Categories
ಕರಾವಳಿ ಮಲ್ನಾಡ್ ಮಾಹಿತಿ ಸುದ್ದಿ

ಈಗ ಅಣಬೆ ಕಾಲ: ಅರೋಗ್ಯಯುತ ಆಹಾರ!

ಈಗ ಅಣಬೆ ಕಾಲ: ಅರೋಗ್ಯಯುತ ಆಹಾರ!
– ಮಳೆ ಹಿಡಿದ ಬೆನ್ನಲ್ಲೇ ಎಲ್ಲೆಡೆ ಅಣಬೆ ಸೀಸನ್
– ಅಣಬೆ ಎಲ್ಲರ ನೆಚ್ಚಿನ ಆಹಾರ…ಮಿಸ್ ಮಾಡ್ಕೋಬೇಡಿ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಲೆನಾಡು/ಕರಾವಳಿ: ಆಹಾರ ಪ್ರಿಯರ ಅತ್ಯಂತ ಮೆಚ್ಚಿನ ಹಾಗೂ ಪೌಷ್ಟಿಕಾಂಶದ ಆಹಾರ ಅಣಬೆ. ಬಹು ಬೇಡಿಕೆಯ ಆಹಾರ ಕೂಡ. ಪಟ್ಟಣ, ನಗರ, ಹಳ್ಳಿಗಳಲ್ಲಿ ಅಣಬೆಗೆ ಭಾರೀ ಡಿಮ್ಯಾಂಡ್ ಇದೆ. ಮಳೆ ಶುರುವಾಗುವ ಮುನ್ನ ಕಾಡಲ್ಲಿ ಅಣಬೆ ಹುಟ್ಟುವುದು ಸಾಮಾನ್ಯ. ಈ ಅಣಬೆ ವಿಭಿನ್ನ ವಿಭಿನ್ನ ರೀತಿಯಲ್ಲಿ ಸಿಗುತ್ತವೆ.

ಅರೋಗ್ಯಯುತ ಆಹಾರ..!

ಮಾನವನ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ, ಜೀರ್ಣಕ್ರಿಯೆಯನ್ನು ಸುಧಾರಿಸುವ, ತೂಕ ಇಳಿಕೆಗೆ ನೆರವಾಗುವ ಮತ್ತು ಮೂಳೆಗಳನ್ನು ಬಲಪಡಿಸುವ ವಿಟಮಿನ್ ಡಿ, ಬಿ ಹಾಗೂ ಪ್ರೋಟೀನ್ ಅನ್ನು ಸಮೃದ್ಧವಾಗಿ ಹೊಂದಿರುವ ಪದಾರ್ಥವಾದ ಅಣಬೆಯು ಇದೀಗ ಮಲೆನಾಡಿನಲ್ಲಿ ಸಂಭವಿಸಿದ ತೀವ್ರ ಮಳೆಯಿಂದಾಗಿ ತಲೆಯೆತ್ತಿ ನಿಂತಿದೆ. ಮಳೆಯ ಪರಿಣಾಮವಾಗಿ ಮಲೆನಾಡಿನ ನೆಲವು ತಂಪಾಗಿರುವ ಕಾರಣ ಅಣಬೆಗಳು ಮಣ್ಣಿನ ಮೇಲೆ ಈಗಾಗಲೇ ಹುಟ್ಟಿಕೊಂಡಿದ್ದು, ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರು ಮತ್ತು ಅದರ ರುಚಿಗೆ ಮಾರುಹೋಗಿರುವ ಆಹಾರಪ್ರಿಯರಿಗೆ ಬಹುಬೇಗ ಲಭಿಸಿದಂತಾಗಿದೆ. ಕೇವಲ ಮಲೆನಾಡು ಅಷ್ಟೇ ಅಲ್ಲದೆ ರಾಜ್ಯದ ಹಲವಾರು ಭಾಗಗಳಲ್ಲಿ ಇದಕ್ಕೆ ಬಹು ಬೇಡಿಕೆಯಿದ್ದು ಈ ಬಾರಿ ಎಲ್ಲರಿಗೂ ಬೇಗನೆ ಸಿಗುವಂತಾಗಿದೆ.

ಎಲ್ಲಾ ಅಣಬೆಗಳು ತಿನ್ನೋಕೆ ಆಗಲ್ಲ..!

ಮತ್ತೊಂದು ಆತಂಕಕಾರಿ ಸಂಗತಿ ಎಂದರೆ ಅಣಬೆಗಳಲ್ಲಿ ವಿಷಕಾರಿ ಅಣಬೆಗಳು ಕೂಡ ಸೇರಿಕೊಂಡಿವೆ. ಎಲ್ಲಾ ಅಣಬೆಗಳು ತಿನ್ನೋಕೆ ಅಲ್ಲ. ವಿಷ ಅಣಬೆ ಇವೆ. ಜೀವ ಹಾನಿ, ಫುಡ್ ಪಾಯಿಸನಿಂಗ್ ಕೂಡ ಆಗಲಿದೆ. ಅಣಬೆಗಳನ್ನು ಮಾರಾಟ ಮಾಡುವವರು ಮತ್ತು ಅದನ್ನು ಖರೀದಿಸುವವರು ಜಾಗೃತಿಯಿಂದ ನೋಡಿಕೊಂಡು ತೆಗೆದುಕೊಳ್ಳಬೇಕು. ಹೆಗ್ಗಲು ಅಣಬೆ, ಎಣ್ಣೆ ಅಣಬೆ, ಚುಳ್ಳ ಅಣಬೆ, ಹೈಗ ಅಣಬೆ ಸೇರಿದಂತೆ ಅನೇಕ ಅಣಬೆಗಳು ಈಗ ಸಿಗುತ್ತಿವೆ.

Categories
ಮಂಗಳೂರು ಮಾಹಿತಿ ಸುದ್ದಿ ರಾಜ್ಯ

ಗ್ಯಾಸ್ ಬಳಸದಿದ್ದರೆ ಎಲ್‌ಪಿಜಿ ಪೂರೈಕೆ ಸ್ಥಗಿತ!?

ಗ್ಯಾಸ್ ಬಳಸದಿದ್ದರೆ ಎಲ್‌ಪಿಜಿ ಪೂರೈಕೆ ಸ್ಥಗಿತ!?
– ಕೇಂದ್ರ ಸರ್ಕಾರದಿಂದ ಜನತೆಗೆ ಸರ್ಕಾರದಿಂದ ಎಚ್ಚರಿಕೆ
– ಪಿ. ಎನ್. ಜಿ ಗ್ಯಾಸ್ ಬಳಕೆದಾರರಿಗೆ ಅಲರ್ಟ್

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಕೇಂದ್ರ ಸರ್ಕಾರ ಅಗತ್ಯವಿರುವಷ್ಟು ಇಂಧನ ಹಾಗೂ ಎಲ್‌ಪಿಜಿ ಸಂಗ್ರಹವಿದೆ ಎಂದು ಹೇಳಿಕೆ ನೀಡುತ್ತಿದ್ದರೂ ಎಲ್‌ಪಿಜಿ ಬುಕ್ ಮಾಡಿದ ಹಲವು ದಿನಗಳ ಬಳಿಕ ಸಿಲಿಂಡರ್‌ಗಳು ಸಿಗುತ್ತಿವೆ. ಇದೆಲ್ಲದರ ನಡುವೆ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಒಂದುವೇಳೆ ನಿಮ್ಮ ಮನೆಯಲ್ಲಿ ಪೈಪ್ಸ್ ಗ್ಯಾಸ್ (ಪಿಎನ್ ಜಿ) ಕನೆಕ್ಷನ್ ಇದ್ದರೂ ನೀವು ಅದನ್ನು ಬಳಸದಿದ್ದರೆ ನಿಮ್ಮ ಎಲ್‌ಪಿಜಿ ಪೂರೈಕೆ ಕೂಡ ಕಟ್ ಆಗುತ್ತದೆ. ಪಿಎನ್‌ಜಿ ಹಾಗೂ ಎಲ್‌ಪಿಜಿ ಎರಡನ್ನೂ ಬಳಸುವಂತಿಲ್ಲ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ನಿಮ್ಮ ಏರಿಯಾದಲ್ಲಿ ಪೈಪ್‌ಲೈನ್ ಇದ್ದರೂ ನೀವು ಸಂಪರ್ಕ ಪಡೆಯದಿದ್ದರೆ 3 ತಿಂಗಳೊಳಗೆ ಸಂಪರ್ಕ ಪಡೆಯಲು ಗಡುವು ನೀಡಲಾಗಿದೆ. ಈ ಕುರಿತು ನೋಟಿಸ್‌ ಮೂಲಕ ಆ ಮನೆಯ ಗಮನಕ್ಕೆ ತಂದ 3 ತಿಂಗಳ ನಂತರ ಆ ಮನೆಗಳಿಗೆ ಎಲ್‌ಪಿಜಿ ಪೂರೈಕೆಯನ್ನು ನಿಲ್ಲಿಸಲಾಗುತ್ತದೆ.

