ಸಿಇಟಿ ಪರೀಕ್ಷೆ ದಿನಾಂಕ ಬದಲು
– ಏಪ್ರಿಲ್ 18 ರಂದು ಗುಡ್ ಪ್ರೈಡೆ ಆಗಿರುವ ಹಿನ್ನೆಲೆಯಲ್ಲಿ ಪರೀಕ್ಷೆಯ ದಿನಾಂಕ ಬದಲಾವಣೆ
– ಏಪ್ರಿಲ್ 15, 16, 17 ಪರೀಕ್ಷೆಗಳು ನಡೆಯಲಿವೆ
NAMMUR EXPRESS NEWS
ಬೆಂಗಳೂರು: ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆಯ ಸಿಇಟಿ ಕನ್ನಡ ಭಾಷಾ ಪರೀಕ್ಷೆಯನ್ನು ಗುಡ್ಪ್ರೈಡೆ ಹಿನ್ನೆಲೆಯಲ್ಲಿ ಏಪ್ರಿಲ್ 15ರಂದು ನಡೆಸಲು ನಿರ್ಧರಿಸಲಾಗಿದೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಗುರುವಾರ ಸದನಕ್ಕೆ ಈ ವಿಷಯ ತಿಳಿಸಿದರು.
ಏಪ್ರಿಲ್ 18ರಂದು ಗುಡ್ ಪ್ರೈಡೆ ಆಗಿರುವ ಹಿನ್ನೆಲೆಯಲ್ಲಿ ಪರೀಕ್ಷೆಯ ದಿನಾಂಕ ಬದಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಶೂನ್ಯ ವೇಳೆಯಲ್ಲಿ ಒತ್ತಾಯಿಸಿದ್ದರು. ಇದಕ್ಕೆ ಉತ್ತರಿಸಿದ ಸಚಿವ ಸುಧಾಕರ್, ರಾಜ್ಯದಲ್ಲಿ ಏಪ್ರಿಲ್ 16, 17 ಮತ್ತು 18 ರಂದು ಸಿಇಟಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಏಪ್ರಿಲ್ 18ರಂದು ಗುಡ್ ಪ್ರೈಡೆ ಇರುವುದರಿಂದ ಅಂದು ಬರೆಯಬೇಕಿದ್ದ ಕನ್ನಡ ಭಾಷಾ ಪರೀಕ್ಷೆಯನ್ನು ಏಪ್ರಿಲ್ 15ರಂದೇ ನಡೆಸಲಾಗುತ್ತದೆ ಎಂದು ತಿಳಿಸಿದರು. ಕನ್ನಡ ಭಾಷಾ ಪರೀಕ್ಷೆ ಬರೆಯಲು ರಾಜ್ಯಾದ್ಯಂತ 2,537 ಮಂದಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಎಲ್ಲ ಅಭ್ಯರ್ಥಿಗಳು ಏಪ್ರಿಲ್ 15 ರಂದೇ ಪರೀಕ್ಷೆ ಬರೆಯಬೇಕಿದೆ. ಎಪ್ರಿಲ್ 16ರಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಏಪ್ರಿಲ್ 17ರಂದು ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.