Categories
ಚಿಕ್ಕಮಗಳೂರು

ಶೃಂಗೇರಿಯಲ್ಲಿ ಮತ್ತೆ ಶುರುವಾಯ್ತು ಕಾಡಾನೆ ಹಾವಳಿ

ಶೃಂಗೇರಿಯಲ್ಲಿ ಮತ್ತೆ ಶುರುವಾಯ್ತು ಕಾಡಾನೆ ಹಾವಳಿ

* ಕಳೆದೆರಡು ದಿನಗಳಿಂದ ಬೀಡುಬಿಟ್ಟಿರುವ ಒಂಟಿ ಸಲಗ
* ರೈತರ ಜಮೀನಿನಲ್ಲಿ ಓಡಾಟ,ಬೆಳೆ ನಾಶ, ಪರಿಹಾರದ ಭರವಸೆ ನೀಡಿದ ಅಧಿಕಾರಿಗಳು

NAMMMUR EXPRESS NEWS
ಶೃಂಗೇರಿ: ಕಳೆದ ಹದಿನೈದು ದಿನಗಳ ಹಿಂದಷ್ಟೇ ತಾಲೂಕಿಗೆ ಬಂದು ಜನರಲ್ಲಿ ಆತಂಕ ಸೃಷ್ಠಿಸಿದ್ದ ಎರಡು ಕಾಡಾನೆ ಬಂದ ದಾರಿಯಲ್ಲೇ ಹಿಂತಿರುಗಿ ತಾಲೂಕಿನ ಜನರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಈಗ ಮತ್ತೆ ತಾಲೂಕಿಗೆ ಒಂಟಿ ಸಲಗವೊಂದು ಎಂಟ್ರಿ ಕೊಟ್ಟು ಜನರಲ್ಲಿ ಮತ್ತೆ ಆತಂಕ ಸೃಷ್ಠಿಯಾಗಿದೆ.
ಶೃಂಗೇರಿ ಹಾಗೂ ಕೊಪ್ಪ ತಾಲೂಕುಗಳ ಗಡಿಭಾಗವಾದ ಶೃಂಗೇರಿ ತಾಲೂಕಿನ ಅಡ್ಡಗದ್ದೆ ಗ್ರಾಮದ ನೇತ್ರವಳ್ಳಿ,ಕವಿಲುಕೊಡಿಗೆ ಭಾಗದಲ್ಲಿ ಒಂಟಿಸಲಗವೊಂದು ಕಾಣಿಸಿಕೊಂಡಿದೆ. ಕಳೆದೆರಡು ದಿನಗಳಿಂದ ಕೊಪ್ಪ ತಾಲೂಕಿನ ಹರಿಹರಪುರ ಹೋಬಳಿಯ ಹೊನಗೋಡು ಗ್ರಾಮ ಹಾಗೂ ಶೃಂಗೇರಿ ತಾಲೂಕಿನ ಅಡ್ಡಗದ್ದೆ ಗ್ರಾಮದಲ್ಲಿ ಓಡಾಡುತ್ತಿದ್ದ ಒಂಟಿ ಸಲಗ ಇಂದು ಅಡ್ಡಗದ್ದೆ ಪಂಚಾಯ್ತಿ ವ್ಯಾಪ್ತಿಯ ಅಣ್ಣುಕೊಡಿಗೆ ಹಾಗೂ ನೇತ್ರವಳ್ಳಿ ಗ್ರಾಮದಲ್ಲಿ ಓಡಾಡಿ ಅಣ್ಣುಕೊಡಿಗೆ ಶೆಡ್ ಬಳಿ ಬೀಡುಬಿಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಿದೆ.

* ರೈತರ ಜಮೀನಿನಲ್ಲಿ ಓಡಾಡಿದ ಆನೆ ಅಪಾರ ಪ್ರಮಾಣದ ಬೆಳೆ ನಾಶ
ನೇತ್ರವಳ್ಳಿ,ಅಣ್ಣುಕೊಡಿಗೆ ಭಾಗದಲ್ಲಿ ಬೀಡು ಬಿಟ್ಟ ಆನೆ ರೈತರ ಜಮೀನಿನಲ್ಲಿ ಓಡಾಡಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಗ್ರಾಮದ ರೈತರಾದ ನಾಗೇಶ್,ಶಾಂತ,ಪಾರ್ವತಿ,ದಿನೇಶ್,ಜಗದೀಶ,ಸುರೇಶ್‌ ಸೇರಿದಂತೆ ಇತರ ಅಕ್ಕಪಕ್ಕದ ರೈತರ ಗದ್ದೆ ನಾಶವಾಗಿದೆ. ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ ಅರಣ್ಯಾಧಿಕಾರಿಗಳು ಆನೆ ಹಿಂತಿರುಗಿದ ಬಳಿಕ ಬೆಳೆ ನಾಶವಾದ ಜಮೀನನನ್ನು ಪರಿಶೀಲಿಸಿ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ಮಾಹಿತಿ ನೀಡಿದ್ದಾರೆ.

Categories
ಬೆಂಗಳೂರು

ಸೆ.1 ರಂದು ಬಿಜೆಪಿಯಿಂದ ಧರ್ಮಸ್ಥಳ ಚಲೋ

ಸೆ.1 ರಂದು ಬಿಜೆಪಿಯಿಂದ ಧರ್ಮಸ್ಥಳ ಚಲೋ

* ಧರ್ಮಸ್ಥಳದಲ್ಲೇ ಬೃಹತ್ ಜನಜಾಗೃತಿ ಸಭೆ ನಡೆಸಲಿರುವ ಬಿಜೆಪಿ
* ‘ಧರ್ಮದ ಉಳಿವಿಗಾಗಿ ಹೋರಾಟ’ ಎಂಬ ಘೋಷವಾಕ್ಯದಡಿ ಕಾರ್ಯಕ್ರಮ

NAMMMUR EXPRESS NEWS
ಬೆಂಗಳೂರು: ಧರ್ಮದ ಉಳಿವಿಗಾಗಿ ಹೋರಾಟ ಎಂಬ ಘೋಷವಾಕ್ಯದಡಿ ಸೆಪ್ಟೆಂಬರ್‌ 1ರಂದು ಧರ್ಮಸ್ಥಳ ಚಲೋ ಕೈಗೊಂಡು ಬೃಹತ್‌ ಸಮಾವೇಶ ನಡೆಸಲು ರಾಜ್ಯ ಬಿಜೆಪಿ ನಿರ್ಧರಿಸಿದೆ. ಜತೆಗೆ ಧರ್ಮಸ್ಥಳ ಸುತ್ತಮುತ್ತಲಿನ ಅಸಹಜ ಸಾವಿನ ಪ್ರಕರಣಗಳ ತನಿಖೆಯನ್ನು ಎಸ್‌ಐಟಿ ಬದಲು ಎನ್‌ಐಎಗೆ ವಹಿಸುವಂತೆ ಬಿಜೆಪಿ ಆಗ್ರಹಿಸಿದೆ.
ಈ ಸಂಬಂಧ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ”ಹಿಂದೂ ಭಾವನೆಗೆ ಧಕ್ಕೆ ತಂದ ಸರ್ಕಾರದ ಕಿವಿ ಹಿಂಡುವ ಕೆಲಸ ಆಗಬೇಕಿದೆ. ಸೆ.1ರಂದು ಬೃಹತ್‌ ಸಮಾವೇಶ ಮಾಡಲಿದ್ದೇವೆ. ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರ, ಎಲ್ಲ ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಧರ್ಮಸ್ಥಳಕ್ಕೆ ಬರಲಿದ್ದಾರೆ. ಲಕ್ಷಾಂತರ ಜನರು ಭಾಗವಹಿಸಿ ಎನ್‌ಐಎ ತನಿಖೆಗೆ ಆಗ್ರಹಿಸಲಿದ್ದಾರೆ,” ಎಂದರು.

