ಬೇಸಿಗೆಯಲ್ಲಿ ಬಿಯರ್‌ಗೆ ಹೆಚ್ಚಿದ ಬೇಡಿಕೆ…!!
– 15 ವರ್ಷದ ಬಳಿಕ ಹೊಸ ಪಬ್‌ಗೆ ಲೈಸೆನ್ಸ್!
– ಆದಾಯ ಹೆಚ್ಚಳಕ್ಕೆ ಸರ್ಕಾರ ಸಕಲ ಸಿದ್ಧತೆ
NAMMUR EXPRESS NEWS
ಬೆಂಗಳೂರು : ಬೇಸಿಗೆ ಹಿನ್ನೆಲೆಯಲ್ಲಿ ಡ್ರಾಫ್ಟ್, ಕೆಗ್ ಬಿಯರ್‌ಗೆ ಹೆಚ್ಚಿನ ಬೇಡಿಕೆ ಬಂದಿರುವ ಜತೆಗೆ ಆದಾಯ ಹೆಚ್ಚಿಸುವ ಉದ್ದೇಶದಿಂದ ರಾಜ್ಯದಲ್ಲಿ ಹೊಸ ಪಬ್‌ಗಳ ಆರಂಭಕ್ಕೆ ಸದ್ಯದಲ್ಲೇ ಪರವಾನಗಿ ನೀಡಲು ಅಬಕಾರಿ ಇಲಾಖೆ ಮುಂದಾಗಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಸರ್ಕಾರ ಅಬಕಾರಿ ಇಲಾಖೆಯ ಪ್ರಸ್ತಾವನೆಗೆ ಅನುಮತಿ ಕೊಟ್ಟಲ್ಲಿ ಇಂಡಿಪೆಂಡೆಂಟ್ ಪಬ್ ಆರಂಭಿಸಲು ಇಲಾಖೆ ಲೈಸೆನ್ಸ್ ನೀಡಲಿದೆ. 15 ವರ್ಷಗಳ ಹಿಂದೆ ಇಂಡಿಪೆಂಡೆಂಟ್ ಪಬ್ ಲೈಸೆನ್ಸ್ ಕೊಡುವುದನ್ನು ಇಲಾಖೆ ನಿಲ್ಲಿಸಿತ್ತು. ಮದ್ಯದಂಗಡಿ ಹೊಂದಿರುವ ಮಾಲೀಕರಿಗೆ ಮಾತ್ರ ಅಟ್ಯಾಚ್ಡ್ ಪಬ್ ತೆರೆಯುವುದಕ್ಕೆ ಲೈಸೆನ್ಸ್ ನೀಡಲಾಗುತ್ತಿತ್ತು. ಬೊಕ್ಕಸ ಭರ್ತಿ ಉದ್ದೇಶ: ಕಳೆದ ವರ್ಷಕ್ಕಿಂತ ಈ ಬಾರಿ ಬಿಯರ್ ಮಾರಾಟ ಹೆಚ್ಚಳವಾಗಿದೆ. 2023ರ ಏ. 1 ರಿಂದ 2024ರ ಜ.25 ರವರೆಗೆ 351.73 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಈ ಬಾರಿ 372.54 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. ಅಂದರೆ ಶೇ.5.92 ಹೆಚ್ಚಳವಾಗಿದೆ. ವರ್ಷದಿಂದ ವರ್ಷಕ್ಕೆ ಬಿಯರ್‌ಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಹೀಗಾಗಿ ಪಬ್ ತೆರೆದರೆ ಸರ್ಕಾರದ ಬೊಕ್ಕಸಕ್ಕೂ ಆದಾಯ ಹರಿದು ಬರಲಿದೆ ಎನ್ನುವುದು ಅಧಿಕಾರಿಗಳ ಲೆಕ್ಕಚಾರವಾಗಿದೆ.
ಅಕ್ರಮ ಮದ್ಯ ಮಾರಾಟ ಹೆಚ್ಚಳ
ಪಬ್‌ಗಳಲ್ಲಿ ಬಿಯರ್ ಮಾರಾಟಕ್ಕಷ್ಟೇ ಅವಕಾಶ ಇದೆ. ಆದರೆ ಕ್ಲಬ್ (ಸಿಎಲ್4), ಹೋಟೆಲ್ ಮತ್ತು ಗೃಹ (ಸಿಎಲ್7), ಸ್ಟಾರ್ ಹೋಟೆಲ್ (ಸಿಎಲ್ಎ) ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್9) ಹೊಂದಿರುವ ಸನ್ನದುದಾರರು ಆರಂಭಿಸುವ ಅಟ್ಯಾಚ್ ಪಬ್ ಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಸಂಬಂಧ ಪ್ರತಿ ವರ್ಷ ಸಾವಿರಾರು ಕೇಸ್ ದಾಖಲಾಗುತ್ತಿವೆ. ಅಲ್ಲದೆ, ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ, ರಿಚ್ ಮಂಡ್ ಸರ್ಕಲ್ ಮತ್ತು ಕೋರಮಂಗಲ ಸೇರಿ ಇತರ ಪ್ರದೇಶಗಳಲ್ಲಿರುವ ಪಬ್ ಗಳು ತಡರಾತ್ರಿವರೆಗೂ ತೆರೆದಿರುತ್ತವೆ. ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕಳ್ಳಾಟವಾಡುತ್ತಿದ್ದಾರೆ ಎಂಬ ಆಕ್ಷೇಪ ವ್ಯಕ್ತವಾಗಿದೆ. ಹಿಂದೊಮ್ಮೆ ಅಧಿಕಾರಿಗಳ ಸೂಚನೆ ಮೇರೆಗೆ ಪಬ್ ಗಳ ಮೇಲೆ ದಾಳಿ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಇದೀಗ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಕೇಸ್, ದಂಡ ವಿಧಿಸುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.