Categories
ಕುಂದಾಪುರ

ಪತ್ನಿಯ ಕುತ್ತಿಗೆ ಕಡಿದು ಕುಣಿಯುತ್ತಿದ್ದ ಗಂಡ ಅರೆಸ್ಟ್!

ಪತ್ನಿಯ ಕುತ್ತಿಗೆ ಕಡಿದು ಕುಣಿಯುತ್ತಿದ್ದ ಗಂಡ ಅರೆಸ್ಟ್!
– ಕುಂದಾಪುರದ ಬನ್ನೂರಿನಲ್ಲಿ ನಡೆದ ವಿಚಿತ್ರ ಘಟನೆ: ದೆವ್ವ ಬಂದಂತೆ ನರ್ತನ: ಅಶ್ರುವಾಯು ಪ್ರಯೋಗ ಮಾಡಿ ಬಂಧನ
– ಮಣಿಪಾಲ ಲಾಡ್ಜ್‌ ನಲ್ಲಿ ವೇಶ್ಯಾವಾಟಿಕೆ, ಪೊಲೀಸ್‌ ದಾಳಿ
– ಕುಂದಾಪುರ, ಮೂಡಬಿದಿರೆಯಲ್ಲಿ ನೆರೆ ಹಾನಿ ಪರಿಶೀಲನೆ

NAMMUR EXPRESS NEWS
ಕುಂದಾಪುರ: ಪತ್ನಿಯ ಕುತ್ತಿಗೆ ಕಡಿದು ಕೊಲೆಗೆ ಯತ್ನಿಸಿ ಪತಿ ಸಂಭ್ರಮಿಸಿದ ಘಟನೆ ಶನಿವಾರ ರಾತ್ರಿ ಕಂಡೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಬನ್ನೂರಿನಲ್ಲಿ ನಡೆದಿದೆ.
ಸಾಗರದ ಸೊರಬ ತಾಲೂಕಿನ ಅನಿತಾ (38) ಎಂಬಾಕೆಯೇ ಮಾರಣಾಂತಿಕ ಹಲ್ಲೆಗೊಳಗಾದವಳು. ಆಕೆಯ ಪತಿ ಲಕ್ಷ್ಮಣ (40) ಎಂಬಾತನೇ ಆರೋಪಿ. ಈ ಕುಟುಂಬವು ಇಲ್ಲಿನ ಬಸೂರು ಕಾಶಿ ಮಠಕ್ಕೆ ಸಂಬಂಧಿಸಿದ ರೆಸಿಡೆನ್ಸಿಯಲ್ ಬ್ಲಾಕ್‌ ಬಾಡಿಗೆ ಮನೆಯ ಒಂದನೇ ಮನೆಯಲ್ಲಿ ಬಾಡಿಗೆಗೆ ಸೊರಬ ತಾಲೂಕಿನ ಮೂಲದ ಲಕ್ಷ್ಮಣ ಹಾಗೂ ಅನಿತಾ ದಂಪತಿ ವಾಸಿಸುತ್ತಿದ್ದರು. ಕಾಶಿ ಮಠದ ತೋಟ ನೋಡಿಕೊಳ್ಳಲೆಂದು ಅವರು 4 ತಿಂಗಳ ಹಿಂದೆ ಬಂದಿದ್ದರು.
ಶನಿವಾರ ರಾತ್ರಿ ಸುಮಾರು 9 ಗಂಟೆಗೆ ಗಂಡ ಹೆಂಡತಿ ಗಲಾಟೆ ನಡೆದು ಕುಡಿದ ಮತ್ತಿನಲ್ಲಿದ್ದ ಲಕ್ಷ್ಮಣ ತನ್ನ ಪತ್ನಿಯ ಕುತ್ತಿಗೆಗೆ
ಕಡಿದು ಮಾರಣಾಂತಿಕ ಹಲೆ ನಡೆಸಿದ್ದಾನೆ. ಗಂಭೀರ ಗಾಯಗೊಂಡ ಪತ್ನಿ ಅನಿತಾ ಮನೆಯ ಅಡುಗೆ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾಳೆ. ಇತ್ತ ಪತಿ ಲಕ್ಷ್ಮಣ ಮನೆಯ ಬಾಗಿಲು ಚಿಲಕ ಹಾಕಿಕೊಂಡು ಹಾಲ್ ನಲ್ಲಿ ಕತ್ತಿ ಹಿಡಿದು ಕುಣಿಯುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣ ಮನೆಯ ಕಿಟಕಿ ಒಡೆದು ಅಡುಗೆ ಕೋಣೆಗೆ ನುಗ್ಗಿ ಗಂಭೀರ ಸ್ಥಿತಿಯಲ್ಲಿದ್ದ ಅನಿತಾಳನ್ನು ಹೊರತಂದು ಮಣಿಪಾಲ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆರೋಪಿ ಮಾತ್ರ ದೆವ್ವ ಮೈಮೇಲೆ ಬಂದವನಂತೆ ಕತ್ತಿ ಹಿಡಿದು ಕುಣಿಯುತ್ತಿದ್ದ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಮನೆಯೊಳಗೆ ಅಶ್ರುವಾಯು ಪ್ರಯೋಗಿಸಿ ಒಂದೂವರೆ ಗಂಟೆಗಳ ನಂತರ ಆರೋಪಿಯನ್ನು ಬಂಧಿಸಿದ್ದಾರೆ. ಕಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರದಲ್ಲಿ ಅಪಘಾತ ; ಸವಾರ ಸ್ಥಳದಲ್ಲೇ ಸಾವು

ಕುಂದಾಪುರ : ಟ್ರಕ್ ಡಿಕ್ಕಿ ಹೊಡೆದು ದ್ವಿ ಚಕ್ರ ಸವಾರನೊಬ್ಬ ಮೃತಪಟ್ಟ ಘಟನೆ ಗೋಳಿಯಂಗಡಿಯ ಹಾಲಾಡಿ ಸಮೀಪ ನಡೆದಿದೆ.
ನಾಗರಾಜ್ (41) ಮೃತ ದುರ್ದೈವಿ. ನಾಗರಾಜ್ ಅವರು ತಮ್ಮ ಸ್ಕೂಟರ್‌ನಲ್ಲಿ ಕುಂದಾಪುರ ಕಡೆಗೆ ಹೋಗುತ್ತಿದ್ದಾಗ ಗೋಳಿಯಂಗಡಿಯಿಂದ ಹಾಲಾಡಿ ಕಡೆಗೆ ಹೋಗುತ್ತಿದ್ದ ಟ್ರಕ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ನಾಗರಾಜ್ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದು, ಟ್ರಕ್ ನ ಹಿಂಬದಿ ಎಡಚಕ್ರ ಅವರ ತಲೆಯ ಮೇಲೆ ಹರಿದಿದೆ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಮಳೆಗೆ ಮನೆಗೆ ಹಾನಿ ಸ್ಥಳಕ್ಕೆ ಶಾಸಕ ಕಿರಣ ಕುಮಾ‌ರ್ ಕೊಡ್ಲಿ ಭೇಟಿ

ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ಯಡ್ತಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಲ್ತಾರು ಶಂಕ‌ರ್ ಮರಕಾಲ ಅವರ ಮನೆಗೆ ಭಾರಿ ಗಾಳಿ ಮಳೆಗೆ ಮನೆ ಸಂಪೂರ್ಣ ಹಾನಿಯಾಗಿ ಸಾಕಷ್ಟು ನಷ್ಟ ಸಂಭವಿಸಿದ್ದಾರೆ.
ಸ್ಥಳಕ್ಕೆ ಕುಂದಾಪುರ ಶಾಸಕರಾದ ಎ.ಕಿರಣ್ ಕುಮಾ‌ರ್ ಕೊಡ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತುರ್ತಾಗಿ ಪರಿಹಾರ ಬಿಡುಗಡೆ ಮಾಡುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ಯಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್‌ ಶೆಟ್ಟಿ ಸದಸ್ಯರಾದ ಗೌತಮ್ ಹೆಗ್ಡೆಸಚಿನ್ ಹಾಗೂ ಗ್ರಾಮಸ್ಥರು ಅಧಿಕಾರಿಗಳು ಉಪಸಿದ್ದರಿದ್ದರು.

