Categories
ಉಡುಪಿ ಕರಾವಳಿ ದಕ್ಷಿಣ ಕನ್ನಡ ಬೆಳ್ತಂಗಡಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

• ಬೆಳ್ತಂಗಡಿ: ಅಕ್ರಮ ಡೀಸೆಲ್ ದಾಸ್ತಾನು: ದಾಳಿ
• ಕಡಬ: ಬಾವಿ ತೋಡಲು ಸ್ಫೋಟಕ ಬಳಕೆ; ಮನೆಗಳಿಗೆ ಹಾನಿ
• ಬಂಟ್ವಾಳ: ಬಸ್ ನಲ್ಲಿ ಚಿನ್ನಾಭರಣ ಕಳುವು; ಆರೋಪಿ ಸೆರೆ
• ಉಡುಪಿ: ಕುಡಿದ ಅಮಲಲ್ಲಿ ವೃದ್ಧೆಯ ಕೊಲೆ..!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಳ್ತಂಗಡಿ: ಬೆಳ್ತಂಗಡಿ ಆಹಾರ ಇಲಾಖೆಯ ಆಹಾರ ನಿರೀಕ್ಷಕರಾದ ವಿಶ್ವ, ಆಹಾರ ಶಿರಸ್ತೇದಾರರಾದ ಸಂತೋಷ್ ಮತ್ತವರ ತಂಡವು ಕಾರ್ಯಾಚರಣೆ ನಡೆಸಿದ ಘಟನೆ, ಕಣಿಯೂರು ಗ್ರಾಮದಲ್ಲಿ ನಡೆದಿದೆ. ಮುದೆಲ್ತಿಯಾರ್ ಎನ್ನುವಲ್ಲಿನ ಜಗದೀಶ್ ಎನ್ನುವವರ ಮನೆಯ ಶೆಡ್ ನಲ್ಲಿ ಡೀಸೆಲ್ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ. 20 ಬ್ಯಾರಲ್ ನಲ್ಲಿ 200 ಲೀಟರ್ ನಂತೆ 4.000 ಲೀಟರ್ ಡೀಸೆಲ್, 5 ಬ್ಯಾರಲ್ ಕ್ಯಾನ್ ನಲ್ಲಿ 35 ಲೀಟರ್ ನಂತೆ ಸಂಗ್ರಹಿಸಿಟ್ಟಿದ್ದ 175 ಲೀಟರ್ ಡೀಸೆಲ್ ಹಾಗೂ 5 ಖಾಲಿ ಕ್ಯಾನ್ ಗಳಿದ್ದವು ಎನ್ನಲಾಗಿದೆ.

ಒಟ್ಟು 3.50.000 ರೂಪಾಯಿಯಷ್ಟು ಬೆಲೆ ಬಾಳುತ್ತದೆ ಎಂದು ಅಂದಾಜಿಸಲಾಗಿದೆ.‌ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ಜಗದೀಶ್ ಮತ್ತು ಹರೀಶ್ ಎನ್ನುವವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವುದೇ ಬಗೆಯ ಅನುಮತಿ ಇಲ್ಲದೆ, ಅಕ್ರಮವಾಗಿ ಡೀಸೆಲ್ ಅನ್ನು ದಾಸ್ತಾನು ಮಾಡಿರುವ ಕುರಿತು ಬಾತ್ಮೀದಾರರಿಂದ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.

• ಕಡಬ: ಬಾವಿ ತೋಡಲು ಸ್ಫೋಟಕ ಬಳಕೆ; ಮನೆಗಳಿಗೆ ಹಾನಿ

ಕಡಬ: ಬಾವಿಯನ್ನು ತೋಡುವ ಸಮಯದಲ್ಲಿ ಬಳಕೆ ಮಾಡಿರುವ ಸ್ಫೋಟಕದಿಂದಾಗಿ ಸುತ್ತಮುತ್ತಲಿದ್ದ ಮನೆಗಳಿಗೆ ಹಾನಿಯಾಗಿರುವ ಘಟನೆ, ರಾಮಕುಂಜ ಗ್ರಾಮದ ಕಂಪ ಎನ್ನುವಲ್ಲಿ ನಡೆದಿದೆ. ಮೈಸೂರು ಮೂಲದ ಸೋಮಶೇಖರ್ ಎನ್ನುವವರು ತಮ್ಮ ಸಂಬಂಧಿಕರಿಂದ 33 ಸೆಂಟ್ಸ್ ಜಾಗವನ್ನು ಖರೀದಿಸಿದ್ದು, ಅಲ್ಲಿ ಅಡಿಕೆ ಮರಗಳಿವೆ ಎನ್ನಲಾಗಿದೆ. ಅದೇ ಜಾಗದಲ್ಲಿ ನೀರಿಗಾಗಿ ಬಾವಿಯನ್ನು ತೋಡಲು ಆರಂಭಿಸಿದ್ದು, 15 ಅಡಿ ಆಳಕ್ಕೆ ಹೋಗುತ್ತಿದ್ದಂತೆಯೇ ಕಲ್ಲು ಸಿಕ್ಕಿರುವ ಹಿನ್ನೆಲೆಯಲ್ಲಿ ಸ್ಫೋಟಕ ಬಳಸಲು ನಿರ್ಧರಿಸಿದ್ದಾರೆ.

ಪರಿಣಾಮವಾಗಿ ಅಕ್ಕಪಕ್ಕದ ಎರಡು ಮನೆಗಳ ಗೋಡೆಗಳಲ್ಲಿ ಬಿರುಕು ಕಂಡುಬಂದಿದ್ದು, ಮನೆಯ ಮಾಲೀಕರು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ. ವಾಮನ ಮೂಲ್ಯ, ಕೆ.ಟಿ. ಮೋಹನ್ ಎನ್ನುವವರು ನೀಡಿರುವ ದೂರಿನ ಆಧಾರದ ಮೇಲೆ ಕಡಬ ಠಾಣೆಯ ಇನ್ಸ್ಪೆಕ್ಟರ್ ಜಂಬೂರಾಜ್ ಮಹಾಜನ್ ಅವರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಂಗಳವಾರದಂದು ಬಾವಿಯೊಳಗೆ ಸ್ಫೋಟವಾಗದೆ ಉಳಿದುಕೊಂಡಿದ್ದ ಮದ್ದು ಗುಂಡನ್ನು ತೆರವುಗೊಳಿಸಲು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳು ಆಗಮಿಸಿ, ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮತ್ತು ಎಫ್ಎಸ್ಎಲ್ ತಂಡ ಜೊತೆಗೂಡಿತು ಎನ್ನುವ ಸಂಗತಿ ತಿಳಿದುಬಂದಿದೆ.

• ಬಂಟ್ವಾಳ: ಬಸ್ ನಲ್ಲಿ ಚಿನ್ನಾಭರಣ ಕಳುವು; ಆರೋಪಿ ಸೆರೆ

ಬಂಟ್ವಾಳ: ಕಳೆದ ಕೆಲವು ತಿಂಗಳುಗಳ ಹಿಂದೆ ಬಸ್ ನಲ್ಲಿ ನಡೆದ ಕಳುವು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪತ್ತೆ ಹಚ್ಚಿ, ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನವೆಂಬರ್ ತಿಂಗಳಿನಲ್ಲಿ ಕಲ್ಲಡ್ಕದ ಕುದ್ರೆಬೆಟ್ಟು ಸಮುದ್ರದ ಸಮೀಪದ ಹೊಟೇಲ್ ಬಳಿ ನಿಲ್ಲಿಸಿದ್ದ ದುರ್ಗಾಂಬ ಬಸ್ ನಲ್ಲಿ ಬ್ರಹ್ಮಾವರ ಮೂಲದ ದಂಪತಿಗಳು ಬ್ಯಾಗ್ ನಲ್ಲಿ ಇರಿಸಿದ್ದ 180 ಗ್ರಾಂ ತೂಕದ ಸುಮಾರು 20.00.000 ರೂಪಾಯಿಗಳಷ್ಟು ಬೆಲೆಬಾಳುವ ಚಿನ್ನಾಭರಣ ಕಳ್ಳತನವಾಗಿತ್ತು.

ಈ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ಅರುಣ್ ಕೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮಾರೆಡ್ಡಿ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳದ ಎಎಸ್ ಪಿ, ಯಶ್ ಕುಮಾರ್ ಶರ್ಮಾ ಅವರ ನಿರ್ದೇಶನದಂತೆ, ಪ್ರಕರಣದ ತನಿಖಾಧಿಕಾರಿಗಳಾದ ಬಂಟ್ವಾಳ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಅವರ ನೇತೃತ್ವದಲ್ಲಿ ಬಂಟ್ವಾಳ ನಗರ ಠಾಣೆಯ ಉಪನಿರೀಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿ ಅವರು ಸಿಬ್ಬಂದಿಗಳಾದ ವಿಜಯ್ ಕುಮಾರ್, ಸುರೇಶ್ ಕುಮಾರ್, ರಾಜೇಶ್, ಇರ್ಷಾದ್, ಬಸವರಾಜ್, ವಿಜಯ್ ಕುಮಾರ್, ರೇವತಿ ಹಾಗೂ ಗಣಕಯಂತ್ರ ಸಿಬ್ಬಂದಿಗಳಾದ ಸಂಪತ್ ಕುಮಾರ್ ಮತ್ತು ದಿವಾಕರ್ ಅವರ ಜೊತೆಗೂಡಿ ಆರೋಪಿಯನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿದರು.

ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿಯನ್ನು ಮಧ್ಯಪ್ರದೇಶ ಮೂಲದ ಸಮದ್ ಖಾನ್ ಎಂದು ಗುರುತಿಸಲಾಗಿದೆ. ಈ ಸಂದರ್ಭದಲ್ಲಿ ಆತ ಕಳುವು ಮಾಡಿದ್ದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಯಿತು.

• ಉಡುಪಿ: ವಿನಾಕಾರಣ ನಡೆದ ವೃದ್ಧೆಯ ಕೊಲೆ

ಉಡುಪಿ: ಕುಡಿದ ಅಮಲಿನಲ್ಲಿ ನಡೆದ ಗಲಾಟೆಯಿಂದ, ವೃದ್ಧೆಯೊಬ್ಬರ ಕೊಲೆಯಾದ ಘಟನೆ, ಮಣಿಪುರ ಗ್ರಾಮದ ಕೆನರಾಡಿಯಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ವನಜ ಪೂಜಾರ್ತಿ ಎಂದು ಗುರುತಿಸಲಾಗಿದೆ. ವಲೇರಿಯನ್ ಮೆಂಡೋನ್ಸಾ ಅವರು ವನಜ ಪೂಜಾರ್ತಿ ಅವರ ಮನೆಗೆ ಆಗಾಗ ಮದ್ಯಸೇವನೆಗೆ ಆಗಮಿಸುತ್ತಿದ್ದರು ಎನ್ನಲಾಗಿದೆ. ಅದೇ ರೀತಿ ಸೋಮವಾರ ಸಂಜೆ 5:00 ಗಂಟೆಯಿಂದ ಮಂಗಳವಾರ ಬೆಳಿಗ್ಗೆ 7:00ಗಂಟೆಯ ಸಮಯದಲ್ಲಿ ಪ್ರವೀಣ್ ಮೆಂಡೋನ್ಸಾ ಮತ್ತು ವಲೇರಿಯನ್ ಮೆಂಡೋನ್ಸಾ ನಡುವೆ ಕ್ಷುಲ್ಲಕ ಕಲಹ ಏರ್ಪಟ್ಟಿದೆ.

ಕುಡಿದಿದ್ದರಿಂದ ಗಲಾಟೆ ವಿಕೋಪಕ್ಕೆ ಹೋಗಿ, ಇಬ್ಬರೂ ಹರಿತವಾದ ಆಯುಧವೊಂದರಿಂದ ವನಜ ಪೂಜಾರ್ತಿ ಅವರ ಮೇಲೆ ಹಲ್ಲೆ ನಡೆಸಿ, ಕೊಲೆಯೆಸಗಿದ್ದಾರೆ ಎನ್ನಲಾಗಿದೆ. ಮಂಗಳವಾರದಂದು ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆಯನ್ನು ನಡೆಸಿ, ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧನಕ್ಕೆ ಒಳಪಡಿಸಿದ್ದು, ತನಿಖೆ ಮುಂದುವರಿದಿದೆ ಎನ್ನುವ ಸಂಗತಿ ತಿಳಿದುಬಂದಿದೆ.

Categories
ಕರಾವಳಿ ದಕ್ಷಿಣ ಕನ್ನಡ ಮಂಗಳೂರು

ಕರಾವಳಿ ಕಲೆ ಕಂಬಳಕ್ಕೆ ಸರ್ಕಾರದ ಹಣ!?

ಕರಾವಳಿ ಕಲೆ ಕಂಬಳಕ್ಕೆ ಸರ್ಕಾರದ ಹಣ!?
– ಬಂಟ್ವಾಳದಲ್ಲಿ ಘೋಷಣೆ ಮಾಡಿದ ಸಿದ್ದರಾಮಯ್ಯ
– 2028ರಲ್ಲೂ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರಲಿದೆ: ಸಿದ್ದು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬಂಟ್ವಾಳ: ರಾಜ್ಯ ಸರ್ಕಾರ ಕಂಬಳಕ್ಕೆ ಬೆಂಬಲದ ಜೊತೆಗೆ ಹಣಕಾಸಿನ ನೆರವನ್ನು ನೀಡಲಿದೆ ಎಂದು ಸರ್ಕಾರ ಘೋಷಣೆ ಮಾಡಿದೆ. ಬಂಟ್ವಾಳದ ನಾವೂರು ಗ್ರಾಮದ ಕೂಡಿಬೈಲ್ ನಲ್ಲಿ ನಡೆದ 15ನೇ ವರ್ಷದ ಮೂಡೂರು-ಪಡೂರು ಜೋಡುಕರೆ ಬಯಲು ಕಂಬಳಕೂಟದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ನೆರವೇರಿಸಿ, ಮಾತನಾಡಿ, “ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುವ ಕಂಬಳವು ಜಾತ್ಯಾತೀತ ಮತ್ತು ಧರ್ಮಾತೀತವಾಗಿದ್ದು, ಎಲ್ಲರೂ ಪಾಲ್ಗೊಳ್ಳುವಂತಹ ಒಂದು ಜನಪದ ಕ್ರೀಡೆಯಾಗಿದೆ. ಈ ಸಂಪ್ರದಾಯವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ರಾಜ್ಯ ಸರ್ಕಾರ ಕಂಬಳಕ್ಕೆ ಬೆಂಬಲದ ಜೊತೆಗೆ ಹಣಕಾಸಿನ ನೆರವನ್ನು ನೀಡಲಿದೆ” ಎನ್ನುವ ಭರವಸೆಯನ್ನು ನೀಡಿದರು.

