Categories
agumbe ಉಡುಪಿ ಉತ್ತರ ಕನ್ನಡ ಕಡೂರು ಕರಾವಳಿ ಕಲಬುರಗಿ ಕಾರವಾರ ಕಾರ್ಕಳ ಕುಂದಾಪುರ ಕೊಪ್ಪ ಗದಗ ಚಿಕ್ಕಬಳ್ಳಾಪುರ ಚಿಕ್ಕಮಗಳೂರು ತೀರ್ಥಹಳ್ಳಿ ತುಮಕೂರು ದಕ್ಷಿಣ ಕನ್ನಡ ಪುತ್ತೂರು ಬೆಂಗಳೂರು ಬೆಳಗಾವಿ ಬೆಳ್ತಂಗಡಿ ಮಂಗಳೂರು ಮಲ್ನಾಡ್ ಮುಲ್ಕಿ ಮೈಸೂರು ರಾಜ್ಯ ವಿಜಯನಗರ ವಿಜಯಪುರ ಶಿವಮೊಗ್ಗ ಶೃಂಗೇರಿ ಸಾಗರ ಹಾವೇರಿ ಹಾಸನ ಹೊಸನಗರ

ಅಯ್ಯೋ ದೇವ್ರೇ..ಈ ವಾರವೂ ಮಳೆ!

ಅಯ್ಯೋ ದೇವ್ರೇ..ಈ ವಾರವೂ ಮಳೆ!
– ಚಂಡಮಾರುತದ ಪ್ರಭಾವದಿಂದ ಭಾರಿ ಮಳೆ ಸಾಧ್ಯತೆ
– ಅಕ್ಟೋಬರ್ 8ರವರೆಗೂ ಗಾಳಿ ಜತೆಗೆ ಮಳೆ ಅಲರ್ಟ್
– ದಸರಾಕ್ಕೂ ಮಳೆ ಅಡ್ಡಿ: ಅಡಿಕೆ ಬೆಳೆಗೆ ಸಂಕಷ್ಟ

 

NAMMUR EXPRESS NEWS
ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಂಡಿದೆ. ಇದರಿಂದಾಗಿ ಕರ್ನಾಟಕ, ಒಡಿಶಾ, ಆಂಧ್ರಪ್ರದೇಶ ಸೇರಿ ಹಲವೆಡೆ ಮಳೆಯಾಗಲಿದೆ. ಈಗಾಗಲೇ ಕಳೆದ 6 ತಿಂಗಳಿಂದ ವಾಡಿಕೆಗಿಂತ ಹೆಚ್ಚು ಮಳೆ ಆಗಿದ್ದು, ರೈತರು ಹೈರಾಣಾಗಿದ್ದಾರೆ. ಇದೀಗ ಮತ್ತೆ ಮೋಡ, ಮಳೆ ಜನ ಜೀವನಕ್ಕೆ ಭಾರೀ ತೊಂದರೆ ಆಗಿದೆ.
ಚಂಡಮಾರುತದ ಪ್ರಭಾವದಿಂದಾಗಿ ಕರಾವಳಿಯಲ್ಲಿ ಗಂಟೆಗೆ 40 ರಿಂದ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಂಡಮಾರುತ ಪ್ರಭಾವ ಕರ್ನಾಟಕದ ಮೇಲೂ ಆಗಲಿದ್ದು, ಅಕ್ಟೋಬರ್ 8ರವರೆಗೆ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ವಿಜಯನಗರ, ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆಯಲ್ಲಿ ಮಳೆಯಾಗಲಿದೆ.
ಯಲ್ಲಾಪುರದಲ್ಲಿ ಭಾರಿ ಮಳೆಯಾಗಿದೆ, ಹೊನ್ನಾವರ, ಆಗುಂಬೆ, ಅಂಕೋಲಾ, ಕ್ಯಾಸಲ್​ರಾಕ್, ಗೇರುಸೊಪ್ಪ, ಮಂಕಿ, ಕದ್ರಾ, ಕಾರವಾರ, ಕೋಟಾ, ಕೊಟ್ಟಿಗೆಹಾರ, ಕುಮಟಾ, ಕುಂದಾಪುರ, ಲೋಂಡಾ, ಮಂಗಳೂರು, ಮುಂಡಗೋಡಿನಲ್ಲಿ ಮಳೆಯಾಗಿದೆ.
ಅಡಿಕೆ ಸೀಸನ್ ಆಗಿರುವುದರಿಂದ ಅಡಿಕೆ ಬೆಳೆ ಗಾರರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಈ ಬಾರಿ ದಸರಾಕ್ಕೂ ಮಳೆ ಹಲವೆಡೆ ಅಡ್ಡಿ ಮಾಡಿದೆ.

Categories
ಉಡುಪಿ ಕರಾವಳಿ ಕಾರ್ಕಳ ಕುಂದಾಪುರ ದಕ್ಷಿಣ ಕನ್ನಡ ಬೆಳ್ತಂಗಡಿ ಮಂಗಳೂರು

ಕರಾವಳಿ ರಸ್ತೆ ಸರಿ ಇಲ್ಲ: ಅಪಘಾತಕ್ಕೆ ದಿನ ನಿತ್ಯ ಬಲಿ!

ಕರಾವಳಿ ರಸ್ತೆ ಸರಿ ಇಲ್ಲ: ಅಪಘಾತಕ್ಕೆ ದಿನ ನಿತ್ಯ ಬಲಿ!

* ಕಾಪು: ರಸ್ತೆ ಅಪಘಾತ; ಬೈಕ್ ಸವಾರ ಸಾವು
* ಬಂಟ್ವಾಳ: ಸಿಸಿ ಕ್ಯಾಮೆರಾದ ಡಿವಿಆರ್ ಸುಟ್ಟು ಹಾಕಿದ ಅಪ್ರಾಪ್ತರು
* ಸುಳ್ಯ: ಹೃದಯಾಘಾತದಿಂದ ಆಟೋ ಚಾಲಕ ಸಾವು
* ಪುತ್ತೂರು: ಆ್ಯಂಬುಲೆನ್ಸ್ ಗೆ ಅಡ್ಡಿಪಡಿಸಿದ ಕಾರು ಚಾಲಕ
* ಕುಂದಾಪುರ: ಹಣ ನೀಡದೆ ಚಿನ್ನಾಭರಣ ಕಳ್ಳತನ
* ಯಲ್ಲಾಪುರ: ಕಾರಿಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕಾಪು: ಬೈಕ್ ಗೆ ವಾಹನವೊಂದು ಬಂದು ಢಿಕ್ಕಿ ಹೊಡೆದು, ಬೈಕ್ ಸವಾರ ಮೃತಪಟ್ಟ ಘಟನೆ ಮಂಗಳವಾರ ಬೆಳಿಗ್ಗೆ ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರ ಬಡಾ ಗ್ರಾಮದ ಬಳಿ ನಡೆದಿದೆ. ವಾಹನ ರಭಸವಾಗಿ ಢಿಕ್ಕಿ ಹೊಡೆದ ಪರಿಣಾಮವಾಗಿ, ಬೈಕ್ ಸವಾರ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಬಳಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಮಡಂತ್ಯಾರು ಮಾಲಾಡಿ ನಿವಾಸಿ ರಮೇಶ್ ಹೆಗ್ಡೆ ಎನ್ನಲಾಗಿದ್ದು, ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ದಸರಾ ಪ್ರಯುಕ್ತ ಸಂತೆಗೆ ವ್ಯಾಪಾರಕ್ಕೆಂದು ಬಂದಿದ್ದಾಗ ಈ ಘಟನೆ ಸಂಭವಿಸಿದೆ ಎನ್ನುವ ಸಂಗತಿ ತಿಳಿದುಬಂದಿದೆ.

* ಬಂಟ್ವಾಳ: ಸಿಸಿ ಕ್ಯಾಮೆರಾದ ಡಿವಿಆರ್ ಅನ್ನು ಸುಟ್ಟು ಹಾಕಿದ ಅಪ್ರಾಪ್ತರು

ಬಂಟ್ವಾಳ: ಪುಣಚ ಗ್ರಾಮದ ನಿವಾಸಿಯಾದ ಆನಂದ ಗೌಡ ಎನ್ನುವವರು, ತಮ್ಮ ಪತ್ನಿಯ ಹೆಸರಿನಲ್ಲಿ ನಡೆಸುತ್ತಿರುವ ಕಾರ್ಖಾನೆಯ ಇಂಟರ್ ಲಾಕ್ ಘಟಕಕ್ಕೆ ಬಂದ ಇಬ್ಬರು ಅಪ್ರಾಪ್ತ ಬಾಲಕರು, ಅಲ್ಲಿದ್ದ ಸಿಸಿ ಕ್ಯಾಮೆರಾ ಹಾಳು ಮಾಡಿ, ಅದರ ಡಿವಿಆರ್ ಅನ್ನು ಸುಟ್ಟು ಹಾಕಿ, ದೇವರ ಫೋಟೋವನ್ನು ಹಾಳು ಮಾಡಿದ ಘಟನೆ ವಿಟ್ಲದಲ್ಲಿ ನಡೆದಿದೆ. ಡಿವಿಆರ್ ಸುಟ್ಟು ಹೋಗಿದ್ದರೂ, ಮಾಲೀಕರ ಮೊಬೈಲ್ ಗೆ ಸಿಸಿ ಕ್ಯಾಮೆರಾ ಸಂಪರ್ಕ ಅಳವಡಿಕೆ ಆಗಿದ್ದ ಕಾರಣ, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಹಕಾರಿಯಾಯಿತು. ವಿಟ್ಲದ ಪೊಲೀಸರು ಮಾಹಿತಿಯ ಆಧಾರದ ಮೇಲೆ ಆರೋಪಿಗಳನ್ನು ಸೆರೆ ಹಿಡಿದು, ಅವರ ಪೋಷಕರ ಸಮಕ್ಷಮದಲ್ಲಿ ವಿಚಾರಣೆ ನಡೆಸಿದಾಗ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಾಲಾಪರಾಧ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

