ಟಾಪ್ 5 ನ್ಯೂಸ್ ಕರ್ನಾಟಕ
ಬೆಂಗಳೂರು : ಬೈಕ್ ವೀಲಿಂಗ್ ಮಾಡುತ್ತಿದ್ದ ಐವರು ಪುಂಡರು ಬಂಧನ
– ಹಾಸನ / ತುಮಕೂರು : ಫೈನಾನ್ಸ್ ಕಿರುಕುಳಕ್ಕೆ ಮಹಿಳೆಯರಿಬ್ಬರ ಬಲಿ
– ದೊಡ್ಡಬಳ್ಳಾಪುರ: ಸಾರಿಗೆ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು..!
– ಹನೂರು : ಬಸ್ ಪಲ್ಟಿಯಾಗಿ ಓರ್ವ ಸಾವು..!
– ಚಿಕ್ಕಬಳ್ಳಾಪುರ : ನಾಲ್ಕು ನಾಟಿ ಕೋಳಿಗಳ ಸಾವು ಹಕ್ಕಿಜ್ವರದ ಶಂಕೆ
NAMMUR EXPRESS NEWS
ಬೆಂಗಳೂರು : ಬೈಕ್ ವೀಲಿಂಗ್ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದ ಓರ್ವ ಅಪ್ರಾಪ್ತ ಸೇರಿ 5 ಮಂದಿಯನ್ನು ಹುಳಿಮಾವು ಸಂಚಾರಿ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಅಂಜನಾ ಪುರ ಬಿಡಿಎ ರಸ್ತೆ, ಸಾಯಿಬಾಬಾ ದೇವಸ್ಥಾನದ ರಸ್ತೆ ಹಾಗೂ ಆರ್.ಟಿ.ಓ ರಸ್ತೆಯಲ್ಲಿ ವಾಹನ ದಟ್ಟಣೆ ನಡುವೆಯೂ ಡೆಡ್ಲಿ ವೀಲಿಂಗ್ ಮಾಡುತ್ತಿದ್ದ ಪುಂಡರ ಹಾವಳಿಯಿಂದ ಬೇಸತ್ತ ಸ್ಥಳೀಯರು ಹುಳಿಮಾವು ಪೊಲೀಸರಿಗೆ ಮಾಹಿತಿ ನೀಡಿದ್ದರು. ಎಸಿಪಿ ಮಹಾದೇವ್ ಮಾರ್ಗದರ್ಶನದಲ್ಲಿ ಬುಧವಾರ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಈ ಐವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ವೀಲಿಂಗ್ ಮಾಡುವವರಿಂದ ಪಾದಾಚಾರಿ, ಇತರ ವಾಹನ ಸವಾರರಿಗೆ ತೊಂದರೆ ಆಗುತ್ತದೆ. ಅಲ್ಲದೆ ರಸ್ತೆ ಅಪಘಾತಗಳು ಸಂಭವಿಸುತ್ತವೆ. ವೀಲಿಂಗ್ ಮಾಡುವವರು ವಿರುದ್ಧ ದಂಡ, ಜೈಲು ಹಾಗೂ ಬೈಕ್ ವಶಕ್ಕೆ ಪಡೆಯುವ ಜೊತೆಗೆ ಪರವಾನಿಗೆ ರದ್ದುಗೊಳಿಸಬಹುದಾಗಿದೆ ಎಂದು ಹುಳಿಮಾವು ಸಂಚಾರಿ ಪೋಲಿಸ್ ಠಾಣೆ ಇನ್‌ಸ್ಪೆಕ್ಟರ್ ಪಾರ್ವತಮ್ಮ ತಿಳಿಸಿದರು.
– ಹಾಸನ / ತುಮಕೂರು : ಫೈನಾನ್ಸ್ ಕಿರುಕುಳಕ್ಕೆ ಮಹಿಳೆಯರಿಬ್ಬರ ಬಲಿ
ತುಮಕೂರು/ಹಾಸನ: ಸರ್ಕಾರ ಮೈಕ್ರೋಫೈನಾನ್ಸ್ ಕಿರುಕುಳ ನಿಯಂತ್ರಿಸಲು ಸುಗ್ರೀವಾಜ್ಞೆ ತಂದ ನಂತರವೂ ಕಿರುಕುಳ ನಿಂತಿಲ್ಲ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿಕ್ಕನಕೋಟೆ ಗ್ರಾಮದಲ್ಲಿ ಲೀಲಾವತಿ (35), ಹಾಸನ ಜಿಲ್ಲೆ ಆಲೂರು ತಾಲೂಕಿನ ಹಳ್ಳಿಯೂರು ಗ್ರಾಮದ ಕೆಂಚಮ್ಮ (50) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲೀಲಾವತಿ ಫೀನ್ಯಾರ್ಪ್ ಸಂಸ್ಥೆಯಲ್ಲಿ ₹5 ಲಕ್ಷ, ಎಲ್-ಟಿನಲ್ಲಿ 1 ಲಕ್ಷ, ಛಲವಾದಿ ಸಂಘದಲ್ಲಿ 1 ಲಕ್ಷ, ಧರ್ಮಸ್ಥಳ ಸಂಘದಲ್ಲಿ ₹1 ಲಕ್ಷ ಸೇರಿ ಒಟ್ಟು 48 ಲಕ್ಷ ಸಾಲ ಮಾಡಿ ದ್ದರು. ಸಾಲ ವಸೂಲಿ ಏಜೆಂಟರ ನಿರಂತರ ಒತ್ತಡ ತಾಳ ಲಾರದೆ ನೇಣು ಬಿಗಿದು ಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತಿ ನಾಗರಾಜು ಆರೋಪಿಸಿದ್ದಾರೆ. ಅದೇ ರೀತಿ ಕೆಂಚಮ್ಮ ಸುಮಾರು 7-8 ಮೈಕ್ರೋ ಫೈನಾನ್ಸ್‌ಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಸಾಲ ತೆಗೆದುಕೊಂಡಿದ್ದರು. ಪ್ರತಿ ವಾರ ಹತ್ತು ಸಾವಿರಕ್ಕೂ ಹೆಚ್ಚು ಹಣ ಕಟ್ಟಬೇಕಾಗಿತ್ತು. ಇದು ಸಾಧ್ಯವಾಗದೆ ಮರ್ಯಾದೆಗೆ ಅಂಜಿ ಬುಧವಾರ ಬೆಳಗ್ಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ದೊಡ್ಡಬಳ್ಳಾಪುರ: ಸಾರಿಗೆ ಬಸ್ ಡಿಕ್ಕಿಯಿಂದ ಬೈಕ್ ಸವಾರ ಸಾವು..!!
