ಏ.2 ರಿಂದ ರಾಮೇಶ್ವರ ಅಷ್ಟಬಂಧ ಮಹೋತ್ಸವ
– ಸಮಿತಿ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ ದೊಡ್ಡನೆ ಮಾಹಿತಿ
– ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಅಮಂತ್ರಣ ಪತ್ರಿಕೆ ಬಿಡುಗಡೆ
NAMMUR EXPRESS NEWS
ಸಿದ್ದಾಪುರ : ತಾಲೂಕಿನ ಐತಿಹಾಸಿಕ ಕ್ಷೇತ್ರವಾದ ಬಿಳಗಿ ಸೀಮೆಯ ಇಟಗಿ ಮಹತೋಬಾರ ಶ್ರೀ ರಾಮೇಶ್ವರ ದೇವರ ಅಷ್ಟಬಂಧ ಮಹೋತ್ಸವವನ್ನು ಏ.2 ರಿಂದ 13ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಹಾಗೂ ಶಾಸ್ತೋಕ್ತವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಅಷ್ಟಬಂಧ ಮಹೋತ್ಸವ ಸಮಿತಿ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ ದೊಡ್ಡನೆ ಹೇಳಿದರು. ಪಟ್ಟಣದಲ್ಲಿ ಬುಧವಾರ ಅಷ್ಟಬಂಧ ಮಹೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ಲೋಕಕಲ್ಯಾಣಾರ್ಥವಾಗಿ ನಡೆಸಲಾಗುತ್ತಿರುವ ಅಷ್ಟಬಂಧ ಕಾರ್ಯಕ್ರಮದ ಸಾನ್ನಿಧ್ಯವನ್ನು ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ವಹಿಸಲಿದ್ದಾರೆ. ಬಿಳಗಿ ಸೀಮೆಯ ಇಟಗಿ ರಾಮೇಶ್ವರ ದೇವಸ್ಥಾನದಲ್ಲಿ 60 ವರ್ಷಗಳ ಹಿಂದೆ ಅಷ್ಟಬಂಧ ಮಹೋತ್ಸವ ನಡೆದಿತ್ತು. ಹಿಂದಿನಿಂದ ಇಂದಿನವರೆಗೂ ಪಂಚವಾದ್ಯಸಿ ಪಿದಿನವೂ ತ್ರಿಕಾಲ ಬಲಿಪೂಜೆ ನಡೆಯುತ್ತಿರುವ ಏಕೈಕ ದೇವಾಲಯ ಇದಾಗಿದೆ.
ಅಷ್ಟಬಂಧ ಮಹೋತ್ಸವದ ಅಂಗವಾಗಿ ಬೆಳಗಿ ಸೀಮೆಯ ಪ್ರತಿಯೊಂದು ಮನೆಗೆ ಭೇಟಿ ನೀಡಿ ಮಾಹಿತಿ ನೀಡಲಾಗಿದೆ. ಈ ಪುಣ್ಯಕಾರ್ಯದಲ್ಲಿ ಸೀಮೆಯ ಎಲ್ಲ ಭಕ್ತವೃಂದದವರು ಪಾಲ್ಗೊಳ್ಳಲಿದ್ದಾರೆ. ಭಕ್ತರು ಸಹ ಅಷ್ಟಬಂಧ ಮಹೋತ್ಸವದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ. ಏ.2ರಿಂದ 13ರವರೆಗೆ ನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಮುಖ್ಯವಾಗಿ ಶ್ರೀಗಳ ಸಾನ್ನಿಧ್ಯದಲ್ಲಿ ಗುರುಭಿಕ್ಷಾ, ಶ್ರೀಪಾದುಕಾ ಪೂಜೆ, ಮಹಾರುದ್ರಯಾಗ, ಶತಚಂಡೀಯಾಗ, ಭಾಗವತ ಸಪ್ತಾಹ, ಬ್ರಹ್ಮಕಲಶೋತ್ಸವ, ಮಹಾರಥೋತ್ಸವ ವೈದಿಕ ಸಮೂಹದ ವೇದಘೋಷದೊಂದಿಗೆ ನಿತ್ಯೋತ್ಸವ, ಧಾರ್ಮಿಕ ಉಪನ್ಯಾಸ, ಅನುದಿನವೂ ಅನ್ನದಾಸೋಹ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ರಾಘವೇಶ್ವರ ಭಾರತೀ ಶ್ರೀಗಳು ಎ.3ರಂದು ಸಂಜೆ ಪುರಪ್ರವೇಶ ಮಾಡಲಿದ್ದಾರೆ. ಧೂಳಿ ಪೂಜೆ, 4ರಂದು ಬೆಳಗ್ಗೆ ಶ್ರೀಕರಾರ್ಚಿತ ಪೂಜೆ, ದಿವ್ಯಾಪ್ರಬಂಧ ಮಹೋತ್ಸವ, ಸೀಮಾ ಬಿಕ್ಷಾಂಗ ಸೇವೆ, ಎ.9ರಂದು ಸಂಜೆ ಸ್ವರ್ಣಮಂಟಪಾಲಂಕೃತ ಶ್ರೀಕರಾರ್ಚಿತ ಪೂಜೆ, 10ರಂದು ಬೆಳಗ್ಗೆ ಸ್ವರ್ಣಮಂಟಪಾಲಂಕೃತ ಶ್ರೀಕರಾರ್ಚಿತ ಪೂಜೆ, ಸೀಮಾ ಸ್ವರ್ಣಪಾದುಕಾ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ ಶ್ರೀಗಳ ಸಾನ್ನಿಧ್ಯದಲ್ಲಿ ಧರ್ಮಸಭೆ ಹಾಗೂ ಸ್ವರ್ಣಮಂಟಪಾಲಂಕೃತ. ಶ್ರೀಕರಾರ್ಚಿತ ಪೂಜೆ, ಸೀಮಾಭಿಕ್ಷಾ, ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಮಹಾಸ್ಯಂದನೋತ್ಸವ ಜರುಗಲಿದೆ.
ಸ್ವಸ್ಥಿಕ ರಾಮ ಭಟ್ಟ ಮಾತನಾಡಿ, ಅಷ್ಟಬಂಧ ಮಹೋತ್ಸವದಲ್ಲಿ 50 ವೈದಿಕರು ಭಾಗವಹಿಸಲಿದ್ದು ಅದರಲ್ಲಿ 44 ವೈದಿಕರು ಬೆಳಗಿ ಸೀಮೆಯವರೇ ಆಗಿದ್ದಾರೆ. ತಂತ್ರಾಗಮ ಪರಿಣತರಾದ ವೇ.ಶಂಕರ ಪರಮೇಶ್ವರ ಭಟ್ಟ ಕಟ್ಟೆ ಅವರ ಮಾರ್ಗದರ್ಶನದಲ್ಲಿ ಅಷ್ಟಬಂಧ ಮಹೋತ್ಸವ ನಡೆಯಲಿದೆ. ಶ್ರೀಕ್ಷೇತ್ರದ ತಾಂತ್ರಿಕರು ಮತ್ತು ಅರ್ಚಕರು ತಾಂತ್ರಿಕ ನೇತೃತ್ವ ವಹಿಸಲಿದ್ದಾರೆ ಎಂದು ಹೇಳಿದರು. ಜಿ.ಕೆ. ಭಟ್ಟ, ನಾರಾಯಣಮೂರ್ತಿ ಹೆಗಡೆ, ಉಮೇಶ ಹೆಗಡೆ, ಗಜಾನನ ಹೆಗಡೆ, ವಿನಾಯಕ ಹೆಗಡೆ, ಎಂ.ಡಿ. ನಾಯ್ಕ ಹುಲಿಯಾ ಗೌಡ ಇದ್ದು.