* ಸುಳ್ಯ: ಹೃದಯಾಘಾತದಿಂದ ಆಟೋ ಚಾಲಕ ಸಾವು

ಸುಳ್ಯ: ಬೊಳಿಯಮಜಲು ನಿವಾಸಿ ಅನಿಲ್ ಜೈನ್ ಎನ್ನುವವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಜಟ್ಟಿಪಳ್ಳದಲ್ಲಿ ನಡೆದಿದೆ. ಅನಿಲ್ ಜೈನ್ ಆಟೋ ಚಾಲಕರಾಗಿದ್ದು, ಶಾಸ್ತ್ರಿ ವೃತ್ತದ ಬಳಿ, ಸರದಿಯಲ್ಲಿ ತಮ್ಮ ಆಟೋವನ್ನು ನಿಲ್ಲಿಸಿ, ಬಾಡಿಗೆಗೆ ತೆರಳುತ್ತಿದ್ದರು. ಮತ್ತು ಸ್ನೇಹ ಸಂಗಮ ಆಟೋ ಚಾಲಕರ ಸಂಘದ ಅಧ್ಯಕ್ಷರು ಕೂಡ ಆಗಿದ್ದರು. ಮನೆಯಲ್ಲಿದ್ದ ಸಮಯದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಅನಿಲ್ ಅವರನ್ನು, ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ ಎನ್ನುವ ಸಂಗತಿ ತಿಳಿದುಬಂದಿದೆ.

* ಪುತ್ತೂರು: ಆ್ಯಂಬುಲೆನ್ಸ್ ಗೆ ಅಡ್ಡಿಪಡಿಸಿದ ಕಾರು ಚಾಲಕ

ಪುತ್ತೂರು: ಮಗುವನ್ನು ಕರೆದುಕೊಂಡು ಹೋಗುತ್ತಿದ್ದ ಆ್ಯಂಬುಲೆನ್ಸ್ ಗೆ, ಮುಂದಿನಿಂದ ಬರುತ್ತಿದ್ದ ಕಾರಿನ ಚಾಲಕ ಅಡ್ಡಪಡಿಸಿದ ಘಟನೆ ಗುಂಡ್ಯಾ ಬಳಿ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಮಗುವನ್ನು ಕರೆದೊಯ್ಯಲಾಗುತ್ತಿತ್ತು ಎನ್ನುವ ಸಂಗತಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಆ್ಯಂಬುಲೆನ್ಸ್ ಚಾಲಕ ಹನೀಫ್ ಅವರು ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ, ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, 6,000 ರೂಪಾಯಿ ದಂಡ ವಿಧಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾರು ಚಾಲಕನ ನಡೆವಳಿಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

* ಕುಂದಾಪುರ: ಹಣ ನೀಡದೆ ಚಿನ್ನಾಭರಣ ತೆಗೆದುಕೊಂಡು ಹೋದ ಆರೋಪಿಯ ಬಂಧನ

ಕುಂದಾಪುರ: ಹೊಸಂಗಡಿಯ ಶ್ರೀಕೃಷ್ಣ ಜ್ಯುವೆಲ್ಲರಿ ಎಂಬ ಅಂಗಡಿಯಲ್ಲಿ ಸಂತೋಷ್ ಎನ್ನುವ ವ್ಯಕ್ತಿಯು, ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಕಾರಿನಲ್ಲಿ ಬಂದು ಗಿಫ್ಟ್ ನೀಡಲು ಬೇಕೆಂದು 30,000 ರೂಪಾಯಿ ಮೌಲ್ಯದ ಎರಡು ಚಿನ್ನದ ಉಂಗುರಗಳನ್ನು ಖರೀದಿಸಿದ್ದು, ಹಣವನ್ನು ನೆಟ್ ಮೂಲಕ ಕಳುಹಿಸಿರುವುದಾಗಿ ತೋರಿಸಿ, ಉಂಗುರಗಳನ್ನು ತೆಗೆದುಕೊಂಡು ಹೋಗಿದ್ದ. ಆದರೆ ಅಂಗಡಿಯ ಖಾತೆಗೆ ಸಂತೋಷ್ ಕಳುಹಿಸಿದ ಹಣ ಜಮೆಯಾಗದ ಕಾರಣ, ಅಂಗಡಿಯ ಮಾಲೀಕರು ಸಂತೋಷ್ ಗೆ ಕರೆ ಮಾಡಿ ಕೇಳಿದಾಗ, ಆತ ನಾಳೆ ಕೊಡುವುದಾಗಿ ತಿಳಿಸಿದ್ದ. ಆದರೆ ಇಷ್ಟು ತಿಂಗಳುಗಳು ಕಳೆದರೂ, ಇನ್ನೂ ಮರುಪಾವತಿಸಿಲ್ಲ ಎಂದು ಆಭರಣ ಅಂಗಡಿಯ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಅಮಾಸೆಬೈಲು ಪೊಲೀಸರು ಕಾರ್ಯಾಚರಣೆ ನಡೆಸಿದಾಗ, ತಲೆಮರೆಸಿಕೊಂಡಿದ್ದ ಆರೋಪಿ ಸೆರೆ ಸಿಕ್ಕಿದ್ದು, ಆತನ ಹೆಸರು ಸಂತೋಷ್ ಅಲ್ಲ ಪ್ರವೀಣ್ ಎನ್ನುವುದು ತಿಳಿದುಬಂದಿದೆ. ಆರೋಪಿಯನ್ನು ಕಳೆದೆರಡು ದಿನಗಳ ಹಿಂದೆ ಬಂಧಿಸಿದ್ದು, ಆತನ ಬಳಿಯಿದ್ದ ಕಾರು ಮತ್ತು ಕದ್ದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

* ಯಲ್ಲಾಪುರ: ಕಾರಿಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ

ಯಲ್ಲಾಪುರ: ಕುಮಟಾ ಕಡೆಗೆ ಸಾಗುತ್ತಿದ್ದ ಕಾರ್ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಪಕ್ಕ ಢಿಕ್ಕಿ ಹೊಡೆದಿದ್ದು, ಈ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ, ಆಕಸ್ಮಿಕವಾಗಿ ಬೆಂಕಿ ತಗುಲಿ, ಕಾರು ಸಂಪೂರ್ಣ ಸುಟ್ಟುಹೋದ ಘಟನೆ ಇಡಗುಂದಿ ಸಮೀಪದ ಶೇಡಿಕೆರೆ ಕ್ರಾಸ್ ಬಳಿ ಮಂಗಳವಾರ ನಡೆದಿದೆ. ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಂದಿಸಿದರೂ, ಕಾರು ಅಷ್ಟೊತ್ತಿಗಾಗಲೇ ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಆದರೆ ಕಾರಿನಲ್ಲಿದ್ದವರಿಗೆ ಯಾವುದೇ ರೀತಿಯ ಅಪಾಯ ಸಂಭವಿಸದೆ, ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ಅವಘಡದಿಂದ ಕೆಲವು ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು.

Categories
ಉಡುಪಿ ಕರಾವಳಿ ಕಾರ್ಕಳ ಕುಂದಾಪುರ ದಕ್ಷಿಣ ಕನ್ನಡ ಪುತ್ತೂರು ಮಂಗಳೂರು ಮುಲ್ಕಿ

ಕರಾವಳಿಯ ಕಲೆ ಹುಲಿ ವೇಷದ ರಂಗು!