ದೊಡ್ಡಬಳ್ಳಾಪುರ: ದ್ವಿಚಕ್ರ ವಾಹನ ಮತ್ತು ಕೆಎಸ್‌ಆರ್ ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ, ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ತಾಲೂಕಿನ ಗುಂಡಮಗೆರೆ ಬಳಿ ಸಂಭವಿಸಿದೆ. ಮೃತನನ್ನು ದೊಡ್ಡಬಳ್ಳಾಪುರದ ನಿವಾಸಿ ಪುನಿತ್ (27) ಎಂದು ಗುರುತಿಸಲಾಗಿದೆ. ಮೃತ ಯುವಕ ದ್ವಿಚಕ್ರ ವಾಹನದಲ್ಲಿ ಬಂಕೇನಹಳ್ಳಿ ಕಡೆಯಿಂದ ಬರುವ ವೇಳೆ ವಾಬಸಂದ್ರ ಗುಂಡಮಗೆರೆ ನಡುವಿನ ತಿರುವಿನಲ್ಲಿ ಬಸ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಏಕಾಏಕಿ ಎದುರಾದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ತಪ್ಪಿಸಲು ಕೆಎಸ್ ಆರ್‌ಟಿಸಿ ಬಸ್ ಚಾಲಕ ಪ್ರಯತ್ನಿಸಿದ್ದು ಬಸ್ ರಸ್ತೆ ಬದಿಗೆ ನುಗ್ಗಿದೆ. ಸ್ಥಳಕ್ಕೆ ಹೊಸಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
– ಹನೂರು : ಬಸ್ ಪಲ್ಟಿಯಾಗಿ ಓರ್ವ ಸಾವು..!
ಹನೂರು : ನಿಶ್ಚಿತಾರ್ಥ ಮುಗಿಸಿ ಕೊಂಡು ವಾಪಸ್ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿ ಓರ್ವ ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಹನೂರು ತಾಲೂಕಿನ ಸಮೀಪ ನಡೆದಿದೆ. ಹನೂರು ತಾಲೂಕಿನ ತೆಳ್ಳನೂರು ಬಂಡಳ್ಳಿ ಮಾರ್ಗ ಮಧ್ಯದ ಅರಣ್ಯದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಕಾಮಗೆರೆಯ ಹೋಲಿ ಕ್ರಾಸ್, ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ.
– ಚಿಕ್ಕಬಳ್ಳಾಪುರ : ನಾಲ್ಕು ನಾಟಿ ಕೋಳಿಗಳ ಸಾವು ಹಕ್ಕಿಜ್ವರ ಶಂಕೆ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಎಚ್. ಎಸ್.ಗಾರ್ಡನ್ ನಲ್ಲಿ ನಾಲ್ಕು ನಾಟಿ ಕೋಳಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಮತ್ತೆ ಹಕ್ಕಿಜ್ವರದ ಭೀತಿ ಎದುರಾಗಿದೆ. ನಗರದ 21ನೇ ವಾರ್ಡ್ ಎಚ್.ಎಸ್.ಗಾರ್ಡನ್ ಸ್ಮಶಾನದ ಬಳಿ ವಾಸವಾಗಿರುವ ಫಾರುಕ್ ಎಂಬುವರಿಗೆ ಸೇರಿದ ನಾಲ್ಕು ನಾಟಿ ಕೋಳಿಗಳು ಸಾವನಪ್ಪಿವೆ.
ಕಳೆದ ಫೆಬ್ರವರಿ 27ರಂದು ತಾಲೂಕಿನ ವರದಹಳ್ಳಿ ಗ್ರಾಮದಲ್ಲಿ ದ್ಯಾವಪ್ಪ ಎಂಬುವರಿಗೆ ಸೇರಿದ 28 ಕೋಳಿಗಳು ಹಾಗೂ ರತ್ನಮ್ಮ ಎಂಬುವರಿಗೆ ಸೇರಿದ 5 ಕೋಳಿಗಳು ಪ್ರಾಣಬಿಟ್ಟಿದ್ದವು. ಪ್ರಯೋಗಾಲಯದ ವರದಿಯಲ್ಲಿ ಎರಡು ಕೋಳಿಗಳಲ್ಲಿ ಹಕ್ಕಿಜ್ವರದ ಎಚ್5 ಎನ್1 ವೈರಸ್ ಪತ್ತೆಯಾಗಿರುವುದು ದೃಢಪಟ್ಟಿತ್ತು.