ರಾಜಕೀಯ ಪ್ರಜಾಪ್ರಭುತ್ವದ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವ ದೊರಕಿದಾಗ ಮಾತ್ರ ಸ್ವಾತಂತ್ರ್ಯದ ಪರಿಕಲ್ಪನೆ ಯಶಸ್ವಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸಮಾಜದ ದುರ್ಬಲ ವರ್ಗವನ್ನು ಮುಖ್ಯವಾಹಿನಿಗೆ ತರಲು ಸರ್ಕಾರವು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಮುಂದೆ ಕೂಡ ಇದೇ ರೀತಿಯ ಕಾರ್ಯಗಳನ್ನು ಮುಂದುವರಿಸಲಾಗುವುದು. ಇದಕ್ಕಾಗಿ ರಾಜ್ಯದ ಜನರು ನಮ್ಮ ಕೈ ಹಿಡಿಯುತ್ತಾರೆ ಎನ್ನುವ ವಿಶ್ವಾಸವಿದೆ. ಹೀಗಾಗಿ 2028 ರಲ್ಲೂ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.

ಇದೇ ಸಮಯದಲ್ಲಿ ಮಾಜಿ ಸಚಿವರಾದ ಬಿ.ರಾಮನಾಥ ರೈ ಅವರ ಕ್ಷೇತ್ರಕ್ಕೆ ಕಳೆದ ಅವಧಿಯಲ್ಲಿ ಸುಮಾರು 5ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆಗೊಳಿಸಿ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಆದರೂ ಅವರನ್ನು ಜನರು ಸೋಲಿಸಿರುವುದು, ನೋವಿನ ಸಂಗತಿಯಾಗಿದೆ. 2028ರಲ್ಲಿ ಕೂಡ ಅವರೇ ಬಂಟ್ವಾಳ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಸಿದ್ಧರಾಮಯ್ಯ ಅವರು ಘೋಷಿಸಿದರು. ಅಲ್ಲದೆ ಮುಂದಿನ ಆರ್ಥಿಕ ವರ್ಷದಲ್ಲಿ ಬಂಟ್ವಾಳದ ಬೆಂಜನಪದವಿನಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವುದಾಗಿ ಆಶ್ವಾಸನೆಯನ್ನು ನೀಡಿದರು.

Categories
ಉಡುಪಿ ದಕ್ಷಿಣ ಕನ್ನಡ ಬೆಳ್ತಂಗಡಿ ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

• ಬೆಳ್ತಂಗಡಿ: ಗೋಹತ್ಯೆ ಪ್ರಕರಣ; ಆರೋಪಿ ಮನೆ ಜಪ್ತಿ
• ಮೂಡಬಿದರೆ: ಬೆಳಗಾವಿ ವ್ಯಕ್ತಿ ಮೂಡುಬಿದರೆಯಲ್ಲಿ ಕಾಣೆ
• ಉಡುಪಿ: ರ್ಕಾರಿ ಇಲಾಖೆಗಳ ಮೇಲೆ ಲೋಕಾಯುಕ್ತ ದಾಳಿ
• ಉಡುಪಿ: ಮಾರ್ಚ್ 4ರಂದು ಕಂಬಳದ ಶಂಕುಸ್ಥಾಪನೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಳ್ತಂಗಡಿ: ಗೋಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಮನೆಯನ್ನು ಜಪ್ತಿ ಮಾಡಿರುವ ಘಟನೆ ಬಾರ್ಯ ಗ್ರಾಮದ ಹೊಸವಕ್ಲು ಎನ್ನುವಲ್ಲಿ ನಡೆದಿದೆ. ಆರೋಪಿಯಾದ ಅಬ್ದುಲ್ ರಹಿಮಾನ್ ಮನೆಯ ಅಂಗಳದಲ್ಲಿ ಗುರುವಾರ ರಾತ್ರಿ ಅಕ್ರಮವಾಗಿ ಗೋಹತ್ಯೆ ಮಾಡಿ, ಮಾಂಸವನ್ನು ಸಿದ್ಧಪಡಿಸುತ್ತಿರುವುದು ಕಂಡುಬಂದಿದೆ.

ಇದರ ಕುರಿತು ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಠಾಣೆಯ ಪಿಎಸ್ಐ ಸುತೇಶ್ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದು, ಪೊಲೀಸರು ಬರುತ್ತಿದ್ದಂತೆ ಇಬ್ಬರು ವ್ಯಕ್ತಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮನೆಯ ಸುತ್ತಮುತ್ತಲು ಪರಿಶೀಲನೆ ನಡೆಸಿದಾಗ, ಗೋಮಾಂಸವನ್ನು ಪ್ಯಾಕೆಟ್ ಮಾಡಲಾಗಿದ್ದು, ಸಮೀಪದಲ್ಲಿದ್ದ ಆಟೋದಲ್ಲಿ ಕೂಡ ಗೋಮಾಂಸ ಪತ್ತೆಯಾಗಿದೆ. ಎರಡು ಸೇರಿ ಒಟ್ಟು 56 ಕೆಜಿಯಷ್ಟು ಗೋಮಾಂಸವಿತ್ತು ಎನ್ನುವ ಮಾಹಿತಿ ಲಭಿಸಿದೆ. ಈ ಸಂದರ್ಭದಲ್ಲಿ ಪೊಲೀಸರು ಗೋಮಾಂಸ, ತೂಕದ ಯಂತ್ರ, ಆಟೋ, ಮೊಬೈಲ್ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

• ಮೂಡಬಿದರೆ: ಬೆಳಗಾವಿ ವ್ಯಕ್ತಿ ಮೂಡುಬಿದರೆಯಲ್ಲಿ ಕಾಣೆ

ಮೂಡಬಿದರೆ: ಬೆಳಗಾವಿ ಮೂಲದ ವ್ಯಕ್ತಿಯೊಬ್ಬರು ಮೂಡಬಿದರೆಯಲ್ಲಿ ಕಾಣೆಯಾಗಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ನಾಪತ್ತೆಯಾಗಿರುವ ವ್ಯಕ್ತಿಯನ್ನು ರಾಯಭಾಗ ತಾಲ್ಲೂಕಿನ ಮುಗಲ್ಕೋಡು ಗ್ರಾಮದ ಸಿದ್ಧಪ್ಪ ಮಾನಶೆಟ್ಟಿ ಎಂದು ಹೇಳಲಾಗಿದೆ. ಫೆಬ್ರವರಿ 21ರಂದು ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ತನ್ನ ಮಕ್ಕಳಿಗೆ ಪರೀಕ್ಷೆ ಬರೆಸಲು ಕರೆದುಕೊಂಡು ಬಂದಿದ್ದ ಸಿದ್ಧಪ್ಪ,ಪರೀಕ್ಷೆ ಮುಗಿಯುತ್ತಿದ್ದಂತೆ ಮಕ್ಕಳನ್ನು ಬಸ್ ಹತ್ತಿಸಿ ಊರಿಗೆ ಕಳುಹಿಸಿಕೊಟ್ಟು, ತನಗೆ ಸ್ವಲ್ಪ ಕೆಲಸ ಇರುವುದಾಗಿ ಮೂಡಬಿದರೆಯಲ್ಲೇ ಉಳಿದುಕೊಂಡಿದ್ದರು ಎನ್ನಲಾಗಿದೆ.

ಇಷ್ಟು ದಿನಗಳು ಕಳೆದರೂ ಸಿದ್ಧಪ್ಪ ಮನೆಗೆ ಮರಳಲಿಲ್ಲ. ಮನೆಯವರು ಕರೆ ಮಾಡಿದರೂ ಮೊಬೈಲ್ ಸ್ವಿಚ್ ಆಫ್ ಬರುತ್ತಿದೆ ಎನ್ನುವ ಮಾಹಿತಿ ಲಭಿಸಿದೆ. ಎಲ್ಲೆಡೆ ಹುಡುಕಾಡಿದರು ಸಿದ್ಧಪ್ಪ ಅವರು ಸುಳಿವು ಸಿಗದ ಹಿನ್ನೆಲೆಯಲ್ಲಿ ಅವರ ಸಂಬಂಧಿಕರಾದ ಮಲ್ಲಪ್ಪ ಎನ್ನುವವರು ಮೂಡಬಿದರೆ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.

• ಉಡುಪಿ: ಸರ್ಕಾರಿ ಇಲಾಖೆಗಳ ಮೇಲೆ ಉಪಲೋಕಾಯುಕ್ತ ದಾಳಿ

ಉಡುಪಿ: ಉಪಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಅವರು ಸರ್ಕಾರಕ್ಕೆ ಸಂಬಂಧಿಸಿದ ವಿವಿಧ ಇಲಾಖೆಗಳ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ. ತಾಲ್ಲೂಕು ಕಛೇರಿಗೆ ದಿಡೀರ್ ಭೇಟಿ ನೀಡಿದ ಲೋಕಾಯುಕ್ತರು ಅಧಿಕಾರಿಗಳನ್ನು ಬೆಚ್ಚಿಬಿಳಿಸಿದ್ದಾರೆ. ಒಂದೆಡೆ ಜೀನ್ಸ್ ಪ್ಯಾಂಟ್ ಧರಿಸಿ ಕಾರ್ಯನಿರ್ವಹಿಸಲು ಬಂದ ಸರ್ಕಾರಿ ಅಧಿಕಾರಿ, ಇನ್ನೊಂದೆಡೆ ಚಿಟ್ ಫಂಡ್ ಗೆ ಸಂಬಂಧಿಸಿದ ದಾಖಲೆಗಳನ್ನು ಹಿಡಿದುಕೊಂಡು ಬಂದಿದ್ದ ಸರ್ಕಾರಿ ನೌಕರ, ಮತ್ತೊಂದೆಡೆ ತನ್ನ ವೈಯಕ್ತಿಕ ಬ್ಯಾಗಿನಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಂಡಿದ್ದ ಸರ್ಕಾರಿ ನೌಕರರನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಸರ್ಕಾರಿ ದಾಖಲೆಗಳನ್ನು ವೈಯಕ್ತಿಕ ಬ್ಯಾಗಿನಲ್ಲಿ ಇರಿಸಿಕೊಂಡು ಬಂದಿದ್ದ ಸರ್ಕಾರಿ ನೌಕರನನ್ನು ಅಮಾನತುಗೊಳಿಸಿ, ಆತನ ವಿರುದ್ಧ ಪ್ರಕರಣವನ್ನು ದಾಖಲಿಸುವಂತೆ ಉಡುಪಿ ನಗರ ಪೊಲೀಸರಿಗೆ ಆದೇಶ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೂ ಮೊದಲು ಮಲ್ಪೆಗೆ ಭೇಟಿ ನೀಡಿದ ಉಪಲೋಕಾಯುಕ್ತರು ಮಲಿನವಾದ ನೀರು ಸಮುದ್ರವನ್ನು ಸೇರುತ್ತಿರುವ, ಉಡುಪಿಯ ಸರ್ಕಾರಿ ಬಸ್ ನಿಲ್ದಾಣದ ಅವ್ಯವಸ್ಥೆಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ಜೊತೆಗೆ ಹೊಟೇಲ್ ಒಂದರಲ್ಲಿ ತಿಂಡಿಗಳ ದರವನ್ನು ನಮೂದಿಸದ ಹೊಟೇಲ್ ಮಾಲೀಕನನ್ನು ತರಾಟೆಗೆ ತೆಗೆದುಕೊಂಡರು ಎನ್ನುವ ಸಂಗತಿ ತಿಳಿದುಬಂದಿದೆ.

ಉಡುಪಿ: ಮಾರ್ಚ್ 4ರಂದು ಕಂಬಳದ ಶಂಕುಸ್ಥಾಪನೆ

ಉಡುಪಿ: 80 ಬಡಗುಬೆಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಯುವಜನ ಸಬಲೀಕರಣ ಇಲಾಖೆಯ ವತಿಯಿಂದ ನಡೆಸಲಾಗುವ ಉಡುಪಿ ಕಂಬಳದ ಶಂಕುಸ್ಥಾಪನೆಯನ್ನು, ಮಾರ್ಚ್ ನಾಲ್ಕರಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Categories
ಕರಾವಳಿ ದಕ್ಷಿಣ ಕನ್ನಡ ಬೆಳ್ತಂಗಡಿ ಮಂಗಳೂರು

ಜೆಇಇ, ಬಿ ಆರ್ಕ್ ಫಲಿತಾಂಶದಲ್ಲಿ ಎಕ್ಸೆಲ್ ಸಾಧನೆ

ಜೆಇಇ, ಬಿ ಆರ್ಕ್ ಫಲಿತಾಂಶದಲ್ಲಿ ಎಕ್ಸೆಲ್ ಸಾಧನೆ
– ಎಕ್ಸೆಲ್ ಕಾಲೇಜಿನ ಸುಪ್ರೀತ್ ಎಂ ಬಡಿಗೇರ ಜಿಲ್ಲೆಗೆ ಪ್ರಥಮ
– ಎಕ್ಸೆಲ್ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅಭಿನಂದನೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಳ್ತಂಗಡಿ: ರಾಷ್ಟ್ರ ಮಟ್ಟದ ಜೆಇಇ ಮೈನ್ಸ್ ಬಿ.ಆರ್ಕ್ ಫಲಿತಾಂಶ ಪ್ರಕಟವಾಗಿದ್ದು, ಎಕ್ಸೆಲ್ ನ ಸುಪ್ರೀತ್ ಮಂಜುನಾಥ್ ಬಡಿಗೇರ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. 98.5567 ಪರ್ಸೆಂಟೈಲ್ ಪಡೆದಿದ್ದು, ಡ್ರಾಯಿಂಗ್ ನಲ್ಲಿ99.94 ಪಡೆದಿದ್ದಾರೆ. ಸುನೈನಾ 98.1738 ಪರ್ಸಂಟೈಲ್ ಪಡೆದು, ಬಿ ಪ್ಲಾನಿಂಗ್ ನಲ್ಲಿ 92. 4194 ಪರ್ಸೆಂಟೈಲ್ ಪಡೆದಿದ್ದಾರೆ. ಸಾನ್ವಿ ಪಿ ಎನ್ – 95. 8945, ಹೃಷಿಕೇಶ್ – 95.1993, ಎಂ.ಇಶಾನ್ – 94.4292, ಲಹರಿ ಎನ್ 93.1026, ಪ್ರತೀಕ್ಷಾ ಎಂ.ಕೆ 92.3237 ಪರ್ಸೆಂಟೈಲ್ ಪಡೆದಿದ್ದಾರೆ.
ಶೈಕ್ಷಣಿಕ ಸಾಧಕರನ್ನು ಎಕ್ಸೆಲ್ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್,ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

Categories
ಕರಾವಳಿ ದಕ್ಷಿಣ ಕನ್ನಡ ಬೆಳ್ತಂಗಡಿ ಮಂಗಳೂರು ಶಿಕ್ಷಣ

ಮತ್ತೆ ಎಕ್ಸೆಲ್ ಗುರುವಾಯನಕೆರೆ ರಾಜ್ಯದಲ್ಲೇ ಬೆಸ್ಟ್!

