರಿಯಾಗಿ ಹಣಕಾಸಿನ ಕೆಲಸಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ವಿಷಯಗಳು ವೇಗ ಪಡೆಯುತ್ತವೆ. ಸ್ಥಿರತೆ ಬಲಗೊಳ್ಳುತ್ತದೆ. ಬಾಕಿ ಇರುವ ಕೆಲಸಗಳನ್ನು ತ್ವರಿತಗೊಳಿಸುತ್ತೀರಿ. ಎಲ್ಲರನ್ನೂ ಒಗ್ಗಟ್ಟಿನಲ್ಲಿಡುವಲ್ಲಿ ನೀವು ಯಶಸ್ವಿಯಾಗುತ್ತೀರಿ. ನೀವು ವ್ಯವಸ್ಥೆಯನ್ನು ನಂಬುತ್ತೀರಿ ಮತ್ತು ನಿಯಮಗಳನ್ನು ಗೌರವಿಸುತ್ತೀರಿ. ಆದಾಯದ ಮೂಲಗಳು ಬೆಳೆಯುತ್ತವೆ. ಕುಟುಂಬ ಸದಸ್ಯರಲ್ಲಿ ಪ್ರೀತಿ ಮತ್ತು ಉತ್ಸಾಹ ಮೇಲುಗೈ ಸಾಧಿಸುತ್ತದೆ. ಪ್ರೀತಿಪಾತ್ರರು ಸಂತೋಷವಾಗಿರುತ್ತಾರೆ

** ವೃಶ್ಚಿಕ ರಾಶಿ :
ಇತರರ ಮಾತುಗಳು ಅಥವಾ ಆಮಿಷಗಳಿಗೆ ಬಲಿಯಾಗಬೇಡಿ. ಸಾಲದ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ನಿಮ್ಮ ಗುರಿಗಳ ಮೇಲೆ ಗಮನಹರಿಸಿ. ನಿಮ್ಮ ಪ್ರಯತ್ನಗಳು ಫಲಿತಾಂಶಗಳನ್ನು ನೀಡುತ್ತವೆ.
ನೀವು ಜಾಗೃತಿಯಿಂದ ಮುಂದುವರಿಯುತ್ತೀರಿ. ವ್ಯಾಪಾರ ಚಟುವಟಿಕೆಗಳು ಸ್ಥಿರವಾಗಿರುತ್ತವೆ. ಸಹೋದ್ಯೋಗಿಗಳು ನಿಮ್ಮನ್ನು ಬೆಂಬಲಿಸುತ್ತಲೇ ಇರುತ್ತಾರೆ. ವಿರೋಧಿಗಳ ಬಗ್ಗೆ ಎಚ್ಚರದಿಂದಿರಿ. ಸ್ನೇಹವು ಬಲವಾಗಿ ಉಳಿಯುತ್ತದೆ ಮತ್ತು ಸಂಬಂಧಗಳು ಸಾಮರಸ್ಯದಿಂದ ಕೂಡಿರುತ್ತವೆ.

** ಧನಸ್ಸು ರಾಶಿ :
ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ನೀವು ಸ್ಪರ್ಧೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಿರಿ ಮತ್ತು ಗೆಳೆಯರಿಂದ ಬೆಂಬಲವನ್ನು ಪಡೆಯುತ್ತೀರಿ. ನೀವು ವಾದಗಳು ಮತ್ತು ವಿವಾದಗಳನ್ನು ತಪ್ಪಿಸುವಿರಿ. ನೀವು ಹಣಕಾಸಿನ ವ್ಯವಹಾರಗಳಲ್ಲಿ ಸ್ಪಷ್ಟತೆಯನ್ನು ಕಾಯ್ದುಕೊಳ್ಳುತ್ತೀರಿ ಮತ್ತು ಅಗತ್ಯ ಕೆಲಸಗಳನ್ನು ಚುರುಕುಗೊಳಿಸುತ್ತೀರಿ. ಸಮಯಕ್ಕೆ ಸರಿಯಾಗಿ ಗುರಿಗಳನ್ನು ಪೂರ್ಣಗೊಳಿಸುವತ್ತ ಗಮನ ಹರಿಸುತ್ತೀರಿ.
ಪ್ರೀತಿಯಲ್ಲಿ ನಂಬಿಕೆ ಬೆಳೆಯುತ್ತದೆ.

