15 ಲಕ್ಷ ಅನರ್ಹರ ಬಿಪಿಎಲ್ ಕಾರ್ಡ್ ರದ್ದು
– ಎಪಿಎಲ್ ಗೆ ವರ್ಗಾಯಿಸಲು ಕ್ರಮ
– ಸಚಿವ ಕೆ.ಎಚ್. ಮುನಿಯಪ್ಪ ಹೇಳಿಕೆ
NAMMUR EXPRESS NEWS
ಬೆಂಗಳೂರು : ಅನರ್ಹ ಬಿಪಿಎಲ್ ಕಾರ್ಡ್‌ದಾರರನ್ನು ಎಪಿಎಲ್‌ಗೆ ವರ್ಗಾಯಿಸಲು ಕ್ರಮಕೈಗೊಳ್ಳುತ್ತೇನೆ, ಎಲ್ಲ ಶಾಸಕರ ಸಹಕಾರ ಅತ್ಯಗತ್ಯ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ. ಈ ಮೂಲಕ ಅನರ್ಹ ಬಿಪಿಎಲ್ ಕಾರ್ಡ್ ರದ್ದು ನಿಶ್ಚಿತ ಎಂಬ ಸಂದೇಶ ರವಾನಿಸಿದ್ದಾರೆ. ಸೋಮವಾರ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಎಂ. ನಾಗರಾಜು, ಪ್ರಶ್ನೆಗೆ ಉತ್ತರಿಸಿ, ಅನರ್ಹರು ಪಡಿತರ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದರಿಂದ ಅರ್ಹರಿಗೆ ಪಡಿತರ ಸಿಗುತ್ತಿಲ್ಲ. ಸರ್ಕಾರಕ್ಕೂ ಹೆಚ್ಚಿನ ಹೊರೆ ಬೀಳುತ್ತಿದೆ.
ಕೇಂದ್ರದ 12 ಮಾರ್ಗಸೂಚಿಗಳ ಬದಲಾಗಿ ಐದು ಮಾನದಂಡಗಳ ಮೇಲೆ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇನೆ. ಇದಕ್ಕೆ ಸರ್ವ ಸದಸ್ಯರು ಒಪ್ಪಿಗೆ ನೀಡಿದರೆ 15 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ವರ್ಗಾಯಿಸುತ್ತೇನೆ. ಅಂದಾಜು 60 ಲಕ್ಷ ಅನರ್ಹ ಫಲಾನುಭವಿಗಳು ಹೊರಗೆ ಹೋಗಲಿದ್ದಾರೆ ಎಂದು ಮುನಿಯಪ್ಪ ತಿಳಿಸಿದರು. ರಾಜ್ಯ ಇಷ್ಟೊಂದು ಮುಂದುವರಿದಿದ್ದರೂ 1.28 ಲಕ್ಷ ಬಿಪಿಎಲ್ ಕಾರ್ಡ್ ಗಳಿದ್ದು, ಇದು ದಕ್ಷಿಣ ಭಾರತದಲ್ಲೇ ಅಧಿಕ. 4.50 ಕೋಟಿ ಫಲಾನುಭವಿಗಳು ಇದ್ದಾರೆ. ತಮಿಳುನಾಡಿನಲ್ಲಿ ಶೇ.50 ಬಿಪಿಎಲ್, ಕೇರಳದಲ್ಲಿ ಶೇ.45, ಆಂಧ್ರಪ್ರದೇಶದಲ್ಲಿ ಮತ್ತು ತೆಲಂಗಾಣದಲ್ಲಿ ಶೇ.50 ಬಿಪಿಎಲ್ ಕಾರ್ಡ್‌ಗಳು ಇವೆ. ಆದರೆ, ನಮ್ಮ ರಾಜ್ಯದಲ್ಲಿ ಶೇ.75 ರಿಂದ 80 ಕಾರ್ಡ್ ಗಳಿವೆ. ಇಷ್ಟೊಂದು ಕಾರ್ಡ್ ಇರಲು ಸಾಧ್ಯವೇ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಹೊಸ ಪಡಿತರ ಕಾರ್ಡ್ ವಿತರಿಸಲು ತಾಂತ್ರಿಕ ಸಮಸ್ಯೆ ಎದುರಾಗಿದೆ. ಆದ್ದರಿಂದ ಕೆಲ ವರ್ಷಗಳಿಂದ ಅರ್ಹರಿಗೂ ಬಿಪಿಎಲ್ ಕಾರ್ಡ್ ನೀಡಿಲ್ಲ. ಕಾಳಸಂತೆಯಲ್ಲಿ ಅಕ್ಕಿ ಮಾರಾಟ ದಂಧೆ ಗಮನಕ್ಕೆ ಬಂದಿದ್ದು, 2024ರಲ್ಲಿ 409 ಪ್ರಕರಣಗಳು ದಾಖಲಿಸಿ 20 ಕೋಟಿ ರೂ. ಮತ್ತು ಪ್ರಸಕ್ತ ವರ್ಷದಲ್ಲಿ 10 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ಮುನಿಯಪ್ಪ ತಿಳಿಸಿದರು.