ಗ್ರಾಹಕರು ಪೈಪ್ಸ್ ನೈಸರ್ಗಿಕ ಅನಿಲ (PNG)ದ ಕನೆಕ್ಷನ್ ಇದ್ದರೂ ಬಳಸದಿದ್ದರೆ 3 ತಿಂಗಳ ನಂತರ ಆ ಮನೆಗಳಿಗೆ LPG ಸಿಲಿಂಡರ್‌ಗಳ ಪೂರೈಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ. ಪೈಪ್‌ಲೈನ್ ಗ್ಯಾಸ್ ಜಾಲದ ವಿಸ್ತರಣೆಯನ್ನು ವೇಗಗೊಳಿಸಲು ಮತ್ತು ಒಂದೇ ಇಂಧನ ಮೂಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಆದೇಶ ಹೊರಡಿಸಲಾಗಿದೆ.

ಮನೆಗಳು ಮತ್ತು ವಾಣಿಜ್ಯ ಸಂಸ್ಥೆಗಳು PNG ಅನ್ನು ಅಳವಡಿಸಿಕೊಳ್ಳಲು ಸರ್ಕಾರ ಪ್ರೋತ್ಸಾಹಿಸುತ್ತಿದೆ. ಇದನ್ನು ಪೈಪ್‌ಲೈನ್‌ಗಳ ಮೂಲಕ ಅಡುಗೆಮನೆಯ ಬರ್ನ‌್ರಗಳಿಗೆ ನೇರವಾಗಿ ಸರಬರಾಜು ಮಾಡಲಾಗುತ್ತದೆ. ಇದು ಗ್ಯಾಸ್ ಬುಕಿಂಗ್ ರೀಫಿಲ್ಲಿಂಗ್ ಅಗತ್ಯವನ್ನು ನಿವಾರಿಸುತ್ತದೆ. ಪೈಪ್‌ಲೈನ್‌ಗಳಿಲ್ಲದ ಪ್ರದೇಶಗಳಿಗೆ LPG ಅನ್ನು ಪೂರೈಕೆ ಮಾಡಲಾಗುತ್ತದೆ.

ಪೈಪ್‌ಲೈನ್‌ಗಳನ್ನು ಹಾಕಲು ಅನುಮತಿಗಳನ್ನು ಇನ್ನು ನಿಗದಿತ ಸಮಯದೊಳಗೆ ನೀಡಬೇಕು. ಒಂದುವೇಳೆ ನೀವು ಅನುಮತಿ ನೀಡದಿದ್ದರೆ ಅವುಗಳನ್ನು ಅನುಮೋದಿಸಲಾಗಿದೆ ಎ೦ದೇ ಪರಿಗಣಿಸಲಾಗುತ್ತದೆ. ಅಧಿಕಾರಿಗಳು ಸೂಚಿಸಿದ ಶುಲ್ಕಗಳನ್ನು ಮೀರಿ ಹೆಚ್ಚುವರಿ ಶುಲ್ಕಗಳನ್ನು ವಿಧಿಸುವುದನ್ನು ನಿಷೇಧಿಸಲಾಗಿದೆ. ವಸತಿ ಸಂಕೀರ್ಣಗಳಲ್ಲಿ 3 ಕೆಲಸದ ದಿನಗಳಲ್ಲಿ ಒಳಗೆ ಪ್ರವೇಶವನ್ನು ನೀಡಬೇಕು, ಪಿಎನ್‌ಜಿಗೆ ಸಂಬಂಧಿಸಿದ ಯಾವುದೇ ಅರ್ಜಿಗಳನ್ನು ತಿರಸ್ಕರಿಸುವ೦ತಿಲ್ಲ ಎ೦ದು ಕೂಡ ಸರ್ಕಾರ ಆದೇಶಿಸಿದೆ.

Categories
ಬೆಂಗಳೂರು ಮಾಹಿತಿ ಸುದ್ದಿ ರಾಜ್ಯ

ಗ್ರಾಮ ಪಂಚಾಯತ್ ಚುನಾವಣೆ ಸದ್ಯಕ್ಕೆ ಡೌಟು!

ಗ್ರಾಮ ಪಂಚಾಯತ್ ಚುನಾವಣೆ ಸದ್ಯಕ್ಕೆ ಡೌಟು!
– ಮೀಸಲಾತಿ ಪ್ರಕಟಣೆಗೆ ಸಮಯ ಕೋರಿದ ರಾಜ್ಯ ಸರ್ಕಾರ
– ಪ್ರತಿ ಗ್ರಾಮದಲ್ಲೂ ಭಾರೀ ಪೈಪೋಟಿ ಸಾಧ್ಯತೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆಗೆ ರಾಜ್ಯ ಸರ್ಕಾರ ಸಿದ್ಧ ಆಗುತ್ತಿದ್ದು, ಮೀಸಲಾತಿ ಪ್ರಕಟಣೆಗೆ ಸಮಯ ಕೋರಿದೆ. ರಾಜ್ಯದಲ್ಲಿ 5,950 ಗ್ರಾಮ ಪಂಚಾಯಿತಿಗಳಿದ್ದು ಅವುಗಳ ಸದಸ್ಯರ ಅಧಿಕಾರ ಅವಧಿ ಫೆಬ್ರವರಿಯಲ್ಲಿ ಮುಗಿದಿದೆ. ರಾಜ್ಯದಲ್ಲಿ ಒಟ್ಟು 96 ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ. ಆದ್ದರಿಂದ, ಹೊಸದಾಗಿ ಜನಸಂಖ್ಯೆಗೆ ಅನುಗುಣವಾಗಿ ಒಟ್ಟು ಸದಸ್ಯರ ಸಂಖ್ಯೆ ಗುರುತಿಸಲು ನಾಲ್ಕು ವಾರ ಬೇಕು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಲಿಖಿತ ಮನವಿ ಮಾಡಿದೆ. ಇದರಿಂದ ಚುನಾವಣೆ ಇನ್ನು ಎರಡು ತಿಂಗಳು ಡೌಟು.

ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ಮೀಸಲಾತಿ ಪ್ರಕಟಣೆಗೆ ಸಮಯ ಬೇಕಿದೆ. ಜತೆಗೆ ಸ್ಥಳೀಯ ಸಂಸ್ಥೆ ಚುನಾವಣೆ ಇರುವುದರಿಂದ ಯಾವಾಗ ದಿನಾಂಕ ನಿಗದಿ ಆಗಲಿದೆ ಎಂಬ ಅನುಮಾನ ಮೂಡಿದೆ. ಅಲ್ಲದೆ ಮಳೆಗಾಲದಲ್ಲಿ ಚುನಾವಣೆ ನಡೆಸಲು ಸಾಧ್ಯ ಇಲ್ಲ. ಅವಧಿ ಮುಗಿದ ಬಳಿಕ 6 ತಿಂಗಳು ಸಮಯ ಇರುವುದರಿಂದ ಮಳೆ ಮುಗಿದ ಬಳಿಕ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಪ್ರತಿ ಗ್ರಾಮದಲ್ಲೂ ಭಾರೀ ಪೈಪೋಟಿ ಸಾಧ್ಯತೆಗ್ರಾಮ ಪಂಚಾಯತ್ ಚುನಾವಣೆ ಸ್ಥಳೀಯವಾಗಿ ಮಹತ್ವದ ಚುನಾವಣೆ. ಈ ನಿಟ್ಟಿನಲ್ಲಿ ಸ್ಥಳೀಯರು ಚುನಾವಣೆ ನಿಲ್ಲಲು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಅಲ್ಲದೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಬೆಂಬಲಿತರು ಸಿದ್ಧತೆ ನಡೆಸುತ್ತಿದ್ದಾರೆ. ಇಲ್ಲಿ ಪಕ್ಷದ ಜತೆಗೆ ವಯುಕ್ತಿಕ ವರ್ಚಸ್ಸು, ಸೇವೆ, ಹೆಸರು ಕೈ ಹಿಡಿಯಲಿದೆ.

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಇಂದಾವರ ರಸ್ತೆ ಕಥೆ ಕೇಳೋರಿಲ್ಲ!

