Categories
ಚಿಕ್ಕಮಗಳೂರು

ಚಿಕ್ಕಮಗಳೂರು ಟಾಪ್ ನ್ಯೂಸ್ 15-01-2024

ಮಹಿಳೆ ಬೀಸಿದ ಲಾಂಗಿಗೆ ಪುರುಷ ಫಿನಿಷ್!
– ತರೀಕೆರೆಯಲ್ಲಿ ನಡೆದ ಘಟನೆ: ಸಾಲ ಕೊಟ್ಟು ಜೀವ ಕಳೆದುಕೊಂಡ!
– ಮಂಕಿ ಕ್ಯಾಪ್ ಧರಿಸಿ ಗೋವು ಕಳ್ಳತನ: ಮೂಡಿಗೆರೆಯಲ್ಲಿ ಘಟನೆ
– ಚಿಕ್ಕಮಗಳೂರು: ಉರುಳಿಗೆ ಬಿದ್ದ ಗಂಡು ಚಿರತೆ ಸಾವು
– ಮೂಡಿಗೆರೆ: ಸರ್ಕಾರಿ ಬಸ್ಸಿನ ಒಳಗೆ ಕಳ್ಳರ ಹಾವಳಿ!

NAMMUR EXPRESS NEWS
ಮೂಡಿಗೆರೆ: ಗುರುತು ಸಿಗದಂತೆ ಮಂಕಿ ಕ್ಯಾಪ್ ಧರಿಸಿ ಗೋವು ಕಳ್ಳತನ ಮಾಡಿರುವ ಘಟನೆ ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಐಷಾರಾಮಿ ಕಾರಿನಲ್ಲಿ ಬಂದು ಗುರುತು ಸಿಗದಂತೆ ಮಂಕಿ ಕ್ಯಾಪ್ ಧರಿಸಿ ಗೋವು ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಸ್ತೆ ಬದಿ ಮಲಗಿದ್ದ ಗೋವನ್ನು ಮಧ್ಯರಾತ್ರಿ ಕದ್ದೊಯ್ದಿದ್ದಾರೆ. ಕಾರಿನಲ್ಲಿ ಒಂದು ಗೋವನ್ನು ತುಂಬಿಕೊಳ್ಳುತ್ತಿದ್ದಂತೆ ಮತ್ತೊಂದು ಗೋವು ಕಾರಿನ ಹಿಂದೆಯೇ ಓಡಿದೆ. ಆ ಗೋವನ್ನು ರಕ್ಷಿಸಲು ಯತ್ನಿಸಿದೆ. ಈ ಎಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಚಿಕ್ಕಮಗಳೂರು: ಉರುಳಿಗೆ ಸಿಲುಕಿ ಗಂಡು ಚಿರತೆ ಸಾವು

ಚಿಕ್ಕಮಗಳೂರು: ಉರುಳಿಗೆ ಸಿಲುಕಿ ಗಂಡು ಚಿರತೆ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹುಳಿಯಾರದಹಳ್ಳಿಯಲ್ಲಿ ನಡೆದಿದೆ. ಕಾಡು ಪ್ರಾಣಿಗಳ ಬೇಟೆಗಾಗಿ ಜಮೀನಿನಲ್ಲಿ ಹಾಕಿದ್ದ ಉರುಳಿಗೆ ಒಂದುವರೆ ವರ್ಷದ ಗಂಡು ಚಿರತೆ ಸಿಲುಕಿ ನರಳಾಡುತ್ತಿತ್ತು, ಚಿರತೆಯನ್ನು ರಕ್ಷಿಸಿ, ಅರಣ್ಯ ಇಲಾಖೆಯ ಸಿಬ್ಬಂದಿ ಚಿಕಿತ್ಸೆ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಕಳೆದ ಎರಡು ತಿಂಗಳಿನಿಂದ ಹುಳಿಯಾರದಹಳ್ಳಿ ಸೇರಿದಂತೆ ವಿವಿಧ ಗ್ರಾಮದಲ್ಲಿ ಸಂಚಾರ ಮಾಡುತ್ತಿತ್ತು ಎನ್ನಲಾಗಿದ್ದು, ಚಿಕ್ಕಮಗಳೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತರೀಕೆರೆ: ಮಾರಕಾಸ್ತ್ರದಿಂದ ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು

ತರೀಕೆರೆ: ಸಾಲ ಮರು ಪಾವತಿ ವಿಚಾರದಲ್ಲಿ ಮಹಿಳೆ ಬೀಸಿದ ಮಚ್ಚಿನಿಂದ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನವೀನ್ (40) ಮೃತಪಟ್ಟಿದ್ದಾರೆ. ಕರಕುಚ್ಚಿ ಗ್ರಾಮದ ನವೀನ್ ಮತ್ತು ಜ್ಯೋತಿಬಾಯಿ ಸಂಬಂಧಿಕರಾಗಿದ್ದು, ಕಳೆದ ಐದು ವರ್ಷಗಳ ಹಿಂದೆ ಜ್ಯೋತಿಬಾಯಿ ತನ್ನ ಸಂಬಂಧಿ ನವೀನ್ ಹತ್ತಿರ ಮನೆಕಟ್ಟಲು 5 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ. ಸಾಲ ಮರು ಪಾವತಿ ವಿಚಾರದಲ್ಲಿ ವಿವಾದ ಏರ್ಪಟ್ಟಿತ್ತು. ಜ.2 ರಂದು ಗ್ರಾಮದ ನಾಗ್ಯನಾಯ್ಕ ಎಂಬಾತ ಜ್ಯೋತಿಬಾಯಿ ಸಾಲದ ಹಣವನ್ನು ಹಿಂದಿರುಗಿಸಲಿದ್ದಾರೆ ಎಂದು ನವೀನ್ ನನ್ನು ಜ್ಯೋತಿಬಾಯಿ ಮನೆಗೆ ಕರೆ ತಂದಿದ್ದಾನೆ. ಅಲ್ಲಿ ನವೀನ್ ಮೇಲೆ ಮಾರಕಾಸ್ತ್ರದಿಂದ ಜ್ಯೋತಿ ಬಾಯಿ ಹಲ್ಲೆ ನಡೆಸಿದ್ದು, ತೀವ್ರವಾಗಿ ಗಾಯಗೊಂಡ ನವೀನ್ ಕೂಗಾಡುತ್ತಾ ಮನೆಯಿಂದ ಹೊರಗೆ ಓಡಿಬಂದಿದ್ದಾರೆ.

ಕೂಡಲೇ ಗ್ರಾಮಸ್ಥರು ನವೀನ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ ನವೀನ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇನ್ನು ನವೀನ್ ಕುಟುಂಬಸ್ಥರು ದೇಹದ ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಅಂಗಾಂಗ ದಾನದ ಬಳಿಕ ನವೀನ್ ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಈ ಸಂಬಂಧ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಡಿಗೆರೆ: ಸರ್ಕಾರಿ ಬಸ್ಸಿನ ಒಳಗೆ ಕಳ್ಳರ ಕಾಟ!

ಮೂಡಿಗೆರೆ: ಪರ್ಸ್ ನಲ್ಲಿದ್ದ ಚಿನ್ನದ ಉಂಗುರ ಹಾಗೂ ಹಣ ಕಳ್ಳತನ ಮಾಡಿರುವ ಘಟನೆ ಚಿಕ್ಕಮಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ ನಲ್ಲಿ ನಡೆದಿದೆ. ಸರ್ಕಾರಿ ಬಸ್ಸಿನ ಒಳಗೆ ಬಸ್ ಫುಲ್ ಇದ್ದ ಕಾರಣ ಬಣಕಲ್ ನ ಯುವತಿಯೋರ್ವಳ ಪರ್ಸ್ ನ ಜಿಪ್ ತೆಗೆದು ಚಿನ್ನದ ಉಂಗುರ ಹಾಗೂ ಹಣ ಕಳ್ಳತನ ಮಾಡಿದ್ದಾರೆ. ಮೂಡಿಗೆರೆ ಹಾಗೂ ಬಣಕಲ್ ಸಮೀಪ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ತಪಾಸಣೆ ಮಾಡಿದರು ಕೂಡ, ಕಳೆದುಕೊಂಡ ಚಿನ್ನದ ಉಂಗುರ ಹಾಗೂ ಹಣ ಸಿಗದ ಕಾರಣ ಕಣ್ಣೀರೂ ಹಾಕಿಕೊಂಡು ಯುವತಿ ಮನೆಗೆ ತೆರಳಿರುವ ಘಟನೆ ನಡೆದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.