ಉಡುಪಿ ಟಾಪ್ ನ್ಯೂಸ್
ಉಡುಪಿ: ಶಾಲಾ ವಾಹನಕ್ಕೆ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ!
– ಉಡುಪಿ: ಕಾರು- ದ್ವಿಚಕ್ರ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರು ಮೃತ್ಯು!
– ಕಾರ್ಕಳ: ಅಕ್ರಮ ದನ ಸಾಗಾಟದ ಆರೋಪ – ಇಬ್ಬರ ಮೇಲೆ ಹಲ್ಲೆ!
NAMMUR EXPRESS NEWS
ಉಡುಪಿ: ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕುಂತಲ್ ನಗರದ ಸಮೀಪ ಶಾಲಾ ವಾಹನವೊಂದಕ್ಕೆ ಇಕೋ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಮಾ.29 ರಂದು ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಶಾಲಾ ಮಕ್ಕಳ ವಾಹನ ಮಣಿಪುರ ಕಡೆಗೆ ಬರುತ್ತಿದ್ದ ಸಂದರ್ಭ ಹಿಂದಿನಿಂದ ಬಂದ ಇಕೋ ಕಾರು ಶಾಲಾ ವಾಹನಕ್ಕೆ ಡಿಕ್ಕಿ (Accident) ಹೊಡೆದಿದೆ ಎನ್ನಲಾಗಿದೆ. ಅಪಘಾತದ ಪರಿಣಾಮ ಇಕೋ ಕಾರ್ ನಲ್ಲಿದ್ದ ತಂದೆ ಮಗ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಗಾಯಾಳುಗಳನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
– ಉಡುಪಿ: ಕಾರು- ದ್ವಿಚಕ್ರ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರು ಮೃತ್ಯು!
ಉಡುಪಿ: ಕಾರೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಬಳ್ಳೂರು ಎಂಬಲ್ಲಿ ನಡೆದಿದೆ.
ಮೃತರನ್ನು ದ್ವಿಚಕ್ರ ವಾಹನ ಸವಾರರಾದ ರಾಜೀವ ಶೆಟ್ಟಿ (55) ಹಾಗೂ ಸುಧೀರ ದೇವಾಡಿಗ (35) ಎಂದು ಗುರುತಿಸಲಾಗಿದೆ.
ಕಂಡೂರು ಕಡೆಯಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಬನ್ನೂರು ಸಮೀಪದ ಬಿ.ಎಚ್.ನಿಂದ ಕಂಡೂರಿನತ್ತ ತೆರಳುತ್ತಿದ್ದ ಸ್ಕೂಟಿ ಮುಖಾಮುಖಿ ಡಿಕ್ಕಿಯಾಗಿದ್ದು, ಇದರ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಸವಾರರಿಬ್ಬರು ದೂರಕ್ಕೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಹಾಗೂ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಕುಂದಾಪುರ ಸಂಚಾರ ಠಾಣೆ ಪೊಲೀಸರು ಹಾಗೂ ಹೈವೇ ಪಟ್ರೋಲ್ ಸಿಬ್ಬಂದಿ ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಕಾರ್ಕಳ: ಅಕ್ರಮ ದನ ಸಾಗಾಟದ ಆರೋಪ – ಇಬ್ಬರ ಮೇಲೆ ಹಲ್ಲೆ!
ಕಾರ್ಕಳ: ಅಕ್ರಮ ದನಸಾಗಾಟದ ಆರೋಪದಲ್ಲಿ ಬಜರಂಗದಳ ಕಾರ್ಯಕರ್ತರು ಇಬ್ಬರಿಗೆ ಗಂಭೀರ ಹಲ್ಲೆ ನಡೆಸಿರುವ ಘಟನೆ ಮೂಡುಬಿದಿರೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳುವಾಯಿಯಲ್ಲಿ ಸಂಭವಿಸಿದೆ.
ಮೂಡುಬಿದಿರೆ ಮೂಲದ ಅಬ್ದುಲ್ ರಹಿಮಾನ್ ಮತ್ತು ಕೂಸಪ್ಪ ಪೂಜಾರಿ ಗಂಭೀರವಾಗಿ ಹಲ್ಲೆಗೀಡಾದವರು ಎಂದು ತಿಳಿಯಲಾಗಿದೆ. ಅವರನ್ನು ಮೂಡುಬಿದಿರೆ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಬ್ದುಲ್ ರಹಿಮಾನ್ ಮತ್ತು ಕೂಸಪ್ಪ ಅವರು ಹೈಬ್ರೀಡ್ ಹಸುವನ್ನು ಕೃತಕ ಗರ್ಭಧಾರಣೆಗೆಂದು ವಾಹನವೊಂದರಲ್ಲಿ ಕಾರ್ಕಳದ ತಮ್ಮ ಪರಿಚಯದವರ ಮನೆಯಿಂದ ಮೂಡುಬಿದಿರೆಗೆ ತರುವಾಗ ಬೆಳುವಾಯಿ ಎಂಬಲ್ಲಿ ವಾಹನಕ್ಕೆ ಅಡ್ಡಗಟ್ಟಿದ ಬಜರಂಗದಳದ ಕಾರ್ಯಕರ್ತರು ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕಾನೂನು ಪ್ರಕಾರ ದಾಖಲೆ ಪತ್ರಗಳನ್ನು ಇಟ್ಟುಕೊಂಡು ಹಸು ಸಾಗಾಟ ಮಾಡುತ್ತಿರುವುದಾಗಿ ಹೇಳಿದರೂ, ಹಬ್ಬಕ್ಕೆ ಕಡಿಯಲು ಕೊಂಡುಹೋಗುತ್ತಿರುವುದಾಗಿ ಹೇಳಿ ಬಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತರು ದೂರಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತರು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.