* ಧರ್ಮಸ್ಥಳದಲ್ಲಿ ಬೃಹತ್ ಜನಜಾಗೃತಿ ಸಮಾವೇಶ
ಎನ್‌ಐಎ ತನಿಖೆ ನಡೆಸಿದರೆ ರಾಜ್ಯ ಸರ್ಕಾರದ ಬಗ್ಗೆ ಜನರಿಗೆ ವಿಶ್ವಾಸ ಬರಲಿದೆ. ಹಾಗಾಗಿ ಕಾಂಗ್ರೆಸ್‌ ಸರ್ಕಾರ ಮತ್ತು ಮುಖ್ಯಮಂತ್ರಿಯವರು ಈ ನಿರ್ಧಾರವನ್ನು ತಕ್ಷಣ ತೆಗೆದುಕೊಳ್ಳಬೇಕು,” ಎಂದು ಒತ್ತಾಯಿಸಿದರು. ”ಅಂದು ಮಧ್ಯಾಹ್ನ 2 ಗಂಟೆಗೆ ಧರ್ಮಸ್ಥಳದಲ್ಲಿ ಧರ್ಮ ಜಾಗೃತಿ ಸಮಾವೇಶ ನಡೆಯಲಿದೆ. ಧರ್ಮಸ್ಥಳದ ಘಟನೆಯಿಂದ ಸರ್ಕಾರಕ್ಕೆ ಕಳಂಕ ಬಂದಿದೆ.
ಈ ದುಷ್ಕೃತ್ಯದ ಹಿಂದಿರುವ ಸಂಘಟನೆಗಳು, ದುಷ್ಟ ಶಕ್ತಿಗಳ ಬಗ್ಗೆ ಸಮರ್ಪಕ ತನಿಖೆಯಾಗಬೇಕಿದೆ. ಧರ್ಮಸ್ಥಳದ ವಿಷಯದಲ್ಲಿ ಸಿಎಂ ಆತುರ ತೋರಿದ್ದೇಕೆ ಎಂಬುದು ಒಗಟಾಗಿಯೇ ಇದೆ,” ಎಂದು ತಿಳಿಸಿದರು. ”ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರದ ಕುರಿತು ದಾರಿಯಲ್ಲಿ ಹೋಗುವ ಬುರುಡೆ ಹಿಡಿದ ವ್ಯಕ್ತಿಯೊಬ್ಬ ಬಂದು ಬುರುಡೆ ಬಿಡುತ್ತಿದ್ದಾನೆ. ಆ ವ್ಯಕ್ತಿಯ ಹಿನ್ನೆಲೆ ಏನು? ಆತನ ಹಿಂದಿರುವ ಶಕ್ತಿಗಳು, ಯಾವ ಸಂಘಟನೆಗಳು ಕೆಲಸ ಮಾಡುತ್ತಿವೆ ಎಂದು ಮಾಹಿತಿ ಸಂಗ್ರಹಿಸಬೇಕಿತ್ತು. ಬೇಹುಗಾರಿಕಾ ದಳದಿಂದ ವರದಿ ಪಡೆದು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕಿತ್ತು,” ಎಂದರು.
ಒಟ್ಟಿನಲ್ಲಿ ಸೆ.1 ರಂದು ಧರ್ಮಸ್ಥಳದಲ್ಲಿ ಲಕ್ಷಾಂತರ ಜನ ಕಾರ್ಯಕರ್ತರು ಸೇರಿ ಧರ್ಮಸ್ಥಳ ವಿರೋಧಿಗಳ ವಿರುದ್ಧ ಪ್ರತಿಭಟಿಸಲಿದ್ದಾರೆ.

Categories
ರಾಜ್ಯ

ನಾಳೆಯಿಂದ ಆಸ್ತಿ ನೋಂದಣಿ ಶುಲ್ಕ ಡಬಲ್

ನಾಳೆಯಿಂದ ಆಸ್ತಿ ನೋಂದಣಿ ಶುಲ್ಕ ಡಬಲ್
– ಶೇ.1 ರಿಂದ ಶೇ.2ಕ್ಕೆ ಹೆಚ್ಚಳ
– ನೋಂದಣಿ & ಮುದ್ರಾಂಕ ಶುಲ್ಕ ಈಗ ಶೇ.7.6ಕ್ಕೆ ಏರಿಕೆ

NAMMUR EXPRESS NEWS
ವಿದ್ಯುತ್, ನೀರು, ಹಾಲು, ಬಸ್ಸು ಹಾಗೂ ಮೆಟ್ರೋ ಪ್ರಯಾಣ ದರ, ಮುದ್ರಾಂಕ ಶುಲ್ಕ ಸೇರಿ ವಿವಿಧ ದರ ಹೆಚ್ಚಳ ಬೆನ್ನಲ್ಲೇ ಇದೀಗ ಆಸ್ತಿಗಳ ನೋಂದಣಿ ಶುಲ್ಕವನ್ನೂ ದುಪ್ಪಟ್ಟು ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದ್ದು, ಆ.31ರಿಂದ ಅನ್ವಯವಾಗುವಂತೆ ನೋಂದಣಿ ಶುಲ್ಕ ಶೇ.1 ರಿಂದ ಶೇ.2ಕ್ಕೆ ಹೆಚ್ಚಳ ಆಗಲಿದೆ. ಸ್ಥಿರಾಸ್ತಿ ಶುದ್ಧ ಕ್ರಯ ಪತ್ರ, ಸ್ವಾಧೀನ ಭೋಗ್ಯ ಪತ್ರ, ಕ್ರಯ ಉದ್ದೇಶದ ಜಿಪಿಎ ಸೇರಿ ವಿವಿಧ ಆಸ್ತಿ ಖರೀದಿ ನೋಂದಣಿಗೆ ಈ ಶುಲ್ಕ ಅನ್ವಯವಾಗಲಿದೆ. ಈವರೆಗೆ ರಾಜ್ಯದಲ್ಲಿ ನಿವೇಶನ, ಭೂಮಿ, ಫ್‌ಲ್ಯಾಟ್, ಮನೆ ಸೇರಿ ಯಾವುದೇ ಸ್ಥಿರಾಸ್ತಿ ಖರೀದಿ ವೇಳೆ ಶೇ.1 ರಷ್ಟು ನೋಂದಣಿ ಶುಲ್ಕ ಹಾಗೂ ಶೇ.5.6 ರಷ್ಟು ಮುದ್ರಾಂಕ ಶುಲ್ಕ ಸೇರಿ ಒಟ್ಟು ಶೇ.6.6 ರಷ್ಟು ಶುಲ್ಕ ಭರಿಸಬೇಕಾಗಿತ್ತು.

ಇದೀಗ ನೋಂದಣಿ ಶುಲ್ಕ ರಷ್ಟಾಗಿರುವುದರಿಂದ ಆಸ್ತಿಯ ಮಾರುಕಟ್ಟೆ ಬೆಲೆಯ ಶೇ.7.6 ರಷ್ಟನ್ನು ನೋಂದಣಿ ಮತ್ತು ಮುದ್ರಾಂಕ ಶುಲ್ಕಕ್ಕೆ ಭರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಈ ಬಗ್ಗೆ ಕಂದಾಯ ಇಲಾಖೆ ಆದೇಶ ಹೊರಡಿಸಿದ್ದು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಎಲ್ಲಾ ಉಪ ನೋಂದಣಾಧಿಕಾರಿಗಳಿಗೆ ಸೂಚನೆ ನೀಡಿದೆ. ಇದರನ್ವಯ ಆ.31 ರಿಂದಲೇ ಅನ್ವಯವಾಗುವಂತೆ ನೋಂದಣಿ ಶುಲ್ಕ ಹೆಚ್ಚಳ ಮಾಡಲಾಗಿದೆ. ಹಿಂದಿನ (ಶೇ.1) ನೋಂದಣಿ ಶುಲ್ಕವನ್ನು ಪಾವತಿಸಿ ಈಗಾಗಲೇ ದಸ್ತಾವೇಜುಗಳ ನೋಂದಣಿಗೆ ಅಪಾಯಿಂಟ್‌ಮೆಂಟ್ ಪಡೆದಿರುವವರು ಅಥವಾ ಶುಲ್ಕವನ್ನು ಪಾವತಿಸಿ ಅಪಾಯಿಂಟ್‌ಮೆಂಟ್ ಪಡೆದಿರುವವರು ವ್ಯತ್ಯಾಸದ ಮೊತ್ತವನ್ನು ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕ ಪಾವತಿಸಬೇಕು. ಮೊದಲು ಬಳಸಿದ ಲಾಗಿನ್ ಮೂಲಕವೇ ಈ ಪಾವತಿ ಮಾಡಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.