ಇಂದಾವರ ರಸ್ತೆ ಕಥೆ ಕೇಳೋರಿಲ್ಲ!
– ತೀರ್ಥಹಳ್ಳಿ ಪಟ್ಟಣದ ಪಕ್ಕದ ರಸ್ತೆ ದುರಸ್ತಿಗಾಗಿ ಗ್ರಾಮಸ್ಥರ ಪಟ್ಟು
– ರಸ್ತೆ ಬೇಕು ರಸ್ತೆ: ಶಾಸಕರು, ಸರ್ಕಾರಕ್ಕೆ ಜನರ ಅಗ್ರಹ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿಯಿಂದ ಕೇವಲ 1.5 ಕಿಲೋಮೀಟರ್ ನಷ್ಟು ಅಂತರದಲ್ಲಿರುವ ಇಂದಾವರ ಪ್ರದೇಶದ ರಸ್ತೆಯು ತೀವ್ರ ಹದಗೆಟ್ಟಿದ್ದು, ಇಲ್ಲಿ ಸಂಚರಿಸುವ ವಾಹನಗಳು ಮತ್ತು ಇಲ್ಲಿಂದ ಪಟ್ಟಣಕ್ಕೆ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ತೀರ್ಥಹಳ್ಳಿಯ ಮುಖ್ಯರಸ್ತೆ‌ಯಿಂದ‌ ಬೆಟ್ಟಮಕ್ಕಿ ಮಾರ್ಗವಾಗಿ ಸಂಚರಿಸುವ ಬೈಪಾಸ್ ರಸ್ತೆ ಕೂಡ ಆಗಿದೆ. ಅಲ್ಲದೆ ತೀರ್ಥಹಳ್ಳಿಯ ಪಟ್ಟಣದ ರಸ್ತೆಗಳು ಬ್ಲಾಕ್ ಆಗಿದ್ದ ಸಂದರ್ಭದಲ್ಲಿ ಇದೇ ಮಾರ್ಗವಾಗಿ ಹಲವಾರು ವಾಹನಗಳು ಸಂಚರಿಸಿದ್ದವು ಎನ್ನಲಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಇಲ್ಲಿನ ಶಾಸಕರು ಒಂದು ಕೋಟಿ ಅನುದಾನವನ್ನು ಮಂಜೂರು ಮಾಡಿಸಿದ್ದು, ಇದರಿಂದ ಕೇವಲ ಬದ್ನೇಹಿತ್ಲು ಬಳಿ ಕಾಂಕ್ರೀಟ್ ರಸ್ತೆ, ಒಂದು ಕಿರು ಸೇತುವೆ ಮತ್ತು ಕೊರೋಡಿ ಬಳಿ ಒಂದು ಮೋರಿಯ ನಿರ್ಮಾಣ ಕಾರ್ಯ ಮಾತ್ರ ನಡೆದಿದೆ. ಅಲ್ಲದೆ ಸುಮಾರು 20 ವರ್ಷಗಳ ಹಿಂದೆ ನ್ಯಾಷನಲ್ ಕಸ್ಟ್ರಕ್ಷನ್ ರವರು ಇಂದಾವರ ಮುಖ್ಯರಸ್ತೆಯನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಾಣ ಮಾಡಿರುವುದರ ಪರಿಣಾಮವಾಗಿ ಕೆಲವು ಕಡೆಗಳಲ್ಲಿ ಇನ್ನೂ ಸುಸ್ಥಿತಿಯಲ್ಲಿರುವುದು ಆಶಾದಾಯಕವಾಗಿದೆ.

ಹಲವು ಕಡೆಗಳಲ್ಲಿ ತುಂಬಾ ಗುಂಡಿಗಳು ಬಿದ್ದಿರುವುದರಿಂದ ಸ್ಥಳೀಯರು ಓಡಾಡಲು ಕಷ್ಟ ಪಡುವಂತಾಗಿದೆ. ಅಲ್ಲದೆ ಈಗಾಗಲೇ ಮಳೆ ಸಂಭವಿಸಿದ್ದು, ಇನ್ನೆರಡು ತಿಂಗಳು ಕಳೆದರೆ ಸಂಪೂರ್ಣವಾಗಿ ಮಳೆಗಾಲ ಪ್ರಾರಂಭಗೊಳ್ಳುವುದರಿಂದ ಅಷ್ಟರೊಳಗೆ ಶಾಸಕರು, ಸ್ಥಳೀಯ ಪ್ರತಿನಿಧಿಗಳು ರಸ್ತೆಯನ್ನು ದುರಸ್ತಿಗೊಳಿಸಿ ಸಹಕರಿಸಬೇಕೆಂದು ಇಂದಾವರ ಹಾಗೂ ಸುತ್ತಮುತ್ತಲ ಗ್ರಾಮಸ್ಥರ ಪರವಾಗಿ ಇಂದಾವರದ ವಿನಯ್ ಅವರು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಅಮರಪಾಲಿ ಸುರೇಶ್ ವಿರುದ್ಧ ನಡೆದ ಸಂಚಿನ ಕುರಿತು ಪತ್ರಿಕಾ ಪ್ರಕಟಣೆ

ಅಮರಪಾಲಿ ಸುರೇಶ್ ವಿರುದ್ಧ ನಡೆದ ಸಂಚಿನ ಕುರಿತು ಪತ್ರಿಕಾ ಪ್ರಕಟಣೆ

ಮಾನವೀಯತೆ ಹಾಗೂ ಸಂಕಷ್ಟಕ್ಕೆ ಸ್ಪಂದಿಸಿದಕ್ಕೆ ನಮ್ಮಗಳಿಗಾದ ಮೋಸ ಹಾಗೂ ವಂಚನೆಯ ಪ್ರಕರಣ ಇದು: ಅನುದೀಪ್ (ಪುಟ್ಟ) ಕುಶಾವತಿ

ಪತ್ರಿಕಾ ಪ್ರಕಟಣೆ
ನೂರು ಕೋಟಿ ವಂಚನೆ ಎಂಬ ಪ್ರಕರಣದ ವಿಚಾರವಾಗಿ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಪ್ರಸಾರವಾದ ದುರುದ್ದೇಶ ಪೂರಿತ ಆರೋಪಗಳ ಬಗ್ಗೆಅನುದೀಪ್ (ಪುಟ್ಟ) ಕುಶಾವತಿ ಸ್ಪಷ್ಟನೆ ನೀಡಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ನನ್ನ ಹೆಂಡತಿಯ ಸಹೋದರಿಯಾದ ಶ್ರೀಮತಿ ಯಶೋಧ ರಾಜ್ ಅವರು ತೀರ್ಥಹಳ್ಳಿಯ ಅರಳಿಸರ ಮೂಲದ ಬೆಂಗಳೂರು ನಿವಾಸಿಯಾಗಿದ್ದು, ರೇ ಎಜುಕೇಶನ್ ಟ್ರಸ್ಟ್ ಒಂದನ್ನು ರಚಿಸಿಕೊಂಡು ಕಾಲೇಜನ್ನು ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆರ್ಥಿಕ ದುಸ್ಥಿತಿಯಲ್ಲಿರುವ ಆ ಸಂಸ್ಥೆಗೆ ನಾನು ಅನೇಕ ಬಾರಿ ಆರ್ಥಿಕ ಸಹಾಯ ಮಾಡಿರುತ್ತೇನೆ. ಈ ವಿಚಾರವಾಗಿ ಸಂಸ್ಥೆಗೆ ದೇಣಿಗೆ ನೀಡುವವರಿದ್ದರೆ ತಿಳಿಸುವಂತೆ ಯಶೋಧರವರು ನನ್ನಲ್ಲಿ ಪದೇಪದೇ ಮನವಿ ಮಾಡಿಕೊಂಡಿದ್ದರಿಂದ ನಾನು ಅಮ್ರಪಾಲಿ ಸುರೇಶ್ ಅವರಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದೆ.

