Categories
ಬೆಂಗಳೂರು

ಬಿಟ್ ಕಾಯಿನ್ ದಂಧೆಯಲ್ಲಿ ಸರ್ಕಾರಿ ನೌಕರರು?!

ಬಿಟ್ ಕಾಯಿನ್ ದಂಧೆಯಲ್ಲಿ ಸರ್ಕಾರಿ ನೌಕರರು?!
– ಬಿಎಂಟಿಸಿಯಲ್ಲಿ ನಾಲ್ವರ ಅಮಾನತು, ಸಿಬ್ಬಂದಿಗಳ ಎದೆ ಬಡಿತ ಜೋರು.!
– ಬಿಎಂಟಿಸಿ ನೌಕರ ಬಿಟ್ ಕಾಯಿನ್ ದಂಧೆ ಕಿಂಗ್ ಪಿನ್

NAMMUR EXPRESS NEWS
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೂ ಬಿಟ್ ಕಾಯಿನ್ ದಂಧೆ ಕಾಲಿಟ್ಟಿದ್ದು ಈ ದಂಧೆಯಲ್ಲಿ ತೊಡಗಿರುವ ಆರೋಪದಡಿ ಬನಶಂಕರಿಯಲ್ಲಿರುವ ಬಿಎಂಟಿಸಿ 20ನೇ ಘಟಕದ 10 ಸಿಬ್ಬಂದಿಗಳ ವಿಚಾರಣೆ ನಡೆಸಿದ್ದು ವಿಚಾರಣೆ ವೇಳೆಯೇ ನಾಲ್ವರನ್ನು ಸ್ಥಳದಲ್ಲೇ ಅಮಾನತು ಮಾಡಲಾಗಿದೆ. ರಾಜ್ಯದಲ್ಲಿ ಕೋಟಿ ಕೋಟಿ ಹಗರಣ ಆಗಿರುವ ಬಿಟ್ ಕಾಯಿನ್ ದಂದೆ ಇದೀಗ ಅನೇಕರ ಎದೆ ನಡುಕಕ್ಕೆ ಕಾರಣ ಆಗಿದೆ. ಈ ನಡುವೆ ಬಿಎಂಟಿಸಿ 20ನೇ ಘಟಕದ ಸಿಬ್ಬಂದಿಗಳಾದ ಮಹೇಶ್, ರಾಕೇಶ್, ಮದನ್, ಪವನ್, ನವೀನ್, ಸಂತೋಷ್ ಕುಮಾರ್, ವೀರೇಶ್ ಸೇರಿದಂತೆ 10 ಮಂದಿಯನ್ನು ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿ ಅವರಲ್ಲಿ ನಾಲ್ಕು ಮಂದಿಯನ್ನು ಅಮಾನತು ಮಾಡಲಾಗಿದೆ. ಇನ್ನೂ ಏಳು ಮಂದಿಯ ಅಮಾನತಾಗುವ ಸಾಧ್ಯತೆ ಇದೆ. ಈ ಬಿಟ್ ಕಾಯಿನ್ ದಂಧೆಯಲ್ಲಿ ಜಯನಗರದ ಬಿಎಂಟಿಸಿ 4ನೇ ಘಟಕದ ಸಿಬ್ಬಂದಿಯೂ ತೊಡಗಿದ್ದು, ಅವರ ವಿಚಾರಣೆಯನ್ನು ನಡೆಸಲಾಗುವುದು ಎಂದು ತಿಳಿದು ಬಂದಿದೆ.