Categories
ದಿನ ರಾಶಿ ಭವಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಆಂಜನೇಯ ಸ್ವಾಮಿಯ ಕೃಪೆಯಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಮೇಷ ರಾಶಿಯವರು ತಾಳ್ಮೆಯಿಂದಿರಿ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಇಂದು ನಿಮ್ಮ ಮೇಲೆ ಪೂರ್ಣ ವಿಶ್ವಾಸ ಇರುತ್ತದೆ. ಕುಟುಂಬದಿಂದ ಬೆಂಬಲ ಸಿಗಲಿದೆ. ನಿಮ್ಮ ಕೆಲಸದಲ್ಲಿ ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಪ್ರಗತಿಯ ಅವಕಾಶಗಳು ಇರಬಹುದು. ಇಂದು ಅನುಪಯುಕ್ತ ಚರ್ಚೆಗಳಿಂದ ಅಂತರ ಕಾಯ್ದುಕೊಳ್ಳಿ. ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

** ವೃಷಭ ರಾಶಿ :
ಇಂದು ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ, ಆದರೆ ಸ್ವಯಂ ನಿಯಂತ್ರಣದಲ್ಲಿರುತ್ತೀರಿ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಶೈಕ್ಷಣಿಕ ಕೆಲಸದ ಬಗ್ಗೆ ಎಚ್ಚರವಿರಲಿ. ನಿಮ್ಮ ಮಗುವಿನ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ. ನಿಮಗೆ ಸರ್ಕಾರದಿಂದ ಬೆಂಬಲವೂ ಸಿಗುತ್ತದೆ. ಇಂದು ನಿಮ್ಮ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ಅಧಿಕ ಖರ್ಚು ಇರುತ್ತದೆ.

** ಮಿಥುನ ರಾಶಿ :
ಇಂದು ನಿಮ್ಮ ಮನಸ್ಸು ಗೊಂದಲದಲ್ಲಿ ಉಳಿಯುತ್ತದೆ. ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳ ಪ್ರಭಾವವೂ ಇರಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕುಟುಂಬದಲ್ಲಿ ಧಾರ್ಮಿಕ ಮತ್ತು ಶುಭ ಕಾರ್ಯಗಳು ನಡೆಯಬಹುದು. ಕುಟುಂಬದಿಂದ ಬೆಂಬಲ ಸಿಗಲಿದೆ. ಇಂದು ನೀವು ಆರ್ಥಿಕ ಯಶಸ್ಸನ್ನು ಪಡೆಯುವಲ್ಲಿ ನಿಮ್ಮ ವೃತ್ತಿಪರ ಜೀವನವು ಉತ್ಪಾದಕವಾಗಿರುತ್ತದೆ.

** ಕರ್ಕಾಟಕ ರಾಶಿ :
ಇಂದು ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ, ಆದರೆ ಸ್ವಯಂ ನಿಯಂತ್ರಣದಲ್ಲಿರುತ್ತದೆ. ಕೆಲಸದಲ್ಲಿ ಅನಗತ್ಯವಾದ ವಿವಾದಗಳಿಂದ ದೂರವಿರಿ. ಉದ್ಯೋಗದಲ್ಲಿ ಪ್ರಗತಿಯೊಂದಿಗೆ, ಸ್ಥಳ ಬದಲಾವಣೆಯ ಸಾಧ್ಯತೆಗಳಿವೆ. ಆದಾಯ ಹೆಚ್ಚಲಿದೆ. ಕೆಲಸದ ಹೊರೆಯೂ ಹೆಚ್ಚಾಗಲಿದೆ. ನಿಮ್ಮ ಆರೋಗ್ಯವು ದಿನವಿಡೀ ಉತ್ತಮವಾಗಿರುವುದಿಲ್ಲ.

** ಸಿಂಹ ರಾಶಿ :
ಇಂದು ಸಿಂಹ ರಾಶಿಯವರು ಮನಸ್ಸಿನಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಆತ್ಮವಿಶ್ವಾಸ ತುಂಬುವರು. ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನಿಮಗೆ ಸರಕಾರದಿಂದ ಬೆಂಬಲ ಸಿಗಲಿದೆ. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ಇಂದು ಗೌರವ ಸಿಗಲಿದೆ. ಇಂದು ನೀವು ಪ್ರಮುಖ ಕಾಯಿಲೆಗಳಿಂದ ಪರಿಹಾರವನ್ನು ಪಡೆಯುತ್ತೀರಿ ಮತ್ತು ನಿಮ್ಮ ಆರ್ಥಿಕ ಸ್ಥಿತಿಯೂ ಉತ್ತಮವಾಗಿರುತ್ತದೆ.

** ಕನ್ಯಾ ರಾಶಿ :
ಇಂದು ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಆದರೆ ತಾಳ್ಮೆಯಿಂದಿರಿ. ಅನಗತ್ಯ ಕೋಪವನ್ನು ತಪ್ಪಿಸಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಓಡಾಟ ಹೆಚ್ಚು ಇರುತ್ತದೆ. ಇಂದು ನಿಮ್ಮ ಜೀವನ ಅಸ್ತವ್ಯಸ್ತವಾಗುತ್ತದೆ. ಇಂದು ನಿಮ್ಮ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಮನಸ್ಸು ಆತ್ಮವಿಶ್ವಾಸದಿಂದ ತುಂಬಿರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.

** ತುಲಾ ರಾಶಿ :
ಇಂದು ನಿಮ್ಮಲ್ಲಿ ಪೂರ್ಣ ಆತ್ಮವಿಶ್ವಾಸ ಇರುತ್ತದೆ. ಆದರೆ ತಾಳ್ಮೆಯಿಂದಿರಿ. ಅತಿಯಾದ ಉತ್ಸಾಹದಿಂದ ದೂರವಿರಿ. ಸಂಭಾಷಣೆಯಲ್ಲಿ ಸಮತೋಲನದಿಂದಿರಿ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಶೈಕ್ಷಣಿಕ ಕೆಲಸದಲ್ಲಿ ತೊಂದರೆಗಳಿರಬಹುದು. ಇಂದು ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ಲಾಭದ ಅವಕಾಶಗಳೂ ಇರುತ್ತವೆ.

** ವೃಶ್ಚಿಕ ರಾಶಿ :
ಇಂದು ನಿಮ್ಮಲ್ಲಿ ಆತ್ಮಸ್ಥೈರ್ಯ ಹೆಚ್ಚಲಿದೆ. ಆದರೆ ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸಿ. ಮಾತಿನ ಪ್ರಭಾವ ಹೆಚ್ಚಾಗುತ್ತದೆ. ಸ್ನೇಹಿತರ ಸಹಾಯದಿಂದ ನೀವು ವ್ಯಾಪಾರ ಅವಕಾಶಗಳನ್ನು ಪಡೆಯಬಹುದು. ಮಕ್ಕಳ ಸಂತಸದಲ್ಲಿ ಹೆಚ್ಚಳವಾಗಲಿದೆ. ಇಂದು ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ನೀವು ವ್ಯಾಪಾರದಲ್ಲಿ ಸಾಕಷ್ಟು ಓಡಬೇಕಾಗಬಹುದು.