ಮತ್ತೆ ಎಕ್ಸೆಲ್ ಗುರುವಾಯನಕೆರೆ ರಾಜ್ಯದಲ್ಲೇ ಬೆಸ್ಟ್!
– ಜೆಇಇ ಮೈನ್ಸ್ ಫಲಿತಾಂಶದಲ್ಲಿ ಮೌರ್ಯ ವೈ.ಡಿ ರಾಜ್ಯಕ್ಕೆ ಅದ್ವಿತೀಯ
– ಕಾಲೇಜಿನ ವಿವಿಧ ವಿದ್ಯಾರ್ಥಿಗಳ ಉತ್ತಮ ಸಾಧನೆ
– ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಂಸ್ಥೆಯಾಗಿ ಎಕ್ಸೆಲ್ ಸಂಸ್ಥೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಳ್ತಂಗಡಿ: ರಾಷ್ಟ್ರ ಮಟ್ಟದ ಅತ್ಯುನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾಗಿರುವ ಐಐಟಿ, ಎನ್ ಐಐಟಿ, ಐಐಐಟಿ ಪ್ರವೇಶಾತಿಗಾಗಿ ನಡೆಯುವ ಜೆಇಇ ಮೈನ್ಸ್ ಫೇಸ್ ಒನ್ ಫಲಿತಾಂಶದಲ್ಲೂ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಪೂರ್ವ ಸಾಧನೆ ಮಾಡಿದ್ದಾರೆ. ರಾಜ್ಯ ಮಟ್ಟದಲ್ಲಿ ಶಿಕ್ಷಣ ಪ್ರೇಮಿಗಳು ಕಣ್ಣರಳಿಸಿ ನೋಡುವಂಥ ಫಲಿತಾಂಶ ಎಕ್ಸೆಲ್ ನದ್ದಾಗಿದೆ. ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿ ಮೌರ್ಯ ವೈ ಡಿ – ಒಟ್ಟು 99.6691 ಪರ್ಸೆಂಟೈಲ್ ಪಡೆದು ಜಿಲ್ಲೆಯಲ್ಲಿಯೇ ಅಗ್ರಸ್ಥಾನಿಯಾಗಿದ್ದಾರೆ. ಹಾಗೆಯೇ ಸ್ವಸ್ತಿಕ್ ಎಂ ಜೈನ್ – 99.4965, (ಕೆಮಿಸ್ಟ್ರಿ :991497, ಫಿಸಿಕ್ಸ್: 99.6651, ಮ್ಯಾಥ್ಸ್ : 98.2471), ಅಕ್ಷಯ್ ಎ – 99.3081, (ಕೆಮಿಸ್ಟ್ರಿ : 97.6736, ಫಿಸಿಕ್ಸ್ : 99.8666, ಮ್ಯಾಥ್ಸ್ : 93.8141) ಪರ್ಸೆಂಟೈಲ್ ಪಡೆದು ಕೊಂಡಿದ್ದಾರೆ.

ಕಾಲೇಜಿನ ಸಾಧಕ ವಿದ್ಯಾರ್ಥಿಗಳು

ಅಭಿನವ ಕೆ ಮಯ್ಯ – 98.6487,
ತೇಜಲ್ ವಿ ವಾಂಟಕರ್ – 98.5584,
ಸಮ್ಯಕ್ ವಿನಯ್ – 98.5468,
ಶಮಿತ್ ಗೌಡ ಎ ಎಸ್ 98.4138,
ಕೆ ಕೆ ಸಾರ್ವಿಕಾ – 98.3106, ಶಶಾಂಕ್ ಗೌಡ ಆರ್ – 98.1685,
ಯಶಸ್ ಗೌಡ ಎನ್ – 98.1685
,ಯಶಸ್ ಜಿ ಎಸ್ – 98.1172 ಪರ್ಸಂಟೈಲ್ ಪಡೆದುಕೊಂಡಿದ್ದಾರೆ.

97 ಶೇಕಡಾಕ್ಕಿಂತ ಅಧಿಕ 24 ವಿದ್ಯಾರ್ಥಿಗಳು,
95 ಶೇಕಡಾಕ್ಕಿಂತ ಅಧಿಕ 37 ವಿದ್ಯಾರ್ಥಿಗಳು ಹಾಗೂ
90 ಶೇಕಡಾಕ್ಕಿಂತ ಅಧಿಕ ಪರ್ಸೆಂಟೈಲ್ ಪಡೆದ ವಿದ್ಯಾರ್ಥಿಗಳ ಸಂಖ್ಯೆ 83.

ರಾಷ್ಟ್ರ ಮಟ್ಟದಲ್ಲಿ ವಿಶೇಷ ತರಬೇತಿ ನೀಡುತ್ತಿರುವ ಕಾಲೇಜು!

ರಾಷ್ಟ್ರಮಟ್ಟದಲ್ಲಿ ರಾಜಸ್ಥಾನದ ಕೋಟಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡುವ ಕೇಂದ್ರವಾಗಿದೆ. ಅದೇ ಮಾದರಿಯಲ್ಲಿ ಗುರುವಾಯನಕೆರೆಯ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ನಿರಂತರವಾಗಿ ತರಗತಿ,ಕೋಚಿಂಗ್ ,ಸ್ಟಡಿ ಅವರ್,ಟೆಸ್ಟ್,ಆನ್ ಲೈನ್ ಟೆಸ್ಟಗಳನ್ನು ನಡೆಸಿದ ಕಾರಣ ಅತ್ಯುತ್ತಮ ಫಲಿತಾಂಶ ಬಂದಿದೆ. ಹತ್ತನೆಯ ತರಗತಿಯಲ್ಲಿ ಸಾಮಾನ್ಯ ಅಂಕ ಪಡೆದುಕೊಂಡ ಕೆಲವು ವಿದ್ಯಾರ್ಥಿಗಳು ಕೂಡಾ ಎಕ್ಸೆಲ್ ನಲ್ಲಿ ಓದಿ, ಜೆಇಇಯಲ್ಲಿ ಅತ್ಯುತ್ತಮ ಅಂಕ ಪಡೆದುಕೊಂಡಿರುವುದು ವಿಶೇಷ.

ಸಾಧಿಸುವ ಛಲ, ನಿರಂತರ ಅಭ್ಯಾಸ, ಪರಿಣಿತ ಉಪನ್ಯಾಸಕರ ಮಾರ್ಗದರ್ಶನ, ನಿಯಮಿತವಾಗಿ ಬರೆಯುವ ಅಣಕು ಪರೀಕ್ಷೆಗಳು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿಜಯಿಗಳನ್ನಾಗಿಸುತ್ತದೆ ಎನ್ನುವ ಬಲ್ಲವರ ಅಭಿಮತಕ್ಕೆ ಎಕ್ಸೆಲ್ ವಿದ್ಯಾರ್ಥಿಗಳು ತಾಜಾ ಉದಾಹರಣೆಯಾಗಿದ್ದಾರೆ.

99 ಶೇಕಡಾಕ್ಕಿಂತ ಅಧಿಕ ಪರ್ಸೆಂಟೈಲ್ ಪಡೆದ ಮೂವರು ವಿದ್ಯಾರ್ಥಿಗಳಿಗೆ ತಲಾ ಒಂದು ಲಕ್ಷದಂತೆ ಹಾಗೂ 90 ಶೇಕಡಾಕ್ಕಿಂತ ಅಧಿಕ ಪರ್ಸೆಂಟೈಲ್ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ವಿತರಿಸಿ, ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ಸಂಸ್ಥೆ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅಭಿನಂದನೆ

ಸಾಮಾನ್ಯ ವ್ಯಕ್ತಿ ಕೂಡಾ ಅಸಾಧಾರಣವಾಗಿ ಬೆಳೆಯುವುದು ಶಿಕ್ಷಣದ ಮೂಲಕ. ವಿದ್ಯೆ ಒಂದಿದ್ದರೆ ಮತ್ತೆಲ್ಲವೂ ಬದುಕಿನಲ್ಲಿ ಲಭಿಸಬಹುದು. ಹಾಗಾಗಿ ವಿದ್ಯೆ ಯಾರೂ ಕದಿಯಲಾಗದ, ಹಂಚಿದಷ್ಟು ಹೆಚ್ಚಾಗುವ, ಯಾವತ್ತಿಗೂ ಕರಗದ ಸಂಪತ್ತು. ಗುಣಮಟ್ಟದ ಶಿಕ್ಷಣವೇ ರಾಷ್ಟ್ರ ನಿರ್ಮಾಣಕ್ಕೆ ಅಡಿಗಲ್ಲು ಎಂದು ಎಕ್ಸೆಲ್ ಭಾವಿಸುತ್ತದೆ. ಇಂಥ ಅಪೂರ್ವ ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳನ್ನು, ಪ್ರಾಂಶುಪಾಲರು – ಪ್ರಾಧ್ಯಾಪಕರು, ನಿಲಯಪಾಲಕರು, ಹಾಗೂ ವಿದ್ಯಾರ್ಥಿಗಳ ಹೆತ್ತವರ ಸಹಕಾರವನ್ನು ಈ ಕ್ಷಣದಲ್ಲಿ ಸ್ಮರಿಸಿಕೊಂಡು,ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

– ಸುಮಂತ್ ಕುಮಾರ್ ಜೈನ್
ಅಧ್ಯಕ್ಷರು
ಆಡಳಿತ ಮಂಡಳಿ
ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ

Categories
ಕರಾವಳಿ ದಕ್ಷಿಣ ಕನ್ನಡ ಪ್ರತಿಭೆಗಳು ಮಂಗಳೂರು

ಜೆ.ಇ.ಇ ಪರೀಕ್ಷೆ ಫಲಿತಾಂಶದಲ್ಲಿ ವೈಬ್ರೆಂಟ್ ಕಾಲೇಜು ಸಾಧನೆ!

ಜೆ.ಇ.ಇ ಪರೀಕ್ಷೆ ಫಲಿತಾಂಶದಲ್ಲಿ ವೈಬ್ರೆಂಟ್ ಕಾಲೇಜು ಸಾಧನೆ!
– ಕರಾವಳಿಯಲ್ಲಿ ಅತ್ಯುತ್ತಮ ಪರ್ಸೆಂಟೈಲ್ ಪಡೆದ ಕಾಲೇಜು
– ಆದಿತ್ಯ ಜಿಲ್ಲೆಗೆ ಅತ್ಯುತ್ತಮ ಪರ್ಸೆಂಟೈಲ್: ಅಭಿನಂದನೆಗಳು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮೂಡುಬಿದಿರೆ: ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮೂಡು ಬಿದಿರೆಯ ವೈಬ್ರೆಂಟ್ ಕಾಲೇಜು ಜೆ.ಇ.ಇ ಪರೀಕ್ಷೆ ಫಲಿತಾಂಶದಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ.

ಆದಿತ್ಯ ಜಿಲ್ಲೆಗೆ ಅತ್ಯುತ್ತಮ ಪರ್ಸೆಂಟೈಲ್: ರಾಷ್ಟ್ರಮಟ್ಟದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ಆದಿತ್ಯ ಅನಿಲ್ ಕೆಂಚಣ್ಣನವರ್ 99.8044641 (ಭೌತಶಾಸ್ತ್ರ 99.8091013, ರಸಾಯನಶಾಸ್ತ್ರ 98.7046712, ಗಣಿತಶಾಸ್ತ್ರ 99.8438804) ಪರ್ಸೆಂಟೈಲ್ ಪಡೆಯುವ ಮೂಲಕ ಮೂಡುಬಿದಿರೆ ತಾಲೂಕಿಗೆ ಪ್ರಥಮ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಅತ್ಯುತ್ತಮ ಪರ್ಸೆಂಟೈಲ್ ಪಡೆದ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುತ್ತಾರೆ.

ಹತ್ತನೇ ತರಗತಿಯಲ್ಲಿ ಸಾಧಾರಣ ಅಂಕ ಪಡೆದು ಸಂಸ್ಥೆಯಲ್ಲಿ ದಾಖಲಾಗುವ ವಿದ್ಯಾರ್ಥಿಗಳು ಇಲ್ಲಿ ನೀಡುತ್ತಿರುವ ಅತ್ಯುನ್ನತ ಗುಣಮಟ್ಟದ ಪೂರಕ ತರಬೇತಿಯನ್ನು ಪಡೆದು ರಾಷ್ಟ್ರಮಟ್ಟದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿರುವುದು ಸಂಸ್ಥೆಯಿಂದ ನೀಡುತ್ತಿರುವ ತರಬೇತಿಯ ಗುಣಮಟ್ಟ ಮತ್ತು ಇಲ್ಲಿನ ಉಪನ್ಯಾಸಕರ ನಿರಂತರ ಪರಿಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಸಾಧಕ ವಿದ್ಯಾರ್ಥಿಗಳು!

