ಶೋಕಿ ಜೀವನಕ್ಕೆ ಹೋಗಿ ಕಂಬಿ ಎಣಿಸಿದ ಆಂಕರ್!
– ವಾಲ್ಮೀಕಿ ನಿಗಮ ಅವ್ಯವಹಾರ: ಮಾಜಿ ಸಚಿವ ಬಿ. ನಾಗೇಂದ್ರ ಇಡಿ ವಶ
– ಬೆಂಗಳೂರು : ಹನಿಟ್ರಾಪ್ ಪ್ರಕರಣದ ಆರೋಪಿ ದಿವ್ಯ ವಸಂತ್ ಕೇರಳದಲ್ಲಿ ಅರೆಸ್ಟ್
– ನಟ ದರ್ಶನ್ ಅರೆಸ್ಟ್ ಆಗಿ ಒಂದು ತಿಂಗಳು.!
NAMMUR EXPRESS NEWS
ಬೆಂಗಳೂರು: ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನ ಇಡಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರ ನಿವಾಸ ಸೇರಿ ಅವರಿಗೆ ಸೇರಿದ ಸ್ಥಳಗಳಲ್ಲಿ ಸತತ 48 ಗಂಟೆಗಳ ಕಾಲ ಜಾರಿ ನಿರ್ದೇಶನಾಲಯ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾಗೇಂದ್ರ ಅವರನ್ನು ಬ್ಯಾಂಕ್ ಅಧಿಕಾರಿಗಳ ಮುಂದೆ ಕೂರಿಸಿ ವಿಚಾರಣೆ ನಡೆಸಲಾಗಿದ್ದು ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಾಗೇಂದ್ರ ಅವರನ್ನು ಇಡಿ ಕಚೇರಿಗೆ ಕರೆತಂದು ಅವರ ವಿಚಾರಣೆ ನಡೆಸಿ ಅಧಿಕೃತವಾಗಿ ಬಂಧಿಸುವ ಸಾಧ್ಯತೆ ಇದೆ.
– ಬೆಂಗಳೂರು : ಹನಿಟ್ರಾಪ್ ಪ್ರಕರಣದ ಆರೋಪಿ ದಿವ್ಯ ವಸಂತ್ ಕೇರಳದಲ್ಲಿ ಅರೆಸ್ಟ್
ಬೆಂಗಳೂರು : ಬೆದರಿಕೆ ಹಾಗೂ ಸುಲಿಗೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ನಿರೂಪಕಿ, ‘ಗಿಚ್ಚಿ ಗಿಲಿಗಿಲಿ’ ರಿಯಾಲಿಟಿ ಶೋ ಸ್ಪರ್ಧಿ ದಿವ್ಯಾ ವಸಂತ ಅವರನ್ನು ಜುಲೈ 11ರಂದು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ನೆರೆ ರಾಜ್ಯ ಕೇರಳದಲ್ಲಿ ಇದ್ದ ಅವರನ್ನು ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದು, ನಗರಕ್ಕೆ ಕರೆ ತಂದಿದ್ದಾರೆ. ಇಂದಿರಾನಗರದ ಟ್ರೀ ಸ್ಪಾ ಮತ್ತು ಬ್ಯೂಟಿ ಮಾಲೀಕನನ್ನು ಒಳಗೊಂಡ ಹಲವರನ್ನು ಬ್ಲ್ಯಾಕ್ಮೇಲ್ ಮಾಡಿರುವ ಸುಲಿಗೆ ಪ್ರಕರಣದಲ್ಲಿ ದಿವ್ಯ ವಸಂತ ಆರೋಪಿಯಾಗಿದ್ದಾರೆ. ‘ಇಡೀ ರಾಜ್ಯವೇ ಖುಷಿ ಪಡೋ ಸುದ್ದಿ’ ಎಂದು ನಟಿಯೊಬ್ಬರ ಖಾಸಗಿ ವಿಷಯವನ್ನು ಸುದ್ದಿ ಮಾಡಿ ತಾವೇ ಸುದ್ದಿಯಾಗಿದ್ದ ದಿವ್ಯ ವಸಂತ ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ. ಖುಷಿ ಸುದ್ದಿಕೊಟ್ಟು ವೈರಲ್ ಸುದ್ದಿಯಾದ ದಿವ್ಯ ವಸಂತ ಇಂದಿರಾನಗರದ ಬಳಿಯ ಸ್ಪಾ ಮ್ಯಾನೇಜರ್ಗೆ ಬೆದರಿಕೆ ಹಾಕಿ ಸುಲಿಗೆ ಯತ್ನ ನಡೆಸಿದ ಆರೋಪದಲ್ಲಿ ಆ್ಯಂಕರ್ ದಿವ್ಯಾ ವಸಂತ ಅವರ ತಮ್ಮನನ್ನು ಬಂಧಿಸಿದ್ದ ಬೆನ್ನಲೆ ನೆರೆಯ ತಮಿಳುನಾಡಿಗೆ ಪರಾರಿಯಾಗಿದ್ದರು ಬಳಿಕ ಅಲ್ಲಿಂದ ಕೇರಳಕ್ಕೆ ತೆರಳಿದ್ದರು ಎಂಬ ಮಾಹಿತಿಯಿದೆ. ಈಗ ಪೊಲೀಸರು ಆರೋಪಿಯನ್ನು ಕೇರಳದಲ್ಲಿಯೇ ಬಂಧಿಸಿದ್ದಾರೆ. ಇಂದಿರಾನಗರ ಠಾಣೆ ಪೊಲೀಸರು ರಾಜ್ ನ್ಯೂಸ್ ಕಾರ್ಯನಿರ್ವಾಹಕ ರಾಜಾನುಕುಂಟೆ ವೆಂಕಟೇಶ್ ಸೇರಿದಂತೆ ಹಲವು ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇವರೆಲ್ಲಾ ಸ್ಪಾ ಮ್ಯಾನೇಜರ್ನಿಂದ 15 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದಾರೆ. ಈಗಾಗಲೇ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಈಗ ಕೇರಳದಲ್ಲಿ ಗಿಚ್ಚಿ ಗಿಲಿಗಿಲಿ ಸ್ಪರ್ಧಿಯ ಬಂಧನವಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ವೆಂಕಟೇಶ್ ಮತ್ತು ದಿವ್ಯ ವಸಂತ ಅವರು ‘ಸೈ ರಿಸರ್ಚ್ ಟೀಮ್’ ಹೆಸರಿನ ವಾಟ್ಸಾಪ್ ಗುಂಪನ್ನು ರಚಿಸಿಕೊಂಡು ಇದರ ಮೂಲಕ ಪ್ಲಾನಿಂಗ್ ಮಾಡುತ್ತಿದ್ದರು. ಸದ್ಯ ಕೇರಳದಿಂದ ದಿವ್ಯ ವಸಂತ ಅವರನ್ನು ಬಂಧಿಸಿ ಪೊಲೀಸರು ಕರೆತಂದಿದ್ದಾರೆ.
