ಬಿಸಿಲ ಧಗೆಗೆಯಿಂದ ಅನಾರೋಗ್ಯ ಸಮಸ್ಯೆ ಹೆಚ್ಚಳ..!!
– ಜನರಲ್ಲಿ ತಲೆನೋವು, ಜ್ವರ, ವಾಂತಿ-ಭೇದಿ ಹೆಚ್ಚು
– ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಭಾರೀ ಹೆಚ್ಚಳ
NAMMUR EXPRESS NEWS
ಬೆಂಗಳೂರು : ಬಿಸಿಲು ಹೆಚ್ಚುತ್ತಿದ್ದಂತೆ ನಗರದಲ್ಲಿ ತಲೆನೋವು, ಜ್ವರ, ವಾಂತಿ ಭೇದಿಯಂತ ಅನಾರೋಗ್ಯ ಬಾಧಿಸುತ್ತಿದ್ದು, ಕಳೆದೊಂದು ವಾರದಿಂದ ಆಸ್ಪತ್ರೆಗಳ ರೋಗಿ ವಿಭಾಗದಲ್ಲಿ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಸಾಮಾನ್ಯವಾಗಿ ಹೋಲಿಸಿದರೆ ಅನೇಕ ಆಸ್ಪತ್ರೆಗೆ ವಾಂತಿ-ಭೇದಿ ಪೀಡಿತರಾಗಿ ಬರುವವರ ಸಂಖ್ಯೆ ಹೆಚ್ಚಾಗಿದೆ. ಇನ್ನು, ತಲೆನೋವು, ನೆಗಡಿ, ಜ್ವರ ಬಳಲಿಕೆಯಿಂದ ಬರುವವರು ಹೆಚ್ಚಾಗಿದ್ದಾರೆ. ಸುಮಾರು ಶೇ.20ರಷ್ಟು ಹೊರರೋಗಿಗಳ ದಾಖಲಾತಿ ಹೆಚ್ಚಾಗಿದೆ.
ವಾತಾವರಣ ಬದಲಾವಣೆ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಅಲರ್ಜಿಯಿಂದ ಅನಾರೋಗ್ಯ ಉಂಟಾಗುತ್ತಿದೆ. ಹೊರಗಡೆ ಪ್ರಯಾಣದ ವೇಳೆ ಬಾಯಾರಿಕೆ ಆದಾಗ ಶುದ್ಧವಾದ ನೀರು ಕುಡಿಯುವಂತೆ, ಶುದ್ಧವಾದ ಆಹಾರ ಸೇವನೆ ಮಾಡುವ ಬಗ್ಗೆ ಎಚ್ಚರಿಕೆ ವಹಿಸಬೇಕು.
ಶುದ್ಧ ಉಡುಪು ಧರಿಸಿ: ಜನರಲ್ಲಿ ಶೀತಜ್ವರ ಏರಿಕೆಯಾಗಿದ್ದು, ಅತಿಸಾರ, ಉದರಬೇನೆ, ಸ್ನಾಯು ಸೆಳೆತ, ಪ್ರಜ್ಞೆ ತಪ್ಪುವುದು, ಉಸಿರಾಟ ಸಂಬಂಧಿ ಸಮಸ್ಯೆ, ಕಾಲರಾ ಕೂಡ ಕಾಣಿಸಿದೆ. ಇದರ ಜೊತೆಗೆ ಕಣ್ಣಿನ ಉರಿ, ಕಣ್ಣಿನಲ್ಲಿ ನೀರು ಬರುವಂತ ಸಮಸ್ಯೆ ಕೂಡ ಹೆಚ್ಚಾಗಿ ಕಂಡುಬರುತ್ತಿದ್ದು, ಕಣ್ಣಿನ ಆಸ್ಪತ್ರೆಗಳಿಗೆ ಬರುವವರ ಸಂಖ್ಯೆಯೂ ಶೇ.10ರಷ್ಟು ಹೆಚ್ಚಾಗಿದೆ. ಇದಲ್ಲದೆ, ಚರ್ಮ ಸಂಬಂಧಿ ಸಮಸ್ಯೆಯೂ ಹಲವರಲ್ಲಿ ಕಾಣಿಸಿಕೊಳ್ಳುತ್ತಿದೆ. ಮಕ್ಕಳಲ್ಲಿ ಚಿಕನ್ ಫಾಕ್ಸ್ ಹರಡುತ್ತಿದ್ದರೆ, ಬೆವರು ಗುಳ್ಳೆ, ಶಿಲೀಂದ್ರ ಸೋಂಕು, ಬೊಬ್ಬೆ ಉಂಟಾಗಿ ಆಸ್ಪತ್ರೆಗಳಿಗೆ ಬರುವವರೂ ಹೆಚ್ಚಾಗುತ್ತಿದ್ದಾರೆ. ದೈನಂದಿನ ಕೆಲಸ ಕಾರ್ಯದ ಬಳಿಕ ಸ್ನಾನ, ಶುದ್ದ ಉಡುಪು ಧರಿಸುವಂತೆ ಸಲಹೆ. ಇನ್ನು, ಸಾಮಾನ್ಯ ಸಾಂಕ್ರಾಮಿಕ ರೋಗಗಳ ಕಾರಣದಿಂದಾಗಿ ಅನೇಕ ಆಸ್ಪತ್ರೆಗಳಿಗೆ ಪ್ರತಿನಿತ್ಯ 10-15 ಜನರು ಬರುವುದು ಸಾಮಾನ್ಯವಾಗಿದೆ. ಸ್ವಯಂ ಪ್ರೇರಣೆಯಿಂದ ಬಂದು ಹಲವರು ವ್ಯಾಕ್ಸಿನೇಶನ್ ಮಾಡಿಸಿಕೊಳ್ಳುತ್ತಿದ್ದಾರೆ.