** ಮಕರ ರಾಶಿ :
ನಿರ್ವಹಣಾ ಸಾಮರ್ಥ್ಯಗಳು ಬಲವಾಗಿರುತ್ತವೆ. ಯೋಜನೆಗಳು ವೇಗವನ್ನು ಪಡೆಯುತ್ತವೆ. ವೃತ್ತಿಪರರ ಮೇಲಿನ ನಂಬಿಕೆ ಉಳಿಯುತ್ತದೆ. ನಿಮ್ಮ ಸ್ವಂತ ವ್ಯವಹಾರವನ್ನು ನೋಡಿಕೊಳ್ಳಿ. ವೈಯಕ್ತಿಕ ಯಶಸ್ಸು ನಿಮ್ಮನ್ನು ಪ್ರೇರೇಪಿಸುತ್ತದೆ. ನಿಮ್ಮ ಗುರಿಗಳ ಮೇಲೆ ಗಮನವಿರಲಿ. ನೀವು ನಿರೀಕ್ಷೆಗಳಿಗೆ ತಕ್ಕಂತೆ ಬದುಕುತ್ತೀರಿ. ಬುದ್ಧಿವಂತರಾಗಿರಿ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಿ. ಆತುರವಿಲ್ಲದೆ ಶಾಂತವಾಗಿ ಮುಂದುವರಿಯಿರಿ. ಕುಟುಂಬದೊಂದಿಗೆ ಆತ್ಮೀಯತೆ ಹೆಚ್ಚಾಗುತ್ತದೆ. ವೈಯಕ್ತಿಕ ಸಂಬಂಧಗಳು ಬಲವಾಗಿರುತ್ತವೆ.

** ಕುಂಭ ರಾಶಿ :
ಆರ್ಥಿಕ ಲಾಭಗಳು ಬಲವಾಗಿರುತ್ತವೆ. ವಿವಿಧ ವಿಷಯಗಳು ನಿಮ್ಮ ಪರವಾಗಿ ತಿರುಗುತ್ತವೆ. ನೀವು ಜವಾಬ್ದಾರಿಯುತವಾಗಿ ವರ್ತಿಸುವಿರಿ. ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಅನುಕೂಲಕರ ಪರಿಸ್ಥಿತಿಗಳು ನಿಮ್ಮ ಪ್ರಗತಿಯನ್ನು ಹೆಚ್ಚಿಸುತ್ತವೆ. ನೀವು ವ್ಯಾಪಾರ ಪಾಲುದಾರರ ವಿಶ್ವಾಸವನ್ನು ಗಳಿಸುವಿರಿ. ಕೆಲಸದ ನಿರ್ವಹಣೆ ಸುಧಾರಿಸುತ್ತದೆ. ಭಕ್ತಿಯ ಭಾವನೆಗಳು ಹೆಚ್ಚಾಗುತ್ತವೆ. ಎಲ್ಲರೂ ಪ್ರಭಾವಿತರಾಗುತ್ತಾರೆ. ಪ್ರೀತಿಪಾತ್ರರು ಬೆಂಬಲ ನೀಡುತ್ತಾರೆ. ನೀವು ಕುಟುಂಬದೊಂದಿಗೆ ಸಾಮರಸ್ಯದಿಂದ ಇರುತ್ತೀರಿ.

