Categories
ಕರಾವಳಿ ದಕ್ಷಿಣ ಕನ್ನಡ ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

• ಬಂಟ್ವಾಳ: ರಕ್ತದ ಕಲೆಯುಳ್ಳ ಇನೋವಾ ಕಾರು ಪತ್ತೆ
• ಸುಳ್ಯ: ಕೆಎಫ್‌ಡಿ ಸಿ ಕಾರ್ಮಿಕರಿಂದ ಏ.1ರಂದು ಪ್ರತಿಭಟನೆ
• ಉಳ್ಳಾಲ: ಕಬ್ಬಿಣದ ಬಕೆಟ್ ಬಿದ್ದು ಕಾರ್ಮಿಕ ಸಾವು..!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬಂಟ್ವಾಳ: ಬುಡೋಳಿ ಹತ್ತಿರದಲ್ಲಿ ಮಂಗಳೂರು ನಗರದ ಹೊರವಲಯದ ತೊಕ್ಕೊಟ್ಟು ಫ್ಲೈ ಓವರ್ ನ ಮೇಲ್ಭಾಗದಲ್ಲಿ ರಕ್ತದ ಕಲೆಯುಳ್ಳ ಇನೋವಾ ಕಾರ್ ಕಂಡುಬಂದ ಘಟನೆ ಶುಕ್ರವಾರದಂದು ನಡೆದಿದೆ. ರೌಡಿಶೀಟರ್ ಮುಳ್ಳುಗಡ್ಡೆ ಹೌಸ್, ತಲಪಾಡಿ ನಿವಾಸಿಯಾದ ಆರೀಫ್ ನ ಹತ್ಯೆಗೆ ಬಳಸಿರುವ ವಾಹನ ಇದೇ ಆಗಿರಬಹುದೆಂದು ಅನುಮಾನಗಳು ವ್ಯಕ್ತವಾಗಿವೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆಯನ್ನು ನಡೆಸಿದರು. ತನಿಖೆಯ ಬಳಿಕ ಇನ್ನಷ್ಟೇ ಮಾಹಿತಿ ಲಭಿಸಬೇಕಿದೆ.

•ಸುಳ್ಯ: ಕೆಎಫ್‌ಡಿ ಸಿ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ

ಸುಳ್ಯ: ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಸುಳ್ಯ-ಐವರ್ನಾಡು- ಸುಬ್ರಹ್ಮಣ್ಯದ ರಬ್ಬರ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಇಟ್ಟಿದ್ದು, ಅದನ್ನು ಸಂಬಂಧಿತ ವ್ಯಕ್ತಿಗಳ ಗಮನಕ್ಕೆ ಹಲವಾರು ಸಮಯಗಳಿಂದ ತರಲಾಗುತ್ತಿದ್ದರೂ, ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರದಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಪಡಿಸಿ, ಕಾರ್ಮಿಕ ಸಂಘಟನೆಗಳ ಒಕ್ಕೂಟವು ಏಪ್ರಿಲ್ 1ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಮತ್ತು ಧರಣಿ ಸತ್ಯಾಗ್ರಹವನ್ನು ಕೈಗೊಳ್ಳಲು ನಿರ್ಧರಿಸಿದೆ ಎಂದು ಮುಖಂಡರು ತಿಳಿಸಿದ್ದಾರೆ.

• ಉಳ್ಳಾಲ: ಕಬ್ಬಿಣದ ಬಕೆಟ್ ಬಿದ್ದು ಕಾರ್ಮಿಕ ಸಾವು

ಉಳ್ಳಾಲ: ಹೊಸ ಬಾವಿಯನ್ನು ಕೊರೆಯುವ ಕಾಮಗಾರಿಯನ್ನು ನಡೆಸುತ್ತಿದ್ದ ಸಮಯದಲ್ಲಿ, ಕ್ರೇನ್ ನ ಕೊಕ್ಕೆಯಿಂದ ಬೇರ್ಪಟ್ಟ ಮಣ್ಣು ತುಂಬಿದ್ದ ಕಬ್ಬಿಣದ ಬಕೆಟ್ 30 ಅಡಿ ಎತ್ತರದಿಂದ ಕಾರ್ಮಿಕರ ಮೇಲೆ ಬಿದ್ದಿದೆ. ಪರಿಣಾಮವಾಗಿ ಓರ್ವ ಕಾರ್ಮಿಕ ಸಾವನ್ನಪ್ಪಿರುವ ದುರಂತ ಶುಕ್ರವಾರದಂದು ಕುತ್ತಾರು ಪದವಿನ ಸಲಾತ್ ನಗರದಲ್ಲಿ ನಡೆದಿದೆ. ಇನ್ನಿಬ್ಬರು ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ. ಮೃತ ಕಾರ್ಮಿಕನನ್ನು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಮಲ್ಲಾಪುರದ ನಿವಾಸಿ ಶಿವಕುಮಾರ್ ಎಂದು ಗುರುತಿಸಲಾಗಿದೆ. ಶಿವಕುಮಾರ್ ಅವರು ಬಕೆಟ್ ಬಿದ್ದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದರೂ ಎನ್ನುವ ಮಾಹಿತಿ ಲಭಿಸಿದೆ. ಶಿವಕುಮಾರ್ ಅವರು ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ತೊಕ್ಕೊಟ್ಟುವಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ.

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ತುಂಗಾವಾರ್ತೆ-ನಿಸರ್ಗ ನಿರ್ಮಾಣ ಕಛೇರಿ ಉದ್ಘಾಟನೆ

ತುಂಗಾವಾರ್ತೆ-ನಿಸರ್ಗ ನಿರ್ಮಾಣ ಕಛೇರಿ ಉದ್ಘಾಟನೆ
– ತೀರ್ಥಹಳ್ಳಿಯ ಪ್ರಸಿದ್ಧ ಪತ್ರಕರ್ತ ವಿಶ್ವನಾಥ್ ಶೆಟ್ಟಿ ಅವರ ನೂತನ ಕಚೇರಿ
– ಚಕ್ಕೋಡಬೈಲಿನ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಪುನರ್‌ ಪ್ರತಿಷ್ಠಾಪನೆ

ನಮ್ಮೂರ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಹಿರಿಯ ಪತ್ರಕರ್ತ ಡಿ.ಎಸ್.ವಿಶ್ವನಾಥ ಶೆಟ್ಟಿ ಅವರ ತುಂಗಾ ವಾರ್ತೆ ವಾರಪತ್ರಿಕೆಯ ನೂತನ ಕಾರ್ಯಾಲಯ ಹಾಗೂ ಅವರ ಪುತ್ರ ಎಂಟೆಕ್ ಪದವೀಧರರಾದ ಸುಶಾಂತ್ ಶೆಟ್ಟಿ ಅವರ ನಿಸರ್ಗ ನಿರ್ಮಾಣ ಕನ್ಸ್‌ಟ್ರಕ್ಷನ್ ಸಂಸ್ಥೆಯ ನೂತನ ಕಛೇರಿ ಕಟ್ಟಡವನ್ನು ಮಾರ್ಚ್ 26ರಂದು ಎಂಎಡಿಬಿ ಅಧ್ಯಕ್ಷರಾದ ಆರ್.ಎಂ.ಮಂಜುನಾಥಗೌಡ ಉದ್ಘಾಟಿಸಿದರು.

ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣ ಸಮೀಪ ಈ ಕಟ್ಟಡ ಇದೆ. ಆತ್ಮೀಯರು, ಹಿತೈಷಿಗಳನ್ನು ಡಿಎಸ್‌ವಿ ಕುಟುಂಬ ಸ್ವಾಗತಿಸಿ, ಸತ್ಕರಿಸಿದರು. ಈ ಹಿಂದೆ ಮುಖ್ಯ ಬಸ್‌ ನಿಲ್ದಾಣದ ಬಳಿ ಇದ್ದ ತುಂಗಾ ವಾರ್ತೆ ಕಾರ್ಯಾಲಯದ ಜಾಗದಲ್ಲೇ ನೂತನ ಕಟ್ಟಡ ನಿರ್ಮಾಣಗೊಂಡಿದೆ. ತೀರ್ಥಹಳ್ಳಿ ಗಣ್ಯರು, ರಾಜಕೀಯ ನಾಯಕರು ಭಾಗವಹಿಸಿದ್ದರು. ಕುಟುಂಬದವರು, ಸಿಬ್ಬಂದಿ ಹಾಜರಿದ್ದರು.

ಚಕ್ಕೋಡಬೈಲಿನ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಪುನರ್‌ ಪ್ರತಿಷ್ಠಾಪನೆ

ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಚಕ್ಕೋಡಬೈಲಿನ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಪುನರ್‌ ಪ್ರತಿಷ್ಠಾಪನ ಮಹೋತ್ಸವ ನಡೆಯಿತು. ಸಾವಿರಾರು ಭಕ್ತರು ಭಾಗಿ ಆಗಿದ್ದರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ ಭಟ್ಟರು , ಕಾರ್ಯದರ್ಶಿ ಸುಬ್ರಹ್ಮಣ್ಯ , ಮ್ಯಾಮ್ಕೋಸ್‌ ನಿರ್ದೇಶಕರಾದ ನಂದನ್‌ , ಕವಿರಾಜ್‌ ಹಾಗು ಇತರರು ಇದ್ದರು.

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಮರಳು ಮಾಫಿಯಾಕ್ಕೆ ಪೊಲೀಸ್ ಶಾಕ್!

ಮರಳು ಮಾಫಿಯಾಕ್ಕೆ ಪೊಲೀಸ್ ಶಾಕ್!
– ಮುಂಜಾನೆ ದಾಳಿಯಲ್ಲಿ ಲಾರಿಗಳು ಸೀಜ್
– ತೀರ್ಥಹಳ್ಳಿ ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ಮರಳು ಅಕ್ರಮ
– ದೇವರ ಹೆಸರಿನಲ್ಲಿ ಲಾರಿಗಳ ಸಂಚಾರ.!

ನಮ್ಮೂರ್ ಎಕ್ಸ್ ಪ್ರೆಸ್
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅಕ್ರಮ ಮರಳು ಸಾಗಾಣಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ನಡೆಸಿದ ಮುಂಜಾನೆ ದಾಳಿ ಗಮನ ಸೆಳೆದಿದೆ. ಅರಸುರಳಿ ಹಾಗೂ ಆರಗ ಭಾಗಗಳಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಮರಳು ತುಂಬಿದ್ದ ಎರಡು ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪರವಾನಗಿ ಇಲ್ಲದೆ ಮರಳು ಸಾಗಾಣಿಕೆ ಹೆಚ್ಚಾಗಿದೆ ಎಂಬ ಸಾರ್ವಜನಿಕರ ದೂರುಗಳ ಹಿನ್ನೆಲೆ ಪೊಲೀಸರು ಚುರುಕುಗೊಂಡಿದ್ದರು. ಖಚಿತ ಮಾಹಿತಿ ಆಧರಿಸಿ ವೃತ್ತ ನಿರೀಕ್ಷಕ ಇಮ್ರಾನ್ ಬೇಗ್ ಅವರ ನೇತೃತ್ವದಲ್ಲಿ ಪೊಲೀಸ್ ತಂಡ ಬೆಳಗ್ಗಿನ ಜಾವ ಕಾರ್ಯಾಚರಣೆ ಆರಂಭಿಸಿತು.

ಸಂದೇಹಾಸ್ಪದವಾಗಿ ಸಂಚರಿಸುತ್ತಿದ್ದ ಲಾರಿಗಳನ್ನು ತಡೆದು ತಪಾಸಣೆ ನಡೆಸಿದಾಗ, ಸಾಗಿಸುತ್ತಿದ್ದ ಮರಳಿಗೆ ಸಂಬಂಧಿಸಿದ ಯಾವುದೇ ಮಾನ್ಯ ದಾಖಲೆಗಳು ದೊರಕಲಿಲ್ಲ. ಈ ಹಿನ್ನೆಲೆಯಲ್ಲಿ ತಕ್ಷಣವೇ ಲಾರಿಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಯಿತು. ಈ ದಾಳಿಯಲ್ಲಿ ಕೋಣಂದೂರು ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಕೆ. ಪ್ರವೀಣ್, ಎನ್. ಮೋಹನ್ ಕುಮಾರ್, ಆರ್. ವಿಜಯ್ ಸೇರಿದಂತೆ ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸಮನ್ವಯದ ಕಾರ್ಯಾಚರಣೆ ಮೂಲಕ ಮರಳು ಮಾಫಿಯಾ ಚಟುವಟಿಕೆಗಳಿಗೆ ಗಟ್ಟಿಯಾದ ಹೊಡೆತ ನೀಡಲಾಗಿದೆ.

ತೀರ್ಥಹಳ್ಳಿ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆ ಹೆಚ್ಚುತ್ತಿರುವ ಬಗ್ಗೆ ಜನರಲ್ಲಿ ಆತಂಕ ವ್ಯಕ್ತವಾಗುತ್ತಿದ್ದ ಸಂದರ್ಭದಲ್ಲಿ, ಪೊಲೀಸ್ ಕ್ರಮ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿದೆ. ಇಂತಹ ದಾಳಿಗಳನ್ನು ಇನ್ನಷ್ಟು ಕಠಿಣಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಪೊಲೀಸ್ ಇಲಾಖೆ, ಯಾವುದೇ ಅಕ್ರಮ ಚಟುವಟಿಕೆಗಳನ್ನು ಸಹಿಸಲಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ಕಾರ್ಯಾಚರಣೆಯ ಮೂಲಕ ರವಾನಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.