ಮಣಿಪಾಲ ಲಾಡ್ಜ್‌ ನಲ್ಲಿ ವೇಶ್ಯಾವಾಟಿಕೆ, ಪೊಲೀಸ್‌ ದಾಳಿ

ಉಡುಪಿ: ಮಹಿಳೆಯನ್ನು ಬಲವಂತವಾಗಿ ಇರಿಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಉಡುಪಿ 80 ಬಡಗಬೆಟ್ಟು ಗ್ರಾಮದ ಖಾಸಗಿ ಲಾಡ್ಜ್ ವೊಂದಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಆರೋಪಿಗಳು ತಪ್ಪಿಸಿಕೊಂಡಿದ್ದು, ಲಾಡ್ಜ್ ರೂಮ್‌ನಲ್ಲಿದ್ದ ಪಶ್ಚಿಮ ಬಂಗಾಲ ಮೂಲದ ಬೆಂಗಳೂರಿನಲ್ಲಿ ವಾಸವಿರುವ ಸಂತ್ರಸ್ತ ಯುವತಿಯನ್ನು ರಕ್ಷಿಸಲಾಗಿದೆ.
ಈಕೆಯಿಂದ ಕೃತ್ಯದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದು, ಸಂತ್ರಸ್ತೆ ನೀಡಿರುವ ಮಾಹಿತಿಯಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಡುಬಿದಿರೆ: ಗುಡ್ಡ ಕುಸಿದ ಸ್ಥಳಕ್ಕೆ ಮಾಜಿ ಸಚಿವ ಅಭಯಚಂದ್ರ ಭೇಟಿ

ಮೂಡುಬಿದಿರೆ: ಪಾಲಡ್ಕ – ಕಲ್ಲಮುಂಡ್ಯೂರು
ಕೂಡು ರಸ್ತೆಯ ಗುಂಡ್ಯಡ್ಕ ಎಂಬಲ್ಲಿ ವಿಪರೀತ ಮಳೆಯಿಂದಾಗಿ ಶನಿವಾರ ರಸ್ತೆಯ ಬದಿಯಲ್ಲಿದ್ದ ಗುಡ್ಡ ಜರಿದು ಬಿದ್ದು, ಜನರು ನಡೆದಾಡುವ ಹಾಗೂ ವಾಹನ ಸಂಚರಿಸುವ ರಸ್ತೆಯು ಸಂಪೂರ್ಣ ಹಾಳಾಗಿದ್ದ ಸ್ಥಳಕ್ಕೆ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ಭಾನುವಾರ ಭೇಟಿ ನೀಡಿದರು.ಪಾಲಡ್ಕ ಪಂಚಾಯತ್‌ ಉಪಾದ್ಯಕ್ಷ ಪ್ರವೀಣ್‌ ಸಿಕ್ವೆರಾ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ನಲೇರಿಯನ್ ಸಿಕ್ವೆರಾ, ಸ್ಥಳೀಯರಾದ ಆಂದ್ರೂ ಡಿಸೋಜಾ, ವಾಸುದೇವ ನಾಯಕ್‌, ಮ್ಯಾಕ್ಸಿಂ ಲೋಬೊ, ರಾಘವೇಂದ್ರ ಭಟ್, ಸುಧೀರ್ ಭಟ್, ವಾಸುದೇವ ಭಟ್, ಉದಯ ಶೆಟ್ಟಿ, ಪ್ರಮೋದ್‌ ಪೂಜಾರಿ ಮತ್ತಿತರರು ಈ ಸಂದರ್ಭದಲ್ಲಿದ್ದರು.

Categories
ಕುಂದಾಪುರ

ಕಮಲಶಿಲೆ ಬ್ರಾಹ್ಮಿಶ್ರೀ ದುರ್ಗಾಪರಮೇಶ್ವರಿ ಕುಬ್ಜ ನದಿ ಸ್ಪರ್ಶ.

ಕಮಲಶಿಲೆ ಬ್ರಾಹ್ಮಿಶ್ರೀ ದುರ್ಗಾಪರಮೇಶ್ವರಿ ಕುಬ್ಜ ನದಿ ಸ್ಪರ್ಶ
– ಏನಿದು ಸ್ಥಳ ಪುರಾಣ?: ಭಕ್ತರಲ್ಲಿ ಪುಳಕ
– ಎರಡನೇ ಬಾರಿಗೆ ದೇಗುಲ ಸಸ್ಪರ್ಶ ಮಾಡಿದ ನದಿ

NAMMUR EXPRESS NEWS
ಕಮಲಶಿಲೆ: ಕಮಲಶಿಲೆ ಬ್ರಾಹ್ಮಿಶ್ರೀ ದುರ್ಗಾಪರಮೇಶ್ವರಿ ಅಮ್ಮನವರನ್ನು ಕುಬ್ಜ ನದಿ ಸ್ಪರ್ಶಸಿತು. ಇದು ನದಿಯ ಶಾಪ ವಿಮೋಚನೆ ಕಥೆಯನ್ನು ಹೇಳುತ್ತಿದೆ.
ಕೈಲಾಸದಲ್ಲಿ ಶಿವ ಪಾರ್ವತಿಯ ಮುಂದೆ ಪಿಂಗಳೆ ಎಂಬ ಅಪ್ಸರೆ ಕೊಬ್ಬಿನಿಂದ ನರ್ತಿಸಲು ಹಿಂಜರುಗಿದಾಗ ದೇವಿಯು ನಿನ್ನನು ನೋಡಿ ಎಲ್ಲರು ಅಸಹ್ಯ ಪಡುವಂತೆ ಕುಬ್ಜೆಯಾಗು ನಿನ್ನ ಮೈ ಬೆನ್ನು ಎಲ್ಲ ಅಂಕುಡೊಂಕು ಆಗಲಿ ಎಂದು ಶಾಪ ಕೊಡುತ್ತಾಳೆ, ಆಗ ಅಪ್ಸರೆಗೆ ತನ್ನ ತಪ್ಪಿನ ಅರಿವಾಗಿ ದೇವೀಯ ಹತ್ತಿರ ಕಣ್ಣೀರು ಇಡುತ್ತಾಳೆ .ಅಮ್ಮ ಏಕೆ ನಿನ್ನ ಮಗಳ ಮೇಲೆ ಇಷ್ಟೊಂದು ನಿಷ್ಕರುಣಿ ಇದೇ , ಕ್ಷಮಿಸು ಎಂದು ಬೇಡಿದಾಗ ತಾಯಿ ಆಯಿತು ಎಂದು ತನ್ನ ಶಾಪಕ್ಕೆ ವಿಮೋಚನೆಯ ದಾರಿ ನೀಡುತ್ತಾರೆ. ಮುಂದೆ ದುಷ್ಟರಾದ ಖರಾಸುರ ಮತ್ತು ರಟ್ಟಾಸುರ ರನ್ನು ಸಂಹಾರ ಮಾಡಲು ನಾನು ಬ್ರಾಹ್ಮಿ ದುರ್ಗಾಪರಮೇಶ್ವರಿಯಾಗಿ ಅವತರಿಸುತ್ತೇನೆ ಸಂಹಾರದ ನಂತರ ಉದ್ಭವ ಲಿಂಗ ರೂಪಿಯಲ್ಲಿ ಅವತರಿಸುತ್ತೇನೆ. ಅಲ್ಲಿಯವರಿಗೂ ನೀನು, ನಾನು ಹೇಳುವ ರೈಕ್ವ ಋಷಿಯ ಬಳಿ ನನ್ನ ಧ್ಯಾನದಲ್ಲಿ ಇರು. ಕಾಲ ಸಂದರ್ಭ ಬಂದಾಗ ನನ್ನ ಅವತಾರ ಆದಾಗ ನೀನು ನನ್ನ ಬಳಿ ಕುಬ್ಜ ನದಿಯಾಗಿ ಬಂದು ನನ್ನ ಸ್ಪರ್ಶ ಮಾಡಿ ಮೈತೊಳೆದು ಹೋಗಬೇಕು ಎಂದು ಆದೇಶ ನೀಡುತ್ತಾಳೆ.
ಅದೇ ರೀತಿ ಈಗಲೂ ಸಹ ಪ್ರತಿ ವರ್ಷ ಕುಬ್ಜ ನದಿಯು ಉಕ್ಕಿ ಹರಿದು ದೇವಿ ಗುಡಿ ಪ್ರವೇಶಿಸಿ ತಾಯಿಯ ಪಾದ ಮುಟ್ಟಿ ಅಭಿಷೇಕ ಮಾಡಿ ಬರುತ್ತದೆ. ಇದು ಈ ಕ್ಷೇತ್ರದ ಸ್ಥಳಪುರಾಣ. ಈ ಬಗ್ಗೆ ಭಕ್ತರು ಈಗ ದೇವಾಲಯದ ಪುರಾಣ ಹಂಚುತ್ತಿದ್ದಾರೆ.