ಕರಾವಳಿಯ ಕಲೆ ಹುಲಿ ವೇಷದ ರಂಗು!
– ದಸರಾ ಮತ್ತು ದೀಪಾವಳಿ ಸಂದರ್ಭದಲ್ಲಿ ವಿಶೇಷ ಆಚರಣೆ
– ಹುಲಿ ವೇಷದ ವಿವಿಧ ಅವತಾರ ನೋಡುವುದೇ ಸಂಭ್ರಮ

 

ವಿಶೇಷ ವರದಿ: ಪ್ರಾಪ್ತಿ ಸಾಗರ
NAMMUR EXPRESS NEWS
ಕರಾವಳಿಯ ಕಲೆ ಹುಲಿ ವೇಷ ಇದೀಗ ದಸರಾ ಸಂದರ್ಭದಲ್ಲಿ ನಾಡಿನ ವಿವಿಧ ಭಾಗಗಳಲ್ಲಿ ಕಂಡು ಬರುತ್ತಿದೆ. ಕರಾವಳಿಯ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಹುಲಿ ವೇಷ ಸ್ಪರ್ಧೆ ಗಮನ ಸೆಳೆದಿದ್ದು, ಚಿಕ್ಕ ಮಕ್ಕಳಿಂದ ವಯೋವೃದ್ಧರು ಕೂಡ ಈ ಹುಲಿವೇಷವನ್ನು ಹಾಕಿ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಇನ್ನು ಈ ದಸರಾ ಹಬ್ಬದ ವೇಳೆಗೆ ಜೊತೆಗೆ ದೀಪಾವಳಿ ವೇಳೆಗೆ ಹುಲಿ ವೇಷದ ವಿವಿಧ ಅವತಾರಗಳು ಕರಾವಳಿ ಭಾಗ ಸೇರಿದಂತೆ ಮಲೆನಾಡು, ಕರಾವಳಿ, ಮಧ್ಯ ಕರ್ನಾಟಕ, ಬೆಂಗಳೂರು ಸೇರಿ ಬೇರೆ ಬೇರೆ ಭಾಗಗಳಲ್ಲಿ ಸಕ್ರಿಯವಾಗಿ ಈ ಕಲೆಯನ್ನು ಪ್ರದರ್ಶನ ಮಾಡಲಾಗುತ್ತಿದೆ.
ಕರಾವಳಿಯ ಬಹುತೇಕ ತಾಲೂಕುಗಳಲ್ಲಿ ಹುಲಿ ವೇಷದ ಸ್ಪರ್ಧೆಯನ್ನು ಮಾಡುತ್ತಿದ್ದು ಇದೀಗ ಮಲೆನಾಡಿನಲ್ಲಿಯೂ ಕೂಡ ಈ ಸ್ಪರ್ಧೆಗಳು ಹೆಚ್ಚಾಗಿದೆ.

ಹುಲಿ ವೇಷವನ್ನು ಹಾಕಿ ವಿವಿಧ ಅವತಾರದಲ್ಲಿ ಕುಣಿಯುವುದನ್ನು ನೋಡುವುದೇ ಒಂದು ವಿಶೇಷ. ಹುಲಿ ವೇಷಕ್ಕೆ ತನ್ನದೇ ಆದ ಇತಿಹಾಸವಿದೆ. ಕರಾವಳಿ ಭಾಗದಲ್ಲಿ ಈ ಕಲೆಯನ್ನು ಅತ್ಯಂತ ಪ್ರೀತಿಯಿಂದ ಮನಸ್ಸಿಗೆ ಒಪ್ಪುವಂತೆ ಮಾಡಿ ಸ್ಪರ್ಧೆಯನ್ನು ಆಯೋಜನೆ ಮಾಡುವ ಮೂಲಕ ಗಮನ ಸೆಳೆದಿದೆ. ವಿವಿಧ ವೇಷಭೂಷಣ ಹುಲಿಯ ಅವತಾರಗಳು, ಕುಣಿತಾ, ಟಸ್ಸೆ ಎಲ್ಲವೂ ಗಮನ ಸೆಳೆದಿದೆ.
ಚಿಕ್ಕ ಮಕ್ಕಳಿಗೆ ರಜೆ ಕಾರಣ ಅನೇಕ ಮಕ್ಕಳು ಹುಲಿವೇಷ ಹಾಕಿಕೊಂಡು ಕಲೆಯ ಪ್ರದರ್ಶನವನ್ನು ಮಾಡುತ್ತಿರುವಂಥದ್ದು ಕಂಡು ಬರುತ್ತಿದೆ. ಒಟ್ಟಿನಲ್ಲಿ ಈ ಕಲೆಗೆ ನಾವೆಲ್ಲರೂ ಗೌರವಿಸಬೇಕಾಗಿದೆ.

 

 

 

Categories
Uncategorized ಉಡುಪಿ ಕರಾವಳಿ ಕಾರ್ಕಳ ದಕ್ಷಿಣ ಕನ್ನಡ ಪುತ್ತೂರು ಮಂಗಳೂರು ಮುಲ್ಕಿ

ಕ್ರೈಸ್ಟ್ ಕಿಂಗ್ ವಿದ್ಯಾರ್ಥಿಗಳಿಗೆ ಅಗ್ನಿಶಮನ ಪ್ರಾತ್ಯಕ್ಷಿಕೆ ಕಾರ್ಯಕ್ರಮ

ಕ್ರೈಸ್ಟ್ ಕಿಂಗ್ ವಿದ್ಯಾರ್ಥಿಗಳಿಗೆ ಅಗ್ನಿಶಮನ ಪ್ರಾತ್ಯಕ್ಷಿಕೆ ಕಾರ್ಯಕ್ರಮ
– ರಾಷ್ಟ್ರೀಯ ಸೇವಾ ಯೋಜನೆಯ ಅಡಿಯಲ್ಲಿ ಮಾಹಿತಿ
– ಅಗ್ನಿಶಮನ ವಿಧಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು

NAMMUR EXPRESS NEWS
ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆಯ ಪ್ರಯುಕ್ತ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ ಅಗ್ನಿಶಮನ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

 

ಕಾರ್ಕಳ ಅಗ್ನಿಶಾಮಕ ಠಾಣೆಯ ಅಧಿಕಾರಿ ಅಲ್ಬರ್ಟ್ ಮೋನಿಸ್ ಸಂಪನ್ಮೂಲ ವ್ಯಕ್ತಿಗಳಾಗಿದ್ದು ಅಗ್ನಿಶಮನ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಸಂಸ್ಥೆಯ ಹೊರಾವರಣದಲ್ಲಿ ಅಗ್ನಿಶಮನ ಪ್ರಾತ್ಯಕ್ಷಿಕೆ ನಡೆಯಿತು. ಈ ಸಂದರ್ಭದಲ್ಲಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ವರ್ಗದವರು, ಸಂಸ್ಥೆಯ ಪ್ರಾಚಾರ್ಯರು ಉಪಸ್ಥಿತರಿದ್ದರು. ನಂತರ ಸೇವಾ ಯೋಜನೆಯ ಸದಸ್ಯರು ಸ್ಥಳೀಯ ಪರಿಸರ ಸ್ವಚ್ಚತಾ ಕಾರ್ಯ ಕೈಗೊಂಡರು. ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ವಾಣಿಜ್ಯಶಾಸ್ತ ಉಪನ್ಯಾಸಕಿ ಶ್ರೀಮತಿ ಸುಕನ್ಯಾ,ಉಪನ್ಯಾಸಕ ದೀಪಕ್ ಕಾರ್ಯಕ್ರಮ ಸಂಘಟಿಸಿದ್ದರು.

Categories
ಉಡುಪಿ ಕರಾವಳಿ ಕಾರ್ಕಳ ದಕ್ಷಿಣ ಕನ್ನಡ ಬೆಳ್ತಂಗಡಿ ಮಂಗಳೂರು

ಕರಾವಳಿ ಕಂಬಳ ರಂಗು!

ಕರಾವಳಿ ಕಂಬಳ ರಂಗು!
– ಕರಾವಳಿ ಕಂಬಳದ ವೇಳಾಪಟ್ಟಿ 2025-2026
– ನ.15ರಿಂದ ಏಪ್ರಿಲ್ 15ರವರೆಗೆ ಕಂಬಳ

NAMMUR EXPRESS NEWS
ಕರಾವಳಿಯಲ್ಲಿ ಕಂಬಳ ಸಂಭ್ರಮಕ್ಕೆ ಇದೀಗ ದಿನಗಣನೆ ಶುರುವಾಗಿದೆ. ಕರಾವಳಿ ಕಂಬಳದ ವೇಳಾಪಟ್ಟಿ 2025-2026 ಬಿಡುಗಡೆಗೊಂಡಿದೆ.

ಯಾವತ್ತು ಎಲ್ಲೆಲ್ಲಿ ಕಂಬಳ? ಇಲ್ಲಿದೆ ಮಾಹಿತಿ

ನವೆಂಬರ್ 15 ಪಣಪಿಲ
ನವೆಂಬರ್ 22 ಕೊಡಂಗೆ
ನವೆಂಬರ್ 29 ಕಕ್ಯಪದವು
ಡಿಸೆಂಬರ್ 06 ಹೊಕ್ಕಾಡಿ
ಡಿಸೆಂಬರ್ 07 ಬಳ್ಳಮಂಜ
ಡಿಸೆಂಬರ್ 13 ಬಾರಾಡಿ
ಡಿಸೆಂಬರ್ 20 ಮೂಲ್ಕಿ
ಡಿಸೆಂಬರ್ 27 ಮಂಗಳೂರು
ಜನವರಿ 03 ಮಿಯ್ಯಾರು
ಜನವರಿ 10 ನರಿಂಗಾಣ
ಜನವರಿ 17 ಅಡ್ವೆ
ಜನವರಿ 24 ಮೂಡಬಿದಿರೆ
ಜನವರಿ 31 ಐಕಳ
ಫೆಬ್ರವರಿ 07 ಪುತ್ತೂರು
ಫೆಬ್ರವರಿ 14 ಜೆಪ್ಪು
ಫೆಬ್ರವರಿ 21 ವಾಮಂಜೂರು
ಫೆಬ್ರವರಿ 28 ಎರ್ಮಾಳು
ಮಾರ್ಚ್ 07 ಬಂಟ್ವಾಳ
ಮಾರ್ಚ್ 15 ಬಂಗಾಡಿ
ಮಾರ್ಚ್ 21 ವೇಣೂರು
ಮಾರ್ಚ್ 28 ಉಪ್ಪಿನಂಗಡಿ
ಏಪ್ರಿಲ್ 04 ಗುರುಪುರ
ಏಪ್ರಿಲ್ 11 ಬಲ್ಕುoಜೆ
ಏಪ್ರಿಲ್ 18 ಹರೇಕಳ
ಏಪ್ರಿಲ್ 25 ಬಡಗಬೆಟ್ಟು