** ಧನಸ್ಸು ರಾಶಿ :
ಇಂದು ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ಆದರೆ ನಿಮ್ಮ ಮನಸ್ಸು ಕೂಡ ತೊಂದರೆಗೊಳಗಾಗಬಹುದು. ಸ್ವಯಂ ನಿಯಂತ್ರಣದಲ್ಲಿರಿ. ಅನಗತ್ಯ ಕೋಪ ಮತ್ತು ಜಗಳಗಳನ್ನು ತಪ್ಪಿಸಿ. ಕುಟುಂಬದಿಂದ ಬೆಂಬಲ ಸಿಗಲಿದೆ. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ನೀವು ಉನ್ನತ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ.

** ಮಕರ ರಾಶಿ :
ಇಂದು ನಿಮ್ಮ ಮನಸ್ಸು ತೊಂದರೆಗೊಳಗಾಗುತ್ತದೆ. ತಾಳ್ಮೆಯಿಂದಿರಿ. ಸಂಭಾಷಣೆಯಲ್ಲಿ ಸಮತೋಲನದಿಂದಿರಿ. ಕುಟುಂಬ ಸಮೇತ ಯಾವುದಾದರೂ ಧಾರ್ಮಿಕ ಸ್ಥಳಕ್ಕೆ ಪ್ರವಾಸ ಹೋಗಬಹುದು. ವ್ಯವಹಾರದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ನೀವು ಸ್ನೇಹಿತರಿಂದ ಬೆಂಬಲವನ್ನು ಪಡೆಯಬಹುದು. ನೀವು ಉನ್ನತ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ವ್ಯಾಪಾರಸ್ಥರು ಆತುರಪಡಬೇಕಾಗಬಹುದು.

** ಕುಂಭ ರಾಶಿ :
ಇಂದು ನಿಮ್ಮ ಆರ್ಥಿಕ ಸ್ಥಿತಿ ಸ್ಥಿರ ಮತ್ತು ಲಾಭದಾಯಕವಾಗಿರುತ್ತದೆ. ಆದರೆ ಇಂದು ನಿಮ್ಮ ಮನಸ್ಸಿಗೆ ತೊಂದರೆ ಆಗಬಹುದು. ಸ್ವಯಂ ನಿಯಂತ್ರಣದಲ್ಲಿರಿ. ಅತಿಯಾದ ಕೋಪ ಮತ್ತು ಉತ್ಸಾಹವನ್ನು ತಪ್ಪಿಸಿ. ನಿಮ್ಮ ಕೆಲಸದಲ್ಲಿ ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ, ಆದರೆ ಸ್ಥಳ ಬದಲಾವಣೆಯಾಗಬಹುದು. ನಿಮಗೆ ಕುಟುಂಬದಿಂದ ಬೆಂಬಲ ಸಿಗಲಿದೆ. ಉದ್ಯೋಗದಲ್ಲಿ ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ. ಲಾಭದ ಹಲವು ಅವಕಾಶಗಳು ಬರುತ್ತವೆ.

** ಮೀನ ರಾಶಿ :
ಇಂದು ನಿಮ್ಮ ಮನಸ್ಸಿನಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಅಧ್ಯಯನದಲ್ಲಿ ಆಸಕ್ತಿ ಇರುತ್ತದೆ. ಶೈಕ್ಷಣಿಕ ಕೆಲಸವು ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತದೆ. ಗೌರವ ಸಿಗಲಿದೆ. ನಿಮಗೆ ಸರಕಾರದಿಂದ ಬೆಂಬಲ ಸಿಗಲಿದೆ. ಆದಾಯ ಹೆಚ್ಚಲಿದೆ. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ಲಾಭದ ಅವಕಾಶಗಳೂ ಇರುತ್ತವೆ. ವಾಹನ ಸೌಕರ್ಯ ಹೆಚ್ಚಾಗಬಹುದು. ಖರ್ಚು ಹೆಚ್ಚಾಗಬಹುದು.

Categories
ಚಿಕ್ಕಮಗಳೂರು

ಕಾಫಿನಾಡಿನಾದ್ಯಂತ ಅದ್ದೂರಿ ಗಣೇಶೋತ್ಸವ

ಕಾಫಿನಾಡಿನಾದ್ಯಂತ ಅದ್ದೂರಿ ಗಣೇಶೋತ್ಸವ

* ಬಣ್ಣಬಣ್ಣದ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ನಗರ
* ಈ ಬಾರಿ 1700 ಗಣಪತಿ ಜಿಲ್ಲೆಯಾದ್ಯಂತ ಪ್ರತಿಷ್ಠಾಪನೆ

NAMMMUR EXPRESS NEWS
ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳ ಕಾಲ ಗೌರಿ – ಗಣೇಶ ಹಬ್ಬ ಸಂಭ್ರಮದಿಂದ ನಡೆಯಿತು. ಆದರೆ, ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಳೆ ಅಡ್ಡಿ ಪಡಿಸಿದೆ. ಮಲೆನಾಡಿನ ಹಲವೆಡೆ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಮೆರವಣಿಗೆ, ಉತ್ಸವಕ್ಕೂ ಅಡ್ಡಿಯಾಗಿದೆ.
ಗಣೇಶಮೂರ್ತಿ ತಯಾರಕರು, ತಾವು ಸಿದ್ಧಪಡಿಸಿ ಕಳೆದ ಒಂದು ವಾರದಿಂದ ನಗರ ಮತ್ತು ಪೇಟೆಯ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಇಟ್ಟಿದ್ದರು. ಮಳೆ ಸಾಧ್ಯತೆಯಿಂದ ಆದಷ್ಟು ಸುರಕ್ಷಿತ ಪ್ರದೇಶಗಳಲ್ಲಿ ಇಟ್ಟಿದ್ದರು. ಬುಧವಾರ ಬೆಳಿಗ್ಗೆ ಮಳೆ ಬಿಡುವು ನೀಡಿತ್ತು. ಆದರೆ, ಮಧ್ಯಾಹ್ನ ಆರಂಭವಾದ ಮಳೆ ಗುರುವಾರ ದವರೆಗೆ ಇನ್ನಷ್ಟು ಜೋರಾಗಿತ್ತು. ಆದರೆ, ಭಕ್ತರ ಉತ್ಸಹ ಕಡಿಮೆಯಾಗಿರಲಿಲ್ಲ,
ಮಳೆಯ ನಡುವೆಯೇ ಟ್ರ್ಯಾಕ್ಟರ್‌, ಆಟೋ, ಟಾಟಾ ಏಸಿ ವಾಹನಗಳಲ್ಲಿ ಗಣೇಶ ಮೂರ್ತಿ ತೆಗೆದುಕೊಂಡು ಹೋಗುತ್ತಿರುವುದು ಎಲ್ಲೆಡೆ ಕಂಡು ಬರುತ್ತಿತ್ತು. ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ ರಾತ್ರಿ ವೇಳೆಯಲ್ಲಿ ವಿಸರ್ಜಿಸಲಾಯಿತು. ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿದ ಗಣೇಶ ಮೂರ್ತಿ ವಿಸರ್ಜಿಸಲು ಸ್ಥಳೀಯ ಸಂಸ್ಥೆಗಳು ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಟ್ರ್ಯಾಕ್ಟರ್‌ಗಳಲ್ಲಿ ನೀರು ತುಂಬಿಸಿ ವ್ಯವಸ್ಥೆ ಮಾಡಿದ್ದವು.
ಚಿಕ್ಕಮಗಳೂರಿನ ಆಜಾದ್‌ ಪಾರ್ಕ್‌, ವಿಜಯಪುರ, ಹಿಂದೂ ಮಹಾಸಭಾ ಗಣಪತಿ ಸೇರಿದಂತೆ ಆಲ್ದೂರು,ಮೂಡಿಗೆರೆ,ತರೀಕೆರೆ,ಬಿರೂರು,ಕಳಸ,ಎನ್ ಆರ್ ಪುರ,ಬಾಳೆಹೊನ್ನೂರು,ಜಯಪುರ,ಕೊಪ್ಪ,ಶೃಂಗೇರಿಯಲ್ಲಿ ಪ್ರತಿಷ್ಠಾಪಿಸಿದ ಗಣಪತಿಯಲ್ಲಿ ಪ್ರತಿ ದಿನ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸಂಜೆ ವೇಳೆಗೆ ಭಕ್ತರು ಪೆಂಡಾಲ್‌‌ಗಳಿಗೆ ಬಂದು ಗಣೇಶ ದರ್ಶನ ಪಡೆಯುವುದು, ನಂತರ ಕೆಲ ಹೊತ್ತು ಸಾಂಸ್ಕೃತಿಕ ಕಾರ್ಯಕ್ರಮ ನೋಡಿಕೊಂಡು ಹೋಗುವುದನ್ನು ಹಲವು ವರ್ಷಗಳಿಂದ ರೂಢಿ ಮಾಡಿಕೊಂಡು ಬಂದಿದ್ದಾರೆ. ಆದರೆ, ಈ ಬಾರಿ ಮಳೆ ಇರುವುದರಿಂದ ಜನರು ಪೆಂಡಾಲ್‌ಗಳತ್ತಾ ಬರುವುದು ಕಡಿಮೆಯಾಗಲಿದೆ. ವರುಣನ ಆರ್ಭಟ ವಿಘ್ನ ನಿವಾರಕನಿಗೂ ತಟ್ಟಿದೆ.
ಈ ಬಾರಿ 1730 ಗಣೇಶ ಪ್ರತಿಷ್ಠಾಪನೆ
ಜಿಲ್ಲೆಯಾದ್ಯಂತ ನಡೆದಿದ್ದು ಕಳೆದ ವರ್ಷ ಸುಮಾರು 1900ಕ್ಕೂ ಹೆಚ್ಚು ಕಡೆಗಳಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡಲಾಗಿತ್ತು. ಆದರೆ, ಈ ಬಾರಿ ಈ ಸಂಖ್ಯೆ 1730 ಕ್ಕೆ ಕುಸಿದಿದೆ. ಜಿಲ್ಲಾ ಪೊಲೀಸ್‌ ಇಲಾಖೆ 7 ಅತಿ ಸೂಕ್ಷ್ಮ ಹಾಗೂ 157 ಸೂಕ್ಷ್ಮ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳಗಳನ್ನು ಗುರುತು ಮಾಡಿದೆ. ಜತೆಗೆ ಮೆರವಣಿಗೆ ಸಾಗುವ ಕೆಲವು ಮಾರ್ಗಗಳನ್ನು ಸೂಕ್ಷ್ಮ ಎಂಬುದಾಗಿ ಗುರುತು ಮಾಡಿದೆ. ಬಂದೋಬಸ್ತಿಗೆ ಸುಮಾರು 1500ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ಇಲಾಖೆ ಬಳಸಿಕೊಳ್ಳುತ್ತಿದೆ. 16 ಕಡೆಗಳಲ್ಲಿ ಚೆಕ್‌ ಪೋಸ್ಟ್‌ ತೆರೆಯಲಾಗಿದೆ. 24 ಮಂದಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು ಸೆ. 28ರವರೆಗೆ ಕಾರ್ಯನಿರ್ವಹಿಸಲು ನೇಮಕ ಮಾಡಿಕೊಳ್ಳಲಾಗಿದೆ. 3 ನೇ ದಿನವಾದ ಇಂದು ಜಿಲ್ಲೆಯಾದ್ಯಂತ ಹಲವು ಕಡೆಗಳಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ನಡೆಯಲಿದೆ.

