ಚಿಕ್ಕಮಗಳೂರು ಟಾಪ್ ನ್ಯೂಸ್ !!
* ಕರ್ತವ್ಯ ಲೋಪ ಆರೋಪ ಪಿ.ಡಿ.ಓ ಅಮಾನತು
* ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಪ್ರಾರ್ಥನೆ
* ಅಂಧ ಮಕ್ಕಳ ಶಾಲೆಗೆ ಅನುದಾನ ಕೊಡಲು ಶ್ರಮಿಸುತ್ತೇನೆ – ಟಿ.ಡಿ ರಾಜೇಗೌಡ
NAMMUR EXPRESS NEWS
* ಕರ್ತವ್ಯ ಲೋಪ ಆರೋಪ ಪಿ.ಡಿ.ಓ ಅಮಾನತು
ಶೃಂಗೇರಿ: ತಾಲೂಕಿನ ಮರ್ಕಲ್ ಗ್ರಾಮ ಪಂಚಾಯಿತಿಯ ಪಿಡಿಒ ರಘುವೀರ್ ರವರನ್ನು ಕರ್ತವ್ಯಲೋಪದ ಆರೋಪದ ಹಿನ್ನೆಲೆ ಅಮಾನತು ಮಾಡಿ ಜಿಲ್ಲಾ ಪಂಚಾಯತ್ ಸಿ.ಇ.ಓ ಕೀರ್ತನಾ ಆದೇಶಿಸಿದ್ದಾರೆ. ಪಿ.ಡಿ.ಓ ವಿರುದ್ಧ ಹಲವು ಪಂಚಾಯತ್ ಸದಸ್ಯರು ಹಲವು ಆರೋಪಗಳನ್ನು ಮಾಡಿದ್ದರು. ಈ ಕುರಿತು ಶೃಂಗೇರಿ ಕಾರ್ಯನಿರ್ವಹಣಾಧಿಕಾರಿ ಸುದೀಪ್ ರವರು ತನಿಖೆ ನಡೆಸಿ ವರದಿ ಸಲ್ಲಿಸಿದ್ದರು.
ಮೇಲ್ನೋಟಕ್ಕೆ ಕರ್ತವ್ಯ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಪಿ.ಡಿ.ಓ ರಘುವೀರ್ ರವರನ್ನು ಸೇವೆಯಿಂದ ವಜಾಗೊಳಿಸಿ ಚಿಕ್ಕಮಗಳೂರು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೀರ್ತನಾ ಆದೇಶಿಸಿದ್ದಾರೆ. ಮರ್ಕಲ್ ಗ್ರಾಮ ಪಂಚಾಯಿತಿಯ ನಾಲ್ವರು ಸದಸ್ಯರು ಇತ್ತೀಚಿಗಷ್ಟೇ ಪಿ.ಡಿ.ಓ ಹಾಗೂ ಅಧ್ಯಕ್ಷರ ನಡೆ ಖಂಡಿಸಿ ಅಹೋರಾತ್ರಿ ಪ್ರತಿಭಟನೆಗೆ ನಡೆಸಿದ್ದರು. ಪಂಚಾಯಿತಿಯಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಲಂಚಗುಳಿತನ ಸೇರಿದಂತೆ ಹಲವು ಆರೋಪಗಳನ್ನು ಸದಸ್ಯರು ಮಾಡಿದ್ದರು. ಕಾಮಗಾರಿಗಳ ಕುರಿತು ಪಿ.ಡಿ.ಓ ಹಾಗೂ ಅಧ್ಯಕ್ಷರ ಬಳಿ ಸ್ಪಷ್ಟಿಕರಣ ಕೇಳಿದಾಗ ಉಡಾಫೆ ಉತ್ತರ ನೀಡುತ್ತಿದಾರೆಂದು ಪಂಚಾಯತ್ ಸದಸ್ಯರು ಆರೋಪಿಸಿದ್ದರು.
* ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಪ್ರಾರ್ಥನೆ
ಚಿಕ್ಕಮಗಳೂರು : ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ನಗರದಲ್ಲಿ ಮುಸ್ಲಿಮರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ತಮ್ಮ ಕೈಗಳಿಗೆ ಕಪ್ಪು ಪಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆ ನಡೆಸಿದರು.
ಮುಸ್ಲಿಮ್ ಸಂಘಟನೆಗಳು ಹಾಗೂ ರಾಜ್ಯದ ಮುಸ್ಲಿಮ್ ಪರ್ಸನಲ್ ಬೋರ್ಡ್ನಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲು ಕರೆ ನೀಡಿದ್ದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎಲ್ಲ ಮಸೀದಿಗಳಲ್ಲೂ ಶುಕ್ರವಾರದ ವಿಶೇಷ ನಮಾಜ್ ಸಂದರ್ಭದಲ್ಲಿ ಸಣ್ಣ ಮಕ್ಕಳಿಂದ ವೃದ್ಧರವರೆಗೂ ಕಪ್ಪುಪಟ್ಟಿ ಧರಿಸಿ ಪ್ರಾರ್ಥನೆ ಸಲ್ಲಿಸಿದರು.