ಪರಿಸರ ಸಂರಕ್ಷಣೆ ಮತ್ತು ಕಾನೂನು ಪಾಲನೆ ದೃಷ್ಟಿಯಿಂದ ಮರಳು ಸಾಗಾಣಿಕೆಯನ್ನು ನಿಯಂತ್ರಿಸುವುದು ಅತ್ಯವಶ್ಯಕ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ, ಈ ದಾಳಿ ಕೇವಲ ಲಾರಿಗಳ ವಶಪಡಿಸಿಕೊಳ್ಳುವ ಘಟನೆಯಷ್ಟೇ ಅಲ್ಲ, ಮರಳು ಮಾಫಿಯಾಗೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದ್ದು, ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸುವತ್ತ ಪೊಲೀಸರ ಬದ್ಧತೆಯನ್ನು ಮತ್ತೊಮ್ಮೆ ತೋರಿಸಿದೆ.

Categories
ಚಿಕ್ಕಮಗಳೂರು ತರೀಕೆರೆ ಮಲ್ನಾಡ್

ಟಾಪ್ ನ್ಯೂಸ್ ಚಿಕ್ಕಮಗಳೂರು

ಟಾಪ್ ನ್ಯೂಸ್ ಚಿಕ್ಕಮಗಳೂರು

• ಚಿಕ್ಕಮಗಳೂರು: ಬಸ್ ಮೇಲೆ ದಾವೂದ್ ಇಬ್ರಾಹಿಂ ಚಿತ್ರ!
– ಬಸ್ ವಶಕ್ಕೆ ಪಡೆದ ಪೊಲೀಸರು: ಏನಿದು ಘಟನೆ?

• ತರೀಕೆರೆ: ಜನರ ಕಿರುಕುಳ: ಮನನೊಂದು ಮಹಿಳೆ ಆತ್ಮಹತ್ಯೆ
• ಚಿಕ್ಕಮಗಳೂರು: 2 ದಿನ ಮಾಂಸ ಮಾರಾಟ ನಿಷೇಧ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಚಿಕ್ಕಮಗಳೂರು: ತಮಿಳುನಾಡು ಮೂಲದಿಂದ ಕಾಫಿನಾಡು ಚಿಕ್ಕಮಗಳೂರಿಗೆ ಆಗಮಿಸಿದ ಖಾಸಗಿ ಬಸ್ ಒಂದರ ಮೇಲೆ, ಮುಂಬೈ ಸರಣಿ ಸ್ಫೋಟದ ಸಂಚುಕೋರ, ಭೂಗತ ಲೋಕದ ಕುಖ್ಯಾತ ಅಪರಾಧಿಯಾಗಿರುವ ದಾವೂದ್ ಇಬ್ರಾಹಿಂನ ಚಿತ್ರ ಮತ್ತು ಆತನನ್ನು ಹೊಗಳುವಂತಹ ಬರವಣಿಗೆಯನ್ನು ಹಾಕಿರುವುದು ಕಂಡುಬಂದಿದ್ದು, ಕೆಲ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬಸ್ ಅನ್ನು ಅಡ್ಡಗಟ್ಟಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಸ್ ನ ಸುತ್ತಲೂ ಕಾನೂನುಬಾಹಿರ ಚಟುವಟಿಕೆಗಳನ್ನು ಪ್ರಚೋದಿಸುವಂತಹ ಮತ್ತು ಅಪರಾಧ ಲೋಕವನ್ನೇ ವೈಭವೀಕರಿಸುವಂತಹ ಸ್ಟಿಕ್ಕರ್ ಗಳನ್ನು ಅಂಟಿಸಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.

ಇದರಿಂದ ಸ್ಥಳದಲ್ಲಿ ಕೆಲವು ಸಮಯ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ತಕ್ಷಣ ಬಸವನಹಳ್ಳಿ ಪೊಲೀಸರು ವಾತಾವರಣವನ್ನು ತಿಳಿಗೊಳಿಸಲು ಈ ವಿವಾದಾತ್ಮಕವಾಗಿರುವಂತಹ ಖಾಸಗಿ ಬಸ್ ಅನ್ನು ವಶಪಡಿಸಿಕೊಂಡು, ಠಾಣೆಯ ಆವರಣಕ್ಕೆ ತೆಗೆದುಕೊಂಡು ಹೋಗಿ, ತನಿಖೆಯನ್ನು ಪ್ರಾರಂಭಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ದೇಶದ್ರೋಹಿ ಚಟುವಟಿಕೆಗಳನ್ನು ವೈಭವಿಕರಿಸುವುದರ ಹಿಂದೆ ಕಾರಣವೇನಿರಬಹುದು ಎನ್ನುವುದರ ಕುರಿತು ವಿಚಾರಣೆ ನಡೆಸಲಾಗುತ್ತಿದೆ.

ಜನರ ಕಿರುಕುಳ: ಮನನೊಂದು ಮಹಿಳೆ ಆತ್ಮಹತ್ಯೆ!

ತರೀಕೆರೆ: 201೦ರಿಂದ ಎಚ್. ಮಲ್ಲೇನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಉಷಾ ಎನ್ನುವ ಮಹಿಳೆಯು ಗ್ರಾಮದ ಕೆಲವು ಜನರ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಘಕ್ಕೆ ಹೊಸದಾಗಿ ಸೇರಿಕೊಂಡ ಸದಸ್ಯರು ಲೆಕ್ಕಪತ್ರಗಳನ್ನು ಕೇಳಿದಾಗ ಉಷಾ ಅವರು ಅದನ್ನು ಒದಗಿಸಿದ್ದಾರೆ. ಆದರೂ ಇಲ್ಲಸಲ್ಲದ ಆರೋಪಗಳನ್ನು ಅವರ ಮೇಲೆ ಹೊರೆಸುವ ಪ್ರಯತ್ನ ಮಾಡಿದ್ದರಿಂದ, ಮಾನಸಿಕವಾಗಿ ನೊಂದು ಉಷಾ ಅವರು ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪತಿಯಾದ ಎಚ್.ಎನ್. ರಮೇಶ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

