Categories
ಮಂಗಳೂರು ವಿಶೇಷ ಸುದ್ದಿ

ಆಟೋ ಡ್ರೈವರ್ ಈಗ ರೋಲ್ಸ್ ರಾಯ್ಸ್ ಮಾಲೀಕ!

ಆಟೋ ಡ್ರೈವರ್ ಈಗ ರೋಲ್ಸ್ ರಾಯ್ಸ್ ಮಾಲೀಕ!

– ಪುಟ್ಟ ಊರು ಪುತ್ತೂರಿನಲ್ಲಿ ಹೊಚ್ಚ ಹೊಸ ರೋಲ್ಸ್ ರಾಯ್ಸ್ ಕಾರಿನ ಓಡಾಟ!
– ಬಿಂದು ಜೀರಾ ಡ್ರಿಂಕ್ ಕಂಪನಿ ಒಡೆಯ ಸತ್ಯಶಂಕರ್ ಕಥೆ ಇಲ್ಲಿದೆ ನೋಡಿ

NAMMUR EXPRESS NEWS
ಮಂಗಳೂರು: ಯಶಸ್ಸಿನ ಕತೆಗಳು ನಮಗೆ ಸ್ಪೂರ್ತಿ ನೀಡುತ್ತವೆ ನಿಜ. ಆದರೆ ಸೋಲಿನ ಕತೆಗಳು ಸವಾಲುಗಳನ್ನು ಎದುರಿಸಲು ಮತ್ತು ಸೋಲಿನಿಂದ ಹೊರಬರಲು ನಮ್ಮನ್ನು ಸಜ್ಜುಗೊಳಿಸುತ್ತವೆ.
ಇಲ್ಲೊಬ್ಬ ಅದೇ ರೀತಿ ಆಟೋ ಡ್ರೈವರ್ ಆಗಿದ್ದ ವ್ಯಕ್ತಿ, ಇದೀಗ ಬಿಂದು ಮಿನರ್‌ ವಾಟರ್‌, ಬಿಂದು ಜೀರಾ ಮಸಾಲಾ, ಸಿಪ್ಪಾನ್‌ ಸೇರಿದಂತೆ 50ಕ್ಕೂ ಅಧಿಕ ಪಾನೀಯಗಳು ಮತ್ತು ಸ್ಪೈಸಿ ತಿನಿಸುಗಳ ತಯಾರಕರಾದ ಪ್ರತಿಷ್ಠಿತ ಎಸ್‌ಜಿ ಗ್ರೂಪ್‌ನ ಎಂಡಿ ಸತ್ಯಶಂಕರ್, ಗ್ರಾಮೀಣ ಕನ್ನಡಿಗರಿಗೆ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ನೀಡಿದ್ದಾರೆ. ಎಸ್‌ಜಿ ಗ್ರೂಪ್‌ ಕಂಪನಿಗಳಲ್ಲಿ 2,000 ಮಂದಿ ನೇರ ಉದ್ಯೋಗದಲ್ಲಿದ್ದರೆ, 10,000ಕ್ಕೂ ಅಧಿಕ ಮಂದಿ ಪರೋಕ್ಷ ಉದ್ಯೋಗ ಪಡೆದಿದ್ದಾರೆ.
ಇಲ್ಲಿ ದುಡಿಯುತ್ತಿರುವವರ ಪೈಕಿ ಶೇ. 60ರಷ್ಟು ಮಹಿಳೆಯರು ಎಂಬುದು ಇನ್ನೊಂದು ವಿಶೇಷ.
ಹಳ್ಳಿಯ ಸರಕಾರಿ ಕನ್ನಡ ಶಾಲೆಯಲ್ಲಿ ಓದಿ ಬೆಳೆದು, ಪ್ರತಿಷ್ಠಿತ ‘ಬಿಂದು’ ಕಂಪನಿ ಮೂಲಕ ಜಗತ್ತಿನ ಗಮನ ಸೆಳೆದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸತ್ಯಶಂಕರ್‌ ಅವರು ಮತ್ತೊಂದು ಬಾರಿ ಪ್ರಪಂಚವೇ ತನ್ನತ್ತ ಮುಖ ಮಾಡುವ ಸಾಧನೆ ಮಾಡಿದ್ದಾರೆ.

ಆಟೋ ಡ್ರೈವರ್ ಈಗ ರೋಲ್ಸ್ ರಾಯ್ಸ್ ಮಾಲೀಕ!

ಭಾರತದ ಯಾವುದೇ ಪ್ರದೇಶವಾಗಲಿ, ಹೆಚ್ಚಿನ ಶ್ರೀಮಂತರೇ ಇರುವ ನಗರವಾಗಲಿ ರೋಲ್ಸ್ ರಾಯ್ಸ್ ಕಾರುಗಳು ಕಾಣ ಸಿಗವುದು ವಿರಳ. ಇದನ್ನು ಖರೀದಿಸುವುದು ಮಾತ್ರವಲ್ಲ, ನಿರ್ವಹಣೆ ಮಾಡಲು ಶ್ರೀಮಂತರಾದರೆ ಮಾತ್ರ ಸಾಲದು ಆಗರ್ಭ ಶ್ರೀಮಂತಿಕೆಯೇ ಬೇಕು. ಆದರೆ ಇದೀಗ ಕರ್ನಾಟಕ ಪುಟ್ಟ ಊರಾದ ಪುತ್ತೂರಿನಲ್ಲಿ ಹೊಚ್ಚ ಹೊಸ ರೋಲ್ಸ್ ರಾಯ್ಸ್ ಕಾರು ರಸ್ತೆಯಲ್ಲಿ ಕಾಣಸಿಗುತ್ತಿದೆ.
ಇದು ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು.
ಈ ಕಾರಿನ ಮಾಲೀಕ ಬೇರೆ ಯಾರು ಅಲ್ಲ, ಒನ್ ಅ್ಯಂಡ್ ಒನ್ಲಿ ಬಿಂದು ಜೀರಾ ಮಸಾಲಾ ಡ್ರಿಂಕ್ ಕಂಪನಿಯ ಮಾಲೀಕ ಸತ್ಯ ಶಂಕರ್.
ಆಟೋ ಡ್ರೈವರ್ ಆಗಿದ್ದ ಸತ್ಯ ಶಂಕರ್ ಎಸ್‌ಜಿ ಗ್ರೂಪ್ ಸಂಸ್ಥೆ ಕಟ್ಟಿ ನೂರಾರು ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ. ಇದೀಗ ಸತ್ಯ ಶಂಕರ್ ಕಂಪನಿ 850 ಕೋಟಿ ರೂಪಾಯಿಗೂ ಅಧಿಕ ಮೌಲ್ಯ ಹೊಂದಿದೆ. ಆಟೋ ಡ್ರೈವರ್ ಆಗಿದ್ದ ಸತ್ಯ ಶಂಕರ್ ಇತ್ತೀಚೆಗೆ ಅತೀ ದುಬಾರಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಖರೀದಿಸಿದ್ದಾರೆ. ಕರ್ನಾಟಕದಲ್ಲಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರಿನ ಬೆಲೆ ಸರಿಸುಮಾರು 11.30 ಕೋಟಿ ರೂಪಾಯಿ.

Categories
ಕರಾವಳಿ ರಾಜ್ಯ ವಿಶೇಷ ಸುದ್ದಿ

ರಾಜ್ಯದ ಶಿಕ್ಷಣ ದಾಸೋಹದ ಸಂತ ಡಾ.ಮೋಹನ್ ಆಳ್ವಾ!

ರಾಜ್ಯದ ಶಿಕ್ಷಣ ದಾಸೋಹದ ಸಂತ ಡಾ.ಮೋಹನ್ ಆಳ್ವ!
– ಗುಣಮಟ್ಟದ ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಲೋಕದ ರಾಯಭಾರಿ: ಸಾವಿರಾರು ಮಂದಿಗೆ ಉದ್ಯೋಗದಾತ
– ಹುಟ್ಟು ಹಬ್ಬದ ಶುಭಾಶಯಗಳು ಸಾರ್

NAMMUR EXPRESS NEWS
ಮೂಡಬಿದರೆ: ರಾಜ್ಯದ ಶಿಕ್ಷಣ ದಾಸೋಹದ ಸಂತ, ಶಿಕ್ಷಣ ತಜ್ಞ, ಆಳ್ವಾಸ್ ಶಿಕ್ಷಣ ಸಂಸ್ಥಾಪಕ ಮೋಹನ್ ಆಳ್ವ ಅವರ ಜನ್ಮ ದಿನ ಮೇ 31. ದೇಶದ ಶಿಕ್ಷಣ ಕ್ಷೇತ್ರದಲ್ಲಿ ಇವರದ್ದು ದೊಡ್ಡ ಹೆಸರು. 3 ದಶಕಗಳಿಂದ ಗುಣಮಟ್ಟದ ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಲೋಕದ ರಾಯಭಾರಿಯಾಗಿ ಲಕ್ಷ ಲಕ್ಷ ಮಂದಿಗೆ ಉದ್ಯೋಗದಾತರಾಗಿದ್ದು, ಕೋಟ್ಯಂತರ ವಿದ್ಯಾರ್ಥಿಗಳ ಬದುಕಿಗೆ ಗುರುಗಳಾಗಿದ್ದಾರೆ. ಇದೀಗ ಮೇ 31 ಅವರ ಹುಟ್ಟು ಹಬ್ಬದಂದು ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಆಳ್ವಾಸ್ ಪ್ರಗತಿ ಮೂಲಕ ಪ್ರತಿ ವರ್ಷ ಉದ್ಯೋಗ ಮೇಳ ಆಯೋಜಿಸಿ ಸಾವಿರಾರು ಮಂದಿಗೆ ಉದ್ಯೋಗ ಕೂಡ ಕೊಡಿಸುತ್ತಿದ್ದಾರೆ.

ಕೃಷಿ ಕುಟುಂಬದಲ್ಲಿ ಹುಟ್ಟಿ ಸಾಧನೆ!

ಡಾ.ಮೋಹನ್ ಆಳ್ವ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಮಿಜಾರು ಎಂಬಲ್ಲಿ ಮೇ 31, 1952 ರಂದು ಕೃಷಿಕ ಕುಟುಂಬದಲ್ಲಿ ಜನಿಸಿದರು. ಇವರು ತಮ್ಮ ಸ್ಥಳೀಯ ಹಳ್ಳಿಯಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದು, ನಂತರ ಉನ್ನತ ಶಿಕ್ಷಣವನ್ನು ಉಡುಪಿಯ ಎಸ್ ಡಿ ಎಂ ಆಯುರ್ವೇದ ಕಾಲೇಜಿನಲ್ಲಿ ಪಡೆದರು. 1995ರಲ್ಲಿ ಆಳ್ವಾಸ್ ಎಜುಕೇಶನ್ ಫೌಂಡೇಶನ್ (ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ)ವನ್ನು ಸ್ಥಾಪಿಸಿದರು. ಪ್ರತಿ ವರ್ಷ 25,000ಕ್ಕೂ ಅಧಿಕ ವಿದ್ಯಾರ್ಥಿಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಸಂಸ್ಥೆಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ವೈದ್ಯರಾಗಿ ಬಡವರಿಗೆ, ಎಚ್‌ಐವಿ ಸೋಂಕಿತರಿಗೆ ಸಹಾಯ ಮಾಡಿದ್ದಾರೆ.

ಭಾರತೀಯ ಶಾಸ್ತ್ರೀಯ ಮತ್ತು ಸಾಂಪ್ರದಾಯಿಕ ಸಂಗೀತ, ನೃತ್ಯ, ನಾಟಕ ಹಾಗೂ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಸಾವಿರಾರು ಕ್ರೀಡಾಪಟುಗಳು, ಸಾಂಸ್ಕೃತಿಕ ನಾಯಕರನ್ನು ತಯಾರು ಮಾಡಿದ ನಾಯಕರು ಡಾ.ಮೋಹನ್ ಆಳ್ವ. ಆಳ್ವಾಸ್ ನುಡಿ ಸಿರಿ ಮೂಲಕ ಸಾಂಸ್ಕೃತಿಕ ಕ್ಷೇತ್ರಕ್ಕೆ ಅನೇಕ ಸಾಧಕರನ್ನು ನೀಡಿದ್ದಾರೆ. ಜತೆಗೆ ಸಂಸ್ಕೃತಿ, ಕಲೆ, ಜಾನಪದ, ಸಾಂಸ್ಕೃತಿಕ ಕ್ಷೇತ್ರಕ್ಕೆ ಅತೀ ಹೆಚ್ಚು ಕೊಡುಗೆ ನೀಡಿದ್ದಾರೆ.

ಪ್ರತಿ ವರ್ಷವೂ 5000ಕ್ಕೂ ಹೆಚ್ಚು ಮಂದಿಗೆ ಉದ್ಯೋಗ!

