Categories
ಬೆಂಗಳೂರು

ಇಂದು ಮಧ್ಯರಾತ್ರಿಯಿಂದ ಕರ್ನಾಟಕದಲ್ಲಿ ಲಾರಿ ಮುಷ್ಕರ

ಇಂದು ಮಧ್ಯರಾತ್ರಿಯಿಂದ ಕರ್ನಾಟಕದಲ್ಲಿ ಲಾರಿ ಮುಷ್ಕರ

* ಡಿಸೇಲ್,ಟೋಲ್ ದರ ಏರಿಕೆ,ಅರ್‌ಟಿಓ ಕಿರಿಕಿರಿ ಖಂಡಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ
* ಲಾರಿ ಚಾಲಕರು ಮತ್ತು ಮಾಲೀಕರಿಂದ ಪ್ರತಿಭಟನೆ – ಆಗಲಿದೆ ಅಗತ್ಯ ಸಾಮಾಗ್ರಿ ಸಾಗಟಕ್ಕೆ ತೊಂದರೆ

NAMMMUR EXPRESS NEWS
ಬೆಂಗಳೂರು: ಡಿಸೇಲ್ ದರ ಏರಿಕೆ, ಟೋಲ್ ಶುಲ್ಕ ಹೆಚ್ಚಳ, ಆರ್​ಟಿಓ ಅಧಿಕಾರಿಗಳ ಕಿರುಕುಳ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಇಂದು ಮಧ್ಯರಾತ್ರಿಯಿಂದಲೇ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಲಾರಿ ಮಾಲೀಕರ ಸಂಘ ಕರೆ ನೀಡಿದೆ. ಸುಮಾರು 6 ಲಕ್ಷಕ್ಕೂ ಹೆಚ್ಚು ಲಾರಿಗಳು ಇಂದು ಮಧ್ಯರಾತ್ರಿಯಿಂದಲೇ ಸೇವೆ ಬಂದ್​ ಮಾಡಲಿದ್ದು, ಹಲವು ಸೇವೆಗಳಿಗೆ ಬಿಸಿ ತಟ್ಟಲಿದೆ. 6 ತಿಂಗಳಲ್ಲಿ ಸರ್ಕಾರ 2ಬಾರಿ ಡಿಸೇಲ್ ದರ ಹೆಚ್ಚಿಸಿದೆ. ಡೀಸೆಲ್ ದರ ಇಳಿಸಬೇಕು ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಲಾರಿ ಮಾಲೀಕರು ಏಪ್ರಿಲ್ 14ರ ಗಡುವು ಕೊಟ್ಟಿದ್ರು. ಆದರೆ, ಸರ್ಕಾರ ಇದಕ್ಕೆ ಸ್ಪಂದಿಸಿಲ್ಲ. ಹೀಗಾಗಿ ಇಂದು ಮಧ್ಯರಾತ್ರಿಯಿಂದಲೆ ಮುಷ್ಕರಕ್ಕೆ ರಾಜ್ಯ ಲಾರಿ ಮಾಲೀಕರ ಸಂಘ ಮುಂದಾಗಿದೆ. ಪರಿಣಾಮವಾಗಿ ಮಂಗಳವಾರದಿಂದ ಅನೇಕ ಸೇವೆಗಳಲ್ಲಿ ವ್ಯತ್ಯಯ ಆಗಲಿದೆ.

* ಅನಿರ್ಧಿಷ್ಠಾವಧಿ ಲಾರಿ ಮುಷ್ಕರ – ಯಾವೆಲ್ಲ ಲಾರಿಗಳು ಬಂದ್ ?
ಲಾರಿ ಮುಷ್ಕರದ ಕಾರಣ 6 ಲಕ್ಷ ಲಾರಿಗಳ ಸಂಚಾರ ಬಂದ್ ಆಗಲಿದೆ. ಜಲ್ಲಿ ಕಲ್ಲು, ಮರಳು ಲಾರಿಗಳು, ಗೂಡ್ಸ್ ವಾಹನಗಳು, ಅಕ್ಕಿ ಸಾಗಿಸುವ ಲಾರಿಗಳ ಸಂಚಾರ ಸ್ಥಗಿತಗೊಳ್ಳಲಿದೆ. ಜೊತೆಗೆ, ಪೆಟ್ರೋಲ್, ಡಿಸೇಲ್ ಸಾಗಿಸುವ ಲಾರಿಗಳೂ ಬಂದ್ ಆಚರಿಸಲಿವೆ. ಬೇರೆ ರಾಜ್ಯಗಳ ಲಾರಿಗಳಿಗೂ ಪ್ರವೇಶವಿಲ್ಲ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.

* ಏರ್​ಪೋರ್ಟ್ ಟ್ಯಾಕ್ಸಿಗಳು ಕೂಡ ಬಂದ್ !!
ಏಪ್ರಿಲ್ 15ರಂದು ಒಂದು ದಿನ ಏರ್​ಪೋರ್ಟ್ ಟ್ಯಾಕ್ಸಿಯನ್ನು ರಸ್ತೆಗಿಳಿಸದಿರಲು ಏರ್‌ಪೋರ್ಟ್ ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್ ನಿರ್ಧರಿಸಿದೆ. ಆದರೆ, ಅನಿರ್ಧಿಷ್ಠಾವಧಿ ಮುಷ್ಕರದ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಲಿದ್ದಾರೆ. ಒಟ್ಟಾರೆಯಾಗಿ, ಸರಕು ಸಾಗಾಟ ಬಂದ್​ ಆದರೆ ದಿನಬಳಕೆ ವಸ್ತುಗಳ ಮೇಲೆ ಬಿಸಿ ತಟ್ಟಲಿದೆ. ಹೀಗಾಗಿ, ಸರ್ಕಾರ ಯಾವ ರೀತಿ ಲಾರಿ ಮಾಲೀಕರ ಮನವೊಲಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಕೆಲವು ದಿನಗಳ ಹಿಂದಷ್ಟೇ ಸರ್ಕಾರ ಡಿಸೇಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡ 2.73 ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಡಿಸೇಲ್ ಬೆಲೆ 2 ರೂಪಾಯಿಯಷ್ಟು ಹೆಚ್ಚಳವಾಗಿತ್ತು. ಏಪ್ರಿಲ್ 1ರಿಂದಲೇ ದರ ಹೆಚ್ಚಳ ಜಾರಿಗೆ ಬಂದಿತ್ತು.
ಈಗಾಗಲೇ ರಾಜ್ಯದಲ್ಲಿ ಬಹುತೇಕ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದ್ದು, ಡಿಸೇಲ್ ಬೆಲೆ ಹೆಚ್ಚಳ ಹಾಗೂ ಲಾರಿ ಮುಷ್ಕರ ಮತ್ತಷ್ಟು ಸಮಸ್ಯೆ ತಂದೊಡ್ಡಲಿದೆ. ಪೆಟ್ರೋಲ್, ಡಿಸೇಲ್ ಪೂರೈಕೆ ಲಾರಿಗಳೂ ಮುಷ್ಕರದಲ್ಲಿ ಭಾಗಿಯಾಗುವುದರಿಂದ ಇಂಧನ ಪೂರೈಕೆ ಮೇಲೆ ಬಿಸಿ ತಟ್ಟಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.