•ಚಿಕ್ಕಮಗಳೂರು: 2 ದಿನ ಮಾಂಸ ಮಾರಾಟ ನಿಷೇಧ

ಚಿಕ್ಕಮಗಳೂರು: ಶ್ರೀರಾಮನವಮಿ ಹಾಗೂ ಮಹಾವೀರ ಜಯಂತಿಯ ಹಿನ್ನೆಲೆಯಲ್ಲಿ ಮಾರ್ಚ್ 27ರ ಶುಕ್ರವಾರ ಹಾಗೂ ಮಾರ್ಚ್ 31ರ ಮಂಗಳವಾರದಂದು ಎರಡು ದಿನಗಳ ಕಾಲ ಮಾಂಸ ಮಾರಾಟವನ್ನು ನಿಷೇಧಿಸುವ ಕುರಿತು ನಗರಸಭೆಯ ಪೌರಾಯುಕ್ತರಾದ ಬಿ.ಸಿ.ಬಸವರಾಜ್ ಅವರು ಆದೇಶವನ್ನು ಹೊರಡಿಸಿದ್ದಾರೆ. ಸರ್ಕಾರದ ಸುತ್ತೋಲೆಯ ಅಡಿಯಲ್ಲಿ ಕೋಳಿ, ಮೀನು, ಕುರಿ ಮಾರಾಟ ಮಾಡುವ ಮಳಿಗೆಗಳು ಮತ್ತು ಮಾಂಸಾಹಾರಿ ಹೊಟೇಲ್ ಗಳನ್ನು ಎರಡು ದಿನಗಳ ಕಾಲ ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ಒಂದು ವೇಳೆ ಕಾನೂನು ಕ್ರಮವನ್ನು ವಿರೋಧಿಸಿ ಮಾರಾಟ ಮಾಡಲು ಪ್ರಯತ್ನಿಸಿದ್ದಲ್ಲಿ, ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತರು ಎಚ್ಚರಿಸಿದ್ದಾರೆ.

Categories
ಉಡುಪಿ ಕರಾವಳಿ ಕುಂದಾಪುರ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

• ಉಡುಪಿ: ಪಾದಾಚಾರಿಗಳಿಗಿಲ್ಲ ಸುರಕ್ಷತೆ
• ಬೈಂದೂರು: ಬಜೆಟ್ ಅನ್ಯಾಯ; 30ರಂದು ಪ್ರತಿಭಟನೆ
• ಉಳ್ಳಾಲ: ಅಕ್ರಮ ಇ-ಸಿಗರೇಟ್ ಸಂಗ್ರಹ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು, ಸಕಲ ವ್ಯವಸ್ಥೆಗಳನ್ನು ಒಳಗೊಂಡ ಆಸ್ಪತ್ರೆಗಳಿರುವ ಮಣಿಪಾಲದ ರಸ್ತೆಗಳಲ್ಲಿ ಪಾದಾಚಾರಿಗಳಿಗೆ ಸುರಕ್ಷತೆ ಇಲ್ಲದಂತಾಗಿದೆ. ಮಣಿಪಾಲದಿಂದ ಉಡುಪಿಯ ನಡುವಿನ ಇಂದ್ರಾಳಿ, ಎಂಜಿಎಂ ಕಾಲೇಜ್ ಎದುರು, ಕುಂಜಿಬೆಟ್ಟು, ಕಡಿಯಾಳಿನಲ್ಲಿ ಝಿಬ್ರಾ ಕ್ರಾಸಿಂಗ್ ಮತ್ತು ಬ್ಲಿಂಕರ್ ಗಳನ್ನು ಅಳವಡಿಸುವುದರಿಂದ ವಾಹನ ಸವಾರರಿಗೆ ಅನುಕೂಲವಾಗಲಿದೆ. ಸಂಬಂಧಪಟ್ಟ ನಗರಸಭೆ, ಪೊಲೀಸ್, ಲೋಕೋಪಯೋಗಿ ಇಲಾಖೆಯವರು ಇದರತ್ತ ಗಮನಹರಿಸಿ, ತುರ್ತು ಕ್ರಮವನ್ನು ಕೈಗೊಳ್ಳಬೇಕಾಗಿ ಸಾರ್ವಜನಿಕರು ಆಗ್ರಪಡಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ನಗರಸಭೆಯ ಪೌರಾಯುಕ್ತರಾದ ಮಹಾಂತೇಶ್ ಹಂದರಗಿ ಅವರು “ಸಿಗ್ನಲ್ ಅಳವಡಿಸಿರುವ ಸಿಂಡಿಕೇಟ್ ಸರ್ಕಲ್, ಕಲ್ಸಂಕ ಜಂಕ್ಷನ್ ಗಳಲ್ಲಿ ಆದ್ಯತೆಯ ಮೇರೆಗೆ ಝಿಬ್ರಾ ಕ್ರಾಸಿಂಗ್ ಅಳವಡಿಸಲಾಗುವುದು. ಹಾಗೆಯೇ ಫ್ರೀ ಲೆಫ್ಟ್ ಇರುವಲ್ಲಿ ಕ್ರಾಸಿಂಗ್ ಲೈನ್ ಗಳನ್ನು ಎಳೆಯಲಾಗುವುದು. ಹೆದ್ದಾರಿ ಇಲಾಖೆಯಿಂದ ಎನ್ಓಸಿ ಪಡೆದು,ಟೆಂಡರ್ ಕರೆಯಲಾಗಿದೆ. ಇನ್ನುಳಿದ ಜಂಕ್ಷನ್ ಗಳಲ್ಲೂ ಝಿಬ್ರಾ ಕ್ರಾಸಿಂಗ್ ಮತ್ತು ಬ್ಲಿಂಕರ್ ಅಳವಡಿಸಲಾಗುವುದು” ಎಂದು ತಿಳಿಸಿದ್ದಾರೆ.

• ಬೈಂದೂರು: ಕರಾವಳಿಗೆ ಅನ್ಯಾಯ; 30ರಂದು ಪ್ರತಿಭಟನೆ

ಬೈಂದೂರು: ಈ ಬಾರಿಯ ಹಣಕಾಸು ವರ್ಷದ ಬಜೆಟ್ ನಲ್ಲಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಕರಾವಳಿ ಭಾಗದ ಜನರಿಗೆ ಯಾವುದೇ ವಿಶೇಷ ಕೊಡುಗೆ ನೀಡಿರದ ಹಿನ್ನೆಲೆಯಲ್ಲಿ, ಅದನ್ನು ವಿರೋಧಿಸಿ ಮಾರ್ಚ್ 30ರ ಸೋಮವಾರದಂದು ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರತಿ ಪಂಚಾಯಿತಿಗಳಲ್ಲಿ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಬೈಂದೂರಿನ ರೈತಮೋರ್ಚಾದ ಅಧ್ಯಕ್ಷರಾದ ಪ್ರಕಾಶ್ ಚಂದ್ರ ಶೆಟ್ಟಿ ಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಗಜೇಂದ್ರ ಎಸ್. ಬೇಲೆಮನೆ, ಮಂಡಲದ ಕಾರ್ಯದರ್ಶಿ ಗೋಪಾಲ ಪೂಜಾರಿ ವಸ್ರೆ ಉಪಸ್ಥಿತರಿದ್ದರು.

