Categories
ವಿಶೇಷ ಸುದ್ದಿ

ಧರೆಗೆ ಮುಂಗಾರು ಮಳೆ ಆಗಮನ: ಎಲ್ಲೆಲ್ಲೂ ಹನಿಯ ಚುಂಬನ..!

ಧರೆಗೆ ಮುಂಗಾರು ಮಳೆ ಆಗಮನ: ಎಲ್ಲೆಲ್ಲೂ ಹನಿಯ ಚುಂಬನ..!
– ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ..!
– ರೈತ ಸೇರಿ ಪ್ರತಿ ಜೀವಿಗೂ ಮಳೆಯೇ ಸ್ಫೂರ್ತಿಯ ಚಿಲುಮೆ

ವಿಶೇಷ ವರದಿ: ಅಮೃತ ಮಂಜುನಾಥ್

NAMMUR EXPRESS NEWS
ಓ ಮಳೆಯೇ ನೀನು ಧರೆಗೆ ಇಳಿದರೆ ಅದೆಷ್ಟು ಮುದ ನೀಡುತ್ತಿಯಾ..?. ಮಳೆಗಾಲ ಎಂದರೆ ಕೆಲವರಿಗೆ ಬೇಸರ ಅನಿಸಬಹುದು ಆದರೆ ಇನ್ನು ಕೆಲವರಿಗೆ ಅದೇ ಸ್ವರ್ಗ.
ಮಳೆಗಾಲದ ಮೊದಲ ಮಳೆ, ಆ ತಂಪು, ಹಸಿರಿನ ವಾತಾವರಣ ನೋಡೋದೇ ಒಂದು ಸೊಬಗು.
ಮಳೆ ವೇಳೆ ಹರಿಯುವ ನದಿ, ಕೊಳ್ಳಗಳು, ಮೋಡದ ಮರೆಯಲ್ಲಿ ಕಾಣುವ ಬೆಟ್ಟ ಗುಡ್ಡಗಳು, ಭೋರ್ಗರೆವ ಜಲಪಾತಗಳು. ಇದುವೇ ಭುವಿ ಮೇಲಿನ ಸ್ವರ್ಗ ಎನಿಸುವ ಸುಂದರ ದೃಶ್ಯಗಳು ಎಷ್ಟು ಚಂದ ಅಲ್ವಾ ಈ ಮಳೆಗಾಲ..?.
ಮಳೆಗಾಲದಲ್ಲಿ ಸುತ್ತಾಡುವ ಖುಷಿ ಬೇರೆಲ್ಲೂ ಸಿಗಲಾರದು. ಗಿಡ ಮರಗಳೆಲ್ಲ ಹಸಿರುಟ್ಟು ಸಂಭ್ರಮಿಸುವುದನ್ನು ನೋಡುವುದೇ ಒಂದು ವಿಶೇಷ ಖುಷಿ.
ಮಳೆಗಾಲದಲ್ಲಿ ಬೆಚ್ಚನೆ ತಿನಿಸು, ಕಾಫಿ, ಟೀ ಘಮ ಘಮ ಇದೆಷ್ಟು ಸುಮಧುರ. ಮನೆಯಲ್ಲಿ ಕುಳಿತು ಮಳೆಯ ಹನಿ ನೋಡುವ ಆ ರೋಮಾಂಚನ ಎಷ್ಟು ಚಂದ. ಮಳೆ ಬರೀ ಮನುಷ್ಯನಿಗೆ ಮಾತ್ರವಲ್ಲ, ಪ್ರಕೃತಿ,ಕೀಟ, ಪ್ರಾಣಿ ಪಕ್ಷಿಗಳಿಗೂ ಚೈತನ್ಯ ನೀಡುವ ವಿಶೇಷ ಕಾಲ.

ಕೃಷಿಗೆ ಹೊಸ ಕಳೆ ತಂದ ಮಳೆ..!

ಮಳೆಗಾಲ ಬರುತ್ತಿದಂತೆ ರೈತ ಚುರುಕಾಗುತ್ತಾನೆ. ಹಾಗೆ ಮಳೆಗಾಲ ಬಂತು ಅಂದ್ರೆ ಎಲ್ಲರೂ ಹೊಲ, ಗದ್ದೆ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ನಾಟಿ ಮಾಡೋದು ಸಸಿ ಕೀಳೋದು, ಹೂಟಿ ಮಾಡೋದು ಅದೆಲ್ಲ ನೋಡೋದೇ ಒಂಥರ ಸಂತೋಷ. ಆ ಗದ್ದೆ ಬೈಲಲ್ಲಿ ಮಣ್ಣು ಆಟ ಆಡೋದು ಅದೇ ನೀರಲ್ಲಿ ಈಜೋದು ವ್ಹಾವ್ ಹೇಳುತ್ತಾ ಹೋದ್ರೆ ಆ ಖುಷಿ ಸಂತೋಷಕ್ಕೆ ಕೊನೆಯೇ ಇಲ್ಲ.
ಮಳೆಗಾಲವು ವರ್ಷದ ಬಹು ನಿರೀಕ್ಷಿತ ಸಮಯವಾಗಿದ್ದು ಅದು ಎಲ್ಲರಿಗೂ ನೆಮ್ಮದಿ ಮತ್ತು ಸಂತೋಷದ ನಿಟ್ಟುಸಿರು ತರುತ್ತದೆ. ಮಳೆಗಾಲದಲ್ಲಿ ಸರಿಯಾದ ಪ್ರಮಾಣದ ಮಳೆಯಾಗದೆ ಹೋದರೆ ಅದೆಷ್ಟೋ ರೈತರ ಪಾಡು ಕಷ್ಟಕ್ಕೆ ಬಂದು ನಿಲ್ಲುತ್ತದೆ. ಹಾಗಾಗಿ ಮಳೆಗಾಲ ಶುರುವಾದರೆ ಎಲ್ಲಿಲ್ಲದ ಖುಷಿ. ಮಳೆಯ ಮಣ್ಣಿನ ಸುಗಂಧವನ್ನು ಅನುಭವಿಸಿದವರಿಗಷ್ಟೇ ಗೊತ್ತು.. ಮಳೆಗಾಲದ ಗಮ್ಮತ್ತು. ಮಳೆಯ ನಡುವೆ ಮೀನು ಹಿಡಿಯುವ, ಅಳಬೆ ಹುಡುಕುವ, ಹೊಸ ಹೊಸ ಅಡುಗೆ ಮಾಡುವ ಜೋಷ್ ಹೊಸ ಹುಮ್ಮಸ್ಸನ್ನು ಮೂಡಿಸುತ್ತದೆ.

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ..!

ಸುಸ್ವಾಗತ.. ಈ ಭುವಿಗೆ…!

Categories
ವಿಶೇಷ ಸುದ್ದಿ

ಜೆಜೆಎಂ ಕರ್ಮಕಾಂಡ: ನೀರಿನ ಹೆಸರಲ್ಲಿ ನೂರಾರು ಕೋಟಿ ಗೋಲ್ಮಾಲ್!

ಜೆಜೆಎಂ ಕರ್ಮಕಾಂಡ: ನೀರಿನ ಹೆಸರಲ್ಲಿ ನೂರಾರು ಕೋಟಿ ಗೋಲ್ಮಾಲ್!
– ಎಲ್ಲೆಲ್ಲೂ ಅಗೆದ ಹೊಂಡಗಳು… ಕಾಮಗಾರಿ ಕಳಪೆ..!?
– ಮಲೆನಾಡನ್ನು ಮಳೆಗಾಲ ಬಂದ್ರೆ ದೇವರೇ ಕಾಪಾಡಬೇಕು!
– ಕೋಟಿ ಕೋಟಿ ಹಣ ನೀರುಪಾಲು: ಜನರ ಹಣಕ್ಕೆ ಬೆಲೆ ಇಲ್ವೇ?

ವಿಶೇಷ ವರದಿ: ಸಚಿನ್ ಶೃಂಗೇರಿ
NAMMMUR EXPRESS NEWS
ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಮನೆಗೂ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಗುರಿಯನ್ನು ಹೊಂದಿ ಕೇಂದ್ರ ಸರ್ಕಾರ ರೂಪಿಸಿದ ಯೋಜನೆ ಜಲ್ ಜೀವನ್ ಮಿಷನ್ (ಜೆಜೆಎಮ್) ಈಗ ಎಲ್ಲೆಡೆ ಹಳ್ಳ ಹಿಡಿಯುವ ಸಾಧ್ಯತೆ ಹೆಚ್ಚಾಗಿದೆ.
ಕೇಂದ್ರದ ಮಹಾತ್ವಕಾಂಕ್ಷಿ ಈ ಯೋಜನೆಯಡಿ ಪ್ರತಿ ಮನೆಗಳಿಗೆ ಶುದ್ಧ ನಲ್ಲಿ ನೀರು ಒದಗಿಸಲು ಓವರ್‌ ಹೆಡ್‌ ಟ್ಯಾಂಕ್‌ಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ಊರಲ್ಲೂ ಚರಂಡಿ ಅಗೆಯಲಾಗುತ್ತಿದೆ. ಪೈಪ್ ಲೈನ್ ಮಾಡಲಾಗುತ್ತಿದೆ. ಆದಾಗ್ಯೂ, ಕೆಲವು ವರದಿಗಳ ಪ್ರಕಾರ, ಕಾಮಗಾರಿಯಲ್ಲಿ ಗುಣಮಟ್ಟದ ಸಮಸ್ಯೆಗಳು ಮತ್ತು ಅನುಷ್ಠಾನದಲ್ಲಿನ ವಿಳಂಬಗಳ ಬಗ್ಗೆ ದೂರುಗಳಿವೆ ಹಾಗೂ ಕಾಮಗಾರಿ ಕಳಪೆಯಾಗಿದ್ದು ರಸ್ತೆ ಮಧ್ಯೆ ಹೊಂಡ ಗುಂಡಿ ಬಿದ್ದಿರುವ ಆರೋಪಗಳಿವೆ. ಗುತ್ತಿಗೆದಾರರು ಕಳಪೆ ವಸ್ತು ಬಳಕೆ ಮಾಡುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಭವಿಷ್ಯದಲ್ಲಿ ಈ ಯೋಜನೆ ಹಳ್ಳ ಹಿಡಿಯುವ ಜತೆಗೆ ಸ್ಥಳೀಯ ಆಡಳಿತಕ್ಕೆ ಹೊರೆ ಆಗುವ ಸಾಧ್ಯತೆ ದಟ್ಟವಾಗಿದೆ.