ಧನುಷ್ ಗುತ್ತಿ 98.7416995 ಪರ್ಸೆಂಟೈಲ್, ಮನ್ವಿತ್ ಎಸ್. ಪದ್ಮಶಾಲಿ 98.648776 ಪರ್ಸೆಂಟೈಲ್, ಸಮ್ಮಿತ್ ಎಚ್.ಎಸ್. 98.6168114 ಪರ್ಸೆಂಟೈಲ್, ಮಹೇಂದ್ರ ಎಂ. 98.3153881 ಪರ್ಸೆಂಟೈಲ್, ಅಕ್ಷಯ್ ಡಿ. 98.1064181 ಪರ್ಸೆಂಟೈಲ್, ರಿತಿಕ್ ಶೆಟ್ಟಿ 97.7817193 ಪರ್ಸೆಂಟೈಲ್, ಶಮಿತ್ ಪಿ. ಗೌಡ 97.5986939 ಪರ್ಸೆಂಟೈಲ್, ಆದಿತ್ಯ ಸಿ. ಪಟೇಲ್ 97.5840109 ಪರ್ಸೆಂಟೈಲ್, ಕಿಶನ್ ಶಿವಮೂರ್ತಯ್ಯ 97.4283709 ಪರ್ಸೆಂಟೈಲ್, ನಯನ್ ಕಾಮತ್ 97.3077071 ಪರ್ಸೆಂಟೈಲ್, ಬಿ. ವಿನಯ್ 97.0650703 ಪರ್ಸೆಂಟೈಲ್, ಶ್ರೇಯಸ್ ಯು ಶಾನುಭೋಗ್ 96.8829127 ಪರ್ಸೆಂಟೈಲ್, ರವಿತೇಜ್ ಎಸ್. 96.6113405 ಪರ್ಸೆಂಟೈಲ್, ಝೆಂಕರ್ ಎಂ.96.5628501 ಪರ್ಸೆಂಟೈಲ್, ಹರ್ಷಿತಾ ಸಿ. 96.4362546 ಪರ್ಸೆಂಟೈಲ್, ಪ್ರೀತಮ್ ಎಚ್. ಎಮ್. 95.8776445 ಪರ್ಸೆಂಟೈಲ್, ಗೌರವ್ ವೈ 95.0938413 ಪರ್ಸೆಂಟೈಲ್ ಪಡೆದು ಅಭೂತಪೂರ್ವ ಸಾಧನೆಯನ್ನು ಮಾಡಿರುತ್ತಾರೆ.

ಕಾಲೇಜಿನಿಂದ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ 6 ವಿದ್ಯಾರ್ಥಿಗಳು 98ಕ್ಕಿಂತ ಅಧಿಕ, 18 ವಿದ್ಯಾರ್ಥಿಗಳು 95ಕ್ಕಿಂತ ಅಧಿಕ , 32 ವಿದ್ಯಾರ್ಥಿಗಳು 93ಕ್ಕಿಂತ ಅಧಿಕ ಪರ್ಸೆಂಟೈಲ್ ಪಡೆದು ಸಾಮಾನ್ಯ ವರ್ಗದಲ್ಲಿ ಜೆಇಇ ಅಡ್ವಾನ್ಸ್ ಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಅಲ್ಲದೇ 46 ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಪರ್ಸೆಂಟೈಲ್ ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Categories
ಕರಾವಳಿ ದಕ್ಷಿಣ ಕನ್ನಡ ಬೆಳ್ತಂಗಡಿ

ಕಾಲೇಜು ಬದಲಾವಣೆಗೆ ಅಪಹರಣ ಎಂಬ ಹೈಡ್ರಾಮ!

ಕಾಲೇಜು ಬದಲಾವಣೆಗೆ ಅಪಹರಣ ಎಂಬ ಹೈಡ್ರಾಮ!
– ಮಂಗಳೂರು ಕಾಲೇಜು ಸೇರಲು ಕಿಡ್ನಾಪ್ ಕಥೆ ಕಟ್ಟಿದ ಯುವತಿ
– ಕೈ ಕೊಯ್ದುಕೊಂಡು ಅಪಹರಣ ಎಂದು ಸುಳ್ಳು ಹೇಳಿದ್ದಳು!
– ಪೊಲೀಸ್ ತನಿಖೆಯಲ್ಲಿ ಬಹಿರಂಗ: ಏನಿದು ಘಟನೆ..?

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಳ್ತಂಗಡಿ: ಕಾಲೇಜಿಗೆ ಸ್ಕೂಟರಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ, ಕಾರಿನಲ್ಲಿ ಆಗಮಿಸಿದ ಮೂವರು ಅಪರಿಚಿತರು ಆ ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದಾರೆ ಎಂಬ ಘಟನೆ ಸುಳ್ಳು ಎಂಬ ಬಗ್ಗೆ ಮಾಹಿತಿ ಲಭ್ಯ ಆಗುತ್ತಿದೆ.
ಸೋಮವಾರದಂದು ಸುದೇಮುಗೇರು ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯು ಬೆಳಿಗ್ಗೆ 8.30ರ ಸುಮಾರಿಗೆ ಸಂತೆಕಟ್ಟೆ ಬಸ್ ನಿಲ್ದಾಣಕ್ಕೆ ಸ್ಕೂಟಿಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಈ ಕಾರಿನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಸ್ಕೂಟಿಯನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಬಾಲಕಿಯನ್ನು ಬಲವಂತವಾಗಿ ಎಳೆದು ತಂದು, ಕಾರಿನೊಳಗೆ ತೂರಿಸಲು ಯತ್ನಿಸಿದ್ದಾರೆ. ಬಾಲಕಿಯು ಜೋರಾಗಿ ಕಿರುಚಾಡಿ ಪ್ರತಿರೋಧ ವ್ಯಕ್ತಪಡಿಸಿದ್ದಾಳೆ.‌ ಅದೇ ಸಂದರ್ಭದಲ್ಲಿ ಹಿಂಭಾಗದಲ್ಲಿ ಸ್ಕೂಟರ್ ಬರುತ್ತಿರುವುದನ್ನು ಗಮನಿಸಿದ ವ್ಯಕ್ತಿಗಳು ಗಾಬರಿಗೊಂಡಿದ್ದಾರೆ.‌ ತಕ್ಷಣ ದುಷ್ಕರ್ಮಿಗಳು ಬಾಲಕಿಯ ಕೈ ಮತ್ತು ಬೆರಳುಗಳಿಗೆ ಚಾಕುವಿನಿಂದ ಇರಿದು, ಆಕೆಯನ್ನು ಗಾಯಗೊಳಿಸಿ, ಅವಳ ಬಳಿಯಿದ್ದ ಕಾಲೇಜ್ ಬ್ಯಾಗನ್ನು ಕಿತ್ತುಕೊಂಡು ಕಾರನ್ನು ಹತ್ತಿ ಪರಾರಿಯಾಗಿದ್ದಾರೆ. ಸ್ಥಳೀಯರು ತಕ್ಷಣ ಗಾಯಗೊಂಡಿದ್ದ ಬಾಲಕಿಯನ್ನು ಬೆಳ್ತಂಗಡಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಿದರು. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಪೊಲೀಸರು ಬಾಲಕಿಯನ್ನು ವಿಚಾರಣೆ ನಡೆಸಿದ್ದು, ಇದೀಗ ಪ್ರಕರಣ ರೋಚಕ ಟ್ವಿಸ್ಟ್ ತೆಗೆದುಕೊಂಡಿದೆ.

ಸತ್ಯ ಬಯಲು ಮಾಡಿದ ‘ಫಾರೆನ್ಸಿಕ್’ ವಿಜ್ಞಾನ

​ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಸಂಚಲನ ಮೂಡಿಸಿದ್ದ ಕಾಲೇಜು ವಿದ್ಯಾರ್ಥಿನಿಯ ಅಪಹರಣ ಯತ್ನ ಪ್ರಕರಣವು ಪೊಲೀಸರ ಚಾಣಾಕ್ಷ ತನಿಖೆ ಮತ್ತು ವೈಜ್ಞಾನಿಕ ಸಾಕ್ಷ್ಯಗಳ ಮುಂದೆ ಅಂತಿಮವಾಗಿ ‘ಠುಸ್’ ಆಗಿದೆ.
ಕಾಶಿಬೆಟ್ಟು ಸರ್ಕಾರಿ ಕಾಲೇಜಿಗೆ ತೆರಳುತ್ತಿದ್ದ ಯುವತಿಯನ್ನು ಮುಸುಕುಧಾರಿಗಳು ಕಾರಿನಲ್ಲಿ ಬಂದು ಅಪಹರಿಸಲು ಯತ್ನಿಸಿದರು ಎಂಬ ಸುದ್ದಿ ಇಡೀ ಜಿಲ್ಲೆಯನ್ನು ಆತಂಕಕ್ಕೆ ತಳ್ಳಿತ್ತು. ಆದರೆ, ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳ ಶೋಧನೆ ಬಳಿಕ ಮತ್ತು ವಿದ್ಯಾರ್ಥಿನಿಯ ಗೊಂದಲಮಯ ಹೇಳಿಕೆಗಳು ಪೊಲೀಸರಲ್ಲಿ ಮೊದಲೇ ಸಂಶಯ ಮೂಡಿಸಿದ್ದವು. ಅಂತಿಮವಾಗಿ ಮಂಗಳೂರಿನ ಕಾಲೇಜು ಸೇರಬೇಕೆಂಬ ತನ್ನ ಹಠಕ್ಕಾಗಿ ಆಕೆಯೇ ಸೃಷ್ಟಿಸಿದ ನಾಟಕವಿದು ಎಂಬುದು ಸಾಬೀತಾಗಿದೆ.​ಈ ಪ್ರಕರಣದಲ್ಲಿ ಫಾರೆನ್ಸಿಕ್ ತಜ್ಞರ ಪ್ರಕಾರ, ವಿದ್ಯಾರ್ಥಿನಿಯ ಕೈ ಮೇಲಿದ್ದ ಗಾಯಗಳು ‘ಸ್ವಯಂ ಪ್ರೇರಿತ ಗಾಯಗಳು’ (Self-inflicted injuries) ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ.ಗಾಯದ ಆಳ ಮತ್ತು ಹೋಗಿರುವ ದಿಕ್ಕನ್ನು (Tailing of the wound) ಗಮನಿಸಿದಾಗ, ಅದು ಹೊರಗಿನ ವ್ಯಕ್ತಿ ಮಾಡಿದ ದಾಳಿಯಲ್ಲ, ಬದಲಾಗಿ ಆಕೆಯ ದೇಹದ ದಿಕ್ಕಿಗೇ ಗೀಚಿಕೊಂಡಿರುವುದು ಸ್ಪಷ್ಟವಾಗಿದೆ. ಅಲ್ಲದೆ, ಗಾಯಗಳು ಒಂದಕ್ಕೊಂದು ಸಮಾನಾಂತರವಾಗಿದ್ದು (Parallel), ಇವು ಸಾಮಾನ್ಯವಾಗಿ ಒಬ್ಬ ವ್ಯಕ್ತಿ ತಾನೇ ಇಚ್ಛಾಶಕ್ತಿಯಿಂದ ಮಾಡಿಕೊಳ್ಳುವ ಗಾಯಗಳ ಲಕ್ಷಣಗಳಾಗಿವೆ ಎಂದು ವಿಧಿ ವಿಜ್ಞಾನ ತಜ್ಞ ಮಹಾಬಲ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.
​ಮತ್ತೊಂದು ಪ್ರಮುಖ ತಾಂತ್ರಿಕ ಅಂಶವೆಂದರೆ ಬಟ್ಟೆ ಮತ್ತು ಗಾಯಗಳ ನಡುವಿನ ವ್ಯತ್ಯಾಸ. ಫಾರೆನ್ಸಿಕ್ ವರದಿಯಂತೆ, ವಿದ್ಯಾರ್ಥಿನಿಯ ಶರ್ಟ್ ಮೇಲೆ ಕೇವಲ 3 ಕಟ್‌ಗಳಿದ್ದವು, ಆದರೆ ಆಕೆಯ ಕೈ ಮೇಲೆ 5 ಗಾಯಗಳಿದ್ದವು. ಅಪಹರಣಕಾರರು ಹಲ್ಲೆ ನಡೆಸಿದ್ದಲ್ಲಿ ಬಟ್ಟೆ ಮತ್ತು ಗಾಯಗಳ ನಡುವೆ ಇಂತಹ ಅಸಮತೋಲನ ಇರಲು ಸಾಧ್ಯವಿಲ್ಲ. ಇದು ವಿದ್ಯಾರ್ಥಿನಿಯೇ ಬ್ಲೇಡ್ ಬಳಸಿ ಗಾಯ ಮಾಡಿಕೊಂಡ ನಂತರ ಕತೆ ಸೃಷ್ಟಿಸಿದ್ದಾಳೆ ಎಂಬುದಕ್ಕೆ ಭದ್ರ ಸಾಕ್ಷ್ಯ ಒದಗಿಸಿದೆ. ದಕ್ಷಿಣ ಕನ್ನಡ ಮತ್ತು ಮಂಗಳೂರು ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ‘ನಕಲಿ ಹಲ್ಲೆ’ ಪ್ರಕರಣಗಳು ಮರುಕಳಿಸುತ್ತಿರುವುದು ಆತಂಕಕಾರಿ ಬೆಳವಣಿಗೆ.

ಮಂಗಳೂರಿನ ಕಾಲೇಜು ಸೇರಲು ಪ್ಲಾನ್!

