140ಕ್ಕೂ ಹೆಚ್ಚು ಸಾಧಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ!
– ಬೇಗುವಳ್ಳಿ ಸತೀಶ್ ನೇತೃತ್ವದಲ್ಲಿ ನಡೆಯಿತು ಮಾದರಿ ಕಾರ್ಯಕ್ರಮ
– ಸತೀಶ್ ರಾಜಕೀಯ ನಡೆ ಬಗ್ಗೆ ಸ್ವಾಮಿರಾವ್ ಮಾತು
NAMMUR EXPRESS NEWS:
ತೀರ್ಥಹಳ್ಳಿ: ಬೇಗುವಳ್ಳಿ ಸತೀಶ್ ಅವರ ಮಾತಾ – ಪಿತೃರ ಸ್ಮರಣಾರ್ಥ 13ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ತೀರ್ಥಹಳ್ಳಿ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಭಾನುವಾರ ಶ್ರೀ ರೇಣುಕಾನಂದ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು. ಕಾರ್ಯಕ್ರಮದ ಸ್ವಾಗತ ಭಾಷಣ ಮಾಡಿ ಮಾತನಾಡಿದ ಬಿಜೆಪಿ ನಾಯಕ, ಉದ್ಯಮಿ, ಈಡಿಗ ಸಮುದಾಯದ ಪ್ರಮುಖರೂ ಆದ ಬೇಗುವಳ್ಳಿ ಸತೀಶ್, ಸತತವಾಗಿ 13ನೇ ವರ್ಷದ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ, ಅತ್ಯಂತ ಹೆಚ್ಚು ಮಕ್ಕಳು ಭಾಗವಹಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ.
ಪಟ್ಟಣ ಮತ್ತು ಗ್ರಾಮೀಣ ಭಾಗಗಳ ಮಕ್ಕಳ ನಡುವಿನ ಅನಾನುಕೂಲತೆಗಳನ್ನು ಪರಿಗಣಿಸಿ ಪ್ರತಿ ಶಾಲೆಯಿಂದ ಇಬ್ಬರು ಮಕ್ಕಳನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡುತಿದ್ದೇನೆ. ಹಿರಿಯರ ಪ್ರೇರಣೆ, ಮಾರ್ಗದರ್ಶನ ಮತ್ತು ಆಶೀರ್ವಾದದಿಂದ ಜೀವನ ರೂಪುಗೊಳ್ಳಲಿ ಎಂದರು. ಹಿರಿಯ ಬಿಜೆಪಿ ಸ್ವಾಮಿರಾವ್ ಅವರು ಮಾತನಾಡಿ, ತಾಯಿ ಮತ್ತು ತಂದೆಯವರ ನೆನಪಿಗಾಗಿ ಸತೀಶ್ ಅವರು ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಮುಖಂಡರಿಂದ ಇವರ ಮುಂದಿನ ರಾಜಕೀಯ ಭವಿಷ್ಯಕ್ಕೆ ಬೆಂಬಲ ಸಿಗಲಿ ಎಂದು ಹಾರೈಸಿದರು.
ಸಹಕಾರಿ ನಾಯಕ ನಾಗರಾಜ್ ಶೆಟ್ಟಿ ಮಾತನಾಡಿ, ಸತೀಶ್ ಮತ್ತು ಕುಟುಂಬದವರ ಕಾಯಕ ಮೆಚ್ಚುವಂತದ್ದು ಮತ್ತು ಮಕ್ಕಳು ಕೂಡ ಕೇವಲ ವಿದ್ಯಾವಂತರು, ಬುದ್ಧಿವಂತರೂ ಆದರೆ ಸಾಲದು. ಹೃದಯವಂತರಾಗಬೇಕು ಎಂದರು. ರೇಣುಕಾನಂದ ಸ್ವಾಮಿಗಳು ಮಾತನಾಡುತ್ತಾ, ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು ಎಂದು ದೇವರು ಸಂಪತ್ತು ಕೊಡುತ್ತಾನೆ. ಅದನ್ನು ಪುಣ್ಯಕಾರ್ಯಗಳಿಗೆ ಬಳಸಿದವರು ಈ ಭೂಮಿಯಲ್ಲಿ ಚಿರಸ್ಥಾಯಿಗಳಾಗಿರುತ್ತಾರೆ. ಇಪ್ಪತ್ತು ವರ್ಷದ ವಿದ್ಯಾಭ್ಯಾಸ ಮುಂದಿನ ಎಪ್ಪತ್ತು ವರ್ಷ ನಿಮ್ಮನ್ನು ಕಾಪಾಡುತ್ತದೆ ಎಂದು ಸತೀಶ್ ಕುಟುಂಬಕ್ಕೆ ಶುಭ ಕೋರುತ್ತ ಮಕ್ಕಳಿಗೆ ಆಶಿರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ನೆರೆದಿದ್ದ ಪ್ರತಿಭಾನ್ವಿತ ಮಕ್ಕಳಿಗೆ ಗೌರವಿಸಿ ಪುರಸ್ಕಾರ ನೀಡುವ ಮೂಲಕ ಸತೀಶ್ ಬೇಗುವಳ್ಳಿ ಕುಟುಂಬದ ಎಲ್ಲರಿಗೂ ಅಭಿನಂದಿಸಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೇಗುವಳ್ಳಿ ಸತೀಶ್ ನಿರ್ವಹಿಸಿದ್ದು, ಗಣ್ಯರಾದ ಮೆಗ್ಗಾನ್ ಆಸ್ಪತ್ರೆ ಮುಖ್ಯ ಅಧಿಕ್ಷಕ ಡಾ.ತಿಮ್ಮಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ನಾಯಕ ಪುರುಷೋತ್ತಮ್, ಸಹಕಾರಿ ರತ್ನ ಪುರಸ್ಕೃತ ನಾಗರಾಜ್ ಶೆಟ್ಟಿ, ಸಾಲೆಕೊಪ್ಪ ರಾಮಚಂದ್ರ, ನವೀನ್ ಹೆದ್ದೂರು ಹಾಗೂ ಬೇಗವಳ್ಳಿ ಸತೀಶ್ ಸಹೋದರರಾದ ಬೇಗುವಳ್ಳಿ ವೆಂಕಟೇಶ್, ಬೇಗುವಳ್ಳಿ ದಿನೇಶ್ ಹಾಗೂ ಕುಟುಂಬದವರು ಇದ್ದರು. ಗಮನ ಸೆಳೆದ ಕಾರ್ಯಕ್ರಮ: ಉಷಾ ಬಾಳೆಬೈಲು ಮತ್ತು ತಂಡ ತಮ್ಮ ಹಾಡುಗಳ ಮೂಲಕ ಗಮನ ಸೆಳೆದರು. ತಾಲೂಕಿನ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಎಲ್ಲಾ ಮಕ್ಕಳಿಗೆ ಧನ ಸಹಾಯದೊಂದಿಗೆ ಗೌರವಿಸಲಾಯಿತು.