Categories
Uncategorized ಉಡುಪಿ ಕರಾವಳಿ ಕಾರ್ಕಳ ದಕ್ಷಿಣ ಕನ್ನಡ ಪುತ್ತೂರು ಮಂಗಳೂರು ಮುಲ್ಕಿ

ಶಿರ್ಲಾಲು ಹಟ್ಟಿಯಿಂದ ಮೂರು ದನ ಕದ್ದೊಯ್ದ ಕಳ್ಳರು

ಶಿರ್ಲಾಲು ಹಟ್ಟಿಯಿಂದ ಮೂರು ದನ ಕದ್ದೊಯ್ದ ಕಳ್ಳರು

ಕಾರ್ಕಳ : ಶಿರ್ಲಾಲು ಬಳಿ ಮಹಿಳೆಯೋರ್ವರ ಮನೆಯ ಹಟ್ಟಿಯಿಂದ ಮೂರು ದನಗಳನ್ನು ಕದ್ದೊಯ್ದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಶಿರ್ಲಾಲು ಗ್ರಾಮದ ಜಯಶ್ರೀ ಎಂಬುವರ ಮನೆಯ ಹಟ್ಟಿಗೆ ನುಗ್ಗಿದ ದನ ಕಳ್ಳರು, ಮಹಿಳೆಗೆ ಮಾರಕಾಯುಧ ತೋರಿಸಿ ಮೂರು ದನಗಳನ್ನು ಕಳ್ಳತನ ಮಾಡಿದ ಘಟನೆ ಸಂಭವಿಸಿದೆ.
ಈ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದು, ಕಳೆದ 3 ವರ್ಷಗಳ ಹಿಂದೆ ಕೂಡಾ ಈ ಮನೆಯಿಂದ ದನ ಕಳ್ಳತನ ಮಾಡಲಾಗಿತ್ತು ಎನ್ನಲಾಗಿದೆ.

Categories
ಉಡುಪಿ ಕರಾವಳಿ ಚಿಕ್ಕಮಗಳೂರು ಜ್ಯೋತಿಷ್ಯ ತೀರ್ಥಹಳ್ಳಿ ದಕ್ಷಿಣ ಕನ್ನಡ ಬೆಂಗಳೂರು ಮಂಗಳೂರು ಮಲ್ನಾಡ್ ರಾಜ್ಯ ಶಿವಮೊಗ್ಗ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಮೇಷ ರಾಶಿಯವರಿಗೆ ಇಂದು ನಿಮಗೆ ತುಂಬಾ ಶುಭ ದಿನವಾಗಲಿದೆ. ವೃತ್ತಿಯಲ್ಲಿ ಉನ್ನತಿಗೆ ಹಲವು ಅವಕಾಶಗಳು ದೊರೆಯಲಿವೆ. ಕುಟುಂಬದ ಸಲಹೆಗಳನ್ನು ನಿರ್ಲಕ್ಷಿಸಬೇಡಿ. ಇದು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಬೆಳವಣಿಗೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಇಂದು ನೀವು ಯಾವುದೇ ಹಳೆಯ ಹೂಡಿಕೆಯಿಂದ ಉತ್ತಮ ಆದಾಯವನ್ನು ಪಡೆಯಬಹುದು. ಅದೇ ಸಮಯದಲ್ಲಿ, ಹೊಸ ಪಾಲುದಾರಿಕೆಗಳು ವ್ಯಾಪಾರ ಮಾಡುವ ಜನರನ್ನು ಆಕರ್ಷಿಸಬಹುದು.

** ವೃಷಭ ರಾಶಿ :
ಇಂದು ನೀವು ಆರ್ಥಿಕ ಲಾಭವನ್ನು ಪಡೆಯಬಹುದು. ಅನಗತ್ಯ ಒತ್ತಡವನ್ನು ತೆಗೆದುಕೊಳ್ಳಬೇಡಿ. ನಿಮ್ಮ ಸ್ವಂತ ಅಗತ್ಯಗಳ ಮೇಲೆ ಕೇಂದ್ರೀಕರಿಸಿ. ಹಣದ ವಿಚಾರದಲ್ಲಿ ನಿಮ್ಮ ಸಂಗಾತಿಯಿಂದ ಸಲಹೆ ಪಡೆಯುವುದು ಒಳ್ಳೆಯದು.. ಆದಾಯವನ್ನು ಹೆಚ್ಚಿಸಿಕೊಳ್ಳಲು ಹಲವು ಸುವರ್ಣಾವಕಾಶಗಳಿರುತ್ತವೆ. ಕೆಲಸದ ನಿಮಿತ್ತ ಪ್ರಯಾಣ ಮಾಡುವ ಅವಕಾಶವಿರುತ್ತದೆ. ವ್ಯಾಪಾರದಲ್ಲಿ ವಿಸ್ತರಣೆಯಾಗಲಿದೆ.

** ಮಿಥುನ ರಾಶಿ :
ಇಂದು ನಿಮಗೆ ಉತ್ತಮ ದಿನವಾಗಿದೆ. ನೀವು ಯಾರಿಗಾದರೂ ಆರ್ಥಿಕವಾಗಿ ಸಹಾಯ ಮಾಡಬೇಕಾಗಬಹುದು. ವಿಪರೀತ ಖರ್ಚುಗಳಿಂದ ಮನಸ್ಸು ತೊಂದರೆಗೊಳಗಾಗುತ್ತದೆ. ಕಚೇರಿಯಲ್ಲಿ ಕೆಲಸಕ್ಕಾಗಿ ನೀವು ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಇದರಿಂದಾಗಿ ಒತ್ತಡ ಸ್ವಲ್ಪ ಹೆಚ್ಚಾಗಬಹುದು. ಇಂದು ನೀವು ರಜೆಯನ್ನು ಸಹ ಯೋಜಿಸಬಹುದು. ಹೂಡಿಕೆ ನಿರ್ಧಾರಗಳನ್ನು ಚಿಂತನಶೀಲವಾಗಿ ತೆಗೆದುಕೊಳ್ಳಿ.

** ಕರ್ಕಾಟಕ ರಾಶಿ :
ಇಂದು ನಿಮ್ಮ ಆರ್ಥಿಕ ಪರಿಸ್ಥಿತಿಯು ಬಲವಾಗಿರುತ್ತದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ನೀವು ಮನೆಯನ್ನು ರಿಪೇರಿ ಮಾಡಲು ಯೋಜಿಸಬಹುದು. ಇಂದು ಕೆಲವು ಜನರು ತಮ್ಮ ಕುಟುಂಬದೊಂದಿಗೆ ಎಲ್ಲೋ ಪ್ರಯಾಣಿಸಲು ಯೋಜಿಸಬಹುದು. ಪೂರ್ವಿಕರ ಆಸ್ತಿಯಿಂದ ಆರ್ಥಿಕ ಲಾಭವಾಗಲಿದೆ. ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

** ಸಿಂಹ ರಾಶಿ :
ಸಿಂಹ ರಾಶಿಯ ಜನರಿಗೆ ಇಂದು ಆರ್ಥಿಕ ಲಾಭದ ಸಾಧ್ಯತೆಗಳಿವೆ. ದೊಡ್ಡ ಬದಲಾವಣೆಗಳಿಗೆ ಸಿದ್ಧರಾಗಿ. ಕಾರ್ಯಕ್ಕೆ ಮೆಚ್ಚುಗೆ ದೊರೆಯಲಿದೆ. ನಿಮ್ಮ ಆಹಾರಕ್ರಮವನ್ನು ಆರೋಗ್ಯಕರವಾಗಿರಿಸಿಕೊಳ್ಳಿ. ದೈಹಿಕ ಆರೋಗ್ಯದ ಕಡೆ ಗಮನ ಕೊಡಿ. ಇಂದು ಚಿಂತನಶೀಲವಾಗಿ ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯದಲ್ಲಿ ಪ್ರಯೋಜನಕಾರಿಯಾಗುತ್ತವೆ.

** ಕನ್ಯಾ ರಾಶಿ :
ಇಂದು ನಿಮಗೆ ಶುಭ ದಿನವಾಗಲಿದೆ. ಹಳೆಯ ಹೂಡಿಕೆಗಳಿಂದ ಆರ್ಥಿಕ ಲಾಭವಿದೆ. ವೃತ್ತಿ ಜೀವನದಲ್ಲಿ ಪ್ರಗತಿಗೆ ಹಲವು ಅವಕಾಶಗಳು ದೊರೆಯಲಿವೆ. ವೃತ್ತಿಯಲ್ಲಿ ಹೊಸ ಸಾಧನೆಗಳನ್ನು ಸಾಧಿಸುವಿರಿ. ಕೆಲವರು ಕುಟುಂಬ ಅಥವಾ ಸ್ನೇಹಿತರೊಂದಿಗೆ ವಿಹಾರಕ್ಕೆ ಯೋಜಿಸಬಹುದು. ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ.

