Categories
ಚಿಕ್ಕಮಗಳೂರು

ಚಿಕ್ಕಮಗಳೂರು ಟಾಪ್ ನ್ಯೂಸ್ !!

ಚಿಕ್ಕಮಗಳೂರು ಟಾಪ್ ನ್ಯೂಸ್ !!

* ಬಡವರಿಗೆ ಪಡಿತರ ವಿತರಣೆಯಲ್ಲಿ ಲೋಪವಾಗದಂತೆ ನೋಡಿಕೊಳ್ಳಿ
* ಕಂದಕಕ್ಕೆ ನುಗ್ಗಿದ ಕೆ.ಎಸ್‌.ಆರ್‌.ಟಿ.ಸಿ ಬಸ್ ತಪ್ಪಿದ ಅನಾಹುತ
* ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಮುಸ್ಲಿಂ ಮುಖಂಡರಿಂದ ಪ್ರತಿಭಟನೆ
* ಅಮ್ಮನಿಗೆ ಬೈದಿದ್ದಕ್ಕೆ ಮಾವನನ್ನೇ ಹತ್ಯೆ ಮಾಡಿದ ಅಳಿಯ

NAMMUR EXPRESS NEWS
* ಬಡವರಿಗೆ ಪಡಿತರ ವಿತರಣೆಯಲ್ಲಿ ಲೋಪವಾಗದಂತೆ ನೋಡಿಕೊಳ್ಳಿ

ಎನ್.ಆ‌ರ್ ಪುರ: ಬಡವರ ಹಸಿವು ನೀಗಿಸಲು ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಕೆಲವೆಡೆ ಪಡಿತರ ವಿತರಕರು ಕಳ್ಳಾಟ ನಡೆಸುತ್ತಿರುವ ಆರೋಪವು ಜಿಲ್ಲೆಯಲ್ಲಿ ಇತ್ತೀಚಿಗೆ ಕೇಳಿ ಬಂದಿತ್ತು. ಹೀಗಾಗಿ ಸರ್ಕಾರದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರು ನರಸಿಂಹರಾಜಪುರ ತಾಲೂಕಿನ ವಿವಿಧ ನ್ಯಾಯ ಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಜನರಿಗೆ ವಿತರಿಸುತ್ತಿರುವ ಪಡಿತರ ಕುರಿತು ಮಾಹಿತಿ ಪಡೆದ್ರು. ಜೊತೆಗೆ ಪಡಿತರ ವಿತರಣೆಯಲ್ಲಿ ಗೊಂದಲಗಳಿದ್ದರೆ ತಕ್ಷಣ ಸಮಿತಿ ಸದಸ್ಯರನ್ನು ಸಂಪರ್ಕಿಸುವಂತೆ ವಿತರಕರಿಗೆ ಸೂಚನೆಯನ್ನು ನೀಡಿದರು.
ಅಲ್ಲದೇ ಪಡಿತರ ಅಕ್ಕಿಯನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರುವವರನ್ನು ಗುರುತಿಸಿ ಅಂತಹ ಪಡಿತರದಾರನಿಗೆ ಒಂದೆರಡು ಬಾರಿ ಎಚ್ಚರಿಕೆ ನೀಡಿ ನಂತರ ಪಡಿತರ ಚೀಟಿ ರದ್ದು ಮಾಡುವಂತೆ ಸೂಚಿದರು. ಸರ್ಕಾರ ಫೆಬ್ರವರಿ ತಿಂಗಳಿನಿಂದ ಹೆಚ್ಚುವರಿ ಅಕ್ಕಿಯನ್ನು ನೀಡುವಂತೆ ಆದೇಶಿಸಿದೆ ಇದನ್ನು ಸರಿಯಾಗಿ ಪೂರೈಕೆ ಮಾಡಬೇಕೆಂದು ತಿಳಿಸಿದರು. ಅಲ್ಲದೇ ವಿತರಣೆಯಲ್ಲಿ ಯಾವುದೇ ಕಾರಣಕ್ಕೂ ಲೋಪವಾದಂತೆ ನೀಡಿಕೊಳ್ಳುವಂತೆ ಹಾಗೂ ಸಾರ್ವಜನಿಕರಿಂದ ದೂರುಗಳು ಬರದಂತೆ ಪಡಿತರ ವಿತರಿಸುವಂತೆ ಸೂಚನೆ ನೀಡಿದರು.