ತಾಲೂಕಿನಾದ್ಯಂತ ಸಂಪರ್ಕವಿರುವ ಹಾಗೂ ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸ್ಪಂದಿಸುವ ಸುರೇಶಣ್ಣನಿಂದ ಟ್ರಸ್ಟಿಗೆ ಸಹಾಯವಾಗಬಹುದು ಎಂದು ನನ್ನ ಉದ್ದೇಶವಾಗಿತ್ತು. ಪದೇ ಪದೇ ನಾನು ನೆನಪಿಸುತ್ತಿದ್ದರಿಂದ ಸುರೇಶಣ್ಣನು ತನ್ನ ಸಂಪರ್ಕದಲ್ಲಿದ್ದ ಹಾಗೂ ಗೋಶಾಲೆ ಪ್ರಾರಂಭಿಸಲು ಒಂದು ಟ್ರಸ್ಟ್ ಅನ್ನು ರಚಿಸಿಕೊಂಡಿದ್ದ ವೆಂಕಟರಮಣ ಭಟ್ಟರನ್ನು ನನಗೆ ಪರಿಚಯಿಸಿದರು. ಇವರು ತಮ್ಮ ಟ್ರಸ್ಟಿಗೆ ಕೆಲವು ಸಂಸ್ಥೆಗಳಿಂದ ದೇಣಿಗೆ ಪಡೆಯುವ ಪ್ರಯತ್ನದಲ್ಲಿದ್ದಾರೆ. ನಿಮ್ಮ ಅತ್ತಿಗೆಗೆ ಸಹಾಯವಾಗುವುದಾದರೆ ಇವರ ಸಲಹೆ ಸಹಕಾರ ಪಡೆಯಲಿ ಎಂದು ಹೇಳಿದಾಗ ನಾನು ಕಾನ್ಫರೆನ್ಸ್ ಕಾಲ್ ಮುಖಾಂತರ ಮೊದಲ ಬಾರಿಗೆ ನನ್ನ ಅತ್ತಿಗೆಗೆ ಅಮ್ರಪಾಲಿ ಸುರೇಶ್ ಮತ್ತು ವೆಂಕಟರಮಣ ಭಟ್ ರವರನ್ನು ಪರಿಚಯಿಸಿದೆ‌. ನಂತರ ನನ್ನ ತಂದೆಯ ಆರೋಗ್ಯ ವಿಚಾರಿಸಲು ಬಂದ ಯಶೋಧರವರು ವೆಂಕಟರಮಣ ಭಟ್ ಮತ್ತು ಅಮ್ರಪಾಲಿ ಸುರೇಶ್ ರವರನ್ನು ಭೇಟಿ ಮಾಡಿಸುವಂತೆ ಒತ್ತಾಯಿಸಿದ್ದರಿಂದ ಹೋಟೆಲ್ ಒಂದರಲ್ಲಿ ಭೇಟಿ ಮಾಡಿಸಿದೆ.

ಪಕ್ಕಾ ದಾಖಲೆ ಹಾಗೂ ಯೋಜನಾ ವರದಿಯನ್ನು ತಯಾರಿಸಿ ಕಂಪನಿಯ ಒಪ್ಪಿಗೆ ಪಡೆಯುವ ಪ್ರಕ್ರಿಯೆಯ ಬಗ್ಗೆ ತಿಳಿಸಿ ಸಂಪರ್ಕಿಸಬೇಕಾದ ವ್ಯಕ್ತಿಯ ಫೋನ್ ನಂಬರ್ ನೀಡಿದರು. ನಂತರ ಕಂಪನಿಯ ಜೊತೆ ನೇರ ಸಂಪರ್ಕದಲ್ಲಿದ್ದ ಯಶೋಧರವರು ಒಮ್ಮೆ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರದ್ಯುಮ್ಮರವರನ್ನು ತಮ್ಮ ಕಾಲೇಜಿಗೆ ಕರೆಸಿಕೊಂಡು ದಾಖಲೆಗಳನ್ನು ತೋರಿಸಿ ಇರುವುದನ್ನು ಬಿಟ್ಟರೆ ಸುರೇಶಣ್ಣರವರಾಗಲಿ, ವೆಂಕಟರಮಣ ಭಟ್ಟರವರಾಗಲಿ ಇದುವರೆಗೆ ಆಕೆಯ ಸಂಸ್ಥೆಗೆ ಭೇಟಿ ನೀಡಿ ಆಮಿಷ ಒಡ್ಡಿದ್ದಾರೆ ಅಥವಾ ಹಣ ಪಡೆದಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ. ಬದಲಾಗಿ ಆಕೆಗೆ ದೇಣಿಗೆ ನೀಡುವ ಕಂಪನಿಗೆ ಫೆಸಿಲಿಟೆಟಿಂಗ್ ಫೀಸ್ ನೀಡಲು ಕೂಡ ಟ್ರಸ್ಟ್ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದೆ ಹಣ ಹೊಂದಿಸಲು ನನ್ನಲ್ಲಿ ವಿನಂತಿಸಿದರು.

ಆ ಸಂದರ್ಭದಲ್ಲಿ ನನ್ನ ತಂದೆಯವರು ತೀರಿಕೊಂಡಿದ್ದರಿಂದ ನನ್ನ 5 ಲಕ್ಷ ಸೇರಿದಂತೆ ನನ್ನ ಸ್ನೇಹಿತರಿಂದ ಒಟ್ಟು 15ಲಕ್ಷ ಹಣವನ್ನು ಅವರ ಮನವೊಲಿಸಿ ಬಡ್ಡಿ ರಹಿತವಾಗಿ ನನ್ನ ಅತ್ತಿಗೆಗೆ ಒಂದು ತಿಂಗಳ ಅವಧಿಯ ಕೈಗಡ ಪಡೆದು ಸಂಪೂರ್ಣ ನನ್ನದೇ ಜವಾಬ್ದಾರಿಯ ಮೇರೆಗೆ ಬೆಂಗಳೂರಿಗೆ ಹೋಗಿ ಆಕೆಯ ತಮ್ಮ ಸುನಿಲನಿಗೆ ದಿನಾಂಕ 4.12.2025 ರಂದು ನಗದು ಹಣವನ್ನು ನೀಡಿ ಆಕೆಯ ಖಾತೆಗೆ ಜಮಾ ಮಾಡಿಸಿರುತ್ತೇವೆ. ಎರಡು, ಮೂರು ವಾರಗಳ ನಂತರ ನಾನು ನನ್ನ ಅತ್ತಿಗೆ ಪಡೆದ ಹಣವನ್ನು ವಾಪಾಸ್ಸು ನೀಡುವಂತೆ ಕೇಳಿಕೊಂಡಾಗ ಪೂರಕವಾದ ಉತ್ತರ ನೀಡದೆ ಹಾರಿಕೆಯ ಮಾತನಾಡಿದರು. ಒಂದು ದಿನ ಅಚಾನಕ್ಕಾಗಿ ಹೆಣ್ಣೂರು ಪೊಲೀಸ್ ಸ್ಟೇಷನ್ ನಲ್ಲಿ ಸಹಾಯ ಪಡೆದವರ ವಿರುದ್ಧವೇ ದೂರ ದಾಖಲಿಸಿರುವುದು ನನ್ನ ಮನಸ್ಸಿಗೆ ನೋವಾಗಿದೆ.

ಸಮಾಜದಲ್ಲಿ ಗೌರವಾ – ಘನತೆಯನ್ನು ಹೊಂದಿರುವ ಅಮ್ರಪಾಲಿ ಸುರೇಶ್, ವೆಂಕಟರಮಣ ಭಟ್, ಪುದ್ಯುಮ್ಮ ರವರುಗಳು ಯಶೋಧರವರಿಗೆ ಮೋಸ ವಂಚನೆ ಮಾಡಿದ್ದಾರೆ ಎಂಬುದು ಶುದ್ಧ ಸುಳ್ಳು. ಇದಕ್ಕಿಂತಲೂ ಮುಖ್ಯವಾಗಿ, ಈ ಪ್ರಕರಣದ ಹಿಂದೆ ಸಂಚು ರೂಪಿಸಿ ಸುಳ್ಳು ಪ್ರಕರಣ ದಾಖಲಿಸಲು ಪ್ರೇರೇಪಿಸಿದ ರಾಜಕೀಯ ಮಹಾನ್ ವ್ಯಕ್ತಿಯ ಮುಖವೂ ಬಹಿರಂಗವಾಗಬೇಕು. ಜನರ ಸೇವೆ ಮಾಡುವ ತಮ್ಮ ಅಮೂಲ್ಯ ಸಮಯವನ್ನು ಭರಿಸಿದ ಸಂಪನ್ಮೂಲಗಳ ಬಗೆಗೆ, ಸತ್ಯ ಹೊರಬರುವಂತೆ ಈ ಪ್ರಕರಣದ ಬಗ್ಗೆ, ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಯಬೇಕು ಎಂದು ನಾನು ಆಗ್ರಹಿಸುತ್ತೇನೆ.
ಅಮ್ರಪಾಲಿ ಸುರೇಶ್, ವೆಂಕಟರಮಣ ಭಟ್, ಪ್ರುದ್ಯುಮ್ಮ ಮತ್ತು ಬೆಂಗಳೂರಿನಲ್ಲಿ ವಾಸಿಸುವ ಯಶೋಧರ ನಡುವೆ ಯಾವುದೇ ವ್ಯವಹಾರಗಳು ನಡೆದಿಲ್ಲ ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿರುವ ನಾನು ಎಲ್ಲಿ ಬೇಕಾದರು-ಯಾವ ದೇವರ ಮುಂದೆ ಬೇಕಾದರೂ ಪ್ರಮಾಣ ಮಾಡಿ ಹೇಳಬಲ್ಲೆ.

– ಅನುದೀಪ್ (ಪುಟ್ಟ), ಕುಶಾವತಿ

Categories
ಮಾಹಿತಿ ಸುದ್ದಿ ರಾಜ್ಯ ರಾಷ್ಟ್ರೀಯ ವಾರ್ತೆ

114 ದೇಶಗಳಲ್ಲಿ ಶಾಲಾ ಮಕ್ಕಳಿಗೆ ಮೊಬೈಲ್ ಬ್ಯಾನ್!