ಆಳ್ವಾಸ್ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿ ವರ್ಷವೂ 5000ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡುವ ಮೂಲಕ ಸಾವಿರಾರು ಕುಟುಂಬಗಳಿಗೆ ಉದ್ಯೋಗದಾತರಾಗಿದ್ದಾರೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷ ಲಕ್ಷ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದಾರೆ.

ಬಡವರ ಪಾಲಿನ ಅರೋಗ್ಯದಾತ!

ವೈದ್ಯಕೀಯ ಸೇವೆಗಳನ್ನು ಸುಸಜ್ಜಿತ 300 ಹಾಸಿಗೆಯ ‘ಆಳ್ವಾಸ್ ಆರೋಗ್ಯ ಕೇಂದ್ರ ‘ದಲ್ಲಿ ಅನುಭವಿ ವೈದ್ಯರು ಮತ್ತು ಬಹು ವಿಶೇಷ ವೈದ್ಯಕೀಯ ಸೇವೆಯನ್ನು ಕಲ್ಪಿಸಿದ್ದಾರೆ. ಇಲ್ಲಿನ ಜನರು ವೈದ್ಯಕೀಯ ಸೇವೆಗಾಗಿ 35- 40 ಕಿ. ಮಿ ದೂರ ದಣಿದು ಮಂಗಳೂರು ತೆರಳಬೇಕಿತ್ತು, ಇಲ್ಲಿನ ಜನರ ಸೇವೆ ಮಾಡಲು ಆರೋಗ್ಯ ಕೇಂದ್ರವನ್ನು ಸ್ಥಾಪಿಸಿದ್ದರು. ಅವರು ಮೂಡಬಿದ್ರೆ ಜಿಲ್ಲೆಯಲ್ಲಿ ಮೊದಲ ಹಾವು ಕಡಿತದ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಿದರು. ಅನೇಕ ಪ್ರಕರಣಗಳಲ್ಲಿ ಇದುವರೆಗೂ 2 ಅಥವಾ 3 ಸಾವಿನ ಪ್ರಕರಣಗಳು ಹೊರತುಪಡಿಸಿ ಹಾವು ಕಡಿತದಿಂದ ಸುಮಾರು 6000 ಪ್ರಕರಣಗಳಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ. 1990ರಲ್ಲಿ ಅವರು ಸ್ಥಾಪಿಸಿದ ಉಚಿತ ಬರ್ತ್ ಕಂಟ್ರೋಲ್ ಸೆಂಟರ್ ಅಲ್ಲಿ ಸಾವಿರಾರು ಜನರು ಆಳ್ವಾಸ್‌ ಆರೋಗ್ಯ ಕೇಂದ್ರದಲ್ಲಿ ಉಚಿತ ಬರ್ತ್ ಕಂಟ್ರೋಲ್ ಟ್ರೀಟ್ಮೆಂಟ್ ಪಡೆದ್ದಿದ್ದಾರೆ. ಬಳಿಕ ಎಚ್ ಐ ವಿ ಪಾಸಿಟಿವ್ ರೋಗಿಗಳು ಎದುರಿಸುವ ತೊಂದರೆಗಳನ್ನು ಅರಿತ ಎಚ್‌ಐವಿ ಉಚಿತ ಚಿಕಿತ್ಸೆ ಕೇಂದ್ರವಾಗಿ ಉನ್ನತೀಕರಿಸಲಾಯಿತು.

ಡಾ ಎಂ. ಮೋಹನ್ ಆಳ್ವರ ನಾಯಕತ್ವದಲ್ಲಿ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಡಿಯಲ್ಲಿ ವಿವಿಧ ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಬೋಧನಾ ವಿಧಾನ ಪಠ್ಯಕ್ರಮದ ಮಿತಿ ಇಲ್ಲದೆ, ವ್ಯಕ್ತಿತ್ವ ಬೆಳವಣಿಗೆ, ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡೆಗಳು, ಫೈನ್ ಆರ್ಟ್ಸ್ ಮತ್ತು ತರಬೇತಿ ಪಡೆದ ಶಿಕ್ಷಕರ ಅಡಿಯಲ್ಲಿ ರಾಷ್ಟ್ರೀಯ ಏಕೀಕರಣ ಕಡೆಗೆ ಇತರ ಸಾಮಾಜಿಕ ತರಬೇತಿಯನ್ನು ನೀಡುತ್ತಿದೆ.

ಆಳ್ವಾಸ್ ವಿದ್ಯಾ ಸಂಸ್ಥೆಗಳ ಸಾಧನೆ

ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ
ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ
ಆಳ್ವಾಸ್ ಕೇಂದ್ರೀಯ ವಿದ್ಯಾಲಯ ಆಳ್ವಾಸ್ ವಿಶೇಷ ಮಕ್ಕಳ ಶಾಲೆ
ಆಳ್ವಾಸ್ ಪದವಿ ಪೂರ್ವ ಕಾಲೇಜು
ಆಳ್ವಾಸ್ ಕಾಲೇಜು(ಸ್ನಾತಕ, ಸ್ನಾತಕೋತ್ತರ)
ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು
ಆಳ್ವಾಸ್ ಹೋಮಿಯೋಪಥಿ ಮೆಡಿಕಲ್ ಕಾಲೇಜು
ಆಳ್ವಾಸ್ ಕಾಲೇಜ್ ಆಫ್ ಫಿಸಿಯೋಥೆರಪಿ
ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್
ಆಳ್ವಾಸ್ ನರ್ಸಿಂಗ್ ಕಾಲೇಜು
ಆಳ್ವಾಸ್ ನ್ಯಾಚುರೋಪತಿ ಆಂಡ್ ಯೋಗಿಕ್ ಸೈನ್ಸ್
ಆಳ್ವಾಸ್ ಕಾಲೇಜ್ ಆಫ್ ಮೆಡಿಕಲ್ ಲ್ಯಾಬ್ ಟಕ್ನಿಷಿಯನ್
ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ
ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯ
ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು

ವಿಶೇಷ ಚೇತನರಿಗೂ ನೆರವು

ಮೂಡಬಿದಿರೆಯ ಸುಮಾರು 700 ವಿಕಲಾಂಗ ಮಕ್ಕಳಿಗೆ ಸ್ಕಾಲರ್ ಶಿಪ್ ನೀಡುತ್ತಾ ಬಂದಿದ್ದಾರೆ. 2008 ರಲ್ಲಿ ಆಳ್ವ ರವರ ಬೆಳವಣಿಗೆಯ ಅಸಮರ್ಥ್ಯ ಮಕ್ಕಳಿಗೆ ಗುಣಮಟ್ಟದ ಜೀವನ ಮತ್ತು ಶಿಕ್ಷಣ ಒದಗಿಸುವ ಸಲುವಾಗಿ ಒಂದು ಶಾಲೆಯ ಆರಂಭಿಸಲು ನಿರ್ಧರಿಸಿದ್ದರು. ಪ್ರಸ್ತುತ 25 ಮಕ್ಕಳು,ವಿಶೇಷವಾಗಿ ತರಬೇತಿ ಪಡೆದ ಶಿಕ್ಷಕರು ಮತ್ತು ಸಾಮಾಜಿಕ ಕೆಲಸಗಾರರ ಮೂಲಕ ತರಬೇತಿ ಪಡೆಯುತ್ತಿದ್ದಾರೆ. ಯಾವುದೆ ಹಣಕಾಸಿನ ನೆರವು ಅಥವಾ ಬೆಂಬಲವಿಲ್ಲದೆ ಇವರು ಈ ಶಾಲೆಯನ್ನು ನಡೆಸುತ್ತಿದ್ದಾರೆ. ಮೂಡಬಿದ್ರೆ ಮತ್ತು ಸುಮಾರು ಬಡ ಗ್ರಾಮೀಣ ಶಾಲೆಗಳಿಗೆ ಶಿಕ್ಷಕರ ತುರ್ತು ಅವಶ್ಯಕತೆ ಅರಿತ 25-30 ಶಿಕ್ಷಕರನು ಒದಗಿಸಿ, ಶಿಕ್ಷಕರ ಮಾಸಿಕ ವೇತನವನ್ನು ನೋಡಿಕೊಳ್ಳುತ್ತಿದ್ದಾರೆ. ಈ ವರ್ಷವು 30 ಶಿಕ್ಷಕರನ್ನು ಡಾ ಆಳ್ವರವರು ಹಿಂದುಳಿದ ಗ್ರಾಮೀಣ ಶಾಲೆಗಳಿಗೆ ಉಚಿತವಾಗಿ ನೀಡಿದ್ದಾರೆ.

ಕ್ರೀಡಾ ಕ್ಷೇತ್ರದ ಭೀಷ್ಮ

ಡಾ.ಮೋಹನ್ ಆಳ್ವರವರು ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಪ್ರೋತ್ಸಾಹ ಉಪಕ್ರಮಗಳಿಗೆ ಹೆಸರುವಾಸಿಯಾಗಿದೆ.ಅವರ ಕಾಲೇಜು ದಿನಗಳಲ್ಲಿ ಉತ್ತಮ ಕ್ರೀಡಾಪಟು, ಅವರ ಉತ್ಸಾಹ ಮತ್ತು ಪ್ರಬಲ ದೃಷ್ಟಿಯಿಂದ ಯುವಕ ಯುವತಿಯರನ್ನು ಪ್ರೋತ್ಸಾಹಿಸಲು ‘ಏಕಲವ್ಯ ಸ್ಪೋರ್ಟ್ಸ್ ಕ್ಲಬ್.1984ರಲ್ಲಿ ಸ್ಥಾಪಿಸಿದರು. ನಂತರ ಸುಮಾರು 600-650 ವಿದ್ಯಾರ್ಥಿಗಳು ಈ ಯೋಜನೆಯಡಿಯಲ್ಲಿ ಸರಿಯಾಗಿ ತರಬೇತಿ ನೀಡಿ ಉಚಿತ ಆಹಾರ ಮತ್ತು ವಸತಿಯನ್ನು ಕಲ್ಪಿಸಲಾಗಿದೆ.ಈಗ ಸುಮಾರು 100 ಕ್ರೀಡಾ ಪುರುಷರು ಮತ್ತು ಮಹಿಳೆಯರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಉತ್ತಮ ಹೆಸರು ತಂದುಕೊಟ್ಟಿದ್ದಾರೆ ಮತ್ತು ಈಗ ಅವರು ಚೆನ್ನಾಗಿ ಜೀವನದಲ್ಲಿ ಮುಂದುವರಿಯುತ್ತಿದ್ದಾರೆ, 2008 ರಲ್ಲಿ ಸುಮಾರು 200 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಆಹಾರ ಮತ್ತು ಸೌಕರ್ಯಗಳನ್ನು ಕ್ರೀಡಾ ವಿಭಾಗದಲ್ಲಿ ಕಲ್ಪಿಸಿಕೊಟ್ಟಿದ್ದಾರೆ. ದೇಶಕ್ಕೆ ಅತೀ ಹೆಚ್ಚು ಕ್ರೀಡಾಪಟುಗಳನ್ನು ಆಳ್ವಾಸ್ ಸಂಸ್ಥೆ ಕೊಟ್ಟಿದೆ. ಈಗ ಅವರ ಪುತ್ರರಾದ ವಿವೇಕ್ ಆಳ್ವ ಮತ್ತು ವಿನಯ್ ಆಳ್ವ ಸಂಸ್ಥೆಯ ಏಳ್ಗೆಗಾಗಿ ತಂದೆಯ ಹಾದಿಯಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ.

Categories
ಕರಾವಳಿ ವಿಶೇಷ ಸುದ್ದಿ

ನಮ್ಮೂರ್ ಸಾಧಕರು – ಕರಾವಳಿಯ ಮಾಲತಿ ಹೊಳ್ಳ ಎಂಬ ಮಹಾನ್ ಸಾಧಕಿ

ನಮ್ಮೂರ್ ಸಾಧಕರು
ಪ್ರತಿ ಕ್ಷಣವು ನೋವಲ್ಲಿ ಬೆಂದರೂ ಭಾರತದ ಕೀರ್ತಿ ಪತಾಕೆ ಹಾರಿಸಿದರು!
– ಕರಾವಳಿಯ ಮಾಲತಿ ಹೊಳ್ಳ ಎಂಬ ಮಹಾನ್ ಸಾಧಕಿ
– ಪೋಲಿಯೋದಲ್ಲಿ ಕಾಲು ಕಳೆದುಕೊಂಡರೂ ದೇಶದ ಹಿರಿಮೆ ಹೆಚ್ಚಿಸಿದರು!
– 32 ಬಾರಿ ಆಪರೇಷನ್: ಆದ್ರೂ ಛಲ ಬಿಡದೆ ಸಾಧನೆ

ಬಂಗಾರ ಸಿದ್ಧವಾಗುವ ಮೊದಲು ಬ ಬೆಂದಿರುತ್ತದೆ. ಹಾಗೆಯೇ ಕೆಲವೊಮ್ಮೆ ಬೇಯುವ ಬಯಕೆ ಇಲ್ಲದೆ ಹೋದರೂ ಅನಿವಾರ್ಯ ಪರಿಸ್ಥಿತಿಗಳು ಕೆಂಡಕ್ಕೆ ನೂಕಿರುತ್ತವೆ. ಅದಾಗಿಯೂ ಛಲ ಎಂಬುದೊಂದು ಅಂತಹ ಸಮಯದಲ್ಲಿ ಮತ್ತು ಎಂತದ್ದೇ ಸಂದರ್ಭದಲ್ಲೂ ಬದುಕಿಸಿಬಿಡುತ್ತದೆ. ಹಾಗೊಬ್ಬ ಸಾಧಕಿಯೇ ಮಾಲತಿ ಹೊಳ್ಳ ಕ್ರೀಡಾ ಲೋಕದಲ್ಲಿ ವಿಶ್ವವೇ ಬೆರಗಾಗುವಂತಹ ಸಾಧನೆ ಮಾಡಿದ ಈಕೆಯ ಏಳು ಬೀಳಿನ ಹಾದಿ ನಿಜಕ್ಕೂ ರೋಚಕ.