Categories
ಕುಂದಾಪುರ

ಕುಂದಾಪ್ರ ಕನ್ನಡ ಹಬ್ಬಕ್ಕೆ ಬೆಂಗಳೂರಲ್ಲಿ ಸಜ್ಜು!

ಕುಂದಾಪ್ರ ಕನ್ನಡ ಹಬ್ಬಕ್ಕೆ ಬೆಂಗಳೂರಲ್ಲಿ ಸಜ್ಜು!

– ಕರಾವಳಿ ಸಿರಿ ಕ್ಲಬ್ ಬೆಂಗಳೂರು ಇವರಿಂದ ಕುಂದಾಪ್ರ ಕನ್ನಡ ಹಬ್ಬ
– ಆ.17ಹಾಗೂ18ರಂದು ಕಾರ್ಯಕ್ರಮ: ಹಲವರಿಗೆ ಸನ್ಮಾನ

NAMMUR EXPRESS NEWS

ಬೆಂಗಳೂರು: ಕರಾವಳಿ ಸಿರಿ ಕ್ಲಬ್ ಬೆಂಗಳೂರು ತಂಡದ ವತಿಯಿಂದ ಕುಂದಾಪ್ರ ಕನ್ನಡ ಹಬ್ಬ ಆ.17ಹಾಗೂ18ರಂದು ನಡೆಯುವ ಕಾರ್ಯಕ್ರಮದ ವಲಯ ಮಟ್ಟದ ಪ್ರಥಮ ಪೂರ್ವಭಾವಿ ಸಭೆಯು ಗೋವಿಂದ ಬಾಬು ಪೂಜಾರಿ ಅವರ ಮಾಲೀಕತ್ವದ ಚೆಫ್ ಟಾಕ್ ಸಂಸ್ಥೆಯ ನಾರಾಯಣಗುರು ಸಭಾಭವನದಲ್ಲಿ ನಡೆಯಿತು.

ಮೊದಲಿಗೆ ಅಗಲಿದ ಕರಾವಳಿಯ ಡಾ.ಸತೀಶ್ ಪೂಜಾರಿ,ಅಶ್ವಿನಿ ಶೆಟ್ಟಿ ಹಾಗೂ ರಮಾನಂದ ಶೆಟ್ಟಿ ಅವರ ಆತ್ಮಕ್ಕೆ ಸದ್ಗತಿ ಸಿಗಲೆಂದು ಸಭೆಯಲ್ಲಿ ಮೌನಚಾರಣೆ ನಡೆಸಿ ನಂತರ ಕಾರ್ಯಕ್ರಮ ದಿಬ್ಬಣ ತಯಾರಿ ಬಗ್ಗೆ ಚರ್ಚಿಸಿ ಸಲಹೆಗಳನ್ನು ಸ್ವೀಕರಿಸಲಾಯಿತು ಹಾಗೂ ಕರಾವಳಿ ಗಂಡುಕಲೆ ಯಕ್ಷಗಾನಕುರಿತಂತೆ ಅಧ್ಯಯನ ನಡೆಸಿ ಡಾಕ್ಟರೆಟ್ ಮೂಡಿಗೆರಿಸಿಕೊಂಡ ಡಾ.ದೀಪಕ್ ಶೆಟ್ಟಿ ಬಾರ್ಕೂರು ಇವರನ್ನ ಇದೆ ವೇದಿಕೆಯಲ್ಲಿ ಕರಾವಳಿ ಸಿರಿ ಕ್ಲಬ್ ಬೆಂಗಳೂರು ತಂಡದ ಆರ್ಯ ಕೃಷ್ಣ ಹಾಗೂ ರಕ್ಷಿತ್ ಶೆಟ್ಟಿ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ನಿರೂಪಣೆ ನಿಷ್ಕಾಲ ಮಾಡಿದರು. ಕರಾವಳಿ ಸಿರಿ ಕ್ಲಬ್ ಬೆಂಗಳೂರು ತಂಡದ ನೇತೃತ್ವದ ಗೋವಿಂದ್ ಬಾಬು ಪೂಜಾರಿ ಅವರು,ಚೇತನ್ ,ಸುಮಂತ್, ರಕ್ಷಿತ್ ಶೆಟ್ಟಿ ,ಆರ್ಯ ಕೃಷ್ಣ, ವಸಂತ್ ಸಂಗಮ್, ಗುರುರಾಜ್ ಸಂಗಮ್,ರಾಜೇಶ್ ಹಳಗೇರಿ, ರಂಜಿತ್ ಗಾಣಿಗ, ನಿತಿನ್ ಬಿಲ್ಲವ, ರಾಜೇಶ್ ಚೊಮ್ಮಿ,ಅಜಿತ್, ರಮ್ಯಾ , ಸಂಧ್ಯಾರಾಣಿ, ವೇದಾ, ವಿಭಾ, ಕೀರ್ತನ, ಪವಿತ್ರ ಪೂಜಾರಿ, ಕವಿತಾ, ನಿಷ್ಕಲ ಹಾಗೂ ಕರಾವಳಿ ಸಿರಿಯ ತಂಡದ ಸದಸ್ಯರು ಸೇರಿಕೊಂಡು ನಡೆಸಿಕೊಟ್ಟರು.

Categories
ಕರಾವಳಿ ಕುಂದಾಪುರ ಮಂಗಳೂರು

ಟಾಪ್ ನ್ಯೂಸ್ ಕರಾವಳಿ

ಟಾಪ್ ನ್ಯೂಸ್ ಕರಾವಳಿ

ಸ್ನಾನ ಮಾಡುತ್ತಿದ್ದ ಯುವತಿ ವೀಡಿಯೋ ಚಿತ್ರೀಕರಣ!
– ಯುವಕನಿಗೆ ಧರ್ಮದೇಟು ನೀಡಿದ ಸ್ಥಳಿಯರು
– ಪುತ್ತೂರು: ಹೊಳೆಗೆ ಹಾರಿದ್ದ ಯುವಕ ಸನ್ಮತ್ ಮೃತದೇಹ ಪತ್ತೆ
– ಕುಂದಾಪುರ: ಜುಗಾರಿ ಆಟ: ಆರು ಜನರ ಅರೆಸ್ಟ್!