114 ದೇಶಗಳಲ್ಲಿ ಶಾಲಾ ಮಕ್ಕಳಿಗೆ ಮೊಬೈಲ್ ಬ್ಯಾನ್!
– ಮೊಬೈಲ್ ಇಂದ ಅನಾರೋಗ್ಯ, ಶಿಕ್ಷಣ ಹಿನ್ನಡೆ
– ಯುವ ಜನರ ಬದುಕು ಮೊಬೈಲ್ ಚಟಕ್ಕೆ ಬಲಿ!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನವದೆಹಲಿ: ಇಂದಿನ ತಲೆಮಾರಿನ ಮಕ್ಕಳು ಮೊಬೈಲ್ ಚಟಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಅದರಿಂದ ಮಕ್ಕಳನ್ನು ಹೊರತರುವ ನಿಟ್ಟಿನಲ್ಲಿ ಸುಮಾರು 114 ದೇಶಗಳು ಶಾಲಾ ಮಕ್ಕಳು ಮೊಬೈಲ್ ಬಳಸುವುದನ್ನು ನಿಷೇಧಿಸಿದೆ.‌ ಮಕ್ಕಳು ಮೊಬೈಲ್ ಚಟಕ್ಕೆ ದಾಸರಾಗಿರುವ ಕಾರಣ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಸೈಬರ್ ಬುಲ್ಲಿಂಗ್ ಎಲ್ಲಕ್ಕಿಂತ ಹೆಚ್ಚಾಗಿ ಮಾನಸಿಕ ಅನಾರೋಗ್ಯಕ್ಕೆ ಒಳಗಾಗುವಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.‌ ಕರ್ನಾಟಕ ಸೇರಿ ಈಗಾಗಲೇ ಜಗತ್ತಿನ ಶೇಕಡ 58 ರಷ್ಟು ದೇಶಗಳು ಶಾಲೆಗಳಲ್ಲಿ ಮಕ್ಕಳು ಮೊಬೈಲ್ ಬಳಸುವುದನ್ನು ನಿಷೇಧಿಸಿದೆ ಎಂದು ಯುನೆಸ್ಕೊದ ಜಾಗತಿಕ ಶಿಕ್ಷಣ ನಿಗಾ ಸಮಿತಿಯು ವರದಿಯನ್ನು ಪ್ರಕಟಿಸಿದೆ.

ಕರ್ನಾಟಕದಲ್ಲೂ 14 ವರ್ಷದ ಮಕ್ಕಳಿಗೆ ಮೊಬೈಲ್ ನಿಷೇಧ

ಕರ್ನಾಟಕ ಸರ್ಕಾರವು ಕೂಡ 14 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸುವ ಕುರಿತು ಚರ್ಚೆ ನಡೆಸಿದ್ದು, ಬಜೆಟ್ ಸಂದರ್ಭದಲ್ಲಿ ಈ ವಿಚಾರದ ಕುರಿತು ಪ್ರಸ್ತಾಪಿಸಿದೆ. ಸಂಪೂರ್ಣವಾಗಿ ಮೊಬೈಲ್ ಬಳಕೆಯನ್ನು ನಿಷೇಧಿಸಲು ಕಷ್ಟಸಾಧ್ಯವಾಗುವುದರಿಂದ ಕೇವಲ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸಲು ಘೋಷಿಸಿದೆ. ಇದರ ಪರಿಣಾಮವಾಗಿ ಇಂತಹ ನಿರ್ಣಯವನ್ನು ಕೈಗೊಂಡಿರುವ ದೇಶದ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಗೆ ಕರ್ನಾಟಕವು ಪಾತ್ರವಾಗಿದೆ. ಕರ್ನಾಟಕವನ್ನು ಮಾದರಿಯಾಗಿಸಿಕೊಂಡ ತೆಲಂಗಾಣ ಸರ್ಕಾರವೂ ಕೂಡ ಇಂತಹದೇ ಘೋಷಣೆಯನ್ನು ಹೊರಡಿಸಿದೆ ಎನ್ನುವ ಮಾಹಿತಿ ಲಭಿಸಿದೆ.

ಯುವ ಜನರ ಬದುಕು ಮೊಬೈಲ್ ಚಟಕ್ಕೆ ಬಲಿ!

ಯುವ ಜನತೆ ಕೂಡ ಮೊಬೈಲ್ ಚಟಕ್ಕೆ ಬಲಿ ಆಗುತ್ತಿದ್ದಾರೆ. ಅತಿಯಾದ ಮೊಬೈಲ್ ಬಳಕೆ ಬದುಕನ್ನು ಹಾಳು ಮಾಡುತ್ತಿದೆ. ಉದ್ಯೋಗ, ಶಿಕ್ಷಣ, ಕೌಶಲ್ಯ ಮರೆಯಾಗುತ್ತಿದೆ. ಮೊಬೈಲ್ ಗೀಳು ವಯುಕ್ತಿಕ ಜೀವನವನ್ನು ಹಾಳು ಮಾಡುತ್ತಿದೆ.

Categories
ಕೊಪ್ಪ ಚಿಕ್ಕಮಗಳೂರು ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ತೀರ್ಥಹಳ್ಳಿ, ಕೊಪ್ಪದಲ್ಲಿ ಗುಡುಗು, ಸಿಡಿಲು, ಗಾಳಿ, ಮಳೆ!

ತೀರ್ಥಹಳ್ಳಿ, ಕೊಪ್ಪದಲ್ಲಿ ಗುಡುಗು, ಸಿಡಿಲು, ಗಾಳಿ, ಮಳೆ!
– ಭಾರೀ ಮಳೆಗೆ ವಿದ್ಯುತ್, ನೆಟ್ವರ್ಕ್ ಇಲ್ಲ.. ಭಾರೀ ಅನಾಹುತ
– ಮಲೆನಾಡಲ್ಲಿ ಮಹಾ ಮಳೆಗೆ ಬೆಚ್ಚಿ ಬಿದ್ದ ಜನ!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ/ ಕೊಪ್ಪ: ಮಲೆನಾಡಲ್ಲಿ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು ಅನೇಕ ಹಳ್ಳಿಗಳು ಕತ್ತಲೆಯಲ್ಲಿ ಮುಳುಗಿವೆ. ವಿದ್ಯುತ್, ನೆಟ್ವರ್ಕ್ ಇಲ್ಲದಾಗಿದೆ. ಅಕಾಲಿಕ ಮಳೆಗೆ ಇಡೀ ಜನ ಜೀವನ ತೊಂದರೆ ಆಗಿದೆ. ತೀರ್ಥಹಳ್ಳಿ, ಹೊಸನಗರ, ಶಿವಮೊಗ್ಗ, ಕೊಪ್ಪ, ಶೃಂಗೇರಿ ಭಾಗದಲ್ಲಿ ಅತೀ ಹೆಚ್ಚು ಮಳೆ ಆಗಿದೆ.

ಗುಡುಗು, ಸಿಡಿಲು, ಗಾಳಿ, ಮಳೆ!

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಹೊಸನಗರ ಸೇರಿ ಹಲವಾರು ಭಾಗಗಳಲ್ಲಿ ಸೋಮವಾರ ರಾತ್ರಿ ಭಾರಿ ಗಾಳಿಯೊಂದಿಗೆ ಮಳೆ ಸುರಿದಿದೆ. ಅನೇಕ ಕಡೆ ಅಪಾರ ಪ್ರಮಾಣದ ಹಾನಿಯುಂಟಾಗಿದೆ.

ಕಟ್ಟಡದ ಮೇಲೆ ಬಿದ್ದ ಜಾಹೀರಾತು ನಾಮ ಫಲಕ!

ತೀರ್ಥಹಳ್ಳಿಯಲ್ಲಿ ಸತತ ಒಂದು ಗಂಟೆಗಳ ಕಾಲ ಮಳೆ ಸುರಿದಿದೆ. ಆಗುಂಬೆ ಬಸ್ ನಿಲ್ದಾಣದ ಸಮೀಪದಲ್ಲಿರುವ ಮಾತೃಶ್ರೀ ಎಲೆಕ್ಟ್ರಾನಿಕ್ಸ್ ಪಕ್ಕದ ಕಟ್ಟಡದ ಮೇಲ್ಭಾಗದಲ್ಲಿ ಹಾಕಲಾಗಿದ್ದ ಕಬ್ಬಿಣದ ಜಾಹೀರಾತು ನಾಮಫಲಕ ತುಂಡಾಗಿ ಬಿದ್ದಿದೆ. ಕೂದಲೆಳೆ ಅಂತರದಲ್ಲಿ ಘಟನೆ ನಡೆದಿದೆ. ಕಟ್ಟಡದ ಮೇಲೆ ವಾಲಿಕೊಂಡು ಬಿದ್ದಿರುವುದರಿಂದ ಯಾವುದೇ ರೀತಿಯ ದುರಂತ ಸಂಭವಿಸಿಲ್ಲ ಎನ್ನಲಾಗಿದೆ. ಒಂದು ವೇಳೆ ಅದು ರಸ್ತೆಯ ಭಾಗದಲ್ಲಿ ಬಿದ್ದಿದ್ದರೆ ಜನರಿಗೆ ಅಪಾಯವಾಗುವ ಸಾಧ್ಯತೆ ಇತ್ತು.

