ಚಿಕ್ಕಮಗಳೂರು ಪೊಲೀಸ್ ಹೆಡ್‌ಕಾನ್ಸ್ಟೇಬಲ್ ಆತ್ಮಹತ್ಯೆ
* ಮಾನಸಿಕ ಖಿನ್ನತೆಯಿಂದ ಕಾಂತರಾಜ್ ಆತ್ಮಹತ್ಯೆ ಶಂಕೆ
* ಜಿಲ್ಲೆಯ ಎಸ್‌ಪಿ ಕಛೇರಿಯಲ್ಲಿ ಕಂಪ್ಯೂಟರ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು
NAMMUR EXPRESS NEWS
ಚಿಕ್ಕಮಗಳೂರು: ನಗರದಲ್ಲಿ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದ್ದು, ಬಾರ್ ಲೈನ್ ರಸ್ತೆಯಲ್ಲಿರುವ ಪೊಲೀಸ್ ಕ್ವಾಟರ್ಸ್‌ನಲ್ಲಿ ಹೆಡ್ ಕಾನ್‌ಸ್ಟೇಬಲ್ ಕಾಂತರಾಜ್ (45) ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಮೂಲತಃ ತರೀಕೆರೆ ತಾಲೂಕಿನ ಸುಣ್ಣದಹಳ್ಳಿಯವರಾಗಿರುವ ಕಾಂತರಾಜ್ ಅವರು ಈಗಾಗಲೇ ಎ.ಎನ್.ಎಫ್. ಹಾಗೂ ಕಳಸ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಕಂಪ್ಯೂಟರ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಪಘಾತವೊಂದರಲ್ಲಿ ತಮ್ಮ ಬಲಗಾಲನ್ನು ಕಳೆದುಕೊಂಡಿದ್ದ ಕಾಂತರಾಜ್, ಕೃತಕ ಕಾಲಿನಿಂದ ಕಷ್ಟಪಟ್ಟು ಕರ್ತವ್ಯ ನಿರ್ವಹಿಸುತ್ತಿದ್ದರು.
ದೈಹಿಕ ಅಂಗವೈಕಲ್ಯದಿಂದ ಉಂಟಾದ ನಿರಾಶೆ ಹಾಗೂ ಮಾನಸಿಕ ಖಿನ್ನತೆಯೇ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೆನ್ನಲಾಗಿದೆ. ಘಟನೆಯ ವೇಳೆ ಅವರ ಮನೆಯ ಬೇರಾರು ಇರಲಿಲ್ಲ. ಕುಟುಂಬದವರು ಊರಿಗೆ ತೆರಳಿದ್ದರು ಎನ್ನಲಾಗಿದೆ. ಕಾಂತರಾಜ್ ಅವರು ಮಾನಸಿಕವಾಗಿ ತೀವ್ರ ಒತ್ತಡ ಅನುಭವಿಸುತ್ತಿದ್ದರು ಎಂಬುದು ಅವರ ಸಹೋದ್ಯೋಗಿಗಳ ಹೇಳಿಕೆಯಾಗಿದೆ. ಇನ್ನು ಸರ್ಕಾರಿ ನೌಕರನಾಗಿದ್ದರೂ ಸ್ವಯಂ ಸಾವಿಗೆ ಶರಣಾಗಲು ಬೇರಾವ ಕಾರಣ ಇರಬಹುದು ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಬಗ್ಗೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ. ಪೊಲೀಸರ ಆತ್ಮಹತ್ಯೆ ಪ್ರಕರಣ ಮತ್ತೆ ಸಹೋದ್ಯೋಗಿಗಳ ಮೇಲೆ ಭಾರೀ ಮಾನಸಿಕ ಪ್ರಭಾವ ಬೀರಿರುವುದು ಸ್ಪಷ್ಟವಾಗಿದೆ.
