ಆರೋಗ್ಯ ಎಕ್ಸ್ ಪ್ರೆಸ್
ಶೀತ, ಜ್ವರಕ್ಕೆ ಮನೆ ಮದ್ದು ದೊಡ್ಡಪತ್ರೆ ಎಲೆ!
ದೊಡ್ಡಪತ್ರೆ ಎಲೆಗಳನ್ನು ಈ ರೀತಿ ಬಳಸಿದರೆ ಶೀತ, ಜ್ವರ ಹತ್ತಿರವೂ ಸುಳಿಯುವುದಿಲ್ಲ!
NAMMUR EXPRESS NEWS
ಮನೆಯಲ್ಲಿರುವ ಕೆಲವು ಸಸ್ಯಗಳಿಂದ ಸಣ್ಣ ಪುಟ್ಟ ಶೀತ, ಜ್ವರವನ್ನು ಕಡಿಮೆ ಮಾಡಿಕೊಳ್ಳಬಹುದು. ಇಂತಹ ಪರಿಣಾಮಕಾರಿ ಔಷಧಿ ಗಿಡಗಳಲ್ಲಿ ದೊಡ್ಡ ಪತ್ರೆ ಗಿಡವೂ ಒಂದಾಗಿದೆ. ಇದು ಶೀತ, ಜ್ವರಕ್ಕೆ ಮನೆ ಮದ್ದಾಗಿದೆ.
ಹಾಗಾದರೆ ಇದನ್ನು ಬಳಸುವುದು ಹೇಗೆ? ಮಕ್ಕಳಿಗೂ ನೀಡಬಹುದೇ? ಇಲ್ಲಿದೆ ಸಂಪೂರ್ಣ ಮಾಹಿತಿ.
ಮನೆಯ ಹಿತ್ತಲಿನಲ್ಲಿರುವ ಸಸ್ಯಗಳು ಅನೇಕ ರೀತಿಯ ಸಣ್ಣ ಪುಟ್ಟ ಕಾಯಿಲೆಗಳಿಗೆ ರಾಮಬಾಣವಾಗಿರುತ್ತದೆ. ಹಿಂದಿನ ಕಾಲದಲ್ಲಿ ಜ್ವರ, ಶೀತಕ್ಕೆ ಮೊದಲು ಮನೆಮದ್ದುಗಳನ್ನು ಮಾಡುತ್ತಿದ್ದರು. ಆದರೆ ಇಂದು ನಾವು ಮಾತ್ರೆಗಳ ಮೊರೆ ಹೋಗಿದ್ದೇವೆ. ಮಕ್ಕಳಿಗೂ ನಾವು ಈ ಅಭ್ಯಾಸವನ್ನೇ ರೂಢಿಸಿಕೊಂಡು ಬರುತ್ತಿದ್ದೇವೆ. ಇದಕ್ಕಿಂತ ಮನೆಯಲ್ಲಿರುವ ಕೆಲವು ಸಸ್ಯಗಳಿಂದ ಸಣ್ಣ ಪುಟ್ಟ ಶೀತ, ಜ್ವರವನ್ನು ಕಡಿಮೆ ಮಾಡಿಕೊಳ್ಳಬಹುದು. ಇಂತಹ ಪರಿಣಾಮಕಾರಿ ಔಷಧಿ ಗಿಡಗಳಲ್ಲಿ ದೊಡ್ಡ ಪತ್ರೆ ಗಿಡವೂ ಒಂದಾಗಿದೆ. ಇದು ಶೀತ, ಜ್ವರಕ್ಕೆ ಮನೆ ಮದ್ದಾಗಿದೆ.
ಸಾಮಾನ್ಯವಾಗಿ ಆಹಾರ ಸೇವನೆಯಲ್ಲಿ ಆದಂತಹ ಬದಲಾವಣೆ, ಹವಾಮಾನದಲ್ಲಿನ ವ್ಯತ್ಯಾಸದಿಂದ ಶ್ವಾಸಕೋಶದಲ್ಲಿ ಕಫ ಕಟ್ಟಿಕೊಳ್ಳುತ್ತದೆ. ಇದರಿಂದ ಶೀತವಾದರೆ ಎಷ್ಟು ದಿನವಾದರೂ ಕಡಿಮೆಯಾಗುವುದಿಲ್ಲ. ಇದಕ್ಕೆ ದೊಡ್ಡ ಪತ್ರೆ ಸೊಪ್ಪು ಉತ್ತಮ ಮನೆಮದ್ದಾಗಿದೆ. ಇನ್ನು ಚಿಕ್ಕ ಮಕ್ಕಳಿಗೂ ಕೂಡ ಈ ಸೊಪ್ಪನ್ನು ಔಷಧವಾಗಿ ಬಳಸಬಹುದಾಗಿದೆ. ಇದರ ರಸವನ್ನು ಸ್ವಲ್ಪ ಕುಡಿಯಲು ಕೊಡುವುದರಿಂದ ನೆಗಡಿಯನ್ನು ಕಡಿಮೆ ಮಾಡಬಹುದಾಗಿದೆ.
ಔಷಧಿ ಹೇಗೆ ತಯಾರಿಸುವುದು?
ದೊಡ್ಡ ಪತ್ರೆ ಸೊಪ್ಪನ್ನು ಬೆಂಕಿಯಲ್ಲಿ ಸುಟ್ಟು ಅದರ ರಸವನ್ನು ತೆಗದು ಅದಕ್ಕೆ ಅರ್ಧ ಚಮಚ ಬೆಲ್ಲ ಸೇರಿಸಿ ಕುಡಿದರೆ ಒಂದೇ ದಿನದಲ್ಲಿ ಶೀತ, ಕಟ್ಟಿದ ಮೂಗಿನ ಸಮಸ್ಯೆ ನಿವಾರಣೆಯಾಗುತ್ತದೆ.
ಇನ್ನು ಸಣ್ಣ ಮಕ್ಕಳಿಗೆ ಕೊಡುವಾಗ ದೊಡ್ಡ ಪತ್ರೆಯನ್ನು ಚೆನ್ನಾಗಿ ಸುಡಬೇಕು. ಬಳಿಕ ಅದನ್ನು ಒಂದು ಪಾತ್ರೆಗೆ ಹಾಕಿ ಜಜ್ಜಬೇಕು. ನಂತರ ಅದರ ರಸವನ್ನು ತೆಗೆದು ಮಕ್ಕಳಿಗೆ ಕುಡಿಯಲು ಕೊಡಬೇಕು. ಕೇವಲ 5 ರಿಂದ 6 ಸಣ್ಣ ಸಣ್ಣ ಎಲೆಗಳು ಮಕ್ಕಳಿಗೆ ಸಾಕಾಗುತ್ತದೆ. ದೊಡ್ಡವರಿಗಾದರೆ ಸ್ವಲ್ಪ ಜಾಸ್ತಿ ಬಳಸಬಹುದು. ಆದರೆ ಇದನ್ನು 6 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ಮಾತ್ರ ನೀಡಬೇಕು.
ದೊಡ್ಡ ಪತ್ರೆ ಸೊಪ್ಪನ್ನು ಬೆಂಕಿಯ ಮೇಲೆ ಇಟ್ಟು ಬಾಡಿಸಿ ನಂತರ ಅದನ್ನು ನೆತ್ತಿಯ ಮೇಲೆ ಹಾಕಿದರೆ ದೇಹದಲ್ಲಿನ ತಣ್ಣನೆಯ ಅಂಶ ನಿವಾರಣೆಯಾಗಿ ಜ್ವರ, ಶೀತ ಕಡಿಮೆಯಾಗುತ್ತದೆ.