ಹಳ್ಳಿ ಹಳ್ಳಿಯಲ್ಲೂ ಗುಂಡಿ ಬಿದ್ದ ರಸ್ತೆಗಳು..!

ಡಿಪಿಆರ್‌ನಂತೆ 2.5 ಅಡಿಗಳಷ್ಟು ಆಳದಲ್ಲಿಪೈಪ್‌ಗಳನ್ನು ಹಾಕಬೇಕು. ಆದರೆ, ಅನೇಕ ಗ್ರಾಮಗಳಲ್ಲಿ ಅರ್ಧ, 1 ರಿಂದ 1.5 ಅಡಿಗಳಿಗೆ ಮಾತ್ರ ಪೈಪ್‌ಗಳನ್ನು ಅಳವಡಿಸಲಾಗಿದೆ. ಅನೇಕ ಗುತ್ತಿಗೆದಾರರು ಹಣ ಉಳಿಸಲು ರಸ್ತೆಗಳಲ್ಲಿ ಕೇವಲ 1.5 ಅಡಿಗೆ ಸೀಮಿತ ಮಾಡಿದ್ದು ಸರಿಯಾಗಿ ಮುಚ್ಚದ ಪರಿಣಾಮ ಗ್ರಾಮೀಣ ಪ್ರದೇಶದ ಬಹುಪಾಲು ರಸ್ತೆಗಳಲ್ಲಿ ಗುಂಡಿ ಬಿದ್ದು ಓಡಾಡಲು ಸಾಧ್ಯವಾಗಿಲ್ಲ. ವಾಹನಗಳು ಅಪಘಾತ ಆಗುತ್ತಿದೆ. ರಸ್ತೆ ಹದಗೆಡುತ್ತಿದೆ. ಜನರಿಗೆ ತೊಂದರೆ ಆಗುತ್ತಿದೆ.

ಮತ್ತೊಂದು ನೀರಿನ ಯೋಜನೆಗೆ ಅಡ್ಡಿ!?

ಕೆಲವು ಗ್ರಾಮಗಳಲ್ಲಿ ಹರ್‌ ಘರ್‌ ಜಲ್‌ ಪೂರ್ಣ ಮಾಡಿದ್ದರೂ ಸಹ ಜೆಜೆಎಂ ಕಾಮಗಾರಿಯಿಂದ ಉಂಟಾಗಿರುವ ಗುಂಡಿಗಳನ್ನು ಮುಚ್ಚದೆ ನಿರ್ಲಕ್ಷ್ಯ ಮಾಡಿದ್ದಾರೆ.ಈ ಮಧ್ಯೆ ಮಳೆಗಾಲದಲ್ಲಿ ಇಂತಹ ಗುಂಡಿ ಬಿದ್ದ ರಸ್ತೆಗಳಲ್ಲಿ ಓಡಾಡೋದು ಅಂದ್ರೆ ದೇವರೆ ಕಾಪಾಡಬೇಕಾಗಿದೆ.

* ಕೋಟಿ ಕೋಟಿ ಹಣ ನೀರು ಪಾಲು: ಜನರ ಹಣಕ್ಕೆ ಬೆಲೆ ಇಲ್ವೇ ?

ಕೆಲವು ಕಡೆಗಳಲ್ಲಿ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣ ಮಾಡಿ ಸರಿಯಾಗಿ ಕ್ಯೂರಿಂಗ್‌ (ನೀರು ಹಾಕುವುದು) ಮಾಡದಿರುವುದು ಕಂಡುಬಂದಿದೆ. ಇದರಿಂದ ಓವರ್‌ ಹೆಡ್‌ ಟ್ಯಾಂಕ್‌ ಗುಣಮಟ್ಟ ಕುಸಿತವಾಗಿದ್ದು ಸ್ಥಳೀಯರು ದೂರು ನೀಡಿದರೂ ಅಧಿಕಾರಿಗಳು ಮಾತ್ರ ಗುತ್ತಿಗೆದಾರರ ಪರ ನಿಂತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಲ್ಲಿ ದೊಡ್ಡ ಮಟ್ಟದ ಗೋಲ್ಮಾಲ್ ಆಗುತ್ತಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಪ್ರತ್ಯಕ್ಷವಾಗಿ ಇಲ್ಲಿ ಶಾಮೀಲಾಗಿರುವುದು ಕಾಣುತ್ತಿದೆ. ಕಾಮಗಾರಿ ವಿಳಂಬ, ಕಳಪೆ ಕಾಮಗಾರಿ ಬಗ್ಗೆ ಯಾವುದೇ ರಾಜಕಾರಣಿ, ಅಧಿಕಾರಿಗಳು ಮಾತು ಎತ್ತದೆ ಇರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ಗ್ರಾಮಗಳ ಯೋಜನಾ ವರದಿ ಲೆಕ್ಕಕ್ಕಿಲ್ಲ!

ಸರ್ಕಾರ ಪ್ರತಿ ಗ್ರಾಮಗಳಿಗೆ ರೂಪಿಸಿರುವ ಯೋಜನಾ ವರದಿಗಳಂತೆ ಕೆಲಸ ಮಾಡದೆ ಮನಸೋ ಇಚ್ಚೆ ಕಳಪೆ ಕಾಮಗಾರಿ ಮಾಡಿರುವ ಬಗ್ಗೆ ಸ್ಥಳೀಯರು, ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಆದರೂ ಸಹ ಕುಡಿಯುವ ನೀರು ಮತ್ತು ಗ್ರಾಮ ನೈರ್ಮಲ್ಯ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಗುತ್ತಿಗೆದಾರರ ಪರ ನಿಂತು ಮನೆಮನೆಗಳಿಗೆ ವ್ಯವಸ್ಥಿತವಾಗಿ ನೀರು ಸರಬರಾಜು ಆಗದಿದ್ದರೂ ಅನುದಾನ ಬಿಡುಗಡೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಬಹುಪಾಲು ಗ್ರಾಮಗಳಲ್ಲಿ ಡಿಪಿಆರ್‌ನಂತೆ ಕೆಲಸಗಳು ನಡೆಯದಿದ್ದರೂ ಸಹ ಹರ್‌ಘರ್‌ ಜಲ್‌ ಕೆಲಸ ಮಾಡಿ ಸಂಪೂರ್ಣ ಅನುದಾನದ ಹಣವನ್ನು ಗುತ್ತಿಗೆದಾರರಿಗೆ ನೀಡುತ್ತಿರುವುದು ಕಂಡುಬಂದಿದೆ. ಡಿಪಿಆರ್‌ನಂತೆ ಕೆಲಸವಾಗಿಲ್ಲ, ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರೂ ಸ್ಥಳ ಭೇಟಿ ಮಾಡಲು ಮಾತ್ರ ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಒಟ್ಟಾರೆಯಾಗಿ ಕೋಟಿ ಕೋಟಿ ಹಣ ಖರ್ಚು ಮಾಡಿ ಯೋಜನೆ ಜಾರಿಯಾದ ಜೆಜೆಎಮ್ ಕಾಮಗಾರಿಯಲ್ಲಾಗುತ್ತಿರುವ ಬೇಜವಾಬ್ದಾರಿತನ ನೋಡಿದರೆ ಜನರ ಹಣಕ್ಕೆ ಬೆಲೆ ಇಲ್ವೇ ಎಂಬ ಪ್ರಶ್ನೆ ಮೂಡಿದೆ.
ನಮ್ಮೂರ್ ಎಕ್ಸ್ ಪ್ರೆಸ್ ಈ ಬಗ್ಗೆ ವಿಶೇಷ ವರದಿ ಪ್ರಕಟ ಮಾಡಿದ್ದು ಜನರು ತಮ್ಮ ಊರಿನಲ್ಲಾದ ಅವ್ಯವಸ್ಥೆ ಹಾಗೂ ಅವ್ಯವಹಾರ ಬಗ್ಗೆ ಮಾಹಿತಿ ನೀಡಬಹುದಾಗಿದೆ.

Categories
ವಿಶೇಷ ಸುದ್ದಿ

ಮಂಜಿನ ನಡುವೆ ಒಣಗಿದ ಒಂಟಿಮರ – ಹಿರಿದಾದ ಬೆಟ್ಟದ ತಳಮಳ

ಮಂಜಿನ ನಡುವೆ ಒಣಗಿದ ಒಂಟಿಮರ – ಹಿರಿದಾದ ಬೆಟ್ಟದ ತಳಮಳ

ಹೆಚ್ಚಾಗಿ ಮಲೆನಾಡಿನ ಮಡಿಲಲ್ಲಿ ಕಾಣಸಿಗುವ ಹಸಿರು ಹರಿತದ ನಡುವೆಯೇ, ಇಷ್ಟು ವಿರಳವಾಗಿ ಮೂಡಿದ ದೃಶ್ಯ ಎಷ್ಟೋ ಅಪರೂಪ. ಇದು ಹಿರಿದಾದ ಬೆಟ್ಟದ ಎತ್ತರದ ಎಳೆಯೊಳಗಿನ ಒಂದು ಕ್ಷಣ. ಬೆಟ್ಟದ ತುದಿಯಲ್ಲಿ ಮಂಜು ಮಸುಕಾಗಿ ಹರಡಿದರೆ, ಅದರ ನಡುವೆ ಒಂಟಿಯಾಗಿ ನಿಂತಿರುವ ಒಣಗಿದ ಮರವೊಂದು ತಾನು ಸಾಯಲಿಲ್ಲ, ಜೀವವಿಲ್ಲದಂತಿಲ್ಲ ಎಂಬ ಸಂಕೇತವಾಗಿ ನಿಂತಿದೆ.