ನಗರದ ದುಬೈ ನಗರದ ಫಿರ್ ದೋಸ್ ಮಸೀದಿಯಲ್ಲಿ ಕಪ್ಪು ಪಟ್ಟಿ ಧರಿಸಿ, ವಕ್ಫ್ ತಿದ್ದುಪಡಿ ಮಸೂದೆ ಜಾರಿಯಾಗದಂತೆ ಆಗ್ರಹಿಸಿದ ಮುಖಂಡರು, ನಾಗರಿಕರು, ಯಾವುದೇ ಕಾರಣಕ್ಕೂ ವಕ್ಫ್ ತಿದ್ದುಪಡಿ ಮಸೂದೆಯನ್ನು ಒಪ್ಪಲು ಸಾಧ್ಯವಿಲ್ಲ. ಕೇಂದ್ರ ಸರಕಾರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ ನಿಲ್ಲಿಸಬೇಕು, ತಪ್ಪಿದಲ್ಲಿ ರಮಝಾನ್ ಹಬ್ಬದ ನಂತರ ನಿರಂತರ ಪ್ರತಿಭಟನೆಯ ಮೂಲಕ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು. ನಗರದ ಮಕ್ಕ ಮಸೀದಿಯ ಗುರುಗಳಾದ ಆಶ್ರಫ್ ಹಜರತ್, ನಗರಸಭೆ ಸದಸ್ಯ ಶಾದಾಬ್ ಪ್ರತಿಭಟನೆಯ ನೇತೃತ್ವವಹಿಸಿದ್ದರು
* ಅಂಧ ಮಕ್ಕಳ ಶಾಲೆಗೆ ಅನುದಾನ ಕೊಡಲು ಶ್ರಮಿಸುತ್ತೇನೆ – ಟಿ.ಡಿ ರಾಜೇಗೌಡ
ಚಿಕ್ಕಮಗಳೂರು: ಅಂಧ ಮಕ್ಕಳ ಪಾಠಶಾಲೆ 1996 ರಲ್ಲಿ ಆರಂಭಗೊಂಡಿದ್ದು, ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅನೇಕರು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಹಾಗೂ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ. ರಾಜೇಗೌಡ ಹೇಳಿದರು.
ಅವರು ನಗರದ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿಯವರಿಗೆ ಗೌರವ ಸಮರ್ಪಣಾ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಂಧ ಮಕ್ಕಳ ವಸತಿಯುತ ಪಾಠಶಾಲೆಯಲ್ಲಿ ಉಚಿತ ಊಟ, ವಸತಿ, ಶಿಕ್ಷಣ, ವೈದ್ಯಕೀಯ ಸೇವೆ, ಸಮವಸ್ತ್ರ, ಶಿಕ್ಷಣ ಸಾಮಾಗ್ರಿಗಳನ್ನು ಉಚಿತವಾಗಿ ಪಡೆದು ಹಲವು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯ ಅಧ್ಯಕ್ಷರು ನೀಡಿರುವ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಮಟ್ಟದಲ್ಲಿ ತಾವು ಮತ್ತು ಶಾಸಕ ಹೆಚ್.ಡಿ ತಮ್ಮಯ್ಯ, ಮುಖ್ಯಮಂತ್ರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರು ಮತ್ತು ಶಿಕ್ಷಣ ಸಚಿವರನ್ನು ಭೇಟಿಮಾಡಿ ಸೌಲಭ್ಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ತಾವು ಜಿ.ಪಂ ಅಧ್ಯಕ್ಷರಾಗಿದ್ದಾಗ ಬರುತ್ತಿದ್ದ ಟಿ.ಎ, ಡಿ.ಎ ಹಣವನ್ನು ಈ ಶಾಲೆಗೆ ನೀಡುತ್ತಿದ್ದೆ, ಮುಂದೆ ವೈಯಕ್ತಿಕವಾಗಿ 1 ಲಕ್ಷ ರೂ ದೇಣಿಗೆ ನೀಡುವ
ಜೊತೆಗೆ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದಿಂದ 10 ಲಕ್ಷ ರೂ ನೀಡುವುದಾಗಿ ಭರವಸೆ ನೀಡಿದ ಅವರು, ಈ ರೀತಿ ದೇವರ ಕೆಲಸ ಮಾಡುತ್ತಿರುವ ಡಾ. ಜೆ.ಪಿ ಕೃಷ್ಣಗೌಡ ಮತ್ತು ಅವರ ತಂಡಕ್ಕೆ ಶುಭ ಹಾರೈಸುವೆ ಎಂದರು.