ಉಡುಪಿ: ಸುಮಾರು ಮೂರು ಗಂಟೆಗಳ ಕಾಲ ಅರಬ್ಬಿ ಸಮುದ್ರದಲ್ಲಿ ದಡದಿಂದ ದೂರ ಈಜುತ್ತಿದ್ದ ವ್ಯಕ್ತಿಯೊಬ್ಬರನ್ನು ಸಮಾಜ ಸೇವಕ ಈಶ್ವರ್ ಮಲ್ಪೆ ಅವರು ಸಮುದ್ರಕ್ಕೆ ಇಳಿದು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ.
ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಕಾಡಿಪಟ್ಣ ನಿವಾಸಿ ಹಾಗೂ ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ ಈ ಹಿಂದೆ ಲೈಫ್ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯತೀಶ್ (38) ಎಂದು ಗುರುತಿಸಲಾಗಿದೆ.
ಸ್ಥಳೀಯರ ಪ್ರಕಾರ, ಯತೀಶ್ ಈ ಹಿಂದೆ ಕೂಡ ಒಂದೆರಡು ಬಾರಿ ಇದೇ ರೀತಿಯ ಕೃತ್ಯಕ್ಕೆ ಮುಂದಾಗಿದ್ದರು. ಆಗ ಸ್ಥಳೀಯರು ಮಧ್ಯಪ್ರವೇಶಿಸಿ ಅವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದರು. ಭಾನುವಾರ ಮಧ್ಯಾಹ್ನ ಸ್ಥಳೀಯ ನಿವಾಸಿಗಳು ನೋಡುತ್ತಿದ್ದಂತೆಯೇ ಯತೀಶ್ ಅರಬ್ಬಿ ಸಮುದ್ರಕ್ಕೆ ಇಳಿದಿದ್ದರು. ಕಾಪುವಿನಿಂದ ದೋಣಿಯಲ್ಲಿ ಬಂದ ಮೀನುಗಾರರು ಅರ್ಧ ಗಂಟೆಗೂ ಹೆಚ್ಚು ಕಾಲ ಹಲವು ಬಾರಿ ಪ್ರಯತ್ನಿಸಿ ಅವರನ್ನು ದೋಣಿಗೆ ಎಳೆದುಕೊಳ್ಳಲು ಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಪಡುಬಿದ್ರಿ ಬೀಚ್‌ಗೆ ಆಗಮಿಸಿದ ಈಶ್ವರ್ ಸಮುದ್ರಕ್ಕೆ ಇಳಿದರು. ಯತೀಶ್ ಇದ್ದಲ್ಲಿಗೆ ಸುಮಾರು ಮೂರು ನಾಟಿಕಲ್ ಮೈಲುಗಳಷ್ಟು ದೂರ ಈಜಿಕೊಂಡು ತೆರಳಿದ ಅವರು, ಶಾಂತವಾಗಿ ಹಾಗೂ ಸಮಾಧಾನಕರವಾಗಿ ಮಾತನಾಡಿ ಯತೀಶ್ ಅವರನ್ನು ದಡಕ್ಕೆ ಮರಳುವಂತೆ ಮನವೊಲಿಸಿದರು.ಬಳಿಕ ಯತೀಶ್ ಅವರೊಂದಿಗೆ ಈಶ್ವರ್ ಕೂಡ ಈಜಿಕೊಂಡು ಹಿಂದಿರುಗಿ, ಸುರಕ್ಷಿತವಾಗಿ ದಡಕ್ಕೆ ಕರೆತಂದರು. ಸ್ಥಳೀಯ ಈಜುಗಾರರು ಹಾಗೂ ಬ್ಲೂ ಫ್ಲ್ಯಾಗ್ ಬೀಚ್‌ನ ಜೀವರಕ್ಷಕರಾದ ಪ್ರಜ್ವಲ್, ಸುಶಾಂತ್ ಮತ್ತು ಬಾದಲ್ ಅವರು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕರಿಸಿದರು.
ಉಡುಪಿ: ಮೀನುಗಾರಿಕೆವೇಳೆ ಬೋಟಿನಿಂದ ಕೆಳಗೆ ಬಿದ್ದು ಸಾವು
ಉಡುಪಿ: ಮೀನುಗಾರಿಕೆ ವೇಳೆ ಮೀನುಗಾರರೊಬ್ಬ ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಮಲ್ಪೆಯಲ್ಲಿ ನಡೆದಿದೆ. ಮೃತರನ್ನು ಭದ್ರಾವತಿ ಬೆಳ್ಳಿಗೇರಿ ಗ್ರಾಮದ ಸುನಿತಮ್ಮ ಎಂಬವರ ಮಗ ಸಂಜೀವ(33) ಎಂದು ಗುರುತಿಸಲಾಗಿದೆ.