ಈ ಮರವನ್ನು ನೋಡಿದಾಗ ಅದು ಬಾಳಿನೊಂದಿಗೆ ನಡೆಸಿದ ಹೋರಾಟದ ಶೀಲ್ಪವಾಗಿ ತೋರುತ್ತದೆ. ಮುಂಗಾರು ಮಳೆಯ ತಂಪು ಕೂಡ ಅದನ್ನು ತಂಪುಮಾಡಲಾಗಿಲ್ಲ, ಬಿಸಿಲಿನ ಹೊಟ್ಟೆಯನ್ನೂ ಅದರ ಬಳಿ ತಣಿಯಲಾಗಿಲ್ಲ. ಆದರೂ ಅದು ಇಲ್ಲಿದೆ – ನಿಂತಿದೆ – ನೆನೆಸುತ್ತಿದೆ – ಏನೋ ಹೇಳಲು ಹಾತೊರೆಯುತ್ತಿದೆ.

ಅದರ ಬಳ್ಳಿಗಳಿಲ್ಲ, ಹಳ್ಳಿಗಳಿಲ್ಲ. ಆದರೆ ತುದಿಯಲಿ ನಿಂತು ಮಂಜು ಮುಟ್ಟಿಸಿಕೊಳ್ಳುತ್ತಿದೆ. ಆಗ ಅಚ್ಚರಿಯುತವಾಗಿ ತಿಳಿಯುತ್ತದೆ – ಪ್ರತಿ ಜೀವಿಗೂ, ಎಲ್ಲ ಒಂಟಿತನಕ್ಕೂ, ತನ್ನದೇ ಆದ ಸೌಂದರ್ಯವಿದೆ. ತನ್ನದೇ ಆದ ಆಳವಿದೆ. ತನ್ನದೇ ಆದ ಕಥೆಯಿದೆ.

ಇದು ಮರವಲ್ಲ, ನಮ್ಮನ್ನು ಪ್ರತಿಬಿಂಬಿಸುವ ಪ್ರತಿಮೆಯಾಗಿದೆ. ಬಾಳಿನಲ್ಲಿ ಎಲ್ಲರೂ ಒಂದೊಮ್ಮೆ ಒಂಟಿಯಾಗುತ್ತೇವೆ. ಮರುಭೂಮಿಯಲ್ಲಿ ಹಸಿರಿಗಾಗಿ ಬಯಸುವ ಹಿತ್ತಲಿಗೆಯಾಗಿ ಬದಲಾಗುತ್ತೇವೆ. ಆ ಒಂಟಿತನವನ್ನು ಅರ್ಥಮಾಡಿಕೊಳ್ಳಲು ಬೆಟ್ಟಗಳೆಷ್ಟೋ ಉಪಯೋಗಿಯಾಗುತ್ತವೆ. ಮಂಜಿನೆಂಬ ಮೌನವೂ ಅವಶ್ಯಕವಾಗುತ್ತದೆ.

ಈ ಮರವೇ ಹೇಳುವಂತೆ ಕಾಣುತ್ತದೆ –
“ನನಗೆ ಚಿಗುರು ಬರುತ್ತಿಲ್ಲ,
ಆದರೆ ನಿಂತಿರುವೆ…
ಮಂಜು ನನಗೆ ಸಹವಾಸ ನೀಡುತ್ತದೆ,
ಅದರಲ್ಲಿ ನಾನು ಜೀವಿಸುತ್ತೇನೆ.”

—ರಾಮ್ ಅಜೆಕಾರು ಕಾರ್ಕಳ 

Categories
ವಿಶೇಷ ಸುದ್ದಿ

ಮುಗಿಲುಮುಟ್ಟುವ ಚಾರಣ…

ಮುಗಿಲುಮುಟ್ಟುವ ಚಾರಣ…

NAMMUR EXPRESS NEWS
ಚಾರಣವೆಂದರೆ ಕೇವಲ ಕಾಲುಚಾಲನೆಯಲ್ಲ, ಅದು ಮನಸ್ಸಿಗೆ ನೀಡುವ ವಿಶ್ರಾಂತಿ, ಪ್ರಕೃತಿಯ ಹತ್ತಿರದ ಸಮೀಪವಾಸ, ಆತ್ಮದೊಂದಿಗೆ ನಡೆಸುವ ಒಂದು ಶಾಂತ ಸಂವಾದ.

ಮುಂಜಾನೆ ಮಳೆಯ ಹನಿಗಳು ಎದೆಯ ಮೇಲೆ ಲಘುವಾಗಿ ಬೀಳುತ್ತಿವೆ. ಈ ಹನಿಗಳ ಸ್ಪರ್ಶ ಹಿತವಾಗಿರುವ ಅಮ್ಮನ ಮುದ್ದೆಮೆಚ್ಚಿನ ತೊಡೆಯ ಸವಿಯಂತೆ. ಮಂಜು ಪ್ರಕೃತಿಯ ನಕ್ಕು ನವಿಲು ಗೂಡು ಕಟ್ಟಿದಂತಿದೆ – ಎಲ್ಲೆಲ್ಲೂ ಹಸಿರುಮೂಕುಟಗಳ ಮೇಲೆ ಬಿಳುಪಿನ ಮಡಿಲು ಹರಿದಿರುವ ಭಾವ. ಪ್ರಕೃತಿಯ ಈ ಅಲಂಕಾರ ಮನಸ್ಸನ್ನು ತಾಯಿಯ ಮಡಿಲಲ್ಲಿ ಮಲಗಿದ ಮಗುಹೀಗೇ ಆನಂದಿಸುತ್ತದೋ ಎಂಬ ಭಾವನೆ ಮೂಡಿಸುತ್ತೆ.

ಪರ್ವತಗಳ ಕೆಳಗೆ ಹರಿದಾಡುವ ದಾರಿಗಳ ನಡುವೆ ನಡೆಯುವ ಈ ಚಾರಣ, ನಾವು ಬದುಕಿನಲ್ಲಿ ಅನುಭವಿಸುವ ಎಲ್ಲ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತದೆ. ಮುಗಿಲುಮುಟ್ಟುವಂತೆ ತೋರಿದ ಬೆಟ್ಟದ ಶಿಖರ, ಕೈ ಚುಂಬಿಸುವ ಮೋಡಗಳು, ನಾವು ತಲುಪಲು ಕಾತರಿಸುತ್ತಿರುವ ಕನಸುಗಳಂತೆ. ಆದರೆ ಅದರತ್ತ ನಡೆಯುವ ಪ್ರತಿಯೊಂದು ಹೆಜ್ಜೆಯೂ ನಮ್ಮ ಅಂತರಂಗವನ್ನು ಸ್ವಚ್ಛಗೊಳಿಸುತ್ತಿದೆ, ಶುದ್ಧಗೊಳಿಸುತ್ತಿದೆ.

ಮೈಮನಗಳ ಮಡಿಲಲ್ಲಿ ನಾವು ನಮಗೇ ಪತ್ತೆಯಾಗದ ಭಾವನೆಗಳನ್ನು ಕಂಡುಕೊಳ್ಳುತ್ತೇವೆ – ಶಾಂತಿ, ಧೈರ್ಯ, ಭಯ, ಆಶ್ಚರ್ಯ, ಭಕ್ತಿ… ಈ ಎಲ್ಲವೂ ಆ ಮಂಜಿನಲ್ಲಿ ಮಿಡಿಯುವ ಹಸಿರು ಎಲೆಗಳಂತೆ. ಪ್ರಕೃತಿಯ ಈ ಕರವಸ್ತ್ರದಲ್ಲಿ ಮುಳುಗಿದಾಗ, ನಾವು ನಿಜವಾದ ಸ್ವಯಂ ರೂಪವನ್ನು ಕಂಡುಕೊಳ್ಳುತ್ತೇವೆ.

ಈ ಚಾರಣ ನನ್ನ ಮನಸ್ಸಿಗೆ ನೀಡಿದ ಆನಂದವನ್ನು ನಿಖರವಾಗಿ ವರ್ಣಿಸುವ ಮಾತುಗಳು ಕಡಿಮೆಯೇ. ಅದು ಕಣ್ಣು ಕಾಣುವ ಪ್ರಕೃತಿಯ ಸೌಂದರ್ಯವಷ್ಟಲ್ಲ, ಅದು ಮನಸ್ಸು ಅನುಭವಿಸಿದ ಶುದ್ಧೀಕರಣವೂ ಹೌದು. ಮರಳಿದಾಗ ನಾನು ಭಿನ್ನನಾಗಿದ್ದೆ – ಹೆಚ್ಚು ಶಾಂತ, ಹೆಚ್ಚು ಪ್ರಜ್ಞಾವಂತ, ಹೆಚ್ಚು ಧನ್ಯನಾಗಿದ್ದೆ.

ರಾಮ್ ಅಜೆಕಾರು ಕಾರ್ಕಳ

Categories
ವಿಶೇಷ ಸುದ್ದಿ

ಹಳ್ಳಿ ಬಗೆಹರಿಯದ ನೆಟ್ವರ್ಕ್ ಸಮಸ್ಯೆ.!

ಹಳ್ಳಿ ಬಗೆಹರಿಯದ ನೆಟ್ವರ್ಕ್ ಸಮಸ್ಯೆ.!
– ಕೆಲವೆಡೆ ಟವರ್ ಇದ್ದರೂ ನೆಟ್ವರ್ಕ್ ಇಲ್ಲ
– ನೆಟ್ವರ್ಕ್ ಇಲ್ಲದೆ ಜನರ ಪರದಾಟ.. ಸರ್ಕಾರಗಳ ಮೌನ

