ಮಿಕ್ಸ್ಚರ್ ಹಾಗೂ ಜಿಲೇಬಿ ತಯಾರಿಕೆಯಲ್ಲಿ ಬಳಕೆ ಮಾಡುವ ಹಳದಿ ಬಣ್ಣ ಕ್ಯಾನ್ಸರ್ ಅಂಶ ಪತ್ತೆ
– ಕ್ಯಾನ್ಸರ್ ಮಾತ್ರವಲ್ಲದೆ, ಹೆಪಟೈಟಿಸ್, ಡಯಾಬಿಟಿಸ್ ಗೆ ಕಾರಣ
ಪನ್ನೀರ್ ತಿಂತೀರಾ ಹಾಗಾದ್ರೆ ಎಚ್ಚರ…!!
– ಸಾಫ್ಟ್ ಆಗಿಸಲು ರಾಸಾಯನಿಕ ಬಳಕೆ ಇದು ಕ್ಯಾನ್ಸರ್ ಕಾರಕ
NAMMUR EXPRESS NEWS
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಸುರಕ್ಷಿತ ಆಹಾರ ಮಾರಾಟ ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಸಂಗ್ರಹಿಸಿದ ಮಾದರಿಯ ಪರೀಕ್ಷಾ ವರದಿ. ಸ್ಯಾಂಪಲ್ ಪರಿಶೀಲನೆ ವೇಳೆ ನಗರದಲ್ಲಿ ಮಾರಾಟವಾಗುವ ವಿವಿಧ ಆಹಾರದಲ್ಲಿ ಕ್ಯಾನ್ಸರ್ ಅಂಶ ಪತ್ತೆಯಾಗಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ. ನಗರದಲ್ಲಿ ದಾಳಿ ಮುಂದುವರಿಸಿದ ಅಧಿಕಾರಿಗಳಿಗೆ ಸಿಹಿ ತಿಂಡಿಗಳಲ್ಲೂ ಕ್ಯಾನ್ಸರ್ ಅಂಶ ಇರುವುದು ತಿಳಿದು ಬಂದಿದೆ. ಜನರನ್ನು ಆಕರ್ಷಿಸಲು ಬೇಕರಿ ಹಾಗೂ ಹೋಟೆಲ್ಗಳಲ್ಲಿ ರಾಸಾಯನಿಕ ಬಣ್ಣವನ್ನು ಬಳಸಿ ಸಿಹಿ ತಿಂಡಿಗಳನ್ನು ತಯಾರಿಸಲಾಗುತ್ತದೆ. ಈ ಬಣ್ಣ ಆರೋಗ್ಯಕ್ಕೆ ಹಾನಿಕಾರಕ ಎಂದು ಪರಿಶೀಲನೆಯಿಂದ ತಿಳಿದು ಬಂದಿದೆ. ವಿಶೇಷವಾಗಿ ಬೇಕರಿಗಳಲ್ಲಿ ಸಿಗುವ ಬಗೆ ಬಗೆಯ ಬಣ್ಣದ ಸಿಹಿ ತಿಂಡಿಗಳಲ್ಲಿ ಬಳಸುವ ರಾಸಾಯನಿಕ ಬಣ್ಣದಲ್ಲಿ ಕ್ಯಾನರ್ ಅಂಶ ಇರುವುದು ಗೊತ್ತಾಗಿದೆ. ಅಷ್ಟೇ ಅಲ್ಲದೆ ಇದರಲ್ಲಿ ಸಕ್ಕರೆ ಅಂಶ ಹೆಚ್ಚಾಗಿದ್ದು ಇದರಿಂದ ಡಯಾಬಿಟಿಸ್ ಬರುವ ಸಾಧ್ಯತೆ ಇದೆ. ಹೀಗಾಗಿ ತಿನ್ನಲು