** ಮೀನ ರಾಶಿ :
ನಿಮ್ಮ ಪ್ರತಿಷ್ಠೆ ಮತ್ತು ಸ್ಥಾನಮಾನ ಹೆಚ್ಚಾಗುತ್ತದೆ. ಸಂಪತ್ತು ಮತ್ತು ಆಸ್ತಿ ವಿಷಯಗಳ ಮೇಲೆ ಗಮನ ಕೊಡಿ. ಕಾರ್ಯಕ್ಷಮತೆ ನಿರೀಕ್ಷೆಗಳನ್ನು ಮೀರುತ್ತದೆ. ಕೆಲಸದ ಕಾರ್ಯಕ್ಷಮತೆ ಬಲವಾಗಿರುತ್ತದೆ. ಆರ್ಥಿಕ ಲಾಭಗಳು ಹೆಚ್ಚಾಗುತ್ತವೆ. ನೀವು ಸಂಬಂಧಿಕರನ್ನು ಭೇಟಿಯಾಗುತ್ತೀರಿ, ಮತ್ತು ಸಂಬಂಧಗಳು ಅನುಕೂಲಕರವಾಗಿ ಉಳಿಯುತ್ತವೆ. ನಿಮ್ಮ ಮಾತು ಮತ್ತು ನಡವಳಿಕೆಯು ಇತರರನ್ನು ಮೆಚ್ಚಿಸುತ್ತದೆ. ನೀವು ಪ್ರೀತಿಪಾತ್ರರ ಬಗ್ಗೆ ಪರಿಗಣನೆಯಿಂದ ಇರುತ್ತೀರಿ. ನಿಮ್ಮ ನಡವಳಿಕೆಯಲ್ಲಿ ಸಿಹಿತನ ಕಾಯ್ದುಕೊಳ್ಳುವಿರಿ.

Categories
ಕರಾವಳಿ

ಡೇಂಜರ್ ಝೋನಿನಲ್ಲಿದೆ ಮಂಗಳೂರು!

ಕರಾವಳಿ ಟಾಪ್ ನ್ಯೂಸ್!

ಡೇಂಜರ್ ಝೋನಿನಲ್ಲಿದೆ ಮಂಗಳೂರು!

– ಮಂಗಳೂರು: ಈ ಬಾರಿಯೂ ಈಜುಕೊಳವಾದ ಪಂಪ್ವೆಲ್
– ಮಂಗಳೂರು: ನೇತ್ರಾವತಿ ನದಿ ನೀರಿನ ಮಟ್ಟದಲ್ಲೂ ಏರಿಕೆ
– ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆ: NDRF ತಂಡ ಪುತ್ತೂರಿಗೆ ಆಗಮನ!
– ಪುತ್ತೂರು: ನಗರಸಭೆಯ ಆವರಣ ಗೋಡೆ ಕುಸಿತ: ಮೂರು ಆಟೋಗೆ ಹಾನಿ
– ಬೆಳ್ತಂಗಡಿ: ಮುಗೇರಡ್ಕ ರಸ್ತೆಯಲ್ಲಿ ಅಪಾಯದ ಗುಂಡಿ!