NAMMUR EXPRESS NEWS
ಇಂದಿನ ದಿನಗಳಲ್ಲಿ ನಾವು ಮೊಬೈಲ್ ಮತ್ತು ಅಂತರ್ಜಾಲದಲ್ಲಿ ಇಡೀ ಪ್ರಪಂಚವನ್ನೇ ಕಟ್ಟಿಹಾಕಿದ್ದಿವಿ. ದಿನ ನಿತ್ಯದ ಬದುಕಿನಲ್ಲಿ ಅಂತರ್ಜಾಲವಿಲ್ಲದೆ ಜೀವನ ನಡೆಸಲು ಸಾಧ್ಯವಿಲ್ಲ ಎಂಬ ಸ್ಥಿತಿಗೆ ಬಂದು ನಾವು ತಲುಪಿದ್ದೇವೆ. ಏಕೆಂದರೆ ನಮ್ಮ ಪ್ರತಿದಿನದ ಬದುಕಿನಲ್ಲಿ ಹಲವು ಕೆಲಸಗಳು ಮೊಬೈಲ್ ಮತ್ತು ಅಂತರ್ಜಾಲದ ಮುಖಾಂತರವೇ ನಡೆಯುತ್ತದೆ.
ಆದರೆ ಹಳ್ಳಿಗಳಲ್ಲಿ ಇಂದಿಗೂ ನೆಟ್ವರ್ಕ್ ಸಮಸ್ಯೆ ಇದೆ. ಹಳ್ಳಿಗಳಲ್ಲಿ ನೆಟ್ವರ್ಕ್ ಸಮಸ್ಯೆಗಳನ್ನು ಪರಿಹರಿಸುವುದು ದೊಡ್ಡ ಸವಾಲಾಗಿದೆ. ಈ ಸಮಸ್ಯೆಗಳ ಮುಖ್ಯ ಕಾರಣಗಳಲ್ಲಿ ಇನ್‌ಫ್ರಾಸ್ಟ್ರಕ್ಚರ್ ಕೊರತೆಯು ಪ್ರಮುಖವಾಗಿದೆ. ಹಳ್ಳಿಗಳಿಗೆ ಅಗತ್ಯವಿರುವ ಟವರ್ ಮತ್ತು ಫೈಬರ್ ಆಪ್ಟಿಕ್ ಕೇಬಲ್ ಗಳನ್ನು ಸ್ಥಾಪಿಸಲು ಸಾಕಷ್ಟು ನೆರವು ದೊರೆಯುವುದಿಲ್ಲ. ಹೀಗಾಗಿ, ನಗರ ಪ್ರದೇಶಗಳಷ್ಟು ಸಮರ್ಪಕವಾಗಿ ನೆಟ್ವರ್ಕ್ ಕವರೆಜ್ ಪಡೆಯಲು ಸಾಧ್ಯವಾಗುವುದಿಲ್ಲ. ಹಳ್ಳಿಗಳಲ್ಲಿ ನೆಟ್ವರ್ಕ್ ಸಮಸ್ಯೆಗಳಿಗೆ ಇನ್ನೊಂದು ಕಾರಣ ಹವಾಮಾನ. ಹಳ್ಳಿಗಳು ಕಾಡು,ತಪ್ಪಲು ಪ್ರದೇಶಗಳಲ್ಲಿ ಇರುವುದರಿಂದ, ಇಲ್ಲಿನ ಜನರಿಗೆ ನೆಟ್ವರ್ಕ್ ಸಿಗ್ನಲ್ ಕಡಿಮೆಗೊಳ್ಳುತ್ತದೆ. ತೀವ್ರ ಹವಾಮಾನ ಸ್ಥಿತಿಗಳು, ಮಳೆಗಾಲ ಅಥವಾ ಬಿರುಗಾಳಿಗಳು ಸಹ ನೆಟ್ವರ್ಕ್ ಲಿಂಕ್‌ಗಳನ್ನು ಹಾನಿಗೊಳಿಸುತ್ತದೆ. ಇದೆಲ್ಲದರಿಂದಾಗಿ ಇಂದು ಹಳ್ಳಿ ಜನ ಹೆಚ್ಚಿನದಾಗಿ ಅಂತರ್ಜಾಲದೊಂದಿಗೆ ಬೆರೆಯಲು ಸಾಧ್ಯವಾಗುತ್ತಿಲ್ಲ.

ಸರ್ಕಾರ ಏನು ಮಾಡಬೇಕು?
ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಹಳ್ಳಿಗಳಲ್ಲಿ ಉತ್ತಮ ಇನ್‌ಫ್ರಾಸ್ಟ್ರಕ್ಚರ್ ನಿರ್ಮಾಣಕ್ಕೆ ಹೂಡಿಕೆ ಮಾಡಬೇಕು. ಪೂರಕವಾಗಿ, ತಂತ್ರಜ್ಞಾನ ಅಭಿವೃದ್ಧಿ, ಜೊತೆಗೆ ಸ್ಯಾಟಲೈಟ್ ಇಂಟರ್‌ನೆಟ್ ಅಥವಾ ವೈಮ್ಯಾಕ್ಸ್ ಗಳಂತ ಆಧುನಿಕ ತಂತ್ರಜ್ಞಾನದ ಬಳಸಲು ಮುಂದಾಗಬೇಕು.

ನೆಟ್ವರ್ಕ್ ಕಂಪನಿಗಳ ಮೋಸ!

ಸೇವಾ ಪೂರೈಕೆದಾರರು ಹೆಚ್ಚು ಹಳ್ಳಿಗಳಲ್ಲಿ ಸರ್ವೀಸ್ ವಿಸ್ತರಿಸಲು ಸಬ್ಸಿಡಿ ಅಥವಾ ಇತರ ಪ್ರೋತ್ಸಾಹಗಳನ್ನು ನೀಡಬೇಕು. ವಿದ್ಯುತ್ ಪೂರೈಕೆಯನ್ನು ಸುಧಾರಿಸಲು ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕು. ನೆಟ್ವರ್ಕ್ ಇಲ್ಲದೆ ಇದ್ದರೆ ಜನಸಾಮಾನ್ಯರಿಗೆ ತೊಂದರೆ ಎದುರಾಗುತ್ತದೆ. ಹೀಗೆ, ಹಳ್ಳಿಗಳಲ್ಲಿ ಉತ್ತಮ ನೆಟ್ವರ್ಕ್ ಸಂಪರ್ಕ ನೀಡಲು ಹಲವು ದಾರಿಗಳನ್ನು ಬಳಸುವುದರ ಮೂಲಕ ಉತ್ತಮ ಸಂಪರ್ಕ ನೀಡಲು ಪ್ರಯತ್ನಿಸಬೇಕು. ಇಲ್ಲವಾದಲ್ಲಿ ಅವರು ಗ್ರಾಹಕರಿಗೆ ಮೋಸ ಮಾಡಿದಂತಾಗುತ್ತದೆ.
ಇದು ರಾಜ್ಯದ ಅನೇಕ ಭಾಗದ ಸಮಸ್ಯೆ. ಈ ಬಗ್ಗೆ ಎರಡೂ ಸರ್ಕಾರಗಳು ಗಂಭೀವಾಗಿ ಯೋಚಿಸಬೇಕು.

Categories
ವಿಶೇಷ ಸುದ್ದಿ

ಹಳ್ಳಿಪಳ್ಳಿ ನ್ಯೂಸು! ಸುಬ್ಬಣ್ಣ ಹೇಳಿದ್ದು… ನಾಗಣ್ಣ ಕೇಳಿದ್ದು…!

ಹಳ್ಳಿಪಳ್ಳಿ ನ್ಯೂಸು!

ಸುಬ್ಬಣ್ಣ ಹೇಳಿದ್ದು… ನಾಗಣ್ಣ ಕೇಳಿದ್ದು…!

ಹೋಯ್…ಸುಬ್ಬಣ್ಣ ಎಂಥದ್ರಿ ಇದು ಜಡಿ ಮಳೆ. ನಮ್ಮೂರಲ್ಲಿ ಒಬ್ರು ಈ ಸಲ ಕಟ್ಟಿಗೆ ಕೂಡ ಕಡಿದೆಯಾ ಬರೀ ಮದ್ವೆ ಮನೆ ನೆಂಟರೂಟದಲ್ಲೇ ದಿನ ದೂಡಿ ಈಗ ತಲೆ ಮೇಲೆ ಕೈ ಹೊತ್ಕೊಂಡು ಕೂತಾರೆ. ನಮ್ಮ ಅಣ್ಣನ ಮಗಳು ಅಮ್ಮಿನ ಬೇರೆ ಕಾಲೇಜಿಗೆ ಸೇರಿಸಿ ಬರ್ಬೇಕು. ಅವಳ ತಮ್ಮ ತಮ್ಮಣ್ಣಿ ಬೇರೆ ಚಿಕ್ಕಪ್ಪ ನನ್ನ ಇಲ್ಲಿ ಶಾಲೆಗೆ ಬೇಡ, ತೀರ್ಥಹಳ್ಳಿ ಶಾಲೆಗೆ ಸೇರ್ಸು, ನಾನು ಇಂಗ್ಲಿಷ್ ಮೀಡಿಯಂ ಓದಿ ಡಾಕ್ಟ್ರು ಆಗ್ತೀನಿ ಅಂತಾನೆ. ನಮ್ ಅಣ್ಣಂಗೆ ಇದೆಲ್ಲ ಗೊತ್ತಾಗಲ್ಲ. ಈ ಸಲ ನೋಡಿದ್ರೆ ಅಡಕೆ ಬೇರೆ ಪೂರ್ತಿ ಖೋತಾ ಅಗೆದೆ. ಅದೂ ಹೋದ ಸಲ ಮಂಡಿಲಿ ತಂದಿದ್ದು ದುಡ್ಡು ಕೊಡದೆ ಇಲ್ಲೇ ಪ್ರಭು ಅಂಗಡಿಗೆ ಕೊಟ್ಟು ಗೊಬ್ಬರ, ಔಷಧಿ ತಂದಿದ್ದೇನೆ. ಏನ್ ಮಾಡೋದು ಗೊತ್ತಾಗಲ್ಲ ಮಾರ್ರೇ…!