ಯೋಗ್ಯವಲ್ಲದ ಸಿಹಿ ತಿಂಡಿಗಳ ಮಾರಾಟ ಮಳಿಗೆಗಳಿಗೆ ಆಹಾರ ಇಲಾಖೆ ನೋಟೀಸ್ ನೀಡಿದೆ. ಅಲ್ಲದೆ ಸ್ವಚ್ಚತೆ ಇಲ್ಲದ, ಕಲಬೆರೆಕೆ ಮಾಡುವ, ಪರವಾನಿಗೆ ಪಡೆಯದ ಬೇಕರಿ ಹಾಗೂ ಅಂಗಡಿಗಳಿಗೆ ಆಹಾರ ಇಲಾಖೆ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ. ಹತ್ತಕ್ಕೂ ಹೆಚ್ಚು ಸಿಹಿ ತಿಂಡಿಗಳ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ. ಮೈಸೂರು ಪಾಕ್, ಮಿಕ್ಸ್ಚರ್, ಜಿಲೇಬಿ, ಜಹಂಗೀರ್ನಲ್ಲಿ ಕೃತಕ ಬಣ್ಣ ಬಳಕೆ ಮಾಡಿರುವುದು ಗೊತ್ತಾಗಿದೆ. ಅಲ್ಲದೆ ಈ ಸಿಹಿ ತಿಂಡಿಗಳಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿರುವುದು ಪರಿಶೀಲನೆಯಿಂದ ತಿಳಿದು ಬಂದಿದೆ. ಇದರ ಬೆನ್ನೆಲ್ಲೆ ಹಲವೆಡೆ ದಾಳಿ ನಡೆಸಿ ಮಾದರಿ ಸಂಗ್ರಹಿಸಿ ಪರಿಶೀಲನೆಗೆ ಕಳುಹಿಸಲಾಗಿದೆ. ಈ ಪರೀಕ್ಷಾ ವರದಿಯಲ್ಲಿ ಕೆಲ ಸಿಹಿ ತಿಂಡಿಗಳು ತಿನ್ನಲು ಯೋಗ್ಯವಾಗಿಲ್ಲ. ಈ ಸ್ವೀಟ್ಗಳಲ್ಲಿ ಕಲಬೆರೆಕೆ, ಕಲರಿಂಗ್ ಬಳಕೆ ಮಾಡಲಾಗಿದೆ. ಇದರ ಸೇವನೆಯಿಂದ ಕ್ಯಾನ್ಸರ್, ಡಯಾಬಿಟಿಸ್ಗೆ ಕಾರಣವಾಗುವ ಅಂಶ ದೇಹ ಸೇರುತ್ತದೆ ಎಂದು ಎಚ್ಚರಿಸಲಾಗಿದೆ. ಸ್ವೀಟ್ಸ್ಗಳಲ್ಲಿ ಬಳಕೆ ಮಾಡುವ ಕಲರ್ ಕ್ಯಾನ್ಸರ್ ಮಾತ್ರವಲ್ಲದೆ, ಹೆಪಟೈಟಿಸ್, ಡಯಾಬಿಟಿಸ್ ಗೆ ಕಾರಣವಾಗುತ್ತದೆ ಎಂದು ಆಹಾರ ತಜ್ಞರು ಹೇಳಿದ್ದಾರೆ. ಮಿಕ್ಸ್ಚರ್ ಹಾಗೂ ಜಿಲೇಜಿ ತಯಾರಿಕೆಯಲ್ಲಿ ಬಳಕೆ ಮಾಡುವ ಹಳದಿ ಬಣ್ಣ ಕ್ಯಾನ್ಸರ್ ಕಾರಕ ಎಂದು ತಿಳಿದು ಬಂದಿದೆ.
ಪನ್ನೀರ್ ತಿಂತೀರಾ ಹಾಗಾದ್ರೆ ಎಚ್ಚರ…!!