** ತುಲಾ ರಾಶಿ :
ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ನೀವು ಎಲ್ಲಾ ಕ್ಷೇತ್ರಗಳಲ್ಲಿ ಅಪೇಕ್ಷಿತ ಯಶಸ್ಸನ್ನು ಪಡೆಯುತ್ತೀರಿ. ಕೆಲಸದ ನಿಮಿತ್ತ ಪ್ರಯಾಣ ಮಾಡುವ ಅವಕಾಶವಿರುತ್ತದೆ. ಹಳೆಯ ಆಸ್ತಿ ಮಾರಾಟದಲ್ಲಿ ಯಶಸ್ವಿಯಾಗುವಿರಿ. ಹಣದ ಒಳಹರಿವು ಹೆಚ್ಚಾಗುತ್ತದೆ. ಇಂದು ಕಚೇರಿಯಲ್ಲಿ ಸ್ಪರ್ಧಾತ್ಮಕ ವಾತಾವರಣವಿರುತ್ತದೆ. ಕೆಲವರಿಗೆ ದೀರ್ಘಕಾಲದ ಕಾಯಿಲೆಯಿಂದ ಮುಕ್ತಿ ಸಿಗುತ್ತದೆ.

** ವೃಶ್ಚಿಕ ರಾಶಿ :
ಇಂದು ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ. ಆದರೆ ಕೌಟುಂಬಿಕ ಜವಾಬ್ದಾರಿಗಳೂ ಹೆಚ್ಚಾಗುತ್ತವೆ. ನೀವು ಕುಟುಂಬದೊಂದಿಗೆ ಪ್ರವಾಸವನ್ನು ಯೋಜಿಸಬಹುದು. ಇಂದು ನೀವು ಪೂರ್ವಜರ ಆಸ್ತಿಯನ್ನು ಆನುವಂಶಿಕವಾಗಿ ಪಡೆಯಬಹುದು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ.

** ಧನಸ್ಸು ರಾಶಿ :
ಧನು ರಾಶಿಯ ಜನರಿಗೆ ಇಂದು ನಿಮ್ಮ ದೈಹಿಕ ಆರೋಗ್ಯದ ಕಡೆ ಗಮನ ಕೊಡಿ. ಹೊಸ ಫಿಟ್‌ನೆಸ್ ದಿನಚರಿಯಲ್ಲಿ ತೊಡಗಿಸಿಕೊಳ್ಳಿ. ಪ್ರತಿದಿನ ಯೋಗ ಮತ್ತು ವ್ಯಾಯಾಮ ಮಾಡಿ. ವೃತ್ತಿಪರ ಜೀವನದಲ್ಲಿ ನೀವು ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಕುಟುಂಬದೊಂದಿಗೆ ವಿಹಾರಕ್ಕೆ ಹೋಗಬಹುದು.

** ಮಕರ ರಾಶಿ :
ಇಂದು ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ಇಂದು ಅನೇಕ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ. ವೃತ್ತಿಪರ ಜೀವನದಲ್ಲಿ ನೀವು ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ನೀವು ಸ್ನೇಹಿತರೊಂದಿಗೆ ಎಲ್ಲೋ ಪ್ರಯಾಣಿಸಲು ಯೋಜಿಸಬಹುದು. ಮನೆಯಲ್ಲಿ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಲು ಸಾಧ್ಯವಿದೆ.

** ಕುಂಭ ರಾಶಿ :
ಇಂದು ಹೊಸ ಯೋಜನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹಿಂಜರಿಯದಿರಿ. ಇದು ವೃತ್ತಿಜೀವನದ ಬೆಳವಣಿಗೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಾರೆ. ಜೀವನದಲ್ಲಿ ಶಕ್ತಿ ಮತ್ತು ಉತ್ಸಾಹದ ವಾತಾವರಣ ಇರುತ್ತದೆ. ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ. ಪ್ರತಿದಿನ ಯೋಗ ಮತ್ತು ವ್ಯಾಯಾಮ ಮಾಡಿ.

** ಮೀನ ರಾಶಿ :
ಇಂದು ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತೀರಿ. ನಿಮ್ಮ ಕಾರ್ಯನಿರ್ವಹಣೆಯಿಂದ ಕಛೇರಿಯಲ್ಲಿ ನಿಮ್ಮ ಬಾಸ್ ಸಂತಸಪಡುತ್ತಾರೆ. ಕುಟುಂಬದೊಂದಿಗೆ ಮೋಜಿನ ಕ್ಷಣಗಳನ್ನು ಆನಂದಿಸುವಿರಿ. ಪ್ರೇಮ ಜೀವನ ಚೆನ್ನಾಗಿರುತ್ತದೆ. ಸಂಬಂಧಗಳಲ್ಲಿ ಪ್ರೀತಿ ಮತ್ತು ವಿಶ್ವಾಸ ಹೆಚ್ಚಾಗುತ್ತದೆ.

Categories
ಕರಾವಳಿ ಕಾರ್ಕಳ ಕುಂದಾಪುರ ದಕ್ಷಿಣ ಕನ್ನಡ ಪುತ್ತೂರು ಬೆಳ್ತಂಗಡಿ ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

* ಉಡುಪಿ: ಸಾಲಕೇಳಿ 4 ಲಕ್ಷ ಕಳೆದುಕೊಂಡ ಯುವತಿ!
* ಬಂಟ್ವಾಳ: ಪೊಲೀಸರಿಂದ ತಪ್ಪಿಸಿಕೊಂಡ ಗಾಂಜಾ ಮಾರಾಟಗಾರರು
* ಪುತ್ತೂರು: ಡಿವೈಡರ್ ಏರಿ ಬಂದ ಕಾರು: ಏನಾಯ್ತು ಘಟನೆ!
* ಕಡಬ: ಅರಣ್ಯ ಪ್ರದೇಶ ಒತ್ತುವರಿ; ಅರಣ್ಯ ಅಧಿಕಾರಿಗಳಿಂದ ತೆರವು.

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಮಣಿಪಾಲದ ಬೇಬಿ ನಾಯಕ್ ಎನ್ನುವ ಮಹಿಳೆಗೆ, ಕಳೆದೆರಡು ದಿನಗಳ ಹಿಂದೆ ಕರೆಯೊಂದು ಬಂದಿದ್ದು, ಕರೆಯನ್ನು ಸ್ವೀಕರಿಸಿ ಇಟ್ಟ ಕೆಲವೇ ಹೊತ್ತಿನಲ್ಲಿ ಆ್ಯಪ್ ವೊಂದು ಇನ್ ಸ್ಟಾಲ್ ಆಗಿದೆ. ತಕ್ಷಣ ಅಪರಿಚಿತ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಎಂದು ಬಂದಿದ್ದು, ಬೇಬಿ ಅವರ ಬ್ಯಾಂಕ್ ಖಾತೆಯಿಂದ ನೋಡು ನೋಡುತ್ತಿದ್ದಂತೆ ಹಂತಹಂತವಾಗಿ 4,31,697 ರೂಪಾಯಿ ಬೇರೊಂದು ಖಾತೆಗೆ ವರ್ಗಾವಣೆಯಾಗಿದೆ. ಕರೆ ಮಾಡಿದವರು ಮೊದಲಿಗೆ ಐಸಿಐಸಿಐ ಬ್ಯಾಂಕ್ ನ ಹೆಸರಿನಲ್ಲಿ ಕ್ರೆಡಿಟ್ ಕೊಡುವುದಾಗಿ ನಂಬಿಸಿದರು, ಎಂದು ಬೇಬಿ ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಣಿಪಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಬಂಟ್ವಾಳ: ಪೊಲೀಸರಿಂದ ತಪ್ಪಿಸಿಕೊಂಡ ಗಾಂಜಾ ಮಾರಾಟಗಾರರು