Categories
ಜ್ಯೋತಿಷ್ಯ

ಭಯವನ್ನು ಹೋಗಲಾಡಿಸಲು ಹನುಮಾನ್ ಮಂತ್ರ

ಭಯವನ್ನು ಹೋಗಲಾಡಿಸಲು ಹನುಮಾನ್ ಮಂತ್ರ
– ಪ್ರತಿದಿನ ಈ ಮಂತ್ರವನ್ನು ಹೇಳಿ ಸಾಕಷ್ಟು ಬದಲಾವಣೆ

NAMMUR EXPRESS NEWS
ಜೀವನದಲ್ಲಿ ಯಾವುದಕ್ಕೂ ಭಯಪಡದೆ ಧೈರ್ಯದಿಂದ ಬದುಕಲು ಹನುಮಂತನ ಬಗ್ಗೆ ಯೋಚಿಸಿ ಮತ್ತು ಪ್ರತಿದಿನ ಈ ಮಂತ್ರವನ್ನು ಹೇಳಿ. ಕೆಲವರ ಜೀವನದಲ್ಲಿ ಪ್ರಗತಿಯ ಅವಕಾಶಗಳು ತಾನಾಗಿಯೇ ಬಂದು ಬಾಗಿಲು ತಟ್ಟುತ್ತವೆ. ಆದರೆ ಅವರು ಅವಕಾಶಗಳನ್ನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಅವರಿಗಿರುವ ಭಯ ಅವರನ್ನು ಮುಂದೆ ಸಾಗದಂತೆ ತಡೆ ಹಿಡಿಯುತ್ತಿದೆ. ಅವಕಾಶಗಳು ಕೈತಪ್ಪಿ ಹೋಗಲಿ. ಮನೆಯಿಂದ ಹೊರಬರಲು ಹೆದರುತ್ತಾರೆ, ಮಾತನಾಡಲು ಹೆದರುತ್ತಾರೆ, ಅಧ್ಯಯನ ಮಾಡಲು ಹೆದರುತ್ತಾರೆ, ಹೆಚ್ಚಿನ ಅಧ್ಯಯನಕ್ಕಾಗಿ ಪ್ರಕಟಣೆಗಳಿಗೆ ಹೋಗಲು ಹೆದರುತ್ತಾರೆ.
ಈ ರೀತಿಯಾಗಿ ಅವರು ಎಲ್ಲದಕ್ಕೂ ಹೆದರಿ ತಮ್ಮ ಜೀವನವನ್ನು ನಾಶಪಡಿಸುತ್ತಾರೆ. ಜ್ಞಾನ ಮತ್ತು ಕೌಶಲ್ಯ ಹೊಂದಿರುವ ಮಕ್ಕಳನ್ನು ಹೊಂದಿರುವವರು ಮತ್ತು ಎಲ್ಲವನ್ನೂ ಹೊಂದಿದ್ದರೂ ಪ್ರಗತಿ ಸಾಧಿಸಲು ಸಾಧ್ಯವಾಗದವರಿಗೆ ಎಷ್ಟು ಕಷ್ಟವಾಗುತ್ತದೆ. ಮಾನಸಿಕ ಭಯದಿಂದ ನಿಮ್ಮ ಮಕ್ಕಳೂ ಜೀವನದಲ್ಲಿ ಮುನ್ನಡೆಯಲು ಸಾಧ್ಯವಾಗುತ್ತಿಲ್ಲವೇ? ನೀವು ಅವಕಾಶಗಳನ್ನು ಕಳೆದುಕೊಳ್ಳುತ್ತೀರಾ? ಅವರ ಭಯವನ್ನು ಹೋಗಲಾಡಿಸಲು ಪ್ರತಿದಿನ ಹನುಮಂತನನ್ನು ಆಲೋಚಿಸಿ ಈ ಮಂತ್ರವನ್ನು ಪಠಿಸಲು ಹೇಳಿ. ಭಯ ಎಂಬ ಪದವು ಅವರ ಜೀವನದಿಂದ ಶಾಶ್ವತವಾಗಿ ಕಣ್ಮರೆಯಾಗುತ್ತದೆ. ಈ ಪೋಸ್ಟ್ ಮೂಲಕ, ಮಾನಸಿಕ ಭಯವನ್ನು ಹೋಗಲಾಡಿಸುವ ಹನುಮಾನ್ ಮಂತ್ರದ ಆಧ್ಯಾತ್ಮಿಕ ಮಾಹಿತಿಯನ್ನು ಮತ್ತು ಅದನ್ನು ಎಷ್ಟು ಬಾರಿ ಜಪಿಸಬೇಕೆಂದು ತಿಳಿಯೋಣ .