ಇನ್ನು ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯಲ್ಲಿ ಶಬರೀಶನಗರದ ನಿವಾಸಿಯಾದ ಗಂಗಾಧರ್ ಅಲಿಯಾಸ್ ಗುಂಡಣ್ಣ ಎನ್ನುವವರಿಗೆ ಸೇರಿದ್ದ ಟಾಟಾ ಏಸ್ ಲಗೇಜ್ ವಾಹನದ ಮೇಲೆ ತೆಂಗಿನ ಮರ ಉರುಳಿ ಬಿದ್ದ ಘಟನೆ ಕೂಡ ನಡೆದಿದೆ. ಇಲ್ಲಿಯೂ ಕೂಡ ಅದೃಷ್ಟವಶಾತ್ ಯಾವುದೇ ರೀತಿಯ ಅವಘಡ ಸಂಭವಿಸಿಲ್ಲ ಎನ್ನುವ ಮಾಹಿತಿ ಲಭಿಸಿದೆ. ಮರ ಬಿದ್ದ ಪರಿಣಾಮವಾಗಿ ವಾಹನ ಸಂಪೂರ್ಣವಾಗಿ ಜಖಂಗೊಂಡಿದ್ದು, ವಾಹನದ ಮೇಲ್ಭಾಗ ಸಂಪೂರ್ಣ ಹಾನಿಗೊಳಗಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.

ತೀರ್ಥಹಳ್ಳಿ ಪಟ್ಟಣದಲ್ಲಿ ವಿದ್ಯುತ್ ಇಲ್ಲ.. ನೀರಿಲ್ಲ..!

ತೀರ್ಥಹಳ್ಳಿಯಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆ, ಭಾರಿ ಪ್ರಮಾಣದ ಗಾಳಿಯಿಂದಾಗಿ ಪಟ್ಟಣದ ಹಲವು ಭಾಗಗಳಲ್ಲಿ ಮರಗಳು ಮುರಿದು ಬಿದ್ದಿವೆ. ಎಲೆಕ್ಟ್ರಿಕ್ ಲೈನ್ಗಳು, ಕಂಬಗಳು ತುಂಡಾಗಿವೆ. ವಿದ್ಯುತ್ ಸರಬರಾಜು ಸ್ಥಗಿತವಾಗಿದೆ. ಇದರ ಪರಿಣಾಮ ನೀರು ಸರಬರಾಜು ವ್ಯತ್ಯಾಸವಾಗಿದೆ. ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ಮುಖ್ಯ ಅಧಿಕಾರಿ ನಾಗರಾಜ್ ಹಾಗೂ ಸಿಬ್ಬಂದಿ, ಮೆಸ್ಕಾಂ ಸಿಬ್ಬಂದಿ ರಾತ್ರಿಯಿಂದಲೇ ಮರಗಳ ತೆರವು ಹಾಗೂ ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದಾರೆ.

ತೀರ್ಥಹಳ್ಳಿ ಸಿದ್ದೇಶ್ವರ ಗುಡ್ಡದಲ್ಲಿ ಬಿದ್ದ ವಿದ್ಯುತ್‌ ಕಂಬ!

ತೀರ್ಥಹಳ್ಳಿ ತಾಲೂಕಲ್ಲಿ ಭಾರೀ ಅನಾಹುತ ಸೃಷ್ಟಿ ಆಗಿದೆ. ಸೋಮವಾರ ರಾತ್ರಿ ಸುರಿದ ಗಾಳಿ ಮಳೆಯ ಅನಾಹುತದಿಂದ ಪಟ್ಟಣದ ಹಲವೆಡೆ ವಿದ್ಯುತ್ ಕಂಬಗಳು, ತಂತಿಗಳು ಮುರಿದು ಬಿದ್ದಿವೆ. ಅದೇ ರೀತಿ ಸಿದ್ದೇಶ್ವರ ಗುಡ್ಡದ ಮೇಲಿನ ಗುಡಿಯ ಎದುರಿನ ವಿದ್ಯುತ್ ಕಂಬದ ತಂತಿಯೂ ಸಹ ತುಂಡಾಗಿ ನೆಲದ ಮೇಲೆ ಬಿದ್ದಿದೆ. ಇದನ್ನು ಸರಿಪಡಿಸದೇ ಸಿದ್ದೇಶ್ವರ ಗುಡ್ಡದ ವಿದ್ಯುತ್ ಕಂಬಗಳಿಗೆ ವಿದ್ಯುತ್ ಹರಿಸಿದ್ದೇ ಆದಲ್ಲಿ ಅವಘಡ ಸಂಭವಿಸಬಹುದಾಗಿದ್ದು ಮೆಸ್ಕಾಂ ಇದನ್ನೂ ಗಮನಿಸಿ ಸರಿಪಡಿಸಬೇಕಾಗಿದೆ.

Categories
ಕರಾವಳಿ ಕಾರ್ಕಳ ಮಂಗಳೂರು ಮಲ್ನಾಡ್ ರಾಜ್ಯ

ಕಾರ್ಕಳದ ಹಿರ್ಗಾನದಲ್ಲಿ ಅದ್ಧೂರಿ ನೇಮೋತ್ಸವ!

ಕಾರ್ಕಳದ ಹಿರ್ಗಾನದಲ್ಲಿ ಅದ್ಧೂರಿ ನೇಮೋತ್ಸವ!
– ಶ್ರೀಕ್ಷೇತ್ರ ಪೆಲತ್ತಿಜೆಯ ಅಣ್ಣಪ್ಪ ಪಂಜುರ್ಲಿ ದೇವಸ್ಥಾನದಲ್ಲಿ ಧಾರ್ಮಿಕ ರಂಗು
– ಕ್ರಿಯೇಟಿವ್ ಕಾಲೇಜು ಸಂಸ್ಥಾಪಕರಿಂದ ಹರಕೆ ನೇಮೋತ್ಸವ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕಾರ್ಕಳ: ಪರಶುರಾಮನ ಊರು ಕಾರ್ಕಳ ಪಟ್ಟಣ ಸಮೀಪದ ಹಿರ್ಗಾನ ಗ್ರಾಮದ ಶ್ರೀಕ್ಷೇತ್ರ ಪೆಲತ್ತಿಜೆಯ ಅಣ್ಣಪ್ಪ ಪಂಜುರ್ಲಿ ದೇವಸ್ಥಾನದಲ್ಲಿ ಮಾ. 22 ಭಾನುವಾರ ರಾತ್ರಿ ಹರಕೆಯ ಸಿರಿ ಸಿಂಗಾರದ ನೇಮೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಧರ್ಮದೈವ ಅಣ್ಣಪ್ಪ ಪಂಜುರ್ಲಿ ಗಗ್ಗರ ಸೇವೆ ನಡೆದಿದ್ದು, ಸೇವೆಯ ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಗಗ್ಗರ ಸೇವೆಯಲ್ಲಿ ಪಾಲ್ಗೊಂಡ ಭಕ್ತಾದಿಗಳು ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸುವ ಮೂಲಕ, ಧರ್ಮದೈವ ಅಣ್ಣಪ್ಪ ಪಂಜುರ್ಲಿ ದೈವದ ಕೃಪೆಗೆ ಪಾತ್ರರಾಗಿ ಕೃತಾರ್ಥರಾದರು.