​ಕೇವಲ ಕಾಲೇಜು ಬದಲಾಯಿಸುವ ಹಠಕ್ಕಾಗಿ ಇಷ್ಟೊಂದು ವ್ಯವಸ್ಥಿತವಾಗಿ ಸುಳ್ಳಿನ ಜಾಲ ಹೆಣೆದದ್ದು ಆಘಾತಕಾರಿ. ತನ್ನ ಪುಸ್ತಕಗಳನ್ನು ತಾನೇ ಸುಟ್ಟು ಹಾಕಿ, ಬ್ಯಾಗ್ ಕಳುವಾಗಿದೆ ಎಂದು ಬಿಂಬಿಸಿದ್ದು ಮತ್ತು ಕೈ ಕೊಯ್ದುಕೊಂಡು ರಕ್ತ ಸುರಿಸುತ್ತಾ ಆಸ್ಪತ್ರೆ ಸೇರಿದ್ದು ದೊಡ್ಡ ಮಟ್ಟದ ಕಾನೂನು ಸುವ್ಯವಸ್ಥೆಯ ತಲ್ಲಣಕ್ಕೆ ಕಾರಣವಾಗಿತ್ತು. ಕ್ಷೇತ್ರದ ಶಾಸಕರು ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಧಾವಿಸಿದ್ದರು. ಆದರೆ, ಒಬ್ಬ ಅಪ್ರಾಪ್ತ ವಿದ್ಯಾರ್ಥಿನಿ ಇಷ್ಟೊಂದು ರೋಚಕವಾಗಿ ಕತೆ ಕಟ್ಟಿದ್ದು ಭಾವನಾತ್ಮಕವಾಗಿ ಹಾದಿ ತಪ್ಪಿಸುವ ಪ್ರಯತ್ನ ನಡೆಸಿದ್ದು, ಇಂತಹ ಘಟನೆಗಳು ಸಾರ್ವಜನಿಕರಲ್ಲಿ ಅನಗತ್ಯ ಭಯ ಹುಟ್ಟಿಸುವುದರ ಜೊತೆಗೆ, ನಿಜವಾದ ಸಂಕಷ್ಟದಲ್ಲಿರುವವರಿಗೆ ಸಿಗಬೇಕಾದ ಪೊಲೀಸ್ ನೆರವು ಮತ್ತು ತುರ್ತು ಸೇವೆಯ ಸಮಯವನ್ನು ವ್ಯರ್ಥ ಮಾಡುತ್ತವೆ ಎಂಬ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

Categories
ಉಡುಪಿ ಕರಾವಳಿ ದಕ್ಷಿಣ ಕನ್ನಡ ಪುತ್ತೂರು ಮಂಗಳೂರು ರಾಜ್ಯ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

• ಉಡುಪಿ: ನಡುರಸ್ತೆಯಲ್ಲಿ ಪಟಾಕಿ ಸಿಡಿಸಿ ಹುಚ್ಚಾಟ

• ಮಂಗಳೂರು: ಎರಡು ತಿಂಗಳಿನಿಂದ ನಾಪತ್ತೆಯಾಗಿರುವ ವ್ಯಕ್ತಿ

• ಪುತ್ತೂರು: ಮಾನಹಾನಿ ಮತ್ತು ಬೆದರಿಕೆ; ಪ್ರತಿಭಾ ಕುಳಾಯಿಗೆ ನೋಟಿಸ್

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

• ಉಡುಪಿ: ನಡುರಸ್ತೆಯಲ್ಲಿ ಪಟಾಕಿ ಸಿಡಿಸಿ ಹುಚ್ಚಾಟ

ಉಡುಪಿ: ಕೇರಳದಿಂದ ಪ್ರವಾಸಕ್ಕೆಂದು ಎರಡು ಬಸ್ ಗಳಲ್ಲಿ ಬಂದಿದ್ದ ವಿದ್ಯಾರ್ಥಿಗಳು ಅಸಭ್ಯವಾಗಿ ವರ್ತಿಸಿದ ಘಟನೆ, ಹೆಜಮಾಡಿ ಟೋಲ್ ಗೇಟ್ ಬಳಿ ನಡೆದಿದೆ. ನಡುರಸ್ತೆಯಲ್ಲಿ ಕುಣಿದು, ಪಟಾಕಿ ಸಿಡಿಸಿ ಬೇಕಾಬಿಟ್ಟಿಯಾಗಿ ತಮ್ಮ ಮನಸ್ಸಿಗೆ ಬಂದಂತೆ ವರ್ತಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

• ಮಂಗಳೂರು: ಎರಡು ತಿಂಗಳಿನಿಂದ ನಾಪತ್ತೆಯಾಗಿರುವ ವ್ಯಕ್ತಿ

ಮಂಗಳೂರು: ಸುರೇಶ್ ಎನ್ನುವ ವ್ಯಕ್ತಿಯು ಕಳೆದೆರಡು ತಿಂಗಳ ಹಿಂದೆ ಮನೆಯಿಂದ ತೆರಳಿದ್ದು, ಮರಳಿ ಬಾರದೆ ನಾಪತ್ತೆಯಾಗಿರುವ ಘಟನೆ, ಕೋಡಿಕಲ್ ನಲ್ಲಿ ನಡೆದಿದೆ. ನವೆಂಬರ್ 25ರಂದು ಬೆಳಿಗ್ಗೆ 9.30 ರ ಸುಮಾರಿಗೆ ಮನೆಯಿಂದ ಹೊರ ಹೋಗಿದ್ದ ಸುರೇಶ್, ನವೆಂಬರ್ 29ರಂದು ಮಹಾರಾಷ್ಟ್ರದ ಭಿವಂಡಿ ಎನ್ನುವ ಸ್ಥಳದಿಂದ ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿದ್ದರು ಎನ್ನಲಾಗಿದೆ. ಇನ್ನೆರಡು ದಿನಗಳಲ್ಲಿ ಮನೆಗೆ ಹಿಂತಿರುಗುವುದಾಗಿ ತಿಳಿಸಿದ ಸುರೇಶ್ ಇದುವರೆಗೂ ಬಂದಿಲ್ಲ ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸುರೇಶ್ ಅವರ ಮನೆಯವರು ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

• ಪುತ್ತೂರು: ಮಾನಹಾನಿ ಮತ್ತು ಬೆದರಿಕೆ; ಪ್ರತಿಭಾ ಕುಳಾಯಿಗೆ ನೋಟಿಸ್

ಪುತ್ತೂರು: ಜಗನ್ನಿವಾಸ್ ರಾವ್ ಪ್ರತಿಭಾ ಕುಳಾಯಿ ಅವರ ವಿರುದ್ಧ ನೀಡಿದ ದೂರಿಗೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಯಲ್ಲಿರುವ ಸಂದರ್ಭದಲ್ಲಿ, ಪ್ರತಿಭಾ ಕುಳಾಯಿ ಅವರು ತನ್ನ ಮಾನಹಾನಿ ಮಾಡಿರುವುದಷ್ಟೇ ಅಲ್ಲದೆ, ಬೆದರಿಕೆ ಕೂಡ ಹಾಕಿದ್ದಾರೆ ಎಂದು ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಭಾ ಕುಳಾಯಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕಳುಹಿಸಲಾಗಿದೆ. ಜಗನ್ನಿವಾಸ್ ರಾವ್ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರಿಗೆ ದೂರನ್ನು ನೀಡಿದ್ದು, ದೂರಿನ ಆಧಾರದ ಮೇಲೆ ಅರ್ಜಿಯನ್ನು ವಿಚಾರಣೆಗಾಗಿ ಪೊಲೀಸ್ ಅಧೀಕ್ಷಕರು ಪುತ್ತೂರು ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಭಾ ಕುಳಾಯಿ ಅವರಿಗೆ ಪೊಲೀಸ್ ಠಾಣೆಗೆ ಹಾಜರಾಗಿ ತನಿಖೆಗೆ ಸಹಕರಿಸುವಂತೆ ನೋಟಿಸ್ ಅನ್ನು ನೀಡಲಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಕೇವಲ ಪ್ರತಿಭಾ ಕುಳಾಯಿ ಅವರಿಗೆ ಅಷ್ಟೇ ಅಲ್ಲದೆ ಜಗನ್ನಿವಾಸ್ ಅವರಿಗೂ ತನಿಖೆಗೆ ಸಹಕಾರ ನೀಡುವಂತೆ ನೋಟಿಸ್ ಅನ್ನು ಕಳುಹಿಸಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.

Categories
ಕರಾವಳಿ ಕಾರ್ಕಳ ಕುಂದಾಪುರ ದಕ್ಷಿಣ ಕನ್ನಡ ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

* ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣ; ನಾಲ್ವರಿಗೆ ಮರು ನೋಟೀಸ್

* ಕಾಪು: ಅಕ್ರಮ ಪಟಾಕಿ ದಾಸ್ತಾನು; ಪೊಲೀಸರಿಂದ ದಾಳಿ

* ಕಾರ್ಕಳ: ಕುಡಿತದ ಚಟಕ್ಕೆ ಬಿದ್ದು, ವ್ಯಕ್ತಿ ಆತ್ಮಹತ್ಯೆ

* ಭಟ್ಕಳ: ಟೆಂಡರ್ ಹೆಸರಿನಲ್ಲಿ ಹಣ ಪಡೆದು ವಂಚನೆ

•ಬಂಟ್ವಾ‌ಳ: ಆ್ಯಂಬುಲೆನ್ಸ್ ಸಂಚಾರಕ್ಕೆ ಅಡ್ಡಿ; ವ್ಯಕ್ತಿಯ ಬಂಧನ

* ಮೂಡಬಿದರೆ: ಬಾವಿಗೆ ಬಿದ್ದು ಯುವಕ ಸಾವು

•ಪುತ್ತೂರು: ಕೋಳಿ ಅಂಕದ ಮೇಲೆ ದಾಳಿ

* ಕಡಬ: ಘಟ್ಟದ ಕೆಳಗೆ ಮುಗುಚಿ ಬಿದ್ದ ದಿಬ್ಬಣದ ವಾಹನ

* ಮಂಗಳೂರು: ಕಾರ್ಖಾನೆಯ ತ್ಯಾಜ್ಯದಿಂದ ಎದುರಾಗಿದೆ ಸಮಸ್ಯೆ

* ಬೈಂದೂರು: ಮಂಕಿ ಪಾರ್ಕ್ ಗೆ ಸಾರ್ವಜನಿಕರಿಂದ ಬೇಡಿಕೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

* ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣ; ನಾಲ್ವರಿಗೆ ಮರು ನೋಟಸ್

ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ ಕೆಲವು ದಿನಗಳ ಹಿಂದೆ, ಅಂದರೆ ಅಕ್ಟೋಬರ್ 27ರಂದು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ತಂಡವು ನಾಲ್ವರಿಗೆ ನೋಟಿಸ್ ನೀಡಿದ್ದು, ನಾಲ್ವರ ಪರವಿರುವ ನ್ಯಾಯವಾದಿಗಳು ಎಸ್ಐಟಿ ಕಛೇರಿಗೆ ಆಗಮಿಸಿ, ಅಧಿಕಾರಿಗಳ ಬಳಿ ವಿಚಾರಣೆಗೆ ಸಮಯಾವಕಾಶವನ್ನು ಕೇಳಲಾಗಿದ್ದರಿಂದ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅನುಮತಿ ನೀಡಿದ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿಗೆ ಏಳು ದಿನಗಳು ಮತ್ತು ಉಳಿದ ಮೂವರಿಗೆ ಮೂರು ದಿನಗಳ ಕಾಲಾವಕಾಶ ನೀಡಿದ್ದರು. ಇದೀಗ ಸಮಯ ಮುಗಿದಿದ್ದು, ವಿಚಾರಣೆಗೆ ಹಾಜರಾಗುವಂತೆ ಮರು ನೋಟಿಸ್ ನೀಡಲಾಗಿದೆ. ಮರು ನೋಟಿಸ್ ನಲ್ಲಿ ಅಕ್ಟೋಬರ್ 31ರಂದು ವಿಠಲ ಶೆಟ್ಟಿ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಮತ್ತು ಜಯಂತ್ ಟಿ ನವೆಂಬರ್ ಮೂರರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಉಜಿರೆಯ ತಿಮರೋಡಿ ಮನೆ ಮತ್ತು ವಿಠಲ ಗೌಡ ಮನೆಯ ಬಾಗಿಲಿಗೆ ಹಾಗೂ ಬೆಂಗಳೂರಿನಲ್ಲಿ ಜಯಂತ್ ಟಿ ಮತ್ತು ಗಿರೀಶ್ ಮಟ್ಟಣ್ಣನವರ್ ಮನೆಗಳ ಬಾಗಿಲಿಗೆ ನೋಟಿಸ್ ಅಂಟಿಸಲಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಆದರೆ ಸುಜಾತ ಭಟ್ ಮಾತ್ರ ಅಕ್ಟೋಬರ್ 27ರಂದೇ ಎಸ್ಐಟಿ ಕಛೇರಿಗೆ ಆಗಮಿಸಿ, ವಿಚಾರಣೆಯನ್ನು ಎದುರಿಸಿ ತೆರಳಿದ್ದರು ಎನ್ನಲಾಗಿದೆ.

* ಕಾಪು: ಅಕ್ರಮ ಪಟಾಕಿ ದಾಸ್ತಾನು; ಪೊಲೀಸರಿಂದ ದಾಳಿ

ಕಾಪು: ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪಟಾಕಿಗಳನ್ನು ಅಕ್ರಮವಾಗಿ ದಾಸ್ತಾನು ಇರಿಸಿದ ಹಿನ್ನೆಲೆಯಲ್ಲಿ, ಪೊಲೀಸರು ದಾಳಿ ನಡೆಸಿದ ಘಟನೆ, ಕಳೆದೆರಡು ದಿನಗಳ ಹಿಂದೆ ಮೂಡಬೆಟ್ಟು ಗ್ರಾಮದಲ್ಲಿ ನಡೆದಿದೆ. ಮೂಡಬೆಟ್ಟು ದೇವಸ್ಥಾನದ ಕಡೆಗೆ ತೆರಳುವ ರಸ್ತೆಯಲ್ಲಿರುವ ಕ್ಲೇರಾ ಮೆಂಡೋನ್ಸ್ ಎನ್ನುವವರ ಮನೆಯಲ್ಲಿ ಪಟಾಕಿಗಳನ್ನು ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದು, ಆರೋಪಿಯಾದ ಗೌತಮ್ ಪ್ರಭುವನ್ನು ಸೆರೆಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಒಟ್ಟು ಎರಡು ಲಕ್ಷ ರೂಪಾಯಿಯಷ್ಟು ಬೆಲೆ ಬಾಳುವ, ವಿವಿಧ ಕಂಪನಿಗಳಿಗೆ ಸೇರಿದ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಕಾರ್ಕಳ: ಕುಡಿತದ ಚಟಕ್ಕೆ ಬಿದ್ದು, ವ್ಯಕ್ತಿ ಆತ್ಮಹತ್ಯೆ

