Categories
ಚಿಕ್ಕಮಗಳೂರು

ಚೀಟಿ ವ್ಯವಹಾರದ ಜಗಳ ಯುವಕನ ಕೊಲೆ

ಚೀಟಿ ವ್ಯವಹಾರದ ಜಗಳ ಯುವಕನ ಕೊಲೆ

* ಚೀಟಿ ಹಣ ಕಟ್ಟದೇ ಪದೇ ಪದೇ ಸದಸ್ಯರೊಡನೆ ಜಗಳವಾಡುತ್ತಿದ್ದ ಯುವಕ
* ಕೊಲೆ ಆರೋಪಿಯನ್ನು ಬಂಧಿಸಿದ ತರೀಕೆರೆ ಪೋಲೀಸರು

NAMMMUR EXPRESS NEWS
ತರೀಕೆರೆ: ತಾಲೂಕಿನ ಅಮೃತಾಪುರ ಗ್ರಾಮದಲ್ಲಿ ಚೀಟಿ ಹಣದ ವಿಚಾರವಾಗಿ ಯುವಕನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಕೊಲೆಯಾದ ಯುವಕನನ್ನು ಸಂಜುನಾಯ್ಕ (27) ಎಂದು ಗುರುತಿಸಲಾಗಿದ್ದು, ರುದ್ರೇಶ್ ನಾಯ್ಕ (30) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಅಮೃತಾಪುರ ಗ್ರಾಮದ ಸೇವಾಲಾಲ್ ಸಂಘದ ಚೀಟಿ ವ್ಯವಹಾರದಲ್ಲಿ ಇಬ್ಬರ ನಡುವೆ ಗಲಾಟೆಯಾಗಿದೆ. ಗಲಾಟೆ ವೇಳೆ ರುದ್ರೇಶ್, ಸಂಜುನಾಯ್ಕನ ತಲೆ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡು ರಕ್ತಸ್ರಾವದಿಂದ ಯುವಕ ಸಾವಿಗೀಡಾಗಿದ್ದಾನೆ.
ಹತ್ಯೆಯಾದ ಸಂಜುನಾಯ್ಕ ಸರಿಯಾಗಿ ಚೀಟಿ ಕಟ್ಟದೇ ಚೀಟಿ ಸದಸ್ಯರ ಜೊತೆ ಗಲಾಟೆ ಮಾಡುತ್ತಿದ್ದ. ಇದರಿಂದ ಸದಸ್ಯರು ಅವನನ್ನು ಚೀಟಿಯಿಂದ ತೆಗೆದು ಹಾಕಿದ್ದರು. ಚೀಟಿ ದಿನ ವ್ಯವಹಾರ ನಡೆಯುವ ಜಾಗಕ್ಕೆ ಬಂದ ಸಂಜುನನ್ನ ಸದಸ್ಯರು ವಾಪಸ್ ಕಳಿಸಿದ್ದರು. ಮನೆಗೆ ಹೋಗಿದ್ದ ಸಂಜು ಮನೆಯಿಂದ ಸದಸ್ಯರಿಗೆ ಕರೆ ಮಾಡಿ ಜಗಳ ಮಾಡುತ್ತಿದ್ದ. ಮತ್ತೆ ಸದಸ್ಯರ ಬಳಿ ಬಂದು ನೇರವಾಗಿ ಗಲಾಟೆಗೆ ಮುಂದಾದಾಗ ರುದ್ರೇಶ್ ನಾಯ್ಕ ದೊಣ್ಣೆಯಿಂದ ತಲೆಗೆ ಹೊಡೆದಿದ್ದಾನೆ. ಅಲ್ಲದೇ ಜಗಳ ಬಿಡಿಸಲು ಯತ್ನಿಸಿದ ಅವಿನಾಶ್ ಎಂಬುವನಿಗೂ ರುದ್ರೇಶ್ ನಾಯ್ಕ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದಾನೆ.
ತರೀಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆರೋಪಿ ರುದ್ರೇಶ್ ನಾಯ್ಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.