ಬಾಟಲಿ ನೀರು ಕುಡಿಯಲು ಯೋಗ್ಯವಲ್ಲ ಎಚ್ಚರ…!
– 255 ವಾಟರ್ ಬಾಟಲಿ ಮಾದರಿಗಳ ಗುಣಮಟ್ಟ ಪರೀಕ್ಷೆ
– 214 ಹೋಟೆಲ್, ರೆಸ್ಟೋರೆಂಟ್‌ನ ಕಿಚನ್ ಅಸುರಕ್ಷಿತ, ಔಷಧಿಗಳು ಕಳಪೆ
NAMMUR EXPRESS NEWS
ಬೆಂಗಳೂರು: ತಿನ್ನುವ ಆಹಾರ, ಸೇವಿಸುವ ಔಷಧಗಳ ಕಳಪೆ ಗುಣಮಟ್ಟ ಬಯಲಾದ ಬೆನ್ನಲ್ಲೇ ಕುಡಿಯುವ ನೀರಿನ ಬಾಟಲಿಯ ಬಹಳಷ್ಟು ಬ್ರ್ಯಾಂಡ್‌ಗಳು ಅಸುರಕ್ಷಿತ ಎಂಬ ಶಾಕ್ ಸುದ್ದಿಯನ್ನು ಸರಕಾರವೇ ನೀಡಿದೆ. ರಾಜ್ಯದ ನಾನಾ ಭಾಗಗಳಲ್ಲಿ 255 ಬಾಟಲಿ ನೀರಿನ ಮಾದರಿಗಳ ಪರೀಕ್ಷೆಯಲ್ಲಿ ಕೇವಲ 72 ಮಾತ್ರವೇ ಕುಡಿಯಲು ಯೋಗ್ಯ ಎಂಬುದು ಖಚಿತವಾಗಿದೆ. ಖನಿಜಯುಕ್ತ ನೀರು ಎಂದು ಮಾರಾಟ ಮಾಡಲಾಗುವ 183 ಬ್ರ್ಯಾಂಡ್‌ಗಳು ಅಸುರಕ್ಷಿತ ಮತ್ತು ಕಳಪೆ ಗುಣಮಟ್ಟದಿಂದ ಕೂಡಿರುವುದು ಸಾಬೀತಾಗಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ರಾಜ್ಯಾದ್ಯಂತ ಬಾಟಲಿ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿದೆ. ಇದರಲ್ಲಿ 95 ಮಾದರಿಗಳು ಅಸುರಕ್ಷಿತ ಎಂಬುದು ದೃಢಪಟ್ಟಿದ್ದರೆ, 88 ಮಾದರಿಗಳು ತೀರಾ ಕಳಪೆ ಎಂದು ದೃಢವಾಗಿದೆ. ಇಲಾಖೆ ಕಳೆದ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ನಡೆಸಿದ ವಿಶೇಷ ತಪಾಸಣಾ ಅಭಿಯಾನದಲ್ಲಿ ಈ ಸಂಗತಿ ದಾಖಲಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ಒಟ್ಟು 88 ಮಾದರಿ ನೀರಿನ ಬಾಟಲಿಗಳಲ್ಲಿ ರಾಸಾಯನಿಕ ಅಂಶ ಮತ್ತು ಅಪಾಯಕಾರಿ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ. ಇದು ಅತ್ಯಂತ ಆತಂಕಕಾರಿ ವಿಷಯ. ನಾನಾ ಬ್ರ್ಯಾಂಡ್‌ನ ಬಾಟಲಿ ಕುಡಿಯುವ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಮುಂದಿನ ಹಂತವಾಗಿ, ಈ ಬಾಟಲಿ ಕುಡಿಯುವ ನೀರು ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಆ ಸಂದರ್ಭದಲ್ಲೂ ಕಳಪೆ ಎಂಬುದು ಖಚಿತಪಟ್ಟರೆ ಸಂಬಂಧಪಟ್ಟ ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದರು.
214 ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಇಲಿ, ಚಿರಳೆ ಮತ್ತಿತರ ಕ್ರಿಮಿಕೀಟಗಳ ನಿಯಂತ್ರಣ ಕ್ರಮವೇ ಇಲ್ಲದೆ ಅಸುರಕ್ಷಿತ ವಾತಾವರಣದಲ್ಲಿ ಆಹಾರ ತಯಾರಿಕೆಯಾಗುತ್ತಿದ್ದ ಸಂಗತಿ ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಒಟ್ಟು 590 ಹೋಟೆಲ್, ರೆಸ್ಟೋರೆಂಟ್‌ಗಳ ಪರಿಶೀಲನೆ ನಡೆಸಲಾಗಿದ್ದು, ಸ್ವಚ್ಛತೆ ಮತ್ತು ಸುರಕ್ಷತೆಯೇ ಇಲ್ಲದ ಈ 214 ಹೋಟೆಲ್‌ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಒಟ್ಟು 11 ಹೋಟೆಲ್‌ಗಳಿಗೆ ದಂಡ ವಿಧಿಸಲಾಗಿದೆ.