ಕಾರ್ಕಳ: ಇರ್ವತ್ತೂರು ಗ್ರಾಮದ ಮಹೇಶ್ ಶೆಟ್ಟಿ ಎನ್ನುವವರಿಗೆ ಕುಡಿತದ ಚಟ ವಿಪರೀತವಾಗಿದ್ದು, ಇದರಿಂದ ಬೇಸತ್ತ ಪತ್ನಿ ಮನೆಯನ್ನು ಬಿಟ್ಟು ಹೋಗಿದ್ದರು. ಕುಡಿತದ ಚಟಕ್ಕೆ ಬಲಿಯಾಗಿ ಮತ್ತು ಪತ್ನಿ ತನ್ನನ್ನು ಬಿಟ್ಟು ಹೋಗಿರುವ ಕಾರಣ, ಮನನೊಂದು ಮಹೇಶ್ ಶೆಟ್ಟಿ ಕಳೆದೆರಡು ದಿನಗಳ ಹಿಂದೆ, ರಾತ್ರಿಯ ಸಮಯದಲ್ಲಿ ಮನೆಯ ಸಮೀಪದಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವಿಗೆ ಶರಣಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಭಟ್ಕಳ: ಟೆಂಡರ್ ಹೆಸರಿನಲ್ಲಿ ಹಣ ಪಡೆದು ವಂಚನೆ

ಭಟ್ಕಳ: ವ್ಯಕ್ತಿಯೊಬ್ಬರು ತನಗೆ ಟೆಂಡರ್ ಲಭಿಸಿದ್ದು, ಅದರಲ್ಲಿ ಬರುವ ಲಾಭಾಂಶದಲ್ಲಿ ಸ್ವಲ್ಪ ಪ್ರಮಾಣ ನಿಮಗೆ ನೀಡುತ್ತೇನೆ ಎಂದು ನಂಬಿಸಿ, ಮತ್ತೊಬ್ಬ ವ್ಯಕ್ತಿಯಿಂದ ಹಣ ಪಡೆದು ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಆರೋಪಿಯಾದ ಆಸೀಫ್ ಇಕ್ಬಾಲ್, ಕಳೆದ ಎರಡು ವರ್ಷಗಳ ಹಿಂದೆ, ಮೊಹಮ್ಮದ್ ಶಭಿ ಎನ್ನುವವರಿಗೆ ಮೆಟ್ರೋ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಕಂಪನಿಯ ನಕಲಿ ದಾಖಲೆಗಳನ್ನು ತೋರಿಸಿ, ಇದರ ಪ್ರಾಜೆಕ್ಟ್ 2025ರಲ್ಲಿ ಪ್ರಾರಂಭವಾಗಲಿದ್ದು, 25 ಲಕ್ಷದಷ್ಟು ಹಣವನ್ನು ಹೂಡಿಕೆ ಮಾಡಿದರೆ, ಅದರ ಮೂರು ಪಟ್ಟು ಹಣ ಮರಳಿ ಲಭಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನು ನಂಬಿದ ಮೊಹಮ್ಮದ್ ಶಭಿ ಅವರು ಮೊದಲಿಗೆ 5 ಲಕ್ಷ ರೂಪಾಯಿ ನೀಡಿ, 2023ರ ಜೂನ್ ತಿಂಗಳಿನಲ್ಲಿ 13 ಲಕ್ಷ, ನಂತರ ಒಂದು ಲಕ್ಷ, ಎರಡು ಲಕ್ಷ ಹೀಗೆ ಹಂತ ಹಂತವಾಗಿ ಸುಮಾರು 21 ಲಕ್ಷದಷ್ಟು ಹಣವನ್ನು ನೀಡಿದ್ದಾರೆ. 2025 ಬಂದರೂ, ಪ್ರಾಜೆಕ್ಟ್ ಕುರಿತು ಯಾವುದೇ ಮಾಹಿತಿ ಲಭಿಸದೆ ಕೇಳಿದಾಗ ಆರೋಪಿ ಪ್ರತಿಕ್ರಿಯಿಸಲಿಲ್ಲ. ಕೊಟ್ಟ ಹಣವನ್ನಾದರೂ ಮರಳಿ ನೀಡು ಎಂದರೂ, ಹಿಂತಿರುಗಿಸದೆ ವಂಚಿಸಿದ್ದಾರೆ ಎಂದು ಮೊಹಮ್ಮದ್ ಶಭಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಮೊಹಮ್ಮದ್ ಶಭಿ ಅವರ ದೂರಿನ ಆಧಾರದ ಮೇಲೆ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

* ಬಂಟ್ವಾಳ: ಆ್ಯಂಬುಲೆನ್ಸ್ ಸಂಚಾರಕ್ಕೆ ಅಡ್ಡಿ ; ವ್ಯಕ್ತಿಯ ಬಂಧನ

ಬಂಟ್ವಾಳ: ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆ್ಯಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ, ಸ್ಕೂಟಿ ಸವಾರನೊಬ್ಬ ಸಂಚಾರಕ್ಕೆ ಅಡ್ಡಿ ಪಡಿಸಿದ ಘಟನೆ ನಡೆದಿದೆ. ಮಹಿಳೆಯನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಮಂಗಳೂರಿನ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಕರೆದೊಯ್ಯಲಾಗುತ್ತಿತ್ತು. ಆಗ ಬಿ.ಸಿ. ರಸ್ತೆಯ ಎಸ್ ಜಿ ವೃತ್ತದಿಂದ ಆ್ಯಂಬುಲೆನ್ಸ್ ಮುಂಭಾಗದಲ್ಲಿ, ಸ್ಕೂಟಿಯಲ್ಲಿ ಹೋಗುತ್ತಿದ್ದ ಮೊಹಮ್ಮದ್ ಮನ್ಸೂರ್ ಎನ್ನುವ ವ್ಯಕ್ತಿಯು, ಆ್ಯಂಬುಲೆನ್ಸ್ ನ ಶಬ್ದ ಕೇಳಿ ಬಂದರೂ, ದಾರಿಯನ್ನು ಬಿಟ್ಟುಕೊಡದೆ ಸಂಚಾರಕ್ಕೆ ಅಡ್ಡಿಪಡಿಸಿದ್ದಾನೆ. ವಿಚಾರ ತಿಳಿಯುತ್ತಿದ್ದಂತೆ ಬಂಟ್ವಾಳದ ಪೊಲೀಸರು ಮೊಹಮ್ಮದ್ ಮನ್ಸೂರ್ ನನ್ನು ಪತ್ತೆ ಹಚ್ಚಿ, ಬಂಧಿಸಿದ್ದಾರೆ. ಈ ದೃಶ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೊಹಮ್ಮದ್ ಮನ್ಸೂರ್ ವಿರುದ್ಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಕಾಲಂ 110, 125 ಬಿಎನ್ಎಸ್ ಅನ್ವಯ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

* ಮೂಡಬಿದರೆ: ಬಾವಿಗೆ ಬಿದ್ದು ಯುವಕ ಸಾವು

ಮೂಡಬಿದರೆ: ಯುವಕನೊಬ್ಬ ಬಾವಿಗೆ ಬಿದ್ದು ಮೃತಪಟ್ಟ ಘಟನೆ, ಪಡುಮಾರ್ನಾಡು ಗ್ರಾಮದ ಮೊಡಂದೇಲು ಎನ್ನುವಲ್ಲಿ ಕಳೆದೆರಡು ದಿನಗಳ ಹಿಂದೆ ನಡೆದಿದೆ. ಸಮೀಪದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಾಲಕೃಷ್ಣ ಶೆಟ್ಟಿ ಅವರು, ಮರಳಿ ಬರುತ್ತಿದ್ದ ಸಂದರ್ಭದಲ್ಲಿ ತಡೆಗೋಡೆ ಇರದ ಕಾರಣ, ಬಾವಿ ಇರುವುದು ಅವರ ಗಮನಕ್ಕೆ ಬಂದಿಲ್ಲ. ಪರಿಣಾಮವಾಗಿ ಬಾಲಕೃಷ್ಣ ಶೆಟ್ಟಿ ಅವರು ಆಯಾತಪ್ಪಿ ಬಾವಿಯೊಳಗೆ ಬಿದ್ದಿದ್ದಾರೆ. ಘಟನೆ ನಡೆದ ಎರಡು ದಿನಗಳ ನಂತರ ಈ ವಿಚಾರ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಪುತ್ತೂರು: ಕೋಳಿ ಅಂಕದ ಮೇಲೆ ದಾಳಿ

ಪುತ್ತೂರು: ಪೊಲೀಸರಿಗೆ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಕೋಳಿ ಅಂಕದ ಮೇಲೆ ದಾಳಿ ನಡೆಸಿದ ಘಟನೆ, ಬೆಳ್ಳಿಪ್ಪಾಡಿ ಗ್ರಾಮದ ಕಠಾರ ಸಮೀಪದ ಗುಡ್ಡವೊಂದರಲ್ಲಿ ನಡೆದಿದೆ. ಪೊಲೀಸರು ಆಗಮಿಸುತ್ತಿದ್ದಂತೆ ಕೋಳಿ ಅಂಕದಲ್ಲಿ ಭಾಗಿಯಾಗಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪುತ್ತೂರಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

* ಕಡಬ: ಘಟ್ಟದ ಕೆಳಗೆ ಮುಗುಚಿ ಬಿದ್ದ ದಿಬ್ಬಣದ ವಾಹನ

ಕಡಬ: ಮದುವೆಗೆ ಹೊರಟಿದ್ದ ವಾಹನವೊಂದು ಮುಗುಚಿ ಬಿದ್ದ ಘಟನೆ, ಕಳೆದೆರಡು ದಿನಗಳ ಹಿಂದೆ ಬಿಸಿಲೆ ಘಾಟ್ ನಲ್ಲಿ ನಡೆದಿದೆ. ಸಕಲೇಶಪುರ ತಾಲ್ಲೂಕಿನ ವನಗೂರಿನಿಂದ, ಮದುವೆಗೆಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದಾಗ, ವಾಹನವು ಚಾಲಕನ ನಿಯಂತ್ರಣ ತಪ್ಪಿ, ಸುಮಾರು 20 ಅಡಿ ಎತ್ತರದಿಂದ ಕೆಳಗೆ ಉರುಳಿದೆ. ವಾಹನದಲ್ಲಿ 30 ಜನರಿದ್ದು, ಅವರಲ್ಲಿ 20 ಜನರಿಗೆ ಗಾಯಗಳಾಗಿದ್ದು, ಅದರಲ್ಲೂ ಏಳು ಜನರಿಗೆ ಗಂಭೀರ ಗಾಯಗಳಾಗಿವೆ ಎನ್ನುವ ಮಾಹಿತಿ ಲಭಿಸಿದೆ. ಶಿವರಾಜ್ ಎನ್ನುವವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ರಸ್ತೆಯ ಪಕ್ಕದಲ್ಲಿ ಚರಂಡಿ ತೆಗೆಯಲಾಗಿದ್ದು, 15 ದಿನಗಳಾದರೂ ಇನ್ನೂ ಮುಚ್ಚಿಲ್ಲ, ಹಾಗೆಯೇ ದುರಸ್ತಿ ಮಾಡದೆ ಬಿಟ್ಟಿರುವ ಜಾಗದಲ್ಲಿ, ಯಾವುದೇ ಫಲಕವನ್ನು ಸಹ ಅಳವಡಿಸದಿರುವುದು ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಮೊದಲೇ ಬಿಸಿಲೆ ಘಾಟ್ ನ ರಸ್ತೆ ಕಿರಿದಾಗಿದ್ದು, ಚರಂಡಿಯನ್ನು ಸಹ ತೆರೆಯಲಾಗಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಆದಷ್ಟು ಬೇಗ ತಡೆಗೋಡೆಯನ್ನು ನಿರ್ಮಿಸಲು ಸಂಬಂಧಿತ ವ್ಯಕ್ತಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹ ಪಡಿಸಿದ್ದಾರೆ.‌ ಘಟನೆಗೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ಯಳಸೂರು ಗ್ರಾಮದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

* ಮಂಗಳೂರು: ಕಾರ್ಖಾನೆಯ ತ್ಯಾಜ್ಯದಿಂದ ಎದುರಾಗಿದೆ ಸಮಸ್ಯೆ

ಮಂಗಳೂರು: ಕಾರ್ಖಾನೆಯ ಘಟಕದಿಂದ ಹೊರಹೊಮ್ಮುವ ತ್ಯಾಜ್ಯ ನೀರನ್ನು, ಸಾರ್ವಜನಿಕ ತೋಡಿಗೆ ಬಿಡುತ್ತಿರುವುದರಿಂದ ಸ್ಥಳೀಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದು, ಕಾವಳಪಡೂರು ಗ್ರಾಮದ ಬಂಗೇರಕೆರೆ ಎನ್ನುವಲ್ಲಿ ಬೆಳಕಿಗೆ ಬಂದಿದೆ. ಘಟಕದಲ್ಲಿ ವಸ್ತುಗಳನ್ನು ಉತ್ಪಾದಿಸಿದ ನಂತರ, ಅದರಿಂದ ಉಳಿದುಕೊಳ್ಳುವ ತ್ಯಾಜ್ಯ ಮತ್ತು ಮಲಿನವಾದ ನೀರನ್ನು ಈ ರೀತಿ ಹೊರಬಿಡುತ್ತಿರುವುದರಿಂದ ಕೃಷಿ ಜಮೀನುಗಳ ಚಟುವಟಿಕೆಗೆ ಅಡಚಣೆಯುಂಟಾಗಿದೆ. ಇದರಿಂದ ಸುತ್ತಮುತ್ತಲು ವಾಸವಾಗಿರುವ ಜನರಿಗೆ ದುರ್ವಾಸನೆ ಬರುವುದಷ್ಟೇ ಅಲ್ಲದೆ, ಜಾನುವಾರುಗಳ ಆರೋಗ್ಯದ ಮೇಲೂ ತೀವ್ರತರವಾದ ಆರೋಗ್ಯದ ಸಮಸ್ಯೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಇಂತಹ ಅಕೃತ್ಯವನ್ನು ತಡೆಹಿಡಿಯಬೇಕೆಂದು ಆಗ್ರಹಪಡಿಸಿದ್ದಾರೆ. ಕಾವಳಪಾಡೂರು ಮತ್ತು ಇರ್ವತ್ತೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಪಿಡಿಒ, ಸ್ಥಳೀಯ ವಾರ್ಡ್ ನ ಸದಸ್ಯರು ಪರಿಶೀಲನೆಯನ್ನು ನಡೆಸಿ, ಕಾರ್ಖಾನೆಗೆ ವೈಜ್ಞಾನಿಕವಾಗಿ ವಿಲೇವರಿ ಮಾಡಬೇಕೆಂದು ಆದೇಶವನ್ನು ಹೊರಡಿಸಿದ್ದರು. ಆದರೆ ಇದುವರೆಗೆ ಕಾರ್ಖಾನೆಯು ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಹೀಗಾಗಿ ಸಾರ್ವಜನಿಕರು ಕಾರ್ಖಾನೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪಂಚಾಯಿತಿಗೆ ಪತ್ರ ಬರೆದಿದ್ದಾರೆ.