ನಟ ದರ್ಶನ್ ಅರೆಸ್ಟ್ ಆಗಿ ಒಂದು ತಿಂಗಳು.!
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಬಂಧನವಾಗಿ ಬರೋಬ್ಬರಿ ಒಂದು ತಿಂಗಳು ಪೂರೈಸಿದೆ. ಒಂದು ತಿಂಗಳ ಹಿಂದೆ (ಜೂ.11) ನಟನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.ಪವಿತ್ರಾಗೌಡ ಗೆ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಬೆಂಗಳೂರಿನ ಪಟ್ಟಣಗೆರೆ ಕಾರ್ ಶೆಡ್ ಒಂದರಲ್ಲಿ ಇರಿಸಿ ಹಲ್ಲೆ, ಚಿತ್ರ ಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಸಹಚರರನ್ನು ಬಂಧಿಸಿ ಜೈಲಿನಲ್ಲಿರಿಸಲಾಗಿದೆ.
ಜೂನ್ 8 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ರೇಣುಕಾಸ್ವಾಮಿ ಟ್ರ್ಯಾಪ್ ಮಾಡಲಾಗಿತ್ತು. ಫಾರ್ಮಸಿಯಿಂದ ಕರೆತಂದು ರಾಘವೇಂದ್ರ ಎಂಬಾತ ಟ್ರ್ಯಾಪ್ ಮಾಡಿದ್ದ. ಮಧ್ಯಾಹ್ನ 3:30-4 ಗಂಟೆ ಸುಮಾರಿಗೆ ಆರೋಪಿಗಳು ಬೆಂಗಳೂರು ತಲುಪಿದ್ದರು. ಆರ್ಆರ್ ನಗರ ಶೆಡ್ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆದಿತ್ತು. ಮನಸೋ ಇಚ್ಛೆ ಹಲ್ಲೆ ನಡೆಸಿ ಅಮಾನುಷವಾಗಿ ‘ಡಿ ಗ್ಯಾಂಗ್’ ಕೊಲೆ ಮಾಡಿತ್ತು. ನಟ ದರ್ಶನ್, ಪವಿತ್ರಾ ಗೌಡ ಗ್ಯಾಂಗ್ನಿಂದ ಈ ಹಲ್ಲೆ, ಕೊಲೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಂಜೆ ಆರು ಗಂಟೆ ವೇಳೆಗೆ ತೀವ್ರ ಹಲ್ಲೆಯಿಂದ ರೇಣುಕಾಸ್ವಾಮಿ ಮೃತಪಟ್ಟಿದ್ದ. ಜೂನ್ 9 (ಭಾನುವಾರ) ರಂದು ಬೆಳಗ್ಗೆ 8 ಗಂಟೆಗೆ ಸುಮನಹಳ್ಳಿ ರಾಜಕಾಲುವೆ ಬಳಿ ಶವ ಪತ್ತೆಯಾಯಿತು. ಜೂನ್ 11 (ಮಂಗಳವಾರ) ರಂದು ಬೆಳ್ಳಂಬೆಳಗ್ಗೆ ಎಸಿಪಿ ಚಂದನ್ ನೇತೃತ್ವದ ಮೈಸೂರಿಗೆ ಪೊಲೀಸರ ಟೀಂ ತೆರಳಿತ್ತು. ಈ ವೇಳೆ ದರ್ಶನ್ ಮೈಸೂರಿನ ಖಾಸಗಿ ಹೋಟೆಲ್ನಲ್ಲಿದ್ದರು.
ಹೋಟೆಲ್ನಿಂದ ದರ್ಶನ್ ವಶಕ್ಕೆ ಪಡೆದು ಕರೆತಂದರು. ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಒಟ್ಟು 17 ಮಂದಿ ಬಂಧನವಾಗಿದೆ. ಸದ್ಯ ನಟ ದರ್ಶನ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿನಲ್ಲಿದೆ.