ಮಲ್ಪೆ ಬಂದರಿನಲ್ಲಿ ರಜತ ಎಂಬ ಹೆಸರಿನ ಮೀನುಗಾರಿಕೆ ಬೋಟಿನಲ್ಲಿ ಕೆಲಸ ಮಾಡಿಕೊಂಡಿದ್ದ ಇವರು, ಆ.10 ರಂದು ರಾತ್ರಿ ಮೀನುಗಾರಿಕೆಗಾಗಿ ಇತರ ಮೀನುಗಾರರೊಂದಿಗೆ ಸಮುದ್ರಕ್ಕೆ ತೆರಳಿದ್ದರು. ಆ.14ರಂದು ಮಧ್ಯಾಹ್ನ 1:30ರ ಸುಮಾರಿಗೆ ಮೀನುಗಾರಿಕೆಗೆ ಬಿಟ್ಟ ಬಲೆಯನ್ನು ಮೇಲಕ್ಕೆ ಎಳೆಯುತ್ತಿರುವಾಗ ಒಮ್ಮೆಲೇ ಬಂದ ಅಬ್ಬರದ ಅಲೆಗೆ ಬೋಟು ಅಲುಗಾಡಿತ್ತೆನ್ನಲಾಗಿದೆ.
ಇದರ ಪರಿಣಾಮ ಸಂಜೀವ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾದರು. ಬಳಿಕ ಹುಡುಕಾಟ ನಡೆಸಿದಾಗ ಅಲ್ಲೇ ಸಮೀಪ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಮಂಗಳೂರು: ಅಕ್ರಮ ಮರ ಸಾಗಾಟ; ಆರೋಪಿ ಬಂಧನ
ಮಂಗಳೂರು: ಅಕ್ರಮವಾಗಿ ಮರವನ್ನು ಕಡಿದು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ, ಕೆಯ್ಯೂರಿನಲ್ಲಿ ನಡೆದಿದೆ. ಕಿರಾಲು ಭೋಗಿ ಜಾತಿಯ ಮರಗಳನ್ನು ಕಡಿದು, ಬೆಳ್ಳಾರೆಯಿಂದ ಪುತ್ತೂರಿನ ಕಡೆಗೆ ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಕಾರ್ಯಾಚರಣೆಯನ್ನು ಕೈಗೊಂಡ ಮಂಗಳೂರು ಅರಣ್ಯ ಸಂಚಾರಿ ದಳದ ವಲಯ ಅರಣ್ಯ ಅಬಕಾರಿ ಸಂತೋಷ್ ರೈ, ಉಪವಲಯ ಅರಣ್ಯಾಧಿಕಾರಿಗಳಾದ ಶಿವಾನಂದ್, ಸೋಮನಾಥ್ ಮತ್ತು ವಾಹನ ಚಾಲಕ ಜಯಪ್ರಕಾಶ್ ಅವರು ಕೆಯ್ಯೂರಿನ ಸಂತೋಷ್ ನಗರ ಎನ್ನುವಲ್ಲಿ ಲಾರಿಯನ್ನು ತಡೆದು ಪರಿಶೀಲನೆಯನ್ನು ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಮಾಡಾವು ನಿವಾಸಿ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ.
•ಬೆಳ್ತಂಗಡಿ: ನಿಯಮ ಉಲ್ಲಂಘನೆ; ಹೋಮ್ ಸ್ಟೇ ಮಾಲೀಕನಿಗೆ ದಂಡ
ಬೆಳ್ತಂಗಡಿ: ಅತಿಯಾದ ಮಳೆಯಿಂದಾಗಿ ಪ್ರವಾಸಿಗರ ಸುರಕ್ಷತೆಯ ಹಿತದೃಷ್ಟಿಯಿಂದ ಜಲಪಾತ ತಾಣಗಳಿಗೆ ಪ್ರವೇಶ ನಿಷೇಧವನ್ನು ವಿಧಿಸಲಾಗಿತ್ತು. ಆದರೆ ಇದರ ನಡುವೆಯೂ ನಿಯಮವನ್ನು ಉಲ್ಲಂಘಿಸಿ, ಅರಣ್ಯ ಇಲಾಖೆಯವರ ಕಣ್ಣು ತಪ್ಪಿಸಿ ಪ್ರವಾಸಿಗರನ್ನು ಜಲಪಾತದ ಬಳಿಗೆ ಕರೆದುಕೊಂಡು ಹೋದ ಘಟನೆ ನಡೆದಿದೆ. ಅಧಿಕ ಮಳೆಯ ಹಿನ್ನೆಲೆಯಿಂದಾಗಿ ದಿಡುಪೆ ಜಲಪಾತದ ವೀಕ್ಷಣೆಗೆ ಜುಲೈ 20ರಿಂದ ಮುಂದಿನ ಆದೇಶ ಬರುವವರೆಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಆದರೆ, ದಿಡುಪೆಯ ನವಗ್ರಹ ಹೋಮ್ ಸ್ಟೇ ಮಾಲೀಕರಾದ ಸಂತೋಷ್ ಎನ್ನುವವರು, 45 ಮಂದಿ ಪ್ರವಾಸಿಗರನ್ನು ಇಲಾಖೆಯ ಯಾವುದೇ ಅನುಮತಿಯನ್ನು ಪಡೆಯದೆ ನಿಯಮಾವಳಿಗಳನ್ನು ಉಲ್ಲಂಘಿಸಿ, ಅಕ್ರಮವಾಗಿ ಪ್ರವೇಶಾತಿಯನ್ನು ಪಡೆದುಕೊಂಡಿದ್ದಾರೆ. ಮಾಹಿತಿ ಲಭಿಸುತ್ತಿದ್ದಂತೆ ಆರ್ ಎಫ್ಒ ತಮ್ಮ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ ಸಂದರ್ಭದಲ್ಲಿ, ನಿಜ ಸಂಗತಿ ಬೆಳಕಿಗೆ ಬಂದಿದೆ. ಮಾಲೀಕನಿಗೆ 22.500ರೂಪಾಯಿ ದಂಡವನ್ನು ವಿಧಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