ನೇಮೋತ್ಸವ ಹರಕೆದಾರರಾದ ಕ್ರಿಯೇಟಿವ್ ಕಾಲೇಜಿನ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್, ವಿಮಲ್ ರಾಜ್, ಗಣಪತಿ ಕೆ. ಎಸ್ ಮತ್ತು ಕುಟುಂಬದವರು ಹಾಗೂ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ಗಣನಾಥ ಶೆಟ್ಟಿ, ಆದರ್ಶ, ಅಮೃತ್ ಮತ್ತು ಕುಟುಂಬದವರು, ಹಿರ್ಗಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಣ್ಯರು, ಕಾರ್ಕಳ ಪಟ್ಟಣದ ಗಣ್ಯರು, ಗ್ರಾಮಸ್ಥರು, ಭಕ್ತರು, ಸಂಘ ಸಂಸ್ಥೆಗಳ ಪ್ರಮುಖರು, ಕ್ರಿಯೇಟಿವ್ ಕಾಲೇಜಿನ ಸಿಬ್ಬಂದಿ, ಪೋಷಕರು ಹಾಜರಿದ್ದರು. ದೇವಸ್ಥಾನವನ್ನು ವಿಶೇಷ ಹೂವು ಹಾಗೂ ವಿದ್ಯುತ್ ಅಲಂಕಾರ ಮಾಡಲಾಗಿತ್ತು. ಹಿರ್ಗಾನ, ಕಾರ್ಕಳ ಸುತ್ತಮುತ್ತಲಿನ ಗ್ರಾಮಸ್ಥರು, ಧಾರ್ಮಿಕ ಗಣ್ಯರು, ಸ್ಥಳೀಯ ಭಜನಾ ಕುಣಿತ ತಂಡ ಗಮನ ಸೆಳೆಯಿತು. ಮುಂಜಾನೆವರೆಗೆ ಕೋಲಾ ನಡೆಯಿತು.

Categories
ಬೆಂಗಳೂರು ಮಾಹಿತಿ ಸುದ್ದಿ ರಾಜ್ಯ

ರಾಜ್ಯದ 3 ಪ್ರಮುಖ ನ್ಯೂಸ್: ನಿಮಗೆ ಬೇಕಾದ ಸುದ್ದಿ!

ರಾಜ್ಯದ 3 ಪ್ರಮುಖ ನ್ಯೂಸ್: ನಿಮಗೆ ಬೇಕಾದ ಸುದ್ದಿ!

ರಾಜ್ಯದಲ್ಲಿ ಸದ್ಯಕ್ಕೆ ಬಸ್‌ ಟಿಕೆಟ್ ದರ ಏರಿಕೆ ಇಲ್ಲ!
ಪೆಟ್ರೋಲ್‌ ದರದಲ್ಲಿ ಏರಿಕೆ: ಹೋರಾಟ ಶುರು
ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ: ಮಾ.31 ಕೊನೆ ದಿನ

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರವನ್ನು ಹೆಚ್ಚಿಸುವ ಪ್ರಶ್ನೆಯೇ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಹಿತಿ ನೀಡಿದ ಸಚಿವರು, ಸಾರಿಗೆ ನಿಗಮಗಳು ಡೀಸೆಲ್ ಅನ್ನು ಬಲ್ಕ್ನಲ್ಲಿ ಖರೀದಿ ಮಾಡುತ್ತಿವೆ. ಇತ್ತೀಚೆಗೆ ಇಸ್ರೇಲ್-ಇರಾನ್ ಸಂಘರ್ಷ ಪರಿಣಾಮದಿಂದ ಡೀಸೆಲ್ ದರ ಏರಿಕೆಯಾದರೂ, ಪ್ರಯಾಣಿಕರ ಮೇಲಿನ ಭಾರವನ್ನು ಹೆಚ್ಚಿಸುವ ಉದ್ದೇಶವಿಲ್ಲ ಎಂದು ತಿಳಿಸಿದ್ದಾರೆ. ಡೀಸೆಲ್ ದರ ಏರಿಕೆಯಾಗಿದ್ದರೂ ಅದೇ ರೀತಿಯಲ್ಲಿ ಖರೀದಿ ಮುಂದುವರೆಯಲಿದೆ. ಆದರೆ ಬಸ್ ಟಿಕೆಟ್ ದರ ಏರಿಕೆ ಮಾಡುವುದಿಲ್ಲ ಎಂದರು.

ಪೆಟ್ರೋಲ್ ದರ ಏರಿಕೆ: ಹೋರಾಟ ಶುರು

ಬೆಂಗಳೂರು: ಇನ್ನೊಂದೆಡೆ, ದೇಶಾದ್ಯಂತ ಪ್ರೀಮಿಯಂ ಪೆಟ್ರೋಲ್‌ ದರದಲ್ಲಿ ಏರಿಕೆ ಕಂಡುಬಂದಿದ್ದು, ಪ್ರತಿ ಲೀಟರ್‌ಗೆ ಸುಮಾರು 2.30 ರೂ. ಹೆಚ್ಚಳವಾಗಿದೆ. ಸರ್ಕಾರದ ಈ ಕ್ರಮ ಖಂಡಿಸಿ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಹೆದ್ದಾರಿ ತಡೆಗೆ ಹೋರಾಟಗಾರ ವಾಟಾಳ್‌ ನಾಗರಾಜ್ ಭಾರೀ ಹೋರಾಟ ಮಾಡಿದ್ದು, ಅವರನ್ನು ಬಂಧಿಸಲಾಗಿದೆ.ಅಡುಗೆ ಅನಿಲ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಹಾಗೂ ಕನ್ನಡ ಭಾಷೆ ಮತ್ತು ಸರ್ಕಾರಿ ಶಾಲೆಗಳ ಉಳಿವಿಗೆ ಒತ್ತಾಯಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೆಂಗಳೂರಲ್ಲಿ ಪ್ರತಿಭಟನೆ ನಡೆಯಿತು.

ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಗಡಿಯಲ್ಲಿ ಹೊಸೂರು ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಇರಾನ್-ಇಸ್ರೇಲ್-ಅಮೆರಿಕ ನಡುವಿನ ಸಂಘರ್ಷದಿಂದ ಅಡುಗೆ ಅನಿಲ ಸಿಲಿಂಡ‌ರ್ ಕೊರತೆ ಉಂಟಾಗಿದ್ದು, ವಾಣಿಜ್ಯ ಸಿಲಿಂಡ‌ರ್ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಅಭಾವದಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಆರೋಪಿಸಿದರು. ಸರ್ಕಾರಗಳು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗಿವೆ ಎಂದು ಟೀಕಿಸಿದ ಅವರು, ಇದೇ ಸ್ಥಿತಿ ಮುಂದುವರೆದರೆ ಕರ್ನಾಟಕ ಬಂದ್‌ಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ವಾಟಾಳ್ ನಾಗರಾಜ್ ಅವರನ್ನು ವಶಕ್ಕೆ ಪಡೆದು ಕರೆದೊಯ್ದರು.

ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ: ಮಾ.31 ಕೊನೆ ದಿನ

ಬೆಂಗಳೂರು: ರಾಜ್ಯದ ಪಡಿತರ ಚೀಟಿಗೆ ಸಂಬಂಧಿಸಿದಂತೆ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಬಿಪಿಎಲ್, ಎಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿಯ ತಿದ್ದುಪಡಿಗೆ ಅವಕಾಶವನ್ನು ಕಲ್ಪಿಸಿದೆ. ತಿದ್ದುಪಡಿ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿದ್ದು, ಇದೇ ತಿಂಗಳ 31ರ ಒಳಗೆ ಅರ್ಜಿಯನ್ನು ಸಲ್ಲಿಸಿ ತಿದ್ದುಪಡಿ ಮಾಡಿಸಬಹುದು ಎನ್ನುವ ಮಾಹಿತಿಯನ್ನು ಪ್ರಕಟಿಸಲಾಗಿದೆ. ಗ್ರಾಮ ಒನ್ ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಲು ಈ ಮೂಲಕ ತಿಳಿಸಲಾಗಿದೆ. ಹಲವಾರು ವರ್ಷಗಳಿಂದ ಹೊಸ ಅರ್ಜಿಗಳಿಗೆ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಅನುಸರಿಸಲಾಗಿದೆ. ಇದನ್ನು ಸದುಪಯೋಗಪಡಿಸಿಕೊಂಡು ಅರ್ಹರು ತಿದ್ದುಪಡಿಗೆ ಅರ್ಜಿಯನ್ನು ಸಲ್ಲಿಸುವಂತೆ ಕೋರಿದ್ದಾರೆ.