ಭಯವನ್ನು ಹೋಗಲಾಡಿಸಲು ಹನುಮಾನ್ ಮಂತ್ರ

ಇದಕ್ಕಾಗಿ ನಿಮ್ಮ ಮನೆಯಲ್ಲಿ ಹನುಮಂತನ ಚಿತ್ರವಿದ್ದರೆ ತುಂಬಾ ಒಳ್ಳೆಯದು. ಪ್ರತಿನಿತ್ಯ ಆಂಜನೇಯನನ್ನು ನೋಡಿದಾಗ ನಮ್ಮ ಮನಸ್ಸಿಗೆ ಅರಿವಿಲ್ಲದೇ ಶಕ್ತಿ ಬರುತ್ತದೆ. ಒಂದು ಶಕ್ತಿ ಹುಟ್ಟುತ್ತದೆ. ಹಾಗಾಗದಿದ್ದರೆ ರಾಮನ ಪ್ರತಿಷ್ಠಾಪನೆಯ ಚಿತ್ರವಿದ್ದರೂ ಅದರೊಂದಿಗೆ ಈ ಮಂತ್ರವನ್ನು ಪಠಿಸಬಹುದು.
ಆಗಲಿ ಎಂದು ಹೇಳುವವರು ತಿರುಪತಿ ತಿಮ್ಮಪ್ಪನ ಮುಂದೆ ದೀಪವನ್ನು ಹಚ್ಚಿ, ಬಾಳೆಹಣ್ಣನ್ನು ನೈವೇದ್ಯವಾಗಿ ಇಟ್ಟು ಈ ಮಂತ್ರವನ್ನು ಪಠಿಸಬೇಕು. ಈ ಮಂತ್ರವನ್ನು ಪ್ರತಿದಿನ 21 ಬಾರಿ ಪಠಿಸಬೇಕು. ವಿದ್ಯಾರ್ಥಿಗಳು ಈ ಮಂತ್ರವನ್ನು ಪಠಿಸಿದರೆ ಅವರು ಮಾನಸಿಕ ಭಯವಿಲ್ಲದೆ ಅಧ್ಯಯನದಲ್ಲಿ ಉತ್ಕೃಷ್ಟರಾಗುತ್ತಾರೆ ಮತ್ತು ಜೀವನದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಾರೆ.

ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಹುಡುಕುತ್ತಿರುವವರು ಅಥವಾ ಕೆಲಸ ಮಾಡುತ್ತಿರುವವರು ಈ ಮಂತ್ರವನ್ನು ಪಠಿಸಿದರೆ ಕೆಲಸದಲ್ಲಿ ಉತ್ತಮವಾಗುವುದು. ಹೆಚ್ಚು ಹೆಚ್ಚು ಪ್ರಚಾರ ದೊರೆಯಲಿದೆ. ಎಲ್ಲದರ ಹೊರತಾಗಿಯೂ, ಈ ಭಯದಿಂದ ಜೀವನದಲ್ಲಿ ಹಿಂದೆ ಸರಿಯುವವರಿಗೆ ಈ ಮಂತ್ರವು ವರದಾನವಾಗಲಿದೆ. ಹೇಡಿಗಳಾದವರನ್ನು ಹನುಮಂತನಂತೆ ಬಲಿಷ್ಠರನ್ನಾಗಿ ಮಾಡುತ್ತದೆ. ಮಾನಸಿಕ ಭಯ ಇರುವವರು ಪ್ರತಿದಿನ ಜಪಿಸಬೇಕಾದ ಹನುಮಾನ್ ಮಂತ್ರ ಇಲ್ಲಿದೆ.

ಆಂಜನೇಯಂ ಅತಿ-ಪದ- ಲನನಂ
ಕಾಂಚನತ್ರೀ ಕಾಮನೀಯ ವಿಗ್ರಹಂ ಪಾರಿಜಾತ -ದಾರುಮೂಲ ವಾಸಿನಂ ಭಾವಯಾಮಿ
ಭಾವಮಾನ ನಂದನಂ.

ಓಂ ಶ್ರೀ ರಾಮ್, ಜೈ ರಾಮ್, ಜೈ ಜೈ ರಾಮ್.
ಆಂಜನೇಯ, ಆಂಜನೇಯ,
ಕೆಂಪು ಮುಖವುಳ್ಳ, ಹನುಮಂತ, ಚಿನ್ನದಿಂದ ಮಾಡಿದ ಪರ್ವತದಂತೆ ಎಲ್ಲೆಡೆ ಹೊಳೆಯುವ, ಪಾರಿಜಾತ ವೃಕ್ಷದ ಮೂಲದಲ್ಲಿ ಯಾವಾಗಲೂ ನೆಲೆಸಿರುವ ಹನುಮಂತ, ನಾನು ಅವನನ್ನು ಪೂಜಿಸುತ್ತೇನೆ. ಗಾಳಿದೇವರ ಬಂಧು ನನಗೆ ಕೃಪೆ ನೀಡಲಿ ಎಂಬುದು ಈ ಹಾಡಿನ ಅರ್ಥ.

ನೀವು ಈ ಮಂತ್ರವನ್ನು ಪಠಿಸಿ ಹನುಮಂತನ ಪಾದಗಳಿಗೆ ಶರಣಾದರೆ, ಹನುಮಂತನು ನಿಮ್ಮ ಜೀವನವನ್ನು ನೋಡಿಕೊಳ್ಳುತ್ತಾನೆ. ನೀವು ಈ ಮಂತ್ರವನ್ನು ಪ್ರತಿದಿನ 21 ಬಾರಿ ಜಪಿಸಿದರೆ, ಮುಂದಿನ 48 ದಿನಗಳಲ್ಲಿ ನಿಮ್ಮ ಜೀವನವು ಉತ್ತಮವಾಗಿ ಬದಲಾಗುತ್ತದೆ. ಆಗ ಮಾನಸಿಕ ಭಯವನ್ನು ಹೋಗಲಾಡಿಸಿ ಜೀವನದಲ್ಲಿ ಸೋಲು ನಾಶ ಮಾಡಿ ಜಯಂ ಜಯಂ ಜಯಂ ಎಂದು ಪ್ರತಿಜ್ಞೆ ಮಾಡುತ್ತೀರಿ. ಭಕ್ತರು ಈ ಮಂತ್ರವನ್ನು ಓದಿ ಪ್ರಯೋಜನ ಪಡೆಯಬಹುದು ಎಂಬ ಮಾಹಿತಿಯೊಂದಿಗೆ ಇಂದಿನ ಪೋಸ್ಟ್ ಅನ್ನು ಮುಕ್ತಾಯಗೊಳಿಸೋಣ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಲೇಖನ:
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಧಾರ್ಮಿಕಚಿಂತಕರು,ಜೋತಿಷ್ಯರು ,ಸಲಹೆಗಾರರು,
ಸಂಶೋಧಕರು. ಹಾಗು ಬರಹಗಾರರು 

Categories
ಚಿಕ್ಕಮಗಳೂರು

ಎರಡು ಕಾರುಗಳ ನಡುವೆ ಭೀಕರ ಅಪಘಾತ,ಓರ್ವ ಯುವಕ ಸಾವು

ಎರಡು ಕಾರುಗಳ ನಡುವೆ ಭೀಕರ ಅಪಘಾತ,ಓರ್ವ ಯುವಕ ಸಾವು

* ಮಳೆಯಿಂದಾಗಿ ನಿಯಂತ್ರಣ ತಪ್ಪಿದ ಕಾರು ಎದುರು ಬರುತ್ತಿದ್ದ ಕಾರಿಗೆ ಢಿಕ್ಕಿ
* ಓರ್ವ ಸಾವು,ಓರ್ವ ಗಂಭೀರ ಹಲವರಿಗೆ ಗಾಯ ಆಸ್ಪತ್ರೆಗೆ ದಾಖಲು