– ಸಾಫ್ಟ್ ಆಗಿಸಲು ರಾಸಾಯನಿಕ ಬಳಕೆ ಇದು ಕ್ಯಾನ್ಸರ್ ಕಾರಕ
– ಕಿಡ್ನಿ, ಹೃದಯ ಸಂಬಂಧಿ ಕಾಯಿಲೆಯೂ ಬರಹುದು
ಬೆಂಗಳೂರು : ಅಡುಗೆ ಪದಾರ್ಥಗಳಲ್ಲಿ ರಾಸಾಯನಿಕ ಬಣ್ಣ ಬಳಕೆ, ಕಲಬೆರಕೆ ವಿರುದ್ಧ ಸಮರ ಸಾರಿರುವ ಆಹಾರ ಗುಣಮಟ್ಟ ಸುರಕ್ಷತಾ ಇಲಾಖೆ ಪನ್ನೀರ್ ಪ್ರಿಯರಿಗೆ ಕ್ಯಾನ್ಸರ್ ಎಚ್ಚರಿಕೆ ನೀಡಿದೆ. ಮಾ.17ರಂದು ನಗರದ ವಿವಿಧೆಡೆಯಿಂದ ಪನ್ನೀರ್ನ 163 ಸ್ಯಾಂಪಲ್ ಸಂಗ್ರಹಿಸಿ ತಪಾಸಣೆಗೆ ಕಳಿಸಲಾಗಿತ್ತು. ಈ ಪೈಕಿ 17ರ ವರದಿ ಬಂದಿದ್ದು, ನಾಲ್ಕು ಮಾದರಿ ಸುರಕ್ಷಿತ ಎನ್ನಿಸಿಕೊಂಡಿದ್ದರೆ, ಇನ್ನು ಎರಡರಲ್ಲಿ ಹಾನಿಕಾರಕ ಅಂಶ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಪನ್ನೀರ್ ತಯಾರಿಸುವಾಗ ಕಡಿಮೆ ಪ್ರಮಾಣದ ಕ್ಯಾಲ್ಸಿಯಂ ಹಾಗೂ ಪ್ರೋಟಿನ್ ಅನ್ನು ಬಳಸುತ್ತಾರೆ ಮತ್ತು ಪನ್ನೀರ್ ಅನ್ನು ಮೆದುವಾಗಿಸಲು ಕೆಮಿಕಲ್ ಬಳಸುತ್ತಾರೆ. ಈ ಕೆಮಿಕಲ್ ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂಬ ಮಾಹಿತಿ ಆಹಾರ ಸುರಕ್ಷತಾ ಇಲಾಖೆ ವರದಿಯಲ್ಲಿದೆ ಎನ್ನಲಾಗಿದೆ.
ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್ಗೆ ಕಾರಣ, ಕೊಬ್ಬಿನ ಪ್ರಮಾಣ ಹೆಚ್ವಾಗುವಿಕೆ ಹಾಗೂ ಕಿಡ್ನಿ ಸಮಸ್ಯೆ ಉಂಟಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು, ಆಹಾರ ಸುರಕ್ಷತಾ ಇಲಾಖೆ ವಿವಿಧೆಡೆ ಜಾಗೃತಿ ಕಾರ್ಯಕ್ರಮ ನಡೆಸಿದೆ. ಇಲಾಖೆಯ ಅಧಿಕಾರಿಗಳು ಆಹಾರ ಪದಾರ್ಥಗಳ ಕಲರಿಂಗ್ ಮತ್ತು ಕಲಬೆರಕೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಕಲಬೆರಕೆ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ. ಈ ಮೊದಲು ಆಹಾರ ಸುರಕ್ಷತಾ ಇಲಾಖೆ ಕಲ್ಲಂಗಡಿಯಲ್ಲಿ ಕೆಮಿಕಲ್, ಸಿಹಿ ತಿಂಡಿ ಹಾಗೂ ಇಡ್ಲಿಗೆ ಬಳಸುವ ಪ್ಲಾಸ್ಟಿಕ್ನಲ್ಲಿ ಕ್ಯಾನ್ಸರ್ಕಾರಕ ಅಂಶ ಪತ್ತೆ ಮಾಡಿತ್ತು. ಪನ್ನೀರ್ನಲ್ಲಿ ಹಾನಿಕಾರಕ ಅಂಶ ಪತ್ತೆ ಆಗಿರುವ ವರದಿ ಗಮನಕ್ಕೆ ಇನ್ನೂ ಬಂದಿಲ್ಲ. ವರದಿ ತರಿಸಿಕೊಂಡು ಪರಿಶೀಲನೆ ನಡೆಸುತ್ತೇವೆ. ಬಳಿಕ ಹೋಟೆಲ್, ರೆಸ್ಟೋರೆಂಟ್ನವರಿಗೆ ಇಂತಹ ಪನ್ನೀರ್ ಬಳಸದಂತೆ ಹಾಗೂ ಉತ್ಪಾದಕರ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪ್ರತಿ ತಿಂಗಳು ಕಲಬೆರಕೆ ಪದಾರ್ಥಗಳ ಕುರಿತಂತೆ ನಿರಂತರವಾಗಿ ತಪಾಸಣೆ ಇರಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.