Categories
ಕಾರ್ಕಳ ಕೊಡಗು ಬೆಂಗಳೂರು ರಾಜ್ಯ ಶಿವಮೊಗ್ಗ

ಟಾಪ್ 5 ನ್ಯೂಸ್ ಕರ್ನಾಟಕ

ಟಾಪ್ 5 ನ್ಯೂಸ್ ಕರ್ನಾಟಕ

ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ವೇದಿಕೆಯಲ್ಲಿ ಅಸ್ವಸ್ಥ!
– ಕೊಡಗು: ಟ್ರೆಕ್ಕಿಂಗ್ ತೆರಳಿದ ಯುವತಿ ನಾಪತ್ತೆ: ಆನೆ ದಾಳಿ?
– ವಿಮಾನ ನಿಲ್ದಾಣದಲ್ಲಿ ಅಶ್ಲೀಲ ಫೋಟೋ, ಕೊಳೆತ ಪಾರ್ಸೆಲ್!
– ಶಿವಮೊಗ್ಗ: ಚರ್ಚ್ ಪ್ರಾರ್ಥನೆಯ ವೇಳೆ ಹೆಜ್ಜೇನು ದಾಳಿ!
– ಶಾಸಕ ಸುನಿಲ್ ಕುಮಾರ್ ನಿಂದನೆ: ಓರ್ವನ ಬಂಧನ?

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಏಪ್ರಿಲ್ 3ರ ಶುಕ್ರವಾರದಂದು ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿವೃತ್ತ ನ್ಯಾಯಮೂರ್ತಿ ಹಾಗೂ ಕರ್ನಾಟಕದ ನಿವೃತ್ತ ಲೋಕಾಯುಕ್ತರಾದ ಎನ್ ಸಂತೋಷ್ ಹೆಗ್ಡೆ ಅವರು ವೇದಿಕೆಯಲ್ಲಿ ಅಸ್ವಸ್ಥಗೊಂಡ ಘಟನೆ ನಡೆದಿದೆ. ಕಡಿಮೆ ಸಕ್ಕರೆಯ ಮಟ್ಟ ಮತ್ತು ಹೆಚ್ಚು ರಕ್ತದೊತ್ತಡದಿಂದ ಅವರು ಕುಸಿದುಬಿದ್ದರು ಎನ್ನುವ ಮಾಹಿತಿ ಲಭಿಸಿದೆ. ತಕ್ಷಣ ಅವರನ್ನು ಮಣಿಪಾಲ್ (ವಿಕ್ರಂ) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಪ್ರಸ್ತುತ ನ್ಯಾಯಮೂರ್ತಿಗಳು ಚೇತರಿಸಿಕೊಳ್ಳುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಕೊಡಗು: ಟ್ರೆಕ್ಕಿಂಗ್ ತೆರಳಿದ ಯುವತಿ ನಾಪತ್ತೆ

ಕೊಡಗು: ಕರ್ನಾಟಕದ ಕಾಶ್ಮೀರ ಎಂದು ಖ್ಯಾತಿ ಪಡೆದಿರುವ ಕೊಡಗು ಜಿಲ್ಲೆಗೆ ಟ್ರಕಿಂಗ್ ಗೆ ತೆರಳಿದ್ದ ಯುವತಿಯೊಬ್ಬರು ನಾಪತ್ತೆಯಾಗಿರುವ ಘಟನೆ, ಮಡಿಕೇರಿ ತಾಲ್ಲೂಕಿನ ಕಕ್ಕಬ್ಬೆ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಕೇರಳ ಮೂಲದ ಶರಣ್ಯ ಜಿ.ಎಸ್ ಅವರು ತಡಿಯಂಡಮೋಲ್ ಬೆಟ್ಟದ ಚಾರಣಕ್ಕೆ ತೆರಳಿದ್ದು, ಅಲ್ಲಿನ ಖಾಸಗಿ ಹೋಮ್ ಸ್ಟೇ ನಲ್ಲಿ ತಂಗಿದ್ದರು ಎನ್ನಲಾಗಿದೆ. ಈ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೋಮ್ ಸ್ಟೇ ಸಿಬ್ಬಂದಿಯೊಬ್ಬರು ಇವರ ಜೊತೆಗೆ ಇತರರನ್ನು ಕಳಿಸಿಕೊಟ್ಟಿದ್ದರು.

ಆದರೆ ಶುಕ್ರವಾರ ಮಧ್ಯಾಹ್ನ 2:30ರ ಸುಮಾರಿಗೆ ಶರಣ್ಯ ಅವರು ನಾಪತ್ತೆಯಾಗಿರುವ ಮಾಹಿತಿ ಲಭಿಸಿದೆ. ಶರಣ್ಯ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಶರಣ್ಯ ಅವರು 9 ಜನರ ತಂಡದೊಂದಿಗೆ ಚಾರಣಕ್ಕೆ ತೆರಳಿದ್ದರು, ಆಗ ಅಲ್ಲಿ ಸಿಕ್ಕಿದ ನಾಯಿಗಳ ಜೊತೆ ಆಟವಾಡುತ್ತಾ ಇದ್ದುದರಿಂದ ತಂಡದಿಂದ ದೂರ ಉಳಿದಿದ್ದಾರೆ. ಬಳಿಕ ಸಂಪರ್ಕದಿಂದ ವಂಚಿತರಾಗಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.