* ಕಂದಕಕ್ಕೆ ನುಗ್ಗಿದ ಕೆ.ಎಸ್‌.ಆರ್‌.ಟಿ.ಸಿ ಬಸ್ ತಪ್ಪಿದ ಅನಾಹುತ

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್‌ ರಸ್ತೆ ಪಕ್ಕದ ಕಂದಕಕ್ಕೆ ನುಗ್ಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಸಮೀಪದ ಹುಲುವಲ್ಲೆ ಗ್ರಾಮದ ಬಳಿ ನಡೆದಿದೆ.
ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ ಬಸ್ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಸ್ತಾರೆ ಯಿಂದ ಮೂಡಿಗೆರೆ ಸಾಗುವ ಮಾರ್ಗದಲ್ಲಿ ರಸ್ತೆಗಳು ತಿರುವಿನಿಂದ ಕೂಡಿದ್ದು, ಪದೇ ಪದೇ ಅಪಘಾತಗಳು ಹೆಚ್ಚುತ್ತಿವೆ. ಈ ರಸ್ತೆಯೂ ಚಿಕ್ಕಮಗಳೂರಿನಿಂದ ಮಂಗಳೂರು ಧರ್ಮಸ್ಥಳ, ಕಳಸ, ಹೊರನಾಡಿಗೆ ಸಂಪರ್ಕಿಸುವ ರಸ್ತೆಯಾಗಿದ್ದು. ಪ್ರತಿನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚಾರ ನಡೆಸುತ್ತವೆ. ಕಡೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯೂ ಶಿರಗುಂದ ಗ್ರಾಮದಿಂದ ಮೂಡಿಗೆರೆವರೆಗೆ ತರವೆ ಕಾರ್ಯ ಪೂರ್ಣಗೊಂಡಿದ್ದು, ಟೆಂಡ‌ರ್ ಹಂತದಲ್ಲಿದೆ. ಇತ್ತೀಚಿಗಷ್ಟೇ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಸ್ಥಳ ಪರಿಶೀಲನೆ ನಡೆಸಿದ್ದರು. ಈ ವೇಳೆ ಸಾರ್ವಜನಿಕರು ಆದಷ್ಟು ಬೇಗ ಟೆಂಡ‌ರ್ ಕರೆದು ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದ್ದರು.
ಸದ್ಯ ಬಸ್ ಕಂದಕಕ್ಕೆ ನುಗ್ಗಿರುವ ಸ್ಥಳಕ್ಕೆ ಆಲ್ದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

* ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಮುಸ್ಲಿಂ ಮುಖಂಡರಿಂದ ಪ್ರತಿಭಟನೆ

ಚಿಕ್ಕಮಗಳೂರು: ರಾಜ್ಯ ಸರಕಾರದ ಕಾರ್ಯಾಂಗ ಮತ್ತು ಶಾಸಕಾಂಗದ ಅಧಿಕಾರ ವ್ಯಾಪ್ತಿಯನ್ನು ಮೊಟಕುಗೊಳಿಸುವ ಹಾಗೂ ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿರುವ ಕೇಂದ್ರ ಸರಕಾರವು ವಕ್ಸ್ ತಿದ್ದುಪಡಿ ಮಸೂದೆಯನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಮುಸ್ಲಿಂ ಸಮುದಾಯದ ಮುಖಂಡರು ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಮುಸ್ಲಿಂ ಮುಖಂಡರು ವಕ್ಸ್ ತಿದ್ದುಪಡಿ ಮಸೂದೆಯನ್ನು ವಾಪಸ್‌ ಪಡೆಯದಿದ್ದಲ್ಲಿ ದೇಶದಾದ್ಯಂತ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಕಿಡಿಕಾರಿದ ಮುಸ್ಲಿಂ ಮುಖಂಡ ಸಿ.ಎನ್ ಅಕ್ಕಲ್ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶವನ್ನೆಲ್ಲಾ ಹಾಳು ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಾರಿ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಸಹಕಾರದಿಂದ ಮೋದಿ ಸರ್ಕಾರ ನಿಂತಿದೆ ಇವರು ಇಲ್ಲದಿದ್ದರೆ ಏನಾಗುತಿತ್ತು ಅಂತ ಯೋಚನೆ ಮಾಡಿ ಇಂತಹ ನಿರ್ಧಾರಗಳನ್ನು ದೇಶದ ಪ್ರಧಾನಿ ಕೈಗೊಳ್ಳಲಿ ಎಂದು ಕಿಡಿಕಾರಿದರು.