ಪೋಲಿಯೋದಲ್ಲಿ ಕಾಲು ಸ್ವಾಧೀನ ಹೋಯ್ತು…

ಮಾಲತಿ ಹೊಳ್ಳ ಮೂಲತಃ ಉಡುಪಿ ಜಿಲ್ಲೆಯ ಮಣ್ಣೂರು ಗ್ರಾಮದವರು. ತಂದೆ ಕೃಷ್ಣಮೂರ್ತಿ ಹೊಳ್ಳ, ತಾಯಿ ಪದ್ಮಾವತಿ. ಜುಲೈ 6, 1958 ರಲ್ಲಿ ಜನಿಸಿದರು. ಈಕೆ ಒಂದು ವರ್ಷದ ಮಗುವಾಗಿದ್ದಾಗಲೇ ಪೋಲಿಯೋ ಎಂಬ ಭಯಂಕರ ವ್ಯಾಧಿಗೆ ತುತ್ತಾಗಿ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದವು. ಇವರನ್ನು ಚೆನ್ನೈನ ದತ್ತಾತ್ರೇಯ ಮೆಡಿಕಲ್ ಸೆಂಟರ್ ಎಂಬ ಪುನರ್ವಸತಿ ಕೇಂದ್ರಕ್ಕೆ ಚಿಕಿತ್ಸೆ ಗಾಗಿ ಸೇರಿಸಲಾಗಿ ಅಲ್ಲಿಯೇ ಆಕೆಯ ಬಾಲ್ಯದ ಬಹುಭಾಗ ಕಳೆಯುವಂತಾಯಿತು.

32 ಬಾರಿ ಆಪರೇಷನ್: ಆದ್ರೂ ಛಲ ಬಿಡದೆ ಸಾಧನೆ

ಈಕೆಗೆ ಇದ್ದದ್ದು ದೇಹದ ನರಗಳೆಲ್ಲ ಚೆಂಡಿನಂತೆ ಒಂದು ಗೂಡುವ ಕಾಯಿಲೆ. ಇದನ್ನು ತಪ್ಪಿಸಲು ಪ್ರತಿ ಆರು ತಿಂಗಳಿಗೊಮ್ಮೆ ಮಾಲತಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿತ್ತು. ಇಂತಹ 32 ಶಸ್ತ್ರ ಚಿಕಿತ್ಸೆಗಳನ್ನು ಮಾಡಲಾಯಿತು. ಆದರೂ ಪ್ರತೀ ಪರೀಕ್ಷೆಯಲ್ಲಿ ಮಾಲತಿ ತರಗತಿಗೆ ಮೊದಲಿಗರು. ಇವರು 1975 ರಲ್ಲಿ ಬೆಂಗಳೂರಿಗೆ ಹಿಂತಿರುಗಿ ಮಹಾರಾಣಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ತಂದೆಯ ಪ್ರೋತ್ಸಾಹ ಅವರಲ್ಲಿ ಹೆಚ್ಚು ಧೈರ್ಯ ತುಂಬಿತ್ತು. ಅದೇ ವರ್ಷ ರಾಷ್ಟ್ರೀಯ ಅಂಗವಿಕಲರ ಕ್ರೀಡಾಕೂಟದಲ್ಲಿ ಭಾಗವಹಿಸಿ ಎರಡು ಚಿನ್ನದ ಪದಕ ಎರಡು ಬೆಳ್ಳಿಯ ಪದಕಗಳನ್ನು ಗಳಿಸಿದ ಮಾಲತಿ ಹೊಳ್ಳ ಕ್ರೀಡೆಯಲ್ಲಿ ಅವರ ಒಲವನ್ನು ಹೆಚ್ಚಿಸಿಕೊಂಡು ಅಹಮದಾಬಾದ್ ನಲ್ಲಿ ನಡೆದ ಗಾಲಿಕುರ್ಚಿಯ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಅವರ ಜೊತೆ ಸ್ಪರ್ಧಿಸಲು ಮಹಿಳೆಯರೇ ಇಲ್ಲದ ಕಾರಣ ಪುರುಷ ಸ್ಪರ್ಧಿಗಳೊಂದಿಗೆ ಸ್ಪರ್ಧಿಸಬೇಕಾಯಿತು. ಅವರೆಲ್ಲ ಆಗಲೇ ಹೆಸರು ಮಾಡಿದವರು. ಆದರೆ ಅಲ್ಲಿಯೂ ಮಾಲತಿಯೇ ಗೆದ್ದರು. ಕೊರಿಯಾ, ಡೆನ್ಮಾರ್ಕ್, ಬೀಜಿಂಗ್, ಬ್ಯಾಂಕಾಕ, ಬೆಲ್ಲಿಯಂ, ಬಮಿರ್ಂಗ್ ಹ್ಯಾಂ, ಮ್ಯಾಂಚೆಸರುಗಳಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ವಿಷಿಯಾಡ್ ಕ್ರೀಡಾ ಕೂಟಗಳಲ್ಲಿ ಗಾಲಿ ಪಚಕ್ ಓಟ, ಗುಂಡು ಎಸೆತ, ತಟ್ಟೆ ಎಸೆತ, ಈಟಿ ಎಸೆದ ಸ್ಪರ್ಧೆಗಳಲ್ಲಿ ಮಾಲತಿ ಹೊಳ್ಳ ಭಾಗವಹಿಸಿ, ವಿಜಯಿಯಾದಾಗ ಇಡೀ ವಿಶ್ವವೇ ಅವರತ್ತ ತಿರುಗಿತು. ಬಮಿರ್ಂಗ್ಯಾಂಗೆ ಹೋದಾಗ, ಬಸ್ಸಿನಿಂದ ಬಿದ್ದು ಮೂಳೆ ಮುರಿದರೂ ಅವರ ಉತ್ಸಾಹ ಮಾತ್ರ ತಗ್ಗಲಿಲ್ಲ. ಇದು ಅವರಿಗೆ 17ನೇ ಮೂಳೆ ಮುರಿತ !

ದೇಶ, ವಿದೇಶದ ಪ್ರಶಸ್ತಿ, ಗೌರವ

ಕ್ರೀಡಾ ಜಗತ್ತಿನಲ್ಲಿ ಮಾಲತಿ ಹೊಳ್ಳರ ಸಾಧನೆಯನ್ನು ಪರಿಗಣಿಸಿ, ಭಾರತ ಸರ್ಕಾರ ಅರ್ಜುನ ಪ್ರಶಸ್ತಿ (1995), ಪದ್ಮಶ್ರೀ ಪ್ರಶಸ್ತಿ (2001) ನೀಡಿ ಗೌರವಿಸಿತು. ಕೆ.ಕೆ. ಬಿರ್ಲಾ ಪ್ರಶಸ್ತಿ, ಅಮೆರಿಕನ ಬಯೋಗ್ರಾಫಿಕಲ್ ಇನ್ಸಿಟ್ಯೂಟ್ಸ ವರ್ಷದ ಮಹಿಳಾ ಪ್ರಶಸ್ತಿ, ಇಂಗ್ಲೆಂಡಿನ ಅಂತಾರಾಷ್ಟ್ರೀಯ ಬಯೋಗ್ರಾಫಿಕಲ್ ಕೇಂದ್ರದ ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿ, ಕರ್ನಾಟಕ ಸರ್ಕಾರದ ಏಕಲವ್ಯ ಪ್ರಶಸ್ತಿ, ಮುಂತಾದ 30 ಕ್ಕೂ ಮೀರಿ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಮಾಲತಿ ಹೊಳ್ಳ ಭಾಜನರಾಗಿದ್ದಾರೆ.

ಅಭಿನಯ ಜಗತ್ತಿಗೂ ಎಂಟ್ರಿ: ಡಾ. ರಾಜ್ ಜತೆ ನಟನೆ

ಅಭಿನಯ ಜಗತ್ತಿಗೂ ಮಾಲತಿ ಹೊಳ್ಳ ಹೊರತಾಗಿಲ್ಲ. ಡಾ. ರಾಜ್ ಕುಮಾರ್ ಅವರೊಡ ‘ಕಾಮನಬಿಲ್ಲು’ ಚಲನಚಿತ್ರದಲ್ಲಿ ಅಭಿನಯಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಾಲತಿ ಹೊಳ್ಳ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ. ವಿಧಿ ಬದುಕಿನಲ್ಲಿ ಕೊಟ್ಟ ನೋವನ್ನು ನುಂಗಿ. ವಿಶ್ವ ಬೆರಗಾಗುವಂತೆ ಬೆಳೆದಿರುವುದರಲ್ಲಿ ಅವರ ಪರಿಶ್ರಮವಿದೆ. ಅವರ ಸಾಧನೆಯನ್ನು ಕುರಿತು ಬರೆಯಲಾದ ಪ್ರೌಢ ಪ್ರಬಂಧವೊಂದಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.

ವಿಕಲಚೇತನರ ಸೇವೆಗಾಗಿ ಈ ಸೇವಾ ಸಂಸ್ಥೆ ಸ್ಥಾಪನೆ

ತಮ್ಮಂತೆಯೇ ವಿಕಲಚೇತನರಾದ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಆಶ್ರಯ, ಶಿಕ್ಷಣ, ವೈದ್ಯಕೀಯ ನೆರವು ನೀಡುವ ಸಲುವಾಗಿ ‘ಮಾತೃ ಫೌಂಡೇಶನ್’ ಎಂಬ ಸೇವಾ ಸಂಸ್ಥೆಯ ಪ್ರಾರಂಭಿಸಿದ್ದಾರೆ. ಸದಾ ಚಟುವಟಿಕೆ ಅವರ ಯಶಸ್ಸಿನ ಗುಟ್ಟು. (ಕೀಳರಿಮೆಗಿಂತ ಮಿಗಿಲ ಅಂಗವೈಕಲ್ಯವಿಲ್ಲ. ನಾವು ನಗುತ್ತಲೇ ಜೀವನವನ್ನು ಎದುರಿಸಬೇಕು ಎನ್ನುವುದು ಅವರ ಸಿದ್ಧಾಂತ) ಮಾಲತಿ ಹೊಳ್ಳರ ಜೀವನ ವಿಶೇಷ ಚೇತನರಿಗೆ (ವಿಭಿನ್ನ ಸಾಮರ್ಥ್ಯವುಳ್ಳವರು) ಮಾತ್ರವ ಎಲ್ಲ ಮಹಿಳೆಯರಿಗೂ ಸ್ಫೂರ್ತಿದಾಯಕ. ಛಲಗಾತಿ ಮಾಲತಿ ವಿಶೇಷ ಚೇತನರ ಕ್ರೀಡಾಪ್ರಪಂಚ ಹಲವು ದಾಖಲೆಗಳನ್ನು ನಿರ್ಮಿಸಿ, ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

– ಸಂಗ್ರಹ (ಪುಸ್ತಕ ಮತ್ತು ಇಂಟರ್ನೆಟ್)

Categories
ವಿಶೇಷ ಸುದ್ದಿ

ಹ್ಯಾಪಿ ಅಣ್ಣ್ ತಮ್ಮಂದಿರ ದಿನ..!