NAMMUR EXPRESS NEWS
ಮಂಗಳೂರು : ಸ್ನಾನ ಮಾಡುತ್ತಿದ್ದ ಯುವತಿಯ ವಿಡಿಯೋ ಮಾಡಲು ಹೋಗಿ ಸಿಕ್ಕಿ ಬಿದ್ದ ಯುವಕನಿಗೆ ಸ್ಥಳಿಯರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳೂರಿನ ತೋಟಬೆಂಗ್ರೆಯಲ್ಲಿ ನಡೆದಿದೆ.
ಯುವತಿಯೊಬ್ಬಳು ಸ್ನಾನ ಮಾಡುತ್ತಿದ್ದಾಗ ಮನೆಯ ಹಿಂಭಾಗದಿಂದ ಬಂದಿದ್ದ ಯುವಕನೊಬ್ಬ ಕದ್ದು ವೀಡಿಯೋ ಮಾಡುತ್ತಿದ್ದು, ಇದನ್ನು ಗಮನಿಸಿದ ಯುವತಿಯು ಬೊಬ್ಬೆ ಹಾಕಿದ್ದಾಳೆ, ಕೂಡಲೇ ಸ್ಥಳೀಯರು ಬೆನ್ನತ್ತಿ ಯುವಕನನ್ನು ಹಿಡಿದು ತದಕಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗ್ರೆ ನಿವಾಸಿ ಮೊಹಮ್ಮದ್ ರಂಶಿದ್ (21) ಆರೋಪಿ ಎಂದು ಗುರುತಿಸಲಾಗಿದೆ. ಮಾದಕ ದ್ರವ್ಯ ವ್ಯಸನಿಯೂ ಆಗಿರುವ ಈತನನ್ನು ಪಣಂಬೂರು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪುತ್ತೂರು: ಹೊಳೆಗೆ ಹಾರಿದ್ದ ಯುವಕ ಸನ್ಮತ್ ಮೃತದೇಹ ಪತ್ತೆ

ಪುತ್ತೂರು; ಸರ್ವೆ ಗೌರಿ ಹೊಳೆ ಬಳಿ ಸ್ಕೂಟರ್ ನಿಲ್ಲಿಸಿ ನಾಪತ್ತೆಯಾಗಿದ್ದ ಯುವಕ ಸನ್ಮತ್ (21) ಮೃತದೇಹ ಗೌರಿ ಹೊಳೆಯಲ್ಲಿ ಪತ್ತೆಯಾಗಿದೆ.
ಪುತ್ತೂರು ನಗರದ ಹೊರವಲಯದ ಮುಕ್ರಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಷೋರೂಂ ಉದ್ಯೋಗಿ, ಕಡಬ ತಾಲ್ಲೂಕಿನ ಕುದ್ಮಾರು ಗ್ರಾಮದ ತೆಕ್ಕಿತ್ತಡ್ಕ ನಿವಾಸಿ ಚಂದ್ರ ಗೌಡ ಅವರ ಪುತ್ರ ಸನ್ಮತ್ ಜುಲೈ 19 ರಂದು ಸರ್ವೆ ಸಮೀಪದ ಗೌರಿ ಹೊಳೆ ತಮ್ಮ ಸ್ಕೂಟರ್, ಪರ್ಸ್, ಮೊಬೈಲ್ ಇಟ್ಟು ನಾಪತ್ತೆಯಾಗಿದ್ದರು.
ಈ ಬಗ್ಗೆ ಸನ್ಮತ್ ತಂದೆ ಚಂದ್ರ ಗೌಡ ಅವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಜುಲೈ 20 ರಿಂದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದರು.ಇಂದು ಎಸ್‌ ಡಿ ಆರ್ ಎಪ್ ತಂಡ ಕೂಡ ಆಗಮಿಸಿತ್ತು.ಅಷ್ಟರಲ್ಲಿ ಅಗ್ನಿಶಾಮಕ ಸಿಬ್ಬಂದಿಗೆ ಮೃತದೇಹ ಪತ್ತೆಯಾಗಿತ್ತು.ಸದ್ಯ ಮೃತದೇಹವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ.

ಕೋಟ: ಯಡಾಡಿ ಮತ್ಯಾಡಿ ಜುಗಾರಿ ಆಟ : ಆರು ಜನರ ಅರೆಸ್ಟ್!

ಕೋಟ: ಕುಂದಾಪುರ ತಾಲೂಕು ಯಡಾಡಿ – ಮತ್ಯಾಡಿ ಗ್ರಾಮದ ಮತ್ಯಾಡಿಯ ಮನೆಯೊಂದರಲ್ಲಿ ಜುಗಾರಿ ಆಡುತ್ತಿದ್ದ 6 ಜನ ಆರೋಪಿಗಳನ್ನು ಕೋಟ ಪೋಲೀಸರು ಬಂಧಿಸಿದ್ದಾರೆ.
ಠಾಣೆಯ ಸಬ್‌ಇನ್ಸ್ ಪೆಕ್ಟರ್ ಗುರುನಾಥ್ ಬಿ ಹಾದಿಮನಿ ಅವರಿಗೆ ಜುಗಾರಿ ಆಟ ಆಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.
ಈ ಸಂದರ್ಭ ಸುರೇಶ್, ಕೃಷ್ಣ, ಸಂತೋಷ್, ವಿಶ್ವನಾಥ, ಚಂದ್ರ, ರವಿ, ಸುದಾಕರ, ಸತೀಶ, ಆನಂದ ಹುಣ್ಣೆಮಕ್ಕಿ ಆಟದಲ್ಲಿ ನಿರತರಾಗಿದ್ದು, ಇವರುಗಳಲ್ಲಿ 6 ಜನ ಆರೋಪಿಗಳನ್ನು ವಶಕ್ಕೆ ಪಡೆದು ಅವರ ಬಳಿ ಜುಗಾರಿ ಆಟಕ್ಕೆ ಬಳಸಿದ ಒಟ್ಟು ರೂ. 1,090 ನಗದು ಹಾಗೂ 52 ಇಸ್ಪೀಟು ಎಲೆಗಳು, 6 ಮೋಟಾ‌ರ್ ಸೈಕಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಿಂದ ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 2ಲಕ್ಷದ 61 ಸಾವಿರ ಆಗಿದೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಕುಂದಾಪುರ

ಮನೆಮಂದಿಯ ಮುಂದೆಯೇ ನದಿಗೆ ಹಾರಿದ ಫೋಟೋಗ್ರಾಫರ್!

ಮನೆಮಂದಿಯ ಮುಂದೆಯೇ ನದಿಗೆ ಹಾರಿದ ಫೋಟೋಗ್ರಾಫರ್!

– ರಿಕ್ಷಾದಲ್ಲಿ ಹೋಗುತ್ತಿದ್ದಾಗಲೇ ನದಿಗೆ ಹಾರಿದರು
– 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು!

NAMMUR EXPRESS NEWS

ಕುಂದಾಪುರ: ಮನೆ ಮಂದಿಯ ಮುಂದೆಯೇ ನದಿಗೆ ಹಾರಿದ ಫೋಟೋಗ್ರಾಫರ್!.
ಹೌದು. ರಿಕ್ಷಾದಲ್ಲಿ ಹೋಗುತ್ತಿದ್ದಾಗಲೇ ನದಿಗೆ ಹಾರಿದ ಈ ವ್ಯಕ್ತಿ 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ಪತಿ-ಪತ್ನಿ ಕಲಹ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿ ಪೊಲೀಸರು ಇಬ್ಬರಿಗೂ ಬುದ್ದಿವಾದ ಹೇಳಿ ಕಳುಹಿಸಿದ್ದು ರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ಪತ್ನಿ ಹಾಗೂ ಮನೆಮಂದಿ ಎದುರೇ ಪತಿ ಸೇತುವೆಯಿಂದ ಹಾರಿ ನಾಪತ್ತೆಯಾದ ಘಟನೆ ನಡೆದಿದೆ.

