ಚಿಕ್ಕಮಗಳೂರು ಟಾಪ್ ನ್ಯೂಸ್..!!
* ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ
* ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ಬೆನ್ನಲ್ಲೇ ಕಾಫಿನಾಡಲ್ಲಿ ಪೊಲೀಸರು ಫುಲ್ ಅಲರ್ಟ್
* ಗೋವನ್ನು ರಾಷ್ಟ್ರೀಯ, ಸಾಂಸ್ಕೃತಿಕ ಸಂಪತ್ತು ಎಂದು ಘೋಷಿಸುವಂತೆ ಒತ್ತಾಯ
NAMMUR EXPRESS NEWS
* ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ
ಚಿಕ್ಕಮಗಳೂರು: ರಾಜ್ಯದ ಪ್ರಸಿದ್ದ ಸೀತಾಳಯ್ಯನಗಿರಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ – ಜಾತ್ರಾ ಮಹೋತ್ಸವ ಮತ್ತು ರಥೋತ್ಸವವೂ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಎಂಟೂರು ಗ್ರಾಮಸ್ಥರು ಹಾಗೂ ಎರಡೂರು ಮಠದ ಸಾರಥ್ಯದಲ್ಲಿ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಯಶಸ್ವಿಗೊಂಡಿತು.
ತಳ್ಳಿಹಳ್ಳ, ಕಟುಮನೆ, ಇಳೆಹೊಳೆ, ಜಕ್ಕನಹಳ್ಳಿ, ಉಳುವಾಗಿಲು, ಕಬ್ಬಿನಹಳ್ಳಿ, ಹಿರೇಕೊಳಲೆ, ಬ್ಯಾಗದಹಳ್ಳಿ, ನರಗನಹಳ್ಳಿ, ಚಿಕ್ಕಕೊಳಲೆ ಗ್ರಾಮಸ್ಥರು ಹಾಗೂ ಮುಳ್ಳಪ್ಪಸ್ವಾಮಿ, ಸೀತಾಳಯ್ಯನಗಿರಿ ಮತ್ತು ಹೊಸಪುರ ನಾರಕಂತೆ ಮಠದ ಸಹಭಾಗಿತ್ವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗ್ರಾಮಗಳ ದೇವರ ಅಡ್ಡೆ ಹೊತ್ತಿ ಕುಣಿಸುತ್ತಾ ಗ್ರಾಮಸ್ಥರು ದೇವಾಲಯ ಸುತ್ತಲು ಮೆರವಣಿಗೆ ನಡೆಸಿದರು.
40ಕ್ಕೂ ಹೆಚ್ಚು ಗ್ರಾಮಸ್ಥರು ಪೂರ್ವಿಕರ ಶೈಲಿಯ ಸಾಂಪ್ರದಾಯಿಕ ವಸ್ತ್ರ, ಪಂಚೆ, ಶಲ್ಯ, ಕೋಟು ಹಾಗೂ ಪೇಟಾ ಧರಿಸಿ ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಗ್ರಾಮಗಳ ದೇವರನ್ನು ಮೆರವಣಿಗೆ ಬಳಿಕ ಶ್ರೀ ಮಲ್ಲಿಕಾರ್ಜುನ ಸನ್ನಿಧಿಧಾನಕ್ಕೆ ಎಂಟೂರು ಗ್ರಾಮಸ್ಥರು ಗರ್ಭಗುಡಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ದೂರದಿಂದಲೇ ಭವ್ಯ ರಥದಲ್ಲಿ ಅಲಂಕೃತಗೊಂಡಿದ್ದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ಭಕ್ತಿಪೂರ್ವವಾಗಿ ನಮಸ್ಕರಿಸಿದರು. ರಥೋತ್ಸವ ಪೂರ್ಣಗೊಂಡ ನಂತರ ಗ್ರಾಮ ದೇವರುಗಳು ಮರಳಿ ಗ್ರಾಮಕ್ಕೆ ವಾಪಸಾದವು.
* ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ಬೆನ್ನಲ್ಲೇ ಕಾಫಿನಾಡಲ್ಲಿ ಪೊಲೀಸರು ಫುಲ್ ಅಲರ್ಟ್
ಚಿಕ್ಕಮಗಳೂರು: ಹಂಪಿಯಲ್ಲಿ ವಿದೇಶಿ ಮಹಿಳೆ ಮತ್ತು
ಹೋಂ ಸ್ಟೇ ಮಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂತಹ ಘಟನೆ ನಡೆಯದಂತೆ ಚಿಕ್ಕಮಗಳೂರಿನಲ್ಲಿ ಪೊಲೀಸರು ಎಚ್ಚರಿಕೆ ಕೈಗೊಂಡಿದ್ದಾರೆ. ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪೊಲೀಸರು ಹೋಂಸ್ಟೇ, ರೆಸಾರ್ಟ್ ಮಾಲೀಕರ ಸಭೆಯನ್ನು ನಡೆಸಿದ್ದಾರೆ.
ಹೋಂ ಸ್ಟೇ, ರೆಸಾರ್ಟ್ ಗಳಿಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆಯ ಕುರಿತು ಚರ್ಚಿಸಲಾಗಿದ್ದು, ಮುಖ್ಯವಾಗಿ ವಿದೇಶಿ ಪ್ರವಾಸಿಗರ ಭದ್ರತೆ ಹಾಗೂ ಸುರಕ್ಷತೆಗಾಗಿ ಸೂಕ್ತ ಕ್ರಮಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳುವಂತೆ ಪೊಲೀಸರು ಹೋಂ ಸ್ಟೇ, ರೆಸಾರ್ಟ್ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 1300ಕ್ಕೂ ಅಧಿಕ ಹೋಂ ಸ್ಟೇ, ರೆಸಾರ್ಟ್‌ಗಳಿದ್ದು, ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ, ಹೀಗಾಗಿ ವಿದೇಶಿ ಪ್ರವಾಸಿಗರಿಂದ ಸಿ ಫಾರ್ಮ್ ಕಡ್ಡಾಯವಾಗಿ ಪಡೆಯುವಂತೆ ಸೂಚನೆ ನೀಡಲಾಗಿದೆ.
* ಗೋವನ್ನು ರಾಷ್ಟ್ರೀಯ, ಸಾಂಸ್ಕೃತಿಕ ಸಂಪತ್ತು ಎಂದು ಘೋಷಿಸುವಂತೆ ಒತ್ತಾಯ
ಚಿಕ್ಕಮಗಳೂರು: ಭಾರತೀಯ ಗೋ ತಳಿಗಳ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ಗೋ ಮಂತ್ರಾಲಯ ಸ್ಥಾಪನೆ ಮಾಡಬೇಕೆಂಬ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಕಾಮಧೇನು ಗೋ ಸೇವಾ ಟ್ರಸ್ಟ್ ನ ಅಧ್ಯಕ್ಷ ನಾಗೇಶ್ ಅಂಗಿರಸ ತಿಳಿಸಿದರು.
ಚಿಕ್ಕಮಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ವಿಶ್ವ ಹಿಂದೂ ಪರಿಷತ್ ಗೋರಕ್ಷಕ ವಿಭಾಗದ ವತಿಯಿಂದ ಫೆಬ್ರವರಿ 20ರಂದು ನಡೆದ ಅಖಿಲ ಭಾರತ ಗೋ ಭಕ್ತ ಅಧಿವೇಶನದಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಗೋವನ್ನು ರಾಷ್ಟ್ರೀಯ ಸಾಂಸ್ಕೃತಿಕ ಸಂಪತ್ತು ಎಂದು ಘೋಷಿಸಬೇಕು, ಗೋಪಾಷ್ಟಮಿಯನ್ನು ರಾಷ್ಟ್ರೀಯ ಉತ್ಸವವೆಂದು ಘೋಷಿಸುವ ಜೊತೆಗೆ ಗೋ ಹತ್ಯೆಯನ್ನು ತಡೆಯಲು ರಾಷ್ಟ್ರೀಯ ಮಟ್ಟದಲ್ಲಿ ಕಠಿಣ ಕಾನೂನು ಜಾರಿಗೊಳಿಸಬೇಕು ಅಲ್ಲದೇ ಗೋಮಾಳಗಳನ್ನು ಅತಿಕ್ರಮ ಮಾಡುತ್ತಿರುವುದನ್ನು ತಪ್ಪಿಸಿ ಗೋಮಾಳ ಪ್ರಾಧಿಕಾರವನ್ನು ರಚಿಸಬೇಕು ಎಂದು ಒತ್ತಾಯಿಸಿದರು.