ಏ.. ನಾಗೇಶ, ನಿಂಗೊತ್ತನಾ.. ಮಂಜುನಾಥ್ ಗೌಡ್ರು ಒಳಗೆ ಹೋಗ್ಯಾರಂತೆ. ಡಿಸಿಸಿ ಬ್ಯಾಂಕಲ್ಲಿ ಸ್ವಲ್ಪ ಸಾಲ ಕೇಳನಾ ಅಂತ ಬ್ಯಾಂಕಿಗೆ ಹೋಗಿದ್ದೆ. ಅಲ್ಲಿ ಈಗ ಕೇಳೋರು ಗತಿ ಇಲ್ಲ ಕಣ. ಯಾರ್ ಅವ್ರನ್ನ ಸಿಕ್ಸಿದ್ದು ಅಂತಾನೆ ಗೊತ್ತಾಗಲ್ಲ ಮಾರಾಯ…ಮುಂದಿನ ಸಲನೂ ಜ್ಞಾನೇಂದ್ರಣ್ಣ, ಕಿಮ್ಮನೆ ಮತ್ತೆ ನಿಲ್ತಾರನ ಎಲೆಕ್ಷನ್ ಅಲ್ಲಿ? ಇದೆಂಥ ಮಾರಾಯ ರಾಜಕೀಯ. ಬೇಳೂರು, ರಾಜೇಗೌಡ್ರು ಕೂಡ ಫುಲ್ ಸುತ್ತಾಡ್ತಾರೆ ಮಾರಾಯ. ಅಲ್ಲಿ ಸಾಗರ, ಶೃಂಗೇರಿಲೂ ಇದೇ ಕಥೆ.
ನಮ್ಮೂರಲ್ಲಿ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯಿತಿ ಅಂತ ಓಡಾಡ್ತಿದ್ದವರು ಒಬ್ರು ಪತ್ತೆ ಇಲ್ಲ ಕಣ. ಬರೀ ದುಡ್ಡು ಮಾಡದ್ರಲ್ಲಿ ಬಿದ್ದರೆ ಮಾರಾಯ. ನೆಕ್ಸ್ಟ್ ದುಡ್ ಹಂಚಬೇಕಲ್ಲ ಅದ್ಕೆ. ಈಗೆಲ್ಲ ಒಟ್ಟಿಗದರೆ ಚುನಾವಣೆ ಬರ್ಲಿ ತಡಿ ಅದೇ ಬಗಿನಿಗೂಟ..!

ಸುಬ್ಬಣ್ಣ, ನೀವ್ ಸುಮ್ನಿರಿ ಮಾರ್ರೇ…ನಮ್ ಮಲ್ನಾಡ್ ಜನ ಬರೀ ಇದೆ ಕಥೆ. ಆತ್ಲೆಗೆ ಬೆಂಗಳೂರು ಹೋಗಣ ಅಂದ್ರೆ ಹಾಳಾದ್ದು ಮೂರು ಎಕರೆ ತೋಟ, 10 ದನ, ಈ ಮನೆ ಬಿಟ್ಟು ಹೋಗಂಗಿಲ್ಲ. ಮದ್ವೆ ಆಗನ ಅಂದ್ರೆ ನಮ್ಗೆ ಹುಡ್ಗಿ ಕೊಡೋರು ಇಲ್ಲ. ಪ್ಯಾಟಿಗೆ ಹೋಗಿ ಸೂಟು ಬೂಟು ಹಾಕೊಂಡು ಅಲ್ಲೇ ಒಂದು ನೋಡ್ಕೊಂಡು ಮದ್ವೆ ಆಗನ ಅಂದ್ರೆ ಇಲ್ಲಿ ಅಪ್ಪಯ್ಯ ಅಮ್ಮ ಬಿಡಲ್ಲ..ನಾನು ಹೋತೀನಿ ಅಂದ್ರು ಅಣ್ಣ ಅಡ್ಡಗಾಲು ಹಾಕ್ತಾನೆ ಮಾರಾಯ.

ನಾಗೇಶ ಒಂದು ಮಾತು ಹೇಳ್ತಿನಿ ನೋಡು, ನೀನು ಜಾತಿ ಗೀತಿ ಬಿಡು, ಯಾರಾದ್ರೂ ಒಂದು ಒಳ್ಳೆ ಹುಡ್ಗಿ ಸಿಕ್ಕಿದ್ರೆ ಹೇಳ್ದೆ ಕೇಳ್ದೆ ಮದ್ವೆ ಆಗ. ಇಲ್ಲ ನಿಂಗೆ ಈಗ್ಲೇ 38 ಆಯ್ತು. ಇನ್ನ ಈ ಜನ್ಮದಲ್ಲಿ ಮದ್ವೆ ಇಲ್ಲ ಬಿಡು. ನಮ್ಮ ಸೋಮಣ್ಣನ ಮಗ ವೆಂಕ ನೋಡು ಬಾರ್ ಕ್ಯಾಶಿಯರ್ ಅಂತ ಹೋದವ ಅಲ್ಲಿಂದಾನೆ ಬಾರ್ ಓನರ್ ಮಗಳನ್ನೇ ಹಾರಿಸ್ಕೊಂಡೆ ಬಂದನೆ. ಏನಾದ್ರು ಆಗ್ಲೇ ಅವ ಕಣ ಗ್ರೇಟ್..!. ನಿನ್ನೆ ನೋಡ್ತೀನಿ ಇಡಿ ಫ್ಯಾಮಿಲಿ ಗೀತಕ್ಕನ ಮಗಳ ಮದ್ವೇಲಿ ಗಮ್ಮತ್ತಾಗಿ ಒಟ್ಟಾಗಿ ಚಿಕನ್ ಕಬಾಬ್ ತಿಂತ ಇದ್ರು…! ಹೋಗ್ಲಿ ಬಿಡ ನೀನು ಏನಾದ್ರು ಮಾಡು ಮದ್ವೆ ಆಗು ಮಾರಾಯ.

ನೋಡು ಮತ್ತೊಂದು ವಿಷ್ಯ ಮರೆತೇ ಹೋಯ್ತು…!

ಕಾಂಗ್ರೆಸ್ ಅಧ್ಯಕ್ಷರು ನಮ್ ಮಂಜಣ್ಣ ಚೇಂಜ್ ಆಗ್ತಾರೆ ಅಂತಾರೆ ಮಾರಾಯ. ಪಾಪ, ಬಿಳಿ ಪ್ಯಾಂಟು, ಶರ್ಟ್ ಮಳೆಗಾಲದಲ್ಲಿ ಏನ್ ಮಾಡ್ತಾರೋ..?.
ಇಲ್ಲ ಇಲ್ಲ ಸುಬ್ಬಣ್ಣ, ಗೌಡ್ರು ಹೊರಗೆ ಬರೋವರೆಗೆ ಯಥಾಸ್ಥಿತಿ ಅಂತೆ ಕಣ. ಮತ್ತೆ ಬಿಜೆಪಿಲಿ ನವೀನಣ್ಣ, ಕುಕ್ಕೆ, ಸತೀಶಣ್ಣ ಯಾರು ನಿಲ್ತಾರಾ ಮಾರಾಯ. ನೀನ್ ಅದುನ ಹೇಳ್ತಿಯ ಕಾಂಗ್ರೆಸ್ ಅಲ್ಲೂ 4 ಜನ ರೇಸ್ ಅಲ್ಲಿ ಅದರೆ ಗೊತ್ತಾ?…ಪಾಪ ಮದನಣ್ಣ ಎಲ್ಲಿ ಹೋಗ್ಯಾರ ಕಾಣದೆ ಇಲ್ಲಲ್ಲ..?.ನಮ್ ಟೂರ್ನಿಮೆಂಟಿಗೆ ಫಸ್ಟ್ ಪ್ರೈಜ್ ಕೊಟ್ಟಿದ್ರು ಮಾರಾಯ.

ಸಾಯ್ಲಿ, ಬಿಡ ನಮ್ಗೆ ರಾಜಕೀಯ ಎಂತಕೆ, ಹೋಗನ ಬಾ ಮನೆಗೆ, ಹೇಳ್ಬಡ, ವೆಂಕಟೇಶಣ್ಣನ ಅಂಗಡಿಲಿ 90 ಚಾಯ್ಸ್ ಹೊಡ್ಕೊಂಡು ಆಶಕ್ಕನ ಚಿಕನ್ ಅಂಗಡಿಲಿ ಅರ್ಧ ಕೆಜಿ ಚಿಕನ್ ತಗೊಂಡು ಬರನ ಬಾ…!

Categories
ಮಾಹಿತಿ ಸುದ್ದಿ ವಿಶೇಷ ಸುದ್ದಿ

ಮಳೆಗಾಲದಲ್ಲಿ ಮೀನು, ಏಡಿ ಹಿಡಿಯುವುದೇ ಒಂದು ಗಮ್ಮತ್!

ಮಳೆಗಾಲದಲ್ಲಿ ಮೀನು, ಏಡಿ ಹಿಡಿಯುವುದೇ ಒಂದು ಗಮ್ಮತ್!
– ಊರ ಬದಿ ಏಡಿ, ಮೀನು ಹಿಡಿಯುವುದರಲ್ಲಿ ಕರಾವಳಿ ಮಂದಿ ಎತ್ತಿದ ಕೈ!

ವಿಶೇಷ ವರದಿ: ಸುರಕ್ಷಾ ಕೊಯಿಲ

NAMMUR EXPRESS NEWS
ಕರಾವಳಿ ಎಂಬುವುದೇ ಮೀನು, ಏಡಿ, ಸಿಗಡಿ ಊಟಕ್ಕೆ ಫೇಮಸ್. ಇಲ್ಲಿ ಮಳೆಗಾಲದಲ್ಲಂತೂ ಕೇಳೋದೇ ಬೇಡ.. ನದಿ ಕೆರೆ ಹೊಳೆಗಳಲ್ಲಿ ಮಾತ್ರವಲ್ಲದೆ ತೋಟಗದ್ದೆಗಳ ಮೂಲೆಯಲ್ಲಿ ಕಂಡುಬರುವ ತೋಡುಗಳಲ್ಲೂ ಏಡಿ ಅಣಬೆ ಮೀನು ಎಂಬ ಹುಡುಕಾಟದಲ್ಲಿ ತೊಡಗಿಕೊಳ್ಳುತ್ತಾರೆ ನಮ್ಮ ಕರಾವಳಿ ಮಂದಿ.
ಹೇರಳವಾಗಿ ಸಿಗುವ ಇವುಗಳನ್ನು ಹುಡುಕಿ ತಂದು ಸಾರು, ಪಲ್ಯ ಮಾಡಿ ಸವಿಯುವುದೇ ಒಂದು ಸೌಭಾಗ್ಯ.
ಮಕ್ಕಳ ಖುಷಿಯಂತೂ ಕೇಳೋದೇ ಬೇಡ.. ಬಿಟ್ಟೂ ಬಿಡದೆ ಬರುವ ಮಳೆಗೆ ಶಾಲಾ-ಕಾಲೇಜುಗಳಲ್ಲಿ ಸುರಕ್ಷತೆಗಾಗಿ ರಜೆ ಕೊಟ್ಟರೆ ಡಬ್ಬಿ, ಹಳೆಯ ಶಾಲು, ಪಾತ್ರೆ ಹಿಡಿದು ತೋಟದ ಬದಿಗೆ ಇವರ ಓಟ. ಅದೇ ಡಬ್ಬಿಯಲ್ಲಿ ಎರಡು ಮೀನು ಸಿಕ್ಕರೆ ಸಾಕು ತಾನೇನೋ ಸಾಧನೆ ಮಾಡಿದಂತೆ ಸಂಭ್ರಮ.