* ಬೈಂದೂರು: ಮಂಕಿ ಪಾರ್ಕ್ ಗೆ ಸಾರ್ವಜನಿಕರಿಂದ ಬೇಡಿಕೆ

ಬೈಂದೂರು: ಕರಾವಳಿಯ ಬಹುತೇಕ ಭಾಗಗಳಲ್ಲಿ ಮಂಗನ ಕಾಟ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇದರ ಬೆನ್ನಲ್ಲೇ ಬೈಂದೂರು ತಾಲ್ಲೂಕಿನ ಹಲವು ಭಾಗಗಳಲ್ಲಿ ಕೃಷಿ ಮತ್ತು ಜನರ ದೈನಂದಿನ ಚಟುವಟಿಕೆಗಳಿಗೆ ಮಂಗಗಳ ಉಪಟಳ ವಿಪರೀತವಾಗಿದೆ. ಒಂದೆಡೆ ಮಳೆಯ ತೀವ್ರತೆಯಿಂದಾಗಿ ಬೆಳೆಯ ಪ್ರಮಾಣ ಕಡಿಮೆಯಾಗಿದ್ದು, ಉಳಿದ ಬೆಳೆಯನ್ನು ಮಂಗಗಳ ಕಣ್ಣಿಗೆ ಬೀಳದಂತೆ ರಕ್ಷಣೆ ಮಾಡುವುದೇ ಹರಸಾಹಸವಾಗಿದೆ.‌ ಮಂಗಗಳು ಗುಂಪು ಗುಂಪಾಗಿ ತೋಟಗಳಿಗೆ ಮುತ್ತಿಗೆ ಹಾಕುತ್ತಿದ್ದು, ತೆಂಗಿನ ಮರ ಹತ್ತಿ ಎಳನೀರನ್ನು ಕುಡಿದು ಕೆಳಕ್ಕೆ ಎಸೆಯುತ್ತಿವೆ, ಒಳ್ಳೆಯ ತೆಂಗಿನ ಫಸಲನ್ನು ನಾಶ ಮಾಡುತ್ತಿವೆ. ಅಷ್ಟೇ ಅಲ್ಲದೆ ಅಡಿಕೆ ತೋಟಗಳಿಗೂ ಸಹ ನುಗ್ಗಿ, ಹಿಂಗಾರವನ್ನು ಹಾಳು ಮಾಡುತ್ತಿದೆ. ಇದರೊಂದಿಗೆ ಬಾಳೆಮರದ ಕಂದು, ಪಪ್ಪಾಯಿ, ಪೇರಲೆ, ತರಕಾರಿಗಳನ್ನು ಸಹ ಧ್ವಂಸ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮಂಕಿ ಪಾರ್ಕ್ ವೊಂದನ್ನು ನಿರ್ಮಿಸಿ, ಮಂಗಗಳಿಗೆ ಪುನರ್ವಸತಿ ಕಲ್ಪಿಸಬೇಕೆಂದು ಆಗ್ರಹಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

Categories
ಕರಾವಳಿ ಕುಂದಾಪುರ ದಕ್ಷಿಣ ಕನ್ನಡ ಪುತ್ತೂರು ಬೆಳ್ತಂಗಡಿ ಮಂಗಳೂರು

ಕರಾವಳಿಯಲ್ಲಿ ಏನೇನ್ ಆಯ್ತು?

ಕರಾವಳಿಯಲ್ಲಿ ಏನೇನ್ ಆಯ್ತು?
– ಪ್ರಮುಖ 10 ಸುದ್ದಿಗಳು

* ಹೆಬ್ರಿ: ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದ ಬೈಕ್
* ಪುತ್ತೂರು: ಮೂರು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ
* ಸುಳ್ಯ: ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ
•ಕುಂದಾಪುರ: ವಿದೇಶದಲ್ಲಿ ಉದ್ಯೋಗ ನೆಪದಲ್ಲಿ ಹಣದ ವಂಚನೆ
* ಬ್ರಹ್ಮಾವರ: ಕಳಪೆ ಗುಣಮಟ್ಟದ ಆಭರಣ ಅಡವಿಟ್ಟು ಸಾಲ
* ಬಂಟ್ವಾಳ: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
* ಮೂಲ್ಕಿ: ಸುಳ್ಳು ಹೇಳಿ ಲಕ್ಷಾಂತರ ರೂಪಾಯಿ ಸಂಗ್ರಹ!
* ಕಾರ್ಕಳ: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು
* ಉಡುಪಿ: ಪೊಲೀಸರ ಟೋಪಿಯಲ್ಲಿ ಬದಲಾವಣೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೆಬ್ರಿ: ರಸ್ತೆ ಬದಿಯಲ್ಲಿ ಇರಿಸಿದ್ದ ಬ್ಯಾರಿಕೇಡ್ ಗೆ ಬೈಕ್ ವೊಂದು ಢಿಕ್ಕಿ ಹೊಡೆದ ಘಟನೆ, ಕಳೆದ ಕೆಲವು ದಿನಗಳ ಹಿಂದೆ ಮುದ್ರಾಡಿಯ ಆಟೋ ನಿಲ್ದಾಣದ ಬಳಿ ನಡೆದಿದೆ. ಮುದ್ರಾಡಿ ಗ್ರಾಮದ ಹರೀಶ್ ಎನ್ನುವವರು ಬೈಕ್ ನಲ್ಲಿ ಬಚ್ಚಪ್ಪು ಕಡೆಯಿಂದ ಮುದ್ರಾಡಿಯತ್ತ ತೆರಳುತ್ತಿದ್ದಾಗ ಈ ರೀತಿ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಹರೀಶ್ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ, ಹರೀಶ್ ಅವರು ಕಳೆದೆರಡು ದಿನಗಳ ಹಿಂದೆ ಮೃತಪಟ್ಟರು. ಅಪಘಾತಕ್ಕೆ ಸಂಬಂಧಿಸಿದಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಪುತ್ತೂರು: ಮೂರು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ

ಪುತ್ತೂರು: ಮೊಬೈಲ್ ಟವರ್ ತೋರಿಸುವ ನೆಪದಲ್ಲಿ ಕರೆದುಕೊಂಡು ಹೋಗಿ, ಮೂರು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ದುಷ್ಕರ್ಮಿಯನ್ನು ಸುಳ್ಯ ತಾಲ್ಲೂಕಿನ ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ನಿವಾಸಿ ಚೇತನ್ ಎಂದು ಗುರುತಿಸಲಾಗಿದೆ. ದುಷ್ಕರ್ಮಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲೆಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅವನಿಗೆ ಜೈಲು ಶಿಕ್ಷೆ ನೀಡುವಂತೆ ಆದೇಶವನ್ನು ಹೊರಡಿಸಿದೆ.

* ಸುಳ್ಯ: ವಿಷ ಸೇವಿಸಿ ಅತ್ಮಹತ್ಯೆಗೆ ಶರಣಾದ ವ್ಯಕ್ತಿ

ಸುಳ್ಯ: ಅಮಲು ಪದಾರ್ಥ ಸೇವಿಸುತ್ತಿದ್ದ ವ್ಯಕ್ತಿಯೊಬ್ಬರು, ಮದ್ಯವನ್ನು ಕುಡಿದು ಮನೆಗೆ ಬಂದು, ನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ, ಕೊಳ್ತಿಗೆ ಗ್ರಾಮದಲ್ಲಿ ನಡೆದಿದೆ. ತಕ್ಷಣ ಮಾಲತ್ತೋಡಿ ಧರ್ಮ ಅವರನ್ನು ಮನೆಯವರು ಪುತ್ತೂರಿನ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಧರ್ಮ ಅವರನ್ನು ಪರೀಕ್ಷಿಸಿದ ವೈದ್ಯರು, ಆಸ್ಪತ್ರೆಗೆ ಕರೆದುಕೊಂಡ ಬರುವ ಮೊದಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. 2018ರಲ್ಲಿ ಕೂಡ ಧರ್ಮ ಅವರು ವಿಷ ಪದಾರ್ಥ ಸೇವಿಸಿದ್ದು, ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು ಎನ್ನುವ ಮಾಹಿತಿ ಲಭಿಸಿದೆ. ಅಲ್ಲದೆ ಅಮಲು ಪದಾರ್ಥವನ್ನು ಹೆಚ್ಚಾಗಿ ಸೇವಿಸಿದಾಗ, ತಾನು ವಿಷ ಕುಡಿದು ಸಾಯುತ್ತೇನೆ ಎಂದು ಮನೆಯವರಿಗೆ ತಿಳಿಸುತ್ತಿದ್ದರು ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

* ಕುಂದಾಪುರ: ವಿದೇಶದಲ್ಲಿ ಉದ್ಯೋಗ ನೆಪದಲ್ಲಿ ಹಣದ ವಂಚನೆ

ಕುಂದಾಪುರ: ಕಾವೂರು ಠಾಣಾ ವ್ಯಾಪ್ತಿಯಲ್ಲಿ, ಸಾರ್ವಜನಿಕರಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಮತ್ತು ವೀಸಾ ಮಾಡಿಸಿಕೊಡುವುದಾಗಿ ನಂಬಿಸಿ, ಅವರಿಂದ ಒಂದು ಕೋಟಿಗೂ ಹೆಚ್ಚು ಹಣವನ್ನು ವಸೂಲಿ ಮಾಡಿರುವ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಜನರಿಂದ ಪಡೆದುಕೊಂಡ ಪಾಸ್ ಪೋರ್ಟ್ ಗಳನ್ನು ಮನೆಯಲ್ಲಿ ಅಕ್ರಮವಾಗಿ ಇಟ್ಟುಕೊಳ್ಳುತ್ತಿದ್ದರು ಎನ್ನುವ ಮಾಹಿತಿ ಲಭಿಸಿದೆ. ಆರೋಪಿಗಳನ್ನು ಬೆಂಗಳೂರು ಮೂಲದ ಪ್ರಕೃತಿ ಮತ್ತು ಕುಂದಾಪುರ ತಾಲ್ಲೂಕಿನ ಗಂಗೊಳ್ಳಿಯ ಆಲ್ಡನ್ ರೆಬೇರೋ ಎಂದು ಗುರುತಿಸಲಾಗಿದೆ. ಅಕ್ರಮ ಚಟುವಟಿಕೆಯ ಸುಳಿವು ಲಭಿಸುತ್ತಿದ್ದಂತೆ, ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀಕಾಂತ್ ಅವರ ಮಾರ್ಗದರ್ಶನದಲ್ಲಿ, ಕಾವೂರು ಠಾಣೆಯ ಇನ್ಸ್ಪೆಕ್ಟರ್ ಆಗಿರುವ ರಾಘವೇಂದ್ರ ಬೈಂದೂರು, ಎಸ್ ಐ ಆಗಿರುವ ಮಲ್ಲಿಕಾರ್ಜುನ ಬಿರಾದಾರ ಮತ್ತು ಸಿಬ್ಬಂದಿಗಳಾದ ನಾಗರತ್ನ, ರಾಘವೇಂದ್ರ, ಪ್ರವೀಣ್, ರಿಯಾಜ್ ಅವರು ಕಾರ್ಯಾಚರಣೆಯನ್ನು ನಡೆಸಿ, ಆರೋಪಿಗಳನ್ನು ಬಂಧಿಸಿದರು. ಈ ಸಂದರ್ಭದಲ್ಲಿ ಆರೋಪಿಗಳ ಬಳಿಯಿದ್ದ 24 ಪಾಸ್ ಪೋರ್ಟ್, 4.30.000 ರೂಪಾಯಿ ಮೌಲ್ಯದ 43 ಗ್ರಾಂ ಬಂಗಾರ, ಎರಡು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಯಿತು. ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

* ಬ್ರಹ್ಮಾವರ: ಕಳಪೆ ಗುಣಮಟ್ಟದ ಆಭರಣ ಅಡವಿಟ್ಟು ಸಾಲ

ಬ್ರಹ್ಮಾವರ: ಯಶವಂತ್ ಕುಮಾರ್ ಎನ್ನುವ ವ್ಯಕ್ತಿಯು, ಕಡಿಮೆ ಗುಣಮಟ್ಟದ ಚಿನ್ನಾಭರಣವನ್ನು ಅಡವಿಟ್ಟು, ಸಾಲ ಪಡೆಯುವ ಮೂಲಕ ಸಹಕಾರಿ ಸಂಘಕ್ಕೆ ವಂಚಿಸಿದ್ದಾರೆ. ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ಕೊಕ್ಕರ್ಣೆ ಶಾಖೆಯಲ್ಲಿ ಜುಲೈ ತಿಂಗಳಿನಲ್ಲಿ ಕಡಿಮೆ ಗುಣಮಟ್ಟದ 69.400 ಗ್ರಾಂ ತೂಕದ ಚಿನ್ನಾಭರಣ ಅಡವಿಟ್ಟು, ಸುಮಾರು 4.60.000 ರೂಪಾಯಿ ಸಾಲ ಪಡೆದುಕೊಂಡಿದ್ದನು.‌ ಕೆಲವು ದಿನಗಳ ಬಳಿಕ ಸಹಕಾರಿ ಸಂಘದವರು ಆತ ಅಡವಿಟ್ಟ ಆಭರಣಗಳನ್ನು ಪರೀಕ್ಷಿಸಿದಾಗ, ಅದು ಕಡಿಮೆ ಗುಣಮಟ್ಟದ್ದೆಂದು ತಿಳಿದುಬಂದಿದೆ. ಇದರ ನಂತರ ಆರೋಪಿಯು ಸಂಘದವರ ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಸಹಕಾರಿ ಸಂಘಕ್ಕೆ ಆರ್ಥಿಕ ನಷ್ಟ ಮತ್ತು ನಂಬಿಕೆ ದ್ರೋಹ ಮಾಡಿದಂತಾಗಿದೆ ಎಂದು ದೂರು ನೀಡಲಾಗಿದೆ. ಮತ್ತು ಆರೋಪಿಯೊಂದಿಗೆ ವಂಚನೆಯಲ್ಲಿ ಉಮಾನಾಥ ಶೆಟ್ಟಿ ಎನ್ನುವ ವ್ಯಕ್ತಿಯು ಜೊತೆಯಾಗಿದ್ದಾರೆ ಎಂದು ಸರಕಾರಿ ಸಂಘದ ಶಾಖಾ ವ್ಯವಸ್ಥಾಪಕಿಯಾಗಿರುವ ಸುರೇಖಾ ಕುಮಾರಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಬಂಟ್ವಾಳ: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಬಂಟ್ವಾಳ: ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ, ಕೊಳ್ನಾಡು ಗ್ರಾಮದ ಮುಂಡಾಜೆ ಕಾನ ಎಂಬಲ್ಲಿ ನಡೆದಿದೆ. ದಿನೇಶ್ ಎಂಬ ಹೆಸರಿನ ಯುವಕನು ಕೂಲಿ ಕೆಲಸ ಮಾಡಿಕೊಂಡಿದ್ದು, ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದಾನೆ. ಸಾವಿಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ.‌ ಘಟನೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸಂಗ್ರಹಿಸಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