ಕಾಳಾವರ ಜನತಾ ಕಾಲನಿ ನಿವಾಸಿ ಹರೀಶ್ (44) ನದಿಗೆ ಹಾರಿದ್ದು, ಅವರ ಶೋಧ ಕಾರ್ಯ ರಾತ್ರಿಯವರೆಗೆ ನಡೆದಿದೆ.
ವೃತ್ತಿಯಲ್ಲಿ ಛಾಯಾಗ್ರಾಹಕರಾಗಿರುವ ಹರೀಶ್‌ ಸುಮಾರು 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು ಇತ್ತಿಚಿನ ದಿನಗಳಲ್ಲಿ ಇಬ್ಬರ ನಡುವೆ ಗಲಾಟೆಯಾಗುತ್ತಿತ್ತು. ಜು.16ರಂದು ಹರೀಶ್‌ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಗೆ ಪತ್ನಿ ದೂರು ಅರ್ಜಿ ಕೊಟ್ಟಿದ್ದರಿಂದ ಪೊಲೀಸರು ಹರೀಶ್‌ ನನ್ನು ಕರೆದುಕೊಂಡು ಬರುವಂತೆ ಹೇಳಿದ್ದರು. ಅದರಂತೆ ಹರೀಶ್‌ ಠಾಣೆಗೆ ಬಂದಿದ್ದು ದಂಪತಿಗೆ ಪೊಲೀಸರು ಬುದ್ದಿ ಮಾತನ್ನು ಹೇಳಿ ಮುಂದಕ್ಕೆ ಒಳ್ಳೆಯ ರೀತಿಯಲ್ಲಿ ಜೀವನ ನಡೆಸುವಂತೆ ತಿಳುವಳಿಕೆ ಹೇಳಿ ಕಳುಹಿಸಿಕೊಟ್ಟಿದ್ದರು. ಹಿಂದಿರುಗಿತ್ತಿದ್ದ ವೇಳೆ ಕೈಯಲ್ಲಿದ್ದ ತಾಯತ ನದಿಗೆ ಎಸೆಯುವುದಾಗಿ ಹೇಳಿ ಪ್ರಯಾಣಿಸುತ್ತಿದ್ದ ರಿಕ್ಷಾ ನಿಲ್ಲಿಸುವಂತೆ ಹೇಳಿ ನದಿಗೆ ಹಾರಿದ್ದಾರೆ. ಅಗ್ನಿಶಾಮಕ ದಳ, ವಿಪತ್ತು ನಿರ್ವಹಣ ದಳ , ಸ್ಥಳೀಯರು ದೋಣಿ ಬಳಸಿ ನಡೆಸಿದ್ದರೂ ಪತ್ತೆಯಾಗಿಲ್ಲ.

Categories
ಉಡುಪಿ ಕುಂದಾಪುರ

ಲವ್‌ ಜಿಹಾದ್‌ ವಿರುದ್ಧ ಪ್ರತಿಭಟನೆಗಿಲ್ಲ ಅನುಮತಿ!

ಲವ್‌ ಜಿಹಾದ್‌ ವಿರುದ್ಧ ಪ್ರತಿಭಟನೆಗಿಲ್ಲ ಅನುಮತಿ!

– ಪೊಲೀಸರಿಂದ ಅನುಮತಿ ನಿರಾಕರಣೆ: ವಿಎಚ್‌ಪಿ ವಿರೋಧ

NAMMUR EXPRESS NEWS

ಲವ್‌ ಜಿಹಾದ್‌ ಪ್ರಕರಣಗಳನ್ನು ಖಂಡಿಸಿ, ಲವ್‌ ಜಿಹಾದ್‌ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಂಗಳೂರಿನಲ್ಲಿ ಅಪರಾಹ್ನ ನಿಗದಿಯಾಗಿದ್ದ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಪೊಲೀಸರು ಒತ್ತಡಕ್ಕೆ ಮಣಿದು ಅನುಮತಿ ನಿರಾಕರಿಸಿ ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕನ್ನು ಕಿತ್ತುಕೊಂಡಿದ್ದಾರೆ. ಲವ್‌ ಜಿಹಾದ್‌ಗೆ ಮುಗ್ಧ ಹಿಂದೂ ಹೆಮ್ಮಕ್ಕಳು ಬಲಿಯಾಗುತ್ತಿದ್ದು ಹಿಂದೂ ಸಮಾಜ ಆತಂಕಕ್ಕೆ ಒಳಗಾಗಿದೆ. ಮೊನ್ನೆಯಷ್ಟೇ ಮಂಗಳೂರಿನಲ್ಲಿ ಮತ್ತೊಂದು ಲವ್‌ ಜಿಹಾದ್‌ ಪ್ರಕರಣ ಬೆಳಕಿಗೆ ಬಂದಿದೆ. ಇದರ ಬಗ್ಗೆ ಜಾಗೃತಿ ಮೂಡಿಸಲು ಪ್ರತಿಭಟನೆ ಆಯೋಜಿಸಲಾಗಿತ್ತು. ಆದರೆ, ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದಾರೆ ಎಂದು ಹಿಂದೂ ಮಹಿಳಾ ಸುರಕ್ಷಾ ಸಮಿತಿಯ ಪ್ರಮುಖರಾದ ಶ್ರೀಲಕ್ಷ್ಮಿ ಮಠದ ಮೂಲೆ, ಸುಕನ್ಯಾ ರಾವ್‌ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ಉಂಟಾಗಿರುವ ಲವ್‌ ಜಿಅಹದ್‌ ಸಮಸ್ಯೆ ಪರಿಹಾರಕ್ಕೆ ಮುಂದಾಗಿರಬೇಕೆ ಹೊರತು ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಬಾರದ್ದು. ಸಾರ್ವಜನಿಕ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುವಾಗ ಪೊಲೀಸರು ಅಡ್ಡಿಪಡಿಸಬಾರದ್ದು. ಸಂವಿಧಾನ ನೀಡಿರುವ ಹಕ್ಕನ್ನು ಪೊಲೀಸರು ಕಸಿದುಕೊಂಡಿದ್ದಾರೆ ಎಂದು ನ್ಯಾಯವಾದಿ ಹರೀಶ್‌ ಕುಮಾರ್‌ ಹೇಳಿದ್ದಾರೆ.

ಕುಂದಾಪುರ: ಬೃಹತ್‌ ಮರವೊಂದು ವಿದ್ಯುತ್‌ ಕಂಬಗಳ ಮೇಲೆ ಬಿದ್ದ ಪರಿಣಾಮ ಅಲ್ಲಿ ಚಲಿಸುತ್ತಿದ್ದ ಶಾಲಾ ಬಸ್‌ವೊಂದು ಅಪಾಯದಿಂದ ಪಾರಾದ ಘಟನೆ ಕುಂದಾಪುರದ ಹೆಮ್ಮಾಡಿ ಗ್ರಾಮದ ಸಂತೋಷ್‌ ನಗರ ರಸ್ತೆಯಲ್ಲಿ ಶನಿವಾರ ನಡೆದಿದೆ. ಜಿಲ್ಲೆಯಲ್ಲಿ ಬೆಳಗ್ಗಿನಿಂದ ಭಾರೀ ಮಳೆಯಾಗಿದ್ದು, ಪರಿಣಾಮವಾಗಿ ಗಾಳಿಗೆ ಮರವೊಂದು ಧರೆಗೆ ಉರುಳಿದೆ. ಈ ವೇಳೆ ವಿದ್ಯುತ್‌ ಕಂಬಗಳು ಕೂಡ ಬುಡಮೇಲಾಗಿವೆ. ಈ ಸಂದರ್ಭದಲ್ಲಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್‌ವೊಂದು ಕೇವಲ 20 ಮೀಟರ್‌ ದೂರದಲ್ಲಿ ಇತ್ತು. ಒಂದುವೇಳೆ ವಿದ್ಯುತ್‌ ಕಂಬ ಅಥವಾ ಮರವು ಬಸ್‌ ಮೇಲೆ ಉರುಳಿ ಬೀಳುತ್ತಿದ್ದರೆ ಹೆಚ್ಚಿನ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಕೂಡಲೇ ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ವಿದ್ಯುತ್‌ ಕಂಬ ತೆರವುಗೊಳಿಸುವ ಪ್ರಯತ್ನ ಮಾಡಿದ್ದಾರೆ. ಜತೆಗೆ ಸ್ಥಳೀಯರ ಸಹಕಾರದಿಂದ ಮರ ತೆರವು ಕಾರ್ಯ ಕೂಡ ನಡೆಯುತ್ತಿದೆ. ಇದರಿಂದ ಕೆಲವು ಹೊತ್ತು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೂ ಅಡ್ಡಿಯುಂಟಾಗಿದೆ.