ವಿಮಾನ ನಿಲ್ದಾಣದಲ್ಲಿ ಅಶ್ಲೀಲ ಫೋಟೋ, ಕೊಳೆತ ಪಾರ್ಸೆಲ್!

ಬೆಂಗಳೂರು: ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ವಿದೇಶಿ ಪ್ರಜೆಯೊಬ್ಬ ಅಸಹ್ಯಕರ ಮತ್ತು ಕೊಳೆತ ವಸ್ತುಗಳು, ಅಶ್ಲೀಲ ಚಿತ್ರಗಳನ್ನು ಪಾರ್ಸೆಲ್ ಕಳುಹಿಸಿ, ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ವಿಮಾನ ನಿಲ್ದಾಣದ ಆಡಳಿತ ಕಛೇರಿಗೆ ಕಳೆದ ಕೆಲವು ದಿನಗಳಿಂದ ಅನುಮಾನಾಸ್ಪದ ಪಾರ್ಸೆಲ್ ನಿರಂತರವಾಗಿ ಬರುತ್ತಿದ್ದು, ಅವುಗಳನ್ನು ಅಧಿಕಾರಿಗಳು ತೆರೆದು ನೋಡಿದಾಗ ದುರ್ವಾಸನೆಯೊಂದಿಗೆ ಅಸಹ್ಯಕರ ವಸ್ತುಗಳು ಎದುರಾಗಿದೆ. ಕೊಳೆತ ತರಕಾರಿಗಳು, ಬಾಡಿದ ಹೂವಿನ ಹಾರ, ಈಗಾಗಲೇ ಬಳಸಿ ಎಸೆಯಲ್ಪಡಬೇಕಾದ ವಸ್ತುಗಳು ಮತ್ತು ಅಶ್ಲೀಲ ಚಿತ್ರಗಳು ಪತ್ತೆಯಾಗಿವೆ.

ಇದಕ್ಕೆ ಸಂಬಂಧಿಸಿದಂತೆ ಕಛೇರಿಯ ಸಿಬ್ಬಂದಿಗಳು ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡಿಕೊಂಡಿದ್ದ ವ್ಯಕ್ತಿಯ ಮೇಲೆ ಗಮನಹರಿಸಿದ ಪೊಲೀಸರು ತಕ್ಷಣ ಅವನನ್ನು ಸೆರೆಹಿಡಿದು ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಯು ಭಾರತೀಯ ಮೂಲದ ಸುಭಾಷ್ ಜೈ ಅಜೀಜ್ ಎಂದು ಗುರುತಿಸಲಾಗಿದ್ದು, ಪ್ರಸ್ತುತ ನೆದರ್ ಲ್ಯಾಂಡ್ ನ ಪೌರತ್ವವನ್ನು ಹೊಂದಿದ್ದಾನೆ ಎನ್ನಲಾಗಿದೆ.

•ಶಿವಮೊಗ್ಗ: ಚರ್ಚ್ ಪ್ರಾರ್ಥನೆಯ ವೇಳೆ ಹೆಜ್ಜೇನು ದಾಳಿ!

ಶಿವಮೊಗ್ಗ: ಶಿವಮೊಗ್ಗ ನಗರದ ಜಿಲ್ಲೆಯ ಪ್ರಸಿದ್ಧ ಚರ್ಚ್ ಆಗಿರುವ ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಹೆಜ್ಜೇನು ದಾಳಿ ನಡೆದ ಘಟನೆ, ಶುಕ್ರವಾರದಂದು ನಡೆದಿದೆ. ಗುಡ್ ಫ್ರೈಡೆ ಪ್ರಯುಕ್ತ ಚರ್ಚ್ ನಲ್ಲಿ ವಿಶೇಷ ಪ್ರಾರ್ಥನೆ ನಡೆಯುತ್ತಿದ್ದು, ಚರ್ಚ್ ನ ಆವರಣದಲ್ಲಿ ಶಿಲುಬೆ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಹೆಜ್ಜೇನು ಏಕಾಏಕಿ ದಾಳಿ ನಡೆಸಿದೆ. ಇದರಿಂದ ಭಯಭೀತರಾದ ಕ್ರೈಸ್ತ ಬಾಂಧವರು ಚರ್ಚ್ ನ ಒಳಗೆ ತೆರಳಿ, ಬಾಗಿಲು ಹಾಕಿಕೊಂಡು ರಕ್ಷಣೆ ಪಡೆದುಕೊಂಡಿದ್ದಾರೆ. ಒಳಗೆ ಹೋಗುವ ಮೊದಲೇ ನೂರಾರು ಜನರ ಮೇಲೆ ಹೆಜ್ಜೇನು ದಾಳಿ ನಡೆಸಿತ್ತು ಎನ್ನಲಾಗಿದೆ. ತಕ್ಷಣ ಗಾಯಾಳುಗಳನ್ನು ಆ್ಯಂಬುಲೆನ್ಸ್ ಮೂಲಕ ಚರ್ಚ್ ನ ಸಮೀಪದಲ್ಲಿರುವ ಅಶೋಕ ಸಂಜೀವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಯಿತು ಎನ್ನುವ ಮಾಹಿತಿ ಲಭಿಸಿದೆ. ಚರ್ಚ್ ನ ಫಾದರ್ ಮೇಲೆ ಕೂಡ ಹೆಜ್ಜೇನು ದಾಳಿ ನಡೆದಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿರುವ ಅವರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