– ಏಡಿ ಹಿಡಿಯೋಕು ಸೈ!

ಊರಲ್ಲಿ ಮಳೆಗಾಲಕ್ಕೆ ಕೆರೆಗಳು ತುಂಬಿದಾಗ ಆ ನೀರು ಹರಿದು ತೋಟಗದ್ದೆಗಳಿಗೆ ನುಗ್ಗುತ್ತದೆ. ಇದರ ಮಧ್ಯೆ ಬೆಳೆ ಹಾಳಾಗಬಾರದೆಂಬ ಕಾರಣಕ್ಕೆ ತೋಡುಗಳನ್ನು ಕಟ್ಟಿರುತ್ತಾರೆ ಹೀಗೆ ತೋಟಗದ್ದೆಗಳಲ್ಲಿ ಕಟ್ಟಿರುವ ತೋಡು ಕಾಲುವೆಗಳಲ್ಲಿ ಸಂಗ್ರಹವಾಗುವ ನೀರಿನಲ್ಲಿ ಏಡಿಗಳು ಸಿಗುತ್ತವೆ.
ಈ ಏಡಿಗಳನ್ನು ಹಿಡಿಯುವುದೇ ಒಂದು ಹರಸಾಹಸ.
ಇನ್ನು ಅಣಬೆ ಮೀನು ಹಿಡಿಯುವಷ್ಟು ಸುಲಭವಲ್ಲ ಈ ಏಡಿ ಹಿಡಿಯುವ ಜಂಜಾಟ. ಎಲ್ಲರಿಗೂ ಹಿಡಿಯಲು ಸಾಧ್ಯವಿಲ್ಲ ಆದರೆ ಕೆಲವರಂತೂ ಏಡಿ ಹಿಡಿಯುವುದರಲ್ಲಿ ಪಿಎಚ್‌ಡಿ ಮಾಡಿರುತ್ತಾರೆ. 10 ವರ್ಷದ ಬಾಲಕರಿಂದ ಹಿಡಿದು 30 ವರ್ಷದ ಅಂಕಲ್ಗಳು ಕೂಡ ಈ ಆಟದಲ್ಲಿ ಭಾಗವಹಿಸುತ್ತಾರೆ. ಸಾಮಾನ್ಯವಾಗಿ ಹಣೆಗೊಂದು ಟಾರ್ಚ್, ಕಟ್ಟಿಕೊಂಡು ರಾತ್ರಿಯ ಸಮಯದಲ್ಲಿ ಏಡಿ ಹಿಡಿಯಲು ತೆರಳುತ್ತಾರೆ.

– ಏಡಿ ಹಿಡಿಯುವುದಕ್ಕೂ ಟ್ರಿಕ್ಸ್!

ಮೊದಲು ಒಂದು ಹಗ್ಗದಲ್ಲಿ ಕೋಳಿ ಕರುಳನ್ನು ಸುತ್ತಿ ಸುತ್ತಿ ಕಟ್ಟಿಕೊಳ್ಳಬೇಕು. ನಂತರ ಒಂದು ಉದ್ದನೆಯ ಹಗ್ಗದಲ್ಲಿ ಕಲ್ಲನ್ನು ಕಟ್ಟಿಕೊಳ್ಳಬೇಕು. ನಂತರ ಕೋಳಿ ಕರುಳು ಕಟ್ಟಿದ ಹಗ್ಗವನ್ನು ಕಲ್ಲು ಕಟ್ಟಿದ ಹಗ್ಗದ ಭಾಗದಲ್ಲಿ ಕಟ್ಟಬೇಕು. ಈಗ ಕಲ್ಲು-ಕರುಳು ಒಂದೇ ಕಡೆ ಆಗುತ್ತದೆ. ನಂತರ ಈ ಉದ್ದನೆಯ ಕಲ್ಲು-ಕರುಳು ಕಟ್ಟಿದ ಹಗ್ಗವನ್ನು ತೋಡಿನೊಳಗೆ ಬಿಡಬೇಕು. ತೋಡಿನೊಳಗೆ ಇರುವ ಕಲ್ಲುಗಳ ಅಡಿ ಅಥವಾ ತೋಡಿನ ಬದಿಯಲ್ಲಿನ ಸಂದುಗಳಲ್ಲಿ ಏಡಿ ಇರುತ್ತವೆ. ಇವು ಕೋಳಿ ಕರುಳಿನ ವಾಸನೆ ಹಿಡಿದು ಅದರ ಬಳಿ ಬರುತ್ತವೆ. ಆದರೆ ಇವು ಬರಲು ಸ್ವಲ್ಪ ಸಮಯ ಬೇಕು ಮತ್ತು ಮನುಷ್ಯರೇ ಹಗ್ಗ ಹಿಡಿದು ನಿಂತರೆ ಶೇಕ್ ಆಗುತ್ತಾ ಇರುತ್ತದೆ, ಹೀಗಾಗಿ ಏಡಿಗಳು ಬರುವುದಿಲ್ಲ. ಅದಕ್ಕಾಗಿ ಆ ಹಗ್ಗವನ್ನು ಹಿಡಿದು ನಿಲ್ಲುವ ಬದಲು ಪಕ್ಕದಲ್ಲಿರುವ ಮರಗಳಿಗೆ ಕಟ್ಟಬಹುದು ಅಥವಾ ನಾವೇ ಒಂದು ಕಂಬ ಊತು ಕಟ್ಟಬಹುದು.
ಮಾಂಸದ ಹಗ್ಗ ಇಳಿಬಿಟ್ಟ 5-10 ನಿಮಿಷಗಳಲ್ಲಿ ನಿಧಾನವಾಗಿ ಏಡಿಗಳು ಬಂದು ಕರುಳನ್ನು ಮುತ್ತಿಹಾಕಿಕೊಳ್ಳುತ್ತವೆ. ಕೊಂಬುಗಳಲ್ಲಿ ಮಾಂಸವನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತದೆ. ನಾವು ಆ ಹಗ್ಗವನ್ನು ಮೇಲಕ್ಕೆತ್ತಲು ಪ್ರಯತ್ನಿಸಿದಾಗ ಮಾಂಸವನ್ನು ಏನೋ ಎಳೆಯುತ್ತಿದೆ ಎಂದೆನಿಸಿದರೆ ಅಲ್ಲಿ ಏಡಿಗಳು ಬಂದಿವೆ ಎಂದು ಅರ್ಥ. ಹೀಗೆ ಗಮನಕ್ಕೆ ಬಾರದಿದ್ದರೂ ಕೂಡ 5 ನಿಮಿಷದ ಬಳಿಕ ಹಗ್ಗವನ್ನು ಮೇಲಕ್ಕೆತ್ತಿದರೆ ಏಡಿಗಳು ಸಿಕ್ಕಿವೆಯಾ ಇಲ್ಲವಾ ಎಂಬುದು ಗೊತ್ತಾಗುತ್ತದೆ.

Categories
ಕ್ರಿಕೆಟ್ ವಿಶೇಷ ಸುದ್ದಿ

ಮೊದಲ ಮ್ಯಾಚ್​ನಲ್ಲೇ ಮಿಂಚಿಂಗ್ ಆಟೋ ಡ್ರೈವರ್ ಮಗ ವಿಘ್ನೇಶ್ ಪುತ್ತೂರು!

ಮೊದಲ ಮ್ಯಾಚ್​ನಲ್ಲೇ ಮಿಂಚಿಂಗ್ ಆಟೋ ಡ್ರೈವರ್ ಮಗ ವಿಘ್ನೇಶ್ ಪುತ್ತೂರು!

– ಸ್ಟೇಡಿಯಂನಲ್ಲೇ ವಿಘ್ನೇಶನ ಬೆನ್ನು ತಟ್ಟಿದ ಧೋನಿ!
– ನೀತಾ ಅಂಬಾನಿಯಿಂದ ಮುಂಬೈ ತಂಡದ ಅತ್ಯುತ್ತಮ ಬೌಲರ್ ಪ್ರಶಸ್ತಿ!

NAMMUR EXPRESS NEWS
ವಿಘ್ನೇಶ್ ಪುತ್ತೂರು ಬಲಗೈ ಬ್ಯಾಟರ್‌, ಎಡಗೈ ಸ್ಪಿನ್ ಬೌಲರ್! ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂಥಲ್ಮನ್ ನಿವಾಸಿ. ತಂದೆ ಸುನಿಲ್ ಕುಮಾರ್ ಆಟೋರಿಕ್ಷಾ ಚಾಲಕ. ತಾಯಿ ಕೆ.ಪಿ.ಬಿಂದು ಗೃಹಿಣಿ. ಆರ್ಥಿಕ ಸಂಕಷ್ಟದ ನಡುವೆಯೂ ಮಗನ ಕ್ರಿಕೆಟ್​ ಭವಿಷ್ಯಕ್ಕಾಗಿ ಮಲಪ್ಪುರಂನಿಂದ ತ್ರಿಶೂರ್‌ಗೆ ಸ್ಥಳಾಂತರಗೊಂಡರು. ಕಾಲೇಜು ಮಟ್ಟದಲ್ಲಿ ಮೀಡಿಯಮ್ ಪೇಸರ್ ಆಗಿದ್ದ ವಿಘ್ನೇಶ್ ನಂತರ ಸ್ಪಿನ್ನರ್ ಆಗಿ ರೂಪುಗೊಂಡರು.
ತ್ರಿಶೂರ್​​ನ ಸೇಂಟ್ ಥಾಮಸ್ ಕಾಲೇಜಿನಲ್ಲಿ ಪರ್ಫಾಮ್​​ ಮಾಡಿ ಗಮನ ಸೆಳೆದಿದ್ದ ವೀಘ್ನೇಶ್, ಕೇರಳ ಪರ ಅಂಡರ್​​ -14, ಅಂಡರ್​​ -19 ಅಂಡರ್​​ -23 ತಂಡಗಳಲ್ಲಿ ಆಡಿದ್ದರು. ಇಲ್ಲಿ ಅದ್ಬುತ ಪ್ರದರ್ಶನ ನೀಡಿದ್ದ ವೀಘ್ನೇಶ್​, ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಅಲೆಪ್ಪಿ ರಿಪಲ್ಸ್‌ ಆಡಿದರು.