* ಮೂಲ್ಕಿ: ಸುಳ್ಳು ಹೇಳಿಕೆಯ ಮೂಲಕ ಲಕ್ಷಾಂತರ ರೂಪಾಯಿ ಸಂಗ್ರಹ

ಮೂಲ್ಕಿ: ಉಡುಪಿ ಮತ್ತು ಕಾಸರಗೋಡು ಟ್ರಾನ್ಸ್ ಮಿಷನ್ ಲಿಮಿಟೆಡ್ ಕಂಪನಿಯವರು, ವಿದ್ಯುತ್ ಕಂಬ ಹಾಕುವ ಮತ್ತು ವಯರ್ ಎಳೆಯುವ ಸಂದರ್ಭದಲ್ಲಿ , ಹಲವಾರು ಮನೆಗಳಿಗೆ ಹಾನಿಯಾಗಿದೆ ಎಂದು ಸುಳ್ಳು ಹೇಳಿ ನಂಬಿಸಿ, ಉಳೆಪಾಡಿ ಗ್ರಾಮದ ರಾಮಚಂದ್ರ ಕಂಗೋರಿ ಕೆಲಸ ಮಾಡುವುದನ್ನು ನಿಲ್ಲಿಸಿ ಎಂದು ಹೇಳಿ, ಬಳಿಕ ಮುಂದುವರಿಸಬೇಕಾದರೆ 25.000 ರೂಪಾಯಿ ನೀಡುವಂತೆ ಬೆದರಿಸಿದ್ದಾರೆ.‌ ರಾಮಚಂದ್ರ ಕಂಗೋರಿಯ ಬೆದರಿಕೆಗೆ ಮಣಿದ ಕಂಪನಿಯವರು 25,000 ಕೊಟ್ಟು ಕಳುಹಿಸಿದ್ದಾರೆ. ಬಳಿಕ ಸದಾಶಿವ ಎನ್ನುವ ವ್ಯಕ್ತಿ, ಕೊಟ್ಟಾರ ಚೌಕಿಯಲ್ಲಿರುವ ಕಂಪನಿಯ ಕಛೇರಿಗೆ ಬಂದು, ರಾಮಚಂದ್ರ ಅವರು ಕೇಳಿರುವ ಎರಡು ಲಕ್ಷ ರೂಪಾಯಿಯಷ್ಟು ಹಣವನ್ನು ಪಾವತಿಸಿ ಎಂದು ಒತ್ತಡ ಹೇರಿದ್ದಾರೆ. ಹಾನಿಯಾದ ಮನೆಗಳಿಗೆ ಪರಿಹಾರವಾಗಿ ಹಣವನ್ನು ನೀಡುತ್ತೇನೆಂದು ನಂಬಿಸಿ, ಡಿಡಿ ಮೂಲಕ ರಾಮಚಂದ್ರ ಎರಡು ಲಕ್ಷ ರೂಪಾಯಿ ಹಣವನ್ನು ಸದಾಶಿವನ ಮೂಲಕ ತರಿಸಿಕೊಂಡಿದ್ದಾನೆ. ಕೆಲವು ದಿನಗಳ ನಂತರ ಗುತ್ತಿಗೆದಾರರು ಕೆಲಸವನ್ನು ಮುಂದುವರಿಸಲೆಂದು ಉಳೆಪಾಡಿ ಗ್ರಾಮಕ್ಕೆ ತೆರಳಿದಾಗ, ರಾಮಚಂದ್ರ ಕಂಪನಿಯವರಿಂದ ತೆಗೆದುಕೊಂಡ ಹಣವನ್ನು ಸಂತ್ರಸ್ತರಿಗೆ ನೀಡಿಲ್ಲ ಎನ್ನುವ ವಿಚಾರ ತಿಳಿದುಬಂದಿದೆ.‌ ಈ ಹಿನ್ನೆಲೆಯಲ್ಲಿ ಕಂಪನಿಯ ಮ್ಯಾನೇಜರ್ ಅವರು ರಾಮಚಂದ್ರ ಕಂಗೋರಿ ಮತ್ತು ಸದಾಶಿವ ವಿರುದ್ಧ ಮೂಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

* ಕಾರ್ಕಳ: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು

ಕಾರ್ಕಳ: ಕಳೆದೆರಡು ದಿನಗಳ ಹಿಂದೆ, ಬೆಳಿಗ್ಗೆ 7:45ರ ಸುಮಾರಿಗೆ ರೈಲು ಢಿಕ್ಕಿ ಹೊಡೆದು, ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಹಳೆಯಂಗಡಿಯ ಇಂದಿರಾನಗರದ ರೈಲ್ವೆ ಕ್ರಾಸಿಂಗ್ ಬಳಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಕಾರ್ಕಳದ ನಲ್ಲೂರಿನ ಪ್ರಭಾಕರ್ ಶೆಟ್ಟಿ ಎಂದು ಗುರುತಿಸಲಾಗಿದೆ.‌ ಪ್ರಭಾಕರ್ ಶೆಟ್ಟಿ ವಿಪರೀತ ಮದ್ಯವ್ಯಸನಿಯಾಗಿದ್ದು, ಮೂಡುಬೆಳ್ಳಿಯ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅವರ ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ. ಅದನ್ನು ಹೊರತುಪಡಿಸಿ ಸಾವಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಪಘಾತಕ್ಕೆ ಸಂಬಂಧಿಸಿದಂತೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆಯನ್ನು ನಡೆಸಲಾಗಿದೆ.

* ಮಂಗಳೂರು: ಕೊಳಲು ಊದುತ್ತಾ 700 ಮೀಟರ್ ದೂರ ಈಜುವ ಮೂಲಕ ದಾಖಲೆ

ಮಂಗಳೂರು: ಸಂಗೀತ ಶಿಕ್ಷಕರಾದ ರುಬೆನ್ ಜೇಸನ್ ಅವರು ಇದೀಗ ಎಲ್ಲರ ಮಾತಿನ ಪ್ರಮುಖ ವಿಷಯವಾಗಿದ್ದಾರೆ. ಕಾರಣ ಬಹುಮುಖ ಪ್ರತಿಭೆಯುಳ್ಳ ಇವರು, ಬುಧವಾರದಂದು ಸಂತ ಅಲೋಷಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಈಜುಕೊಳದಲ್ಲಿ, ಬೆಳಿಗ್ಗೆ ಹತ್ತರಿಂದ ಕೊಳಲನ್ನು ನುಡಿಸುತ್ತಾ ಪ್ರಾರಂಭಿಸಿ, ಐದು ಸುತ್ತು ಮತ್ತು 75 ಮೀಟರ್ ಪೂರ್ಣಗೊಳಿಸಿ, ಒಟ್ಟು 700 ಮೀಟರ್ ಗಿಂತ ಹೆಚ್ಚು ದೂರ ಹಿಮ್ಮುಖವಾಗಿ ಈಜುವ ಮೂಲಕ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲ ಈ ಸಂದರ್ಭದಲ್ಲಿ ಅವರು ಕೊಳಲನ್ನು ನುಡಿಸುತ್ತಿದ್ದರು ಎನ್ನುವುದು ಮತ್ತೊಂದು ಆಶ್ಚರ್ಯಕರ ಸಂಗತಿಯಾಗಿದೆ.‌ ಈ ಎರಡು ಬಗೆಯ ಸಾಧನೆಯ ಮೂಲಕ ರುಬೆನ್ ಅವರ ಹೆಸರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ. ರುಬೆನ್ ಅವರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವಾಟರ್ ಸೇಫ್ಟಿ ತಂಡದ ಅಧಿಕೃತ ಜೀವ ರಕ್ಷಕರಾಗಿದ್ದು, ಹಿಂದೂಸ್ತಾನಿ ಮತ್ತು ವಿದೇಶಿ ಕೊಳಲು ವಾದನದಲ್ಲಿ ಪರಿಣತಿ ಪಡೆದುಕೊಂಡಿದ್ದು, 15 ವರ್ಷಗಳ ಅನುಭವ ಹೊಂದಿದ್ದಾರೆ. ಇವುಗಳೊಂದಿಗೆ ಸ್ಯಾಕ್ಸೋಫೋನ್, ಗಿಟಾರ್ ಮತ್ತು ಇತರ ವಾದ್ಯಗಳು ನುಡಿಸುವುದರಲ್ಲಿಯೂ ಖ್ಯಾತಿ ಪಡೆದಿದ್ದಾರೆ.‌ ಅಲ್ಲದೆ ಬಾಲಿವುಡ್, ಚಂದನವನ ಮತ್ತು ಕರಾವಳಿ ಭಾಗದ ಚಲನಚಿತ್ರಗಳಿಗೆ ಸಂಗೀತವನ್ನು ನೀಡಿದ್ದು, ದೇಶಾದ್ಯಂತ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. 2016ರಲ್ಲಿ ನಡೆದ ವರ್ಲ್ಡ್ ಕಲ್ಚರ್ ಫೆಸ್ಟಿವಲ್ ನಲ್ಲಿ 150ಕ್ಕೂ ಹೆಚ್ಚು ದೇಶಗಳ ಸಂಗೀತಗಾರರೊಂದಿಗೆ ಗಿನ್ನಿಸ್ ವಿಶ್ವ ದಾಖಲೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.‌ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಎರಡು ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ ರುಬೆನ್ ಅವರ ಹೆಸರನ್ನು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲಿಸುವ ಸಂದರ್ಭದಲ್ಲಿ ಸಂತ ಅಲೋಷಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ. ಪ್ರವೀಣ್ ಮಾರ್ಟಿಸ್, ರುಬೆನ್ ಅವರ ಪತ್ನಿ ಅನುಷಾ ಮತ್ತು ಕುಟುಂಬಸ್ಥರು ಹಾಜರಿದ್ದರು.

* ಉಡುಪಿ: ಪೊಲೀಸರ ಟೋಪಿಯಲ್ಲಿ ಬದಲಾವಣೆ

ಉಡುಪಿ: ಪೊಲೀಸರು ಇದುವರೆಗೂ ಧರಿಸುತ್ತಿದ್ದ ಟೋಪಿ ಇದೀಗ ಮರೆಯಾಗುತ್ತಿದೆ. ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಬಳಕೆಗೊಂಡ ಈ ಸ್ಲೋಚ್ ಟೋಪಿಗಳ ಬದಲಾಗಿ, ಪೀಕ್ ಟೋಪಿಗಳನ್ನು ನೀಡಲು ರಾಜ್ಯ ಸರ್ಕಾರವು ನಿರ್ಧರಿಸಿದ್ದು, ಬೆಂಗಳೂರಿನಲ್ಲಿ ಪೀಕ್ ಟೋಪಿಗಳ ಹಸ್ತಾಂತರ ಕಾರ್ಯಕ್ರಮ ಜರುಗಿದ್ದು, ಇದರಲ್ಲಿ ಅನೇಕ ಜನರು ಭಾಗವಹಿಸಿದ್ದರು. ಉಡುಪಿ ಜಿಲ್ಲೆ ಸೇರಿದಂತೆ ಉಳಿದ ಪೊಲೀಸರಿಗೆ ಇನ್ನಷ್ಟೇ ಪೀಕ್ ಟೋಪಿಗಳು ಲಭಿಸಬೇಕಿದೆ ಎಂದು ಪೊಲೀಸ್ ಇಲಾಖೆಯು ತಿಳಿಸಿದೆ. ಉಡುಪಿ ಜಿಲ್ಲೆಯಾದ್ಯಂತ ಸುಮಾರು 24 ಪೊಲೀಸ್ ಠಾಣೆಗಳಿದ್ದು, 1400 ಜನ ಕಾನ್ಸ್ಟೇಬಲ್ ಗಳು ಮತ್ತು ಹೆಡ್ ಕಾನ್ಸ್ಟೇಬಲ್ ಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ಬಳಸುತ್ತಿದ್ದ ಹಳೆಯ ಟೋಪಿಗಳನ್ನು ಹಸ್ತಾಂತರಿಸುವ ಕುರಿತು ಸರ್ಕಾರ ಯಾವುದೇ ಸೂಚನೆಯನ್ನು ನೀಡಿಲ್ಲ. ಹಿಂದಿನ ಪೊಲೀಸ್ ಟೋಪಿಗಳೆಲ್ಲ ಪೊಲೀಸರಿಗೆ ಸಂಬಂಧಿಸಿದ ಸ್ಟೇಷನರಿಗಳಲ್ಲಿ ಲಭಿಸುತ್ತಿದ್ದವು. ಆದರೆ ಹೊಸದಾಗಿ ನೀಡಲಾಗುತ್ತಿರುವ ಪೀಕ್ ಟೋಪಿಗಳನ್ನು ಸರ್ಕಾರವೇ ಒದಗಿಸುತ್ತಿರುವುದರಿಂದ, ಮುಂಬರುವ ದಿನಗಳಲ್ಲಿ ಹಂತಹಂತವಾಗಿ ಎಲ್ಲಾ ಪೊಲೀಸ್ ಸ್ಟೇಷನರಿಗಳಲ್ಲಿ ದೊರೆಯಬಹುದು, ಕೆಲವೊಮ್ಮೆ ವರ್ಷಕ್ಕೆ ಎರಡರಿಂದ ಮೂರು ಟೋಪಿಗಳ ಅವಶ್ಯಕತೆ ಉಂಟಾಗುವುದರಿಂದ ಅಂಗಡಿಗಳಲ್ಲೇ ಪಡೆದುಕೊಳ್ಳಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