ಉಡುಪಿ: ಹೆದ್ದಾರಿ ಮಧ್ಯೆ ಪಿಕಪ್‌ ಪಲ್ಟಿ; ಚಾಲಕನಿಗೆ ಗಾಯ

ಹಣ್ಣು ತುಂಬಿದ್ದ ಪಿಕಪ್‌ ವಾಹನ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆ ಸರ್ಕಲ್‌ನಲ್ಲಿ ಸೋಮವಾರ ನಡೆದಿದೆ. ಹುಬ್ಬಳ್ಳಿಯಿಂದ ಉಡುಪಿಯತ್ತ ಸಾಗುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಪಲ್ಟಿಯಾಗಿದೆ. ಚಾಲಕ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಮಧ್ಯಭಾಗದಲ್ಲಿ ಜಾಹೀರಾತಿನ ಬ್ಯಾರಿಕೇಡ್‌ ಅಳವಡಿಸಿದ್ದೇ ಚಾಲಕನಿಗೆ ಗೊಂದಲವುಂಟಾಗಿ ವಾಹನ ಪಲ್ಟಿಯಾಗಲು ಕಾರಣವೆನ್ನಲಾಗಿದೆ. ರಸ್ತೆಯ ಮಧ್ಯದಲ್ಲಿ ಅವೈಜ್ಞಾನಿಕವಾಗಿ ಬ್ಯಾರಿಕೇಡ್‌ ಅಳವಡಿಸಿದ್ದರಿಂದ ರಾತ್ರಿಯ ವೇಳೆ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ವೈಜ್ಞಾನಿಕ ರೀತಿಯಲ್ಲಿ ಅಳವಡಿಸುವುದು ಮತ್ತು ರಾತ್ರಿಯ ವೇಳೆ ಬ್ಯಾರಿಕೇಡ್‌ ರಸ್ತೆಯಿಂದ ತೆರವು ಮಾಡಬೇಕೆಂದು ಸ್ಥಳೀಯರು ಹಾಗೂ ಚಾಲಕರು ಮನವಿ ಮಾಡಿದ್ದಾರೆ.

Categories
ಕುಂದಾಪುರ

ಕುಂದಾಪುರದಲ್ಲಿ ಹೋಟೆಲ್ ಕಾರ್ಮಿಕರ ಸಂಘದ ಪ್ರತಿಭಾ ಪುರಸ್ಕಾರ

ಕುಂದಾಪುರದಲ್ಲಿ ಹೋಟೆಲ್ ಕಾರ್ಮಿಕರ ಸಂಘದ ಪ್ರತಿಭಾ ಪುರಸ್ಕಾರ

– ಸಂಸದರು, ಶಾಸಕರು ಸೇರಿ ಅನೇಕ ಗಣ್ಯರ ಆಗಮನ
– ವಿದ್ಯಾರ್ಥಿಗಳ ಪ್ರೋತ್ಸಾಹ ಧನ ವಿತರಣೆ, ಸದಸ್ಯತ್ವ ಅಭಿಯಾನ
– ಉಡುಪಿ ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘ(ರಿ) ಸಹಯೋಗ

NAMMUR EXPRESS NEWS

ಕುಂದಾಪುರ: ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘ(ರಿ)ಉಡುಪಿ ಜಿಲ್ಲಾ ಘಟಕ ಪುನಾರಚನೆ ಉದ್ಘಾಟನಾ ಸಮಾರಂಭ, ವಿದ್ಯಾರ್ಥಿಗಳ ಪ್ರೋತ್ಸಾಹ ಧನ ವಿತರಣೆ ಮತ್ತು ಸದಸ್ಯತ್ವ ಅಭಿಯಾನ ಸಮಾರಂಭ ಜು.17ರ ಬುಧವಾರ ಕುಂದಾಪುರದಲ್ಲಿ ನಡೆಯಲಿದೆ.

ಜು. 17ಕ್ಕೆ ಸಮಯ ಬೆಳಿಗ್ಗೆ 11:00 ಘಂಟೆಗೆ ವೈಟ್ ಹೌಸ್ ಸಭಾಂಗಣ ಕುಂದಾಪುರ ಇಲ್ಲಿ ನಡೆಯಲಿದೆ.
ಉಡುಪಿ ಜಿಲ್ಲೆ ರಾಜ್ಯ ಸಮಿತಿಯ ಅಧ್ಯಕ್ಷ ಶರತ್ ಶೆಟ್ಟಿ ಬಿಡ್ಕಲ್ ಕಟ್ಟೆ ಗೌರವ ಉಪಸ್ಥಿತಿಯಲ್ಲಿ ರಾಜ್ಯಾಧ್ಯಕ್ಷರಾದ ಸತೀಶ್ ಜೋಗಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಮುಖ್ಯ ಅಥಿತಿಗಳಾಗಿ ಅಪ್ಪಣ್ಣ ಹೆಗ್ಗಡೆ ಆಡಳಿತ ಮೋಕ್ಷೇಸರು ಬನ್ನೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಹಿರಿಯ ಸಲಹೆಗಾರರು, ಕೋಟ ಶ್ರೀನಿವಾಸ ಪೂಜಾರಿ ಮಾನ್ಯ ಸಂಸದರು, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆ, ಖ್ಯಾತ ಉದ್ಯಮಿ, ಸಮಾಜ ಸೇವಕರಾದ ಗೋವಿಂದ ಬಾಬು ಪೂಜಾರಿ,ಶಾಸಕರಾದ ಕಿರಣ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಉದ್ಯಮಿ ನಿತಿನ್ ನಾರಾಯಣ್ ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಸರ್ವರನ್ನು ರಾಜ್ಯ ಘಟಕದ ಎಲ್ಲಾ ಪದಾಧಿಕಾರಿಗಳು, ಉಡುಪಿ ಜಿಲ್ಲಾ ಎಲ್ಲಾ ಪದಾಧಿಕಾರಿಗಳು, ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘ (ರಿ.) ಇವರು ಸ್ವಾಗತಿಸಿದ್ದಾರೆ.

ರಾಜ್ಯ ಉಪಾಧ್ಯಕ್ಷರು, ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾರ್ಯಾಧ್ಯಕ್ಷರು, ರಾಜ್ಯ ಜಂಟಿ ಕಾರ್ಯದರ್ಶಿಗಳು, ರಾಜ್ಯ ನಿರ್ದೇಶಕರು, ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.

Categories
ಕುಂದಾಪುರ

ಕುಂದಾಪ್ರ ಭಾಷಿಗರಿಗೆ ಸಿಹಿ ಸುದ್ದಿ!

ಕುಂದಾಪ್ರ ಭಾಷಿಗರಿಗೆ ಸಿಹಿ ಸುದ್ದಿ!

– ಕುಂದಾಪ್ರ ಭಾಷಾ ಅಧ್ಯಯನ ಪೀಠಕ್ಕೆ 50 ಲಕ್ಷ ರೂ. ಅನುದಾನ
– ರಾಜ್ಯ ಸರ್ಕಾರದ ಆದೇಶ: ಮುಂದೆ ಮತ್ತಷ್ಟು ಹಣ ಬಿಡುಗಡೆ?

