Categories
ಬೆಂಗಳೂರು

ರಾಜ್ಯಾದ್ಯಂತ ಅಬ್ಬರಿಸಿದ ಮಳೆ..!!

ರಾಜ್ಯಾದ್ಯಂತ ಅಬ್ಬರಿಸಿದ ಮಳೆ..!! 
– ಮುಂದಿನ ಒಂದು ವಾರ ಭಾರೀ ಮಳೆಯಾಗುವ ಸಾಧ್ಯತೆ
– ಕರ್ನಾಟಕದಲ್ಲಿ ಸಿಡಿಲಿಗೆ ಒಂದೇ ದಿನ ಏಳು ಮಂದಿ ಬಲಿ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಮಳೆಯಿಂದ ಬಿಸಿಲು ಪ್ರದೇಶದ ಜಿಲ್ಲೆಗಳಲ್ಲಿ ಹಿತವಾದರೆ, ಕರಾವಳಿ, ಮಲೆನಾಡು, ಒಳನಾಡುಗಳಲ್ಲಿ ವಿವಿಧೆಡೆ ಬೆಳೆಗಳಿಗೆ ಹಾನಿಯಾಗಿದೆ. ಜೋರು ಗಾಳಿ ಮಳೆಗೆ ಬೆಳೆಗಳು ನೆಲಕಚ್ಚಿವೆ. ಮಂಗಳವಾರ ಸಿಡಿಲಾಘಾತಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ಒಂದೇ ಕುಟುಂಬದ ಇಬ್ಬರು, ಕೊಪ್ಪಳ ಮತ್ತು ಹಾವೇರಿ ಜಿಲ್ಲೆಯಲ್ಲಿ ತಲಾ ಇಬ್ಬರು ಹಾಗೂ ವಿಜಯಪುರ ಜಿಲ್ಲೆಯ ಒಬ್ಬರು ಸೇರಿ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ.

ಬಳ್ಳಾರಿ ಜಿಲ್ಲೆಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಜಮೀನಿನ ಕೆಲಸದಲ್ಲಿ ತೊಡಗಿದ್ದ ಬೀರಪ್ಪ (45) ಹಾಗೂ ಅವರ ಅಣ್ಣನ ಮಗ ಸುನೀಲ (26) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದ ಬಸನಗೌಡ (40) ಹಾಗೂ ಕನಕಗಿರಿ ತಾಲೂಕಿನ ಹುಲಿಹೈದರ್‌ ಗ್ರಾಮದ ಯಂಕಪ್ಪ ಜಾಡಿ (45) ಮೃತರು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಮಲ್ಲಪ್ಪ ಗುರಶಾಂತಪ್ಪ ತಾಳಿಕೋಟಿ (47) ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ವರದಿಯಾಗಿದೆ. ಹಾವೇರಿಯಲ್ಲೂ ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ. ಹೊಲದ ಕೆಲಸಕ್ಕೆ ಹೋಗಿ ಮನೆಗೆ ಬರುತ್ತಿರುವ ಸಂದರ್ಭದಲ್ಲಿ ಸಿಡಿಲು ಬಡಿದು 29 ವರ್ಷದ ಯುವ ರೈತ ಸುನೀಲ ಸುರೇಶಪ್ಪ ಕಾಳೇರ ಸಾವನಪ್ಪಿದ ಘಟನೆ ರಟ್ಟೀಹಳ್ಳಿ ತಾಲೂಕಿನ ಕುಡಪಲಿ ಗ್ರಾಮದಲ್ಲಿ ನಡೆದಿದೆ.

– ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಉತ್ತಮ ಮಳೆ

ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗದಲ್ಲಿ ಮಂಗಳವಾರ ಉತ್ತಮ ಮಳೆಯಾಗಿದೆ. ತಾಲೂಕಿನ ಮುಳ್ಳಯ್ಯನಗಿರಿ ಭಾಗ ಸೇರಿದಂತೆ ನಗರದಲ್ಲಿ ಸುಮಾರು 2 ಗಂಟೆಗಳ ಕಾಲ ಜೋರು ಮಳೆ ಸುರಿಯಿತು. ಮಳೆಯಿಂದ ಹೊನ್ನಮ್ಮನಹಳ್ಳ ಜಲಪಾತದಲ್ಲಿನೀರಿನ ಹರಿವು ಹೆಚ್ಚಾಗಿತ್ತು. ಗಿರಿಭಾಗದ ರಸ್ತೆಗಳು ಜಲಾವೃತಗೊಂಡಿದ್ದವು. ಜಿಲ್ಲೆಯ ಕಳಸ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರದಲ್ಲಿ ಸಾಧಾರಣ ಮಳೆಯಾಯಿತು. ಮಧ್ಯಾಹ್ನ ಮೂಡಿಗೆರೆ, ಕೊಟ್ಟಿಗೆಹಾರ, ಕಡೂರು, ತರೀಕೆರೆ ಭಾಗದಲ್ಲಿ ಮೋಡ ಕವಿದ ವಾತಾವರಣ ಇತ್ತು. ಸಂಜೆಯ ಬಳಿಕ ಕಡೂರು, ತರೀಕೆರೆ ತಾಲೂಕಿನ ಹಲವೆಡೆ ಹಾಗೂ ಚಿಕ್ಕಮಗಳೂರು ತಾಲೂಕಿನ ಬಯಲ ಭಾಗದಲ್ಲಿ ಸಾಧಾರಣ ಮಳೆಯಾಯಿತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.