• ಉಳ್ಳಾಲ: ಅಕ್ರಮ ಇ-ಸಿಗರೇಟ್ ಸಂಗ್ರಹ

ಉಳ್ಳಾಲ: ತಲಪಾಡಿ ಗ್ರಾಮದ ಮನೆಯೊಂದರ ಮುಂಭಾಗದಲ್ಲಿ ಗೋಣಿಚೀಲದ ತುಂಬಾ ಇ-ಸಿಗರೇಟ್ ಅಕ್ರಮವಾಗಿ ಸಂಗ್ರಹಿಸಿರುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಪಿಎಸ್ಐ ಸಿದ್ಧಪ್ಪ ನರನೂರ ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ ಘಟನೆ ನಡೆದಿದೆ. ಆರೋಪಿಯನ್ನು ನವಾಝ್ ಎಂದು ಗುರುತಿಸಲಾಗಿದ್ದು, ಸೆರೆಹಿಡಿಯುವ ಸಂದರ್ಭದಲ್ಲಿ ಆತನ ಬಳಿ ಇದ್ದ, ಸುಮಾರು 37 ಸಾವಿರ ರೂಪಾಯಿಗಳಷ್ಟು ಬೆಲೆಬಾಳುವ ವಿವಿಧ ಕಂಪನಿಗಳ ನಿಷೇಧಿತ ಇ-ಸಿಗರೇಟ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯ ವಿರುದ್ಧ ಸಂಬಂಧಿತ ಕಾಯಿದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸಿದ್ದಾರೆ.

Categories
ಬೆಂಗಳೂರು ಮಾಹಿತಿ ಸುದ್ದಿ ರಾಜ್ಯ

ನ್ಯಾಯಬೆಲೆ ಅಂಗಡಿಗಳಲ್ಲಿ ಇನ್ನು ಸಿಸಿಟಿವಿ ಕಣ್ಣು!

ನ್ಯಾಯಬೆಲೆ ಅಂಗಡಿಗಳಲ್ಲಿ ಇನ್ನು ಸಿಸಿಟಿವಿ ಕಣ್ಣು!
– 20 ಸಾವಿರ ನ್ಯಾಯಬೆಲೆ ಅಂಗಡಿಗಳಲ್ಲಿ ಸಿಸಿಟಿವಿ ಅಳವಡಿಕೆ
– ಅಕ್ರಮ ತಡೆಗಟ್ಟಲು ಕ್ರಮ: ಏನಿದು ಹೊಸ ಆದೇಶ?

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಸಾರ್ವಜನಿಕ ವಿತರಣೆ ವ್ಯವಸ್ಥೆಯನ್ನು ಇನ್ನೂ ಹೆಚ್ಚಾಗಿ ಪಾರದರ್ಶಕಗೊಳಿಸುವ ಮತ್ತು ಪರಿಣಾಮಕಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಆಹಾರ ಮತ್ತು ಕೈಗಾರಿಕಾ ಸರಬರಾಜು ಇಲಾಖೆಯು ಕೆಲವು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಸುಮಾರು 20 ಸಾವಿರ ನ್ಯಾಯಬೆಲೆ ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಕ್ರಮವನ್ನು ಕೈಗೊಳ್ಳಲಾಗಿದೆ. ಇದರಿಂದಾಗಿ ಅಂಗಡಿಗಳಲ್ಲಿ ನಡೆಯುವ ಎಲ್ಲಾ ವಿತರಣಾ ಪ್ರಕ್ರಿಯೆಯು ಸಂಪೂರ್ಣವಾಗಿ ದಾಖಲಾಗುವುದರಿಂದ ಯಾವುದೇ ರೀತಿಯ ಅಕ್ರಮ, ಅವ್ಯವಸ್ಥೆ ಪತ್ತೆಯಾದಲ್ಲಿ ತಕ್ಷಣ ಕ್ರಮವನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದಿದ್ದಾರೆ ಸಚಿವರಾದ ಕೆ.ಎಚ್.ಮುನಿಯಪ್ಪ.

ಗ್ರಾಹಕರಿಗೆ ನ್ಯಾಯಯುತ ಸೇವೆ ದೊರಕಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಆಹಾರ ಧಾನ್ಯಗಳನ್ನು ಸಾಗಣೆ ಮಾಡುವ ಎಲ್ಲಾ ವಾಹನಗಳಿಗೂ ಕೂಡ ಜಿಪಿಎಸ್ ಅಳವಡಿಸುವ ಯೋಜನೆಗೂ ಚಾಲನೆ ನೀಡಲಾಗಿದ್ದು, ಇದರಿಂದ ಧಾನ್ಯಗಳ ಸಾಗಣೆ ಪ್ರಕ್ರಿಯೆಯನ್ನು ಕೂಡ ಟ್ರ್ಯಾಕ್ ಮಾಡಲು ನೆರವಾಗುತ್ತದೆ. ಇದರಲ್ಲಿಯೂ ಕೂಡ ಯಾವುದೇ ರೀತಿಯ ಅಕ್ರಮ, ದಾರಿ ಮರುಗು ಅಥವಾ ವಿಳಂಬ ಕಂಡುಬಂದಲ್ಲಿ ಸಂಬಂಧಿತ ಅಧಿಕಾರಿಗಳು ಕೂಡಲೇ ಗಮನಹರಿಸಲು ಸಹಕಾರಿಯಾಗಿದೆ. ಯೋಜನೆಗಳನ್ನು ಜಾರಿಗೆ ತರಲು ಈಗಾಗಲೇ ಟೆಂಡರ್ ಪ್ರಕ್ರಿಯೆಯನ್ನು ಕೂಡ ಪ್ರಾರಂಭಿಸಲಾಗಿದ್ದು, ತಾಂತ್ರಿಕವಾಗಿ ಶಕ್ತಿಶಾಲಿಯಾಗಿರುವ ಕಂಪನಿಗಳನ್ನು ಆಯ್ಕೆ ಮಾಡುವುದರ ಮೂಲಕ ಶೀಘ್ರದಲ್ಲೇ ಕಾರ್ಯರಂಭ ಮಾಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Categories
ರಾಜ್ಯ ರಾಷ್ಟ್ರೀಯ ವಾರ್ತೆ ಹಬ್ಬಗಳು

ಮನುಕುಲಕ್ಕೆ ಮಾದರಿ ಶ್ರೀರಾಮ..!