ಬಂಟ್ವಾಳ: ಗಾಂಜಾವನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ಸಂದರ್ಭದಲ್ಲಿ, ಪೊಲೀಸರನ್ನು ಕಂಡ ಆರೋಪಿಗಳು ವಾಹನವನ್ನು ಸ್ಥಳದಲ್ಲೇ ಬಿಟ್ಟು, ಪರಾರಿಯಾದ ಘಟನೆ ನಂದಾವರ ರೈಲ್ವೆ ಹಳಿಯ ಬಳಿ ನಡೆದಿದೆ. ಮಂಗಳೂರು ಭಾಗದಿಂದ ಬರುತ್ತಿರುವ ಬೊಲೆರೋ ವಾಹನದಲ್ಲಿ ಅಕ್ರಮವಾಗಿ ಗಾಂಜಾವನ್ನು ಸಾಗಿಸಲಾಗುತ್ತಿದೆ ಎನ್ನುವ ಮಾಹಿತಿ ಬಂದ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಅಬಕಾರಿ ಇಲಾಖೆಯ ಉಪ ಆಯುಕ್ತರ ನಿರ್ದೇಶನದಂತೆ, ಬಂಟ್ವಾಳದ ಅಬಕಾರಿ ಇನ್ಸ್ಪೆಕ್ಟರ್ ಆಗಿರುವ ಲಕ್ಷ್ಮಣ್ ಅವರು ಕಾರ್ಯಪ್ರವೃತ್ತರಾದರು. ಲಕ್ಷ್ಮಣ್ ಅವರು ಆ ಮಾರ್ಗದಲ್ಲಿ ಬರುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ, ಗಾಂಜಾವನ್ನು ಸಾಗಿಸುತ್ತಿದ್ದ ವಾಹನವನ್ನು, ಆರೋಪಿಯಾಗಿರುವ ಚಾಲಕನು ಪೊಲೀಸರು ತಡೆದರೂ ನಿಲ್ಲಿಸದೆ, ಅಜಾಗರೂಕತೆಯಿಂದ ಅತ್ಯಂತ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ. ಕೂಡಲೇ ಅಬಕಾರಿ ತಂಡವು ಬೊಲೆರೋವನ್ನು ಬೆನ್ನತ್ತಿದರೂ, ಆರೋಪಿಯು ಪಾಣೆಮಂಗಳೂರು ಹಳೆ ಸೇತುವೆಯ ಮಾರ್ಗವಾಗಿ ತೆರಳಿ, ನಂದಾವರ ರೈಲ್ವೆ ಹಳಿಯ ಬಳಿ ಖಾಲಿ ಜಾಗವೊಂದರಲ್ಲಿ ನಿಲ್ಲಿಸಿ, ನಾಪತ್ತೆಯಾಗಿದ್ದಾನೆ. ಆರೋಪಿಯ ವಿರುದ್ಧ ಪೊಲೀಸರು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

* ಪುತ್ತೂರು: ಡಿವೈಡರ್ ಏರಿ ಬಂದ ಕಾರು

ಪುತ್ತೂರು: ಕಾಣಿಯೂರು ಕಡೆಯಿಂದ ಬರುತ್ತಿದ್ದ ಸ್ವಿಫ್ಟ್ ಕಾರೊಂದು, ಎದುರಿಗೆ ಬರುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡೆದು, ಡಿವೈಡರ್ ಏರಿ, ದೇವರ ಕಟ್ಟೆಗೆ ಬಡಿದ ಘಟನೆ ದರ್ಬೆಯ ಅಶ್ವತ್ಥ ಕಟ್ಟೆಯ ಬಳಿ ಶುಕ್ರವಾರ ನಡೆದಿದೆ. ಇದರ ಪರಿಣಾಮವಾಗಿ ಬೈಕ್ ನಲ್ಲಿದ್ದ ಇಬ್ಬರಿಗೆ ಮತ್ತು ಕಾರಿನಲ್ಲಿದ್ದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

* ಕಡಬ: ಅರಣ್ಯ ಪ್ರದೇಶ ಒತ್ತುವರಿ; ಅರಣ್ಯ ಅಧಿಕಾರಿಗಳಿಂದ ತೆರುವು

ಕಡಬ: ಮೇಲ್ಮನವಿ ಪ್ರಾಧಿಕಾರ ಮತ್ತು ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ವೃತ್ತದ ಆದೇಶದ ಮೇರೆಗೆ, ಅರಣ್ಯ ಇಲಾಖೆಗೆ ಸಂಬಂಧಿಸಿದ ಪ್ರದೇಶವನ್ನು ಕಡಬ ತಾಲ್ಲೂಕಿನ ಏನೆಕಲ್ಲು ಗ್ರಾಮದಲ್ಲಿ ಅತಿಕ್ರಮಿಸಿರುವುದನ್ನು ಶುಕ್ರವಾರ ತೆರುವುಗೊಳಿಸಲಾಯಿತು. ಇಲ್ಲಿನ ಕುಮಾರ್ ಎಂಬ ವ್ಯಕ್ತಿಯು 1.44 ಎಕರೆ ಮೀಸಲು ಅರಣ್ಯ ಪ್ರದೇಶವನ್ನು ಅತಿಕ್ರಮಿಸಿಕೊಂಡು ಕಟ್ಟಡ ಕೃಷಿ ಮಾಡಿರುವ ಕುರಿತು, ವ್ಯಕ್ತಿಯೊಬ್ಬರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತರು ತನಿಖೆ ನಡೆಸಿ, ಅರಣ್ಯ ಇಲಾಖೆಗೆ ಸೂಚನೆ ನೀಡಿದರು. ಮಂಗಳೂರು ವೃತ್ತ ಸಿಸಿಎಫ್ ಅವರ ಆದೇಶದಂತೆ ಸುಳ್ಯ ಎಸಿಎಫ್, ಪಂಜಾ ವಲಯದ ಅರಣ್ಯಾಧಿಕಾರಿಗಳು ದೂರಿನ ಬಗ್ಗೆ ತನಿಖೆ ನಡೆಸಿ ವರದಿಯನ್ನು ಸಲ್ಲಿಸಿದರು. ಇದಕ್ಕೆ ಸಂಬಂಧಿಸಿದಂತೆ ಕುಮಾರ್ ಅವರಿಗೆ ಅರಣ್ಯ ಇಲಾಖೆಗೆ ಏಳು ದಿನಗಳ ಒಳಗಾಗಿ ಜಾಗವನ್ನು ಬಿಟ್ಟು ಕೊಡುವಂತೆ ಸೂಚಿಸಲಾಗಿತ್ತು. ಅವರು ಬಿಟ್ಟುಕೊಡದಿದ್ದಲ್ಲಿ ಪಂಜಾ ವಲಯದ ಅರಣ್ಯಾಧಿಕಾರಿಗಳು ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸಿಸಿಎಫ್ ಆದೇಶ ನೀಡಿತ್ತು. ಈ ಕಾರಣದಿಂದ ಶುಕ್ರವಾರ ಅಧಿಕಾರಿಗಳು ಕಾರ್ಯಾಚರಣೆಯನ್ನು ನಡೆಸಿದರು.

Categories
ಉಡುಪಿ ಕರಾವಳಿ ಕಾರ್ಕಳ ದಕ್ಷಿಣ ಕನ್ನಡ ಬೆಳ್ತಂಗಡಿ ಮಂಗಳೂರು ಮುಲ್ಕಿ

ಕ್ರೈಸ್ಟ್ ಕಿಂಗ್ : ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮ

ಕ್ರೈಸ್ಟ್ ಕಿಂಗ್ : ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮ
– ಜೀವ ವಿಮೆಯ ವಿಧಗಳು ಮತ್ತು ಅಗತ್ಯತೆ ಕಾರ್ಯಕ್ರಮ
– ಆಧುನಿಕ ಕಾಲಘಟ್ಟದಲ್ಲಿ ನೆಮ್ಮದಿಯ ಜೀವನಕ್ಕೆ ಜೀವವಿಮೆ ಅಗತ್ಯ :ಅಶ್ವಿತ್ ನಾಯ್ಕ್

NAMMUR EXPRESS NEWS
ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಜೀವ ವಿಮೆಯ ವಿಧಗಳು ಮತ್ತು ಅವುಗಳ ಅಗತ್ಯತೆಯ ಕುರಿತು ಉಪನ್ಯಾಸ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಾರತೀಯ ಜೀವವಿಮಾ ನಿಗಮದ ಬಂಟ್ವಾಳ ವಿಭಾಗದ ಅಭಿವೃದ್ಧಿ ಅಧಿಕಾರಿ ಅಶ್ವಿತ್ ನಾಯ್ಕ್ ಅವರು ಸಂಪನ್ಮೂಲ ಅಧಿಕಾರಿಗಳಾಗಿದ್ದರು. ಅವರು ಮಾತನಾಡಿ “ಆಧುನಿಕ ಕಾಲಘಟ್ಟದಲ್ಲಿ ನೆಮ್ಮದಿಯ ಜೀವನಕ್ಕೆ ಜೀವವಿಮೆಗಳು ಅಗತ್ಯವಾಗಿದ್ದು, ವಿಮೆ ಮಾಡಿಸುವ ಮೊದಲು ಅದರ ನಿಯಮ ನಿಬಂಧನೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ವಿಮಾಕ್ಷೇತ್ರದಲ್ಲಿ ಪೂರ್ಣಕಾಲಿಕ, ಅರೆಕಾಲಿಕ ಮುಂತಾದ ಅನೇಕ ಉದ್ಯೋಗಾವಕಾಶಗಳಿದ್ದು ವಿದ್ಯಾರ್ಥಿಗಳು ಉದ್ಯೋಗಕ್ಷೇತ್ರ ಪ್ರವೇಶಿಸುವಾಗ ಇವುಗಳನ್ನು ಬಳಸಿಕೊಳ್ಳಬೆಕು” ಎಂದು ಹೇಳಿ ವಿಮಾ ಕ್ಷೇತ್ರದ ಸಂಪೂರ್ಣ ಮಾಹಿತಿ ನೀಡಿದರು. ಸಂಸ್ಥೆಯ ಉಪಪ್ರಾಚಾರ್ಯ ಡಾ.ಪ್ರಕಾಶ್ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಶ್ರೇಯಾ ಸ್ವಾಗತಿಸಿ ಲೆರಿಕ್ ವಂದಿಸಿದರು. ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು.

