ಚೈತ್ರಾ ಸೇರಿ ಮೂವರಿಗೆ ಜಾಮೀನು!
– ಉದ್ಯಮಿಗೆ ವಂಚನೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
– ಇಂದು ಪರಪ್ಪನ ಅಗ್ರಹಾರದ ಜೈಲಿಂದ ಬಿಡುಗಡೆ
NAMMUR EXPRESS NEWS
ಬೆಂಗಳೂರು: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೋಟೆಲ್ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಕೋಟ್ಯಂತರ ರೂ. ಹಣ ವಂಚಿಸಿದ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಚೈತ್ರಾ ಸೇರಿ ಇಬ್ಬರಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ಇದರಿಂದಾಗಿ ಅವರು ಬಂಧನ ಮುಕ್ತರಾಗಲಿದ್ದಾರೆ. ಆರೋಪಿ ಚೈತ್ರಾ ಹಾಗೂ ಏಳನೇ ಆರೋಪಿಯಾಗಿರುವ ಶ್ರೀಕಾಂತ್‌ಗೆ 3ನೇ ಎಸಿಎಂಎಂ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಮಂಗಳವಾರ ಪರಪ್ಪನ ಅಗ್ರಹಾರದ ಕಾರಾಗೃಹದಿಂದ ಈ ಇಬ್ಬರು ಬಿಡುಗಡೆಯಾಗಲಿದ್ದಾರೆ. ಈ ಪೈಕಿ ಪ್ರಕರಣ ಸಂಬಂಧ ಮೂವರಿಗೆ ಜಾಮೀನು ಸಿಕ್ಕಿದ್ದಂತಾಗುತ್ತದೆ.
ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳಾದ ಚೈತ್ರಾ, ಗಗನ್ ಕಡೂರು, ಹಾಲಶ್ರೀ ಸ್ವಾಮೀಜಿ, ಧನರಾಜ್, ಚನ್ನನಾಯ್, ಪ್ರಜ್ವಲ್, ಶ್ರೀಕಾಂತ್ ಸೇರಿದಂತೆ 9 ಮಂದಿಯನ್ನು ಬಂಧಿಸಲಾಗಿತ್ತು. ತನಿಖೆ ಪೂರ್ಣಗೊಳಿಸಿ ಇತ್ತೀಚೆಗೆ ಈ ಒಂಭತ್ತು ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಸಿಸಿಬಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಈ ಪ್ರಕರಣ ರಾಜ್ಯ ರಾಜಕೀಯದಲ್ಲೂ ಭಾರೀ ಸಂಚಲನ ಮೂಡಿಸಿತ್ತು.
ಏನಿದು ಕೇಸ್…?
ಉದ್ಯಮಿ ಗೋವಿಂದ ಬಾಬು ಅವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚನೆ ಎಸಗಿದ ಆರೋಪದಡಿ ಹಿಂದೂ ಕಾರ್ಯಕರ್ತೆ ಚೈತ್ರಾಳನ್ನು ಸೆಪ್ಟೆಂಬರ್ 13 ರಂದು ಸಿಸಿಬಿ ಪೊಲೀಸರು ಬಂಧಿಸಿದ್ದರು. ಗೋವಿಂದ ಬಾಬು ಅವರ ಬಳಿಯಿಂದ ಚೈತ್ರಾ ಒಟ್ಟು 5 ಕೋಟಿ ರೂ. ಹಣ ಪಡೆದಿದ್ದಳು. ಆದರೆ ಗೋವಿಂದಬಾಬು ಪೂಜಾರಿ ಅವರಿಗೆ ಟಿಕೆಟ್ ಸಿಗಲಿಲ್ಲ. ಬಳಿಕ ಗೋವಿಂದಬಾಬು ಕೊಟ್ಟ ಹಣವನ್ನು ವಾಪಸ್ಸು ಕೇಳಿದ್ದಾರೆ. ಆದರೆ ಚೈತ್ರಾ ಮತ್ತು ಗ್ಯಾಂಗ್ ಹಣ ನೀಡದೇ ವಂಚಿಸಿತ್ತು. ಈ ಬಗ್ಗೆ ಗೋವಿಂದಬಾಬು ಪೂಜಾರಿ ಅವರು ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಸಿಸಿಬಿ ಪೊಲೀಸರು ಚೈತ್ರಾಳನ್ನು ಬಂಧಿಸಿದ್ದರು.