ಮನುಕುಲಕ್ಕೆ ಮಾದರಿ ಶ್ರೀರಾಮ..!
– ಸಮಸ್ತ ಜನತೆಗೆ ರಾಮ ನವಮಿ ಶುಭಾಶಯಗಳು

ತ್ರೇತಾಯುಗದಲ್ಲಿ ಇಕ್ಷ್ವಾಕು ವಂಶದ ರಾಜ ದಶರಥನ ಪಟ್ಟದರಸಿ ಕೌಸಲ್ಯೆಯ ಗರ್ಭದಲ್ಲಿ ಜನಿಸಿದ ಶ್ರೀರಾಮನು ತನ್ನ ಸಾಮರ್ಥ್ಯ, ವ್ಯಕ್ತಿತ್ವ, ಉತ್ತಮ ಗುಣಗಳಿಂದಾಗಿ ‘ಪುರುಷೋತ್ತಮ’ ಎನಿಸಿಕೊಂಡು ಮನುಕುಲಕ್ಕೆ ಮಾದರಿಯಾದವನು. ರಾಜ ವೈಭೋಗವನ್ನು ತ್ಯಜಿಸಿ ತಂದೆಯ ಮಾತನ್ನು ನಡೆಸಿಕೊಡುವ ಸಲುವಾಗಿ ಪತ್ನಿ, ಸಹೋದರ ಸಹಿತನಾಗಿ ನಾರುಮಡಿಯುಟ್ಟು ಹದಿನಾಲ್ಕು ವರ್ಷಗಳ ಕಾಲ ವನವಾಸವನ್ನು ಅನುಭವಿಸಿ, ಮಗನೆಂದರೆ ಹೀಗಿರಬೇಕು ಎಂದು ಜಗತ್ತಿಗೆ ತೋರಿಸಿಕೊಟ್ಟ ‘ಪಿತೃ ವಾಕ್ಯ ಪರಿಪಾಲಕ‘.

ಹೆಣ್ಣು ಮಕ್ಕಳಿಗೆ “ನಿನ್ನ ಗಂಡನಾಗುವವನು ಹೇಗಿರಬೇಕು” ಎಂದು ಕೇಳಿದರೆ ಎಲ್ಲರಿಂದ ಬರುವ ಉತ್ತರ “ಶ್ರೀರಾಮನಚಂದ್ರನ ತರ ಇರಬೇಕು” ಎನ್ನುವುದೇ ಆಗಿದೆ.ಕಾರಣ ಸೀತೆಯನ್ನು ಹೊರತು ಪರಸ್ತ್ರೀಯರನ್ನು ತಾಯಿಯಂತೆ, ಸಹೋದರಿಯರಂತೆ ಕಂಡು ‘ಏಕಪತ್ನಿವೃತಸ್ತ‘ ಎನ್ನುವ ಹೆಸರನ್ನು ಗಳಿಸಿದ ಆದರ್ಶ ಪತಿ ಶ್ರೀರಾಮ.

ಪತ್ನಿ ಸೀತೆಯ ಮೇಲೆ ಸಂಪೂರ್ಣ ನಂಬಿಕೆಯಿದ್ದರೂ ಕೂಡ ಓರ್ವ ರಾಜನಾಗಿ ಯೋಚಿಸಿ, ರಾಜ್ಯದ ಒಬ್ಬ ಸಾಮಾನ್ಯ ಪ್ರಜೆಯಾಗಿದ್ದ ಅಗಸನ ಮಾತಿಗೆ ಬೆಲೆ ಕೊಟ್ಟು ವೈದೇಹಿಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಿ, ತನ್ನ ಪತ್ನಿ ಎಂದಿಗೂ ಪತಿವೃತೆಯೇ, ಭೂಮಿತೂಕದ ಅವಳು ಯಾವಾಗಲೂ ಪವಿತ್ರಳಾಗಿಯೇ ಇರುತ್ತಾಳೆ ಎನ್ನುವ ಅಂಶವನ್ನು ಪ್ರತ್ಯಕ್ಷವಾಗಿ ಬಿಂಬಿಸಿದ್ದಷ್ಟೇ ಅಲ್ಲದೆ, ರಾಜ್ಯವನ್ನು ಆಳುವವರು ಯಾವ ರೀತಿ ನಡೆದುಕೊಳ್ಳಬೇಕು ಎನ್ನುವ ಸಂದೇಶವನ್ನು ಲೋಕಕ್ಕೆ ನೀಡಿದನು.

ಸ್ರ್ತೀಲೋಲುಪನಾದ ರಾವಣನಂತಹ ದುಷ್ಟರನ್ನು ಸಂಹರಿಸಿದ ಪರಾಕ್ರಮಿ. ಹನುಮಂತನಂತಹ ಭಕ್ತನ ಪ್ರೀತಿಗೆ ಸೋತು ಶರಣಾದ ಭಕ್ತಪ್ರಿಯ. ಶಬರಿಗೆ ಕೊನೆಗಾಲದಲ್ಲಿ ತನ್ನ ದರ್ಶನ ಭಾಗ್ಯ ಕರುಣಿಸಿ, ಸಂತೃಪ್ತ ಮರಣ ಲಭಿಸುವಂತೆ ಮಾಡುವ ಮೂಲಕ, ಮುಕ್ತಿ ನೀಡಿದವನು. ಯಾವುದೇ ತಪ್ಪು ಮಾಡದೆ ಪತಿಯ ಕೋಪಕ್ಕೆ ತುತ್ತಾಗಿ, ಶಾಪಗ್ರಸ್ತಳಾಗಿ ಕಲ್ಲಾಗಿದ್ದ ಅಹಲ್ಯೆಗೆ ಕೇವಲ ಪಾದಸ್ಪರ್ಶದಿಂದ ಶಾಪವಿಮೋಚನೆ ಮಾಡಿ, ಪತಿ ಗೌತಮ ಋಷಿಯೊಂದಿಗೆ ದಾಂಪತ್ಯ ಜೀವನವನ್ನು ನಡೆಸಲು ಅನುವು ಮಾಡಿಕೊಟ್ಟವನು.

ಶ್ರೀರಾಮನನ್ನು ನೋಡಲು ಸರಳ ಮತ್ತು ಸುಂದರ. ಆದರೆ ಆತನ ಮಹಿಮೆ ಅಪಾರ. ಎಲ್ಲಾ ವಿಚಾರಗಳಲ್ಲೂ ಮನುಕುಲಕ್ಕೆ ಮಾದರಿಯಾಗಿರುವ ಶ್ರೀರಾಮನ ಜನ್ಮ ದಿನವಾದ ರಾಮನವಮಿಯನ್ನು ಅದ್ಧೂರಿಯಾಗಿ ಆಚರಿಸಿ, ಅವನ ಆದರ್ಶ ಗುಣಗಳನ್ನು ತಕ್ಕಮಟ್ಟಿಗೆ ಅಳವಡಿಸಿಕೊಂಡು, ನಾವು ಮುಂದಿನ ಪೀಳಿಗೆಗೆ ಮಾದರಿ ವ್ಯಕ್ತಿಗಳಾಗಿ ರೂಪುಗೊಂಡು ಸಾರ್ಥಕ ಜೀವನ ನಡೆಸೋಣ.