ಹ್ಯಾಪಿ ಅಣ್ಣ್ ತಮ್ಮಂದಿರ ದಿನ..!
– ರಾಷ್ಟ್ರೀಯ ಸಹೋದರರ ದಿನ
– ಅಣ್ಣ ತಮ್ಮಂದಿರ ಪ್ರೀತಿ, ವಾತ್ಸಲ್ಯಕ್ಕೆ ಸಲಾಂ

NAMMUR EXPRESS NEWS
ಜೀವನದಲ್ಲಿ ನಾವು ಯಾರೊಂದಿಗಾದ್ರೂ ಹೆಚ್ಚು ಕೀಟಲೆ ಮಾಡ್ತೀವಿ, ತೊಂದರೆ ಕೊಡ್ತೀವಿ… ಅತೀ ಹೆಚ್ಚು ನಂಬುತ್ತೇವೆ ಎಂದರೆ ಬಹುಶಃ ಅದು ನಮ್ಮ ಅಣ್ಣ-ತಮ್ಮಂದಿರೊಂದಿಗೆ ಮಾತ್ರ. ಸದಾ ಜಗಳವಾಡುತ್ತಾ, ಬೈದಾಡಿಕೊಳ್ಳುತ್ತಾ ಇರುವ ಈ ಸಂಬಂಧದಲ್ಲಿ ವಿವರಿಸಲಾಗದಷ್ಟು ಪ್ರೀತಿಯೂ ಇರುತ್ತದೆ. ಅಣ್ಣ-ತಮ್ಮಂದಿರು ನಮ್ಮ ಬದುಕಿನ ಸೈನಿಕರಂತೆ ಎಂದರೂ ತಪ್ಪಾಗಕ್ಕಿಲ್ಲ. ನಾವಷ್ಟೇ ಜಗಳ ಮಾಡಿದರೂ ಬೇರೆಯವರ ಎದುರು ನಮ್ಮನ್ನು ಬಿಟ್ಟುಕೊಡದ ನಿಸ್ವಾರ್ಥ ಪ್ರೀತಿ ಅವರದ್ದು. ಇಂತಹ ಪರಿಶುದ್ಧ ಪ್ರೀತಿ ನೀಡುವ ಸಹೋದರರ ಬಾಂಧವ್ಯವನ್ನು ಗೌರವಿಸುವ ದಿನವನ್ನು ರಾಷ್ಟ್ರೀಯ ಸಹೋದರರ ದಿನ ಎಂದು ವಿಶೇಷವಾಗಿ ಆಚರಿಸಲಾಗುತ್ತದೆ.

ಸಹೋದರರು ನಮ್ಮ ಪಾಲಿಗೆ ದೇವರು ನೀಡಿದ ಆಶೀರ್ವಾದ ಎಂದರೂ ತಪ್ಪಾಗಲಿಕ್ಕಿಲ್ಲ. ನಮ್ಮ ಅಪರಾಧದಲ್ಲಿ ಭಾಗಿಯಾಗಿ, ನಮ್ಮ ತಪ್ಪನ್ನೆಲ್ಲಾ ತನ್ನ ತಲೆ ಮೇಲೆ ಹಾಕಿಕೊಂಡು ನಮ್ಮನ್ನು ರಕ್ಷಿಸುವ, ಸದಾ ನಮಗೆ ಬೆಂಬಲ ನೀಡುತ್ತಾ, ನೋವಿಗೆ ಹೆಗಲಾಗುವ ಸಹೋದರರ ಪ್ರೀತಿ ಅವ್ಯಕ್ತ ರೂಪದಲ್ಲಿ ಇರುವುದು ಸುಳ್ಳಲ್ಲ. ಸಹೋದರರ ಜೊತೆ ಕಳೆದ ಕ್ಷಣಗಳು ನಿಮಗೆ ಅದೆಷ್ಟೋ ದಿನಗಳು ಕಳೆದರು ಮಾಸುವುದಿಲ್ಲ. 8 ವರ್ಷದವರಿದ್ದಾಗ ಸಹೋದರರ ಜೊತೆ ಕಳೆದ ನೆನಪುಗಳು 80 ವರ್ಷ ಕಳೆದರೂ ಹಸಿರಾಗಿಯೇ ಇರುತ್ತದೆ.

ರಾಷ್ಟ್ರೀಯ ಸಹೋದರರ ದಿನ ಯಾವಾಗ, ಈ ದಿನದ ಇತಿಹಾಸವೇನು?

ಪ್ರತಿ ವರ್ಷ ಮೇ ತಿಂಗಳ 24ನೇ ತಾರೀಕಿನಂದು ರಾಷ್ಟ್ರೀಯ ಸಹೋದರರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಸಹೋದರರ ದಿನ ಶುಕ್ರವಾರ ಬಂದಿದೆ. ಸಹೋದರರ ದಿನದ ಆಚರಣೆ 2005ರಿಂದ ಆರಂಭವಾಯಿತು ಎಂದು ಹೇಳಲಾಗುತ್ತದೆ. ಈ ದಿನದ ಬಗ್ಗೆ ಇರುವ ಸ್ವಲ್ಪವೇ ಮಾಹಿತಿಯ ಪ್ರಕಾರ ಅಲಬಾಮಾದ ಸಿ. ಡೇನಿಯಲ್‌ ರೋಡ್ಸ್‌ ಅವರು ಸಹೋದರರ ದಿನವನ್ನು ಆಚರಿಸಲು ಕರೆ ನೀಡಿದರು ಎನ್ನಲಾಗುತ್ತದೆ.

ರಾಷ್ಟ್ರೀಯ ಸಹೋದರರ ದಿನದ ಮಹತ್ವ:

ಬಾಲ್ಯದಿಂದಲೂ ನಮೆಲ್ಲಾ ಅಪರಾಧ ಕೃತ್ಯಗಳಲ್ಲಿ ಭಾಗಿ, ನಮಗೆ ಬೆಂಬಲದ ಮೂಲವಾಗಿ ಯಾರೂ ನಮ್ಮನ್ನು ಅರ್ಥ ಮಾಡಿಕೊಳ್ಳದೇ ಇದ್ದಾಗ ಅರ್ಥ ಮಾಡಿಕೊಂಡು ಪ್ರೀತಿಸುವ ಸಹೋದರರ ಸಂಬಂಧ ಎಲ್ಲಕ್ಕಿಂತ ಮಿಗಿಲಾದುದು ಎಂದರೆ ತಪ್ಪಲ್ಲ. ಈ ವಿಶೇಷ ದಿನವು ಸಹೋದರರ ಪ್ರೀತಿಯನ್ನು ಗುರುತಿಸುವ ದಿನವಾಗಿದೆ. ಇದು ಕುಟುಂಬ ಸಂಬಂಧಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ, ಬಿಕ್ಕಟ್ಟು ಮತ್ತು ಒಂಟಿತನದ ಸಮಯದಲ್ಲಿ ಸಹೋದರರು ಒದಗಿಸುವ ಸೌಕರ್ಯ ಮತ್ತು ಪರಿಹಾರವನ್ನು ನಮಗೆ ನೆನಪಿಸುತ್ತದೆ.

Categories
ವಿಶೇಷ ಸುದ್ದಿ

ಜೀವನ ಪ್ರೀತಿ ಕಲಿಸಿದ ಬುದ್ಧ!

ಜೀವನ ಪ್ರೀತಿ ಕಲಿಸಿದ ಬುದ್ಧ!
– ಗೌತಮ ಬುದ್ಧ ಹೇಳಿದ ಜೀವನ ಪಾಠ: ಬುದ್ಧ ಜಯಂತಿ ಆಚರಣೆ ಹೇಗೆ?
– ಬುದ್ಧ ಜಯಂತಿಯ ಇತಿಹಾಸ ಏನು?

NAMMUR EXPRESS NEWS
ಬುದ್ಧ ಜಯಂತಿ ಅಥವಾ ವೈಶಾಖಿ ಬುದ್ಧ ಪೂರ್ಣಿಮಾ ಅಥವಾ ವೆಸಾಕ್ ಎಂದೂ ಕರೆಯಲ್ಪಡುವ ಬುದ್ಧ ಪೂರ್ಣಿಮಾ ಹಬ್ಬವು ಗೌತಮ ಬುದ್ಧನ ಜನ್ಮ ದಿನವನ್ನು ಸೂಚಿಸುತ್ತದೆ. ಭಾರತ, ಶ್ರೀಲಂಕಾ, ನೇಪಾಳ, ಭೂತಾನ್, ಟಿಬೆಟ್, ಥೈಲ್ಯಾಂಡ್, ಚೀನಾ, ಕೊರಿಯಾ, ಲಾವೋಸ್, ವಿಯೆಟ್ನಾಂ, ಮಂಗೋಲಿಯಾ, ಕಾಂಬೋಡಿಯಾ ಮತ್ತು ಇಂಡೋನೇಷ್ಯಾ ಸೇರಿದಂತೆ ಹಲವಾರು ಆಗ್ನೇಯ ಏಷ್ಯಾದ ದೇಶಗಳಲ್ಲಿ ಇದನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ವೈಶಾಖ ತಿಂಗಳ (ಏಪ್ರಿಲ್/ಮೇ) ಹುಣ್ಣಿಮೆಯ ದಿನದಂದು ಬುದ್ಧ ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಈ ದಿನವು ಬೌದ್ಧ ಕ್ಯಾಲೆಂಡರ್ ನಲ್ಲಿ ಪ್ರಮುಖ ದಿನವಾಗಿದೆ. ಬುದ್ಧ ಜಯಂತಿಯು ಪ್ರಪಂಚದಾದ್ಯಂತ ಇರುವ ಬೌದ್ಧರಿಗೆ ವಿಶೇಷ ದಿನವಾಗಿದೆ. ಇದು ಬೌದ್ಧ ಧರ್ಮದ ಸ್ಥಾಪಕ ಸಿದ್ಧಾರ್ಥ ಗೌತಮನನ್ನು ಗೌರವಿಸುತ್ತದೆ.

ಬುದ್ಧ ಜಯಂತಿ ಆಚರಣೆ ಹೇಗೆ?

ಬೌದ್ಧರಿಗೆ ಬುದ್ಧ ಜಯಂತಿಯು ಬುದ್ಧನ ಬೋಧನೆಗಳನ್ನು ಪ್ರತಿಬಿಂಬಿಸುವ ಸಮಯವಾಗಿದೆ. ಇದು ಶಾಂತಿ, ಸಹಾನುಭೂತಿ ಮತ್ತು ಬುದ್ಧಿವಂತಿಕೆಯ ಪ್ರತೀಕವಾಗಿದೆ. ಬುದ್ಧನ ಭಕ್ತರು ದೇವಾಲಯಗಳಿಗೆ ಭೇಟಿ ನೀಡುತ್ತಾರೆ, ಮೇಣದಬತ್ತಿ, ಧೂಪದ್ರವ್ಯಗಳನ್ನು ಬೆಳಗಿಸುತ್ತಾರೆ, ಪ್ರಾರ್ಥಿಸುತ್ತಾರೆ. ಭಗವಾನ್ ಬುದ್ಧನ ಪ್ರತಿಮೆಯ ಮುಂದೆ ಸಿಹಿತಿಂಡಿ ಮತ್ತು ಹಣ್ಣುಗಳನ್ನು ಅರ್ಪಿಸುತ್ತಾರೆ. ಬುದ್ಧನ ಜೀವನ ಮತ್ತು ಬೋಧನೆಗಳ ಕುರಿತು ಧರ್ಮೋಪದೇಶಗಳು ನಡೆಯುತ್ತವೆ. ಜನರು ಸಾಮಾನ್ಯವಾಗಿ ಬಿಳಿ ಬಟ್ಟೆಯನ್ನು ಧರಿಸುತ್ತಾರೆ, ಮಾಂಸಾಹಾರವನ್ನು ಸೇವಿಸುವುದಿಲ್ಲ. ಖೀರ್ ವಿತರಿಸುತ್ತಾರೆ, ಬೌದ್ಧ ಸಿದ್ಧಾಂತದ ಪ್ರಕಾರ ಈ ದಿನ ಸುಜಾತಾ ಎಂಬ ಮಹಿಳೆ ಬುದ್ಧನಿಗೆ ಹಾಲಿನ ಗಂಜಿಯನ್ನು ಅರ್ಪಿಸಿದಳು ಎನ್ನಲಾಗುತ್ತದೆ. ಭಗವಾನ್ ಬುದ್ಧನ ಪ್ರಮುಖ ಬೋಧನೆಗಳಲ್ಲಿ ಎಲ್ಲಾ ಜೀವಿಗಳಿಗೆ ಸಹಾನುಭೂತಿ ತೋರಿಸಬೇಕು, ಸ್ವಾತಂತ್ರ್ಯ ನೀಡಬೇಕು ಎನ್ನುವುದು ಒಂದು. ಹಾಗಾಗಿ ಈ ದಿನದಂದು ಪಂಜರದಲ್ಲಿರುವ ಪಕ್ಷಿಗಳನ್ನು ಸಾಂಕೇತಿಕವಾಗಿ ಮುಕ್ತಗೊಳಿಸುತ್ತಾರೆ. ಭಾರತದಲ್ಲಿ ಉತ್ತರ ಪ್ರದೇಶದ ಸಾರನಾಥದಲ್ಲಿ ದೊಡ್ಡ ಜಾತ್ರೆಯೇ ನಡೆಯುತ್ತದೆ. ಇದು ಪ್ರಮುಖ ಬೌದ್ಧ ಯಾತ್ರಾ ಸ್ಥಳವಾಗಿದೆ. ಅಲ್ಲಿ ಬುದ್ಧನು ಜ್ಞಾನೋದಯವನ್ನು ಪಡೆದ ಅನಂತರ ತನ್ನ ಮೊದಲ ಧರ್ಮೋಪದೇಶವನ್ನು ನೀಡಿದನೆಂದು ಹೇಳಲಾಗುತ್ತದೆ.