NAMMUR EXPRESS NEWS
ಮಂಗಳೂರು: ಮಂಗಳೂರಿನಲ್ಲಿ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದು ಪಂಪ್ವೆಲ್ ಸೇತುವೆಯ ಕೆಳಭಾಗ ಈ ವರ್ಷವೂ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಸ್ವಿಮ್ಮಿಂಗ್ ಪೂಲ್ ನಂತಾದ ಪಂಪ್ ವೆಲಿನಲ್ಲಿ ವಾಹನ ಸವಾರರು ಸಂಚರಿಸಲು ಪರದಾಡುತ್ತಿದ್ದಾರೆ.
ಇಲ್ಲಿ ಪ್ರವಾಹ ಪರಿಸ್ಥಿತಿ ಎದುರಾದ ಹಿನ್ನೆಲೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ರಾಜಕಾಲುವೆಯಲ್ಲಿ ಅಧಿಕ ಪ್ರಮಾಣದಲ್ಲಿ ನೀರು ತುಂಬಿ ಹರಿಯುತ್ತಿದೆ.
ಇದೀಗ ನಿರಂತರವಾಗಿ ಮಳೆ ನೀರು ಹರಿಯುತ್ತಿದ್ದು ಮುಂದೆ ಸಾರ್ವಜನಿಕರು ಯಾವ ರೀತಿಯ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬರುತ್ತದೋ ಎಂಬ ಆತಂಕ ಕೂಡಾ ಸೃಷ್ಟಿಯಾಗಿದೆ. ಇಲ್ಲಿ ದಿನನಿತ್ಯ ಟ್ರಾಫಿಕ್ ಜಾಂ ಸಮಸ್ಯೆ ಕೂಡಾ ಕಂಡುಬರುತ್ತಿದೆ.

– ಮಂಗಳೂರು: ನೇತ್ರಾವತಿ ನದಿ ನೀರಿನ ಮಟ್ಟದಲ್ಲೂ ಏರಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದೆ. ಜಿಲ್ಲೆಯ ಹಲವು ಕಡೆ ಮರಗಳು ಉರುಳಿ ಬಿದ್ದಿದೆ. ಇದೇ ಸಂದರ್ಭದಲ್ಲಿ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ಧರ್ಮಸ್ಥಳ ಭಾಗದಲ್ಲಿ ನೀರು ತುಂಬಿ ಹರಿಯುತ್ತಿದೆ. ಕಿಂಡಿ ಅಣೆಕಟ್ಟುಗಳಲ್ಲಿ ನೀರು ತುಂಬಿದ್ದು, ಹಲಗೆಗಳನ್ನು ಎತ್ತಲಾಗಿದೆ.
ಇನ್ನೊಂದು ಕಡೆ ಹವಾಮಾನ ಇಲಾಖೆ ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಿದೆ. ರಾಜ್ಯಕ್ಕೆ ವಾಡಿಕೆಗಿಂತ ಮೊದಲೇ ಮುಂಗಾರು ಪ್ರವೇಶ ಆಗಿದೆ. ಜೂನ್‌ 1ರಂದು ಮುಂಗಾರು ಆರಂಭವಾಗುವುದು ಸಾಮಾನ್ಯ. ಆದರೆ ಈ ಬಾರಿ ಎಂಟು ದಿನ ಮೊದಲೇ ಕೇರಳದ ಮೂಲಕ ಪ್ರವೇಶ ಮಾಡಿದೆ. ಇದೊಂದು ಅಪರೂಪದ ಪ್ರಕ್ರಿಯೆ ಎನ್ನಬಹುದು. 2009 ರಲ್ಲಿ ಜುಲೈ 23 ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ ಮಾಡಿತ್ತು. ಕಳೆದ ಬಾರಿ ಮೇ 30 ರಂದು, 2023 ರಲ್ಲಿ ಜೂ.8 ಕ್ಕೆ ಮುಂಗಾರು ಮಳೆ ಪ್ರವೇಶ ಮಾಡಿತ್ತು ಎಂದು ಹವಾಮಾನ ಇಲಾಖೆ ಹೇಳಿದೆ.

– ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆ: NDRF ತಂಡ ಪುತ್ತೂರಿಗೆ ಆಗಮನ!