ಬಿಎಂಟಿಸಿಯ ಕೆಲವು ಸಿಬ್ಬಂದಿಗಳು ಬಿಟ್ ಕಾಯಿನ್ ದಂಧೆಯಲ್ಲಿ ಶಾಮೀಲಾಗಿದ್ದು, ಅಕೌಂಟ್‌ನಲ್ಲಿ ಲಕ್ಷಾಂತರ ಹಣವನ್ನು ಇಟ್ಟುಕೊಂಡಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶನಿವಾರ ಬೆಳಗ್ಗೆ ದಾಳಿ ನಡೆಸಿದ ಸಂಸ್ಥೆಯ ಸಹಾಯಕ ಭದ್ರತಾಧಿಕಾರಿ ಅವರು ಕೃತ್ಯದಲ್ಲಿ ತೊಡಗಿದವರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಘಟಕದಲ್ಲಿರುವ ಕೆಲ ಸಿಬ್ಬಂದಿ ಕೂಡ ಬಿಟ್ ಕಾಯಿನ್ ದಂಧೆಗೆ ತೊಡಗಿರುವ ಜತೆಗೆ ತಮ್ಮ ಸಹೋದ್ಯೋಗಿಗಳಿಗೂ ಈ ದಂಧೆಯಲ್ಲಿ ತೊಡಗುವಂತೆ ಪ್ರಚೋದನೆ ನೀಡುತ್ತಿದ್ದರು ಎಂಬ ಕೃತ್ಯ ಬಯಲಾಗಿದೆ.

ಘಟಕದ ಚಾಲಕರು ಮತ್ತು ನಿರ್ವಾಹಕರಿಂದ ರಜೆ ಮಂಜೂರು ಮಾಡುವುದು ಸೇರಿದಂತೆ ಇತರೆ ಕೆಲಸಕ್ಕಾಗಿ ಲಂಚವಾಗಿ ಪಡೆದ ಹಣವನ್ನು ಇದಕ್ಕೆ ಹೂಡಿಕೆ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ. ಅಷ್ಟೇ ಅಲ್ಲ ಘಟಕದ ಸಿಬ್ಬಂದಿಯನ್ನು ಈ ದಂಧೆಗೆ ತೊಡಗಿಸಿ ಅವರಿಂದಲೂ ಹಣ ಇನ್ವೆಸ್ಟ್ ಮಾಡಿಸಿ ಅದರಿಂದಲೂ ಲಾಭ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿಚಾರಣೆಗೊಳಪಟ್ಟ ಒಬ್ಬೊಬ್ಬರ ಅಕೌಂಟ್‌ನಲ್ಲೂ ಲಕ್ಷಾಂತರ ಹಣ ಡಿಪಾಸಿಟ್ ಆಗಿರುವುದನ್ನು ಭದ್ರತಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಬಿಎಂಟಿಸಿ ಘಟಕ -33 ರಲ್ಲಿರುವ ಧನಂಜಯ್ ಎಂಬಾತನೆ ಈ ಬಿಟ್ ಕಾಯಿನ್ ದಂಧೆಯ ಕಿಂಗ್ ಪಿನ್ ಎನ್ನಲಾಗಿದೆ. ಆತನ ಅಕೌಂಟ್‌ನಲ್ಲಿ ಸುಮಾರು 30 ಲಕ್ಷ ರೂ. ಪತ್ತೆಯಾಗಿದೆ ಎನ್ನಲಾಗುತ್ತಿದೆ.

ಇನ್ನು ವೇತನ ಪಡೆಯುವ ಅಕೌಂಟ್‌ನಲ್ಲಿ ವೇತನ ಹಣ ಬಿಟ್ಟು ಬೇರೆ ಬೇರೆ ಹಣದ ವ್ಯವಹಾರ ಮಾಡಬೇಕಾದರೆ ಘಟಕ ವ್ಯವಸ್ಥಾಪಕರ ಅನುಮತಿ ಬೇಕು ಎಂಬ ಬಗ್ಗೆ ಸಂಸ್ಥೆಯ ಸುತ್ತೋಲೆ 1484ರ ನಿಯಮ ಹೇಳುತ್ತದೆ. ಆದರೆ ಈ ನಿಯಮವನ್ನೇ ಉಲ್ಲಂಘನೆ ಮಾಡಿ ಬೇರೆ ಹಣದ ವ್ಯವಹಾರ ನಡೆಸಿದ್ದಾರೆ. ಹೀಗಾಗಿ ಇದರ ಆಧಾರದ ಮೇಲೆಯೇ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.