•ಶಾಸಕ ಸುನಿಲ್ ಕುಮಾರ್ ನಿಂದನೆ: ಓರ್ವನ ಬಂಧನ?

ಕಾರ್ಕಳ: ಶಾಸಕರಾದ ವಿ.ಸುನಿಲ್ ಕುಮಾರ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಿಂದನಾತ್ಮಕ ಪೋಸ್ಟ್ ಹಾಕಿರುವ ಹಿನ್ನೆಲೆಯಲ್ಲಿ ಇನ್ನಾ ಗ್ರಾಮದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಯೋಗೀಶ್ ನವನ್ ಅವರನ್ನು ಬಂಧಿಸುವಂತೆ ನ್ಯಾಯಾಲಯವು ಪೊಲೀಸರಿಗೆ ನಿರ್ದೇಶನ ನೀಡಿದೆ. ಕರೋನಾ ಸಂದರ್ಭದಲ್ಲಿ ಗೇರುಬೀಜ ಕಂಪನಿಯ ಪರವಾಗಿ ಶಾಸಕ ಸುನಿಲ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಇದ್ದು, ಆ ಸಂದರ್ಭದಲ್ಲಿ ಕಾರ್ಖಾನೆಯನ್ನು ತೆರೆಯಲು ಸಹಾಯ ಮಾಡಿದ್ದರು. ಇದಕ್ಕೆ ಚಿಕ್ಕಲ್ ಬೆಟ್ಟು ನಿವಾಸಿಯಾದ ರಾಧಾಕೃಷ್ಣ ನಾಯಕ್ ಮತ್ತು ಯೋಗೀಶ್ ನವನ್ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರು ಬಂಡವಾಳ ಶಾಹಿಗಳ ಪರವಾಗಿದ್ದಾರೆ, ಊಟಕ್ಕೆ ಬೆಲೆಬಾಳುವ ಗೋಡಂಬಿಯನ್ನು ಬಳಸುತ್ತಿದ್ದಾರೆ, ತಮಗೆ ಯಾರು ಏನನ್ನು ನೀಡುತ್ತಾರೋ ಅವರ ಪರವಾಗಿರುತ್ತಾರೆ ಎನ್ನುವಂತಹ ಬರಹಗಳನ್ನು ಹಾಕಿದ್ದರು.

ಇದರಿಂದ ಆಕ್ರೋಶಗೊಂಡ ಸುನಿಲ್ ಕುಮಾರ್ ಅವರು ತಮ್ಮ ಘನತೆ, ಭಾವನೆ ಮತ್ತು ಹೆಸರಿಗೆ ಧಕ್ಕೆಯಾಗುತ್ತಿದೆ. ಇದನ್ನು ನಿರ್ಬಂಧಿಸಬೇಕು ಮತ್ತು ನಷ್ಟವನ್ನು ಭರಿಸಬೇಕು ಎಂದು ಬೆಂಗಳೂರಿನ 12ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಜನವರಿ ತಿಂಗಳಿನಲ್ಲಿ ನ್ಯಾಯಾಲಯವು ತೀರ್ಪು ನೀಡಿತ್ತು. ರಾಧಾಕೃಷ್ಣ ನಾಯಕ್ ಬೇಷರತ್ ಕ್ಷಮಾಪಣೆ ಕೇಳಿ ಭಾಗಶಃ ಪರಿಹಾರ ಮೊತ್ತವನ್ನು ನ್ಯಾಯಾಲಯಕ್ಕೆ ಜಮೆ ಮಾಡಿದ್ದರು. ಯೋಗೀಶ್ ನವನ್ ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳದಿರುವ ಕಾರಣ ಕಾರ್ಕಳದ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಕೋಮಲ ಆರ್‌.ಸಿ ಅವರು ಯೋಗೀಶ್ ನವನ್ ಅವರನ್ನು ಬಂಧಿಸಿ ತರುವಂತೆ ಪೊಲೀಸರಿಗೆ ಆದೇಶವನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.