ಭಾರೀ ಮಳೆಯಾಗುತ್ತಿರುವ ಕಾರಣ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನ ಘಟ್ಟ ಮುಳುಗಡೆಯಾಗಿದೆ. ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು ಭಕ್ತಾಧಿಗಳಿಗೆ ಸ್ನಾನಘಟ್ಟದ ಬಳಿ ಇಳಿಯದಂತೆ ಸೂಚಿಸಲಾಗಿದೆ.
ಭಕ್ತರು ನದಿ ನೀರನ್ನು ತಲೆಗೆ ಚಿಮುಕಿಸಲು ಅನುಮತಿ ನೀಡಲಾಗಿದೆ. ಸ್ನಾನಘಟ್ಟದ ಸುತ್ತ ಹಗ್ಗವನ್ನು ಕಟ್ಟಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿದೆ. ಮಳೆ ಅಬ್ಬರದ ಕಾರಣ ಪುತ್ತೂರಿಗೆ 25 ಸಿಬ್ಬಂದಿಯ ಎನ್‌ಡಿಆರ್‌ಎಫ್‌ ಸಿಬ್ಬಂದಿ ಆಗಮಿಸಲಿದ್ದಾರೆ. ಎಲ್ಲಾ ಅಧಿಕಾರಿಗಳಿಗೆ ಸರ್ವ ಸನ್ನದ್ಧರಾಗಿರಲು ಸೂಚನೆಯನ್ನು ನೀಡಲಾಗಿದೆ.

– ಪುತ್ತೂರು: ನಗರಸಭೆಯ ಆವರಣ ಗೋಡೆ ಕುಸಿತ: ಮೂರು ಆಟೋಗೆ ಹಾನಿ

ಪುತ್ತೂರು: ಪುತ್ತೂರು ನಗರಸಭೆಯ ಕಾರ್ಯಾಲಯದ ಮುಂಭಾಗದಲ್ಲಿನ ಗ್ರಾಮ ಚಾವಡಿಯ ಹಿಂಬದಿಯ ಆವರಣಗೋಡೆ ಕುಸಿದು ಬಿದ್ದ ಘಟನೆ ನಡೆದಿದೆ.
ಈ ಘಟನೆಯಲ್ಲಿ ಮೂರು ಆರೋ ರಿಕ್ಷಾಗಳಿಗೆ ಹಾನಿಯಾಗಿದೆ. ಘಟನೆ ಸಂದರ್ಭ ಚಾಲಕರು ಸ್ಥಳದಲ್ಲಿ ಇರಲಿಲ್ಲ.
ನಗರಸಭೆಯಿಂದ ಇಂಗು ಗುಂಡಿಯನ್ನು ಆವರಣ ಗೋಡೆಯ ಬಳಿ ನಿರ್ಮಿಸಲಾಗಿತ್ತು. ಎಡಬಿಡದೆ ಸುರಿದ ಮಳೆಯಿಂದಾಗಿ ನೀರು ಇಂಗುಗುಂಡಿಯಲ್ಲಿ ತುಂಬಿ ಆವರಣ ಗೋಡೆ ಕುಸಿದಿದೆ ಎನ್ನಲಾಗಿದೆ. ಆವರಣ ಗೋಡೆ ಕುಸಿದ ಸಂದರ್ಭದಲ್ಲಿ ನಗರಸಭೆಯ ಪಕ್ಕದಲ್ಲಿದ್ದ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಕಂಬವಾಲಿದೆ.
ನಗರಸಭೆಯ ಉಪಾದ್ಯಕ್ಷ, ಸದಸ್ಯರು ಪರಿಶೀಲನೆ ನಡೆಸಿದ್ದು, ರಸ್ತೆಗೆ ಬಿದ್ದ ಮಣ್ಣು, ಕಲ್ಲುಗಳನ್ನು ನಗರಸಭೆಯ ಪೌರ ಕಾರ್ಮಿಕರು ತೆರವು ಮಾಡಿದರು.

– ಬೆಳ್ತಂಗಡಿ: ಮುಗೇರಡ್ಕ ರಸ್ತೆಯಲ್ಲಿ ಅಪಾಯದ ಗುಂಡಿ!