ಪಡಿತರ ಚೀಟಿಯ ತಿದ್ದುಪಡಿ ಅತ್ಯಂತ ಮುಖ್ಯವಾಗಿದ್ದು, ಇದು ಕೇವಲ ಧಾನ್ಯ ಪಡೆಯುವ ದಾಖಲೆ ಮಾತ್ರವಾಗಿ ಉಳಿಯದೆ ಅನೇಕ ಯೋಜನೆಗಳು, ಸಬ್ಸಿಡಿಗಳು ಮತ್ತು ಆರ್ಥಿಕ ನೆರವನ್ನು ಪಡೆಯಲು ಕೂಡ ಪ್ರಮುಖ ದಾಖಲೆಯಾಗಿದೆ. ಕುಟುಂಬದ ವಿವರಗಳು ತಪ್ಪಾಗಿದ್ದರೆ ಅಥವಾ ಹಳೆಯದಾಗಿದ್ದರೆ ಅನೇಕ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಕೂಡ ಇದರಿಂದ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಸಮಯಕ್ಕೆ ಸರಿಯಾಗಿ ತಿದ್ದುಪಡಿ ಮಾಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಕೊನೆಯ ಕ್ಷಣದ ಗೊಂದಲಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಈಗಲೇ ಸಮೀಪದ ಕೇಂದ್ರಗಳಿಗೆ ಭೇಟಿ ನೀಡಿ ರೇಷನ್ ಕಾರ್ಡ್ ಅನ್ನು ನವೀಕರಣಗೊಳಿಸಿಕೊಳ್ಳಿ. ಒಮ್ಮೆ ತಪ್ಪಿದರೆ ಮತ್ತೆ ಈ ಅವಕಾಶ ಯಾವಾಗ ಲಭ್ಯವಾಗುತ್ತದೆಯೋ ಹೇಳಲಾಗುವುದಿಲ್ಲ. ಆದ್ದರಿಂದ ಇದಕ್ಕೆ ಸಂಬಂಧಿಸಿದಂತೆ ತಕ್ಷಣವೇ ಕ್ರಮವನ್ನು ಕೈಗೊಳ್ಳಿ ಎಂದು ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ತೀರ್ಥಹಳ್ಳಿ ಪಟ್ಟಣದಲ್ಲಿ ಹೈವೇ ಕೆಲಸ ಶುರು!

ತೀರ್ಥಹಳ್ಳಿ ಪಟ್ಟಣದಲ್ಲಿ ಹೈವೇ ಕೆಲಸ ಶುರು!
– ತೀರ್ಥಹಳ್ಳಿ ಕೊಪ್ಪ ಸರ್ಕಸ್ ಇಂದ ಶಿವಮೊಗ್ಗವರೆಗೆ ಡಬಲ್ ರಸ್ತೆ
– ತಲೆ ಎತ್ತಲಿವೆ ನೂತನ ಕಟ್ಟಡಗಳು: ಪಟ್ಟಣಕ್ಕೆ ಹೊಸ ರಂಗು!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಕೊಪ್ಪ ವೃತ್ತದಿಂದ ಮಂಡಗದ್ದೆ, ನೆಲ್ಲಿಸರದ ಕ್ಯಾಂಪ್ ವರೆಗೆ ಇರುವ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ, ಉನ್ನತೀಕರಣ ಮತ್ತು ಚತುಷ್ಪಥ ನಿರ್ಮಾಣ ಕಾಮಗಾರಿ ಇದೀಗ ಶುರುವಾಗಿದೆ. ತೀರ್ಥಹಳ್ಳಿ ಪಟ್ಟಣದಲ್ಲಿ ಜಾಗ ತೆರವು ಕೆಲಸ ಸಂಪೂರ್ಣ ಆಗಿದೆ. ಹಳೆ ಕಟ್ಟಡಗಳು ನೆಲ ಸಮವಾಗಿ ಹೊಸ ಕಟ್ಟಡಗಳು ನಿರ್ಮಾಣ ಆಗುತ್ತಿವೆ. ರಸ್ತೆಯ ಕಾಮಗಾರಿಯ ಟೆಂಡರ್ ಅನ್ನು ಚಿಕ್ಕಮಗಳೂರಿನ ಪ್ರಸಿದ್ಧ ನಿರ್ಮಾಣ ಸಂಸ್ಥೆಯಾದ ಎಸ್ಎಲ್ ವಿ ಅರ್ಥ್ ಮೂವರ್ಸ್ ಪಡೆದುಕೊಂಡಿದೆ.‌ ಈಗಾಗಲೇ ಮಾರ್ಗದ ಕಾಮಗಾರಿಗಾಗಿ ಸ್ವಾಧೀನಪಡಿಸಿಕೊಂಡಿರುವ ಸ್ವತ್ತಿನ ಮಾಲೀಕರಿಗೆ ಸುಮಾರು 70 ಕೋಟಿ ರೂಪಾಯಿ ಪರಿಹಾರವನ್ನು ಸಹ ನೀಡಲಾಗಿದೆ ಎನ್ನುವ ಮಾಹಿತಿ ಲಭಿಸಿದೆ.

ಕೆಲವು ಕಡೆ ಸಣ್ಣ ಪುಟ್ಟ ತಕರಾರು ಇದೆ. ಎಲ್ಲವೂ ಅಂದುಕೊಂಡಂತೆ ಆದರೆ ಹೊಸ ವರ್ಷಕ್ಕೆ ಹೆದ್ದಾರಿ ಒಂದು ಹಂತಕ್ಕೆ ಬರಲಿದೆ. ರಸ್ತೆ ಕಾಮಗಾರಿ ಗುತ್ತಿಗೆ ಒಪ್ಪಂದಗಳು 2023ರಲ್ಲೇ ಪೂರ್ಣಗೊಂಡಿದ್ದು, ಫಾರೆಸ್ಟ್ ಕ್ಲಿಯರೆನ್ಸ್ ಮತ್ತು ಕೆಲವು ಭಾಗಗಳಲ್ಲಿ ಮರಗಳ ತೆರವಿಗೆ ಅನುಮತಿ ಸಿಗದ ಹಿನ್ನೆಲೆಯಲ್ಲಿ ಕೆಲಸಗಳು ತಡವಾಗಿ ಆರಂಭವಾಗಿದೆ.‌ ಕಳೆದ ತಿಂಗಳು ಎಲ್ಲಾ ಕ್ಲಿಯರೆನ್ಸ್ ಗಳು ಮುಗಿದ ಕಾರಣ ಗುತ್ತಿಗೆದಾರರು ಕಾಮಗಾರಿಯನ್ನು ಆರಂಭಿಸಿದ್ದಾರೆ ಎನ್ನಲಾಗಿದೆ.

ತೀರ್ಥಹಳ್ಳಿಯಲ್ಲಿ ಮಾರ್ಚ್ 23ರ ಸೋಮವಾರದಂದು ಪೂರ್ಣ ಪ್ರಮಾಣದಲ್ಲಿ ಕೆಲಸಗಳು ಪ್ರಾರಂಭಗೊಳ್ಳಲಿದ್ದು, ಹೆದ್ದಾರಿ ಭೂಸ್ವಾಧೀನ ಪ್ರಾಧಿಕಾರ, ಹೆದ್ದಾರಿ ಇಲಾಖೆ, ಹೆದ್ದಾರಿಯ ಅಕ್ಕಪಕ್ಕದಲ್ಲಿ ಸ್ವತ್ತುಗಳಿರುವ ಮಾಲೀಕರಿಗೆ ಸ್ಥಳ ತೆರವುಗೊಳಿಸಲು ಅಂತಿಮ ಸೂಚನೆಗಳನ್ನು ನೀಡಲಾಗಿದೆ. ಹೀಗಾಗಿ ಪರಿಹಾರ ಮೊತ್ತವನ್ನು ಪಡೆದಿರುವ ಸ್ವತ್ತುಗಳ ಮಾಲೀಕರು ತಾಂತ್ರಿಕ ಕಾರಣ, ಕೌಟುಂಬಿಕ ವ್ಯಾಜ್ಯ, ಸರ್ಕಾರಿ ರಾಜ್ಯಗಳ ಹಿನ್ನೆಲೆಯಲ್ಲಿ ಪರಿಹಾರದ ಮೊತ್ತವನ್ನು ಪಡೆಯಲಾಗದವರೂ ಕೂಡ ತಮ್ಮ ಸ್ಥಳಗಳನ್ನು ತೆರೆವುಗೊಳಿಸಿ ಅಭಿವೃದ್ಧಿ ಕಾಮಗಾರಿಗೆ ಸಹಕಾರ ನೀಡಬೇಕೆಂದು ಇಲಾಖೆಯು ಮನವಿ ಮಾಡಿಕೊಂಡಿದೆ.

ತಲೆ ಎತ್ತಲಿವೆ ನೂತನ ಕಟ್ಟಡಗಳು: ಪಟ್ಟಣಕ್ಕೆ ಹೊಸ ರಂಗು!

ತೀರ್ಥಹಳ್ಳಿ ಕೊಪ್ಪ ಸರ್ಕಲ್ ಇಂದ ಕುಶಾವತಿವರೆಗೆ ಹಳೆಯ ಕಟ್ಟಡಗಳು ನೆಲ ಸಮ ಆಗಿವೆ. ಕೆಲವು ಪುನರ್ ನಿರ್ಮಾಣ ಆಗುತ್ತಿವೆ. ಜತೆಗೆ ಹೊಸ ಕಟ್ಟಡಗಳು ತಲೆ ಎತ್ತುತ್ತಿವೆ. ತೀರ್ಥಹಳ್ಳಿಗೆ ಹೊಸ ಕಳೆ ಬರಲಿದೆ. ಕೊಪ್ಪ ಸರ್ಕಲ್ ಅಲ್ಲಿ ಸಿಗ್ನಲ್ ಬರಲಿದೆ.