* ಅಮ್ಮನಿಗೆ ಬೈದಿದ್ದಕ್ಕೆ ಮಾವನನ್ನೇ ಹತ್ಯೆ ಮಾಡಿದ ಅಳಿಯ

ಕಡೂರು: ಅಮ್ಮನಿಗೆ ಬೈದಿದ್ದಕ್ಕೆ ತನ್ನ ಮಾವನನ್ನೇ ಅಳಿಯ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಾರ್ಚ್ 15 ರಂದು ಸಿದ್ದರಾಮೇಗೌಡ ಮೃತದೇಹ ಕುತ್ತಿಗೆ ಬಿಗಿದು ಹತ್ಯೆಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಹತ್ಯೆ ಪಂಚನಹಳ್ಳಿ ಗ್ರಾಮವನ್ನೇ ಬೆಚ್ಚಿ ಬೀಳಿಸಿತ್ತು. ಗ್ರಾಮದ ಸಿದ್ದರಾಮೇಗೌಡ ಮತ್ತು ಆತನ ಅಕ್ಕ ನಿರ್ಮಲಾ ನಡುವೆ 26 ಎಕರೆ ತೆಂಗಿನ ತೋಟ, 24 ವಾಣಿಜ್ಯ ಮಳಿಗೆ ಹಾಗೂ ಸೈಟ್ ವಿಚಾರವಾಗಿ ವಿವಾದವಿತ್ತು. ತಂದೆಯ ಆಸ್ತಿಗಾಗಿ ನಿರ್ಮಲಾ ನ್ಯಾಯಾಲಯದಲ್ಲಿ ದಾವೆ ಕೂಡಾ ಹೂಡಿದ್ದರು. ಈ ವಿಚಾರವಾಗಿ ಕಳೆದ ತಿಂಗಳು ಅಕ್ಕ ನಿರ್ಮಲಾ ಹಾಗೂ ಸಿದ್ದರಾಮೇಗೌಡ ನಡುವೆ ಗಲಾಟೆ ನಡೆದಿತ್ತು. ಗಲಾಟೆ ವೇಳೆ ಅಕ್ಕ ನಿರ್ಮಲಾಳಿಗೆ ಅವಾಚ್ಯ ಪದ ಬಳಸಿ ಬೈದಿದ್ದರಿಂದ ಕೋಪಗೊಂಡಿದ್ದ ನಿರ್ಮಲಾಳ ಮಗ ಸಂಜಯ್, ತನ್ನ ಮಾವ ಸಿದ್ದರಾಮೇಗೌಡನನ್ನು ಹತ್ಯೆ ಮಾಡಿದ್ದಾನೆ.
ಮಾರ್ಚ್ 14ರ ಸಂಜೆ ಪಂಚನಹಳ್ಳಿ ಗ್ರಾಮಕ್ಕೆ ಬಂದಿದ್ದ ಸಂಜಯ್, ಬಸ್ ನಿಲ್ದಾಣದ ಬಳಿ ಸಿಕ್ಕ ಸಿದ್ದರಾಮೇಗೌಡನ ಜೊತೆ ಬೈಕ್ ನಲ್ಲಿ ಊರೆಲ್ಲ ರೌಂಡ್ ಹೊಡೆದು. ಬಳಿಕ ತೆಂಗಿನ ತೋಟಕ್ಕೆ ಹೋಗಿ ಇಬ್ಬರು ಎಣ್ಣೆ ಹೊಡೆದಿದ್ದಾರೆ. ಈ ವೇಳೆ ಆಸ್ತಿ ವಿಷಯಕ್ಕೆ ತಾಯಿಗೆ ಬೈದ ವಿಚಾರವಾಗಿ ಕ್ಯಾತೆ ತೆಗೆದ ಸಂಜಯ್, ಮಾತಿಗೆ ಮಾತು ಬೆಳೆದು ತೋಟದಲ್ಲಿ ಇದ್ದ ಡ್ರಿಪ್ ವೈರ್ನಿಂದ ಸಿದ್ದರಾಮೇಗೌಡನ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿ ಎಸ್ಕೆಪ್ ಆಗಿದ್ದಾನೆ. ಸಿದ್ದರಾಮೇಗೌಡನ ಹತ್ಯೆಯ ಹಿಂದೆ ಅಳಿಯ ಸಂಜಯ್ ಇರೋದು ಗೊತ್ತಾಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಪಂಚನಹಳ್ಳಿ ಪೊಲೀಸರು ಚಿತ್ರದುರ್ಗದಲ್ಲಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಅಮ್ಮನಿಗೆ ಬೈದಿದ್ದಕ್ಕೆ ತನ್ನ ಮಾವನನ್ನೇ ಅಳಿಯ ಕೊಲೆ ಮಾಡಿರುವ ವಿಚಾರ ಕೇಳಿ ಕಡೂರಿನ ಜನ ಬೆಚ್ಚಿ ಬಿದ್ದಿದ್ದು,ಸಿಟ್ಟಿನಿಂದ ಮಾವನ ಕೊಲೆ ಮಾಡಿದ್ದ ಸಂಜಯ್ ಈಗ ಕಂಬಿ ಎಣಿಸುವಂತಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.