NAMMUR EXPRESS NEWS

ಕುಂದಾಪುರ: ಕುಂದಾಪ್ರ ಭಾಷಾ ಅಧ್ಯಯನ ಪೀಠಕ್ಕೆ 50 ಲಕ್ಷ ರೂ. ಅನುದಾನ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಭಾಷಾ ಅಧ್ಯಯನ ಪೀಠದ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕಾರ್ಯಚಟುವಟಿಕೆಗಳನ್ನು ವಿಸ್ತರಣೆ ಮಾಡಲು ಅಗತ್ಯವಿರುವ ಅನುದಾನ ನೀಡುವಂತೆ ಮಂಗಳೂರು ವಿಶ್ವವಿದ್ಯಾಲಯ ಈ ಹಿಂದೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಈ ವಿಚಾರ ಸರ್ಕಾರ ಮಟ್ಟದಲ್ಲಿ ಬಾಕಿ ಉಳಿದಿತ್ತು. ಕಳೆದ ಫೆಬ್ರವರಿ ತಿಂಗಳಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ, ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಅವರು, ಈ ವಿಚಾರದ ಕುರಿತು ಸರ್ಕಾರಕ್ಕೆ ಪತ್ರ ಬರೆದು, ಉಡುಪಿ ಜಿಲ್ಲಾ ವ್ಯಾಪ್ತಿಯ ಕುಂದಾಪುರ, ಬೈಂದೂರು, ಬ್ರಹ್ಮಾವರ ತಾಲ್ಲೂಕುಗಳಲ್ಲಿ ಪೂರ್ಣವಾಗಿ, ಹೆಬ್ರಿ, ಕಾಪು ಉಡುಪಿಯೂ ಸೇರಿದಂತೆ ಕೆಲವು ಭಾಗಗಳಲ್ಲಿ ಮಾತೃ ಭಾಷೆಯಾಗಿ ಬಳಸುತ್ತಿರುವ ಕುಂದಾಪ್ರ ಭಾಷೆಯನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಕುಂದಗನ್ನಡ ಭಾಷೆಯ ಅಧ್ಯಯನ ಪೀಠದ ರಚನಾತ್ಮಕ ಕಾರ್ಯಗಳಿಗಾಗಿ ಕೊಡಲೇ ಒಂದೂವರೆ ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾಡಿದ್ದ ಮನವಿಗೆ, ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದರು.

ಈ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಮೊದಲ ಹಂತದ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಮುಂದೆ ಹಂತ ಹಂತವಾಗಿ ಹಣ ಬಿಡುಗಡೆಯಾಗುವ ಭರವಸೆ ಇದೆ.

Categories
ಕುಂದಾಪುರ

ಕುಂದಾಪುರ: ಹಲಸು ಮತ್ತು ಕೃಷಿ ಮೇಳ ಶುರು!

ಕುಂದಾಪುರ: ಹಲಸು ಮತ್ತು ಕೃಷಿ ಮೇಳ ಶುರು!

– ಬೆಳಿಗ್ಗೆ 9 ರಿಂದ ರಾತ್ರಿ 8ರ ತನಕ ಹಲಸು ಮೇಳ, ಕೃಷಿ ಮೇಳ
– ಜು.14ರವರೆಗೆ ಮೇಳ: ಬಗೆ ಬಗೆಯ ಹಲಸು, ಕೃಷಿ ಪದಾರ್ಥಗಳು
– ಗಣ್ಯರ ಭೇಟಿ: ನೀವೂ ಬನ್ನಿ… ನಿಮ್ಮವರನ್ನು ಕರೆ ತನ್ನಿ…!

NAMMUR EXPRESS NEWS

ಕುಂದಾಪುರ: ಕುಂದಾಪುರದಲ್ಲಿ ಹಲಸು ಮತ್ತು ಕೃಷಿ ಮೇಳ ಶುರುವಾಗಿದೆ. ಶುಕ್ರವಾರದಿಂದ ಭಾನುವಾರದವರೆಗೆ ನಡೆಯುವ ಈ ಮೇಳದಲ್ಲಿ ಬೆಳಿಗ್ಗೆ 9 ರಿಂದ ರಾತ್ರಿ 8ರ ಬಗೆ ಬಗೆಯ ಹಲಸು, ಕೃಷಿ ಪದಾರ್ಥಗಳು ಸೇರಿ ಅನೇಕ ಆಕರ್ಷಣೆಗಳು ಇವೆ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ವತಿಯಿಂದ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಅಧ್ಯಕ್ಷ ಜನನಿ ದಿವಾಕರ್ ಶೆಟ್ಟಿ ನೇತೃತ್ವದಲ್ಲಿ ಎಲ್ಲಾ ಪದಾಧಿಕಾರಿಗಳು, ಸದಸ್ಯರ, ಸಹಕಾರದಲ್ಲಿ ಈ ಹಲಸು ಮೇಳ ನಡೆಯುತ್ತಿದೆ.

ಕುಂದಾಪುರ ಪರಿಸರ ಜನರಿಗೆ ಹಾಗೂ ಕೃಷಿಕರಿಗೆ ಉಪಯೋಗವಾಗುವ ದೃಷ್ಟಿಯಿಂದ ಈ ಮೇಳ ಆಯೋಜನೆ ಮಾಡಲಾಗಿದೆ. ಸಣ್ಣ ಸಣ್ಣ ಕೃಷಿ ಮತ್ತು ಗೃಹ ಕೈಗಾರಿಕೆ ಉತ್ಪನ್ನ ತಯಾರಿಸುವ ಮತ್ತು ಮಾರಾಟ ಮಾಡುವವರಿಗೆ ಒಂದೇ ಸೂರಿನಡಿ ಕೃಷಿ ಉತ್ಪನ್ನ ಹಾಗೂ ಹಲಸಿನ ಮತ್ತು ಮಾವಿನ ವಿಶೇಷ ಆಹಾರ ಹಾಗೂ ಕೃಷಿ ಯಂತ್ರೋಪಕರಣ ಮತ್ತು ಸಾವಯವ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನ ನಡೆಯುತ್ತಿದೆ. ಈಗಾಗಲೇ ಸಾವಿರಾರು ಮಂದಿ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತೋಟಗಾರಿಕೆ, ಇಲಾಖೆ ಅರಣ್ಯ ಇಲಾಖೆ, ಕೃಷಿ ಇಲಾಖೆ ಹಲೋ ಗೆಳೆಯರು ನಂದಿಬೆಟ್ಟು ಇವರ ಸಹಯೋಗದೊಂದಿಗೆ ಕುಂದಾಪುರ ನಗರದಲ್ಲಿ ನೆಹರು ಮೈದಾನದಲ್ಲಿ ಪ್ರಥಮ ಬಾರಿಗೆ ಹಲಸು ಹಾಗೂ ಕೃಷಿ ಮೇಳ ನಡೆಯುತ್ತಿದೆ. ಶಾಸಕ ಕಿರಣ್ ಕುಮಾರ್ ಕೂಡ ಆಗಮಿಸಿ ಮೇಳದಲ್ಲಿ ಭಾಗಿಯಾದರು.

ಹಲಸಿನ ವಿವಿಧ ತಾಜಾ ತಿಂಡಿಗಳು ಹಲಸಿನ ಹಾಗೂ ವಿವಿಧ ಜಾತಿಯ ಹಣ್ಣಿನ ಗಿಡಗಳು, ಹೂವಿನ ಗಿಡಗಳು, ತರಕಾರಿ ಬೀಜಗಳು, ಸಾವಯವ ಗೊಬ್ಬರ ಸಾವಯವ ಉತ್ಪನ್ನಗಳು ಸೇರಿ ನೂರಾರು ಮಳಿಗೆಗಳು, ವಿವಿಧ ತಳಿಯ ಹಲಸಿನ ಹಣ್ಣುಗಳು ಲಭ್ಯ ಇದೆ. ಅತ್ಯಾಧುನಿಕ ಯಂತ್ರೋಪಕರಣ ಮತ್ತು ಕೃಷಿ ಸಲಕರಣೆ ಎಲ್ಲಾ ಬಗೆಯ ಹಣ್ಣಿನ ಹಾಗೂ ಹೂವಿನ ಗಿಡಗಳು ಮತ್ತು ಅಡಿಕೆ ಗಿಡಗಳು, ಖಾದಿ ಮತ್ತು ಕೈಮಗ್ಗದ ಬಟ್ಟೆಗಳು, ಆಯುರ್ವೇದ ಉತ್ಪನ್ನಗಳು ಮಾರಾಟ ಆಗುತ್ತಿದೆ.