ಬದುಕು ಬದಲಿಸಿದ ಕೇರಳ ಕ್ರಿಕೆಟ್ ಲೀಗ್!

ವೀಘ್ನೇಶ್​​ ಕ್ರಿಕೆಟ್ ಕರಿಯರ್​ಗೆ ತಿರುವು ನೀಡಿದ್ದೇ ಕೇರಳ ಕ್ರಿಕೆಟ್ ಲೀಗ್. ಈ ಟೂರ್ನಿಯನ್ನು ನೋಡಲು ಮುಂಬೈ ಇಂಡಿಯನ್ಸ್‌ ಸ್ಕೌಟಿಂಗ್ ಟೀಮ್ ತೆರಳಿತ್ತು. ಈತನ ಆಟ ನೋಡಿದ್ದ ಮುಂಬೈ ಸ್ಕೌಟಿಂಗ್ ಟೀಮ್, ಟ್ರಯಲ್ಸ್​ಗೆ ಬರುವಂತೆ ಹೇಳಿತ್ತು. ಬಳಿಕ ಟ್ರಯಲ್ಸ್​ಗೆ ಬಂದಿದ್ದ ವೀಘ್ನೇಶ್​​​​​​​​​​​​​​​​ ಬೌಲಿಂಗ್ ನೋಡಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಇಂಪ್ರೆಸ್ ಆಗಿದ್ದರು. ಅಂತಿಮವಾಗಿ ಮುಂಬೈ ಹರಾಜಿನಲ್ಲಿ 30 ಲಕ್ಷಕ್ಕೆ ಖರೀದಿಯನ್ನೂ ಮಾಡಿತು.
ಡಿಸೆಂಬರ್​ನಲ್ಲಿ ನಡೆದಿದ್ದ ಹರಾಜಿನಲ್ಲಿ ವಿಘ್ನೇಶ್​ನ ಖರೀದಿಸಿದ್ದ ಮುಂಬೈ, 2025 ಜನವರಿಯಲ್ಲಿ ಸೌತ್ ಆಫ್ರಿಕಾಗೆ ಕಳುಹಿಸಿತ್ತು. ಸೌತ್ ಆಫ್ರಿಕಾ ಟಿ20 ಲೀಗ್​​ನ MI ಕೇಪ್ ಟೌನ್ ತಂಡದ ನೆಟ್ ಬೌಲರ್ ಆಗಿ ಸೇರಿದ ವೀಘ್ನೇಶ್ ಪುತ್ತೂರು, ಅಫ್ಘಾನ್ ಸ್ಪಿನ್ನರ್​ ರಶೀದ್ ಖಾನ್​ ಗರಡಿಯಲ್ಲಿ ಮತ್ತಷ್ಟು ಪಳಗಿದರು. ಇದೇ ಅನುಭವ ಐಪಿಎಲ್​ನಲ್ಲಿ ಕೈ ಹಿಡಿಯಿತು. ಸಿಕ್ಕ ಅವಕಾಶ ಸದ್ಭಳಕೆ ಮಾಡಿಕೊಂಡಿರುವ ವೀಘ್ನೇಶ್, ಮೊದಲ ಮ್ಯಾಚ್​ನಲ್ಲೇ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಭಾರತೀಯ ಕ್ರಿಕೆಟ್​ನ ಹೊಸ ಭರವಸೆಯಾಗಿ ಕಾಣಿಸಿಕೊಳ್ತಿರುವ ವೀಘ್ನೇಶ್, ಇದೇ ಆಟ ಮುಂದುವರೆಸಿದರೆ ಮುಂದೊಂದು ದಿನ ಟೀಮ್ ಇಂಡಿಯಾ ಸೇರೋದು ಪಕ್ಕಾ!…

ಸ್ಟೇಡಿಯಂನಲ್ಲೇ ವಿಘ್ನೇಶನ ಬೆನ್ನು ತಟ್ಟಿದ ಧೋನಿ!

23 ವರ್ಷದ ವಿಘ್ನೇಶ್ ಚೆನ್ನೈ ತಂಡಕ್ಕೆ 156 ರನ್ ಗಳ ಸುಲಭ ಗುರಿಯನ್ನು ಬೆನ್ನಟ್ಟುತ್ತಿದ್ದಾಗ, ನಾಯಕ ರುತುರಾಜ್ ಗಾಯಕ್ವಾಡ್ 26 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿ ಸಹಿತ 53 ರನ್ ಗಳಿಸಿದರು. ಆದರೆ ಮುಂಬೈ ತಂಡದ ವಿಘ್ನೇಶ್ ರುತುರಾಜ್, ಶಿವಂ ದುಬೆ ಮತ್ತು ದೀಪಕ್ ಹೂಡಾ ಎಂಬ 3 ಪ್ರಮುಖ ವಿಕೆಟ್‌ಗಳನ್ನು ಪಡೆದು ಚೆನ್ನೈ ತಂಡ ಮತ್ತು ಅಭಿಮಾನಿಗಳಿಗೆ ಆಘಾತವನ್ನು ನೀಡಿದರು.
ಪಂದ್ಯದ ನಂತರ ಧೋನಿ ವಿಘ್ನೇಶ್ ಅವರನ್ನು ಹೊಗಳಿದರು. ಡಗೌಟ್‌ಗೆ ಹೋಗುವ ಮೊದಲು, ಧೋನಿ ವಿಘ್ನೇಶ್ ಅವರನ್ನು ಕರೆದು ಕೆಲವು ನಿಮಿಷಗಳ ಕಾಲ ಮಾತನಾಡಿದರು. ಈ ದೃಶ್ಯಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದವು. ವಿಘ್ನೇಶ್ ಸ್ನೇಹಿತ ಶ್ರೀರಾಕ್ ಧೋನಿ ಹೇಳಿದ್ದನ್ನು ಬಹಿರಂಗಪಡಿಸಿದರು.
ಶ್ರೀರಾಕ್, “ಧೋನಿ ನಿಮ್ಮ ವಯಸ್ಸು ಎಷ್ಟು ಎಂದು ಕೇಳಿದರು ಮತ್ತು ಐಪಿಎಲ್‌ಗೆ ಆಯ್ಕೆಯಾದ ನಂತರದ ತರಬೇತಿಯನ್ನು ಮುಂದುವರಿಸಲು ಸಲಹೆ ನೀಡಿದರು” ಎಂದು ಹೇಳಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ ವಿಘ್ನೇಶ್ ಬೆನ್ನು ತಟ್ಟಿ ಧೋನಿ ಸಲಹೆ ನೀಡಿರುವ ವಿಡಿಯೋಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನೀತಾ ಅಂಬಾನಿಯಿಂದ ಮುಂಬೈ ತಂಡದ ಅತ್ಯುತ್ತಮ ಬೌಲರ್ ಪ್ರಶಸ್ತಿ!

ಮುಂಬೈ ಇಂಡಿಯನ್ಸ್ ತಂಡದ ಮಾಲಕಿ ನೀತಾ ಅಂಬಾನಿ ಅವರು ಮುಂಬೈ ಇಂಡಿಯನ್ಸ್ ತಂಡದ ಡ್ರೆಸ್ಸಿಂಗ್ ಕೋಣೆಯಲ್ಲಿ ವಿಘ್ನೇಶ್ ಪುತ್ತೂರು ಅವರಿಗೆ ಮುಂಬೈ ತಂಡದ ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ವೇಳೆ, ತಮಗೆ ತಂಡದಲ್ಲಿ ಸ್ಥಾನ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸುವ ಭಾಗವಾಗಿ ವಿಘ್ನೇಶ್ ಪುತ್ತೂರು ಅವರು ವಿನಮ್ರವಾಗಿ ನೀತಾ ಅಂಬಾನಿಯ ಕಾಲಿಗೆರದರು.

Categories
ವಿಶೇಷ ಸುದ್ದಿ

ಯೂಟ್ಯೂಬಿನಲ್ಲೇ ಕ್ಲಿಕ್ ಆಯ್ತು ಟ್ರಕ್ ಡ್ರೈವರ್ ಲೈಫ್!

ಯೂಟ್ಯೂಬಿನಲ್ಲೇ ಕ್ಲಿಕ್ ಆಯ್ತು ಟ್ರಕ್ ಡ್ರೈವರ್ ಲೈಫ್!

– ಟ್ರಕ್ ಚಾಲಕ ರಾಜೇಶ್ ಇದೀಗ ಬಿಎಂಡಬ್ಲ್ಯು ಮಾಲೀಕ
– ವಾ!!. ಸಾಧನೆ ಅಂದ್ರೆ ಹೀಗಿರಬೇಕು ಗುರು!