ಬುದ್ಧ ಜಯಂತಿಯ ಇತಿಹಾಸ ಏನು?

ವೈಶಾಖ ಮಾಸದ ಬುದ್ಧ ಪೂರ್ಣಿಮೆಯು ಗೌತಮ ಬುದ್ಧನ ಜನ್ಮ ದಿನವೆಂದು ಆಚರಿಸಲಾಗುತ್ತದೆ. ಬುದ್ಧನ ಜನನ ಮತ್ತು ಮರಣದ ದಿನಾಂಕಗಳು ಖಚಿತವಾಗಿಲ್ಲ. ಆದರೆ ಇತಿಹಾಸಕಾರರು ಅವರು 563-483 B.Cಯಲ್ಲಿ ಜನಿಸಿದರು. ಅವರು ನೇಪಾಳದ ಲುಂಬಿನಿಯಲ್ಲಿ ಜನಿಸಿದರು ಮತ್ತು ಉತ್ತರ ಪ್ರದೇಶದ ಕುಶಿನಗರದಲ್ಲಿ 80ನೇ ವಯಸ್ಸಿನಲ್ಲಿ ನಿಧನರಾದರು ಎನ್ನುತ್ತಾರೆ. ಬೋಧಗಯಾ ಬೌದ್ಧರಿಗೆ ಅತ್ಯಂತ ಪ್ರಮುಖ ಯಾತ್ರಾ ಸ್ಥಳವಾಗಿದೆ. ಅಲ್ಲಿ ಬುದ್ಧನು ಜ್ಞಾನೋದಯವನ್ನು ಪಡೆದನು. ಇತರ ಪ್ರಮುಖ ಸ್ಥಳಗಳೆಂದರೆ ಕುಶಿನಗರ, ಲುಂಬಿನಿ ಮತ್ತು ಸಾರನಾಥ, ಅಲ್ಲಿ ಅವರು ಮೊದಲು ಬೌದ್ಧ ಧರ್ಮವನ್ನು ಕಲಿಸಿದರು.

Categories
ವಿಶೇಷ ಸುದ್ದಿ

ಹೈಟೆಕ್ ಯುಗದಲ್ಲೂ ಹಳ್ಳಿಗಳ ಅಭಿವೃದ್ಧಿ ಕನಸು!

ಹೈಟೆಕ್ ಯುಗದಲ್ಲೂ ಹಳ್ಳಿಗಳ ಅಭಿವೃದ್ಧಿ ಕನಸು!
– ಗ್ರಾಮೀಣ ಅಭಿವೃದ್ಧಿ ಯಾವಾಗ..?, ಸಣ್ಣ ಹಂತದ ಪಟ್ಟಣಕ್ಕೆ ಬೇಕು ಅನುದಾನ
– ನಗರಾಭಿವೃದ್ಧಿಗೆ ನೀಡುವ ಗಮನ ಗ್ರಾಮಾಭಿವೃದ್ಧಿಗೆಕಿಲ್ಲ?
– ಜನರಿಗೆ ಬೇಕಾದ ಮೂಲ ಸೌಲಭ್ಯವೇ ಇಲ್ಲ ಸ್ವಾಮಿ!

ವಿಶೇಷ ವರದಿ : ಅನನ್ಯ
NAMMUR EXPRESS NEWS
ನಮ್ಮ ದೇಶ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ದಿನೇ ದಿನೇ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದೆ. ಇತರೆ ರಾಷ್ಟ್ರಗಳೊಂದಿಗೆ ಅಂತಾರಾಷ್ಟ್ರೀಯವಾಗಿ ಸ್ಪರ್ಧಿಸುತ್ತಿದೆ. ವೈಜ್ಞಾನಿಕವಾಗಿ, ಸಾಮಾಜಿಕವಾಗಿ , ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದುವರೆಯುತ್ತಿದೆ. ಇಂದು ನಾವು ಚಂದ್ರಯಾನ ಕೈಗೊಂಡು ಯಶಸ್ವಿಯಾಗಿದ್ದೇವೆ, ಸಿಟಿಗಳು ಸ್ಮಾರ್ಟ್ ಸಿಟಿಗಳಾಗಿ ಬದಲಾಗಿವೆ, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿದ್ದೇವೆ. ಆದರೆ ಒಂದು ಮರ ಸಮೃದ್ಧಿಯಾಗಿ ಬೆಳೆಯಲು ಅದರ ಬುಡಕ್ಕೆ ಅಥವಾ ಬೇರಿಗೆ ನಾವು ಪೋಷಕಾಂಶ ನೀಡಬೇಕೆ ಹೊರತು, ಮರದ ರೆಂಬೆ ಕೊಂಬೆ ಎಲೆಗಳಿಗಲ್ಲ. ಹಾಗೆಯೇ ದೇಶದ ಪ್ರಗತಿಯಾಗ ಬೇಕಾದದ್ದು ಹಳ್ಳಿಯಿಂದ ದಿಲ್ಲಿವರೆಗೆ ಅಂದರೆ ಮೊದಲು ದೇಶದ ಹಳ್ಳಿಗಳ ಅಭಿವೃದ್ಧಿಯಾಗಬೇಕು. ಗಾಂಧಿ ಆಶಯದಂತೆ ಗ್ರಾಮ ರಾಜ್ಯ ಆಗಬೇಕು. ಅದರೆ ಅದು ಕನಸೇ ಆಗಿದೆ.

ಅಭಿವೃದ್ಧಿ ಹೆಸರಲ್ಲಿ ಭ್ರಷ್ಟಾಚಾರ!

ಅಭಿವೃದ್ಧಿಯ ಹೆಸರಿನಲ್ಲಿ ಆಗುವ ಭ್ರಷ್ಟಾಚಾರಕ್ಕೆ ಇತಿ ಹಾಡಬೇಕು, ಇದರ ಬಗ್ಗೆ ಆಡಳಿತ ಜವಾಬ್ದಾರಿ ತೆಗೆದುಕೊಳ್ಳಬೇಕು.
ಯಾವುದೋ ಒಬ್ಬ ಸಾಮಾನ್ಯ ವ್ಯಕ್ತಿ ಮಾಡಲಾಗದ ಕೆಲಸವನ್ನು ಆಡಳಿತ ಮಂಡಳಿ, ಅಧಿಕಾರಿಗಳು ಮಾಡಬಹುದು, ಅದೇ ಮುಖ್ಯ ಉದ್ದೇಶವಲ್ಲವೇ ,ನಾವು ಜನನಾಯಕನನ್ನು ಮತದಾನದ ಮೂಲಕ ಆಯ್ಕೆ ಮಾಡುವುದು..?. ಆದರೆ ಎಲ್ಲಾ ಕಡೆ ಭ್ರಷ್ಟಾಚಾರ ತುಂಬಿ ಹೋಗಿದೆ. ಆದ್ದರಿಂದ ಅಭಿವೃದ್ಧಿ ಮರೆಯಾಗಿದೆ. ಇನ್ನು ಭಾರತದಲ್ಲಿ ಉದ್ಯೋಗ, ಕೌಶಲ್ಯ ಅಭಿವೃದ್ಧಿ ಆಗಬೇಕಿದೆ.

ಪ್ರತಿ ತಾಲೂಕಿನ ಹಳ್ಳಿಗಳಲ್ಲಿ ಅನೇಕ ಸಮಸ್ಯೆಗಳಿವೆ, ನೆಟ್ವರ್ಕ್ ಸಮಸ್ಯೆ , ವಿದ್ಯುತ್ ಸಮಸ್ಯೆ, ರಸ್ತೆ ಸಮಸ್ಯೆ, ನೀರಿನ ಸಮಸ್ಯೆ, ಶಾಲೆ ಕಾಲೇಜುಗಳ ಸಮಸ್ಯೆ, ಬಸ್ ಸಮಸ್ಯೆ , ಚರಂಡಿ ಸಮಸ್ಯೆ, ನಿರುದ್ಯೋಗ ಸಮಸ್ಯೆ ಅರೋಗ್ಯ ಸಮಸ್ಯೆ ಇತ್ಯಾದಿ ಇತ್ಯಾದಿ.
ಇವುಗಳಿಗೆ ಮುಖ್ಯ ಕಾರಣ ಗ್ರಾಮಪಂಚಾಯಿತಿಗೆ ಸಂಭಂದಪಟ್ಟ ಅಧಿಕಾರಿಗಳ ಬೇಜವಾಬ್ದಾರಿತನ, ಹಾಗೂ ಅಧಿಕಾರಿಗಳು ನಗರಾಭಿವೃದ್ಧಿಗೆ ನೀಡುವಷ್ಟು ಗಮನ ಗ್ರಾಮಾಭಿವೃದ್ಧಿಗಳಿಗೆ ನೀಡದೆ ಇರುವುದು ಸಹ ಮುಖ್ಯ ಕಾರಣವಾಗಿದೆ. ಹಾಗೂ ರಾಷ್ಟ್ರಮಟ್ಟದ ಯೋಜನೆಗಳು ಹಳ್ಳಿಗರಿಗೆ ಮುಟ್ಟದೆ ಇರುವುದು ಸಹ ಹಳ್ಳಿಗರ ಹಿನ್ನಡೆಗೆ ಕಾರಣವಾಗಿದೆ. ಆಡಳಿತ ಮಂಡಳಿ ಗ್ರಾಮಗಳ ಉದ್ದಾರದ ಬಗ್ಗೆ ಎಚ್ಚೆತ್ತುಕೊಳ್ಳು ಬೇಕು ಆಗ ನಿಜವಾದ ದೇಶದ ಅಭಿವೃದ್ಧಿ ಸಾಧ್ಯ. ಸರ್ಕಾರ ಗ್ರಾಮ ಹಾಗೂ ಸಣ್ಣ ಸಣ್ಣ ಪಟ್ಟಣಗಳ ಕಡೆ ನೋಡದಿದ್ದರೆ ಖಂಡಿತಾ ದೇಶ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ.

ಲೇಖನ: ಅನನ್ಯ

Categories
ವಿಶೇಷ ಸುದ್ದಿ

ಕರೋನಾ ಬದುಕು ಬದಲಿಸಿತು!

ಕರೋನಾ ಬದುಕು ಬದಲಿಸಿತು!
– ಕೆಲಸದಿಂದ ತೆಗೆದ ಕಾರಣಕ್ಕೆ ವಿಡಿಯೋ ಮಾಡಿ ಜೀವನ ಕಳೆದ ಮಿಷನ್ ಆಪರೇಟರ್
– ಈಗ ಜಗತ್ತಿನ ಪ್ರಸಿದ್ಧ ವ್ಯಕ್ತಿ: ನೂರಾರು ಕೋಟಿ ಒಡೆಯ!
– ಬದುಕು ಹೀಗೆ..ಒಂದು ಸಣ್ಣ ಅವಕಾಶ ಬೇಕಷ್ಟೆ..!

2020 ಜಗತ್ತಿನಲ್ಲಿ ಕರೋನಾ ರಾಕ್ಷಸನ ದಾಳಿಯಿಂದ ಲಕ್ಷಾಂತರ ಸಾವು ನೋವುಗಳಾದವು. ಬಹಳಷ್ಟು ಕೋಟಿ ಕೋಟಿ ಜನ ಕೆಲಸ ಕಳೆದುಕೊಂಡರು; ಹಸಿವಿನಿಂದ ಬಳಲಿದರು. ಬಹಳಷ್ಟು ಜನರ ಬದುಕು ಮೂರಾಬಟ್ಟೆಯಾಯಿತು.ಒಂದೊತ್ತು ಊಟಕ್ಕೂ ಪರದಾಟವಾಯಿತು. ಇಡೀ ವಿಶ್ವ ಪ್ರಯೋಗ ಶಾಲೆಯಾಯಿತು. ಆದರೆ ಕರೊನಾ ಜಗತ್ತಿಗೆ ಹೊಸ ಪಾಠ ನೀಡಿತ್ತು…!
ಸಾವಿರಾರು ಜನರ ಬಲಿ ತೆಗೆದುಕೊಂಡ ಕರೋನಾ ಸಾವಿರಾರು ಜನರಿಗೆ ಬದುಕನ್ನು ಕಲಿಸಿತು. ಹೌದು. ಇದೇ ಸಮಯದಲ್ಲಿ ಇಟಲಿಯ ಟುರಿನ್ ನಗರದ ಒಂದು ಖಾಸಗಿ ತಯಾರಕ ಕಂಪನಿಯಲ್ಲಿ C.N.C ಮಷಿನ್ ಆಪರೇಟರಾಗಿ ಕೆಲಸ ಮಾಡ್ತಿದ್ದ ಒಬ್ಬನನ್ನು ಮಾಲೀಕರು ಕೆಲಸದಿಂದ ತೆಗೆದು ಹಾಕಿದರು. ಅದು ಕೋವಿಡ್ ಕಾಲವಾಗಿದ್ದರಿಂದ ಇವರಿಗೆ ಬೇರೆ ಎಲ್ಲೂ ಕೆಲಸ ಸಿಗಲಿಲ್ಲ. ಆದರೆ ಆತ ಸುಮ್ಮನೆ ಕೂರಲಿಲ್ಲ.