ಕೃಷಿ ಮೇಳದ ಉದ್ಘಾಟನೆಯನ್ನು ಲಯನ್ ಅರುಣ್ ಕುಮಾರ್ ಹೆಗ್ಡೆ ವಹಿಸಿದ್ದರು. ಪ್ರಾಸ್ತಾವಿಕ ಭಾಷಣವನ್ನು ಲಯನ್ ದಿನಕರ ಶೆಟ್ಟಿ, ಅಧ್ಯಕ್ಷರು ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ 2024-25, ಸ್ವಾಗತ ವನ್ನು ಲಯನ್ ಪ್ರವೀಣ್ ಕುಮಾರ್ ಶೆಟ್ಟಿ ನಿಕಟ ಪೂರ್ವ ಅಧ್ಯಕ್ಷರು ಮಾಡಿದರು. ಅತಿಥಿಗಳಾಗಿ ನಿಧಿಷ್ ಕೆ. ಎಸ್, ನಿರ್ದೇಶಕರು ತೋಟಗಾರಿಕಾ ಇಲಾಖೆ, ಕಾರ್ಯದರ್ಶಿ ಲಯನ್ ಶ್ರೀಧರ್ ಮರವಂತೆ ಇದ್ದರು. ಸ್ಥಾಪಕ ಅಧ್ಯಕ್ಷರಾದ ಲಯನ್ ಕಿರಣ್ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು, ಕೋಶಾಧಿಕಾರಿ ಲಯನ್ ಜಗದೀಶ್ ವಾಸುದೇವ ಧನ್ಯವಾದ ತಿಳಿಸಿದರು.

Categories
ಕುಂದಾಪುರ

ಕುಂದಾಪುರ: ಜು.12 ರಿಂದ 14ರವರೆಗೆ ಹಲಸು ಮತ್ತು ಕೃಷಿ ಮೇಳ

ಕುಂದಾಪುರ: ಜು.12 ರಿಂದ 14ರವರೆಗೆ ಹಲಸು ಮತ್ತು ಕೃಷಿ ಮೇಳ

– ಬೆಳಿಗ್ಗೆ 9 ರಿಂದ ರಾತ್ರಿ 8ರ ತನಕ ಹಲಸು ಮೇಳ, ಕೃಷಿ ಮೇಳ
– ಕುಂದಾಪುರ ಸಂಘ ಸಂಸ್ಥೆಗಳ ಸಹಯೋಗ: ನೀವೂ ಬನ್ನಿ… ನಿಮ್ಮವರನ್ನು ಕರೆ ತನ್ನಿ..!

NAMMUR EXPRESS NEWS

ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ವತಿಯಿಂದ ಹಲಸು ಮತ್ತು ಕೃಷಿ ಮೇಳ ಜುಲೈ 12 ರಿಂದ 14ರವರೆಗೆ ಆಯೋಜಿಸಲಾಗಿದೆ. ಕರಾವಳಿಯಲ್ಲಿ ಹಲಸು ಮೇಳ ದಿನದಿಂದ ದಿನಕ್ಕೆ ಜನರ ಮೆಚ್ಚುಗೆ ಪಡೆಯುತ್ತಿದ್ದು, ಇದೀಗ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಅಧ್ಯಕ್ಷ ಜನನಿ ದಿವಾಕರ್ ಶೆಟ್ಟಿ ನೇತೃತ್ವದಲ್ಲಿ ಎಲ್ಲಾ ಪದಾಧಿಕಾರಿಗಳು, ಸದಸ್ಯರ, ಸಹಕಾರದಲ್ಲಿ ಈ ಹಲಸು ಮೇಳ ನಡೆಯುತ್ತಿದೆ.

ಕುಂದಾಪುರ ಪರಿಸರ ಜನರಿಗೆ ಹಾಗೂ ಕೃಷಿಕರಿಗೆ ಉಪಯೋಗವಾಗುವ ದೃಷ್ಟಿಯಿಂದ ಈ ಮೇಳ ಆಯೋಜನೆ ಮಾಡಲಾಗಿದೆ. ಸಣ್ಣ ಸಣ್ಣ ಕೃಷಿ ಮತ್ತು ಗೃಹ ಕೈಗಾರಿಕೆ ಉತ್ಪನ್ನ ತಯಾರಿಸುವ ಮತ್ತು ಮಾರಾಟ ಮಾಡುವವರಿಗೆ ಒಂದೇ ಸೂರಿನಡಿ ಕೃಷಿ ಉತ್ಪನ್ನ ಹಾಗೂ ಹಲಸಿನ ಮತ್ತು ಮಾವಿನ ವಿಶೇಷ ಆಹಾರ ಹಾಗೂ ಕೃಷಿ ಯಂತ್ರೋಪಕರಣ ಮತ್ತು ಸಾವಯವ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನ ಆಯೋಜಿಸಲಾಗಿದೆ. ಅಧ್ಯಕ್ಷ ಜನನಿ ದಿವಾಕರ್ ಶೆಟ್ಟಿ ಮೇಳದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಕುಂದಾಪುರ ಸಂಘ ಸಂಸ್ಥೆಗಳ ಸಹಯೋಗ

ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಸ್ಥಾಪಕ ಅಧ್ಯಕ್ಷ ಕಿರಣ್ ಕುಂದಾಪುರ ಕೃಷಿ ಮೇಳದ ವಿಶೇಷ ಕುರಿತು ಮಾಹಿತಿ ನೀಡಿ ತೋಟಗಾರಿಕೆ, ಇಲಾಖೆ ಅರಣ್ಯ ಇಲಾಖೆ, ಕೃಷಿ ಇಲಾಖೆ ಹಲೋ ಗೆಳೆಯರು ನಂದಿಬೆಟ್ಟು ಇವರ ಸಹಯೋಗದೊಂದಿಗೆ ಕುಂದಾಪುರ ನಗರದಲ್ಲಿ ನೆಹರು ಮೈದಾನದಲ್ಲಿ ಪ್ರಥಮ ಬಾರಿಗೆ ಹಲಸು ಹಾಗೂ ಕೃಷಿ ಮೇಳ ಆಯೋಜಿಸಲಾಗಿದೆ. ಜುಲೈ 12 ರಿಂದ ಜುಲೈ 14ರ ರವಿವಾರ ತನಕ ಬೆಳಿಗ್ಗೆ 9 ರಿಂದ ರಾತ್ರಿ 8ರ ತನಕ ಹಲಸು ಮೇಳ, ಕೃಷಿ ಮೇಳ ಆಯೋಜಿಸಲಾಗಿದೆ ಎಂದರು.

ಹಲಸಿನ ವಿವಿಧ ತಾಜಾ ತಿಂಡಿಗಳು ಹಲಸಿನ ಹಾಗೂ ವಿವಿಧ ಜಾತಿಯ ಹಣ್ಣಿನ ಗಿಡಗಳು, ಹೂವಿನ ಗಿಡಗಳು, ತರಕಾರಿ ಬೀಜಗಳು, ಸಾವಯವ ಗೊಬ್ಬರ ಸಾವಯವ ಉತ್ಪನ್ನಗಳು ಇರಲಿವೆ ಎಂದರು.ಲಯನ್ಸ್ ಕಾರ್ಯದರ್ಶಿ ಶ್ರೀಧರ್ ಮರುವಂತೆ ಮಾತನಾಡಿ ಅತ್ಯಾಧುನಿಕ ಯಂತ್ರೋಪಕರಣ ಮತ್ತು ಕೃಷಿ ಸಲಕರಣೆ ಎಲ್ಲಾ ಬಗೆಯ ಹಣ್ಣಿನ ಹಾಗೂ ಹೂವಿನ ಗಿಡಗಳು ಮತ್ತು ಅಡಿಕೆ ಗಿಡಗಳು, ಖಾದಿ ಮತ್ತು ಕೈಮಗ್ಗದ ಬಟ್ಟೆಗಳು, ಆಯುರ್ವೇದ ಉತ್ಪನ್ನಗಳು ದೊರೆಯಲಿದೆ ಎಂದರು. ಈ ಕಾರ್ಯಕ್ರಮದಲ್ಲಿ ಸಂಸದರು ಶಾಸಕರು ಸಹಾಯಕ ಕಮಿಷನರ್ ಭಾಗವಹಿಸಲಿದ್ದಾರೆ.

ಸರ್ವರಿಗೂ ಈ ಹಲಸು, ಕೃಷಿ ಮೇಳಕ್ಕೆ ಸುಸ್ವಾಗತ

ನಮ್ಮೂರ್ ಎಕ್ಸ್ ಪ್ರೆಸ್ ಕರಾವಳಿ