Categories
ಬೆಂಗಳೂರು ಮಾಹಿತಿ ಸುದ್ದಿ ರಾಜ್ಯ

1 ನೇ ತರಗತಿ ದಾಖಲಾತಿಗೆ 6 ವರ್ಷದ ಮಿತಿ ಸಡಿಲಿಕೆ

1 ನೇ ತರಗತಿ ದಾಖಲಾತಿಗೆ 6 ವರ್ಷದ ಮಿತಿ ಸಡಿಲಿಕೆ
– ರಾಜ್ಯ ಸರ್ಕಾರ ಆದೇಶ: ವಿಧಾನ ಸಭೆಯಲ್ಲಿ ಮಧು ಬಂಗಾರಪ್ಪ ಪ್ರಸ್ತಾಪ
– ಎರಡು ತಿಂಗಳು ಮಾತ್ರ ಸಡಿಲಿಕೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: 2026-27 ನೇ ಸಾಲಿಗೆ 1 ನೇ ತರಗತಿಯ ದಾಖಲಾತಿಗೆ ಕಾದು ಕುಳಿತ್ತಿದ್ದ ಪೋಷಕರಿಗೆ ರಾಜ್ಯ ಸರ್ಕಾರ ಬಿಗ್ ರಿಲೀಫ್ ನೀಡಿದ್ದು, ದಾಖಲಾತಿಗೆ ಆರು ವರ್ಷದ ಮಿತಿ ಸಡಿಲಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ವಿಧಾನ ಮಂಡಲದ ಅಧಿವೇಶನದಲ್ಲಿ ಮಹತ್ವದ ಘೋಷಣೆ ಮಾಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಒಂದನೇ ತರಗತಿಯ ದಾಖಲಾತಿಗೆ ಇದ್ದ ಆರು ವರ್ಷದ ಮಿತಿಯನ್ನು ಎರಡು ತಿಂಗಳು ಸಡಿಲಿಕೆ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

Categories
ಮಲ್ನಾಡ್ ಮಾಹಿತಿ ಸುದ್ದಿ ಶಿವಮೊಗ್ಗ

ರೈತರಿಗೆ ಮೈಲುತುತ್ತ ಭಾರ!

ರೈತರಿಗೆ ಮೈಲುತುತ್ತ ಭಾರ!
– ನುಂಗಲಾರದ ತುತ್ತಾದ ಕೊಳೆರೋಗ ಔಷಧ!
– ಕೆಜಿಗೆ 250 ರೂ.ನಿಂದ 550 ರೂ.ಗೆ ಹೆಚ್ಚಳ

ಅಡಕೆ ಕೊಳೆರೋಗ ನಿಯಂತ್ರಣಕ್ಕೆ ಬಳಸುವ ಬೋರ್ಡ್ ಮಿಶ್ರಣದ ಮೈಲುತುತ್ತ ದರ ದಿಢೀರನೆ ದುಪ್ಪಟ್ಟಾಗಿದೆ. ಕೆಜಿ ಮೈಲುತುತ್ತಕ್ಕೆ ಸುಮಾರು 275 ರೂ. ಹೆಚ್ಚಾಗಿದ್ದು ಅಡಕೆ ಬೆಳೆಗಾರರು ಅಕ್ಷರಶಃ ಕಂಗಾಲಾಗಿದ್ದಾರೆ. ರೋಗಗಳ ನಡುವೆ ಅಡಕೆ ಬೆಳೆ ಸಂರಕ್ಷಣೆ ರೈತರಿಗೆ ಸವಾಲಾಗಿರುವ ಹೊತ್ತಲ್ಲಿ ಮೈಲುತುತ್ತ ದರ ಏರಿಕೆಯಾಗಿದೆ. ಅಡಕೆ ಎಲೆಚುಕ್ಕಿ, ಕೊಳೆ ರೋಗ ನಿಯಂತ್ರಣಕ್ಕೆ ಮೈಲುತುತ್ತ ಔಷಧ ಬಳಸುತ್ತಿರುವ ರೈತರಿಗೆ ದರ ಏರಿಕೆ ನುಂಗಲಾರದ ತುತ್ತಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಅಡಕೆ ಕೊಳೆರೋಗ ನಿಯಂತ್ರಣಕ್ಕೆ ಸರಿಸುಮಾರು 4 ಬಾರಿ ಔಷಧ ಸಿಂಪಡಣೆ ರೈತರಿಗೆ ಅನಿವಾರ ಎಲೆಚುಕ್ಕಿ ರೋಗ ನಿಯಂತ್ರಣಕ್ಕಾಗಿ ಅಡಕೆ ಮರದ ಹೆಡಲಿಗೆ ಬೋರ್ಡೋ ಔಷಧ ಸಿಂಪಡಣೆ ಮಾಡಲಾಗುತ್ತಿದೆ. ಅತೀ ಹೆಚ್ಚು ಮಳೆ ಸುರಿಯುವ ಪ್ರದೇಶದಲ್ಲಿ ರೈತರು ಐದಾರು ಬಾರಿ ಔಷಧ ಸಿಂಪಡಣೆ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಮೈಲುತುತ್ತ ಧಾರಣೆ ಮತ್ತಷ್ಟು ಏರಿಕೆ ಆಗಬಹುದು ಎನ್ನಲಾಗಿದೆ. ಅತೀ ಹೆಚ್ಚು ಅಡಕೆ ಬೆಳೆಯುವ ಪ್ರದೇಶ ಹೊಂದಿರುವ ರೈತರು, ಕ್ವಿಂಟಾಲ್ ಗಟ್ಟಲೆ ಮೈಲುತುತ್ತ ಖರೀದಿಗೆ ಮುಂಗಡ ಹಣ ನೀಡುತ್ತಿದ್ದಾರೆ. ಕೆಜಿಗೆ 250ರಿಂದ 300 ರೂ.ದರದಲ್ಲಿ ದೊರೆಯುತ್ತಿದ್ದ ಮೈಲುತುತ್ತ ಈಗ 600 ರೂ. ಹತ್ತಿರ ದರ ಏರಿಕೆ ಆಗಿದೆ. ಕೇಂದ್ರ, ರಾಜ್ಯ ಸರಕಾರ ತಕ್ಷಣ ದರ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸಬೇಕು ಎಂಬ ಅಗ್ರಹ ವ್ಯಕ್ತವಾಗಿದೆ.