NAMMMUR EXPRESS NEWS
ಮೂಡಿಗೆರೆ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 173 ರಲ್ಲಿ, ಬಡವನ ದಿಣ್ಣೆ ಸಮೀಪ ಮಂಗಳವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.
ಮಳೆಯಿಂದಾಗಿ ನಿಯಂತ್ರಣ ತಪ್ಪಿದ ಕಾರು ಎದುರು ಬರುತ್ತಿದ್ದ ಮತ್ತೊಂದು ಕಾರಿಗೆ ಮುಖಾಮುಖಿಯಾಗಿ ಢಿಕ್ಕಿ ಹೊಡೆದ ಪರಿಣಾಮ, ಎರಡೂ ವಾಹನಗಳು ಜಖಂಗೊಂಡಿವೆ.
ಅಪಘಾತದಲ್ಲಿ ಬಾಳೂರು ಹೋಬಳಿಯ ಹುಯಿಲು ಮನೆ ಮೂಲದ ಅಕ್ಷಯ್ (25) ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕಾರಿನಲ್ಲಿದ್ದ ವಿಕಾಸ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಯಲ್ಲಿದ್ದಾರೆ. ಉಳಿದ ಪ್ರಯಾಣಿಕರೂ ಗಾಯಗೊಂಡಿದ್ದು, ಅವರನ್ನು ಮಂಗಳೂರು, ಹಾಸನ ಹಾಗೂ ಬೆಂಗಳೂರಿನ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ.
ಘಟನೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಮಳೆಯಿಂದಾಗಿ ರಸ್ತೆ ಜಾರುವಿಕೆ ಹೆಚ್ಚಿರುವುದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Categories
ತೀರ್ಥಹಳ್ಳಿ

ಆವಿಷ್ಕಾರ್ ಸೌಹಾರ್ದ ಮಲ್ಟಿಪರ್ಪಸ್ ಕೋ-ಆಪರೇಟಿವ್‌ ಸೊಸೈಟಿ ಲಿ,

ಆವಿಷ್ಕಾರ್ ಸೌಹಾರ್ದ ಮಲ್ಟಿಪರ್ಪಸ್ ಕೋ-ಆಪರೇಟಿವ್‌ ಸೊಸೈಟಿ ಲಿ,
– 9 ನೇ ವಾರ್ಷಿಕ ಸಾಮಾನ್ಯ ಸಭೆ, ಅನಿಲ್‌ ಕುಮಾ‌ರ್ ಅವರ ಅಧ್ಯಕ್ಷತೆಯಲ್ಲಿ
– ಸೆ.1 ರಂದು ಬೆಳ್ಳಿಗೆ 10 ಗಂಟೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ

NAMMUR EXPRESS NEWS
ಆವಿಷ್ಕಾರ್ ಸೌಹಾರ್ದ ಮಲ್ಟಿಪರ್ಪಸ್ ಕೋ-ಆಪರೇಟಿವ್‌ ಸೊಸೈಟಿ ತೀರ್ಥಹಳ್ಳಿ ಇದರ 9 ನೇ ವಾರ್ಷಿಕ ಸಾಮಾನ್ಯ ಸಭೆ 01-09-2025ರ ಸೋಮವಾರದಂದು ಬೆಳಿಗ್ಗೆ 11:00 ಗಂಟೆಗೆ ಸರಿಯಾಗಿ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿರುವ ಗೋಪಾಲಗೌಡ ರಂಗಮಂದಿರದಲ್ಲಿ ಸಹಕಾರಿಯ ಅಧ್ಯಕ್ಷರಾದ “ಶ್ರೀ ಅನಿಲ್ ಕುಮಾರ್” ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನೆರವೇರಲಿದೆ. ಬೆಳಿಗ್ಗೆ 10 ಗಂಟೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ ಹಾಗೂ ಸರ್ವ ಸದಸ್ಯರಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಇರುತ್ತದೆ. ಸದಸ್ಯರು ಈ ಸಾಮಾನ್ಯ ಸಭೆಗೆ ಸಕಾಲದಲ್ಲಿ ಆಗಮಿಸಿ ತಮ್ಮ ಅಮೂಲ್ಯ ಸಲಹೆ ಸಹಕಾರಗಳನ್ನಿತ್ತು ಸಹಕರಿಸಲು ಈ ಮೂಲಕ ಆಡಳಿತ ಮಂಡಳಿ ಪರವಾಗಿ ಸರ್ವರಿಗೂ ಆದರದ ಸ್ವಾಗತ.

Categories
ಚಿಕ್ಕಮಗಳೂರು

ಸೆ.1 ರಿಂದ ಮುಳ್ಳಯ್ಯನಗಿರಿ ಪ್ರವಾಸಕ್ಕೆ ಆನ್‌ಲೈನ್ ಬುಕಿಂಗ್ ಕಡ್ಡಾಯ

ಸೆ.1 ರಿಂದ ಮುಳ್ಳಯ್ಯನಗಿರಿ ಪ್ರವಾಸಕ್ಕೆ ಆನ್‌ಲೈನ್ ಬುಕಿಂಗ್ ಕಡ್ಡಾಯ

* ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳ ಹಿನ್ನೆಲೆ ಜಿಲ್ಲಾಡಳಿತದ ಕ್ರಮ
* ಆನ್‌ಲೈನ್ ಬುಕ್ಕಿಂಗ್ ಹೇಗೆ,ಶುಲ್ಕ,ಸಮಯ ಎಷ್ಟು ಮಾಹಿತಿ ಇಲ್ಲಿದೆ.

NAMMMUR EXPRESS NEWS
ಚಿಕ್ಕಮಗಳೂರು: ಕಾಫಿನಾಡಿನ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿ, ಬಾಬಾಬುಡನ್‌ ಗಿರಿಗೆ ಬರುವ ಪ್ರವಾಸಿಗರು ಇನ್ಮುಂದೆ ಆನ್‌ಲೈನ್‌ನಲ್ಲಿ ಮೊದಲೇ ಬುಕ್ಕಿಂಗ್ ಮಾಡಿಕೊಂಡು ಬರಬೇಕು. ಸೆಪ್ಟೆಂಬರ್ 1ರಿಂದ ಈ ವ್ಯವಸ್ಥೆ ಜಾರಿಗೆ ಬರಲಿದ್ದು,
ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಮುಳ್ಳಯನಗಿರಿ, ಸೀತಾಳಯ್ಯನಗಿರಿ, ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ, ಮಾಣಿಕ್ಯಧಾರ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು ಇದರಿಂದ ಪ್ರವಾಸಿ ತಾಣಗಳಲ್ಲಿ ದಟ್ಟಣೆ ಉಂಟಾಗುತ್ತಿದ್ದು, ಇದನ್ನು ನಿಯಂತ್ರಿಸಲು ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.

* ಆನ್‌ಲೈನ್ ಬುಕ್ಕಿಂಗ್ ಹೇಗೆ,ಶುಲ್ಕ,ಸಮಯ ಎಷ್ಟು? ಇಲ್ಲಿದೆ ಮಾಹಿತಿ

ಜಿಲ್ಲಾಡಳಿತದ ವೆಬ್‌ಸೈಟ್ ಲಿಂಕ್
https://chikkamagaluru.nic.in/en/tourism ಬಳಸಿ, ಶುಲ್ಕ ಬೈಕ್‌ಗಳಿಗೆ ₹50, ಕಾರುಗಳಿಗೆ ₹100, ತೂಫಾನ್ ವಾಹನ ₹150 ಮತ್ತು ಟೆಂಪೊ ಟ್ರಾವೆಲ‌ರ್ ₹200 ಪಾವತಿಸಿ ದಿನಾಂಕ ಮತ್ತು ಸಮಯವನ್ನು ಮೊದಲೇ ಬುಕ್ಕಿಂಗ್‌ ಮಾಡಿಕೊಳ್ಳಬೇಕು.
ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆ ತನಕ ಮೊದಲ ಅವಧಿ ಮತ್ತು ಮಧ್ಯಾಹ್ನ 1ರಿಂದ ಸಂಜೆ 6 ಗಂಟೆ ತನಕ ಎರಡನೇ ಅವಧಿ ಎಂದು ಸಮಯ ನಿಗದಿ ಮಾಡಲಾಗಿದೆ. ಒಂದು ಅವಧಿಗೆ 600 ವಾಹನಗಳಿಗೆ (ದ್ವಿಚಕ್ರ ವಾಹನ/ಆಟೊರಿಕ್ಷಾ 100, ಸ್ಥಳೀಯ ಟ್ಯಾಕ್ಸಿ 100, ಟೆಂಪೊ ಟ್ರಾವೆಲರ್ 50, ತೂಫಾನ್ ವಾಹನ 50, ಪ್ರವಾಸಿಗರ ಕಾರು/ಜೀಪು/ಎಸ್‌ಯುವಿ 300) ಅವಕಾಶ ಇರಲಿದೆ ಮೊದಲು ಬುಕ್ಕಿಂಗ್ ಮಾಡಿಕೊಂಡವರಿಗೆ ಅವಕಾಶ ದೊರಕಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಪ್ರಕಟಣೆ ತಿಳಿಸಿದೆ.