Categories
Uncategorized ಉಡುಪಿ ಕರಾವಳಿ ಕಾರ್ಕಳ ದಕ್ಷಿಣ ಕನ್ನಡ ಪುತ್ತೂರು ಬೆಳ್ತಂಗಡಿ ಮಂಗಳೂರು ಮುಲ್ಕಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

•ಬೆಳ್ತಂಗಡಿ: ಬುರುಡೆ ಭಾವಚಿತ್ರ ಬಯಲು!
* ಉಡುಪಿ: ಡಿವೈಡರ್ ಏರಿ ಬೈಕ್ ಗೆ ಡಿಕ್ಕಿ ಹೊಡೆದ ಟಿಪ್ಪರ್
* ಮಂಗಳೂರು: ಮಾದಕ ದ್ರವ್ಯ ಅಫೀಮು ಮಾರಾಟಗಾರರ ಬಂಧನ
* ಪುತ್ತೂರು: ಲಂಚ ಸ್ವೀಕರಿಸಿದ ತಹಶೀಲ್ದಾರ್ ಜಾಮೀನು ನಿರಾಕರಣೆ
* ಕಾಪು: ಸ್ಕೂಟಿಗೆ ಅಡ್ಡ ಬಂದ ನಾಯಿ; ಮಗು ಮತ್ತು ತಾಯಿಗೆ ಗಾಯ
* ಕುಂದಾಪುರ: ತೋಡಿಗೆ ಕಾಲು ಜಾರಿ ಬಿದ್ದು ಕಾರ್ಮಿಕನ ಸಾವು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಗುರುವಾರ ಬೆಳಿಗ್ಗೆ ನಡೆದ ಭಯಾನಕ ಅಪಘಾತದ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ. ಟಿಪ್ಪರ್ ವೊಂದು ರಸ್ತೆಯಲ್ಲಿದ್ದ ಡಿವೈಡರ್ ಅನ್ನು ಭೇದಿಸಿ, ಅದರ ಮೇಲಿಂದ ಏರಿ ಬಂದು, ರಸ್ತೆ ಬದಿಯಲ್ಲಿ ನಿಲ್ಲಿಸಿದ ಬೈಕ್ ಗೆ ಢಿಕ್ಕಿ ಹೊಡೆದ ಘಟನೆ ಗುಂಡಿಬೈಲಿನ ಹತ್ತಿರ ನಡೆದಿದೆ. ಮಣ್ಣು ತುಂಬಿದ ಟಿಪ್ಪರ್ ವೊಂದು ಮಣಿಪಾಲದಿಂದ ಅಂಬಾಗಿಲಿನತ್ತ ಬರುತ್ತಿದ್ದ ಸಂದರ್ಭದಲ್ಲಿ, ಟಿಪ್ಪರ್ ನಲ್ಲಿ ತಾಂತ್ರಿಕ ದೋಷ ಎದುರಾದ ಹಿನ್ನೆಲೆಯಲ್ಲಿ, ನಿಯಂತ್ರಣ ತಪ್ಪಿ ದಾರಿ ಬದಲಾಗಿದೆ. ಇದರ ಪರಿಣಾಮವಾಗಿ ಅಂಬಾಗಿಲಿನಿಂದ ಉಡುಪಿಯತ್ತ ತೆರಳುತ್ತಿದ್ದ, ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಬೈಕ್ ಸವಾರ ಮಲ್ಪೆಯ ಗಣೇಶ್ ಕರ್ಕೆರ ಮತ್ತು ಅವರ ಜೊತೆಗಿದ್ದ ಗಜೇಂದ್ರ ಅವರು ಗಾಯಗೊಂಡಿದ್ದು, ಇಬ್ಬರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂದರ್ಭದಲ್ಲಿ ಬೈಕ್ ನ ಹಿಂದೆ ಇದ್ದ ಆಟೋಗೆ ಕೂಡ ಸ್ವಲ್ಪ ಹಾನಿಯಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.
ಇದೇ ರೀತಿ ಟಿಪ್ಪರ್ ಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ 66ರ, ಕಾಮತ್ ಪೆಟ್ರೋಲ್ ಬಂಕ್ ಸಮೀಪ ಮತ್ತೊಂದು ಅಪಘಾತ ಸಂಭವಿಸಿದ್ದು, ವ್ಯವಸಾಯಿಕ ಸಹಕಾರ ಸಂಘದ ಹಳೆಯ ಗೋದಾಮಿನ ಗೋಡೆಗೆ ಹೊಡೆದು ನಿಂತಿದೆ. ಪರಿಣಾಮವಾಗಿ ತನ್ನ ಸ್ನೇಹಿತನೊಂದಿಗೆ ನಡೆದುಕೊಂಡು ಬರುತ್ತಿದ್ದ, ಬಿಹಾರ ಮೂಲದ ಕಾರ್ಮಿಕನಾದ ರಾಜಕುಮಾರ್ ಶರ್ಮ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೊದಲೇ, ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ. ಟಿಪ್ಪರ್ ಚಾಲಕನ ನಿರ್ಲಕ್ಷತನದಿಂದ ಈ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ, ಪೊಲೀಸರು ಆತನನ್ನು ಸೆರೆ ಹಿಡಿದಿದ್ದಾರೆ.‌

* ಬೆಳ್ತಂಗಡಿ: ಬುರುಡೆ ಭಾವಚಿತ್ರ ಬಯಲು

ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿನ್ನಯ್ಯ ವಿಚಾರಣೆಗೆಂದು ನ್ಯಾಯಾಲಯಕ್ಕೆ ಹಾಜರಾಗುವ ಸಂದರ್ಭದಲ್ಲಿ ತಂದಿದ್ದ ಬುರುಡೆಯ ಭಾವಚಿತ್ರ ಇದೀಗ ಸಾರ್ವಜನಿಕವಾಗಿ ಬಯಲಾಗಿದೆ. ಈ ಮೂಲಕ ಜನರಲ್ಲಿ ಮೂಡಿದ್ದ ಚಿನ್ನಯ್ಯ ನ್ಯಾಯಾಲಯಕ್ಕೆ ಬುರುಡೆಯನ್ನು ನೀಡಿದ್ದಾನೆಯೇ ಅಥವಾ ಇಲ್ಲವೇ ಎಂಬ ಕುತೂಹಲ ಮತ್ತು ಅನುಮಾನಗಳಿಗೆ ತೆರೆ ಬಿದ್ದಿದೆ. ಇಷ್ಟು ದಿನ ವಿಚಾರಣೆಯು ಎಸ್ಐಟಿ ಅವರ ತನಿಖೆಯ ಹಂತದಲ್ಲಿದ್ದರಿಂದ, ಭಾವಚಿತ್ರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿರಲಿಲ್ಲ. ಆದರೆ ಗುರುವಾರದಂದು ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯದಲ್ಲಿ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಧೀಶರ ಮುಂದೆ ಹೇಳಿಕೆಯನ್ನು ನೀಡುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಚಿನ್ನಯ್ಯ ಮೊದಲ ಬಾರಿಗೆ ಸಾಕ್ಷಿ ಹೇಳಲು ಬರುವ ವೇಳೆ, ನಾನು ನೂರು ಶವಗಳನ್ನು ಹೂತಿದ್ದೇನೆ ಎನ್ನುವುದರ ಕುರುಹಾಗಿ ಈ ತಲೆಬುರುಡೆಯನ್ನು ತಂದಿದ್ದ ಎನ್ನಲಾಗಿದೆ. ಹೀಗಾಗಿ ತಲೆಬುರುಡೆಯು ದೆಹಲಿ, ಬೆಂಗಳೂರು ಮತ್ತು ಕೇರಳ ಸೇರಿದಂತೆ ಹಲವಾರು ಕಡೆ ರವಾನೆಯಾಗಿತ್ತು ಎಂದು ತಿಳಿಸಿದ್ದಾರೆ.

