ರಾಜ್ಯದಲ್ಲಿ ಮಳೆ ಮಳೆ..!
– ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆ!
– ರೈತರ ಮೊಗದಲ್ಲಿ ಆತಂಕ!
– ತೀರ್ಥಹಳ್ಳಿ ಪಟ್ಟಣದಲ್ಲಿ ಮೋಡ ಕವಿದ ವಾತಾವರಣ
NAMMUR EXPRESS NEWS
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಚಳಿಗಾಲ ಆವರಿಸಿದ್ದರ ಮಧ್ಯೆ ಇದೀಗ ಮಳೆಯೂ ಆಗುತ್ತಿದೆ. ಹುಬ್ಬಳ್ಳಿ, ಹಾವೇರಿ ಸೇರಿದಂತೆ ರಾಜ್ಯ ಕೆಲವೆಡೆ ಮಳೆ ಸುರಿಯುತ್ತಿದ್ದು, ನಾಲ್ಕು ದಿನ ರಾಜ್ಯಾದ್ಯಂತ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಹೀಗೆ ವ್ಯಾಪಕ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಬದಲಾವಣೆಗಳು ರಾಜ್ಯದಲ್ಲಿ ಮಳೆ ಸುರಿಯುವಿಕೆಗೆ ಕಾರಣವಾಗಿದೆ. ವಿವಿಧ ಜಿಲ್ಲೆಗಳಲ್ಲಿ ಮೂರು ನಾಲ್ಕು ದಿನದಿಂದ ತಾಪಮಾನ ಕಡಿಮೆ ಆಗಿದೆ. ಮಬ್ಬು ವಾತಾವರಣವೇ ಕಂಡು ಬರುತ್ತಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆಯ ನಿರೀಕ್ಷೆ ಇದೆ. ಜನವರಿ 10ರವರೆಗೆ 30 ಜಿಲ್ಲೆಗಳಲ್ಲಿ ಮಳೆ ಆಗಲಿದೆ.
ಇದರಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ವಿಜಯನಗರ, ಮಂಡ್ಯ, ಮೈಸೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಕೊಡುಗ ಸೇರಿದಂತೆ ಈ ಭಾಗದಲ್ಲಿ ಅತ್ಯಧಿಕ ಮಳೆಯಾಗುವ ಸಾಧ್ಯತೆಗಳು ಇವೆ. ಉತ್ತರ ಒಳನಾಡು ಜಿಲ್ಲೆಗಳ ಮುನ್ಸೂಚನೆ ಇದೇ ವೇಳೆ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ, ಗದಗ, ಕೊಪ್ಪಳ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಾಲ್ಕು ದಿನ ಆಗಾಗ ತುಂತುರು ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನಾ ವರದಿ ತಿಳಿಸಿದೆ. ಬೆಂಗಳೂರಿನಲ್ಲಿ ದಿ.8 ರಂದು ಧಾರಾಕಾರ ಮಳೆಯಾಗಿದೆ.
ತೀರ್ಥಹಳ್ಳಿಯ ಸುತ್ತಮುತ್ತಲೂ ಮಳೆ : ಈ ಮಧ್ಯೆ ಒಂದು ವಾರದಿಂದ ತೀರ್ಥಹಳ್ಳಿ ಪಟ್ಟಣದಲ್ಲಿ ಬೆಳಗಿನಿಂದಲೂ ಮೋಡ ಕವಿದ ವಾತಾವರಣವಿದ್ದು ಅಲ್ಲಲ್ಲಿ ಹೆಚ್ಚಿನ ಮಳೆಯಾಗಿದೆ. ಇನ್ನೂ ಒಕ್ಕಲಾಗದ, ಅಡಿಕೆ ಕೊಯ್ಲು, ಕಾಫಿ ಬೆಳೆಗಾರರ ಮುಖದಲ್ಲಿ ಆತಂಕ ಕಾಣಿಸುತ್ತಿದೆ.