Categories
ಚಿಕ್ಕಮಗಳೂರು

ಗ್ರಾಮದಲ್ಲಿ ಶವ ಸಂಸ್ಕಾರಕ್ಕೂ ಜಾಗ ಇಲ್ಲ,ಗ್ರಾಮಸ್ಥರ ಪಾಡು ಕೇಳೋರಿಲ್ಲ

ಗ್ರಾಮದಲ್ಲಿ ಶವ ಸಂಸ್ಕಾರಕ್ಕೂ ಜಾಗ ಇಲ್ಲ,ಗ್ರಾಮಸ್ಥರ ಪಾಡು ಕೇಳೋರಿಲ್ಲ

* ನೂರಾರು ಮೀನುಗಾರ ಕುಟುಂಬ ವಾಸವಾಗಿರೋ ರಾವೂರು ಗ್ರಾಮ
* ಶವ ಸಂಸ್ಕಾರಕ್ಕೆ ಕಿಲೋಮೀಟರ್ ಗಟ್ಟಲೆ ದೋಣಿಯಲ್ಲಿ ಶವ ಸಾಗಾಟ

ನಮ್ಮೂರ್ ಪ್ರಾಬ್ಲಮ್

NAMMMUR EXPRESS NEWS
ಎನ್.ಆ‌ರ್.ಪುರ: ತಾಲೂಕಿನ ರಾವೂರು ಕ್ಯಾಂಪ್‌ನಲ್ಲಿ ನೂರಾರು ಮೀನುಗಾರರ ಕುಟುಂಬಗಳು ವಾಸವಾಗಿದ್ದು, ಇಲ್ಲಿನ ಗ್ರಾಮಸ್ಥರು ಸ್ಮಶಾನ ಜಾಗದ ಕೊರತೆ ಎದುರಿಸುತ್ತಿದ್ದು, ಅಂತ್ಯ ಸಂಸ್ಕಾರಕ್ಕೂ ಕಿಲೋಮೀಟರ್‌ ಗಟ್ಟಲೇ ದೋಣಿಯಲ್ಲಿ ಶವ ಸಾಗಿಸಬೇಕಾದ ಪರಿಸ್ಥಿತಿಯನ್ನು ಗ್ರಾಮಸ್ಥರು ಎದುರಿಸುತ್ತಿದ್ದಾರೆ.
ತಾಲೂಕಿನ ಮೆಣಸೂರು ಗ್ರಾಪಂ ವ್ಯಾಪ್ತಿಯಲ್ಲಿರುವ ರಾವೂರು ಕ್ಯಾಂಪ್‌ನಲ್ಲಿ ನೂರಾರು ಮೀನುಗಾರರ ಕುಟುಂಬಗಳು ಅನೇಕ ವರ್ಷಗಳಿಂದ ವಾಸವಾಗಿವೆ. ಈ ಗ್ರಾಮದ ನಿವಾಸಿಗಳು ಭದ್ರಾ ಡ್ಯಾಮ್‌ನ ಹಿನ್ನೀರಿನಲ್ಲಿ ಮೀನು ಹಿಡಿದು ತಮ್ಮ ಜೀವನ ನಡೆಸುತ್ತಿದ್ದಾರೆ. ಹಲವಾರು ದಶಕಗಳಿಂದ ಈ ಗ್ರಾಮದಲ್ಲಿ ಮೀನುಗಾರರ ಕುಟುಂಬಗಳು ವಾಸವಾಗಿದ್ದರೂ ಇಲ್ಲಿ ಸ್ಮಶಾನ ಜಾಗ ಇಲ್ಲವಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಕ್ಯಾಂಪ್‌ನಲ್ಲಿ ಅನಾರೋಗ್ಯ ಮತ್ತಿತರ ಕಾರಣದಿಂದಾಗಿ ಯಾರಾದರೂ ಮೃತಪಟ್ಟರೆ ಅವರನ್ನು ಭದ್ರಾ ಅಣೆಕಟ್ಟೆಯ ಹಿನ್ನೀರಿನಲ್ಲಿ ಮೊಣಕಾಲುದ್ದದ ನೀರಿನಲ್ಲಿ ನಡೆದುಕೊಂಡು ನಂತರ ತೆಪ್ಪದ ಸಹಾಯದಿಂದ ಕ್ಯಾಂಪ್‌ನ ಇನ್ನೊಂದು ಬದಿಯಲ್ಲಿರುವ ಸರ್ಕಾರಿ ಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡುವಂತಾಗಿದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು, ಶಾಸಕರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೇಸಿಗೆಯಲ್ಲಿ ಭದ್ರಾ ಡ್ಯಾಮ್‌ನಲ್ಲಿ ನೀರು ಕಡಿಮೆ ಇರುವುದರಿಂದ ಹಿನ್ನೀರು ಕಡಿಮೆಯಾಗುತ್ತದೆ. ಈ ವೇಳೆ ಅಣೆಕಟ್ಟೆಯ ಹಿನ್ನೀರು ತುಂಬುವ ಜಾಗದ ದಡದಲ್ಲಿ ನಡೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡುವ ನಿವಾಸಿಗಳು ಮಳೆಗಾಲದಲ್ಲಿ ಮಾತ್ರ ಭಾರೀ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮಳೆಗಾಲದಲ್ಲಿ ಇಲ್ಲಿ ಭಾರೀ ನೀರು ಸಂಗ್ರಹವಾಗುವುದರಿಂದ ತೆಪ್ಪ ಮಗುಚಿದಲ್ಲಿ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇದ್ದು, ಈ ಹಿಂದೆ ಅನೇಕ ಬಾರಿ ಇಂತಹ ಅವಘಡಗಳು ನಡೆದಿವೆ ಎಂದು ನಿವಾಸಿಗಳು ತಮಗಾಗುತ್ತಿರುವ ತೊಂದರೆಯನ್ನು ಹೇಳಿಕೊಂಡಿದ್ದಾರೆ. ರಾವೂರು ಕ್ಯಾಂಪ್‌ನ ನಿವಾಸಿಗಳಿಗಾಗಿ ಕ್ಯಾಂಪ್‌ ಸಮೀಪ ಶಾಶ್ವತ ಸ್ಮಶಾನ ಜಾಗ ಮಂಜೂರು ಮಾಡಿಕೊಡುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೂ ಸೇರಿದಂತೆ ಹಾಲಿ ಶಾಸಕ ಟಿ.ಡಿ.ರಾಜೇಗೌಡ, ಹಿಂದೆ ಶಾಸಕರಾಗಿದ್ದ ಡಿ.ಎನ್.ಜೀವರಾಜ್ ಅವರಿಗೂ ನಿವಾಸಿಗಳು ಹಲವಾರು ಬಾರಿ ಮನವಿ ಮಾಡಿದ್ದೆವು. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕ್ಷೇತ್ರದ ಶಾಸಕರು ಈ ಬಗ್ಗೆ ಗಮನಹರಿಸಿ ಮೀನುಗಾರರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕಾಗಿದೆ ಇದು ನಮ್ಮೂರ್ ಎಕ್ಸ್‌ಪ್ರೆಸ್ ಕಳಕಳಿ.