ಜಾತ್ರೆಯಲ್ಲಿ ನೆಲಕ್ಕುರುಳಿದ 120 ಅಡಿ ಎತ್ತರದ ತೇರು!
– ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಅವಘಡ
– ಕರ್ನಾಟಕದಲ್ಲಿ ಬಿಸಿಲಿನ ಝಳಕ್ಕೆ 2 ಸಾವು..!
NAMMUR EXPRESS NEWS
ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಹೀಲಲಿಗೆ ಗ್ರಾಮದಲ್ಲಿ 120 ಅಡಿ ಎತ್ತರದ ತೇರು ನೆಲಕ್ಕುರುಳಿರುವಂತಹ ಘಟನೆ ನಡೆದಿದೆ. ಇತಿಹಾಸ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಅವಘಡ ಸಂಭವಿಸಿದೆ. ಹತ್ತಾರು ಗ್ರಾಮಗಳಿಂದ ಮದ್ದೂರಮ್ಮ ಜಾತ್ರೆಗೆ ಎತ್ತುಗಳು, ಟ್ರ್ಯಾಕ್ಟರ್ಗಳ ಮೂಲಕ ತೇರು ಎಳೆದುಕೊಂಡು ಬರಲಾಗುತ್ತದೆ. ಹೀಲಲಿಗೆ ಗ್ರಾಮದಿಂದ ಹುಸ್ಕೂರಿಗೆ ತೇರು ಬರುತ್ತಿರುವಾಗ ಕಮ್ಮಸಂದ್ರದ ಹೈಪರ್ ಮಾರ್ಕೆಟ್ ತಿರುವಿನಲ್ಲಿ ಎಡಭಾಗಕ್ಕೆ ವಾಲಿಕೊಂಡು ನಿಧಾನವಾಗಿ ತೇರು ನೆಲಕ್ಕೆ ಅಪ್ಪಳಿಸಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಇನ್ನು ಈ ಘಟನೆ ಇದೇ ಮೊದಲಲ್ಲ, 2018ರಲ್ಲಿಯೂ ಮದ್ದೂರಮ್ಮ ಜಾತ್ರೆಯಲ್ಲಿ ತೇರು ಕುಸಿದು ಬಿದ್ದಿತ್ತು.
ಕರ್ನಾಟಕದಲ್ಲಿ ಬಿಸಿಲಿನ ಝಳಕ್ಕೆ 2 ಸಾವು..!
ಕರ್ನಾಟಕದ ಅನೇಕ ಭಾಗಗಳಲ್ಲಿ ತಾಪಮಾನವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಬಿಸಿಲ ಝಳಕ್ಕೆ ಜನ ತತ್ತರಿಸಿ ಹೋಗಿದ್ದು, ತಾಪದ ಏರಿಕೆ ಜನ ಹೈರಾಣರಾಗಿದ್ದಾರೆ. ಬಿಸಿಲಿನ ಬೇಗೆಗೆ ಹೀಟ್ ಸ್ಟೋಕ್ ಆಗಿರುವ 521 ಪ್ರಕರಣಗಳನ್ನು ಅಧಿಕಾರಿಗಳು ವರದಿ ಮಾಡಿದ್ದಾರೆ. ಮಾರ್ಚ್‌ನಿಂದ ಈವರೆಗೆ ರಾಜ್ಯದಲ್ಲಿ ಎರಡು ಸಾವಿನ ಪ್ರಕರಣಗಳು ದಾಖಲಾಗಿದೆ.
ಮಾರ್ಚ್ 1 ರಿಂದ ಏಪ್ರಿಲ್ 3 ರ ಅವಧಿಯಲ್ಲಿ ಬಾಗಲಕೋಟೆ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ತಲಾ ಒಂದೊಂದು ಸಾವು ಬಿಸಿಲಿನ ತಾಪದಿಂದ ಆಗಿದೆ ಎಂದು ವರದಿ ತಿಳಿಸಿದೆ.
ಚಿಕ್ಕಬಳ್ಳಾಪುರ, ಬಾಗಲಕೋಟೆ, ಚಿತ್ರದುರ್ಗ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಬಿಸಿಗಾಳಿ ತಡೆಯಲಾಗದೆ ಹೀಟ್ ಸ್ಟ್ರೋಕ್ ಪ್ರಕರಣಗಳು ಕಂಡುಬಂದಿದೆ. ಕ್ರಮವಾಗಿ 102, 69, 56 ಮತ್ತು 54 ಹೀಟ್ ಸ್ಟ್ರೋಕ್ ಪ್ರಕರಣಗಳು ವರದಿಯಾಗಿವೆ ಎಂದು ಪ್ರಕಟಣೆ ತಿಳಿಸಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತನ್ನ ದೈನಂದಿನ ಹವಾಮಾನ ವರದಿಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಸರಾಸರಿ ಗರಿಷ್ಠ ತಾಪಮಾನ 42.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ತಿಳಿಸಿದೆ.