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಮುಗೇರಡ್ಕ ರಸ್ತೆಯಲ್ಲಿ ಗುಂಡಿಯೊಂದು ಉಂಟಾಗಿದೆ. ಇದು ಅಪಾಯಕಾರಿಯಾಗಿದ್ದು, ಸಾರ್ವಜನಿಕರು ಹಲವು ಭಾರಿ ಅಧಿಕಾರಿಗಳಿಗೆ ಗುಂಡಿ ಮುಚ್ಚಲು ತಿಳಿಸಿದರೂ, ಯಾವುದೆ ದುರಸ್ತಿ ಕಾರ್ಯ ನಡೆದಿಲ್ಲ.
ಪರಿಣಾಮ ಇಂದು ಒಂದೇ ದಿನ ಮೂರು ದ್ವಿಚಕ್ರ ವಾಹನಗಳು ಈ ಅಪಾಯಕಾರಿ ಗುಂಡಿಯಿಂದ ಸವಾರರಿಗೆ ಅಪಘಾತ ಸಂಭವಿಸಿ ಗಾಯಗಳಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Categories
ಮಂಡ್ಯ

ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಮಗು ಬಲಿ..!!

ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಮಗು ಬಲಿ..!!
– ಮಿಮ್ಸ್ ಆಸ್ಪತ್ರೆ ಎದುರು ರಸ್ತೆಯಲ್ಲೇ ಮಗು ಶವವಿಟ್ಟು ಗೋಳಾಟ

NAMMUR EXPRESS NEWS
ಮಂಡ್ಯ: ಟ್ರಾಫಿಕ್ ಪೊಲೀಸರ ಯಡವಟ್ಟಿಗೆ ಮಗು ಬಲಿಯಾಗಿರೋ ಮನಕಲಕುವ ಘಟನೆ ಸ್ವರ್ಣಸಂದ್ರ ಬಳಿಯ ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬಳಿ ನಡೆದಿದೆ. ಮೂರೂವರೆ ವರ್ಷದ ಹೃತೀಕ್ಷ ಮೃತ ಮಗು. ವಾಣಿ-ಅಶೋಕ್ ಎಂಬುವವರ ಮಗು ಮೃತಪಟ್ಟಿದೆ. ಮಗಳನ್ನು ಕಳೆದುಕೊಂಡ ದಂಪತಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೊರವನಹಳ್ಳಿಯ ನಿವಾಸಿ. ಹೃತೀಕ್ಷಾಗೆ ನಾಯಿ ಕಚ್ಚಿದ್ದ ಹಿನ್ನೆಲೆಯಲ್ಲಿ ಮಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆದ್ರೆ ಇದೇ ವೇಳೆ ಹೆಲ್ಮೆಟ್ ತಪಾಸಣೆಗೆಂದು ಪೊಲೀಸರು ಬೈಕ್ ಅಡ್ಡಗಟ್ಟಿದ್ದಾರೆ. ಇದೇ ವೇಳೆ ಬೈಕ್​ನಲ್ಲಿದ್ದ ತಂದೆ, ತಾಯಿ ಹಾಗೂ ಮಗು ಆಯಾ ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ಪರಿಣಾಮ ಮಗಳ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಪರಿಣಾಮ ತೀವ್ರ ರಕ್ತಸ್ರವಾದಿಂದ ಮಗು ಸ್ಥಳದಲ್ಲೇ ಜೀವಬಿಟ್ಟಿದೆ. ಇನ್ನೂ, ಮುದ್ದಾದ ಮಗುವನ್ನು ಕಳೆದುಕೊಂಡು ಪೋಷಕರು ಮಿಮ್ಸ್ ಆಸ್ಪತ್ರೆ ಎದುರು ರಸ್ತೆಯಲ್ಲೇ ಶವವಿಟ್ಟು ಅಳುತ್ತಿದ್ದಾರೆ. ಪೊಲೀಸರ ನಡೆಗೆ ಸಾರ್ವಜನಿಕರ ಆಕ್ರೋಶ ಹೊರ ಹಾಕುತ್ತಿದ್ದಾರೆ.