•ಕಡಬ: ನೈತಿಕ ಪೊಲೀಸ್ ಗಿರಿ; 9 ಮಂದಿ ವಿರುದ್ಧ ಪ್ರಕರಣ ದಾಖಲು
ಕಡಬ: ಯುವತಿ ಮತ್ತು ಆಕೆಯ ಕುಟುಂಬಸ್ಥರ ಮೇಲೆ ನೈತಿಕ ಪೊಲೀಸ್ ಗಿರಿ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದ ಘಟನೆ, ಕೊಲ್ಪೆಯಲ್ಲಿ ನಡೆದಿದೆ. ಮೆಲ್ಕಾರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 18 ವರ್ಷದ ಯುವತಿಯು, ಕೆಲಸ ಮುಗಿದ ಬಳಿಕ ತನ್ನ ತಾಯಿಯಾದ ಸಫಿಯಾ ಅವರೊಂದಿಗೆ ಕಾರಿನಲ್ಲಿ ಮನೆಯತ್ತ ತೆರಳುತ್ತಿದ್ದಾಗ, ಅಂಗಡಿಯ ಮಾಲೀಕರಾದ ಜಾಹಿರ್ ಅವರ ಸ್ನೇಹಿತ ಸಿಪ್ಪಾನ್ ಎನ್ನುವವನು ಕಾರು ಚಲಾಯಿಸುತ್ತಿದ್ದ ಎನ್ನಲಾಗಿದೆ. ಯುವತಿ ಮತ್ತು ಆಕೆಯ ತಾಯಿಯನ್ನು ಮನೆಯ ಸಮೀಪದಲ್ಲಿ ಇಳಿಸಿದ ಬಳಿಕ, ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆ ಕೊಲ್ಪೆ ಬಳಿ ಕೆಲವರು ಕಾರನ್ನು ತಡೆದಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಕಾರನ್ನು ತಡೆದು ನಿಲ್ಲಿಸಿದ ಅಪರಿಚಿತ ವ್ಯಕ್ತಿಗಳು ಯುವತಿ ಮತ್ತು ಆಕೆಯ ಜೊತೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ್ದು, ಯುವತಿಗೂ ಕಪಾಳಮೋಕ್ಷ ಮಾಡಿದ್ದಾರೆ. ಅಷ್ಟೇ ಅಲ್ಲದೆ ಗಂಭೀರ ರೀತಿಯ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎನ್ನುವಂತಹ ಜೀವ ಬೆದರಿಕೆಯನ್ನು ಸಹ ಒಡ್ಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಕಲಹವನ್ನು ತಡೆಯಲು ಪ್ರಯತ್ನಿಸಿದ ಜಮಾಲ್ ಎನ್ನುವವರ ಮೇಲೆ ಮತ್ತು ಗಾಯಗೊಂಡಿದ್ದ ಯುವತಿಯ ಸಹಾಯಕ್ಕೆ ಬಂದ ಆಕೆಯ ಸಹೋದರಿ ಫಸೀಲಾ ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆಯ ಬಳಿಕ ಯುವತಿಯು ತನಗೆ ಮತ್ತು ತನ್ನ ಕುಟುಂಬಸ್ಥರ ಮೇಲಾದ ಹಲ್ಲೆಯ ಕುರಿತು ವಿವರವಾಗಿ ತಿಳಿಸಿ, ವಿಡಿಯೋ ಒಂದನ್ನು ಮಾಡಿ ಆರೋಪಿಸಿದ್ದಾಳೆ. ವಿಡಿಯೋ ಆಧಾರದ ಮೇಲೆ ತನಿಖೆಯನ್ನು ಕೈಗೊಂಡ ಪೊಲೀಸರು ಆರೋಪಿಗಳಾದ ಜಬೀರ್, ಸಿದ್ದೀಕ್, ಉನೈಸ್, ರಮ್ಶಿಕ್, ಶಂಶುದ್ದೀನ್, ಜಾಫರ್, ಆಶಿತ್, ಅಚೂರು ಅಲಿಯಾಸ್ ಅಶ್ರಫ್ ಮತ್ತು ಅಶ್ರಫ್ ಕೊಲ್ಪೆ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