ತನಗೆ ಗೊತ್ತಿದ್ದ ಇಟಲಿ ಭಾಷೆಯಲ್ಲಿ ಒಂದಿಷ್ಟು ಟಿಕ್ ಟಾಕ್ ವಿಡಿಯೋಗಳನ್ನು ಮಾಡಿ ಹರಿಯಬಿಟ್ಟನು. ಅದು ಅಷ್ಟಾಗಿ ಯಶಸ್ಸು ಕಾಣಲಿಲ್ಲ. ನಂತರ ಟಿಕ್ ಟಾಕ್ ಮತ್ತು ಇನ್ಸ್ಟಾಗ್ರಾಮ್ ಅಲ್ಲಿ ಬೇರೆಯವರು ಮಾಡಿದ ವಿಡಿಯೋಗಳನ್ನು ತೆಗೆದುಕೊಂಡು ಅದರಲ್ಲಿ ಸಂಕೀರ್ಣವಾಗಿ ಮಾಡಿದ್ದ ಲೈಫ್ ಹ್ಯಾಕ್ ಗಳನ್ನು ಸುಲಭವಾಗಿ ಮಾಡಿ ಅಣುಕಿಸಲು ಪ್ರಾರಂಭಿಸಿದನು. ಆ ವಿಡಿಯೋಗಳಲ್ಲಿ ಚಾರ್ಲಿ ಚಾಪ್ಲಿನ್ ಮತ್ತು ಮಿಸ್ಟರ್ ಬೀನ್ ರೀತಿ ಒಂದು ಪದವು ಮಾತನಾಡದೆ ವಿಶಿಷ್ಠ ಮ್ಯಾನರಿಸಮ್ನಲ್ಲಿ ಅಣುಕಿಸಿ ಜನಪ್ರಿಯತೆ ಗಳಿಸಲು ಪ್ರಾರಂಭಿಸಿತು. ಆಗ ಈ ಜಗತ್ತಿಗೇ ಹೊಸ ಕ್ರಿಯೇಟಿವ್ ವ್ಯಕ್ತಿಯೊಬ್ಬನ ಪರಿಚಯವಾಯಿತು ಅವರೇ ಖಬನೆ ಲ್ಯಾಮ್… ಮುಂದೆ ಅವರ ಹೆಸರು ಖಬಿ ಲ್ಯಾಮ್ ಎಂದು ಬದಲಿಸಿಕೊಂಡು ಖ್ಯಾತಿ ಗಳಿಸಿದ್ದಾರೆ.

ಅತೀ ಹೆಚ್ಚು ಜನಪ್ರಿಯತೆ

ಖಬಿ ಲ್ಯಾಮ್ ಆಫ್ರಿಕಾದ ಸೇನಗಲ್ ನಲ್ಲಿ 9 ಮಾರ್ಚ್ 2000ರಲ್ಲಿ ಜನಿಸಿದರು. ಖಬಿ ಒಂದು ವರ್ಷವಾಗಿದ್ದಾಗ ಇವರು ಕುಟುಂಬ ಇಟಲಿಯ ಚಿವಸ್ಸೋ ವಿನ ಪಬ್ಲಿಕ್ ಹೌಸಿಂಗ್ ಕಾಂಪ್ಲೆಕ್ಸ್ಗೆ ವಲಸೆಹೋದರು. ಇವರ ಡ್ಯೂಯ್ಟ್ ಮತ್ತು ಸ್ವಿಚ್ ಪ್ರಖ್ಯಾತ ಟಿಕ್ ಟಾಕ್ ವಿಡಿಯೋಗಳು. ಏಪ್ರಿಲ್ 2021ರಲ್ಲಿ ಇಟಲಿಯ ಅತಿ ಹೆಚ್ಚು ಟಿಕ್ ಟಾಕ್ ಫಲೋವರ್ ಹೊಂದಿರುವ ಗಿಯನ್ಲುಕ ವಚ್ಚಿ ಅವರಿಗಿಂತ ಹೆಚ್ಚಿನ ಫಲೋವರ್ ಹೊಂದುತ್ತಾರೆ. ವಿಶ್ವದ ಯುವ ಸುಂದರಿಯರಾದ ಅಡಿಸಂನ್ ರೇ ಅವರನ್ನು ಜುಲ್ಯೆ 2021ರಲ್ಲಿ , ಬೆಲ್ಲ ಪೋರ್ಚ್ ಅವರನ್ನು ಹಾಗೂ ಜಗತ್ತಿನಲ್ಲಿ ಅತಿ ಹೆಚ್ಚು ಫಲೋವರ್ ಹೊಂದಿರುವ ಚಾರ್ಲಿ ಡಿ ಮೇಲಿಯೋ ಅವರನ್ನು ಜೂನ್ 2022ರಲ್ಲಿ ಹಿಂದಿಕ್ಕಿ ಜಗತ್ತಿನಲ್ಲಿ ಅತಿ ಹೆಚ್ಚು ಟಿಕ್ ಟಾಕ್ ಫಲೋವರ್ ಹೊಂದಿರುವ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಪ್ರಸ್ತುತ ಟಿಕ್ ಟಾಕ್ನಲ್ಲಿ 161 ಮಿಲಿಯನ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ 78.5 ಮಿಲಿಯನ್ ಫಾಲೋವರ್ ಹೊಂದಿದ್ದಾರೆ. ಇವರು ಟಿಕ್ ಟಾಕ್ ಮತ್ತು ಇನ್ಸ್ಟಾಗ್ರಾಮ್ ಮಾತ್ರವಲ್ಲದೆ ಪ್ರಮೋಷನ್ ಮತ್ತು ಜಾಹೀರಾತು ಮಾಡುವುದರ ಮೂಲಕ ಹಣವನ್ನು ಗಳಿಸಿಸುತ್ತಾರೆ.

ಪ್ರಸ್ತುತ ನೂರಾರು ಕೋಟಿ ರೂಪಾಯಿ ಹಣ ಗಳಿಸಿದ್ದಾರೆ.

ವಿಶ್ವದ ಖ್ಯಾತ ಫಾರ್ಚುನ್ ಹಾಗೂ ಫೋಬ್ಸ್ ಪಟ್ಟಿಯಲ್ಲೂ ಸ್ಥಾನ ಪಡೆಯುತ್ತಾರೆ. ಪ್ರತಿಷ್ಠಿತ ಕಂಪನಿಯ ಕಾರುಗಳನ್ನು ಹೊಂದಿದ್ದಾರೆ. ಕೊನೆಗೆ ಇವರು ಎಷ್ಟು ಪ್ರಖ್ಯಾತಿ ಹೊಂದಿದ್ದಾರೆ ಎಂದರೆ ಇವರ ವಿಶಿಷ್ಟವಾದ ಮ್ಯಾನರಿಸಮ್ನ ಇಮೋಜಿಗಳು ಲಭ್ಯವಿದೆ. ಇಂಟರ್ನೆಟ್ ಉಪಯೋಗಿಸವವರು ಇವರನ್ನು ಒಮ್ಮೆಯಾದರೂ ನೋಡಿರುತ್ತಾರೆ. ಇವರ ಇಷ್ಟು ಬೆಳವಣಿಗೆಗಳು ನಡೆದಿದ್ದು ಕರೋನಾ ನಂತರದ 2 ವರ್ಷಗಳಲ್ಲಿ..!

“ಆಗಿದ್ದೆಲ್ಲಾ ಒಳ್ಳೆಯದಕ್ಕೆ” ಎಂಬ ನಾಣ್ಣುಡಿಯಂತೆ ಅವರನ್ನು ಕೆಲಸದಿಂದ ವಜಾ ಮಾಡಿದ್ದೆ ಅವರ ಈ ಸಾಧನೆಗೆ ಕಾರಣವಾಯಿತೇ?. ಹೌದು. ಸಾಧನೆಗೆ ಕೆಲ ಒಮ್ಮೆ ಕಾರ್ಯ ವಿಧಾನ ;ಇನ್ನೂ ಕೆಲ ಒಮ್ಮೆ ಕಾರ್ಯ ಕ್ಷೇತ್ರವನ್ನೆ ಬದಲಿಸಬೇಕಾಗುತ್ತದೆ!. ಆದರೆ ಆಯ್ಕೆ ಮಾತ್ರ ನಿಮ್ಮದೇ? ಒಟ್ಟಿನಲ್ಲಿ ಹೇಳುವುದಾದರೆ ಕಥೆ ಮುಗಿಯಿತೆಂದು ಮುಚ್ಚಿದ ಬಾಗಿಲನ್ನೇ ನೋಡುತ್ತಾ ಕೂರುವ ಬದಲು, ಬೇರೆ ಬೇರೆ ಅವಕಾಶಗಳನ್ನು ಹುಡುಕಿ ಸಾಧಿಸುವುದು ಒಳ್ಳೆಯದು. ಎಲ್ಲರಿಗೂ 24 ಗಂಟೆಯೇ ಒಂದು ದಿನ. ಸೂರ್ಯ, ಚಂದ್ರ, ಗಾಳಿ, ಬೆಳಕು ಎಲ್ಲವೂ ಒಂದೇ. ಅವಕಾಶ ನೂರಾರು. ಒಮ್ಮೆ ಯೋಚಿಸಿ ಧೈರ್ಯದಿಂದ ಹೆಜ್ಜೆಯಿಡಿ. ಗುಡ್ ಲಕ್..!

ವಿಶೇಷ ಲೇಖನ: ಸೌಳಿ ನಾಗರಾಜ್

Categories
ಉಡುಪಿ ಕರಾವಳಿ ಚಿಕ್ಕಮಗಳೂರು ವಿಶೇಷ ಸುದ್ದಿ

ಪ್ರವಾಸಿಗರ ಮೆಚ್ಚಿನ ಆಯ್ಕೆ ಉಡುಪಿ ಟಿಂಟನ್ ಅಡ್ವೆಂಚರ್ ರೆಸಾರ್ಟ್!

ಪ್ರವಾಸಿಗರ ಮೆಚ್ಚಿನ ಆಯ್ಕೆ ಉಡುಪಿ ಟಿಂಟನ್ ಅಡ್ವೆಂಚರ್ ರೆಸಾರ್ಟ್!
– ನದಿ ತೀರದ ಸುಂದರ ರೆಸಾರ್ಟ್ ಈಗ ಎಲ್ಲರ ಫೇವರಿಟ್ ಆಯ್ಕೆ
– ಮಕ್ಕಳ ಪ್ರವಾಸ, ಕಚೇರಿ ಔಟಿಂಗ್, ಫ್ಯಾಮಿಲಿ ವಿಶ್ರಾಂತಿಗೆ ಮೆಚ್ಚಿನ ತಾಣ
– ಕರ್ನಾಟಕದ ಅದ್ಭುತ ಪ್ರವಾಸಿ ರೆಸಾರ್ಟ್ ಒಮ್ಮೆ ನೋಡ ಬನ್ನಿ…!