NAMMUR EXPRESS NEWS
ರಾಜೇಶ್ ಜಾರ್ಖಂಡ್‌ನಲ್ಲಿ ಟ್ರಕ್ ಚಾಲಕನಾಗಿದ್ದ ವ್ಯಕ್ತಿ, ಅನಿರೀಕ್ಷಿತವಾಗಿ ಪ್ರಪಂಚದಾದ್ಯಂತ ಜನಪ್ರಿಯ ಯೂಟ್ಯೂಬರ್ ಆಗಿ ಮಿಂಚಿದ್ದರು. ಇದೀಗ ಅದೇ ವ್ಯಕ್ತಿ ರಾಜೇಶ್, ಬಿಎಂಡಬ್ಲ್ಯು ಸ್ಪೋರ್ಟ್ಸ್ ಕಾರನ್ನು ಖರೀದಿಸಲು ತಯಾರಾಗಿದ್ದಾರೆ.
ಹೌದು ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದು ಅವರ ಯೂಟ್ಯೂಬ್ ಚಾನೆಲ್, ಆರ್ ರಾಜೇಶ್ ವ್ಲಾಗ್, 1.86 ಮಿಲಿಯನಿಗಿಂತ ಹೆಚ್ಚು ವೀಕ್ಷಕರನ್ನು ಹೊಂದಿದೆ.
ಉತ್ಸಾಹ ಮತ್ತು ಪರಿಶ್ರಮ ಖಂಡಿತವಾಗಿಯೂ ಯಶಸ್ಸಿಗೆ ದಾರಿ ಎಂಬುದಕ್ಕೆ ರಾಜೇಶ್ ಅವರ ಕಥೆ ಒಂದು ಸ್ಫೂರ್ತಿದಾಯಕ ಉದಾಹರಣೆಯಾಗಿದೆ. ಟ್ರಕ್‌ಗಳನ್ನು ಚಾಲನೆ ಮಾಡುವುದರಿಂದ ಹಿಡಿದು ಕೈಯಲ್ಲಿ ಕ್ಯಾಮೆರಾ ಹಿಡಿದು ಯೂಟ್ಯೂಬ್ ವಿಡಿಯೋ ಮಾಡುವವರೆಗೆ, ಅವರು ತಮ್ಮ ಸಾಮರ್ಥ್ಯವನ್ನು ಬಿಂಬಿಸಿಕೊಂಡಿದ್ದಾರೆ.
ತಮ್ಮ ಕುಕ್ಕಿಂಗ್ ವೀಡಿಯೋಗಳಿಂದ ಹಿಡಿದು ಎಲ್ಲಾ ರೀತಿಯ ವಿಡಿಯೋಗಳಿಂದ ತಿಂಗಳಿಗೆ 10 ಲಕ್ಷ ಸಂಪಾದಿಸುತ್ತಾರೆಂದು ತಿಳಿಸಿದ್ದು, ಯುಟ್ಯೂಬರ್ ಆಗಿ ಬದಲಾದ ಟ್ರಕ್ ಚಾಲಕ ಜಾರ್ಖಂಡ್‌ನ ರಾಜೇಶ್ ರೇವಾನಿ ಬಗ್ಗೆ ಬಹುತೇಕರಿಗೆ ಗೊತ್ತು!. ಸಾಮಾಜಿಕ ಜಾಲತಾಣಗಳಲ್ಲಿ ಈಜಾಡುವ ಬಹುತೇಕರು ಇವರ ವೀಡಿಯೋಗಳನ್ನು ನೋಡಿಯೇ ನೋಡಿರುತ್ತೀರಾ? ಅಲ್ಲದೇ ರಸ್ತೆ ಬದಿಯ ಅವರ ಕುಕ್ಕಿಂಗ್ ವೀಡಿಯೋವನ್ನು ಇಷ್ಟಪಟ್ಟಿರುತ್ತೀರಿ.
ಆದರೆ ಅವರೀಗ ತಮ್ಮ ಅದೇ ಯೂಟ್ಯೂಬ್ ಆದಾಯದ ಮೂಲಕ ಬಿಎಂಡಬ್ಲ್ಯು ಸ್ಪೋರ್ಟ್ಸ್ ಕಾರನ್ನು ಖರೀದಿಸಲು ಮುಂದಾಗಿದ್ದಾರೆ.
ಸಾಮಾನ್ಯವಾಗಿ ಟ್ರಕ್ ಚಾಲಕರೆಂದರೆ ಅವರ ಸಂಬಳ ತಿಂಗಳಿಗೆ 20 ರಿಂದ 30 ಸಾವಿರದವರೆಗೆ ಇರಬಹುದು. ಆದರೆ ಟ್ರಕ್ ಚಾಲನೆಯ ಹೊರತಾಗಿ ತಾವು ಮಾಡುವ ಈ ಯೂಟ್ಯೂಬ್ ವೀಡಿಯೋಗಳ ಸೈಡ್ ಬ್ಯುಸಿನೆಸ್‌ನಿಂದ ಇವರು ಗಳಿಸ್ತಿರೋದು ತಿಂಗಳಿಗೆ ಬರೋಬ್ಬರಿ 10 ಲಕ್ಷ ರೂಪಾಯಿಗೂ ಅಧಿಕವಂತೆ. ಅಚ್ಚರಿ ಎನಿಸಿದರು ಇದು ನಿಜವಾದ ಸಂಗತಿಯಾಗಿದೆ. ಸುಮಾರು ಎರಡು ದಶಕಗಳಿಂದ ಭಾರತದ ರಸ್ತೆಗಳಲ್ಲಿ ದೇಶದ ಉದ್ದಗಲಕ್ಕೂ ಟ್ರಕ್ ಚಾಲನೆ ಮಾಡಿರುವ ರಾಜೇಶ್ ರೇವಾನಿ ತಮ್ಮ ವೃತ್ತಿಗಿಂತ ತಮ್ಮ ಹವ್ಯಾಸವಾದ ಯೂಟ್ಯೂಬ್ ವೀಡಿಯೋಗೆ ಸಖತ್ ಫೇಮಸ್ ಆಗಿದ್ದಾರೆ.

Categories
ಬೆಂಗಳೂರು ವಿಶೇಷ ಸುದ್ದಿ

ಅಂದು ಖ್ಯಾತ ಟೇಬಲ್ ಟೆನ್ನಿಸ್ ಕೋಚ್, ಇಂದು ಆಟೋ ಚಾಲಕ!

ಅಂದು ಖ್ಯಾತ ಟೇಬಲ್ ಟೆನ್ನಿಸ್ ಕೋಚ್, ಇಂದು ಆಟೋ ಚಾಲಕ!

– ಸಮಾಜಕ್ಕೆ ಮಾದರಿಯಾಗಿರುವ ರಾಜ್ಯ ಮಟ್ಟದ ಟೆನ್ನಿಸ್ ಆಟಗಾರ!
– ಯಾವುದೇ ಹಿಂಜರಿಕೆ ಇಲ್ಲದ ಸ್ವಾಭಿಮಾನಿ ಉದ್ಯಮಿ ಗುರುಮೂರ್ತಿ ಎನ್

NAMMUR EXPRESS NEWS
ಬೆಂಗಳೂರು: ಬೆಂಗಳೂರಿನ ಆಟೋ ರಿಕ್ಷಾ ಚಾಲಕನ ಹಿಂದೆ ಈ ರೀತಿಯಾಗಿ ಬರೆದಿತ್ತು, “ನಾನು ವೃತ್ತಿಪರ ಟಿಟಿ ತರಬೇತುದಾರ, TT ತರಬೇತಿ ಪಡೆಯಲು ಬಯಸುವ ಯಾರಾದರು ನನ್ನ ಸಂಪರ್ಕಿಸಬಹುದು ಅಥವಾ ಆಸಕ್ತರಿಗೆ ನನ್ನ ಸಂಪರ್ಕವನ್ನು ಹಂಚಿಕೊಳ್ಳಬಹುದು.
ಗುರುಮೂರ್ತಿ ಎನ್ 7899210897”.
ಹೌದು ಅವರು ತಮ್ಮ ಆಟೋ ರಿಕ್ಷಾ ಕಾಯಕವನ್ನು ಶ್ರದ್ಧೆಯಿಂದ ನಿರ್ವಹಿಸುತ್ತಿದ್ದಾರೆ. ಈ ಆಟೋ ರಿಕ್ಷಾ ಚಾಲಕ ಬೇರೆ ಯಾರು ಅಲ್ಲ, ಕರ್ನಾಟಕ ಟೇಬಲ್ ಟೆನ್ನಿಸ್ ತಂಡದ ಮಾಜಿ ಕೋಚ್ ಗುರುಮೂರ್ತಿ ಎನ್.
ಗುರುಮೂರ್ತಿ ಅವರು ಕೋವಿಡ್-19 ಬರುವವರೆಗೂ ಕರ್ನಾಟಕ ಟೇಬಲ್ ಟೆನ್ನಿಸ್ ತಂಡದ ಕೋಚ್ ಆಗಿದ್ದರು. ಕೋವಿಡ್ ವೇಳೆ ಅದೆಷ್ಟೋ ಜನರ ಬದುಕು ಬೀದಿ ಬದಿಗೆ ಬಂದಿತ್ತು. ಗುರುಮೂರ್ತಿ ಅವರು ಕೂಡ ಕೋವಿಡ್ ಪರಿಣಾಮವನ್ನು ಎದುರಿಸಬೇಕಾಯಿತು.
ಬೆಂಗಳೂರಿನ ಮಲ್ಲೇಶ್ವರಂ ಮೂಲದವರಾದ ಗುರುಮೂರ್ತಿ ವೃತ್ತಿಪರ ಟೇಬಲ್ ಟೆನ್ನಿಸ್ ಆಟಗಾರ. ಜೊತೆಗೆ ಕೋವಿಡ್ ಸಂದರ್ಭದಲ್ಲಿ ಕರ್ನಾಟಕ ಟೇಬಲ್ ಟೆನ್ನಿಸ್ ತಂಡದ ಕೋಚ್ ಆಗಿದ್ದ ಅವರು ಕಾರಣಾಂತರಗಳಿಂದ ತಮ್ಮ ಹುದ್ದೆಯನ್ನು ಕಳೆದುಕೊಳ್ಳಬೇಕಾಯಿತು.
ಇದಾದ ನಂತರ ಧೈರ್ಯ ಕಳೆದುಕೊಳ್ಳದ ಗುರುಮೂರ್ತಿ ಸ್ವಂತ ಉದೋಗ್ಯ ಶುರು ಮಾಡಿದರು. ಯಾವುದೇ ಹಿಂಜರಿಕೆ ಇಲ್ಲದೆ ಗುರುಮೂರ್ತಿ ಸ್ವಾಭಿಮಾನಿ ಆಟೋ ರಿಕ್ಷಾ ಚಾಲಕರಾಗಿದ್ದಾರೆ. ಅಂದು ಖ್ಯಾತ ಟೇಬಲ್ ಟೆನ್ನಿಸ್ ಕೋಚ್ ಆಗಿದ್ದ ಗುರುಮೂರ್ತಿ ಇಂದು ಆಟೋ ರಿಕ್ಷಾ ಚಾಲಕರಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಗುರುಮೂರ್ತಿ ಅವರು ದಿನನಿತ್ಯ ಬೆಂಗಳೂರು ನಗರದಲ್ಲಿ ಆಟೋ ರಿಕ್ಷಾ ಓಡಿಸುವ ಮೂಲಕ ಜೀವನ ನಡೆಸುತ್ತಿದ್ದಾರೆ.