ಕೆಜಿ ಮೈಲುತುತ್ತ ಈಗ ಮಾರುಕಟ್ಟೆಯಲ್ಲಿ 550ರಿಂದ 570 ರೂ.ಗೆ ಮಾರಾಟವಾಗುತ್ತಿದೆ. ಮೈಲುತುತ್ತ ಬೇಡಿಕೆ ದಿನಗಳಾದ ಮಳೆಗಾಲ ಆರಂಭಕ್ಕೆ 4 ತಿಂಗಳ ಮುನ್ನವೇ ಈ ದರದಲ್ಲಿ ಮಾರಾಟವಾಗುತ್ತಿರುವುದರಿಂದ ರೈತರು ಸಹಜವಾಗಿ ಆತಂಕಕ್ಕೀಡಾಗಿದ್ದಾರೆ. ಮೈಲುತುತ್ತ ದರದಲ್ಲಿ ದಿಢೀರ್ ಏರಿಕೆಯನ್ನು ರೈತರನ್ನು ಪ್ರತಿನಿಧಿಸುವ ಸಹಕಾರ ಸಂಸ್ಥೆಗಳು, ಪ್ರತಿನಿಧಿಗಳು ಈವರೆಗೂ ಅಧಿಕೃತವಾಗಿ ಪ್ರಶ್ನಿಸಿಲ್ಲ. ಇನ್ನು ನಿಯಂತ್ರಣ ಔಷಧಕ್ಕೆ ಸರಕಾರದಿಂದ ದೊರೆಯುತ್ತಿದ್ದ ಸಹಾಯಧನ ಇತ್ತೀಚಿನ ವರ್ಷದಲ್ಲಿ ರೈತರಿಗೆ ಸಿಗದಂತಾಗಿದೆ., ರಾಳದ ಬೆಲೆ ಏರುವ ಸಾಧ್ಯತೆ ಹೆಚ್ಚಿದೆ. 1 ಬಾರಿ 1 ಎಕರೆ ಅಡಕೆ ತೋಟದ ಔಷಧ ಸಿಂಪಡಣೆಗೆ ಕುಶಲ ಕಾರ್ಮಿಕನ ಸಂಬಳ, ಔಷಧ ಸಾಮಗ್ರಿ ಹೆಚ್ಚು ಆಗುತ್ತಿದ್ದು ರೈತರ ಬದುಕು ಈಗ ಮೂರಾಬಟ್ಟೆಯಾಗಿದೆ.

Categories
ಮಂಗಳೂರು ಮಾಹಿತಿ ಸುದ್ದಿ ರಾಜ್ಯ

ಬಾರಲ್ಲಿ ಮಕ್ಕಳಿಗೆ ಮದ್ಯ ಕೊಟ್ರೆ ಮಾಲೀಕರು ಅರೆಸ್ಟ್!

ಬಾರಲ್ಲಿ ಮಕ್ಕಳಿಗೆ ಮದ್ಯ ಕೊಟ್ರೆ ಮಾಲೀಕರು ಅರೆಸ್ಟ್!
– ಅಪ್ರಾಪ್ತರ ಮದ್ಯಪಾನಕ್ಕೆ ಹೈಕೋರ್ಟ್ ಬ್ರೇಕ್..!
– ವಯಸ್ಸಿನ ಪರೀಕ್ಷೆ ಕಡ್ಡಾಯ, ನಿಯಮ ಉಲ್ಲಂಘಿಸಿದ್ರೆ ಯಾರಿಗೆ ಶಿಕ್ಷೆ?

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಪಬ್, ವೈನ್ ಶಾಪ್, ಬಾರ್ ಮತ್ತು ಬ್ರೇವರಿಜ್ ಗಳಲ್ಲಿ ಅಪ್ರಾಪ್ತರು ಮದ್ಯಪಾನ ಮಾಡುವ ಪ್ರವೃತ್ತಿಗೆ ಕರ್ನಾಟಕ ಹೈಕೋರ್ಟ್ ಗಂಭೀರ ಕಡಿವಾಣ ಹಾಕಿದೆ. ಅಪ್ರಾಪ್ತರನ್ನು ಮದ್ಯಪಾನದ ವ್ಯಸನದಿಂದ ರಕ್ಷಿಸುವುದು ಆಡಳಿತ ಮಂಡಳಿಯ ನೈತಿಕ ಮತ್ತು ಶಾಸನಾತ್ಮಕ ಕರ್ತವ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಬಾರ್ ಅಂಡ್ ರೆಸ್ಟೋರೆಂಟ್, ಪಬ್ ಅಲ್ಲಿ ಗ್ರಾಹಕರು ಪ್ರವೇಶಿಸುವಾಗಲೇ ಅವರ ವಯಸ್ಸನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಮದ್ಯ ಸರಬರಾಜು ಮಾಡುವ ಸಂದರ್ಭದಲ್ಲೂ ಸಿಬ್ಬಂದಿಗಳು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಆದೇಶಿಸಿದೆ.

ಎಚ್ಚರಿಕೆ ಬೋರ್ಡ್ ಕಡ್ಡಾಯ: ಮದ್ಯ ಕೊಟ್ರೆ ಕೇಸ್

“ಅಪ್ರಾಪ್ತರಿಗೆ ಮದ್ಯ ನೀಡಲಾಗುವುದಿಲ್ಲ” ಎಂಬ ಎಚ್ಚರಿಕೆ ಫಲಕಗಳನ್ನು ಪ್ರತಿಯೊಂದು ಬ್ರಿವರಿಯಲ್ಲಿ ಎದ್ದು ಕಾಣುವಂತೆ ಹಾಕಿರಬೇಕು. ಅಪ್ರಾಪ್ತರು ಮದ್ಯದ ಅಂಗಡಿಗಳ ಒಳಗೆ ಕದ್ದುಮುಚ್ಚಿ ಮದ್ಯಪಾನ ಮಾಡಿದರೂ ಸಹ, ಅದಕ್ಕೆ ಅಲ್ಲಿನ ಆಡಳಿತ ಮಂಡಳಿಯೇ ಸಂಪೂರ್ಣ ಹೊಣೆಯಾಗುತ್ತದೆ. ಈ ಜವಾಬ್ದಾರಿಯಿಂದ ಮಾಲೀಕರು ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

ರಾಜಧಾನಿಯಲ್ಲಿ ಮಕ್ಕಳಿಗೆ ಮದ್ಯ ಕೊಟ್ಟವರ ಮೇಲೆ ಕೇಸ್!

ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಾರ್ ಮಾಲೀಕ ವಿ. ಚಿಟ್ಟಿಬಾಬು ವಿರುದ್ಧ ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡಿದ ಆರೋಪದಡಿ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಮದ್ಯಪಾನದಿಂದ ಅಪ್ರಾಪ್ತರನ್ನು ಕಾಪಾಡುವುದು ಸಮಾಜದ ಹಿತದೃಷ್ಟಿಯಿಂದ ಅತ್ಯಗತ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಆದೇಶ ಇದೀಗ ಬಾರ್ ಮಾಲೀಕರಿಗೆ ನಡುಕ ಹುಟ್ಟಿದೆ.