NAMMUR EXPRESS :
ಟಿಂಟನ್ ಅಡ್ವೆಂಚರ್ ರೆಸಾರ್ಟ್ ಕರ್ನಾಟಕದ ಅದ್ಭುತ ಪ್ರವಾಸಿ ರೆಸಾರ್ಟ್. ಇಲ್ಲಿನ ನದಿ ಪಕ್ಕದ ವಾತಾವರಣ, ಎಲ್ಲಾ ರೀತಿಯ ಅತ್ಯಾಧುನಿಕ ಸೇವಾ ವ್ಯವಸ್ಥೆ, ಅತಿಥಿಗಳಿಗೆ ಹರಿಯುವ ನದಿ ನೀರು ಮತ್ತು ಹಚ್ಚ ಹಸಿರಿನ ಅದ್ಭುತ ನೋಟ. ಮಕ್ಕಳು ಕುಟುಂಬದ ಜತೆ ಆಟ ಆಡುವ ಅವಕಾಶ, ವಿಶೇಷ ಊಟ, ಅತಿಥ್ಯ ಹೀಗೆ ಹತ್ತು ಹಲವು ಸೇವೆಗಳು ಇಲ್ಲಿ ಲಭ್ಯ. ಈ ರೆಸಾರ್ಟ್ ನಿಮ್ಮ ಸುಂದರ ಕ್ಷಣಗಳಿಗೆ ಅತ್ಯುತ್ತಮ ತಾಣವಾಗಿದೆ. ಉಡುಪಿ ಜಿಲ್ಲೆಯ ರಮಣೀಯವಾದ ಗೋಳಿಯಂಗಡಿಯ ಸಮೀಪದಲ್ಲಿರುವ ಟಿಂಟನ್ ಅಡ್ವೆಂಚರ್ ರೆಸಾರ್ಟ್ ಸಾಹಸ ಪ್ರಿಯರಿಗೆ ಮತ್ತು ಪ್ರಕೃತಿ ಪ್ರಿಯರಿಗೆ ಮರೆಯಲಾಗದ ವಿಹಾರದ ಅನುಭವ ನೀಡುತ್ತದೆ. ಸುಂದರವಾದ ನದಿ ತೀರದ ಸ್ಥಳದಲ್ಲಿರುವ ಈ ರೆಸಾರ್ಟ್ ನಗರ ಜೀವನದ ಒತ್ತಡ ಹೋಗಲಾಡಿಸಲು ಹೊಸ ಅನುಭವ ನೀಡಲಿದೆ. ಕುಟುಂಬದ ಜತೆಗಿನ ವಿಶೇಷ ಭೇಟಿ ಅತ್ಯಮೂಲ್ಯ ಸುಂದರ ಅನುಭವ ನೀಡಲಿದೆ. ಪ್ರಶಾಂತವಾದ ಪರಿಸರ, ಸೌಂದರ್ಯದ ನಡುವೆ ಶಾಂತಿ ಮತ್ತು ನೆಮ್ಮದಿಯನ್ನು ಬಯಸುವವರಿಗೆ ಈ ಜಾಗ ಸೂಕ್ತ ತಾಣವಾಗಿದೆ.

ಟಿಂಟನ್ ಅಡ್ವೆಂಚರ್ ರೆಸಾರ್ಟ್‌ನಲ್ಲಿ ವಿಶೇಷ ವಸತಿ ಆಯ್ಕೆ

ಟಿಂಟನ್ ಅಡ್ವೆಂಚರ್ ರೆಸಾರ್ಟ್‌ನಲ್ಲಿರುವ ಅತಿಥಿಗಳು ಐಷಾರಾಮಿ ವಿಲ್ಲಾಗಳು ಮತ್ತು ನದಿ ಮುಖದ ಕೊಠಡಿಗಳನ್ನು ಒಳಗೊಂಡಂತೆ ಹಲವಾರು ವಸತಿ ಆಯ್ಕೆಗಳಿವೆ. ಆಧುನಿಕ ಸೌಕರ್ಯಗಳು ಮತ್ತು ವಿಶಾಲವಾದ ಒಳಾಂಗಣಗಳು, ಪ್ರತಿ ಅತಿಥಿಗೆ ವಿಶ್ರಾಂತಿಯ ವಾಸ್ತವ್ಯವನ್ನು ಖಾತ್ರಿಪಡಿಸುವ ಮೂಲಕ ಪ್ರತಿಯೊಂದು ವಸತಿ ಸೌಕರ್ಯ ಮತ್ತು ಸಾಹಸ ಮತ್ತು ಥ್ರಿಲ್ ಕೊಡುವ ಟಿಂಟನ್ ಅಡ್ವೆಂಚರ್ ರೆಸಾರ್ಟ್‌ ಚಟುವಟಿಕೆಗೆ ಮುಕ್ತ ಅವಕಾಶ ಇದೆ.

ಅಡ್ವೆಂಚರ್ ರೆಸಾರ್ಟ್‌ನಲ್ಲಿ ವಿಶೇಷ ಬೋಟಿಂಗ್ ಶೇ.10 ರಿಯಾಯಿತಿ

ಟಿಂಟನ್ ಅಡ್ವೆಂಚರ್ ರೆಸಾರ್ಟ್‌ನಲ್ಲಿ ವಿಶೇಷ ಬೋಟಿಂಗ್ ವ್ಯವಸ್ಥೆ ಇದೆ. ಈ ಬೇಸಿಗೆಯ ಋತುವಿನಲ್ಲಿ ನೀರಿನ ಜತೆಗಿನ ಗೇಮ್ಸ್ ಎಲ್ಲರ ಗಮನ ಸೆಳೆಯಲಿದೆ. ಪ್ರತಿ ಬುಕಿಂಗ್‌ಗಳು ಈಗ 10% ರಿಯಾಯಿತಿಯೊಂದಿಗೆ ಲಭ್ಯವಿವೆ, ಇದು ಕುಟುಂಬ ಪ್ರವಾಸಗಳು, ಶಾಲಾ ಪ್ರವಾಸಗಳು ಮತ್ತು ಕಚೇರಿ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ. ಕಾರ್ಪೋರೇಟ್ ಕಂಪನಿಗಳ ರಜೆ ದಿನಗಳ ಔಟಿಂಗ್, ಮದುವೆ ವಾರ್ಷಿಕೋತ್ಸವ, ಹುಟ್ಟು ಹಬ್ಬ, ಗೆಟ್ ಟುಗೆದರ್ ಸೇರಿ ಎಲ್ಲಾ ಪ್ರವಾಸಿ ಕ್ಷಣಗಳಿಗೆ ಈ ರೆಸಾರ್ಟ್ ಪರಿಪೂರ್ಣ ಸೇವಾ ತಾಣವಾಗಿದೆ. ಶಾಲಾ ಗುಂಪುಗಳಿಗೆ ವಿಶೇಷವಾದ 15% ರಿಯಾಯಿತಿಯನ್ನು ನೀಡಲಾಗಿದ್ದು, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಕೈಗೆಟುಕುವ ಮತ್ತು ಸ್ಮರಣೀಯ ಅನುಭವವನ್ನು ನೀಡುತ್ತದೆ.

ರೆಸಾರ್ಟ್ ಅಲ್ಲಿ ವಿಶೇಷ ಏನೇನಿದೆ..?

ರೋಪ್ ಕೋರ್ಸ್ ಚಟುವಟಿಕೆಗಳು
ರೋಲರ್ ಕೋಸ್ಟರ್ ಜಿಪ್ಲೈನ್
ಜಿಪ್ ಲೈನ್
ರಾಕ್ ಕ್ಲೈಂಬಿಂಗ್
ಬಾಸ್ಕೆಟ್‌ಬಾಲ್ ಅಂಕಣ
ವಾಲಿಬಾಲ್ / ಬ್ಯಾಡ್ಮಿಂಟನ್
ಒಳಾಂಗಣ ಆಟಗಳು
ಮಕ್ಕಳ ಆಟದ ಪ್ರದೇಶ
ಕ್ಯಾಂಪ್ ಫೈರ್ (ನೈಟ್‌ಟೌಟ್ ಪ್ಯಾಕೇಜ್ ಆಯ್ಕೆ ಮಾಡುವವರಿಗೆ)
ವಾಟರ್ ಪಾರ್ಕ್‌ನಲ್ಲಿನ ಚಟುವಟಿಕೆಗಳು / ಸೌಲಭ್ಯಗಳು
ಮಳೆ ನೃತ್ಯ
ರೇನ್ಬೋ ಶವರ್
ವಿವಿಧ ನೀರಿನ ಸ್ಲೈಡ್‌ಗಳು
ಟಿಲ್ಟಿಂಗ್ ಬಕೆಟ್
ಲೋಲಕ

ಇತರ ನೀರಿನ ಚಟುವಟಿಕೆಗಳು / ಸೌಲಭ್ಯಗಳು

ಸ್ಪೀಡ್ ಬೋಟ್
ಕಯಾಕಿಂಗ್
ಈಜು ಕೊಳ
ಫಿಶರಿಂಗ್
ಪ್ಯಾಡಲ್ ಬೋಟಿಂಗ್
ಮೋಟಾರ್ ಬೋಟ್

ಸುರಕ್ಷತೆ ಮತ್ತು ಭದ್ರತೆಗೆ ವಿಶೇಷ ಆಧ್ಯತೆ

ಟಿಂಟನ್ ಅಡ್ವೆಂಚರ್ ರೆಸಾರ್ಟ್‌ನಲ್ಲಿ ಸುರಕ್ಷತೆ ಮತ್ತು ಭದ್ರತೆಯು ಪ್ರಮುಖ ಆದ್ಯತೆಗಳಾಗಿವೆ. ನಮ್ಮ ತರಬೇತಿ ಪಡೆದ ವೃತ್ತಿಪರರ ತಂಡವು ಪ್ರತಿ ಚಟುವಟಿಕೆಗೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಅಳವಡಿಸಿದೆ. ಅತಿಥಿಗಳಿಗೆ ಸುರಕ್ಷಿತ ಮತ್ತು ಆನಂದದಾಯಕ ಅನುಭವ ನೀಡಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಈಜುಕೊಳ ಮತ್ತು ವಾಟರ್ ಪಾರ್ಕ್‌ನಲ್ಲಿ ನೆಲೆಗೊಂಡಿರುವ ಕಣ್ಗಾವಲು ಕ್ಯಾಮೆರಾಗಳು ಮತ್ತು ಜೀವರಕ್ಷಕರು ಸೇರಿದಂತೆ ನಮ್ಮ ವರ್ಧಿತ ಭದ್ರತಾ ವೈಶಿಷ್ಟ್ಯಗಳೊಂದಿಗೆ ವಿಶೇಷ ಸೇವೆ ನೀಡುತ್ತಿದೆ.

ಆಗುಂಬೆ ಬಳಿಯ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ನೆಲೆಗೊಂಡಿರುವ ಟಿಂಟನ್ ಅಡ್ವೆಂಚರ್ ರೆಸಾರ್ಟ್ ಪ್ರಕೃತಿ ಮಡಿಲಲ್ಲಿ ನೆಮ್ಮದಿ ನೀಡುತ್ತದೆ. ನೀವು ಸಾಹಸ, ವಿಶ್ರಾಂತಿ, ಮನೋರಂಜನೆ ಎಲ್ಲವನ್ನು ಇಲ್ಲಿ ಅಸ್ವಾದಿಸಬಹುದು.

ಶಾಲಾ, ಕಾಲೇಜು ಪ್ರವಾಸಕ್ಕೆ ಅತ್ಯುತ್ತಮ ತಾಣ

ಟಿಂಟನ್ ಅಡ್ವೆಂಚರ್ ರೆಸಾರ್ಟ್ ಶಾಲಾ ಪ್ರವಾಸಗಳು, ಕಾಲೇಜು ಪ್ರವಾಸಗಳು ಮತ್ತು ಕಚೇರಿ ಟೀಮ್ ಬಿಲ್ಡಿಂಗ್ ಚಟುವಟಿಕೆಗಳಿಗೆ ಮೆಚ್ಚಿನ ತಾಣವಾಗಿದೆ. ವೈವಿಧ್ಯಮಯ ಚಟುವಟಿಕೆಗಳು ಮತ್ತು ಸೌಲಭ್ಯಗಳೊಂದಿಗೆ, ಪ್ರವಾಸೋದ್ಯಮ ಮತ್ತು ಸಾಹಸಕ್ಕೆ ಪರಿಪೂರ್ಣ ಸೆಟ್ಟಿಂಗ್ ಅನ್ನು ಒದಗಿಸುತ್ತದೆ. ಉಡುಪಿ, ಕುಂದಾಪುರ ಮತ್ತು ಶಿವಮೊಗ್ಗದಿಂದ ಪ್ರವಾಸಿಗರ ಫೇವರಿಟ್ ರೆಸಾರ್ಟ್ ಇದಾಗಿದೆ. ರಾಜ್ಯದ ಎಲ್ಲಾ ಭಾಗದಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಖಾಸಗಿ ಸಮಾರಂಭಗಳಿಗೆ ರಿವರ್ಸೈಡ್ ಈವೆಂಟ್ ಸ್ಥಳ

ನಿಮ್ಮ ಮತ್ತು ನಿಮ್ಮ ಕುಟುಂಬದ, ಕಂಪನಿ, ಸಂಸ್ಥೆಗಳ ವಿಶೇಷ ಕಾರ್ಯಕ್ರಮಕ್ಕಾಗಿ ಸುಂದರವಾದ ಸ್ಥಳವನ್ನು ಹುಡುಕುತ್ತಿರುವಿರಾ? ಇನ್ನು ಮುಂದೆ ಟಿಂಟನ್ ಅಡ್ವೆಂಚರ್ ರೆಸಾರ್ಟ್ ನೋಡಿ. ನಮ್ಮ ನದಿ ತೀರದ ಈವೆಂಟ್ ಸ್ಥಳವು ವಿವಾಹಗಳು, ಮದುವೆಯ ಪೂರ್ವ ಫೋಟೋಶೂಟ್‌ಗಳು ಮತ್ತು ಇತರ ಖಾಸಗಿ ಸಮಾರಂಭಗಳಿಗೆ ಬೆರಗುಗೊಳಿಸುವ ಅವಕಾಶ ನೀಡಲಿದೆ. ಪ್ರಕೃತಿ ನಡುವಿನ ಸುಂದರ ತಾಣ ನಿಮಗೆ ಮತ್ತು ನಿಮ್ಮ ಅತಿಥಿಗಳಿಗೆ ಮರೆಯಲಾಗದ ನೆನಪುಗಳನ್ನು ಕೊಡುತ್ತದೆ.