* ಮಂಗಳೂರು: ಮಾದಕ ದ್ರವ್ಯ ಅಫೀಮು ಮಾರಾಟಗಾರರ ಬಂಧನ

ಮಂಗಳೂರು: ಮಾದಕ ದ್ರವ್ಯವಾದ ಅಫೀಮನ್ನು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಬರ್ಕೆ ಪೊಲೀಸ್ ಉಪನಿರೀಕ್ಷಕರಾದ ವಿನಾಯಕ ತೋರಗಲ್ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಕಳೆದೆರಡು ದಿನಗಳ ಹಿಂದೆ ಕೊಡಿಯಾಲಬೈಲುವಿನ ಭಗವತಿ ನಗರದ ಗುಜರಾತಿ ಶಾಲೆಯ ಹಿಂಭಾಗಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ವಾಸುದೇವ್ ಎನ್ನುವ ವ್ಯಕ್ತಿಯು ಪತ್ತೆಯಾಗಿದ್ದು, ಆತನನ್ನು ವಿಚಾರಿಸಿದಾಗ ಮಂಗಲ್ ಚೌಧರಿ ಎನ್ನುವವನಿಂದ ಖರೀದಿಸಿ ತಂದು, ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದ್ದಾನೆ. ಹೇಳಿಕೆಯ ಆಧಾರದ ಮೇಲೆ ತನಿಖೆ ನಡೆಸಿ ಮಂಗಲ್ ಚೌಧರಿಯನ್ನು ಸಹ ಪತ್ತೆ ಹಚ್ಚಿ, ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಿಬ್ಬರೂ ರಾಜಸ್ಥಾನ ಮೂಲದವರೆಂದು ತಿಳಿದುಬಂದಿದೆ. ಆರೋಪಿಗಳನ್ನು ಬಂಧಿಸಿದ ಬಳಿಕ, ಅವರ ಬಳಿಯಿದ್ದ 9000 ರೂಪಾಯಿ ಮೌಲ್ಯದ 170 ಗ್ರಾಂ ತೂಕವುಳ್ಳ ದ್ರವ ರೂಪದ ಅಫೀಮನ್ನು, 40,000 ರೂಪಾಯಿ ನಗದನ್ನು, ಮೊಬೈಲ್ ಮತ್ತು 50.000 ರೂಪಾಯಿ ಬೆಲೆಬಾಳುವ ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 99.೦೦೦ ರೂಪಾಯಿ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

* ಪುತ್ತೂರು: ಲಂಚ ಸ್ವೀಕರಿಸಿದ ತಹಶೀಲ್ದಾರ್ ಜಾಮೀನು ನಿರಾಕರಣೆ

ಪುತ್ತೂರು: ಲಂಚ ಸ್ವೀಕರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದ ಪುತ್ತೂರಿನ ತಹಶೀಲ್ದಾರ್ ಎಸ್.ಬಿ ಕೂಡಲಗಿಗೆ ಗುರುವಾರದಂದು ನ್ಯಾಯಾಲಯವು ಜಾಮೀನನ್ನು ನಿರಾಕರಿಸಿದೆ. ಜಮೀನಿನ ನಿರಾಕ್ಷೇಪಣಾ ಪತ್ರವನ್ನು ಮಂಜೂರು ಮಾಡಲು, ಕೂಡಲಗಿ ಲಂಚವನ್ನು ಕೇಳಿದ್ದರು. ಆಗ ವ್ಯಕ್ತಿಯೊಬ್ಬರು ಇದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರಿಗೆ ದೂರು ನೀಡಿದ್ದರು. ಕಳೆದ ತಿಂಗಳು ಲೋಕಾಯುಕ್ತರು ತಹಶೀಲ್ದಾರ್ ಕಛೇರಿಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ, ಭೂ ಸುಧಾರಣಾ ಶಾಖೆಯ ಪ್ರಥಮ ದರ್ಜೆ ಸಹಾಯಕ ಸುನಿಲ್ ಕುಮಾರ್ ದೂರು ನೀಡಿದ ವ್ಯಕ್ತಿಯಿಂದ 12,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿದ್ದರು. ವಿಚಾರಣೆಯ ವೇಳೆ ತಹಶೀಲ್ದಾರರಿಗೆ ಹತ್ತು ಸಾವಿರ ರೂಪಾಯಿ ನೀಡಬೇಕು ಎಂದು ಸುನಿಲ್ ಕುಮಾರ್ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸುನಿಲ್ ಕುಮಾರ್ ಮತ್ತು ಕೂಡಲಗಿ ವಿರುದ್ಧ ಭ್ರಷ್ಟಾಚಾರ ನಿರ್ಬಂಧಕ ಕಾಯ್ದೆ 1988 (ತಿದ್ದುಪಡಿ ಕಾಯ್ದೆ 2018) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸುನಿಲ್ ಕುಮಾರ್ ಜಾಮೀನಿನ ಆಧಾರದ ಮೇಲೆ ಬಿಡುಗಡೆಗೊಂಡಿದ್ದು, ಕೂಡಲಗಿ ತಲೆಮರೆಸಿಕೊಂಡಿದ್ದ. ಅಲ್ಲದೆ ನಿರೀಕ್ಷಣ ಜಾಮೀನನ್ನು ಕೋರಿ ಕೂಡಲಗಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಗುರುವಾರ ಇದಕ್ಕೆ ಸಂಬಂಧಿಸಿದಂತೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುನೀತಾ ಎಸ್. ಜೆ .ಅವರು ವಿಚಾರಣೆ ನಡೆಸಿ ಜಾಮೀನನ್ನು ನಿರಾಕರಿಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

* ಕಾಪು: ಸ್ಕೂಟಿಗೆ ಅಡ್ಡ ಬಂದ ನಾಯಿ; ಮಗು ಮತ್ತು ತಾಯಿಗೆ ಗಾಯ

ಕಾಪು: ಕಟಪಾಡಿಯ ತಾಯಿ ಮತ್ತು ಮಗಳು ಸ್ಕೂಟಿಯಲ್ಲಿ ಬರುತಿದ್ದ ಸಂದರ್ಭದಲ್ಲಿ, ನಾಯಿಯೊಂದು ಅಡ್ಡ ಬಂದ ಪರಿಣಾಮವಾಗಿ ಇಬ್ಬರೂ ಬಿದ್ದು, ಗಾಯಗೊಂಡ ಘಟನೆ ಕಾಪುವಿನ ವಿದ್ಯಾನಿಕೇತನ ಶಾಲೆಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಗಾಯಾಳುಗಳಾದ ಪ್ರತಿಮಾ ಮತ್ತು ಮಗಳು ಹೃತಿಕಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಮಂಗಳೂರಿನ ಎಸ್ ಡಿಪಿಐ ಆ್ಯಂಬುಲೆನ್ಸ್ ಮೂಲಕ ಉಚ್ಚಿಲ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕಾಪು ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ.

* ಕುಂದಾಪುರ: ತೋಡಿಗೆ ಕಾಲು ಜಾರಿ ಬಿದ್ದು ಕಾರ್ಮಿಕನ ಸಾವು

ಕುಂದಾಪುರ: ಮಳೆಯಿಂದಾಗಿ ನೀರು ತುಂಬಿದ ತೋಡಿಗೆ ಕಾರ್ಮಿಕನೊಬ್ಬ ಕಾಲು ಜಾರಿ ಬಿದ್ದು, ಸಾವನ್ನಪ್ಪಿದ ಘಟನೆ ಕಳೆದೆರಡು ದಿನಗಳ ಹಿಂದೆ ಬೇಳೂರು ಗ್ರಾಮದ ಚಾಮ್ತಾಡಿ ಸಮೀಪ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಅಂಬೇಡ್ಕರ್ ಕಾಲನಿ ನಿವಾಸಿಯಾದ ಶರತ್ ಎಂದು ಹೇಳಲಾಗಿದ್ದು, ಇವರು ತೆಂಗಿನ ತೋಟದಲ್ಲಿ ಕಾಯಿಗಳನ್ನು ಕೊಯ್ದು ಸಾಗಾಟ ಮಾಡುವ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಬುಧವಾರದಂದು ಕೆಲಸದ ನಿಮಿತ್ತ ತೋಟವೊಂದಕ್ಕೆ ತೆರಳಿದ್ದು, ಮರದಿಂದ ಕಾಯಿಗಳನ್ನು ಕೊಯ್ದು ಟೆಂಪೋಗೆ ಹಾಕುತ್ತಿದ್ದ ಸಮಯದಲ್ಲಿ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಶರತ್ ಅವರಿಗಾಗಿ ಈಶ್ವರ್ ಮಲ್ಪೆ ಮತ್ತು ಅಗ್ನಿಶಾಮಕ ದಳದವರು ಮಾಹಿತಿ ದೊರೆತ ಕೂಡಲೇ ಹುಡುಕಾಟ ನಡೆಸಿದರು. ನಾಗರಾಜ ಜೀವನ್ ಮಿತ್ರ ಮತ್ತು ಸ್ಥಳೀಯರು ಕೂಡ ಇವರಿಗೆ ಸಹಕಾರ ನೀಡಿದ್ದರು. ಗುರುವಾರ ಮಧ್ಯಾಹ್ನ ಕೈಲೇರಿ ಸಮೀಪದ ತೋಡಿನಲ್ಲಿ, ಶರತ್ ಅವರು ಮೃತದೇಹ ಸ್ಥಿತಿಯಲ್ಲಿ ಪತ್ತೆಯಾದರು. ಬುಧವಾರ ವಿಪರೀತ ಮಳೆ ಇದ್ದ ಕಾರಣ, ತೋಡಿನಲ್ಲಿ ನೀರು ತುಂಬಿ ಹರಿಯುತ್ತಿತ್ತು. ರಸ್ತೆ ಕೂಡ ಮಳೆಯ ಕೆಸರು ನೀರಿನಿಂದ ಆವೃತವಾಗಿ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಕಾಯಿ ಕೊಯ್ದು ಟೆಂಪೋಗೆ ಹಾಕುತ್ತಿದ್ದಾಗ ಶರತ್ ಅವರು ಕಾಲು ಜಾರಿ ಬಿದ್ದಿದ್ದು, ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ. ಕೋಟ ಠಾಣೆಯ ಉಪನಿರೀಕ್ಷಕರಾದ ಪ್ರವೀಣ್ ಕುಮಾರ್, ಎಎಸ್ಐ ರವಿ ಕುಮಾರ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.