ಚಿಕ್ಕಮಗಳೂರಿನಲ್ಲೂ ಇದೆ ಟಿಂಟನ್ ಹಿಲ್ ಸ್ಟೇ!

ನಮ್ಮ ಉಡುಪಿ ಸ್ಥಳದ ಜೊತೆಗೆ, ಟಿಂಟನ್ ಅಡ್ವೆಂಚರ್ ರೆಸಾರ್ಟ್ ಚಿಕ್ಕಮಗಳೂರಿನಲ್ಲಿ ಟಿಂಟನ್ ಹಿಲ್ ಸ್ಟೇ ಹೆಸರಿನಲ್ಲಿ ಅಸ್ತಿತ್ವವನ್ನು ಹೊಂದಿದೆ. ಈ ಸ್ನೇಹಶೀಲ 3-ಕೋಣೆಯ ವಿಲ್ಲಾ ಆರಾಮದಾಯಕ ಮತ್ತು ಸುಸಜ್ಜಿತ ಕೊಠಡಿಗಳನ್ನು ನೀಡುತ್ತದೆ, ಅತಿಥಿಗಳಿಗೆ ಶಾಂತಿಯುತ ಹಿಮ್ಮೆಟ್ಟುವಿಕೆಯನ್ನು ಒದಗಿಸುತ್ತದೆ. ಸುತ್ತಮುತ್ತಲಿನ ಭೂದೃಶ್ಯದ ನೈಸರ್ಗಿಕ ಸೌಂದರ್ಯದೊಂದಿಗೆ ಆಧುನಿಕ ಅನುಕೂಲಗಳನ್ನು ಸಂಯೋಜಿಸಲು ಕೊಠಡಿಗಳನ್ನು ವಿನ್ಯಾಸಗೊಳಿಸಲಾಗಿದೆ.

ತೀರ್ಮಾನ

ಕೊನೆಯಲ್ಲಿ, ಟಿಂಟನ್ ಅಡ್ವೆಂಚರ್ ರೆಸಾರ್ಟ್ ಕೇವಲ ಹೊರಹೋಗುವ ತಾಣಕ್ಕಿಂತ ಹೆಚ್ಚಾಗಿರುತ್ತದೆ – ಇದು ನೆನಪಿಡುವ ಅನುಭವವಾಗಿದೆ. ಬೆರಗುಗೊಳಿಸುವ ನದಿ ತೀರದ ಸೆಟ್ಟಿಂಗ್, ರೋಮಾಂಚಕ ಚಟುವಟಿಕೆಗಳು ಮತ್ತು ಉನ್ನತ ದರ್ಜೆಯ ಸೌಕರ್ಯಗಳೊಂದಿಗೆ, ರೆಸಾರ್ಟ್ ಎಲ್ಲಾ ವಯಸ್ಸಿನ ಅತಿಥಿಗಳಿಗೆ ಸಾಹಸ ಮತ್ತು ವಿಶ್ರಾಂತಿಯ ಪರಿಪೂರ್ಣ ಮಿಶ್ರಣವನ್ನು ನೀಡುತ್ತದೆ. ಟಿಂಟನ್ ಅಡ್ವೆಂಚರ್ ರೆಸಾರ್ಟ್‌ನಲ್ಲಿ ನಿಮ್ಮ ಮುಂದಿನ ಸಾಹಸವನ್ನು ಯೋಜಿಸಿ ಮತ್ತು ಜೀವಿತಾವಧಿಯಲ್ಲಿ ಉಳಿಯುವ ನೆನಪುಗಳನ್ನು ಮಾಡಿ.

ಹೆಚ್ಚಿನ ಮಾಹಿತಿಗಾಗಿ:
Website: https://tintonresorts.com/
Instagram: https://www.instagram.com/tinton_resort/
Facebook: https://www.facebook.com/tintonadventureresort

Categories
ವಿಶೇಷ ಸುದ್ದಿ

ಚುನಾವಣೆಗೆ ಸೀಮಿತವಾಗ್ತಿದೆ ಜನರ ಬಗೆಗಿನ ಕಾಳಜಿ!

ಚುನಾವಣೆಗೆ ಸೀಮಿತವಾಗ್ತಿದೆ ಜನರ ಬಗೆಗಿನ ಕಾಳಜಿ!
– ನೂರೆಂಟು ಸಮಸ್ಯೆ: ಮೈಮರೆತ ಅಧಿಕಾರಿ ವರ್ಗ
– ಜನರ ಬದುಕು ದಿನೇ ದಿನೇ ಭಾರ!

ವಿಶೇಷ ವರದಿ: ಅನನ್ಯ
NAMMUR EXPRESS NEWS
ಪ್ರತಿ ಬಾರಿ ಚುನಾವಣೆ ಸಮಯದಲ್ಲಿ ರಾಜಕಾರಣ ಬಹಳ ಜೋರಾಗಿ ಸದ್ದು ಮಾಡುತ್ತದೆ. ಪ್ರತಿ ನಾಯಕರು ಸಾವಿರಾರು ಆಶ್ವಾಸನೆ ಕೊಡುತ್ತಾರೆ. ನಂತರ ಮೌನವಾಗುತ್ತದೆ. ನಾವು ಆಯ್ಕೆ ಮಾಡುವ ಜನನಾಯಕ ಚುನಾವಣೆ ನಂತರದಲ್ಲಿ ನಾಯಕನಾಗುತ್ತಾನೆ. ಇದು ಹೊಸತೇನಲ್ಲ…! ಹೌದು. ಈ ಬಾರಿ ಕೂಡ ರಾಜ್ಯದ ಹಲವು ಹಳ್ಳಿಗಳಲ್ಲಿ ಜನ ಮೂಲ ಭೂತ ಸೌಕರ್ಯಕ್ಕಾಗಿ ಅಗ್ರಹಿಸಿ ಚುನಾವಣೆ ಬಹಿಷ್ಕಾರ ಮಾಡಿದ್ದಾರೆ. ತಮ್ಮ ಹಕ್ಕನ್ನು ತ್ಯಜಿಸಿ ನ್ಯಾಯ ಕೇಳಿದ್ದಾರೆ. ಆದರೆ ಈ ಬಗ್ಗೆ ಆಡಳಿತ, ಜನ ಪ್ರತಿನಿಧಿಗಳು, ಅಧಿಕಾರಿಗಳು ಗಮನ ವಹಿಸಿದಂತೆ ಕಾಣುತ್ತಿಲ್ಲ.

ಚುನಾವಣೆ ನಂತರದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಒಂದಷ್ಟು ಕಾಮಗಾರಿಗಳು ನಡೆಯುತ್ತವೆ , ಆದರೆ ಅದು ಹೇಗಿರುತ್ತದೆ ಎಂದರೆ ನಮ್ಮಲ್ಲಿ ಒಂದು ಮಾತಿದೆ ‘ ಬಡವ ಬಡವನೇ, ಬಲ್ಲಿದ ಬಲ್ಲಿದನೇ ‘. ಆ ಅಭಿವೃದ್ಧಿಯ ಫಲ ದೊರೆತವನಿಗೆ ದೊರೆಯುತ್ತದೆಯೇ ವಿನಃ ಏನು ಇಲ್ಲದವನಿಗಲ್ಲ. ಬಡವ ಬಡವನಾಗಿಯೇ ಉಳಿಯುವತ್ತ ವ್ಯವಸ್ಥೆ ಕೈ ಜಾರುತ್ತಿದೆ.

ಕನಸಾಗಿಯೇ ಉಳಿದ ಗ್ರಾಮ ಅಭಿವೃದ್ಧಿ?

ಗಾಂಧೀಜಿ ಅವರು ಅವರ ಕಾಲದಲ್ಲಿಯೇ ಹೇಳಿದ್ದರು ‘ ಗ್ರಾಮಗಳ ಉದ್ಧಾರವಾಗದೆ ದೇಶದ ಅಭಿವೃದ್ಧಿ ಅಸಾಧ್ಯ.’ ಎಂದು. ಇಂದು ನಾವು ಅಂತರ್ಜಾಲ ಇಡೀ ಪ್ರಪಂಚವನ್ನೇ ತನ್ನ ಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡಿದೆ, ಆದರೆ ಇಂದು ಎಷ್ಟೋ ಹಳ್ಳಿಗಳಲ್ಲಿ ನೆಟವರ್ಕ್ ಸಮಸ್ಯೆ ಇದೆ, ರಸ್ತೆ, ಮನೆ, ಕುಡಿಯುವ ನೀರಿನ ಸಮಸ್ಯೆ ಇದೆ. ಸರ್ಕಾರಿ ಕಚೇರಿಗಳು ಲಂಚದ ಕೇಂದ್ರಗಳಾಗುತ್ತಿವೆ. ಆದರೆ ಸಂಬಂಧಪಟ್ಟವರು ಮೌನಕ್ಕೆ ಜಾರಿದ್ದಾರೆ.

ಜನರ ಜೀವಕ್ಕೆ ಖಾತ್ರಿ ಇಲ್ಲ!

ಸರ್ಕಾರ ಉಚಿತ ಆಂಬುಲೆನ್ಸ್ ಸೇವೆ ನೀಡಿದೆ. ಆದರೆ ಅನಿವಾರ್ಯ ಪರಿಸ್ಥಿತಿಗಳಲ್ಲಿ ಅನಾರೋಗ್ಯದ ಸಂದರ್ಭದಲ್ಲಿ ಆಂಬುಲೆನ್ಸ್ ಸೇವೆ ಮನೆ ತಲುಪಲು ಅನುಕೂಲವಾಗುವಂತ ರಸ್ತೆ ವ್ಯವಸ್ಥೆ ಇಲ್ಲ, ಇದರಿಂದ ಎಷ್ಟೋ ಜೀವಗಳು ಅಸುನೀಗಿವೆ. ಸ್ವಚ್ಛ ಭಾರತ ಅಭಿಯಾನದ ಹೆಸರಲ್ಲಿಯೂ ಸಾಕಷ್ಟು ಹಣ ಇಂದು ವ್ಯಯವಾಗುತ್ತಿದೆ. ಆದರೆ ಸ್ವಚ್ಛತೆ ಇಲ್ಲ,

ಅಧಿಕಾರಿಗಳ ಕಚೇರಿಗಳು ಅರಮನೆಯಂತಾಗುತ್ತಿವೆ…!

ಅಧಿಕಾರಿಗಳ ಕಚೇರಿಗಳು ಅರಮನೆಯ ರೀತಿಯಲ್ಲಿ ತಯಾರಾಗುತ್ತಿವೆ. ರಾಜ್ಯದಲ್ಲಿ ಒಬ್ಬ ರೈತ ಸಾಲ ಮಾಡಿ ಮನೆ ಕಟ್ಟಿ ಸಾಲ ತೀರಿಸುವಲ್ಲಿಯೇ ತನ್ನ ಇಡೀ ಜೀವನವನ್ನು ಕಳೆಯುತ್ತಾನೆ. ‘ಕಡಲುಗಳ್ಳರಿಂದ ಸ್ವಾತಂತ್ಯ ಸಿಕ್ಕಿತು, ಒಡಲುಗಳ್ಳರಿಂದಲ್ಲ’ ಎಂಬಂತೆ ನಮ್ಮ ರೈತರಿಗಿನ್ನು ಸ್ವಾತಂತ್ರ್ಯ ಸಿಕ್ಕಿಲ್ಲ.

ಎಲ್ಲಾ ಕಡೆ ಪ್ರಭಾವಿಗಳ ಆಟ!

ಯಾವುದೇ ಕ್ಷೇತ್ರದಲ್ಲಿ ಕೂಡ ಈಗ ಪ್ರಭಾವಿಗಳು, ರಾಜಕಾರಣಿಗಳು ತಮ್ಮ ಆಟ ನಡೆಸುತ್ತಿದ್ದಾರೆ. ಇದರಿಂದ ಬಡವರು, ದುರ್ಬಲರು ತೊಂದರೆಗೆ ಸಿಲುಕಿ ಒದ್ದಾಡುತ್ತಿದ್ದಾರೆ. ಅಧಿಕಾರಿಗಳು ಉಳ್ಳವರ ಕೈಗೊಂಬೆಗಳಾಗುತ್ತಿದ್ದಾರೆ. ಈ ಎಲ್ಲಾ ವಿಚಾರಗಳು ಸಮಾಜದ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚು ಮಾಡುತ್ತಿವೆ. ಇದೆಲ್ಲ ಸರಿ ಪಡಿಸುವರ್ಯಾರು?